ವೈವಾಹಿಕ ಸಂಬಂಧ:

ಸ್ತ್ರೀ-ಪುರುಷರ ವೈವಾಹಿಕ ಸಂಬಂಧವು ವಾಸ್ತವದಲ್ಲಿ ಮಾನವೀಯತೆಯ ಬುನಾದಿಯೇ ಆಗಿದೆ. ಇಸ್ಲಾಮ್‌ ಧರ್ಮ ಕೂಡ ಅದನ್ನು ಮಾನ್ಯ ಮಾಡುತ್ತದೆ. ಪ್ರೀತಿ-ಕರುಣೆಯ ಆಧಾರವಾಗಿರುವ ಈ ವಿವಾಹಸಂಬಂಧ ಪತಿ-ಪತ್ನಿಯರು ಸದಾ ಕೂಡಿ ಬಾಳುವುದನ್ನು ಇಚ್ಛಿಸುತ್ತದೆ. ಅವರಲ್ಲಿ ಹೆಚ್ಚು ಕಮ್ಮಿ ಎಂಬ ಪ್ರಶ್ನೆಯಿಲ್ಲ. ಇಬ್ಬರೂ ಪರಸ್ಪರ ಪೂರಕ. “ಅವರು ನಿಮ್ಮ ಪಾಲಿಗೆ ಉಡುಪಾಗಿದ್ದಾರೆ. ನೀವು ಅವರ ಪಾಲಿಗೆ ಉಡುಪಾಗಿರುವಿರಿ” (ಪವಿತ್ರ ಕುರ್ಆನ್‌ ೨:೨೩).

ಹೆಣ್ಣು-ಗಂಡಿನ ದಾಂಪತ್ಯ ಸಂಬಂಧದ ನವಿರುಗಳನ್ನು ಅಂತರ್ಗಗೊಳಿಸಿಕೊಂಡಿರುವ ಈ ಮಾತುಗಳು ಗಮನಾರ್ಹವೆನಿಸಿವೆ. ಸ್ತ್ರೀ-ಪುರುಷ ಅಪೂರ್ಣರೆ. ಆದರೆ ಪರಿಪೂರ್ಣತೆಯ ಹಂಬಲ ಅವರಿಗಿರುವುದು ಸಹಜ. ಅದರ ಸಾಧ್ಯತೆಗಾಗಿ ಇಬ್ಬರೂ ಎರಕಗೊಳ್ಳುವುದು ಕುರ್ಆನ್‌ದ ದೃಷ್ಟಿಯಿಂದ ತೀರ ಅಗತ್ಯವೆನಿಸಿದೆ. “ಪುರುಷ ಜೀವನದ ಅನೇಕ ನಿರ್ವಾತಗಳನ್ನು ಕೇವಲ ಸ್ತ್ರೀಯ ಸುಂದರ ಕೈಗಳೇ ತುಂಬಬಲ್ಲವು. ಆಕೆ ಅವನ ನೈಸರ್ಗಿಕ ಬೇಡಿಕೆಗಳ ಮತ್ತು ಸಹಜ ಪ್ರಶ್ನೆಗಳ ಉತ್ತರವಾಗಿದ್ದಾಳೆ. ಅವನ ಪ್ರೇಮ ಗೀತೆಯ ವೀಣೇಯಾಗಿದ್ದಾಳೆ. ಅದೇ ರೀತಿ ಪುರುಷನಿಲ್ಲದೆ ಸ್ತ್ರೀತನದ ಊರು ಬರಿದಾಗಿರುತ್ತದೆ. ಆತ ಅವಳ ಭಾವನಾಲೋಕದ ಮೆರುಗು ಮತ್ತು ಆಕೆಯ ವ್ಯಾಕುಲತೆಯ ಶಮನವಾಗಿದ್ದಾನೆ.” (ಇಬ್ರಾಹೀಮ್‌ ಸ ಈದ್‌ಮುಸುಕಿನಲ್ಲಿ ಮುಸ್ಲಿಮ್‌ ಮಹಿಳೆ, ಪುಟ-೪೪) ಈ ಮಾತು ಪತಿ-ಪತ್ನಿಯರ ಅನ್ಯೋನ್ಯತೆಯನ್ನು ದೃಢಪಡಿಸುತ್ತದೆ.

ಗಂಡು-ಹೆಣ್ಣಿನ ವೈವಾಹಿಕ ಸಂಬಂಧ ವೈಶಾಲ್ಯದ ಆಯಾಮದಲ್ಲಿ ಅರಳಿಕೊಂಡಿದ್ದರೂ ಅವರಿಬ್ಬರ ಅಭಿರುಚಿ, ಅಭಿಪ್ರಾಯ, ದೃಷ್ಟಿಕೋನಗಳಲ್ಲಿ ವೈರುಧ್ಯ ಇರುವುದು ಸಾಧ್ಯ. ಇಂಥ ವೇಳೆಯಲ್ಲಿ ವಿರಸವು ದಾಂಪತ್ಯದಲ್ಲಿ ಸಹಜವೆಂಬಂತೆ ಕಾಣಿಸಿಕೊಳ್ಳುವುದು. ಅದಕ್ಕಾಗಿ ಪರಸ್ಪರರಲ್ಲಿ ಸಹನೆ, ಔದಾರ್ಯ, ಕ್ಷಮಾಶೀಲತೆ, ಸ್ನೇಹ ಸದ್ಭಾವನೆಗಳು ಇರುವುದು ಅಗತ್ಯವೆನ್ನುತ್ತದೆ ಇಸ್ಲಾಮ್‌, ಪತ್ನಿಯನ್ನು ಕೇವಲ ಭೋಗದ  ವಸ್ತುವೆಂದು ಪರಿಗಣಿಸದೆ ಆಕೆಯ ಬಯಕೆ, ಭಾವನೆಗಳನ್ನು ಪತಿ ಗೌರವಿಸಿಬೇಕೆನ್ನುವ ಆಶಯ ಅವರದು. ‘ನೀನು ಉಂಡರೆ ಆಕೆಗೂ ಉಣಿಸು, ನೀನು ತೊಟ್ಟರೆ ಆಕೆಗೂ ತೊಡಿಸು” (ಅಬೂ ದಾವೂದ್‌, ಇಬ್ನೂ ಹಿಬ್ಬಾನ್‌), “ಅಲ್ಲಾಹನ ಅಮಾನತ್‌ (ನ್ಯಾಸ) ಆಗಿ ಪುರುಷರಿಗೆ ಸ್ತ್ರೀಯರನ್ನೇ ಒಪ್ಪಿಸಲಾಗಿದೆ.” (ತಿರ್ಮಿದಿ), “ಪತ್ನಿಯನ್ನು ತೆಗಳಬೇಡಿ” (ಅಹ್ಮದ್‌). “ಪತ್ನಿಯರಿಗೆ ಹೊಡೆಯುವವರು ಸಭ್ಯರಲ್ಲ” (ಅಬೂ ದಾವೂದ್‌) ಇಂಥವೇ ಸ್ತ್ರೀಪರವಾದ ಕಾಳಜಿಯನ್ನು ಅಭಿವ್ಯಕ್ತಿಸುವ ಮಾತುಗಳನ್ನು ಪ್ರವಾದಿಗಳು ಧಾರಾಳವಾಗಿ ಉಲಿದಿದ್ದಾರೆ.

ಇವತ್ತಿಗೂ ಈ ವಚನಗಳನ್ನು ಆಲಿಸಲಾಗುತ್ತಿದೆ. ಆದರೆ ಹೆಣ್ಣು-ಗಂಡಿನ ವೈವಾಹಿಕ ಸಂಬಂಧವನ್ನು ಛಿದ್ರಗೊಳಿಸುವ ಅವಘಡಗಳು ಸಂಭವಿಸುತ್ತಲೇ ಇವೆ. ನೈಜ ಪ್ರೇಮದ ನಿಕಾಹ್‌ದ ಒಪ್ಪಂದಗಳನ್ನು (ಕಬೂಲಿ) ಪತಿಯಾದವನು ಧಿಕ್ಕರಿಸುವ ಕಾರಣದಿಂದ ಪತ್ನಿಯಾದವಳು ಅನುಭವಿಸುವ ನೋವು, ಹಿಂಸೆಗಳು ಒಂದೆರಡಲ್ಲ. ಪತ್ನಿಯೆಂದರೆ ಪತಿಯ ಸೊತ್ತು. ಅವನ ಹಿತಾಸಕ್ತಿ, ಶ್ರೇಯಸ್ಸಿಗೆ ಆಕೆ ಸ್ಪಂದಿಸಬೇಕು. ತುಸು ವ್ಯತ್ಯಾಸವಾದರೂ ಅವನ ಮರ್ದನಕ್ಕೆ ಒಳಗಾಗಬೇಕು. ತನ್ನ ಮೇಲಾಗುವ ಅನ್ಯಾಯವನ್ನು ಪ್ರತಿಭಟಿಸಿದರೆ ಆಕೆ ಕೆಟ್ಟ ಹೆಂಗಸು. ಧ್ವನಿಯೆತ್ತಿದರೆ ಬಜಾರಿ, ನಾಲ್ಕು ಗೋಡೆಗಳಿಂದಾಚೆ ಬಂದರೆ ಶೀಲಗೆಟ್ಟವಳು. ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಳನ್ನು ಹತ್ತಿಕ್ಕಲಾಗುತ್ತಿದೆ. ಸಾಮಾನ್ಯ ಕುಟುಂಬಗಳಲ್ಲಿ ಜರುಗುವ ಇಂಥ ಅವಸ್ಥೆಗಳನ್ನು ಧರ್ಮ ಮೌನವಾಗಿಯೇ ನೋಡುತ್ತದೆ.

ತಲಾಕ್…. ತಲಾಕ್…. ತಲಾಕ್‌…..

ಒಂದು ಕಡೆಗೆ ವೈವಾಹಿಕಸಂಬಂಧವನ್ನು ಗಾಢಗೊಳಿಸಲು ಪ್ರೇರೇಪಿಸುವ ಧರ್ಮ, ಮತ್ತೊಂದು ಕಡೆಗೆ ಅದನ್ನು ಮುರಿಯುವ ಮಾತನ್ನು ಕೂಡಾ ಆಡುತ್ತಿದೆ. ತಲಾಕ್‌ ಎಂದರೆ ವಿವಾಹ ವಿಚ್ಛೇದನ. ಗಂಡ-ಹೆಂಡಿರ ಮನಸ್ತಾಪ, ಹಠದ ಧೋರಣೆಗಳು ತಲಾಕ್‌ಗೆ ಕಾರಣಗಳಾಗುತ್ತವೆ. ಇಂಥ ಸಮಯದಲ್ಲಿ ಇಸ್ಲಾಂ‌ ತಲಾಕ್‌ವನ್ನು ಅನುಮತಿಸುತ್ತದೆ.

