ಹೆಣ್ಣಿನ ಅಸ್ಮಿತೆ

ಒಂದು ಜನಸಮುದಾಯದ ಸಂಸ್ಕೃತಿಯಲ್ಲಿ ಹೆಣ್ಣು-ಗಂಡಿನ ಸಹಭಾಗಿತ್ವ ಅತ್ಯಂತ ಸಹಜವಾದುದು. ಗಂಡಿನ ಹಾಗೆ ಹೆಣ್ಣಿಗೂ ಸ್ವಂತದ್ದಾದ ಅಸ್ತಿತ್ವದ ಬೇರುಗಳು ಇವೆ. ಅವು ಮೃತ್ತಿಕೆಯ ಆಳಕ್ಕಿಳಿದು ಮೇಲಕ್ಕೂ ಚಿಮ್ಮಿ, ಬಲಿತು ಹೆಮ್ಮರವಾಗಬಲ್ಲವು. ಗಂಡು ಮರವಾದರೆ, ಹೆಣ್ಣು ಆ ಮರವನ್ನು ಆಶ್ರಯಿಸಿಕೊಂಡಿರುವ ಬಳ್ಳಿಯೆನ್ನುವುದು ಪುರುಷ ಗ್ರಹಿಕೆ. ಇದು ಪ್ರಗಲ್ಭವಾದಂತೆಲ್ಲ ಹೆಣ್ಣಿನ ಅಸ್ಮಿತೆಗೆ ಧಕ್ಕೆ ಆಗುತ್ತಲೇ ಬಂದಿದೆ. ಸಂಸ್ಕೃತಿಯ ನಿರ್ಮಾಣದಲ್ಲಿ ಹೆಣ್ಣಿನ ಪಾಲು ಅಷ್ಟಕಷ್ಟೆ ಎನ್ನುವ ಗಂಡಿನ ಭ್ರಮಿತ ನಂಬಿಕೆಗಳ ಎದುರು ಅವಳ ಮೌನ ಹೋರಾಟ ಸಾಂಸ್ಕೃತಿಕ ಸೂಕ್ಷ್ಮಗಳನ್ನು ದಾಖಲಿಸುತ್ತ ಬಂದಿರುವ ಗಾಥೆ ಅಗಾಧವೆನ್ನಿಸಿದೆ.

ಹೆಣ್ಣಿನ ಪ್ರಕೃತಿ ಗರ್ಭಧಾರಣೆಗೆ, ತಾಯ್ತನಕ್ಕೆ, ಸಂಗೋಪನೆಗೆ, ಲೈಂಗಿಕ ಕ್ರಿಯೆಗೆ ಮಾತ್ರ ಸೀಮಿತವೆಂದು ಅವಳನ್ನು ನೇಪಥ್ಯಕ್ಕೆ ತಳ್ಳಿದ್ದು ಪುರುಷ ರಾಜಕಾರಣ ಎನ್ನದೆ ವಿಧಿಯಿಲ್ಲ. ಹೆಣ್ಣಿಗೊಂದು ಮುಖವಿದೆ. ಸಂಸ್ಕೃತಿ ಕಟ್ಟುವಿಕೆಯಲ್ಲಿ ಗಂಡಿನಂತೆ ಅವಳದೂ ಪಾಲಿದೆ. ಇದನ್ನು ನಿರಾಕರಿಸಿ ಸಂಸ್ಕೃತಿಯ ವಾರಸುದಾರಿಕೆಯ ಅಹಮ್ಮನ್ನು ಪೋಷಿಸಿಕೊಂಡು ಬೀಗುತ್ತಿರುವ ಪುರುಷಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ತನ್ನ ಅನುಭವಗಳನ್ನು ಅನಾವರಣಗೊಳಿಸುವ ಮೂಲಕ ಹೆಣ್ಣು ತನ್ನ ಇರುವಿಕೆಯ ಅರ್ಥವಂತಿಕೆಯನ್ನು ಜನಸಮುದಾಯದಲ್ಲಿ ಎದ್ದು ತೋರಿಸುವ ಧಾವಂತಿಕೆಯಲ್ಲಿರುವುದು ಈಗ ನಿಚ್ಚಳವಾಗಿದೆ. ನಮ್ಮ ಇಂಡಿಯಾದ ಯಾವುದೇ ಜನಸಮುದಾಯದಲ್ಲಿ ಹೆಣ್ಣು ತನ್ನ ಬದುಕಿನ ಹೊಸ ಆಯಾಮಕ್ಕಾಗಿ ತುಡಿಯುತ್ತಿರುವುದು ಮಹತ್ವದ ಘಟ್ಟವಾಗಿ ಪರಿಣಮಿಸಿದೆ.

ಮುಸ್ಲಿಮ ಸಮಾಜದ ಮಹಿಳೆಯೂ ಇದಕ್ಕೆ ಹೊರತಾಗಿಲ್ಲ. ಧರ್ಮದ ಅರ್ಥವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಹೆಣ್ಣನ್ನು ಆಕೃತಗೊಳಿಸದ ಪುರುಷ ನಡವಳಿಕೆಯ ಕಿಲುಬುತನ ಈಗ ಕಳೆದು ಹೋಗುತ್ತಿದೆ. ಇಸ್ಲಾಮ್‌ ಧರ್ಮದಲ್ಲಿ ಪ್ರವಾದಿ ಮಹಮ್ಮದ್‌ ಪೈಗಂಬರರು ಹೆಣ್ಣಿನ ಬಗ್ಗೆ ತಾಳಿದ ಗೌರವ, ಔದಾರ್ಯಗಳು ಇವತ್ತು ಪುರುಷ ಕೇಂದ್ರಿತ ಒನ್‌ವೇ ಚಿಂತನೆಗಳನ್ನು ಪ್ರಶ್ನಿಸುವಂತಾಗಿರುವುದು ಗಮನಾರ್ಹವೆನಿಸಿದೆದ. ಆಗಾಗ ಅಲ್ಲಲ್ಲಿ ಅವಳ ಪ್ರಾಮುಖ್ಯತೆಯ ಬಗೆಗೆ ಒಡಕು ಧ್ವನಿಗಳು ಗೊಣಗುತ್ತಲೋ, ಹುಯಿಲೆಬ್ಬಿಸುತ್ತಲೋ ಇರುವುದರ ನಡುವೆಯೂ ಭಾರತೀಯ ಸಾಂಸ್ಕೃತಿಕ, ಸಾಮಾಜಿಕ ಸಂದರ್ಭಗಳಲ್ಲಿ ಮುಸ್ಲಿಮ ಮಹಿಳೆಗೆ ವಿಶ್ವಾಸಾತ್ಮಕ ಉತ್ತೇಜನ ದೊರಕುತ್ತಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಆದರೆ ಇತರೆ ಸಮುದಾಯದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆಗೆ ವಿಪುಲ ಅವಕಾಶಗಳಿರುವಂತೆ ಮುಸ್ಲಿಮ ಮಹಿಳೆಗೆ ಅಷ್ಟಾಗಿ ಇಲ್ಲದಿರುವುದು ಎದ್ದು ಕಾಣಿಸುವ ಅಂಶ. ಕರ್ನಾಟಕದ ಮುಸ್ಲಿಮ ಸಮುದಾಯಕ್ಕೆ ಇದು ಇನ್ನೂ ಹೆಚ್ಚು ಅನ್ವಯಿಸುವುದು.

ಇಸ್ಲಾಮ್ಕುರ್ಆನ್ಹದೀಸ್

‘ಇಸ್ಲಾಮ್‌’ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾಗಿದೆ. ಇಸ್ಲಾಮ್‌ ಎಂದರೆ ‘ಶಾಂತಿ’ ಎಂದು ಅರ್ಥ. ಇಸ್ಲಾಮ್‌ ಧರ್ಮ ಸ್ವೀಕರಿಸಿದವರನು ಮುಸ್ಲಿಮ್‌. ಇಸ್ಲಾಮ್‌ ಧರ್ಮದಲ್ಲಿ ಸುನ್ನಿ, ಷಿಯಾ, ವಹಾಬಿ ಎಂಬ ಪಂಗಡಗಳಿವೆ. ‘ಸುನ್ನಿ’ ಎಂದರೆ ದಾರಿ ತೋರಿಸುವುದು ಎಂದರ್ಥ. ಮಹಮದ್‌ ಪೈಗಂಬರರು ತೋರಿಸಿದ ದಾರಿಯಲ್ಲಿ ನಡೆಯುವವರು ಸುನ್ನಿಗಳೆಂದು ಕರೆಯಿಸಿಕೊಳ್ಳುತ್ತಾರೆ. ಸುನ್ನಿಗಳು ಅಧಿಕ ಸಂಖ್ಯೆಯಲ್ಲಿದ್ದು ಈ ಜಮಾತ್‌ಗೆ ಸಂಬಂಧಿಸಿದಂತೆ ಹನ್ಫಿ, ಷಾಫಿ, ಮಾಲೀಕಿ, ಹಂಬಲಿ ಎಂಬ ನಾಲ್ಕು ಶಾಖೆಗಳಿವೆ.

‘ಷಿಯಾ’ ಮುಸ್ಲಿಮರು ಪೈಗಂಬರರ ಮಗಳಾದ ಬೀಬಿ ಫಾತಿಮಾ ಮತ್ತು ಅಳಿಯ ಹಜರತ್‌ ಅಲಿ ಅವರ ಮಕ್ಕಳಾದ ಇಮಾಮ್‌ ಹುಸೇನ್‌, ಇಮಾಮ್‌ ಹಸೇನರಲ್ಲಿ ಶ್ರದ್ಧೆ ಇರಿಸಿಕೊಂಡವರು.

‘ಕುರ್ಆನ್‌’ ಇಸ್ಲಾಮ್‌ ಧರ್ಮದ ಪವಿತ್ರ ಗ್ರಂಥವಾಗಿದೆ. ಅದು ಸರ್ವರಕ್ಷಕ ಆಲಮ್‌ನ ಕಡೆಯಿಂದ ಬಂದುದು. ಅದರಲ್ಲಿ ವರ್ಗ,ವರ್ಣ, ಭಾಷೆ, ವೃತ್ತಿಯ ಭೇದಭಾವ ಪರಿಗಣಿಸದೆ ಸಮಾನತೆ, ಭ್ರಾತೃತ್ವಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಕುರ್ಅನ್‌ ತರುವಾಯ ಮುಸಲ್ಮಾನರಿಗೆ ‘ಹದೀಸ್‌’ನಲ್ಲಿ ಶ್ರದ್ಧೆ ಇದೆ. ಪ್ರವಾದಿ ಮಹಮ್ಮದ್‌ರು ಹೇಳಿದುದು, ಮಾಡಿದುದು ಹದೀಸ್‌ನಲ್ಲಿ ಪ್ರಸ್ತಾಪಗೊಂಡಿರುವುದು.

