ವೃತ್ತಿ:

ಮುಸ್ಲಿಮ ಮಹಿಳೆಯ ಕಾರ್ಯಕ್ಷೇತ್ರವು ಮನೆಯಾಗಿದೆ. ಆಕೆ ತನ್ನ ಪತಿಯ, ಮನೆಯವರ ಮತ್ತು ಸಂತತಿಯ ನಾಯಕಿಯಾಗಿದ್ದಾಳೆಂದು (ಬುಖಾರಿಂ) ಹದೀಸ್‌ನಲ್ಲಿ ಹೇಳಲಾಗಿದೆ. ಅದಕ್ಕಾಗಿ ಮನೆಯಾಚಿಗಿನ ವಿಷಯದ ಹೊಣೆಗಾರಿಕೆಯನ್ನು ಅವಳ ಮೇಲೆ ಹೇರಲಾಗಿಲ್ಲ. ತನ್ನ ಪ್ರಭಾವದಲ್ಲಿ ಇರುವವರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ, ನೇರ ಮಾರ್ಗದಲ್ಲಿ ನಡೆಸುವ, ಪತಿ ಒಪ್ಪಿಸಿರುವ ಸಂಪತ್ತು, ಸಾಧನ-ಸಲಕರಣೆಗಳನ್ನು ಕಾಪಾಡುವ ಸೂತ್ರಧಾರಳು ಆಕೆ. ತನ್ನ ಕುಟುಂಬದ ಸಂಸ್ಕೃತಿಯ ಜೀವತಂತು ಆದ ಅವಳ ಪರಿಶ್ರಮದ ಸಾತತ್ಯ ಗೌರವಾರ್ಹವಾದುದು.

ಮನೆಯ ಕಸ, ಮುಸುರೆ, ಅಡುಗೆ, ಬಟ್ಟೆ ತೊಳೆಯುವಿಕೆ, ಮಕ್ಕಳ ಲಾಲನೆ-ಪೋಷಣೆ, ಗಂಡನ ಉಪಚಾರ, ಅತ್ತೆ-ಮಾವರ ಸೇವೆ, ಬಂಧು-ಬಳಗದವರ ಬಗ್ಗೆ ಆಸ್ಥೆ-ಹೀಗೆ ಆಕೆ ಬೆಳಗಿನಿಂದ ರಾತ್ರಿ ತನಕ ಬಿಡುವಿಲ್ಲದೆ ಹೆಣಗಬೇಕು. ಕುಟುಂಬಕ್ಕೆ ಸಂಬಂಧಿಸಿದ ಕೆಲಸ ಸಣ್ಣದೋ ದೊಡ್ಡದೋ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಮೂಲಕ ತುಡಿಯುವ ಅದಮ್ಯ ಜೀವ ಅವಳದು.

ಬಡತನ ಇರುವಲ್ಲಿ ಅವಳ ದುಡಿಮೆಯ ದಾಳಜಿ ಇನ್ನೂ ಉತ್ಕಟವಾಗಿರುವುದು. ಇಂಥ ಸ್ಥಿತಿಯಲ್ಲಿ ಆಕೆ ಮನೆಯನ್ನು ನೆಚ್ಚಿ ಕುಳಿತುಕೊಳ್ಳುವಂತಿಲ್ಲ. ಗಂಡ ದುಡಿಯುತ್ತಿದ್ದರೂ ಸಂಸಾರದ ನಿರ್ವಹಣೆಗೆ ಆಕೆ ಜತೆಗೂಡುವುದು ಅನಿವಾರ್ಯ. ಇದನ್ನು ನಾವು ಕರ್ನಾಟಕದ ಅನೇಕ ಕಡೆಗಳಲ್ಲಿ ಕಾಣುತ್ತೇವೆ. ಗ್ರಾಮೀಣ ಭಾಗದಲ್ಲಿ ಮುಸ್ಲಿಮ್‌ ಬಡ ಹೆಣ್ಣು ಮಕ್ಕಳು ಹೊಲದ ಕೆಲಸಕ್ಕೆ ಮತ್ತು ನಗರ ಪ್ರದೇಶಗಳಲ್ಲಿ ಕೂಲಿ ಕೆಲಸಕ್ಕೆ ಮುಜುಗರವಿಲ್ಲದೆ ಹೋಗುತ್ತಾರೆ.

ನೇಕಾರಿಕೆ ಉದ್ಯೋಗದಲ್ಲಿ ಅವರು ಪುರುಷರಿಗೆ ಸರಿಸಮವಾಗಿ ದುಡಿಯುತ್ತಾರೆ. ‘ಪಾವರ್ಲೋಮ್‌’ಗಳಿರುವಲ್ಲಿ ಬಡ ಮುಸ್ಲಿಮ್‌ ಹುಡುಗಿಯರು. ಮಧ್ಯ ವಯಸ್ಸಿನವರು ಎಳೆ ಹಚ್ಚಲು ಹೋಗುತ್ತಾರೆ. ‘ಕೈಮಗ್ಗ’ದಲ್ಲಿ ಕುಳಿತು ಸೀರೆ, ಖಣಗಳನ್ನು ನೇಯ್ಯುತ್ತಾರೆ. ಅಥವಾ ಉಂಕಿ ತೋಡುವ, ಕಂಡಕಿ ಸುತ್ತುವ, ಹಣಗಿ ಕೆಚ್ಚುವ ಇವೇ ಮುಂತಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ನೇಕಾರಿಕೆ ಇರುವಲ್ಲಿ ತಟಗಾರರು ಇರುವುದು ಸಾಮಾನ್ಯ. ನೇಯ್ಗೆಗೆ ‘ತಟ್ಟು’ಬೇಕು. ತಟಗಾರರದು ‘ತಟ್ಟು’ ಕಟ್ಟುವ ಕೆಲಸ. ಮುಂಗಾರು ಜೋಳದ ದಂಟಿನ ಸಿಬಿರುಗಳಿಂದ ನಾಜೂಕಾದ ತಟ್ಟು ತಯಾರಿಸುವಲ್ಲಿ ಹೆಣ್ಣು ಮಕ್ಕಳದೇ ಸಿಂಹಪಾಲು.

ಆರ್ಥಿಕ ಸಬಲತೆ ಇಲ್ಲದಿರುವ ಮನೆಯ ಸ್ತ್ರೀಯರು ಊರೂರು ಸಂತೆ, ಜಾತ್ರೆಗಳಲ್ಲಿ ಪ್ಲಾಸ್ಟಿಕ್‌, ಕರ್ಪೂರದ ಸ್ಟೇಶನರಿ ಸಾಮಾನು ಅಥವಾ ಮನೆಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ಮಾರಾಟ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ. ಕೆಲವು ಮಹಿಳೆಯರು ಬಜಾರಿನಲ್ಲಿ ಕುಳಿತು ‘ಬಾಂಗ್ಡಾ’ (ಉಪ್ಪಿನ ಮೀನು), ಜಿಂಗಿ ಮೀನು ಮಾರುತ್ತಾರೆ. ಚುರುಮರಿ ಭಟ್ಟಿಯಲ್ಲಿ ಗಂಡಸರ ಜತೆಗೆ ಅವರೂ ಬೆವರು ಸುರಿಸುತ್ತಾರೆ. ಬಾಗವಾನ ಪಂಗಡದ ಮಹಿಳೆಯರು ಬಜಾರಿನಲ್ಲಿ ಕುಳಿತು ತರಕಾರಿ ಮಾರುವರು. ವ್ಯಾಪಾರದ ಗತ್ತುಗಾರಿಕೆಯಲ್ಲಿ ಅವರು ನಿಷ್ಣಾತರು.

ನದಾಫ್‌ ಅಥವಾ ಲಡಾಪ್‌ ಎಂದು ಕರೆಯಲ್ಪಡುವ ಪಿಂಜಾರರು ಅರಳೆಯನ್ನು ಹಿಂಜಿ, ಗಾದಿ ಮತ್ತು ತಲೆದಿಂಬು ತಯಾರಿಸುವಲ್ಲಿ ಆಸಕ್ತರು. ಈ ವೃತ್ತಿಯಲ್ಲಿ ಮಹಿಳೆಯರು ಪೂರ್ತಿ ತೊಡಗಿಸಿಕೊಂಡಿದ್ದಾರೆ. ಕೆಲವು ಕಡೆಗೆ ನೇಯ್ದ ಸೀರೆಯ ತುಂಡು ಕರಿಯನ್ನು ಹೊಸೆದು ನೂಲಿನ ಹಗ್ಗ ಮಾಡುವುದು ಕುಟುಂಬದ ಕೈಗಾರಿಕೆಯಾಗಿದೆ.

ಅತ್ತಾರ ಕುಟುಂಬದ ಸ್ತ್ರೀಯರು, ಬಿದಿರು ಬುಟ್ಟಿಗಳಲ್ಲಿ ಬಳೆ, ಚಿಗ್ಸಾ, ಮೆಹಂದಿ, ಲೋಬಾನ್‌, ಊದುಬತ್ತಿ, ಕುಂಕುಮ, ಭಂಡಾರ, ಅತ್ತರ್ (ಸುಗಂಧ ದ್ರವ್ಯ) ಇತ್ಯಾದಿ ವಸ್ತುಗಳನ್ನು ಇರಿಸಿಕೊಂಡು ಸಂತೆಯಲ್ಲಿ ಕುಳಿತು ಮಾರುತ್ತಾರೆ. ಉಳಿದ ದಿನಗಳಲ್ಲಿ ಸಮೀಪದ ಹಳ್ಳಿಹಳ್ಳಿಗಳಿಗೂ ಹೋಗಿ ವ್ಯಾಪಾರ ಮಾಡಿ ಹಣ ಮತ್ತು ದವಸ ಧಾನ್ಯಗಳನ್ನು ಸಂಪಾದಿಸುವರು.

ಮೋಡಕಾ ವಸ್ತುಗಳನ್ನು ಸಂಗ್ರಹಿಸಿ ಬೇರೆ ಕಡೆಗೆ ರವಾನಿಸುವ ವೃತ್ತಿ ಪುರುಷರಿಗಷ್ಟೆ ಮೀಸಲೆನ್ನುವುದನ್ನು ಮಿಥ್ಯಗೊಳಿಸಿ ಈ ಉದ್ಯೋಗದಲ್ಲಿ ಕೆಲವು ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಅನಕ್ಷರಸ್ಥರಾದರೂ ಮೋಡಕಾ ವಿಲೇವಾರಿ ಮಾಡುವ ವ್ಯವಹಾರದಲ್ಲಿ ಚಾಣಾಕ್ಷತೆಯನ್ನು ಅವರು ಸಿದ್ಧಿಸಿಕೊಂಡಿದ್ದಾರೆ.

