ಕಥೆಗಳು:

ಕಥೆ ಹೇಳುವ ಕಲೆ ಮುಸ್ಲಿಮ್‌ ಮಹಿಳೆಗೂ ಸಾಧಿಸಿದೆ. ಜಾನಪದ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕವೆಂದು ಆಕೆ ಕಥೆಗಳ ಸಿವುಡನ್ನು ಅಗಾಧವೆಂಬಂತೆ ಬಿಚ್ಚಿಡಬಲ್ಲಳು. ಈ ಕಥೆಗಳು ಅವಳ ಸ್ವಂತದ್ದಲ್ಲ. ಬಾಯಿಂದ ಬಾಯಿಗೆ ಹರಡುತ್ತ, ಅವಳದೇ ಆದ ಧಾಟಿಯಲ್ಲಿ ಪಕ್ವಗೊಳ್ಳುತ್ತ, ಕೊನೆಗೆ ಅವಳದೇ ಸೃಜನಶೀಲತೆಯೆಂಬ ಛಾಪು ಒತ್ತಿಸಿಕೊಂಡು ಬಿಡುವಂಥವು. ಈ ಕಥೆಗಳ ಯಶಸ್ಸು ಅಂದರೆ ಬೇಸರ ನೀಗಿಸುವುದು ಮತ್ತು ಮಕ್ಕಳನ್ನು ರಂಜಿಸುವುದು.

ಕಥೆ ಹೇಳುವ ಕಲೆಯಂತೆ, ಕಥೆ ಕಟ್ಟುವ ಖಯಾಲಿಯಲ್ಲಿ ಮುಸ್ಲಿಮ ಮಹಿಳೆ ತನ್ನದೇ ಆದ ಕೌಶಲ ಹೊಂದಿರುವುದು ಸ್ಪಷ್ಟ. ಕಥೆ ‘ಕಲ್ಪಿತ’ ಎಂದಾದರೂ ಅವಳ ಜೀವಾನಾನುಭವಗಳು ಇಲ್ಲಿ ಅಸ್ಖಲಿತವಾಗಿ ದಾಖಲಾಗಿರುವುದು. ಈ ದೃಷ್ಟಿಯಿಂದ ಅವು ವಾಸ್ತವ. ರಂಜನೆಗೆಂದೇ ಅಲ್ಲ. ಮನುಷ್ಯ ಬದುಕಿನ ದರ್ಶನ ಮಾಡಿಸುವುದು ಮತ್ತು ಮನುಷ್ಯ ಸಂಬಂಧಗಳನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸುವುದು ಈ ಕಥೆಗಳ ಪ್ರಧಾನ ಉದ್ದೇಶ. ಅದು ನೀತಿ ಸಂದೇಶನೊಂದಿಗೆ ಫಲಿತಗೊಳ್ಳುವುದು.

ಕಥೆ, ಉರ್ದುಭಾಷೆಯಲ್ಲಿ ‘ಕಹಾನಿ’ ಎಂದು ಕರೆಯಿಸಿಕೊಳ್ಳುತ್ತದೆ. ಮುಸ್ಲಿಮ ಬದುಕಿನ ಆಚಾರ-ವಿಚಾರಗಳನ್ನು, ನಂಬಿಕೆಗಳನ್ನು ಈ ಕಥೆಗಳು ಒಳಗೊಂಡಿರುವುದು ಸಾಮಾನ್ಯ. ಕಥೆಯ ಆಶಯಕ್ಕೆ ಸಂಕೀರ್ಣಕ್ಕಿಂತ ನೇರ ಮತ್ತು ಸರಳತೆಯ ನಿರೂಪಣಾ ವಿಧಾನವನ್ನು ಒಗ್ಗಿಸಿಕೊಂಡಿರುವುದನ್ನು ನೋಡಬಹುದು. ಹೀಗೊಂದು ಊರು-ಅಥವಾ ಒಂದು ಊರಲ್ಲಿ ಒಬ್ಬ ರಾಜನಿದ್ದನು ಎಂದು ಆರಂಭವಾಗಿ ಕೇಳುಗರನ್ನು ಕೌತುಕದಲ್ಲಿರಿಸಿ ಕಥೆಯ ಆಶಯದ ಪರಿಣಾಮ ಫಲಿಸುವುದು.

ನೂರಜಹಾನ್‌ ಇಟಗಿ ಹೇಳಿದ ‘ಅಲ್ಲಾಹನ ದುಆ’ ಕಥೆ ಹೀಗಿದೆ:

ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅದು-ಇದು ಕೆಲಸ ಮಾಡಿಕೊಂಡು ಒಂದು ಹೊತ್ತಿನ ರೊಟ್ಟಿಯನ್ನು ಮನೆಗೆ ತರುತ್ತಿದ್ದ. ಮಕ್ಕಳಿಗೆ ತಿನ್ನಿಸಿ, ಗಂಡ-ಹೆಂಡತಿ ಉಪವಾಸ ಇರುತ್ತಿದ್ದರು. ಆ ಊರಿನ ರಾಜನ ಮಗನು ಒಂದಿನ ಅಸಾಧ್ಯ ಬೇನೆಯಿಂದ ಬಳಲತೊಡಗಿದ. ಹಕೀಮರಿಂದ ಅವನು ಗುಣಮುಖನಾಗಲಿಲ್ಲ. ರಾಜನಿಗೆ ಚಿಂತೆಯಾಯಿತು. ಮಗನ ಕಾಯಿಲೆಯನ್ನು ಗುಣಪಡಿಸಿದವರಿಗೆ ಅಪಾರ ಸಂಪತ್ತನ್ನು ಕೊಡಲಾಗುವುದೆಂದು ಡಂಗುರ ಸಾರಿಸಿದ. ಬಹಳ ಜನ ಪ್ರಯತ್ನಿಸಿದರು. ರಾಜಕುಮಾರ ಸುಧಾರಿಸಿಕೊಳ್ಳಲಿಲ್ಲ. ಬಡ ಮನುಷ್ಯ ಅರಮೆನಗೆ ಬಂದು, ಅಲ್ಲಾಹ್‌ನಲ್ಲಿ ಎರಡೂ ಕೈಗಳನ್ನೆತ್ತಿ ದುಆ ಬೇಡಿದ. ಅಲ್ಲಾಹನ ಹೆಸರಿನಲ್ಲಿ ಒಂದು ಗ್ಲಾಸ್‌ ನೀರನ್ನು ಕುಡಿಸಿದ. ಕೆಲವೇ ಕ್ಷಣಗಳಲ್ಲಿ ಅವನ ಆರೋಗ್ಯ ಸುಧಾರಿಸಿತು. ರಾಜನಿಗೆ ಸಂತೋಷವೆನಿಸಿತು. ಬಡವನಿಗೆ ಸಂಪತ್ತು ಕೊಟ್ಟು ಗೌರವಿಸಿದ-ಬಡವ ಆರಾಮಾಗಿ ಬದುಕಿದ.

ಅಲ್ಲಾಹ್‌ನ ದುಆದಿಂದ ಎಂಥವರೂ ಧನ್ಯತೆ ಹೊಂದಲು ಸಾಧ್ಯವೆಂದು ಈ ಕಥೆ ಬಿಂಬಿಸುತ್ತದೆ.

‘ಮೂರು ತಿಂಗಳ ಸೊಸೆಯ ಆಜ್ಞೆ: ಆರು ತಿಂಗಳು ಅತ್ತೆಯ ಆಜ್ಞೆ; ಕಥೆಯಲ್ಲಿ ಜಿಪುಣತೆ ಮತ್ತು ದರ್ಪವನ್ನು ಮೈಗೂಡಿಸಿಕೊಂಡ ಅತ್ತೆ ಜನರ ದೃಷ್ಟಿಯಲ್ಲಿ ಸೊಸೆಯನ್ನು ಕೆಟ್ಟವಳಂತೆ ರೂಪಿಸಿ, ತಾನು ಒಳ್ಳೆಯ ಪೋಜು ಕೊಡುತ್ತಾ, ಹೆಣ್ಣಿನ ಮುಗ್ಧತೆಯನ್ನು ಶೋಷಣೆಗೆ ಬಳಸಿಕೊಳ್ಳುವ ಹೆಣ್ಣಿನ ಇನ್ನೊಂದು ಮುಖವನ್ನು ದರ್ಶಿಸುತ್ತದೆ.