ದಂಪತಿಗಳು ಪರಸ್ಪರ ಸಂಬಂಧಕ್ಕೆ ಅರ್ಥವಂತಿಕೆ ತರಬೇಕು. ಅದು ಅನರ್ಥಕಾರಿಯಾಗುವಂತಿದ್ದರೆ ಅವರಿಬ್ಬರೂ ಬೇರ್ಪಡುವುದು ಉತ್ತಮ. ತೇಪೆ ಹೊಂದಾಣಿಕೆಯ ದಾಂಪತ್ಯ ಮೃತ ಶರೀರದಂತೆ. ಅದು ಕುಟುಂಬವನ್ನು ರೋಗಗ್ರಸ್ತಗೊಳಿಸುವುದು. ಅದರ ಕಕ್ಷೆಯಿಂದ ದಂಪತಿಗಳು ಬಿಡುಗಡೆಗೊಳ್ಳುವುದೇ ಯೋಗ್ಯ. ಇದು ತಲಾಕದ ತಿರುಳು. ಪವಿತ್ರ ಕುರ್ಆನ್‌ ಸ್ಪಷ್ಟವಾಗಿ ತಾಕೀತು ಮಾಡುತ್ತದೆ: “ಒಂದು ಉತ್ತಮ ರೀತಿಯಲ್ಲಿ ಅವರನ್ನು ನಿಮ್ಮ ಬಳಿ ಇರಿಸಿಕೊಳ್ಳಬೇಕು ಅಥವಾ ಉತ್ತಮ ರೀತಿಯಿಂದ ಅವರನ್ನು ಬೀಳ್ಕೊಡಬೇಕು” (ಆಲ್‌ ಬಕರ:೨೨೯),“ಕೇವಲ ಸತಾಯಿಸಲಿಕ್ಕಾಗಿ ಅವರ ಹಕ್ಕು ಚ್ಯುತಿ ಮಾಡಲು ಅವರನ್ನು ತಡೆದಿರಿಸಬೇಡಿರಿ. ಹೀಗೆ ಮಾಡುವವನು ತನ್ನ ಮೇಲೆ ತಾನೇ ಅಕ್ರಮವೆಸಗುವನು.” (ಅಲ್‌ಬಕರ: ೨೩೧)

ದಾಂಪತ್ಯದಲ್ಲಿ ಪರಸ್ಪರ ಔದಾರ್ಯವೇ ಮಿಗಿಲು. ಆದರೆ ಅದು ಕ್ಷೀಣಿಸಿದರೆ ಅಥವಾ ಕೂಡಿ ಬದುಕಲು ಅಸಾಧ್ಯವೆನಿಸಿದರೆ ಮಾತ್ರ ‘ತಲಾಕ್‌’ ಕೊಡಲು ಕುರ್ಆನ್‌ ಹೇಳಿದೆ. ತಲಾಕ್‌ ಎಂದರೆ ಹುಡುಗಾಟವಲ್ಲ. ವಿವೇಕಶೂನ್ಯರಾಗಿ, ಕೋಪ, ಉದ್ವೇಗಕ್ಕೊಳಗಾಗಿ ತಲಾಕ್‌ ಘೋಷಿಸುವುದು ಅನ್ಯಾಯ. ಅದು ಕಾನೂನುಬದ್ಧವೆನಿಸುವುದಿಲ್ಲ. ಪ್ರೀತಿಯಿಲ್ಲದ ಪತ್ನಿಯೊಂದಿಗೆ ಇರುವುದು, ಆಕೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು, ಅತಿರೇಕ ಎಸಗುವುದು, ಮತ್ತೆ ಮತ್ತೆ ತಲಾಕ್‌ ಹೇಳುವುದು ಅಮಾನುಷ ಕೃತ್ಯವೇ ಆಗಿದೆ. ಇದನ್ನು ಕುರ್ಆನ್‌ ಅಕ್ರಮ ಎಂದು ಉಗ್ರವಾಗಿ ಖಂಡಿಸುತ್ತ “ಅಲ್ಲಾಹನ ಸೂಕ್ತಿಗಳನ್ನು ಪರಿಹಾಸ್ಯ ಮಾಡದಿರಿ” (ಅಲ್‌ಬಕರ:೨೩೧) ಎನ್ನುತ್ತದೆ.

ಗಂಡನಿಗೆ, ಒಂದನೆಯ ಮತ್ತು ಎರಡನೆಯ ತಲಾಕ್‌ ಬಳಿಕ ಹೆಂಡತಿಯೊಂದಿಗೆ ಪುನಃ ಸಂಬಂಧ ಸ್ಥಾಪಿಸುವ ಹಕ್ಕು ನೀಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಉದ್ಭವಗೊಂಡಿರುವ ಪತಿ-ಪತ್ನಿಯರ ಭಿನ್ನಾಭಿಪ್ರಾಯಗಳು ಅವರ ವೈಚಾರಿಕ ಪ್ರಜ್ಞಾಪಾತಳಿಯಲ್ಲಿ ನಶಿಸಿ, ಹೊಸಬದುಕಿಗೆ ಈ ಸಮಯ ಪ್ರಯೋಜಕವಾಗಲಿ ಎಂಬ ಉದ್ದೇಶ ಈ ಹಕ್ಕಿನದಾಗಿದೆ. ಆದರೆ ಕ್ಷುಲ್ಲಕ ನೆಪದಲ್ಲಿ ತಲಾಕ್‌ ನೀಡುವುದು ಮತ್ತು ಇದ್ದತ್‌ ಅವಧಿಯೊಳಗೆ ಸಂಬಂಧ ಸ್ಥಾಪಿಸುವುದು, ಮತ್ತೆ ತಲಾಕ್‌ ನೀಡುವುದು, ಮತ್ತೆ ಸಂಬಂಧಕ್ಕಾಗಿ ಕಾತರಿಸುವ ಗಂಡಿನ ವರ್ತನೆ ಹೆಣ್ಣಿನ ಮೇಲಿನ ದ್ವೇಷದ ಪರಿಣಾಮದ್ದೇ ಅನಿಸುತ್ತದೆ. ಇದು ಅವಳಿಗೆ ತ್ರಿಶಂಕುವಿನ ಶಿಕ್ಷೆ ನೀಡುವುದು. ತಲಾಕ್‌ನ ಅಧಿಕಾರ ಇರುವುದು ಪತಿಗೆ ಮಾತ್ರ. ಅದು ಅವನ ಕೈಯೊಳಗಿರುವ ಅಸ್ತ್ರ. ತನ್ನ ವಿವೇಚನೆಗೆ ತಕ್ಕದ್ದಾಗಿ ಅವನು ಈ ಅಸ್ತ್ರವನ್ನು ಬಳಸುತ್ತಾನೆ. ಮೂದಲಿಕೆ ಮಾತು, ಗುಮಾನಿಯ ನೋಟ, ಆಶ್ಲೀಲ ಬೈಗುಳು, ಹೊಡೆತಗಳಿಂದ  ಅವನು ಆಕೆಯನ್ನು ದೈಹಿಕವಾಗಿ, ಮನಸಿಕವಾಗಿ ದಂಡಿಸುತ್ತಾನೆ. ಇದು ಧರ್ಮದ ದುರುಪಯೋಗ. ಪ್ರಜ್ಞಾವಂತರು, ಕೆಳಸ್ತರದ ಆಶಿಕ್ಷಿತರು ತಲಾಕ್‌ನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಎಷ್ಟೋ ಪ್ರಸಂಗಗಳು ತೆರೆಮರೆಯಲ್ಲಿ. ಒಮ್ಮೊಮ್ಮೆ ಬಹಿರಂಗವಾಗಿ ಜರುಗುತ್ತವೆ. ಇದಕ್ಕೆ ಹಿರಿಯರು ಮತ್ತು ಧಾರ್ಮಿಕ ವಿದ್ವಾಂಸರು ಪರವಗಿ ನಿಂತು ಹೆಣ್ಣನ್ನು ನಲುಗಿಸುವರು.

ಪತ್ನಿಯರಿಗೆ ಪದೆ ಪದೆ ತಲಾಕ್‌ ಹೇಳುವ ಅನಾಚಾರ ವ್ಯವಸ್ಥೆಯೊಮದು ಅರಬರಲ್ಲಿ ವ್ಯಾಪಕವಾಗಿತ್ತು. ಹಾಗೆಯೇ ಬಹುಪತ್ನಿತ್ವ ಬದ್ಧತಿಯೂ ನಿರಾತಂಕವಾಗಿತ್ತು. ಇಸ್ಲಾಮ್‌ ಅದಕ್ಕೆ ಕಡಿವಾಣ ಹಾಕಿ ನಿಯಮಗಳನ್ನು ರೂಪಿಸಿತು. ಒಂದು ಸಂದರ್ಭದ ನೀಚ ಅಥವಾ ವಾಮಮಾರ್ಗದ ಪ್ರವೃತ್ತಿಗಳನ್ನು ಸಮಕಾಲೀನ ಸಂದರ್ಭದಲ್ಲಿಟ್ಟು  ಹೆಣ್ಣನ್ನು ಅದರ ಪ್ರಯೋಗಕ್ಕೆ ಒಳಪಡಿಸುವುದು ಎಷ್ಟು ಸಮಂಜಸ ಎಂಬುದರ ಆಲೋಚನೆ ಪ್ರಜ್ಞಾವಂತರಲ್ಲಿಒ ಮೂಡಬೇಕಾಗಿದೆ. ಕ್ಷುಲ್ಲಕ ಕಾರಣಗಳಿಗಾಗಿ ತಲಾಕ್‌ ನೀಡುವುದು, ಗಂಡ-ಹೆಂಡಿರಲ್ಲಿ ಸಂಧಾನ ಮೂಡಿಸಿ ಹೊಸಬದುಕಿಗೆ ಅವಕಾಶ ಮಾಡಿಕೊಡುವುದನ್ನು ನಿರ್ಬಂಧಿಸುವುದು, ಏಕಾಏಕಿ ಮೂರು ಸಲಕ್ಕೆ ತಲಾಕ್‌ ಹೇಳಿಸುವ ಧಾವಂತಕ್ಕೆ ತೊಡಗುವುದು, ಅಲ್ಲಾಹನ ವಿರುದ್ಧವಾದ ಆಚಾರವಾಗಿದೆ. ಧಾರ್ಮಿಕ ನಾಯಕರ ಒಪ್ಪಿಗೆ ಇಲ್ಲದೆ ಇಂಥವುಗಳು ಘಟಿಸುವುದಿಲ್ಲ ಎನ್ನುವುದು ಅಷ್ಟೇ ಸತ್ಯ. ಹೆಣ್ಣನ್ನು ಅಪಾರವಾಗಿ ಶೋಷಿಸುವ ಈ ತಲಾಕ್‌ನ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಬೇಕೆನ್ನುವ ಸೂಚನೆಗೆ ಬಲವಾದ ವಿರೋಧ ಇರುವುದು. ಅದಕ್ಕೆ ತನ್ನದೇ ಆದ ಕಾರಣಗಳಿದ್ದರೂ ಮುಸ್ಲಿಮ್‌ ಮಹಿಳೆ ಈ ತಲಾಕ್‌ವಿಧಿಯಿಂದ ನರಳುವದಂತೂ ತಪ್ಪುವುದಿಲ್ಲ.