ಬ್ಯಾರಿ ಸ್ತ್ರೀಯರು ಬೀಡಿ ಕಟ್ಟುವ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಬೀಡಿ ಉದ್ಯಮ ಹೊಗೆಸೊಪ್ಪು ಆಧಾರಿತ ಉದ್ಯೋಗವಾಗಿದ್ದು ಎಲ್ಲ ವಯಸ್ಸಿನ ಹೆಣ್ಣುಮಕ್ಕಳಿಗೆ ಇದು ಆರ್ಥಿಕ ಸ್ವಾವಲಂಬನೆಯನ್ನು ಒದಗಿಸಿಕೊಟ್ಟಿದೆ. ಎಲೆ ಕತ್ತರಿಸುವ, ದಾರ ಹಾಕುವ, ಬೀಡಿಗಳ ಅಂಚು ಮಡಿಚುವ, ಕಟ್ಟು ಕಟ್ಟುವ ಪ್ರತಿ ಹಂತದ ಕೆಲಸಗಳನ್ನು ಮಹಿಳೆಯರೇ ನಿರ್ವಹಿಸುತ್ತಾರೆ.

ಬೀಡಿ ಕಟ್ಟುವ ದುಡಿಮೆಯಿಂದ ಸಾವಿರಗಟ್ಟಲೆ ಹಣ ಸಂಪಾದಿಸಿ, ಕುಟುಂಬದ ನಿರ್ವಹಣೆಗೆ ಆಧಾರವೆನಿಸಿರುವ ಮಹಿಳೆಯರು ಗಮನಾರ್ಹವೆನಿಸಿದ್ದಾರೆ. ಈ ಉದ್ಯೋಗದಲ್ಲಿ ಯುವತಿಯರ ಪಾತ್ರವು ಪ್ರಧಾನವೆನಿಸಿರುವುದು. ಅವರು ಜೀವನ ನಿರ್ವಹಣೆಗೆ ತಮ್ಮ ಶ್ರಮದ ಹಣದ ಪಾಲನ್ನು ನೀಡುವುದಲ್ಲದೆ, ತಮ್ಮ ಮದುವೆಗೆ ಹಣವನ್ನು (ವರದಕ್ಷಿಣೆ) ಹೊಂದಿಸುವಲ್ಲಿ ಆಸಕ್ತರಾಗಿರುವರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ವಿಧದ ಬೀಡಿಗಳು ತಯಾರಾಗುತ್ತವೆ. ಅವು ದೇಶದ ಎಲ್ಲ ಭಾಗಕ್ಕೂ ಹೋಗುತ್ತವೆ. ಮಂಗಳೂರು ಬೀಡಿಗಳೆಂದರೆ ಎಲ್ಲಿಲ್ಲದ ಬೇಡಿಕೆ ಇದೆ. ಬೀಡಿ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಹೊರರಾಜ್ಯಗಳಿಂದ ತರಲಾಗುತ್ತದೆ. ಎಲ್ಲ ಋತುಗಳಲ್ಲಿ ಈ ವೃತ್ತಿಯನ್ನು ಮಾಡಬಹುದಾಗಿದೆ. ಇದು ಮನೆಯಲ್ಲಿಯೇ ಕುಳಿತು ಮಾಡುವ ಉದ್ಯೋಗವಾಗಿರುವುದರಿಂದ ಮುಸ್ಲಿಮ ಹೆಣ್ಣುಮಕ್ಕಳಿಗೆ, ಅದರಲ್ಲೂ ಬಡ ಕುಟುಂಬಗಳಿಗೆ ವರದಾನವೆನಿಸಿದೆ.

ಕೆಲವು ಹೆಣ್ಣುಮಕ್ಕಳು ರೆಡಿಮೇಡ್‌ ಬಟ್ಟೆ ಹೊಲೆಯುವ, ಸ್ಕೂಲ್‌ ಬ್ಯಾಗ್‌ ತಯಾರಿಸುವ, ಹೂವು ಹೆಣೆಯುವ, ಊದುಬತ್ತಿಗಳನ್ನು ಹೊಸೆಯುವ, ಹುಣಸೆ ಹಣ್ಣು ಒಡೆಯುವ, ಹಪ್ಪಳ-ಸಂಡಿಗೆ, ಉಪ್ಪಿನಕಾಯಿ ತಯಾರಿಸುವ, ಆಭರಣ, ವಾಯರಿನ ಬಾಸ್ಕೆಟ್ಟು, ಚೀಲ ತಯಾರಿಸುವಿಕೆ ಇತ್ಯಾದಿ ವೃತ್ತಿಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು, ಆದಾಯ ಗಳಿಸಿ ಕುಟುಂಬವನ್ನು  ಚಲನಶೀಲಗೊಳಿಸುತ್ತಾರೆ.

ವಿದ್ಯಾವಂತ ಮುಸ್ಲಿಮ ಮಹಿಳೆಯರು ಸರಕಾರಿ, ಅರೆಸರಕಾರಿ, ಖಾಸಗಿ ಕಂಪನಿಗಳಲ್ಲಿ, ಶಿಕ್ಷಣ, ವೈದ್ಯಕೀಯ, ಬ್ಯಾಂಕು, ಸಾರಿಗೆ ಇತ್ಯಾದಿ ಇಲಾಖೆಗಳಲ್ಲಿ ಅನೇಕ ಬಗೆಯ ವೃತ್ತಿಗಳಲ್ಲಿ ನಿರತರಾಗಿದ್ದು ತಮ್ಮ ಕುಟುಂಬಗಳ ಜೊತೆಗೆ ಸಮಾಜಕ್ಕೂ ಹೊಸ ಆಯಾಮ ತರುವಲ್ಲಿ ಶ್ರಮಿಸುತ್ತಿದ್ದಾರೆ.

ನವಾಯಿತ ಮಹಿಳೆಯರು ಯಾವ ವೃತ್ತಿಯನ್ನೂ ಮಾಡುವುದಿಲ್ಲ. ಅವರಿಗೆ ಮನೆಯ ಕೆಲಸ ಮತ್ತು ಧಾರ್ಮಿಕ ವಿಧಿಗಳಾದ ಕುರ್ಆನ್‌ ಪಠಣ, ನಮಾಜ ಮಾಡುವುದು ಪ್ರಧಾನವೆನಿಸಿದೆ.

ಇತ್ತೀಚೆಗೆ ಮುಸ್ಲಿಮ ಸ್ತ್ರೀಯರು ಪುರುಷರಂತೆ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗವನ್ನು ನಿರ್ವಹಿಸುವ ಮಹತ್ವಾಕಾಂಕ್ಷೆ, ಎದೆಗಾರಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಐ.ಟಿ-ಬಿ.ಟಿ ಯಿಂದ ಹಿಡಿದು ವಾಹನ ನಡೆಸುವ, ಕಂಡಕ್ಟರ್ ಕಾರ್ಯ ನಿರ್ವಹಿಸುವವರೆಗಿನ ಉದ್ಯೋಗಗಳಲ್ಲಿ ಮುಸ್ಲಿಮ ಹೆಣ್ಣುಮಕ್ಕಳು ತಮ್ಮ ಶಕ್ತೆಯನ್ನು ಸಾಬೀತುಪಡಿಸುತ್ತ ವೃತ್ತಿ ಕೌಶಲ್ಯಕ್ಕೆ ಮೌಲ್ಯತೆ ತಂದುಕೊಳ್ಳುತ್ತಿದ್ದಾರೆ.

ಜೀವನ ಪದ್ಧತಿ:

ಇಸ್ಲಾಮ್‌ ಧರ್ಮದ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡಿರುವ ಮುಸ್ಲಿಮರ ಜೀವನ ಪದ್ಧತಿ ವಿಶಿಷ್ಟವಾದುದು. ಅದರ ಮೇಲೆ ಸ್ಥಳೀಯ ನಂಬಿಕೆಗಳು ಕೂಡಾ ಪ್ರಭಾವ ಬೀರಿದ್ದು ಅದರಲ್ಲಿ ವೈವಿಧ್ಯತೆಯನ್ನು ಕೂಡಾ ಕಾಣಬಹುದಾಗಿದೆ. ಮುಸ್ಲಿಮ್‌ ಕುಟುಂಬವೆಂದರೆ ಗಂಡ-ಹೆಂಡತಿ, ಮಕ್ಕಳನ್ನು ಒಳಗೊಂಡ ಒಂದು ಘಟಕ. ತಂದೆ. ತಾಯಿ ಮಕ್ಕಳು ಅಗತ್ಯವಾಗಿ ಅನುಸರಿಸಬೇಕಾದ ಕುಟುಂಬದ ಕರ್ತವ್ಯಗಳನ್ನು ಇಸ್ಲಾಮ್‌ ಹೇಳಿಕೊಟ್ಟಿದೆ. ಅದರಂತೆ ಕುಟುಂಬದ ಹೊಣೆಗಾರಿಕೆಯನ್ನು ಕುಟುಂಬದ ಸದಸ್ಯರು ನಿರ್ವಹಿಸುವುದು ಪದ್ಧತಿಯಾಗಿದೆ.

ಕುಟುಂಬದ ಸಾರಥ್ಯ ಮನೆಯ ಯಜಮಾನನದಾಗಿದೆ. ಹಿಂದೂ ಧರ್ಮದಂತೆ ಇಲ್ಲಿಯೂ ಪಿತೃಪ್ರಧಾನ ವ್ಯವಸ್ಥೆಯಿದೆ. ಮನೆಯ ಯಜಮಾನ ಆರ್ಥಿಕವಾದ, ಸಾಮಾಜಿಕವಾದ ಹೊರಗಿನ ಎಲ್ಲಾ ವ್ಯವಹಾರಗಳನ್ನು ನಿಭಾಯಿಸುತ್ತಾನೆ. ಮನೆಯ ಜವಾಬ್ದಾರಿ ಮಹಿಳೆಯರದೇ ಆಗಿದೆ. ಹೊರಗೆ ದುಡಿಯಲು ಹೋಗದ ಮಹಿಳೆ ಪುರುಷನ ಆಲೋಚನೆಗೆ ಹೊಂದಿಕೊಳ್ಳುವಳು. ಎಂಥ ಸಮಸ್ಯೆಗಳಿದ್ದರೂ ಅದರ ಪರಿಹಾರಕ್ಕೆ ಗಂಡನೇ ಸೂತ್ರಧಾರ. ಹೆಂಢತಿ ಮುಂದಾಗಿ ಅವನ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ. ಗಂಡ ಇಚ್ಛಿಸಿದರೆ ಆಕೆ ಸಲಹೆ ಕೊಡಬಹುದು. ಹಿರಿಯರು ಇಲ್ಲದ ಕುಟುಂಬಗಳಲ್ಲಿ ಮಹಿಳೆಯ ಸ್ತ್ರೀಯರು ಮನೆಯ ನಿರ್ವಹಣೆಯನ್ನು ಆಲಕ್ಷಿಸುವುದಿಲ್ಲ. ಅವಿಭಕ್ತ ಕುಟುಂಬ ಇರುವ ಕೆಲವೆಡೆ ಮನೆಯ ಯಜಮಾನನಿದ್ದರೂ ಅಲ್ಲಿ ಅವನ ಹೆಂಡತಿಯದೇ ಮೇಲುಗೈ ಇರುವುದು. ಆಕೆ ಮಕ್ಕಳನ್ನು, ಸೊಸೆಯಂದಿರನ್ನು ನಿಯಂತ್ರಿಸಿಕೊಂಡಿರುತ್ತಾಳೆ. ಆಸ್ತಿಯ ಹಕ್ಕು ಮಾತ್ರ ಗಂಡು ಮಕ್ಕಳಿಗೆ ಇರುವುದು.

