ಶ್ರೀ ಸಿ.ಪಿ.ಕೆ. ಅವರನ್ನು ನಾನು ಚೆನ್ನಾಗಿ ಬಲ್ಲೆ; ಅವರ ಕವಿತೆಯ ಹೆಜ್ಜೆಗಳನ್ನು ನಾನು ಕುತೂಹಲದಿಂದ ಗಮನಿಸಿದ್ದೇನೆ.  ಅಲ್ಲಿ ಇಲ್ಲಿ ಪತ್ರಿಕೆಗಳಲ್ಲಿ ಆ ಕವಿತೆಗಳು ಆಗಲೇ ಕಾಣಿಸಿಕೊಂಡಿವೆ.  ಅವೆಲ್ಲ ಒಟ್ಟಾಗಿ ಈ ಒಂದು ಕವನ ಸಂಗ್ರಹವಾಗಿ ರೂಪುಗೊಂಡಾಗ, ನಾನು ಹಿಂದೆ ನಿಂತು ನಾಲ್ಕು ಮಾತನ್ನು ಆಡಬೇಕೆಂದು ಅವರು ನನ್ನನ್ನು ವಿಶ್ವಾಸದಿಂದ ಒತ್ತಾಯಪಡಿಸಿದ್ದಾರೆ.  ಮುನ್ನುಡಿ-ಹಿನ್ನುಡಿಗಳಿಂದ ಹೆಚ್ಚೇನೂ ಉಪಯೋಗವಿಲ್ಲವೆಂದು ನನಗೆ ಗೊತ್ತು; ಆದರೆ ನಾನು ಸಹಯಾತ್ರಿಕನಾಗಿದ್ದುಕೊಂಡು ನಾಲ್ಕು ಮಾತು ಹೇಳುವುದು ತಮಗೆ ಸಮಾಧಾನ, ಸಂತೋಷ – ಎಂದು ಈ ಮಿತ್ರರು ಹೇಳುತ್ತಾರೆ.  ಮತ್ತೊಬ್ಬರಿಗೆ ಸಂತೋಷ, ಸಮಾಧಾನ ಇವುಗಳನ್ನು ತಂದುಕೊಡುವುದಕ್ಕಿಂತ ಉತ್ತಮವಾದ ಕೆಲಸ ಬೇರೆ ಏನಿದೆ?

ಹಾಗೆ ನೋಡಿದರೆ ಕವಿತೆ-ಉತ್ತಮವಾದ ಕವಿತೆ-ಮಾಡುವುದೂ ಇದನ್ನೆ.  ಕವಿ ತಾನು ಪಡೆದ ತೀವ್ರಾನುಭೂತಿಯ ಸೊಗಸನ್ನು ಮೊಟ್ಟಮೊದಲು ಕಂಡುಕೊಳ್ಳುವುದಕ್ಕಾಗಿ ಅಭಿವ್ಯಕ್ತಿಯನ್ನು ನೀಡುತ್ತಾನಾದರೂ, ಅನಂತರ ಹಾಗೆ ಅಭಿವ್ಯಕ್ತಗೊಂಡ ಸೊಗಸು ಸುತ್ತ ಹತ್ತೂ ಜನರ ನಲವಿಗೂ ಕಾರಣವಾಗಲೆಂಬ ಸಹಜವಾದ ಬಯಕೆಯಿಂದ ತಾನೇ ಅವೆಲ್ಲವನ್ನು ಸಂಗ್ರಹಿಸಿ ಪ್ರಕಟಿಸುವುದು?  ತಾನು ಪಡೆದ ನಲವನ್ನು ಹತ್ತು ಜನದೊಂದಿಗೆ ಹಂಚಿಕೊಂಡು ಸವಿಯುವುದರಲ್ಲೆ ಒಂದು ಸೊಗಸಿದೆ.  ಕವಿಗೆ ಈ ಬಗೆಯ ಸೊಗಸಿನ ಸೆಳೆತ ಇಂಥ ಪ್ರಕಟಣೆಗೆ ನಿಮಿತ್ತವಾಗುತ್ತದೆ.  ಈ ಪ್ರಯತ್ನದಲ್ಲಿ ಒಬ್ಬ ಕವಿ, ಅದರಲ್ಲೂ ಲಜ್ಜಾಶೀಲನಾದ ಮುಗ್ಧಕವಿ ತನ್ನ ಬೆಂಬದಿಗೆ ಮತ್ತೆ ಯಾರಾದರೂ ತನಗೆ ಬೇಕಾದವರು ನಿಂತು ತನ್ನ ಪರವಾಗಿ ನಾಲ್ಕು ಮಾತನ್ನಾಡಿದರೆ ಒಂದು ಬಗೆಯ ನೆಮ್ಮದಿ ಇರುವುದೆಂದು ಅಥವಾ ಬರುವುದೆಂದು ಭಾವಿಸುವುದೂ ಸಹಜವೇ.