ಖುಲಾ: ಪತ್ನಿಯ ಹಕ್ಕು

ಗಂಡನೊಂದಿಗೆ ಸಹಬಾಳುವೆ ಅಸಾಧ್ಯವೆನ್ನುವ ಪ್ರಸಂಘ ಎದುರಾದರೆ ಪತ್ನಿಯು ಅವನಿಂದ ಬಿಡುಗಡೆ ಪಡೆದುಕೊಳ್ಳುವುದಕ್ಕೆ ‘ಖುಲಾ’ ಎನ್ನುವರು. ಇದು ಸ್ತ್ರೀಯ ಹಕ್ಕಾಗಿದೆ. ಆಕೆ ತನ್ನ ಪತ್ನಿಗೇನಾದರೂ ಪರಿಹಾರ (ಫಿದಿಯ) ಕೊಟ್ಟು ಅವನಿಂದ ತಲಾಕ್‌ ಪಡೆದುಕೊಳ್ಳುವ ಅವಕಾಶವಿದೆ. ತಲಾಕ್‌ ಹೇಗೋ ಖುಲಾ ಕೂಡ ಕೊನೆಯ ಅಸ್ತ್ರವಾಗಿದೆ. ಆದರೆ ಅದನ್ನು ಒಂದು ವಿನೋದದ ಆಟವನ್ನಾಗಿ ಪರಿವರ್ತಿಸುವಂತಿಲ್ಲ. ಅದು ಅವಳ ಭೋಗಾಸಕ್ತಿಯ ಕೆಟ್ಟಪರಂಪರೆಯ ಉದ್ದೇಶ ಹೊಂದಿರಬಾರದು. ಅಲ್ಲಾಹನು ರುಚಿ ನೋಡುವ ವಿಷಯ ಲಂಪಟ ಪುರುಷ ಮತ್ತು ಸ್ತ್ರೀಯರನ್ನು ಮೆಚ್ಚುವುದಿಲ್ಲ ಎನ್ನುತ್ತದೆ ಹದೀಸ್‌. ಖುಲಾ ಪಡೆಯಬೇಕಾದ ಸ್ತ್ರೀ ಆರ್ಥಿಕ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಪತಿಯಿಂದ ಪಡೆದ ಎಲ್ಲ ವಸ್ತುಗಳನ್ನು ಅಥವಾ ಅವುಗಳ ಒಂದು ಪಾಲನ್ನು ಹಿಂತಿರುಗಿಸಬೇಕಾಗುತ್ತದೆ. ಗಂಡ ಆಕೆಗೆ ಆಪ್ರಿಯನಾಗಿದ್ದಾನೆ. ಅವನ ಜೊತೆಗೆ ಅನುಭವಿಸಬೇಕಾಗುತ್ತದೆ. ಪತಿಯಿಂದ ಪಡೆದ ಎಲ್ಲ ವಸ್ತುಗಳನ್ನು ಅಥವಾ ಅವುಗಳ ಒಂದು ಪಾಲನ್ನು ಹಿಂತಿರುಗಿಸಬೇಕಾಗುತ್ತದೆ. ಗಂಡ ಆಕೆಗೆ ಅಪ್ರಿಯನಾಗಿದ್ದಾನೆ. ಅವನ ಜೊತೆಗೆ ಜೀವಿಸುವುದು ಆಕೆಗೆ ಇಷ್ಟವಿಲ್ಲ. ಅವನ ಹಿಂಸಾತ್ಮಕ ಕ್ರಿಯೆಗಳನ್ನು ತನ್ನಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಖುಜುವಾದರೆ ಖುಲಾದ ಬೇಡಿಕೆ ಸಿಂಧುವಾಗುತ್ತದೆ. ಅದನ್ನು ತಿರಸ್ಕರಿಸುವುದು ಅಕ್ರಮವೆನಿಸುತ್ತದೆ. ಆದರೆ ಗಂಡಿನ ದಬ್ಬಾಳಿಕೆ ಹಾಗೂ ಆಕ್ರಮಗಳಿಂದ ವಿಮೋಚನೆ ಪಡೆಯಲು ತನಗೊಂದು ‘ಖುಲಾ’ ಎನ್ನುವ ಹಕ್ಕಿದೆ ಎಂಬ ಪ್ರಜ್ಞೆ. ಮುಸ್ಲಿಮ್‌ ಮಹಿಳೆಗಿಲ್ಲ. ಅದರಂತೆ ಸ್ತ್ರೀಗೆ ಖುಲಾ ನೀಡುವುದು ಅಥವಾ ನೀಡದಿರುವುದು ತಮ್ಮ ಇಚ್ಛೆಗೆ ಸಂಬಂಧಿಸಿದುದು ಎನ್ನುವ ಪುರುಷಾಧಿಕಾರ ಸ್ತ್ರೀಯನ್ನು ಅವಳ ಹಕ್ಕಿನಿಂದ ವಂಚಿಸುತ್ತಿದೆ. ವಾಸ್ತವವಾಗಿ ಆಕೆಯ ಗಂಡನಾದವನು ನಪುಂಸಕ, ಕ್ಷಯ, ಕುಷ್ಠ ಪೀಡಿತ, ಚಿತ್ರಭ್ರಮಣ, ತೊನ್ನು, ಬಾಯಿಯ ದುರ್ವಾಸನೆ, ಲೈಂಗಿಕ ರೋಗಗಳಿಗೆ ಒಳಗಾದವನು, ಅಂಥ ಪತಿಯಿಂದ ಅವಳನ್ನು ಬೇರ್ಪಡಿಸುವ ಈ ‘ಖುಲಾ’ ವಿಧಿ ತನ್ನನ್ನು ಅಪಮಾನಿಸುವ ಸ್ತ್ರೀಯ ಹಕ್ಕಾಗಿದೆಯೆಂದು ಗಂಡ ಭಾವಿಸುತ್ತಾನೆ. ಪತಿಯ ದೋಷಗಳನ್ನು ಅಮಾನ್ಯ ಮಾಡಿ ಅವನೊಂದಿಗೆ ಆಕೆ ಜೀವಿಸಬೇಕೆನ್ನುವ ಪುರುಷಪ್ರಧಾನ ವ್ಯವಸ್ಥೆ ಧರ್ಮದ ಸತ್ಯಕ್ಕೆ ಸವಾಲಾಗುವಂತಿದೆ.

ಮೆಹರ್ಹೆಣ್ಣಿನ ಉಡುಗೊರೆ:

ಮೆಹರ್ (ವಧು ದಕ್ಷಿಣೆ) ನ್ನು ಪತಿಯಾದವನು ವಿವಾಹದ ಪ್ರಥಮ ದಿನ ತನ್ನ ಹೆಂಡತಿಗೆ ನೀಡಬೇಕಾದ ಉಡುಗೊರೆಯೆಂದು ಇಸ್ಲಾಮ್‌ ಹೇಳುತ್ತದೆ. ಅದು ಅವಳು ಪತಿಯಿಂದ ಪಡೆಯುವ ಹಕ್ಕು ವಿವಾಹದ ಸಂದರ್ಭದ ಒಂದು ಶರ್ತಾಗಿದೆ. “ನೀವು ಅವರಿಂದ ಪಡೆದ ಪ್ರಯೋಜನಕ್ಕಾಗಿ ಪ್ರತಿಯಾಗಿ ಅವರಿಗೆ ಅವರ ಮೆಹರನ್ನು ಒಂದು ಕರ್ತವ್ಯವೆಂಬ ನೆಲೆಯಲ್ಲಿ ನೀಡಿರಿ” (ಅನ್ನಿಸಾ:೨೪) ಎಂದು ಕುರ್ಆನ್‌ ಅಪೇಕ್ಷಿಸುತ್ತದೆ. “ಒಂದು ಮೊತ್ತದ ಮೆಹರ್ ನಿಶ್ಚಯಿಸಿ ಓರ್ವನು, ಓರ್ವ ಮಹಿಳೆಯನ್ನು ವಿವಾಹವಾಗುವಾಗ ಆ ಮೊತ್ತವನ್ನು ಪಾವತಿ ಮಾಡುವುದಿಲ್ಲವೆಂಬ ಇರಾದೆ ಹೊಂದಿದ್ದರೆ ಆತನು ವಾಸ್ತವದಲ್ಲಿ ವ್ಯಭಿಚಾರಿಯಾಗಿರುತ್ತಾನೆ” ಎಂದು ಪ್ರವಾದಿಗಳು ನಿಷ್ಠುರವಾಗಿ ಹೇಳಿದ್ದಾರೆ. ಮೆಹರ್ನ ಪ್ರಾಮುಖ್ಯತೆಗೆ ಈ ಮಾತು ಸಾಕ್ಷಿಯಾಗಿದೆ.

ಮಹಿಳೆಗೆ ಮೆಹರ್ ನಿಶ್ಚಯಹಿಸುವುದು ಕಡ್ಡಾಯ. ಆದರೆ ಅದನ್ನು ನಿಭಾಯಿಸುವುದು ಕಷ್ಟ. ಮೆಹರ್ದದ ಮೊತ್ತವನ್ನು ನಿರ್ಧರಿಸುವಲ್ಲಿ ಆಗುವ ಪರಿಣಾಮವೇ ಅದಕ್ಕೆ ಕಾರಣ. ಇಸ್ಲಾಮಿಕ್‌ ರಾಷ್ಟ್ರಗಳು ಮೆಹರ್ನ ಮೊತ್ತವನ್ನು ಎರಡು ಲಕ್ಷದವರೆಗೂ ಹೆಚ್ಚಿಸಿವೆ. ಭಾರತದಲ್ಲೂ ಅನೇಕ ಪಂಗಡಗಳಲ್ಲಿ ಇದರ ಮೊತ್ತ ವಿಭಿನ್ನವಾಗಿದೆ. ಅದು ಸಹಸ್ರಗಟ್ಟಲೇ ಇದೆ. ಹ. ಉಮರ್ (ರ) ಅವರು ಮಹಿಳೆಗೆ ಮೆಹರ್ ನಿಶ್ಚಯಿಸುವಲ್ಲಿ ಮಿತಿ ಮೀರದಿರಲು ಎಚ್ಚರಿಸಿದ್ದಾರೆ. ಆದರೂ ಮೆಹರ್ನನ ಮಿತಿ ಮೀರುತ್ತಲೇ ಇದೆ. ಅದು ಕೆಟ್ಟ ಸಂಪ್ರದಾಯ, ನಿಶ್ಚಯಿಸಿದ ಮೊತ್ತದ ಮೆಹರ್ ಧನವು ಸಾಲದ ರೂಪ ಪಡೆಯುತ್ತಿದೆ. ಹಣವಂತರು ಇದನ್ನು ಸುಲಭವಾಗಿ ಪಾವತಿಸಬಹುದು. ಆದರೆ ಸಾಮಾನ್ಯರಿಗೆ ಇದು ಅಸಾಧ್ಯ. ಇಂಥ ಸಂದರ್ಭದಲ್ಲಿ ಹೆಣ್ಣಿಗೆ ಸಕಾಲದಲ್ಲಿ ಮೆಹರ್ ಸಿಗುವುದಾದರೂ ಹೇಗೆ? ಇದು ವಿವಾಹ ಸಂಬಂಧವನ್ನು ಭ್ರಷ್ಟಗೊಳಿಸುವ ವಿಧಾನ. ಇಲ್ಲಿ ಮಹಿಳೆಯೇ ಸೋಲಬೇಕು.

ಆಕೆ ಕಂತುಗಳಲ್ಲಿ ಅಥವಾ ಗಂಡನ ಆರ್ಥಿಕ ಸ್ಥಿತಿಯನ್ನು ಅನುಲಕ್ಷಿಸಿ ಮೆಹರನ್ನು ಪಡೆಯಬೇಕು. ಸಹಬಾಳುವೆಗೆ ಆತಂಕವುಂಟಾದರೆ ಗಂಡನಿಂದ ಬರಬಹುದಾದ ಮೆಹರ್ನ ಮೊತ್ತದ ಆಧಿಕ್ಯವು ಆಕೆಯ ಜೀವನವನ್ನು ದುರ್ಭರಗೊಳಿಸದೇ ಇರಲಾರದು. ಅವನು ಮೆಹರ್ ಪಾವತಿಸುವ ಭೀತಿಯಿಂದ ತಲಾಕ್‌ ಕೊಡದೆ ಸತಾಯಿಸಬಹುದು. ತನಗೆ ಹಣ ಕೊಡಲು ಸಾಧ್ಯವಿಲ್ಲವೆಂದು ಅವಳಿಂದ ಒತ್ತಾಯದ ಮಾಫ್‌ ಮಾಡಿಸಿಕೊಳ್ಳುವ ನಯಗಾರಿಕೆಯ ವಂಚನೆಯೂ ಸಂಭವಿಸಬಹುದು. ಇವೆಲ್ಲ ಗಂಡಿನ ಪರವಾಗಿರುವ, ಹೆಣ್ಣನ್ನು ಶೋಷಿಸುವ ತಂತ್ರಗಳೆ, ಮತ ಪಂಡಿತರು ಪುರುಷರ ಪರವಾಗಿ ಧರ್ಮದ ತಿರುಳನ್ನು ತಿರುಚುವಲ್ಲಿ ನಿಷ್ಣಾತರು, ಯಾಕೆಂದರೆ ಅವರೂ ಪುರುಷರೆ!