ಮಾಪಿಳ್ಯಾ ಕುಟುಂಬವು ಮೊದಲು ಮಾತೃ ಮೂಲದ್ದಾಗಿತ್ತು. ಉತ್ತರ ಮಲಬಾರ್ನ ರಾಜಮನೆತನಗಳಲ್ಲಿ ವಾರೀಸು ಹಕ್ಕಿಗಾಗಿ ಮಾತ್ರ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು. ಅವರ ಮನೆತನದ ಮಹಿಳೆಯರವನ್ನು ‘ಬೇಬಿ’ ಎಂದು ಗೌರವಿಸುತ್ತಿದ್ದರು. ಕುಟುಂಬ ಮೂಲವೂ ಸ್ತ್ರೀ ಆಧಾರವಾಗಿರುತ್ತಿತ್ತು. ಭಾರತದಲ್ಲಿ ಶರೀಯತ್‌ ನಿಯಮಾಧಾರಿತ ಮುಸ್ಲಿಮ ನಿಯಮ ಜಾರಿಗೊಂಡು, (ಮೊಪ್ಲಾ ಮರುಮಕ್ಕತಾಯಂ ನಿಯಮ) ಮಾತೃಮೂಲ ಪದ್ಧತಿಯನ್ನು ತೆಗೆದು ಹಾಕಿ ‘ಪಿತೃಮೂಲ’ ವಾರೀಸು ಹಕ್ಕನ್ನಾಗಿ ಪರಿವರ್ತಿಸಿತು. (ಬಿ.ಎಂ.ಇಚ್ಲಂಗೋಡ್-ತುಳುನಾಡ ಮುಸ್ಲಿಮರು ಬ್ಯಾರಿ ಸಂಸ್ಕೃತಿ-ಪುಟ ೪೭)

ಬ್ಯಾರಿಗಳಲ್ಲಿ ಪಿತೃಪ್ರಧಾನ ಕುಟುಂಬ ವ್ಯವಸ್ಥೆ ಇದೆ. ಆದರೆ ಸ್ತ್ರೀಯರಿಗೆ ಸಾಮಾಜಿಕ ಸ್ಥಾನ-ಮಾನವಿದೆ. ತನ್ನ ಗಂಡ ಅರೆಬಿಯಾದಲ್ಲಿ ದುಡಿಯುತ್ತಿದ್ದರೂ ಹೆಂಡತಿಯಾದವಳು ತನ್ನ ಅತ್ತೆ-ಮಾವ, ತಾಯಿ-ತಂದೆ, ಮತ್ತಿತರ ಕುಟುಂಬದ ಸದಸ್ಯರೊಡನೆ ಅನ್ಯೋನ್ಯದಿಂದ ಬದುಕು ನಡೆಸುವಳು. ಸಹನೆ, ದಯೆ, ಮಾನವೀಯತೆ, ಪರಿಶುದ್ಧತೆಗೆ ಮಹತ್ವ ಕೊಟ್ಟ ಈ ಬ್ಯಾರಿ ಸ್ತ್ರೀಯರು ಧಾರ್ಮಿಕವಾಗಿ ತುಂಬಾ ಆಸ್ಥೆ ಹೊಂದಿದ್ದು, ಅಲ್ಲಾಹ್‌ರಸೂಲರ ಮೇಲೆ ಭಯ,ಭಕ್ತಿ, ವ್ಯಕ್ತಪಡಿಸುತ್ತ, ಕೈಹಿಡಿದ ಗಂಡನಿಗೆ ಗೌರವ ತೋರುವರು. ಇದು ಸ್ಥಿರವಾದ ಕುಟುಂಬಕ್ಕೆ ನೆಲೆಯಾಗಿರುವುದು. ಮನೆಗೆ ಬಂದ ಅತಿಥಿಗಳನ್ನು ಆದರವಾಗಿ ಎದುರುಗೊಂಡು ಉಪಚರಿಸುವರು. ಸಂಬಂಧವನ್ನು ಆಪ್ತವಾಗಿ ಉಳಿಸಿಕೊಳ್ಳುವ ಅನನ್ಯ ಸಂಸ್ಕೃತಿ ಅವರದಾಗಿದೆ.

ನವಾಯಿತರಲ್ಲಿ ಮಾತೃಪ್ರಧಾನ ಕುಟುಂಬವ್ಯವಸ್ಥೆಯಿದೆ. ಪುರುಷರು ದುಡಿಯಲು ಹೊರದೇಶಗಳಿಗೆ ಹೋಗುವರು. ತಾಯಿಗೆ ಕುಟುಂಬದ ಯೋಗಕ್ಷೇಮದ ಜವಾಬ್ದಾರಿ ಇರುವುದು. ಮದುವೆಯಾದ ನಂತರ ಹೆಣ್ಣು ತವರಿನಲ್ಲಿಯೇ ಉಳಿಯುತ್ತಾಳೆ. ಮನೆಯಲ್ಲಿರುವ ತಂದೆ, ತಾಯಿ. ಅಣ್ಣ-ತಮ್ಮಂದಿರೊಡನೆ ಅವರ ಮಕ್ಕಳು ಎಲ್ಲಾ ಒಟ್ಟಾಗಿ ವಾಸಿಸುತ್ತಾಋಎ. ಅವರದು ಅವಿಭಕ್ತ ಕುಟುಂಬ. ಒಂದೆರಡು ಮಕ್ಕಳಾದ ಮೇಲೆ ಮತ್ತು ಸ್ವಂತ ಮನೆ ಕಟ್ಟಿದ ನಂತರದಲ್ಲಿ ಹೆಣ್ಣಾಗಲಿ, ಗಂಡಾಗಲಿ ಮನೆಯಿಂದ ಬೇರೆಯಾಗುವ ಪದ್ಧತಿ ಇದೆ. ಕುಟುಂಬ ಮಾತೃಪ್ರಧಾನವಾಗಿರುವುದರಿಂದ ಆಸ್ತಿಯ ಪಾಲು ಹೆಣ್ಣು ಮಕ್ಕಳಿಗೆ ಸಿಗುತ್ತದೆ.

ವಿವಾಹ: ಧರ್ಮಸಮ್ಮತ:

ಮುಸ್ಲಿಮರ ಜೀವನದಲ್ಲಿ ‘ವಿವಾಹ’ ಕಡ್ಡಾಯದ ನಿಯಮವೆನಿಸಿದೆ. ವಿವಾಹೇತರ ಹೆಣ್ಣು-ಗಂಡಿನ ಸಂಬಂಧಕ್ಕೆ ಅವಕಾಶಗಳೇ ಇಲ್ಲ. ಮತ್ತು ಅಂಥ ಸಂಬಂಧವು ನೈಚ್ಛಿಕ ಅನುಸಂಧಾನದ್ದು ಅಥವಾ ಹರಾಮದ್ದು ಎನ್ನಲಾಗಿದೆ. ಧರ್ಮಸಮ್ಮತವಾದ ವೈವಾಹಿಕ ಸಂಬಂಧವು ಹೆಣ್ಣು-ಗಂಡನ್ನು ಸುರಕ್ಷಿತವಾಗಿಡುವುದು. ಕೇವಲ ಭೋಗದ ಉದ್ದೇಶದಿಂದ ವಿವಾಹದ ನೆಪದಲ್ಲಿ ಒಬ್ಬಳನ್ನು ಇಟ್ಟುಕೊಳ್ಳುವುದನ್ನು ಇಸ್ಲಾಮ್‌ ನಿರಾಕರಿಸುತ್ತದೆ. “ಹೆಣ್ಣು-ಗಂಡು ವಿವಾಹಬಂಧನದಲ್ಲಿರಬೇಕು. ಮುಕ್ತ ಲೈಂಗಿಕ ಸಂಬಂಧ ಹೊಂದಿರಬಾರದು” (ಕುರ್ಆನ್‌ ೪:೨೫)

ಮನುಷ್ಯ ವಿವಾಹ ಮಾಡಿಕೊಳ್ಳುವ ಮೂಲಕ ತನ್ನನ್ನು ಅತಿರೇಕದ, ಪತನಮುಖಿ ಕ್ರಿಯೆಗಳಿಂದ ರಕ್ಷಿಸಿಕೊಳ್ಳಬೇಕು. ವಿವಾಹವು (ಇಹ್ಸಾನ್‌) ಈ ದೃಷ್ಟಿಯಿಂದ ಅವನಿಗೆ ಭದ್ರಕೋಟೆ (ಹಿಸ್ನ್) ಅನಿಸಿದೆ.

ಪ್ರಾಪ್ತ ವಯಸ್ಸಿನ ಹೆಣ್ಣು-ಗಂಡಿಗೆ ವೈವಾಹಿಕ ಸಂಬಂಧ ಏರ್ಪಡಿಸುವುದು ಹೆತ್ತವರ ಮತ್ತು ಸಮಾಜದ ಕರ್ತವ್ಯ ಆಗಿದೆ. ಅದಕ್ಕೆ ಇಸ್ಲಾಮ್‌ ಧರ್ಮವು ವಿವಾಹದ ವಿಧಿ-ವಿಧಾನಗಳನ್ನು ರೂಪಿಸಿದೆ. ಮೊಹರಮ್‌, ಸಫರ್ ತಿಂಗಳುಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮುಸ್ಲಿಮರು ಮದುವೆ ಕಾರ್ಯಗಳನ್ನು ಜರುಗಿಸುವರು.

