ಮಾನಸಿಕ ಕಾಯಿಲೆ ಎಂದರೆ “ಹುಚ್ಚು ಮತಿಭ್ರಮಣೆ, ತಲೆಕೆಡುವುದು” ಎಂದೇ ಜನ ತಿಳಿಯುತ್ತಾರೆ. ಮಾನಸಿಕ ರೋಗಿ ಎಂದರೆ “ಹುಚ್ಚು ಹಿಡಿದವರು” ಇತರರಿಗೆ ಅಪಾಯವನ್ನುಂಟು ಮಾಡುವವರು, ಯಾವ ಕೆಲಸಕ್ಕೂ ಬರದ ನಿಷ್ಪ್ರಯೋಜಕರು ಎಂದೇ ತಿಳಿಯುತ್ತಾರೆ. ಹುಚ್ಚು ವಾಸಿಯಾಗುವುದಿಲ್ಲ, ಸಾಯುವವರೆಗೂ ಹುಚ್ಚು ಬಿಡುವುದಿಲ್ಲ ಎಂದು ಹೆದರುತ್ತಾರೆ. ಹುಚ್ಚರ ಸಹವಾಸ ಖಂಡಿತಾ ಬೇಡ ಎನ್ನುತ್ತಾರೆ. ಹುಚ್ಚರನ್ನು ಹುಚ್ಚಾಸ್ಪತ್ರೆಗೆ ಸೇರಿಸಿಬಿಡಬೇಕು ಎನ್ನುತ್ತಾರೆ. ಸುಮಾರು 300ಕ್ಕೂ ಹೆಚ್ಚು ವಿಧದ ಮಾನಸಿಕ ಕಾಯಿಲೆಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗದೇ ಇರದು. ಇವುಗಳನ್ನು ಏಳು ಗುಂಪುಗಳಾಗಿ ವಿಂಗಡಿಸಬಹುದು.

1.   ಮಿದುಳಿಗೆ ಹಾನಿಯಾಗಿ ಅಥವಾ ಶರೀರದಲ್ಲಿರುವ ಕೆಲವು ಕಾಯಿಲೆ, ಕೊರತೆಗಳಿಂದಾಗಿ ಬರುವ ಕಾಯಿಲೆಗಳು. ಉದಾ: ಡೆಮೆನ್ಷಿಯ, ಡೆಲಿರಿಯಂ.

2.   ಮದ್ಯಪಾನ, ಮಾದಕ ವಸ್ತುಗಳ ಸೇವನೆಯ ಚಟ ಮತ್ತು ಅದರಿಂದ ಉಂಟಾಗುವ ಕಾಯಿಲೆಗಳು.

3.   ಮಿದುಳಿನ ನರಕೋಶಗಳಲ್ಲಿ ಆಗುವ ರಾಸಾಯನಿಕ ಬದಲಾವಣೆಗಳಿಂದುಂಟಾಗುವ ಕಾಯಿಲೆಗಳು. ಉದಾ: ಸ್ಕಿಜೋಫ್ರೇನಿಯಾ, ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್, ಗೀಳು ಮನೋರೋಗ.

4.   ಮಾನಸಿಕ ಒತ್ತಡದಿಂದ, ಅಹಿತಕಾರಿಕ ಘಟನೆ ಸನ್ನಿವೇಶಗಳಲ್ಲಿ ಪ್ರಾರಂಭವಾಗುವ ಕಾಯಿಲೆಗಳು. ಉದಾ: ಆತಂಕ ಮನೋರೋಗ, ಖಿನ್ನತೆ ಮನೋರೋಗ, ಉನ್ಮಾದ ಮನೋರೋಗ.

5.   ಮಿದುಳು ಸರಿಯಾಗಿ ಬೆಳೆಯದೇ ಬರುವ ಬುದ್ಧಮಾಂಧ್ಯತೆ.

6.   ವ್ಯಕ್ತಿತ್ವ ಸರಿಯಾಗಿ ವಿಕಾಸವಾಗದೇ ಬರುವ ವ್ಯಕ್ತಿತ್ವ ದೋಷದ ಕಾಯಿಲೆಗಳು.

7.   ಮಕ್ಕಳಲ್ಲಿ ಕಂಡುಬರುವ ಮಾನಸಿಕ ಕಾಯಿಲೆಗಳು, ನಡವಳಿಕೆ ಸಮಸ್ಯೆಗಳು. ಆದ್ದರಿಂದ ಮಾನಸಿಕ ಕಾಯಿಲೆಗಳೆಲ್ಲಾ ಹುಚ್ಚು ಕಾಯಿಲೆಗಳಲ್ಲ. ಹುಚ್ಚು ಅಲ್ಲದೆ ಕಾಯಿಲೆಗಳೇ ಹೆಚ್ಚು. ಜನಸಂಖ್ಯೆಯ ಶೇಕಡಾ 10ರಷ್ಟು ಜನ ಒಂದಲ್ಲ ಒಂದು ಮಾನಸಿಕ ಕಾಯಿಲೆಯಿಂದ ಬಳಲುತ್ತಾರೆ.

