ಕಳೆದ ಒಂದು ದಶಕದ ಅವಧಿಯಲ್ಲಿ ಕಥಾ ಸಾಹಿತ್ಯ ಪಡೆದುಕೊಂಡಂಥ ಹೊಸ ಆಯಾಮಗಳನ್ನು ಹೊಸಗನ್ನಡ ಕವಿತೆ ಪಡೆದುಕೊಳ್ಳದೆ ಹೋದರೂ, ಹೊಸ ಹುಡುಕಾಟಗಳ ಪ್ರಯೋಗಗಳಂತೂ ಕಾವ್ಯದ ಬಗ್ಗೆ ಗಂಭೀರವಾದ ಕಾಳಜಿಗಳನ್ನುಳ್ಳ ಕೆಲವರಿಂದ ನಿರಂತರವಾಗಿ ನಡೆಯುತ್ತಿವೆ ಅನ್ನುವುದು ನಿಜ.  ಈ ಕೆಲವು ಪ್ರಯೋಗಶೀಲರ ಜತೆಗೆ ಪ್ರಸ್ತುತ ಕವನ ಸಂಗ್ರಹದ ಶ್ರೀ ಶರತ್ ಕಲ್ಕೋಡ್ ಅವರೂ ನಿಸ್ಸಂದೇಹವಾಗಿ ಸೇರುತ್ತಾರೆ ಎಂದು ನಾನು ತಿಳಿದಿದ್ದೇನೆ.  ಅದಕ್ಕೆ ಕಾರಣ ಶರತ್ ಅವರ ಕೆಲವು ಕವಿತೆಗಳು ನನ್ನಲ್ಲಿ ಉಂಟುಮಾಡಿದ ಸಂತೋಷದ ಅಲೆಗಳೇ.  ಹೀಗೆ ಯಾವುದೇ ಕವಿತೆ ಓದುಗರಲ್ಲಿ ಅದುವರೆಗೂ ಆಗದ ಒಂದು ಬಗೆಯ ಸಂತೋಷವನ್ನು ಕೊಡಲು ಮುಖ್ಯವಾದ ಎರಡು ಲಕ್ಷಣಗಳನ್ನು ಒಳಕೊಂಡಿರುತ್ತದೆ ಎನ್ನಬಹುದು.  ಒಂದು, ಅದು ಏನೋ ಹೊಸತನ್ನು ಹೇಳುತ್ತಿದೆ ಅನ್ನುವುದು; ಎರಡು, ಹಾಗೆ ಹೇಳುವುದನ್ನು ಹೊಸ ರೀತಿಯಲ್ಲಿ ಹೇಳುತ್ತಿದೆ ಅನ್ನುವುದು.  ಈ ಹೊಸ ರೀತಿ ನಮ್ಮ ಅರಿವಿಗೆ ಬರುವುದು ಅದು ಮೈ ಪಡೆದ ಭಾಷೆಗೆ ಪ್ರಾಪ್ತವಾಗುವ ಲವಲವಿಕೆಯಿಂದ.  ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲಿ ಕವಿಯ ಚೈತನ್ಯ ಒಂದು ಬಗೆಯ ಉತ್ಸಾಹದಲ್ಲಿ ಅಭಿವ್ಯಕ್ತವಾಗುತ್ತದೋ ಅಲ್ಲಿ ಅದು ತನ್ನನ್ನು ಬಿಗಿಯುವ ಸ್ಥಾವರಾಂಶಗಳನ್ನು ಸೀಳಿಕೊಂಡು ಒಂದು ಮುಕ್ತವಾದ ನೆಲೆಗೆ ಬಂದಿರುತ್ತದೆ.  ಯಾವುದೇ ಸಾಂಪ್ರದಾಯಿಕ ಹಾಗೂ ಸಂದಿಗ್ಧವಾದ ಇಕ್ಕಟ್ಟುಗಳ ನಡುವೆ ಕೆಲಸ ಮಾಡುವ ಕವಿಗೆ ಈ ಬಗೆಯ ಉತ್ಸಾಹ ಅಥವಾ ಕ್ರಿಯಾಶೀಲತೆ ಪ್ರಾಪ್ತವಾಗುವುದಿಲ್ಲ.  