ಬಾಳಗಿರಿ ಕಂದರದ ಮೇಗಡೆ ಸ್ವಾರ್ಥದೊಲುಮೆಯ ಕತ್ತಲು
ಹಬ್ಬಿ ಮುಳುಗಿಸಿ ಎಲ್ಲ ಒಂದೇ ಎನುವ ಭ್ರಾಂತಿಯ ಬಿತ್ತಲು,
ಎಂದೊ ಒಮ್ಮೆಗೆ ಮಿಂಚು ಮಿಂಚಲು, ಹಾ, ಅಗಾಧದ ಕಂದರ !
ನನಗು ನಿನಗೂ ನಡುವೆ ಹಾಸಿದೆ ಮುಗಿಲಿನಗಲದ ಅಂತರ !

ಏನು ಒಲವೋ ಎಂಥ ಒಲವೋ ಬರಿಯ ಮಾಯದ ಮಂಪರ
ಎದೆಗು ಎದೆಗೂ ನಡುವೆ ಹರಹಿವೆ ನೂರು ನೋವಿನ ಸಾಗರ
ಅದರ ಮೇಲೂ ನಲಿವ ಕಾಣಲು ಪ್ರೀತಿ ಎನ್ನುವ ಸೇತುವ
ಕಟ್ಟಿಕೊಂಡೆವು, ಬಳಕೆಯಾದೆವು, ಬಾಳ್ಗೆ ಬಾಳನು ಬೆಸೆದೆವು.

ಯಾವ ಸಿಡಿಲಿಗು ಜಗ್ಗದಿದ್ದುದು ಬರಿ ಪಟಾಕಿಯ ಸದ್ದಿಗೇ
ಮುರಿದುಹೋಯಿತೆ ನಮ್ಮ ಸೇತುವೆ, ಏನಿದಚ್ಚರಿ ಎನಿಸಿದೆ !
ಎಷ್ಟು ಹತ್ತಿರವಿದ್ದ ಬಾಳಿಂದೆಷ್ಟು ದೂರಕೆ ಸರಿಯಿತು !
ಒಲುಮೆಯಲ್ಲೂ ಬೇಕೆ ಸಂಯಮ ?- ಎಂಬ ಪ್ರಶ್ನೆಯು ಹುಟ್ಟಿತು.

ಒಲಿಯದಿರಲೊಳಿತಿತ್ತು ಎನಿಸಿದೆ ವಿರಹ ಮಾಡಿದ ನೋವಿಗೆ.
ಯಾವ ಪಾಪಕೆ, ಯಾವ ತಪ್ಪಿಗೆ, ಬಾಳಿಗೀ ಬಗೆ ದಂಡನೆ ?
ಒಲವೊ-ಹಗೆಯೊ, ಕರುಣೆ-ಕ್ರೌರ್ಯವೊ, ಚಣವು ಕೊಲುತಿವೆ ಬಾಳನು
ಇನಿತು ಕೋಟಲೆಯಲ್ಲಿ ಮನುಜತೆ ಬಾಳುತಿಹುದೇ ಚೋದ್ಯವು !

ನಾನು ಅರಿತೆನು, ತಪ್ಪು ನಮ್ಮದು, ಸ್ವಾರ್ಥದೊಲುಮೆಯು ನಮ್ಮದು,
ಅದಕೆ ತಳಹದಿ ಭದ್ರವಿಲ್ಲದೆ ಮುರಿದು ಬಿದ್ದಿತು ಗೋಪುರ.
ಇಂಥ ವೇದನೆಯಿಂದ ಜೀವವು ಪಡೆದು ಬಾಳಿನ ಅನುಭವ
ಹಿರಿಯ ಒಲುಮೆಯನರಸಿ ನಡೆವುದು ಕಣ್ಣ ತುಂಬಿಸಿ ದಿವ್ಯವ !

ಬುವಿಯೊಳೆಲ್ಲೂ ಏಕೆ ನನಗೀ ಒಲುಮೆ ದೊರೆಯದ ವೇದನೆ ?
ಜಗದ ಪ್ರೀತಿಯ ನೇತಿಮಾರ್ಗದಿ ‘ಇತಿ’ಯನರಸುತ ಬಂದೆನೆ ?
ತಾಯ ಪ್ರೀತಿಯ ತೆರದಿ ತಿಂಗಳ ಬೆಳಕು ಎಲ್ಲೆಡೆ ಹಬ್ಬದೆ ?
ಕಣಿವೆ ಕಂದರಗಳನು ಪ್ರೀತಿಯ ತೋಳಿನಲ್ಲದು ತಬ್ಬದೆ ?

ಇರುವ ದೋಷವನೆಲ್ಲ ಮನ್ನಿಸಿ ಒಲಿವ ರೀತಿಯದೊಂದಿದೆ,
ಇರುವ ದೋಷವ ತಿದ್ದಿ ಸರಿಪಡಿಸುತ್ತ ಒಲಿಯುವುದೊಂದಿದೆ,
ಎರಡು ಬಗೆಯಲಿ ದಿಟದ ಒಲುಮೆಯು ಬಂದು ಬಾಳನು ತೊಳೆಯುತ
ಮೇಲಕೆತ್ತದೆ ಹೋದರೆಮ್ಮಯ ಬಾಳಿಗೆಲ್ಲಿದೆ ಬಿಡುಗಡೆ ?

ಬೆಳಕು-ಕತ್ತಲ ಸಮರ ಸಾಗಿದೆ ಇಂದಿಗೂ ಕೊನೆಗಾಣದೆ !
ಕಡೆಗೆ ಬೆಳಕೇ ಗೆಲುವುದೆಂಬುದು ದಿನವು ಕಣ್ಣಿಗೆ ಕಂಡಿದೆ.
ಇರುಳ ನಭದಲಿ ಬೆಳಕು ತಾರೆಯ ನೂರು ಧ್ವಜವನು ನಟ್ಟಿದೆ ;
ಇದನು ತಿಳಿವುದೆ ತಿಳಿವು ಎನಿಸಿದೆ, -ಇದರೊಳೆಲ್ಲಾ ಗುಟ್ಟಿದೆ !