ಬಾಲ್ಯ ವಿವಾಹವನ್ನು ಕೆಲವು ಸಲ ಭಾವನಾತ್ಮಕ ಮತ್ತು ಅಜ್ಞಾನದ ನೆಲೆಯಲ್ಲಿ ನಡೆಸುವ ಪದ್ಧತಿಯಿತ್ತು. ಈಗಲೂ ಅದು ಕೆಲವು ಕಡೆಗೆ ಇರಬಹುದು. ಬಾಲ್ಯವಿವಾಹ ಬ್ಯಾರಿಗಳಲ್ಲಿ ಸಾಮಾನ್ಯವಾಗಿತ್ಗತು. ಇವತ್ತು ಅವರಲ್ಲಿಯೂ ಅದು ಬದಲಾವಣೆ ಕಂಡಿದೆ.

ಮುಸ್ಲಿಮರು ವಿವಾಹವನ್ನು ನಿಕಾಹ್‌, ಶಾದಿ ಎಂದು ಕರೆಯುತ್ತಾರೆ. ಬ್ಯಾರಿಗಳು ಮಂಗಿಲ, ಕಾಯನ, ಕಾಯಿಂತ್‌, ಕಾನತ್‌ ಎಂದು ಕರೆಯುವ ರೂಢಿಯಿದೆ. ಹೆಣ್ಣು ನೋಡುವುದರಿಂದ ಹಿಡಿದು ಆಕೆಯನ್ನು ಮನೆ ತುಂಬಿಸಿಕೊಳ್ಳುವ ಹಂತದವರೆಗಿನ ಎಲ್ಲ ಕ್ರಿಯೆಗಳನ್ನು ‘ನಿಕಾಹ್‌’ ಒಳಗೊಂಡಿರುತ್ತದೆ. ಹೆಣ್ಣು-ಗಂಡಿನ ಸಂಬಂಧ ಕುದುರಿಸುವಲ್ಲಿ ಮದುವೆ ದಲ್ಲಾಳಿ ಅಥವಾ ಮಧ್ಯವರ್ತಿಗಳ ಸಹಕಾರ ತೀರ ಅಗತ್ಯವೆನಿಸಿದೆ. ಒಪ್ಪಿಗೆ ಅನಿಸಿದರೆ ಹೆಣ್ಣು-ಗಂಡಿನ ಕಡೆಯ ಹಿರಿಯರು ಮಾತುಕತೆ ನಡೆಸುವರು. ಸಂಬಂಧ ನಿರ್ಧಾರವಾದರೆ ‘ವೀಳ್ಯೆಶಾಸ್ತ್ರ’ ನೆರವೇರಿಸುವರು. ಇದಕ್ಕೆ ಮಂಗ್ನಿ ಅಥವಾ ‘ನಿಸ್‌ಬತ್‌’ ಎನ್ನುವರು. ಬ್ಯಾರಿಗಳು ಇದಕ್ಕೆ ವರಪ್ಪು (ನಿಶ್ಚಿತಾರ್ಥ) ಎಂದು ಕರೆಯುವರು. ಈ ಸಂದರ್ಭದಲ್ಲಿ ಮುಸ್ಲಿಮ ಹಿರಿಯರ ಸಮ್ಮುಖದಲ್ಲಿ ಹೆಣ್ಣು-ಗಂಡಿಗೆ ಕೊಡ ಕೊಳುವ ವಸ್ತುಗಳ ಬಗ್ಗೆ ಒಪ್ಪಂದಕ್ಕೆ ಬಂದು ಕಾಗದ ಬರೆಸುವರು. ಮುಂದೆ ‘ರಜಾ ಪೂಚನಾ’ ಶಾಸ್ತ್ರಮಾಡಿ ವಿವಾಹದ ದಿನ ಗೊತ್ತು ಪಡಿಸುವರು.

ಮುಸ್ಲಿಮರ ವಿವಾಹದ ರಸಂ (ಕಾರ್ಯಕ್ರಮ)ಗಳು ವಿಶಿಷ್ಟವೂ ರೋಚಕವೂ ಆಗಿವೆ. ಎಲ್ಲ ರಸಂಗಳಲ್ಲಿ ಹೆಣ್ಣಿನ ಪಾಲ್ಗೊಳ್ಳುವಿಕೆ ಪ್ರಧಾನವಾಗಿರುವುದು. ರಸಂಗಳ ಅಂತಿಮ ಹಂತದಲ್ಲಿ ಖಾಜಿಯವರು ವಧು-ವರರ ಎರಡೂ ಕಡೆಯ ವಕೀಲರ ಮಧ್ಯಸ್ಥಿಕೆಯಲ್ಲಿ ‘ನಿಕಾಹ್‌’ ನೆರವೇರಿಸುವರು.

ಮುಸ್ಲಿಮರ ಜೀವನದಲ್ಲಿ ‘ನಿಕಾಹ್‌’ ಒಂದು ಒಪ್ಪಂದವಾಗಿದೆ. ಹೆಣ್ಣು-ಗಂಡಿನ ದಾಂಪತ್ಯ ಜೀವನಕ್ಕೆ ಸಮಾಜದಲ್ಲಿ ಗೌರವವಿದೆ. ದಾಂಪತ್ಯವು ಅನ್ಯೋನ್ಯವೂ, ಅರ್ಥಪೂರ್ಣವಾಗಿಯೂ, ಸುಸಂಸ್ಕೃತ ಕುಟುಂಬವೊಂದನ್ನು ರೂಪಸಿಬೇಕೆಂಬುದು ಇಸ್ಲಾಮಿನ ಆಶಯವಾಗಿದೆ. ಇದು ವಿವಾಹದ ಪರಮ ಉದ್ದೇಶವೂ ಆಗಿದೆ.

ಗಂಡ-ಹೆಂಡಿರಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿ, ಸಂಧಾನದ ಬಾಗಿಲು ಮುಚ್ಚಿದಾಗ ಗಂಡನು ‘ತಲಾಕ್‌’ ಕೊಡುವುದಕ್ಕೆ ಇಸ್ಲಾಮ್‌ ಅನುಮತಿಸಿದೆ. ಆದರೆ ಈ ‘ತಲಾಕ್‌’ ಹೆಣ್ಣನ್ನು ಹಿಂಸಿಸುವುದಕ್ಕೆ ಅಥವಾ ಅವಳ ಬದುಕನ್ನು ಅತಂತ್ರಗೊಳಿಸುವುದಕ್ಕಾಗಿ ಮಾತ್ರ ಇರಬಾರದು ಎನ್ನುವುದಕ್ಕಾಗಿ ಅದು ನಿಯಮಗಳನ್ನು ರೂಪಿಸಿದೆ. ಹಾಗೆಯೇ ಹೆಣ್ಣಿನ ಹಕ್ಕಾಗಿರುವ ‘ಖುಲಾ’ ಪದ್ಧತಿ ಕೂಡಾ. ಆಕೆಗೆ ಪತಿಯ ಸ್ವಭಾವ ಹೊಂದಿಕೆಯಾಗದಿದ್ದರೆ ಅಥವಾ ಅವನಲ್ಲಿ ದೋಷಗಳಿದ್ದರೆ ಅವನಿಂದ ವಿವಾಹ ವಿಚ್ಛೇದನವನ್ನು ಅಪೇಕ್ಷಿಸಬಹುದು. ಆದರೆ ‘ಖುಲಾ’ ಎನ್ನುವದು. ಅವಳ ಸ್ಚೇಚ್ಛಾಚಾರದ ಈಡೇರಿಕೆಗಾಗಿ ಎನ್ನುವಂತಿರಬಾರದೆನ್ನುತ್ತದೆ ಇಸ್ಲಾಮ್‌.

ಪುನರ್ ವಿವಾಹ ಮಾಡಿಕೊಳ್ಳಲು ಮುಸ್ಲಿಮ ಹೆಣ್ಣು-ಗಂಡಿಗೂ ಅವಕಾಶವಿದೆ. ಆದರೆ ಹೆಂಡತಿ, ಮಕ್ಕಳನ್ನು ನರಕದಲ್ಲಿ ಹಾಕಿದವನಿಗೆ ಇದು ನಿಷೇಧವಿದೆ. ಹೆಂಡತಿ ದೈವಾಧೀನಳಾದರೆ ಅಥವಾ ಅವಳಿಂದ ಮಕ್ಕಳಾಗದಿದ್ದರೆ, ಆಕೆ ಕಾಯಿಲೆಗಳಿಂದ ಸುದೀರ್ಘವಾಗಿ ನರಳುವಂತಿದ್ದರೆ ಅವನು ಪುನರ್ ವಿವಾಹ ಮಾಡಿಕೊಳ್ಳಬಹುದು. ವಿಧವೆಯಾದ ಅಥವಾ ಗಂಡನಿಂದ ವಿಚ್ಛೇದಿತಳಾದ ಹೆಣ್ಣು ಮರುವಿವಾಹ ಮಾಡಿಕೊಳ್ಳಬಹುದು. ಸಮಾಜ ಈ ದಿಸೆಯಲ್ಲಿ ಹೆಣ್ಣಿನ ಪರವಾಗಿ ಕೂಡಲೇ ಸ್ಪಂದಿಸಬೇಕೆಂದು ಇಸ್ಲಾಮ್ ಹೇಳುತ್ತದೆ.

ಸೀಮಂತ ಸಂಭ್ರಮ:

ಹೆಣ್ಣು ಮೊದಲ ಸಲ ಗರ್ಭ ಧರಿಸಿದರೆ ಆಕೆಯ ತವರು ಮತ್ತು ಗಂಡನ ಮನೆಗಳಲ್ಲಿ ಸಂಭ್ರಮ ಹೆಚ್ಚುವುದು. ಈ ಕ್ಷಣದಲ್ಲಿ ಆಕೆಯ ಬಗ್ಗೆ ಎಲ್ಲರೂ ವಿಶೇಷ ಕಾಳಜಿ ವಹಿಸುವರು . ವಂಶದ ಕುಡಿಯನ್ನು ಗರ್ಭದಲ್ಲಿ ಹೊತ್ತ ಆಕೆಯ ಬಯಕೆಗಳನ್ನು ಅತ್ಯಂತ ಮುತುವರ್ಜಿಯಿಂದ ಈಡೇರಿಸಲಾಗುವುದು. ಅವಳ ಸೀಮಂತವು ಸಂಭ್ರಮದಿಂದ ನೆರವೇರುವುದು. ಇದನ್ನು ‘ಚೋಲಿ’ ಕಾರಣವೆಂದು ಮುಸ್ಲಿಮರು ಕರೆಯುತ್ತಾರೆ. ಬ್ಯಾರಿ ಭಾಷೆಯಲ್ಲಿ ಇದು ‘ಅಪ್ಪತ್ತೆಮಂಞಳ, ಆಗಿದೆ. ಕರ್ಪುಂಚಿ (ಬಸುರಿ) ಬಯಸುವ ತಿಂಡಿ-ತಿನಿಸುಗಳನ್ನು, ತವರು-ಗಂಡನ ಮನೆಯವರು ಅವಳಿಗೆ ತಿನ್ನಿಸುವ ಕಾರ್ಯಕ್ರಮ ‘ಅಪ್ಪತ್ತೆಮಂಞಳ’ ಆಗಿದೆ. ಈಗದನ್ನು ‘ಬಿರಂದ್‌’ ಎಂದು ಕರೆಯಲಾಗುತ್ತದೆ.

