ವ್ಯವಸ್ಥೆಯೊಂದಿಗೆ ರಾಜಿ:

ಒಂದು ಕಾಲಘಟ್ಟದ ಕಟ್ಟಳೆಗಳು, ಮೌಲ್ಯಗಳು ಮತ್ತೊಂದು ಸಮಯಕ್ಕೆ ಸವಾಲೆನಿಸಿ ಬಿಡುವುದು ವಾಸ್ತವ. ತಟ್ಟನೆ ಈ ವಾಸ್ತವಕ್ಕೆ ಹೊಂದಿಕೊಳ್ಳುವದು ಮನುಷ್ಯರಿಗೆ ಸಾಧ್ಯವಾಗಲಿಕ್ಕಿಲ್ಲ. ಆದರೆ ಸಮಯ ಸರಿದಂತೆ ಕಟ್ಟಳೆಗಳನ್ನು ನಿರಾಕರಿಸದಿದ್ದರೆ, ಹಳಸಲು ಮೌಲ್ಯಗಳನ್ನು ಬದಲಿಸಿಕೊಳ್ಳದಿದ್ದರೆ ವರ್ತಮಾನಕ್ಕೆ ‘ಸಲ್ಲುವ’ ಬಗೆಯಿಂದ ವಂಚಿತಗೊಳ್ಳಬೇಕಾಗುತ್ತದೆ. ಈ ತರಹದ ಬಗೆ ತಳಮಳದ್ದು, ಅಂದರೆ ಅನಾಥ ಪ್ರಜ್ಞೆಯ ಸ್ಥಿತಿ. ಜೀವಂತವಿದ್ದೂ ನರಕದ ನೋವು ಉಣ್ಣಬೇಕಾದ ಸ್ಥಿತಿ. ಇದರಿಂದ ಪಾರಾಗುವುದೆಂದರೆ ಹೊಸ ಆಲೋಚನಾ ಕ್ರಮಕ್ಕೆ ಶುರುವಿಟ್ಟುಕೊಳ್ಳುವುದು. ಹೊಸ ಮೌಲ್ಯಗಳ ಹುಡುಕಾಟಕ್ಕೆ ತೀವ್ರವಾಗಿ ಯತ್ನಿಸುವುದು ತೀರ ಅಗತ್ಯ. ಅದನ್ನು ಮುಸ್ಲಿಮ್‌ ಸಮುದಾಯ ಉತ್ಸಾಹದಿಂದಲೇ ಒಪ್ಪಿಕೊಳ್ಳುವುದಕ್ಕೆ ಪುರೋಹಿತಶಾಹಿ ವರ್ಗ ಮತ್ತು ಅವರನ್ನು ಹಿಂಬಾಲಿಸುವ ಪಡೆ ‘ಗೋಡೆ’ ಯಾಗಿರುವುದು. ಮಹಿಳೆಯರ ವಿಷಯದಲ್ಲಂತೂ ಈ ಗೋಡೆ ಉಕ್ಕಿನಂತೆ ವರ್ತಿಸುತ್ತದೆ. ಪುರುಷನಿಂದ ಶೋಷಣೆಗೊಳಗಾದರೂ ಆಕೆ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿರಬೇಕು. ಇಲ್ಲವಾದರೆ ಧರ್ಮಶಾಹಿ ‘ಫತ್ವಾ’ ಅವಳ ವಿರುದ್ಧ ಜಾರಿಯಾಗಿಯೇ ಬಿಡುತ್ತದೆ.

ತನ್ನ ಮೇಲಾಗುವ ದಬ್ಬಾಳಿಕೆಗಳನ್ನು ಆಕೆ ಪ್ರತಿಭಟಿಸುವಂತಿಲ್ಲ. ತನ್ನನ್ನು ಸುತ್ತುವರಿದ ಸಮುದಾಯದ ಅನ್ಯಾಯಗಳನ್ನು ಪ್ರಶ್ನಿಸುವಂತಿಲ್ಲ. ವಿವಾಹ, ಗಂಡ, ಮಕ್ಕಳು. ಕುಟುಂಬ ಹೀಗೆ ನಾಲ್ಕು ಗೋಡೆಗಳ ಬಂದಿಖಾನೆ ಅಥವಾ ಕಪ್ಪು ಬುರ್ಕಾದೊಳಗೆ ಆಕೆ ನಿಟ್ಟುಸಿರಿನೊಂದಿಗೆ ಸುಟ್ಟುಕೊಳ್ಳಬೇಕು. ಇಲ್ಲವೆಂದರೆ ಫತ್ವಾ ನಿರ್ದಿಷ್ಟ ಪಡಿಸಿದ ಶಿಕ್ಷೆಯನ್ನು ಅನುಭವಿಸಬೇಕು. ದುರ್ಬಲ ಸ್ತ್ರೀಯರಂತೂ ತಮ್ಮ ‘ಹಣೆಯ ಬರಹ’ ವೆಂದು ವ್ಯವಸ್ಥೆಯೊಂದಿಗೆ ಸಂದಾನ ಮಾಡಿಕೊಳ್ಳುತ್ತಾರೆ. ಹೊಡಿದು- ಬಡಿದು ಮಾಡುವ, ಕುಡಿದು ಕಾಡುವ, ಗುಮಾನಿಗಳಿಂದ ಹಿಂಸಿಸುವ ಗಂಡಂದಿರು, ರಾಕ್ಷಸರಂತೆ ಪೀಡಿಸುವ ಅತ್ತೆ, ಮಾವ, ಮೈದುನ, ನಾದಿನಿಯರು, ನಿಯಮಗಳನ್ನು ಹೇರಿ ಹೆದರಿಸುವ ಸೈತಾನ್‌ ಮುಖಂಡರು, ಕೊಟ್ಟ ಹೆಣ್ಣು ಕುಲದ ಹೊರಗೆಂದು ಆಶ್ರಯ ನೀಡದ ಹೆತ್ತವರು, ಇವರೆಲ್ಲರ ನಡುವೆ ಆಕೆ ಮಾನಸಿಕ ಆಘಾತಗಳನ್ನು ಅನುಭವಿಸದೆ ವಿಧಿಯಿಲ್ಲ. ಇಂಥ ಸಂದರ್ಭಗಳಲ್ಲಿ ಆಕೆಯೇ ಸೋಲಬೇಕು. ಷಾಬಾನು, ಇಮ್ರಾನಾ, ಗುಡಿಯಾ, ನಜಮಾ ಭಾಂಗಿಯಂಥ ಸ್ತ್ರೀಯರ ಪ್ರಕರಣಗಳೇ ಇದಕ್ಕೆ ಜೀವಂತ ಸಾಕ್ಷಿ.

ಪ್ರತಿರೋಧದ ಧ್ವನಿಗಳು:

ಆಧುನಿಕತೆಯ ಪರಿಣಾಮ ಮುಸ್ಲಿಮ್‌ ಸಮಾಜದ ಮೇಲೂ ಆಗಿದೆ. ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪುರುಷನಿಗೆ ಸಹಾಯ ಮಾಡುವ ಉದ್ದೇಶದೊಂದಿಗೆ ಮನೆಯಿಂದ ಹೊರ ಜಗತ್ತಿಗೆ ಕಾಲಿರಿಸಿದ, ವಿಸ್ಮೃತಿಗೊಳಗಾದ ಈ ಸಮುದಾಯದ ಸ್ತ್ರೀಯರು ತಮ್ಮ ಅಸ್ತಿತ್ವದ ಎಳೆಗಳನ್ನು ಗಮನಿಸತೊಡಗಿದ್ದಾರೆ. ಶಿಕ್ಷಿತ ಮಹಿಳೆಯರು ಜಾಗೃತಗೊಂಡು ತಮ್ಮ ಬದುಕನ್ನು ಕುರಿತು ಸ್ವತಂತ್ರ ಚಿಂತನೆ ನಡೆಸುತ್ತಿದ್ದಾರೆ. ತಮ್ಮನ್ನು ಸುತ್ತುವರಿದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ದಿಟ್ಟತನವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ.