ವಿಮರ್ಶೆ ಎಂದರೆ ಕವಿಸಮೇತ ಕೃತಿಯೊಂದನ್ನು ಹಿಡಿದು, ಅಭಿಪ್ರಾಯ, ಸೂತ್ರ, ಸಿದ್ಧಾಂತಗಳ ಅಡಿಗಲ್ಲಿನ ಮೇಲಿಟ್ಟು ಬಡಿದು ಬೆಲೆಗಟ್ಟುವ ಸಾಹಸ – ಎಂದು ಭಾವಿಸುವವರ ಗದ್ದಲದಲ್ಲಿ, ಅದರಲ್ಲೂ ಒಂದು ನಯ-ನಾಜೂಕು ಉಂಟೆಂಬ ಕಲ್ಪನೆ ಇನ್ನೂ ಸುಳಿಯದಿದ್ದಲ್ಲಿ, ಅಥವಾ ಮಾಯವಾಗಿದ್ದಲ್ಲಿ ಆಶ್ಚರ್ಯವೇನಿಲ್ಲ.  ಒಂದು ಹೊಸ ಕವನಸಂಗ್ರಹ ಬಂದಾಗ ಅದನ್ನು ನೋಡುವ ದೃಷ್ಟಿಯಲ್ಲಿಯೂ ಹಲವು ರೀತಿಗಳುಂಟು.  ಆಗ ತಾನೇ ಕಾವ್ಯಲೋಕಕ್ಕೆ ಕಾಲಿಡುತ್ತಿರುವ ತರುಣ ಕವಿಯೊಬ್ಬನ ಪ್ರಪ್ರಥಮ ಕವನ ಸಂಕಲನವನ್ನು ನೋಡುವ ದೃಷ್ಟಿಗೂ, ರೀತಿಗೂ, ಆಗಲೇ ಹಲವಾರು ಕವನಸಂಗ್ರಹಗಳನ್ನು ಪ್ರಕಟಿಸಿ ‘ಪ್ರಸಿದ್ಧ’ನಾದ ಕವಿಯೊಬ್ಬನ ಇತ್ತೀಚಿನ (latest) ಕವನಸಂಗ್ರಹಗಳನ್ನು ನೋಡುವ ದೃಷ್ಟಿಗೂ, ರೀತಿಗೂ ವ್ಯತ್ಯಾಸವಿರಬೇಕಾದದ್ದು ಅಗತ್ಯ ಎಂದು ನಾನು ಭಾವಿಸುತ್ತೇನೆ.  ತಲೆಗೆಲ್ಲಾ ಒಂದೇ ಮಂತ್ರ – ಎನ್ನುವುದು ವಿಮರ್ಶೆಯ ಲೋಕದಲ್ಲಿ ಸಲ್ಲದು.

