ಇದು ನನ್ನ ‘ಸಮಗ್ರ ಗದ್ಯ’ದ ಮೊದಲ ಸಂಪುಟ. ಕಳೆದ ಮೂರೂವರೆ ದಶಕಗಳ ಕಾಲಮಾನದಲ್ಲಿ ನಾನು ಆಗಾಗ ಬರೆದ ಮತ್ತು ಬೇರೆ ಬೇರೆ ಹೆಸರಿನ ಹಲವು ಸಂಕಲನಗಳಲ್ಲಿ ಪ್ರಕಟಗೊಂಡ ವಿಮರ್ಶಾತ್ಮಕ ಸ್ವರೂಪದ ಬರಹಗಳನ್ನು ವಿಷಯಾನುಸಾರಿಯಾಗಿ ಅಳವಡಿಸಿ ಮೂರು ಸಂಪುಟಗಳಲ್ಲಿ ಹೊರತರಬೇಕೆಂಬ ಯೋಜನೆಯಲ್ಲಿ ಇದು ಮೊದಲನೆಯದು. ಈ ಸಂಪುಟದಲ್ಲಿ ಸೇರ್ಪಡೆಯಾಗಿರುವ ಲೇಖನಗಳು ಮುಖ್ಯವಾಗಿ ಪ್ರಾಚೀನ ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿವೆ. ಈ ಸಂಪುಟದಲ್ಲಿ ಮೂವತ್ತೆರಡು ಲೇಖನಗಳಿವೆ. ಇವುಗಳನ್ನು ನನ್ನ ‘ಪರಿಶೀಲನ’ (೧೯೬೭), ‘ಅನುರಣನ’ (೧೯೭೮), ‘ಪ್ರತಿಕ್ರಿಯೆ’ (೧೯೮೨) ಮತ್ತು ‘ಬೆಡಗು’ (೧೯೮೯) ಎಂಬ ಹೆಸರಿನ ಸಂಕಲನಗಳಿಂದ ಎತ್ತಿಕೊಂಡು ಒಂದು ಅನುಕ್ರಮದಲ್ಲಿ ಜೋಡಿಸಲಾಗಿದೆ, ಮತ್ತು ಈವರೆಗೂ ಯಾವ ಸಂಕಲನದೊಳಗೂ ಸೇರ್ಪಡೆಯಾಗದ ನಾಲ್ಕು ಹೊಸ ಲೇಖನಗಳೂ ಇದರಲ್ಲಿ ಕೂಡಿಕೊಂಡಿವೆ. ಪ್ರತಿಯೊಂದು ಲೇಖನದ ತುದಿಗೂ, ಆಯಾ ಲೇಖನ ಮೇಲೆ ಹೇಳಿದ ನನ್ನ ಯಾವ ವಿಮರ್ಶನ ಸಂಗ್ರಹದಲ್ಲಿ ಸೇರ್ಪಡೆಯಾಗಿದೆ ಎಂಬುದನ್ನೂ ಮತ್ತು ಆ ಸಂಗ್ರಹ ಪ್ರಕಟವಾದ ವರ್ಷವನ್ನೂ ಕಾಣಿಸಲಾಗಿದೆ. ಆದರೆ, ಆಯಾ  ಸಂಗ್ರಹದೊಳಗಿನ ಲೇಖನಗಳು ಬರೆಯಲ್ಪಟ್ಟ ಕಾಲಕ್ಕೂ, ಮತ್ತು ಆ ಸಂಗ್ರಹಗಳು ಪ್ರಕಟವಾದ ಕಾಲಕ್ಕೂ ನಡುವೆ ಸಾಕಷ್ಟು ಅಂತರವಿದೆ. ನಿದರ್ಶನಕ್ಕೆ ಹೇಳುವುದಾದರೆ, ೧೯೬೭ರಲ್ಲಿ ಪ್ರಕಟವಾದ ‘ಪರಿಶೀಲನ’ ಕೃತಿಯೊಳಗೆ ಸೇರ್ಪಡೆಯಾಗಿರುವ ‘ಸತ್ಯಸಾಧಕ ಹರಿಶ್ಚಂದ್ರ’ ಎಂಬ ಲೇಖನವನ್ನು ನಾನು ಬರೆದದ್ದು, ನನಗೆ ನೆನಪಿರುವಂತೆ ೧೯೫೫ರಲ್ಲಿ. ವಾಸ್ತವವಾಗಿ ಇದೇ ನನ್ನ ಮೊದಲ ವಿಮರ್ಶಾತ್ಮಕ ಬರೆಹ. ಹಾಗೆಯೇ ೧೯೭೮ರಲ್ಲಿ ಪ್ರಕಟವಾದ ‘ಅನುರಣನ’ ಕೃತಿಯಲ್ಲಿರುವ ‘ಹರಿಹರನ ಬಸವರಾಜದೇವರ ರಗಳೆ’ಯನ್ನು ಕುರಿತ ಲೇಖನ ಮೊದಲು ಪ್ರಕಟವಾದದ್ದು ೧೯೬೮ರ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’ಯಲ್ಲಿ. ಒಟ್ಟಿನ ಮೇಲೆ ಹೇಳುವುದಾದರೆ, ಕಳೆದ ಮೂರುವರೆ ದಶಕಗಳ ಕಾಲಮಾನದಲ್ಲಿ ಹಳಗನ್ನಡ ಪರಂಪರೆಯೊಂದಿಗೆ  ನಾನು ನಡೆಯಿಸಿದ ಸಂವಾದ ಹಾಗೂ ಪ್ರತಿಕ್ರಿಯೆಗಳು ಈ ಸಂಪುಟದಲ್ಲಿ ದಾಖಲಾಗಿವೆ. ನನ್ನ ಮಟ್ಟಿಗೆ ಹೇಳುವುದಾದರೆ, ಕಾವ್ಯ ನಿರ್ಮಿತಿ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ ಈ ಎಲ್ಲವೂ ಒಂದು ಮತ್ತೊಂದಕ್ಕೆ ಅವಿರೋಧವಾದ ಹಾಗೂ ಪೂರಕವಾದ ಕ್ರಿಯೆಗಳಂತೆ ತೋರುತ್ತವೆ, ಮತ್ತು ಈ ಮೂರೂ ನನ್ನ ಸಾಹಿತ್ಯಾಸಕ್ತಿಯ ವಿವಿಧ ನೆಲೆಗಳಾಗಿವೆ.

ನನ್ನ ಸಮಗ್ರ ಗದ್ಯದ ಈ ಮೊದಲ ಸಂಪುಟದೊಳಗಿನ ಲೇಖನಗಳು ಹಿಂದಿನ ಕನ್ನಡ ಸಾಹಿತ್ಯದ ಹಲವು ಪ್ರಮುಖ ಹಂತಗಳನ್ನು ಪ್ರತಿನಿಧಿಸುತ್ತವೆ. ಕೆಲವು ಲೇಖನಗಳಲ್ಲಿ ತೌಲನಿಕ ಹಾಗೂ ಸಂಶೋಧನಾತ್ಮಕ ಪ್ರಯತ್ನಗಳು ಇದ್ದರೂ ಮುಖ್ಯವಾಗಿ ನನ್ನ ಗಮನ, ಕನ್ನಡದ ಪ್ರಮುಖ ಕವಿಗಳೂ ಹಾಗೂ ಸಾಹಿತ್ಯ ಸಂದರ್ಭಗಳು, ಒಂದು ಪರಂಪರೆಯ ನಿರ್ಮಾಣದಲ್ಲಿ ವಹಿಸಿರುವ ಪಾತ್ರವೇನು ಎನ್ನುವುದರ ಕಡೆಗಿದೆ. ಈ ಸಂಪುಟಕ್ಕೆ ‘ಹಿಂದಣ ಹೆಜ್ಜೆ’ ಎಂಬ ಉಪಶೀರ್ಷಿಕೆಯನ್ನು ಕೊಡಲಾಗಿರುವುದನ್ನು ಈ ದೃಷ್ಟಿಯಿಂದಲೆ ನೋಡಬೇಕು. ಈ ಮಾತು ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಎಂಬ ಅಲ್ಲಮಪ್ರಭುವಿನ ಉಕ್ತಿಯಿಂದ ಎತ್ತಿಕೊಂಡದ್ದಾಗಿದೆ. ಪರಂಪರೆ ಎನ್ನುವುದು ಹಿಂದಣ ಹೆಜ್ಜೆ ಗುರುತುಗಳ ಒಂದು ಸುದೀರ್ಘ ಪಥ. ಆ ಹಿಂದಣ ಹೆಜ್ಜೆಗಳನ್ನು ‘ನೋಡಿ ಕಂಡಲ್ಲದೆ’, ನಾವು ‘ನಿಂದ ಹೆಜ್ಜೆ’ಯನ್ನು ಅಥವಾ ನಮ್ಮ ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪರಂಪರೆ ಹಾಗೂ  ವರ್ತಮಾನಗಳ ಸಂಬಂಧವನ್ನು ವಿಶಿಷ್ಟವಾದ ರೀತಿಯಲ್ಲಿ ವ್ಯಾಖ್ಯಾನಿಸುವ ಅಲ್ಲಮನ ಈ ಮಾತು ಅತ್ಯಂತ ಮುಖ್ಯವಾದದ್ದು. ಸಾಹಿತ್ಯ ನಿರ್ಮಿತಿ ಎನ್ನುವುದು ತನ್ನ ವರ್ತಮಾನದ ಸಮಕಾಲೀನ ಅನುಭವಗಳ ನೆಲೆಯಲ್ಲಿ ನಿಂತು, ಸೃಜನಶೀಲ ಮನಸ್ಸು ತನ್ನ ಹಿಂದಿನ ಪರಂಪರೆಯೊಂದಿಗೆ ಏರ್ಪಡಿಸಿಕೊಳ್ಳುವ ಸಂಬಂಧ ಹಾಗೂ ಪ್ರತಿಕ್ರಿಯೆಗಳ ಪರಿಣಾಮವಾಗಿದೆ. ಹಾಗೆಯೇ ನಿಜವಾದ ಸಾಹಿತ್ಯ ವಿಮರ್ಶೆಯಾಗಲೀ, ಸಂಶೋಧನೆಯಾಗಲೀ ಪರಂಪರೆಯ  ಅರಿವು ಮತ್ತು ಅನುಸಂಧಾನದಿಂದ ನಡೆಯಬೇಕಾದ ಕ್ರಿಯೆಯಾಗಿದೆ.

