ಸೂಚನೆ ||
ಕೃತ ವಿವಾಹದೊಳಗುಪಹತಿಯ ಕೃತಕಂಗಳಿಂ |
ಸುತನೊಡನೆ ಮೃತನಾದ ಮಂತ್ರಿಯಂ ಧರಣಿ ಗಧಿ|
ಪತಿಯಾಗಿ ನೆಗಪಿದಂ ಚಂದ್ರಹಾಸಂ ಚಂಡಿಕಾದೇವಿಯಂ ಮೆಚ್ಚಿಸಿ |

ವಾಸವಾತ್ಮಜ ಕೇಳಲಂಕಾರದಿಂ ಚಂದ್ರ |
ಹಾಸನಂ ಮದವಳಿಗನಂ ಮಾಡುತಿರ್ದರ್ ಸು |
ವಾಸಿನಿಯರುತ್ಸವದೊಳಿಂತೆಂದು ಮದನನಂತಃಪುರದೊಳೆಚ್ಚರಿಸಲು ||
ಪ್ರಾಸಾದದಗ್ರಹದೊಳ್ ತಪಿಸುತಿಹ ವಿಷಯೆಗೆ ವಿ |
ಲಾಸಿನಿಯರೈತಂದು ನುಡಿದರಂಬುಜ ವನಕೆ |
ನೇಸರುದಯಿಸುವ ಕಾಲದ ಮುಂದೆ ತಂಪಿಡಿದು ಬೀಸುವೆಳೆಗಾಳಿಯಂತೆ ||೧||

ಸೊಗಯಿಸುವ ಪಚ್ಚಗಪ್ಪುರದ ಪುಡಿಯಂ ಮೈಗೆ |
ತಿಗುರಿದೊಡೆ ಬಾವನ್ನದೊಳ್ಗೆಸರ ನೆಸೆವ ಕುಚ |
ಯುಗದೆಡೆಗೆ ಮೆತ್ತಿದೊಡೆ ಕಣ್ಣಿವೆಗೆ ಪನ್ನೀರನೊಡನೊಡನೆ ತೊಡೆದೊಡದಕೆ ||
ಮಿಗೆ ಪೆಚ್ಚಿತುರಿಯಂದು ಮತ್ತೆ ಸಿಡಿಮಿಡಿಗೊಂಡು |
ಮುಗುಳಂಬನುರುಬೆಗಾರದೆ ಪೊರಳುತಿಹ ಮಂತ್ರಿ |
ಮಗಳೆಡೆಗೆ ಪರಿತಂದು ನುಡಿದೊಳೊಸಗೆಯ ನಾಪ್ತಸಖಿಯೊರ್ವಳವಳಕೂಡೆ ||೨||

ಚಿಂತೆಯಂ ಬಿಡು ತರಳೆ ಕೈಸಾರ್ದುದೀಗ ನಿ |
ನ್ನಂತರಂಗದ ಬಯಕೆ ಶಶಿಹಾಸನೆಂಬವಂ |
ಕಂತು ಸಮನಾಗಿಹಂ ನೀನದೇಂ ಪುಣ್ಯಮಂ ಮಾಡಿದೆಯೊ ಮುನ್ನಿಳೆಯೊಳು ||
ಕುಂತಳೇಂದ್ರನ ಕುವರಿ ನಗುತ ಸರಸದೊಳಾಡಿ |
ದಂತಾಯ್ತು ತಂದೆ ಕಳುಹಿದ ಲೇಖನವನೋದಿ |
ಸಂತಸದೊಳಿಂದು ಮದನಂ ನಿನ್ನನಾತಂಗೆ ಕುಡುವನೆಂದವಳೊರೆದಳು ||೩||

ರಜ್ಜುಬಂದವನುಗಿದ ಮೃಗದಂತೆ ತಾಂ ನೆನೆದ |
ಕಜ್ಜಮೊಡಗೂಡಲ್ಕೆ ಮೊಗಮರಲ್ದುದು ಬಳಿಕ |
ಲಜ್ಜೆ ಮೊಳೆದೊರಿದುದು ತಲೆವಾಗಿ ನೆಲನ ನುಂಗುಟದಿಂದೆ ಬರೆಯುತಿರಲು ||
ಉಜ್ಜುಗವಿದೇನಬಲೆ ಸಾಕು ನಡೆ ಮಂಗಳ ಸು |
ಮಜ್ಜನದ ಮನೆಗೆಂದು ಕಮಲಾಯತಾಕ್ಷಿಯಂ |
ತಜ್ಜನನಿ ಕಳುಹಿದ ನಿತಂಬಿನಿಯರುಪ್ಪರಿಗೆದುದಿಯಿಂದಿಳುಹಿ ತಂದರು ||೪||

ವರ ಶಾತಕುಂಭ ಕುಂಭಸ್ತನದ ಪಲ್ಲವಾ |
ಧರದ ಗುಣರಾಜಿ ರಾಜಿತದ ಕೋಮಲೆಗೆ ಸೌಂ |
ದರ ಕುಂಕುಮಾಂಗ ಮಾಂಗಲ್ಯದಬಲೆಯರುದಕಪೂರಿತ ಕನಕಕಲಶದ ||
ಸುರುಚಿವೆತ್ತರುಣ ತರುಣ ಪ್ರವಾಳದ ವಸ್ತ್ರ |
ಪರಿವೃತದ ಕಲ್ಪಕಲ್ಪ ವಿಧಾನಮಾಗಿರದೆ |
ವಿರಚಿಸಿದರಾಗ ರಾಗದೊಳಮಲ ಶೋಭನ ಸ್ನಾನವಂ ಸೋತ್ಸವದೊಳು ||೫||

ಮುಟ್ಟಿದೊಡೆ ಕಂದದಿರದವಳ ಸುಕುಮಾರ ತನು |
ದಿಟ್ಟೆಯರದೆಂತೊ ನವ ಕುಂಕುಮವನೀಗ ನುಂ |
ಪಿಟ್ಟರಲ್ಲದೆ ಪೋದ ಮಧ್ಯದೊಳದೆಂತು ನಿಲಿಸಿದರೊ ದಿವ್ಯಾಂಬರವನು ||
ಬಟ್ಟಮೊಲೆಗಳ ಪೊರೆಗೆ ಬಾಗಿ ನಡೆವಳ್ಗೆಂತು |
ಕಟ್ಟಿದರೊ ಹಾರಾವಳಿಯನೆಂದು ಕೌತುಕಂ |
ಬಿಟ್ಟು ನೋಳ್ಪವೊಲೆಸೆದಳಾವಿಷಯೆ ಬಳಿಕಲಂಕಾರ ಮಂಡಿತೆಯಾಗಲು ||೬||

ಬಾವನ್ನಗಂಪಿನಂಗದ ಲಲನೆಗನುಲೇಪ |
ನಾವಳಿಗಳೇಕಿನ್ನು ಕನ್ನಕಾ ತಿಲಕಕ್ಕೆ |
ಭಾವಿಸೆ ಲಲಾಮವೇತಕೆ ಪಣಿಗೆ ಸೊಂಪೊದವಿದವಯವದೊಳಿಂಪುವಡೆದ ||
ಪೂವೆಸೆವ ಕೋಮಲೆಗದೇಕೆ ಕುಸುಮದ ಮಾಲೆ |
ಲಾವಣ್ಯ ಭೂಷಣದ ಪೆಣ್ಗಾಭರಣಮೇಕೆ |
ಕೋವಿದೆಯರಲ್ಲ ಸೈರಂಧಿಯರೆನಲ್ಕೆ ವಿಷಯೆಗೆ ಸಿಂಗರಂ ಗೈವರು ||೭||

ಅಪರದಿಗ್ಭಾಗದಂತಂಜನೋದ್ಭಾಸಿತಂ |
ವಿಪುಲ ಹರಿಪದದಂತೆ ತಾರಕಾಲಂಕೃತಂ |
ಲಿಪಿಯಂತೆ ದೀರ್ಘಶೋಭಾನ್ವಿತಂ ದ್ವಿಜನಂತೆ ಶ್ರುತಿಯುತಂ ದೈತ್ಯನಂತೆ ||
ಅಪಹೃತಾನಿಮಿಷ ಲೀಲಾವಿಲಾಸಂ ನರಾ |
ಧಿಪನಂತೆ ಕುವಲಯ ಶ್ರೀಧರಂ ಘನದಂತೆ |
ಚಪಲಾಭಿರಾಮಮಾಗಿರ್ದುದಾ ಶಶಿಮುಖಿಯ ನೇತ್ರಯುಗಮೇವೇಳ್ವೆನು ||೮||

ಉಲ್ಲಾಸ ತಿಲಕಮುಂ ಸು ತಮಾಲ ಪತ್ರಮುಂ |
ಮೊಲ್ಲೆಯ ಮುಗುಳ್ಗಳುಂ ಚೂತ ಪ್ರವಾಳಮುಂ |
ಮಲ್ಲಿಗೆಯಲರ್ಗಳುಂ ಸಂಪಗೆಯ ಮೊಗ್ಗೆಯುಂ ನಿಂಬದಳಮುಂ ತೊಳಗುವ ||
ಸಲ್ಲಿಲಿತ ಸಾಲ ಕಾನನದೊಳಿರ್ದಪುವು ಪೊಸ |
ತಲ್ಲೆಂಬ ತೆರನಾದುದೆಂತು ಬಣ್ಣಿಸುವೆನೀ |
ಚೆಲ್ಲೆಗಂಗಳ ಚೆಲ್ವಿಕಯೊಳೆಸೆವ ಬಾಲಕಿಯ ನಗೆಮೊಗದ ಸೌಂದರವನು ||೯||

