ನಾರಣಪ್ಪನ ಗದುಗಿನ ಭಾರತವೂ, ಲಕ್ಷ್ಮೀಶನ ಜೈಮಿನಿ ಭಾರತವೂ ಕನ್ನಡ ಸಾಹಿತ್ಯದ ಹಿರಿಯ ಕೃತಿಗಳು. ಇವು ಗಾತ್ರದಲ್ಲಿ ಎಷ್ಟು ದೊಡ್ಡವೋ ಗುಣದಲ್ಲೂ ಅಷ್ಟೇ ದೊಡ್ಡವು. ಈಜಿಪ್ಟ್ ದೇಶದ ಪಿರಮಿಡ್ಡುಗಳು ಮಾನವನ ದೇಹಶಕ್ತಿಯ ಔನ್ನತ್ಯಕ್ಕೆ ನಿದರ್ಶನಗಳು. ಈ ಎರಡು ಹಿರಿಯ ಗ್ರಂಥಗಳನ್ನು ಬುದ್ಧಿಶಕ್ತಿಯ ಪಿರಮಿಡ್ಡುಗಳೆಂದು ಕರೆಯಬಹುದು. ಇವು ನಮ್ಮ ಹಿರಿಯರಿಂದ ಲಭಿಸಿದ ಅಸ್ತಿಗಳು. ಇಂಥ ಆಸ್ತಿಗಳಿಗೆ ಹಕ್ಕುದಾರರಾದ ನಾವು ಧನ್ಯರು. ಇವುಗಳನ್ನು ಓದುವಾಗ ಶ್ರದ್ಧಾಸಕ್ತಿಗಳಿಂದ ಓದಬೇಕು. ಕವಿ ನಾರಣಪ್ಪನು “ಆದರಿಸಿ ಭಾರತದಲೊಂದಕ್ಷರವ ಕೇಳ್ದರಿಗೆ” ಪುಣ್ಯ ಪರಂಪರೆಗಳು ಲಭಿಸುತ್ತವೆಯೆಂದು ಹೇಳಿದ್ದಾನೆ. ಈ ಗ್ರಂಥಗಳನ್ನು ‘ಆದರಿಸಿ’ ಓದಬೇಕು. ಅನಾದರದಿಂದಲ್ಲ. ಈ ಸಂದರ್ಭದಲ್ಲಿ ಲಕ್ಷ್ಮೀಶನು ಹೇಳಿರುವ ಮೂತೂ ನೆನಪಿಗೆ ಬರುತ್ತದೆ.

“ಕೆನೆವಾಲ ಕಡೆದು ನವನೀತಮಂ ತೆಗೆದ ಬಾ |
ಯ್ಗಿನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ |
ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ… || “

ಈ ಮಾತಿನ ಗಹನವಾದ ಅರ್ಥವನ್ನು ಗ್ರಹಿಸಿ ಈ ಮಹಾಕಾವ್ಯಗಳನ್ನು ಅಧ್ಯಯನಮಾಡಿ ಅದರಿಂದ ದೊರೆತ ಅಮೃತವನ್ನು ಆಸ್ವಾದಿಸಬೇಕು. ಕಾವ್ಯಾನಂದವೇ ಬ್ರಹ್ಮಾನಂದಕ್ಕೆ ಸೋಪಾನವೆಂಬುದನ್ನು ಈ ಕಾವ್ಯಗಳಿಂದ ತಿಳಿಯಬಹುದಾಗಿದೆ.

