ಉರುಸು:

ಜಾತ್ರೆಯ ಸಂಸ್ಕೃತಿ ಮುಸ್ಲಿಮರಲ್ಲಿ ಇಲ್ಲ. ಆದರೆ ಕರ್ನಾಟಕದಲ್ಲಿ ಹಿಂದೂ ಸಂಸ್ಕೃತಿಯೊಂದಿಗೆ ಬದುಕುತ್ತಿರುವ ಮುಸ್ಲಿಮರು ಉರುಸುಗಳನ್ನು ಜಾತ್ರೆಯೋಪಾದಿಯಲ್ಲಿ ಆಚರಿಸುವರು. ಉರುಸು ಎಂದರೆ ಉತ್ಸವ. ಅದು ವಲಿಗಳ ಪುಣ್ಯ ತಿಥಿಯೆನಿಸಿದೆ. ವಲಿಯೆಂದರೆ ಅಲ್ಲಾಹನ ಮಿತ್ರ. ಸೂಫಿಸಂತರು ವಲಿಗಳಾಗಿದ್ದಾರೆ. ತಮ್ಮ ಕಷ್ಟಕ್ಕೆ ತೀವ್ರವಾಗಿ ಸಂದಿಸುವ ಈ ಸಂತರನ್ನು ಹಿಂದೂ ಮುಸ್ಲಿಮರು ಗೌರವದಿಂದ ಆರಾಧಿಸುತ್ತಾರೆ. ಈ ಸಂತರ ಗೋರಿಯ ದರ್ಶನ ಜನರಿಗೆ ಪವಿತ್ರವೆನಿಸಿದೆ. ಉರುಸಿನ ಸಂದರ್ಭದಲ್ಲಿ ಸೂಫಿ ಸಂತರ ಗೋರಿಗಳಿಗೆ ಗಂಧ (ಸಂದಲ್‌) ಏರಿಸಿ, ಫಾತಿಹಾ ಓದಿಸಲಾಗುತ್ತದೆ.

ಚಿಕ್ಕ ಮಗಳೂರು ಹತ್ತಿರ ಬಾಬಾಬುಡನ್‌ಗಿರಿಯಲ್ಲಿ ವಲಿಗಳ ದರ್ಗಾ ಇದೆ. ಮಾಣಿಕ್ಯಧಾರದ ದಾರಿಯಲ್ಲಿ ‘ಮಾಮಾಜಿಗ್ನಿ’ ಎಂಬ ಸ್ತ್ರೀವಲಿ ಪೀಠವಿದೆ. ಇವರು ಬಾಬಾ ಅವರ ಶಿಷ್ಯೆ. ಭಕ್ತಾದಿಗಳಿಗೆ ರೊಟ್ಟಿ ಹಂಚುತ್ತಿದ್ದರಂತೆ. ಮದುವೆ ಆಗದೆ ಇರುವ ಕನ್ಯೆಯರು ಹರಕೆ ಹೊತ್ತು, ಮದುವೆಯಾಗಿ ಹರಕೆ ನೆರವೇರಿಸುತ್ತಾರೆ. ಹಾಸನ ಜಿಲ್ಲೆಯ ಅರಕೂಲಗೂಡು ತಾಲೂಕಿನ ಹಂಡ್ರಂಗಿ ಎಂಬ ಗ್ರಾಮದಲ್ಲಿ ಕೂಡಾ ‘ಜಮಾಲ್‌ಬೀ ಮಸಾಬ್‌’ ಎಂಬ ಸ್ತ್ರೀವಲಿ ಗೋರಿ ಇರುವುದು. ಇಲ್ಲಿಯೂ ಹೆಣ್ಣು ಮಕ್ಕಳು ಬಂದು ಹರಕೆ ಹೊತ್ತು ಈಡೇರಿಸುತ್ತಾರೆ.

ಹರಕೆಗಳು:

ತಮ್ಮ ಜೀವನದೊಂದಿಗೆ ಮುಖಾಮುಖಿಯಾಗುವ ನೋವು ಬವಣೆಗಳನ್ನು ಅಗೋಚರ ಶಕ್ತಿಗಳ ಮೂಲಕ ನಿವಾರಿಸಿಕೊಂಡು ಸಮಾಧಾನ ತಾಳುವ ಉತ್ಕಟ ಬಯಕೆ ಜನರದ್ದಾಗಿದೆ. ಈ ಕಾರಣದಿಂದ ಹರಕೆಯ ವಿಧಾನಗಳು ಹುಟ್ಟಿಕೊಂಡಿವೆ. ಮುಸ್ಲಿಮರಲ್ಲಿ ಇಂಥ ಹಲವು ಹತ್ತು ಹರಕೆಗಳಿವೆ. ಸತ್ಯವಂತ ವಲಿಗಳ ಹೆಸರಲ್ಲಿ ದೀಪ ಹಚ್ಚುವ ಗ್ಯಾರಂವಿ, ಸಂತರ ಗೋರಿಯ ಮೇಲೆ ಹೂವಿನ ಅಥವಾ ಬಟ್ಟೆಯ ‘ಗಲೀಫ್‌’ ಹೊದಿಸುವುದು. ಬೆಳ್ಳಿಯ ತೊಟ್ಟಲು, ಕುದುರೆ ಅರ್ಪಿಸುವುದು, ಕುರಿ ಕೋಳಿಗಳನ್ನು ಬಲಿ ಕೊಡುವುದು ಹೀಗೆ ಹತ್ತಾರು ಬಗೆಯ ಹರಕೆಗಳು ಕ್ರಿಯಾಶೀಲವಾಗಿವೆ.

ಸೋಲಾ ಸೈಯಂದಾ ಹದಿನಾರು ವಲೀಯವರ ಹೆಸರಿನಲ್ಲಿ ಉಪವಾಸ ಆಚರಿಸಿ ಅವರ ಮಹಿಮೆಯ ಕಥೆ ಕೇಳಿ ಫಾತಿಹಾ ಓದಿಸುವುದು ಮುಸ್ಲಿಮರ ಶ್ರದ್ಧಾ, ಭಕ್ತಿಯ ಹರಕೆಯಾಗಿದೆ. ‘ಸೋಲಾ ಸೈಯಂದಾ’ರವರ ಮಹಿಮೆ ಮತ್ತು ಪವಾಡ ಕುರಿತ ಕಥೆಯನ್ನು ಡಾ. ಷಹಸೀನಾ ಬೇಗಂ ಅವರು ತಮ್ಮ ‘ಕರ್ನಾಟಕ ಮುಸ್ಲಿಂ ಜಾನಪದ’ ಕೃತಿಯಲ್ಲಿ ಸಂಗ್ರಹಿಸಿದ್ದಾರೆ.

ಒಂದೂರಲ್ಲಿ ಒಬ್ಬ ರಾಜನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಒಂದು ದಿನ ಪರದೇಶಿಯೊಬ್ಬ ಬಂದು ತನಗೆ ಏನಾದರೂ ಕೊಡು ಎಂದು ಕೇಳಿದ. ಆಗ ರಾಜ ಒಂದು ಹರಿವಾಣದಲ್ಲಿ ವಜ್ರಗಳನ್ನು ತುಂಬಿಕೊಟ್ಟ. ಪರದೇಶಿ ರಾಜನ ಮುಖ ನೋಡಿ ‘ಮಕ್ಕಳಿಲ್ಲದವನ ಕೈಯಿಂದ ಏನೂ ಸ್ವೀಕರಿಸುವುದಿಲ್ಲ’ ಎಂದು ಹೇಳಿ ಹೊರಟು ಹೋದ. ರಾಜನಿಗೆ ಬಹಳ ಬೇಜರಾಯಿತು. ತನ್ನ ರಾಜುಡುಗೆಯನ್ನು ಕಳಚಿ ಸಾಮಾನ್ಯ ವ್ಯಕ್ತಿಯಂತೆ ಅರಮನೆಯಿಂದ ಹೊರಟು ಏನೇನೋ ಯೋಚನೆ ಮಾಡುತ್ತ ಮರದ ಕೆಳಗೆ ಕುಳಿತಿದ್ದಾಗ ಸೋಲ ಸೈಯಂದಾ ಎಂಬ ವಲಿಗಳು ‘ಇಂದು ತಮ್ಮ ಹೆಸರಿನಲ್ಲಿ ಹರಕೆ ಹೊರುವಂತೆ’ ರಾಜನಿಗೆ ಈ ರೀತಿ ಹೇಳಿದರು: ‘ಪ್ರತಿ ತಿಂಗಳು ಹದಿನೈದನೆಯ ತಾರೀಖಿನ ದಿನ ಉಪವಾಸವಿದ್ದು, ಸಕ್ಕರೆ ಫಾತೀಹ ಓದಿಸಿ ಎಳ್ಳು, ಖರ್ಜೂರ ತಿಂದು ಉಪವಾಸ ಬಿಡಬೇಕು ಹೀಗೆ ಮಾಡಿದರೆ ನಿನ್ನ ಇಚ್ಛೆ ಕೈಗೂಡುತ್ತದೆ.’

