[1]
ಮುಸ್ಲೀಮರು ಆಚರಿಸುವ ರಮ್ಜಾನ್, ಬಕ್ರೀದ್, ಮೊಹರಂ ಶಬ್ಬೇ ಮೇ ಅರಾಜ, ಶಬ್ಬೇ ಬರಾತ್, ಶಬ್ಬೇ ಕದ್ರ, ಈದೇ ಮೀಲಾದ್, ಆಖರ ಚಹಾರಷುಂಬಾ, ಬಡೌಂಕಿ ಈದ್, ಪೂರೈಫಾತಿಹಾ, ಸಗಟಬೀಬಿ, ಗ್ಯಾರವಿ ಮುಂತಾದ ಹಬ್ಬದಾಚರಣೆಗಳು ಮತೀಯ ಸಾಮರಸ್ಯ ಬೋಧಿಸುವ ದಾರಿದೀಪಗಳಾಗಿವೆಯೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ರಮಜಾನ್ ಮತ್ತು ಬಕ್ರೀದ್ ಹಬ್ಬಗಳಲ್ಲಿ ಭಾವೈಕ್ಯತೆ :
ರಮ್ಜಾನ್ ತಿಂಗಳು, ಮತೀಯ ಸೌಹಾರ್ದತೆಗೆ, ರಾಷ್ಟ್ರೀಯ ಭಾವೈಕ್ಯತೆಗೆ, ಆರ್ಥಿಕ ಸಮಾನತೆಗೆ ಮಾರ್ಗದರ್ಶಿ ಸೂತ್ರವಾಗಿದೆ. ತಿಂಗಳು ಪೂರ್ತಿ ರೋಜಾ ಇರುವುದರಿಂದ ವ್ಯಕ್ತಿ ತನ್ನ ಆಶೆ ಆಕಾಂಕ್ಷೆಗಳನ್ನು ಎಷ್ಟರ ಮಟ್ಟಿಗೆ ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವೆಂಬುದನ್ನು ಒರೆಗಲ್ಲಿಗೆ ಹಚ್ಚಿ ಹೇಳುತ್ತದೆ. ಅಲ್ಲದೆ ವರ್ಷದಲ್ಲಿ ಹಲವಾರು ದಿನಗಳನ್ನು ಉಪವಾಸದಲ್ಲಿ ಕಳೆಯುವ ಬಡವರ ಸ್ಥಿತಿಗತಿಯ ಸ್ಪಷ್ಟ ತಿಳುವಳಿಕೆ ಸಿರಿವಂತರಿಗಾಗುವಂತೆ ಮಾಡುತ್ತದೆ.
ಜಕಾತ್-ಫಿತರಾ-ಸದಖಾಗಳಿಂದ ಸಮಾಜದಲ್ಲಿಯ ಆರ್ಥಿಕ ಏರುಪೇರು ದೂರಾಗುತ್ತವೆಂಬುದರಲ್ಲಿ ಸಂದೇಹವಿಲ್ಲ, ಮುಸ್ಲೀಮರು ಒಂದೆಡೆ ನೆರೆದು ಒಬ್ಬನೇ ದೇವನನ್ನು ಪ್ರಾರ್ಥಿಸುವುದರಿಂದ ಪರಸ್ಪರರು ಅರಿತು ಬೆರೆತು ಸಾಮರಸ್ಯದಿಂದ ನಡೆಯುವ ಸದ್ಗುಣವು ತಾನೇತಾನಾಗಿ ಬೆಳೆಯುತ್ತದೆ. ಮನುಷ್ಯ ಸಂಬಂಧಗಳನ್ನು ಒಂದುಗೂಡಿಸಲು ಪ್ರೇರೇಪಿಸುವ ರೀತಿಕ್ರಮಗಳಲ್ಲಿ ನಮಾಜು ಬಹುಮೂಲ್ಯ ಪಾತ್ರವಹಿಸುತ್ತದೆ. ಇಂಥ ಭಾವೈಕ್ಯದ ಬೆಸುಗೆಯಾದ, ಸಂತೋಷದಾಯಕವಾದ ರಮ್ಜಾನ್ ಮುಸ್ಲಿಂ ಜಾನಪದರ ಸಾಮಾಜಿಕ ಜನಜೀವನದಲ್ಲಿ ಇಂದಿಗೂ ಜೀವಂತವಾಗಿರುವುದು ಸಂತಸದ ಸಂಗತಿ.
