ಕರ್ನಾಟಕ ವಿಶ್ವವಿದ್ಯಾಲಯದ “ಪ್ರಸಾರಾಂಗ” ಪ್ರೌಢವಾದ ಸಂಶೋಧನಾತ್ಮಕ ಗ್ರಂಥಗಳನ್ನೂ, ಪತ್ರಿಕೆಗಳನ್ನೂ ಪ್ರಕಟಿಸುವುದರ ಜೊತೆಗೆ ಸಾಮಾನ್ಯ ಜನತೆಗಾಗಿ ಹಲವು ಜ್ಞಾನಪ್ರಸಾರ ಯೋಜನೆಗಳನ್ನೂ ಕೈಕೊಂಡಿದೆ. ಸಂಚಾರಿ ವಾಚನಾಲಯ  ಹಾಗೂ ಗ್ರಾಮಾಂತರ ಉಪನ್ಯಾಸ ಶಿಬಿರಗಳು ಊರೂರಿಗೆ ಜ್ಞಾನವಾಹಿನಿಯನ್ನು ಕೊಂಡೊಯ್ಯುವಲ್ಲಿ ಉಪಯುಕ್ತವಾದ ಕಾರ್ಯವನ್ನು ನಿರ್ವಹಿಸುತ್ತಿವೆ. ಉಪನ್ಯಾಸ ಗ್ರಂಥಮಾಲೆಯ ವಿವಿಧ ವಿಷಯಗಳ ಮೇಲಿನ ಚಿಕ್ಕ ಚಿಕ್ಕ ಪುಸ್ತಿಕೆಗಳು ಜನರ ಮೆಚ್ಚುಗೆ ಪಾತ್ರವಾಗಿ ಅವರ ಜ್ಞಾನ ಸಂವರ್ಧನೆಗೆ ಪೋಷಕವಾಗಿವೆ. ವಿಶ್ವವಿದ್ಯಾಲಯ ಹಾಗೂ ಜನಸಾಮಾನ್ಯರ ನಡುವೆ ಬೆಳೆಯುತ್ತಿರುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪರ್ಕ, ಈ ಶಾಖೆಯ ಕಾರ್ಯದಕ್ಷತೆಗೆ ನಿದರ್ಶನವಾಗಿದೆಯೆಂದೂ ಹೇಳಬಹುದು.

ಪೂರ್ಣ ವಿದ್ಯಾಪರಿಣತರಲ್ಲದಿದ್ದರೂ ಅಭ್ಯಾಸದಲ್ಲಿ ವಿಶೇಷ ಅಭಿರುಚಿಯುಳ್ಳ ವಿದ್ಯಾವ್ಯಾಸಂಗಿಗಳ ಸಂಖ್ಯೆ ನಮ್ಮ ನಾಡಿನಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ಇಂಥವರ ಜ್ಞಾನಾರ್ಜಗೆ ಸಹಾಯಕವಾಗುವಂತೆ ಯೋಜನೆಯೊಂದನ್ನು ರೂಪಿಸಿ, ವಿಶೇಷ ವಾಙ್ಮಯ ಪ್ರಸಾರೋಪನ್ಯಾಸ ಶಿಬಿರಗಳನ್ನು ವಿಶ್ವವಿದ್ಯಾಲಯ ಕಳೆದ ಹಲವರು ವರ್ಷಗಳಿಂದ ನಡೆಸುತ್ತ ಬಂದಿದೆ. ಇವುಗಳಲ್ಲಿ ಭಾಗವಹಿಸಲು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗೆ ರಾಜ್ಯದ ಇನ್ನುಳಿದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನೂ ಆಮಂತ್ರಿಸಲಾಗುತ್ತಿದೆ. ಇವುಗಳಿಗೂ ಜನತೆಯಿಂದ ತುಂಬ ಪ್ರೋತ್ಸಾಹ ದೊರೆಯುತ್ತಿದ್ದು, ವಿಶ್ವವಿದ್ಯಾಲಯದ ಜ್ಞಾನ ಪ್ರಸಾರದ ಧ್ಯೇಯ ಹೀಗೆ ಉಭಯಮುಖವಾಗಿ ಈಡೇರುವಂತಾಗಿದೆ. ಒಂದು ವಿಷಯದ ವಿವಿಧ ಮುಖಗಳನ್ನು ಕುರಿತು ತಜ್ಞರಾದವರು ಈ ಶಿಬಿರಗಳಲ್ಲಿ ಉಪನ್ಯಾಸಗಳನ್ನು ಕೊಡುವುದರಿಂದ ಈ ವಿಷಯದ ಸ್ಪಷ್ಟ ಕಲ್ಪನೆ ಕೇಳುಗರಿಗೆ ಉಂಟಾಗುವದಲ್ಲದೆ ವಿಶೇಷ ಅಭ್ಯಾಸಗಳಿಗೂ ಇದರಿಂದ ನೆರವು ದೊರೆಯಬಲ್ಲುದು.