ಆಗ ರಾಜ ಅರಮನೆಗೆ ಬಂದು ತನ್ನ ಹೆಂಡತಿಗೆ ಎಲ್ಲವನ್ನು ಹೇಳಿ ಭಯ ಭಕ್ತಿಯಿಂದ ಉಪವಾಸ ಇರಲು ತೊಡಗಿದ. ಅದರ ಪರಿಣಾಮ ರಾಣಿ ಗರ್ಭಿಣಿಯಾದಳು . ನವಮಾಸ ತುಂಬಿ ರಾಣಿ ಗಂಡು ಮಗುವನ್ನು ಹೆತ್ತಳು. ಸಂತಸಗೊಂಡ ರಾಜ ದಾನ-ಧರ್ಮ ಮಾಡುತ್ತಿರುವಾಗ ಅವನಿಗೆ ಮುದುಕಿಯೊಬ್ಬಳು ಸಂತಾನಪ್ರಾಪ್ತಿಯ ಕಾರಣ ಕೇಳಿದಳು. ರಾಜ ಸೋಲಾ ಸೈಯಂದಾ ವಲಿಗಳ ಮಹಿಮೆ ಅರುಹಿದ. ಮುದುಕಿ ತನ್ನ ಬಡತನ ದೂಋಆಗಲು ವಲೀಗಳ ಹೆಸರಲ್ಲಿ ಹರಕೆ ಹೊತ್ತು ಉಪವಾಸ ಆಚರಿಸಿದಳು. ಆ ಹರಕೆ ಫಲಿಸಿ ಆಕೆ ಶ್ರೀಮಂತೆಯಾದಳು. ಮುದುಕಿಯ ಮನೆಗೆ ಸೌದೆ ತಂದು ಹಾಕುತ್ತಿದ್ದವನು ಅವಳ ಹರಕೆಯ ಬಗ್ಗೆ ಕೇಳಿ ತಾನೂ ಉಪವಾಸ ಮಾಡಿದನು. ಅವನೂ ಸಿರಿವಂತನಾದನು. ಆದರೆ ಈತ ಸಕ್ಕರೆ ಫಾತೀಹಾ ಓದಿಸುವುದನ್ನು ಮರೆತನು.

ಎರಡನೆಯ ದಿನ ಸೌದೆ ಕಡಿಯಲು ಅವನು ಕಾಡಿಗೆ ಹೋದ. ರಾಜನ ಮಗ ಕಳೆದು ಹೋಗಿದ್ದಾನೆಂದು ಹುಡುಕು ಹುಡುಕುತ್ತ ಸೈನಿಕರು ಸೌದೆಯವನ ಬಳಿ ಬಂದರು. ಅವನು ಹಿಡಿದಿದ್ದ ನೀರಿನ ಮಡಕೆ ರಾಜನ ಮಗನ ತಲೆಯಾಗಿ ರೂಪಾಂತರಗೊಂಡಿತ್ತು. ರಾಜನಮಗನ ಕೊಂದ ಕೊಲೆಗಾರ ಇವನೆಯೇ ಎಂದು ಸೈನಿಕರು ಸೌದೆಯವನನ್ನು ಬಂಧಿಸಿ ತಂದು ರಾಜನ ಮುಂದೆ ನಿಲ್ಲಿಸಿದರು. ರಾಜನು ಅವನಿಗೆ ಮರಣದಂಡನೆ ವಿಧಿಸಿ, ಬಂಧೀಖಾನೆಗೆ ತಳ್ಳಿಸಿದನು. ಅತಿಯಾಗಿ ನೊಂದುಕೊಂಡ ಸೌದೆಯವನು ಸೋಲಾ ಸೈಯಂದಾ ಅವರನ್ನು ಭಕ್ತಿಯಿಂದ ಸ್ಮರಿಸಿಕೊಂಡನು. ಪ್ರತ್ಯಕ್ಷರಾದ ಆ ಮಹಿಮರು ಫಾತೀಹಾ ಓದಿಸುವಂತೆ ಆದೇಶಿಸಿದರು. ತನ್ನಲ್ಲಿ ಹಣವಿಲ್ಲವೆಂದಾಗ, ‘ನೀನು ಮಲಗಿರುವ ಹಾಸಿಗೆ ಕೆಳಗೆ ಇದೆ, ಎತ್ತಿಕೊ’ ಎಂದು ಹೇಳಿ ಮಹಾತ್ಮರು ಅದೃಶ್ಯಗೊಂಡರು.

ತನ್ನ ತಪ್ಪನ್ನು ಮನ್ನಿಸುವಂತೆ ಉಪವಾಸವಿದ್ದು ಹಾಸಿಗೆ ಕೆಳಗೆ ಇದ್ದ ಹಣವನ್ನು ತೆಗೆದುಕೊಂಡು ಸೌದೆಯವನು ಸಕ್ಕರೆಯ ಫಾತೀಹಾ ಓದಿಸಿದ. ಎಲ್ಲೋ ಹೋಗಿದ್ದವನು ಹಿಂತಿರುಗಿ ಬರುವಂತೆ ರಾಜನ ಮಗ ಪ್ರತ್ಯಕ್ಷನಾದ, ರಾಜನು ಅಚ್ಚರಿಗೊಂಡ ಮತ್ತು ಸೌದೆಯವನು ನಿರಪರಾಧಿಯೆಂದು ಅವನನ್ನು ಸೆರೆಯಿಂದ ಮುಕ್ತಗೊಳಿಸಿ ಗೌರವದಿಂದ ಬೀಳ್ಕೊಟ್ಟ.

ಈ ಕಥೆ ಹರಕೆಯ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ ತಿಲ್‌ ಗೂಡಕಿ ಕಹಾನಿ, ಸದ್‌ ಬೀಬಿಯಾಂಕೆ ಕಹಾನಿ ಹೇಳಿಸುವ ಹರಕೆಗಳು ಮುಸ್ಲಿಮ ಸಮಾಜದಲ್ಲಿ ಪ್ರಚಲಿತವಾಗಿವೆ. ಹೆಚ್ಚಾಗಿ ಈ ಹರಕೆಗಳು ಮಹಿಳೆಯರವನ್ನು ಸುತ್ತುವರಿದುಕೊಂಡು ಇರುವಂತಹವು. ಅವರೇ ಹೆಚ್ಚಾಗಿ ಈ ಹರಕೆಗಳನ್ನು ಹೊತ್ತು ಪೂರೈಸುವವರು. ಅದು ಅವರ ಜೀವನದ ನೆಮ್ಮದಿಗೆಕ ಮತ್ತು ಕುಟುಂಬದ ಸುಖ, ಸಂಪತ್ತಿನ ವೃದ್ಧಿಗೆ ಕಾರಣವೆನಿಸಿರುವುದು ಗಮನಾರ್ಹ.

ನಂಬಿಕೆಗಳು:

ಮುಸ್ಲಿಮರಿಗೆ ಅವರದೇ ಆದ ನಂಬಿಕೆಗಳಿವೆ. ಇವು ಪರಂಪರಾಗತವಗಿ ಬೆಳೆದು ಬಂದಿರುವಂತೆ ಬೇರೆ ಜನಾಂಗದ ಪ್ರಭಾವದಿಂದಲೂ ಅವರ ಬದುಕಿನಲ್ಲಿ ಬೆರೆತು ಹೋಗಿವೆ. ಈ ನಂಬಿಕೆಗಳು ಅಸ್ತಿತ್ವ ಅಥವಾ ನಿಖರತೆ ಎಷ್ಟು ಸತ್ಯ ಅಥವಾ ವಾಸ್ತವ ಎಂಬ ಅನುಮಾನ ಇದ್ದದ್ದೆ. ಆದರೆ ಈ ನಂಬಿಕೆಗಳು ಮನುಷ್ಯರನ್ನು  ನಿಯಂತ್ರಿಸುವ ಬಗೆ ಮಾತ್ರ ಅದ್ಭುತ. ಮನುಷ್ಯನಿಗೆ ಬದುಕು ಪ್ರಿಯ. ಈ ಬದುಕಿಗೆ ನಂಬಿಕೆಗಳು ಪ್ರಿಯ. ಅವನ್ನು ಅವೈಜ್ಞಾನಿಕ, ಅವೈಚಾರಿಕವೆಂದು ಚಿಂತನೆಗೆ ಒಳಪಡಿಸುವ ವ್ಯವಧಾನಕ್ಕೆ ಅಸ್ಪದ ಕೊಡದಂತೆ ಮನುಷ್ಯರು ಅವುಗಳಲ್ಲಿ ಶ್ರದ್ಧೆಯಿಟ್ಟು ಪಾಲಿಸುತ್ತಾರೆ. ಅವರ ಮುಗ್ಧತೆ, ಮೂಢತೆಗಳನ್ನು ಕೆಲವು ಅಪಾಯಕಾರಿ ನಂಬಿಕೆಗಳ ಮೂಲಕ ಸ್ವಾರ್ಥಿಗಳು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವುದುಂಟು.