ಬ್ಯಾರಿ ಭಾಷೆಯಲ್ಲೂ ಬಾಯಿಂದ ಬಾಯಿಗೆ ಹರಿದು ಬಂದ ಕಥೆಗಳು ದೊರಕುತ್ತವೆ. ಮಲೆಯಾಳಕ್ಕಿಂತ ಇಂಪಾದ, ತುಳುವಿನ ಧಾಟಿಯಲ್ಲಿರುವ ಬ್ಯಾರಿ ಭಾಷೆ ಸರಳವಾದುದು. ಅದರಲ್ಲಿ ಸಂಪ್ರದಾಯದ ಕಥೆಗಳುಂಟು. ಇಂಥ ಕಥೆಗಳ  ಜನನಿ ಹೆಣ್ಣೇ ಆಗಿದ್ದಾಳೆ. ಅಜ್ಜಿಕಥೆಯೆಂದು ಹೇಳಲಾಗುವ ಆಫಂದಿ ರಾಜಾನು ನಾಗರಾಜ, ಮೂಸಾನೆಬಿ, ಫಾತಿಮಾ ಕಲ್ಯಾಣಂ, ಆಯಿಷಾ ಮಂಗಿಲಂ, ಪೆಣ್ಣ ರಸಿರಾಯ, ಬಂಗಾರ್ಡೆತೂಸಿ ಮುಂತಾದವು ಜನಪ್ರಿಯವೆನಿಸಿವೆ.

ಕುಞ್ಞತುಬೀಬಿ ಉಳಿಯಾರು ಹೇಳಿದ ‘ನಾಗರಾಜ’ ಕಥೆಯ ಸಾರಾಂಶ ಹೀಗಿದೆ; ಒಂದು ಊರಿನಲ್ಲಿ ಒಬ್ಬ ರಾಜ. ಅವನಿಗೊಬ್ಬಳು ಹೆಂಡತಿ. ಅವರಿಗೆ ಮಕ್ಕಳು ಇರಲಿಲ್ಲ. ಅವಳು ಬೇಲಿ ಪಕ್ಕ ಮೂತ್ರ ವಿಸರ್ಜನೆ ಮಾಡುವಾಗ ಓತಿಯನ್ನು ನೋಡಿ, ‘ನನ್ನ ಹೊಟ್ಟೆಯಲ್ಲಿ ಓತಿಯಾದರೂ  ಹುಟ್ಟಲಿಲ್ಲ’ ಎಂದು ಮರುಗಿದಳು. ಅದೇ ತಿಂಗಳಲ್ಲಿ ಆಕೆಗೆ ಗರ್ಭನಿಂತು ಹತ್ತು ತಿಂಗಳ ಮೇಲೆ ಹೆತ್ತಳು. ಆದರೆ ಆ ಮಗು ಒಂದು ಸರ್ಪವಾಗಿತ್ತು.

ಎರಡು ವರ್ಷದಲ್ಲೆ ಮಗು ದೊಡ್ಡದಾಗಿ, ತನಗೆ ಮದುವೆ ಮಾಡೆಂದಿತು. ಒಂದು ಹೆಣ್ಣನ್ನು ತಂದು, ಹಾಲು-ಬಾಳೆಹಣ್ಣು ಕೊಟ್ಟು ಕೋಣೆಗೆ ಕಳುಹಿಸಿದರು. ನಾಗರಾಜ ಅವಳನ್ನು ಮಧ್ಯರಾತ್ರಿ ಕಚ್ಚಿ ಕೊಂದು ಹಾಕಿತು. ಎರಡನೆಯ ಹೆಂಡತಿಗೆ ಅದೇ ಗತಿಯಾಯತು, ಇನ್ನಾರು ಅವನಿಗೆ ಹೆಣ್ಣು ಕೊಡುತ್ತಾರೆ?

ನಾಗರಾಜ: ‘ಉಮ್ಮಾ ಉಮ್ಮಾ, ಮುಚ್ಚಿದ ಮೊರದಲ್ಲಿ ಚಿನ್ನದ ನಾಣ್ಯ ಇಡಿರಿ. ನಾಗರಾಜನಿಗೆ ಹೆಣ್ಣು ಇದೆಯಾ ಎಂದು ಕೇಳಿಕೊಂಡು ಬರಲಿ’ ಎಂದು ಡಂಗುರ ಸಾರಲಾಯಿತು. ಆ ಊರಲ್ಲಿ ಸಾಹುಕಾರನೊಬ್ಬನಿದ್ದ. ಮೊದಲ ಹೆಂಡತಿ ತೀರಿಕೊಂಡಿದ್ದಳು. ಅವನಿಗೆ ಎರಡನೆಯ ಹೆಂಡತಿ ಇದ್ದಳು. ಮೊದಲ ಹೆಂಡತಿಗೆ ಮಗಳೊಬ್ಬಳಿದ್ದು ಆಕೆ ಸುಂದರಿಯಾಗಿದ್ದಳು. ಮಲತಾಯಿ ಅವಳನ್ನು ಪೀಡಿಸುತ್ತಿದ್ದಳು. ಹೊನ್ನು ನೋಡಿ ಸವತಿಯ ಮಗಳನ್ನು ಆಕೆ ನಾಗರಾಜನಿಗೆ ಮದುವೆ ಮಾಡಿ ಕೊಟ್ಟಳು.

ಊರವರಿಗೆ ಸುಂದರ ಹುಡುಗಿ ಸಾವಿಗೆ ಬಲಿಯಾಗುವುದು ಚಿಂತೆ ತಂದಿತು. ದುಃಖವೂ ಆಯಿತು. ಹುಡುಗಿ ಅತ್ತೆಯ ಮಾತಿನಂತೆ ಸ್ನಾನಕ್ಕೆ ಕೊಳಕ್ಕೆ ಹೋದಳು. ಅಲ್ಲಿ ಫಾತಿಮಾ ಬೀಬಿ ಬಂದು ಮಂತ್ರ ಕಲಿಸಿ ಕೊಟ್ಟಳು. ಸುಂದರಿ ಅತ್ತೆಯ ಮಾತಿನಂತೆ ತಲೆ ಬಾಚಿಕೊಂಡು, ಪೌಡರ್ ಹಚ್ಚಿಕೊಂಡು, ಹೊಟ್ಟೆ ತುಂಬ ಅನ್ನ ತಿಂದು, ಎರಡು ಹಣಿಗೆ ಬಾಳೆಹಣ್ಣನ್ನು, ಎರಡು ಕುಡಿಕೆ ಹಾಲನ್ನು ಹಿಡಿದು ನಾಗರಾಜನ ಬಳಿಗೆ ಹೋಗಿ ಬಾಗಿಲು ಹಾಕಿಕೊಂಡಳು. ನಾಗರಾಜ ಶೀಘ್ರವಾಗಿ ಅವಳನ್ನು ಕಚ್ಚಲು ಬಂದ, ಫಾತಿಮಾ ಬೀಬಿ ಮಂತ್ರಿಸಿ ಕೊಟ್ಟ ಕಲ್ಲನ್ನು ಆಕೆ ಎಸೆದಳು. ನಾಗರಾಜ, ಅವಳ ಕಾಲಿನ ಬುಡಕ್ಕೆ ಬಂದು ನೀಟಾಗಿ ಮಲಗಿದ. ಸುಂದರಿ ಸೊಂಟದಲ್ಲಿದ್ದ ಬೆತ್ತ ತೆಗೆದು ಅವನ ಮೇಲೆ ಬಡಿದಳು. ಆಶ್ಚರ್ಯವೆಂಬಂತೆ ಅವನು ಹದಿನಾರು ವರ್ಷದ ಯುವಕನಾದ. ಅವಳಿಗೂ ಅವನಿಗೂ ಮದುವೆಯಾಯಿತು.

ಕಥೆ ಮುಂದುವರಿಯುತ್ತದೆ. ಸುಂದರಿಗೆ ಗರ್ಭನಿಲ್ಲುವುದು, ತಂದೆ, ಮಲತಾಯಿ ಬಂದು ಕರೆದುಕೊಂಡು ಹೋಗುವುದು, ಮಲತಾಯಿ ಮಗಳೂ ಗರ್ಭವಿರುವುದು. ಇಬ್ಬರಿಗೂ ಒಂದೇ ಸಮಯಕ್ಕೆ ಪ್ರಸವವೇದನೆ. ಸುಂದರಿಗೆ ಹೆಣ್ಣು, ಮಲತಾಯಿ ಮಗಳಿಗೆ ಗಂಡು ಕೂಸು ಹುಟ್ಟುವುದು, ಮಕ್ಕಳನ್ನು ಬದಲಿಸಿ, ಮಲಮಗಳನ್ನು ಬಾವಿಯಲ್ಲಿ ಕೂಡಿ ಹಾಕಿ, ತನ್ನ ಮಗಳನ್ನು ಮಲತಾಯಿ ನಾಗರಾಜನ ಬಳಿಗೆ ಕಳುಹಿಸುವುದು. ನಾಗರಾಜ ಅವಳನ್ನು ತಿರಸ್ಕರಿಸುವುದು ಇತ್ಯಾದಿ ಪ್ರಸಂಗಗಳ ಕೊನೆಗೆ ನಾಗರಾಜ ಮಲತಾಯಿ ಮಗಳನ್ನು ಬಾವಿಯಲ್ಲಿಟ್ಟು ಅಪಮಾನಿಸುವುದು, ಹೆಂಡತಿಯನ್ನು ಸ್ವೀಕರಿಸುವುದು-ಹೀಗೆ ವಿವರಣೆಯೊಂದಿಗೆ ಕಥೆ ಸಾಗುತ್ತದೆ.