ಇಸ್ಲಾಂ ಧರ್ಮದ ಮೂಲ ತತ್ವಗಳಲ್ಲಿ ಒಂದಾದ ಹಜ್ಯಾತ್ರೆ ಇಸ್ಲಾಮೀ ಮಾನವೀಯ ಮೌಲ್ಯಗಳನ್ನು ಕುರಿತು ಮುಸ್ಲೀಮರಿಗೆ ನೀಡಲಾಗುವ ಪ್ರತ್ಯಕ್ಷ ಶಿಕ್ಷಣವೇ ಆಗಿದೆ. ಸಾಮೂಹಿಕ ನಮಾಜಿನಲ್ಲಿ ಬಹಿರಂಗವಾಗುವ ಸಹೋದರತೆ, ಸಮಾನತೆ ಮತ್ತು ಸ್ವಾತಂತ್ರ್ಯದ ಭಾವನೆಗಳು ಹಜ್ನಲ್ಲಿ ವಿರಾಟರೂಪದಲ್ಲಿ ಪ್ರದರ್ಶಿತವಾಗುತ್ತವೆ. ವರ್ಗ, ವರ್ಣ, ದೇಶ ಭಾಷೆ ಇತ್ಯಾದಿ ಭಿನ್ನತೆಗಳನ್ನೆಲ್ಲಾ ಬಾಹಿರಗೊಳಿಸಿ ವಿಶ್ವ ಭ್ರಾತೃತ್ವವನ್ನು ಪ್ರತಿಬಿಂಬಿಸುತ್ತದೆ.
ರಮಜಾನ್ ಹಬ್ಬಕ್ಕಿಂತಲೂ ದೊಡ್ಡ ಹಬ್ಬವೆಂದು ಪರಿಗಣಿತವಾದ ಬಕ್ರೀದ್ ಹಬ್ಬು ಅಲ್ಲಾಹನಿಗಾಗಿ ವ್ಯಕ್ತಿ ತನ್ನ-ತನು-ಮನ-ಧನ ತ್ಯಾಗಮಾಡಲು ಸಿದ್ಧನಿರಬೇಕೆಂದು ಮಾನವ ಲೋಕಕ್ಕೆ ಸಾರುತ್ತದೆ.
ಮೊಹರಂ ಹಬ್ಬದಲ್ಲಿ ಭಾವೈಕ್ಯಕೆ :
ಭಾರತೀಯರು ವಿವಿಧ ಹಬ್ಬಗಳನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸುವಂತೆ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಮೊಹರಂ ಹಬ್ಬದ ಮೇಲೆ ಹಿಂದೂ ಸಂಸ್ಕೃತಿಯ ಗಾಢ ಪ್ರಭಾವವಾಗಿದೆ. ಪ್ರಾದೇಶಿಕವಾಗಿ ರೂಢಿಯಲ್ಲಿರುವ ಮೊಹರಂ ಆಚರಣೆಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಹಿಂದೂಮುಸ್ಲಿಂ ಮೈತ್ರಿಯ ಕುರುಹುಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಉತ್ತರ ಪ್ರದೇಶದ ಲಖನೌ ನಗರದಲ್ಲಿ ಷಿಯಾ-ಸುನ್ನಿ ಮುಸ್ಲೀಮರ ಜೊತೆಗೆ ಹಿಂದುಗಳು ಸೇರಿ ತಾಜಿಯಾ ಕಟ್ಟುತ್ತಾರೆ. ಮೊಹರಂ ತಿಂಗಳ ಆರನೆಯ ದಿನ ಆಸಫಿ ಇಮಾಮಬಾಡಾದಲ್ಲಿ ಬರಿಗಾಲಿನಿಂದ ಬೆಂಕಿಯ ಮೇಲೆ ನಡೆದು ಹೋಗುವ ದೃಶ್ಯ, ಮೇಹಂದಿ ಜುಲೂಸನಲ್ಲಿ ಪಾನಕಿ ಪಾಲ್ಗೊಳ್ಳುವುದು ಹಿಂದೂ ಸಂಸ್ಕೃತಿಯಿಂದ ಪ್ರಭಾವಗೊಂಡಂತವು. ಚನೋರಬಾ ಗ್ರಾಮದಲ್ಲಿ ಮೊಹರಂ ಮೆರವಣಿಗೆ ಹೊರಟಾಗ ಹಿಂದೂ ಮುಸ್ಲೀಮರು ರೋಗ ಪೀಡಿತ ಮಕ್ಕಳನ್ನು ತಾಜಿಯಾಗಳ ಕೆಳಗೆ ಹಾಯಿಸುತ್ತಾರೆ. ಈ ಪದ್ಧತಿ ಹಿಂದೂಗಳ ರಥೋತ್ಸವವನ್ನು ನೆನಪಿಸುತ್ತದೆ.
ಆಂಧ್ರಪ್ರದೇಶದ ಹೈದರಾಬಾದ ಮತ್ತು ಗೋಲ್ಕೊಂಡಾ ನಗರಗಳ ಮೊಹರಂ ಆಚರಣೆಯಲ್ಲಿ ಹಿಂದುಗಳು ಪಾಲ್ಗೊಂಡು ಅಲ್ಮೆಮುಬಾರಕ್ಗಳಿಗೆ ಎಡೆ-ಉಡಿ ಕಾಣಿಕೆ ನೀಡುತ್ತಾರೆ. ಹತ್ತನೆಯ ದಿನ ಮಾತಂ ನಡೆಯುವಾಗ ನಿಂತು ಕಣ್ಣೀರು ಸುರಿಸುತ್ತಾರೆ. ಪಶ್ಚಿಮ ಬಂಗಾಲದ ವಿಷ್ಣು ಪುರನಗರದ ಮೊಹರಂ ಜುಲೂಸನಲ್ಲಿ ಪಾಲ್ಗೊಳ್ಳುವ ‘ಧುಲ್ಧುಲ್’ ಎಂಬ ಮಣ್ಣಿನ ಕುದುರೆಯನ್ನು ಪೋತದಾರರು ತಯಾರಿಸುತ್ತಾರೆ. ಇದರಲ್ಲಿ ಹಿಂದೂ ದೇವದೇವತೆಗಳ ಮಣ್ಣಿನ ಮಾದರಿಯ ಛಾಯೆ ಕಂಡುಬರುತ್ತದೆ.
ಮಹಾರಾಷ್ಟ್ರ ರಾಜ್ಯದ ಅಕ್ಕಲ ಕೋಟೆ ನಗರದಲ್ಲಿ ಹಿಂದೂ ಮುಸ್ಲೀಮರು ಸೇರಿ ತಾಜಿಯಾ ತಯಾರಿಸುತ್ತಾರೆ. ಗ್ರಾಮದೇವತೆಗಳಿಗೆ ಹಿಂದುಗಳು ತೆಂಗಿನಕಾಯಿ ಒಡೆಯುವಂತೆ ತಾಜಿಯಾಗಳಿಗೆ ಹಿಂದೂ ಮುಸ್ಲೀಮರು ತೆಂಗಿನಕಾಯಿಗಳನ್ನು ಒಡೆಸುತ್ತಾರೆ. ಮತ್ತು ಹಿಂದು ದೇವರಿಗೆ ಎಲೆ ಬಳ್ಳಿ ಪೂಜೆ ಮಾಡುವಂತೆ ಹಿಂದೂ ಮುಸ್ಲೀಮರು ತಾಜಿಯಾಗಳಿಗೆ ವೀಳೆದೆಲೆಯ ಹಾರ ಹಾಕುತ್ತಾರೆ. ರತ್ನಾಗಿರಿ ಜಿಲ್ಲೆಯ ಫತೇಹಪುರದಲ್ಲಿ ಮೊಹರಂ ಆಚರಣೆಯ ಸಂದರ್ಭದಲ್ಲಿ ತಮಾಷೆ ಮದ್ದುಗಳನ್ನು ಸುಡುತ್ತಾರೆ. ಹಾಗು ಹೊಸಬಟ್ಟೆ ತೊಟ್ಟು ಮುಖಕ್ಕೆ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳುತ್ತಾರೆ. ಈ ಸಂಭ್ರಮ ಹಿಂದುಗಳ ದೀಪಾವಳಿ ಹಬ್ಬಬನ್ನು ಅಪ್ಪಟ ಹೋಲುತ್ತದೆ.
ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮುದಗಲ್ಲ ಗ್ರಾಮದ ಮೊಹರಂ ಆಚರಣೆಯಲ್ಲಿ ಹೆಚ್ಚಾಗಿ ಹಿಂದುಗಳೇ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂಮುಸ್ಲೀಮರು ಹುಲಿವೇಷ, ಅಳ್ಳಳ್ಳಿ ಬವ್ವಾ ವೇಷಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ್ ಅಲಂ ಒಂದಕ್ಕೊಂದು ಭೆಟ್ಟಿಯಾದಾಗ ನೆರೆದ ಜನಸಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರೆಮಾಡಿ ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನೆಪಿಸುವ ಮುದಗಲ್ಲ ಮೊಹರಂ ಇಂದಿಗೂ ಹಿಂದೂ ಮುಸ್ಲೀಮರ ಇಷ್ಟಾರ್ಥಗಳನ್ನು ನೆರವೇರಿಸುವ ಪವಿತ್ರ ಪುಣ್ಯ ಕ್ಷೇತ್ರೋತ್ಸವವೆಂದೇ ಪ್ರಚಲಿತವಾಗಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೂಡಿಸುವ ಮೌಲಾಲಿ ಅಲಮ್ಗಳಿಗೆ ಹಿಂದು ಮುಸ್ಲೀಮರು ರಾಮುಲಸ್ವಾಮಿ ಎಂದೇ ಕರೆಯುತ್ತಾರೆ. ಒಂಬತ್ತನೆಯ ದಿನ ರಾತ್ರಿ ಎಡೆ ಕೊಡುವಾಗ ಉಪ್ಪನ್ನು ಒಯ್ದು ಅಲಾವಿಯಲ್ಲಿ ಚೆಲ್ಲಿ ಹುರುಕು ಕಜ್ಜಿಗಳನ್ನು ವಾಸಿಮಾಡಿಕೊಳ್ಳುತ್ತಾರೆ. ಸೊಂಡೂರು ತಾಲೂಕಿನ ಕೃಷ್ಣಾನಗರ, ಸುಶೀಲಾ ನಗರಗಳಲ್ಲಿ ಹಿಂದೂಗಳು ಹರಕೆ ಹೊತ್ತು ಹಾದಿಗೆ ಮಲಗಿ ದೇವರ ಹೊತ್ತವರ ಪಾದಸ್ಪರ್ಶದಿಂದ ಪಾವನವಾದೆವೆಂದು ಸಂತೃಪ್ತರಾಗುವುದು ಕಂಡುಬರುತ್ತದೆ.