ಇದು ಸಿ.ಪಿ.ಕೆ.ಯವರ ಮೊದಲ ಕವನ ಸಂಗ್ರಹ.  ಸಾಮಾನ್ಯವಾಗಿ, ಮೊದಲ ಕವನ ಸಂಗ್ರಹದಲ್ಲಿ, ಈ ವಯಸ್ಸಿನ ಲೇಖಕ ತಾನು ಕವಿಯಾಗುತ್ತಿದ್ದೇನೆ ಎಂಬುದನ್ನು ಕಂಡುಕೊಳ್ಳುವ ಸಾಹಸದ ನವಾನುಭವದ ವಿಸ್ಮಯ ಸಂಭ್ರಮಗಳು ಪ್ರಧಾನವಾಗಿರುತ್ತವೆ.  ಹೊಳೆಯುವ ಭಾವಗಳಿಗೆ, ಸುಳಿಯುವ ಆಲೋಚನೆಗೆ, ಅವು ತಮಗೆ ತಾವೇ ಪ್ರಾಸಬದ್ಧವಾಗಿ ಹೊಂದಿಕೊಳ್ಳುವ ರೀತಿಗೆ – ಕವಿ ಮುಗ್ಧನಾಗುತ್ತಾನೆ.  ಹೀಗಿರುವಾಗ ಅವುಗಳಲ್ಲಿ ಪರಿಣತಪ್ರಜ್ಞೆಯನ್ನು ಅರಸುವುದು ಸಲ್ಲದು.  ಈ ಕಾವ್ಯಾನುಭವದ ಹಾದಿಯಲ್ಲಿ ಸುತ್ತಣ ಕವಿಲೋಕದ ರಾಗ-ಭಾವ-ತಾಳ-ಲಯಗಳ ಗತಿಧ್ವನಿ ಪ್ರತಿಧ್ವನಿಗಳ ಪ್ರಭಾವದಲ್ಲಿ, ಛಾಯೆ ಹಾಗೂ ಮಾಯೆಗಳಲ್ಲಿ, ತನ್ನತನವನ್ನು ಕಂಡುಕೊಳ್ಳಲು ಯತ್ನಿಸುವ ಕವಿತೆಯಲ್ಲಿ ತಾನೆ ನಾವು ಸಹಜತೆಯ ಭರವಸೆಯ ಬೆಳಕನ್ನು ಕಾಣುವುದು?  ಶ್ರೀ ಸಿ.ಪಿ.ಕೆ.ಯವರ ಈ ಮೊದಲ ಸಂಗ್ರಹದಲ್ಲಿ ಈ ಹಿನ್ನೆಲೆಯ ಜೊತೆಗೆ ಭರವಸೆಯ ಬೆಳಕು ಸಾಕಷ್ಟಿದೆ ಎಂಬುದೇ ಸಮಾಧಾನದ ಸಂಗತಿ.

ಈ ಕವಿತೆಗಳಲ್ಲಿ ಮಿಡಿಯುವ ಕವಿ ಮನೋಧರ್ಮದ ರುಚಿ – ದೃಷ್ಟಿಗಳು ಸುಸಂಸ್ಕೃತವಾದವು ಎನ್ನುವುದು ಸ್ಪಷ್ಟ.  ‘ಸಾಂತ್ವನ’ (ಪು. ೪೮) ‘ಯಾತ್ರೆ’ (ಪು. ೩೦) ‘ಭ್ರಮರಗೀತೆ’ (ಪು. ೩೦) ‘ಜಯಾಪಜಯ’ (ಪು. ೫೫) – ಇಂಥ ಕವನದ ಭಾವಗಳಲ್ಲಿ ಈ ಕವಿಯ ದೃಷ್ಟಿ-ರುಚಿಗಳು ಗೋಚರಿಸುತ್ತಿವೆ.  ಬದುಕನ್ನು ಕುರಿತು ಇವರು ತೋರುವ ಪ್ರತಿಕ್ರಿಯೆ ಕಂಡುಕೊಳ್ಳುವ ತಾತ್ವಿಕ ತೀರ್ಮಾನ, ರೂಪಿಸಿಕೊಳ್ಳುವ ಆದರ್ಶ – ಇವು ಈ ಕವಿಯ ವಯೋಧರ್ಮ, ಮನೋಧರ್ಮಗಳಿಗೆ ಅನುಗುಣವಾಗಿದೆ.