ವಿಷ ಸರ್ಪವನ್ನು ಸುಂದರ ಯುವಕನನ್ನಾಗಿ ಪರಿವರ್ತಿಸಿದ ಹುಡುಗಿಯ ಜಾಣ್ಮೆಯನ್ನು ಈ ಕಥೆ ಬಿಂಬಿಸುತ್ತದೆ.

ಮತ್ತೊಂದು ಕಥೆ ‘ರಾಜಾವುಡೆ ಪೆಂಞ’ ಹೆಚ್ಚೂ-ಕಮ್ಮಿ ಇದೇ ಆಶಯವುಳ್ಳದ್ದು.

ಗಂಡ ಎಂಥವನಾದರೂ ಹೆಂಡತಿ ಒಳ್ಳೆಯವಳಾಗಿದ್ದರೆ ಅವನನ್ನು ಸರಿದಾರಿಗೆ ತರುವಳು. ಆದರೆ ಗಂಡ ಮತ್ತು ಹೆಂಡತಿಯರ ಮಧ್ಯೆ ಸಂವಹನದ ಕೊರತೆ ಇದ್ದರೆ ಬದುಕು ಕಟ್ಟುವುದು ಕಷ್ಟ. ಈ ಕಥೆಯಲ್ಲಿ ಬರುವ ರಾಜನಿಗೆ ಒಬ್ಬಳು ಹೆಂಡತಿ ಇದ್ದಾಳೆ. ಅವಳು ಬುದ್ಧಿವಂತೆ ಮತ್ತು ಧೈರ್ಯಸ್ಥೆ. ರಾಜ ಅವಳ ಮೇಲೆ ಅನುಮಾನ ಪಟ್ಟು ಒಂದು ಪರೀಕ್ಷೆಗೆ ಒಳಪಡಿಸುತ್ತಾನೆ. ಆಕೆ ತಾನು ರಾಜನ ಹೆಂಡತಿಯಾಗಿದ್ದರೂ ಅದನ್ನು ತೋರಗೊಡದೆ ಬಡವನ ಮನೆ ಸೇರಿ, ಅಲ್ಲಿ ಅದ್ಭುತ ಸಾಧನೆಗಳನ್ನು ಮಾಡುತ್ತಾಳೆ. ಅವಳ ಚಾತುರ್ಯದಿಂದ ಬಡವ ಶ್ರೀಮಂತನಾಗುತ್ತಾನೆ. ಆಕೆಯ ತಾಳ್ಮೆಯನ್ನು ಮೆಚ್ಚಿದ ಅಲ್ಲಾನು ಮತ್ತೆ ಆಕೆಯನ್ನು ರಾಜನ ಬಳಿ ಸೇರಿಕೊಳ್ಳುವಂತೆ ಮಾರ್ಗ ಕಲ್ಪಿಸಿ ಕರುಣಿಸುತ್ತಾನೆ. ಆಕೆ ಕಷ್ಟಗಳನ್ನು ಅನುಭವಿಸಿ ಗಂಡನ ಮನೆ-ಮನ ಎರಡನ್ನು ಗೆಲ್ಲುತ್ತಾಳೆ. ಬಡವನ ಹೆಂಡತಿ ಸೋಮಾರಿತನ ಬಿಟ್ಟಿದ್ದರೆ, ಅವಳೇ ಗಂಡನಿಗೆ ಧೈರ್ಯ ತುಂಬಿ ತಮ್ಮ ಸಂಸಾರಕ್ಕೊಂದು ಭದ್ರವಾದ ಅಡಿಪಾಯ ಹಾಕಬಹುದಾಗಿತ್ತು. ರಾಜನ ಹೆಂಡತಿ ಸೋಮಾರಿತನ ಬಿಟ್ಟು ಬುದ್ಧಿವಂತಿಕೆ ಮೆರೆದು ಒಂದು ಕುಟುಂಬದ ಆಧಾರ ಸ್ತಂಭವಾದುದನ್ನು ಈ ಕಥೆಯಲ್ಲಿ ಚಿತ್ರಿಸಲಾಗಿದೆ. ಮಹಿಳೆ ಕೇವಲ ಗಂಡಿನ ಅಡಿಯಾಳಲ್ಲ, ಆಕೆಯಲ್ಲಊ ಅಸಾಧಾರಣ ಪ್ರತಿಭೆ, ಧೈರ್ಯ, ಶಕ್ತಿ ಇದೆ ಎಂಬುದನ್ನು ಈ ಕಥೆ ಹೇಳುತ್ತದೆ. (ಹಂಝ ಮಲಾರ್-ಪಾಲುಂ ತೆನೆ)

ಹೀಗೆ ತನ್ನ ಬದುಕಿನ ತೆಕ್ಕೆಗೆ ಸಿಲುಕಿದ ಅನುಭವಗಳನ್ನು ವಸ್ತು , ಪಾತ್ರ, ಸನ್ನಿವೇಶಗಳ ಸೃಷ್ಟಿಯೊಂದಿಗೆ ಕಥಾಕೌಶಲ ಸಾಧಿಸುವಲ್ಲಿ ಮತ್ತು ಸಫಲತೆ ಪಡೆಯುವಲ್ಲಿ ಮುಸ್ಲಿಮ್‌ ಮಹಿಳೆಯರು ಗಮನಾರ್ಹವೆನಿಸಿದ್ದಾರೆ.

ಒಡಪುಗಳು

ಹೆಣ್ಣು ಋತುಮತಿಯಾದಾಗ, ಮದುವೆಯಾದಾಗ, ಮತ್ತಿತರ ಮಂಗಳ ಕಾರ್ಯಗಳಿದ್ದಾಗ ಹೆಣ್ಣು ಮಕ್ಕಳು ಒಂದು ಕಡೆಗೆ ಕೂಡುವುದು ಸಹಜ. ಅಂಥ ಸಂಧರ್ಭಗಳನ್ನು ಸಂತೋಷಗೊಳಿಸುವ ಉತ್ಸಾಹ ಅವರದಾಗಿರುವುದು. ಇಂಥ ಪ್ರಸಂಗಗಳಲ್ಲಿ ಸುಮಂಗಲೆಯರು ಒಬ್ಬರಿಗೊಬ್ಬರು ತಮ್ಮ ಗಂಡಂದಿರ ಹೆಸರು ಹೇಳುವರು. ಅದನ್ನು ನೇರವಾಗಿ ಹೇಳದೆ ಒಡಪಿನೊಂದಿಗೆ ನಿವೇದಿಸುವುದು, ಅವರು ಹೇಳುವ ಒಡಪು ಸಂಭ್ರಮವನ್ನುಂಟು ಮಾಡುವುದು.

