‘ಕಪ್ಪು ಹುಡುಗನ ಬೆಳಗು’ ಎಂಬ ಶೀರ್ಷಿಕೆಯನ್ನೋದಿದ ಕೂಡಲೇ ಇದೊಂದು ಬಂಡಾಯ ಕವನ ಸಂಗ್ರಹವಿರಬಹುದೇನೋ ಎಂದು ಯಾರಿಗಾದರೂ ಅನ್ನಿಸಬಹುದು.   ಯಾಕೆಂದರೆ ‘ಕಪ್ಪು’ ‘ಕೆಂಪು’ ಈ ಪದಗಳಿಗೆ ಹೊಸ ಅರ್ಥ ತುಂಬಿಕೊಂಡಿದ್ದು ಕನ್ನಡದಲ್ಲಿ ಸಮಾಜವಾದೀ ನಿಲುವುಗಳು ದಟ್ಟವಾಗುತ್ತ ಬಂದಾಗ ಮತ್ತು ದಲಿತ – ಬಂಡಾಯಸಾಹಿತ್ಯ ಚಳುವಳಿಗಳ ಸಂದರ್ಭದಲ್ಲಿ.  ಒಂದು ದಶಕಕ್ಕೂ ಮೀರಿದ ಕಾಲಮಾನದಲ್ಲಿ ಪ್ರತಿಭಟನೆಯನ್ನೆ ತನ್ನ ಕೇಂದ್ರ ತಾತ್ವಿಕ ಕಾಳಜಿಯನ್ನಾಗಿ ಮಾಡಿಕೊಂಡ ಈ ಚಳುವಳಿ ತನ್ನ ಮೊದಲಿನ ಏರುದನಿಗಳನ್ನು ಸಂಯಮಿಸಿಕೊಂಡು ಬದುಕನ್ನು ಆಳವಾಗಿ, ಅದರ ಬಹುಮುಖತ್ವದಲ್ಲಿ ಗ್ರಹಿಸುವ, ಅರ್ಥಮಾಡಿಕೊಳ್ಳುವ ಹಾಗೂ ಶೋಧಿಸುವ ಪರಿಭಾವನೆಯ ನೆಲೆಗೆ ಇದೀಗ ಬಂದಿದೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ.

ಇದುವರೆಗಿನ ಸಾಹಿತ್ಯ ಚಳುವಳಿಗೆ ಹೋಲಿಸಿದರೆ, ಇವತ್ತಿನ ದಲಿತ ಬಂಡಾಯದ ಧೋರಣೆಗಳು ಮುಖ್ಯವಾಗಿ ಗ್ರಾಮೀಣ ಭಾರತದ ಸಂವೇದನೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸ್ವರೂಪದ್ದಾಗಿವೆ.  ಹೀಗೆ ದಲಿತ ಬಂಡಾಯದ ನಿಲುವುಗಳು ಹೊಸ ಆಯಾಮಗಳೊಂದಿಗೆ ಗಟ್ಟಿಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ನಟರಾಜ ಬೂದಾಳು ಅವರ ಕವನ ಸಂಗ್ರಹ ‘ಕಪ್ಪು ಹುಡುಗನ ಬೆಳಗು’ ಈ ಹೊಸ ಎಚ್ಚರದ ಪ್ರತೀಕವಾಗಿದೆ.

‘ಕಪ್ಪು’ ಅನ್ನುವುದು ಕತ್ತಲೆಗೆ, ಮರೆವೆಗೆ, ನೋವಿಗೆ ಹಾಗೂ ಫಲವಂತಿಕೆಗೆ ಸಂಕೇತವಾಗಿದೆ.  ಶತಮಾನಗಳ ಕಾಲ ಕತ್ತಲೆಯಲ್ಲಿದ್ದ ಕಾರಣದಿಂದ, ಮತ್ತು ಅದರಿಂದಾಗಿಯೆ ಮರೆವೆಗೆ ಅಥವಾ ನಿರ್ಲಕ್ಷ್ಯಕ್ಕೆ ಒಳಗಾದ ಈ ನೆಲದ ಅತ್ಯಂತ ಫಲವತ್ತಾದ ಸ್ತರವೊಂದು, ಅದುಮಿಟ್ಟ ಅಥವಾ ಅದುಮಿಡಲ್ಪಟ್ಟ ಅನುಭವಗಳನ್ನು, ವೇದನೆಗಳನ್ನು, ಸಂವೇದನೆಗಳನ್ನು, ಅದರ ಪಾಲಿಗೆ ಒದಗಿದ ಬೆಳಗಿನೊಳಗೆ ಬಿಚ್ಚಿ ಹರಹುತ್ತಿದೆ.  ಇಂಥ ನೆಲದ ಕಪ್ಪು ಹುಡುಗನಿಗೆ ಇದೀಗ ಮುಂಜಾನೆ ಅಥವಾ ಬೆಳಗು ಪ್ರಾರಂಭವಾಗಿದೆ.  ಇದೊಂದು ಚಾರಿತ್ರಿಕ ಅನಿವಾರ್ಯತೆ ಕೂಡ.