ವರದಕ್ಷಿಣೆಯೆಂಬ ನವೀನಾಚಾರ:

ಹೆಣ್ಣು ಜೀವವನ್ನು ಪೀಡಿಸಲು ಪುರುಷ ಪ್ರಧಾನ ವ್ಯವಸ್ಥೆ ಹುಟ್ಟುಹಾಕಿದ ನವೀನಾಚಾರ(ಬಾದ್‌ಅತ್‌) ಈ ವರದಕ್ಷಿಣೆಯಾಗಿದೆ. ಹೆಣ್ಣನ್ನು ಪತ್ನಿಯನ್ನಾಗಿ ಸ್ವೀಕರಿಸುವ ಗಂಡಿಗೆ ಆಕೆಯ ಮನೆಯವರು ವರದಕ್ಷಿಣೆಯನ್ನು ಪಾವತಿಸಬೇಕು. ಮಹರ್ ಕೈ ತದ್ವಿರುದ್ಧವಾಗಿರುವ ಪದ್ಧತಿ ಇದು, ಕುರ್ಆನ್‌, ಹದೀಸ್‌ಗಳಲ್ಲಿ ಇದರ ಉಲ್ಲೇಖವಿಲ್ಲ.

ಅಜ್ಞಾನ ಕಾಲದಲ್ಲಿ ಮಾನರಕ್ಷಣೆಯ ಸಮಸ್ಯೆಯಿಂದ ಹೆಣ್ಣು ಸಾವು-ನೋವಿನ ಸಂಕಟ ಅನುಭವಿಸುತ್ತಿದ್ದಳು. ವರ್ತಮಾನದ ಸಂದರ್ಭದಲ್ಲಿ ವರದಕ್ಷಿಣೆಯೆಂಬ ಪೆಡಂಭೂತ ಅವಳನ್ನು ಕ್ರೂರವಗಿ ಕಾಡುತ್ತಿದೆ. ರಕ್ಕಸವಾಗಿ ಕೊಲ್ಲುತ್ತಿದೆ. ಬೆಂಕಿಯಲ್ಲಿ ಸುಡುತ್ತಿದೆ. ಹೆಣ್ಣು ಹೆತ್ತವರಿಗೆ ದಿಗಿಲಾಗುತ್ತಿದೆ. ಭ್ರೂಣಾವಸ್ಥೆಯಲ್ಲಿ ಹೆಣ್ಣುಪಿಂಡವನ್ನು ಹತ್ಯೆ ಮಾಡುವ ಧಾವಂತ. ವರದಕ್ಷಿಣೆ ಕೊಡಲಾಗದ ಹೆಣ್ಣು ಅವಿವಾಹಿತಳಾಗಿ, ಮನೆಯ ಮತ್ತು ಸಮಾಜದ ತಿರಸ್ಕಾರದ ನೋಟಕ್ಕೆ ಸಿಕ್ಕು ನಲುಗುತ್ತಿದ್ದಾಳೆ, ಅವಳ ಲಾಸೆ-ಆಕಾಂಕ್ಷೆಗಳು ರಕ್ತದೊಂದಿಗೆ ಸುಟ್ಟು ಹೋಗುತ್ತಿವೆ. ವರದಕ್ಷಿಣೆ ಹೆಣ್ಣಿಗೆ ಶಾಪವಾಗಿರುವ ಒಂದು ಪಾಪದ ವಿಧಾನ. ವಧುವಿನಿಂದ ಪಡೆದ ಹಣ ಭಿಕ್ಷೆಗೆ ಸಮಾನ. ಇಸ್ಲಾಮ್‌ ಅಂಥದಕ್ಕೆ ಮಾನ್ಯತೆ ನೀಡುವುದಿಲ್ಲ. “ಸ್ತ್ರೀಯರನ್ನು ಅವರ ಸೌಂದರ್ಯವನ್ನು ನೋಡಿ ವಿವಾಹವಾಗಬಾರದು. ಕಾರಣ ಅದು ಅವರನ್ನು ನಾಶಪಡಿಸಬಹುದು. ಅವರ ಸಂಪತ್ತಿಗಾಗಿ ಅವರನ್ನು ವಿವಾಹವಾಗಬಾರದು. ಕಾರಣ ಅದು ಅವರನ್ನು ಭಿಕಾರಿಗಳನ್ನಾಗಿ ಪರಿವರ್ತಿಸಬಹುದು. ನೀವು ಧರ್ಮನಿಷ್ಠೆಯನ್ನು ಪರಿಗಣಿಸಿ ವಿವಾಹವಾಗಿರಿ. ಧರ್ಮನಿಷ್ಠಳಾದ ಕುರೂಪಿಯಾದ ದಾಸಿಯು, ಧರ್ಮನಿಷ್ಠೆಯಿಲ್ಲದ ಸುರಸುಂದರಿಯಾದ ಸ್ತ್ರೀಗಿಂತ ಉತ್ತಮಳು ಮತ್ತು ಶ್ರೇಷ್ಠಳು” ಎಂದು ಪ್ರವಾದಿ ಮಹಮ್ಮದರು ಹೇಳಿದ್ದಾರೆ. ಧರ್ಮದಲ್ಲಿ ಇಲ್ಲದ ನೂತನ ಪದ್ಧತಿ ಪಥಭ್ರಷ್ಠತೆಯಾಗಿದೆ ಎನ್ನುತ್ತಾರವರು.

ವರನು, ವಧುವಿಗೆ ಮೆಹರ್ ನೀಡುವುದು ಕಡ್ಡಾಯ. ಅದನ್ನು ಅವನು ಹೆಂಡತಿಗೆ ಆತ್ಮಸಂತೋಷದಿಂದಲೇ ನೀಡಬೇಕು. ನೀವು ಓರ್ವ ಪತ್ನಿಯನ್ನು ತೊರೆದು ಬೇರೊಬ್ಬಳನ್ನು ಸ್ವೀಕರಿಸಬಯಸಿದರೆ ಅವರಿಗೆ ನೀವು ಸಂಪತ್ತಿನ ದೊಡ್ಡ ಭಂಡಾರವನ್ನೇ ನೀಡಿದ್ದರೂ ಅದರಿಂದ ಏನನ್ನೂ ಪಡೆಯಬಾರದು. ಸುಳ್ಳಾರೋಪ ಹೊರಿಸಿ ನೀವು ಅದನ್ನು ಮರಳಿ ಪಡೆಯುತ್ತೀರಾ? ಅದು ಸ್ಪಷ್ಟ ಪಾಪವಾಗಿದೆ.” (ಅನ್ನಿಸಾ:೨೦) ಎನ್ನುತ್ತದೆ ಕುರ್ಆನ್‌. ವಿಪರ್ಯಾಸವೆಂದರೆ ಇವತ್ತು ವರನು, ವಧುವಿನೊಂದಿಗೆ ಹಣ ಯಾಚಿಸಿ ಅದರಿಂದಲೇ ಅವಳಿಗೆ ಮೆಹರ್ ನೀಡುವುದು ಮಹಾ ಪಾಪವೇ ಅನಿಸುತ್ತದೆ. ಧರ್ಮದ ಬೆಳಕಿನ ಮೇಲೆ ಕಪ್ಪು ಮುಸುಕು ಹಾಕುವ ಈ ನಿಕೃಷ್ಟ ಆಚಾರಕ್ಕೆ ಸಮುದಾಯದ ಪ್ರತಿಷ್ಠಿತರು, ಧಾರ್ಮಿಕ ಮುಖಂಡರು ಉತ್ಸುಕರಾಗಿರುವುದು ಅತ್ಯಂತ ದುರಂತ. ಬಡಹೆಣ್ಣಿನ ಕಣ್ಣೀರಲ್ಲಿ ಮಿಂದು ಸುಖಿಸುವ ಈ ಕ್ರಿಮಿಗಳಿಗೆ ಅವಳ ಒಡಲ ತಾಪ ತಟ್ಟದೆ ಇರದು.

ಜೀವನ ನಿರ್ವಹಣೆಯ ವೆಚ್ಚ:

ಕುರ್ಆನ್‌ ಪ್ರಕಾರ ಪುರುಷನು ಸ್ತ್ರೀಯ ಮೇಲ್ವಿಚಾರಕನಾಗಿದ್ದಾನೆ. (ಅನ್ನಿಸಾ:೩೪) ಅದು ಅವನ ಮೇಲಿನ ಕಡ್ಡಾಯದ ಸ್ತ್ರೀಯ ಹಕ್ಕಾಗಿದೆ. ಅದನ್ನವನು ಯಾವ ನೆಪಗಳನ್ನು ಹೇಳದೆ ನೆರವೇರಿಸಬೇಕು. ಪತಿಯ ಆರ್ಥಿಕ ಸ್ಥಿತಿ ಜೀವದ ವೆಚ್ಚದ ನಿರ್ಣಯಕ್ಕೆ ಕಾರಣವಾಗಬಲ್ಲದೆ ವಿನಾ ಅದನ್ನು ರದ್ದುಗೊಳಿಸಲು ಯಾವ ಪರಿಸ್ಥಿತಿಯಲ್ಲೂ ಸಾಧ್ಯವಿಲ್ಲ. ಗಂಡ ಕೊಡಮಾಡುವ ಮೆಹರ್ ಅವಳ ಜೀವನ ನಿರ್ವಹಣೆಯ ವೆಚ್ಚ ಎಂದು ಧರ್ಮ ಪಂಡಿತರು ವಿಶ್ಲೇಷಿಸುತ್ತಿರುವುದು ತಪ್ಪಾಗಿದೆ. ಅದರ ಆಧಾರದಿಂದಲೇ ಗಂಡನು ಹೆಂಡತಿಯನ್ನು ಉಪೇಕ್ಷೆಗೊಳಪಡಿಸುವ ಪ್ರಮೇಯ ಉಂಟಾಗುವುದು. ಅವನು ಆಕೆಗೆ ತಲಾಕ್‌ ನೀಡಿದ ಮೇಲೆ ಆಕೆಯ ಜೀವನ ನಿರ್ವಹಣೆಗೆ ನ್ಯಾಯದ ರೀತಿಯಲ್ಲಿ ಹಣ ನೀಡಬೇಕು. ಕುರ್ಆನ್‌ ಹೇಳುವುದು ಇದನ್ನೇ “ವಿಚ್ಛೇದನ ಮಾಡಲ್ಪಟ್ಟ ಸ್ತ್ರೀಯರಿಗೆ ವಾಡಿಕೆಯಂತೆ ಜೀವನೋಪಾಯಕ್ಕೆ ಏನಾದರೂ ಕೊಡಬೇಕು. ಇದು ದೇವಭಕ್ತರ ಮೇಲಿರುವ ಬಾಧ್ಯತೆಯಾಗಿದೆ” (ಅಲ್‌ಬಕರ:೨೪೧) ಇದ್ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಗಂಡಿನದಾಗಿದೆ. ಆಕೆಯೇ ಬಂಡಾಯವೆದ್ದು ಅವನಿಂದ ತಲಾಕ್‌ ಪಡೆದರೆ ಜೀವನಾಂಶ ನೀಡುವ ಹಕ್ಕಿನಿಂದ ಅವನು ಪಾರಾದಂತೆ. ಇಲ್ಲವಾದರೆ ಅವನು ಅದನ್ನಾಕೆಗೆ ಪಾವತಿಸುವುದು ಅನಿವಾರ್ಯ. ಆದರೆ ಇಲ್ಲಿಯೂ ಆಕೆಯನ್ನು ಅವನು ಸಂಕಷ್ಟಗಳಿಗೆ ಗುರಿ ಪಡಿಸುತ್ತಾನೆ. ತಲಾಕ್‌ ಬಳಿಕ ಮೆಹರ್ ಹಣವನ್ನು ಕೊಟ್ಟ ಮೇಲೆ ನಿರ್ವಹಣಾ ವೆಚ್ಚ ನೀಡಬೇಕಿಲ್ಲ ಎನ್ನುತ್ತದೆ ಮುಸ್ಲಿಮ್‌ ಕಾನೂನು. ಷಾಬಾನೂ ಪ್ರಕರಣದಲ್ಲಿ ಅನ್ಯಾಯ ಸಂಭವಿಸಿದ್ದು ಇದರಿಂದಲೇ

ಸಂಪತ್ತಿನಲ್ಲಿ ಪಾಲು:

