ಆರೋಗ್ಯ ಮತ್ತು ಅನಾರೋಗ್ಯದಲ್ಲಿ ಮಿದುಳಿನ ಪಾತ್ರವನ್ನು ವಿವರಿಸಲು, ಲಭ್ಯವರುವ ವೈಜ್ಞಾನಿಕ ಮಾಹಿತಿಯನ್ನು ಜನರಿಗೆ ಮುಟ್ಟಿಸಲು ಪ್ರತಿ ವರ್ಷ, ಅಂತರರಾಷ್ಟ್ರೀಯ ಮಿದುಳು ಜಾಗೃತಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಕಳೆದ ದಶಕವನ್ನು ಅಮೆರಿಕೆಯ ಸೆನೆಟ್, ಮಿದುಳು ಅಧ್ಯಯನದ ದಶಕ ಎಂದು ಹೆಸರಿಸಿತ್ತು. ಈ ಪ್ರಸಕ್ತ ವರ್ಷವನ್ನು ಮಾನಸಿಕ ಆರೋಗ್ಯ ವರ್ಷವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ನರಸಂಬಂಧೀ ಹಾಗೂ ಮಾನಸಿಕ ರೋಗಗಳಲ್ಲಿ ಮಿದುಳಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ವಿಜ್ಞಾನಿಗಳು ಹೆಚ್ಚು ಗಮನ ಹರಿಸುತ್ತಿರುವುದರಿಂದ, ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಕಾಯಿಲೆಗಳು ಬರಲು ಕಾರಣಗಳು ಈಗ ಹೆಚ್ಚು ಸ್ಪಷ್ಟವಾಗುತ್ತಿವೆ ಹಾಗೂ ಹೊಸ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಬಳಕೆಗೆ ಬರುತ್ತಿವೆ. ಈ ಬದಲಾವಣೆಯ ಗಾಳಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳಿಗೆ ಹೊಸ ಭರವಸೆಯ ತಂಪನ್ನು ತಂದಿದೆ. ಆರೋಗ್ಯ ಮತ್ತು ಅನಾರೋಗ್ಯದಲ್ಲಿ ಮಿದುಳಿನ ರಚನೆ ಮತ್ತು ಕಾರ್ಯ ವಿಧಾನ ಪುಸ್ತಕವನ್ನು ನುರಿತ, ಅನುಭವಿ ಲೇಖಕ ಡಾ|| ಸಿ. ಆರ್. ಚಂದ್ರಶೇಖರ್ ಬರೆದಿದ್ದಾರೆ. ಈ ವರ್ಷದ ಮಿದುಳು ಜಾಗೃತಿ ಸಪ್ತಾಹದ ಅಂಗವಾಗಿ ಪ್ರಕಟವಾಗಿರುವ ಈ ಪುಸ್ತಕ ಮಿದುಳಿನ ಬಗ್ಗೆ ಜನರ ತಿಳುವಳಿಕೆಯನ್ನು ಹೆಚ್ಚಿಸಲು ನೆರವಾಗುವುದರಲ್ಲಿ ಸಂಶಯವಿಲ್ಲ. ಜನರಲ್ಲಿರುವ ತಪ್ಪು ನಂಬಿಕೆ, ಆಚರಣೆಗಳು ಹೋಗಬೇಕು. ಮಾನಸಿಕ ಕಾಯಿಲೆಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಬೇಕು. ಈ ಬಗ್ಗೆ ಅಧ್ಯಯನಗಳೂ ನಡೆಯಬೇಕು. ಈ ಪುಸ್ತಕದ ಲೇಖಕರನ್ನು ಹಾಗೂ ಪ್ರಕಟಣೆಗೆ ನೆರವಾದ ರಾಷ್ಟ್ರೀಯ ಮಿದುಳು ಸಂಶೋಧನಾ ಕೇಂದ್ರವನ್ನು ನಾನು ಅಭಿನಂದಿಸುತ್ತೇನೆ.

ಡಾ|| ಸುಮಂತ್ ಖನ್ನ
ಎಂ.ಡಿ., ಪಿ.ಹೆಚ್.ಡಿ., ಎಂ.ಎ., ಎಂ.ಎಸ್‌., ಎಂ.ಆರ್.ಸಿಸೈಕ್‌
ಹೆಚ್ಚುವರಿ ಪ್ರಾಧ್ಯಾಪಕರು
ನಿಮ್ಹಾನ್ಸ್, ಬೆಂಗಳೂರು
ಮಾರ್ಚ್‌ ೨೦೦೧