ಇದು ಕಳೆದ ವರ್ಷ ಪ್ರಕಟವಾದ ನನ್ನ ‘ಸಮಗ್ರ ಗದ್ಯ-೧’ರ ಮುಂದುವರಿಕೆಯಾಗಿರುವ ಎರಡನೆಯ ಸಂಪುಟ. ವಿಷಯದ ದೃಷ್ಟಿಯಿಂದ ಇದು ಮೊದಲನೆಯ ಸಂಪುಟಕ್ಕಿಂತ ಬೇರೆಯೇ ಆದದ್ದು. ಮೊದಲ ಸಂಪುಟ ಮುಖ್ಯವಾಗಿ ಪ್ರಾಚೀನ ಸಾಹಿತ್ಯವನ್ನು ಕುರಿತದ್ದಾದರೆ, ಈ ಎರಡನೆಯ ಸಂಪುಟ ಮುಖ್ಯವಾಗಿ ಆಧುನಿಕ ಸಾಹಿತ್ಯವನ್ನು, ಅದಕ್ಕೆ ಸಂಬಂಧಿಸಿದ ಸಾಹಿತ್ಯ ತತ್ವ ಹಾಗೂ ಸಾಹಿತ್ಯ ವಿಮರ್ಶೆಯನ್ನು ಕುರಿತದ್ದು. ಆದರೆ ಈ ಎರಡೂ ಸಂಪುಟಗಳ ಹರಹಿನಲ್ಲಿ ನಾನು ಒಟ್ಟಾರೆಯಾಗಿ ಪ್ರಾಚೀನ ಸಾಹಿತ್ಯದಿಂದ ಹಿಡಿದು ಸಮಕಾಲೀನ ಸಾಹಿತ್ಯ ಸಂದರ್ಭದವರೆಗಿನ ‘ಸಾಹಿತ್ಯ ಪರಂಪರೆ’ಯೊಂದಿಗೆ ನಡೆಯಿಸಿದ ಸಂವಾದ ಹಾಗೂ ಪ್ರತಿಕ್ರಿಯೆಗಳನ್ನು ಗುರುತಿಸಬಹುದಾಗಿದೆ.

ಈ ಸಂಪುಟದಲ್ಲಿ ಒಟ್ಟು ನಲವತ್ತೈದು ಲೇಖನಗಳಿವೆ. ಇವುಗಳನ್ನು ಈಗಾಗಲೇ ಪ್ರಕಟವಾದ ನನ್ನ ‘ಗತಿಬಿಂಬ’ (೧೯೬೯), ‘ನವೋದಯ’ (೧೯೭೬), ‘ಪ್ರತಿಕ್ರಿಯೆ’ (೧೯೭೬) ಮತ್ತು ‘ಬೆಡಗು’ (೧೯೮೨)-ಈ ಸಂಕಲನಗಳಿಂದ, ಈ ಸಂಪುಟದ ವಸ್ತು ಹಾಗೂ ಧೋರಣೆಗೆ ಸಂಗತವಾಗುವಂಥ ಲೇಖನಗಳನ್ನು ಆಯ್ದು ಒಂದು ಅನುಕ್ರಮದಲ್ಲಿ ಜೋಡಿಸಲಾಗಿದೆ; ಹಾಗೂ ಈವರೆಗೆ ಈ ಯಾವ ಸಂಕಲನದೊಳಗೂ ಸೇಪರ್ಡೆಯಾಗದ ಕೆಲವು ಹೊಸ ಲೇಖನಗಳೂ ಇದರಲ್ಲಿ ಸಮಾವೇಶಗೊಂಡಿವೆ. ಈ ಎಲ್ಲ ಲೇಖನಗಳಲ್ಲಿ ‘ಸಾಹಿತ್ಯ ಜೀವನದ ಗತಿಬಿಂಬ’ ಎಂಬ ಲೇಖನವೇ, ತೀರಾ ಮೊದಲಿನದು. ನನಗೆ ನೆನಪಿರುವಂತೆ ಅದನ್ನು ನಾನು ಬರೆದದ್ದು ೧೯೫೪ರಲ್ಲಿ; ಆನಂತರ ಅದು ೧೯೫೬ನೇ ಸಾಲಿನ ‘ಪ್ರಬುದ್ಧ ಕರ್ಣಾಟಕ’ದಲ್ಲಿ ಪ್ರಕಟವಾಯಿತು. ಈ ಮಾತನ್ನು ಹೇಳಿದ್ದರ ಉದ್ದೇಶ, ನನ್ನ ಕವಿತೆಯಂತೆಯೆ, ನನ್ನ ಸಾಹಿತ್ಯ ಚಿಂತನೆಯ ಪ್ರಯತ್ನವೂ ಮೂರೂವರೆ ದಶಕಗಳಷ್ಟು ಸುದೀರ್ಘ ಕಾಲಮಾನವನ್ನು ವ್ಯಾಪಿಸಿಕೊಂಡಿದೆ ಎಂಬ ಸಂಗತಿಯನ್ನು ನೆನಪು ಮಾಡಿಕೊಳ್ಳುವುದಕ್ಕೆ.