ಈ ಕಾರಣದಿಂದಲೆ ಹೊಸ ಹುಡುಕಾಟಗಳ ಇಂದಿನ ಸಂಧಿಕಾಲದಲ್ಲಿ ಸುತ್ತಿದಲ್ಲೆ ಸುತ್ತಿ ಗಸ್ತು ಹೊಡೆಯುವ ಬಹುತೇಕ ಕವಿತೆಗಳ ನಡುವೆ ಶರತ್ ಅವರು ಬರೆದ ಈ ಕೆಲವು ಕವಿತೆಗಳು ನನ್ನ ಮನಸ್ಸಿಗೆ ಹೊಚ್ಚ ಹೊಸತೊಂದನ್ನು ಸಂಧಿಸಿದ ಸಂತೋಷವನ್ನು ಕೊಡುವಂಥವಾಗಿವೆ. ಮತ್ತು ಈ ಪರಿಸರದ ಪರಿಚಿತ ಬರೆಹಗಳಿಂದ ಒಂದಷ್ಟು ‘ಅಂತರ’ವನ್ನು ಕಾಯ್ದುಕೊಂಡವುಗಳಾಗಿವೆ. ಈ ದೃಷ್ಟಿಯಿಂದಲೂ ಈ ಸಂಕಲನಕ್ಕೆ ‘ಅಂತರ’ ಎಂದು ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ.

ಕೆಲವು ವರ್ಷಗಳ ಹಿಂದಿನ ಸಂದರ್ಭದಲ್ಲಿ ಹೊಸತಾಗಿ ಕವಿತೆ ಬರೆಯಲು ಪ್ರಾರಂಭಿಸುತ್ತಿದ್ದ ತರುಣ ಕವಿಗಳಿಗೆ ಇದ್ದ ಇಕ್ಕಟ್ಟು ಇವತ್ತು ಬಹುಶಃ ಇಲ್ಲ.  ತಾನು ನವೋದಯವಾಗಲೋ, ನವ್ಯನಾಗಲೋ, ಬಂಡಾಯದವನಾಗಲೋ ಎಂಬಿತ್ಯಾದಿ ಬಾಧೆಗಳಿಗೆ ಬದ್ಧವಾಗದೆ, ತಾನು ನಿಜವಾದ ಕವಿತೆಯನ್ನು ಬರೆಯುವುದು ಹೇಗೆ ಎಂಬುದಷ್ಟೆ ಮುಖ್ಯ ಕಾಳಜಿಯಾಗುವ ನೆಲೆಗೆ ನಾವು ಬಂದಿದ್ದೇವೆ ಎಂದು ತೋರುತ್ತದೆ.  ಈಗ ನಿಜವಾದ ಕವಿತೆಯಿಂದ ಉತ್ತಮ ಸಹೃದಯನಾದವನು ನಿರೀಕ್ಷಿಸುವುದು ಇಷ್ಟನ್ನು : ಮೊದಲನೆಯದಾಗಿ, ಅದು ತಾನು ಸಂಭವಿಸಿದ ಭಾಷೆಗೆ ಮರ್ಯಾದೆ ತರುವಂಥ ಕಲಾತ್ಮಕ ರೂಪವೊಂದನ್ನು ಪಡೆದುಕೊಂಡಿರಬೇಕು; ಎರಡನೆಯದಾಗಿ, ನಮ್ಮೆಲ್ಲರಿಗೂ ಅಪರಿಚಿತವಲ್ಲದ, ಆದರೆ ಕವಿಯು ತನ್ನ ವಿಶಿಷ್ಟ ಗ್ರಹಿಕೆಯ ಮೂಲಕವೇ ಸಾಕ್ಷಾತ್ಕರಿಸಿಕೊಂಡ ಅನುಭವವನ್ನು ಕಟ್ಟಿಕೊಡುವಂಥದಾಗಿರಬೇಕು.