ಹೆಂಡತಿ, ತನ್ನ ಗಂಡನ ವ್ಯಕ್ತಿತ್ವವನ್ನು ಉನ್ನತೀಕರಿಸುವ, ಅವನ ವಿಶೇಷತೆಯನ್ನು ಅಭಿವ್ಯಕ್ತಿಸುವ ಈ ಒಡಪುಗಳು ಅತ್ಯಂತ ಜನಪ್ರಿಯ. ಹೆಣ್ಣಿಗೆ ಸಹಜವೋ ಎಂಬಂತೆ ಒಲಡಪು ‘ಕಟ್ಟುವ’ ಜಾಣ್ಮೆ ಸಾಧಿತವಾಗಿರುವುದು. ಒನಪು, ಒಯ್ಯಾರ, ತುಸು ನಾಚಿಕೆಯೊಂದಿಗೆ ರಸಿಕತೆಯೂ ಬೆರೆತು ಆಹ್ಲಾದತೆಯನ್ನು ಸೃಜಿಸುವುದು. ವಾತಾವರಣವನ್ನು ಸಂತೋಷಗೊಳಿಸುವುದು. ಒಡುಪು ತನ್ನ ಪದರು ಬಿಚ್ಚಿಕೊಳ್ಳುತ್ತಲೆ ನಗೆಯ ಅಲೆಯನ್ನು  ಹುಟ್ಟಿಸುವ ಪರಿ ಮೋಹಕವಾದುದು. ಮುಸ್ಲಿಮ ಮಹಿಳೆಯರು ತಮ್ಮ ಭಾಷೆಯಲ್ಲಿ ಉಲಿಯುವ ಒಡಪುಗಳು ಅಸಂಖ್ಯಾತ. ಉದಾಹರಣೆಗೆ ಕೆಲವು ಒಡಪುಗಳನ್ನು ಗಮನಿಸಬಹುದು:

ಚಲ್ತಿ ಥಿ ಗಾಡಿ ಉಡ್ತೀ ಥಿ ಧೂಲ್‌
ಹಮಾರಾ ಘರ್ ವಾಲೋಂ ಕೆ
ಹಾಥ ಮೇಂ ಗುಲಾಬ್‌ ಕಾ ಫೂಲ್‌
(ಗಾಡಿ ಓಡುತ್ತಿತ್ತು, ಧೂಳು ಏಳುತ್ತಿತ್ತು
ನಮ್ಮ ಮನೆಯವರ ಕೈಯಲ್ಲಿ ಗುಲಾಬಿ ಹೂ)
ಮೆಂತೇಕಿ ಬಾಜಿ, ಘೀ ಕಾ ಬಗಾರ
ಹಮಾರೆ ಘರ್ ವಾಲೋಂಕೆ ಹಾಥ್‌ ಮೇಂ
ಲಾಕೋಂಕಾ ಪಗಾರ್
(ಮೆಂತೆ ಪಲ್ಲೆ, ತುಪ್ಪದ ಒಗ್ಗರಣೆ
ನಮ್ಮ ಮನೆಯವರ ಕೈಯಲ್ಲಿ
ಲಕ್ಷಗಟ್ಟಲೆ ಪಗಾರ)
ಸೋನೇ ಕಿ ಮಜ್ಜಿದ್ ಸಂದಲ್‌ ಪೆ ಲಿಪೈ
ಹಮಾರೆ ಘರ್ ವಾಲೋಂಕಾ ನಾಮ್‌
ಜನ್ನತ್‌ ಮೇ ಲಿಖೈ
(ಬಂಗಾರದ ಮಸೀದೆಯನ್ನು ಶ್ರೀಗಂಧದಿಂದ
ಸಾರಿಸಿದೆ. ನಮ್ಮ ಮನೆಯವರ ಹೆಸರನ್ನು ಸ್ವರ್ಗದಲ್ಲಿ ಬರೆಸಿದೆ.)
ಫ್ಯಾಶನ್‌ ತೋ ಇಸ್‌ ಜಮಾನೇಕಾ ಚೀಜ್‌ ಹೈ
ಹಮಾರಿ ಘರವಾಲೀಕಾ ಗುಸ್ಸಾ ತೋ
ಮಿರ್ಚಿ ಸೆ ಭೀ ತೇಜ್‌ ಹೈ
(ಫ್ಯಾಶನ್‌ ಈ ಕಾಲದ ವಸ್ತು ಇರುವುದು
ನನ್ನವಳ ಕೋಪ ಮೆಣಸಿನಕಾಯಿಗಿಂತ
ಖಾರ ಇರುವುದು.)
ಕಾಂಚ್‌ ಕೀ ಬೌಡೀ ಝಮ್‌ಝಮ್‌ ಕಾ ಪಾನಿ
ಉಸಮೇ ವಜು ಕರನೇವಾಲಿ ರಾಜಾ ಕಿ ರಾಣಿ
(ಗಾಜಿನ ಬಾವಿ, ಝಮ್‌ ಝಮ್‌ ನೀರು
ಅದರಲ್ಲಿ ವಜೂ ಮಾಡುತ್ತಿರುವವಳು  ರಾಜನ ರಾಣಿ
ಸುನ್ನೇಕಿ ಅಂಗುಟಿ ಮೇ ಹೀರೇ ಕಾ ಕಡಾ
ಹಮಾರೆ ಘರ್ ವಾಲೋಂಕೆ ನಾಮ್‌ ಲೇತಿ ಹೂಂ
ಹಿಂದೂಸ್ತಾನಮೇ ಬಡಾ
(ಚಿನ್ನದ ಉಂಗುರದಲ್ಲಿ ವಜ್ರದ ಹರಳು
ನಮ್ಮವರ ಹೆಸರು ತೆಗೆದುಕೊಳ್ಳುವೆ
ಹಿಂದೂಸ್ತಾನದಲ್ಲಿ ದೊಡ್ಡದು)

ಈ ಮೇಲಿನ ಒಡಪುಗಳಲ್ಲಿ ‘ಘರವಾಲೋ’ ಎಂಬ ಪದದ ಬದಲು ಗಂಡನ ಹೆಸರನ್ನು, ‘ಘರವಾಗಲಿ’ ಅಥವಾ ‘ರಾಜಾನ ರಾಣಿ’ ಎಂಬಲ್ಲಿ ಹೆಂಡತಿಯ ಹೆಸರನ್ನು ಸೇರಿಸುವುದು ರೂಢಿ.

ಒಗಟುಗಳು:

ಒಗಟು ಎಂದರೆ ಗೂಢಾರ್ಥವುಳ್ಳ ಜಾಣ್ಮೆಯ ಮಾತು. ಮುಸ್ಲಿಮರು ಒಗಟಿಗೆ ‘ಪಹೇಲಿ’ ಅಥವಾ ‘ಮಸ್ಲಾ’ ಎನ್ನುವರು. ಪಹೇಲಿ ಎಂದರೆ ರಹಸ್ಯವನ್ನು  ಒಳಗೊಂಡದ್ದು ಎಂಬರ್ಥ. ಮುಸ್ಲಿಮ ಮಹಿಳೆಯರು ಇಂಥ ಒಗಟುಗಳನ್ನು ತಮ್ಮ ಆಚಾರ-ವಿಚಾರ, ನುಡಿ-ನಂಬಿಕೆಗಳ ಸಂಸ್ಕೃತಿಯಲ್ಲಿ ಮೇಳೈಸಿಕೊಂಡಿದ್ದಾರೆ. ಅನ್ಯ ಸಂಸ್ಕೃತಿಯ ಪ್ರಭಾವ ಕೂಡಾ ಅದರ ಮೇಲಾಗಿರುವುದು ಸ್ಪಷ್ಟ.

ಬಿಡುವಿನ ವೇಳೆಯಲ್ಲಿ ಮಹಿಳೆಯರು ಇಂಥ ಒಗಟುಗಳನ್ನು ಹೇಳುವುದು ರೂಢಿ. ಒಂದು ವಸ್ತು ಅಥವಾ ಸಂಗತಿಯನ್ನು ಸಾಂಕೇತಿಕವಾಗಿ ವರ್ಣಿಸಲು ಒಗಟು ಪ್ರಯೋಜನಕಾರಿ. ಅದು ಸವಾಲಿನ ಧಾಟಿಯಲ್ಲಿರುವುದು. ಒಗಟಿನ ರಹಸ್ಯ ಭೇದಿಸಿ ಅರ್ಥ ಹೇಳುವವರಿಗೆ ಲೋಕಜ್ಞಾನ ಮತ್ತು ಬುದ್ಧಿ ಕೌಶಲ ಅಗತ್ಯ . ಮುಸ್ಲಿಮ ಮಹಿಳೆಯರು ಹೇಳುವ ಕೆಲವು ಒಗಟುಗಳು ಅವರ ಅಭಿವ್ಯಕ್ತಿಗೆ ಸಾಕ್ಷಿಯಾಗಿವೆ.

ಉಜ್‌ಲೆ ತಷ್‌ ತರೀ ಮೇ ಕಾಲೇ ಅಂಗೂರ್
(ಬಿಳಿಯಾದ ತಟ್ಟಿಯಲ್ಲಿ ಕಪ್ಪಾದ ದ್ರಾಕ್ಷಿ)

ಇದರ ಅರ್ಥ: ಕಣ್ಣು

ನಾನೀ ಕೆ ಲಂಗೇ ಮೇ, ನಾನಾಕಾ ಹಾಥ್‌
(ಅಜ್ಜಿಯ ಲಂಗದೊಳಗೆ ಅಜ್ಜನ ಕೈ)

ನಗೆಯ ಚಿಲುಮೆ ಚಿಮ್ಮಿಸುವ ಈ ಒಗಟಿನ ಅರ್ಥ ‘ಛತ್ರಿ’ ಆಗಿದೆ.