ಮತ್ತೊಂದು ವಿಷಯ : ಇವರಿನ್ನೂ ವಿದ್ಯಾರ್ಥಿ, ಕಲಿಕೆಯ ಹಾದಿಯಲ್ಲಿ ಕಂಡ ಬಣ್ಣ, ಕೇಳಿದ ಸ್ವರ, ಹೊಳೆದ ಕಾಂತಿ ಇವರ ಕುತೂಹಲವನ್ನು ಕೆರಳಿಸಿವೆ; ಗಮನವನ್ನು ಸೆಳೆದಿವೆ.  ‘ಪರೀಕ್ಷಾಮಂದಿರದಲ್ಲಿ’ (ಪು. ೨೭) ‘ಅಲಾರಾಂ’ (ಪು. ೪೧) ‘ಪಾಡು’ (ಪು. ೪೧) ‘ಪಾಡು’ (ಪು. ೬೩) – ಇಂಥವು ವಿದ್ಯಾರ್ಥಿಜೀವನದ ಅನುಭವದಿಂದ ಮೂಡಿದ ಕವಿತೆಗಳು ಆ ದೃಷ್ಟಿಯಿಂದ ಇವು ಹೊಸವು.  ವಿದ್ಯಾರ್ಥಿಯೊಬ್ಬನ ಕಣ್ಣಿಗೆ ಸುತ್ತಣ ಆವರಣ, ಕಾಲೇಜಿನ ಜೀವನ, ತನ್ನ ಅಭ್ಯಾಸದ ಕೊಠಡಿ ಇವೆಲ್ಲಾ ಹೇಗೆ ಕಾಣುತ್ತವೆ ಎನ್ನುವುದು ಅತ್ಯಂತ ಸ್ವಾರಸ್ಯವಾದ ಸಂಗತಿ.  ಇಂಥ ವಸ್ತುಗಳನ್ನು ಕುರಿತ ಪದ್ಯ ನಮ್ಮಲ್ಲಿ ಬಹಳ ಇಲ್ಲ.

ಈ ಕವಿ ಸುತ್ತಣ ಬದುಕಿನಲ್ಲಿ ‘ಅಸತ್’ ಶಕ್ತಿಗಳ ಹಾವಳಿಯಿಂದ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಅನಾಹುತಗಳನ್ನು ಗುರುತಿಸದೆ ಇಲ್ಲ; ಆದರೆ ಅವುಗಳನ್ನೆ ಮೂಲ ಸಾಮಗ್ರಿಯನ್ನಾಗಿ ಮಾಡಿಕೊಂಡು ಆ ಬಗ್ಗೆ ಬೊಬ್ಬೆ ಹೊಡೆಯುವುದಿಲ್ಲ ಅಥವಾ ಅವುಗಳಿಗೆ ಕಣ್‌ಮುಚ್ಚಿ ‘ಹಾಲು ಹರಿದಿದೆ ಇಲ್ಲಿ, ಜೇನು ಸುರಿದಿದೆ ಇಲ್ಲಿ, ಹೂವು ಚೆಲ್ಲಿದೆ ಇಲ್ಲಿ’ – ಎಂದೆಲ್ಲಾ ಆಲಾಪನೆ ತೆಗೆಯುವುದಿಲ್ಲ.  ‘ಅಸತ್’ ಶಕ್ತಿಗಳ ಹಾವಳಿಯನ್ನೆಂತೊ, ಅಂತೆಯೆ, ‘ಸತ್’ ಶಕ್ತಿಗಳ ಗೆಲುವನ್ನೂ ಕಂಡು ಬೆಳಸಿಕೊಂಡ ಶ್ರದ್ಧೆಯ ಕಾರಣದಿಂದ ಒಂದು ಬಗೆಯ ಶುಭ ದೃಷ್ಟಿ ಈ ಕವಿಯ ಕಣ್ಣಲ್ಲಿದೆ. ಆದುದರಿಂದಲೇ

ಇದು ನಮ್ಮ ವೈಭವದ ಚೈತ್ರಯಾತ್ರೆ
ಒಂದ ಬೇಡುವೆವಿಂದು
;
ದೇವರೇ
, ಆಗದಿರಲಿ ಇದು ಬಣ್ಣ ಬಣ್ಣದ ಜಾತ್ರೆ (ಪು. ೭೭)