ನಿದರ್ಶನಕ್ಕೆ ಈ ಸಂಗ್ರಹದ ಮೊದಲ ಪದ್ಯ ‘ಮತ್ತೊಂದು ಉಪಖ್ಯಾನ’ವನ್ನೆ ನೋಡೋಣ.  ಶಾಕುಂತಲೋಪಾಖ್ಯಾನದಲ್ಲಿ ಬರುವ ಉಂಗುರದ ವೃತ್ತಾಂತ ಯಾರಿಗೆ ತಾನೆ ಗೊತ್ತಿಲ್ಲ? ದುಷ್ಯಂತ-ಶಕುಂತಲೆಯರ ಬದುಕಿನಲ್ಲಿ ಆ ಉಂಗುರ ಉಂಟುಮಾಡಿದ ಅವಾಂತರ ಅಷ್ಟಿಷ್ಟಲ್ಲ.  ಆದರೆ ಆ ಕತೆ ಅಲ್ಲಿಗೇ ಮುಗಿಯಲಿಲ್ಲ; ಅದು ಮತ್ತೆ ಮತ್ತೆ ಗಂಡು ಹೆಣ್ಣಿನ ಸಂಬಂಧಗಳ ನಡುವೆ, ಬದಲಾಗುವ ಕಾಲಕ್ಕೆ  ಅನುಸಾರವಾಗಿ ಪುನರಾವರ್ತನೆಗೊಳ್ಳುವ ಬಗೆಯನ್ನು ವರ್ತಮಾನದ ಅಂಥದೇ ಒಂದು ಸಂದರ್ಭದ ಮೂಲಕ ಶರತ್ ಅವರು ಚಿತ್ರಿಸಿರುವ ಕ್ರಮ ನಿಜವಾಗಿಯೂ ಹೊಚ್ಚ ಹೊಸತಾಗಿದೆ.  ಆ ಕವಿತೆಯಲ್ಲಿ ಶರತ್ ಅವರು ಪರಂಪರೆಯ ಮೂಲಕ ವರ್ತಮಾನವನ್ನೂ, ವರ್ತಮಾನದ ಮೂಲಕ ಪರಂಪರೆಯನ್ನೂ ಸೃಜನಾತ್ಮಕವಾಗಿ ಗ್ರಹಿಸಬಲ್ಲವರಾಗಿದ್ದಾರೆ.  ಪ್ರತಿಯೊಂದು ಸಂಗತಿಯೂ ತನ್ನದೇ ಆದೊಂದು ಘಟನಾ ಪರಂಪರೆಯಲ್ಲಿ ಏನೇನೋ ಅವಸ್ಥೆಗಳಿಗೆ ಒಳಗಾಗುತ್ತದೆ.  ಇಂದಿನ ‘ಶಕು’ವಿನಿಂದ ಹಿಡಿದು ಹಿಂದಿನ ಆ ಶಕುಂತಲೆಯವರೆಗಿನ ಗಂಡು ಹೆಣ್ಣಿನ ಸಂಬಂಧಗಳ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ಉಂಗುರ, ಅದು ಉಂಟು ಮಾಡುವ ಗೊಂದಲಗಳಿಗೆ ಒಂದು ಪ್ರತೀಕವಾಗಿ ನಿಲ್ಲುತ್ತದೆ.  ಇದೇ ಸಂಗ್ರಹದ ‘ಪ್ರಸ್ತುತ’ ಅನ್ನುವ ಕವಿತೆಯೂ ಅಷ್ಟೆ.  