ಈ ಸಮುದಾಯದ ಪ್ರಜ್ಞಾವಂತ ಪುರುಷರು ಅಂಥ ಅವಕಾಶಗಳನ್ನು ಅವರಿಗೆ ಕಲ್ಪಿಸಿಕೊಡುತ್ತಿದ್ದಾರೆ. ಆಧುನಿಕತೆ ಎನ್ನುವುದು ಒಂದು ಭ್ರಮಾತ್ಮಕ ತಿರುವುದು. ಅದು ಪಾಪದ ಕ್ರಿಯೆ ಎಂಬುದು ಧರ್ಮಾಂಧರ ಹುಯಿಲು. ಹೆಣ್ಣಿಗೆ ಸ್ವಾತಂತ್ರ್ಯ, ಹೆಚ್ಚಿನ ಶಿಕ್ಷಣ, ಉದ್ಯೋಗದ ಆದ್ಯತೆ ಸಲ್ಲದು ಎಂಬ ಅವರ ಅಸಹನೀಹ ಬೊಬ್ಬಾಟಕ್ಕೆ ಬೇರುಗಳಿಲ್ಲ. ಆಧುನಿಕತೆ ಸೈತಾನನ ಹೊಸ ಅವತಾರ. ಅದು ಹೆಣ್ಣನ್ನು ಮತ್ತು ಅವಳ ಅಸ್ತಿತ್ವಕ್ಕೆ ಮಾನ್ಯತೆ ನೀಡುವ ಪುರುಷನನ್ನು ನರಕಕ್ಕೆ ಕಳಿಸುತ್ತದೆ ಎಂದು ಅವರು ದಿಗಿಲು ಹುಟ್ಟಿಸುತ್ತಾರೆ. ಅಂಥ ‘ಜಂಗು’ ಮನಸ್ಸುಗಳ ವಿರುದ್ಧ ಸ್ತ್ರೀಯರು ಧ್ವನಿಯೆತ್ತುತ್ತಿದ್ದಾರೆ. ಧರ್ಮದ ಸೂಕ್ಷಗಳನ್ನು ಗ್ರಹಿಸಿಕೊಂಡು, ಪುರೋಹಿತಶಾಹಿಗಳು ರೂಪಿಸಿದ ಸ್ವಾರ್ಥಪರ ನಿಯಮಗಳನ್ನು ನ್ಯಾಯವಾಗಿಯೇ ಪ್ರತಿರೋಧಿಸುತ್ತಿದ್ದಾರೆ. ಹೀಗೆಂದು ಅವರು ‘ಸ್ವಚ್ಛಂದತೆ’ಯನ್ನು ಇಷ್ಟಪಡುವುದಿಲ್ಲ. ತಮ್ಮ ಮನೆಗಳನ್ನು ಧಿಕ್ಕರಿಸುವುದಿಲ್ಲ. ಗಂಡ ಮಕ್ಕಳು, ಕುಟುಂಬವನ್ನು ಉಪೇಕ್ಷಿಸುವುದಿಲ್ಲ. ತಮ್ಮ ಮನೆಗಳನ್ನು ಧಿಕ್ಕಿರಿಸುವುದಿಲ್ಲ. ಗಂಡ ಮಕ್ಕಳು, ಕುಟುಟಂಬವನ್ನು ಉಪೇಕ್ಷಿಸುವುದಿಲ್ಲ. ಈ ಪರಿಸರದಲ್ಲಿಯೇ ಇದ್ದು ತಮ್ಮ ಇರುವಿಕೆಯನ್ನು ವಿರೋಧಿಗಳಿಗೆ, ವಿನಾಕಾರಣ ದ್ವೇಷಿಸುವವರಿಗೆ ಮನಗಾಣಿಸಿ ಕೊಡುವ ಧಾವಂತ ಅವರದಾಗಿದೆ. ಈಗವರು ‘ಅಳುಮುಂಜಿ’ ಪಾತ್ರಗಳಿಂದ ಬಿಡುಗಡೆ ಪಡೆದುಕೊಂಡಿದ್ದಾರೆ. ತಮಗೆ ನ್ಯಾಯೋಚಿತವಾಗಿ ಸಲ್ಲಬೇಕಾಗಿರುವ ಹಕ್ಕುಗಳನ್ನು ಮಂಡಿಸುತ್ತಿದ್ದಾರೆ. ಸ್ತ್ರೀವಾದಿ ಚಿಂತನೆಗಳು ಅವಳನ್ನು ಕತ್ತಲೆಯ ಗೂಡಿನಿಂದ ಹೊರಗೆ ತಂದು ಬೆಳಕಲ್ಲಿ ಮೀಯಿಸತೊಡಗಿವೆ. “ಸಾಮಾಜಿಕ ನ್ಯಾಯಕ್ಕಾಗಿ ಮುಸ್ಲಿಮ ಸ್ತ್ರೀಯರು ಧ್ವನಿಯೆತ್ತಲು ಆರಂಭಿಸಿದ್ದು ಒಂದು ಐತಿಹಾಸಿಕ ಹೆಜ್ಜೆ’ ಎನ್ನುತ್ತಾರೆ ಡಾ. ಸಬಿಹಾ.

ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಪ್ರಸ್ತುತ ಸಂದರ್ಭದಲ್ಲಿ ಆಕೆಯ ಆಲೋಚನೆಗಳು ಇನ್ನಷ್ಟು ಪ್ರಖರಗೊಳ್ಳುತ್ತಿವೆ. ಅಕ್ಷರ ಧ್ಯಾನಿಸುವ, ತಂತ್ರಜ್ಞಾನಗಳಿಸುವ ತೀವ್ರತೆ, ನೌಕರಿಯ ಆಕಾಂಕ್ಷೆ ಇತರೆ ಜನಾಂಗದ ಮಹಿಳೆರಂತೆ ವಧಿರ್ಸತ್ತಿದೆ. ಷರೀಫಾ ಅವರು ಹೇಳುವ ಮಾತು ವಾಸ್ತವ ಅನಿಸುತ್ತದೆ. ‘ಜಾಗತೀಕರಣ ಪ್ರಕ್ರಿಯೆಯ ನಂತರ ಎಲ್ಲಾ ಧರ್ಮ-ಜಾತಿಯ ಸಮುದಾಯದೊಳಗೆ ತೀವ್ರವಾದ ಬದಲಾವಣೆಗಳಾಗುತ್ತಿವೆ. ಮಾಧ್ಯಮಗಳು, ಮಕ್ಕಳು ಮತ್ತು ಮಹಿಳೆಯರ ಮೇಲೆ ನೇರ ಪರಿಣಾಮ ಬೀರುತ್ತಿವೆ. ಖಾಸಗೀಕರಣ, ಉದಾರೀಕರಣದಿಂದಾಗಿ ಕಂಪನಿ, ಕಾರ್ಖಾನೆಗಳನ್ನು ಮುಚ್ಚಲಾಗುತ್ತಿರುವುದರಿಂದ ದುಡಿಯುವ ಗಂಡಸು ಕೆಲಸ ಕಳೆದುಕೊಂಡು ಮನೆಸೇರುವನು. ಇಲ್ಲವೆ ನೇಣಿಗೆ ಶರಣಾಗುವನು. ಮನೆ ಮಂದಿಗೆ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿ ಶಿಕ್ಷಣದಿಂದಲೂ ಮಕ್ಕಳು ವಂಚಿತರಾಗುವರು. ಆಹಾರಕ್ಕಾಗಿ ಪರದಾಡುವರು. ಈ ಸಂದರ್ಭದಲ್ಲಿ ಮುಸ್ಲಿಮ ಮಹಿಳೆ ತನ್ನ ಧರ್ಮದೊಳಗಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ನಾಡಿನ ಸಂಪತ್ತು ಲೂಟಿಯಾಗದಂತೆ ತಡೆಯಲು ಒಟ್ಟಾರೆ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಶಿಕ್ಷಿತಳಾಗಿ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು”.

ಕುಟುಂಬ ವ್ಯವಸ್ಥೆಯಲ್ಲಾದ ಬದಲಾವಣೆಗಳು:

ಮುಸ್ಲಿಮ ಸಮುದಾಯದ ಕುಟುಂಬ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳು ಆಗಿಲ್ಲವಾದರೂ, ಹೊಸ ಆಲೋಚನಾ ಕ್ರಮಗಳತ್ತ ಕೆಲವು ಜನರಾದರೂ ಆಕರ್ಷಿತರಾಗಿರುವುದು ಒಳ್ಳೆಯ ಬೆಳವಣಿಗೆ ಅನಿಸಿದೆ. ಮುಖ್ಯವಾಗಿ ಕುಟುಂಬದಲ್ಲಿ ಹೆಣ್ಣಿನ ಬಗೆಗಿದ್ದ ಕಟ್ಟು ನಿಟ್ಟಿನ, ಕಠೋರ ಧೋರಣೆಗಳು ಸಡಿಲುಗೊಳ್ಳುತ್ತಿರುವುದು ಗಮನಾರ್ಹ. ಆಕೆಯ ಜವಾಬ್ದಾರಿಯ ಬಗ್ಗೆ ಪುರುಷ ಹೆಮ್ಮೆ ತಾಳುತ್ತಿದ್ದಾನೆ. ಕುಟುಂಬ ನಿರ್ವಹಣೆಯಲ್ಲಿ ಆಕೆ ತನ್ನೊಂದಿಗೆ ಪ್ರಾಮಾಣಿಕವಾಗಿ ಸಹಕಾರ ನೀಡುತ್ತಿರುವುದರಿಂದ ನಿರ್ವಹಣೆಯಲ್ಲಿ ಆಕೆ ತನ್ನೊಂದಿಗೆ ಪ್ರಾಮಾಣಿಕವಾಗಿ ಸಹಕಾರ ನೀಡುತ್ತಿರುವುದರಿಂದ ಅವನಿಗೆ ಅವಳಲ್ಲಿ ವಿಶ್ವಾಸ ಹೆಚ್ಚುತ್ತಿದೆ. ಅವಳ ಸಹಭಾಗಿತ್ವ ತನಗೆ ಅಗತ್ಯವಾದುದೆಂದು ಅವನು ಭಾವಿಸಿದ್ದಾನೆ. ವ್ಯಾಪಾರ-ವಹಿವಾಟು ವಿಚಾರದಲ್ಲಿ, ಅನುಭವಿಸಿದ ಕಷ್ಟ-ನಷ್ಟಗಳಿಗೆ ಆಕೆ ತೀವ್ರವಾಗಿ ಸ್ಪಂದಿಸಬಲ್ಲಳೆಂಬುದು ಅವನಿಗೆ ಮನವರಿಕೆಯಾಗುತ್ತಿದೆ. ಅವನ ಯಾವುದೇ ಯೋಚನೆ, ಯೋಜನೆಗಳು ಅವಳೆದುರು ಪ್ರಸ್ತಾಪವಾಗುತ್ತಿವೆ. ಅವಳ ಸಲಹೆಗೆ ಮಾನ್ಯತೆ ದೊರಕುತ್ತಿದೆ. ಉದ್ಯೋಗದಲ್ಲಿರುವ ಮಹಿಳೆಯರಂತೂ ಗಂಡನ ಯಜಮಾನಿಕೆಯಲ್ಲಿ ಸರಿಪಾಲು ಪಡೆದಿದ್ದಾರೆ. ಕೆಲವು ಕಡೆಗೆ ಪೂರ್ತಿಯೆಂದರೂ ಆದೀತು. ಮಕ್ಕಳಿಗೆ ಶಿಕ್ಷಣ ಕೊಡಿಸುವ ವಿಷಯದಲ್ಲಿ, ಬೆಳೆದ ಹೆಣ್ಣು ಮಕ್ಕಳಿಗೆ ಧಾರೆಯೆರೆದು ಕೊಡುವಲ್ಲಿ ಮುಂದಾಲೋಚನೆಯ ಕ್ರಮಗಳನ್ನು ಅನುಸರಿಸಲಾಗುತ್ತದೆ.