ಉಪನ್ಯಾಸ ಗ್ರಂಥಮಾಲೆಯ ಪುಸ್ತಕಗಳಂತೆಯೇ ವಿಶೇಷ ವಾಙ್ಮಯ ಪ್ರಸಾರೋಪನ್ಯಾಸಗಳನ್ನೂ ಗ್ರಂಥ ರೂಪದಲ್ಲಿ ಪ್ರಕಟಿಸಿ ಸುಲಭ ಬೆಲೆಯಲ್ಲಿ ಜನತೆಗೆ ಒದಗಿಸುವ ಯೋಜನೆಯನ್ನು ವಿಶ್ವವಿದ್ಯಾಲಯದ “ಪ್ರಸಾರಂಗ” ಕೈಗೊಂಡಿದೆ.

ಈ ಎಲ್ಲ ಯೋಜನೆಗಳನ್ನು ಸಮಗ್ರವಾಗಿ ರೂಪಿಸಿ ಸಮುಚಿತವಾದ ರೀತಿಯಲ್ಲಿ ಕಾರ್ಯರೂಪಕ್ಕೆ ತಂದು ಎಲ್ಲ ಹಂತದಲ್ಲಿಯೂ ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿರುವ ಪ್ರಸಾರಾಂಗದ ನಿರ್ದೇಕರೂ ಹಾಗೂ ಅವರ ಸಹಾಯಕ ಸಿಬ್ಬಂದಿಯವರೂ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಆಶ್ರಯದಲ್ಲಿ ದಿನಾಂಕ: ೨೮, ೨೯ ಹಾಗೂ ೩೦ ಜನವರಿ ೧೯೮೭ ರಂದು ಅನುಕ್ರಮವಾಗಿ ಶೆಟಗೇರಿ, ಬಾಸಗೋಡ ಹಾಗೂ ಹಿಚಕಡದಲ್ಲಿ ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಚಳುವಳಿ’ ಎಂಬ ವಿಷಯವನ್ನು ಕುರಿತು ಏಳು ಉಪನ್ಯಾಸಗಳನ್ನು ಏರ್ಪಡಿಸಲಾಗಿದ್ದಿತು. ಅವುಗಳಲ್ಲಿ ಆರು ಉಪನ್ಯಾಸಗಳು ಸಂಗ್ರಹಗೊಂಡು ಪುಸ್ತಕ ರೂಪದಲ್ಲಿ ಇದೀಗ ಪ್ರಕಟಗೊಳ್ಳುತ್ತಿರುವುದು ಸಂತೋಷದ ಸಂಗತಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯ ಕುರಿತು ಅರಿಯ ಬಯಸುವವರಿಗೆ ಈ ಕೃತಿ ನೆರವಾಗುವುದರಲ್ಲಿ ಸಂದೇಹವಿಲ್ಲ.

ಎಸ್. ರಾಮೇಗೌಡ,
ಕುಲಪತಿಗಳು
ಕರ್ನಾಟಕ ವಿಶ್ವವಿದ್ಯಾಲಯ,
ಧಾರವಾಡ