ಶ್ರವಣ ಭೂಷಣದಿಂದೆ ಹಸ್ತಾಭರಣದಿಂದೆ |
ದಿವಿಜ ಪದಮೆಸೆವಂತೆ ಕುಂತಳ ಶ್ರೀಯ ವೈ |
ಭವದಿಂದೆ ರಮಣೀಯ ಕಾಂಚೀಪ್ರದೇಶದಿಂ ಭೂಭಾಗಮೊಪ್ಪುವಂತೆ ||
ತವೆ ಮೆರೆವ ಸುಗ್ರೀವ ತಾರಾವಲಂಬದಿಂ |
ದವಿಕಲಾಂಗದ ವಿರಾಜಿತದಿಂದೆ ಸನ್ನುತ |
ಪ್ಲವಗ ಕುಲದುನ್ನತಿಯ ಬೆಳೆವಿಗೆಯ ಚೆಲ್ವಿಂದೆ ವಿಷಯೆ ಕಂಗೊಳಿಸಿರ್ದಳು ||೧೦||

ಲಾವಣ್ಯವಾರಿ ಪೂರಿತಮಾದ ನಾಭೀ ಸ |
ರೋವರದ ತಿವಳಿದೆರೆಗಳ ನಡುವೆ ರಂಜಿಸುವ |
ಶೈವಾಲದಂತೆ ಜಘನಾದ್ರಿಯಂ ವೇಡೈಸಿದಮಲ ಕಾಂಚೀದಾಮದ |
ದಾವ ಶಿಖಿಯಿಂದೆ ನಭಕೇಳ್ವ ಕರ್ಬೊಗೆಯಂತೆ |
ಪೀವರ ಸ್ತನದುರ್ಗಕಂಗಜನಡರ್ದಿಳಿವ |
ಠಾವಿನಂತಾ ಚಂದ್ರಮುಖಿಯ ತನುಮಧ್ಯದೊಳ್ ಬಾಸೆ ಕಂಗೊಳಿಸಿರ್ದುದು ||೧೧||

ಬಿಡದೆ ಮುಕ್ತಾಹಾರದಿಂದೆ ಸಮರೂಪದಿಂ |
ದೃಢತೆವೆತ್ತೂರ್ಧ್ವಮುಖಮಾಗಿ ಕರ್ಕಶ ವೃತ್ತ |
ದೊಡಗೂಡಿ ಕುಚ ಯುಗಂ ಮೆರೆದುದು ಕಠೋರ ತಪದಿಂದೆಸೆವ ಯೋಗಿಯಂತೆ ||
ಬಡವಾಗಿ ಬಲ್ಲಿದರ ನಡುವೆ ನವೆದಿರ್ದು ಸೊಂ |
ಪಡಗದೆ ವಿಜೃಂಭಿಸುವ ವೀರ ಕಂಠೀರವಕೆ |
ಪಡಿಯಾಗಿ ಸತ್ಪುರಷನಂದದೊಳ್ ಕಾಣಿಸಿತು ಮಧ್ಯಲತೆ ಮಂತ್ರಿಸುತೆಯ ||೧೨||

ತೊಳಗಿ ಬೆಳಗುವ ಸದ್ಗುಣಾವಳಿಗಳೈಶ್ವರ್ಯ ||
ಲಲನೆಯಂ ಗೃಹಪತಿಯ ಮಂದಿರಕೆ ಸಂಘಟಿಸಿ |
ಬೆಳವಿಗೆಯನತಿಶಯಂಮಾಳ್ಪಂತೆ ಸಿಂಗರಂಗೈದು ನೀಲಾಳಕೆಯರು ||
ಬಳಿಕ ಪೊನ್ನಂದಣದ ಮೇಲೆ ವೈವಾಹ ಮಂ |
ಗಳ ಮಹೋತ್ಸವಕೆ ವಿರಚಿಸಿದ  ಮಂಟಪದೆಡೆಗೆ |
ನಳಿನ ಪತ್ರಾಕ್ಷಿಯಂ ತಂದರೊಸಗೆಯೊಳಂದು ವಿಭವದ ವಿಲಾಸದಿಂದೆ ||೧೩||

ಬಳಸಿದ ಸಮಸ್ತಜನ ಜಂಗುಳಿಯ ಕೈಸೊಡ |
ರ್ಗಳ ಸಾಲ ಹಂದಣಿಯ ಪಾಡುವ ಪುರಂಧಿಯರ |
ಕಳಸ ಕನ್ನಡಿವಿಡಿದ ಕನ್ನೆಯರ ನಾನಾ ಸುವಸ್ತುಗಳ ವಿಸ್ತರಣದ ||
ತೊಳಗುವೊಸಗೆಯ ವಾದ್ಯ ಸಂಕುಲದ ಬಹು ಫಲಾ |
ವಳಿಗಳ ವಿಡಾಯದಿಂದೈತಂದು ದಂಡಿಗೆಯ |
ನಿಳಿದನಾರತಿಗಳ ನಿವಾಳಿಯಂ ಚಂದ್ರಹಾಸಂ ಭದ್ರಮಂಟಪದೊಳು ||೧೪||

ವರ ತಾರಕಾಕ್ಷೆಯೆಂಬಾ ಪ್ರಧಾನನ ಪತ್ನಿ |
ಚರಣಮಂ ಪ್ರಕ್ಷಾಳನಂಗೈಯೆ ಮದನನಾ |
ದರಿಸಿ ಮಧುಪರ್ಕಮಂ ಮಾಡೆ ಕನ್ನಾವರಣದೊಳ್‌ಕುಲ ಪರಂಪರೆಯನು ||
ಒರೆಯೆನಲ್ ಶಶಿಹಾಸನೆನಗೆ ವಾಮನಗೋತ್ರ |
ಮರವಿಂದನಾಭಂ ಪಿತಂ ಹರಿ ಪಿತಾಮಹಂ |
ಮುರಹರಂ ಪ್ರಪಿತಾಮಹಂ ಕುಳಿಂದನುಮವನ ಸತಿಯುಂ ಗುರುಗಳೆಂದನು ||೧೫||

ಅಲ್ಪಭಾಷಿತಮಲ್ಲದಿಹ ಚಂದ್ರಹಾಸನ ಸು |
ಜಲ್ಪಿತಂ ಸೊಗಸೆ ಮದನಂ ಮುದದೊಳಾಗ ಸಂ |
ಕಲ್ಪಿತ ನಿರೀಕ್ಷಣಿಗೆ ಸುಮುಹೂರ್ತಮಂ ಕೇಳ್ದು ತೆರೆದೆಗೆಸಿ ಭೂ ದಿವಿಜರ ||
ನಲ್ಸರಕವೆತ್ತು ಜೀರಗೆಬೆಲ್ಲದೊಪ್ಪಮೆಸೆ |
ಯಲ್ಪದದ ಮೆಟ್ಟಕ್ಕಿ ಸುತ್ತನೂಲ್ ಮೆರೆಯೆ ಘಣಿ ||
ತಲ್ಪನಿದಿರೊಳ್ ತದರ್ಪಿತಮಾಗಲೆಂದವನ ಕೈಗೆ ಧಾರೆಯನೆರೆದನು ||೧೬||

ಮೊರೆವ ಮರಿದುಂಬಿಗಳ ಮಾಲೆಯಂ ತಾಳ್ದ ನವ ||
ಪರಿಮಳದ ಮಂದಾರ ಮಾಲೆಯಂ ವಿಷಯೆ ಸೌಂ |
ದರ ಶಿರೀಷದ ಮಾಲೆಯಂ ಪೋಲ್ವ ನಳಿತೋಳನೆತ್ತಿ ಕಂಧರದೊಳಿಡಲು ||
ಭರಿತ ಲಾವಣ್ಯ ಸಾಕಾರದಿಂ ಮಂಗಳಾ |
ಭರಣಂಗಳೆಸೆವಲಂಕಾರದಿಂ ಪಾರ್ವರು ||
ಚ್ಚರಿಪಗ್ನಿಹೋತ್ರ ಪ್ರಕಾರದಿಂ ವಧುವಂ ಕುಳಿಂದಜಂ ಕೈವಿಡಿದನು ||೧೭||

ಮುಂದೆ ವಿರಚಿಸಿದ ವೇದಿಯೊಳೆಸೆವ ಹಸೆಗೆ ನಡೆ |
ತಂದು ಪಾಣಿಗ್ರಹಣಮಂ ಗೈದು ಲಾಜಾಜ್ಯ |
ದಿಂದೆ ಹೋಮದೊಳಗ್ನಿಯಂ ಬೆಳಗೆ ವಿಪ್ರರಾಶೀರ್ವಾದಮಂ ಮಾಡಲು ||
ಬಂದು ತಿಲಕವನಿಟ್ಟು ಪತ್ರಫಲಮಂ ಕೊಟ್ಟು |
ಪೊಂದಳಿಗೆವಿಡಿದಾರತಿಯ ನೆತ್ತಲೈದೆಯರ್ |
ಕಂದರ್ಪ ರತಿಗಳ ವಿವಾಹಮೆನೆ ಕಂಗೊಳಿಸಿತಾ ದಂಪತಿಗಳ ಮದುವೆ ||೧೮||

ತತ್ಕಾಲದೊಳ್ ಮದನನಾ ಚಂದ್ರಹಾಸನಂ |
ಸತ್ಕರಿಸಿ ಬಳುವಳಿಗೆ ಬಹಳ ಗೋ ಮಹಿಷಿ ಬಲ |
ವತ್ಕರಿಸಿ ತುರಂಗ ರಥ ಶಯ್ಯಾಸನಂಗಳಂ ವಳಿತ ವಾಹನ ಪದವನು ||
ಉತ್ಕೃಷ್ಟ ಪರಿಮಳದ್ರವ್ಯ ಸಂಕುಲಮಂ ಚ |
ಮತ್ಕಾರದಬಲೆಯರನಂಬರಾಭರಣ ವಿಲ |
ಸತ್ಕಂಠಮಾಲೆಗಳನಿತ್ತನೆಂದು ಬಳಸಿ ತೀರದ ಸುವಸ್ತುಗಳನು ||೧೯||