ಭಾರತದಲ್ಲಿ ಮುಸ್ಲಿಮರು:

ಸುಮಾರು ಹನ್ನೆರಡನೆಯ ಶತಮಾನದಲ್ಲಿ ವ್ಯಾಪಾರ ಮತ್ತು ಧರ್ಮಪ್ರಚಾರದ ಉದ್ದೇಶದಿಂದ ಭಾರತಕ್ಕೆ ಬಂದ ಇಸ್ಲಾಮಿಯರಲ್ಲಿ ಪೌರೋಹಿತ್ಯ, ಸೈನಿಕ, ಸಾಮಾನ್ಯ, ಗುಲಾಮ ಎಂಬ ಭೇದಗಳಿವೆ. ಈ ವರ್ಗಕ್ಕೆ ಸೇರಿದವರಿಂದ ವಂಶಪಾರಂಪರ್ಯ ಬೆಳೆಯಿತು. ಇಂತಹ ಮುಸ್ಲಿಮರನ್ನು ‘ಅಶ್‌ರಫ್‌’ ಎನ್ನುತ್ತಾರೆ. ಅಶ್‌ರಫ್‌ ಎಂದರೆ ಶ್ರೇಷ್ಠ ಎಂಬ ಅರ್ಥವಿದೆ. ಈ ಅಶ್‌ರಫ್‌ರಲ್ಲಿ ಶೇಖ್‌, ಸೈಯದ್‌, ಮೊಗಲ್‌, ಪಠಾಣರೆಂಬ ವರ್ಗಗಳಿವೆ. ಶೇಖ್‌, ಸೈಯದ್ ರು ಧಾರ್ಮಿಕ ಪುರೋಹಿತ ವರ್ಗಕ್ಕೆ ಸೇರುತ್ತಾರೆ. ಮೊಗಲ್‌, ಪಠಾಣರು ಕ್ಷತ್ರಿಯ ವರ್ಗಕ್ಕೆ ಸೇರುತ್ತಾರೆ. ಭಾರತದ ನೆಲದಲ್ಲಿ ಮತಾಂತರಗೊಂಡ ಮುಸ್ಲಿಮರನ್ನು ‘ಅಜ್‌ಲಫ್‌’ರೆಂದು ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ಗುಲಾಮಿ ಸಂತತಿಯ ಸುಲ್ತಾನರು, ಖಿಲ್ಜಿಗಳು, ತುಘಲಕರು, ದಕ್ಷಿಣ ಭಾರತದಲ್ಲಿ ಬಹಮನಿ ಅರಸರು ಇಸ್ಲಾಮ್‌ನ ತಳಹದಿ ಹಾಕಿದರು (ಡಾ. ಷಹಸೀನಾ ಬೇಗಮ್‌ ಕರ್ನಾಟಕ ಮುಸ್ಲಿಂ ಜಾನಪದ ಪುಟ ೨೫-೨೬).

ಕರ್ನಾಟಕದ ಮುಸ್ಲಿಮರು:

ಕರ್ನಾಟಕದಲ್ಲಿ ಮುಸ್ಲಿಂ ಅರಸರ ಆಧಿಪತ್ಯಕ್ಕೆ ಒಳಪಟ್ಟ ಬೀದರ, ಗುಲಬರ್ಗಾ, ರಾಯಚೂರ, ವಿಜಾಪುರ, ಧಾರವಾಡ ಜಿಲ್ಲೆಗಳಲ್ಲಿ ಮುಸ್ಲಿಮರು ಹೆಚ್ಚಾಗಿ ವಾಸವಾಗಿದ್ದಾರೆ. ದಕ್ಷಿಣ ಕನ್ನಡ, ಕೊಡಗು, ಬಳ್ಳಾರಿ, ಬೆಂಗಳೂರು, ಮೈಸೂರು, ಜಿಲ್ಲೆಗಳಲ್ಲಿ, ಇವರ ಸಂಖ್ಯೆ ಅಧಿಕವಾಗಿಯೇ ಇದೆ.

೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ ೫೨೮೫೦೫೬೨ ಇದ್ದು ಇದರಲ್ಲಿ ಮುಸ್ಲಿಮರ ಸಂಖ್ಯೆ ೬೪೬೩೧೨೭ ಅಂದರೆ ಶೇಕಡಾ ೧೨.೨೩ ರಷ್ಟಿದೆ. ಇವರಲ್ಲಿ ಪ್ರತಿ ಸಾವಿರ ಪುರುಷರಿಗೆ ಎದುರಾಗಿರುವ ಮಹಿಳೆಯರ ಸಂಖ್ಯೆ ೯೬೪ ಇದೆ.

ಮುಸ್ಲಿಮರಲ್ಲಿ ನದಾಫ್‌ ಅಥವಾ ಪಿಂಜಾರ, ಖಂದಾರ, ಖಸಾಂಬ, ಅನ್ಸಾರಿ, ಜುಲಾಯಿ, ನಾಲ ಬಂದ, ಮಾಪಿಳ್ಳಾ, ಬ್ಯಾರಿ, ನವಾಯಿತ್‌, ಪೆಂಡಾರಿ, ಬಾಗವಾನ್‌, ತಾಂಬೋಲಿ, ಚಪ್ಪರಬಂದ್‌, ದರ್ಜಿ, ದರ್ವೇಶಿ, ದೋಬಿ, ಫಕೀರ್, ಖುರೇಶಿ, ದ್ವೇಪರ್, ತಕದೀಸ್‌, ಜಾದ್‌ಗಾರ್, ತಟಗಾರ್, ಪಟವೇಗಾರ್, ಅತ್ತಾರ್, ಫಣಿಬಂದ ಇತ್ಯಾದಿ ಪಂಗಡಗಳಿವೆ. ಇವೆಲ್ಲ ವೃತ್ತಿಗಳ ಮೇಲೆ ಗುರುತಿಸಲ್ಪಟ್ಟಿವೆ. ಈ ಪಂಗಡ, ಉಪ-ಪಂಗಡಗಳಲ್ಲಿ ಧಾರ್ಮಿಕ ಕಟ್ಟು ಪಾಡುಗಳು, ಸಾಂಪ್ರದಾಯಿಕ ವಿಧಿ-ವಿಧಾನಗಳು ವಿಭಿನ್ನವಾಗಿದ್ದರೂ ಮುಸ್ಲಿಮ್‌ ನೆಲೆಯಿಂದ ಕಳಚಿಕೊಂಡಿಲ್ಲ. ಶೂದ್ರತ್ವಕ್ಕೆ ಎಡೆ ಮಾಡಿಕೊಟ್ಟಿಲ್ಲ. ಸಮಾನತೆಯ ದೃಷ್ಟಿಯಿಂದ ಭಿನ್ನವಾಗಿಲ್ಲ.

ಅಧ್ಯಯನದ ದೃಷ್ಟಿಯಿಂದ:

ಇಸ್ಲಾಮ್‌ ಧರ್ಮದ ತತ್ವ, ಸಿದ್ಧಾಂತಗಳನ್ನು ಬಿಟ್ಟು ಕೊಡದ, ಅನ್ಯ ಧರ್ಮೀಯರ ಪ್ರಭಾವಗಳಿಂದ ತಪ್ಪಿಸಿಕೊಳ್ಳಲಾಗದ ವಿಶಿಷ್ಟ ಸಂಸ್ಕೃತಿಯ ಬದುಕನ್ನು ಕರ್ನಾಟಕದ ಮುಸ್ಲಿಮರು ರೂಢಿಸಿಕೊಂಡಿದ್ದಾರೆ. ಅವರು ಜಗತ್ತಿನ ಮುಸ್ಲಿಮರಂತೆ ಕಟ್ಟಾ ಸಂಪ್ರದಾಯವಾದಿಗಳಲ್ಲ. ತಮ್ಮತನವನ್ನು ಉಳಿಸಿಕೊಳ್ಳುತ್ತ ಕೊಡು-ಕೊಳುವ ಧಾರಾಳತನದಿಂದ ಸಾಮರಸ್ಯದ ಬದುಕನ್ನು ಇಷ್ಟ ಪಡುವವರೇ ಆಗಿದ್ದಾರೆ.

ಧಾರ್ಮಿಕ ಪರಂಪರೆಯ ದೃಷ್ಟಿಯಿಂದ ಕರ್ನಾಟಕದ ಒಟ್ಟಾರೆ ಮುಸ್ಲಿಮರಲ್ಲಿ ಭೇದಗಳಿಲ್ಲ. ಆದರೆ ಭೌಗೋಳಿಕವಾಗಿ, ಭಾಷಿಕವಾಗಿ, ಸಾಂಸ್ಕೃತಿಕವಾಗಿ ಅವರಲ್ಲಿ ವೈವಿಧ್ಯತೆಯನ್ನು ಕಾಣಬಹುದು.

ಕೇರಳದ ಮಲಪ್ಪುರಂ ಜಿಲ್ಲೆಯಿಂದ ಉತ್ತರಕ್ಕೆ ‘ಮಲಬಾರ್’ ಎಂಬ ಹೆಸರಿದೆ. ಈ ಪ್ರಾಂತ್ಯದಲ್ಲಿ ಮುಸಲ್ಮಾನರ ಪ್ರಭಾವಕ್ಕೊಳಗಾದವರು ಮಪಿಳ್ಳಾ ಅಥವಾ ‘ಮಾಪ್ಲಾ’ಗಳೆಂದು ಕರೆಯಿಸಿಕೊಳ್ಳುವರು. “ಮಾಪಿಳ್ಳಾ” ಎಂದರೆ ಮದುಮಗ, ಗಂಡ, ಅಳಿಯ, ಅತ್ತೆಯ ಮಗ ಎಂಬರ್ಥಗಳಿವೆ. ಹೊರಗಿನಿಂದ ಬಂದ ಅಳಿಯಿಂದಿರು ಊರಿನ ವಧುಗಳ ಸಮಾಗಮಕ್ಕೆ ‘ಮೂತ’ ಎನ್ನುತ್ತಿದ್ದರು. ಮೂತ ಎಂದರೆ ತಾತ್ಕಾಲಿಕ ಮದುವೆ. ಅರಬ್ಬರು ವ್ಯಾಪಾರಕ್ಕಾಗಿ ಬಂದು ಇಲ್ಲಿಯ ಹೆಣ್ಣು ಮಕ್ಕಳೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದರು. ಮೂತ ಮದುವೆಯಿಂದ ಹುಟ್ಟಿದ ವಂಶದವರನ್ನು ಮಲಬಾರು ಪ್ರದೇಶದಲ್ಲಿ ಮಾಪಿಳ್ಳೆಗಳೆಂದು ಕರೆಯುವ ಪರಂಪರೆ ಇದೆ.” (ಡಾ. ಸುಶೀಲಾ ಉಪಾಧ್ಯಾಯ, ಬ್ಯಾರಿ ಭಾಷೆ ಮತ್ತು ಜಾನಪದ ಕಥೆಗಳು-ಪುಟ-೬, ೧೯೯೭).

ಮಲಬಾರ್ ಪ್ರದೇಶಕ್ಕೆ ಹತ್ತಿರವಾಗಿರುವ ದ.ಕ. ಜಿಲ್ಲೆಗೆ ವಲಸೆ ಬಂದು ನೆಲೆಸಿದವರನ್ನು ಬ್ಯಾರಿಗಳೆಂದು ತುಳುವರು ಕರೆದರೆಂಬುದು ಲೇಖಕ ಸಾಲೆತ್ತೂರು ಅಬೂಬಕರ್ ಪೈಜಿ ಅವರ ಅಭಿಪ್ರಾಯ . “ಮಾಪ್ಲಾಗಳೇ ವ್ಯಾಪಾರ ನಿಮಿತ್ತ ತುಳುನಾಡಿಗೆ ಬಂದು ಇಲ್ಲಿ ತಳವೂರಿ ಇಲ್ಲಿನ ಸ್ತ್ರೀಯರನ್ನು ಮದುವೆಯಾಗಿ ಬ್ಯಾರಿಗಳೆಂದು ಗುರುತಿಸಿಕೊಂಡರು” ಎಂಬ ವ್ಯಾಖ್ಯಾನಕ್ಕೆ ಫಕೀರ್ ಮಹಮ್ಮದ್‌ ಕಟ್ಟಾಡಿ ಅಭಿಮತ ವ್ಯಕ್ತಪಡಿಸುತ್ತಾರೆ.