ನವಾಯಿತರು ಗರ್ಭಿಣಿ ಸ್ತ್ರೀಯನ್ನು ವಿಹಾರಕ್ಕಾಗಿ ಕರೆದುಕೊಂಡು ಹೋಗುವರು. ಆಕೆಗೆ ವಿಶೇಷ ಅಲಂಕಾರಗಳನ್ನು ಮಾಡಿ ತಲೆತುಂಬಾ ಕೂದಲು ಕಾಣದಂತೆ ಹೂ ಮುಡಿಸಿ, ಹೂಜಡೆ ಹೆಣೆದು ಕುರ್ಚಿಯ ಮೇಲೆ ಕೂಡಿಸಿ ಹೆಂಗಸರೆಲ್ಲ ಹಾಡುವರು.

‘ಚೋಲಿ’ಯನ್ನು ಉತ್ತರ ಕರ್ನಾಟಕದವರು ‘ಕುಬುಸದ ಕಾರಣ’ ಎನ್ನುವುದು ರೂಢಿ. ಹೆಣ್ಣಿಗೆ ಹೆರಿಗೆಯಾಗುವುದು ತವರಿನಲ್ಲಿಯೇ.

ಛಟ್ಟಿ, ಛಿಲ್ಲಾ ರಸಂ:

ಮಗು ಹುಟ್ಟಿದ ಕೂಡಲೇ ಮುಲ್ಲಾನನ್ನು ಕರೆಯಿಸಿ ‘ಆಜಾ’ ಕೂಗಿಸುವ ಸಂಪ್ರದಾಯವಿದೆ. ಮುಲ್ಲಾ ಐದು ಸಲ ‘ಆಜಾ’ ಕೂಗಿ, ನಂತರ ಮಗುವಿನ ಕಿವಿಯಲ್ಲಿ ಊದುವನು, ಹಿರಿಯರು ಗುರುತಿಸಿದ ಹೆಸರನ್ನು ಆಗಲೇ ಇಡಲಾಗುತ್ತದೆ. ಆರು ಅಥವಾ ಹನ್ನೆರಡು ದಿನಕ್ಕೆ ‘ಛಟ್ಟಿ’ ಆಚರಣೆಯೂ ನಡೆಯುತ್ತದೆ. ಮಗುವಿನ (ಹೆಣ್ಣಾಗಲಿ-ಗಂಡಾಗಲಿ) ಹುಬ್ಬು ತೀಡಿ, ಕಾಲು, ಸೊಂಟಕ್ಕೆ ಕರಿದಾರ ಕಟ್ಟುವರು, ಹೊಸ ಬಟ್ಟೆ ತೊಡಿಸಿ, ಬೆರಳಿಗೆ ಉಂಗುರ ಇಡಿಸಿ ಬಾಣಂತಿ ಮಡಿಲಿಗೆ ಹಾಕುವರು. ಮಗುವಿಗೆ ಶುಭ ಕೋರುವುದಕ್ಕಾಗಿ ಹಣತೆ ಬೆಳಗಿಟ್ಟು ಅದರ ದೀಪವನ್ನು ತೋರಿಸುವರು.

‘ಛಿಲ್ಲಾ’ ಎಂಬ ಕಾರ್ಯವನ್ನು ಮಗು ಹುಟ್ಟಿದ ನಲವತ್ತು ದಿನಕ್ಕೆ ಆಚರಿಸುವರು. ಈ ವೇಳೆಯಲ್ಲಿ ಮಗು ಮತ್ತು ತಾಯಿಯನ್ನು ಎಲ್ಲ ರೀತಿಯಿಂದ ಶುಚಿಗೊಳಿಸುವರು. ಆಮೇಲೆ ತೊಟ್ಟಿಲು ಕಾರ್ಯಕ್ರಮ, ಮಗುವಿನ ಜವಳ ಇಳಿಸುವ ಅಥವಾ ತೆಗೆಯುವ ಕಾರ್ಯಕ್ರಮ ನಡೆಯುತ್ತವೆ. ಇದನ್ನು ಬ್ಯಾರಿಯನ್ನರು ‘ಕಜಂಬು ಮಂಗಿಲ’ ಎನ್ನುವರು.

ಸಂಪ್ರದಾಯಗಳು

ಮುಸ್ಲಿಮ ಜೀವನದಲ್ಲಿ ಅನೇಕ ಬಗೆಯ ಸಂಪ್ರದಾಯಗಳುಂಟು. ಅವು ಪಂಗಡ ಮತ್ತು ಪ್ರಾದೇಶಿಕತೆಗೆ ಹೊಂದಿಕೊಂಡಂತೆ ವೈವಿಧ್ಯಮಯವಾಗಿವೆ. ಮಗುವಿಗೆ ಊಟ ಮಾಡಿಸುವ, ಮಗು ಹೊಸ್ತಿಲು ದಾಟುವ, ಹೊರಳುವ ಸಂದರ್ಭದ ಕಾರ್ಯಕ್ರಮಗಳಂತೆ ‘ಮಕ್‌ತಲ್ ’ ಎನ್ನುವುದೂ ಇದೆ. ಇದು ಮಗುವಿಗೆ ಅಕ್ಷರಜ್ಞಾನ ಮಾಡಿಸುವ ಪದ್ಧತಿ ಹೆಣ್ಣು-ಗಂಡು ಭೇದವಿಲ್ಲದೆ ನಾಲ್ಕು ವರ್ಷದ ಮಗುವಿಗೆ ಪೇಶ್‌ ಇಮಾಮ್‌ರು ‘ಇಖರಾ- ಬಿಸ್ಮಿಕಾ’ ಸೂರ ಹೇಳಿಕೊಡುವರು.

ಇದರ ನಂತರ ಮಕ್ಕಳಿಗೆ ಕುರ್ಆನ್‌ ಓದುವ, ಅದರಲ್ಲಿ ಪರಿಣತಿ ಸಾಧಿಸಿದ ಮೇಲೆ ‘ಹದಿಯಾ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿ ಸಂಬಂಧಿಕರಿಗೆ, ನೆರೆ-ಹೊರೆಯವರಿಗೆ ದಾವತ್‌ (ಊಟ) ಬುಲಾವ್‌ ಮಾಡುವರು. ‘ಕುರ್ಆನ್‌ ಹದಿಯಾ’ ಮುಗಿಸಿದ ಹೆಣ್ಣುಮಕ್ಕಳ ಬಗ್ಗೆ ಮುಸ್ಲಿಮರು ಮಹತ್ವ ಕೊಡುವರು.

ರಮಜಾನ್‌ ತಿಂಗಳಲ್ಲಿ ಮೊದಲು ಉಪವಾಸ ಆಚರಿಸಿದ ಮಗುವಿಗೆ ಹೊಸ ಬಟ್ಟೆ ತೊಡಿಸಿ ಇಫ್ತಿಯಾರ್ ಮಾಡಿಸಿ ಹೂವು ಮುಡಿಸುವ ‘ಜೀಯಾಪತ್‌ ’ ಆಚರಿಸುವುದು ಇವರಲ್ಲಿ ರೂಢಿಯಲ್ಲಿದೆ.

ಹೆಣ್ಣು ಮಗುವಿಗೆ ಅವಳ ಹತ್ತು-ಹನ್ನೆರಡು ವಯಸ್ಸಿನಲ್ಲಿ ಕಿವಿ ಚುಚ್ಚುವ ಶಾಸ್ತ್ರವನ್ನು ಎಲ್ಲ ಮುಸ್ಲಿಮರು ನೆರವೇರಿಸುತ್ತಾರೆ. ವಧುವಿನಂಥೆ ಶೃಂಗರಿಸಲ್ಪಟ್ಟ ಹುಡುಗಿಯನ್ನು ‘ಮಸ್ನತ್‌’ ಮೇಲೆ ಕುಳ್ಳಿರಿಸಿ, ‘ಕಾಬಾ’ ದಿಕ್ಕಿಗೆ ಮುಖ ಮಾಡಿಸಿ ಹೂವು ಮುಡಿಸುವರು. ಉಡಿ ತುಂಬಿದ ಮೇಲೆ ಅನುಭವಸ್ಥ ಮಹಿಳೆ ಹುಡುಗಿಯ ಕಿವಿ ಚುಚ್ಚುವ ಮೂಲಕ ಆಭರಣ ಹಾಕುವಳು. ಬ್ಯಾರಿಯನ್ನರು ಇದನ್ನು ‘ಕಾದು ಕುತ್ತು ಮಂಗಿಲ’ ಎನ್ನುವರು. ಹೆಣ್ಣು ಐದು ವರ್ಷದವಳಿದ್ದಾಗಲೇ ಅವರು ಅವಳ ಕಿವಿಗೆ ಚಿನ್ನದ ಕಿರಿಯುಂಗುರ ತೊಡಿಸುವರು.

ಹೆಣ್ಣಿನ ಶಾಸ್ತ್ರಗಳು:

ಹುಡುಗಿ ಋತುಮತಿಯಾದರೆ ಸುಮಂಗಲೆಯರು ಅವಳಿಗೆ ನೀರೆರದು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಸುವರು, ಕೆಲವರು ಏಳು, ಒಂಬತ್ತು, ಹನ್ನೆರಡನೆ ದಿನಕ್ಕೆ ಸೂತಕದ ನೀರು ಎರೆವ ಪದ್ಧತಿ ಇದೆ. ಕೆಲವರು ಅವಳಿಗೆ ಹೊಸ ಸೀರೆಯುಡಿಸಿ, ಶಾಸ್ತ್ರಕ್ಕೆ ಕೂಡಿಸುವ ಸಂಪ್ರದಾಯವಿದೆ. ಈ ಸಂಧರ್ಭದಲ್ಲಿ ಸಂಬಂಧಿಗಳು, ನೆರಹೊರೆಯವರು ಋತುಮತಿಯಾದ ಹುಡುಗಿಗೆ ಅಗತ್ಯವಾದ ಆಹಾರ ತಿಂಡಿ-ತಿನಿಸುಗಳನ್ನು ಇರಿಸಿ ‘ಮಂಜಾ’ ಕೊಡುವರು. ಶಾಸ್ತ್ರ ಮುಗಿದ ಮೇಲೆ ಅವಳಿಗೆ ಹೂ ಮುಡಿಸಿ ದರ್ಗಾಕ್ಕೆ ಕರೆದುಕೊಂಡು ಹೋಗಿ ಬರುವರು.