ಉರ್ವೀಶ್ವರನ ಪುರೋಹಿತ ಗಾಲವಂಗೆ ತನ ||
ಗುರ್ವ ಬಾಂಧವ ಪುತ್ರಮಿತ್ರರ್ಗೆ ನೆರೆದ ಭೂ |
ಗೀರ್ವಾಣರೆಲರ್ಗೆ ಕವಿ ಗಮಕಿ ನಟ ವಿದೂಷಕ ವಂದಿ ಗಾಯಕರ್ಗೆ ||
ಸರ್ವ ಜನಕವರವರ ತರವರಿತು ಸತ್ಕರಿಸಿ |
ತರ್ವಾಯೊಳಗಣಿತ ದ್ರವ್ಯಮಂ ಪೊತ್ತು ಬೇ |
ಸರ್ವಿನಂ  ಕೊಟ್ಟನುತ್ಸವದಿಂದೆ ಯಾಚಕರ್ಗಾಗ ದುರ್ಮತಿಯ ಸೂನು ||೨೦||

ತದನಂತರದೊಳನಿಬರೆಲ್ಲರಂ ಕಳುಹಿ ನಿಜ ||
ಸದನದೆ ಸಮಗ್ರ ವೈಭವದೊಳಿರಲಂದಿರುಳ್ ||
ಮದನಂ ಸ್ವಬಾಂಧವರ್ವೆರಸಿ ದಂಪತಿಗಳಂ ಸಹಭೋಜನಂ ಮಾಡಿಸಿ ||
ಇದನಂಗತಾತನಂ ಪೂಜಿಸಿದ ಫಲದೊಳಾ |
ದುದನಂತ ಸೌಭಾಗ್ಯಮೆಂದು ಮುದದಿಂ ಪವಡಿ |
ಸಿದನನ್ನೆಗಂ ಪೂರ್ವಶೈಲ  ಶಿಖರದ ಹೊಂಗಳಸದಂತೆ ರವಿ ಮೆರೆದನು ||೨೧||

ಪಂಕರುಹ ಮಿತ್ರನುದಯದೊಳೆದ್ದು ಮದನಂ ಸ್ವ |
ಕಿಂಕರರ್ಗರಿಪಲವರೆಂದಿನ ಮಹೋತ್ಸವ ಕ |
ಲಂಕರಿಸಿದರ್ ಧ್ವಜಪತಾಕೆಗಳ ರಚನೆಯಿಂದಮಲ ಮಣಿ  ಮಂಟಪವನು ||
ಕಂಕಣದ ಘನರವದ ಮಿಂಚುಗಂಗಳ ಸತೀ |
ಸಂಕುಲದ ಮಾಳ್ಕೆಗಳ ಮಂಗಳ ಸ್ನಾನದಿಂ |
ಕುಂಕುಮ ವಿಲಿಪ್ತಾಂಗನಾಗಿ ನಿಜ ಸತಿಸಹಿತ ಚಂದ್ರಹಾಸಂ ಮೆರೆದನು ||೨೨||

ಚಂಪಕ ಸ್ನೇಹಸಮ್ಮರ್ದನದ ಕುಂಕುಮದ |
ಕಂಪಿನನುಲೇಪನದ ನಿರ್ಮಲದ ಜನ ಸ್ನಾನ |
ದಂಪಿನ ಕಳೇವರದ ರಂಜಿಸುವ ನೊಸಲ ಮುತ್ತಿನ ಬಾಸಿಗದ ಚೆಲ್ವಿನ ||
ದಂಪತಿಗಳೊಪ್ಪಿದರ್ ಪಾಡುವ ಪುರಂಧಿಯರ |
ನುಂಪಿಡಿದ ಸರದಿಂದೆ ಮಂಗಳ  ಸುವಾದ್ಯ ರವ |
ದಿಂ ಪಾರ್ವರಡಿಗೂಡಿಗೊಡರ್ಚುವ ಶುಭಸ್ವಸ್ತಿವಾಚನದ ಘೋಷದಿಂದೆ ||೨೩||

ಸುತ್ರಾಮ ತನಯ  ಕೇಳುತ್ಸವದೊಳೀಪರಿ ದಿ |
ನತ್ರಯಂ ನಡೆಯಲ್ಕೆ ನಾಲ್ಕನೆಯ ದಿವಸದೊಳ್ |
ಚಿತ್ರಮಂ ವಿರಚಿತ ಪೊಳಲ್ವಗಿಸಿ ನಾಗವಲ್ಲಿಯ ಸೊಡರ್ಗಳನೊದವಿಸಿ ||
ಕ್ಷತ್ರಿಯ ವಿವಾಹವೈಭವದೊಳಿದು ಪೊಸತೆನೆ ಧ |
ರಿತ್ರಿಯೊಳ್ ಚಂದ್ರಹಾಸಂಗಾಯ್ತು ಮದುವೆ ಶತ |
ಪತ್ರನಾಭನ ಕಿಂಕರರ್ಗೆ ಮಾಡಿದ ಮಿಥೈಯದು ತಾನೆ ಪಥ್ಯಮೆನಲು ||೨೪||

ವಿಸ್ತರಿಸಿ  ಮೃಷ್ಟಭೋಜನದ ನವಕುಸುಮ ಫಲ |
ವಸ್ತುಗಳ ಕರ್ಪೂರ ವೀಟಿಕೆಯ ಚಂದನದ ||
ಕಸ್ತುರಿ ಜವಾಜಿಗಳ ಪರಿಮಳದ ಕರ್ದಮದ ವಸ್ತ್ರಭೂಷಣದ ವಿತ್ತದ ||
ಪ್ರಸ್ತುತದ ಸನ್ಮಾನದಿಂದೆ ಮನ್ನಿಸಿದಂ ಸ |
ಮಸ್ತ ಜನಮಂ ಮದನನಾಪ್ತ ಬಂಧುಗಳಂ ಪ್ರ |
ಶಸ್ತ ಪೂಜೆಗಳಿಂದೆ ಸತ್ಕರಿಸಿ  ಕೊಟ್ಡನೆಲ್ಲರ್ ತಣಿಯೆ ತಾಂ ತಣಿಯದೆ ||೨೫||

ಬಂಡಾರದಖಿಳ ವಸ್ತುವನೊಂದು ತೃಣಮಾಗಿ |
ಕಂಡು ವೆಚ್ಚಿಸಿ ಚಂದ್ರಹಾಸನ ವಿವಾಹಮಂ |
ಕೊಂಡೆಸಗುತಿರ್ದನೊಲವಿಂ ಮದನನಿತ್ತ ಕುಂತಳಪುರದೊಳವನತ್ತಲು ||
ಅಂಡಲೆದು ಚಂದನಾವತಿಯೊಳ್ ಕುಳಿಂದನಂ |
ದಂಡಿಸಿದನಾ ದುಷ್ಟಬುದ್ಧಿ ಜರೆದುರೆ ಬೈದು |
ಹಿಂಡಿ ಹಿಳಿದರ್ಥಮಂ ತೆಗೆದು ಸೆರೆಮನೆಗಿಕ್ಕಿ ನಿಗಳಮಂ ಕಾಲ್ಗೆಪೂಡಿ ||೨೬||

ಹೆಕ್ಕಳಿಸಿ ರಾಜ್ಯಮಂ ಕೊಟ್ಟೊಡೆನ್ನಂ ಮರೆದು |
ಸೊಕ್ಕಿ  ತನಗೊರ್ವ ಮಗನಂ ಮಾಡಿಕೊಂಡವನ |
ಮಕ್ಕಳಾಟಿಕೆಯಿಂದೆ ದೇವತಾಲಯ ತಟಾಕಾರಾಮ ಕೊಡವೆಗಳನು ||
ಇಕ್ಕಿ ಕಿಡಿಸಿದನೆಂದವನ ವಳಿತಮಂ ತೆಗೆದು |
ಕಕ್ಕಸದ ಬಂಧನದೊಳಿರಿಸಿ ಕುಂತಳನಗರಿ |
ಗಕ್ಕರಿಂದೈತಂದನಾ ದುಷ್ಟಬುದ್ಧಿ ವಾಹಕರನವಗಡಿಸಿ ನಡೆಸಿ ||೨೭||

ಕೊಂದಪನೊ ವಿಷವನೂಡಿಸಿ ಚಂದ್ರಹಾಸನಂ |
ಮಂದಮತಿಯಾಗಿ ಮರೆದಿರ್ದಪನೋ ಮಗನೆಂಬ |
ಸಂದೇಹದಿಂ ಚಂದನಾವತಿಯೊಳಿರದೆ ಕುಂತಳಪುರಕೆ ದುಷ್ಟಬುದ್ಧಿ ||
ನಿಂದಲ್ಲಿ ನಿಲ್ಲದೈತರೆ ಪಥದೊಳಿದಿರಾಗಿ |
ಬಂದು ನುಡಿದುದು ಸರ್ಪಮೊಂದು ನಿನ್ನಾಲಯದೊ |
ಳಿಂದುವರೆಗೊಡವೆಯಂ ಕಾದಿರ್ದೆನದು ನಿನ್ನ ಸುತನಿಂದೆ ಪೋದುದೆಂದು ||೨೮||

ಮಾನವರ ತೆರದೊಳಿಂತೆಂದೊರೆದು ಘಣಿ ಬಿಲಕೆ |
ತಾನಿಳಿಯೆ ಕೇಳ್ದು ವಿಸ್ಮಿತನಾಗಿ ಮಂತ್ರಿ ದು |
ಮ್ಮಾನದಿಂ ನಗರದ ಸವಿಪಕೈತರೆ ವಾದ್ಯಘೋಷಿತಂ ಕಿವಿಯೊಳಿಡಿಯೆ ||
ಏನಿದುತ್ಸವಮೂರೊಳೆನೆ ಕಂಡವರ್ ನಿನ್ನ |
ಸೂನು ಮದನಂ ಚಂದ್ರಹಾಸಂಗೆ ವಿಷಯೆಗೆ ವಿ |
ಧಾನದಿಂ ಮದುವೆಯಂ ಮಾಡಿಸಿದ ನದರೊಸಗೆ ಪೊಳಲೊಳಾದಪುದೆಂದರು ||೨೯||