ಯಕ್ಷಗಾನ ಪ್ರಸಂಗದ ಚೌಕಟ್ಟಿನಲ್ಲಿ ‘ಕಾಯುವಿಕೆಯ’ ಪ್ರತೀಕವೊಂದನ್ನು ಸಮರ್ಥವಾಗಿ ನಿರ್ಮಿಸಿ, ಕೌರವರ ಆಳ್ವಿಕೆಯಲ್ಲಿ ನರಳುವ ಸಮುದಾಯವೊಂದು ವನವಾಸದಿಂದ ಇನ್ನೂ ಹಿಂದಿರುಗದ ಪಾಂಡವರ ಬರುವಿಕೆಗಾಗಿ ಕಾದಂತೆ, ಇಂದಿನ ಜನವೂ ಬದಲಾವಣೆಗಾಗಿ ತರಹರಿಸುವ ಪರಿಸ್ಥಿತಿಯೊಂದನ್ನು ಕಟ್ಟಿಕೊಡುತ್ತದೆ.  ‘ಇಂಬಳವೂ ದೇಶೋದ್ಧಾರವೂ’ ಎಂಬ ಇನ್ನೂ ಒಂದು ಕವಿತೆ, ಅಂಥ ಯಾವ ಪೌರಾಣಿಕವಾದ ವಸ್ತುವನ್ನು ಆಶ್ರಯಿಸದೆ, ಅದೂ ಇದೂ ಮಾತನಾಡುವ ನಾಲ್ಕು ಜನದ ನಡುವೆ ಇಂಬಳದ ಪ್ರಸ್ತಾಪ ಬಂದು, ಇಂಬಳದ ಬದುಕು, ಅದು ರಕ್ತ ಹೀರುವ ಬಗೆ, ಅದು ಕಚ್ಚಿ ರಕ್ತ ಹೀರುವಾಗ ಅದನ್ನು ನಿವಾರಿಸುವ ಉಪಾಯಗಳು ಇತ್ಯಾದಿಗಳನ್ನು ಕುರಿತು ಹರಟುತ್ತಲೇ, ಇಂಬಳದ ಹಾಗೆ ನಮ್ಮ ಜನವನ್ನು ಕಚ್ಚಿ ಹೀರುವ ದೇಶೋದ್ಧಾರಕ ಶೋಷಕ ತಂತ್ರಗಳ ಸಂದರ್ಭಕ್ಕೆ ಮಾತುಕತೆಯನ್ನು ಲಗತ್ತಿಸುವ ನಾಟಕೀಯ ಚಾತುರ್ಯ ಹಾಗೂ ಅದರ ಪರಿಣಾಮಗಳು, ಈ ಕವಿತೆಯಲ್ಲಿ ತುಂಬ ಆಪ್ತವಾದ ಧಾಟಿಯಲ್ಲಿ ಸಮೀಕರಣ ತಂತ್ರದ ಮೂಲಕ ನಿರೂಪಿತವಾಗಿವೆ.  ಈ ಒಂದು ಕಥನಕ್ರಮದ ಮೂಲಕ ಮಾತ್ರವಲ್ಲ, ಪಂಚತಂತ್ರದ ಎರಡು ಮೂರು ಪ್ರಸಂಗಗಳನ್ನು ಕೇವಲ ವಸ್ತು ಪ್ರತಿರೂಪವಾಗಿ ಬಳಸುತ್ತ ಇದೇ ಶೋಷಣೆ ಹಾಗೂ ಅಕ್ರಮಣಗಳ ಸಂಗತಿಯನ್ನು ಧ್ವನಿಸುವ ‘ಮುದ್ದು ಮರಿಗೊಂದು ನೀತಿಪಾಠ’, ಮತ್ತು ಇವತ್ತಿನ ಬಹುಸಂಖ್ಯೆಯ ಪತ್ರಿಕೆಗಳಲ್ಲಿ ಒಂದಷ್ಟು ಸ್ಥಳವನ್ನು ಭರ್ತಿಮಾಡಲೆಂದು ಅನೇಕ ಹೊಸಬರು ಬರೆಯುವ ನಿರರ್ಥಕ ಚುಟಕ ಅಥವಾ ‘ಹರುಕು’ ಪದ್ಯಗಳ ಸಾಲಿಗೆ, ಆಕಾರ ಮಾತ್ರದಿಂದ ಸೇರಬಹುದಾದ, ಆದರೆ ಅರ್ಥ ಗೌರವದ ದೃಷ್ಟಿಯಿಂದ ಭಿನ್ನವಾಗುವ ‘ವಾಸ್ತವ’ ಎಂಬ ಒಂದು ಕಿರು ಕವನ, ಇದೇ ಶೋಷಣೆಯ ಸಂಗತಿಯನ್ನು ಅತ್ಯಂತ ಸಮರ್ಥವಾಗಿ ಹೇಳುವ ಕ್ರಮ ಹೀಗಿದೆ:

ಮಲ್ಪೆಯಲ್ಲಿ
ಹಗಲಿರುಳು
ಬೆವರಿಳಿಸುವ
ಬೆಸ್ತರ ದುಡಿಮೆಗೆ
ಹದ್ದು ಕಾಗೆ ನಾಯಿಗಳು
ಎಡಬಿಡದೆ ಎರಗುವುದ ಕಂಡೆ.

ಎಲ್ಲ ಅರ್ಥದಲ್ಲೂ ಇದೊಂದು ಪ್ರತಿಮೆ, ಅಥವಾ ಇಮೇಜ್, ಪರಿಭಾವಿಸಿದಷ್ಟೂ ನಮ್ಮ ಪರಿಸರವನ್ನು ಪ್ರತಿಮಿಸುವ ಕವಿತೆ.  ಇದೇ ಬಗೆಯ ಇನ್ನೂ ಹಲವಾರು ಕಿರುಪದ್ಯಗಳು ಬೇರೆ ಬೇರೆ ವಸ್ತುಗಳನ್ನು ಕುರಿತು ಈ ಸಂಗ್ರಹದಲ್ಲಿವೆ.  ಆದರೆ ಈ ಬಗೆಯ ಕಿರುಪದ್ಯಗಳು, ಎಷ್ಟೋ ವೇಳೆ ಮೇಲೆ ನೋಡಲು ಚೆನ್ನಾಗಿರುವಂತೆ ಕಂಡರೂ, ಇವತ್ತಿನ ಕವಿಗಳು, ಇವುಗಳನ್ನು ಬರೆಯುವ ಚಪಲ ಅಥವಾ ಆಕರ್ಷಣೆಗಳಿಂದ ಪಾರಾಗುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ.  ಯಾಕೆಂದರೆ ಈ ಬಗೆಯ ರಚನೆಗಳ ಆಕರ್ಷಣೆಗೆ ಒಳಗಾಗುವ ಕವಿಗಳು, ಗಂಭೀರವಾದ ಕಾವ್ಯಶಿಲ್ಪಗಳಿಗೆ ತೊಡಗುವ ಮಹತ್ವಾಕಾಂಕ್ಷೆಯಿಂದ ವಿಮುಖರಾಗುವ ಅಪಾಯವಿದೆ ಎಂದು ನನ್ನ ಅನಿಸಿಕೆ.  ಜತೆಗೆ ಇವತ್ತಿನ ಇಂಥ ಅನೇಕ ಕಿರು ಕವನಗಳು, ಯಾವುದೆ ನಿರ್ದಿಷ್ಟ ಬಂಧವಿಲ್ಲದೆ, ಯಾವುದೇ ಮೊನಚಿಲ್ಲದೆ, ಕೊಂಡಿ ಕತ್ತರಿಸಿದ ಚೇಳುಗಳಂತೆ ಇರುವುದನ್ನೂ ಕಂಡು ವ್ಯಥೆಪಟ್ಟಿದ್ದೇನೆ.  