ಹೆಣ್ಣಿನ ಮೈಯಲ್ಲಿ ದೆವ್ವ ಸೇರಿಕೊಳ್ಳುವುದು, ಅದನ್ನು ಬಿಡಿಸಲು ಮಂತ್ರವಾದಿಗಳ ಮೊರೆ ಹೋಗುವುದು, ವಿಕಾರವಾದ ಹಿಟ್ಟಿನ ಗೊಂಬೆ ತಯಾರಿಸಿ ಮುಖದ ಮೇಲೆ ನಿವಾಳಿಸಿ ಮೂರು ದಾರಿಗೆ ಇಟ್ಟು ಬರುವುದು, ಗೋರಿಗಳ ಕಡೆಗೆ ಕರೆದೊಯ್ದು ‘ತವಾಫ್‌’ ಮಾಡಿಸುವುದು, ನಕಲಿ ಮದ್ದುಗಳನ್ನು ಕೊಡಿಸುವುದು, ಬಂಡಲ್‌ ಬಾಬಾಗಳನ್ನು ಭೇಟಿ ಮಾಡುವುದು ಇವೆಲ್ಲ ಅಂಧಃಶ್ರದ್ಧೆಗೆ ಹಿಡಿದ ಕನ್ನಡಿಯಾಗಿವೆ. ಇಸ್ಲಾಮ್‌ ಧರ್ಮ ಇಂಥವನ್ನೆಲ್ಲ ಒಪ್ಪಿಕೊಳ್ಳುವುದಿಲ್ಲವಾದರೂ ಮೂಢರು ಇವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದಾರೆ. ಹೆಣ್ಣಿನ ಕೊರಳಲ್ಲಿ ಲಚ್ಛಾ, ಕೈಯಲ್ಲಿ ಬಳೆ, ಕಾಲಿನ ಬೆರಳಲ್ಲಿ ಉಂಗುರ ಕಾಣದಿದ್ದರೆ, ಆಕೆಯ ಕೂದಲಿನ ನೀರು ಮನೆಯ ಒಳಗೆ ಬಿದ್ದರೆ, ಹೊಸ್ತಿಲ ಮೇಲೆ ನಿಂತು ಏನಾದರೂ ತಿಂದರೆ, ಸೀನಿದರೆ ಅಂಗಳ ಮತ್ತು ಮನೆಗೆ ದಾರಿದ್ಯ್ರವೆಂದು ಭಾವಿಸಲಾಗುತ್ತದೆ.

ಮುಸ್ಲಿಮರಿಗೆ ಪಶ್ಚಿಮ ದಿಕ್ಕಿನ ಕಡೆಗೆ ಕಾಲು ಚಾಚಿ ಮಲಗುವುದು ನಿಷಿದ್ಧ. ಆ ದಿಕ್ಕಿಗೆ ಪವಿತ್ರ ಮಕ್ಕಾ ಇರುವುದು ಎಂಬ ಶ್ರದ್ಧೆ. ಪ್ರತಿ ದಿನ ಬೆಳಿಗ್ಗೆ ನಮಾಜಿನ ಸಮಯಕ್ಕೆ ದೇವದೂತರು ಮನೆಗೆ ಬಂದು ಸಂಪತ್ತು ನೀಡುವರು. ಮನೆಯೊಳಗೆ ನಾಯಿಯನ್ನು ಸೇರಿಸಬಾರದು. ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಗೋಡೆಗೆ ಅಂಟಿಸಬಾರದು. ಮನುಷ್ಯನ ಬಲ-ಎಡ ಭುಜಗಳ ಮೇಲೆ ದೇವದೂತರು (ಕಿರಾಮನ್‌, ಕಾತಬೀನ್‌, ಯಾರಾ ದಮನ್‌. ಮಾತಾ ಫಲುನ್‌) ಇದ್ದು ಪಾಪ-ಪುಣ್ಯದ ಲೆಕ್ಕ ಬರೆಯುವರು. ನರಕದಲ್ಲಿ ಅಮಾನುಷವಾದ ಹಿಂಸೆಯೂ, ಸ್ವರ್ಗದಲ್ಲಿ ಅದಮ್ಯ ಸೌಖ್ಯವೂ ಇರುವುದು. ತಮ್ಮ ಗಳಿಕೆಯ ಸಂಪತ್ತಿನಲ್ಲಿ ಬಡವರಿಗೆ ‘ಝಕಾತ್‌’ ನೀಡುವುದು, ‘ಜುಬ್ಹಾ’ ಮಾಡಿದ ಹಲಾಲ್‌ ಪ್ರಾಣಿಯ ಮಾಂಸವನ್ನು ತಿನ್ನುವುದು ನಫಾಕ್‌ ಇದ್ದವರು ನಮಾಜ ಮಾಡದಿರುವುದು ಇತ್ಯಾದಿ ನಂಬಿಕೆಗಳು ಧರ್ಮದ ಶ್ರದ್ಧೆಯಿಂದ ಹುಟ್ಟಿಕೊಂಡಿವೆ.

ಬ್ಯಾರಿಗಳಲ್ಲಿಯೂ ಕೂಡಾ ಕೆಲವು ಆಳವಾದ ನಂಬಿಕೆಗಳಿವೆ ರಾತ್ರಿ ಕಸ ಗೂಡಿಸಬಾರದು, ಗೂಡಿಸಿದ ಕಸವನ್ನು ಸಂಗ್ರಹಿಸಿ ಇಡಬಾರದು, ಹೇನನ್ನು ಕೊಲ್ಲದೆ ಬಿಡಬಾರದು, ಶುಕ್ರವಾರ ಹರಿದ ಬಟ್ಟೆಯನ್ನು ಹೊಲಿಯಬಾರದು, ಬಟ್ಟೆಗಳನ್ನು ಮೈಮೇಲೆ ಇರುವಾಗ ಹೊಲಿಯಬಾರದು, ಬಾಗಿಲಿನ ಹಲಗೆಗೆ ಒರಗಿ ಕುಳಿತುಕೊಳ್ಳಬಾರದು, ಉಟ್ಟ ವಸ್ತ್ರದಿಂದ ಮುಖ ಒರೆಸಿಕೊಳ್ಳಬಾರದು, ಒಡೆದ ಪೆನ್ನಿನಿಂದ ಬರೆಯಬಾರದು, ಹೆಂಡತಿ ತನ್ನ ಗಂಡನ ಹೆಸರು ಹಿಡಿದು ಕರೆಯಬಾರದು, ಬೋರಲು ಮಲಗಬಾರದು, ಮುಸ್ಸಂಜೆ ಮನೆ ಬಾಗಿಲು ಹಾಕಬಾರದು, ಬಲಗಣ್ಣು ಹಾರಿದರೆ ಅತಿಥಿಗಳು ಬರುತ್ತಾರೆ, ಎಡಗಣ್ಣು ಕಡಿದರೆ ಮರಣ ಹೊಂದಿದ ವ್ಯಕ್ತಿಯ ಬಗ್ಗೆ ಮುನ್ಸೂಚನೆ ಕೊಡುವುದು, ಕಣ್ಣ ಕೆಳಗೆ ಕಡಿದರೆ ಕೈ ತುಂಬ ಹಣ ಸಂಪಾದಿಸುವನೆಂಬ, ಕಾಗೆ ಕೂಗಿದರೆ ನೆಂಟರು ಬರುತ್ತಾರೆಂಬ. ಓತಿಯನ್ನು ಕಂಡಲ್ಲಿ ಕೊಲ್ಲಬೇಕು, ಹಿಡಿ ಸೂಡಿಯನ್ನು ನೇರ ಇಡಬಾರದು, ಬೆಕ್ಕು ಅಡ್ಡ ಬಂದರೆ ಕೆಲಸಕ್ಕೆ ವಿಘ್ನ, ಅದೇ ಬೆಕ್ಕು ಕಡೆಯುವ ಕಲ್ಲಲ್ಲಿ ಕುಳಿತರೆ ಮದುವೆಯ ಸಂದರ್ಭದಲ್ಲಿ ಹಣದ ಬದಲಾಗಿ ಚಿನ್ನವೇ ಹೆಚ್ಚು ದೊರಕುವುದು, ರಾತ್ರಿ ಕಿವಿಗೆ ಕೋಲು, ಸೌಟು ಹಾಕಬಾರದು , ಹರಕೆ ಬಾಕಿ ಇದ್ದಲ್ಲಿ ಅದನ್ನು ತಿಳಿಸಲು ಸಣ್ಣ ಗಾತ್ರದ ಒಂಟೆ ಎಂಬ ಕೀಟ ಬರುತ್ತದೆ. ಮಂಗಳವಾರ ಹುಟ್ಟಿದ ಮಗುವಿನ ಮನಸ್ಸು ಕಠಿಣವಾದರೂ ಭವಿಷ್ಯ ಉತ್ತಮವಾಗಿರುವುದು ಇತ್ಯಾದಿ ನಂಬಿಕೆಗಳು ಬ್ಯಾರಿಯನ್ನರನ್ನು ಆವರಿಸಿಕೊಂಡಿವೆ.

