ಜನನ : ೧೯೨೩ ರಲ್ಲಿ ಮುರಗೋಡಿನಲ್ಲಿ

ಮನೆತನ : ಧಾರ್ಮಿಕ ಸಂಪ್ರದಾಯಸ್ಥರ ಮನೆತನ. ತಂದೆ ಭೀಮರಾಯರು. ತಾಯಿ ರಮಾಬಾಯಿ. ತಾತ, ಅಜ್ಜಿ ತಾಯಿಯವರು ಸುಶ್ರಾವ್ಯವಾಗಿ ದೇವರನಾಮಗಳನ್ನು ಹಾಡುತ್ತಿದ್ದರು.

ಶಿಕ್ಷಣ : ಪುಣೆಯ ಗಂಧರ್ವ ಮಹಾ ವಿದ್ಯಾಲಯದಲ್ಲಿ ಸಂಗೀತ ಶಿಕ್ಷಣ, ಮನೆಯಲ್ಲಿ ದಿನನಿತ್ಯ ನಡೆಯುತ್ತಿದ್ದ ಭಜನೆ – ಕೀರ್ತನೆಗಳೇ ಹರಿದಾಸ ಪಂಥಕ್ಕೆ ದಾರಿಮಾಡಿಕೊಟ್ಟಿತು.

ಕೆಲಕಾಲ ಹುಬ್ಬಳ್ಳಿಯಲ್ಲಿ ಮಹಾ ಲಿಂಗರಾವ್ ಅವರಲ್ಲೂ ಸಂಗೀತಾಭ್ಯಾಸ. ಪುಣೆಯಲ್ಲಿದ್ದಾಗ ಡಿ.ವಿ. ಪಲೂಸ್ಕರ್ ಅವರ ಮಾರ್ಗದರ್ಶನ. ಮಣ್ಣೂರ ಮಧ್ವಾಚಾರ್ಯರಿಂದ ವೇದ – ಸಂಸ್ಕೃತಾಧ್ಯಾಯನ.

ಕ್ಷೇತ್ರ ಸಾಧನೆ : ಇವರಿಗೆ ಹರಿದಾಸ ದೀಕ್ಷೆ ದೊರೆತದ್ದೂ ಒಂದು ಪವಾಡವೇ| ಇವರು ಹಾಡುತ್ತಿದ್ದ ದೇವರ ನಾಮಗಳನ್ನು ಕೇಳಿದ ಭಕ್ತರೊಬ್ಬರು ಇವರನ್ನು ಮಂತ್ರಾಲಯಕ್ಕೆ ಕಳುಹಿಸಿ ರಾಯರ ಸೇವೆ ಮಾಡುವಂತೆ ಆದೇಶವಿತ್ತಂತೆ! ಅಲ್ಲಿ ರಾಯರಿಂದ ಅನುಗ್ರಹಿತರಾಗಿ ಮುಂದೆ ತಿರುಪತಿಗೆ ತೆರಳಿ ಅಲ್ಲಿ ತಿಮ್ಮಪ್ಪನ ಸೇವೆಯಲ್ಲಿದ್ದಾಗ ಅಲ್ಲಿಗೆ ಆಗಮಿಸಿದ್ದ ಕುಂದಾಪುರ ವ್ಯಾಸರಾಯ ಮಠದ ಶ್ರೀ ಲಕ್ಷ್ಮೀಶ ತೀರ್ಥರು ಇವರನ್ನು ’ದಾಸರೇ’ ಎಂದು ಸಂಭೋಧಿಸಿದರಂತೆ! ಅಂದಿನಿಂದಲೇ ಇವರು ಹರಿದಾಸರಾದರು. ಮುಂದೆ ಮುಳಬಾಗಿಲಿಗೆ ಬಂದು ಶ್ರೀಪಾದರಾಜರ ಸೇವೆ ಮಾಡುತ್ತಿದ್ದ ಕಾಲದಲ್ಲಿ ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರೆನಿಸಿದ ಶ್ರೀಪಾದರಾಜರಿಂದ ಸ್ವಪ್ನ ಮುಖೇನ ದಾಸದೀಕ್ಷೆ ದೊರೆಯಿತಂತೆ. ಮುಂದೆ ಬದರಿ, ಉತ್ತರ ಭಾರತ ಪ್ರವಾಸ ಮಾಡಿ ಕೆಲವು ಕಲ ಪಂಢರಪುರದಲ್ಲಿ ಪಾಂಡುರಂಗನ ಸೇವೆಗೈದು ಮಳಖೇಡ, ಚಿಪ್ಪಗಿರಿ, ಸೊಂದಾಗಳಲ್ಲಿ ಜಯತೀರ್ಥ. ವಿಜಯದಾಸರು, ವಾದಿರಾಜರ ಸೇವೆ ಮಾಡಿ ಅವರ ಆರಾಧನಾ ದಿನಗಳಂದು ಹರಿಕಥೆ ಮಾಡಿ ಇಂದಿಗೂ ಆ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಏಕತಾರಿ, ವಾರಕರೀ, ಜಾನಪದ ಶೈಲಿ ಗಾಯನ ಇವರ ವೈಶಿಷ್ಟ್ಯತೆ. ಭಜನ ಚಂದ್ರಿಕಾ ಹಾಗೂ ಹರಿದಾಸ ಸಾಹಿತ್ಯಗಳನ್ನು ರಚನೆ ಮಾಡಿರುತ್ತಾರೆ.

ಪ್ರಶಸ್ತಿ – ಪುರಸ್ಕಾರಗಳು : ಉಡುಪಿಯಲ್ಲಿ ಶ್ರೀ ವಾದಿರಾಜರ ಐದನೇ ಶತಮಾನೋತ್ಸವ, ದಾಸ ಸಾಹಿತ್ಯ ಯೋಜನೆ ತಿರುಪತಿ, ದೆಹಲಿಯಲ್ಲಿ ಆಗ ಗೃಹಮಂತ್ರಿಯಾಗಿದ್ದ ಬಿ. ಎನ್. ದಾತಾರ ಅವರಿಂದ ಸನ್ಮಾನ – ಪ್ರಶಸ್ತಿ ಪತ್ರಗಳು ದೊರಕಿವೆ. ಅದಮಾರು ಮಠಾದೀಶ ಶ್ರೀ ವಿಬುಧೇಶ ತೀರ್ಥರಿಂದ ’ದಾಸಕುಲ ದೀಪಕ’ ಪ್ರಶಸ್ತಿಯೇ ಅಲ್ಲದೆ ೨೦೦೪ರ ಸಾಲಿನ ಕರ್ನಾಟಕ ಪ್ರತಿಷ್ಠಿತ ’ಶಿಶುನಾಳ ಷರೀಫ’ ಪ್ರಶಸ್ತಿ ಸಹ ಲಭಿಸಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೦-೦೧ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.