ಕುಟುಂಬದ ಸಾರಥ್ಯವನ್ನು ವಹಿಸಿಕಂಡಿರುವ ಪುರುಷ ಪ್ರಜ್ಞಾವಂತನಾಗಿ ಕಾಣಿಸಿಕೊಳ್ಳುವುದು ಹೊರಗಿನ ಪ್ರಭಾವಗಳ ಕಾರಣದಿಂದಲೇ, ಇತರೆ ಜನಾಂಗದ ಬದುಕಿನ ಸ್ಥಿತ್ಯಂತರಗಳು ಅವನನ್ನು ಚಿಂತನೆಗೆ ತೊಡಗಿಸಿವೆ. ಸಮಾಜದ ಹಿತಾಭಿವೃದ್ಧಿಯ ಕಾರ್ಯದ ಕುರಿತ ಉಲೆಮಾಗಳು ಯಾವ ಆಸಕ್ತಿ ತೋರಿಸುತ್ತಿಲ್ಲ ಎಂಬ ತಿಳಿವಳಿಕೆ ಗಾಢವಾಗುತ್ತಿರುವಂತೆ ತನ್ನ ಕುಟುಂಬ, ಸಮಾಜಗಳನ್ನು ಬದಲಾವಣೆಗೆ ಸಜ್ಜುಗೊಳಿಸುವ ಧಾವಂತಕ್ಕೆ ಅವನು ಕಾತರಿಸುತ್ತಿದ್ದಾನೆ. ಪ್ರಧಾನವಾಗಿ ಮಹಿಳೆ ಅವಿದ್ಯಾವಂತಳಾಗಿದ್ದು ಅವಳಿಗೆ ಅಕ್ಷರ ಫಲವಂತಿಕೆ ದಕ್ಕಬೇಕೆನ್ನುವ ತುಡಿತವಿದೆ. ಒಬ್ಬ ಹೀಗೆ ವಿದ್ಯಾಭ್ಯಾಸ ಕೊಟ್ಟರೆ ಅದು ಇಡೀ ಕುಟುಂಬಕ್ಕೆ ಕೊಟ್ಟಂತಾಗುತ್ತದೆಯೆಂಬುದು ಮನವರಿಕೆಯಾಗುತ್ತಿದೆ.

ಬೆಳಕಿನ ದಾರಿಯಲಿ

ನಾಲ್ಕು ಗೋಡೆಗಳ ನಡುವಿನಿಂದ ಮುಸ್ಲಿಂ ಮಹಿಳೆ ಹೊರಬರಲು ಸಾಧ್ಯವಿಲ್ಲ. ಆಕೆ ‘ಬುರ್ಖಾ’ದಲ್ಲಿ ಬಂಧಿ ಎನ್ನುವವರಿಗೆ ಅಚ್ಚರಿ ಹುಟ್ಟುವಂತೆ ಆಕೆ ಶಿಕ್ಷಣ, ಉದ್ಯೋಗದ ಕಾರಣಗಳಿಂದ ಹೊರಗೆ ಕಾಣಿಸಿಕೊಂಡಿದ್ದಾಳೆ. ಪುರೋಹಿತಶಾಹಿ, ತಾಲಿಬಾನ್ ಮನಸ್ಸುಗಳ ಹುಯಿಲು-ಹುನ್ನಾರ, ಫತ್ವಾ-ಬಹಿಷ್ಕಾರಗಳ ಧಾರ್ಷ್ಟ್ಯಗಳ ನಡುವೆಯೂ ಆಕೆಗೆ ಬದುಕುವ ಹಕ್ಕನ್ನು, ಪ್ರತಿಭೆ, ಬುದ್ಧಿವಂತಿಕೆಯ ಅಭಿವ್ಯಕ್ತಿಗೆ ವೇದಿಕೆಯನ್ನು ಆ ಸಮುದಾಯದ ವೈಶಾಲ್ಯ ಹೃದಯದ ಪುರುಷರು ನೀಡುತ್ತಿದ್ದಾರೆ. ಆ ಪುರುಷ ತಂದೆ, ಅಣ್ಣ-ತಮ್ಮ ಅಥವಾ ಗಂಡ, ಇಲ್ಲವೆ ಅವಳಿಗೆ ಅಕ್ಷರ ಹೇಳಿಕೊಡುವ ಗುರು ಆಗಿರಬಹುದು. ಆಧುನಿಕತೆಯ ಅತಿರೇಕಗಳನ್ನು ಧಿಕ್ಕರಿಸುತ್ತ, ಅದರ ಒಳ್ಳೆಯ ಅಂಶಗಳನ್ನೂ ತನ್ನ ಬದುಕಿನ ಹೊಸ ಆಯಾಮಕ್ಕೆ ದಕ್ಕಿಸಿಕೊಳ್ಳುತ್ತಿರುವ ಮುಸ್ಲಿಮ ಸ್ತ್ರೀಯರು ಈಗ ಅಲ್ಲಲ್ಲಿ ಒಡೆದು ಕಾಣಿಸುತ್ತಿದ್ದಾರೆ. ಬೆಳಕಿನ ದಾರಿಯಲ್ಲಿ ಊರಿಕೊಳ್ಳುತ್ತಿರುವ ಅವರ ಹೆಜ್ಜೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಸಾಮಾಜಿಕ ಪರಿಸರದಲ್ಲಿ

ಸಾಮಾಜಿಕ ಪರಿಸರದಲ್ಲಿ ಆಕೆ ತನ್ನ ಕ್ರಿಯಾಶೀಲತೆಯನ್ನು ಸಾಬೀತುಪಡಿಸುತ್ತಿದ್ದಾಳೆ. ಮುಸ್ಲಿಮ ಹೆಣ್ಣುಮಕ್ಕಳ ಅನPರತೆ, ದಾರಿದ್ರ್ಯ ಮತ್ತು ಶೋಷಣೆಯ ವಿರುದ್ಧ ಹೋರಾಡುತ್ತಿರುವ ಯುವತಿ ಅಮತುರ್ರಹ್‌ಮಾನ ಅದಕ್ಕೆ ಸಾಕ್ಷಿಯಾಗಿದ್ದಾಳೆ. ಕಾನೂನು ಪದವಿ ಓದಿರುವ ಆಕೆ ಬೆಂಗಳೂರು ಹೊರವಲಯದ ಕೆ.ಜಿ. ಹಳ್ಳಿ ಎಂಬ ಕೊಳಗೇರಿಯಲ್ಲಿ ಸ್ತ್ರೀಶಿಕ್ಷಣ, ಆರೋಗ್ಯ, ವಯಸ್ಕರ ಶಿಕ್ಷಣ, ಸ್ವ-ಉದ್ಯೋಗ ಯೋಜನೆ, ಕಾನೂನು ನೆರವು ಮುಂತಾಗಿ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕ್ರಾಂತಿಯೊಂದಕ್ಕೆ ವೇದಿಕೆಯೊಂದನ್ನು ಕ್ರಿಯಾಶೀಲಗೊಳಿಸಿ ಸಂಚಲನವನ್ನುಂಟು ಮಾಡಿದ್ದಾಳೆ. ಅಮತುರ್ರಹ್‌ಮಾನ ಸಾಮಾಜಿಕ ರಂಗಕ್ಕೆ ಕಾಲಿರಿಸಿದ್ದು ೧೯೯೬ರಲ್ಲಿ. ಕೊಳಗೇರಿ ಜನರ ಜೀವನ ಸಮೀಕ್ಷಿಸಲು ಗೆಳತಿಯರೊಂದಿಗೆ ಹೋದಾಗಿನ ಕಣ್ಣೆದುರಿನ ವಾಸ್ತವಗಳು ಆಕೆಯನ್ನು ಸಾಮಾಜಿಕ ಸೇವಗೆ ಉತ್ತೇಜಿಸಿದವು.

ಬಡತನ, ಅಜ್ಞಾನ ಮತ್ತು ಅನಕ್ಷರತೆಯಿಂದ ಕೊಳಗೇರಿಯಲ್ಲಿ ವಾಸ ಮಾಡುತ್ತಿರುವ ಮುಸ್ಲಿಮ ಕುಟುಂಬಗಳಲ್ಲಿ ಪುರುಷನ ದಬ್ಬಾಳಿಕೆ, ಕ್ರೌರ್ಯ, ಹಿಂಸೆಗೆ ತುತ್ತಾಗಿರುವ ಮರ್ದಿತ ಮಹಿಳೆಯರ ಬಗ್ಗೆ ಅಮತುರ್ರಹ್‌ಮಾನಳಿಗೆ ಇರುವ ಕಾಳಜಿ ಉತ್ಕಟವಾದುದು. ಅವರ ಬಗ್ಗೆ ಸಾಂತ್ವನದ ನಾಲ್ಕು ಮಾತು ಹೇಳಿ, ಕಣ್ಣೀರು ಉದುರಿಸಿ ಮಹಿಳಾ ಹೋರಾಟದ ಪರ ಎಂದು ಫೋಜು ನೀಡುವ ಬದಲು, ಮರ್ದಿತ ಮಹಿಳೆಯರಿಗೆ ಶಿಕ್ಷಣ ಕೊಡುವ ಗೃಹ ಕಸುಬಿನ ತರಬೇತಿ ಒದಗಿಸುವ, ಮಕ್ಕಳನ್ನು ದುಡಿಮೆಗೆ ಅಟ್ಟುವ ಬದಲು ಶಾಲೆಗೆ ಕಳಿಸುವ, ಸಮುದಾಯವನ್ನು ಕತ್ತಲ ಕೂಪದಿಂದ ಮೇಲೆತ್ತುವ ಚಿಂತನೆ ನಡೆಸಿ ಅವುಗಳನ್ನು ಅನಾವರಣಗೊಳಿಸುವಲ್ಲಿ ತೋರಿಸಿದ ಆಸ್ಥೆ ಅಪರೂಪದ್ದು.