ಈ ಕಪ್ಪು ಹುಡುಗನ ಭಾಷೆ, ಅದರ ಲಯ, ಅದು ಸೃಜಿಸುವ ಸಂಕೇತ-ಪ್ರತೀಕ- ಪ್ರತಿಮೆಗಳು, ಸದಾ ಬೆಳಕನ್ನು ಗುತ್ತಿಗೆ ಹಿಡಿದುಕೊಂಡೆವೆಂಬ ಭ್ರಮೆಯಲ್ಲಿ ಶತಮಾನಗಳ ಕಾಲ ಬದುಕಿದ ಬುದ್ಧಿಜೀವಿಗಳ ಅಭಿವ್ಯಕ್ತಿ ಕ್ರಮ ಹಾಗೂ ಭಾಷೆಗೆ ಅಪರಿಚಿತವೆಂಬಂತೆ ತೋರಿದರೆ ಆಶ್ಚರ್ಯವೇನೂ ಇಲ್ಲ.  ಇಂಥ ಹೊಸದನಿಗಳು ತೆರೆಯುವ ಪರಿಸರ ಮತ್ತು ಗ್ರಾಮೀಣ ಅನುಭವದ ಕೃಷಿ ಪ್ರತಿಮೆಗಳು, ನಾಗರಿಕ ವಿಮರ್ಶಕರ ಗಮನವನ್ನು ಸುಲಭವಾಗಿ ಸೆಳೆಯದಿರಬಹುದು, ಒಂದು ವೇಳೆ ಸೆಳೆದರೂ ಅವು ಅರ್ಥವಾಗದೆಯೂ ಹೋಗಬಹುದು.  ಯಾಕೆಂದರೆ ಈ ಕಪ್ಪು ಹುಡುಗ ತನ್ನ ಬೇರುಗಳನ್ನು ಚಾಚಿರುವುದು, ಹೊಲ, ಗದ್ದೆ, ಬೆವರು, ಬೇಸಾಯ, ಕಣ್ಣೀರು ಆತಂಕಗಳ ನೆಲದಲ್ಲಿ; ಹಾಗೂ ಈ ಪರಿಸರದ ಮತ್ತು ಆಪ್ತವಾದ ಅನುಭವಗಳನ್ನು ತೋಡಿಕೊಳ್ಳುವುದು ಈ ನೆಲದ ಫಲವಂತಿಕೆಯ ಪ್ರತೀಕಗಳಲ್ಲಿ.  ಜತೆಗೆ ಈತ ತನ್ನ ಸಾಮ್ಯ ಹಾಗೂ ಸಂಬಂಧಗಳನ್ನು ಗುರುತಿಸಿಕೊಳ್ಳುವುದು ದೂರದ ಆಫ್ರಿಕಾದ ಕಪ್ಪು ಜನಾಂಗದ ಬವಣೆ-ಹತಾಶೆ-ಹೋರಾಟ ಮತ್ತು ಬಿಡುಗಡೆಯ ತುಡಿತಗಳೊಂದಿಗೆ.  ಹೀಗಾಗಿ ನೆಲ್ಸನ್ ಮಂಡೆಲಾ ಮತ್ತು ಆತ ಪ್ರತಿನಿಧಿಸುವ ಜನತೆಯ ಪಾಡುಗಳು ಇವತ್ತಿನ ದಲಿತ-ಬಂಡಾಯ ಸಾಹಿತ್ಯ ಸಂದರ್ಭದ ಬರೆಹಗಾರರಿಗೆ, ತಮ್ಮ ಪ್ರಸ್ತುತಕ್ಕೆ ತಕ್ಕ ‘ವಸ್ತು ಪ್ರತಿರೂಪ’ (objective correlative) ವಾಗಿ ಒದಗುತ್ತದೆ.  ಈ ಕವನ ಸಂಗ್ರಹದ ಶೀರ್ಷಿಕೆಯ ಮೂಲಕ ಇಡೀ ಸಂಕಲನದ ಆಶಯವನ್ನು ಸೂಚಿಸುವ ‘ಕಪ್ಪು ಹುಡುಗನ ಬೆಳಗು’ ಎಂಬ ಕವಿತೆ ಮೂಲಭೂತವಾಗಿ ಶೋಷಣೆಗೆ ಒಳಗಾದ ಕಪ್ಪು ಜನಾಂಗವೊಂದರ ಹೋರಾಟಗಳ ಹಿಂದಿನ ಮೌಲ್ಯದ ಪ್ರತಿನಿಧಿಯಾಗಿರುವ ನೆಲ್ಸನ್ ಮಂಡೇಲರನ್ನು ಕುರಿತದ್ದಾಗಿದ್ದು, ಆತನಿಗೆ ಒದಗುವ ಬೆಳಗಿನ ಜತೆಗೆ ಇಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಸಮೀಕರಿಸಿಕೊಂಡು ಸಂವಾದವನ್ನು ಸ್ಥಾಪಿಸಿಕೊಳ್ಳುವ ಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ.