ಇಸ್ಲಾಮಿಕ ಕಾನೂನಿನ ಕಣ್ಣಿನಲ್ಲಿ ಹೆಣ್ಣು ಮತ್ತು ಗಂಡು ಸರಿಸಮಾನರು. ಅದು ಹಕ್ಕುಗಳನ್ನು ನಿರ್ಧರಿಸುವಲ್ಲಿ ಮತ್ತು ಅವುಗಳನ್ನು ನಿರ್ವಹಿಸುವಲ್ಲಿ ‘ತರ-ತಮ’ ಭಾವನೆಯನ್ನು ತೋರಿಸುವುದಿಲ್ಲ. ಹೆಣ್ಣು ಪರಾಧೀನ ಅವಸ್ಥೆಗೊಳಗಾಗುವುದನ್ನು ಇಸ್ಲಾಮ್‌ ಇಷ್ಟಪಡುವುದಿಲ್ಲ. ಅದಕ್ಕಾಗಿ ಅದು ಸ್ತ್ರೀಗೂ ಆಸ್ತಿಯ ಹಕ್ಕಿನ ಸೌಲಭ್ಯ ಕಲ್ಪಿಸಿದೆ . ಅವಳ ತಾಯಿ-ತಂದೆ, ಆಪ್ತ ಬಂಧುಗಳು ಗಳಿಸಿದ ಸಂಪತ್ತಿನಲ್ಲಿ ಪುರುಷರಿಗೆ ಇರುವಂತೆ ಸ್ತ್ರೀಗೂ ಪಾಲಿರುವುದೆಂದು ಅದು ಸ್ಪಷ್ಟವಾಗಿ ಹೇಳಿದೆ. ಸಂಪತ್ತು ಹೆಚ್ಚೊಲ, ಕಡಿಮೆಯೋ ಅದು ಮಹಿಳೆಗೆ ನ್ಯಾಯೋಚಿತವಾದ ರೀತಿಯಲ್ಲಿ ದಕ್ಕಬೇಕು. ಅದು ಅಲ್ಲಾಹ್‌ನ ಕಡೆಯಿಂದ ನಿಶ್ಚಿತವಾದುದೆಂದು ಇಸ್ಲಾಮ್‌ ಹೇಳುತ್ತದೆ.

ಆದರೆ ವಾಸ್ತವದಲ್ಲಿ ಹೆಣ್ಣಿಗೆ ಈ ಪಾಲು ಸರಿಯಾಗಿ ದಕ್ಕುವುದಿಲ್ಲ. ಇಸ್ಲಾಮಿನ ಹಕ್ಕು, ನಿಯಮಗಳು ತಪ್ಪುಕಲ್ಪನೆಗಳಿಂದ ಕೂಡಿರುವುದರಿಂದ ಸ್ತ್ರೀ-ಪುರುಷರ ಮಧ್ಯೆ ಸಂಪತ್ತಿನ ಪಾಲನ್ನು ಸಮಾನತೆಯ ಮಾನದಂಡದಿಂಧ ನೋಡಲಾಗುತ್ತಿಲ್ಲ ಅವಳ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುವ ತಂತ್ರಗಳು ಇಲ್ಲಿ ಕ್ರಿಯಾಶೀಲವಾಗಿರುವಂತಿದೆ.

ಮರುವಿವಾಹದ ಅವಕಾಶ:

ಪುರುಷನು ಹೆಚ್ಚು ಮಂದಿ ಹೆಂಡತಿಯರನ್ನು ಹೊಂದಬಹುದು. ಆದರೆ ಅನ್ನ, ಬಟ್ಟೆ, ಆಶ್ರಯ ಹಾಗೂ ಸಹಶಯನದಲ್ಲಿ ಅವನು ಎಲ್ಲರೊಂದಿಗೆ ಭೇದವಿಲ್ಲದಂತೆ ನಡೆದುಕೊಳ್ಳಬೇಕು. ಹಾಗೊಂದು ವೇಳೆ ಸಾಧ್ಯವಾಗದಿದ್ದರೆ ಅವನು ಒಬ್ಬ ಸ್ತ್ರೀಯನ್ನು ವಿವಾಹವಾಗಬೇಕು (ಪವಿತ್ರ ಕುರ್ಆನ್‌ ೪:೩) ಎಂದು ಇಸ್ಲಾಮ್‌ ಹೇಳುತ್ತದೆ. ಆದರೆ ಒಬ್ಬ ಪತಿಯನ್ನು ಮಾತ್ರ ಮಹಿಳೆ ಹೊಂದಿರಬೇಕೆಂದು ಅದು ಕಡ್ಡಾಯಗೊಳಿಸುತ್ತದೆ. ಅವಳ ಪ್ರಕೃತಿಯನ್ನು ಅನುಲಕ್ಷಿಸಿ ವಿಧಿಸಿದ ನಿಯಮವಿದು.

ಪುರುಷನಂತೆ ಸ್ತ್ರೀಗೂ ಮರುವಿವಾಹದ ಅವಕಾಶವನ್ನು ಇಸ್ಲಾಮ್‌ ಕಲ್ಪಿಸಿ ಕೊಟ್ಟಿದೆ. ಆಕೆ ವಿಧವೆಯಾದರೆ ಅಥವಾ ಪತಿಯಿಂದ ವಿಚ್ಛೇದಿತಳಾಗಿದ್ದರೆ, ಗಂಡನಿಂದ ಮೋಸಕ್ಕೊಳಗಾದರೆ ಅವಳು ಮರುವಿವಾಹ ಮಾಡಿಕೊಳ್ಳಬಹುದು. ಸಮಾಜ ಕೂಡಾ ಈ ದಿಸೆಯಲ್ಲಿ ಕ್ರಿಯಾಶೀಲವಾಗಬೇಕೆಂದು ಇಸ್ಲಾಮ್‌ ಆದೇಶಿಸಿದೆ.

ಕೆಲವು ಕಡೆಗೆ ಪುರುಷಶಾಹಿ ಸಮಾಜ ಅವಳನ್ನು ಈ ಹಕ್ಕಿನಿಂದ ವಂಚಿಸಿ ಕತ್ತಲಲ್ಲಿ ಕೂಡಿ ಹಾಕುವ ತನ್ನ ದಬ್ಬಾಳಿಕೆಯ ಪ್ರವೃತಿಯಲ್ಲಿ ಗೆಲುವು ಸಾಧಿಸುತ್ತದೆ. ತನ್ನ ಹಕ್ಕು-ಬಾಧ್ಯತೆಗಳ ಬಗ್ಗೆ ಅವಜ್ಞೆಯಿಂದ ಇರುವ ವಿಧವೆಯರು, ಗಂಡನಿಂದ ದೂರವಾದವರು ತಮ್ಮ ಆಸೆ-ಆಕಾಂಕ್ಷೆಗಳನ್ನು ಒಡಲ ತಾಪದಲ್ಲೇ ಕರಗಿಸಿಕೊಂಡು ಬಿಡುತ್ತಾರೆ. ಅಂಥವರಿಗೆ ತ್ಯಾಗದ ಪಟ್ಟ ಸುಲಭವಾಗಿ ದಕ್ಕುವುದಾದಲ್ಲಿ ಅದು ಶೋಷಣೆಯ ಪ್ರತೀಕವೆಂಬುದು ವಾಸ್ತವ.

ಜೀವಪ್ರೀತಿಯ ತಹತಹಿಕೆ

ಎಲ್ಲ ಋತುಮಾನಗಳನ್ನು  ತಲೆಯೆತ್ತಿ
ಎದುರಿಸುವ ಕಲೆಯ ನಾನು ಬಲ್ಲೆ
ಸೆಟೆದು ತಲೆಯೆತ್ತಿ ನಿಂತ ಜೀವವೃಕ್ಷ ನಾನು
ನನ್ನ ಸೃಷ್ಟಿಶಕ್ತಿಯ ಆಳ ನಾನು ಬಲ್ಲೆ

ನಟರಾಜ್‌ ಹುಳಿಯಾರ್ ಅನುವಾದಿಸಿದ ಪರ್ವೀನ್‌ ಶಾಕೀರ್ ಅವರ ಈ ಕವನದ ಸಾಲುಗಳು ಹೆಣ್ಣಿನ ಶಕ್ತತೆಯನ್ನು ಅತ್ಯಂತ ಸಾಂದ್ರವಾಗಿ ಅಭಿವ್ಯಕ್ತಿಸುತ್ತವೆ. ಇಂಥ ಜಿಗುಟುತನದಿಂದಲೇ ಮಹಿಳೆ ಸಂಸ್ಕೃತಿಯೊಂದನ್ನು ಕಟ್ಟುವಲ್ಲಿ ತೋರಿಸುವ ಪ್ರಾಮಾಣಿಕತೆ ತುಂಬಾ ಗಮನಾರ್ಹವೆನಿಸುತ್ತದೆ. ವಾಸ್ತವವಾಗಿ ಆಕೆ ನಡೆಯುತ್ತಿರುವುದು ಸುಡುವ ಮರಳು, ಕಲ್ಲು-ಮುಳ್ಳಿನ ದಾರಿಯಲ್ಲಿ. ಉಸಿರಾಡಿಸುತ್ತಿರುವುದು ಪುರುಷನ ದಾಸ್ಯತ್ವದ ಬಿಗಿ ಹಿಡಿತದಲ್ಲಿ. ನೂರು ಕಣ್ಣುಗಳ ಅನುಮಾನದ ಕೊರಲಗಿನ ನೋಟವನ್ನು ಎದುರಿಸಿಯೂ, ನೀಚನಾಲಗೆಯ ತುಚ್ಛವಾದ ಮಾತುಗಳನ್ನು ಕೇಳಿಯೂ, ಬೆಂಕಿಯಲ್ಲಿ ಅರಳಿಕೊಂಡ ಹೂ ಆಕೆ. ಅದರ ಪರಿಮಳ ಮಾತ್ರ ಅನನ್ಯ ಬದುಕಿನ ಗೂಡು ಕಟ್ಟುವಲ್ಲಿ ತೋರುವ ಅವಳ ಶ್ರದ್ಧೆಗೆ ಬೆಲೆ ನಿಗದಿಗೊಳಿಸಲು ಸಾಧ್ಯವಿಲ್ಲ. ನೋವುಗಳನ್ನು ಜೀವನಕೋಶದಲ್ಲಿ ಹುದುಗಿಸಿ ನಗುವ ಅವಳ ಅದಮ್ಯ ಶಕ್ತಿಯೇ ಚಂದದ ಕುಟುಂಬವನ್ನು ಸೃಜಿಸಬಲ್ಲದು ಮತ್ತು ಅದನ್ನು ಅರ್ಥಪೂರ್ಣವಾಗಿಸಬಲ್ಲದು. ಅಂಥ ಜೀವಪ್ರೀತಿಯ ತಹತಹಿಕೆ ಆಕೆಯದು. ವಿಶ್ವಾಸವನ್ನು, ಬೋಗಸೆಯಷ್ಟು ಪ್ರೀತಿಯನ್ನು ತನ್ನಲ್ಲಿ ನೆಲೆಗೊಳಿಸಿದ ಪುರುಷನನ್ನು ಆಕೆ ಬದುಕಿನ ಸಂಗ್ರಾಮದಲ್ಲಿ ಗೆಲ್ಲಿಸಬಲ್ಲಳು. ದುರ್ಬಲತೆ ಎನ್ನುವುದು ಅವಳ ದೈಹಿಕ ಲಕ್ಷಣವೇ ಹೊರತು ಮನಸ್ಸಿನದಲ್ಲ. ಪುರುಷ ಬೆಂಬಲವಿದ್ದರೆ ಆಕೆ ಏನೆಲ್ಲಾ ಸಾಧಿಸುವ ಛಲಗಾತಿಯೂ ಹೌದು. ಈ ಎಲ್ಲ ಅಭಿಪ್ರಾಯಗಳು ಎಲ್ಲ ವರ್ಗದ ಮಹಿಳೆಯರಂತೆ ಮುಸ್ಲಿಮ್‌ ಮಹಿಳೆಯರಿಗೂ ಅನ್ವಯಿಸುವವು.

