ಪ್ರಜಾಸತ್ತಾತ್ಮಕ ಯುಗದಲ್ಲಿ ಶ್ರೀಸಾಮಾನ್ಯನೇ ಸಮಾಜದ ಮೂಲಘಟಕ. ಹಿಂದೆ ರಾಜ-ಮಹಾರಾಜರು, ಚಕ್ರವರ್ತಿಗಳು ಸಾಹಿತ್ಯ- ಸಂಸ್ಕೃತಿಗಳು ಕೇಂದ್ರಬಿಂದುವಾಗಿದ್ದಾರೆ. ಇಂದು ಶ್ರೀಸಾಮಾನ್ಯನೇ ಅದರ ಅಧಿದೈವನಾಗಿದ್ದಾನೆ. ಹೀಗಾಗಿ ಪ್ರಪಂಚದಾದ್ಯಂತ ನಡೆದ ಉತ್ಕ್ರಾಂತಿಯ ಸಮುದ್ರಮಥನದಿಂದ ಹೊರಬಂದ ಆತನಿಗೆ ಸಂಬಂದಪಟ್ಟ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅಭ್ಯಾಸಕ್ಕೆ ವಿಶ್ವವಿದ್ಯಾಲಯಗಳಲ್ಲಿ ಗಣ್ಯಸ್ಥಾನ ದೊರೆತಿದೆ, ದೊರೆಯುತ್ತಲಿದೆ.

ಕನ್ನಡ ಸಾಹಿತ್ಯ, ಸಂಸ್ಕೃತಿಗಳ ವಿವಿಧ ಮುಖಗಳ ದರ್ಶನ-ಪ್ರದರ್ಶನಗಳ ಅಭ್ಯಾಸ-ಅಭಿವೃದ್ಧಿಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಪ್ರಾರಂಭವಾದ ಕರ್ನಾಟಕ ವಿಶ್ವ ವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’, ಶ್ರೀಸಾಮಾನ್ಯನ ಬದುಕಿನ ಸಂವೇದನೆಗಳನ್ನು ಅರ್ಥಮಾಡಿಕೊಂಡಿದೆ. ಈಗಾಗಲೇ ಪ್ರಾರಂಭಿಸಿದ ಜಾನಪದ ಎಂ.ಎ. ಅಭ್ಯಾಸ ಕ್ರಮವೇ ಇದಕ್ಕೆ ನಿದರ್ಶನವಾಗಿದೆ. ಕೇವಲ ಅಧ್ಯಯನವಷ್ಟೇ ಅಲ್ಲ, ಜಾನಪದಕ್ಕೆ ಸಂಬಂಧಪಟ್ಟಂತೆ ಗ್ರಂಥಪ್ರಕಟನೆ ಮೊದಲಾದ ಕಾರ್ಯಕಲಾಪಗಳನ್ನು ಮೊದಲಿನಿಂದಲೂ ಕೈಗೆತ್ತಿಕೊಳ್ಳಲಾಗಿದೆ.

೧೯೮೩-೮೪ರಲ್ಲಿ ಪ್ರಾರಂಭಿಸಿದ ಜನಪದ ವಸ್ತು ಸಂಗ್ರಹಾಲಯ ಈ ದಿಸೆಯಲ್ಲಿ ಇನ್ನೊಂದು ಹೆಜ್ಜೆ. ಈ ಅವಧಿಯಲ್ಲಿ ಅಣ್ಣಿಗೇರಿ, ಗದಗ, ಹುಬ್ಬಳ್ಳಿ, ಶಿರಹಟ್ಟಿ, ಡಂಬಳ, ಗೋಕಾಕ, ಮುಂಡರಗಿ ಮೊದಲಾದ ಗ್ರಾಮಗಳಿಂದ ಜಾನಪದ ವಸ್ತುಗಳನ್ನು ಸಂಗ್ರಹಿಸಿ ವಸ್ತುಸಂಗ್ರಹಾಲಯವನ್ನು ಆರಂಭಿಸಲಾಗಿದೆ.

