ಇವರು ಹುಟ್ಟಿದ್ದು ೧೮೮೮ ರಲ್ಲಿ, ದಕ್ಷಿಣ ಕನ್ನಡದ ಪುತ್ತೂರು ತಾಲ್ಲೂಕಿನ ಮುಳಿಯ ಎಂಬಲ್ಲಿ. ಶಾಲಾವಿದ್ಯಾಭ್ಯಾಸ ಮುಳಿಯದಲ್ಲಿ, ಉನ್ನತ ವಿದ್ಯಾಭ್ಯಾಸ ಕೇರಳದ ತಿರುವಾಂಕೂರಿನ ಮಹಾರಾಜ ಕಾಲೇಜಿನಲ್ಲಿ. ಮಂಗಳೂರಿನ ಸೇಂಟ್ ಎಲೋಸಿಯಸ್ ಕಾಲೇಜಿನಲ್ಲಿ ಕನ್ನಡ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ ಮುಳಿಯರು ೧೯೪೮ ರಲ್ಲಿ ನಿವೃತ್ತರಾದರು. ೧೯೫೦ ರಲ್ಲಿ ನಿಧನರಾದರು. ಮೈಸೂರಿನವರು ವೆಂಕಣ್ಣಯ್ಯನವರನ್ನು, ಧಾರವಾಡದವರು ಪ್ರೊ.ಸಾಸನೂರರನ್ನು ನೆನೆಯುವಂತೆ ಮಂಗಳೂರಿನವರು ಮುಳಿಯರನ್ನು ಸ್ಮರಿಸುವುದು ಸಹಜವೆ. ಮುಳಿಯರು ಆ ಕಾಲದ ದಕ್ಷಿಣ ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಇವರು ನವೋದಯದ ಮೊದಲ ಪೀಳಿಗೆಗೆ ಸೇರುತ್ತಾರೆ. ಸಾಹಿತ್ಯ, ಸಂಗೀತ, ಯಕ್ಷಗಾನ ಮತ್ತು ಪತ್ರಿಕೋದ್ಯಮ ಇವರ ಆಸಕ್ತಿಯ ಕ್ಷೇತ್ರಗಳಾಗಿದ್ದವು. ವಿವಿಧ ಪ್ರಕಾರಗಳಲ್ಲಿ ಇವರು ರಚಿಸಿರುವ ಸಾಹಿತ್ಯ ಕೃತಿಗಳು ಹೀಗಿವೆ:

ಕಾವ್ಯ:-ಸೊಬಗಿನಬಳ್ಳಿ(೧೯೧೭), ಪ್ರೇಮಪಾಶ(೧೯೧೭),

ಬಡಹುಡುಗಿ(೧೯೧೮), ನವನೀತ ರಾಮಾಯಣ(೧೯೪೦),

ಸುಮಾರು ೨೫ ಕಿರುಗವನಗಳನ್ನು ಬರೆದಿದ್ದಾರೆ.

ಕಾದಂಬರಿ:-ಪಶ್ಚಾತ್ತಾಪ(೧೯೩೪), ವೀರ ಬಂಕೆಯ(೧೯೪೮), ನಾಟಕ:-ಚಂದ್ರಾವಳೀ ವಿಲಾಸಂ(೧೯೧೩), ನಡತೆಯ ನಾಡು(೧೯೧೭), ಹಗಲಿರುಳು(೧೯೧೮),

ರಾವೃತ-ರಂಗಪ್ಪ(೧೯೫೯,ಮರಣೋತ್ತರ)

ಯಕ್ಷಗಾನ ಪ್ರಸಂಗ:-ಸೂರ್ಯಕಾಂತಿ ಕಲ್ಯಾಣ(ಅಪ್ರಕಟಿತ)

ಗದ್ಯಾನುವಾದ:-ಆದಿಪುರಾಣ ಸಂಗ್ರಹ(೧೯೩೮), ಸಮಸ್ತಭಾರತಸಾರ(೧೯೪೧)