ಹೆಣ್ಣು ಮಗು ಋತುಮತಿಯಾಗುವುದಕ್ಕೆ ಬ್ಯಾರಿಯನ್ನರು ‘ಬುಲಾಖ್‌’ ಎನ್ನುತ್ತಾರೆ. ಬುಲೂಖ್‌ ಮಂಗಿಲ ಎಂಬುದು ಅವರ ಜೀವನಪದ್ಧತಿಯಲ್ಲಿ ಆಚರಣೆಯಲ್ಲಿತ್ತು. ಸಾಮಾನ್ಯವಾಗಿ ಬಾಲ್ಯ ವಿವಾಹಪದ್ಧತಿ ಬಳಕೆಯಲ್ಲಿತ್ತು ಮದುವೆಯಾಗುವ ಸಮಯ ಹುಡುಗಿಯರು ಋತುಮತಿಯರಾಗುತ್ತಿರಲಿಲ್ಲ. ವರನಿಗೊಂದು ಆಟದ ಸಂಗಾತಿಯಾಗಿ ಮಾತ್ರ ಅವಳಿರಬೇಕಾಗಿತ್ತು. ಇದರಿಂದಾಗಿ ವಧುವಾದ ಹೆಣ್ಣುಮಗು ಋತುಮತಿಯಾಗುವವರೆಗೆ ತವರು ಮನೆಯಲ್ಲಿರಬೇಕಾಗಿತ್ತು. ಪ್ರಥಮ ಬಾರಿ, ಋತು ರಕ್ತಿ ಕಾಣಿಸಿಕೊಂಡಾಗ, ತಕ್ಷಣ ವರನ ಮನೆಗೆ ಸುದ್ದಿ ತಲುಪಿಸಬೇಕಾಗಿತ್ತು. ಸುದ್ದಿ ತಲುಪಿದ ಕೂಡಲೇ ವರನ ಮನೆಯಲ್ಲಿ ಮತ್ತೊಂದು ಸಂಭ್ರಮಕ್ಕೆ ಸಿದ್ಧತೆ ಆರಂಭ ಏಳನೆಯ ದಿನ, ವಧು ಶುದ್ಧಿಯಾಗಿ ಸ್ನಾನ ಮುಗಿಸುವ ದಿನವನ್ನು ವರನ ಮನೆಗೆ ತಿಳಿಸಿ, ಅವನ ಬಳಗವನ್ನು ಆಹ್ವಾನಿಸಬೇಕು. ಆ ದಿನ ಚಿನ್ನಾಭರಣ, ಹೂ-ಹಾರಗಳು ಹೊಸ ಉಡುಗೆಗಳು ಮತ್ತು ಬಹಳಷ್ಟು ಉಡುಗೊರೆಗಳು ವರನ ಕಡೆಯಿಂದ ಕಳುಹಿಸಲಾಗುತ್ತಿತ್ತು. ತಾಳದಂತಹ ಔತಣದ ಏರ್ಪಾಡಾಗುತ್ತಿತ್ತು. ಆ ದಿನ ರಾತ್ರಿ ವಧುವನ್ನು ಅಲಂಕರಿಸಿ ನವವಧುವಾಗಿ ಹಾಲು ಸಮೇತ ಗಂಡನ ಬಳಿಗೆ ಕಳುಹಿಸುತ್ತಿದ್ದರು. ಆ ದಿನವನ್ನು ಪ್ರಸ್ತದ ದಿನವಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಸಂಭ್ರಮ ಮದುವೆಯ ಮೊದಲೇ ಋತುಮತಿಯಾದರೆ ಇರುತ್ತಿರಲಿಲ್ಲ” (ಬಿ.ಎಂ. ಇಚ್ಲಂಗೋಡ್‌, ತುಳುನಾಡ ಮುಸ್ಲಿಮರು ಬ್ಯಾರಿ ಸಂಸ್ಕೃತಿ, ಪುಟ ಕ೭೧.೭೨)

ಮುಸ್ಲಿಮರಲ್ಲಿ ಗಂಡುಮಗುವಿಗೆ ‘ಮುಂಜಿ’ ಮಾಡಿಸುವ ಪದ್ಧತಿಯಿದೆ. ಆದರೆ ಹೆಣ್ಣು ಹುಡುಗಿಗೆ ಋತುಮತಿಯಾದಾಗ ಹೂ ಮುಡಿಸುತ್ತಾರೆ. ನವಾಯಿತರಲ್ಲಿ ಹೆಣ್ಣು ಮಕ್ಕಳಿಗೆ ಐದಾರು ವರ್ಷಗಳವರೆಗೆ ತಲೆತುಂಬಾ ಹೂ ಮುಡಿಸಿ, ಸೀರೆ ಜಾಕೀಟು ತೊಡಿಸಿ, ಒಡವೆಗಳನ್ನು ಹಾಕಿ ಅಲಂಕರಿಸಿ, ಮನೆಮನೆಗಳಿಗೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ.

ಬ್ಯಾರಿಯನ್ನರಲ್ಲಿ ತಿರ್ಬಂಬು ಇಡ್ಡೆ  ಅಥವಾ ಪಾಲ್‌ ಇಡ್ಡೆ ಎಂಬ ಹೆಣ್ಣಿಗೆ ಸಂಬಂಧಿಸಿದ ಒಂದು ವಿಶೇಷ ಪದ್ಧತಿ ಇದೆ. ಈ ಕಾರ್ಯಕ್ರಮ ಅವಳ ಮದುವೆಗೆ ಒಂದು ವಾರದ ಮುಂಚೆ ನಡೆಯುವುದಾಗಿದೆ. ಕುಡುಗು (ಹುರುಳಿ), ಪಚ್ಚರಿ (ಬೆಳ್ತಿಗೆ) ಮಂಜ್ಞಲ್‌ (ಅರಸಿನ) ಹಾಗೂ ಮೊಟ್ಟೆಯ ಬಿಳಿ ಅಂಶವನ್ನು ಬೆರೆಸಿ ಚೆನ್ನಾಗಿ ಕಡೆದು ನಂತರ ತೆಂಗಿನಕಾಯಿ ರಸಕ್ಕೆ (ತ್ಯಾಂಜಡೆ ಪಾಲ್‌) ಬೆರೆಸಿ ಕಲಿಸುತ್ತಾರೆ.

ಅಂಟು ಅಂಟಾಗಿರುವ ಈ ಹಳದಿ ಅಂಶವನ್ನು ಮದುಮಗಳ (ಪುದಿಯ ಪೆಣ್‌) ಮೈಗೆ ಬೆಳಿಗ್ಗೆ ಹಚ್ಚಿ, ಮುಸ್ಸಂಜೆಗೆ ಸಿಗಸಾ ಪುಡಿಯಲ್ಲಿ ಸ್ನಾನ ಮಾಡಿಸಲಾಗುತ್ತದೆ. ಇದಕ್ಕೆ ತಿರಂಬು ಇಡ್ಡೆ ಎನ್ನುತ್ತಾರೆ. ಇದು ಒಂದು ವಾರದವರೆಗೂ ನಡೆಯುವ ಕಾರ್ಯಕ್ರಮ. ಈಗದನ್ನು ‘ಪಾಲ್‌ಇಡ್ಡೆ’ ಎನ್ನಲಾಗುತ್ತದೆ. ಪಾಲ್‌ ಇಡ್ಡೆ ಎಂದರೆ ಹಸುವಿಗೆ ಹಾಲಿಗೆ ಸಿಗಸ ಅಥವಾ ಸಿಕ್ಸ ಪುಡಿಯನ್ನು ಹಾಕಿ ಚೆನ್ನಾಗಿ ಕಲಿಸಿ ಮದುಮಗಳ ಮೈಗೆ ಹಚ್ಚುವರು.

“ಈ ವಿಶಿಷ್ಟ ಆಚರಣೆಯಿಂದ ಹುಡುಗಿಯ ಮೈ ರಂಗೇರುತ್ತದೆ. ಅಲ್ಲದೆ ಜೀವಕ್ಕೆ ಹೊಸ ಕಳೆಯನ್ನು ತುಂಬಿ ನವಿರುಗೊಳಿಸುತ್ತದೆ ಎಂಬ ನಂಬಿಕೆ ಬಲವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬ್ಯಾರಿ ಭಾಷೆಯಲ್ಲಿ ‘ಪೆಣ್ಣು ಪುಟ್ಟು ಆವಲೆ’ ಎಂಬ ಗಾದೆ ಮಾತಿದೆ. ಅದರ ಅರ್ಥ ಮಣ್ಣು ಎಷ್ಟೇ ಕೊಳೆತಿದ್ದರೂ ಕೂಡಾ ಮಳೆಗಾಲದಲ್ಲಿ ಭೂಮಿ ಹಚ್ಚಹಸುರಾಗಿ ಕಂಗೊಳಿಸುತ್ತದೆ. ಅದೇ ರೀತಿ ಹೆಣ್ಣು ದಿನಾ ಅಶುಚಿಯಲ್ಲಿದ್ದರೂ ಮದುವೆಯ ಸಮಯದಲ್ಲಿ ಅಂದರೆ ಪಾಲ್‌ ಇಡ್ಡೆ ಆಚರಣೆಯಲ್ಲಿ ಪುದಿಯ ಪೆಣ್‌ (ಹೊಸಹೆಣ್ಣು) ಆಗಿ ಮೆರೆಯುವಳು” ಎಂದು ಹಂಝ ಮಲಾರ್ ಹೇಳುತ್ತಾರೆ.

ಹೆಣ್ಣಿಗೆ ಸಂಬಂಧಿಸಿದಂತೆ ಮುಸ್ಲಿಮರು ಎಲ್ಲ ಕಾರ್ಯಕ್ರಮಗಳನ್ನು ಅತ್ಯಂತ ಆಪ್ತವಾಗಿ ನೆರವೇರಿಸುವುದು ಕಂಡುಬರುತ್ತದೆ.