ಕೂರ್ದಸಿಯ ನಿಳು ಹಿಂದಂತಾಯ್ತು ಕರ್ಣದೊಳಾಗ |
ಕಾರ್ದುವಕ್ಷಗಳರುಣತೆಯನುಗ್ರ ಕೋಪದಿಂ |
ವಿರ್ದನೇ ತನ್ನ ನೇಮವನಕಟ ಮಗನೆಂದು ಪಲ್ಗಡಿಯುತೈತರಲ್ಕೆ ||
ಸಾರ್ದ ಸಂತೋಷದಿಂ ಬಂದು ಕಾಲ್ಗೆರಗಿದೊಡೆ |
ಚೀರ್ದು ಸುತನಂ ಬೈದು ಮಂತ್ರಿ ನಿಜ ಸದನಮಂ |
ಸೇರ್ದು ಪೊನ್ನಂದಣಮನಿಳದಾತ್ಮಜಾತನಂ ನೋಡಿ ಮುಳಿದಿಂತೆಂದನು ||೩೦||

ಮದನನಂ ಮದುವಕ್ಕಳಂ ಮಹಾವೈಭವದ |
ಮದುವೆಯಂ ತ್ಯಾಗಭೋಗವನುಚಿತ ರಚಿತಮಂ |
ಮುದದಿಂದೆ ಬಣ್ಣಿಸುವ ಭಟ್ಟರಂ ಬಿತ್ತರಿಸಿ ಪರಸುವ ಮಹೀಸುರರನು ||
ಸುದತಿ ವಿಷಯೆಗೆ ತಕ್ಕ ವರನಿಂದುಹಾಸನೆಂ |
ದಿದಿರಾಗಿ ಬಂದಾರತಿಯನೆತ್ತಿ ನುಡಿವ ಶಶಿ |
ವದನೆಯರನವಗಡಿಸಿ ಮಂತ್ರಿ ಬೈದಂ ತನ್ನ ಮನೆಗಾಪ್ತರಾದವರನು ||೩೧||

ರಂಜಿಸುವ ಪೊಸಮುತ್ತಿನೆಸವ ಬಾಸಿಗದ ನೊಸ |
ಲಿಂ ಜಡಿವ ಮಣಿಭೂಷಣಾವಳಿಯ ಕಾಂತಿಯಿಂ |
ಮಂಜುಳ ಹರಿದ್ರ ಕುಂಕುಮ ಚರ್ಚಿತಾಂಗದಿಂ ಚೆಲ್ವಿಂದೆ ಸಂಗಡಿಸಿದ ||
ಅಂಜಲಿಗಳಂ ಮೆರೆವ ದಂಪತಿಗಳಭಿನಮಿಸೆ |
ಮಂಜರಂ ಮರಿಗಿಳಿಗಳಂ ನಿರೀಕ್ಷಿಸುವಂತೆ |
ನಂಜಿಡಿದ ಮನದಮಾತ್ಯಂ ನೋಡಿ ತನ್ನ ಸುತನಂ ಬಯ್ತುತಿಂತೆಂದನು ||೩೨||

ಮೂಢನೀನೆಲವೆಲವೊ ಮದನ ನಿನ್ನೆಡೆಗೆ ನಾಂ |
ಗೂಢದಿಂ ಬರೆಸಿ ಕಳುಹಿದೊಡುರುವ ಕಜ್ಜಮಂ |
ರೂಢಿಯಿಂ ಮಾಡಿ ಕೆಡಿಸಿದೆ ಪಾಪಿ ಹೃದಯ ಶೂಲವನೆನಗೆ ಮೇದಿಸಿಯೊಳು ||
ಗಾಢದಿಂ ಬಲಿದೆ ಸಾಮ್ರಾಜ್ಯ ಸಿಂಹಾಸನಾ |
ರೂಢನಾಗಿರಲೊಲ್ಲದಾರ್ಜಿಸಿದ ವಿತ್ತಮಂ |
ವೇಡೈಸಿದಖಿಳ ಜನಕಿತ್ತೆ ವನವಾಸವೇ ಗತಿ ನಿನಗೆ ಹೋಗೆಂದನು ||೩೩||

ಪಿತನ ಮಾತಂ ಕೇಳ್ದು ಮದನನುರೆ ಬೆರಗಾಗಿ |
ಖತಿಯೇಕೆ ಜೀಯ ನಿಮ್ಮಡಿಗಳ ನಿರೂಪಮಂ |
ಪ್ರತಿಪಾಲಿಸದೆನಲ್ಲದಾನತಿಕ್ರಮಿಸಿ ಮಾಡಿದ ಕಜ್ಜಮೇನಿದರೊಳು ||
ಕ್ಷಿತಿಗೆ ಕೌತುಕವೆ ತಂದೆಯ ಮಾತಿಗಾಗಿ ರಘು |
ಪತಿ ವರ್ತಿಸನೆ ವಿಪಿನ  ವಾಸದೊಳ್ ಪತ್ರಸಂ |
ಮತಿವಿಡಿದು ವಿಷಯೆಗೆ ವಿವಾಹಮಂ ವಿರಚಿಸಿದೊಡಾಯ್ತೆನಗೆ ವನಮೆಂದನು ||೩೪||

ಗನ್ನಗತಕದ ಮಾತು ಸಾಕೆನ್ನ ಕಣ್ಣ ಮುಂ |
ದಿನ್ನಿರದೆ ಹೋಗೆಂದು ಮಂತ್ರಿ ಮಗನಂ ಬೈದು |
ಮುನ್ನ ತಾಂ ಬರೆಸಿ ಕಳುಹಿದ ಪತ್ರಮಂ ತರಿಸಿ ನೋಡಿಕೊಂಡದರೊಳಿರ್ದ ||
ಭಿನ್ನಿಸಿದ ಭಾವಾರ್ಥಮಂ ತಿಳಿದು ತಪ್ಪಿಲ್ಲ |
ವೆನ್ನ ತನಯನೊಳಿನ್ನು ಲೋಕದೊಳ್ ವಿಧಿಲಿಖಿತ |
ಮನ್ನಿವಾರಿಪರುಂಟೆ ಶಿವಾಶಿವಾ ಪೊಸತೆಂದು  ಬಿಸುಸುಯ್ದು ಬೆರಗಾದನು ||೩೫||

ವಿಷವ ಮೋಹಿಸುವಂತೆ ಕೊಡುವುದೆನಲೀತಂಗೆ |
ವಿಷಯೆ ಮೋಹಿಸುವಂತೆ ಕೊಡುವುದೆಂಬೀ ಲೇಖ |
ವಿಷಯವಿದು ವಿಧಿಕೃತವೋ ತನ್ನ ಮೋಸವೊ ಬರೆದವನ ಮರೆಹೊ ಶಶಿಹಾಸನ ||
ಮೈಷೆಯೊ ಮದನನ ಮೇಲೆ ತಪ್ಪಿಲ್ಲ ಮೊದಲೆನಗೆ |
ಋಷಿಗಳಾಡಿದ ಮಾತು ಪುಸಿಯದೆಂದಾ ಮಂತ್ರಿ |
ವಿಷಮಬುದ್ಧಿಯೊಳೊಂದುಪಾಯಮಂ ಮನದೊಳಗೆ ನೆನೆದು ಚಿಂತಿಸುತಿರ್ದನು || ೩೬||

ವಿಧುಹಾಸನಂ ಪಲ ವುಪಾಯದಿಂದೀಗ ನಾಂ |
ವಧಿಸದಿರ್ದೊಡೆ ತನ್ನ ಸಂತತಿಗೆ ಧರೆಯನಾ |
ಳ್ವಧಿಕ ಸಂಪದಮಾಗದದರಿಂದೆ ಕುಲಘಾತಕಗೆ ಮದುವೆಯಾದ ವಿಷಯೆ ||
ವಿಧವೆಯಾಗಿರಲೆಂದು ಹೃದಯದೊಳ್ ನಿಶ್ಚೈಸಿ |
ಮಧುರೋಕ್ತಿಯಿಂದೆ ಮದುಮಕ್ಕಳಂ ಮನ್ನಿಸಿ ವಿ |
ವಿಧ ವೈಭವಂಗಳಂ ನಡೆಸಿ ಜಾಮಾತನಂ ಮಂತ್ರಿ ಕರೆದಿಂತೆಂದನು ||೩೭||

ವೀರ ಬಾರೈ ಚಂದ್ರಹಾಸ ನೀ ನಿನ್ನೆಗಂ |
ದೂರಮಾಗಿರ್ದೆ ನಮಗಿನ್ನಳಿಯನಾದ ಬಳಿ ||
ಕೂರ ಹೊರ ಬನದೊಳಿಹ ಚಂಡಿಕಾಲಯಕೆ ಮದುವೆಯ ನಾಲ್ಕನೆಯ ದಿನದೊಳು ||
ನೀರಜಸಖಾಸ್ತ ಸಮಯದೊಳೊರ್ವನೇ ಪೋಗಿ |
ಗೌರಿಯಂ ಪೂಜಿಸಿ ಬಹುದು ನಮ್ಮ ವಂಶದಾ |
ಚಾರಮಿದು ವರನಾದವಂಗೆ ನೀನಿಂದಿದಂ ಮಾಡೆಂದು ನೇಮಿಸಿದನು ||೩೮||

ಲೇಸಾದುದೆಂದು ಮಾವನ ಮಾತಿಗೊಪ್ಪಿ ಶಶಿ |
ಹಾಸಂ ಪ್ರಸೂನ ಗಂಧಾಕ್ಷತೆಗಳಂ ತರಿಸ |
ಲಾ ಸಚಿವನತಿ ಗೂಢದಿಂದೆ ಚಂಡಾಲರಂ ಕರೆಸಿ ನೀವಂದಿನಂತೆ ||
ಮೋಸದಿಂ ಬಿಟ್ಟು  ಬಾರದೆ ಚಂಡಿಕಾಲಯಕೆ |
ನೇಸರಂಬುಧಿಗಿಳಿಯರ್ಚನೆಗೆ ಬಹನೋರ್ವ |
ನೋಸರಿಸದಡಗಿಕೊಂಡಿರ್ದಾತನಂ ಕೊಲ್ವುದೆಂದು ಬೆಸಸಿದನವರ್ಗೆ ||೩೯||