ಸಂಶೋಧನೆ:-ನಾಡೋಜಪಂಪ(೧೯೩೮), ಕವಿರಾಜಮಾರ್ಗವಿವೇಕ(೧೯೪೮), ಪಾರ್ತಿಸುಬ್ಬ(೧೯೪೫),

ಕನ್ನಡನಾಡೂದೇಸಿ ಸಾಹಿತ್ಯವೂ(೧೯೫೯,ಮರಣೋತ್ತರ), ಸಂಸ್ಕೃತಿ(೧೯೮೧),ಅಂಡಯ್ಯನೂ ಕನ್ನಡವೆನಿಪ್ಪನಾಡೂ ಪಂಪನ ಕಾವ್ಯದ ಬಗೆಗೆ ಬರೆದ ವಿಮರ್ಶಾತ್ಮಕ ಕೃತಿ ನಾಡೋಜ ಪಂಪ, ತಿಮ್ಮಪ್ಪಯ್ಯನವರ ಅಮೂಲ್ಯ ಕೃತಿ. ಒಬ್ಬ ಕವಿಯ ಕೃತಿಯ ಬಗೆಗೆ ಇಷ್ಟು ದೀರ್ಘವಾದ ಆಳವಾದ ವಿಮರ್ಶೆ ಕನ್ನಡದಲ್ಲಿ ಆ ವರೆಗೆ ಬಂದಿರಲಿಲ್ಲ. ಸಂಸ್ಕೃತಕ್ಕೆ ವಾಲ್ಮೀಕಿಯಂತೆ ಕನ್ನಡಕ್ಕೆ ಆದಿಕವಿ ಪಂಪನೆಂದು ಸಾರುವ ಮುಳಿಯರು ಆತನ ದೇಶ-ಕಾಲ-ಕಾವ್ಯಗಳ ಆಳವಾದ ಅಧ್ಯಯನವನ್ನು ಈ ಗ್ರಂಥದಲ್ಲಿ ನಡೆಸಿದ್ದಾರೆ. ಚಾಳುಕ್ಯವಂಶದ ಅರಿಕೇಸರಿಯ ಕುಲಶಾಕೆಯ ಸುತ್ತ, ಪಂಪನ ವಂಶಾವಳಿ ಮತ್ತು ವೆಂಗಿಮಂಡಲ ನಾಡಿನ ಸುತ್ತ, ಪಂಪನ ಕಾವ್ಯಗಳು-ಕಾವ್ಯಗಳ ಕಾಲ-ಕಾವ್ಯಧರ್ಮ ಮತ್ತು ಧರ್ಮಗಳ ಸುತ್ತ,ಪಂಪನ ದೇಸಿಯ ಕುರಿತು, ಮಹಾಕಾವ್ಯ ವೆಂದರೇನು ಎಂಬುದರ ಕುರಿತು, ಆದಿಪುರಾಣದ ರಸಪ್ರವಾಹದ ಬಗೆಗೆ, ಸಮಸ್ತ ಭಾರತ ಶೈಲಿಯ ಕುರಿತು- ಈ ಬೃಹತ್ ಗ್ರಂಥದಲ್ಲಿ ಎರಡು ಭಾಗಗಳಲ್ಲಿ ಚರ್ಚಿಸಿದ್ದಾರೆ.

ಕವಿರಾಜಮಾರ್ಗ ವಿವೇಕ, ಕನ್ನಡದ ಮೊದಲ ಲಕ್ಷಣ ಗ್ರಂಥವಾದ ಕವಿರಾಜ ಮಾರ್ಗವನ್ನು ಕುರಿತ ಸಂಶೋಧನ ಗ್ರಂಥ. ಕವಿರಾಜಮಾರ್ಗಕಾರನಾರು ನೃಪತುಂಗನೇ ಶ್ರೀವಿಜಯನೆ ಎಂಬುದನ್ನು ವಿಸ್ತಾರವಾಗಿ ವಿವೇಚಿಸಿ, ಶ್ರೀವಿಜಯನೆಂಬ ಸಿದ್ಧಾಂತಕ್ಕೆ ಬರುತ್ತಾರೆ. ಆದರೆ ಇಲ್ಲಿ ನೃಪತುಂಗನ ಬಗ್ಗೆ ಅವರ ಧೋರಣೆ ಪ್ರತಿಕೂಲಸ್ಥಿತಿಗೆ ಕಾರಣವಾಗುವುದುಲ್ಲ. ರಾಷ್ಟ್ರಕೂಟರ ವಂಶ, ಪ್ರಭೂತವರ್ಷಗೋವಿಂದ, ಅಮೋಘವರ್ಷ, ನೃಪತುಂಗ, ಆತನ ಆಳ್ವಿಕೆ, ಮತ, ಗ್ರಂಥರಚನೆಯ ವಿಚಾರ, ಕವಿಗಳ ಪೋಷಕತ್ವ ಉದಾರವರ್ತನೆಗಳನ್ನು ಒರೆಗೆ ಹಚ್ಚಿದ್ದಾರೆ. ಕವಿರಾಜಮಾರ್ಗ ರಚಿತವಾದ ಮಾರ್ಗವಿಭಾಗ, ಗುಣಗತ ಮಾರ್ಗ ಭೇದ, ರಸಗತ ಮಾರ್ಗಭೇದಗಳನ್ನು ತೋರಿಸಿ ಕಾವ್ಯ ದೋಷ, ಅಲಂಕಾರ ದರ್ಶನಗಳನ್ನು ಮಾಡಿದ್ದಾರೆ.