ಈ ಎಲ್ಲ ಲೇಖನಗಳೂ ಬೇರೆ ಬೇರೆಯ ಕಾಲಗಳಲ್ಲಿ ಪ್ರಕಟವಾದ ‘ಸಂಕಲನ’ಗಳಿಂದ ಎತ್ತಿಕೊಂಡು ಒಂದು ಅನುಕ್ರಮದಲ್ಲಿ ಜೋಡಿಸಿದವುಗಳಾದುದರಿಂದ, ಕೆಲವು ಲೇಖನಗಳಲ್ಲಿ, ಅದರಲ್ಲಿಯೂ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಹೆಚ್ಚು ಸಂಖ್ಯೆಯ ಬರೆಹಗಳಲ್ಲಿ ಕೆಲವು ಸಂಗತಿಗಳು ಪುನರಾವರ್ತನೆಗೊಂಡಿವೆ, ಮತ್ತು ನಾನು ನಿಷ್ಕೃಷ್ಟವಾಗಿ ಅವುಗಳನ್ನು ನಿವಾರಿಸಲು ಸಾಧ್ಯವಾಗಿಲ್ಲ. ‘ನಡೆವರೆಡಹದೆ ಕುಳಿತವರೆಡಹುವರೆ?’

ಸಮಗ್ರ ಗದ್ಯದ ಈ ಮೂರು ಸಂಪುಟಗಳ ಯೋಜನೆಯಲ್ಲಿ ನನ್ನ ‘ಸೌಂದರ್ಯ ಸಮೀಕ್ಷೆ’ ‘ಕಾವ್ಯಾರ್ಥ ಚಿಂತನ’ ಮತ್ತು ಸೃಜನಾತ್ಮಕ ಸ್ವರೂಪದ ಪ್ರವಾಸಕಥನ ಇತ್ಯಾದಿಗಳನ್ನು ಹೊರತು ಪಡಿಸಿ, ಇನ್ನುಳಿದ ಸಾಹಿತ್ಯ ವಿಮರ್ಶೆ ಹಾಗೂ ಕಾವ್ಯ ಮೀಮಾಂಸೆಗೆ ಸಂಬಂಧಿಸಿದ ಬರೆಹಗಳೆಲ್ಲವೂ ಸೇರುತ್ತವೆ. ನನ್ನ ಸಾಹಿತ್ಯ ವಿಮರ್ಶೆಯ ನಿಲುವುಗಳನ್ನು ಖಚಿತವಾಗಿ ಗುರುತಿಸಲು ಬಹುಶಃ ಈ ಸಂಪುಟಗಳು ನೆರವಾಗುತ್ತವೆ.

