ನನ್ನ ಸಮಗ್ರ ಗದ್ಯ ಬರೆಹಗಳನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಬೇಕೆಂಬ ಯೋಜನೆಯೊಂದು ಈ ಮೂರನೆಯ ಸಂಪುಟದ ಪ್ರಕಟಣೆಯೊಂದಿಗೆ ಒಂದು ಹಂತವನ್ನು ತಲುಪುತ್ತಿರುವುದು ನನಗೆ ಸಮಾಧಾನದ ಸಂಗತಿಯಾಗಿದೆ. ನನ್ನ ‘ಸಮಗ್ರ ಗದ್ಯ’ದ ಮೊದಲ ಸಂಪುಟ ಪ್ರಕಟವಾದದ್ದು ೧೯೯೪ ರಂದು, ‘ಶಾರದಾ ಪ್ರಕಾಶನ’ದವರಿಂದ; ಎರಡನೆಯ ಸಂಪುಟ ಪ್ರಕಟವಾದದ್ದು ೧೯೯೫ರಂದು, ‘ಸ್ನೇಹ ಪ್ರಕಾಶನ’ದವರಿಂದ; ಮೂರನೆಯದು, ಈಗ ೧೯೯೬ರಂದು ಪ್ರಕಟವಾಗುತ್ತಿರುವುದು ‘ಕಾಮಧೇನು’ ಪ್ರಕಾಶನದವರಿಂದ. ಹಾಗೆ ನೋಡಿದರೆ ಈ ಮೂರೂ ಸಂಪುಟಗಳೊಳಗೆ ನನ್ನ ‘ಸೌಂದರ್ಯ ಸಮೀಕ್ಷೆ’ ಮತ್ತು ‘ಕಾವ್ಯಾರ್ಥ ಚಿಂತನ’ದಂಥ ಕೃತಿಗಳು ಸೇರಿಲ್ಲ. ಯಾಕೆಂದರೆ ಅವುಗಳಿಗೆ ಬೇರೆಯೆ ಆದ, ಸ್ವತಂತ್ರ ಸಂಪುಟಗಳ ಸ್ವರೂಪವಿದೆ. ಹಾಗೆಯೇ ನನ್ನ ಪ್ರವಾಸ ಕಥನಗಳೂ ಮತ್ತು ಇನ್ನೂ ಇತರ ಕೆಲವು ಕಿರುಕೃತಿಗಳೂ ಈ ಯೋಜನೆಯ ಆಚೆಗೇ ಇವೆ.