ಸುಮಾರು ನಾಲ್ಕು ವರ್ಷಗಳ ಕೆಳಗೆ ಕೈಕೊಂಡ ಸಂಸ್ಕೃತಿ ಪ್ರಸಾರ ಕಾರ್ಯ ಈಗ ಮೊದಲನೆಯ ಹಂತವನ್ನು ದಾಟಿ ಎರಡನೆಯ ಹಂತಕ್ಕೆ ಬಂದಿದೆ. ಮೊದಲನೆಯ ಹಂತದಲ್ಲಿ ನಡೆದ ಉಪನ್ಯಾಸ, ಕಾವ್ಯವಾಚನ ಮುಂತಾದ ಕಾರ‍್ಯ ಕ್ರಮಗಳ ಫಲವಾಗಿ ಜನತೆಯ ಮನಸ್ಸು ಸಾಹಿತ್ಯ, ಸಂಸ್ಕೃತಿ ಮತ್ತು ವಿಚಾರ ಶೀಲತೆಗಳ  ಕಡೆಗೆ  ತಿರುಗಿದೆ. ಇದುವರೆಗೆ ಸಂಸ್ಕೃತಿ ಪ್ರಸಾರದ ಇಲಾಖೆ ನಡೆಸಿರುವ ಕೆಲಸವನ್ನು ಎಲೆಯ ಕೊನೆಯಲ್ಲಿ ಬಡಿಸುವ ಪಾಯಸಕ್ಕೆ ಹೋಲಿಸಬಹುದು. ಅದು ಸವಿಯೆಂದರೂ ಅದಷ್ಟರಿಂದ ನಮ್ಮ ಹಸಿವು ಹಿಂಗುವುದಿಲ್ಲ. ಔತಣದಲ್ಲಿ ಮುಖ್ಯವಾದ ಭಕ್ಷಭೋಜ್ಯಾದಿಗಳನ್ನು ಬಡಿಸುವ ಕೆಲಸ ಈಗ ಮೊದಲಾಗಿದೆ. ಸಂಸ್ಕೃತಿ ದೃಢವಾಗಿ ಬೇರೂರಿ ಕುಡಿಯಿಟ್ಟು ಬೆಳೆಯಬೇಕಾದರೆ ದೇಶದಲ್ಲಿ ವಿಚಾರವಾಹಿನಿ ಸರ್ವದಾ ಹರಿಯುತ್ತಿರಬೇಕು; ಆ ಹೊನಲಿನ ಮಂಜುಳ ಸ್ವರ ಕ್ಷಣಕಾಲ ಕಿವಿಯಲ್ಲಿ ಸುಳಿದು ಮಾಯವಾದರೆ ಸಾಲದು. ಆದ್ದರಿಂದ ಸಂಸ್ಕೃತಿ ಪ್ರಸಾರದ ಇಲಾಖೆ ಇನ್ನು ಮುಂದೆ, ಸಾಹಿತ್ಯ, ಕಲೆ ಮತ್ತು ಶಾಸ್ತ್ರಗಳ ಪರಿಚಯ ಮಾಡಿಕೊಡುವ ಗ್ರಂಥಗಳ ಪ್ರಕಟನೆಗೆ ಹೆಚ್ಚು ಗಮನ ಕೊಡಬೇಕೆಂದು ಸಂಕಲ್ಪ ತೊಟ್ಟಿದೆ.