ಅಮತುರ್ರಹ್‌ಮಾನ ತನ್ನ ಗೆಳತಿಯರೊಂದಿಗೆ ಒಡಗೂಡಿ ೧೯೯೭ರಲ್ಲಿ ಸ್ಥಾಪಿಸಿರುವ ‘ಮುಸ್ಲಿಮ್ ಅರ್ಗ್‌ನೈಝೇಶನ್’ (MMO) ಶೋಷಿತ ಮುಸ್ಲಿಮ ಮಹಿಳೆಯರ ಸ್ವಾಭಿಮಾನದ ಸಂಕೇತವಾಗಿದೆ. ಈ ಸಂಸ್ಥೆಯ ಮೂಲಕ ವಯಸ್ಕರ ಶಿಕ್ಷಣ ಕೇಂದ್ರವನ್ನು ಹುಟ್ಟು ಹಾಕಿ, ಅಲ್ಲಿ ಉರ್ದು, ಇಂಗ್ಲೀಷ್ ಮತ್ತು ಕನ್ನಡ ಭಾಷೆ ಕಲಿಸುವ, ಕುರ್‌ಆನ್ ವಚನಗಳನ್ನು ಉರ್ದುಭಾವಾನುವಾದದೊಂದಿಗೆ ಹೇಳಿಕೊಡುವ ವ್ಯವಸ್ಥೆಯೊಂದಿಗೆ, ಶುಚಿತ್ವ, ಗೃಹ ನಿರ್ವಹಣೆ, ಶಿಕ್ಷಣ, ನೈತಿಕ ಮೌಲ್ಯಗಳನ್ನು ಕೂಡ ಕಲಿಸಲಾಗುತ್ತದೆ. ಸ್ವಾವಲಂಬನೆಗಾಗಿ ಹೊಲಿಗೆ, ಕಸೂತಿ ಮತ್ತು ಪಾಕಶಾಸ್ತ್ರದ ತರಬೇತಿ ನೀಡಲಾಗುತ್ತದೆ.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಹಕಾರದಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ದೊರಕಿಸಿದ್ದು, ಸಾಲವನ್ನು ಕೂಡ ಒದಗಿಸಿಕೊಡಲಾಗಿದೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಿದ್ದು ಉಲ್ಲೇಖನೀಯ. ಧರ್ಮ ಮತ್ತು ತಮ್ಮ ಬದುಕಿನ ಬಗೆಗೆ ಅಜ್ಞಾತರಾಗಿದ್ದ ಮುಸ್ಲಿಮ ಮಹಿಳೆಯರನ್ನು ಜಾಗೃತಗೊಳಿಸುವಲ್ಲಿ ತೋರಿದ ಅಮತುರ್ರಹ್‌ಮಾನ ಅವಳ ಸಾಧನೆ ಅತ್ಯಂತ ಗಮನಾರ್ಹ, ಅದು ಉಡಾಫೆ ಗಂಡಂದಿರನ್ನು ಕೆರಳಿಸಿದ್ದೂ ಇದೆ. ಆಕೆಯನ್ನು ದೂಷಿಸಿದ್ದೂ ಇದೆ. ವಿಕೃತ ಮತಿಗಳಿಗೆ ಹೆದರಿಕೊಳ್ಳದ ಆಕೆ ಮೌನ ಬಂಡಾಯದಲ್ಲೇ ಸಾರ್ಥಕತೆ ಕಂಡಿದ್ದಾಳೆ. ಮಹಿಳೆಯರ ಸ್ವಾಭಿಮಾನದ ಆಂದೋಲನದಲ್ಲಿ ಪುರುಷರನ್ನು ಒಳಗೊಳಿಸಿ ಉತ್ಪಾದನಾಶೀಲತೆಯನ್ನು ಹೆಚ್ಚಿಸುವಲ್ಲಿ ಅವರನ್ನು ಪ್ರೇರೇಪಿಸಿದ್ದು ಅಮತುರ್ರಹ್‌ಮಾನಳ ಅದ್ಭುತ ಸಾಧನೆ ಆಗಿದೆ. (ಅಮಿನಾಲುತಫಾಸನ್ಮಾರ್ಗ – ಸಂಪುಟ – ೨೨ – ಸಂಚಿಕೆ ೭, ೧೯೯೯).

ಇತ್ತೀಚಿನ ದಿನಗಳಲ್ಲಿ ಸಲ್ಮಾ ಉರ್ಫ್ ಅನೀಸಾ ಫಾತಿಮಾ ಎಂಬ ಯುವತಿ ಗಮನ ಸೆಳೆದಿದ್ದು ತನ್ನ ಸಾಮಾಜಿಕ ಕ್ರಿಯೆಯಿಂದ. ಮೂಲತಃ ಗುಲಬರ್ಗಾ ಜಿಲ್ಲೆಯ ಚಿಂಚೊಳಿ ತಾಲೂಕಿನ ರುಮ್ಮನಗೂಡು ಎನ್ನುವ ಗ್ರಾಮದವಳಾದ ಸಲ್ಮಾ ಮುಂಬೈ ಬೀದಿಗಳಲ್ಲಿ ತರಕಾರಿ ಮಾರಾಟ ಮಾಡುವಾಕೆ. ತಂದೆ ಜಾಫರಸಾಬ ಮುದರಂಬೆವಾಲೆ, ತಾಯಿ ಹಬೀಬುನ್ನಿಸಾ. ಚಿಕ್ಕವಳಾಗಿದ್ದಾಗಲೇ ತಂದೆಯೊಂದಿಗೆ ತರಕಾರಿ ಮಾರಾಟದಲ್ಲಿ ತೊಡಗಿಸಿಕೊಂಡ ಸಲ್ಮಾ ಜೀವನಕ್ಕೆ ಆಸರೆಯಾದ ದಿಟ್ಟೆ.

ಹಿಂದೊಮ್ಮೆ ಮುಂಬೈನ ಮಹಾನಗರ ಪಾಲಿಕೆ ಸಿಬ್ಬಂದಿ ಸಲ್ಮಾ ಅವಳ ತರಕಾರಿ ಮಾರಾಟದ ತಳ್ಳು ಗಾಡಿಯನ್ನು ತನ್ನ ವಾಹನದಲ್ಲಿ ಎತ್ತಿಕೊಂಡು ಹೋದಾಗ ಆಕೆ ಹೋರಾಟಕ್ಕಿಳಿದಳು. ಗಾಡಿಯನ್ನು ಬಿಡಿಸಿಕೊಳ್ಳಲು ಪೊಲೀಸ್ ಠಾಣೆಗೂ ತಿರುಗಾಡಿದಳು. ಬೀದಿಬದಿಯ ಮಾರಾಟಗಾರರ ನಿಜವಾದ ಬವಣೆಗಳ ಅನುಭವ ಮಾಡಿಕೊಂಡ ಆಕೆ ಕೊನೆಗೂ ಉಚ್ಚ ನ್ಯಾಯಾಲಯದ ಮೊರೆ ಹೊಕ್ಕಳು. ಬೀದಿ ಬದಿಯಲ್ಲಿ ಮಾರಾಟ ಮಾಡುವುದು ಅಪರಾಧವಲ್ಲ ಎಂದು ನ್ಯಾಯಾಲಯ ಆದೇಶಿಸಿತು. ಅದನ್ನು ಅನುಸರಿಸಿ ಆಕೆ ಇನ್ನಿತರ ಬೀದಿ ಮಾರಾಟಗಾರರ ಪರವಾಗಿ ಹೋರಾಟ ಮಾಡಿದಳು.

ಅದರ ಕಾರಣದಿಂದ ಸಲ್ಮಾ ೨೦೦೭ರ ಜನವರಿ ೨೩ರಂದು ‘ವರ್ಲ್ಡ ಸೋಶಿಯಲ್ ಫೋರಂ’ ಎಂಬ ಕೀನ್ಯಾದ ರಾಜಧಾನಿ ನೈರೋಬಿಯಾದಲ್ಲಿ ಆಯೋಜಿಸಲಾದ ಐದು ದಿನಗಳ ಸಮಾವೇಶದಲ್ಲಿ ಬೀದಿ ಮಾರಾಟಗಾರರ ಸಮಸ್ಯೆಗಳ ಬಗ್ಗೆ ಮಾತನಾಡಿ ಎಲ್ಲರ ಗಮನ ಸೆಳೆದಳು. ಇದು ಅವಳ ಸಾಮಾಜಿಕ ಹೋರಾಟಕ್ಕೆ ಸಂದ ಫಲ. ಅಚ್ಚರಿಯೆಂದರೆ ಸಲ್ಮಾ ಓದಿದ್ದು ಕೇವಲ ೨ನೆಯ ತರಗತಿ ಮಾತ್ರ. ಆಕೆ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ್ದು ಮುಸ್ಲಿಮ ಮಹಿಳಾ ಸಂಕುಲಕ್ಕೆ ಮತ್ತು ಕರ್ನಾಟಕಕ್ಕೆ ಹೆಮ್ಮೆಯ ಗರಿ ಮೂಡಿಸಿದೆ. (ಪ್ರಜಾವಾಣಿ – ಪುಟ – ೪, ೨೭ ಜನವರಿ ೨೦೦೭).

ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ‘ಸಹನಾ ಉಮೆನ್ಸ್ ಕೌನ್ಸಿಲಿಂಗ್’ ಸಂಸ್ಥೆಯಲ್ಲಿ ಶ್ರೀಮತಿ ನಜೀಮಾ ಅಝೀಜ್, ಶ್ರೀಮತಿ ಕೈರುನ್ನಿಸಾ ಸೈಯ್ಯದ, ಶ್ರೀಮತಿ ಆಯಿಷಾ ನೂರ್, ಶ್ರೀಮತಿ ಡಾ. ಸಮೀನಾ ಹಾತೂನ್, ಶ್ರೀಮತಿ ಮುಮ್ತಾಜ್ ಉಳ್ಳಾಲ್ ಮುಂತಾದವರು ದುಡಿಯುತ್ತಿದ್ದಾರೆ.

ಸಾಂಸ್ಕೃತಿಕ ಕ್ಷೇತ್ರ

ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಸ್ಲಿಮ ಮಹಿಳೆಯರು ಕಾಣಿಸಿಕೊಳ್ಳುವುದು ತೀರ ಅಪರೂಪ. ಕೌಟುಂಬಿಕ ಪರಿಧಿ ಅವಳನ್ನು ಹೊರಗೆ ಬಿಟ್ಟಿಲ್ಲ. ಆದರೆ ಕತ್ತಲೆಯ ನಡುವೆ ಬೆಳ್ಳಿ ಮಿಂಚು ಎನ್ನುವಂತೆ ಬೆರಳೆಣೆಕೆಯಷ್ಟು ಮಹಿಳೆಯರು ನಾಟಕ, ಸಂಗೀತ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯ ದರ್ಶನ ಮಾಡಿಸಿದ್ದು ಅಥವಾ ಮಾಡಿಸುವುದು ಇದೆ.