ಇಂಥವುಗಳನ್ನು ಬರೆಯುವವರು ಯಾಕೆ ಒಂದು ಚೊಕ್ಕವಾದ ಬಂಧದಲ್ಲಿ ತಮ್ಮ ಅನ್ನಿಸಿಕೆಗಳನ್ನು ವ್ಯವಸ್ಥೆಗೊಳಿಸುವ ಕಲೆಗಾರಿಕೆಯ ಕಡೆಗೆ ಗಮನ ಕೊಡುವುದಿಲ್ಲವೋ ನನಗರ್ಥವಾಗುವುದಿಲ್ಲ.  ಇವತ್ತಿನ ತರುಣ ಕವಿಗಳು, ಎಸ್. ವಿ ಪರಮೇಶ್ವರ ಭಟ್ಟರಿಂದ, ದಿನಕರ ದೇಸಾಯಿಯವರಿಂದ, ವಿ.ಜಿ. ಭಟ್ಟರಿಂದ ಕಲಿಯಬೇಕಾದದ್ದು ಬಹಳ ಇದೆ.

ಶ್ರೀ ಶರತ್ ಅವರ ಈ ಸಂಗ್ರಹದ ಕೆಲವು ಕವಿತೆಗಳ ಮೂಲಕ ತೆರೆದುಕೊಳ್ಳುವ ಅನುಭವ ಪ್ರಪಂಚ ಸಮ್ಮಿಶ್ರ ಸ್ವರೂಪದ್ದು; ಇಲ್ಲಿ ವ್ಯಕ್ತಿ ಲೋಕದೊಂದಿಗೆ ಪಡೆದ ಮುಖಾಮುಖಿಯಲ್ಲಿ ಹುಟ್ಟಿಕೊಂಡ ಭಯಗಳಿವೆ, ಸಂಶಯಗಳಿವೆ; ಕಳೆದು ಹೋದ ಪ್ರೀತಿ ವಿಶ್ವಾಸಗಳ ಬಗೆಗಿನ ನಿರಾಸೆಯಿದೆ, ಕೊರಗಿದೆ; ಮಾನವೀಯ ಸಂಬಂಧಗಳ ವಿಘಟನೆಯಿಂದಾದ ನೋವುಗಳಿವೆ; ನಿರಪರಾಧಿಗಳಿಗೆ ಅನ್ಯಾಯವಾಗಿ ಒದಗುವ ಶಿಕ್ಷೆಗಳನ್ನು ಕಂಡ ತಲ್ಲಣಗಳಿವೆ; ಪರಂಪರೆಯ ಬಗ್ಗೆ ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳಿವೆ; ಸಂಪ್ರದಾಯದ ಬಗ್ಗೆ ಇವತ್ತಿನ ತರುಣರು ತೋರುವ ಇಬ್ಬಂದಿತನಗಳಿವೆ; ವಿವಿಧ ರೀತಿಯ ಶೋಷಣೆಗಳ ನಡುವಣ ಅಸಹಾಯಕತೆಯಿದೆ: ಇಂಥ ಪರಿಸರದ ಮಧ್ಯೆಯೂ ನಿಸರ್ಗದ ಚೇತೋಹಾರಿಯಾದ ಚೆಲುವನ್ನು ವಿಸ್ಮಯದಿಂದ ನೋಡುವ ಮುಗ್ಧತೆಯೂ ಇದೆ.  ಆದರೆ ಎಲ್ಲವನ್ನೂ ಯಾವ ಅಬ್ಬರವೂ ಅತಿರೇಕವೂ ಇಲ್ಲದ ಒಂದು ಪ್ರಶಾಂತ ಮನಃಸ್ಥಿತಿಯಲ್ಲಿ ಹಿಡಿದಿಡುವ ಕುಶಲತೆ ಇದೆ.  