ಹೊಸ ವಿದ್ಯಮಾನಗಳ ಬೆಳಕಿನಲ್ಲಿ ಪಾರಂಪರಿಕ ಮತ್ತು ಆಧುನಿಕ ತಿಳುವಳಿಕೆಗಳು ಪರಿವರ್ತನೆಯ ಮಗ್ಗುಲಿಗೆ ಹೊರಳಿಕೊಳ್ಳುತ್ತಿರುವುದು ಸರ್ವವಿದಿತ. ಇದು ದಿಗ್ಭ್ರಮೆಯನ್ನು ಉಂಟು ಮಾಡುವುದರೊಂದಿಗೆ ಜ್ಞಾನ ಶಾಖೆಗಳ ವಿವೇಕಪೂರ್ಣ ವಿನಿಯೋಗಕ್ಕೂ ನಮ್ಮನ್ನು ಒತ್ತಾಯಿಸುತ್ತದೆ. ಅವುಗಳ ವಿನಿಯೋಗಕ್ಕೂ ನಮ್ಮನ್ನು ಒತ್ತಾಯಿಸುತ್ತದೆ. ಅವುಗಳ ವಿನಿಯೋಗಕ್ಕೆ ಪೂರಕವಾಗಿ ವಿದ್ಯೆಯನ್ನು ನಿರ್ಮಿಸುವುದು ಹಾಗೂ ಪ್ರಸಾರ ಮಾಡುವುದು ವಿಶ್ವವಿದ್ಯಾಲಯದ ಕೆಲಸವಾಗಿದೆ ಎಂದು ನಾನು ಭಾವಿಸಿದ್ದೇನೆ.

ನಮ್ಮ ವಿಶ್ವವಿದ್ಯಾಲಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾಪ್ರಸಾರ ಮಾಡುವುದರ ಜೊತೆಗೆ ಸಂಶೋಧನೆ ಮತ್ತು ಜಿಜ್ಞಾಸೆಗಳ ಮೂಲಕ ಜ್ಞಾನದ ಪರಿಧಿಗಳನ್ನು ವಿಸ್ತರಿಸಿ ಶ್ರೀ ಸಾಮಾನ್ಯರಿಗೂ ಉಪಯುಕ್ತವಾದ ಜ್ಞಾನ ಪ್ರಸಾರ ಕಾರ್ಯವನ್ನು ನಿರ್ವಹಿಸಿಕೊಂಡು ಬಂದಿದೆ. ವಿಜ್ಞಾನ, ಭಾಷೆ, ಕಲೆ, ಸಾಹಿತ್ಯ ಹಾಗೂ ಇತರ ಎಲ್ಲ ಸಾಮಾಜಿಕ, ಮಾನವಿಕ ಶಾಸ್ತ್ರಗಳ ತಿಳುವಳಿಕೆಯನ್ನು ಜನಸಾಮಾನ್ಯರೆಲ್ಲರಿಗೂ ಮುಟ್ಟಿಸಲು ಪ್ರಾದೇಶಿಕ ಭಾಷೆಯಲ್ಲಿ ಗ್ರಂಥಗಳನ್ನು ರಚಿಸುವುದು ಹಾಗೂ ಬೋಧನೆ ಮಾಡುವುದು ಬಹಳ ಮುಖ್ಯವಾದ ಉಪಕ್ರಮವೆಂದು  ಅರಿತುಕೊಂಡಿದೆ.

ಕಳೆದ ೫೪ ವರ್ಷಗಳಿಂದ ವಿಶ್ವವಿದ್ಯಾಲಯ ಮುದ್ರಣ ಜವಾಬ್ದಾರಿಯನ್ನು “ಪ್ರಸಾರಾಂಗ”ದ ಮೂಲಕವಾಗಿ ಕಾರ್ಯಗತಗೊಳಿಸಿದೆ. ಪ್ರಸಾರಾಂಗ ಪ್ರಕಟಿಸಿದ ಸಾವಿರಾರು ಗ್ರಂಥಗಳು ನಾಡಿದ ಪಂಡಿತ ಪಾಮರರೆಲ್ಲರಿಗೂ ಪ್ರಿಯವಾಗಿವೆ. ಅನೇಕ ಗ್ರಂಥಗಳು ಪುನಃ ಮುದ್ರಣಗೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಪ್ರಸಾರಾಂಗ ರೂಪಿಸಿಕೊಂಡಿರುವ ಹಲವಾರು ಮಾಲೆಗಳಲ್ಲಿ ಪ್ರಕಟಗೊಳ್ಳುವ  ಈ ಗ್ರಂಥಗಳು, ಓದುಗರನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ತಲುಪಲಿ, ವಿಶ್ವವಿದ್ಯೆ ಸಾರ್ಥಕವಾಗಲಿ ಎಂದು ಹಾರೈಸುತ್ತೇನೆ.

ಡಾ. ಎಂ. ಖಾಜಾಪೀರ್
ಕುಲಪತಿಗಳು