ನವಾಯಿತರು ಮನೆಯಲ್ಲಿ ಮನುಷ್ಯ, ಪ್ರಾಣಿ, ಪಕ್ಷಿಯ ಚಿತ್ರಪಟಗಳನ್ನು ಇಡುವುದಿಲ್ಲ. ಫೋಟೋ ತೆಗೆಯುವುದಿಲ್ಲ. ಪತಿಯು ಊರಲ್ಲಿ ಇಲ್ಲದಾಗ ಪತ್ನಿ ಹೂ ಮುಡಿಯುವುದಿಲ್ಲ. ಯಾವ ಬಗೆಯ ಶೃಂಗಾರ ಮಾಡಿಕೊಳ್ಳುವುದಿಲ್ಲ. ಶಾಸ್ತ್ರವನ್ನು ಕೇಳುವ, ಯಂತ್ರ ಕಟ್ಟಿಸುವ, ಮಂತ್ರ ಹಾಕಿಸುವ ನಂಬಿಕೆಗಳಿಲ್ಲ.

ಚಂದದ ಬದುಕಿನ ಜೊತೆಗೆ ಸಂಸ್ಕೃತಿಯನ್ನು ಕಟ್ಟುವಲ್ಲಿ ಆಸ್ಥೆ ವಹಿಸುವ ಮುಸ್ಲಿಮ ಮಹಿಳೆಯರು ಇಂಥ ನಂಬಿಕೆಗಳನ್ನು ಸಹಜವಾಗಿ ರೂಢಿಸಿಕೊಂಡಿರುವರು ಕೆಲವು ದುರ್ಬಲ ಸ್ತ್ರೀಯರು ಕಂದಾಚಾರಗಳಿಂದ ಶೋಷಣಗೆ ಒಳಗಾಗುವರು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಹೆಣ್ಣಿನ ಪ್ರಜ್ಞಾವಂತಿಕೆ, ನಂಬಿಕೆಗಳ ಬಗ್ಗೆ ಜಾಗರೂಕತೆ ವಹಿಸಿರುವುದು ಅವುಗಳ ಹಿನ್ನಡೆಗೆ ಕಾರಣವಾಗುತ್ತಿವೆ.

ಅಡುಗೆ, ಆತಿಥ್ಯ:

ಮುಸ್ಲಿಮ ಮಹಿಳೆಯರು ಅಡುಗೆ ತಯಾರಿಸುವಲ್ಲಿ ಪ್ರಾವೀಣ್ಯ ಸಾಧಿಸಿದ್ದಾರೆ. ರುಚಿಯಾದ ಮತ್ತು ಸ್ವಾದಿಷ್ಟವಾದ ಅವರ ಕೈಯ್ಯ ಅಡುಗೆಯನ್ನು ಊಟ ಮಾಡುವುದೆಂದರೆ ಕೆಲವರಿಗೆ ಎರಡು ಹೊಟ್ಟೆಗಳಾಗುತ್ತವೆ. ವಿಶೇಷವಾಗಿ ಅವರು ತಯಾರಿಸುವ ಬಿರಿಯಾನಿ. ಖುಷ್ಕಾ, ಖುರ್ಮಾ, ಕಬಾಬ್‌, ಕುಫ್ರೆ, ಸಮೊಸಾ, ದಾಲಚಾ, ಅಂಡೇ ಫಲಾವ್‌, ಮುರುಕ್‌ ಫಲಾವ್‌, ಬೋಟಿ, ಕಲೀಜಾ, ತಲೆ-ಕಾಲು, ಖೈಮಾ, ಫಿಶ್‌ ಫ್ರಾಯ್‌ ವಿಶಿಷ್ಟವಾದ ಭಕ್ಷ್ಯಗಳಾಗಿವೆ. ದಕ್ಷಿಣ ಕರ್ನಾಟಕದ ರಾಗಿಮುದ್ದೆ, ಸೋಪ್ಪಿನ ಸಾರು, ದಕ್ಷಿಣ ಕನ್ನಡದ ಕುಸಲಕ್ಕಿ ಅನ್ನ, ಗಂಜಿ ಮೀನಿನ ಸಾರು, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಖಾರದ ಚಟ್ನಿ, ತರಕಾರಿ ಅಪರೂಪದ್ದು.

ರಮಜಾನ್‌ ಹಬ್ಬದಲ್ಲಿ ಅವರು ತಯಾರಿಸುವ ‘ಸುರ್ ಕುರ್ಮಾ’ ಅತ್ಯಂತ ವಿಶೇಷವಾದುದು. ಕಾಜು, ದ್ರಾಕ್ಷಿ, ಬದಾಮಿ, ಪಿಸ್ತಾ, ಆಕ್ರೋಟ್‌, ಚಾರುಲೇ, ಕಸ್‌ಕಸ್‌, ಖಜೂರ್, ಕೊಬ್ಬರಿ, ಹಾಲು, ಸಕ್ಕರೆ, ಶಾವಿಗೆ ಇತ್ಯಾದಿ ಸಾಮಗ್ರಿಗಳನ್ನು ಹಾಕಿ ಮಾಡುವ ಸುರ್ಕರ್ಮಾ ಹಿಂದೂ-ಮುಸ್ಲಿಮರಿಗೆ ಬಹಳ ಪ್ರಿಯವೆನಿಸುವುದು. ಸಫರ್ ತಿಂಗಳಿನ ಕೊನೆಯ ಬುಧವಾರ ಮಹಿಳೆಯರು ತಯಾರಿಸುವ ‘ಗುಲುಗುಲೆ’ ಎಂಬ ಸಿಹಿ ಪದಾರ್ಥವು ಭಜಿ ಆಕಾರದಲ್ಲಿದ್ದು ತಿನ್ನಲು ರುಚಿಯಾಗಿರುವುದು.

ಇದಲ್ಲದೆ ಮೆಂತೆ ಸೊಪ್ಪಿನ ಪರೋಟಾ, ಗಾಜರ ಹಲ್ವಾ, ಬಾದಾಮಿ ಹಲ್ವಾ, ಮೀನು ಮತ್ತು ತತ್ತಿ ಹಲ್ವಾ, ಚಿಕನ್‌ ಫ್ರಾಯ್‌, ಶಾವಗಿ ಹಲ್ವಾ, ಹುಗ್ಗಿ, ಹೋಳಿಗೆ, ಕರ್ಚಿಕಾಯಿ, ಇತ್ಯಾದಿ ಅಡುಗೆ ತಿನಿಸುಗಳನ್ನು ತಯಾರಿಸುವ ಸ್ತ್ರೀಯರು ಅತಿಥಿಗಳಿಗೆ ಉಣಬಡಿಸುವಲ್ಲಿ ಆಪ್ತೆಯನ್ನು ವ್ಯಕ್ತಪಡಿಸುವರು.

ಮುಸ್ಲಿಮ ಮಹಿಳೆ: ಅಭಿವ್ಯಕ್ತಿ

ತನ್ನ ನಿತ್ಯ ಬದುಕಿನ ಅನುಸಂಧಾನದೊಂದಿಗೆ ಅನುಭವ ದ್ರವ್ಯವನ್ನು ತನ್ನದಾಗಿಸಿಕೊಳ್ಳುವ ಸಹಜ ಹದಗಾರಿಕೆ ಮುಸ್ಲಿಮ ಮಹಿಳೆಯದಾಗಿದೆ. ಅಕ್ಷರಜ್ಞಾನದ ಕೊರತೆ ಇದ್ದರೂ ಜೀವನದ ಪಾಠಗಳು ಅವಳನ್ನು ಅನುಭವಸ್ಥೆಯನ್ನಾಗಿ ರೂಪಿಸಿವೆ. ತವರು ಮನೆಯಿಂದ ಗಂಡನ ಮನೆಗೆ ಬಂದಗಿನ ಅವಳ ಮುಗ್ಧತೆ, ಎಳಸಾದ ಸಂವೇದನೆಗಳು ಹೊಸ ಪರಿಸರದಲ್ಲಿ ರಾಜಿಯೊಂದಿಗೆ ಗಟ್ಟಿಗೊಳ್ಳುವುದು ಅನಿವಾರ್ಯ. ಬವಣೇಯೋ-ಬೆಂಕಿಯೋ, ಬೆಳಕೋ-ಕತ್ತಲೋ ತಂಗಾಳಿಯೋ-ಬಿರುಗಾಳಿಯೋ, ಕಹಿಯೋ-ಸಿಹಿಯೋ ಎಲ್ಲ ಪ್ರಸಂಗಗಳೂ ಆಕೆಗೆ ಸ್ವೀಕಾರಾರ್ಹ. ಅದೇ ಅವಳ ಬದುಕುಕ. ಭೂತ ಮರೆಯಲು, ವರ್ತಮಾನವನ್ನು ಆಸ್ವಾದಿಸಲು, ಭವಿಷ್ಯದ ಹೊಂಗನಸುಗಳನ್ನು ಅರಳಿಸಿಕೊಳ್ಳಲು ಬದುಕು ಬೇಕು. ಅದರ ಬಗ್ಗೆ ಅನನ್ಯ ಪ್ರೀತಿ ಕೂಡಾ. ಈ ಪ್ರೀತಿ ಅವಳ ಕುಟುಂಬದ ಜೀವತಂತು. ಸಂಸ್ಕೃತಿ ನಿರ್ಮಾಣದ ಸಶಕ್ತ ಉಸಿರು. ಅದನ್ನೇ ಆಕೆ ಗುನುಗುನಿಸಬಲ್ಲಳು. ಹಾಡಿಕೊಳ್ಳಬಲ್ಲಳು. ಕಥೆಯಾಗಿಸಬಲ್ಲಳು. ಅದು ಅವಳ ಅಭಿವ್ಯಕ್ತಿ. ಸೃಜನಶಕ್ತಿ. ಅದು ಅವಳ ಹುಟ್ಟುಗುಣ. ಅನುಭವದ ಅನೂನತೆ. ಅದಕ್ಕೆ ರಕ್ತಿ-ಮಾಂಸ ನೀಡುವುದು, ಅಕ್ಷರ ಕಲಿಕೆ, ಪದವಿ ಗಳಿಕೆಯನ್ನು ಮೀರಿಸಿದ ಅವಳ ಅಭಿವ್ಯಕ್ತಿ ಗಾಢವಾದದ್ದು. ಕುಟುಂಬ ಮತ್ತು ಸಮಾಜದ ಪ್ರಕ್ರಿಯೆಗಳಲ್ಲಿ, ಹಬ್ಬ, ಮದುವೆ, ಮುಂಜಿವೆಯಂಥ ಸಂದರ್ಭಗಳಲ್ಲಿ ಅದರ ಸೊಗಡನ್ನು ಎಂಥವರೂ ಅನುಭವಿಸಬಹುದಾಗಿದೆ.

ಮುಸ್ಲಿಮ್‌ ಸಮುದಾಯದಲ್ಲಿ ಹೆಣ್ಣು, ಪುರುಷರ ಮಧ್ಯ ಪ್ರಕಟಗೊಳ್ಳುವುದಿಲ್ಲ. ಆದರೆ ಹೆಂಗಳೆಯರ ಸಂಕುಲದಲ್ಲಿ ಆಕೆ ಗರಿಬಿಚ್ಚಿದ ಹಕ್ಕಿ, ವಯಸ್ಸಾದ ಹೆಂಗಸರಿಗೆ ಈ ನಿರ್ಬಂಧವಿಲ್ಲ. ಅವರು ಪರ್ದಾದ ಗೊಡವೆಯಿಲ್ಲದೆ, ಡೋಲು ಬಾರಿಸುತ್ತ, ಹಾಡು ಹೇಳುವ, ವಿನೋದ ಮಾಡುವ ಪ್ರವೃತ್ತಿಯಿಂದ ಬೆರಗು ಹುಟ್ಟಿಸುವರು. ಸನ್ನಿವೇಶ, ಸಂದರ್ಭಗಳು ಅವಳ ಸೃಜನಶಕ್ತಿಯನ್ನು ಮೂರ್ತಗೊಳಿಸುವ ಪರಿ ಅಚ್ಚರಿಗೆ ಕಾರಣವೆನಿಸುವುದು. ಧರ್ಮ, ಸಂಪ್ರದಾಯ ಕುರಿತಾದ ಪ್ರಜ್ಞೆ ಅವಳ ಹಾಡು, ಕಥೆ, ಒಗಟು, ಒಡಪು, ಗಾದೆ ಮಾತುಗಳಲ್ಲಿ ಅದಮ್ಯವಾಗಿ ಜಿನುಗುವುದು. ಕೇಳಿದ, ನೋಡಿದ, ಅನುಭವಿಸಿದ ಸಂಗತಿಗಳು ಅವಳ ಅಭಿವ್ಯಕ್ತಿಯಲ್ಲಿ ಹರಳುಗಟ್ಟಿರುವುದು. ಅವಳದು ಪಂಡಿತಕಾವ್ಯವಲ್ಲ. ಜನಪದ ಸೊಗಡಿನದು. ಕಸರತ್ತಿನದಲ್ಲ; ಸ್ವಚ್ಛಂದ ರೀತಿಯದು. ಅವು ಬಾಯಿಂದ ಬಾಯಿಗೆ ಹರಡುತ್ತ ಜೀವಂತವಗಿರುವಂತಹವು.

ಸಾಮಾನ್ಯವಾಗಿ ಮದುವೆ, ಮುಂಜಿವೆ({ಶರಗತ್‌), ಚೋಲಿ(ಕುಪ್ಪಸ), ತೊಟ್ಟಿಲು, ಕಾರ್ಯಕ್ರಮಗಳಲ್ಲಿ ಮುಸ್ಲಿಮ ಮಹಿಳೆ ಸೃಜಿಸುವ ಸಾಹಿತ್ಯ ಒಂದೇ ಬಗೆಯಲ್ಲಿ ಇರುವುದು. ಆದರೆ ಪ್ರಾದೇಶಿಕತೆಗೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆಗಳನ್ನು ನಾವು ಗುರುತಿಸಬಹುದು.

ಮದುವೆ ಕ್ಷಣಗಳ ವಿಧಿ-ವಿಧಾನಗಳು ಅವಳ ಹಾಡು, ಹಾಸ್ಯ, ಒಗಟು, ಒಡಪುಗಳಿಂದಲೇ ಅರ್ಥಮಾಡಿಕೊಳ್ಳುವುದು ವಿಶೇಷ. ಅಲ್ಲಿ ಅವಳ ಪಾಲ್ಗೊಳ್ಳುವಿಕೆ ಕೂಡ ಅತ್ಯಂತ ಪ್ರಧಾನವಾದ ಅಂಶ. ಹೆಣ್ಣು-ಗಂಡಿನ ಮಂಗನಿ(ನಿಶ್ಚಿತಾರ್ಥ) ಆಗಿ, ನಿಕಾಹ್‌(ಲಗ್ನ)ದ ದಿನವು ನಿಗದಿಯಾಯಿತೋ ‘ರಸಂ’ (ಕಾರ್ಯಕ್ರಮ)ಗಳು ಪ್ರಾರಂಭವಾಗಿ ಬಿಡುತ್ತವೆ. ಚಪ್ಪರದಶಾಸ್ತ್ರ, ಅರಿಷಿಣಶಾಸ್ತ್ರ, ಮೆಹಂದಿಶಾಸ್ತ್ರ, ಮಿಸ್ಸೀ ಕಾ ರಸಂ, ಎಣ್ಣೆ ಶಾಸ್ತ್ರ, ಸುಯ್ಯಾಲೆಯ ಹಸೆ, ಚಂಗೇರಿಕಾ ರಸಂ, ಸಹೇರೆಕಾ ರಸಂ ಮುಂತಾಗಿ ನಡೆಯುವಲ್ಲಿ ಅವಳ ಹಾಡುಗಳು ಲೀಲಾಜಾಲವಾಗಿರುತ್ತವೆ. ಇಂಥ ಕೆಲವು ಹಾಡುಗಳನ್ನು ಗಮನಿಸಬಹುದು.

ಮೊದಲಿಗೆ ಮದುವೆಗೆ ಆಹ್ವಾನಿಸುವ ಉತ್ಸಾಹದ ಕರೆ, ಮದುಮಗಳಿಗೆ ಅಗತ್ಯವಾಗಿರುವ ವಸ್ತುಗಳು ಹೇಗೆ, ಎಲ್ಲಿಂದ ಬಂದವು, ಅವುಗಳ ಮಹತ್ವವನ್ನು ಈ ಹಾಡು ಪ್ರಸ್ತಾಪಿಸುವುದು:

ಶಾದಿ ಹಮಾರೆ ಘರಮೆ ಮುಬಾರಕ್‌ ಹೈ ದೋಸ್ತೋಂ
ಯೇ ಜೋಡಾ ಸಲಾಮತ್‌ ಹೈ ದುಆ ದೇನಾ ದೋಸ್ತೋಂ
ಹೂರೋಂನೇ ಲಾಯೇ ಹಲದಿ ದುಲಹನ್‌ ಕೆ ವಾಸತೆ
ಬೇಜತಾ ಪರಿಯೋಂಕೊ ಲಗಾನೇಕೆ ವಾಸತೆ
ಪೀಲೀಮೆ ತೇರೆ ಮಾಕಾ ಸಹಾರಾ ಹೈ ದೋಸ್ತೋಂ
ಎ ಜೋಡಾ ಸಲಾಮತ್‌ ರಹೆ ದುಆ ದೇನಾ ದೋಸ್ತೋಂ
(ನಮ್ಮ ಮನೆಯಲ್ಲಿದೆ ಮದುವೆ, ಶುಭಕೋರಿ ಗೆಳೆಯರೆ
ಈ ಜೋಡಿ ಸುಖವಾಗಿರಲೆಂದು ದುಆ ಮಾಡಿ ಗೆಳೆಯರೆ
ಅಪ್ಸರೆಯರು ತಂದರು ಅರಿಷಿಣ ವಧುವಿಗೋಸ್ಕರ
ದೇವರು ಕಳಿಸಿದದ ಅಪ್ಸರೆಯಂಥ ವಧುವಿಗೆ ಹಚ್ಚಲು
ಹಳದಿಯಲ್ಲಿ ನಿಮ್ಮ ತಾಯಿಯ ಆಸರೆ ಇರುವುದು ಗೆಳೆಯರೆ)