ಬಾಗಲಕೋಟೆ ಜಿಲ್ಲೆ ಬೀಳಗಿಯ ಅಮೀರಬಾಯಿ ಕರ್ನಾಟಕಿ ಬಡ ಮುಸ್ಲಿಮ ಕುಟುಂಬದಿಂದ ಬಂದ ವಿಶಿಷ್ಟ ಪ್ರತಿಭೆ, ಕನ್ನಡ ರಂಗಭೂಮಿ ಮತ್ತು ಹಿಂದಿ ಚಿತ್ರಜಗತ್ತಿನಲ್ಲಿ ವಿಜೃಂಭಿಸಿದ ಕಲಾವಿದೆ. ‘ಕನ್ನಡ ಕೋಗಿಲೆ’ಯೆಂದು ಕರೆಯಿಸಿಕೊಂಡು ಅಪರೂಪದ ಗಾಯಕಿ. ಸ್ವಂತ ನಾಟಕ ಕಂಪನಿ ಕಟ್ಟಿದ ಶ್ರೇಯಸ್ಸು ಆಕೆಯದು. ‘ವಿಷ್ಣು ಭಕ್ತಿ’ ಎಂಬ ಸಿನಿಮಾ ಮೂಲಕ ಹಿಂದೀ ಚಿತ್ರರಂಗ ಪ್ರವೇಶಿಸಿದ ಆಕೆ ದುಖಿಯಾಲಿ, ಝಂಟಲ್‌ಮನ್ ಡಾಕೂ, ಇನ್ಸಾಫ್, ಬಾಗಿ, ಏಕ್ ಹೀ ಭೂಲ್, ಬೇವಫಾ ಆಶಿಕ್, ಭರತ ಮಿಲಾಪ್, ರಾಮರಾಜ್ಯ, ವಿದ್ಯಾ ಮುಂತಾದ ಅನೇಕ ಹಿಂದಿ ಮತ್ತು ಚಿರಂಜೀವಿ, ಚಂದ್ರಹಾಸ ಎಂಬ ಕನ್ನಡ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ ಪ್ರಬುದ್ಧ ನಟಿ.

ಬಿಚ್ಚೊ, ಕಜ್ಜನ್, ಮುನ್ನಿಬಾಯಿ, ಖುರ್ಷೀದ್ ಗುಲಾಬ್, ಜೋಹರಾ, ಬೇಗಮ್ ಅಖ್ತರ್, ಕಾನನ್‌ಬಾಲಾ, ಶಂಶಾದ್ ಬೇಗಮ್, ಎಂ.ಎಸ್. ಸುಬ್ಬಲಕ್ಷ್ಮೀ ಮುಂತಾದ ಪ್ರಮುಖ ಗಾಯಕರ ಮಧ್ಯೆ ಅಮೀರಜಾನ್ ಮಾಡಿದ ಸಂಗೀತ ಸಾಧನೆ ಅದ್ಭುತ. ಎಚ್.ಎಂ.ವ್ಹಿ. ಕಂಪನಿ ಧ್ವನಿ ಮುದ್ರಿಸಿದ ಅವಳ ‘ಕವಾಲಿ’ ದೇಶದ ಸಂಗೀತ ಪ್ರೇಮಿಗಳ ಮನಸ್ಸು ಗೆದ್ದಿದೆ. ೧೯೩೩ರಲ್ಲಿ ಕೊಲಂಬಿಯಾ ರೆಕಾರ್ಡ್ ಕಂಪನಿ ಧ್ವನಿ ಮುದ್ರಿಸಿದ ಅಮೀರಜಾನ್ ಕರ್ನಾಟಕಿ ಹಾಡಿದ ‘ನಾ ಪೇಳುವೆ ನಿನಗೊಂದುಪಾಯ’ ಎಂಬ ರಂಗಗೀತೆ, ಚಿರಂಜೀವಿ ಚಿತ್ರದ ‘ಮಧುರ ವೀಣೆ ಪ್ರೇಮ’, ಚಂದ್ರಹಾಸ ಚಿತ್ರದ ‘ಬಾ ಬಾ ಬನಸಿರಿಯೇ ಬಾ’ಘ, ಕಿಸ್ಮತ್ ಚಿತ್ರದ ‘ಆಜ್ ಹಿಮಾಲಯ ಕೀ ಚೋಟಿಸಿ ಧೀರೆ ಧೀರೆ ಆರೇ ಬಾದಲ್’, ‘ದೂರ್ ಹಟೋ ಹೇ ದುನಿಯಾ ವಾಲೋ’ ಜನರ ದೇಶಭಕ್ತಿಯ ಉನ್ಮಾದ ತುಂಬಿದ ಗೀತೆ. ‘ಸಮಾಧಿ’ ಚಿತ್ರದ ‘ಗೋರೆ ಗೋರೆ’ ಪ್ರಸಿದ್ಧ ಗೀತೆ . ಸುಮಾರು ೧೩೫ಕ್ಕೂ ಹಿಂದಿ ಚಿತ್ರಗಳಲ್ಲಿ ಮುನ್ನೂರಕ್ಕೂ ಅಧಿಕ ಹಾಡುಗಳನ್ನು ಹಾಡಿದ ದಾಖಲೆ ಇವಳದು.

ಅವಳ ಸಹೋದರಿ ಗೋಹರ್‌ಜಾನ್ ತನ್ನ ಅಭಿನಯ ಸಾಮರ್ಥ್ಯವನ್ನು ರಂಗಭೂಮಿಯಲ್ಲಿ ಮೆರೆಸಿದಉದ ಇದೆ. ಕುಕನೂರಿನ ರಹಿಮಾನಬಿ, ಜುಬೇದಾ ಸವಣೂರ, ಇಲಕಲ್ಲಿನ ಎಚ್.ಬೇಗಂ ಮಮತಾಜ್ ಬೇಗಂ ಅಜಮತ್ ಬೇಗಂ, ಜುಬೇದಾ ಬೇಗಂ, ಮುಂತಾದವರು ರಂಗಭೂಮಿಯ ಪ್ರಸಿದ್ಧ ಕಲಾವಿದರಾಗಿದ್ದಾರೆ.

ಸಂಗೀತ ಕ್ಷೇತ್ರದ ಮೊತ್ತಂದು ಪ್ರತಿಭೆಯೆಂದರೆ ಬಾಗಲಕೋಟೆಯ ಮಾಲಾಬಾಯಿ ಬೀಳಗಿ. ಹಿಂದುಸ್ತಾನಿ ಹಾಡುಗಾರಿಕೆ, ಸುಗಮ ಸಂಗೀತ, ವಚನಗಳ ಮೂಲಕ ಆಕಾಶವಾಣಿ, ದೂರದರ್ಶನದ ಕಲಾವಿದೆಯಾಗಿ ವಿವಿಧ ಕಡೆ ಸಂಗೀತ ಕಚೇರಿ ನಡೆಸಿ ಕೊಟ್ಟಿದ್ದಾಳೆ. ಕರ್ನಾಟಕ ರಾಜೊತ್ಸವ ಪ್ರಶಸ್ತಿ, ಸಂಗೀತ ಅಕಾಡೆಮಿಯ ಪ್ರಶಸ್ತಿಗಳಿಗೆ ಭಾಜನಳಾಗಿದ್ದಾಳೆ.

ಬ್ಯಾರಿ ಸಿಯರಾದ ಬೇಬಿ ಫಮೀಝಾ, ಸಲ್ಮಾ ಸುಹಾನಾ, ಫಾತಿಮಾ ಶಹನಾಜ್ ಇವರು ಬ್ಯಾರಿ ಪ್ರಹಸನ, ಹಾಡುಗಳಿಗೆ ಧ್ವನಿ ನೀಡುವವರಾಗಿದ್ದಾರೆ.

ಸಾಹಿತ್ಯ ಸಂಶೋಧನಾ ಕ್ಷೇತ್ರ:

ಸಾಹಿತ್ಯ ಕ್ಷೇತ್ರದಲ್ಲಿ ಮುಸ್ಲಿಮ್ ಮಹಿಳೆಯರು ಹೆಸರು ಮಾಡಿದ್ದಾರೆ. ಸಂಖ್ಯಾ ದೃಷ್ಟಿಯಿಂದ ಕಡಿಮೆ ಇದ್ದರೂ ಸತ್ವದ ದೃಷ್ಟಿಯಿಂದ ಈ ವರ್ಗದ ಲೇಖಕಿಯರು ಗಮನಾರ್ಹವೆನಿಸಿದ್ದಾರೆ. ಮುಮ್ತಾಜ್, ಸಾರಾ ಅಬೂಬಕ್ಕರ್, ಬಾನು ಮುಷ್ತಾಕ್, ಕೆ. ಷರೀಫಾ, ಡಾ. ಸಬೀಹಾ ಭೂಮಿಗೌಡ, ಡಿ.ಬಿ. ರಜೆಯಾ, ರಜಿಯಾ ಬಳಬಟ್ಟಿ, ಇನ್ನೂ ಮುಂತಾದವರು ತಮ್ಮ ಬರವಣಿಗೆಯಿಂದ ಪ್ರಸಿದ್ಧರೆನಿಸಿದ್ದಾರೆ.