“ವ್ಯಾಪಾರ ನಿಮಿತ್ತ ತುಳುನಾಡಿಗೆ ಕಾಲಿಟ್ಟ ಅರಬರು ಇಲ್ಲಿಯ ಹಿಂದೂ ಸ್ತ್ರೀಯರನ್ನು ಮದುವೆಯಾಗಿದ್ದರು ಎಂಬುದಕ್ಕೆ ತುಳು ಮಾಪಿಳ್ಳೆಗಳು ಅರಬ್ಬೀ ತಂದೆಗೆ ಮತ್ತು ತುಳು ತಾಯಿಗೆ ಹುಟ್ಟಿದ ಮಕ್ಕಳು ಎಂಬ ಇತಿಹಾಸತಜ್ಞ ಬಿ.ಎ. ಸಾಲೆತ್ತೂರು ಅವರ ಅಭಿಪ್ರಾಯವು ಹೆಚ್ಚು ಪುಷ್ಟಿ ನೀಡುತ್ತದೆ” ಎಂದು ಹಂಃ ಮಲಾರ್ ಸೃಷ್ಟೀಕರಿಸುತ್ತಾರೆ. (ಬ್ಯಾರಿ ಮುಸ್ಲಿಮರು: ಒಂದು ಅಧ್ಯಯನ ಪುಟ ೩, ೨೦೦೧).

ಶ್ರೀಮತಿ. ಡಾ. ಸುಶೀಲಾ ಉಪಾಧ್ಯಾಯರು ತಮ್ಮ ‘ದಿ. ಮಾಪಿಳ್ಳೆ ಮಲೆಯಾಳಂ” ಮಹಾಪ್ರಬಂಧದಲ್ಲಿ ಬ್ಯಾರಿಗಳನ್ನು ಮಾಪಿಳ್ಳೆಗಳೆಂದು ಗುರುತಿಸಿದ್ದಾರೆ. ಆದರೆ ವಿದ್ವಾಂಸರಾದ ಬಿ.ಎಂ. ಇಚ್ಲಂಗೋಡ ಅವರ ಪ್ರಕಾರ “ಬ್ಯಾರಿಗಳು ಮಾಪಿಳ್ಳೆಯವರಲ್ಲ.”

ತುಳು ಭಾಷೆಯಲ್ಲಿ ‘ಬ್ಯಾರ’ಎನ್ನುವ ಪದಕ್ಕೆ ‘ವ್ಯಾಪಾರ’ ಎನ್ನುವ ಅರ್ಥವಿದೆ. ಬ್ಯಾರಿ ಎಂದರೆ ‘ವ್ಯಾಪಾರಿ’ ವ್ಯಾಪಾರದಲ್ಲಿ ತೊಡಗಿಸಿಕೊಂಡ ಮುಸಲ್ಮಾನರಿಗೆ ತುಳುವರು ಕೊಟ್ಟು ಬಿರುದು ‘ಬ್ಯಾರಿ’ ಎಂಬುದಾಗಿದೆ. ಬ್ಯಾರಿಗಳು ಮಂಗಳೂರು, ಭಟ್ಕಳ, ಪುತ್ತೂರು, ಬೆಳ್ತಗಂಡಿಗಳ ಸುತ್ತಮುತ್ತ ಅಧಿಕವಾಗಿದ್ದಾರೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಬೆಂಗಳೂರು, ಮುಂಬೈಃ ಕಡೆಗೂ ತಳವೂರಿದ್ದಾರೆ. ಉದ್ಯೋಗದ ನಿಮಿತ್ತವಾಗಿ ವಿಶ್ವದಾದ್ಯಂತ ಅವರು ಹರಡಿಕೊಂಡಿದ್ದಾರೆ.

ಭಟ್ಕಳ ತಾಲೂಕಿನಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ಮುಸ್ಲಿಮರನ್ನು ನವಾಯಿತರೆಂದು ಗುರುತಿಸಲಾಗುತ್ತದೆ. ಇವರು ಮಹಮ್ಮದ್‌ರನ್ನು ದೇವದೂತರೆಂದು ನಂಬುವ ಶಾಫಿ ಪಂಗಡಕ್ಕೆ ಸೇರಿದವರು. ‘ನವಾಯಿತ’ ಎಂಬ ಪದವನ್ನು ಬಿಡಿಸಿದಾಗ ‘ನವ+ಆಯಿತ’ ಎಂದಾಗುತ್ತದೆ. ಇದನ್ನೇ ‘ನಯ ಆಬಾದಿ’, ‘ನವ್ ಆಬಾದಿ’ ಎಂದು ಸಹ ಉರ್ದುವಿನಲ್ಲಿ ವಿಂಗಡಿಸಲಾಗುತ್ತದೆ. ‘ಹೊಸಜನರು’ ಎಂಬುದು ಇವೆರಡೂ ಪಂಗಡದ ಅರ್ಥವಾಗಿದೆ. ಅಂದರೆ ಅರಬ್ಬಿ ದೇಶದಿಂದ ಭಾರತಕ್ಕೆ ಹೊಸದಾಗಿ ಬಂದ ಜನರನ್ನು ‘ನವಾಯಿತರು’ ಎಂದು ಕರೆಯಲಾಗುತ್ತದೆ. (ಡಾ. ಸೈಯದ ಜಮೀರುಲ್ಲಾ ಷರೀಫ್‌, ನವಾಯಿತರು, ಪುಟ-೬, ೧೯೮೫)

ನವಾಯಿತರ ಕುಟುಂಬಗಳು ಹೆಚ್ಚಾಗಿ ಭಟ್ಕಳ, ಶಿರೂರು, ಮಂಕಿ, ಮುರ್ಡೇಶ್ವರ, ವಲ್ಕಿ, ನಗರಬಸ್ತಿಕೇರಿ ಮುಂತಾದ ಕಡೆಗೆ ನೆಲಿಸಿವೆ. ಮೈಸೂರು, ಬೆಂಗಳೂರು, ತುಮಕೂರು ಅಲ್ಲದೆ ಮುಂಬಯಿ ಮುಂತಾದ ಕರಾವಳಿ ತೀರದ ಮಹಾನಗರಗಳಲ್ಲಿ ಬಟ್ಟೆ ವ್ಯಾಪಾರ, ಹೋಟೆಲ್‌ ಉದ್ದಿಮೆಗಳಲ್ಲಿ ನವಾಯಿತರು ತೊಡಗಿಸಿಕೊಂಡಿದ್ದಾರೆ.

ಕರ್ನಾಟಕದ ಮುಸ್ಲಿಮರು, ಇಸ್ಲಾಮ್‌ ಧರ್ಮವನ್ನು ಅನುಸರಿಸಿಕೊಂಡು ತಮ್ಮ ಬದುಕಿನ ವೈವಿಧ್ಯತೆಯನ್ನು ಅಭಿವ್ಯಕ್ತಿಸುವ ಬ್ಯಾರಿಗಳು, ನವಾಯಿತರು ಒಡೆದು ತೋರುವಂತೆ ಆ ನೆಲದಲ್ಲಿ ಜೀವಿಸುತ್ತಿದ್ದಾರೆ. ಈ ಸಮುದಾಯಗಳಲ್ಲಿನ ಮಹಿಳೆಯರ ಜೀವನ ಬಗೆಯೂ ಮಹತ್ವದ್ದೆನಿಸಿದೆ.

ಇಸ್ಲಾಮ್ ಮತ್ತು ಮಹಿಳೆ:

ಮಾನವ ಜಗತ್ತಿನಲ್ಲಿ ಹೆಚ್ಚು ಶೋಷಣೆಗೆ ಒಳಗಾಗುವವಳು ಮಹಿಳೆಯೇ. ನೋವು, ಅಪಮಾನಗಳನ್ನು ತನ್ನ ಉಡಿಯಲ್ಲಿ ಕಟ್ಟಿಕೊಂಡಂತಿರುವ ಆಕೆ ಗಂಢಿನ ನೋಟದಲ್ಲಿ ಅಸಹ್ಯವೆನಿಸಿದ್ದು ದುರಂತ. ಅದಕ್ಕೆ ಕಾರಣವೆಂಧರೆ, ಭ್ರೂಣ ಮೂಲತಃ ಗಂಡೇ ಆಗಿದ್ದು ಭೂತ-ಪಿಶಾಚಿಗಳಿಂದಾಗಿ ಅದು ಹೆಣ್ಣಾಗಿ ಪರಿವರ್ತಿತವಾಗುಹುದೆಂಬ ನಂಬಿಕೆ. ಹೆಣ್ಣೆಂದರೆ ಪ್ರಕೃತಿಸಹಜವಲ್ಲದ ಪೀಡೆಯೆಂಬ ಭಾವನೆ. ಮಗನಾದವನು ಮಾತ್ರ ಪಿಂಡವಿಡಲು ಯೋಗ್ಯ ಎಂಬ ಅವಾಸ್ತವ ಶ್ರದ್ಧೆ, ಪುತ್ರ ಸಂತಾನವಿಲ್ಲದವರಿಗೆ ಮುಕ್ತಿಯಿಲ್ಲ. ಅವರು ಪ್ರೇತಾತ್ಮವಾಗಿ ಅಲೆಯುತ್ತಾರೆಂಬ ಭಯಾನಕ ಕಲ್ಪನೆ. ಮಗ ದೇವಲೋಕದ ದೀಪ! ಮಗಳು ಕತ್ತಲೆಯ ರೂಪ! ಹೆಣ್ಣು ಕೆಟ್ಟ ಶನಿ ಎಂದು ಬಿಂಬಿಸುವುದು ಪುರುಷ ಪ್ರಯತ್ನದ ನೀಚತನವೇ ಆಗಿದೆ.

ಇಂಥದೇ ಅವಿವೇಕಿತನದ ವಿಚಾರ ಇಸ್ಲಾಮ್‌ ಧರ್ಮ ಅರಬಸ್ಥಾನದಲ್ಲಿ ಅನಾವರಣಗೊಳ್ಳುವುದಕ್ಕಿಂತ ಪೂರ್ವದಲ್ಲಿ ನೆಲೆಯೂರಿ, ಹೆಣ್ಣಿನ ಪಾಲಿಗೆ ಶಾಪವಾಗಿ ಪರಿಣಮಿಸಿತ್ತು. ಅಜ್ಞಾನದ ಗಾಢ ಅಂಧಕಾರದ ಸಂದರ್ಭವದು. ಕನಿಕರದ ಸ್ಪರ್ಶವಿಲ್ಲದ ರೀತಿ ಅರಬರು ಅಮಾನವೀಯವಾಗಿ ಬದುಕುತ್ತಿದ್ದರು. ಮೊದಲು ಹೆಣ್ಣು ಹುಟ್ಟಿದರೆ ದೇವ-ದೇವತೆಗಳ ಮುದುಪೆಂದು, ಅದಕ್ಕೆ ತಡಮಾಡದೇ ದೇವಾಲಯಗಳಿಗೆ ಅರ್ಪಿಸುತ್ತಿದ್ದರು. ಹೀಗೆ ಬಿಟ್ಟವರು ದೇವದಾಸಿ ಅಥವಾ ಬಸವಿಯರಾಗಿ ತಮ್ಮ ಮನ ಬಂದ ಯುವಕರೊಂದಿಗೆ ವ್ಯಭಿಚಾರ ನಡೆಸುತ್ತಿದ್ದರು.

ಗಂಡು ಹುಟ್ಟಿದರೆ ಅರಬರಿಗೆ ಹೆಮ್ಮೆ ಅನಿಸುತ್ತಿತ್ತು. ಹೆಣ್ಣು ಕೂಸಾದರೆ ನಾಚಿಕೆ ಗೇಡಿತನದ ಮಾರಿಯೆಂದು ವಿಲಿವಿಲಿಸುತ್ತಿದ್ದರು. “ನನಗೆ ಒಬ್ಬ ಮಗಳಿದ್ದಳು, ಆಕೆ ನನ್ನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು. ನಾನು ಕರೆದಾಗಲೆಲ್ಲಾ ಸಂತೋಷದಿಂದ ನನ್ನ ಬಳಿ ಬರುತ್ತಿದ್ದಳು . ಒಂದು ದಿನ ನಾನು ಆಕೆಯನ್ನು ಕರೆದೆ. ಆಕೆ ಓಡೋಡಿ ಬಂದಳು. ನಾನು ಆಕೆಯನ್ನು ಕರೆದುಕೊಂಡು ಹೋಗಿ ಸಮೀಪದ ಬಾವಿಯೊಂದಕ್ಕೆ ದೂಡಿ ಬಿಟ್ಟೆ, ಆಗಲೂ ಆಕೆ ಅಪ್ಪಾ… ಅಪ್ಪಾ… ಎನ್ನುತ್ತಿದ್ದಳು.” ಇದೊಂದು ಅಜ್ಞಾನ ಕಾಲದ ಘಟನೆ, ಇದನ್ನು ಕೇಳಿ ಪ್ರವಾದಿ ಮಹಮ್ಮದರು ಗಡ್ಡೆ ತೋಯ್ದು ಹೋಗುವಂತೆ ಅತ್ತು ಬಿಟ್ಟರಂತೆ.