ಮಾನಸಿಕ ಕಾಯಿಲೆಗಳಿಗೆ ಈಗ ಪರಿಣಾಮಕಾರಿ ಚಿಕಿತ್ಸೆಯೂ ಇದೆ. ಸುರಕ್ಷಿತವಾದ ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ, ಮನೋಚಿಕಿತ್ಸೆ, ಆಪ್ತಸಲಹೆ ಸಮಾಧಾನ. ಮೈಮನಸ್ಸು ಮಿರಮಿಸಲು ನೆರವಾಗುವ ಲಲಿತ ಕಲೆಗಳು, ಯೋಗ, ಪ್ರಾಣಾಯಾಮ, ಧ್ಯಾನದಿಂದ ಬಹುತೇಕ ಮಾನಸಿಕ ಕಾಯಿಲೆಗಳು ಹತೋಟಿಗೆ ಬರುತ್ತವೆ.

ಮನೋರೋಗವನ್ನು ಆದಷ್ಟು ಬೇಗ ಗುರುತಿಸಿ, ಚಿಕಿತ್ಸೆಗೆ ಒಳಪಡಿಸಿದರೆ ಉತ್ತಮ. ಬೇಗ ಗುಣವಾಗುತ್ತದೆ. ಮನೋರೋಗಿ ರೋಗದಿಂದ ಮುಕ್ತಿ ಪಡೆದು, ಮತ್ತೆ ಆರೋಗ್ಯವಂತನಾಗಿ ಬದುಕುವುದು ಉಪಯುಕ್ತವಾಗಿ ಜೀವನ ಮಾಡುಬಹುದು.

ಮಾನಸಿಕ ಕಾಯಿಲೆ ಯಾರಿಗಾದರೂ ಬರಬಹುದು. ಇಂಥವರಿಗೆ ಮಾತ್ರ ಬರುತ್ತವೆ ಎಂದು ಹೇಳಲಾಗುವುದಿಲ್ಲ. ಯಾವುದೇ ವರ್ಗ, ಜಾತಿ, ಪ್ರದೇಶದಲ್ಲಿ ಮನೋರೋಗ ಕಾಣಿಸಿಕೊಳ್ಳಬಹುದು.

ಅನೇಕ ಮಾನಸಿಕ ಕಾಯಿಲೆಗಳು ಅದರಲ್ಲೂ ಮುಖ್ಯವಾಗಿ ಮಾನಸಿಕ ಒತ್ತಡದಿಂದ ಬರುವ ಕಾಯಿಲೆಗಳು ನಿವಾರಣೀಯ. ಅವು ಬರದಂತೆ ನಾವು ನೋಡಿಕೊಳ್ಳಬಹುದು. ಸರಳ, ಪ್ರಶಾಂತ ಜೀವನ ಶೈಲಿ, ಮಾನಸಿಕ ಆರೋಗ್ಯಕ್ಕೆ ಸಹಕಾರಿ.

ವಿವಿಧ ಸಾಮಾನ್ಯ ಮಾನಸಿಕ ಕಾಯಿಲೆಗಳ ಲಕ್ಷಣಗಳು, ಕಾರಣ ಮತ್ತು ಚಿಕಿತ್ಸೆಯ ಬಗ್ಗೆ ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಮಾನಸಿಕ ಕಾಯಿಲೆಗಳ ಪರಿಚಯ ನಿಮಗಾಗಲಿ, ಅವುಗಳನ್ನು ನಿಯಂತ್ರಿಸುವ ಸಾಮರ್ಥ್ಯ ನಿಮಗೆ ಬರಲಿ, ಮಾನಸಿಕ ಕಾಯಿಲೆಯಿಂದ ಬಳಲುವವರಿಗೆ ನೀವು ನೆರವಾಗಲಿ ಎಂಬುದೇ ಈ ಪುಸ್ತಕವನ್ನು ಪ್ರಕಟಿಸಿರುವ ನಿಮ್ಹಾನ್ಸ್ ಸಂಸ್ಥೆಗೆ ನಾನು ಅಭಾರಿ.

ಡಾ| ಸಿ.ಆರ್. ಚಂದ್ರಶೇಖರ್
ಪ್ರಾಧ್ಯಾಪಕರು
ಮನೋವೈದ್ಯ ವಿಭಾಗ – ನಿಮ್ಹಾನ್ಸ್, ಬೆಂಗಳೂರು – 29.