ವಿಜಯ ಕೇಳಾ ಸಮಯದೊಳ್ ಕುಂತಳೇಳ್ವರಂ |
ನಿಜ ಶರೀರಚ್ಛಾಯೆ ತಲೆಯಿಲ್ಲದಿರೆ ಕಂಡು |
ದ್ವಿಜ ಶಿರೋಮಣಿ ಗಾಲವಂಗರಿಪಲಾತನಿದು ಮೃತಿಗೆ ಕಾರಣಮೆನಲ್ಕೆ ||
ರುಜೆಗೆ ಮೈಗೊಡಬಾರದೆಂದು ನಿರ್ಮೋಕಮಂ |
ಭುಜಗಪತಿ ಬಿಡುವಂತೆ ಸಕಲ ಸೌಭಾಗ್ಯಮಂ |
ತ್ಯಜಿಸಿ ನಿರುಪಮ ಯೋಗಸಿದ್ಧಿಯಂ ಪಡೆಯೆ ವನವಾಸಕುದ್ಯೋಗಿಸಿದನು ||೪೦||

ಗಾಲವನ  ಪದಕೆರಗಿ ಕೈಮುಗಿದು ನಿಂದು ಭೂ |
ಪಾಲಕಂ ತನಗಿನ್ನು ಸಾಕು ರಾಜ್ಯದ ಚಿಂತೆ |
ಕಾಲಮಂ ಸಾಧಿಸುವೆನತುಲ ಯೋಗದೊಳೆನಗೆ ಸುತರಿಲ್ಲ ಧರೆಯನಾರ್ಗೆ ||
ಬಾಲೆ ಚಂಪಕಮಾಲಿನಿಯನಾರ್ಗೆ ಕುಡುವೆಂ ವಿ |
ಶಾಲಮತಿ ಬೆಸಸೆಂದು ಬೇಡಿಕೊಳೆ ಲಕ್ಷಣ ಸು |
ಶೀಲನಹ ಚಂದ್ರಹಾಸಂಗೆ ಮೇದಿನಿ ಸಹಿತ ಮಗಳನಿತ್ತಪುದೆಂದನು ||೪೧||

ಎಂದೊಡರಸಂ ಗಾಲವನ ಬುದ್ಧಿಯಂ ಕೇಳ್ದು |
ತಂದೆ ಮಾಡುವ ರಾಜಕಾರ್ಯಮಂ ನಿರ್ವಹಿಸು |
ತಂದು ಬಾಗಿಲೊಳಿರ್ದ ಮದನನಂ ಕರಸಿ ಕೈವಿಡಿದು ಮೆಲ್ಲನೆ ಕಿವಿಯೊಳು ||
ಮುಂದೆ ನಮಗುರ್ವ ಕೆಲಸದ ಪೊರಿಗೆಯುಂಟು ನೀ |
ನಿಂದುಹಾಸನನಿಲ್ಲಿಗೀಗಳೊಡಗೊಂಡು ಬಾ |
ಸಂದೇಹಿಸದೆ ಪೋಗೆನಲ್ಕೆ ಭೂಪಾಲನಂ ಬೀಳ್ಕೊಂಡು ಪೊರಮಟ್ಟನು ||೪೨||

ಉತ್ತಮ ಹಯಾರೂಢನಾಗಿ ಮದನಂ ಜವದೊ |
ಳಿತ್ತಣಿಂದೈದೆ ರವಿ ಪಶ್ಚಿಮಾಂಬುಧಿಗಿಳಿವ |
ಪೊತ್ತು ಪೊಂದಳಿಗೆಯೊಳ್ ಪುಷ್ಪ ಫಲ ತಾಂಬೂಲ ಗಂಧಾಕ್ಷತೆಗಳನಿರಿಸಿ ||
ಎತ್ತಿಕೊಂಡತ್ತಣಿಂ ಬಹ ಚಂದ್ರಹಾಸನ ನಿ |
ದೆತ್ತಪೋದಪೆಯೆಂದು  ಬೆಸಗೊಳಲ್ ತವ ಪಿತಂ |
ತೆತ್ತ ಸುವ್ರತಮೆನಲ್ ಚಂಡಿಕಾ ಪೂಜೆಯಂ ಮಾಡಿ ಬಂದಪೆನೆಂದನು ||೪೩||

ತಟ್ಟನೆ ತುರಂಗಮವನಿಳಿದಿಳೆಗೆ ಮತ್ಪಿತನ |
ಕಟ್ಟಳೆಯ ಚಂಡಿಕಾ ಪೂಜೆಗಾಂ ಪೋದಪೆಂ |
ನೆಟ್ಟನೆ ಮಹೀಶ್ವರಂ ಪಿರಿದು ಕಜ್ಜಕೆ ನಿನ್ನೊಡಗೊಂಡು ಬಾಯೆನಲ್ಕೆ ||
ಕಟ್ಟವಸರಕೆ ಬಂದನೆಂದರ್ಚನಾ ದ್ರವ್ಯ |
ಮಿಟ್ಟ ಪೊಂದಳಿಗೆಯಂ ತೆಗೆದುಕೊಂಡಶ್ವಮಂ |
ಕೊಟ್ಟಾತನಂ ಕಳುಹಿ ಪೊರಮಟ್ಟನೇಕಾಕಿಯಾಗಿ ಮದನಂ ಪೊಳಲನು ||೪೪||

ತನ್ನ ಪಿತನಾಜ್ಞೆಯಮ ನಡೆಸುವ ಕುಲವ್ರತದ |
ನನ್ನಿ ಶಶಿಹಾಸಂಗೆ  ಭಂಗಮಾದಪುದೆಂದು |
ಮನ್ನಿಸಿ ನೆರೆದ ಸಕಲ ಸೇವಕರನೆಲ್ಲರಂ ಕಳುಹಿ ತಾನೊರ್ವನಾಗಿ ||
ಉನ್ನತ ದ್ರುಮಷಂಡ ಮಂಡಿತದ ಬನದೊಳ್ ಪ್ರ |
ಸನ್ನೆಯಾಗಿಹ ಚಂಡಿಕಾಲಯಕೆ ಬರುತಿರ್ದ |
ನನ್ನೆಗಂ ಕರತಳದ ಗಂಧಪುಷ್ಪದ ಪಾತ್ರೆಯೋಸರಿಸಿ ಬಿದ್ದುದಿಳೆಗೆ ||೪೫||

ಚೀರುತೆ ಪೊಣರ್ದುವು ಬಿಡಾಲಗಳ್ ಪಕ್ಷಿಗಳ್ |
ಕಾರಿದುವು ರುಧಿರಮಂ ಕೂಗಿದುವು ಗೂಗೆಗಳ್ |
ಸಾರುತಿಹ ದುರ್ನಿಮಿತ್ತಂಗಳಂ ಕಂಡವಂ ವ್ರತ ಭಂಗಮಪ್ಪುದೆಂದು ||
ವಿರಿ ನಡೆಯುತ ಮನದೊಳಿದರಿಂದೆ ಭೀತಿಗಳ್ |
ತೋರದಿರವವನಿಯೊಳ್ ಚಂದ್ರಹಾಸಂಗೆನುತೆ |
ಮೂರಂಬಕದೊಳೆಸೆವ ದೇವನರಸಿಯ  ಭವನಕಾ ಮದನನೈತಂದನು ||೪೬||

ಖಳರಂತರಂಗ ಪ್ರವೇಶದ ವಿವೇಕಮಂ |
ಬಳಸಿದರಿಷಡ್ವರ್ಗಮೊತ್ತರಿಸಿ ಮುರಿವಂತೆ |
ಪೊಲಬರಿಯದೊಳಪುಗುವ ಮದನನಂ ಮಂತ್ರಿ ಕಳುಹಿದೊಡಲ್ಲಿ  ಬಂದಡಗಿದ ||
ಕೊಲೆಗಡಿಗ ಚಂಡಾಲರುಗಿದ ಕೈದುಗಳಿಂದೆ |
ಕೆಲಬಲದೊಳಿರ್ದು ಪೊಯ್ದಿರಿದು ಕೆಡಹಿದೊಡೆ ಭೂ |
ತಳಕೆ ಬೀಳುತ್ತವಂ ಮಾಧವ ಸ್ಮರಣಿಯಿಂದಸುದೊರೆದನಾಕ್ಷಣದೊಳು ||೪೭||

ಅವಗಡಿಸಿ ಮದನನಂ ಘಾತುಕರ್ ಚಂಡಿಕಾ |
ಭವನದೊಳ್ ಕೊಂಡು ನಿಲ್ಲದೆ ಪೋದರಿತ್ತಲು |
ತ್ಸವದಿಂದೆ ಚಂದ್ರಹಾಸಂ ಕುಂತಳೇಂದ್ರನಂ ಕಾಣಲಾ ನೃಪನವಂಗೆ ||
ಅವನಿಯಂ ಕೊಟ್ಟರಸುಪಟ್ಟವಂ ಕಟ್ಟಿ ಗಾ |
ಲವನ ಮತದಿಂದೆ ಗಾಂಧರ್ವ ವೈವಾಹದಿಂ |
ಕುವರಿ ಚಂಪಕಮಾಲಿನಿಯನಿತ್ತು ಸತ್ಕರಿಸಿ ಬನಕೆ ತಾಂ ಪೊರಮಟ್ಟನು ||೪೮||

ಬಾಧಿಸುವ ಸುಖದುಃಖದೊಡಲೆನಿಪ ಸಂಸಾರ |
ಸಾಧನವನೆಲ್ಲಮಂ ತೊರೆದು ಸಮ್ಯಗ್ ಜ್ಞಾನ |
ಬೋಧಿತದ ಯೋಗಮಂ ಸತಿ ಸಹಿತ ಗಾಲವನನುಜ್ಞೆಯಿಂದೆ ||
ಗೋಧೂಳಿಲಗ್ನದೊಳ್ ಪೊರಮಟ್ಟನಾ ಕುಂತ |
ಳಾಧಿಪನರಣ್ಯವಾಸಕೆ ಬಳಿಕ ಚಂದ್ರಹಾ |
ಸಾಧಿನವಾಯ್ತುವನ ಸಂಪದಂ ಪುರುಷಸ್ಯಭಾಗ್ಯಮೆಂಬುದು ನಿಜಮೆನೆ ||೪೯||

