ಪ್ರಗತಿಪರ ರಾಷ್ಟ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆಲವು ಮಾನದಂಡಗಳ ಪೈಕಿ ಇಂಧನ ಸುರಕ್ಷತೆಯೂ ಒಂದಾಗಿದೆ. ಸುಭದ್ರ ಹಾಗೂ ಸ್ವಾವಲಂಬನೆ ರಾಷ್ಟ್ರದ ನಿರ್ಮಾಣವಾಗಬೇಕೆಂದರೆ ಇಂಧನ ಕ್ಷೇತ್ರ ಬಲಪಡಿಸುವ ಅಗತ್ಯವಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಇಂಧನ ಸಮಸ್ಯೆ ಬಹು ಜಟಿಲ ಸಮಸ್ಯೆಯಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಚ್ಚಾ ತೈಲದ ಬೇಡಿಕೆ ಜೊತೆಗೆ ವಿದೇಶಿ ಅವಲಂಬನೆ ಹೆಚ್ಚಾಗುತ್ತಿದೆ. ಇಂಧನ ಸುರಕ್ಷತೆಯಲ್ಲಿ ಸ್ವಾವಲಂಬಿಗಳಾಗಬೇಕೆಂದಲ್ಲಿ ಕಚ್ಚಾ ತೈಲಕ್ಕೆ ಪರ‍್ಯಾಯವಾಗಿ ದೇಶೀ ಉತ್ಪನ್ನಗಳನ್ನು ಬಲಪಡಿಸಬೇಕಿದೆ.

ದೇಶೀ ಉತ್ಪನ್ನಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ಕಾರ್ಯಪ್ರವೃತ್ತವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಪುನರುತ್ಪಾದಿಸಲ್ಪಡುವ ಇಂಧನ ಮೂಲವಾದ ಜೈವಿಕ ಇಂಧನದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಸರ್ಕಾರಿ ಬರಡು ಹಾಗು ಬಂಜರು ಭೂಮಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳನ್ನು ಸಹ ತೊಡಗಿಸಿಕೊಂಡು ಜೈವಿಕ ಇಂಧನ ನೆಡುತೋಪು ಬೆಳೆಸಲು, ಸ್ವಯಂ ಸೇವಾ ಸಂಸ್ಥೆಗಳನ್ನು ಹಾಗು ಗ್ರಾಮ ಪಂಚಾಯಿತಿಗಳ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದಾದ್ಯಂತ ಜೈವಿಕ ಇಂಧನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ.

ಜೈವಿಕ ಇಂಧನ ತೈಲೋತ್ಪಾದನೆಯ ಯಂತ್ರಗಳು ಸ್ವದೇಶಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ತಂತ್ರಜ್ಞಾನವೂ ಸಹ ನಮ್ಮಲ್ಲಿ ಲಭ್ಯವಿದೆ, ಬೇಡಿಕೆಯೂ ಇದೆ, ಉತ್ಪಾದನೆಯ ಸಾಧ್ಯತೆಯಿದೆ ಹಾಗು ಸಾಧ್ಯತೆ ಸಾಕಾರಗೊಳಿಸಬಲ್ಲ ಸಮರ್ಥ ರೈತ ಶಕ್ತಿ ನಮ್ಮೊಂದಿಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ವಿವಿಧ ಸಂಘಸಂಸ್ಥೆಗಳನ್ನು ತಾಂತ್ರಿಕ ಹಾಗು ಕೃಷಿ ವಿಶ್ವ ವಿದ್ಯಾಲಯಗಳನ್ನು ಹಾಗು ಜನ ಸಮುದಾಯಗಳ ಸಾಮರ್ಥ್ಯವನ್ನು ಬೆಳೆಸಿಕೊಂಡು ಹೋಗುವಂತಾಗಲು “ಹಸಿರು ಹೊನ್ನು” ಎಂಬ ಪುಸ್ತಕವನ್ನು ಜೈವಿಕ ಇಂಧನ ಕಾರ್ಯಪಡೆ ಈ ಮೂಲಕ ಹೊರ ತರುತ್ತಿದೆ.

“ಬನ್ನಿ! ರಾಷ್ಟ್ರದ ಭದ್ರತೆಗೆ, ಪರಿಸರ ಸಂರಕ್ಷಣೆಗೆ, ಇಂಧನ ಸುರಕ್ಷತೆಗೆ, ಮುಂದಾಗೋಣ; ಮುಂಬರುವ ಸಂಕಷ್ಟದ ದಿನಗಳನ್ನು ಸಮರ್ಥವಾಗಿ ಎದುರಿಸಲು ಕಂಕಣ ಬದ್ಧರಾಗೋಣ; ಜೈವಿಕ ಇಂಧನ ಬೆಳೆಸೋಣ”

ಜೈವಿಕ ಇಂಧನ ಕಾರ್ಯಪಡೆ