ನನ್ನ ಈವರೆಗಿನ ಹಲವು ಸಂಗ್ರಹಗಳೊಳಗಿನ ಗದ್ಯಲೇಖನಗಳನ್ನು ಮೂರು ಸಂಪುಟಗಳಲ್ಲಿ  ಪ್ರಕಟಿಸುವ ಸಾಹಸಕ್ಕೆ ಮನಸ್ಸು ಮಾಡಿದವರು, ನನ್ನ ಹೆಮ್ಮೆಯ ‘ಶಾರದಾ ಪ್ರಕಾಶನ’ದ ಶ್ರೀ ಜಿ. ಬಸವರಾಜ್ ಅವರು. ಮೂಲತಃ ಯಾವುದೇ ಪ್ರಕಾಶಕರಿಗೆ ‘ಹೊರೆ’ಯಾಗಬಹುದಾದ, ಇಂಥ ಸಂಪುಟಗಳ ಬಗೆಗೆ ನನಗಿದ್ದ ಹಿಂಜರಿಕೆಯನ್ನು ನಸುನಗೆಯಿಂದ ಹಿಂದಕ್ಕೆ ತಳ್ಳಿ, ಈ ಸಂಪುಟಗಳ ಪ್ರಕಟಣೆಯ ಕಾರ‍್ಯವನ್ನು ಧೈರ್ಯದಿಂದ ವಹಿಸಿಕೊಂಡಿರುವ ಶ್ರೀ ಬಸವರಾಜ್ ಅವರ ಆತ್ಮೀಯತೆಗೆ ಹಾಗೂ ಅವರ ಅದಮ್ಯವಾದ ಸಾಹಿತ್ಯ ಪ್ರೀತಿಗೆ ನಾನು ಬೆರಗಾಗಿದ್ದೇನೆ. ಅವರಿಗೆ ನನ್ನ ಕೃತಜ್ಞತೆ ಮತ್ತು ಪ್ರಶಂಸೆಗಳನ್ನು ತಿಳಿಸಲು ನನ್ನ ಬಳಿ ಮಾತುಗಳೇ ಇಲ್ಲ.

ಮುದ್ರಣ ಕಾರ‍್ಯವನ್ನು ಕೇವಲ ಒಂದು ಒಪ್ಪಂದವೆಂದೋ, ವ್ಯಾಪಾರವೆಂದೋ ತಿಳಿದ ಮುದ್ರಕರನ್ನು ನಾನು ಸಾಕಷ್ಟು ನೋಡಿದ್ದೇನೆ. ಆದರೆ, ಅದೂ ಒಂದು ‘ಸೃಜನಾತ್ಮಕವಾದ’ ಕಾರ‍್ಯವೆನ್ನುವಂತೆ, ಲೇಖಕರ ಜತೆ ವಿಶ್ವಾಸದಿಂದ ಸಹಕರಿಸುತ್ತ, ದುಡಿಯುವ ‘ಎಂ ಎಂ ಪ್ರಿಂಟಿಂಗ್ ವರ್ಕ್ಸ್’ನ ಶ್ರೀ ಎಂ. ನಾಗರಾಜ್ ಅಂಥವರನ್ನು ನಾನು ಕಂಡೇ ಇಲ್ಲ. ಕೆಲಸದಲ್ಲಿ ಶಿಸ್ತು, ಮುದ್ರಣ ಕಾರ‍್ಯದಲ್ಲಿ ಎಚ್ಚರ, ಮಾಡುವ ಕೆಲಸ ಸಾಧ್ಯವಾದಷ್ಟು ಹಸನಾಗಬೇಕೆಂಬ ಹಂಬಲ ಈ ಎಲ್ಲವೂ ಅವರಲ್ಲಿ ಮೇಳವಿಸಿವೆ. ಶ್ರೀ ನಾಗರಾಜ್ ಅವರ ವಿಶ್ವಾಸಪೂರ್ವಕ ಸಹಕಾರವಿಲ್ಲದಿದ್ದರೆ ಕೇವಲ ಎರಡೇ ತಿಂಗಳಲ್ಲಿ ಇಷ್ಟು ದೊಡ್ಡ ಸಂಪುಟದ ಅಚ್ಚಿನ ಕಾರ್ಯ ಮುಗಿಯುತ್ತಿರಲಿಲ್ಲವೆಂದು ನನ್ನ ತಿಳಿವಳಿಕೆ. ಅವರಿಗೆ ನನ್ನ ವಂದನೆಗಳು.