ಹೆಣ್ಣಿನ ವಿಷಯದಲ್ಲಿ ಅರಬರು ಅತ್ಯಂತ ಅಮಾನುಷರಾಗಿ ವರ್ತಿಸುತ್ತಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಅವರು ಹೆಣ್ಣು ಮಗುವನ್ನು ಜೀವಂತವಾಗಿ ಹೂಳಿ ಬಿಡುವ ಮೂಲಕ ಜನಾಂಗದ ಮರ್ಯಾದೆ, ಗೌರವದ ಶ್ಲಾಘನೆಗೆ ಪಾತ್ರರಾಗುತ್ತಿದ್ದರು. ಹೆಣ್ಣನ್ನು ಹೆತ್ತ ತಾಯಿ-ತಂದೆಗಳು ತಲೆತಗ್ಗಿಸಿ ಬಹಳವಾಗಿ ದುಃಖಿಸುತ್ತಿದ್ದರು.

ಇಷ್ಟು ಸಾಲದು ಎನ್ನುವಂತೆ ಪುರುಷನು, ಹೆಣ್ಣನ್ನು ನಿರ್ದಯವಾಗಿ ಬಳಸಿಕೊಳ್ಳುವ ಪರಂಪರೆ ಮಾಮೂಲಿಯಾಗಿತ್ತು. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಒಬ್ಬನು ಎಷ್ಟು ಹೆಣ್ಣುಗಳನ್ನೂ ಮದುವೆಯಾಗುವ ಅಥವಾ ಮದುವೆ ಇಲ್ಲದೆ ಸುಂದರಿಯರನ್ನು ತನ್ನ ಆಧೀನದಲ್ಲಿ ಇಟ್ಟುಕೊಳ್ಳುವುದಿತ್ತು. ಸ್ತ್ರೀಯರಾದರೂ ಹಲವಾರು ಪುರುಷರೊಂದಿಗೆ ಮದುವೆ ಮಾಡಿಕೊಳ್ಳುವ ಪ್ರಸಂಗವಿತ್ತು.  ವಿಧವೆಯರನ್ನು ಪುರುಷರು ತಮ್ಮ ಸೊತ್ತು ಎಂದು ಭಾವಿಸುತ್ತಿದ್ದರು. ಅಥವಾ ಸ್ತ್ರೀಯರನ್ನು ಮೈದುನರು ಅಥವಾ ಮಲಮಕ್ಕಳು ಭೋಗಕ್ಕಿಟ್ಟುಕೊಳ್ಳುವ ಅನೈತಿಕ ವಿಧಾನಗಳು ನಿರಾತಂಕವಾಗಿದ್ದವು. ಅರಬರ ಕಾಮದ ಕಿಚ್ಚಿನಲ್ಲಿ ಹೆಣ್ಣು ಬೆಂದು ಹೋಗುತ್ತಿದ್ದಳು. ವಿಧವೆಗೆ ಗಂಡನ ಆಸ್ತಿಯ ಮೇಲೆ ಯಾವ ಹಕ್ಕೂ ಇರಲಿಲ್ಲ. ಅವಳಿಗೆ ಸ್ವಾತಂತ್ಯ್ರವೂ ಇರಲಿಲ್ಲ. ಮನಸೊ-ಇಚ್ಛೆ ಸ್ತ್ರೀಯರನ್ನು ವಿವಾಹವಾಗುವ ಅಥವಾ ಪದೇ ಪದೇ ತಿರಸ್ಕರಿಸುವ ಮತ್ತು ಸ್ವೀಕರಿಸುವ ಸಂಪ್ರದಾಯ ಧಾರಾಳವಗಿತ್ತು. ತಲಾಕ್‌ಗೆ ಯಾವುದೇ ಇತಿಮಿತಿ, ನೀತಿ-ನಿಯಮಗಳಿರಲಿಲ್ಲ. ಈ ವಿಷಯದಲ್ಲಿ ಪುರುಷಚಿತ್ತ ಪರಮಾಧಿಕಾರಿಯಂತೆ ವರ್ತಿಸುತ್ತಿತ್ತು. ಮಲತಾಯಿಗಳ ಮೇಲೆ ಮಲಮಕ್ಕಳು ಕ್ರೌರ್ಯ ಎಸಗುತ್ತಿದ್ದರು. ಸ್ತ್ರೀಯರ ಪಾತಿವ್ರತ್ಯಕ್ಕೆ ಕವಡೆ ಕಿಮ್ಮತ್ತೂ ಇರಲಿಲ್ಲ. ವ್ಯಭಿಚಾರದ ಬಜಾರಿನಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿದ್ದ ಹೆಣ್ಣು ಅಸಹಾಯಕಳಾಗಿ ಪುರುಷ ದಬ್ಬಾಳಿಕೆಯಲ್ಲಿ ನಲುಗಿ ಹೋಗುತ್ತಿದ್ದಳು. ನಾಗರಿಕ ಸಂಸ್ಕೃತಿ, ಸೌಜನ್ಯ, ಮನುಷ್ಯ ಸಂಬಂಧದ ಗಂಧಗಾಳಿ ಇರದ ಆ ಪರಿಸರದಲ್ಲಿ ಹೆಣ್ಣು ಅನುಭವಿಸಿದ ಬರ್ಬರ ನೋವು, ಹತಾಶೆಗಳನ್ನು ಎಷ್ಟು ದಾಖಲಿಸಿದರೂ ಕಡಿಮೆಯೇ.

ಹೆಣ್ಣು ಜೀವದ ಕತ್ತಲೆ ನುಂಗಿದ ಪ್ರವಾದಿ ಬೆಳಕು:

ಎಲ್ಲ ರೀತಿಯ ಅಪಮಾನ, ಶೋಷಣೆ, ದಾಸ್ಯದ ಪರಿಣಾಮದಿಂದ ಹೆಣ್ಣಿನ ಬದುಕಿನಲ್ಲಿ ಕತ್ತಲೆಂಬೋ ಕತ್ತಲು. ಅನಾಥಪ್ರಜ್ಞೆಯ ಕಲರವ. ಇಂಥ ಸಮಯದಲ್ಲಿ ಪ್ರವಾದಿ ಮಹಮ್ಮದರು ಅವಳ ಪಾಲಿಗೆ ಬೆಳಕಾಗಿ ಬಂದರು. ಅವಳನ್ನು ಬಂಧಿಸಿದ ಪೈಶಾಚಿಕ ಸರಪಳಿಗಳನ್ನು ಕಡಿದು ಚೆಲ್ಲಿ, ತಮದ ಗುಹೆಯಿಂದ ಬೆಳಕಬಯಲಿಗೆ ತಂದರು. ಅವಳ ಮೂಕಬಾಯಿಗೆ ಧ್ವನಿಯಾದರು, ಬತ್ತಿ ಬಸವಳಿದ ಒಡಲಿಗೆ ಜೀವಪುಳಕವಾದರು. ಸ್ತ್ರೀಪರವಾದ ಅವರ ನಿಲುವು ಅಗಾಧವೆನ್ನುವಂತೆ ಅರಬರಲ್ಲಿ ಪ್ರಜ್ಞೆಯನ್ನು ಹುಟ್ಟು ಹಾಕಿತು.

ಪವಿತ್ರ ಕುರ್ಅನ್‌ ಕೂಡಾ ಹೆಣ್ಣು ಜೀವಂತವಾಗಿರಬೇಕು ಎನ್ನುತ್ತದೆ. ಅವಳು ಜೀವಿಸುವ ಹಕ್ಕಿನಲ್ಲಿ ಹಸ್ತಕ್ಷೇಪ ನಡೆಸುವವನನ್ನು ಅಲ್ಲಾಹನು ವಿಚಾರಣೆಗೆ ಗುರಿಪಡಿಸುವನು. “ತಮ್ಮ ಸಂತತಿಗಳನ್ನು ಅವಿವೇಕದಿಂದ ಕೊಂದವರು ಅತ್ಯಂತ ನಷ್ಟದಲ್ಲಿರುವವರು (ಕುರ್ಅನ್‌೬:೧೪೦) ಮತ್ತು “ಜೀವಂತ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಯಾವ ತಪ್ಪಿಗಾಗಿ ಅವಳನ್ನು ಕೊಲ್ಲಲಾಯಿತೆಂದು ಕೇಳಲಾಗುವುದು.” (ಕುರ್ಅನ್‌೮೧:೮-೯) ಎನ್ನುವುದರ ಮೂಲಕ ಅಜ್ಞಾನಕಾಲದ ಆತ್ಮಸಾಕ್ಷಿಗಳನ್ನು ಎಚ್ಚರಿಸುತ್ತದೆ.

ಹೆಣ್ಣಿನ ಪರವಾಗಿ ಪ್ರವಾದಿ ಮಹಮ್ಮದರು ಆಡುವ ಮಾತು ಅಪ್ರತಿಮವೆನಿಸಿದೆ.

  • ಒಬ್ಬನಿಗೆ ಹೆಣ್ಣು ಮಗುವಿದ್ದು ಅವನು ಅದನ್ನು ಜೀವಂತ ಹೂಳದೆ, ಅದನ್ನು ಅಪಮಾನಕಾರಿಯೆಂದು ಪರಿಗಣಿಸದೆ ಮತ್ತು ಅದಕ್ಕಿಂತ ತನ್ನ ಗಂಡು ಮಗನಿಗೆ ಪ್ರಾಶಸ್ತ್ಯ ನೀಡದೆ ಇದ್ದರೆ ಅಲ್ಲಾಹನು ಅವನನ್ನು ಸ್ವರ್ಗದಲ್ಲಿ ಪ್ರವೇಶಗೊಳಿಸುವನು.
  • ಯಾರು ಮೂವರು ಹೆಣ್ಣುಮಕ್ಕಳನ್ನು ಪೋಷಿಸಿದನೋ ಮತ್ತು ಅವರ ಜತೆ ಸದ್ವರ್ತನೆ ಮಾಡಿದನೋ ಅವನಿಗೆ ಸ್ವರ್ಗವಿದೆ.
  • ಯಾರನ್ನು ಅಲ್ಲಾಹನು ಹುಡುಗಿಯರ ಮೂಲಕ ಪರೀಕ್ಷೆಗೊಳಪಡಿಸುವನೋ ಮತ್ತು ಆತನು ಅವರೊಂದಿಗೆ ಸದ್ವರ್ತನೆ ಮಾಡುವನೊ ಅವನ ಪಾಲಿಗೆ ಅವರು ನರಕದಿಂದ ರಕ್ಷಣೆಯ ಸೇತುವಾಗುತ್ತಾರೆ.
  • ಯಾರಾದರೂ ಇಬ್ಬರು ಹುಡುಗಿಯರನ್ನು ಅವರು ಪ್ರೌಢೆಯರಾಗುವತನಕ ಪೋಷಿಸಿದರೆ ನಾನು ಮತ್ತು ಅವನು ಈ ರೀತಿ ಸ್ವರ್ಗದಲ್ಲಿ ಪ್ರವೇಶಿಸುವೆವು.

