ಒಂದು ಜನಾಂಗದ ಶೀಲ ಸ್ವಭಾವ ಆಸಕ್ತಿ-ಅಭಿರುಚಿಗಳು ಆ ಜನಾಂಗದಲ್ಲಿ ಮೊದಲಿನಿಂದ ಮುಂದುವರಿದುಕೊಂಡು ಬಂದ ಕಲೆಗಳಲ್ಲಿ ಆಭಿವ್ಯಕ್ತವಾಗುತ್ತದೆ. ಗ್ರಾಮೀಣದ ಬದುಕಿನೊಂದಿಗೆ ಬೆಳೆದುಕೊಂಡು ಬಂದಿರುವ ಅವರ ನೋವು ನಲಿವು ಆಗುಹೋಗು ಅನುಭವ ಆದರ್ಶಗಳ ಪ್ರದರ್ಶನವನ್ನೇ ನಾವು ಒಂದು ದೃಷ್ಟಿಯಿಂದ ಜನಪದ ಕಲೆಯೆಂದು ಕರೆಯಬಹುದು. ಜನಪದ ಕಲೆಗಳ ಉಗಮಸ್ಥಾನ ಗ್ರಾಮೀಣರ ಬದುಕಿನ ಅಂಗಳವಾಗಿದೆ.

ಕರ್ನಾಟಕದ ಜನಪದ ಕಲೆಗಳಿಗೆ ವಿಶಿಷ್ಟ ಪರಂಪರೆಯಿದೆ. ಪ್ರಾದೇಶಿಕ ವೈವಿಧ್ಯವುಳ್ಳ ಗುಣಲಕ್ಷಣಗಳಿವೆ. ಶಾಸ್ತ್ರೀಯ ಕಲೆಗಳಿಂದ ಭಿನ್ನವಾಗಿರುವ ಈ ಜನಪದ ಕಲೆಗಳು ಕೇವಲ ಆಸ್ಥಾನದ ಅಲಂಕರಣವಾಗಿರದೆ, ವಿರಾಮಕಾಲದ ಮೋಜಿನ ಚಟಗಳಾಗಿರದೆ ಜನಪದ ಜೀವನ ಶ್ರದ್ಧೆಯ ಜೀವನೋತ್ಸಾಹದ ಸೃಷ್ಟಿಯಾಗಿವೆ.

ಕರ್ನಾಟಕವನ್ನು ಒಳಗೊಂಡಂತೆ ಭಾರತ ಜಾನಪದದ ಒಂದು ಅಮೂಲ್ಯ ಭಂಡಾರ. ಭಾರತದ ವಿವಿಧ ಪ್ರದೇಶಗಳಲ್ಲಿ ಹರಡಿದ ಅಸಂಖ್ಯಾತ ಜನಪದ ವೃಂದಗಳಲ್ಲಿ ಸುಮಾರು ಸಾವಿರಕ್ಕೂ ಮಿಕ್ಕಿ ಜನಪದ ಕಲೆಗಳಿವೆ. ಇವುಗಳಲ್ಲಿ ಕರ್ನಾಟಕದೇ ಸಿಂಹಪಾಲು ಕರ್ನಾಟಕದ ಪ್ರದರ್ಶನಾತ್ಮಕ ಜನಪದ ಕಲೆಗಳನ್ನು ಗೀತ ಕಥಾ ಆರಾಧನಾ ಪ್ರಧಾನ ಕಲೆಗಳು, ವಾದ್ಯ ಪ್ರಧಾನ ಕಲೆಗಳು, ಅಭಿನಯ (ನೃತ್ಯ) ಪ್ರಧಾನ ಕಲೆಗಳು, ಮನೋರಂಜನಾ ಪ್ರಧಾನ ಕಲೆಗಳು. ಎಂದು ವಿಭಾಗಿಸಬಹುದು. ಮುಸ್ಲಿಮರ ಹಬ್ಬ ಮತ್ತು ಉರುಸುಗಳಲ್ಲಿ ಈ ಎಲ್ಲ ಪ್ರಕಾರದ ಕಲೆಗಳು ಬೆಳಕಿಗೆ ಬರುವುದನ್ನು ಕಾಣಬಹುದು.

ಗೀತ, ಕಥಾ ಆರಾಧನಾ ಪ್ರಧಾನ ಉದ್ದೇಶ ಹೊಂದಿದ ಕಲೆಯಾದ ರಿವಾಯಿತ ಮೇಳ ಮಹರಂ ಹಬ್ಬ ಮತ್ತು ಉರುಸುಗಳಲ್ಲಿ ಕೇಳಿಬರುತ್ತದೆ. ನ್ಯಾಯಕ್ಕಾಗಿ, ಮಾನವ ಧರ್ಮಕ್ಕಾಗಿ ಹೋರಾಡಿ ಹುತಾತ್ಮರಾದ ಹ| ಇ| ಹುಸೇನರ ಕಥೆಯೇ ಈ ಮೇಳಕ್ಕೆ ಮೂಲ ಪ್ರೇರಣೆ. ಕರ್ನಾಟಕದಲ್ಲಿ ವಿಶೇಷವಾಗಿ ಬಿಜಾಪುರ ಜಿಲ್ಲೆ, ಧಾರವಾಡ ಜಿಲ್ಲೆ, ಗುಲಬುರ್ಗಾ ಜಿಲ್ಲೆಯಲ್ಲಿ ರಿವಾಯಿತ (ಮೊಹರಂ ಪದ) ಹಾಡುವ ಮೇಳಗಳಿವೆ. ಇತ್ತೀಚೆಗೆ ಗೀಗೀ ಪದ ಮತ್ತು ಲಾವಣಿ ಪದಗಳನ್ನು ಹಾಡುತ್ತಾರೆ.