ಮುಸ್ಲಿಮರು ಕರ್ನಾಟಕದ ಜನಜೀವನದಲ್ಲಿ ಬೆರೆತು ಹೋಗಿದ್ದಾರೆ. ಕಟ್ಟಾ ಸಂಪ್ರದಾಯದ ಬಿಗಿಧೋರಣೆಗಳಿಂದ ಅವರು ಬಹುದೂರ. ಜೀವನ ಪದ್ಧತಿಯಲ್ಲಿ ವೈರುಧ್ಯಗಳಿರಬಹುದು. ಅವು ಅವರನ್ನು  ಇತರ ಸಮುದಾಯಗಳಿಂದ ಪ್ರತ್ಯೇಕಗೊಳಿಸಿಲ್ಲ. ಇದು ಕರ್ನಾಟಕ ಸಂಸ್ಕೃತಿಯ ಒಂದು ವೈಶಿಷ್ಟ್ಯ. ಧರ್ಮದ ಆಚರಣೆ ಏನಿದ್ದರೂ ಅದು ನಾಲ್ಕು ಗೋಡೆಗಳಿಗೆ ಸೀಮಿತ. ಸಾರ್ವತ್ರಿಕ ಬದುಕಿನಲ್ಲಿ ಒಮ್ಮತದ ಅಭಿಮತಕ್ಕೆ ಹೆಚ್ಚು ಪ್ರಾಶ್ತಸ್ತ್ಯ. ಇದನ್ನು ಮುಸ್ಲಿಮರೂ ಬಲ್ಲರು. ಹೀಗಾಗಿ ದಿನನಿತ್ಯದ ವ್ಯವಹಾರಗಳು, ಪರಸ್ಪರ ಕೊಡು-ಕೊಳುಗಳಲ್ಲಿ ಇತರರೊಂದಿಗೆ ಎರಕಗೊಳ್ಳುವ ಅವರ ಮನೋಧರ್ಮ ಸಹಜವೆನ್ನುವಂತಿದೆ. ಮುಸ್ಲಿಮ್‌ ಮಹಿಳೆ ಕೂಡ ಇದರ ಪಾಲುಗಾರಿಕೆಯಲ್ಲಿ ಸಮನಾಗಿದ್ದಾಳೆ. ಹೆಣ್ಣಿನ ಸಂವೇದನೆಗಳನ್ನು ಧಾರ್ಮಿಕ ಕಣ್ಣುಗಳಿಂದ ಗ್ರಹಿಸುವುದೇ ತಪ್ಪು. ಭಾರತೀಯ ಮಹಿಳೆ ದಟ್ಟ ಪ್ರಭಾವ ಮುಸ್ಲಿಮ್‌ ಮಹಿಳೆಯರ ಮೇಲಾಗಿರುವುದು. ವಾಸಿಸುವ ಪರಿಸರಕ್ಕೆ ಅನುಗುಣವಾಗಿ ಪದ್ಧತಿ, ಆಚರಣೆಗಳು, ನಂಬಿಕೆಗಳಲ್ಲಿ ಆಕೆ ವಿಭಿನ್ನಳಂತೆ ಗೋಚರಿಸಬಹುದು. ಆದರೆ ಸಂಸ್ಕೃತಿ ದೃಷ್ಟಿಯಿಂದ ಅವಳ ಕೊಡುಗೆಗಳಲ್ಲಿ ಇಂಥ ಭಿನ್ನತೆಗಳನ್ನು ಹುಡುಕುವಂತಿಲ್ಲ.

ಭಾಷೆ:

ಹೆಣ್ಣಿನ ಸಾಂಸ್ಕೃತಿಕ ಪರಂಪರೆಯಲ್ಲಿ ಭಾಷೆ ಮಹತ್ತರ ಪಾತ್ರವಹಿಸುವುದು. ಸಾಮಾನ್ಯವಾಗಿ ಮುಸ್ಲಿಮ್‌ ಮಹಿಳೆಯ ಕುಟುಂಬದ ಮಾತೃ ಭಾಷೆ ಎಂದರೆ ಉರ್ದು. ವ್ಯಾವಹಾರಿಕ ಭಾಷೆಯಾಗಿ ಕನ್ನಡ ಮತ್ತು ಪರಿಸರದ ಭಾಷೆಗಳನ್ನು ರೂಢಿಸಿಕೊಂಡಿರುವುದು ಅವಳ ಭಾಷಾ ಪ್ರಜ್ಞಾವಂತಿಕೆಗೆ ಸಾಕ್ಷಿ.

ಹೈದರಾಬಾದ್‌ ಕರ್ನಾಟಕದ ಬೀದರ, ಗುಲ್ಬರ್ಗಾ, ಬಳ್ಳಾರಿ, ರಾಯಚೂರು, ಕೊಪ್ಪಳಗಳಲ್ಲಿ ಉರ್ದುವಿನ ಪ್ರಭಾವ ಹೆಚ್ಚು.. ಜೊತೆಗೆ ಕನ್ನಡ, ಮರಾಠಿ, ತೆಲಗು ಭಾಷೆಗಳ ಪದಗಳನ್ನು ಅವರು ತಮ್ಮ ಮಾತಿನಲ್ಲಿ ಸಮೃದ್ಧವಾಗಿ ಬಳಸುವರು.

ಮೈಸೂರು ಭಾಗದಲ್ಲಿ ಆಡುವ ಕನ್ನಡದ ಮಾತುಗಳಲ್ಲಿ ಉರ್ದು ಭಾಷೆಯ ಧ್ವನಿ ಸ್ಪಷ್ಟವಾಗಿ ಗೋಚರಿಸುವುದು ಉತ್ತರ ಕರ್ನಾಟಕದಲ್ಲಿ ‘ನಮ್ಮದು’ ಅಥವಾ ‘ನಮ್ಮಯ’ ಎನ್ನುವ ಪದಗಳನ್ನು ಮಹಿಳೆಯರು ‘ನಮ್ದುಕಿ’ ಅಥವಾ ‘ನಮ್ದುಬಿ’ ಎಂದೆ ಪ್ರಯೋಗಿಸುವರು. “ನಮ್ದುಕಿ ಜಿಂದಗಿ ಬಹುತ್‌ ಮುಷ್ಕಿಲ್‌ ಐತಿ” ಎಂಬಂತಹ ವಾಕ್ಯಗಳು ನಗೆ ತರಿಸುವಂತಿದ್ದರೂ ಸಾಮಾಜಿಕ ಉಪಭಾಷೆಯಾಗಿ ಕಾಣಿಸಿಕೊಂಡು ಸಾಂಸ್ಕೃತಿಕ ಅನನ್ಯತೆಯನ್ನು ಬಿಂಬಿಸುವುದು. ಗ್ರಾಮೀಣ ಭಾಗದಲ್ಲಿ ಮುಸ್ಲಿಮ್‌ ಹೆಣ್ಣು ಮಕ್ಕಳು ಕನ್ನಡ ಭಾಷೆಯನ್ನು ಆಡುತ್ತಾರೆ. ವಿದ್ಯಾವಂತ ಮುಸ್ಲಿಮರಾಡುವ ಮಾತುಗಳಲ್ಲಿ ಕನ್ನಡದ ಪರಿಶುದ್ಧತೆ ಕಂಡು ಬರುತ್ತದೆ.

ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಹೆಚ್ಚಾಗಿ ಉರ್ದು ಮಾಧ್ಯಮದಲ್ಲಿ. ಮದ್ರಸಾಗಳಲ್ಲಿ ಕುರ್ಆನ್‌ ಅಧ್ಯಯನದಿಂದ ಅವರು ‘ಅರಬ್ಬಿ’ ಭಾಷೆಯಲ್ಲಿ ಪರಿಣತಿ ಸಾಧಿಸುವುದು ಸಾಮಾನ್ಯ.

ಕಾಸರಗೋಡು, ಮಂಗಳೂರುಗಳಲ್ಲಿ ಕಾಣಿಸುವ ಮಾಪಿಳ್ಳಾ ಪಂಗಡದ ಭಾಷೆ ದಕ್ಷಿಣದಲ್ಲಿ ಮಲಯಾಳಮ್‌ ಆದರೆ, ಉತ್ತರದಲ್ಲಿ ತುಳು ಭಾಷೆ ಆಗಿದೆ. ಅವರಿಗೆ ‘ಕುರ್ಆನ್‌’ ಕಲಿಕೆಯಲ್ಲಿ ತೀವ್ರ ಆಸಕ್ತಿ. ಹೀಗಾಗಿ ಅರಬ್ಬಿ ಕಲಿಕೆಯಲ್ಲಿ ಅವರು ನಿಷ್ಣಾತರು. ಬ್ಯಾರಿಗಳು ಬ್ಯಾರಿ ಭಾಷೆಯನ್ನು ಆಡುವರು. ತುಳು, ಕೊಂಕಣಿ, ಕನ್ನಡ, ಅರಬ್ಬಿ-ಮಲಯಾಳಮ್‌ ಭಾಷೆಗಳೊಂದಿಗೆ ವಿಲೀನಗೊಳಿಸಿ ಆಡುವ ಬ್ಯಾರಿ ಭಾಷೆ ವಿಶಿಷ್ಟವಾದುದು. ದಕ್ಷಿಣ ಕನ್ನಡದಲ್ಲಿ ಸ್ಥಳದಿಂಧ ಸ್ಥಳಕ್ಕೆ ಅದು ವಿಭಿನ್ನವಾಗಿ ಬಳಕೆಯಾಗುತ್ತದೆ. ಕೊಣಾಜೆಯ ಸುತ್ತಮುತ್ತ ಅಧಿಕವಾಘಿರುವ ಬ್ಯಾರಿಗಳ ನಡುವೆ ಇರುವ ಮುಸ್ಲಿಮರು ನಡೆಸುವ ಮಾತುಕತೆಗಳಲ್ಲಿ ಬ್ಯಾರಿ-ಮಲಯಾಳಮ್‌ ಮಿಶ್ರಿತ ಭಾಷೆ ಇರುವುದು. ಉಳ್ಳಾಲ, ಮಂಗಳೂರು ಸುತ್ತಮುತ್ತ ಬ್ಯಾರಿ ಭಾಷೆಯೇ ವಿಜೃಂಭಿಸುವುದು. ಭಟ್ಕಳ್‌, ಶಿರೂರು, ಮುರ್ಡೇಶ್ವರ ಮುಂತಾದ ಕಡೆಗಳಲ್ಲಿ ವಾಸವಾಗಿರುವ ನವಾಯಿತರು ತಮ್ಮದೇ ಆದ ಭಾಷೆಯನ್ನು ರೂಪಿಸಿಕೊಂಡಿದ್ದಾರೆ. ‘ನವಾಯಿತಿ’ ಎನ್ನುವುದು ಅವರ ಭಾಷೆ, ಅದರಲ್ಲಿ ಉರ್ದು, ಅರಬ್ಬಿ, ಮರಾಠಿ, ಹಿಂದಿ, ಕೊಂಕಣಿ ಭಾಷೆಗಳು ಮಿಶ್ರಣಗೊಂಡಿವೆ.

ಉತ್ತರ ಕರ್ನಾಟಕದಲ್ಲಿ ಅವ್ವನಿಗೆ-ಅಮ್ಮಿಜಾನ್‌, ಅಮ್ಮಾ ಎಂದರೆ, ಬ್ಯಾರಿ ಭಾಷೆಯಲ್ಲಿ ‘ಉಮ್ಮಾ’ ಎಂದು ನವಾಯಿತ ಭಾಷೆಯಲ್ಲಿ ‘ಜೌಸ್‌’ ಎಂದು ಕರೆಯಲಾಗುತ್ತದೆ. ‘ಮಗಳು’ ಉರ್ದುವಿನಲ್ಲಿ ‘ಬೇಟಿ’ ಆದರೆ, ಬ್ಯಾರಿ ಭಾಷೆಯಲ್ಲಿ ‘ಮೋಳು’, ನವಾಯಿತರಲ್ಲಿ ‘ಥೂ’ ಎಂದು ಕರೆಯಲ್ಪಡುತ್ತಾ ಳೆ.