ಮುಮ್ತಾಜ್ ಮನೋಜ್ಞ ಕಥೆಗಾರ್ತಿ ಅನಿಸಿದ್ದು, ಅವರ ‘ಅವ್ಯಕ್ತ’ ಕಥಾ ಸಂಕಲನ ಮುಸ್ಲಿಮ ಮಹಿಳೆಯಲ್ಲಿಯೆ ಪ್ರಥಮವಾಗಿದೆ. ಗಲ್ಫ್ ನಾಡಿನೊಂದಿಗಿನ ಸಾಮಾಜಿಕ, ಆರ್ಥಿಕ ನೆಲೆಯಲ್ಲಿ ಈ ಸಂಕಲನದ ಕಥೆಗಳು ಗರಿಬಿಚ್ಚಿಕೊಳ್ಳುತ್ತವೆ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಾರಾ ಅಬೂಬಕ್ಕರ್ ಅವರ ಪ್ರವೇಶ ತಡವಾದರೂ ಕಥೆ, ಕಾದಂಬರಿಗಳ ಮೂಲಕ ಮುಸ್ಲಿಮ ಮಹಿಳೆಯರ ವಾಸ್ತವ ಬದುಕನ್ನು ಪರಿಚಯಿಸಿ ಪ್ರಸಿದ್ಧರಾಗಿದ್ದಾರೆ. ಮುಸ್ಲಿಮ ಸಮಾಜದೊಳಗಿನ ಕುರೂಪಗಳನ್ನು, ವೈವಾಹಿಕ ಜೀವನದಲ್ಲಿ ಮಹಿಳೆ ಅನುಭವಿಸುವ ಅಭದ್ರತೆ, ಶೋಷಣೆಗಳನ್ನು ಪುರೋಹಿತಶಾಹಿ ಕಬಂಧ ಬಾಹುಗಳಲ್ಲಿ ನಲುಗಿದ ಪ್ರಸಂಗಗಳನ್ನು ಅಭಿವ್ಯಕ್ತಿಸುವ ಮೂಲಕ ಮಹಿಳಾಪರ ಕಾಳಜಿ ಮಾನವೀಯ ಪರ ಧೋರಣೆಗೆ ಮಿಡಿದ ಸಾರಾ ಅವರ ಚಂದ್ರಗಿರಿ ತೀರದಿಲ್ಲ, ಸಹನಾ, ವಜ್ರಗಳು, ಕದನ, ವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹದ ಸುಳಿ, ತಳ ಒಡೆದ ದೋಣಿಯಲ್ಲಿ ಎಂಬ ಕಾದಂಬರಿಗಳನ್ನು, ಚಪ್ಚಲಿಗಲು, ಪಯಣ, ಅರ್ಧರಾತ್ರಿಯಲಿ ಹುಟ್ಟಿದ ಕೂಸು, ಖೆಡ್ಡಾ ಎನ್ನುವ ಕಥಾಸಂಕಲನಗಳನ್ನು ಪ್ರಕಟಿಸಿದ ಅವರು ಅನುವಾದ, ಅಂಕಣ ಬರಹಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಬಾನು ಮುಷ್ತಾಕ್ ವಕೀಲ ವೃತ್ತಿಯಲ್ಲಿದ್ದುಕೊಂಡು ತಮ್ಮ ಕಥೆಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ ಗುರುತಿಸಿಕೊಂಡವರು. ಹೆಜ್ಜೆ ಮೂಡದ ಹಾದಿ, ಬೆಂಕಿ ಮಳೆ, ಎದೆಯ ಹಣತೆ ಅವರ ಕಥಾಸಂಕಲನಗಳಾಗಿವೆ. ಸಾಮಾಜಿಕ ನ್ಯಾಯಕ್ಕಾಗಿ, ತನ್ನ ಹಕ್ಕಿಗಾಗಿ ಧ್ವನಿಯೆತ್ತುವ, ಬದುಕಿಗಾಗಿ ತಹತಹಿಸುವ ಸ್ತ್ರೀ ಜಗತ್ತು ಅವರ ಕಥೆಗಳಲ್ಲಿ ವೈವಿಧ್ಯಮವಾಗಿ ಅನಾವರಣಗೊಳ್ಳುತ್ತದೆ. ಅವರ ಕಥೆಯನ್ನು ಆಧರಿಸಿದ ‘ಹಸೀನಾ’ ಚಲನ ಚಿತ್ರ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ.

ಡಾ.ಸಬೀಹಾ ಭೂಮಿಗೌಡ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿಯ ಕನ್ನಡ ವಿಭಾಗದಲ್ಲಿ ಅಧ್ಯಾಪಕಿಯಾಗಿಜ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕಾವ್ಯ, ವಿಮರ್ಶಾ ಕ್ಷೇತ್ರಗಳಲ್ಲಿ ಅವರದು ಗಟ್ಟಿಯಾದ ಹೆಸರು. ಲೋಹಿಯಾ ಪ್ರಕಾಶನದಿಂದ ಪ್ರಕಟವಾದ ‘ಬಗೆ’ ಅವರ ವಿಮರ್ಶಾ ಕೃತಿಯಾಗಿದೆ. ‘ಚಿತ್ತಾ’ ಕವನ ಸಂಕಲನ. ಎರಡು ಸಂಪಾದಿತ ಕೃತಿಗಳನ್ನು ಒಳಗೊಂಡಂತೆ ಅವರ ಐದು ಕೃತಿಗಳು ಪ್ರಕಟಿತೊಗಂಡಿವೆ. ವಿಮರ್ಶಾಲೋಕದಲ್ಲಿ ತಮ್ಮ ದಟ್ಟ ಪ್ರತಿಭೆ ಮೆರೆಯುತ್ತಿರುವ ಡಾ. ಸಬಿಹಾ ಹಲವು ಸಾಮಾಜಿಕ ಸಂಘಟನೆಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕೆ.ಷರಿಫಾ ಕನ್ನಡ ಕಾವ್ಯ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಎದ್ದು ತೋರುತ್ತಿದ್ದಾರೆ. ಸಾಮಾಜಿಕ ಸ್ತರದಲ್ಲಿ ಮುಖ್ಯವಾಗಿ ಮಹಿಳಾ ಪರ ಮತ್ತು ಮಾನವೀಯ ಕಾಳಜಿಯನ್ನು ತಮ್ಮ ಕಾವ್ಯಾಭಿವ್ಯಕ್ತಿಯಲ್ಲಿ ಪ್ರಕಟಿಸುವ ಕೆ.ಷರೀಫಾ ಇದುವರೆಗೆ ಬಿಡುಗಡೆಯ ಕವಿತೆಗಳು. ನೂರೇನ್‌ಳ ಅಂತರಂಗ, ಪಾಂಚಾಲಿ, ಮುಮ್ತಾಜಳ ಮಹಲು ಇತ್ಯಾದಿ ಕವನ ಸಂಕಲನಗಳನ್ನು ಮಹಿಳೆ ಮತ್ತು ಸಮಾಜ ಹಾಗೂ ಬಂಡಾಯ-ಮುಸ್ಲಿಮ ಸಂವೇದನೆ ವಿಮರ್ಶಾ ಕೃತಿಗಳನ್ನು ಸಾರಸ್ವತಲೋಕಕ್ಕೆ ನೀಡಿದ್ದಾರೆ. ಇವರ ಬರಹಗಳಲ್ಲಿ ವಿಶೆಷಣೆಗೊಳ್ಳುವ ಮುಸ್ಲಿಮ ಸಮಾಜದ ಸಂವೇದನೆಗಳು ಸೂಕ್ಷ್ಮವಾಗಿಯೇ ಇವೆ .

ಡಿ.ಬಿ.ರಜಿಯಾ ವಿಶಿಷ್ಟ ರೀತಿಯ ಕವಿತೆ ಕಟ್ಟುವ ಮೂಲಕ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಗಮನಾರ್ಹವೆನಿಸಿದ ಕವಯಿತ್ರಿ ಇದುವರೆಗೆ ಛಾಯೆ, ಕಳೆದು ಹೋಗುತೆನೆ. ಅಲಾಪು, ಋತು (ಹನಿವಗನ) ಮಡಿಚಿಟ್ಟ ಕೌದಿ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ವಾಸ್ತವದ ಕನವರಿಕೆ’ ಕಥಾ ಸಂಕಲನವಾಗಿದೆ.

ರಜಿಯಾ ಬಳಬಟ್ಟಿ ಪ್ರತಿಭಾನ್ವಿತ ಕವಯಿತ್ರಿ, ಸ್ತ್ರೀವಾದಿ ನೆಲೆಯಲ್ಲಿ ತಮ್ಮ ಕಾವ್ಯಕ್ಕೆ ವಿಶಿಷ್ಟತೆಯನ್ನು ಪ್ರಾಪ್ತವಾಗಿಸಿಕೊಂಡವರು. ಮೆಹಂದಿ ಮತ್ತು ದಾವಣಿ ಹುಡುಗಿ ಎಂಬೆರಡು ಕವನ ಸಂಕಲನಗಳನ್ನು ಪ್ರಕಟಿಸಿರುವ ರಜಿಯಾ ಬಳಬಟ್ಟಿ ಸಾಮಾಜಿಕ, ರಾಜಕೀಯ, ಸಂಘಟನೆಗಳ ಸ್ತರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಗಿಸಿಕೊಂಡಿದ್ದಾರೆ.

ಕಥೆ, ಲೇಖನ, ಅಂಕಣ ಬರಹಗಳಿಂದ ಗಮನ ಸೆಳೆದಿರುವ ಎಂ. ಶಯನಾಜ್ ಅವರು ‘ಮೆಟ್ಟಿಲುಗಳು’ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಕರಾವಳಿಯ ಬ್ಯಾರಿ ಜನಾಂಗದ ಬದುಕನ್ನು ಅವರ ಕಥೆಗಳು ಅನಾವರಣಗೊಳಿಸುತ್ತವೆ.

ಸಂಶೋಧನಾ ಕ್ಷೇತ್ರದಲ್ಲಿ ಡಾ. ಷಹಸೀನಾ ಬೇಗಂ, ಮತ್ತು ಪ್ರೊ. ಶ್ರೀಮತಿ ಇಸ್ಮತ್ ಉನ್ನಿಸಾ ಎದ್ದು ಕಾಣಿಸುವ ಪ್ರತಿಭೆಗಳಾಗಿವೆ. ಡಾ. ಷಹಸೀನಾ ಬೇಗಂ ಅವರು ‘ಕನ್ನಡದಲ್ಲಿ ಮುಸ್ಲಿಮ್ ಜಾನಪದ’ ಎಂಬ ತಮ್ಮ ಮಹಾಪ್ರಬಂಧವನ್ನು ಆಧರಿಸಿದ ‘ಕರ್ನಾಟಕ ಮುಸ್ಲಿಮ್ ಜಾನಪದ’ ಕೃತಿಯನ್ನು ಸಂಶೋಧನಾ ಕ್ಷೇತ್ರಕ್ಕೆ ನೀಡಿದ್ದಾರೆ. ಇದನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವುದು ಹೆಮ್ಮೆ. ಪ್ರೊ. ಇಸ್ಮತ್ ಉನ್ನಿಸಾ ಅವರು ‘ಸರ್ ಶೇಕ್ ಮೊಹಮ್ಮದ್ ಇಕ್ಬಾಲ್ ಬದುಕು-ಬರಹ’ ಮಹಾ ಪ್ರಬಂಧವನ್ನು ಪ್ರಕಟಿಸಿದ್ದಾರೆ. ಪ್ರೊ. ಹಸನಬಿ ಬೀಳಗಿಯವರು ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ, ರಿವಾಯತಗಳು, ನೀಲಾಂಬಿಕೆ, ಶಿವಶರಣೆಯರ ಜೀವನ ಮತ್ತು ಸಾಧನೆ ಇತ್ಯಾದಿ ಕೃತಿಗಳನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ.

ಇನ್ನೂ ಹಲವಾರು ಮುಸ್ಲಿಮ ಮಹಿಳೆಯರ ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಕಾಣಿಸುತ್ತವೆ. ನೂರಜಹಾನ್, ರಜಿಯಾ ಮೂಡುತೋಟು, ಆಯಿಷಾ ಉಳ್ಳಾಲ್, ಮುಮ್ರಾಜ್ ಉಳ್ಳಾಲ್ ಆಸ್ಮಾ ಎರ್ಮಾಳ್, ಮುಮ್ರಾಜ್ ಬಾನು ಮುಂತಾದವರು ಪ್ರಸಿದ್ಧ ಬರಹಗಾರರೆನಿಸಿದ್ದಾರೆ. ಕೆಲವು ಮಹಿಳೆಯರು ಸಂಶೋಧನೆಯಲ್ಲೂ ನಿರತರಾಗಿದ್ದಾರೆ.