ಎಂಬ ಹಾರೈಕೆ, ಹಾಗೂ ಎಚ್ಚರಿಕೆ ಕವಿಯನ್ನು ತುಂಬಿದೆ.  ‘ಇಲ್ಲಿ ಏನಿದೆ’? (ಪು. ೫೭) ‘ನಿರಾಶೆ’ (ಪು. ೫೯) ‘ಸಮೀಕ್ಷೆ’ (ಪು. ೭೦) ‘ಚೈತ್ರಯಾತ್ರೆ’ (ಪು. ೭೪) – ಇಂಥ ಪದ್ಯಗಳಲ್ಲಿ ಈ ಎರಡು ದೃಷ್ಟಿಗಳೂ ವ್ಯಕ್ತವಾಗಿವೆ.  ಒಬ್ಬನ ದೃಷ್ಟಿ ಶುಭಕರವಾಗಿರುವಿಕೆಯಲ್ಲೆ ನಂಬಿಕೆಯಿಲ್ಲದಿರುವ, ಹಾಗೂ ನಾವೀನ್ಯತೆ ಇಲ್ಲವೆಂದು ಕೊರಗುವ ಜನಕ್ಕೆ ಯಾರೂ ಸಮಾಧಾನ ಹೇಳಲಾರರು.  ಬದುಕನ್ನು ಕುರಿತು ಅವರವರು ತೋರುವ ಪ್ರತಿಕ್ರಿಯೆ, ಅದರಿಂದ ಅವರು ಕಡೆದು ಪಡೆದುಕೊಳ್ಳುವ ಪರಿಹಾರ, ಪ್ರತಿಯೊಬ್ಬನಲ್ಲೂ ಬೇರೆ ಬೇರೆಯಾಗಿರುತ್ತದೆ – ಅವನವನ ದೃಷ್ಟಿ-ಸಂಸ್ಕಾರಗಳಿಗೆ ಅನುಸಾರವಾಗಿ.

ಇಲ್ಲಿನ ಶೈಲಿ, ಬಂಧಗಳ ಬಗೆಗೆ ಒಂದು ಮಾತು : ಹಳೆಯ ಹಾಗೂ ಹೊಸ ಬೀಸುಗಳಲ್ಲಿ ಕವಿಯ ಕಲ್ಪನೆ ಲಾಳಿಯಾಡುತ್ತಿದೆ.  ಪದ್ಯಬಂಧ ಹಾಗೂ ಮುಕ್ತಛಂದ-ಈ ಎರಡನ್ನೂ ಒಗ್ಗಿಸಿಕೊಳ್ಳುವ ಪ್ರಯತ್ನದಲ್ಲಿ ಮಾತು ಅಲ್ಲಲ್ಲಿ ಜಾರಿದೆ; ಬಂಧ ಸಡಿಲಿದೆ; ಪಾದಪೂರಣ ಪ್ರಾಸ ಚಾಪಲ್ಯ ನುಸುಳಿ ಬಂದಿದೆ.  ಅಭ್ಯಾಸದಿಂದ ಸರಿಹೋಗತಕ್ಕ ಸಂಗತಿಗಳನ್ನು ದೊಡ್ಡದು ಮಾಡಬೇಕಾಗಿಲ್ಲ. ದೋಷಗಳನ್ನು ತೋರಿಸಿ ಸುಖಿಸುವುದು ನನಗೆ ಅಭ್ಯಾಸವಿಲ್ಲ.