ನನ್ನ ಸಾಹಿತ್ಯ ವಿಮರ್ಶೆಯ ಲಕ್ಷಣಗಳನ್ನು ಸರಿಯಾಗಿ ಗುರುತಿಸಿ, ಆ ಬಗ್ಗೆ ಕೆಲವು iiತುಗಳನ್ನು- ‘ಬೆನ್ನುಡಿ’ಗಾಗಿ ಬರೆದುಕೊಟ್ಟ ಪ್ರಿಯ ಸ್ನೇಹಿತರಾದ ಡಾ. ಕೆ.ವಿ. ನಾರಾಯಣ ಅವರಿಗೆ, ನನ್ನ ವಂದನೆಗಳು.

ಜಿ.ಎಸ್. ಶಿವರುದ್ರಪ್ಪ
ಜನವರಿ, ೧೯೯೩

ಪರಿಷ್ಕೃತ ಎರಡನೆಯ ಮುದ್ರಣಕ್ಕೆ ಎರಡು ಮಾತು

ನನ್ನ ‘ಸಮಗ್ರ ಗದ್ಯ’ದ ಈ ಮೊದಲ ಸಂಪುಟ ಪ್ರಕಟವಾಗಿ, ಒಂದು ದಶಕದ ನಂತರ, ಇದೀಗ ಮರುಮುದ್ರಣವನ್ನು ಕಾಣುವಂತಾದುದಕ್ಕೆ ಕಾರಣ, ಸ್ವತಃ ವಿದ್ವಾಂಸರೂ, ಪ್ರತಿಷ್ಠಿತ ಪ್ರಕಾಶಕರೂ ಎಂದು ಹೆಸರು ಮಾಡಿರುವ ಡಾ. ಎಸ್. ವಿದ್ಯಾಶಂಕರರ ವಿಶ್ವಾಸ ಮತ್ತು ಸೌಜನ್ಯಗಳೇ.

ಈ ದ್ವಿತೀಯ ಮುದ್ರಣದ ಈ ಸಂಪುಟ ಮೊದಲ ಮುದ್ರಣದಲ್ಲಿ ಇಲ್ಲದಿದ್ದ ಆರು ಹೊಸ ಬರಹಗಳನ್ನು ಒಳಗೊಂಡಿದೆ. ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಪರಂಪರೆಯ ಹಲವು ಹಂತಗಳ ಸಾಹಿತ್ಯ ನಿರ್ಮಿತಿಯನ್ನು ಇಲ್ಲಿ ಪರಿಶೀಲನೆ ಮತ್ತು ವಿವೇಚನೆಗೆ ಗುರಿಪಡಿಸಲಾಗಿದ್ದರೂ, ಈ ಸಂಪುಟದ ಅರ್ಧಕ್ಕೂ ಹೆಚ್ಚಿನ ಬರಹಗಳು ಶರಣ ಸಾಹಿತ್ಯವನ್ನು ಕುರಿತವುಗಳಾಗಿವೆ ಎನ್ನುವುದು ವಿಶೇಷದ ಸಂಗತಿಯಾಗಿದೆ.

ಈ ಸಂಪುಟವನ್ನು ತುಂಬ ಸೊಗಸಾಗಿ ಮುದ್ರಿಸಿದ ಬೆಂಗಳೂರಿನ ಸ್ನೇಹಾ ಪ್ರಿಂಟರ‍್ಸ್ ಅವರಿಗೂ, ಪ್ರಕಾಶಕರಾದ ಡಾ. ಎಸ್. ವಿದ್ಯಾಶಂಕರ ಅವರಿಗೂ ನನ್ನ ಧನ್ಯವಾದಗಳು.

ಜಿ.ಎಸ್. ಶಿವರುದ್ರಪ್ಪ
ಮೇ ೨೦೦೪

ನಾಲ್ಕನೆಯ ಮುದ್ರಣಕ್ಕೆ ಎರಡು ಮಾತು

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ ಅವರಿಗೆ ಮತ್ತು ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ ಕೆ.ಆರ್. ಗಣೇಶ್‌ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

ಜಿ.ಎಸ್. ಶಿವರುದ್ರಪ್ಪ
ಫೆಬ್ರವರಿ ೨೦೦೯