ಈ ಸಂಪುಟದ ಲೇಖನಗಳು ಎರಡು ಉಪ ವಿಭಾಗಗಳಲ್ಲಿ ಅಳವಡಿಕೆಗೊಂಡಿವೆ. ‘ಭಾಗ-೧’ರ ಲೇಖನಗಳು ಸಾಹಿತ್ಯ ತತ್ವ ಹಾಗೂ ಸಾಹಿತ್ಯ ವಿಮರ್ಶೆಯ ಸಂದರ್ಭದ ಕೆಲವು ಪರಿಕಲ್ಪನೆಗಳನ್ನು ಕುರಿತವುಗಳಾದರೆ, ‘ಭಾಗ-೨’ರ ಲೇಖನಗಳು ಮುಖ್ಯವಾಗಿ ಹೊಸಗನ್ನಡ ಸಾಹಿತ್ಯ ಚಳುವಳಿಗಳನ್ನೂ ಮತ್ತು ಆ ಸಂದರ್ಭದಲ್ಲಿ ನನಗೆ ಪ್ರಸ್ತುತವೆಂದು ತೋರಿದ ಕೆಲವು ಮುಖ್ಯ ಲೇಖಕರ ಕೊಡುಗೆಗಳನ್ನೂ ಪರಿಶೀಲನೆಗೆ ಒಳಗುಪಡಿಸಿದ್ದರ ಪರಿಣಾಮಗಳಾಗಿವೆ. ಆದರೆ ಈ  ಸಂಪುಟದ ಬಹುತೇಕ ಬರೆಹಗಳು ‘ನವೋದಯ ಸಾಹಿತ್ಯ’ ಸಂದರ್ಭವನ್ನು ಹಾಗೂ ಅದರೊಂದಿಗೆ ಸಂಬಂಧಿಸಿದ ಕವಿಗಳನ್ನು ಕುರಿತದ್ದಾಗಿವೆ ಎನ್ನುವುದು ಆಕಸ್ಮಿಕದ ಸಂಗತಿಯೇನಲ್ಲ. ಯಾಕೆಂದರೆ ನಾನು ಕವಿತೆ ಹಾಗೂ ಸಾಹಿತ್ಯ ವಿಮರ್ಶೆಯನ್ನು ಪ್ರಾರಂಭಿಸಿದ್ದೇ ನವೋದಯದ ಉತ್ಕರ್ಷದ ಕಾಲದಲ್ಲಿ, ಮತ್ತು ನನ್ನ ಸಾಹಿತ್ಯಕ ವ್ಯಕ್ತಿತ್ವ ರೂಪುಗೊಂಡದ್ದು  ಹಾಗೂ ಬೆಳೆದದ್ದು ನವೋದಯದ ಕಾಲಮಾನದ ಸತ್ವದಿಂದಲೇ. ಆದರೂ ನಾನು, ಉದ್ದಕ್ಕೂ ವಿವಿಧ ಚಳುವಳಿಗಳ ಮೂಲಕ ಹಾದುಬಂದಿರುವುದರಿಂದ, ಹಾಗೂ ಅವುಗಳ ಸತ್ವಗಳಿಂದ ಬೆಳೆದಿರುವುದರಿಂದ, ಇನ್ನಿತರ ಸಾಹಿತ್ಯ ಚಳುವಳಿಗಳ ಸಾಧನೆಗಳನ್ನೂ ತಕ್ಕ ಎಚ್ಚರ ಹಾಗೂ ಗೌರವಗಳಿಂದಲೇ ಗುರುತಿಸಲು ಪ್ರಯತ್ನಪಟ್ಟಿದ್ದೇನೆ  ಎಂಬುದು ನನ್ನ ತಿಳಿವಳಿಕೆಯಾಗಿದೆ. ಈಗ ಒಂದರ್ಥದಲ್ಲಿ ಎಲ್ಲ ಚಳುವಳಿಗಳೂ ನಿಲುಗಡೆಗೆ ಬಂದು, ಮತ್ತೆ ಕನ್ನಡ ಸಾಹಿತ್ಯ ಹೊಸ ಹುಟ್ಟಿಗೆ ಸಿದ್ಧವಾಗುತ್ತಿರುವಂತೆ ತೋರುತ್ತಿರುವ ಈ ಹೊತ್ತಿನಲ್ಲಿ, ಸತ್ವಯುತವೂ ನಿರಂತರವೂ ಆದ ಕನ್ನಡ ಸಾಹಿತ್ಯ ಪರಂಪರೆಯನ್ನು ಕಟ್ಟುವಲ್ಲಿ, ಇದುವರೆಗಿನ ಸಾಹಿತ್ಯ ಚಳುವಳಿಗಳು ವಹಿಸಿರುವ ಪಾತ್ರವೇನು ಹಾಗೂ ಅವುಗಳ ಕೊಡುಗೆಗಳೇನು ಎನ್ನುವುದರ ಮರುಪರೀಶೀಲನೆಗೆ ತೊಡಗುವುದು ಅಗತ್ಯವಾಗಿದೆ.