೧೯೮೪-೮೫ ರಲ್ಲಿ ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರ ಗಾಢ ಅಧ್ಯಯನಕ್ಕೋಸುಗ ಜಾನಪದ ಕಲಾತಂಡಗಳನ್ನು ಅಧ್ಯಯನ ಪೀಠಕ್ಕೆ ಆಮಂತ್ರಿಸಿ, ಅವುಗಳ ಸಮಗ್ರ “ಅನ್ವಯಿಕ ಅಧ್ಯಯನ” ನಡೆಯಿಸುವ ಉಪಕ್ರಮವನ್ನು ಪ್ರಾರಂಭಿಸಲಾಗಿದೆ.

ಹೀಗೆ ಜಾನಪದಕ್ಕೆ ಸಂಬಂಧಪಟ್ಟಂತೆ ಪ್ರಾರಂಭಿಸಿದ ಅನೇಕ ಉಪಕ್ರಮಗಳಲ್ಲಿ ’ಅಖಿಲ ಕರ್ನಾಟಕ ಜಾನಪದ ಸಮ್ಮೇಲನ”ವೂ ಒಂದು. ೧೯೭೩ನೆಯ ಜನೆವರಿ ತಿಂಗಳು ನಡೆದ ಜಾನಪದ ಪ್ರಥಮ ಸಮ್ಮೇಲನ ಚಿರಸ್ಮರಣೀಯ. ಸಮ್ಮೇಳನದ ಮಹತ್ವವನ್ನು ಅರಿತ ವಿಶ್ವವಿದ್ಯಾಲಯ ಪ್ರತಿವರ್ಷವೂ ಅದು ನಡೆಯಲೆಂದು ಅನುಮತಿ ನೀಡಿತು, ಕನ್ನಡ ಅಧ್ಯಯನ ಪೀಠದ ಧೋರಣೆಯನ್ನು ಪುರಸ್ಕರಿಸಿತು. ಮೊದಲಿನ ಕೆಲವು ಸಮ್ಮೇಲನಗಳನ್ನು ಧಾರವಾಡದಲ್ಲಿಯೇ ಜರುಗಿಸಿದ ಕನ್ನಡ ಅಧ್ಯಯನ ಪೀಠ ಆಮೇಲೆ ಅವುಗಳನ್ನು ಗುಲಬರ್ಗಾ, ಇಳಕಲ್ಲ, ಗದಗ, ಬನಹಟ್ಟಿ, ಲಕ್ಷ್ಮೇಶ್ವರ, ಅಂಕೋಲಾ, ಸವದತ್ತಿಗಳಲ್ಲಿ ನೆರವೇರಿಸಿತು. ಈ ಮಾಲಿಕೆಯಲ್ಲಿ ೧೨ನೆಯ ಸಮ್ಮೇಲನ ಬೆಳಗಾವಿಯ ಸ್ನಾತಕೋತ್ತರ ಆವರಣದ ಆಶ್ರಯದಲ್ಲಿ ೧೯೮೫ ಜನೆವರಿ ೩೦, ೩೧ರಂದು ತುಂಬ ಯಶಸ್ವಿಯಾಗಿ ಜರುಗಿತು.

ಕನ್ನಡ ಸುಪ್ರಸಿದ್ಧ ವಿದ್ವಾಂಸರೂ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳೂ ಆದ ಡಾ. ಆರ್.ಸಿ. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಮ್ಮೇಲನವನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಜಿ. ದೇಸಾಯಿ ಅವರು ಉದ್ಘಾಟಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ, ಕಾಲೇಜುಗಳ ಕನ್ನಡ ಅಧ್ಯಾಪಕರು ಮೊದಲು ಬಾರಿಗೆ ಇಲ್ಲಿ ಸಮಾವೇಶಗೊಂಡುದು ಈ ಸಮ್ಮೇಲನದ ವೈಶಿಷ್ಟ್ಯವಾಗಿದ್ದಿತು. ಇವರಲ್ಲದೆ ಬೇರೆ ಬೇರೆ ಭಾಗಗಳಿಂದ ಸಾಹಿತಿಗಳೂ ಪ್ರೇಕ್ಷಕರೂ ಇಲ್ಲಿ ಉಪಸ್ಥಿತರಿದ್ದರು.