ಸಮಗ್ರ ಗದ್ಯದ ಈ ಪ್ರಸ್ತುತ ಸಂಪುಟದೊಳಗೆ ನನ್ನ ಐದು ಕೃತಿಗಳು ಮತ್ತು ಒಂದು ಸುದೀರ್ಘ ಲೇಖನ ಸೇರ್ಪಡೆಯಾಗಿವೆ. ‘ಕನ್ನಡ ಸಾಹಿತ್ಯ ಸಮೀಕ್ಷೆ’ (೧೯೭೫); ‘ಮಹಾಕಾವ್ಯ ಸ್ವರೂಪ’ (೧೯೭೬); ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’ (೧೯೮೯); ‘ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನೆ’ (೧೯೯೧); ‘ವಿಮರ್ಶೆಯ ಪೂರ್ವ-ಪಶ್ಚಿಮ’ (೧೯೬೧) ಮತ್ತು ಒಂದು ಸುದೀರ್ಘ ಲೇಖನವಾದ ‘ಕನ್ನಡ ಸಾಹಿತ್ಯ ಚಳುವಳಿಗಳು ಮತ್ತು ಸಾಹಿತ್ಯ ಪರಂಪರೆ’ (೧೯೯೫); ಕಾವ್ಯ ಸಂವಾದ (೨೦೦೫); ಕುವೆಂಪು ರಸ ಚಿಂತನೆಯ ಮಿಂಚುಗಳು (೧೯೮೭) – ಇವು ಸಂಪುಟ ವಸ್ತು. ಒಟ್ಟಾರೆಯಾಗಿ ಸಾಹಿತ್ಯ ಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯ ತತ್ವ ಚಿಂತನೆ ಮತ್ತು ಸಾಹಿತ್ಯ ಪ್ರಕಾರವೊಂದರ ತೌಲನಿಕ ಅಧ್ಯಯನ ಇವು ಈ ಸಂಪುಟದ ಬರೆಹಗಳ ಮುಖ್ಯ ಲಕ್ಷಣಗಳಾಗಿವೆ. ಈ ಕೃತಿಗಳಲ್ಲಿ, ಸಾಹಿತ್ಯ ವಿಮರ್ಶೆಯ ಕೆಲವು ಸಂಗತಿಗಳನ್ನು ಕುರಿತ ‘ವಿಮರ್ಶೆಯ ಪೂರ್ವ-ಪಶ್ಚಿಮ’ ಎಂಬ ಕೃತಿ ೧೯೬೧ರಷ್ಟು ಹಿಂದಿನದು. ಸಾಹಿತ್ಯ ವಿಮರ್ಶೆಯ ಪರಿಚಯವನ್ನು ಮಾಡಿಕೊಳ್ಳಲಪೇಕ್ಷಿಸುವ ಸಹೃದಯರ ಪಾಲಿಗೆ ಒಂದು ರೀತಿಯ ಪ್ರವೇಶದ್ವಾರದಂತಿರುವ ಈ ಕೃತಿ ಈವರೆಗೆ ಹಲವಾರು ಮುದ್ರಣಗಳನ್ನು ಕಂಡಿದೆಯೆಂಬುದು ಅದರ ಜನಪ್ರಿಯತೆಗೆ ಒಂದು ಸಾಕ್ಷಿಯಾಗಿದೆ. ‘ಕನ್ನಡ ಸಾಹಿತ್ಯ ಸಮೀಕ್ಷೆ’ ಬೆಂಗಳೂರು ವಿಶ್ವವಿದ್ಯಾಲಯದ ‘ಜನಪ್ರಿಯ ಸಾಹಿತ್ಯ ಚರಿತ್ರೆ’ಯ ಯೋಜನೆಯಲ್ಲಿ ಸಿದ್ಧವಾಗಿ ಪ್ರಕಟವಾದದ್ದು. ‘ಮಹಾ ಕಾವ್ಯ ಸ್ವರೂಪ’ ಮತ್ತು ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’ ಈ ಎರಡೂ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ, ಪ್ರಸಾರಾಂಗದ ಆಶ್ರಯದಲ್ಲಿ ನಾನು ಮಾಡಿದ ವಿಶೇಷೋಪನ್ಯಾಸಗಳ ಪರಿಣಾಮವಾಗಿವೆ. ‘ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನೆ’ ಮತ್ತು ‘ಕನ್ನಡ ಸಾಹಿತ್ಯ ಚಳುವಳಿಗಳು ಮತ್ತು ಸಾಹಿತ್ಯ ಪರಂಪರೆ’ ಇವು ನಾನು ಮೈಸೂರಿನ ಕುವೆಂಪು ವಿದ್ಯಾಪರಿಷತ್ತಿನ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ, ಆಹ್ವಾನದ ಮೇರೆಗೆ ನೀಡಿದ ‘ದತ್ತಿ ಉಪನ್ಯಾಸ’ದ ಲಿಖಿತ ರೂಪಗಳು.