ನನ್ನ ಈ ಸಮಗ್ರ ಗದ್ಯದ ಎರಡನೆಯ ಸಂಪುಟದ ಮುದ್ರಣ ಕಾರ‍್ಯ ಮುಗಿಯುವ ವೇಳೆಗೆ ವಯ್ಯಕ್ತಿಕವಾಗಿ ನನಗೆ, ಹಾಗೂ ಕನ್ನಡ ಪುಸ್ತಕ ಪ್ರಕಾಶನಕ್ಕೆ ಅನಿರೀಕ್ಷಿತವಾಗಿ ಒದಗಿದ ಆಘಾತವನ್ನು ಅತ್ಯಂತ ದುಃಖದಿಂದ ನಾನು ಪ್ರಸ್ತಾಪಿಸಬೇಕಾಗಿದೆ: ಅದೆಂದರೆ, ಕನ್ನಡನಾಡಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ‘ಶಾರದಾ ಪ್ರಕಾಶನ’ವನ್ನು ಕಟ್ಟಿ ಬೆಳೆಯಿಸಿದ ಹಾಗೂ ನನ್ನ ಅಚ್ಚುಮೆಚ್ಚಿನ ಪ್ರಕಾಶಕರೂ, ಆತ್ಮೀಯ ಸ್ನೇಹಿತರೂ ಆದ ಶ್ರೀ ಜಿ. ಬಸವರಾಜ್ ಅವರ ಹಠಾತ್ ನಿಧನ. ಪುಸ್ತಕ ಪ್ರಕಟನೆಯ ಬಗ್ಗೆ ಅವರಿಗಿದ್ದ ಸದುದ್ದೇಶಮೂಲವಾದ ಕಾಳಜಿಗಳನ್ನೂ, ಅವರ ಕಾರ್ಯಕ್ಷಮತೆ ಹಾಗೂ ಪ್ರಾಮಾಣಿಕತೆಗಳನ್ನೂ, ಅವರಿಗಿದ್ದ ಸಹಜವಾದ ಸಾಹಿತ್ಯಾಭಿರುಚಿಗಳನ್ನೂ ಮತ್ತು ಮಹತ್ವಾಕಾಂಕ್ಷೆಗಳನ್ನೂ ನಾನು ಮರೆಯಲಾರೆ. ಕಳೆದ ಎರಡು ದಶಕಗಳಿಂದಲೂ ನನ್ನ ಕೃತಿಗಳ ನೆಚ್ಚಿನ ಪ್ರಕಾಶಕರಾಗಿ, ಅವರು ನನ್ನ ವಿಚಾರದಲ್ಲಿ ಇರಿಸಿಕೊಂಡ ವಿಶ್ವಾಸವನ್ನೂ, ಅವರು ಮಾಡಿದ ಉಪಕಾರಗಳನ್ನೂ ಕೃತಜ್ಞತೆಗಳಿಂದ ನೆನೆಯುತ್ತೇನೆ.

