ಇವರು ಇಲ್ಲ್ಲಿಗೆ ಬಂದದ್ದು ಜ್ವಲಿಸುವ ವಸಂ-
ತದಲ್ಲಿ; ಈ ವಸಂತ ವೈಭವವನ್ನು
ಇವರಂತೆ ನಿರಂತರವಾಗಿ ಹಿಡಿದಿಟ್ಟು-
ಕೊಂಡವರು ಬೇರೆ ಯಾರುಂಟು?

ಹಣ್ಣಾದ ಈ ಮರದ ಕೊಂಬೆ-ರೆಂಬೆಯ ತುಂಬ
ಎಷ್ಟೊಂದು ಹಕ್ಕಿಗಳು, ಎಷ್ಟು ಹೂವು!
ಅದೇ ಬೆರಗು, ಮತ್ತದೇ ಬೆಡಗು, ಜೋ-
ಕಾಲಿಯಾಡುತಿವೆ ಚೆಲುವು-ಒಲವು.

ಅದೇ ಖುರಪುಟಗಳನುರಣನ, ಹಸುರಿನ
ಮೇಲೆ ಗಾಲಿಗಳ ಗುರುತು. ತುಕ್ಕು
ಹಿಡಿಯುವುದು ಕಬ್ಬಿಣಕ್ಕೆ, ಚಿನ್ನಕ್ಕಲ್ಲ
ಆಭರಣವಾಗುವುದು ಕಾಲ ಕಾಲಕ್ಕು.

ಕಣ್ಣು ಕಾಣಿಸದ ಏಕಾಂಗಿತನದೊಳ-
ಮನೆಯೊಳಗೆ ನೆನಪುಗಳ ಮಗ್ಗದಲಿ
ಮಿಂಚಿನ ಲಾಳಿ. ತೊಂಬತ್ತರ ಹತ್ತಿರದಲ್ಲು
ಎಂಥ ವಜ್ರದ ಬೇಳಕು ದೀಪದಲ್ಲಿ!

ನಡೆದ ದಾರಿಯ ಮೇಲೆ ಹೋದ ಹೆಜ್ಜೆಯ ಸಾಲು
ದೂರ ಬೆಟ್ಟದ ಮೇಲೆ ಬೆಳಕುಗಳ ಬೀಡು.
ತುಂಬು ಹೊಳೆಯಂತೆ ಗಂಭೀರವಾಗಿ ಹರಿ-
ಯುತ್ತಲೇ ಇದೆ ಎಂದಿಗೂ ಮುಗಿಯದ ಹಾಡು.

ಎದೆ ತುಂಬ ನಕ್ಷತ್ರಗಳ ಬಚ್ಚಿಟ್ಟುಕೊಂಡ
ಚೈತನ್ಯಕ್ಕೆ ಕತ್ತಲೆಯ ಭಯವಿಲ್ಲ.
ಕಾರ್ತೀಕದಾಕಾಶದಂಥ ಉಜ್ವಲ ಕವಿಗೆ
ಮುನ್ನುಡಿಯ ಹಣತೆಗಳ ಯಾವ ಹಂಗೂ ಇಲ್ಲ!

(ಒಲವಿನ ಕವಿ ಕೆ.ಎಸ್.ನ. ಅವರ ‘ಎದೆ ತುಂಬ ನಕ್ಷತ್ರ’ ಕವನ ಸಂಗ್ರಹಕ್ಕೆ ಬರೆದ ಮುನ್ನುಡಿ ಕವಿತೆ)