ಈ ಸಮ್ಮೇಲನದ ಅಂಗವಾಗಿ ’ಆಕಾಶ ಜಾನಪದ’ ಹೆಸರಿನ ವಿಚಾರಸಂಕಿರಣವನ್ನು ಹೀಗೆ ಯೋಚಿಸಲಾಗಿದ್ದಿತು.

ಗೋಷ್ಠಿ ಒಂದು: ಆಕಾಶ ಜಾನಪದ
ಸೂರ್ಯ – ಡಾ. ಅಂಬಳಿಕೆ ಹಿರಿಯಣ್ಣ, ಮೈಸೂರು
ಚಂದ್ರ – ಡಾ. ಪಿ.ಕೆ.ಖಂಡೋಬಾ, ಬಾಗಿಲುಕೋಟೆ
ಆಕಾಶ – ಡಾ. ಬಿ.ಎ. ವಿವೇಕ ರೈ, ಮಂಗಳೂರು

ಗೋಷ್ಠಿ ಎರಡು : ಆಕಾಶ ಜಾನಪದ
ಮೋಡ – ಮಳೆ – ಡಾ. ಕೆ.ಆರ್. ಸಂಧ್ಯಾರೆಡ್ಡಿ, ಬೆಂಗಳೂರು
ಗಾಳಿ – ಶ್ರೀ ಸಿ.ಕೆ. ನಾವಲಗಿ, ಧಾರವಾಡ
ಗ್ರಹ-ನಕ್ಷತ್ರ – ಡಾ. ಮ.ಗು. ಬಿರಾದಾರ, ಗುಲಬರ್ಗಾ

ಗೋಷ್ಠಿ ಮೂರು : ಆಕಾಶ ಜಾನಪದ
ನಿಗ್ರೋ ಜನಾಂಗದಲ್ಲಿ ಆಕಾಶ ಜಾನಪದ – ಡಾ. ಯು.ಪಿ. ಉಪಾಧ್ಯಾಯ, ಉಡುಪಿ

ರೆಡ್ ಇಂಡಿಯನ್ (ಅಮೇರಿಕಾ) ಬುಡಕಟ್ಟು ಜನಾಮಗದಲ್ಲಿ ಆಕಾಶ ಜಾನಪದ – ಡಾ. ಬಿ.ಜಿ. ಹಲಬರ, ಧಾರವಾಡ

ಭಾರತದ ಬುಡಕಟ್ಟು ಜನಾಂಗದಲ್ಲಿ ಆಕಾಶ ಜಾನಪದ – ಡಾ. ಕೆ.ಜಿ. ಗುರುಮೂರ್ತಿ, ಧಾರವಾಡ

ಈ ಮೂರು ಗೋಷ್ಠಿಗಳ ಅಧ್ಯಕ್ಷತೆಯನ್ನು ಕ್ರಮವಾಗಿ ಡಾ. ಬಿ.ಎ. ವಿವೇಕ ರೈ, ಡಾ. ಮ.ಗು. ಬಿರಾದಾರ, ಡಾ. ಕೆ.ಜಿ. ಗುರುಮೂರ್ತಿ ಅವರು ವಹಿಸಿದ್ದರು. ವಿದ್ವಾಂಸ ರಿಂದ ಪ್ರೌಢಪ್ರಬಂಧಗಳ ಮಂಡನೆ, ಶ್ರೋತೃಗಳಿಂದ ಪ್ರಶ್ನೆ ಕೇಳುವಿಕೆ – ಉತ್ತರ ಪಡೆಯುವಿಕೆಯಿಂದಾಗಿ ಈ ಗೋಷ್ಠಿಗಳು ತುಂಬ ಲವಲವಿಕೆಯಿಂದ ಕೂಡಿದ್ದುವ. ಕೊನೆಯ ದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹಂಪ, ನಾಗರಾಜಯ, ಅವರು ಮುಕ್ತಾಯ ಸಮಾರಂಭದ ಅತಿಥಿಗಳಾಗಿ ಆಗಮಿಸಿದ್ದರು.

ಎರಡೂ ದಿನ ರಾತ್ರಿ ವೈವಿಧ್ಯಪೂರ್ಣ ಜಾನಪದ ಕಲಾಪ್ರದರ್ಶನ ಜರುಗಿತು. ಗೀತ-ನರ್ತನ, ವಾದ್ಯ, ಅಭಿನಯ ಇತ್ಯದಿಗಳು ನಮ್ಮ ಜಾನಪದರ ಕಲಾನೈಪುಣ್ಯಕ್ಕೆ ಸಾಕ್ಷಿಯೆನಿಸಿದ್ದವು.