ಕಲಾಕ್ಷೇತ್ರ:

ಕಲೆಯಲ್ಲೂ ಮುಸ್ಲಿಮ ಮಹಿಳೆ ಆಸಕ್ತಿ ಬೆಳೆಸಿಕೊಂಡಿದ್ದಾಳೆ. ಆದರೆ ಇವರ ಸಂಖ್ಯೆ ತೀರ ವಿರಳ. ಅಂಥವರಲ್ಲಿ ಅಮೆನಾ ಸಂಶಿ ಒಬ್ಬರು. ಎಲೆಯ ಮರೆಯ ಕಾಯಿಯಂತೆ ಇರುವ ಅಮೆನಾ ಮೂಲತಃ ಉತ್ತರ ಪ್ರದೇಶದ ಮುರದಾಬಾದವರಾದರೂ ಈಗ ಹುಬ್ಬಳಿಯ ಕಾಯಂ ನಿವಾಸಿ. ಅವರ ತಂದೆ ಅಬ್ದುಲ್‌ಸಮರ್ ಕೂಡಾ ಕಲಾವಿದರು. ಅಮೆನಾ ಬಾಲ್ಯದಿಂದಲೇ ಕುಂಚದ ಮೇಲೆ ಹಿಡಿತ ಸಾಧಿಸಿದ್ದಾರೆ. ಹೆಚ್ಚಾಗಿ ಕ್ಯಾನ್ವಾಸ್ ಪೇಂಟಿಂಗ್ ಮತ್ತು ಸ್ಕೇಚೆಸ್‌ನಲ್ಲಿ ಚಿತ್ರ ಬಿಡಿಸುವ ಅಮೆನಾ ಎಲ್ಲ ಕಲಾವಿದೆಯರಂತೆ ಮಹಿಳಾಪರ ದನಿಯನ್ನೇ ಚಿತ್ರಿಸಿದ್ದಾರೆ. ಅಮೆನಾ ಅವರು ಆಯ್ದುಕೊಳ್ಳುವ ಪ್ರತಿಯೊಂದು ಪೇಂಟಿಂಗ್‌ನಿಲ್ಲ ಪ್ರೇಮವೇ ಪ್ರಧಾನ ವಸ್ತು. ಪ್ರೀತಿಯಿಂದಲೇ ಜಗತ್ತು ಶಾಂತವಾಗಿರಲು ಸಾಧ್ಯ. ನಾವೆಲ್ಲ ಪ್ರೀತಿಗಾಗಿ ಹಪಹಪಿಸುತ್ತೇವೆ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲಿ ಪ್ರೀತಿಯೇ ಅಡಗಿದೆ. ‘ಎಲ್ಲರಂತೆ ನಾನೂ ಪ್ರೇಮಾರಾಧಕ. ಹಾಗಾಗಿ ನನ್ನ ಕುಂಚದಲ್ಲಿ ಪ್ರೀತಿ ತಾನಾಗಿಯೇ ಸೇರಿಕೊಂಡು ಬಿಡುತ್ತದೆ’ ಎನ್ನುವ ಅಮೆನಾರ ಕಲೆ ಸಹಜತೆಯೊಂದಿಗೆ ಗಟ್ಟಿತನವನ್ನು ಸಾಧಿಸಿದೆ.

ಶಿಕ್ಷಣ ಕ್ಷೇತ್ರ:

ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮ ಮಹಿಳೆಯರು ವಿಪುಲವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕಿಯರಾಗಿ, ಮುಖ್ಯಾಧ್ಯಾಪಿಕೆಯರಾಗಿ, ಕಾಲೇಜಿನ ಉಪನ್ಯಾಸಕಿಯರಾಗಿ ಶಿಕ್ಷಣದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಡಾ. ಸಯ್ಯದಾ ಅಖ್ತರ್ ರಾಜ್ಯದ ಪ್ರಥಮ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಜಾಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಸೈರಾಬಾನುಖಾನ್ ಅವರು ಶಿಕ್ಷಣಾಧಿಕಾರಿಗಳಾಗಿ, ಸಯ್ಯದಾ ಅನೀಸ್ ಎಸ್. ಮುಜವರ್ ಅವರು ವಿಷಯ ಪರೀಕ್ಷಕರಾಗಿ, ಬಾಗಲಕೋಟೆಯ ಹುನಗುಂದ ತಾಲೂಕಿನ ಶಿಕ್ಷಣ ಸಮನ್ವಯ ಅಧಿಕಾರಿಗಳಾಗಿ ಜಸ್ಮನ್ ಕಿಲ್ಲೇದಾರ್ ಕ್ರಿಯಾಶೀಲರಾಗಿದ್ದಾರೆ. ಹುಬ್ಬಳ್ಳಿಯ ನೆಹರೂ ಕಾಲೇಜಿನ ಪ್ರಾಂಶುಪಾಲರಾಗಿ ಡಾ. ಝಡ್.ಎಚ್.ಮುಲ್ಲಾ ಅವರು ಆಡಳಿತವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. ಹೀಗೆ  ಹಲವಾರು ಮಹಿಳೆಯರು ಪುರುಷರಿಗೆ ಮೀಸಲಾಗಿದ್ದ ಸ್ಥಾನಗಳಲ್ಲಿ ಅಲಂಕರಿಸಿಕೊಂಡು ತಮ್ಮ ದಟ್ಟ ಪ್ರತಿಭೆಯ ಮೂಲಕ ಶಿಕ್ಷಣ ಅಭಿವೃದ್ಧಿಗೆ, ಹೊಸ ಜನಾಂಗದ ಅಭ್ಯುದಯಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ.

ರಾಜಕೀಯ ಕ್ಷೇತ್ರ:

ರಾಜಕೀಯದಲ್ಲಿ ಮುಸ್ಲಿಮ ಮಹಿಳೆಯರ ಪಾಲ್ಗೊಳ್ಳುವಿಕೆ ತೃಪ್ತಿಕರವಾಗಿಲ್ಲ. ಬೆರಳೆಣೆಕೆಯಷ್ಟು ಮಹಿಳೆಯರು ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಕಾರ್ಯಕರ್ತೆಯರಾಗಿ ವಿವಿಧ ಹುದ್ದೆಗಳಲ್ಲಿ ಆಸಕ್ತರಾಗಿದ್ದಾರೆ. ಹಿಂದೆ ಮುಕ್ತಾರ್ ಉನ್ನಿಸಾ ಬೇಗಂ ಎಂ.ಎಲ್.ಸಿ.ಯಾಗಿ ಕ್ರಿಯಾಶೀಲರಾಗಿದ್ದೂ ಇದೆ. ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿದ್ದು ವಿಧಾನ ಪರಿಷತ್ತಿನ ಸದಸ್ಯೆಯಾಗಿದ್ದ ನಫೀಸಾ ಫಜಲ್ ಅವರು ವೈದ್ಯಕೀಯ ಶಿಕ್ಷಣ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾಗಿ ಶ್ರೀಮತಿ ಮಮ್ತಾಜ್‌ಬೇಗಂ ಅಧಿಕಾರವನ್ನು ಅರ್ಥಪೂರ್ಣವಾಗಿಸಿದ್ದಾರೆ. ಮಂಡಳ ಪಂಚಾಯತಿ, ಜಿಲ್ಲಾ ಪಂಚಾಯತಿ, ಪುರಸಭೆ, ನಗರಸಭೆ, ಕಾರ್ಪೋರೇಷನ್‌ಗಳ ಸದಸ್ಯೆರಾಗಿ, ಅಧ್ಯಕ್ಷ, ಉಪಾಧ್ಯಕ್ಷರಾಗಿ ಪ್ರಜ್ಞಾವಂತಿಕೆಯಿಂದ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಸರಕಾರ ಜಾರಿಗೆ ತಂದ ಪಂಚಾಯತ ರಾಜ್ಯ ವ್ಯವಸ್ಥೆಯಿಂದ ಮುಸ್ಲಿಮ ಹೆಣ್ಣುಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಹೊರ ಪ್ರಪಂಚದ ತಿಳಿವಳಿಕೆ ಅವರನ್ನು ಪ್ರಬುದ್ಧರನ್ನಾಗಿಸುತ್ತಿದೆ.

ಪತ್ರಿಕೆ ಕ್ಷೇತ್ರ:

ಪತ್ರಿಕಾ ವ್ಯವಸಾಯದಲ್ಲೂ ಮುಸ್ಲಿಮ ಮಹಿಳೆಯರು ಸಮರ್ಥರೆನಿಸಿದ್ದಾರೆ. ಮಂಗಳೂರಿನಿಂದ ಪ್ರಕಟವಾಗುವ ‘ಅನುಪಮ’ ಮಾಸಿಕ, ಲೇಖಕಿ ಎಂ ಶಯನಾಜ್ ಅವರ ಸಂಪಾದಕತ್ವದಲ್ಲಿ ಈಗಲೂ ಅಚ್ಚುಕಟ್ಟಾಗಿ ಹೊರಬರುತ್ತಿದೆ. ಅನುಪಮ ಬಳಗದಲ್ಲಿ ಗೌರವ ಸಂಪಾದಕೀಯರಾಗಿ ಆಯಿಶಾ ಭಾರತಿ, ಉಪಸಂಪಾದಕಿಯರಾಗಿ ಸಬಿಹಾ ಫಾತಿಮಾ, ಸಮೀನಾ ಯು. ಸಂಪಾದಕೀಯರಾಗಿ ಸಾಜಿದಾ ಮೂಮಿನ್, ಶಹೀದಾ ಉಮರ್, ಲುಬ್ನಾ-ಝಕಿಯ್ಯಾ, ಶಾಕಿರಾ ಯು.ಕೆ., ಶಾಹಿದಾ ಎ. ಪತ್ರಿಕೆಗೆ ಜೀವದುಂಬುತ್ತಿದ್ದಾರೆ. ಕೊಡಗಿನ ಸಫಿಯಾ ಎಂಬುವರು ‘ಪಿರ್ದೌಸ್’ ವಾರಪತ್ರಿಕೆಯ ಅಂಕಣಕಾರರಾಗಿ ಪ್ರಸಿದ್ಧರು.

