ಪ್ರಜಾಸತ್ತಾತ್ಮಕ ಯುಗದಲ್ಲಿ ಶ್ರೀಸಾಮಾನ್ಯನೇ ಸಮಾಜದ ಮೂಲ ಘಟಕ. ಹಿಂದೆ ರಾಜ-ಮಹಾರಾಜರ, ಚಕ್ರವರ್ತಿಗಳ ವಸ್ತುವೇ ಸಾಹಿತ್ಯ, ಸಂಸ್ಕೃತಿಗಳ ಕೇಂದ್ರ ಬಿಂದುವಾಗಿದ್ದರೆ, ಇಂದು ಶ್ರೀಸಾಮಾನ್ಯನೇ ಅದರ ಅಧಿದೈವನಾಗಿದ್ದಾನೆ. ಹೀಗಾಗಿ ಪ್ರಪಂಚದಾದ್ಯಂತ ನಡೆದ ಉತ್ಕ್ರಾಂತಿಯ ಸಮುದ್ರಮಥನದಿಂದ ಹೊರಬಂದ ಆತನಿಗೆ ಸಂಬಂಧಪಟ್ಟ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅಭ್ಯಾಸಕ್ಕೆ ವಿಶ್ವವಿದ್ಯಾಲಯಗಳಲ್ಲಿ ಗಣ್ಯಸ್ಥಾನ ದೊರೆತಿದೆ; ದೊರೆಯುತ್ತದೆ.

ಕನ್ನಡ ಸಾಹಿತ್ಯ, ಸಂಸ್ಕೃತಿಗಳ ವಿವಿಧ ಮುಖಗಳ ದರ್ಶನ-ಪ್ರದರ್ಶನಗಳ ಅಭ್ಯಾಸ, ಅಭಿವೃದ್ಧಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭವಾದ ಕರ್ನಾಟಕ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ ಶ್ರೀಸಾಮಾನ್ಯನ ಬದುಕಿನ ಸಂವೇದನೆಗಳನ್ನು ಅರ್ಥಮಾಡಿಕೊಂಡಿದೆ. ಹಲವು ವರ್ಷಗಳ ಹಿಂದೆ ಅದು ಆರಂಭಿಸಿದ ‘ಜಾನಪದ ಎಂ.ಎ.’ ಅಭ್ಯಾಸ ಕ್ರಮವೇ ಇದಕ್ಕೆ ನಿದರ್ಶನ. ಆ ಪೂರ್ವದಲ್ಲಿಯೇ ಕನ್ನಡ ಎಂ.ಎ. ಅಭ್ಯಾಸ ಕ್ರಮದಲ್ಲಿ ಜಾನಪದಕ್ಕೆ ವಿಶೇಷಾಧ್ಯಯನದ ಪ್ರಾಶಸ್ತ್ಯವನ್ನು ಕಲ್ಪಿಸಿ ಕೊಡಲಾಗಿದ್ದಿತು. ಅಂದಿನಿಂದ ಜಾನಪದಕ್ಕೆ ಸಂಬಂಧಪಟ್ಟ ಸಮ್ಮೇಲನ. ಗ್ರಂಥ ಪ್ರಕಟನೆ, ವಸ್ತು ಸಂಗ್ರಹ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.

೧೯೭೩ನೆಯ ಜನೆವರಿ ತಿಂಗಳು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಒಂದು ಸಂಸ್ಮರಣೀಯ ದಿನ. ಅಖಿಲ ಕರ್ನಾಟಕ ಮಟ್ಟದ ಜಾನಪದ ಸಮ್ಮೇಲನವನ್ನು ಪ್ರತಿ ವರ್ಷ ನಡೆಸಬೇಕೆಂಬ ಕನ್ನಡ ಅಧ್ಯಯನಪೀಠದ ಧೋರಣೆಯನ್ನು ಕರ್ನಾಟಕ ವಿಶ್ವವಿದ್ಯಾಲಯ ಒಪ್ಪಿಕೊಂಡು, ಪ್ರಥಮ ಸಮ್ಮೇಲನ ಧಾರವಾಡದಲ್ಲಿಯೇ ಜರುಗುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಅಂದಿನಿಂದ ಈ ಸಮ್ಮೇಲನ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಯಶಸ್ವಿಯಾಗಿ ಜರುಗುತ್ತ ಬಂದಿದೆ. ಈ ಮಾಲಿಕೆಯಲ್ಲಿ ೧೧ನೆಯ ಸಮ್ಮೇಲನ ೮, ೯ ಫೆಬ್ರುವರಿ ೧೯೮೪ರಂದು ಸವದತ್ತಿಯಲ್ಲಿ ಜರುಗಿತು.