ಇವೆಲ್ಲ ಪ್ರವಾದಿಗಳ ವಚನ (ಹದೀಸ್‌) ಗಳು. ಇಲ್ಲಿ ಕೊನೆಯ ವಚನವನ್ನು ಉಲಿದು ಅವರು ತಮ್ಮ ತೋರ‍್ಬೆರಳು ಮತ್ತು ಮಧ್ಯದ ಬೆರಳನ್ನು ಎತ್ತಿ ತೋರಿದರಂತೆ. “ಅನ್ಯಾಯದ ಆಯುಷ್ಯ ಕಡಿಮೆ, ಆದರೆ ಆ ಅನ್ಯಾಯಕ್ಕೆ ಬಲಿಯಾಗುವವರು ತನ್ನದೇ ಹೆಣ್ಣು ಮಕ್ಕಳಾಗಿದ್ದರೆ ಆ ಅನ್ಯಾಯವು ಆ ಮಕ್ಕಳಿಗೆ ತಟ್ಟುವ ಮೊದಲೇ ಆಕ್ರಮಿಯ ಜೀವಿತಾವಧಿಯನ್ನು ಅದು ಕೊನೆಗೊಳಿಸುವುದ” (ನಸಾಈ) ಎಂಬುದೇ ಈ ಸಂಕೇತದ ಅರ್ಥ.

ಹೆಣ್ಣು ಗಂಡಿನ ಗುರಾಣಿ:

“ಯಾರು ಹೆಣ್ಣುಮಕ್ಕಳ ಜನನದ ಮೂಲಕ ಪರೀಕ್ಷಿಸಲ್ಪಡುವರೋ ಮತ್ತು ಅವರೊಂದಿಗೆ ಉತ್ತಮವಾಗಿ ವ್ಯವಹರಿಸಿ ಆ ಪರೀಕ್ಷೆಯಲ್ಲಿ ಸಫಲರಾಗುವರೋ ಆ ಹೆಣ್ಣು ಮಕ್ಕಳು ನಿರ್ಣಾಯಕ ದಿನದಂದು ಅವರ ಮಟ್ಟಿಗೆ ನರಕಾಗ್ನಿಯಿಂದ ರಕ್ಷಿಸುವ ಗುರಾಣಿಯಾಗಿ ಮಾರ್ಪಡುವರು” ಎಂಬ ಮಹಮ್ಮದ ಪೈಗಂಬರರ ಈ ಅಭಿಪ್ರಾಯ ಹೆಣ್ಣಿಗೆ ಸಲ್ಲಿಸುವ ಅತ್ಯುನ್ನತ ಗೌರವದ ದ್ಯೋತಕವೆನಿಸಿದೆ.

ಸ್ತ್ರೀಯನ್ನು ನಿಕೃಷ್ಟಳೆಂದು ಕುರ್ಆನ್‌ ಹೇಳುವುದಿಲ್ಲ. “ಪುರುಷನಾಗಲಿ, ಸ್ತ್ರೀಯರಾಗಲಿ ನೀವೆಲ್ಲ ಒಂದೇ ವರ್ಗದವರು” ಎನ್ನುತ್ತದೆ (ಪವಿತ್ರ ಕುರ್ಆನ್‌ ೩-೧೯೫) ಅವಳನ್ನು ಅಮಾನವೀಯವಾಗಿ ನೋಡುವುದು, ಪುರುಷನಿಗೆ ವಿಶ್ವಸಿಂಹಾಸನದ ಹಕ್ಕು ಇದೆಯೆನ್ನುವುದು ಅಜ್ಞಾನದ ಸಿದ್ಧಾಂತವಾಗಿದೆಯೆಂದು ಅದು ಬಗೆಯುತ್ತದೆ.

ಅನಾಗರಿಕ ಕಾಲದಲ್ಲಿ ಪಾತಾಳಕ್ಕೆ ಒಗೆಯಲ್ಪಟ್ಟ ಸ್ತ್ರೀಯರನ್ನು ಜೀವನದ ರಾಜ ಮಾರ್ಗಕ್ಕೆ ತರುವ ಉತ್ಕಟ ಹಂಬಲ ಇಸ್ಲಾಮಿನದು. ಅವಳಿಗೂ ಅಸ್ತಿತ್ವವಿದೆಯೆಂಬುದನ್ನು ಅದು ಪುರುಷವರ್ಗಕ್ಕೆ ಜ್ಞಾಪಿಸಿ ಕೊಡುತ್ತದೆ. ಗೌರವದ ದೃಷ್ಟಿಯಿಂದ ಅಥವ ಅಗೌರವದ ದೃಷ್ಟಿಯಿಂದ ಅವರಿಬ್ಬರಿಗೂ ಮಾನದಂಡ ಒಂದೆ ಆಗಿರಬೇಕೆನ್ನುವ ಕುರ್ಆನ್‌ ಇಬ್ಬರ ಪ್ರಾಣ, ಸೊತ್ತು ಮತ್ತು ಮಾನವ ಸಮಾನವಾಗಿಯೇ ರಕ್ಷಿತವಾಗಲು ಅಪೇಕ್ಷಿಸುತ್ತದೆ. ಸ್ತ್ರೀಯ ಪ್ರಾಣವು ಗೌರವಾರ್ಹವಾದುದು. ಅದು ಹರಣವಾದರೆ “ಖಂಡಿತವಾಗಿಯೂ ಸ್ತ್ರೀಯ ಕೊಲೆಗೆ ಪ್ರತಿಯಾಗಿ ಪುರುಷನನ್ನು ಕೊಲ್ಲಲಾಗುವುದು” (ಅಸ್ಸುನನುಲ್‌ ಕುಬ್ರಾ ಭಾಗ ೮ ಪುಟ ೨೦೮) ಹೀಗೆಂದು ಯಮನ್‌ನವರಿಗೆ ಪ್ರವಾದಿಗಳು ಬರೆಯಿಸಿದ ನಿಯಮಾವಳಿಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ಮನೋಸ್ಥೈರ್ಯಕ್ಕೆ ಬೆಂಬಲ

ತನ್ನ ಬದುಕಿನ ಸಂಕಷ್ಟಗಳನ್ನು ಎದುರಿಸುವ ಮನೋಸ್ಥೈರ್ಯ ಮಹಿಳಿಗೆ ಇರಬೇಕೆನ್ನುವ ಆಶಯ ಇಸ್ಲಾಮಿನದಾಗಿದೆ. ಆಕೆ ಕೃಷಿ, ವ್ಯಾಪಾರ, ಕಸುಬು, ಕೈಗಾರಿಕೆ ಹಾಗೂ ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ಪೂರ್ತಿಯಾಗಿ ತೊಡಗಿಸಿಕೊಳ್ಳುವಲ್ಲಿ ಅದು ಮುಕ್ತ ಮನಸ್ಸು ಹೊಂದಿದೆ. ಒಳ್ಳೆಯ ಉದ್ದೇಶಕ್ಕಾಗಿ ಆಕೆ ಹೊರಗೆ ಹೋಗಲು ಅದು ಅನುಮತಿಸುತ್ತದೆ.

ಪ್ರವಾದಿಗಳ ಕಾಲದಲ್ಲಿ ಸ್ತ್ರೀಯರು ತಮ್ಮ ಹೊಲದಲ್ಲಿ ನೀರಿನ ನಾಲೆಗಳ ಸುತ್ತ ಬೀಟ್‌ರೂಟು ಬೆಳೆಸುವ, ಕುದುರೆಗೆ ಮೇವು ಹಾಕಿ, ನೀರು ಕುಡಿಸುವ, ದೂರದ ಭೂಮಿಯಿಂದ ಖರ್ಜೂರ ತರುವ, ಕೃಷಿಕಾರ್ಯಗಳನ್ನು ನೆರವೇರಿಸುತ್ತಿದ್ದರು. ಅತ್ತರ್ (ಸುಗಂಧ ದ್ರವ್ಯ) ವ್ಯಾಪಾರ ಮಾಡುತ್ತಿದ್ದರು. ಕೈಕಸುಬು ಬಲ್ಲ ಸ್ತ್ರೀಯೊಬ್ಬಳು ತನ್ನ ಪತಿ ಮತ್ತು ಮಕ್ಕಳ ಖರ್ಚು-ವೆಚ್ಚಗಳನ್ನು ನಿಭಾಯಿಸುತ್ತಿದ್ದುದರ ಬಗ್ಗೆ “ತಬ್ಕಾತ್‌ ಇಬ್ನು ದಅದ್‌” ತಿಳಿಸುತ್ತದೆ.

ಪ್ರತಿರೋಧನೆಗೆ ಉತ್ತೇಜನ

ತನಗೆ ಕೊಟ್ಟ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ವಂಚನೆಗೊಳಗಾಗುವ ಅಥವಾ ಶೋಷಣೇಗೆ ಒಳಗಾಗುವ ಸಂದರ್ಭಗಳಲ್ಲಿ ಮಹಿಳೆ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ಅವಕಾಶವನ್ನು ಇಸ್ಲಾಮ್‌ ಒದಗಿಸಿಕೊಟ್ಟಿದೆ. ಇದಕ್ಕೆ ನಿದರ್ಶನವಾಗಿ ಮುಸ್ನದ್‌ ಅಹ್ಮದ್‌ ವಚನದಲ್ಲಿ ಪ್ರಸ್ತಾಪಗೊಂಡಿರುವ ಹುಡುಗಿಯೊಬ್ಬಳ ಪ್ರತಿಭಟನೆಯ ಪ್ರಸಂಗವನ್ನು ಗಮನಿಸಬಹುದು. ತಂದೆ ಅವಳನ್ನು ಒಬ್ಬ ಶ್ರೀಮಂತ ಸೋದರ ಪುತ್ರನೊಂದಿಗೆ ಮುದವೆ ಮಾಡಿಸಿದ. ಅವನ ಬಗ್ಗೆ ಹುಡುಗಿಗೆ ಒಲವು ಇರಲಿಲ್ಲ. ಆಕೆ ಪ್ರವಾದಿಗಳ ಬಳಿಗೆ ಬಂದು ನಿವೇದಿಸಿಕೊಂಡಳು ಪ್ರವಾದಿಗಳು “ನಿನಗೆ ಈ ವಿವಾಹ ಇಷ್ಟವಿಲ್ಲದಿದ್ದರೆ ನೀನು ಸ್ವತಂತ್ರಳಾಗಿರುವಿ” ಎಂದರು. ಅದಕ್ಕೆ ಹುಡುಗಿ “ನಾನು ನನ್ನ ತಂದೆಯ ಪ್ರೇಮವನ್ನ ಉ ಅನುಮೋದಿಸುತ್ತೇನೆ. ಆದರೆ ಮಹಿಳೆಯರನ್ನು ಅವರ ಇಷ್ಟದ ವಿರುದ್ಧ ವಿವಾಹ ಮಾಡಿಸಿಕೊಡುವ ಹಕ್ಕು ತಂದೆಯವರಿಗಿಲ್ಲವೆಂಬುದು ಅವರಿಗೆ ತಿಳಿಯಲಿ ಎಂಬುದೇ ನನ್ನ ಬಯಕೆಯಾಗಿದೆ” ಎಂದಳು.

ತನ್ನ ಮೇಲೆ ತಂದೆ ಚಲಾಯಿಸಿದ ಅತಿರೇಕದ ವಿರುದ್ಧ ಹುಡುಗಿ ಆಪತ್ತಿನ ಕಾಲದಲ್ಲಿ ಪ್ರತಿಭಟಿಸಿದ್ದು ಗಮನಾರ್ಹ. ಆಖೆಯ ವಿಷಯದಲ್ಲಿ ತಂದೆಯಾಗಲಿ ಗಂಡನಾಗಲಿ ಹಸ್ತಕ್ಷೇಪ ನಡೆಸುವುದು ನ್ಯಾಯಸಮ್ಮತವಲ್ಲ ಎಂಬುದು ಇದರ ಉದ್ದೇಶ. ಇಸ್ಲಾಮ ಧರ್ಮ ಮಹಿಳೆಯ ಪರವಾಗಿ, ಮತ್ತು ಅವಳ ಹಕ್ಕಿನ ಸಂರಕ್ಷಣೆಯ ಬೆಂಬಲಕ್ಕಿರುವುದು ಹೆಗ್ಗಳಿಕೆಯೆನಿಸಿದೆ.