ಈ ಹಿಂದಿನ ಸಮ್ಮೇಳನಗಳಿಗಿಂತ ಈ ಸಮ್ಮೇಳನ ಅನೇಕ ದೃಷ್ಟಿಗಳಿಂದ ವೈಶಿಷ್ಟ್ಯ ಪೂರ್ಣವೆನಿಸಿದ್ದಿತು. ’ಆಕಾಶ ಜಾನಪದ’ ಎಂಬ ಹೆಸರೇ ವಿದ್ವಾಂಸರಿಗೆ ಕುತೂಹಲ ಹುಟ್ಟಿಸಿದ್ದಿತು. ’ಜಗತ್ತಿನಲ್ಲಿಯೇ ಈ ವಿಷಯವನ್ನು ಕುರಿತು ನಡೆದ ಪ್ರಥಮ ಸಮ್ಮೇಲನವಿದು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಎ. ವಿವೇಕ ರೈ ಅವರು, ’ಒಂದು ವಿಶ್ವವಿದ್ಯಾಲಯದ ಒಂದು ವಿಭಾಗ ನಿರಂತರವಾಗಿ ೧೨ ಸಮ್ಮೇಲನ ನಡೆಸುತ್ತಿರುವುದು ಇಡಿ ಭಾರತದಲ್ಲಿಯೇ ಏಕೈಕ ಉದಾಹರಣೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಜಾನಪದ ಪ್ರಾಧ್ಯಾಪಕ ಡಾ.ಜೀ. ಶಂ. ಪರಮಶಿವಯ್ಯ ಅವರು ಬಹಿರಂತವಾಗಿ ಹೇಳಿದ ಮಾತುಗಳು ಈ ವಿಚಾರಸಂಕಿರಣದ, ಈ ಸಮ್ಮೇಳನದ ಮೌಲಿಕತೆಗೆ ಸಾಕ್ಷಿಯೆನಿಸಿದವು.

ಈ ಸಮ್ಮೇಲನದಲ್ಲಿ ಓದಿದ ಪ್ರಬಂಧಗಳು ಇಲ್ಲಿ ಗ್ರಂಥರೂಪದಿಂದ ಹೊರ ಬರುತ್ತಲಿದೆ. ಜನಪದ ಕ್ಷೇತ್ರದಲ್ಲಿಯೇ ವಿಶಿಷ್ಟ ಕೃತಿಯೆನಿಸುವ ಈ ಗ್ರಂಥವನ್ನು ವಿದ್ವಾಂಸರು ಬರಮಾಡಿಕೊಳ್ಳುವರೆಂದು ಆಶಿಸುತ್ತೇನೆ. ಸಮ್ಮೇಲನದ ಶ್ರೇಯಸ್ಸಿಗೆ ಕಾರಣರಾದ ಎಲ್ಲ ವಿದ್ವಾಂಸರಿಗೂ, ಕನ್ನಡ ಅಧ್ಯಯನಪೀಠದ ಎಲ್ಲ ಪ್ರಾಧ್ಯಾಪಕರಿಗೂ, ವಿಶೆಷವಾಗಿ ಸಮ್ಮೇಲನದ ಕಾರ್ಯದರ್ಶಿಗಳಾದ ಡಾ. ಬಿ.ವಿ. ಮಲ್ಲಾಪುರ ಅವರಿಗೂ, ಭಾಗವಹಿಸಿದ ಕಲಾವಿದರಿಗೂ, ಬೆಳಗಾವಿಯ ನಾಗರಿಕರಿಗೂ ಕನ್ನಡ ಅಧ್ಯಯನಪೀಠದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಡಾ ಎಂ.ಎಂ. ಕಲಬುರ್ಗಿ
ಮುಖ್ಯಸ್ಥರು
ಕನ್ನಡ ಅಧ್ಯಯನ ಪೀಠ,
ಕ.ವಿ.ವಿ. ಧಾರವಾಡ