ಈವರೆಗಿನ ಸಮ್ಮೇಲನಗಳು ಸ್ಥಳೀಯ ಕಾಲೇಜುಗಳ ಆಶ್ರಯದಲ್ಲಿ ಜರುಗುತ್ತಲ್ಲಿದ್ದವು. ಹೀಗಾಗಿ ಈ ಸಮ್ಮೇಲನ ಒಂದು ಪರಿಮಿತಿಗೆ ಒಳಪಡುತ್ತಿದ್ದಿತು. ಇದರಿಂದ ಬಿಡಿಸಿಕೊಂಡು ಸ್ಥಳೀಯ ನಾಗರಿಕರ ಸ್ವಾಗತ ಸಮಿತಿಯ ಆಶ್ರಯದಲ್ಲಿ ಜರುಗಿದುದು ಈ ಸಮ್ಮೇಲನದ ಒಂದು ವೈಶಿಷ್ಟ್ಯ. ಶ್ರೀ ಸಿ.ಎಂ. ಮಾಮನಿ (ಅಧ್ಯಕ್ಷ), ಶ್ರೀ ಡಿ.ಎಸ್‌. ಜಕಾತಿ (ಕಾರ್ಯಾಧ್ಯಕ್ಷ), ಶ್ರೀ ಜಿ.ಬಿ. ಹಂಪಣ್ಣವರ (ಕೋಶಾಧ್ಯಕ್ಷ), ಶ್ರೀ ಐ.ಎಂ. ಪಟ್ಟಣಶೆಟ್ಟಿ (ಕಾರ್ಯದರ್ಶಿ)- ಇವರ ನೇತೃತ್ವದಲ್ಲಿ ಶ್ರೀಯುತರಾದ ಎಲ್‌.ಬಿ. ಶಿಗ್ಲಿ, ಎಸ್‌.ಡಿ. ಹುನಗುಂದ, ವಾಯ್‌. ಎಚ್‌. ಹಳ್ಳಿಕೇರಿ, ಜಿ.ಎಸ್‌. ಹಂಪಣ್ಣವರ, ಎನ್‌.ಸಿ. ಬೆಂಡಿಗೇರಿ. ಪಿ.ಬಿ. ಪಾಟೀಲ, ಎಸ್‌.ಎಸ್‌. ತುಪ್ಪದ, ಎಂ.ಎನ್‌.ಹನಸಿ, ಡಾ|| (ಶ್ರೀಮತಿ) ನರಗುಂದ, ಬಿ.ಬಿ. ಬೆಳ್ಳಿಕಟ್ಟಿ, ಎಸ್‌.ಎನ್‌. ಕೌಜಲಗಿ, ಎಸ್‌.ಜಿ. ಪಾಟೀಲ, ಬಿ.ಎಚ್‌. ಪಾಟೀಲ, ಎಸ್‌.ಎಸ್‌. ಪಾಟೀಲ, ಜಿ.ಎಸ್‌. ಸಿಂಧೆ, ಎಂ.ಎನ್‌. ಶಿರಸಂಗಿ ಸದಸ್ಯರಾಗಿ ದುಡಿದು ಈ ಸಮ್ಮೇಲನದ ಯಶಸ್ಸಿಗೆ ಕಾರಣರಾದರು.