ಮಹೋನ್ನತ ಗೌರವ:

ಸ್ತ್ರೀಯನ್ನು ದ್ವೇಷಿಸುವುದು, ಪರಿಶುದ್ಧತೆ ಮತ್ತು ಪರಿಮಳವನ್ನು ಮೆಚ್ಚದಿರುವುದು ದೇವಭಯದ ಸಂಕೇತವಲ್ಲ ಎಂದು ಪ್ರವಾದಿಗಳು ಸ್ಪಷ್ಟಪಡಿಸುತ್ತಾರೆ. ಅವಳು ಅಬಲೆ, ಅಸಹಾಯಕಳಲ್ಲ. ಪುರುಷನನ್ನೂ ಕೂಡಾ ನರಕಾಗ್ನಿಯಿಂದ ರಕ್ಷಿಸುವಲ್ಲಿ ಶಕ್ತಳೆನಿಸಿದ್ದಾಳೆ. ಇದು ಪ್ರವಾದಿಗಳ ಅನಿಸಿಕೆ.

ಪ್ರವಾದಿ ಮಹಮ್ಮದರಿಗೆ ಹ-ಫಾತಿಮಾ ಅತ್ಯಂತ ಪ್ರೀತಿಯ ಮಗಳಾಗಿದ್ದಳು. “ನನ್ನ ಮಗಳು ನನ್ನ ಮೂಳೆ, ಮಾಂಸವಾಗಿದ್ದಾಳೆ. ಆಕೆಗೆ ಕಳವಳ ಉಂಟು ಮಾಡುವಂತಹದು ನನಗೂ ಆತಂಕಕಾರಿಯಾಗಿದೆ. ಆಕೆಗೆ ಉಪದ್ರವಕಾರಿಯಾದುದು ಖಂಡಿತ ನನಗೂ ಕಷ್ಟದಾಯಕವಾಗಿದೆ” (ಬುಖಾರಿ) ಎಂದು ಮಗಳ ಕುರಿತು ಹೇಳಿದ್ದಾರೆ ಅವರರು. ಪತ್ನಿಯರ ಪೈಕಿ ಹ-ಆಯಿಷಾ ಕೂಡಾ ಪ್ರವಾದಿಗಳಿಗೆ ಬಹಳ ಪ್ರಿಯರಾಗಿದ್ದರು. ‘ತಾಯಿಯ ಪಾದದಡಿ ಸ್ವರ್ಗವಿದೆ’ ಎಂದು ಹೇಳುವ ಮೂಲಕ ಪ್ರವಾದಿಗಳು ಹೆಣ್ಣಿನ ಗೌರವವನ್ನು ಮಹೋನ್ನತಗೊಳಿಸಿದ್ದಾರೆ.

ಸ್ತ್ರೀಪಾಪದ ಮೂರ್ತರೂಪವೆಂದು ಭಾವಿಸಿದ ಜಗತ್ತಿನ ಕ್ಲೀಷೆಯನ್ನು ತೊಳೆದು ಶುದ್ಧಗೊಳಿಸಿದ ಧಾವಂತ ಇಸ್ಲಾಮಿನದು. ಅದು ಅವಳನ್ನು ಮನುಷ್ಯಳಂತೆ ನೋಡುತ್ತದೆ. ಅವಳ ಬದುಕಿನ ಆಸ್ಥೆಗಾಗಿ ಆಪ್ತವಾಗಿಯೇ ತುಡಿಯುತ್ತದೆ. ಅದು ಬರಿ ಮಾತು ಹೇಳುವುದಿಲ್ಲ. ಅವರಿಗೆ ಸಲ್ಲುವ ಸ್ಥಾನಮಾನ, ಹಕ್ಕುಗಳ ಬಗ್ಗೆ ಕಾನೂನು ನಿರ್ಮಿಸಿದೆ. ಈ ಮೂಲಕ ಅದು ತನ್ನನ್ನು ತಾನೇ ಗೌರವಿಸಿಕೊಂಡಿದೆ.

ಧರ್ಮ, ಮಹಿಳೆ ಮತ್ತು ವಾಸ್ತವ

ಒಂದು ಅನಾಗರಿಕ ಜಗತ್ತಿನ ಹೊರಳಿನಲ್ಲಿ ಸುಧಾರಣಾವಾದಿ ಒಳತುಡಿತ ಮತ್ತು ಹೊಸ ಬೆಳಕಿನ ಲವಲವಿಕೆಯೊಂದಿಗೆ ಜಂಗಮಶೀಲವಾಗಿ, ಮನಯಷ್ಯರನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತ ವಿಸ್ತೃತಗೊಂಡಿದ್ದು ಆ ನೆಲೆಯಲ್ಲಿ ಮಹಿಳೆಗೆ ಅದರ ಸಮ್ಮಾನಗಳು ದೊರಕಿದ್ದು ಅತ್ಯಂತ ಪ್ರಶಂಸನೀಯ, ಹೆಣ್ಣನ್ನು ‘ಚಪ್ಪಲಿ’ಗಿಂತ ಕಡೆಯಾಗಿ ಪರಿಗಣಿಸಿ ಅವಳನ್ನು ಶೋಷಿಸಿದ, ಹಿಂಸಿಸಿದ ಅರಬರ ಅಮಾನುಷತೆಯನ್ನು ಮರೆಯಿಸಿದ ಈ ಧರ್ಮ ಅವಳಿಗೆ ಜೀವನೋಲ್ಲಾಸ ಒದಗಿಸಿ ಅರ್ಥಪೂರ್ಣವೆನಿಸಿತು. ವರ್ತಮಾನ ಸಂದರ್ಭದಲ್ಲಿ ಅದು ಮಹಿಳೆಯನ್ನು ಉದಾತ್ತವಾಗಿ ಗಮನಿಸಿಕೊಂಡಿದೆಯೇ? ಹೌದು. ಆಕೆಯ ವಿಷಯದಲ್ಲಿ ಇಸ್ಲಾಮ್‌ ತನ್ನ ಧೋರಣೆಗಳನ್ನು ಬದಲಿಸಿಕೊಂಡಿಲ್ಲ ಎನ್ನುವುದು ಸೂರ್ಯನಷ್ಟೆ ಸತ್ಯ. ಆದರೆ ಪುರೋಹಿತಶಾಹಿ ವರ್ಗ ಹುಟ್ಟು ಹಾಕಿದ ವ್ಯವಸ್ಥೆ ಮಾತ್ರ ಅವಳ ಸಂವೇದನೆಗಳನ್ನು ತಳಮಳಿಸುವಂತೆ ಮಾಡಿರುವುದು ಮಿಥ್ಯವಲ್ಲ.

ಕುರ್ಆನ್‌ ಮತ್ತು ಶರಿಯತ್‌ ಹೆಸರಲ್ಲಿ ಪುರೋಹಿತಶಾಹಿಗಳ ಧ್ಯೇಯ-ಧೋರಣೇಗಳು ಧಾರ್ಷ್ಟ್ಯಗೊಳ್ಳುತ್ತವೆ. ಅಜ್ಞಾನಿಗಳನ್ನು, ಅಂಧಃಶ್ರದ್ಧರನ್ನು ನಿಯಂತ್ರಣದಲ್ಲಿರಿಸಿಕೊಂಡು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಕಾರ್ಯಾಚರಣೆ ಅವರಿಗೆ ಕರತಲಾಮಲಕ. ಮೌಢ್ಯದ ಆವರಣದಲ್ಲಿ ಸುತ್ತಿಸುಳಿದಾಡುವವರು ಅಂಥವರ ಹುನ್ನಾರಕ್ಕೆ ಸುಲಭವಾಗಿ ಬಲಿಯಾಗುವರು. ಯಾವುದು ಜೀವಕ್ಕೆ ಹಿತಕರವೋ, ವಿಕಾಸಕ್ಕೆ ಪೂರಕವೋ ಅದರ ಮೇಲೆ ಕಳ್ಳಿಯ ಹಾಲು ಸುರಿಯುವ ನಿಕೃಷ್ಟತೆ ಪ್ರತಿಗಾಮಿಗಳದು. ಸೂರ್ಯ-ಚಂದ್ರರ ಮುಖದೆದುರು ಕತ್ತಲೆಯ ಪರದೆ ಹಿಡಿಯುವ, ಸರಿದಾರಿಗೆ ಮುಳ್ಳಿನ ಬಣವೆಯೊಟ್ಟಿ ಅಡ್ಡಮಾರ್ಗ ಹಿಡಿಸುವ, ಸುಳಿಗಳಲ್ಲಿ ಸುತ್ತಿಸಿ ಹೈರಾಣಗೊಳಿಸುವ, ಭಯಾನಕ ಕಲ್ಪನೆಗಳನ್ನು ಮಿದುಳು, ಮನಸ್ಸುಗಳಲ್ಲಿ ಸೃಜಿಸಿ ಕಂಗೆಡಿಸುವ ಅಥವಾ ಅಜ್ಞಾತಗೊಳಿಸುವ ಈ ವರ್ಗ ತನ್ನ ಸಂವಿಧಾನವನ್ನು ಚಲಾಯಿಸುವುದು.

ಆಗಲೇ ವಿಷಣ್ಣವಾದ ವ್ಯವಸ್ಥೆಯೊಂದು ನಿರ್ಮಾಣಗೊಂಡು, ಬಲಾಢ್ಯರ ಮಾತುಗಳು ಪ್ರಚಂಡ ಉಕ್ತಿಗಳಾಗಿ, ವ್ಯಾಖ್ಯಾನಗಳಾಗಿ, ಸಾಕ್ಷ್ಯಾಧಾರಗಳಾಗಿ ಪರಿಣಮಿಸಿ ಮುಗ್ಧರನ್ನು ಅಮರಿಕೊಳ್ಳುವುದು. ಧ್ವನಿ ಹತ್ತಿಕ್ಕಲ್ಪಡುವ, ಪ್ರಶ್ನೆಗಳು ಗೋರಿಗೊಳ್ಳುವ, ವಾಸ್ತವ ತಹತಹಿಸುವ ಅಲ್ಲಿ ಭ್ರಮೆಗಳು ವಿಜೃಂಭಿಸುವುದು ಸಹಜ. ದೇವರು ಮತ್ತು ಧರ್ಮದ ಒಳ ಸತ್ಯಾಸತ್ಯಗಳ ಮೇಲೆ ದೂಳು ಕುಳಿತು ಮುಖವಾಡಗಳ ಸೂತ್ರ ಸಮಾಜವನ್ನು ಆಳತೊಡಗುವುದು. ಅದಕ್ಕೆ ಕಾನೂನು ಎಂದರೆ ಅಸಡ್ಡೆ. ಮನುಷ್ಯತ್ವ ಎಂದರೆ ಕಾಲಿನ ಕಸಕ್ಕೆ ಸಮ.