ಮುಸ್ಲಿಮರಲ್ಲಿ ಮನೆಯಿಂದ ಹೊರಗೆ ಹೋಗುವವರ ಸಂಖ್ಯೆ ಕಡಿಮೆ. ಹೀಗಾಗಿ ಮಾತೃಭಾಷೆಯನ್ನು ನಿರರ್ಗಳವಾಗಿ ಮಾತಾಡುವಂತೆ ಇತರ ಭಾಷೆಗಳನ್ನು ಮಾತಾಡುವುದು ಕಷ್ಟ. ಅದರ ಬಳಕೆಯಲ್ಲಿ ಮಿತಿಯಾದ ಪದಕೋಶವಿರುವುದು. ಏನೇ ಆದರೂ ತನ್ನ ಭಾವನೆ, ಅನಿಸಿಕೆ, ಅನುಭವಗಳನ್ನು ಅಭಿವ್ಯಕ್ತಿಸುವ ಅವಳ ಭಾಷೆ ಬದುಕಿಗೆ ಪೂರಕವಾಗಿರುವಂತೆ, ಸಂಸ್ಕೃತಿಯ ಅನಾವರಣಕ್ಕೂ, ಸಾಮಾಜಿಕ ಆಯಾಮಕ್ಕೂ ಕಾರಣವಾಗಿರುವುದು ಸ್ಪಷ್ಟ.

ಉಡುಪು:

ದೇಹದ ಮರ್ಯಾದೆಯನ್ನು ರಕ್ಷಿಸುವ ಮತ್ತು ಸೊಬಗನ್ನು ಹೆಚ್ಚಿಸುವ ಉಡುಗೆ-ತೊಡುಗೆಗಳು ಮುಸ್ಲಿಮ್‌ ಮಹಿಳೆಯರ ವ್ಯಕ್ತಿತ್ವವನ್ನು ಪೋಷಿಸಿಕೊಂಡು ಬಂದಿವೆ. ವಿಶೇಷವಾಗಿ ಅವರ ಸಂಸ್ಕೃತಿಯ ವೈರುಧ್ಯತೆಯನ್ನು ತೊಟ್ಟುಕೊಳ್ಳುವ ಉಡುಪು ಮತ್ತು ಧರಿಸುವ ಆಭರಣಗಳಲ್ಲಿ ಕಾಣಬಹುದು. ಸಾಮಾನ್ಯವಾಗಿ ಮುಖ ಮತ್ತು ಅಂಗೈಗಳನ್ನು ಹೊರತು ಪಡಿಸಿ ಆಖೆಯ ಸಂಪೂರ್ಣಭಾಗವು ಬಟ್ಟೆಯಿಂದ ಮುಚ್ಚಿಕೊಂಡಿರುತ್ತದೆ. ಕಡು ಬಣ್ಣದ ಕಸೂತಿ ಅಥವಾ ಚಮಕೀ ಹಾಕಿರುವ ವಸ್ತ್ರಗಳೆಂದರೆ ಈ ಸ್ತ್ರೀಯರಿಗೆ ತುಂಬಾ ಇಷ್ಟ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮುಸ್ಲಿಮ್‌ ಮಹಿಳೆ ಇಳಕಲ್ಲ ಸೀರೆ, ಗುಳೇದಗುಡ್ಡದ ಖಣದ ರವಿಕೆ ಉಡುವುದು ಮತ್ತು ಸೀರೆಯ ಸೆರಗನ್ನು ತಲೆ ತುಂಬಾ ಹೊದ್ದುಕೊಳ್ಳುವುದು ವಾಡಿಕೆ. ಹೊಲಗಳಲ್ಲಿ ದುಡಿಯುವ, ಕೂಲಿ ಕೆಲಸ ಮಾಡುವ, ಬಜಾರಿನಲ್ಲಿ ಕುಳಿತು ವ್ಯಾಪರ ಮಾಡುವ ಸ್ತ್ರೀಯರು ಚಮಕಾ ಸೀರೆ ಉಡುವುದು ಹೆಚ್ಚು. ಮದುವೆ, ಹಬ್ಬದ ಸಂದರ್ಭಗಳಲ್ಲಿ ರೇಶ್ಮೆ ಸೀರೆ ಅವರ ಮೈಯನ್ನು ಅಲಂಕರಿಸುವುದು. ಇಲ್ಲಿನ ಹುಡುಗಿಯರು ಲಂಗ, ದಾವಣೆ, ಓಡನಿ ಧರಿಸುತ್ತಾರೆ. ನಗರ ಪ್ರದೇಶಗಳಲ್ಲಿ ಬಣ್ಣದ ಪತ್ತಲು, ಅದಕ್ಕೊಪ್ಪುವ ರವಿಕೆ ಮಹಿಳೆಯರಿಗೆ ಪ್ರಿಯ. ಪ್ರೌಢರಾದ ಹುಡುಗಿಯರು ಸಲ್ವಾರ್ ಕಮೀಜ್‌ ಧರಿಸಿ, ದೇಹದ ಮೇಲೆ ವಿಶಾಲವಾದ ಓಡನಿ ಹೊದ್ದುಕೊಂಡಿರುತ್ತಾರೆ. ದಕ್ಷಿಣ ಕರ್ನಾಟಕದಲ್ಲಿನ ಸ್ತ್ರೀಯರ ಉಡುಪುಗಳು ಹೆಚ್ಚು. ಕಡಿಮೆ ಇದೇ ಬಗೆಯವು. ಮಹಿಳೆಯರು ಚರ್ಮದ ಚಪ್ಪಲಿಗಳನ್ನು, ಹುಡುಗಿಯರು ಎತ್ತರ ಹಿಮ್ಮಡಿಯ ಪಾದರಕ್ಷೆಗಳನ್ನು, ಕೆಲವು ಕಡೆಗೆ ಬಟ್ಟೆ ಮಾದರಿಯ ಬೂಟ್ಸುಗಳನ್ನು ಮೆಟ್ಟಿಕೊಳ್ಳುತ್ತಾರೆ.

ಬ್ಯಾರಿಗಳ ಉಡುಪಿನಲ್ಲಿ ವಿಶಿಷ್ಟತೆ ಕಾಣುತ್ತದೆ. ಹಿಂದೆ ಬ್ಯಾರಿ ಸ್ತ್ರೀಯರು ಈಗಿನಂತೆ ಕಪ್ಪು ಬಣ್ಣದ ‘ಬುರ್ಕಾ’ ತೊಡುತ್ತಿರಲಿಲ್ಲ. ಕೆಂಪು ಅಥವಾ ಕಾವಿ ಬಣ್ಣದ, ಬಿಳಿ ಮತ್ತು ಕಪ್ಪು ಬಣ್ಣಗಳಿದ್ದ ‘ವಲ್ಲಿ’ ಎಂಬ ಬಟ್ಟೆಯನ್ನು, ಬರಿ ಕಣ್ಣುಗಳು ಮಾತ್ರ ಕಾಣುವ ಹಾಗೆ ಧರಿಸುತ್ತಿದ್ದರು. ಇಬ್ಬರು ಜತೆಗೂಡಿ ಹೊರಗೆ ಹೋಗುವಾಗ ‘ಜೋಡುವಲ್ಲಿ’ ಎಂಬ ಮೊಳ ಉದ್ದದ ಬಟ್ಟೆಯನ್ನು ಹೊದೆಯುತ್ತಿದ್ದರು. ಬಡವರು, ಕೆಳವರ್ಗದ ಸ್ತ್ರೀಯರು ‘ಕುಡ್ಡವಲ್ಲಿ’ ಎಂಬ ಸಾಧಾರಣ ದರ್ಜೆಯ ಬಟ್ಟೆ ಉಡುತ್ತಿದ್ದರು. ಆ ಮೇಲೆ ಕಪ್ಪು ಬಣ್ಣದ ಬುರ್ಕಾ ಬಂತು. ಈಗ ಶಾಲಾ ಬುರ್ಕಾವು ಬಳಕೆಯಲ್ಲಿದೆ. ನೀಲಿ, ಹಸಿರು, ಕಂದು ಬಣ್ಣದ ಈ ಶಾಲ್‌ಬುರ್ಕಾ ಆಧುನಿಕ ಬ್ಯಾರಿ ಸ್ತ್ರೀಯ ಮೈಯನ್ನು ಶೋಭೆಗೊಳಿಸಿವೆ.

ಗದ್ದೆ (ನೆಟ್ಟಿ)ಯ ಕೆಲಸಕ್ಕೆ ಹೋಗುವ ಸ್ತ್ರೀಯರು ದಪ್ಪ ನೀಲಿನ ಹಸಿರು ಬಣ್ಣದ ಸೀರೆ ಉಟ್ಟರೆ, ಮದುವೆ ಮತ್ತಿತರ ಸಮಾರಂಭಕ್ಕೆ ಹೋಗುವಾಗ ಕಿನ್ಯಾವು, ಬಂಡ್ರಾಸ್‌ ಮುಂತಾದ ಸೀರೆ ಉಡುವುದು ರೂಢಿ. ನಮಾಜ ಮಾಡುವ ವೇಳೆ ಅವಳ ಮೈಮೇಲೆ ಬುರ್ಕಾವನ್ನು ಹೋಲುವ ಬಿಳಿ ಬಣ್ಣದ ಜುಬ್ಬಾ-ಮಕ್ಕನೆ ಎಂಬ ವಸ್ತ್ರ ಇರುವುದು.  ಉರ್ಮಾಲ್‌ ಅಥವಾ ಎಲ್ಸರ್ ಎಂಬುದು ಬ್ಯಾರಿ ಸ್ತ್ರೀಯ ತಲೆಯ ಮೇಲಿನ ವಸ್ತ್ರವಾಗಿದೆ. ಪ್ರತಿಷ್ಠಿತ ಮನೆತನದ ಬ್ಯಾರಿ ಸ್ತ್ರೀಯರು ಪಟ್ಟ್‌ ಉರ್ಮಾಲ್‌ ಅಥವಾ ಪಟ್ಟರೆ ಎಲ್ಸರ್ (ರೇಶ್ಮಿಯಶಿರೋವಸ್ತ್ರ)ವನ್ನು ಧರಿಸುತ್ತಾರೆ. ಈಗ ಆಧುನಿಕ ಉಡುಪಿನತ್ತ ಆಕರ್ಷಣೆ ಹೆಚ್ಚಿದೆ.

ಮಾಪಿಳ್ಳೆ ಸ್ತ್ರೀಯರಂತೆ ಬ್ಯಾರಿ ಸ್ತ್ರೀಯರೂ ಕೂಡ ಕುಪ್ಪಾಯ (ಕುಪ್ಪಸ) ವನ್ನು ತೊಡುತ್ತಾರೆ. ಅದರ ಆಕಾರ ಮಾತ್ರ ಭಿನ್ನ. ಹಿಂದೆ ಬುಟ್ಟೆ ಕುಪ್ಪಾಯಿ ಎಂಬ ತೆಳು ಹಾಗೂ ಸಡಿಲವಾದ ಅಂಗಿ ಮೇಲುಡಿಗೆಯಾಗಿತ್ತು. ಈಗ ರವಿಕೆ ಧರಿಸುವರು. ಲಂಗ-ರವಿಕೆ ತೊಡುತ್ತಿದ್ದ ಹೆಣ್ಣು ಮಕ್ಕಳು ಚೂಡಿದಾರ್, ಮಿಡಿ, ನೈಟಿ ಈಗ ಆಕ್ರಮಿಸಿಕೊಂಡಿವೆ. ಪ್ರಾಚೀನ ಸ್ತ್ರೀಯರು ಧರಿಸುತ್ತಿದ್ದ ‘ಮೆದ್ಕಡಿ’ ಎಂಬ ಮರದ ಪಾದರಕ್ಷೆ ಹಾಕಿಕೊಂಡು ಹಜ್‌ಯಾತ್ರೆ ಕೈಕೊಳ್ಳುತ್ತಿದ್ದರು. ಈಗ ಹವಾಯಿ ಮತ್ತು ಚರ್ಮದ ವಿವಿಧ ಚಪ್ಪಲಿ ಹಾಕಿಕೊಳ್ಳುವರು.