ಈ ಕಾರ್ಯಕ್ರಮಕ್ಕೆ ಮೊದಲ ಹೆಜ್ಜೆಯಾಗಿ ಈಗಾಗಲೇ “ಸಂಸ್ಕೃತಿ”, “ಭಗವಾ ಬುದ್ಧ” ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾಗಿದೆ. ಇವೆರಡೂ ಸಂದರ್ಭೋಚಿತವಾಗಿ ಜನತೆಗೆ ಅರ್ಪಿಸಿದ ಬಿಡಿ ಹೂಗಳು ಎನ್ನಬಹುದು. ಇಲಾಖೆಯ ಪುಸ್ತಕಮಾಲೆ ನಿಜವಾಗಿ ಪ್ರಾರಂಭವಾಗುವುದು ಈಗ ಪ್ರಕಟಿಸುತ್ತಿರುವ “ಕನ್ನಡ ಜೈಮಿನಿ ಭಾರತ”ದಿಂದ. ಈ ಕಾವ್ಯವನ್ನು ಮೊದಲು ಪ್ರಕಟಿಸುವುದರಲ್ಲಿ ಔಚಿತ್ಯವಿದೆ. ಸದ್ಯದಲ್ಲೇ ಪ್ರಕಟಿತವಾಗಲಿರುವ ಕುಮಾರವ್ಯಾಸಭಾರತದ ಮಹತ್ವವೂ, ವ್ಯಾಪ್ತಿಯೂ ಇದಕ್ಕಿಂತ ಹೆಚ್ಚಿನದೆಂದು ಒಪ್ಪಬಹುದು. ಆದರೆ, ಜೈಮಿನಿ ಭಾರತ ಹೆಚ್ಚು ಸರಳವಾದ ಕಾವ್ಯ. ಸಂಸ್ಕೃತ ಸಾಹಿತ್ಯಾಭ್ಯಾಸಿಗಳಿಗೆ “ರಘುವಂಶ” ಇರುವಂತೆ ಕನ್ನಡಿಗರಿಗೆ ಜೈಮಿನಿ ಭಾರತ. ಈ ಕಾವ್ಯವನ್ನು ಆಸ್ಥಾನವಿದ್ವಾ, ಪಂಡಿತರತ್ನಂ, ಕೀರ್ತನಾಚಾರ್ಯ ಶ್ರೀ ಬ. ಶಿವಮೂರ್ತಿಶಾಸ್ತ್ರಿಗಳವರೂ, ಶ್ರೀದೇವುಡು ನರಸಿಂಹಶಾಸ್ತ್ರಿಗಳವರೂ ಬಹಳ ಶ್ರಮವಹಿಸಿ ಸಂಪಾದಿಸಿಕೊಟ್ಟಿದ್ದಾರೆ. ಅವರ ಉಪಕಾರವನ್ನು ಸಂತೋಷದಿಂದ ನೆನೆಯುತ್ತೇನೆ.

ಕರ್ಣಾಟಕದ ಹಳ್ಳಿಹಳ್ಳಿಯಲ್ಲೂ ಜಗಲಿಗಳ ಮೇಲೆ ವ್ಯಾಸಪೀಠದಲ್ಲಿ ಗದುಗಿನ ಭಾರತ ಮತ್ತು ಜೈಮಿನಿ ಭಾರತಗಳನ್ನುಟ್ಟುಕೊಂಡು ಓದುವುದು ನಮ್ಮ ಜನತೆಯ ಶ್ರೇಯಸ್ಕರವಾದ ಪದ್ಧತಿ. ಈ ಪದ್ಧತಿಗೆ ಮತ್ತಷ್ಟು ಪುಷ್ಟಿ ಪೋಷಣೆಗಳನ್ನು ಕೊಡುವುದು ಜನತಾ ಸರ್ಕಾರದ ಕರ್ತವ್ಯವಾಗಿದೆ. ಈ ಕರ್ತವ್ಯದ ಕಾಣಿಕೆಗಳೇ ಈ ಸದ್ಗ್ರಂಥಗಳ ಪ್ರತಿಗಳು.

ಇನ್ನು ಮುಂದೆ ಈ ಗ್ರಂಥಗಳ ಪ್ರಕಟನೆಯಿಂದ ಎಲ್ಲ ಕಡೆಯಲ್ಲೂ ಈ ಮಹಾಕಾವ್ಯಗಳ ದಿವ್ಯ ಘೋಷವು ಕೇಳಿಬರಲೆಂದು ಹಾರೈಸುತ್ತೇನೆ.

ದೇವಪುರನಿಲಯ ಲಕ್ಷ್ಮೀರಮಣನಾಸ್ಯ ಚಂದ್ರನಾನಂದಮಂ ನಮಗೀಯಲಿ

ಕೆ. ಹನುಮಂತಯ್ಯ,

ಮೈಸೂರು ಸಂಸ್ಥಾನದ ಮುಖ್ಯ ಮಂತ್ರಿಗಳು.

ಬೆಂಗಳೂರು

ತಾ|| ೨೫-೭-೧೯೫೬.