ಸವದತ್ತಿ ನಮ್ಮ ರಾಜ್ಯದ ಒಂದು ವಿಶಿಷ್ಟ ಊರು. ಎಲ್ಲಮ್ಮನ ದೇವಾಲಯ ಲಕ್ಷೋಪಲಕ್ಷ ಭಕ್ತಸಮೂಹ-ಜನಪದ ಆಚರಣೆ ಇತ್ಯಾದಿ ದೃಷ್ಟಿಯಿಂದ ಇದು ಜಾನಪದ ಅಭ್ಯಾಸಕ್ಕೆ ಒಂದು ಅಮೂಲ್ಯ ಗಣಿ. ಆದುದರಿಂದ ಈ ಸಮ್ಮೇಲನದ ಅಂಗವಾಗಿ, ಪ್ರಾಣವಾಗಿ “ಏಳುಕೊಳ್ಳದ ಎಲ್ಲಮ್ಮ” ಹೆಸರಿನ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದ್ದಿತು. ಹೀಗೆ ಸರಳ ಮತ್ತು ವಿಷಯ ಹೊಂದಿಕೆಯಿಂದಾಗಿ ಈ ವಿಚಾರ ಸಂಕಿರಣ ಏಕಕಾಲಕ್ಕೆ ತಾತ್ವಿಕವೂ ಅನ್ವಯಿಕವೂ ಆಗಿ ಪರಿಣಮಿಸಿತು. ಎಲ್ಲಮ್ಮನ ಪರಿಸರ, ಇತಿಹಾಸ, ಐತಿಹ್ಯ, ಪೂಜೆ, ಜಾತ್ರೆ, ಆಚರಣೆ, ಜೋಗತಿ ಸಂಪ್ರದಾಯ ಇತ್ಯಾದಿ ವಿಷಯಗಳನ್ನು ಕುರಿತಿ ಪ್ರಬಂಧಗಳು ಪ್ರಥಮಸಲ ಈ ಮಾತೃದೇವತೆಯನ್ನು ಸಮಗ್ರವಾಗಿ ಪರಿಚಯಿಸಿದವು. ಈ ಸಮ್ಮೇಲನದ ಇನ್ನೊಂದು ವೈಶಿಷ್ಟ್ಯವೆಂದರೆ ಖ್ಯಾತ ಅರ್ಥಶಾಸ್ತ್ರಜ್ಞರಾದ ಕುಲಪತಿ ಡಾ. ಡಿ.ಎಂ. ನಂಜುಂಡಪ್ಪ ಅವರು ಉದ್ಘಾಟಿಸಿದುದು, ಮೈಸೂರು ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ವರಿಷ್ಟರಾದ ಡಾ|| (ಶ್ರೀಮತಿ) ಸಿ. ಪಾರ್ವತಮ್ಮ ಅವರು ಅಧ್ಯಕ್ಷತೆಯಿಂದಾಗಿ ಈ ವಿಚಾರ ಸಂಕಿರಣಕ್ಕೆ. ಈ ಸಮ್ಮೇಲನಕ್ಕೆ ಸಾಮಾಜಿಕ ಅಧ್ಯಯನದ ಆಯಾಮವೂ ಪ್ರಾಪ್ತವಾಯಿತು. ಪ್ರತಿದಿನ ಸಂಜೆ ಜರುಗಿದ ರಂಗ ಪ್ರದರ್ಶನವು ಜಾನಪದ ಕಲೆಗಳನ್ನು ಚಾಕ್ಷುಷಗೊಳಿಸಿತು. ಹೀಗೆ ವಿಚಾರ ಸಂಕಿರಣ, ರಂಗಪ್ರದರ್ಶನಗಳಿಂದ ಈ ಸಮ್ಮೇಲನ ಎರಡು ದಿನಗಳವರೆಗೆ ಅರ್ಥವತ್ತಾಗಿ ಜರುಗಿತು.

ಕನ್ನಡ ಅಧ್ಯಯನಪೀಠ ನಡೆಸುತ್ತ ಬಂದ ಸಮ್ಮೇಳನಗಳಲ್ಲಿ ಓದಿದ ಪ್ರಬಂಧಗಳನ್ನು ‘ಜಾನಪದ ಸಾಹಿತ್ಯ ದರ್ಶನ’ ಹೆಸರಿನಿಂದ ಪ್ರಕಟಿಸುತ್ತ ಬರುತ್ತಲಿರುವುದು ಒಂದು ವಿಶೇಷ. ಅಖಿಲ ಕರ್ನಾಟಕದಲ್ಲಿಯೇ ಈ ಗ್ರಂಥಗಳು ಜಾನಪದ ಅಭ್ಯಾಸಿಗಳಿಗೆ ಅಪೂರ್ವ ಆಕರ ಸಾಮಗ್ರಿಯಾಗಿವೆ. ಈ ಗ್ರಂಥಮಾಲಿಕೆಯಲ್ಲಿ ಪ್ರಕಟವಾಗುತ್ತಲಿದೆ ಸವದತ್ತಿಯಲ್ಲಿ ಜರುಗಿದ ಸಮ್ಮೇಲನದಲ್ಲಿ ಓದಲಾದ ಪ್ರಬಂಧಗಳ ಸಂಕಲನವಾದ ಈ ಗ್ರಂಥ. ಈ ಗ್ರಂಥಕ್ಕೆ ಪ್ರಬಂಧಗಳನ್ನು  ಪೂರೈಸಿದ ವಿದ್ವಾಂಸರಿಗೂ ಇದು ಪ್ರಕಟವಾಗುವಲ್ಲಿ ಅನನ್ಯ ಆಸಕ್ತಿ ವಹಿಸಿದ ಸಮ್ಮೇಲನದ ಕಾರ್ಯದರ್ಶಿ ವಿಲ್ಯಂ ಮಾಡ್ತ ಅವರಿಗೂ, ಪ್ರಸಾರಾಂಗದ ಅಧಿಕಾರಿಗಳಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಡಾ.ಎಂ.ಎಂ. ಕಲಬುರ್ಗಿ
ಮುಖ್ಯಸ್ಥರು
ಕನ್ನಡ ಅಧ್ಯಯನಪೀಠ
ಕರ್ನಾಟಕ ವಿಶ್ವವಿದ್ಯಾಲಯ,
ಧಾರವಾಡ
೮-೯ ಫೆಬ್ರುವರಿ, ೧೯೮೪