ಪ್ರಿಯ ವಿದ್ಯಾರ್ಥಿ – ಮಿತ್ರರೆ,

ನಿಮಗೆ ತಿಳಿದಂತೆ ’ಸಹಯೋಗ’ ಕಾರ್ಯಕ್ರಮವು ಕರ್ನಾಟಕದ ಸರ್ಕಾರೀ ಕಾಲೇಜು ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಕಾಲೇಜು ಶಿಕ್ಷಣ ಇಲಾಖೆ (Department of Collegiate Education (DEC), ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ (Karnataka Vocational Training & Skill Development Corporation (KVTSDC)ಹಾಗೂ ಕರ್ನಾಟಕ ಜ್ಞಾನ ಆಯೋಗ (Karnataka Knowledge Commission)
ಸಂಸ್ಥೆಗಳ ಒಟ್ಟು ಪ್ರಯತ್ನವಾಗಿದೆ.

ಸಹಯೋಗ ೨೦೦೯ರಲ್ಲಿ ಪ್ರಾರಂಭವಾಗಿದ್ದು, ಮೊದಲ ಹಂತದಲ್ಲಿ (೨೦೦೯-೧೦)೧೧೨ ಕಾಲೇಜುಗಳನ್ನು ಒಳಗೊಂಡಂತೆ, ಸುಮಾರು ೭೦೦೦ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ಒದಗಿಸಿದೆ. ಇದೀಗ ಎರಡನೆಯ ಹಂತದಲ್ಲಿ (೨೦೧೦-೧೧) ೨೨೩ ಕಾಲೇಜುಗಳನ್ನು ಒಳಗೊಂಡಂತೆ ೧೩೩೬೩ ವಿದ್ಯಾರ್ಥಿಗಳನ್ನು ತಲುಪುವ ಕಾರ್ಯದಲ್ಲಿ ನಿರತವಾಗಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ ಈಗಾಗಲೇ ಸುಮಾರು ೧೦೦ ರಿಂದ ೧೨೦ ಘಂಟೆಗಳ ವೃತ್ತಿಪರ ಹಾಗೂ ಜೀವನ ಕೌಶಲ ತರಬೇತಿಗಳು ನಡೆದಿವೆ. ಜೀವನ ಕೌಶಲಗಳಿಗೆ ಸಂಬಂಧಿಸಿದಂತೆ, ಪಠ್ಯ ಸಾಮಗ್ರಿಯು ಕೇವಲ ವೃತ್ತಿಗಷ್ಟೇ ಅಲ್ಲ, ಜೀವನಕ್ಕೂ ಅವಶ್ಯಕ. ಹಾಗಾಗಿಯೇ ಇದೋ ಈ ಜೀವನ ಕೌಶಲಗಳ ಪಠ್ಯಸಾಮಗ್ರಿ ನಿಮಗಾಗಿ…

ನಿಮ್ಮ ಸಮಯ ಹಾಗೂ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ಅಮೂಲ್ಯ ಸಂಪನ್ಮೂಲ ಪಠ್ಯವನ್ನು ರಚಿಸಲಾಗಿದೆ. ಇದು ಸರಳವೂ, ಸ್ಪಷ್ಟವೂ, ಪ್ರಯೋಗಾತ್ಮಕವೂ ಹಾಗೂ ಜೀವನಕ್ಕೆ ಅನ್ವಯವಾಗುವಂತಹದ್ದೂ ಆಗಿದೆ. ಜೊತೆಗೆ ಸ್ವಯಂ ಅಧ್ಯಯನವನ್ನು ಅನುಕೂಲಿಸುವಂತಿದೆ.

ಈ ಪಠ್ಯವನ್ನು ಕೃತಿರೂಪಕ್ಕೆ ತರುವುದಕ್ಕೆ ಸಾಧ್ಯವಾಗಿಸಿರುವ ಬೆಂಗಳೂರಿನ ’ಅಕಾಡೆಮಿ ಆಫ್ ಕ್ರಿಯೇಟಿವ್ ಟಚಿಂಗ್’ ಸಂಸ್ಥೆಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಅಂತೆಯೇ ವಾದ್ವಾನಿ ಪೌಂಡೇಷನ್ ನ ಹೆಜ್ಜೆಗಳಲ್ಲೊಂದಾದ ನ್ಯಾಷನಲ್ ಎಂಟ್ರಪ್ಯೂನ್ಯೂರ್ ಶಿಪ್ ನೆಟ್ ವರ್ಕ್ (ಎನ್.ಇ.ಎನ್) ಸಂಸ್ಥೆಗೂ ಹಾಗೂ ಐಸೋಲ್ ಕನ್ಸಲ್ ಟೆಂಟ್ಸ್ ಪ್ರೈ.ಲಿ. ಸಂಸ್ಥೆಗಳ ಸಹಕಾರಕ್ಕೂ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಈ ಪಠ್ಯದೊಂದಿಗೆ ಆಯ್ದ ಸ್ಪೂರ್ತಿದಾಯಕ ವೀಡಿಯೋ ತುಣುಕುಗಳ ಡಿವಿಡಿಯನ್ನೂ ಒದಗಿಸಲಾಗುತ್ತಿದೆ.

ಈ ತಾಂತ್ರಿಕಯುಗದಲ್ಲಿನ ಆಧುನಿಕ ವಿದ್ಯಾರ್ಥಿಯ ಅಗತ್ಯಗಳಿಗೆ ಅನುಕೂಲಿಸುವಂತಹ ಸಂಪನ್ಮೂಲಗಳನ್ನು ಒದಗಿಸುವುದೇ ನಮ್ಮ ಈ ಪ್ರಯತ್ನದ ಉದ್ದೇಶ.

ಇದನ್ನು ಓದಿ, ನೋಡಿ ನಲಿಯಿರಿ, ನಿಮ್ಮ ಜೀವನದ ಪಯಣವೂ ಆನಂದವಾಗಿ ಸಾಗಲಿ. ನಿಮ್ಮ ಎಲ್ಲ ಪ್ರಯತ್ನಗಳಿಗೂ ಶುಭಾಶಯಗಳು.
ನಿಮ್ಮ ಜೀವನದ ವಿಕಾಸದ ಪ್ರತಿ, ಇದು ನಿಮ್ಮ ವಿನಮ್ರ ಕೊಡುಗೆ.

ಶ್ರೀ ತುಷಾರ್ ಗಿರಿನಾಥ್, ಐ.ಎ.ಎಸ್.
ಆಯುಕ್ತರು ಡಿ.ಸಿ.ಇ.

ಶ್ರೀ ಎಸ್.ಆರ್. ಉಮಾಶಂಕರ್ ಐ.ಎ.,ಎಸ್
ನಿರ್ವಾಹಕ ನಿರ್ದೇಶಕರು, ಕೆ.ವಿ.ಟಿ.ಎಸ್.ಡಿ.ಸಿ.

ಪ್ರೊ. ಎಂ. ಕೆ. ಶ್ರೀಧರ್
ಸದಸ್ಯ ಕಾರ್ಯದರ್ಶಿಗಳು ಹಾಗೂ
ಕಾರ್ಯನಿರ್ವಾಹಕ ನಿರ್ದೇಶಕರು, ಕಜ್ಞಾಆ