ಮಹಿಳೆ ಮನೆಯ ಸಾಮ್ರಾಜ್ಞಿ:

ಇಸ್ಲಾಮ್‌, ಮಹಿಳೆಗೆ ಮನೆಯನ್ನು ಕೇಂದ್ರೀಯ ಸ್ಥಾನವನ್ನಾಗಿ ಮಾಡಿದೆ. ಪತಿ, ಸಂತಾನ, ಬಂಧು-ಬಳಗದವರ ಜೊತೆಗಿನ ಅವಳ ಸಂಬಂಧಗಳು, ಹೊಣೆಗಾರಿಕೆಗಳು ಅವಳ ಸೈರಣೆ, ಅಂತಃಕರಣದ ಉದಾತ್ತ ಫಲಗಳಾಗಿರುತ್ತದೆ. ಇಡೀ ಕುಟುಂಬವನ್ನು ಸಭ್ಯ ಮತ್ತು ಸುಸಂಸ್ಕೃತವಾಗಿ ರೂಪಿಸುವ ಸಮಾಜದ ದೃಷ್ಟಿಯಲ್ಲಿ ಅದಕ್ಕೊಂದು ಮಾನ್ಯತೆಯನ್ನು ಪ್ರಾಪ್ತವಾಗಿಸುವ ದಿಸೆಯಲ್ಲಿ ಅವಳ ಶ್ರಮ ನಿತಾಂತವಾಗಿರುತ್ತದೆ. ಆಕೆಯ ಸಾಮರ್ಥ್ಯದ ಜಿಗುಟುತನವನ್ನು ಗ್ರಹಿಕೆಗೆ ತೆಗೆದುಕೊಂಡೇ ಇಸ್ಲಾಮ್‌ ಧರ್ಮ ಅವಳನ್ನು ‘ಗೃಹದ ಜ್ಯೋತಿ’ಯೆಂದು ಕರೆದಿದೆ. ಸ್ತ್ರೀ ಎಂದಿಗೂ ದೀಪ ಹಚ್ಚಿ ತಮಂಧ ದೂರ ಮಾಡಬಲ್ಲಳು. ಕುಟುಂಬ ಸೌಖ್ಯದ ಧಾವಂತದಲ್ಲಿ ಖುಷಿ ಅನುಭವಿಸಬಲ್ಲಳು. ಸ್ವಂತ ಹಿತಾಸಕ್ತಿಯನ್ನು ಕಡೆಗಣಿಸುವ ಅವಳನ್ನು ಮನೆಯ ಸಾಮ್ರಾಜ್ಞಿಯೆಂದು ಇಸ್ಲಾಮ್‌ ಮನ್ನಣೆ ನೀಡಿದುದು ಉಚಿತವಾಗಿದೆ.

 

ಆದರೆ ಮನೆಯನ್ನು ಅವಳ ಪಾಲಿಗೆ ಸೆರೆಮನೆಯನ್ನಾಗಿ ಪರಿವರ್ತಿಸಿ ಆಕೆಯನ್ನು ಮಾನಸಿಕವಾಗಿ ಪೀಡಿಸುವ ಪುರುಷರಿಗೇನೂ ಕಡಿಮೆಯಿಲ್ಲ. ಆಕೆ ತನ್ನ ಭೋಗದ ವಸ್ತು, ಮಕ್ಕಳ ಹೆರಿಗೆ ಂತ್ರ, ಕುಟುಂಬದ ಚಾಕರಿಗಾಗಿಯೆಂದೇ ಬಂದವಳು. ತನ್ನ ಗುಲಾಮಳು. ತನ್ನ ದುಡಿಮೆಯ ಫಲವನ್ನು ಅನುಭವಿಸುತ್ತ ಆರಾಮಾಗಿರುವವಳು ಎಂಬ ಭ್ರಾಮಕ, ಅಹಮ್ಮಿಕೆಯ ಮಾತಿನಿಂದ ಅವಳನ್ನು ತಣ್ಣಗಾಗಿಸುವ ಪುರುಷರ ಸರ್ವಾಧಿಕಾರ ಧೋರಣೆ ಭೀಕರವಾಗಿಯೇ ಇದೆ. ಅದರ ಅತಿರೇಕದಲ್ಲಿ ಹುಟ್ಟಿಕೊಳ್ಳುವ ಅವನ ಉದ್ವಿಗ್ನತೆ, ಅಸಹ್ಯ ಬೈಗಳ, ಹೊಡೆತಗಳು, ಗುಮಾನಿಗಳು ಆಕೆಯ ಬದುಕನ್ನು ಮುರುಟಿಹಾಕಬಲ್ಲವು. ದೈಹಿಕವಾಗಿ ಆಕೆ ಪುರುಷನಿಗಿಂತ ದುರ್ಬಲವಾಗಿದ್ದಾಳೆ. ಮುಟ್ಟು, ಗರ್ಭಧಾರಣೆ, ಹೆರಿಗೆ, ಮಗುವಿಗೆ ಹಾಲುಣಿಸುವ ಸಂದರ್ಭಗಳಲ್ಲಿ ಹೆಣ್ಣಿನ ಪ್ರಕೃತಿ ದುರ್ಬಲಗೊಳ್ಳುವುದು ಸ್ವಾಭಾವಿಕ. ಆದರೆ ಅದನ್ನೇ ತನ್ನ ಪೌರುಷ ಪ್ರತಿಷ್ಠೆಗೆ ಬಳಸಿಕೊಂಡು ಅವಳನ್ನು ಶೋಷಿಸುವ ಗಂಡಿಗೆ ಪುರೋಹಿಶಾಹಿಗಳು, ಸಮಾಜದ ಪ್ರಮುಖರು ಕುಮ್ಮಕ್ಕು ಕೊಡುವುದು ನಿರಂತರವಾಗಿರುವುದು.

ಸ್ವಾತಂತ್ಯ್ರದ ಉಸಿರಾಟ

ಇಸ್ಲಾಮ್‌ ಪುರುಷನಂತೆ ಮಹಿಳೆಗೂ ಸ್ವಾತಂತ್ಯ್ರದ ಹಕ್ಕು ನೀಡಿದೆ. ಆಕೆ ಅವನ ಹಾಗೆ ಸರಾಗವಾಗಿ ಉಸಿರಾಡಿಸಬಹುದು. ಆದರೆ ಈ ಹಕ್ಕು ಸ್ವೇಚ್ಛಾಚಾರದ ಹಂತ ತಲುಪಬಾರದು. ಆಕೆ ಮನೆ ತುಂಬ ಓಡಾಡಿಕೊಂಡಿರಬಹುದು. ತನ್ನ ಭಾವನೆಗಳನ್ನು ಪ್ರಕಟಿಸಬಹುದು. ಅಲಂಕರಿಸಿಕೊಳ್ಳಬಹುದು. ಅಗತ್ಯದ ಉದ್ದೇಶಕ್ಕಾಗಿ ಮನೆಯಿಂದ ಹೊರಗೂ ಹೋಗಬಹುದು. ಮಾರ್ಕೆಟ್‌, ಶಾಲೆಗೂ ಹೋಗಬಹುದು. ಆದರೆ ಅರೆಬರೆ ಬಟ್ಟೆ ಧರಿಸಿ ಬಳಕುತ್ತ ನಡೆಯುವ, ಒಂಟೆಯ ದುಬ್ಬದಂತೆ ತಮ್ಮ ಭುಜಗಳನ್ನು ಆಡಿಸುತ್ತ, ಒನಪು, ಒಯ್ಯಾರ ಪ್ರದರ್ಶಿಸುವುದನ್ನು ನಿಷಿದ್ಧವೆನ್ನುತ್ತದೆ ಇಸ್ಲಾಮ್‌. ಈ ವಿಚಾರವನ್ನೇ ಮನದಲ್ಲಿಟ್ಟುಕೊಂಡು ಹೆಣ್ಣಿನ ಸ್ವಾತಂತ್ಯ್ರವನ್ನು ಮೊಟಕುಗೊಳಿಸುವ ಉದ್ಧಟತನವನ್ನು ಹಳದಿ ಕಣ್ಣಿನ ಪುರುಷರು ತೋರಿಸದೇ ಇಲ್ಲ. ಮನೆಯಿಂದ ಹೊರಗೆ ಬಂದರೆ ಆಕೆಯ ಸ್ತ್ರೀತನ ಮುಕ್ಕುಗೊಳ್ಳುವುದು ಎಂಬ ಭ್ರಮೆ ಅವಳ ಸ್ವಾತಂತ್ಯ್ರದ ಸ್ಥಾನಕ್ಕೆ ಕಿರಿಕಿರಿಯನ್ನುಂಟು ಮಾಡುತ್ತಿದೆ.

ಇಸ್ಲಾಮ್‌ ಜೀವನ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಪುರುಷನ ಹೆಗಲಿಗೇರಿಸಿದೆ. ಆದರೆ ವೈಯಕ್ತಿಕ ತೆವಲು, ದರಿದ್ರತನದ ಕಾರಣದಿಂದ ಕುಟುಂಬವನ್ನು ಅಸ್ಥಿರಗೊಳಿಸುವ ಗಂಡಸರು ತಮ್ಮ ಹೆಂಡತಿ; ಮಕ್ಕಳನ್ನು ದುಡಿಯಲು ಕಳಿಸುವುದು ಅನಾರ್ಯವೇ ಆಗಿದೆ. ಆಕೆ ಗಾರೆ ಕೆಲಸಕ್ಕೆ, ಉಳ್ಳವರ ಮನೆಯ ಕಸ, ಮುಸುರೆಗೆ ಹೋಗಿ ಕುಟುಂಬವನ್ನು ಪೋಷಿಸುತ್ತಿದ್ದರೂ ಪುರುಷನ ವಿಕೃತ ಹಿಂಸೆಗೆ ಒಳಗಾಗುತ್ತಲೇ ಇದ್ದಾಳೆ. ಅವಳ ದುಡಿತದ ಫಲವನ್ನು ಅವನು ಅತ್ಯಂತ ಲಜ್ಜೆಗೇಡಿಯಾಗಿ ದೋಚುತ್ತಲೇ ಇದ್ದಾನೆ. ಈ ದೋಷವನ್ನು ಧರ್ಮದ ಗುತ್ತಿಗೆದಾರರು ಮಾತ್ರ ಪೋಷಿಸುತ್ತಲೇ ಇದ್ದಾರೆ.

ಕಪ್ಪು ಮುಸುಕಿನ ಕಸಿವಿಸಿ

ಪರ್ದಾ ಅಥವಾ ಹಿಜಾಬ್‌ ಎನ್ನುವುದು ಸ್ತ್ರೀಯರು ಧರಿಸಿಕೊಳ್ಳುವ ಮೈಮೇಲಿನ ಉಡುಪಾಗಿದೆ. ಮುಸ್ಲಿಮ್‌ ಮಹಿಳೆ ಮುಖ ಮತ್ತು ಅಂಗೈಗಳನ್ನು ಉಳಿದು ತನ್ನ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕೆನ್ನುವುದು ಇಸ್ಲಾಮ್‌ ಧೋರಣೆಯಾಗಿದೆ. ತಮ್ಮ ಮೇಲಾಗುವ ಹಿಂಸೆಯನ್ನು ತಡೆಯಲು, ಸುರಕ್ಷಿತವಾಗಿ ಉಳಿಯಲು, ಅನ್ಯಪುರುಷರ ಎದುರು ಕಾಣಿಸಿಕೊಳ್ಳುವಾಗ ತಮ್ಮ ದೇಹಸೌಂದರ್ಯವನ್ನು ಚಾದರಿನಿಂದ ಎದುರು ಕಾಣಿಸಿಕೊಳ್ಳುವಾಗ ತಮ್ಮ ದೇಹಸೌಂದರ್ಯವನ್ನು ಚಾದರಿನಿಂದ ಮುಚ್ಚಿಕೊಳ್ಳುವುದು ಅನಿವಾರ್ಯವೆಂದು ಕುರ್ಆನ್‌ ಹೇಳುತ್ತದೆ. “ನೀವು ಕುಲೀನ ಮನೆತನದ ಸ್ತ್ರೀಯರೆಂದು ಗುರುತಿಸಲ್ಪಡಲು ಮತ್ತು ಪುರುಷರಿಂದ ಸತಾಯಿಸಲ್ಪಡದಿರಲು ನಿಮ್ಮ ಉಡುಗೆಯ ಸೆರಗನ್ನು ದೇಹದ ಮೇಲೆ ಎಳೆದುಕೊಳ್ಳಿರಿ” (ಸೂರಾ-೩೩-೫೯)

ಇದು ಸ್ತ್ರೀಗೆ ಅವಳ ರಕ್ಷಣೆಯ ದೃಷ್ಟಿಯಿಂದ ಹಿತಕಾರಿಯಾದುದು. ಆದರೆ ಅದನ್ನು ಒಂದು ಕರಾಳ ಶಾಸನವೆನ್ನುವಂತೆ ಜಾರಿಗೆ ತರುವ, ಆ ಮೂಲಕ ಮಹಿಳೆಯನ್ನು ಮುಸುಕಿನಲ್ಲಿ ಬಂಧಿಸಿಟ್ಟು ಕಸಿವಿಸಿಗೊಳಪಡಿಸುವ ಪುರುಷರು ಹೆಚ್ಚಾಗಿದ್ದಾರೆ. ಪರ್ದಾದ ಅತ್ಯಂತ ಕ್ಲಿಷ್ಟ ಹಾಗೂ ಅಪ್ರಾಯೋಗಿಕ ರೂಪವನ್ನು ಮಾತ್ರ ಅಂಗೀಕರಿಸುವ ಮನೋಭಾವದವರು ಸಾಮಾಜಿಕ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳದಿರುವ ಅಪ್ರಜ್ಞಾ ಸ್ಥಿತಿಯಲ್ಲಿರುವುದು ಶೋಚನೀಯ, ಪೈಗಂಬರರ ಉಕ್ತಿಗಳನ್ನು ಕೇವಲ ಸ್ತ್ರೀಯರಿಗಷ್ಟೆ ಬದ್ಧಗೊಳಿಸಿ ತಾವು ಆ ನಿಯಮಕ್ಕೆ ಬಾಹಿರವಾಗಿರುವ ಪುರುಷರ ಪಕ್ಷಪಾತದ ಧೋರಣೆಯಿಂದಾಗಿ ಮುಸ್ಲಿಮ ಮಹಿಳೆ ಕಪ್ಪು ಬುರಖಾದೊಳಗೆ ತನ್ನ ಹೊಂಗನಸುಗಳನ್ನು ಸಮಾಧಿಗೊಳಿಸುವಂತಾಗಿದೆ.