ಚಲೋ ಭೈ ಬಜಾರ್ ಗಯಿಂಗೆ
ದೇಟ್‌ ನಹಿಂ ಸೋಂ ಬೈಗನ್‌ ಲೈಯಿಂಗೆ
(ನಡೀರಣ್ಣ ಬಜಾರಿಗೆ ಹೋಗೋಣ, ತುಂಬು
ಇರದ ಬದನೆಕಾಯಿ ತರೋಣ)

ಇದರ ಉತ್ತರ: ತತ್ತಿ

ಬ್ಯಾರಿ ಸ್ತ್ರೀಯರು ಕೂಢಾ ಇಂಥ ಮಸ್ಲಾಗಳನ್ನು ತಮ್ಮ ಮಾತುಗಳಲ್ಲಿ ಬಳಸುತ್ತಾರೆ.

“ಉಲ್ಗ ಬೆಳ್ಳಿ, ಪರ್ತ ಬಂಗಾರ್”(ಬಾಲೆ)
(ಒಳಗ ಬೆಳ್ಳಿ, ಹೊರಗೆ ಬಂಗಾರ) (ಬಾಳೆಹಣ್ಣು)

“ಎಲ್ಲಾಕ್ರಿ ಎದ್‌ಕ್ಲ್ ಪೆಣ್ಮಕ್ಕಲೆ ಕೈ ಪಿಡಿಕ್‌ಡ” (ಬಳೆಬೇಯಿಕ್‌ರವುನು)
(ಎಲ್ಲರ ಎದುರು ಹೆಣ್ಣುಮಕ್ಕಳ ಕೈಹಿಡಿದ) ಬಳೆಗಾರ)
“ಕರ್ತೆ ಕಾಡ್ಡೆ ನಡುಲೊರು ತೆರು” (ಬೌತಲೆ)
(ಕಪ್ಪು ಕಾಡಿನ ಮಧ್ಯೆ ಒಂದು ದಾರಿ) (ಬೈತಲೆ)

ಹೀಗೆ ಹೇಳುವ ಒಗಟುಗಳು ಉಲ್ಲಾಸದ ವಾತಾವರಣವನ್ನು ಸೃಷ್ಟಿಸುತ್ತವೆ. ಅವುಗಳಲ್ಲಿನ ಹಾಸ್ಯಭಾವ ಮನುಷ್ಯನ ಬೇಸರವನ್ನು, ಚಿಂತೆ, ದುಗುಡಗಳನ್ನು ನಿವಾರಿಸಿ ಮನಸ್ಸಿಗೆ ಹಿತವನ್ನುಂಟು ಮಾಡುತ್ತವೆ.

ಗಾದೆ

ಉರ್ದು ಭಾಷೆಯಲ್ಲಿ ‘ಜರ್ಬಲ್‌ ಮಿಸಲ್‌’ ಎಂದು ಕರೆಯಲಾಗುವ ಗಾದೆ ಮಾತುಗಳನ್ನು ಮುಸ್ಲಿಮರು ‘ಕಹಾವತ್‌’ ಎನ್ನುವರು. ದಿನನಿತ್ಯದ ವ್ಯವಹಾರದಲ್ಲಿ ಸಹಜವಾಗಿ ಬಳಕೆಗೊಳ್ಳುವ ಈ ಅಲಂಕಾರಿಕ ನುಡಿಗಳು ವಿಶಿಷ್ಟ ಅನುಭವದೊಂದಿಗೆ ಸೂತ್ರಪ್ರಾಯ ನುಡಿಗಟ್ಟಿನಲ್ಲಿ ರೂಪುಗೊಳ್ಳುವಂತಹದ್ದು. ಮಾತು ಸಂಕ್ಷಿಪ್ತವಾಗಿದ್ದು, ಅರ್ಥವು ಚುರುಕಾಗಿ ಮನುಷ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು. ಅದರೊಳಗಿನ ವಿಶೇಷ ಅರ್ಥವು ಮೌಲಿಕ ಬದುಕಿಗೆ ಅರ್ಥ ತರುವುದು. ಮಹಿಳೆಯರು ಇಂಥವುಗಳನ್ನು ವಿಪುಲವಾಗಿ ಬಳಸುವರು.

“ಖುದಾ ಕೆ ಘರಮೇ ದೇರ್ ಹೈ ಅಂಧೇ ರಾ ನಂಹಿ”
(ದೇವರ ಮನೆಯಲ್ಲಿ ನಿಧಾನವಿದೆ. ಕತ್ತಲು ಇಲ್ಲ)

“ಘರ ಮೇ ನಂಹೀ ಜಾರಿ, ಅಮ್ಮಾ ಪಕೈ ಪೂರಿ”
(ಮನೆಯಲ್ಲಿ ಜೋಳವಿಲ್ಲ, ತಾಯಿ ಹೋಳಿಗೆ ಮಾಡಿದಳು)

“ದಿಲ್‌ ಮೇ ಖತರಾ, ಜೋಲಿ ಮೇ ಫತೆರಾ”
(ಕಪಟಿಗಳ ಜೋಳಿಗೆಯಲ್ಲಿ ಕಲ್ಲು ಬೀಳುವುದು)

“ದಿವಾನಾ ಉಟ್ಯಾ, ಮಾಲೀದಾ ಕುಟ್ಯಾ”
(ಹುಚ್ಚ ಎದ್ದ, ಮಾಲಿದೀ ಕುಟ್ಟಿದ)

“ಕಾಮ್‌ ಕರಗೆ ಕಮಾಲಿ ಬೋಲೇತೋ
ಕೊಂಡಾ ದೇಕೊ ಚೊಂಡಾ ಮುಂಡಾಲಿ”
(ಕೆಲಸ ಮಾಡು ಕಮಾಲಿ ಅಂದರೆ ಹೊಟ್ಟು ಕೊಟ್ಟು ತುರುಬು ಬೋಳಿಸಿಕೊಂಡಳಂತೆ)

“ಪಾಪ್‌ ಕರ್ಕೊ ಪರದೇಸಿಕೊ ಜಗಾದೇನೆ ಮೇ
ಆದಿ ರಾತ್‌ ಉಟ್ಕೋ ತೂಚ್‌ ಮೇರಿ ಜೋರು ಕಯಾ”
(ಪಾಪ ಅಂತ ಪರದೇಸಿಗೆ ಜಾಗಾ ಕೊಟ್ಟರೆ, ಮಧ್ಯರಾತ್ರಿಯೆದ್ದು ನೀನೇ ನನ್ನ ಹೆಂಡತಿ ಎಂದ)

ಬ್ಯಾರಿ ಭಾಷೆಯಲ್ಲೂ ಹಲವಾರು ಗಾದೆಗಳಿವೆ. ಪ್ರಚಲಿತವಾಗಿರುವ ಮಾತುಗಳೆಂದರೆ:

“ಆಣೆಂಙಳೆ ಕೈಲ್‌ ಪೈಸ ನಿಕ್ಕಾಲೆ
ಪೆಣ್ಣಿಂಙಳೆ ಬಾಯಿಲ್‌ ಸಲಕ ನಿಕ್ಕಾಲೆ
(ಗಂಡಸರ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಹೆಂಗಸರ ಬಾಯಲ್ಲಿ ಮಾತು ನಿಲ್ಲುವುದಿಲ್ಲ)

“ಮಕ್ಕಳೆ ಬಿಲಿಚೋಂಟೆ ಸಂತೆಗ್‌ ಪೋಗು ತೀರ್
ಪೆಂಜ್ಞಾಯಿರೆ ಕುಟಿಯೋಂಟೆ ಪೇಂಟಿಗ್‌ ಪೋಗುತೀರ್”
(ಮಕ್ಕಳನ್ನು ಕರ್ಕೊಂಡು ಸಂತೆಗೆ ಹೋಗಬಾರದು, ಹೆಂಡತಿಯನ್ನು ಕರ್ಕೊಂಡು ಪೇಟೆಗೆ ಹೋಗಬಾರದು)

“ಆಣ್‌ಗ್‌ ನೆಂಞ ಮಿಡ್ಕ್‌ ಬೇನು
ಪೆಣಗ್‌ ನಡು ಮಿಡ್ಕ್ ಬೇನು”
(ಗಂಡಸಿಗೆ ಎದೆ ಗಟ್ಟಿ ಬೇಕು, ಹೆಂಗಸಿಗೆ ಸೊಂಟ ಗಟ್ಟಿ ಬೇಕು)