ನವಾಯಿತ್‌ ಸ್ತ್ರೀಯರು ಬೆಲೆಬಾಳುವ ಸೀರೆ ಮತ್ತು ಜಾಕೀಟನ್ನು ಧರಿಸಿದರೆ ಪ್ರೌಢೆಯರು ಮ್ಯಾಕ್ಸಿ, ಆಬಾ ಮತ್ತು ಸುರುವಾಲ್‌ ತೊಟ್ಟು ತಲೆಗೆ ಬಿಳಿಯ ಓಣ್ಣೆ (ವಸ್ತ್ರ) ಹೊದ್ದು, ಅದರ ಎರಡೂ ಬದಿಗಳನ್ನು ಕಿವಿಯ ಹಿಂದಿನಿಂದ ತೆಗೆದುಕೊಂಡು ಹೋಗಿ ಎದೆಯ ಮೇಲೆ ಬಿಟ್ಟಿರುತ್ತಾರೆ. ಹೊರೆಗೆ ಬರುವ ಸ್ತ್ರೀಯರು ಬಣ್ಣ ಬಣ್ಣದ ‘ಬುರ್ಕಾ’ ಧರಿಸುತ್ತಾರೆ. ಕಾಲಲ್ಲಿ ದಪ್ಪ ಚಪ್ಪಲಿ, ಕೈಯಲ್ಲಿ ಬಣ್ಣ ಬಣ್ಣದ ಕೊಡೆ ಹೊರದೇಶದ ಪ್ರಭಾವವನ್ನು ಸೂಚಿಸುತ್ತವೆ.

ಆಭರಣಗಳು

ಮುಸ್ಲಿಮ್‌ ಮಹಿಳೆಯರು ಆಭರಣಪ್ರಿಯರು. ಬಂಗಾರದೊಡವೆಗಳೆಂದರೆ ಹೆಚ್ಚು ಆಸಕ್ತಿ. ವೈವಾಹಿಕ ಜೀವನದಲ್ಲಿ ಪತ್ನಿಯು ಶೃಂಗಾರ ಮಾಡಿಕೊಳ್ಳುವುದನ್ನು ಇಸ್ಲಾಂ‌ ಪ್ರೋತ್ಸಾಹಿಸುತ್ತದೆ. ಆದರೆ ಅದು ಅತಿರೇಕವಾಗಿರಬಾರದು. ಈ ಸೌಂದರ್ಯ ಎನ್ನುವುದು ಮನುಷ್ಯನಿಗೆ ಒಂದು ಹುಡುಕಾಟದ ಅರ್ಥದಲ್ಲಿರಬೇಕು. ಮನಸ್ಸಿನ ವಿಕಾರಕ್ಕೆ ಪ್ರಚೋದಿಸುವಂತಿರಬಾರದು. ಮುಸ್ಲಿಮ್‌ ಮಹಿಳೆಯರ ಅಲಂಕಾರ ಈ ಪ್ರಜ್ಞೆಯಲ್ಲಿರುವುದು.

ಕೊರಳಿಗೆ ಗಲ್ಸರ್, ಲಚ್ಛಾ, ಕಿರಾಚಿಹಾರ್, ನೆಕ್ಲೇಸ್‌, ಬೆಖರಾರಿ ಪಟ್ಟಿ, ಫೂಲ್‌ಹಾರ್, ಚೈನ್‌ ಪದಕ, ಟೀಕಾ, ಕರಿಮಣಿ ಸರ, ಬೋರ್ ಮಾಲಾ, ಕಾಸಿನ ಸರ, ಮೇಲ್ಗುಂಡು ಇತ್ಯಾದಿ ಆಭರಣಗಳನ್ನು ಹಾಕಿಕೊಳ್ಳುವುದರಲ್ಲಿ ಉತ್ತರ ಕರ್ನಾಟಕದ ಮಹಿಳೆಯರು ಆಸ್ಥೆ ತೋರುವರು. ಉರುಕು, ಬೆಲಿಯೆ, ಅಮ್ಲ, ಮಿನ್ನಿ, ಮೂನೂರ್ಕು, ಗೆಜೆತಿಕ್‌, ಬಂದಿ, ಮಸ್ರಿ, ನಾಲ್‌ಚುತ್ತು, ಕರ್ತೆಮಣೆ ಮಾಲೆಗಳನ್ನು ಧರಿಸುತ್ತಿದ್ದ ಬ್ಯಾರಿ ಸ್ತ್ರೀಯರ ಕೊರಳನ್ನು ಈಗ ನೆಕ್ಲೇಸ್‌ ಅಲಂಕರಿಸಿದೆ. ನವಾಯಿತ ಸ್ತ್ರೀಯರ ಕೊರಳಲ್ಲಿ ಫಾರ್ಸಿ ತಾಳಿ, ಬಗೆಬಗೆಯ ಕೊರಳ ಸರಗಳು ಶೃಂಗಾರಗೊಂಡಿವೆ. ಉತ್ತರ ಕನ್ನಡದ ಶಾಫಿ ಸ್ತ್ರೀಯರು ಬೆಂಡೋಲೊಎ, ದಾಲೀ ಲಚ್ಛಾ ಎಂಬ ಆಭರಣ ತೊಡುತ್ತಾರೆ.

ಝಮ್ಕಿ, ಕೀರನ್‌, ಬುಗ್ಡಿ, ಐರನ್‌ ಕೀರನ್‌, ಮಾಟಿಲ್‌, ಮಾಂಗಟಿಲಾ, ಪಟ್ಟಿಕಾ, ತಾರಾ, ಕತ್ತರಿ ಬುಗ್ಡಿ, ಲ್ಯಾವಂಗ ಬುಗ್ಡಿ, ದೊಡ್ಡ ಬುಗ್ಡಿ ಕರ್ನಾಟಕದ ಮುಸ್ಲಿಮ ಸ್ತ್ರೀಯರ ಕಿವಿಯ ಆಭರಣಗಳಾದರೆ, ಬ್ಯಾರಿ ಸ್ತ್ರೀಯರಿಗೆ ‘ಆಲಿಖಾತು’ ಆಭರಣ ವಿಶೇಷವೆನಿಸಿದೆ. ಜೊತೆಗೆ ಬೆಂಢೆ ಲೋಲಾರ, ಕೊಪ್ಪ, ಸರಪೋಲಿ, ಬಾಲ್ಕಿ, ಜೋಲಾರ್, ಅಕೋಲಿಗಳನ್ನು ಧರಿಸುತ್ತಾರೆ. ನವಾಯಿತ ಸ್ತ್ರೀಯರು ಕಿವಿಗಳಲ್ಲಿ ‘ಓಲೆ’ ಧರಿಸುವರು.

ಮೂಗಿಗೆ ಪೂರ್ತಿ ಚಿನ್ನದ ಅಥವಾ ಹರಳುಗಳಿಂದ ಕೂಡಿದ ಮೂಗಬಟ್ಟು ಹಾಕಿಕೊಂಡಿರುತ್ತಾರೆ. ವಿಶೇಷ ಪ್ರಸಂಗದಲ್ಲಿ ‘ನತ್ತು’ ಧರಿಸುವುದು ಹಿಂದೂ ಸ್ತ್ರೀಯರ ಪ್ರಭಾವದಿಂದ ಬಂದಿದೆ. ಕೆಲವು ಪಂಗಡಗಳ ಮಹಿಳೆಯರು ಮೂಗಿಗೆ ಆಭರಣ ಧರಿಸದಿರುವ ಸಂಪ್ರದಾಯವಿದೆ. ಉತ್ತರ ಕರ್ನಾಟಕ ಭಾಗದ ಬಾಗವಾನ ಮತ್ತು ಉತ್ತರ ಕನ್ನಡದ ನವಾಯಿತ, ದಕ್ಷಿಣ ಕನ್ನಡದ ಬ್ಯಾರಿಯನ್‌ ಸ್ತ್ರೀಯರು ಮೂಗು ಚುಚ್ಚಿಸಿಕೊಳ್ಳವುದಿಲ್ಲ.

ಕೈಗೆ ಗಾಜಿನ ಬಳೆಗಳ ಜೊತೆಗೆ ಬಂಗಾರದ ಪಾಟಲಿ, ಬಿಲಾವರ, ಬೆರಳಿಗೆ ಉಂಗುರ, ಬ್ಯಾರಿ ಸ್ತ್ರೀಯರು ಮುರುಗಿ, ಕೆಟ್ಟಬಲೆ, ಎದುಕ್ರೆಬಲೆ, ಚುರುಗಿ, ಕೈಗಡಗ, ಸೊರಿಗೆಬಲೆ, ಬೆರಳಿಗೆ ಮಾದರ ಅಥವಾ ಮೋದರ ಹಾಕುತ್ತಾರೆ.

ಕಾಲಿಗೆ ಬೆಳ್ಳಿಯ ಗೆಜ್ಜೆ ಅಥವಾ ಚೈನು, ಕಾಲ್ಬೆರಳಿಗೆ ಬೆಳ್ಳಿಯ ಕಾಲುಂಗುರ ಸಾಮಾನ್ಯ-ಬ್ಯಾರಿ ಸ್ತ್ರೀಯರು ಕಾಲ್‌ಕುಣಿಪು, ಕಾಲ್‌ಗಡಗ, ಪಾಠಗ, ಕಾಲ್‌ಸರಪಲಿ, ಕಾಲ್‌ಚೈನ್‌ ಎಂಬ ಬೆಳ್ಳಿಯ ಆಭರಣ ಧರಿಸುವರು. ಗ್ರಾಮೀಣ ಸ್ತ್ರೀಯರು ಟೊಂಕಕ್ಕೆ ಬೆಳ್ಳಿ ಡಾಬು ಹಾಕುವುದು ಉತ್ತರ ಕರ್ನಾಟಕದಲ್ಲಿದೆ. ತಲೆಯ ಆಭರಣವಾಗಿ ಬ್ಯಾರಿಯನ್‌ರು ತಲೆಸಿಂಗಾರ, ಚೌರಿ, ಸೇರ ನಿಲಾವು, ತಿರುಪುರೆಪೂ ಬಳಸುತ್ತಿದ್ದರು. ಇವೆಲ್ಲ ಸಂಪ್ರದಾಯದ ಆಭರಣಗಳು ಈಗ ಕಣ್ಮರೆಯಾಗುತ್ತಿದ್ದರೂ ಅವುಗಳ ಮೇಲಿನ ಮೋಹದಿಂದ ಬ್ಯಾರಿ ಸ್ತ್ರೀಯರು ಮುಕ್ತರಾಗಿಲ್ಲ. ನವಾಯಿತರಲ್ಲಿ ಗಾಜಿನಬಳೆ, ಮಣಿಸರ ತೊಟ್ಟರೆ ಬಿಡವರೆಂದು ತಿಳಿಯುವ ಕಾರಣ ಎಂಥವರಾದರೂ ಬಂಗಾರದೊಡವೆಗಳನ್ನು ಮಾಡಿಸುತ್ತಾರೆ. ಚೂರು ಬಂಗಾರವಾದರೂ ತಮ್ಮ ಮೈ ಮೇಲೆ ಇರಬೇಕೆಂದು ಉತ್ತರ ಕರ್ನಾಟಕದ ಮುಸ್ಲಿಮ ಮಹಿಳೆಯರು ಬಯಸುತ್ತಾರೆ.

ಹೀಗೆ ಮುಸ್ಲಿಮ ಸ್ತ್ರೀಯರ ಉಡುಗೆ-ತೊಡುಗೆಗಳು ಅವರ ಅಭಿರುಚಿ ಮತ್ತು ಸಂಸ್ಕೃತಿಯನ್ನು  ಗಾಡವಾಗಿಯೇ ಬಿಂಬಿಸುತ್ತವೆ.