ತರುಣ ಕವಿ ಶ್ರೀ ನಟರಾಜ ಬೂದಾಳು ಅವರ ಈ ಮೊದಲ ಕವನ ಸಂಗ್ರಹಕ್ಕೆ ಹಿನ್ನೆಲೆಯಾಗಿ ನಾನು ಈ ಕೆಲವು ಸಂಗತಿಗಳನ್ನು ಪ್ರಸ್ತಾಪಿಸಿದ್ದು, ಈ ಕವಿತೆಗಳು ಮೈದೋರುತ್ತಿರುವ ಸಾಹಿತ್ಯ ಸಂದರ್ಭವನ್ನೂ ಮತ್ತು ಈ ಸಂದರ್ಭವನ್ನು ಅರಗಿಸಿಕೊಳ್ಳುತ್ತಲೇ ಈ ಕವಿ ಎಷ್ಟರಮಟ್ಟಿಗೆ ತನ್ನ ವ್ಯಕ್ತಿ ವಿಶಿಷ್ಟತೆಯನ್ನು ಕಾಯ್ದುಕೊಂಡಿದ್ದಾನೆ ಎನ್ನುವುದನ್ನೂ ಓದುಗರು ತಾವೇ ಪರಿಶೀಲಿಸಲಿ ಎನ್ನುವ ಉದ್ದೇಶದಿಂದ.  ಸಮೃದ್ಧವಾದ ಕೃಷಿ ಪ್ರತಿಮೆಗಳ ಮೂಲಕ ಗ್ರಾಮೀಣತೆಯ ಸೊಗಡನ್ನೂ, ಮನುಷ್ಯರನ್ನೂ ಹಾಗೂ ಅವನು ಬೇರುಬಿಟ್ಟ ಮಣ್ಣನ್ನೂ, ಅಸ್ತಿತ್ವದ ಅಖಂಡತೆಯ ಮೂಲಮಾನದಲ್ಲಿ ಗ್ರಹಿಸುವ ಶ್ರೀ ನಟರಾಜ ಅವರಿಗೆ ಕಾವ್ಯದ ಜೀವಾಳವೂ, ಭಾಷೆಯ ಸೂಕ್ಷ್ಮಗಳೂ ಬಹುಮಟ್ಟಿಗೆ ಕರಗತವಾಗಿವೆ ಎನ್ನುವುದಕ್ಕೆ ಸಾಕ್ಷ್ಯ ನುಡಿಯುವ ಈ ಸಂಗ್ರಹದ ಹಲವು ಕವಿತೆಗಳು, ಈ ಕವಿ ನಾಳೆ ಉತ್ತು-ಬಿತ್ತಿ-ಬೆಳೆಯಬಹುದಾದ ಫಸಲಿನ ಬಗ್ಗೆ ಭರವಸೆಯನ್ನು ಮೂಡಿಸುತ್ತದೆ.

ಕಪ್ಪು ಹುಡುಗನ ಬೆಳಗು : ನಟರಾಜ ಬೂದಾಳು : ೧೯೯೦