ನವಾಯಿತರಲ್ಲಿ ಗಾದೆಗಳ ಬಳಕೆ ಹೆಚ್ಚಿರುವುದು.
“ಕಾಟೆ ಕೋಝ ಪಾನೆ ಕೌನ್ವೆ ಖಾಂವ ಚೆ
ಬದಿ ಕರೋನ್‌ ನೇಕಿ ಕು ನೇವನ್‌ ಯಾವಂಚೆ ತಾನಿಸ್‌”
(ಮುಳ್ಳು ಬಿತ್ತಿ ಬೆಳೆದು ತಿಂದು ಸುಖ ಪಟ್ಟವನಿಲ್ಲ. ಪಾಪ ಮಾಡಿ ಪುಣ್ಯ ಪಡೆದು ಸುಖದಿಂದಿದ್ದವನಲ್ಲ)

“ದೂರ್ಲಾನ್‌ ಎಲ್ಡನ್‌ ಯಾಸು ಲಗ್ಲ ಗೇಲಾನ್‌ ಕಾಂಟೆ”
(ದೂರದಿಂದ ನೋಡಿದರೆ ಹಸಿರು, ಹತ್ತಿರ ಹೋದರೆ ಬರೀ ಮುಳ್ಳು)

ಹೀಗೆ ಮುಸ್ಲಿಮ್‌ ಮಹಿಳೆಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಗಾದೆ ಮಾತು ಜೀವನದ ಸೊಗಡಿಗೆಂದೇ ಬಳಕೆಯಾಗುವುದು. ಅದರೊಳಗಿನ ವಿಡಂಬನೆ, ವ್ಯಂಗ್ಯ, ಕಟಕಿ ಸೂಜಿಯ ಮೊನೆಯಂತಿದ್ದರೂ ಅದು ಉಂಟು ಮಾಡುವ ನೋವು ತಾತ್ಕಾಲಿಕವಾದುದು. ಅಪಮಾನಕ್ಕೆಂದು, ದೂಷಿಸಲೆಂದು ಇಂಥ ಮಾತು ಇರದೆ ಮನುಷ್ಯನ ವಿವೇಕದ ಮೇಲೆ ಕುಳಿತ ಧೂಳನ್ನು ಒರೆಸಿ ಅದರ ಹೊಳಪನ್ನು ಪ್ರಖರಗೊಳಿಸುವುದಕ್ಕಾಗಿ ಇರುವಂತಹವು. ವ್ಯಕ್ತಿಯ ಕಪಟತನವನ್ನು ಬಯಲು ಮಾಡಿ ಹೃದಯವನ್ನು ಪರಿಶುದ್ಧಗೊಳಿಸುವ ಇಂಥ ಮಾತುಗಳನ್ನು ಮುಸ್ಲಿಮರು ಧಾರಾಳವಾಗಿ ಬಳಸುವರು. ಹೆಣ್ಣಿನ ಅನುಭವ ಇಂಥ ಮಾತುಗಳನ್ನು ಸೃಜಿಸುವುದು ಕೂಡಾ ಅದ್ಭುತವೇ.

ಕುಟುಂಬ ಸಂವರ್ಧನೆ

ತನ್ನ ಕುಟುಂಬದ ಸುಖ ಮತ್ತು ಏಳಿಗೆಯ  ತಹತಹಿಕೆಯಲ್ಲಿ ಮುಸ್ಲಿಮ ಮಹಿಳೆಯರು ತಮ್ಮ ಸ್ವಂತ ಹಿತಾಸಕ್ತಿಯನ್ನು ಲೆಕ್ಕಿಸುವುದಿಲ್ಲ. ಸಾಮಾನ್ಯ ಮಹಿಳೆಯಂತೂ ತನ್ನನ್ನು ಪಣತೆಯಲ್ಲಿನ ಬತ್ತಿಯಂತೆ ನಿಸ್ಪೃಹವಾಗಿ ಉರಿಸಿಕೊಂಡು ಕುಟುಂಬಕ್ಕೆ ಬೆಳಕಾಗುವುದು ಅದ್ಭುತ ಸಂಗತಿಯಾಗಿದೆ. ಮನೆಯ ಜವಾಬ್ದಾರಿಯನ್ನು ತೂಗಿಸಿಕೊಂಡು ಹೋಗುವ ವ್ಯವಹಾರಕುಶಲತೆ ಆಕೆಯಲ್ಲ;ಇದೆ. ಅದು ಅನುಭವಜನ್ಯ. ಸಾಮಾಜಿಕ ಸ್ತರದಲ್ಲಿ ಆಕೆ ಮುಜುಗರಕ್ಕೊಳಗಾಗಬೇಕಾದ ಪರಿಸ್ಥಿತಿಯಿದೆ. ಅನಕ್ಷರತೆಯೇ ಅದಕ್ಕೆ ಕಾರಣ. ಮುಸ್ಲಿಮ ಕುಟುಂಬಗಳಲ್ಲಿ ಶಿಕ್ಷಣ ಪಡೆದ ಸ್ತ್ರೀಯರು ಅಲ್ಪ. ಮುಸ್ಲಿಮರಲ್ಲಿ ಅಲೌಕಿಕ-ಶಿಕ್ಷಣ (ಮದ್ರಸಾಶಿಕ್ಷಣ) ದಂತೆ ಲೌಕಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯವಿಲ್ಲ. ಇದರ ಪರಿಣಾಮದಿಂದ ಮುಸ್ಲಿಮ್‌ ಮಹಿಳೆ ಇತರೆ ಜನಾಂಗಗಳಲ್ಲಿನ ಸ್ತ್ರೀಯರಿಗಿಂತ ತೀರ ಹಿಂದುಳಿದಿದ್ದಾಳೆ. ಪ್ರವಾದಿಗಳು ಹೆಣ್ಣಿಗೆ ಅಲೌಕಿಕ-ಲೌಕಿಕ ಶಿಕ್ಷಣ ಸೌಲಭ್ಯ ದೊರೆಯಬೇಕಾದುದು ಅಗತ್ಯವೆಂದಿದ್ದಾರೆ. ಪುರೋಹಿತಶಾಹಿ ಬಳಗ ಮಾತ್ರ ಅದನ್ನು ಕಡೆಗಣಿಸುತ್ತಲೇ ಬಂದಿದೆ. ಅವರ ಹೇಳಿಕೆಗೆ ಕೌಲೆತ್ತಿನಂತೆ ಗೋಣು ಅಲ್ಲಾಡಿಸುವ ಸಮಾಜದ ಮುಖಂಡರು ಹೆಣ್ಣನ್ನು ಶಿಕ್ಷಣದಿಂದ ವಂಚಿಸಿದ್ದಾರೆ. ಈ ಕಾರಣದಿಂದ ಮುಸ್ಲಿಮ್‌ ಸಮಾಜದ ಶಿಕ್ಷಿತ ಪುರುಷರ ಸಂಖ್ಯೆ ಶೇಕಡಾ ೫೯.೫ ಇದ್ದರೆ, ಮಹಿಳೆಯರ ಸಂಖ್ಯೆ ಕೇವಲ ೩೮.೫% ಇದೆ. ಬಡತನ ಮತ್ತು ಅಜ್ಞಾನ ಮಹಿಳೆಯರನ್ನು ಈ ದಿಸೆಯಲ್ಲಿ ಹಿಂದುಳಿಸಿದೆ.

ಅಕ್ಷರ ಕಲಿಕೆಗೆ ಬಡತನ ಅಡ್ಡಿ ಎನ್ನುವುದು ಒಂದು ತೋರಿಕೆಯ ಕಾರಣ. ಅಜ್ಞಾನವೇ ಮಿಗಿಲಾಗಿ ಹೆಣ್ಣನ್ನು ಕತ್ತಲಲ್ಲಿ ಇಡುವ ಇರಾದೆ ಅಪಾಯಕಾರಿ ನಿಲುವಾಗಿದೆ. ಇದರ ನೇರ ಪರಿಣಾಮ ಕುಟುಂಬದ ಮೇಲಾಗುತ್ತದೆ. ಶಿಕ್ಷಿತಳಾದ ಹೆಣ್ಣು ತನ್ನ ಕುಟುಂಬಕ್ಕೆ ಗೌರವ ತರಬಲ್ಲಳು. ಅದರ ಸಂವರ್ಧನೆಗೆ ಶ್ರಮಿಸಬಲ್ಲಳು. ಸಾಮಾಜಿಕವಾಗಿಯೂ ಊರ್ಧ್ವಗೊಳ್ಳಬಲ್ಲಳು

ಮಹಿಳೆಯರ ಪ್ರಗತಿಪರ ಕಾಳಜಿಗಾಗಿ ತುಡಿಯುತ್ತಿರುವ ಕವಯಿತ್ರಿ ಕೆ. ಶರೀಫಾ ಅವರು. “ಮುಸ್ಲಿಮ್‌ ಸಮಾಜ ಕಿತ್ತು ತಿನ್ನುವ ಬಡತನ, ಅಜ್ಞಾನ, ಸರ್ವನಾಶದಿಂದ ಬದುಕುಳಿಯಬೇಕಾದರೆ, ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ಸಮಾಜ ಉದ್ಧಾರವಾಗಬೇಕಾದರೆ ಆ ಸಮುದಾಯ ಪ್ರತಿಯೊಂದು ಹೆಣ್ಣಿಗೆ ಲೌಕಿಕ ಶಿಕ್ಷಣ ನೀಡುವುದು ತೀರ ಅವಶ್ಯ” ಎಂದು ಹೇಳುವ ಮಾತು ತೀರ ವಾಸ್ತವವಾಗಿದೆ.