ಹೂರೋಂನೇ ಲಾಯೇ ಮೆಹಂದಿ ದುಲಹನ್‌ ಕೆ ವಾಸತೆ
ಬೇಜಾತಾ ಪರಿಯೋಂಕೋ ಲಗಾನೆಕೆ ವಾಸತೆ
ಲಾಲಿ ಮೇ ತೇರೆ ಮಾಕಾ ಸಹಾರಾ ಹೈ ದೋಸ್ತೋಂ
(ಅಪ್ಸರೆಯರು ತಂದರು ಮೆಹಂದಿ ವಧುವಿಗಾಗಿ
ದೇವರು ಕಳಿಸಿದ್ದ ಅಪ್ಸರೆಯಂಥ ವಧುವಿಗೆ ಹಚ್ಚಲು
ಅದರ ಕಂಪಿನಲ್ಲಿ ತಾಯಿಯ ಆಸರೆ ಇರುವುದು ಗೆಳೆಯರೆ)

ಹೂರೋಂನೆ ಬಾಯೇ ಪಾನಿ ದುಲಹನ್‌ಕೆ ವಾಸತೆ
ಬೇಜಾತಾ ಪರಿಯೋಂಕೋ ನೆಹಲಾನೆ ಕೆ ವಾಸತೆ
ಗುಸಲಮೆ ತೇರೆ ಮಾಕಾ ಸಹಾರಾ ಹೈ ದೋಸ್ತೋಂ
(ಅಪ್ಸರೆಯರು ತಂದರು ನೀಋನು ವಧುವಿಗಾಗಿ
ದೇವರು ಕಳಿಸಿದ್ದ ಅಪ್ಸರೆಯಂಥ ವಧುವಿನ ಸ್ನಾನಕ್ಕಾಗಿ
ಗುಸಲ್‌ ನೀರಿನಲ್ಲಿ ತಾಯಿಯ ಆಸರೆ ಇರುವುದು ಗೆಳೆಯರೆ)

ಹೂರೋಂನೆ ಲಾಯೇ ಕಪಡೆ ದುಲಹನ ಕೆ ವಾಸತೆ
ಬೇಜಾತಾ ಪರಿಯೋಂಕೋ ಪಿನ್ಹಾನೇಕೆ ವಾಸತೆ
ಗುಂಗಟ ಮೇ ತೇರೆ ಮಾಕಾ ಸಹಾರಾ ಹೈ ದೋಸ್ತೋಂ
(ಅಪ್ಸರೆಯರು ತಂದರು ಬಟ್ಟೆಯನು ವಧುವಿಗಾಗಿ
ದೇವರು ಕಳಿಸಿದ್ದ ಅಪ್ಸರೆಯಂಥ ವಧುವಿಗೆ ತೊಡಿಸಲು
ಸೆರಗಿನಲಿ ತಾಯಿಯ ಆಸರೆ ಇರುವುದು ಗೆಳೆಯರೆ)

ಹೂರೋಂನೆ ಲಾಯೇ ಶೇರಾ ದುಲಹನ್‌ ಕೆ ವಾಸತೆ
ಬೇಜಾತಾ ಪರಿಯೋಂಕೊ ಪಿನ್ಹಾನೇಕೆ ಕೆ ವಾಸತೆ
ಲಡಿಯೋಮೆ ತೇರೆ ಮಾಕಾ ಸಹಾರಾ ಹೈ ದೋಸ್ತೋ
(ಅಪ್ಸರೆಯರು ತಂದರು ಹೂ ಮುಡಿ ವಧುವಿಗಾಗಿ
ದೇವರೆ ಕಳಿಸಿದ್ದ ಅಪ್ಸರೆಯಂಥ ವಧು ಧರಿಸಲು
ಹೂ ಮಾಲೆಯಲಿ ತಾಯಿಯ ಆಸರೆ ಇರುವುದು ಗೆಳೆಯರೆ)

ಹೊರೋಂನೆ ಲಾಯೇ ಸಂದಲ್‌ ದುಲಹನ್‌ ಕೆ ವಾಸತೆ
ಬೇಜಾತಾ ಪರಿಯೋಂಕೋ ಲಗಾನೆಕೆ ಕೆ ವಾಸತೆ
ಇದರಮೆ ತೇರೆ ಮಾಕಾ ಸಹಾರಾ ಹೈ ದೋಸ್ತೋಂ
ಎ ಜೋಡಾ ಸಲಾಮತ್‌ ರಹೇ ದುಆ ದೇನಾ ದೋಸ್ತೋಂ
(ಅಪ್ಸರೆಯರು ತಂದರು ಗಂಧವನು ವಧುವಿಗಾಗಿ
ದೇವರು ಕಳಿಸಿದ್ದ ಅಪ್ಸರೆಯಂಥ ವಧುವಿಗೆ ಹಚ್ಚಲು
ಸುಗಂಧದಲಿ ತಾಯಿಯ ಆಸರೆ ಇರುವುದು ಗೆಳೆಯರೆ
ಈ ಜೋಡಿ ಸುಖವಾಗಿರಲೆಂದು ದುಆ ಮಾಡಿ ಗೆಳೆಯರೆ)

ಈ ವಸ್ತುಗಳೊಂದಿಗೆ ಅಲಂಕೃತರಾದ ವಧು-ವರರಿಗೆ ಶುಭ ಕೋರಲು ಬಂಧು-ಬಾಂಧವರು, ಸ್ನೇಹಿತರನ್ನು ಆಹ್ವಾನಿಸುವಲ್ಲಿ ಆಪ್ತತೆ ಎದ್ದು ತೋರುವುದು. ಪ್ರತಿ ನುಡಿಯಲ್ಲೂ ಹೆತ್ತ ತಾಯಿಯ ಸಮಾಧಾನದ ಆಸರೆ ಇರುವುದನ್ನು ಈ ಹಾಡು ಬಿಂಬಿಸುವುದು.

ಆವೋ ಸುಹಾಗೀನ್‌ ಮಂಡ್ವಾ ಸಜಾನೇ
ನಾತೆ ನಬೀಕಾ ಗುಂಚಾ ಖೀಲಾಯೇ
ಜಡ್‌ ಹೈಸೋ ಅಲ್ಲಾಹ್‌,. ಡಾಲ್ಯಾ ಮೊಹಮ್ಮದ್‌
ಪತ್ತೇ ಲಗೇ ಹೈ ಖಾತೊನೇ ಜನ್ನತ್‌
(ಬನ್ನಿ ಮುತ್ತೈದೆಯರೆ ಶೃಂಗರಿಸೋಣ ಚಪ್ಪರ
ಪೈಗಂಬರರ ವಂಶಬಳ್ಳಿಯ ಹೂವು ಅರಳಿಸೋಣ
ಅಲ್ಲಾಹನೇ ಬೇರು, ರೆಂಬೆ-ಕೊಂಬೆ ಮೊಹಮ್ಮದರು
ಖಾತೊನೇ ಜನ್ನತ್‌ ಇದರ ಎಲೆಗಳು) (ಚಪ್ಪರದ ಹಾಡು)

ಇಸ್ಲಾಮ್‌ ಧರ್ಮದ ಜೀವನಾಡಿಯಾದ ಪ್ರವಾದಿ ಪೈಗಂಬರರ ಮೇಲಿರುವ ಅಗಾಧ ನಿಷ್ಠೆಯನ್ನು ಅಭಿವ್ಯಕ್ತಿಸುವ ಈ ಹಾಡಿನಲ್ಲಿ ಕಾವ್ಯದ ಸತ್ವ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

ಮದುವೆಯಲ್ಲಿ ಅರಿಷಿಣ ಹಚ್ಚುವ ಪ್ರಕ್ರಿಯೆ ತುಂಬಾ ಮಹತ್ವದ್ದು. ಅದನ್ನು ಸುಮಂಗಲೆಯರು ಸಂಭ್ರಮದಿಂದ ಅಭಿವ್ಯಕ್ತಿಸುತ್ತಾರೆ:

ಬೈಕೋ, ಹಲ್ದಿ ಲಗಾರಿಂಸೋ ದೇಖೋ ಬೀಬೀ
ಬೈಕೋ, ಹಲ್ದಿ ಲಗಾರಿಂಸೋ ದೇಖೋ
ಬೈಕೋಕೆ ಹಲ್ದಿಕೆ ಊಪರ್ ನಬಿಯೋಂಕಾ ನೂರ್
ಅನಾರ್ಕೆ ದಾಣೇಕೂ ಗುಲಾಬ್‌ ಕಾ ಫೂಲ್‌

(ನೋಡಿರಿ, ನಾರಿಯರೆ ಅರಿಷಿಣ ಹಚ್ಚುವ ಮುತ್ತೈದೆಯರ
ಅರಿಷಿಣ ಹಚ್ಚುವುದ ನೋಡಿರೆ
ಮುತ್ತೈದೆಯರು ಹಚ್ಚುವ ಅರಿಷಿಣದ ಮೇಲೆ
ಪ್ರಜ್ವಲಿಸಿದೆ ಪೈಗಂಬರರ ಪ್ರಕಾಶ
ದಾಳಿಂಬ ಕಾಳಿಗೆ ಗುಲಾಬಿ ಹೂವು)  (ಅರಿಷಿಣದ ಹಾಡು)
ಇದು ಎಂಥ ಅದ್ಭುತ ಕಲ್ಪನೆ!