ಕೋಲಾರ ಜಿಲ್ಲೆಯ ನಾಗ ಸಂದ್ರದ ಮೊಹರಂ ಬಾಬಯ್ಯನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಮೊಹರಂ ಸುತ್ತ ಹತ್ತು ಹಳ್ಳಿಗಳಲ್ಲಿ ಮೊಹರಂ ಜಾತ್ರೆಯೆಂದೇ ಹೆಸರಾಗಿದೆ. ಊರಿನ ಹಿಂದೂ ಮುಸ್ಲೀಮರು ವಿಶೇಷವಾಗಿ ಬ್ರಾಹ್ಮಣರು ತಮ್ಮ ತಮ್ಮ ಶಕ್ತ್ಯಾನುಸಾರ ದೇವರ ಚಾಕರಿ ಮಾಡುತ್ತಾರೆ. ಹರಕೆ ತೀರಿಸುತ್ತಾರೆ. ಗದಗ ಬೆಟಗೇರಿಯಲ್ಲಿ ನಡೆಯುವ ಮೊಹರಂ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ ಭಕ್ತರು ಪಾಲ್ಗೊಂಡು ಮೈತುಂಬಿದ ದೇವರಿಂದ ಮಳೆ-ಬೆಳೆ ಕುರಿತು ಹೇಳಿಕೆ ಕೇಳಿಕೆ ಮಾಡುತ್ತಾರೆ. ಸೊಟಕನಹಾಳದ ಡೋಲಿ ಮತ್ತು ಕೈದೇವರು ಊರ ದ್ಯಾಮವ್ವನ ಗುಡಿಗೆ ಭೆಟ್ಟಿಯಿತ್ತಾಗ ಊರ ಜನ-ಇಮಾಮ ಹುಸೇನರು ತಂಗಿ ದ್ಯಾಮವ್ವನ ಭೆಟ್ಟಿಗೆ ಬಂದಿದ್ದಾರೆಂದೇ ತಿಳಿಯುತ್ತಾರೆ.
ಕರ್ನಾಟಕದಲ್ಲಿ ಮೊಹರಂ ಆಚರಣೆಯ ಸಮಯದಲ್ಲಿ ಹಾಡಲಾಗುವ ಮೊಹರಂ ಪದಗಳು ಇಸ್ಲಾಂ ಧರ್ಮಕ್ಕೆ ಮತ್ತು ಇಸ್ಲಾಮೇತರ ಧರ್ಮಕ್ಕೆ ಸಂಬಂಧಿಸಿದವುಗಳಾಗಿದ್ದು ಹಾಡುವಾಗ ಹಿಂದೂ-ಮುಸ್ಲೀಮರು ಒಟ್ಟಾಗಿ ಮುರ್ಸಿಯಾ ದಾಟಿ (ಶೋಕಪೂರ್ಣ ದಾಟಿ) ಯಲ್ಲಿ ಹೇಳುತ್ತಾರೆ.
ಹೀಗೆ ಮೊಹರಂ ಆಚರಣೆ ಶೋಕಮೂಲವಾಗಿದ್ದರೂ ಮೂಲತಃ ಮುಸ್ಲೀಮರಿಗೆ ಸಂಬಂಧ ಪಟ್ಟಿದ್ದರೂ ಅದು ಹಿಂದುಗಳ ಸ್ನಿಗ್ಧ ಸ್ನೇಹದಿಂದ ಭಾವೈಕ್ಯದ ಪ್ರತೀಕವಾಗಿ ಎಲ್ಲರ ಹಬ್ಬವಾಗಿ ಬಳಕೆಯಲ್ಲಿದೆ. ಹಿಂದೂ ಮುಸ್ಲೀಮರನ್ನು ಒಂದು ಗೂಡಿಸುವ ಧಾರ್ಮಿಕ ಸೌಹಾರ್ದವನ್ನು ಹುಟ್ಟು ಹಾಕುವ ಮೊಹರಂ ಭಾವೈಕ್ಯದ ಬೆಸುಗೆಗೆ, ಮತೀಯ ಸಾಮರಸ್ಯಕ್ಕೆ ಬಹುದೊಡ್ಡ ಕಾಣಿಕೆಯಾಗಿದೆ.
[1] ಮುದೇನೂರ ಸಂಗಣ್ಣ : ಜನಪದದಲ್ಲಿ ಕೋಮುಸೌಹಾರ್ದ (ಉದಯವಾಣಿ ೧೯೯೧), ೧೭
Leave A Comment