“ಒಂದು ಗಂಡು ಮಗುವನ್ನು ಹೆತ್ತು ಅದನ್ನು ಸುಸಂಸ್ಕೃತವಾಗಿ, ನಾಗರಿಕ ಪ್ರಜೆಯಾಗಿ ಬೆಳೆಸಬೇಕಾದವಳು ತಾಯಿಯಾಗಿರುವುದರಿಂದ ಆ ತಾಯಿಗೆ ಅಂದರೆ ಹೆಣ್ಣಿಗೆ ಶಿಕ್ಷಣ ದೊರೆಯಬೇಕು” ಎಂಬುದು ಲೇಖಕಿ ಸಾರಾ ಅಬೂಬಕ್ಕರ್ ಅವರ ಅಭಿಪ್ರಾಯವಾಗಿದೆ.

ಆರ್ಥಿಕ ಸಾಮರ್ಥ್ಯನಿರಾಧಾರ ಸ್ಥಿತಿ

ಕುಟುಂಬದ ಆರ್ಥಿಕ ಹೊಣೆ ಪುರುಷನ ಹೆಗಲ ಮೇಲಿದೆ ಎಂದು ಇಸ್ಲಾಮ್‌ ಹೇಳಿದೆ. ಆದರೆ ಇದನ್ನು ನಂಬಿ ಕೈ ಕಟ್ಟಿ ಕುಳಿತುಕೊಳ್ಳುವ ಧೋರಣೆ ಇವತ್ತಿನ ದಿನಮಾನಗಳದ್ದಲ್ಲ ಎಂಬುದು ಮುಸ್ಲಿಮ್‌ ಮಹಿಳೆಯ ಪ್ರಜ್ಞೆಗೆ ಹೊಳೆದಿದೆ. ಕುಟುಂಬದ ಉಸಿರಾಟಕ್ಕೆ ಆರ್ಥಿಕ ಸಾಮರ್ಥ್ಯವೇ ಮೂಲ. ಅದನ್ನು ಮುಸ್ಲಿಮ್‌ ಮಹಿಳೆಯರು ಚೆನ್ನಾಗಿ ಗ್ರಹಿಸಿಕೊಂಡಿದ್ದಾರೆ. ಅವರು ಸಹಜವಾಗಿ ದುಡಿಯುತ್ತಿರುವ ಯಜಮಾನನಿಗೆ ಆಸರೆಯಾಗಿ ನಿಲ್ಲುವ ಗಟ್ಟಿತನವನ್ನು ಮೈಗೂಡಿಸಿಕೊಂಡಿದ್ದಾರೆ.

ಕೂಲಿಗೋ, ಮನೆಗಳ ಕಸಮುಸುರೆಗೋ, ಇಲ್ಲವೆ ಕಾರ್ಖಾನೆಗೋ ಹೋಗುವ ಸ್ತ್ರೀಯರು ಮುಸ್ಲಿಮ್‌ ಸಮಾಜದಲ್ಲಿ ಹೆಚ್ಚಾಗಿಯೇ ಇದ್ದಾರೆ. ಕುಟುಂಬದ ಬಡತನ ಅಥವಾ ಯಜಮಾನನ ಔದಾಸೀನ್ಯ ನಡವಳಿಕೆ, ಚಟಾದಿಗಳು ಮಹಿಳೆಯನ್ನು ದುಡಿಯಲು ಪ್ರೇರೇಪಿಸುತ್ತವೆ. ಕುಟುಂಬಸಂಚಲನಕ್ಕೆ ಅವಳ ದುಡಿಮೆಯ ಹಣವೇ ಮುಖ್ಯ ಆಧಾರವೆನಿಸುತ್ತದೆ. ಅಂಥಲ್ಲಿ ಖರ್ಚು ಹೆಚ್ಚು, ಉಳಿತಾಯ ಕಡಿಮೆ. ಹೊಟ್ಟೆ ತುಂಬಿಸಿಕೊಳ್ಳುವುದೇ ದುಸ್ತರವೆನಿಸುವ ಸನ್ನಿವೇಶಗಳಲ್ಲಿ ಆಕೆ ಬವಣೆಗಳನ್ನು ಅನುಭವಿಸುತ್ತಿರುವುದು ಎದ್ದು ತೋರುತ್ತದೆ.

ಇನ್ನು ಸ್ವತಂತ್ರವಾಗಿ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ಆರ್ಥಿಕವಾಗಿ ಸಬಲರಾಗಿರುವರು. ಪುಟ್ಟಕಿರಾಣಿ ಅಂಗಡಿ, ಬೀಡಿ ಅಂಗಡಿ ಇಟ್ಟುಕೊಂಡಿರುವ, ಕಾಳು-ಕಡಿ ಮಾರುತ್ತಿರುವ, ಕಾಯಿಪಲ್ಲೆ ಮಾರುವ, ಬಳೆ ಮಾರುವ ವ್ಯವಹಾರಗಳಲ್ಲಿನ ಸೂಕ್ಷ್ಮತೆಯಿಂದ ಕೆಲವು ಮಹಿಳೆಯರು ಆರ್ಥಿಕ ಸದೃಢತೆಯನ್ನು ಸಾಧಿಸಿಕೊಂಡಿರುವುದು ಕಂಡು ಬರುತ್ತದೆ.

ಮನೆಯಿಂದ ಆಚೆಗೆ ಹೋಗದ ಮುಸ್ಲಿಮ್‌ ಮಹಿಳೆಯರು ಕೂಡ ಹಣ ಸಂಪಾದನೆಗಾಗಿ ಹಲವಾರು ಗೃಹ ಕೈಗಾರಿಕೆಗಳನ್ನು  ನಿರ್ವಹಿಸುವರು. ಬೀಡಿ ಕಟ್ಟುವುದು, ಟೈಲರಿಂಗ್‌, ಕಸೂತಿ, ಎಮರಾಯಿಡಿಂಗ್‌, ಜೇನು ಸಾಕಾಣಿಕೆ, ನರ್ಸರಿ ಕೆಲಸ, ತರಕಾರಿ ಬೆಳೆಯುವುದು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ತಿಂಡಿ-ತಿನಿಸು ತಯಾರಿಸುವುದು, ಊದಿನ ಕಡ್ಡಿ ಹೊಸೆಯುವುದು, ಖಾರ ಕುಟ್ಟುವುದು ಇತ್ಯಾದಿ ಕೆಲಸಗಳ ಮೂಲಕ ತಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಸ್ವಂತ ಹಣವೆಂಬುದು ಸಣ್ಣ ಮೊತ್ತವಾದರೂ ಸರಿ, ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂಥ ದುಡಿಮೆಯಿಂದ ಮುಸ್ಲಿಮ್‌ ಹೆಣ್ಣು ಗಂಜಿ ಕುಡಿಯುವ ಅವಸ್ಥೆಯಿಂದ ಬಿರಿಯಾನಿ ತಿನ್ನುವ ಹಂತಕ್ಕೆ ಬಂದಾಗಿನ ಸಂತೃಪ್ತಿಯ ಬದುಕು ಮೌಲಿಕವೆನಿಸುತ್ತದೆ. ನಾಲ್ಕು ಜನರ ನಡುವೆ ಎದ್ದು ಕಾಣು ಮಾನ್ಯತೆ ಕುಟುಂಬಕ್ಕೆ ಪ್ರಾಪ್ತವಾಗುವುದು ಅವಳ ಸಂತೋಷಕ್ಕೆ ಕಾರಣವಾಗುತ್ತದೆ.