ಇದನ್ನೆಲ್ಲ ಗಮನಿಸಿದಾಗ ಅನ್ನಿಸುತ್ತದೆ.  ಇವತ್ತಿನ ಕವಿತೆ ತನಗೆ ಹಿಂದಿನ ಹೊಸಗನ್ನಡದ ಹಲವು ಕಾವ್ಯ ಮಾರ್ಗಗಳಿಂದ ಉತ್ತಮಾಂಶಗಳನ್ನು ತನ್ನಲ್ಲಿ ಅರಗಿಸಿಕೊಂಡು ಪ್ರಯೋಗ ಪರಿಣತಿಯಲ್ಲಿ ತೊಡಗಿದೆ ಎಂದು.  ಈ ಕಾರಣದಿಂದಲೆ ಏನೋ ಶರತ್ ಅವರ ಕವಿತೆಗಳು ನವೋದಯದ ಸೌಂದರ್ಯ ಪ್ರಜ್ಞೆ  ಹಾಗೂ ಭಾವಗೀತಾತ್ಮಕತೆಯನ್ನೂ, ನವ್ಯದ ಭಾಷಾಪ್ರಜ್ಞೆಯನ್ನೂ, ದಲಿತ ಬಂಡಾಯದ ಸಾಮಾಜಿಕ ಎಚ್ಚರಗಳನ್ನೂ ತನ್ನಲ್ಲಿ ಅಳವಡಿಸಿಕೊಂಡಂತೆ ತೋರುತ್ತದೆ.  ಯಾವುದೇ ನಿಜವಾದ ಕವಿ ಬೆಳೆಯುವುದೇ ಹೀಗೆ, ಬೆಳೆಯಬೇಕಾದದ್ದೇ ಹೀಗೆ.

ಮೊದಲ ಕವನ ಸಂಗ್ರಹದ ಮೂಲಕವೇ ತಮ್ಮ ಕಾವ್ಯಶಕ್ತಿಯ ಬಗ್ಗೆ ಭರವಸೆ ಹುಟ್ಟಿಸುವ ಶರತ್ ಅವರಿಗೆ ತಮ್ಮ ಕವಿತೆಗಳನ್ನು ಕುರಿತು ಯಾವ ಭ್ರಮೆಗಳೂ ಇಲ್ಲ; ಅದರ ಬದಲು ಆತ್ಮಪ್ರತ್ಯಯ ಮೂಲವಾದ ವಿನಯವಿದೆ.  ತನ್ನ ಮಿತಿಯಲ್ಲೆ ತನ್ನ ಅಸ್ತಿತ್ವವನ್ನು ಸಾಬೀತುಗೊಳಿಸುವ ವ್ಯಕ್ತಿತ್ವದ ಬಗ್ಗೆ ನಂಬಿಕೆ ಇದೆ.  ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾನು ತಲೆಯೆತ್ತಿ ನಿಲ್ಲಬಲ್ಲೆನೆಂಬ ದಿಟ್ಟತನವಿದೆ.  ಅವರ ‘ಹಣತೆ’ ಮತ್ತು ‘ಸವಾಲು’ ಎಂಬ ಕವಿತೆಗಳಲ್ಲಿ ವ್ಯಕ್ತವಾಗುವ ಈ ನಿಲುವು, ನಾಳೆ ಇನ್ನಷ್ಟು ವಿಸ್ತಾರವಾದ ಅನುಭವ ಪ್ರಪಂಚವನ್ನು ತನ್ನ ಕವಿತೆಗಳ ಮೂಲಕ ಗೆದ್ದುಕೊಡಬಲ್ಲದೆಂಬ ಬಗ್ಗೆ ನನಗೆ ವಿಶ್ವಾಸವಿದೆ.

ಅಂತರ : ಶರತ್ ಕಲ್ಕೋಡ್ , ೧೯೮೭