ವೃತ್ತಿ, ಕಾಲ, ವಾದ್ಯ, ಕುಲಗುಂಪುಗಳ ಹೆಸರು ಆಧರಿಸಿದ ಕುಣಿತವೇ ಮುಖ್ಯವಾಗಿರುವ ಅಭಿನಯ ಪ್ರಧಾನ ಕಲೆಗಳಾದ ಹೆಜ್ಜೆ ಕುಣಿತ, ಮುಳ್ಳು ಹೆಜ್ಜೆ ಕುಣಿತ, ಮಟಕಿ ಹಜ್ಜೆ ಕುಣಿತ, ಮರಗಾಲು ಕುಣಿತ, ಆಲಿಗುಂ ಕುಣಿತ, ಜಡೆ ಕೋಲಾಟ, ಮಂಡಿ ಕೋಲಾಟ, ಮಂಡಿ ಸಂಧಿ ಕೋಲಾಟ, ಎದುರು ಬದುರು ಕೋಲಾಟ, ಚಕ್ರ ಕೋಲಾಟ, ಸುತ್ತುಕೋಲಾಟ ಹರಿಗೋಲಾಟ ಮುಂತಾದವು ಮೊಹರಂ ಹಬ್ಬ ಮತ್ತು ಉರುಸುಗಳಲ್ಲಿ ಪ್ರದರ್ಶನವಾಗುತ್ತವೆ.

ಬೇರೆ ಬೇರೆ ಪ್ರಾಣಿ ಪಕ್ಷಿಗಳನ್ನು ಪಳಗಿಸಿ ಅವುಗಳ ಮೂಲಕ ಆಟ ಆಡಿಸುವ, ಶಕುನ ಹೇಳಿಸುವ ಮತ್ತು ತರತರದ ಮರ ಮುಟ್ಟುಗಳಿಂದ ಸಿದ್ಧಗೊಳಿಸಿದ ಬಗೆ ಬಗೆಯ ವರ್ಣರಂಜಿತ ಮುಖವಾಡ ಅಲಂಕರಣಗಳ ಮೂಲಕ ಬಯಲಿಗೆ ಬರುವ ಕಲೆಗಳು ಮನೋರಂಜನಾ ಪ್ರಧಾನ ಕಲೆಗಳಾಗಿವೆ. ಇವುಗಳಲ್ಲಿ ಹುಲಿವೇಷದಾಟ, ಅಳ್ಳಳ್ಳಿ ಬವ್ವಾ ವೇಷ, ಕರಡಿ ವೇಷ, ಸೊಪ್ಪಮ್ಮ ವೇಷ, ಯಲ್ಲಮ್ಮನ ಜೋಗತಿ ವೇಷ (ಹೊಸಪೇಟೆ) ಸಾರುವಯ್ಯನ ವೇಷ (ಮುದಗಲ್ಲ ಮೊಹರಂ) ದುರುಗ ಮುರುಗಿ ವೇಷ (ಸೊಟಕನ ಹಾಳ ಮೊಹರಂ) ಮುಂತಾದವು ಮೊಹರಂ ಹಬ್ಬ ಮತ್ತು ಉರುಸುಗಳಲ್ಲಿ ರಂಗು ಪಡೆಯುತ್ತವೆ. ಇತ್ತೀಚೆಗೆ ಜನರನ್ನು ಆಕರ್ಷಿಸಲು ಕುಸ್ತಿ, ಕವ್ವಾಲಿ, ಸವಾಲ-ಜವಾಬ (ಹೆಜ್ಜೆ ಪದ ಸ್ಪರ್ಧೆ,) ನಾಟಕ ಮತ್ತು ಬಯಲಾಟಗಳನ್ನು ಏರ್ಪಡಿಸುವುದು ಕಂಡುಬರುತ್ತದೆ.

ಮೊಹರಂ ಹಬ್ಬ ಮತ್ತು ಉರುಸುಗಳಲ್ಲಿ ಜೀವ ತಳೆಯುವ ಜನಪದ ತಲೆಗಳು ಯಾವುದೇ ಒಂದು ಜಾತಿ ಜನಾಂಗಕ್ಕೆ ಸೀಮಿತವಾಗಿರದೇ ಹಿಂದೂ ಮುಸ್ಲಿಮರು ಭಾವೈಕ್ಯದಿಂದ ಕೂಡಿ ಆಚರಿಸುವ ಸಂಪ್ರದಾಯದ ಪಳೆಯುಳಿಕೆಗಳಾಗಿವೆ. ಭಾರತೀಯ ಸಂಸ್ಕೃತಿಯ ಹೆಗ್ಗುರುತುಗಳಾಗಿವೆಯೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.