ಪಲ್ಲವಿ : ಮುರಹರ ಮುಕುಂದ ಮಾಧವಾ ಹಾಡುವೆ ನಿನ್ನಯ ನಾಮವನು
ರಮಾರಮಣ ಜಯ ಗೋವಿಂದಾ ಡುಪ್ಪನು ನುಡಿಸುತ ಕುಣಿಯುವೆನು

ಚರಣ :  ಹಗಲಿರುಳೆಲ್ಲರ ಕಾಯುತಲಿ ವೆಂಕಟನಾಗಿಹೆ ಕಲಿಯುಗದಿ
ರಜಸ್ತಮೋ ಹರ ಚಿತ್ಪ್ರಭುವೇ ನಿಸ್ತುಲ ಮಹಿಮಾ ಆಲಯನೇ

ಮುಲ್ಲೊಕವನು ಕಾಯುವನೇ ನಮಿಸುವೆ ನಿನಗೆ ಅನುದಿನವೂ
ಕುಂತಿಯ ಮಕ್ಕಳ ರಕ್ಷಕನೇ ಯದುವಂಶೋತ್ತಮ ನಾಯಕನೇ

ದಯಾ ಮಹೋದಧಿ ಗುಣನಿಧಿಯೇ ನಾದಪ್ರಿಯನೇ ಮುನಿನುತನೇ
ಮಾನಸ ಮಂದಿರ ಬೆಳಗುವನೇ ಮನಸಿನ ಕೊಳೆಯನು ತೆಗೆಯುವನೇ

ಧರ್ಮೋಪದೇಶವ ಗೈದವರನೇ ವನಮಾಲೀ ಕರುಣಾಮಯನೇ
ವಾಚಾಮಗೋಚರ ಶ್ರೀಪತಿಯೇ ನುತಿಸುತ ಜಯವನು ಹಾಡುವೆನು