ಒಂದು ಬೆಳಗನ್ನು ವರ್ಣಿಸುತ್ತಾ “ಉಲ್ಲಸದಿ ಕಂಪಿಸಿದೆ ತಂಗಾಳಿ ಕಡಲು ಹೊರಟಿಹವು ಮರಮರದ ದ್ವೀಪದಲಿ ತಂಗಿದ್ದು ವಿಶ್ರಮಿಸಿಕೊಂಡ ಹಕ್ಕಿಗಳ ಹಡಗು” – (ಪು. ೧) ಎಂಬ ಹೊಸ ರೂಪಕದಲ್ಲಿ; ಮಾಗಿಯ ಛಳಿಯನ್ನು ಹೇಳುವಲ್ಲಿ ‘ವಿವಿಧ ಹಚ್ಚಡಗಳಿಗೆ ಜೀವವನಿತ್ತು ಬಂದಿದೆ’ (ಪು ೪೯) ಎಂದು ವರ್ಣಿಸುವ ನಾವೀನ್ಯತೆಯಲ್ಲಿ; ನೀಲಮುಗಿಲನ್ನು ನೋಡಿ ‘ಸನಿಹವಿದ್ದರೂ ಎಷ್ಟು ದೂರವಿದೆ ನಮ್ಮ ನೆರೆಯ ಮಹಲು’ – ಎಂದು ಪಡುವ ಸೋಜಿಗದಲ್ಲಿ ; ಬಿಸಿಲಿನ ಪ್ರಖರತೆಯನ್ನು ‘ನಭದ ನೀಲ ಜ್ವಾಲಾಮುಖಿ ರವಿಬಿಂಬದ ಬಾಯ್ದೆರೆಯುತ’ ಸುರಿದ ಲಾವಾರಸವೃಷ್ಟಿ (ಪು. ೭) ಎಂದು ವರ್ಣಿಸುವಲ್ಲಿ; ಅಲಾರಾಂ ಗಡಿಯಾರ ನಿದ್ದೆಯನ್ನು ಕೆಡಿಸಿತೆಂದು, ಅದನ್ನು ನಿಲ್ಲಿಸಿ, ‘ಗಡಿಯಾರಗಳನ್ನು ಮಾಡಿದವರೂ ನಾವು, ಅಲಾರಂ ಘಂಟೆಯನ್ನು ಇಡುವವರೂ ನಾವು; ಮತ್ತೆ ಸುಖನಿದ್ರೆಗೆ ಭಂಗವನ್ನು ತಂದಾಗ ಬಾಯಿ ಮುಚ್ಚಿಸುವಂಥ ಶೂರರೂ ನಾವು’ – ಎಂದು ಚಿಂತಿಸುವಲ್ಲಿ; ಗಡಿಯಾರದಂಗಡಿಯಲ್ಲಿ ಮನಬಂದಂತೆ ಗಂಟೆಗಳನ್ನು ತೋರಿಸುವ ಗಡಿಯಾರಗಳನ್ನು ಕಂಡು ಪ್ರಜಾಪ್ರಭುತ್ವದ ಅವಸ್ಥೆಯನ್ನು ವಿಡಂಬಿಸುವಲ್ಲಿ; ಚೈತ್ರಯಾತ್ರೆಗೆ ಹೊರಟು ‘ಇಂಧ್ರಧನುವಿನ ಏಳು ಉಪ್ಪರಿಗೆಯರಮನೆಯ ಸೂರಿನಲಿ ತೂಗುತಿದೆ ಜೇನು ಹುಟ್ಟಿ, ತಂದೇವು ನಾವದನು ಹುರುಡುಗಟ್ಟಿ’ ಎನ್ನುವ ಉತ್ಸಾಹದಲ್ಲಿ ಈ ಕವಿ ಮನೋಗತಿಯ ರಜತರೇಖೆ ಗೋಚರಿಸುತ್ತದೆ.

ಈ ಸಂಗ್ರಹದ ಎಷ್ಟೋ ಕವಿತೆಗಳಲ್ಲಿ ಮಿಡಿಯುತ್ತಿರುವ ಮನೋಧರ್ಮದಿಂದ ಸ್ಪಷ್ಟವಾಗುವುದಿಷ್ಟು:  ಈ ಕವಿ ಸುತ್ತಣ ಪರಿಸರದ ಬಗೆಗೆ ಸೂಕ್ಷ್ಮ ಸಂವೇದನೆ ಉಳ್ಳವರು; ಯಾವ ಬಹಿರಂಗದ ರಭಸಗಳ ಸೆಳೆತಕ್ಕೂ ಸಿಕ್ಕಕೊಳ್ಳದೆ ತನ್ನ ‘ಸ್ವಧರ್ಮ’ ಏನೆಂಬುದನ್ನು ಕಂಡುಕೊಳ್ಳುವ ಪ್ರವೃತ್ತಿ ಉಳ್ಳವರು;  ಕವಿತೆ ಬದುಕಿಗೆ ಹತ್ತಿರವಾಗಬೇಕೆಂಬ, ಅದರ ಅನುಭವದಿಂದ ತನ್ನ ಬದುಕು ಎತ್ತರವಾಗಬೇಕೆಂಬ ಹಂಬಲ ಉಳ್ಳವರು.  ಇಂಥ ಮನೋಧರ್ಮ ಇನ್ನಷ್ಟು ಸತ್ವಯುತವಾದ, ಬೆಳಕಿನ ಬೆಳೆಯನ್ನು ಬೆಳೆಯಬಲ್ಲುದು ಎಂಬ ಭರವಸೆಯನ್ನು ಈ ಸಂಗ್ರಹ ಮೂಡಿಸುತ್ತದೆ.

ತಾರಾಸಖ : ಸಿ.ಪಿ.ಕೆ, ೧೯೬೦