ಪಟ್ಟದರಸಾಗಲ್ಕೆ ಚಂದ್ರಹಾಸಂ ಬಳಿಕ |
ಪಟ್ಟಣದ ಜನಮರಿಯಲೆಂದು ಸಿಂಗರಿಸಿ ತೋ |
ರ್ಪಟ್ಟ ಗಜಮಸ್ತಕದಮೇಲೆ ನೃಪಸುತೆಸಹಿತ  ಪೊರಮಟ್ಟನುತ್ಸವದೊಳು ||
ದಟ್ಟಿಸಿದ ವಾದ್ಯರವ ಮೊದರಿತೀ ವಾರ್ತೆ ತಿವಿ |
ದಟ್ಟಿದೊಡೆ ದುಷ್ಟಬುದ್ಧಿಗೆ ಮತ್ತೆ  ಭೀತಿ ಹೊ |
ಯ್ದಟ್ಟಿತೇನೆಂಬೆನದು ಪೊಸತಲಾ ದೈವಕೃತಮೆಂದು ಸೈವೆರಗಾದನು ||೫೦||

ಗಾಲವನ ಮತದೊಳೆನ್ನ ಕರೆಸದಿಂದು  ಭೂ |
ಪಾಲಂ ಕುಳಿಂದತನಯಂಗಿಳೆಯನೊಪ್ಪಿಸಿ ವ |
ನಾಲಯಕೆ ತೆರಳಿದನೆ ಮದನನಿದ್ದೆಗೈದನೆಂದು ಪಲ್ಮೊರೆದು ಮಗನ ||
ಮೇಲೆ ಕೋಪಿಸುತಿರ್ದನನ್ನೆಗಂ ಭ್ರಮರಾರಿ |
ಮಾಲಿನಿವೆರಸಿ ಮಾವನಂ ಕಾಣಲೆಂದು ಶುಂ |
ಡಾಲ ಮಸ್ತಕದಿಂದಮಿಳಿತಂದ ಶಶಿಹಾಸನೆರಗಿದಂ ಸಚಿವನಡಿಗೆ ||೫೧||

ಕಳಿವರಿವ ಕೋಪದಿಂ ಮಂತ್ರಿ ವಂಶಾಚಾರ |
ಮುಳಿಯಲಾಗದು ಚಂಡಿಕಾರ್ಚನೆಗೆ ನಡೆಯೆಂದು |
ಕಳುಹಿದೊಡೆ ನೀಂ ಮಾಡಿದುಜ್ಜುಗಮಿದೇನೆಂದು ಕೇಳ್ದೊಡಾ ಶಶಿಹಾಸನು ||
ಅಳವಡಿಸಿಕೊಂಡು ನಾಂ  ಪೋಗುತಿರೆ ನಡುವೆ ಕುಂ |
ತಳ ರಾಜನರಮನೆಗೆ ತನಗವಸರವನಿತ್ತು |
ತಳರ್ದನೊರ್ವನೆ ನಿನ್ನ ಮಗನಂಬಿಕಾ ಪೊಜೆಗಿಂತಾಯ್ತು ಬಳಿಕೆಂದನು ||೪೨||

ಹಮ್ಮೈಸಿದಂ ದುಷ್ಟಬುದ್ಧಿ ನಯದೊಳಗಳಿಯ |
ನಮ್ಮನೆಗೆ ಬೀಳ್ಕೊಟ್ಟನರಿದರಿದು ಪರಹಿಂಸೆ |
ಯಮ್ಮಾಡಿ ಮಾನವಂ ಬಾಳ್ದಪನೆ ದೀಪಮಂಕೆಡಿಸುವ ಪತಂಗದಂತೆ ||
ನಮ್ಮುಪಾಯವೆ ನಮಗಪಾಯಮಂ ತಂದುದೆಂ |
ದೊಮ್ಮೆ ನಿಜ ಸದನಮಂ ಪೊಕ್ಕಾರುಮರಿಯದವೊ |
ಲುಮ್ಮಳಿಸಿ ಶೋಕದಿಂ ಪೊರಮಟ್ಟನೇರಿಳಿದು ಕೋಟೆಯಂ ಕತ್ತಲೆಯೊಳು ||೫೩||

ವಿಂಟುವಗ್ಗದ ಶೋದದಿಂದಿರದೆ ಪೊರಮಟ್ಟು |
ನಾಂಡುವೊತ್ತುವ ಮುಳ್ಳುಕಲ್ಗಳಂ ಬಗೆಗೊಳದೆ |
ದೀಂಟುಗುಳಿಗಳ ನರಿಯದೇಳುತ್ತ ತಲೆಗೆದರಿ ಬಾಯ್ವಿಡುತ್ತೆ ||
ಕೋಂಟೆಗಳ ನೇರಿಳಿದು ಪರಿಖೆಯ ಜಲಂಗಳಂ |
ದಾಂಟಿ ಕತ್ತಲೆಯೊಳೊರ್ವನೆ ಮಂತ್ರಿ ಪೊಳಲಪೊರ |
ದೋಂಟಿದೆಡೆಯೊಳ್ ನೆಲಸಿದಂಬಿಕಾ  ಭವನಮಂ ಸಾರ್ದನದನೇವೇಳ್ವೆನು ||೫೪||

ಪರಿದ ಪೂಮಾಲೆಗಳ ಬಣ್ಣಗೂಳ್ಗಳ ಬಲಿಯ |
ಮೊರದ ಪಳಗೊಳ್ಳಿಗಳ ಭಸ್ಮದೊಡೆದೋಡುಗಳ |
ಮುರಿದ ಗೂಡಂಗಳ ಕಳಲ್ದಶಿಬಿಕೆಗಳ ಚಿತಿಯೊಳ್ ಬೇವ  ಕುಣಪಂಗಳ ||
ತುರುಗಿದೆಲುವಿನ ಜಂಬುಕಾವಳಿಯ ಗೂಗೆಗಳ |
ಬಿರುದನಿಯ ಭೂತ ಭೇತಾಳ ಸಂಕುಲದಡಗಿ |
ನರಕೆಗಳ ಸುಡುಗಾಡೊಳಾ ಮಂತ್ರಿ ಚಂಡಿಕಾಲಯದೆಡೆಗೆ ನಡೆತಂದನು ||೫೫||

ತಂಡ ತಂಡದ ಭೂತ ವಿತತಿಗಳ್ ತಲೆಗೆದರಿ |
ಕೊಂಡು ಪೆರ್ಮರುಳಂದೆ ಬಂದ ದುಷ್ಟಬುದ್ಧಿಯಂ |
ಕಂಡು ತಾವತಿಪಾತಕಂಗಳಂ ಮಾಡಿದ ಪಿಶಾಚರಗ್ಗಳೆಯರೆಮ್ಮ |
ಹಿಂಡೊಳೀವನವೊಲಾರುಮಿಲ್ಲಾವ ಪಾಪ ದು |
ದ್ದಂಡವೊ ಹಿರಣ್ಯಕಶಿಪುವಿನೆದೆಯನುರೆ ಬಗಿದ |
ಚಂಡದೈವದ ಪೆಸರನುಸಿರುವನ ದೆಸೆಗಲ್ಲದಳುಕನಿವನೆನುತಿರ್ದುವು ||೫೬||

ಪಾಕಶಾಸನ ತನಯ ಕೇಳ್ ಬಳಿಕ ಮಂತ್ರಿ ಸುತ |
ಶೋಕದಿಂದಲ್ಲಿಹ ಮರುಳ್ಗಳಂ ಕಾಣದವಿ |
ವೇಕದಿಂ ಬೇವ ಕುಣಪದ ಚಿತಿಯೊಳುರಿವ ಕಾಷ್ಟಂಗಳಂ ತೆಗೆದುಕೊಂಡು ||
ಆ ಕಾಳಿಕಾಲಯಕೆ ಬಂದದರ ಬೆಳಕಿನೊಳ್ |
ವ್ಯಾಕೀರ್ಣ ಕೇಶದ ನಿಮಿರ್ದ ಕೈಕಾಲುಗಳ |
ನೇಕಾಯುಧದ ಗಾಯದೊಡಲ ರುಧಿರದ ಪೊನಲ ಸುಕುಮಾರನಂ ಕಂಡನು ||೫೭||

ಉನ್ನಿಸಿದ ನಿಜ  ಮನೋರಥಮುಡಿದೊರಗಿದಂತೆ |
ತನ್ನ ಕುಲತರು ಮುರಿದು ಬಿದ್ದಂತೆ ಸೌಭಾಗ್ಯ |
ದುನ್ನತಪ್ರಾಸಾದಮೊರ್ಗುಡಿಸಿ ಕೆಡೆದಂತೆ ಮುರಿದ ವಿಸೆಗಳ ಮೊಗದ ||
ಬಿನ್ನಣದ ಬಿಟ್ಟಕಂಗಳ ಬಿಗಿದ ಪುರ್ಬುಗಳ |
ಕೆನ್ನೀರೊಳದ್ದ ಕೇಶದ ಶೋಣಿತಾಂಬರದ |
ಭಿನ್ನಮಾದವಯವದ ನಂದನಂ ಕಾತ್ಯಾಯಿನಿಯ ಮುಂದೆ ಮಡಿದಿರ್ದನು ||೫೮||