ಚಾರಿತ್ರಿಕವಾಗಿ ನೋಡಿದರೆ, ಈ ಸಂಪುಟದಲ್ಲಿ ಸೇರ್ಪಡೆಯಾಗಿರುವ ‘ವಿಮರ್ಶೆಯ ಪೂರ್ವ- ಪಶ್ಚಿಮ’ ಎಂಬ ಕೃತಿಯೆ ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ನನ್ನ ಮೊದಲ ಹೆಜ್ಜೆ. ೧೯೬೧ರಲ್ಲಿ ಪ್ರಕಟವಾದ ಈ ಕೃತಿ, ಮುಂದೆ ನಾನು ತೌಲನಿಕ ಸಾಹಿತ್ಯ ವಿಮರ್ಶೆ ಹಾಗೂ ಕಾವ್ಯ ಮೀಮಾಂಸೆಯ ಹಾದಿಯಲ್ಲಿ ಮುಂದುವರಿಯಲು ತಕ್ಕ ಒಂದು ಪೂರ್ವ ಸಿದ್ಧತೆ ಹಾಗೂ ಪ್ರೇರಣೆಯ ಸಂಕೇತದಂತಿದೆ. ತೌಲನಿಕ ಸಾಹಿತ್ಯದ ಅಧ್ಯಯನದ ಹಾದಿಯಲ್ಲಿ ಅಂದಿನಿಂದ ಈವರೆಗೂ ನಡೆದುಬಂದಿರುವ ನಾನು, ಉದ್ದಕ್ಕೂ, ನಮ್ಮ ಸಾಹಿತ್ಯ ಹಾಗೂ ಸಾಹಿತ್ಯ ಚಿಂತನೆಗಳ ಮೌಲಿಕತೆಯನ್ನೂ, ಮತ್ತು ಕನ್ನಡ ಸಾಹಿತ್ಯಕ್ಕೆ ಜಾಗತಿಕ ಹಾಗೂ ಭಾರತೀಯ ಭಾಷಾ ಸಾಹಿತ್ಯ ಸಂದರ್ಭದಲ್ಲಿ ಭಿನ್ನವಾದ ಒಂದು ಅಸ್ತಿತ್ವ ಮತ್ತು ‘ಒರಿಜಿನಾಲಿಟಿ’ಗಳೇನುಂಟು ಅನ್ನುವುದನ್ನೂ ಗುರುತಿಸಲು ಪ್ರಯತ್ನಿಸಿದ್ದೇನೆ.

ಈ ಸಂಪುಟ ಹಲವು ಕೃತಿಗಳ ಸಂಕಲನವಾಗಿರುವುದರಿಂದ, ಕೆಲವು ವಿಚಾರಗಳು ಪುನರಾವರ್ತನೆಯಾಗುವುದು ಅನಿವಾರ್ಯವಾಗಿದೆ.

ಈ ಒಂದು ಸಂಪುಟವು ‘ಕಾಮಧೇನು’ ಪ್ರಕಾಶನದ ಮೂಲಕ ಪ್ರಕಟಗೊಳ್ಳಲು ನೆರವಾದ ಸನ್ಮಿತ್ರ ಶ್ರೀ ಡಿ.ಕೆ. ಶ್ಯಾಮಸುಂದರರಾವ್ ಅವರನ್ನೂ, ತುಂಬ ಸೊಗಸಾಗಿ ಅಚ್ಚುಮಾಡಿರುವ ಸತ್ಯಶ್ರೀ ಪ್ರಿಂಟರ್ಸ್ ಅವರನ್ನೂ, ನಾನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ಸಂಪುಟಕ್ಕೆ ತುಂಬ ವಿಶ್ವಾಸದಿಂದ ಮೌಲಿಕವಾದ ಬೆನ್ನುಡಿಯನ್ನು ಬರೆದುಕೊಟ್ಟ ಹಿರಿಯ ಮಿತ್ರರಾದ ಪ್ರೊ. ಎಲ್.ಎಸ್. ಶೇಷಗಿರಾಯರ ಸೌಜನ್ಯವನ್ನು ನಾನು ಪ್ರೀತಿಯಿಂದ ನೆನೆಯುತ್ತೇನೆ.

ಜಿ.ಎಸ್. ಶಿವರುದ್ರಪ್ಪ
ನವೆಂಬರ್ ೧೯೯೬


ಮೂರನೆಯ ಮುದ್ರಣಕ್ಕೆ ಎರಡು ಮಾತು

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ ಅವರಿಗೆ ಮತ್ತು ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ ಕೆ.ಆರ್. ಗಣೇಶ್‌ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

ಜಿ.ಎಸ್. ಶಿವರುದ್ರಪ್ಪ
ಫೆಬ್ರವರಿ ೨೦೦೯