ಹಬ್ಬಗಳು:

ರಮಜಾನ್‌, ಬಕ್ರೀದ್‌, ಈದ್‌ ಮಿಲಾದ್‌ ಹಾಗೂ ಮೊಹರಮ್‌ ಹಬ್ಬಗಳನ್ನು ಮುಸ್ಲಿಮರು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಸಮಾಜದ ಸಂಸ್ಕೃತಿ ಮತ್ತು ಸೊಗಡನ್ನು ಅಭಿವ್ಯಕ್ತಿಸುವ ಈ ಹಬ್ಬಗಳು ಮುಸ್ಲಿಮರ ಬದುಕಿನ ಉಲ್ಲಾಸಕ್ಕೂ ಕಾರಣವೆನಿಸಿದೆ. ಈ ಎಲ್ಲ ಹಬ್ಬಗಳಲ್ಲಿ ಹೆಣ್ಣಿನ ಪಾಲ್ಗೊಳ್ಳುವಿಕೆ ತೀರ ಮುಖ್ಯವೆನಿಸಿದೆ.

ರಮಜಾನ್ ತಿಂಗಳಿನುದ್ದಕ್ಕೂ ರೋಜಾ ಅಥವಾ ನೋಂಬು (ಉಪವಾಸ) ವ್ರತ ಹಿಡಿಯುವ ಹೆಣ್ಣುಮಕ್ಕಳು ದಿನನಿತ್ಯದ ಕೆಲಸಗಳನ್ನು ದಣಿವು ಲೆಕ್ಕಿಸದೇ ಮಾಡುತ್ತಾರೆ. ಉಪವಾದ ಇರುವ ಮನೆಯ ಸದಸ್ಯರಿಗೆ ಇಫ್ತಿಯಾರ್ ದ ವ್ಯವಸ್ಥೆ ಮಾಡುತ್ತಾರೆ. ತಮ್ಮ ಕುಟುಂಬದ ಸುಖಕ್ಕಾಗಿಕ ಮನೆಯಲ್ಲಿಯೇ ನಮಾಜ ಮಾಡಿ ಅಲ್ಲಾಹ್‌ನಲ್ಲಿ ದುಆ ಬೇಡುತ್ತಾರೆ. ಹಬ್ಬದ ದಿನ ಸಿಹಿ ಅಡುಗೆ ಮಾಡಿ ಎಲ್ಲರಿಗೂ ಊಟ ಮಾಡಿಸುವಲ್ಲಿ ತೃಪ್ತಿ ಅನುಭವಿಸುತ್ತಾರೆ.

ಬಕ್ರೀದ್‌ ಮುಸ್ಲಿಮರ ಮಹತ್ವದ ಹಬ್ಬವೆನಿಸಿದೆ. ಇದು ಬಲಿದಾನದ ಹಬ್ಬ. ಇದಕ್ಕೊಂದು ಹಿನ್ನೆಲೆಯಿದೆ. ಇರಾಕಿನ ರಾಜಮನೆತನಕ್ಕೆ ಸೇರಿದ ಪ್ರವಾದಿ ಹಜರತ್‌ ಇಬ್ರಾಹಿಂರು ತಮ್ಮ ವೈಚಾರಿಕ ಪ್ರಜ್ಞೆಯಿಂದ ದುರುಳ ದೊರೆಯಾಗಿದ್ದ ‘ನಮ್ರೂದ’ ನ ವಿರುದ್ಧ ಸೆಟೆದು ನಿಂತರು. ಸ್ಥಾಪಿತ ಹಿತಾಸಕ್ತಿಗಳಿಂದ ವಿಜೃಂಭಿಸಿದ್ದ ಅಜ್ಞಾನ, ಅಂಧಶ್ರದ್ಧೆಗಳನ್ನು ತೊಡೆದು ಹಾಕಲು ಹೋರಾಡಿ ಅನೇಕ ಕಷ್ಟಗಳನ್ನು ಅನುಭವಿಸಿದರು. ಸತ್ಯ, ಧರ್ಮ ನಿಷ್ಠೆಯ ಹಜರತ್‌ ಇಬ್ರಾಹಿಂರ ಪತ್ನಿ ಬೀಬಿ ಸಾರಾ ಎಂಬ ಸುಂದರ ರಾಜಕುಮಾರಿ ಆಗಿದ್ದಳು. ‘ಬೀಬಿ ಹಾಜಿರಾ” ಅವಳ ದಾಸಿಯಾಗಿದ್ದಳು. ಬಹಳ ದಿನಗಳಿಂದ ಮಕ್ಕಳಾಗದ ಕಾರಣ ಬೇಬಿ ಸಾರಾ, ತನ್ನ ದಾಸಿಯಾದ ಬೀಬಿ ಹಾಜಿರಾಳನ್ನು ಪತಿಯೊಂದಿಗೆ ನಿಕಾಹ್‌ ಮಾಡಿಸಿದಳು. ಬೀಬಿ ಹಾಜಿರಾ ಉದರದಲ್ಲಿ ಹಜರತ್‌ ಇಸ್ಮಾಯಿಲ್‌ ಜನಿಸಿದರು.

ಪುತ್ರನನ್ನು ಪಡೆದ ಸಂಭ್ರಮವನ್ನು ಅನುಭವಿಸುತ್ತಿರುವಾಗಲೇ ಹಜರತ್‌ ಇಬ್ರಾಹಿಂ ಪತ್ನಿ-ಪುತ್ರರನ್ನು ತ್ಯಾಗ ಮಾಡಬೇಕಾದ ಸಂದರ್ಭವೊದಗಿತು. ಅಲ್ಲಾಹ್‌ನ ಇಚ್ಛೆಯ ಪ್ರಕಾರ ಬಿಸಿಲ ಧಗೆಯ ಮರುಭೂಮಿಯಲ್ಲಿ ಇಬ್‌ರಾಹಿಂರು ಹೆಂಡತಿ, ಮಗನನ್ನು ಬಿಟ್ಟು ಬಂದರು.

ಮಗ ಇಸ್ಮಾಯಿಲ್‌ ಹಸಿವಿ-ಬಾಯಾರಿಕೆಯಿಂದ ತತ್ತರಿಸ. ಹಾಜಿರಾಳ ಹೆತ್ತ ಕರುಳು ತೀವ್ರ ತಳಮಳಿಸಿತು. ನೀರಿಗಾಗಿ ಹುಡುಕಾಟವೂ ನಡೆಯಿತು. ‘ಸಫಾ-ಮರ್ವ’ ಎಂಬ ಬೆಟ್ಟ-ಗುಡ್ಡವನ್ನು ಏಳೇಳು ಸಲ ಹತ್ತಿ ಇಳಿದರೂ ಹನಿ ನೀರು ಕಾಣಲಿಲ್ಲ. ನೀರು ನೀರು ಎಂದು ಚೇತ್ಕರಿಸುತ್ತಿದ್ದ ಇಸ್ಮಾಯಿಲ್‌ನ ಹಿಮ್ಮಡಿಯ ಹೊಡೆತದಿಂದ ಮರುಭೂಮಿಯಲ್ಲಿ ನೀರಿನ ಚಿಲುಮೆ ಪುಟಿದಿತ್ತು. ತಾಯಿಗೆ ಸಂತೋಷವಾಗಿತ್ತು. ಮೆಕ್ಕಾದ ಮರಳಗಾಡಿನಲ್ಲಿ ಈಗಲೂ ಇರುವ ಈ ಚಿಲುಮೆಯ ನೀರನ್ನು ‘ಝಮ್‌ ಝಮ್‌ ಪಾನಿ” ಎಂದು ಕರೆಯಲಾಗುತ್ತದೆ.

ಅಲ್ಲಾಹ್‌ನ ಬಯಕೆಯಂತೆ ಹಜರತ್‌ ಇಬ್ರಾಹಿಂರು ತಮ್ಮ ಹೆಂಡತಿ, ಮಗನೊಂದಿಗೆ ಕೂಡಿಕೊಂಡರು. ಅದು ಆನಂದದ ಸಮಯ. ಅಲ್ಲಾಹ್‌ನಿಂದ ಮತ್ತೆ ಅಗ್ನಿ ಪರೀಕ್ಷೆ ಎದುರಾಯಿತು. ಇಬ್ರಾಹಿಂರ ಕನಸಿನಲ್ಲಿ ಕಾಣಿಸಿಕೊಂಡ ಅಲ್ಲಾಹ್‌, ಇಸ್ಮಾಯಿಲ್‌ನನ್ನು ತನಗೆ ಬಲಿಕೊಡಬೇಕೆಂದು ಆದೇಶಿಸಿದೆ.