ಇತರ ಕ್ಷೇತ್ರಗಳು:

ಇತರೆ ಕ್ಷೇತ್ರಗಳಲ್ಲಿ ಮುಸ್ಲಿಮ ಮಹಿಳೆ ಆತ್ಮ ವಿಶ್ವಾಸದಿಂದ ಕಾಣಿಸಿಕೊಳ್ಳುತ್ತಿದ್ದಾಳೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಹಾಫೀಜಾಬೇಗಂ ಇನಾಮದಾರ್, ಲ್ಯಾಂಡ್ ರಿಕಾರ್ಡ್ಸ್ ಇಲಾಖೆಯಲ್ಲಿ ಡೆಪ್ಯೂಟಿ ಡೈರಕ್ಟರ್ ಆಗಿರುವ ನಜಮಾ ಪೀರಜಾದೆ, ಪೊಲೀಸ್ ಇಲಾಖೆಯಲ್ಲಿ ಪಿ.ಎಸ್.ಆಯ್. ಆಗಿರುವ ಶಕೀಲಾ ಪಿಂಜಾರ, ಅಸಿಸ್ಟಂಟ್ ಕಮಿಷನ್‌ರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾದಿಯಾ ಸುಲ್ತಾನ್ ಇನ್ನೂ ಮುಂತಾದವರು ಇದಕ್ಕೆ ಉದಾಹರಣೆಯೆನಿಸಿದ್ದಾರೆ.

ಮುಸ್ಲಿಮ ಮಹಿಳೆಗೆ ತನ್ನ ಸಾಮರ್ಥ್ಯದ ಬಗ್ಗೆ ವಿಶ್ವಾಸ ಮೂಡಿದೆ. ಆಕೆ ಪುರುಷನ ಹೊಗಳಿಕೆಯ ಪ್ರೀತಿಯ ಗುಲಾಬಿಯಲ್ಲ. ಚೆಲುವಿನ ತಾಜಮಹಲು ಅಲ್ಲ, ಚಾಂದಕಾ ತುಕಡಾ ಅಲ್ಲ. ಗುಲಾಬ್ ಜಾಮೂನು ಅಲ್ಲ. ಆಕೆ ಮನುಷ್ಯಳು. ಆಕೆಗೂ ಹೃದಯವಿದೆ. ಭಾವನೆಗಳಿವೆ. ಅಭಿವ್ಯಕ್ತಿಯ ಉಜ್ವಲ ಪ್ರತಿಭೆಯಿದೆ. ವಿವೇಕದ ಮಿದುಳು ಇದೆ.

ಕಣಿರಿನಲ್ಲಿ ಕೈ ತೊಳೆಯುವ, ಪುರುಷ ದಬ್ಬಾಳಿಕೆಯ ಗುಲಾಮಗಿರಿಯನ್ನು ಒಪ್ಪಿಕೊಳ್ಳದ ಮನೋಸ್ಥಿತಿ ಈಗವಳಿಗೆ ಸಾಧ್ಯವಾಗುತ್ತಿದೆ. ಅವಳಿಗೆ ಬದುಕಿನ ದಾರಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲಿ ಹೆಜ್ಜೆಯೂರುವ ಧಾವಂತ ಕಾಣಿಸಿಕೊಳ್ಳುತ್ತದೆ. ಈ ಧಾವಂತ ತನ್ನ ಕುಟುಂಬವನ್ನಾಗಲಿ ಅಥವಾ ಪುರುಷನನ್ನಾಗಲಿ ಧಿಕ್ಕರಿಸುವಂತಹದ್ದಲ್ಲ. ತನ್ನ ಇರುವಿಕೆಯನ್ನು ದೃಢಪಡಿಸುವಂತಹದ್ದು. ಮಾನವೀಯ ನೆಲೆಯಲ್ಲಿ ಗಟ್ಟಿಗೊಳ್ಳುತ್ತಲೇ ತನ್ನ ಬದುಕು, ಕುಟುಂಬ ಹಾಗೂ ಸಮಾಜದ ಸಂಸ್ಕೃತಿಯನ್ನು, ಆರೋಗ್ಯವನ್ನು ಹೆಚ್ಚಿಸಿ ಸಂತೃಪ್ತಿಗೊಳ್ಳುವಂತಹದ್ದು.

ಬಾನು ಮುಷ್ತಾಕ್ ಹೇಳುವಂತೆ: ಪುರುಷ ಪ್ರಧಾನ ಸಮಾಜದ ಮೌಲ್ಯಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಪ್ರಪಂಚದಾದ್ಯಂತ ಧರ್ಮ ಮತ್ತು ದೇವರುಗಳನ್ನು ನಿರಾಯಾಸವಾಗಿ ಬಳಸಿಕೊಳ್ಳುವ ಸನ್ನಿವೇಶದಲ್ಲಿ ಹೆಣ್ಣಿನ ಅಸ್ಮಿತೆ ಮುಖ್ಯವೆನಿಸಿದೆ. ಅದು ಖಚಿತ ಮತ್ತು ಪ್ರಖರಗೊಳ್ಳಬೇಕಾಗಿರುವುದು ತೀರ ಅಗತ್ಯ. ಜಾಗತೀಕರಣ ಸಂದರ್ಭದಲ್ಲಿ ಅವಳ ನಿಸ್ಪೃಹ ಸಂವೇದನೆಗಳು ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸುವುದು ತುರ್ತಿನದಾಗಿದೆ.

ಗ್ರಂಥ ಋಣ

೧. ಶ್ರೀಯುತ ಜಗದ್ಗುರು ಮಹಮ್ಮದ ಪೈಗಂಬರವರ ಜೀವನ ಚರಿತ್ರೆ – ಮೌಲ್ವಿ ಮಹಮ್ಮದ್ ಬುಡನ್ ಸಾಹೇಬರು ಬರದೂರ – ೧೯೬೦

೨. ಮುಸುಕಿನಲ್ಲಿ ಮುಸ್ಲಿಮ್ ಮಹಿಳೆ – ಇಬ್ಲಾಹೀಮ್ ಸಈದ್, ೨೦೦೦.

೩. ಶಿಕ್ಷಣ ಮತ್ತು ಮುಸ್ಲಿಮರು – ಸಂಪಾದಕರು: ಮಹಮ್ಮದ್ ಕುಳಾಯಿ, ಬಿ.ಎನ್. ಶರ್ಫುದಿನ್, ಅಕ್ಬರ್ ಅಲಿ – ೧೯೯೧.

೪. ಕರ್ನಾಟಕದ ಮುಸ್ಲಿಂ ಜಾನಪದ – ಡಾ. ಜಷಸೀನಾ ಬೇಗಂ – ೨೦೦೦.

5. The position of Woman in Islam – Two Articles by : Nazhat Afza and khurshid Atmad.

೬. ಇಸ್ಲಾಂ ಸಂಸ್ಕೃತಿ – ಪೊ. ಮಹಮ್ಮದ್ ಅಬ್ಮಾಸ್ ಷೂಸ್ತಿ, ಅನುವಾದ: ಬಿ.ಎಂ. ಶಿಕಂಠಯ್ಯ ೧೯೭೦.

೭. ಮುಸ್ಲಿಮರ ಹಬ್ಬ ಮತ್ತು ಬರುಸುಗಳು – ಡಾ. ದಸ್ತಗೀರ್ ಅಲಿಭಾಯಿ – ೧೯೯೬.

೮. ದಾಂಪತ್ಯ: ಹಕ್ಕು-ಬಾಧ್ಯತೆಗಳು – ಮೌ. ಸಯ್ಯದ್ ಅಬುಲ್ ಆಲಾ ಮೌಲೂದಿ ಅನುವಾದ: ಇಬ್ಲಾಹೀಮ್ ಸೀದ್ – ೨೦೦೦.

೯. ತಲಾಕ್ – ಶೇಖ ಮಹಮ್ಮದ್ ಕೆ. ೧೯೯೭.

೧೦. ಅನಾವರಣ – ಸಾರಾ ಅಬೂಬಕ್ಕರ್ – ೨೦೦೨.

೧೧. ಶಿವಲ್ಲಭ – ಚಾಲುಕ್ಯ ಉತ್ಸವ ಸ್ಮರಣ ಸಂಚಿಕೆ – ೨೦೦೬.

೧೨. ಸೌಹಾರ್ದ – ಎಂ.ಡಿ. ಗೋಗೇರಿ ಅವರ ಅಭಿನಂದನಾ ಗ್ರಂಥ – ಸಂ. ಎ.ಎಸ್. ಮಕಾನದಾರ.

೧೩. ತುಳುನಾಡ ಮುಸ್ಲಿಮರ ಬ್ಯಾರಿ ಸಂಸ್ಕೃತಿ – ಬಿ.ಎಂ. ಇಚ್ಚಂಗೋಡ್ – ೧೯೯೭.

೧೪. ಮೈಕಾಲ – ಅಬೂರೈಹಾನ್ ಅಹ್ಮದ್ ನೂರೀ – ೧೯೯೭.

೧೫.ಮ್ವೊಲಾಂಜಿ- ಹಂಝ ಮಲಾರ್ – ೨೦೦೫.

೧೬. ಪಾಲು ತೇನ – ಹಂಝ ಮಲಾರ್ – ೨೦೦೫.

೧೭. ಬ್ಯಾರಿ ಭಾಷೆ ಮತ್ತು ಜನಪದ ಕಥೆಗಳು – ಡಾ. ಸುಶೀಲಾ ಉಪಾಧ್ಯಾಯ – ೧೯೯೧.

೧೮. ಬ್ಯಾರಿ ಮುಸ್ಲಿಮರು : ಒಂದು ಅಧ್ಯಯನ – ಹಂಝ ಮಲಾರ್ – ೨೦೦೧.

೧೯. ನವಾಯಿತರು – ಡಾ. ಸೈಯ್ಯದ್ ಜಮೀರುಲ್ಲಾ ಷರೀಫ್ – ೧೯೮೫.

ನಿಯತಕಾಲಿಕಗಳು:

ಪ್ರಜಾವಾಣಿ, ಸನ್ಮಾರ್ಗ, ಸಂಕ್ರಮಣ, ಅನುಪಮಾ, ಕನ್ನಡಪ್ರಭು.