ಕಯ್ಯೊಳಿಹ ಕಾಷ್ಠಂಗಳಂ ಬಿಸುಟು ತನು ಭವನ |
ಮೆಯ್ಯ ಗಾಯಂಗಳಂ ತಡಹಿ ತಕ್ಕೈಸಿ ಮಗು |
ಳೊಯ್ಯನೊಯ್ಯನೆ ಕುಳ್ಳಿರಿಸಿ ಮೊಗಕೆ ಮೊಗವಿಟ್ಟು ಚುಂಬಿಸಿ ಕುಮಾರ ನಿನ್ನ |
ಅಯ್ಯನಾಂ ಬಂದೆನೇಳೈ ತಂದೆ ನಾಡ  ನಾ |
ರಯ್ಯಬೇಡವೆ ಕಂದ ಕುಂತಳಾಧಿಶನೇ |
ಗೆಯ್ಯ ಹೇಳಿದನೆನಗೆ ವಿವರಿಸದೆ ಸುಮ್ಮನಿರ್ದಪೆಯೆಂದೊರಲ್ದನವನು ||೫೯||

ಬಂದನಿದೆ ಶಶಿಹಾಸನನುಜ್ಞೆಯಂ ಕುಡು ವಿಪ್ರ |
ವೃಂದಮಂ ತಣಿಸು ಬಹುವಿಧದಿಂದೆ ನಾಂ ಬೈದೆ ||
ನೆಂದು ಮುನಿದಿರಬೇಡ ವೈಷ್ಣವದ್ರೋಹದಿಂದೆನಗಿಂತುಟಾಗದಿಹುದೆ ||
ಕಂದ ನೀ ನಚ್ಯುತಪರಾಯಣಂ ಶಿವ ಪೂಜ |
ಕಂ ದೇವಗುರುಧರಾಮ ರಸೇವಕಂ ಮೋಸ |
ದಿಂದಳಿವುದುಚಿತವೆ ಮದನ ತನ್ನ ಮರಿಯಾನೆ ಹಾ ಯೆಂದೊರಲ್ದನಂದು ||೬೦||

ಮಿತ್ರ ಪ್ರಿಯಂ ರಾಜತೋಷಿತಂ ಮಂಗಳ ಚ |
ರಿತ್ರಂ ಬುಧಾಶ್ರಯಂ ಗುರುಭಾವಿ ಕವಿನುತ ವಿ |
ಚಿತ್ರಗುಣಿ ಮಂದರನಿಭಂ ಭೋಗಿ ಸಂತತಂ ಧ್ವಜವಜ್ರಶುಭ ಚರಣನು ||
ಪುತ್ರ ನಿನಗಪ್ಪುದು ನವಗ್ರಹ ಸ್ಥಿತಿಗಳ್ ಪ |
ರಿತ್ರಾಣಮಂ ಮಾಡಿದವರಿಲ್ಲ ನಿನಗಾನೆ |
ಶತ್ರುವಾದೆಂ ಮಗನೆ ಹಾ ಯೆಂದು ಹಲುಬಿದಂ ಮಂತ್ರಿ ಶೋಕಾರ್ತನಾಗಿ ||೬೧||

ಕಂಬನಿಗಳರುಣಾಂಬುವಂ ತೊಳೆಯೆ ಮುಂಡಾಡಿ |
ಪಂಬಲಸಿ ಹಲುಬಿದಂ ಮರುಗಿ ತನ್ನಿಂದಳಿದ |
ನೆಂಬಳಲ್‌ಮಿಗೆ ಮಂತ್ರಿ ಸೈರಿಸದೆ ಕೆಲ ಬಲದ ಕಂಬಂಗಳಂ ಪಾಯಲು ||
ಕುಂಬಳದ ಕಾಯಂತೆ ಚಿಪ್ಪಾಗಿ ನಿಜಮಸ್ತ |
ಕಂ ಬಿರಿದು ಬಿದ್ದನುರ್ವಿಗೆ ಪೋದುದಸುಕಾಯ |
ದಿಂ ಬಳಿಕ ನಂದಿದ ಸೊಡರ್ಗಳೆನೆ ಮೃತರಾಗಿ ಸುತತಾತರಿರುತಿರ್ದರು ||೬೨||

ಅರಿಯರಾರುಂ ಪುರದೊಳಿವರಲ್ಲಿ ಮಡಿದುದಂ |
ತುರುಗಿದ ತಮೋಂಧಮೊಯ್ಯನೆ ಜಾರಿತಳಿಕುಲದ |
ಸೆರೆಬಿಟ್ಟುದಂಬುಜದೊಳೊಡನೆ ತಲೆದೋರಿದಂ ತರುಣಿ ಮೂಡಣ ದೆಸೆಯೊಳು ||
ಪೊರಮಟ್ಟು ಚಂಡಿಕಾಲಯಕೆ ಪೊಸಪೊಗಳಂ |
ತಿರಿತಂದು ಪೂಜಿಸುವೊಡೊಳವುಗುವ ತಾಪಸಂ ||
ಬೆರೆತು ಬಿದ್ದಿಹ ತಂದೆಮಕ್ಕಳಂ ಕಂಡು ಹಮ್ಮೈಸಿ ವಿಸ್ಮತನಾದನು ||೬೩||

ಪಟ್ಟಣದೊಳಿರುಳೊಸಗೆ ಪಸರಿಸಿತು ರಾಜ್ಯಮಂ |
ಬಿಟ್ಟು ವನಕೈದಿದಂ ಕುಂತಳಾಧಿಶ್ವರಂ |
ಪಟ್ಟಮಾದುದು ಚಂದ್ರಹಾಸಂಗೆ ಸೂನು ಸಹಿತೀ ದುಷ್ಟಬುದ್ಧಿಗಿಲ್ಲಿ ||
ಕೆಟ್ಟೆಣಿಸಿದವರಾರೊ ಶಿವಶಿವಾದ್ಭುತಮೆನುತ |
ನೆಟ್ಟನೆ ನೃಪಾಲಯಕೆ ತಾಪಸಂ ಬಂದು ಮೊರೆ |
ಯಿಟ್ಟೊಡೆ ಕುಳಿಂದಜಂ ಕೇಳ್ದಿರದೆ ಪೊರಮಟ್ಟು ಕಾಲ್ನಡೆಯೊಳೈತಂದನು ||೬೪||

ಚಂಡಿಕಾಲಯಕಖಿಳ ಜನ ಸಹಿತ  ನಡೆತಂದು |
ದಿಂಡುಗೆಡೆದಿಹ  ಮಾವ ಮೈದುನರ ಹಾನಿಯಂ |
ಕಂಡು ಕಡುಶೋಕದಿಂದುರೆ ನೊಂದು ಚಂದ್ರಹಾಸಂ ದೇವಿಯಂ ನೋಡುತೆ ||
ಖಂಡಿಸಿದೆಲೌ ತನ್ನ ಭಾಗ್ಯಮಂ ತಪ್ಪಾವು |
ದಂಡಲೆದು ಪಡೆವೆ ನಿವರಸುಗಳಂ ವಿರಿದೊಡೆ |
ಪುಂಡರೀಕಾಂಬಕನ ಸಾಯುಜ್ಯ ಮೆನಗಾಗಲೆಂದು ನಿಶ್ಚಿತನಾದನು ||೬೫||

ರಭಸದಿಂದೈತಂದು ಗೋಳಿಡುವ ಬಂಧುಜನ |
ಕಭಯಮಂ ಕೊಟ್ಟು ನಿಶ್ಚಲನಾಗಿ ಶಶಿಹಾಸ |
ನಭವನರಸಿಯ ಮುಂದೆ ಚತುರಶ್ರದೊಳ್‌ಕುಂಡಮಂ ತೆಗೆಸಿ ಬಳಿಕದರೊಳು ||
ಆಭಿಶೋಭಿಪವೊಲಗ್ನಿಯಂ ಪ್ರತಿಷ್ಠಿಸಿ ವಿಪ್ರ |
ಸಭೆಸಹಿತ ಕುಳ್ಳಿರ್ದು ಬಲಿ ದೀಪ ಮುಂತಾದ |
ವಿಭವಂಗಳಂ ಮಾಡಿ ಘೃತ ಪಾಯಸಾಜ್ಯ ತಿಲ ಹೋಮಂಗಳಂ ಬೇಳ್ದನು ||೬೬||

ಬೆಚ್ಚಿದಂತೆಸೆವ ಪೀಠವನಿಳಿದು ರುದ್ರಾಣಿ |
ಚೆಚ್ಚರದೊಳೈತಂದು ಕೈಯ ಬಾಳಂ ಪಿಡಿದು |
ನಿಚ್ಚಟದ ಹರಿಭಕ್ತಿಗಾಂ ಪ್ರೀತಿಯಂ ತಳೆದೆನಾತ್ಮವಧೆ ಬೇಡ ನಿನಗೆ ||
ಪೆಚ್ಚಿದ ಕುಮಂತ್ರ ಪಾಪದೊಳಳದನೀ ಮಂತ್ರಿ |
ವೆಚ್ಚಿಸಿದನಸುವನಾತನ ಸುತಂ ನಿನಗಾಗಿ |
ಮೆಚ್ಚಿಸಿದೆ ನೀಂ ಮಗನೆ ಬಯಕೆಯಂ ಪೇಳೆರಡು ವರವ ನಿತ್ತಪೆನೆಂದಳು ||೬೮||

ದೇವಿಯ ಪದಾಂಬುಜದೊಳೆರಗಿ ಕೈಮುಗಿದು ನಿಂ |
ದಾವಾವ ಜನ್ಮ ಜನ್ಮಾಂತರದೊಳೆನಗೆ ರಾ |
ಜೀವನಾಭವ ಭಕ್ತಿ ದೊರೆಕೊಳಲಿದೊಂದು ಮಡಿದಿಹ ಮಂತ್ರಿ ಮಂತ್ರಿಸುತರು ||
ಜೀವಿಸಲಿದೊಂದೀಗಳಿಂತೆರಡು ವರಮಂ ಕೃ |
ಪಾವಲೋಕನದೊಳಿತ್ತಪುದೆಂದು ಮತ್ತೆ ಚರ |
ಣಾವನತನಾಗಲ್ಕೆ ಪಿಡಿದೆತ್ತಿ ಕ್ಷತಮಡಗೆ ಮೈದೊಡವುತಿಂತೆಂದಳು ||೬೯||