ಯಕ್ಷಗಾನ ಕವಿ ಪಾರ್ತಿಸುಬ್ಬನ ಬಗೆಗಿನ ಬರೆದ ಸಂಶೋಧನೆಗಳ ಆಧಾರದ ಮೇಲೆ ತಿಮ್ಮಪ್ಪಯ್ಯನವರು ಪಾರ್ತಿಸುಬ್ಬನ ಜೀವನವನ್ನು ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

ಇವರ ಕವಿತೆ, ಕಾದಂಬರಿ, ನಾಟಕಗಳಲ್ಲಿ ರಾಷ್ಟ್ರಪ್ರೇಮ, ಭಾಷಾಪ್ರೇಮ, ಹಳ್ಳಿ-ಪಟ್ಟಣಗಳ ಬದುಕು, ಸಾಮಾಜಿಕ ಕಳಕಳಿ ಮತ್ತು ಪೌರಾಣಿಕ ಅಂಶಗಳು ಎದ್ದು ಕಾಣುತ್ತವೆ. ಇವು ಗಾಂದೀಯುಗದ ಆದರ್ಶಗಳುಳ್ಳವಾಗಿವೆ. ಹಳೆಯ ಕಾವ್ಯ-ಕೃತಿಗಳಿಂದ ಪ್ರೇರಿತವಾದ ಪೌರಾಣಿಕ ಮಾದರಿಯ ಕೃತಿಗಳು, ಸಾಮಾಜಿಕ ಕೃತಿಗಳು ಎಂದು ಇವನ್ನು ವರ್ಗೀಕರಿಸಬಹುದು.

ಕನ್ನಡ ಕೋಗಿಲೆ, ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಮುಳಿಯರು ಹೆಚ್ಚು ಪ್ರಸಿದ್ಧರಾದರು. ಇವರ ಲೇಖನಗಳು, ಕವನಗಳು ಈ ಪತ್ರಿಕೆಯ ಮೂಲಕ ಪ್ರಕಟಣೆಗೊಂಡು ಜನರಿಗೆ ತಲುಪಿದವು ೧೯೨೭ ರಲ್ಲಿ ಮಂಗಳೂರಿನಲ್ಲಿ ಆರ್.ತಾತಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಮುಳಿಯರು ಮಂಡಿಸಿದ ಆಂಡಯ್ಯನೂ ಕನ್ನಡವೆನಿಪ್ಪ ನಾಡೂ, ಎಂಬ ಪ್ರಬಂಧ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತು. ೧೯೩೧ ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮುಂದೆ ಲಕ್ಷ್ಮೇಶ್ವರದಲ್ಲಿ ಜರುಗಿದ ಪಂಪನ ಸಹಸ್ರಸಾವಂತ್ಸರಿಕೋತ್ಸವದ ಅಧ್ಯಕ್ಷರೂ ಆದರು.

ಮುಳಿಯರು ೨೦ ನೇ ಶತಮಾನದ ಆರಂಭದ ಬರಹಗಾರರಲ್ಲಿ ಪ್ರಮುಖರು. ಮುಖ್ಯವಾಗಿ ಇವರು ಸಂಶೋಧಕರು. ಇದಕ್ಕೆ ಸಾಕ್ಷಿಯಾಗಿ ಅವರ ನಾಡೋಜಪಂಪ, ಕವಿರಾಜಮಾರ್ಗವಿವೇಕ, ಈ ಎರಡು ಕೃತಿಗಳು ಸಾಕು. ಈ ರೀತಿಯಲ್ಲಿ ಮುಳಿಯ ತಿಮ್ಮಪ್ಪಯ್ಯ ನವರು ಕನ್ನಡಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿ ಕನ್ನಡ ಸಾರಸ್ವತ ಲೋಕದಲ್ಲಿ ಅಜರಾಮರರಾಗಿದ್ದಾರೆ.