ಈ ಹಿನ್ನೆಲೆಯಲ್ಲಿ ‘ಸ್ನೇಹ ಪ್ರಕಾಶನ’ದ ಮೂಲಕ ನನ್ನ ಈ ‘ಸಮಗ್ರ ಗದ್ಯ’ ಸಂಪುಟವು ಪ್ರಕಟಣೆಗೊಳ್ಳುವಂತೆ ವ್ಯವಸ್ಥೆ ಮಾಡಿ ನನ್ನ ಆತಂಕವನ್ನು ನಿವಾರಿಸಿದ, ನನ್ನ ಬಹುಕಾಲದ ಗೆಳೆಯರಾದ ಡಾ. ಎಸ್. ವಿದ್ಯಾಶಂಕರ ಅವರ ಸಕಾಲಿಕ ನೆರವನ್ನು ತುಂಬ ಪ್ರೀತಿಯಿಂದ ನೆನೆಯುತ್ತೇನೆ. ಹಾಗೆಯೆ ಈ ಸಂಪುಟದ ಮುದ್ರಣ ಕಾರ್ಯವನ್ನು ಅತ್ಯಂತ ಉತ್ಸಾಹದಿಂದ ಹಾಗೂ ವಿಶ್ವಾಸದಿಂದ ನೆರವೇರಿಸಿಕೊಟ್ಟ ‘ಎಂ.ಎಂ.ಪ್ರಿಂಟಿಂಗ್ ವರ್ಕ್ಸ್’ನ ಶ್ರೀ ಎಂ. ನಾಗರಾಜ್ ಅವರಿಗೆ ನನ್ನ ವಂದನೆಗಳು.

ಈ ಸಂಪುಟಕ್ಕೆ ಸಾರವತ್ತಾದ ಬೆನ್ನುಡಿಯ ಮಾತುಗಳನ್ನು ಬರೆದುಕೊಟ್ಟ, ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾದ ಹಾಗೂ ನನಗೆ ಪ್ರಿಯರಾದ ಡಾ. ಎಚ್. ಎಸ್.  gಘವೇಂದ್ರರಾವ್ ಅವರಿಗೆ ನನ್ನ ವಂದನೆಗಳು.

ಜಿ.ಎಸ್.ಶಿವರುದ್ರಪ್ಪ
ಜನವರಿ, ೧೯೯೪

ಎರಡನೆ ಮುದ್ರಣಕ್ಕೆ ಎರಡು ಮಾತು

ಹದಿಮೂರು ವರ್ಷಗಳ ನಂತರ ನನ್ನ ಸಮಗ್ರ ಗದ್ಯದ ಎರಡನೆಯ ಸಂಪುಟವು ಡಾ.ಎಸ್. ವಿದ್ಯಾಶಂಕರ ಅವರ ವಿಶ್ವಾಸದಿಂದ ಪ್ರಿಯದರ್ಶಿನಿ ಪ್ರಕಾಶನದ ಮೂಲಕ ಮರುಮುದ್ರಣವನ್ನು ಕಾಣುತ್ತಿದೆ. ಇದರ ಮೊದಲ ಮುದ್ರಣದಲ್ಲಿ ಇಲ್ಲದ ಹದಿಮೂರು ಲೇಖನಗಳು ಹೊಸದಾಗಿ ಸೇರ್ಪಡೆಯಾಗಿವೆ.

ಮೂರು ವರ್ಷಗಳ ಹಿಂದೆ ಇದೇ ಪ್ರಕಾಶಕರಿಂದ ಪ್ರಕಟವಾದ ನನ್ನ  ಸಮಗ್ರ ಗದ್ಯದ ಮೊದಲ ಸಂಪುಟದ ಪರಿಷ್ಕೃತ ಆವೃತ್ತಿಯ ಜತೆಗೆ ಈ ಸಂಪುಟವೂ ಸೇರುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ.

ಪ್ರಕಾಶಕ ಮಿತ್ರರಾದ ಡಾ. ಎಸ್. ವಿದ್ಯಾಶಂಕರ ಅವರಿಗೂ, ಅಂದವಾಗಿ ಮುದ್ರಿಸಿದ ಸ್ನೇಹಾ ಪ್ರಿಂಟರ್ಸ್ ಅವರಿಗೂ ನನ್ನ ಪ್ರೀತಿಯ ವಂದನೆಗಳು.

ಜಿ. ಎಸ್.ಶಿವರುದ್ರಪ್ಪ
ಜನವರಿ ೨೦೦೭

ಮೂರನೆಯ ಮುದ್ರಣಕ್ಕೆ ಎರಡು ಮಾತು

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ ಅವರಿಗೆ ಮತ್ತು ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ ಕೆ.ಆರ್. ಗಣೇಶ್‌ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

ಜಿ.ಎಸ್. ಶಿವರುದ್ರಪ್ಪ
ಫೆಬ್ರವರಿ ೨೦೦೯