ಶಿಕ್ಷಣದ ಕಾಳಜಿ:

ವೈಚಾರಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಹಿಳೆಯರ ವ್ಯಕ್ತಿತ್ವದ ವಿಕಾಸಕ್ಕೆ ಲೌಕಿಕ ಮತ್ತು ಅಲೌಕಿಕ ಶಿಕ್ಷಣ ತೀರ ಅವಶ್ಯವೆಂದು ಇಸ್ಲಾಮ್‌ ಧರ್ಮ ಹೇಳುತ್ತದೆ. ಹೆಣ್ಣಿಗೆ ಬದುಕಿನ ಶಿಷ್ಟಾಚಾರಗಳೊಂದಿಗೆ ಪ್ರಜ್ಞಾವಂತಿಕೆಯ ಶಿಕ್ಷಣ, ತರಬೇತಿ ನೀಡುವುದು ತಂದೆ-ತಾಯಿ ಹಾಗೂ ಪತಿಯ ಪುಣ್ಯದ ಕಾರ್ಯವೆಂದು ಪ್ರವಾದಿ ಮಹಮ್ಮದರು ಹೇಳಿದ್ದಾರೆ. ಸಾಮಾಜಿಕ ಸಮೃದ್ಧಿ ಕಾಳಜಿಯ ಉದ್ದೇಶವನ್ನು ಮಹಿಳೆಯ ಶಿಕ್ಷಣದ ಮೂಲಕ ಫಲಪ್ರದಗೊಳಿಸುವ, ಆಕೆ ಅದರಿಂದ ಸಾರ್ಥಕತೆ ಪಡೆದುಕೊಳ್ಳುವ ಜರೂರತೆಯನ್ನು ಅವರು ಸ್ಪಷ್ಟ ಪಡಿಸುತ್ತಾರೆ.

ಪ್ರವಾದಿ ಮಹಮ್ಮದ್‌ರ ಪ್ರೀತಿಯ ಪತ್ನಿ ಆಯಿಷಾ ಅವರು ಭಾಷೆ, ಕಾವ್ಯ, ಸಾಹಿತ್ಯ ಹಾಗೂ ವೈದ್ಯಕೀಯ, ಗಣಿತ ಜ್ಞಾನದಲ್ಲಿ ಪ್ರಬುದ್ಧ ತಿಳಿವಳಿಕೆ ಹೊಂದಿದ್ದು, ಉಮ್ಮು ಸಲ್ಮಾರ ಮಗಳು ಝೇನಬ್‌, ಉಮ್ಮುದರ್ದಾ, ಫಾತಿಮಾ ಬಿಸ್ತಿ ಕೈಸ್‌ ಬಹು ದೊಡ್ಡ ವಿದ್ವಾಂಸೆಯರಾಗಿದ್ದು, ಉಮ್ಮು ಸಲ್ಮಾ ಅವರ ಓರ್ವ ಸೇವಕಿ ಉಮ್ಮುಲ್‌ ಹಸನ್‌ ಮಹಿಳೆಯರಿಗೆ ಪ್ರವಚನ ಮತ್ತು ಉಪದೇಶ ನೀಡುತ್ತಿದ್ದುದು, ಸ್ತ್ರೀಯರ ವಿದ್ಯಾಭ್ಯಾಸಕ್ಕಾಗಿ ಕೈರೊ, ಡಮಾಸ್ಕಸ್‌, ಬಗ್‌ದಾದ್‌, ಕಾರ್ಡೋವ್‌, ಮೊದಲಾದ ಕೇಂದ್ರಗಳಲ್ಲಿ ವಿದ್ಯಾಶಾಲೆಗಳಿದ್ದುದು ಇಲ್ಲಿ ಉಲ್ಲೇಖಾರ್ಹ.

ಚೀನಾ ದೇಶದವರಿಗಾದರೂ ಪ್ರಯಾಣ ಮಾಡಿ ಸ್ತ್ರೀ ವಿದ್ಯೆ ಪಡೆದಯಬೇಕೆಂಬುದು ಪ್ರವಾದಿಗಳ ಆಶಯ. ಆದರೆ ಅದನ್ನು ಧಿಕ್ಕರಿಸಿದ ಪುರುಷವರ್ಗ ಮಹಿಳೆಗೆ ಶಿಕ್ಷಣ ನೀಡುವುದಕ್ಕೆ ಅಡ್ಡಗೋಡೆಯಾಗಿದೆ. ಹೆಣ್ಣು ಉತ್ತಮ ಮಗಳಾಗುವ, ಸಹೋದರಿಯಾಗುವ, ಮಾತೆಯಾಗುವ, ಗೃಹಿಣಿಯಾಗುವ ತರಬೇತಿ ಅಥವಾ ಶಿಕ್ಷಣದ ಹೊರತಾಗಿ ಸಂಸ್ಕೃತಿ, ಇತಿಹಾಸ, ಆರೋಗ್ಯ, ಜ್ಞಾನ-ವಿಜ್ಞಾನ ಕ್ಷೇತ್ರಗಳ ಪರಿಣಾಮಕಾರಿ ಶಿಕ್ಷಣವನ್ನು ಪಡೆದುಕೊಳ್ಳುವ ಅವಶ್ಯಕತೆಯಿದೆ. ಈ ಪ್ರಾಥಮಿಕ ತಿಳಿವಳಿಕೆ ಇಲ್ಲದ ಜನ ಸಮಾಜವನ್ನು ನಿಯಂತ್ರಿಸುವುದರಿಂದ ಹೆಣ್ಣು ಶಿಕ್ಷಣದಿಂದ ವಂಚಿತೆಯಾಗಿದ್ದಾಳೆ. ಧರ್ಮಾಂಧರು ಅವಳ ಭವಿಷ್ಯದ ಮೇಲೆ ಚಪ್ಪಡಿಯೆಳೆಯುತ್ತಿದ್ದಾರೆ. ಇದು ಕಳವಳಕಾರಿ ಸಂಗತಿಯೂ ಆಗಿದೆ. “ಹೆಣ್ಣು ಸಮಾಜದ ಅರ್ಧ ಭಾಗ ಮಾತ್ರ ಅಲ್ಲ. ಆಕೆ ಮುಂದಿನ ಪೀಳಿಗೆಯ ತಾಯಿಯೂ ಹೌದು. ಆಶಿಕ್ಷಿತ ತಾಯಿ ಆಶಿಕ್ಷಿತರ ತಾಯಿಯಾಗಬಲ್ಲಳು. ತನ್ನ ಅರ್ಧಭಾಗವನ್ನು, ತನ್ನ ಮಾತೆಯನ್ನು ಅಜ್ಞಾನದ ಕತ್ತಲಲ್ಲಿ ಕಟ್ಟಿಡುವ ಸಮಾಜ ಬೆಳಕನ್ನು ಪಡೆಯಲಾರದು.” (ಎ.ಎಸ್‌. ಪುತ್ತಿಗೆ-ಮುಸ್ಲಿಮರ ಶೈಕ್ಷಣಿಕ ಸಮಸ್ಯೆಗಳು: ಪತನಗಾಥೆ ಮತ್ತು ಉತ್ಥಾನಪಥ-ಲೇಖನ-ಶಿಕ್ಷಣ ಮತ್ತು ಮುಸ್ಲಿಮರು-ಪುಟ ೬೯.) ಎಂಬ ಮಾತು ಇದನ್ನು ಪುಷ್ಟೀಕರಿಸುತ್ತದೆ.

ಆರ್ಥಿಕ ಜವಾಬ್ದಾರಿ ಗಂಡಿನದು, ಉದ್ಯೋಗ ಅವನಿಗೆ ಅನಿವಾರ್ಯ, ಧನಸಂಪಾದನೆ ಮಾಡಲು ಅವನಿಗೆ ಮಾತ್ರ ಶಿಕ್ಷಣ ಕೊಡಬೇಕು ಎಂಬ ತಪ್ಪುಗ್ರಹಿಕೆ ಮುಸ್ಲಿಮ್‌ ಮಹಿಳೆಯನ್ನು ಶೈಕ್ಷಣಿಕವಾಗಿ ಹಿಂದುಳಿಸಿದೆ. ಮನೆಯ ಪರಿಧಿಯಲ್ಲಿ ಇದ್ದು ಬಿಡಬಹುದಾದ ಆಕೆಗೆ ಉನ್ನತ ವ್ಯಾಸಂಗ ವ್ಯರ್ಥ ಎನ್ನುವ ಮೌಢ್ಯ. ಆಕೆಯ ಶಿಕ್ಷಣಕ್ಕೆ ಸಂಬಂಧಿಸಿದ ಪರಿಸರದ ಸಮಸ್ಯೆಗಳು ಆತಂಕಕಾರಿಯಾಗಿ ಪರಿಣಮಿಸಿದೆ. ಋತುಮತಿಯಾದ ಹೆಣ್ಣು ತಮ್ಮ ಎದೆಯ ಮೇಲಿನ ಬಂಡೆಯೆಂದು ಭಾವಿಸುವ ತಾಯಿ-ತಂದೆಗಳು ಅವಳ ಓದನ್ನು ನಿಲ್ಲಿಸಿ ವಿವಾಹ ನೆರವೇರಿಸುತ್ತಾರೆ. ಅಪ್ರಬುದ್ಧಾವಸ್ಥೆಯ ಈ ವಿವಾಹಬಂಧನ ಆಕೆಯ ಕೋಮಲ ಭಾವನೆಗಳನ್ನು ನಲುಗಿಸುತ್ತದೆ. ಅವಳ ಮನಸ್ಸಿನ ಅಭಿಪ್ರಾಯಕ್ಕೆ ವಿರುದ್ಧವಾಗಿರುವ ಮತ್ತು ಕಾನೂನು ರೀತ್ಯಾ ಅಪರಾಧವಾಗಿರುವ ಈ ವಿವಾಹ ಪುರುಷ ಯಜಮಾನಿಕೆಯ ದರ್ಪ-ದೌಲತ್ತಿನ ಫಲ. ಆದರೆ ಪುರುಷರು ಜಾಣರು, ಧರ್ಮದ ಹೆಸರಿನಲ್ಲಿ ಸ್ತ್ರೀಯ ಹಕ್ಕುಗಳನ್ನು ಹತ್ತಿಕ್ಕುತ್ತಾರೆ.