ಉದ್ಯೋಗದಲ್ಲಿರುವ ಮುಸ್ಲಿಮ್‌ ಮಹಿಳೆಯರ ಸಂಖ್ಯೆ ವಿರಳ. ಅಂಥವರು ಆರ್ಥಿಕವಾಗಿ ಸಬಲರಾಗಿರುವರು. ತಮ್ಮ ಕಾರ್ಯಾನುಭವಗಳ ಮೂಲಕ ಮಹತ್ವಾಕಾಂಕ್ಷೆಗಳನ್ನು ಮೂರ್ತಗೊಳಿಸಿಕೊಳ್ಳುವ ಉದ್ಯೋಗಸ, ಸ್ತ್ರೀಯರು ಕುಟುಂಬದ ಉನ್ನತಿಯನ್ನು ನಿರಾತಂಕವಾಗಿ ಸಾಧಿಸುವರು.

ಆರ್ಥಿಕ ಸ್ಥಿತಿ ಚೆನ್ನಾಗಿದ್ದೂ ಆಕೆ ನಿರಾಧಾರತೆಯನ್ನು ಅನುಭವಿಸುವ ಸಂಕಟ ತೀರ ಶೋಚನೀಯ. ಆಕೆ ಕೈತುಂಬ ಸಂಬಳ ತರುವ ಉದ್ಯೋಗದಲ್ಲಿಯೇ ಇರಬಹುದು ಅಥವಾ ಕೂಲಿ-ನಾಲಿ ಮಾಡಿ ಹಣ ಸಂಪಾದಿಸುತ್ತಿರಬಹುದು. ಅವಳ ದುಡಿಮೆಯ ಫಲದ ಮೇಲಿನ ಹಕ್ಕು ಮನೆಯ ಯಜಮಾನನದೇ ಆಗಿರುವುದು. ಬಡತನ, ಅಜ್ಞಾನ ಇರುವಂಥ ಕುಟುಂಬಗಳಲ್ಲಿ ಹೆಣ್ಣಿನ ಸಂಪಾದನೆಯ ಮೇಲೆ ಯಜಮಾನನ ಹದ್ದಿನ ಕಣ್ಣು ನೆಟ್ಟಿರುತ್ತದೆ. ಅವಳ  ಶ್ರಮದ ಫಲವನ್ನು ಅವನು ಹಠಮಾರಿತನದಿಂದ ಅಥವಾ ಅಕ್ರಮಣಶೀಲ ಮನೋಭಾವದಿಂದ ದಕ್ಕಿಸಿಕೊಳ್ಳುತ್ತಾನೆ. ಹಲ್ಲೆ ಮಾಡುತ್ತಾನೆ. ಗುಮಾನಿಗಳಿಂದ ನಿತ್ಯ ಕದನ ಶುರುವಿಟ್ಟುಕೊಂಡು ಹೆಂಡತಿಯನ್ನು ಹಿಂಸಿಸುತ್ತಾನೆ. ಹಣ ದೋಚುತ್ತಾನೆ. ಅಥವಾ ಮದುವೆ ಸಂಬಂಧ ಕಳಚಿಕೊಂಡು ಅವಳನ್ನು ದಿಕ್ಕೆಡಿಸುತ್ತಾನೆ. ಅವಳಿಗೆ ಸಂಬಂಧಿಸಿದ ಹಣದ ವ್ಯವಹಾರದ ಪಾರುಪತ್ಯವು ಅವನದೇ ಆಗಿರುತ್ತದೆ. ಗಂಡನ ಆಶ್ರಯ ಹೆಂಡತಿಗೆ ಅನಿವಾರ್ಯ ಎನ್ನುವ ಧರ್ಮಾಂಧರ ಅಕ್ಟೋಪಸ್‌ ಹಿಡಿತ, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಜಮಾತಿನ ಧೋರಣೆಗಳು ಅವಳನ್ನು ಶೋಷಿಸುತ್ತವೆ. ಇಸ್ಲಾಮ್‌, ಸ್ತ್ರೀಯರ ಶ್ರಮದ ಗಳಿಕೆಯನ್ನು ಅವರ ಕಾನೂನುಬದ್ಧ ಹಕ್ಕೆಂದು ಪರಿಗಣಿಸುತ್ತದೆ. ಆ ಹಕ್ಕಿನ ಮೇಲೆ ಯಾರಿಗೂ ಹಸ್ತಕ್ಷೇಪ ಮಾಡುವ ಅನುಮತಿ ಇಲ್ಲ. “ಸ್ತ್ರೀಯರು ಗಳಿಸಿದುದಕ್ಕನುಸಾರವಾದ ಪಾಲು ಅವರಿಗಿದೆ” (ಪವಿತ್ರ ಕುರ್ಆನ್‌ ೪:೩೨) ಇದು ಅವಳ ಆರ್ಥಿಕ ಸಾಮರ್ಥ್ಯಕ್ಕೆ ಇಸ್ಲಾಮ್‌ ಕೊಟ್ಟ ಉಡುಗೊರೆ. ಆದರೆ ಧರ್ಮದ ತಿರುಳನ್ನೇ ತಿರುಚಿ ಅವಳನ್ನು ಆರ್ಥಿಕ ಸ್ವಾತಂತ್ಯ್ರದಿಂದ ಕಟ್ಟಿಹಾಕಲಾಗಿದೆ.

ಹೊರ ಪ್ರಭಾವಗಳ ಹೊರಳಿನಲ್ಲಿ

ಯಾವುದೇ ಜನಾಂಗದ ಸಮುದಾಯ ಸ್ಥಗಿತಸ್ಥಿತಿಯಲ್ಲಿ ಉಳಿದು ಬಿಟ್ಟರೆ ಅದರ ಜೀವಂತಿಕೆ ಕೂಡಾ ಬಡವಾಗುತ್ತದೆ. ಸಮಾಜಕ್ಕೆ ಚಲನಶೀಲತೆ ತೀರ ಅಗತ್ಯ ಅದರೊಂದು  ಪ್ರಭಾವದಿಂದ ಆ ವರ್ಗದ ಜನ ಚೈತನ್ಯಶೀಲ ಬದುಕನ್ನು ಅನುಭವಿಸಲು ಸಾಧ್ಯವಾಗುತ್ತದೆ. ಈ ಸಾಧ್ಯತೆಯ ಹೊರಳಿನಲ್ಲಿ ಸಮಾಜ ಕೂಡಾ ಪರಿವರ್ತನೆಗೆ ತನ್ನನ್ನು ಒಪ್ಪಿಸಿಕೊಳ್ಳುತ್ತ, ಕಾಲದೊಂದಿಗೆ ಸ್ಪಂದಿಸುತ್ತ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುವುದಲ್ಲದೆ ಸತ್ಯದೊಂದಿಗೆ ರಂಗು ತುಂಬಿಕೊಳ್ಳುತ್ತ ಬೆರಗು ಹುಟ್ಟಿಸುತ್ತದೆ. ಹೀಗಾಗುವುದು ಸಹಜ ಗುಣ. ವಿಷಾದವೆಂದರೆ ಸಮುದಾಯದೊಳಗಿನ ಸ್ಥಾವರ ಮನಸ್ಸುಗಳು ಪರಂಪರೆ, ಸಂಪ್ರದಾಯ, ಧರ್ಮದ ಕಟ್ಟಳೆಗಳ ಹೆಸರಲ್ಲಿ ಜಂಗಮಶೀಲತೆಗೆ ಅಡ್ಡಗಾಲು ಒಡ್ಡುತ್ತವೆ. ಭೀತಿಯ ಭೂತವನ್ನು ಮುಗ್ಧ ಮನದೊಳಗೆ ಹೋಗಿಸಿ ಅವರನ್ನು ನಿಯಂತ್ರಿಸಿಕೊಂಡು ತಮ್ಮನ್ನು ನಿರ್ಲಜ್ಜವಾಗಿ ವಿಜೃಂಭಿಸಿಕೊಳ್ಳುತ್ತವೆ. ಇಂಥಲ್ಲಿ ಬದಲಾವಣೆ ಎನ್ನುವುದು ಕೇವಲ ಭ್ರಮೆಯೆನಿಸುವ ಅಪಾಯ ಇರುವುದು. ಆದರೆ ಪ್ರಜ್ಞಾವಂತಿಕೆ ಇರುವಲ್ಲಿ ಬೂಟಾಟಿಕೆ ಜನರ ತಂತ್ರಗಳು, ಹುನ್ನಾರಗಳು ಫಲಿತಗೊಳ್ಳುವುದಿಲ್ಲ ಎಂಬುದು ಕೂಡಾ ಅಷ್ಟೇ ನಿಜ.