ಹಜರತ್‌ ಇಬ್ರಾಹಿಂರು ವಿಧೇಯರಾಗಿ, ಮಗ ಇಸ್ಮಾಯಿಲ್‌ನನ್ನು ಮಕ್ಕಾನಗರದ ಸಮೀಪದ ‘ಮೀನಾ’ ಎಂಬ ಪ್ರದೇಶಕ್ಕೆ ಕರೆದುಕೊಂಡು ಹೋದರು. ಮಗನಿಗೆ ಕನಸಿನ ವಿಚಾರ ತಿಳಿಸಿದರು. ಕೂಡಲೇ ಇಸ್ಮಾಯಿಲ್‌ ಅಲ್ಲಾಹ್‌ನ ಆದೇಶವನ್ನು ಈಡೇರಿಸಲು ಹೇಳಿದ. ಉತ್ಸಾಹದಿಂದ “ಪ್ರಿಯ ತಂದೆಯೇ, ನೀವು, ನಿಮ್ಮ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಿಕೊಂಡರೆ ಒಳ್ಳೆಯದು. ಆಗ ನಿಮ್ಮ ಮನಸ್ಸು  ವಿಚಲಿತವಾಗುವುದಿಲ್ಲ” ಎಂದುಲಿದ ಮಗ ಬಲಿಗೆ ಸಿದ್ಧವಾದ. ತಂದೆ ಕೂಡಲೇ ಹರಿತವಾದ ಚೂರಿಯಿಂದ ಮಗನ ಕತ್ತು ಕೊಯ್ಯಲು ತೊಡಗಿದರು. ಆದರೆ ಚೂರಿಯು ಮಗನ ಕುತ್ತಿಗೆಯಲ್ಲಿ ನಾಟಲಿಲ್ಲ. ಅಚ್ಚರಿಗೊಳಗಾದರು ಹ.ಇಬ್ರಾಹಿಂರು. ಆಕಾಶದತ್ತ ಮುಖ ಮಾಡಿದ ಅವರು “ಹೇ ಪ್ರಭುವೇ! ನಾನು ಎಷ್ಟು ಪ್ರಯತ್ನಿಸಿದರೂ ಚೂರಿ ಮಗನ ಗಂಟಲಲ್ಲಿ ನಾಟುತ್ತಿಲ್ಲ. ಇದೇನು ಅದ್ಭುತ? ಪ್ರೇಮ, ಅಂತಃಕರಣವನ್ನು ಬದಿಗೊತ್ತಿ ಸದ್ಭಕ್ತಿಯಿಂದ ಮಗನನ್ನು ನಿನಗೆ ಬಲಿದಾನ ಕೊಡುತ್ತಿದ್ದೇನೆ. ಅದನ್ನು ನೀನು ಸ್ವೀಕರಿಸದಿರುವುದೇಕೆ? ನನ್ನ ಭಕ್ತಿಯಲ್ಲಿ ಲೋಪ-ದೋಷಗಳೇನಾದರೂ ಇದೆಯೋ? ಹಾಗಿದ್ದರೆ ನನ್ನನ್ನು ಕ್ಷಮಿಸು. ದಯಾಪರನಾದ ನೀನು ಈ ಬಲಿದಾನವನ್ನು ಸ್ವೀಕರಿಸು” ಎಂದು ಅನನ್ಯ ಭಾವದಿಂದ ಅಲ್ಲಾಹ್‌ನಲ್ಲಿ ಪ್ರಾರ್ಥಿಸಿ, ಚೂರಿಯನ್ನು ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದು ಮಗನ ಕತ್ತನ್ನು ಭೇದಿಸಲು ತೊಡಗುತ್ತಿದ್ದಂಥೆ ‘ಜಿಬ್ರಾಯಿಲ್‌’ ರೆಂಬ ದೇವದೂತರು ಬಂದು ಬಲಿಗಾಗಿ ಮಲಗಿದ್ದ ಇಸ್ಮಾಯಿಲ್‌ನ ಬದಲು ಕುರಿಯೊಂದನ್ನು  ಬಲಿಯಾಗುವಂತೆ ಮಾಡಿದರು. ಈ ಪ್ರಸಂಗದಿಂದ ಹಜರತ್‌ ಇಬ್ರಾಹಿಂ ಮತ್ತು ಹಜರತ್‌ ಇಸ್ಮಾಯಿಲ್‌ರು ಭಗವಂತನ ಪ್ರೀತಿಗೆ ಪಾತ್ರರಾದರು ಎಂಬ ನಂಬಿಕೆ ಮುಸ್ಲಿಮರದಾಗಿದೆ. ಅವರ ತ್ಯಾಗ-ದೇವನಿಷ್ಠೆಗಳನ್ನು ಸ್ಮರಿಸಲು ಬಕ್ರೀದ್‌ನ್ನು ಆಚರಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಮುಸ್ಲಿಮರು ‘ಕಾಬಾ’ ಸಂದರ್ಶನಕ್ಕಾಗಿ ಹಜ್‌ ಯಾತ್ರೆಗೆ ಹೋಗುತ್ತಾರೆ. ಹಜ್‌ ಇಸ್ಲಾಮಿನ ಆರಾಧನದ ಐದು ಸ್ತಂಭಗಳಲ್ಲಿ ಒಂದಾಗಿರುವ ಕರ್ಮವಾಗಿದೆ. ‘ಕಾಬಾ’ ಇರುವುದು ಮಕ್ಕಾದಲ್ಲಿ. ಹೆಣ್ಣು ಮಕ್ಕಳಿಗೂ ಹಜ್‌ ಮಾಡುವ ಅವಕಾಶವಿದೆ. ಮುಖ್ಯವಾಗಿ ಹಜ್‌ಯಾತ್ರೆ ಕೈಗೊಳ್ಳುವವರಿಗೆ ಆರ್ಥಿಕ ಸಬಲತೆ ಬೇಕು. ಸಿರಿವಂತರಿಗೆ ಇದು ಸುಲಭ. ಬಡವರಿಗೆ ಇದು ಕಷ್ಟ. ನವಾಯಿತ ಸ್ತ್ರೀ-ಪುರುಷರು ಮೇಲಿಂದ ಮೇಲೆ ಹಜ್‌ ಯಾತ್ರೆ ಕೈಕೊಳ್ಳುತ್ತಾಋಎ.

ಮೊಹರಮ್‌ ಹಿಜರಿ ಸಂವತ್ಸರದ ಮೊದಲ ತಿಂಗಳಾಗಿದೆ. ಇರಾನಿನಲ್ಲಿ ಬಾಗದಾದನಿಂದ ಕೆಲವು ಮೈಲಿ ದೂರವಿರುವ ಯೂಫ್ರಿಟೀಸ್‌ ನದಿ ತೀರದಲ್ಲಿ ನಡೆದ ದುರಂತ ಘಟನೆಯಲ್ಲಿ ಹಜರತ್‌ ಇಮಾಮ್‌ ಹುಸೇನರು ಹುತಾತ್ಮರಾದರು. ಮಹಮ್ಮದ್‌ ಪೈಗಂಬರರ ಮಗಳಾದ ಬೀಬಿ ಫಾತಿಮಾ ಮತ್ತು ಅಳಿಯ ಇಮಾಮ್‌ ಅಲಿ ಅವರ ಮಗನಾದ ಇಮಾಮ್‌ ಹುಸೇನರು ದುಷ್ಟ ಯಜೀದ್‌ನ ದ್ವೇಷ ಮತ್ತು ಮೋಸದ ಕೃತ್ಯಕ್ಕೆ ಬಲಿಯಾದ ಪ್ರಸಂಗವನ್ನು ಮೊಹರಮ್‌ ತಿಂಗಳು ನೆನಪಿಸುತ್ತದೆ. ಇದು ಸಂತೋಷ, ಸಡಗರದ ಹಬ್ಬವಲ್ಲ. ದುಃಖದ ಸಂದರ್ಭ, ಷಿಯಾ ಪಂಗಡದವರು ಮೊಹರಮ್‌ದ ಮೊದಲ ದಿನದಿಂದ ನಲವತ್ತು ದಿನಗಳವರೆಗೆ ಕಪ್ಪು ಬಳ್ಳಿಯನ್ನು ಶೋಕದ ಸಂಕೇತವಾಗಿ ಧರಿಸುವರು. ಬಲಗೈಗೆ ಕೆಂಪುದಾರ ಕಟ್ಟುವರು. ಹೆಣ್ಣುಮಕ್ಕಳು ತಲೆಯ ಕೂದಲನ್ನು ಕಟ್ಟಿಕೊಳ್ಳುವುದಿಲ್ಲ. ಕೈಗೆ ಬಳೆ, ಕುತ್ತಿಗೆಗೆ ಕರಿಮಣಿಸರ (ಲಚ್ಚ) ವನ್ನು ಕೂಡ ಹಾಕುವುದಿಲ್ಲ. ಸಂಭ್ರಮದ ಕಾರ್ಯಗಳನ್ನು ನೆರವೇರಿಸುವುದಿಲ್ಲ. ದುಃಖಿತರಾಗಿ, ಎದೆಎದೆ ಬಡಿದುಕೊಂಡು “ಮಾತಮ್‌ ಮತ್ತು ಮರ್ಷಿಯಾ” ಗೀತೆಗಳನ್ನು ಹಾಡುವರು.

ಕ್ಷಮಾದಾನದ ರಾತ್ರಿಯೆಂದು ಕರೆಯಿಸಿಕೊಳ್ಳುವ ಶಬ್ಬೇಬಾರತ್‌ (ಶಾಬಾನಿನ ಮಧ್ಯರಾತ್ರಿ) ಆಲ್ಲಾಹನ ಅನುಗ್ರಹ ಪಡೆದುಕೊಳ್ಳುವ ಮಹತ್ವದ ರಾತ್ರಿಯಾಗಿದೆ. ಈ ವೇಳೆಯಲ್ಲಿ ಮಹಿಳೆಯರು ಮನೆಯಲ್ಲಿ ನಮಾಜ ಮಾಡಿ ಜಾಗರಣೆ ಆಚರಿಸುತ್ತಾರೆ.

ಸಫರ್‌, ಹಿಜರಿ ಶಕೆಯ ಎರಡನೆಯ ತಿಂಗಳಾಗಿದೆ. ಸಫರ್ ಎಂದರೆ ಪ್ರಯಾಣ ಎಂದರ್ಥ. ಈ ತಿಂಗಳಿನ ಕೊನೆಯ ಬುಧವಾರ ಅಖ್ರೀ ಚಾರಘುಂಬಾ ಅಥವಾ ಈದೇ ಸೂರಿ ಅನಿಸಿದೆ. ಈ ತಿಂಗಳು ಮಹಮ್ಮದ್‌ ಪೈಗಂಬರರು ವ್ಯಾಧಿಯಿಂದ ಬಳಲಿದ್ದರು. ಇದು ಅಶುಭ ತಿಂಗಳು ಎಂಬ ನಂಬಿಕೆ ಮುಸ್ಲಿಮರದಾಗಿದೆ. ಆದರೆ ಇದೇ ತಿಂಗಳ ಕೊನೆಯ ಬುಧವಾರ ಪೈಗಂಬರರು ಗುಣಮುಖರಾದರು. ಅದರ ಸ್ಮರಣೆಗಾಗಿ ಮುಸ್ಲಿಮ ಮಹಿಳೆಯರು ಒಳ್ಳೆಯ ಅಡುಗೆ ತಯಾರಿಸಿ ಎಲ್ಲರೊಂದಿಗೆ ವಿಹಾರಕ್ಕೆ ಹೋಗುವ ರೂಢಿಯಿದೆ.

ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ ನೀಡುವುದರೊಂದಿಗೆ ಅವರಿಗೆ ಹಕ್ಕು ಬಾಧ್ಯತೆಗಳನ್ನು ನಿರ್ಧರಿಸಿದ ಮಹಮ್ಮದ್‌ ಪೈಗಂಬರರ ಜನ್ಮ ದಿನವನ್ನು ಈದ್‌ ಮಿಲಾದ್‌ ಎಂದು ಆಚರಿಸಲಾಗುತ್ತದೆ. ಮೌಲೂದ್‌ ತಿಂಗಳಲ್ಲಿ ಜರುಗುವ ಈ ಹಬ್ಬವನ್ನು ಮಹಿಳೆಯರು ಶ್ರದ್ಧೆ, ಸಂಭ್ರಮದಿಂದ ಆಚರಿಸುವರು. ಅದರ ಹಿಂದಿನ ರಾತ್ರಿ ಅವರು ಪ್ರತ್ಯೇಕವಾಗಿ ಸೇರಿಕೊಂಡು ಸ್ತ್ರೀಯರಿಂದಲೇ ಬಯಾನಾ (ಭಾಷಣ) ಏರ್ಪಡಿಸುವರು. ಪ್ರವಾದಿಗಳ ವ್ಯಕ್ತಿತ್ವ ಕುರಿತು ಹಾಡು ಹೇಳುವರು.