ಜಗದೊಳಾರಚ್ಯತ ಪ್ರೀತಿಯಂ ಮಾಡುವರ್ |
ಮಗನೆ ತನಗಿಷ್ಠರವರಾ ಬಾಲ್ಯದಿಂದೆ ನೀ |
ನಗಧರಧಾನಪರನಾಗಿರ್ಪೆ ನಿನ್ನ ಚರಿತವನೊದಿ ಕೇಳ್ವವರ್ಗೆ ||
ಮಿಗೆ ವಧಿಪುದುಮುಕುಂದಾಭಿರತಿ ಮುಂದೆ ಕಲಿ |
ಯುಗದೊಳೆನ್ನಾಜ್ಞೆಯಿದು ಹರಿಭಕ್ತಿ ನಿನಗೆ ಬೆಳ |
ವಿಗೆಯಾಗದಿರ್ದಪುದೆ ನಿನ್ನವಾಂಛಿತಕಿನ್ನು ತಡೆಯುಂಟೆ ಹೇಳೆಂದಳು ||೭೦||

ಎಂದು ಕಾರುಣ್ಯದಿಂ ತಾನೊಮ್ಮೆ ಕಣ್ಮುಚ್ಚಿ |
ನಿಂದು ಜಾನಿಸಲಾಗ ತಲೆದೋರಿ ತಾಕ್ಷಣದೊ |
ಳೊಂದು ವೈಷ್ಣವಶಕ್ತಿ ಬಳಸಿದಾಯಧದಿಂದದಂ ಪರಸಿ  ಕೊಟ್ಟು ಬಳಿಕ ||
ಇಂದುಹಾಸನ ಮಸ್ತಕದ ಮೇಲೆ ನಿಜ ಕರವ |
ನೊಂದಿಸಿ ತದೀಯ ಮಂತ್ರೋಪದೇಶಂಗೈದ |
ಳಂದು ಕರ್ಣದೊಳಾನತಪ್ರೀತೆ ಗಿರಿಜಾತೆ ವಿಖ್ಯಾತೆ ಲೋಕಮಾತೆ ||೭೧||

ತಾಯೆ ಪಾರ್ವತಿ ಪರಮ ಕಲ್ಯಾಣಿ ಶಂಕರ |
ಪ್ರೀಯೆ ಸರ್ವೇಶ್ವರಿ ಜಗನ್ಮಾತೆ ಸನ್ನುತ |
ಚ್ಛಾಯೆ ಸಾವಿತ್ರಿ ಶಾರದೆ ಸಕಲ ಶಕ್ತಿರೂಪಿಣಿ ಕಾಳಿ ಕಾತ್ಯಾಯನಿ ||
ಶ್ರೀಯೆ ವೈಷ್ಣವಿ ವರದೆ ಚಂಡಿಚಾಮುಂಡಿ ನಿರ |
ಪಾಯೆ ನಿಗಮಾಗಮಾರ್ಚಿತೆ ಮಂತ್ರಮಯಿ ಮಹಾ |
ಮಾಯೆ ರಕ್ಷಿಪುದೆಂದು ಕೈಮುಗಿದು ಚಂದ್ರಹಾಸಂ ಬೇಡಿಕೊಳುತಿರ್ದನು ||೭೨||

ಹರಿಯ ವಕ್ಷಸ್ಥಳವನಜನ ವದನಾಬ್ಜಮಂ |
ಗಿರಿಶನ ಕಳೇಬರಾರ್ಧವನಿಂಬುಗೊಂಡೆಸೆವ |
ಪರಮ ಕಲ್ಯಾಣಿ ಕಾಲತ್ರಯದುಪಾಸ್ತಿಗಧಿದೇವಿ ಗಾಯಿತ್ರಿ ವರದೆ ||
ಗರುಡವಾಹನೆ ಹಂಸಗಮನೆ ವೃಷಭಾರೂಢೆ |
ನಿರುಪಮ ಫಲಪ್ರದಾಯಿನಿ ಪುಣ್ಯಮಯಿ ಸಕಲ |
ದುರಿತಹರೆ ತನ್ನನುದ್ಧರಿಸೆಂದು ಚಂದ್ರಹಾಸಂ ಬೇಡಿಕೊಳುತಿರ್ದನು ||೭೩||

ಮೊಳಗಿದುವು ದೇವದುಂದುಭಿಗಳಂತಾಗ ಪೂ |
ಮಳೆಕರೆದುದಭ್ರದೊಳ್ ಕೊಂಡಾಡಿತಮರತತಿ |
ಬಳಿಕ ಶಾಂಭವಿ ಮಾಯವಾದಳಸುಪಸರಿಸಿತು ಮದನ ಮಂತ್ರಿಗಳೊಡಲೊಳು ||
ಬಲ ರೂಪ ಕಾಂತಿಗಳ್ ಮುನ್ನಿನಂದದೊಳೆಸೆಯೆ |
ಮಲಗಿದವರೇಳ್ವಂತೆ ಕಣ್ದೆರೆದು ಕುಳ್ಳಿರ್ದ |
ರೊಲವಿನಿಂ ಚಂದ್ರಹಾಸಂ ಮಾವನಡಿಗೆ ಮಣಿದಪ್ಪಿದಂ ಮೈದುನನನು ||೭೪||

ಭೂವಲಯಕಿದು ಪೊಸತು ಮರಣಮಾದೊಡೆ ಮತ್ತೆ ||
ಜೀವಮಂ ಬಸಿದವರುಂಟೆ ನಿನ್ನವೊಲೆಂದು |
ಕೈವಾರಿಸುವ ನಿಖಿಳಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು ||

ಕಾವರಾರ್ ಕೊಲ್ವರಾರಳಿವರಾರುಳಿವರಾರ್ |
ಭಾವಿಪೊಡೆ ವಿಷ್ಣು ಮಾಯಾಮಯ ಮಿದೆಂದರಿದು |
ನೀವೆಲ್ಲರುಂ ಕೃಷ್ಣ ಭಜನೆಗೈದಪುದೆಂದು ಸಾರಿದಂ ಬೇಡಿಕೊಳುತೆ ||೭೫||

ಇಮ್ಮಡಿಸಿತುತ್ಸುವಂ ಬಳಿಕನಿಬರೆಲ್ಲರುಂ |
ಸುಮ್ಮಾನದಿಂದೆ ನಗರ ಪ್ರವೇಶಂಗೈದ |
ರುಮ್ಮಳಿಸುತಿರ್ದಂ ಕುಳಿಂದಕಂ ಪಾರ್ಥ ಕೇಳಾ ಚಂದನಾವತಿಯೊಳು ||
ಸಮ್ಮತದೊಳಾತನಂ ಕರೆಸಿಕೊಂಡಾರಾಜ್ಯ |
ಮಮ್ಮಹಾವಿಭವದಿಂ ವರಿಸಿದಂ ಚಂದ್ರಹಾ |
ಸಮ್ಮುದಾನ್ವಿತನಾಗಿ ವಿಷಯೆ ಚಂಪಕಮಾಲಿನಿಯರ ಸಂಭೋಗದಿಂದೆ ||೭೬||

ನಂದನಂ ಜನಿಸಿದಂ ಬಳಿಕ ವಿಷಯಾ ಗರ್ಭ |
ದಿಂದೆ ಮಕರಧ್ವಜಾಖ್ಯಂ ಕೂಡೆ ಸೌಭಾಗ್ಯ |
ದಿಂದೆ ಚಂಪಕಮಾಲಿನಿಯ ಬಸಿರೊಳುದಿಸಿದಂ ಪದ್ಮಾಕ್ಷನೆಂಬ ಸೂನು ||
ತಂದೆಗಿಮ್ಮಡಿ ಪರಾಕ್ರಮಿಗಳಾದರ್ ಧರೆಯೊ ||
ಳಿಂದುಹಾಸಂಗೆ ಸಮನಾದ ದೊರೆಯಿಲ್ಲಾದು |
ದಿಂದುವರೆಗಾತಂಗೆ ಮೂನ್ನೂರು ಬರಿಸಮಿರ್ದಪನೀಗ ವೃದ್ಧನಾಗಿ ||೭೭||

ಬುದ್ದಿಪೂರ್ವಕಮಿಲ್ಲದಿಹ ಬಾಲಕಂಗೆ ಪರಿ |
ಶುದ್ಧ ಸಾಲಗ್ರಾಮ ಶಿಲೆಯ ಸಂಸರ್ಗದಿಂ |
ದುದ್ಧತದ ಸಾಮ್ರಾಜ್ಯ ಪದವಿ ಕೈಸಾರ್ದುದೆನಲಿನ್ನು ಬೇಕೆಂದು ಬಯಸಿ ||
ಶ್ರದ್ಧೆಯಿಂ ಪ್ರತಿದಿನದೊಳರ್ಚಿಸುವ ನರನಾವ |
ಸಿದ್ಧಿಯಂ ಪಡೆದಪನೊ ತನಗದರ ಪುಣ್ಯದಭಿ |
ವೃದ್ಧಿಯಂ ಬಣ್ಣಿಸುವೊಡರಿದೆಂದು ಫಲುಗುಣಂಗಾ ನಾರದಂ ಪೇಳ್ದನು ||೭೮||

ಹರಿಯ ಸಾಲಗ್ರಾಮಶಿಲೆಯ ಮಹಿಮೆಗಳನಾ |
ದರದಿಂದೆ ವಿಸ್ತರಿಸಿ ಚಂದ್ರಹಾಸನ  ಪೂರ್ವ |
ಚರಿತಮಂ ಪೇಳ್ದು ವಂದನೆಗೊಂಡು ದೇವಿಮುನಿ ಸರಿದನಂಬರ ಪಥದೊಳು ||
ವರಭಾಗವತ ಶಿರೋಮಣಿಯ ದರ್ಶನದಿಂದೆ |
ಪರಮ ವೈಷ್ಣವ ಸಂಗತಿಯನಾಲಿಸಿದೆಂದು |
ಸುರನಗರದೆರೆಯ ಲಕ್ಷ್ಮೀಪತಿಯ ಮೈದುನಂ ಪರಿತೋಷಮಂ ತಾಳ್ದನು ||೭೯||