ಹರೆ ಮಂಡ್ವೇಕೆ ನೀಚೆ
ಹಲ್ದಿ ಲಗಾವೋ ಬನೀಕೋ
ಹಮೇ ರಸಂ ಕರ್ನೇಕೆ ರವಾದಾರ್
ಬನಾಬನಿ ಮುಬಾರಕ್‌

(ಹಸುರಿನ ಚಪ್ಪರದ ಕೆಳಗೆ
ವಧುವಿಗೆ ಅರಿಷಿಣ ಹಚ್ಚಿರಿ
ಶಾಸ್ತ್ರ ಮಾಡುವ ಹಕ್ಕು ನಮ್ಮದು
ವಧು-ವವರಿಗೆ ಶುಭಾಶಯಗಳು)     (ಅರಿಷಿಣದ ಹಾಡು)
ಆಜ್‌ ಕೀ ಚೌಕೀ ಕೌನ್‌ ಭರಾಯೇ?
ಸರ್ವರ್ ದುಲೇಕಿ ಭಾನ್‌ ಭರಾಯೇ
ಕಲಿಯೊಮೇ ಕಲಿಯಾ ಚಂಪೇಕಿ ಕಲಿಯಾ
ಮೋತೀಯಾ ಮಂಘಾವೋ ಚೌಕ್‌ ಭರ್ನೆ
ಹೀರೆ ಮಂಗಾವೋ ತಾರೆ ಚಡಾನೆ

(ಇಂದಿನ ಹಸೆ ಬರೆಯುವರು ಯಾರು?
ಬರೆಯುತ್ತಾಳೆ ಮದುಮಗನ ಸಹೋದರಿ
ಮೊಗ್ಗಿನಲಿ ಮೊಗ್ಗು ಸೇವಂತಿಗೆಯ ಮೊಗ್ಗು
ಮುತ್ತಗಳ ತರಿಸಿರಿ ಹಸೆ ಬರೆಯಲು
ತರಿಸಿರಿ ವಜ್ರಗಳ ನಕ್ಷತ್ರ ಏರಿಸಲು)  (ಹಸೆ ಹಾಡು)

ವಧು-ವರರಿಗೆ ಆಪ್ತರು ಹಸೆಯ ಶಾಸ್ತ್ರವನ್ನು ಪೂರೈಸುವಾಗ ಸುಮಂಗಲೆಯರು ಸ್ವಚ್ಛಂದವಾಗಿ ಹಸೆಯ ಹಾಡುಗಳನ್ನು ಒಕ್ಕೊರಲಲ್ಲಿ ಬಿತ್ತರಿಸುತ್ತಾರೆ.

ವಿವಾಹ ಸಂದರ್ಭದಲ್ಲಿ ಮೆಹಂದಿ ರಸಂ ವಿಶಿಷ್ಟವಾದುದು. ಇದನ್ನು ಮುಸ್ಲಿಮರು ನೆರವೇರಿಸುತ್ತಾರೆ. ಬ್ಯಾರಿಯನ್ನರು ಮದುವೆಯಲ್ಲಿ ಮೆಹಂದಿ ಶಾಸ್ತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಮೆಹಂದಿಯನ್ನು ಅವರು ‘ಮ್ಯೊಲಾಂಜಿ’ ಎಂದು ಕರೆಯುವರು. ಮದುವೆ ಮುಂಚಿನ ದಿವಸದ ಮುಸ್ಸಂಜೆಗೆ ಗಂಡಿನ ಕಡೆಯಿಂದ ಕೆಲವು ಸ್ತ್ರೀಯರು ಮದರಂಗಿಯನ್ನು ಹೆಣ್ಣಿನ ಮನೆಗೆ ಕೊಂಡೊಯ್ದು ರಂಗೇರಿದ ವಧುವಿನ ಕೋಮಲ ಕೈಗಳಿಗೆ ಹಚ್ಚುತ್ತ ‘ಮ್ಯೊಲಾಂಜಿ ಪಾಟ್‌ ’ ಹಾಡುವರು. ಮ್ಯೊಲಾಂಜಿ ಪಾಟ್‌ ಎಂದರೆ ‘ಮದರಂಗಿ ಹಾಡು ’ ಎಂದರ್ಥ. ಕೈಕೊಟ್ಟು ಪಾಟ್‌ ಹಾಡುವ ಹೆಂಗಸರು ತಾಳಕ್ಕೆ ಸರಿಯಾಗಿ ಚಪ್ಪಾಳೆ ತಟ್ಟುತ್ತ,.

ಆದಿ ಪೆರಿಯೋನಾ ಮೈತಾ ಮಾಯಿಲಾಂಜಿ
ಅದೇ ನನ್ನ ಸ್ವರ್ಗತೀಲ್‌ ಉಳ್ಳೆ ಮಾಯಿಲಾಂಜಿ
ಆದಂ-ಹವ್ವಾ ಚೀಕ್‌ ಇದೈಕ್ಯಾ ಮಾಯಿಲಾಂಜಿ
ಉಮ್ಮತ್ತೀಲ್‌ ಇಮ್ಮತ್ತೀಲ್‌, ಸುನ್ನತ್ತೀಲ್‌ ಮಾಯಿಲಾಂಜಿ
ಕುದುಕುದು ಗೋಲಾ ಪಾಟುಂ ಕೈ ಮುಟ್ಟಲ್‌ ಮಾಯಿಲಾಂಜಿ
(ಅಲ್ಲಾಹನಿಂದ ಬಂದಿರುವ ಮೆಹಂದಿ
ಎಂದೆಂದಿಗೂ ಸ್ವರ್ಗದಲ್ಲಿರುವ ಮೆಹಂದಿ
ಆದಂ-ಹವ್ವಾರಿಗ ಅಲ್ಲಾಹ್‌ ಕಳಿಸಿರುವ ಮೆಹಂದಿ
ಪೈಗಂಬರರ ಅನುಯಾಯಿಗಳಲಿ ವ್ಯಾಪಿಸಿರುವ ಮೆಹಂದಿ
ಅಲ್ಲಾಹನ ಅನುಯಾಯಿಗಳಿಗೆ ಪೈಗಂಬರರ
ಸಂದೇಶವೇ ಮೆಹಂದಿ)

ಇಂಥ ಮೆಹಂದಿ ವಧುವಿನ ಸ್ವಪ್ನದಲ್ಲಿಯೇ ನೆನಪಾಗುವುದು ಎಂದು ಬ್ಯಾರಿ ಸ್ತ್ರೀಯರು ಹಾಡಿಕೊಳ್ಳುವುದೇ ಚಂದ.

ದುಲ್ಹೇರಿ ತೇರಿ ದುಲ್ಹನಕೋ
ರಂಗರಂಗಮೇ ರಂಗಾಯಿಂಗೆ
ಮೆಹಂದಿ ಲಗಾಲಗಾಕೆ
ಲಾಲಿ ಸಜಾಯೇಂಗೆ

(ವರನೇ ನಿನ್ನ ವಧುವಿಗೆ
ಬಣ್ಣ ಬಣ್ಣದಿಂದ ಅಲಂಕರಿಸೋಣ
ಗೋರಂಟಿ ಹಚ್ಚಿಹಚ್ಚಿ
ಕೆಂಪಿನಲ್ಲಿ ಶೃಂಗರಿಸೋಣ)

ಹೀಗೆಂದು ಮೆಹಂದಿ ರಸಂಗೆ ರಂಗು ತುಂಬುವುದು ಉತ್ತರ ಕರ್ನಾಟಕದ ಮಹಿಳೆಯರ ಸೃಜನಶೀಲತೆಯ ಪ್ರತಿಭೆಯಾಗಿದೆ. ಮೆಹಂದಿ ಹಚ್ಚುವಾಗಿನ ಅವರ ಅತ್ಯುತ್ಸಾಹಕ್ಕೆ ಎಣೆಯೇ ಇಲ್ಲ. ಮೆಹಂದಿಯ ಚೆಲುವಿಕೆಯನ್ನು ಗಮನಿಸಿದ ಅವರು ಪ್ರಶ್ನೋತ್ತರ ರೂಪದಲ್ಲಿ ಅದರ ಮಹತ್ವವನ್ನು ಬಣ್ಣಿಸುವ ಹಾಡೊಂದು ಹೀಗಿದೆ:

ನಬಿ ರಸುಲುಲ್ಲಾ ಕೀ ಬಡೀ ಧೂಮ್‌ಸೆ ನಿಖಲಿ ಮೆಹಂದಿ
ಬತಾವೋ ಮೇರಿ ಕಸಂ ಕಹಾಂಸೆ ಮಂಗಾಯಿ ಏ ಮೆಹಂದಿ
ಮೆಹಬೂಬ ಕೆ ಬಾಗಸೆ ಚುನ್‌ಚುನ್‌ಕೆ ಮಂಗಾಯಿ ಏ ಮೆಹಂದಿ
ಬತಾವೋ ಮೇರಿ ಕಸಂ ಕೋನ್‌ ಲಗಾಯಿ ಏ ಮೆಹಂದಿ
ಬೀಬಿ ಝೈರಾನನೆ, ಖಾತೂನ್‌ ಲಗಾಯಿ ಏ ಮೆಹಂದಿ
(ಪೈಗಂಬರರ ಕಡೆಯಿಂದ ಬಂದಿರುವ ಮದರಂಗಿ
ಹೇಳಿರಿ ನನ್ನಾಣೆ ಎಲ್ಲಿಂದ ತರಿಸಿದಿರಿ ಈ ಮದರಂಗಿ
ಮೆಹಬೂಬ ಅವರ ತೋಟದಿಂದ ಆರಿಸಿ ಆರಿಸಿ ತರಿಸಿದೆ ಈ ಮದರಂಗಿ
ಹೇಳಿರಿ ನನ್ನಾಣೆ ಯಾರು ಹಚ್ಚಿದರು ಈ ಮದರಂಗಿ
ಬೀಬಿ ಝೈರಾನ, ಖಾತೂನರು ಹಚ್ಚಿದರು ಈ ಮದರಂಗಿ)

ಡೋಲು ಬಾರಿಸುತ್ತ ಅದರ ನಾದದೊಂದಿಗೆ ತಮ್ಮ ಮಾಧುರ್ಯರ ಸ್ವರ ಬೆರೆಸುತ್ತ ಮೆಹಂದಿಯನ್ನು ವಧುವಿನ ಕೈ ಕಾಲುಗಳಿಗೆ ಹಚ್ಚುವ ವಿಧಾನ ಸಡಗರವನ್ನುಂಟು ಮಾಡುವುದು. ಕ್ಷಣದ ಸನ್ನಿವೇಶಕ್ಕೆ ಮೆಹಂದಿ ಹಾಡು ಸೊಗಸನ್ನುಂಟು ಮಾಡುವುದು. ಮಿಸ್ಸೀಕಾ ರಸಂನಲ್ಲಿ ಮಹಿಳೆಯರು ಉಲಿಯುವ ಹಾಡು:

ಬಿಸ್ಮಿಲ್ಲಾ ಕಹನೇಸೆ ಸೈತಾನ್‌
ಜಲ್‌ ಜಾತಾ ಹೈ
ಆಗಿನಕೆ ದರಿಮೀಂಯಾನ್‌ ಕತ್ತಿಲ್‌
ರುಯ್ಯಾ ಗುಲ್‌ ಜಾತಾ ಹೈ

(ಸುಟ್ಟು ಭಸ್ಮನಾಗುತ್ತಾನೆ ಸೈತಾನ್‌
ಅಲ್ಲಾಹನ ನಾಮ ಉಸುರಿದರೆ
ಬೆಂಕಿಯ ತಾಪಕ್ಕೆ
ಕರಗಿ ಹೋಗುವ ಕರ್ಪೂರದಂತೆ)

ಎಂಬುದು ಕಾವ್ಯದ ಸೊಗಡಾಗಿದೆ.

ನಿಕಾಹ್‌ ರಸಂಗಳಲ್ಲಿ ಬೀಗತಿಯನ್ನು ಚುಡಾಯಿಸುವ ಹಾಡುಗಳು ಅಪಾರ. ಒಂದೊಂದು ಸಲ ಅವು ಆಶು ಕವಿತೆಗಳಾಗಿ ಹುಟ್ಟಿಕೊಂಡು ಮೊನಚಾದ ವ್ಯಂಗ್ಯ. ವಿಡಂಬನೆಯೊಂದಿಗೆ ಅದಮ್ಯವಾಗಿ ರಂಜಿಸುತ್ತವೆ;

ಸಮ್‌ದಿನ್‌ ರುಸ್ಸಕೋ ನಕೋ ಜಾ
ತುಜೇ ಗಾಯಿ ಕಟೋಂಗಿ
ಉಸಕಾ ತಿಲ್ಲಿ ಲಕಾಕೋ
ತುಜೆ ಪುಲ್ಲಿ ಬನಾವುಂಗಿ

(ಬೀಗತಿ ಸೆಟೆದುಕೊಂಡು ಹೋಗಬೇಡ, ನಿನಗಾಗಿ ದನ ಕಡಿತೀವಿ, ಅದರ ‘ತಿಲ್ಲಿ’ ತಂದು ನಿನಗೆ ಮೂಗುತಿ ಮಾಡ್ತೀನಿ.)

ಲಂಬೆ ಬಾಲ್‌ ಗೀಲೆ ಬಾಲ್‌ ಅಕ್ಕಲ್‌ ಕಂಹಾ ರಖೀತಿ
ಸಮ್‌ದಿನ್‌ ಬಾಗ್‌ ಮೇ ಗುಸೀತಿ
ಕೌಲೆ ಕಂಕಡ್ಯಾ ತೋಡೀತಿ
ಮಾಲಿ ಬಂಧಕೋ ಮಾರ್ಯ್‌ತಾ
ಮೈ ಬೋಲಕೋ ಚುಡೈತಿ

(ಉದ್ದ ಕೂದಲಿನವಳೆ, ಒದ್ದೆ ಕೂದಲಿನವಳೆ
ಬುದ್ಧಿ ಎಲ್ಲಿ ಇಟ್ಟಿದ್ದಿ?
ಬೀಗ್ತಿ ತೋಟದಲ್ಲಿ ಹೊಕ್ಕಿದ್ದಳು
ಎಳೆಯ ಸೌತೆಕಾಯಿ ಹರಿದಿದ್ದಳು
ಮಾಲಿ ಕಟ್ಟಿ ಹೊಡೆದಿದ್ದ
ನಾನೇ ಹೇಳಿ ಬಿಡಿಸಿದ್ದೆ)

ಬೀಗತಿಯನ್ನು ಕಸಿವಿಸಿಗೆ ಒಳಪಡಿಸುವ ಈ ಹಾಡು ನೆರೆದವರಿಗೆ ರಂಜನೆಯೊದಗಿಸುವುದು. ಮತ್ತೊಂದು ಹಾಡು ಹೀಗಿದೆ:

ಸಮ್‌ದಿನಕಾ ಪೇಟ್‌ ದೇಖೋ
ಮೈಸೂರಕಾ ಗೇಟ್‌ ದೇಖೋ
ಸಮ್‌ದಿನಕಾ ಮೂ ದೇಖೋ
ರೋಟಿಕಾ ತವ್ವಾ ದೇಖೋ
ಸಮ್‌ದಿನಕಾ ಆಂಖ್‌ ದೇಖೋ
ಖೋಪ್‌ರೇಕೆ ಭಟ್ಯ ದೇಖೋ

(ಬೀಗತಿಯ ಹೊಟ್ಟೆನೋಡಿ
ಮೈಸೂರಿನ ಗೇಟು ನೋಡಿ
ಬೀಗತಿಯ ಮುಖ ನೋಡಿ
ರೊಟ್ಟಿಯ ಹಂಚು ನೋಡಿ
ಬೀಗತಿಯ ಕಣ್ಣು ನೋಡಿ
ಕೊಬ್ಬರಿಯ ಚಿಪ್ಪು ನೋಡಿ)

ಸರಳತೆಯ ಧಾಟಿಯಲ್ಲಿ ಬೀಗತಿಯ ಸ್ವಭಾವವನ್ನು ಧ್ವನಿಪೂರ್ಣವಾಗಿ ಜಿನುಗಿಸುವ ರೋಚಕತೆ ಇಲ್ಲಿಯದು. ಇಂಥವೇ ಹಾಡುಗಳು ಸನ್ನಿವೇಶವನ್ನು ವಿನೋದಮಯಗೊಳಿಸಿ ನಿಕಾಹದ ಕಾರ್ಯಕ್ರಮಕ್ಕೆ ರಂಗು ತರುತ್ತವೆ. ಬೀಗರು ಎಂದರೆ ಘನ ಗಂಭೀರರು. ವಿವಾಹದ ಸಂದರ್ಭದಲ್ಲಿ ಅವರ ಮರ್ಜಿ ಕಾಯಬೇಕು. ಇಂಥ ಹಾಡು ಅವರನ್ನು ಕೆರಳಿಸದೆ ಇರಲಾರವು. ಆದರೆ ಇದು ಅಪಮಾನವಲ್ಲ. ಸಂತೋಷಕ್ಕಾಗಿ ಛೇಡಿಸುವುದು. ಬೀಗತಿಗೆ ಇದು ತಿಳಿದರೆ ಸಮಯ ಇಲ್ಲಸಿತವಾಗುವುದು.