ಭಾರತ ಹಲವು ಮತ ಧರ್ಮಗಳ ನೆಲೆವೀಡು. ಇಲ್ಲಿರುವಷ್ಟು ಧರ್ಮಗಳು ಜಗತ್ತಿನ ಮತ್ತಾವ ದೇಶದಲ್ಲಿಯೂ ಇಲ್ಲ. ಆದರೆ ವಿವಿಧತೆಯಲ್ಲಿ ಏಕತೆ ಇರುವುದು ವೈಶಿಷ್ಟ್ಯ. ಕ್ರಿ.ಶ. ೭ನೆಯ ಶತಮಾನದಿಂದ ಭಾರತದಲ್ಲಿ ನೆಲೆಸಿರುವ ಮುಸ್ಲೀಮರು ಇಲ್ಲಿರುವ ಪವಿತ್ರ ಗಾಳಿ, ನೀರು, ಅನ್ನ ಸೇವಿಸಿ ಭಾರತವಾಸಿಗಳೇ ಆಗಿದ್ದಾರೆ. ತಮ್ಮ ಧರ್ಮ ತತ್ವಗಳ ಜೊತೆಗೆ ಬೇರೆ ಮತ ಧರ್ಮಗಳ ತತ್ವ ಸಾರ ಗೌರವಿಸಿ, ಸ್ವೀಕರಿಸಿ ಸೌಹಾರ್ದಯುತವಾಗಿ ಬಾಳಿದ್ದಾರೆ. ಸೂಪಿಸಂತರು, ಶಿವಶರಣರು, ಶಿವದಾಸರು, ಹರಿದಾಸರು ಭಾವೈಕ್ಯದ ಬೀಜಮಂತ್ರ ಊರಿ ಭಾರತವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿ ರೂಪಿಸಿ ಜಗತ್ತಿನಲ್ಲಿಯೇ ಪ್ರತಿಷ್ಠೆಯಿಂದ ಮೆರೆಯುವಂತೆ ಮಾಡಿದ್ದಾರೆ.

ಇತ್ತೀಚೆಗೆ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅಧಿಕಾರದ ಲಾಲಸೆಗಾಗಿ ಕೋಮು ಭಾವನೆ ಕೆರಳಿಸಿ ಮತೀಯ ದಳ್ಳುರಿ ಹಬ್ಬಿಸಿ ಭಾರತ ದೇಶವನ್ನು ಕೊಲೆ-ಸುಲಿಗೆ, ಅನ್ಯಾಯಅತ್ಯಾಚಾರ, ಪಾಪ-ಕೂಪಗಳ ಬೀಡಾಗಿಸುತ್ತಿರುವುದು ಕಂಡುಬರುತ್ತಿದೆ.

ಇಂಥ ಸಂದಿಗ್ಧ ಸಮಯದಲ್ಲಿ ವಿಷಮ ಪರಸ್ಥಿತಿಯಲ್ಲಿ ಭಾವೈಕ್ಯದ ತಾಣಗಳಾದ ಹಬ್ಬಹುಣ್ಣಿಮೆ, ಜಾತ್ರೆ-ಉರುಸುಗಳನ್ನು ಅಭ್ಯಸಿಸಿ ನಾಡಿನ ಮೂಲೆ ಮೂಲೆಗೂ ಮತೀಯ ಸಾಮರಸ್ಯದ ಅವಶ್ಯಕತೆಯನ್ನು ಒತ್ತಿ ಹೇಳಿ ದ್ವೇಷ ಅಸೂಯೆ ಮಾತ್ಸರ್ಯದ ಕಳೆ ಕಿತ್ತೊಗೆದು ಹಿಂದು ಮುಸ್ಲಿಂ ಭಾವೈಕ್ಯದ ಮಧುರ ಬೆಳೆ ಬೆಳಸಬೇಕಾಗಿದೆ. ಆ ಬೆಳೆ ಬೆಳಸುವ ಪ್ರಯತ್ನಗಳಲ್ಲಿ “ಮುಸ್ಲೀಮರ ಹಬ್ಬ ಮತ್ತು ಉರುಸುಗಳು” ಪ್ರಮುಖ ಪಾತ್ರ ವಹಿಸುವದೆಂದು ನನ್ನ ಅನಿಸಿಕೆ.

ಮುಸ್ಲೀಮರ ಹಬ್ಬಗಳು;

ಮಹ್ಮದ ಪೈಗಂಬರ (ಸೊ.ಅ.) ರು ಅಲ್ಲಾಹನ ಆಜ್ಞೆಯಂತೆ ಮಕ್ಕಾಬಿಟ್ಟು ಮದೀನಾಕ್ಕೆ ಹೊರಟದ್ದು ಕ್ರಿ.ಶ. ೬೨೨ರಲ್ಲಿ. ಹಿಜರಿ ಶಕೆ ಆರಂಭಗೊಂಡುದು ಅಂದಿನಿಂದ ಹಿಜರಿಶಕೆಯ ಒಂದು ವರ್ಷದಲ್ಲಿ ಮೊಹರಂ, ಸಫರ್, ರಬೀಉಲ್ ಅವ್ವಲ್ ರಬೀಉಸ್ಸಾನಿ, ಜಮಾದಿಉಲ್ ಅವ್ವಲ್, ಜಮಾದಿ ಉಸ್ಸಾನಿ, ರಜ್ಜಬ್, ಶಾಬಾನ್, ರಂಜಾನ್, ಷವ್ವಾಲ್, ಜಿಲ್ಕಾದ; ಜಿಲ್‌ಹಜ್ – ಎಂಬ ೧೨ ತಿಂಗಳುಗಳಿದ್ದು ಇವುಗಳಲ್ಲಿ ಕೆಲವು ವಿಶಿಷ್ಟ ದಿನಗಳೆಂದು ಭಾರತೀಯ ಮುಸ್ಲೀಮರು ಹಬ್ಬ ಆಚರಿಸುತ್ತಾರೆ ಮತ್ತು ಉರುಸು ಮಾಡುತ್ತಾರೆ.

ಹಬ್ಬವೆಂದರೆ ಉತ್ಸವ, ಸಂತೋಷದ ಸಂದರ್ಭ ಕೆಲವೊಮ್ಮೆ ಆಯಾ ತಿಂಗಳಿನಲ್ಲಿ ನಡೆದ ಘಟನೆ ಅದು ಸಂತೋಷದ್ದಿರಲಿ, ದುಃಖದ್ದಿರಲಿ ಅದರ ನೆನಪಿಗಾಗಿ ಅದು ನಡೆದ ದಿನದಂದು ಒಂದು ಬಗೆಯ ಆಚರಣೆಯನ್ನು ನಡೆಸಿಕೊಂಡು ಬರುವುದೂ ಹಬ್ಬವೆನಿಸಿಕೊಳ್ಳುತ್ತದೆ. ಐಹಿಕ ಸುಖಸಾಧನೆಗೆ ಉತ್ತೇಜನವೀಯುವುದು ಹಬ್ಬದ ಒಂದು ಮುಖವಾದರೆ ಮೋಕ್ಷಸಾಧನೆಗಾಗಿ ಹಬ್ಬಗಳನ್ನು ಆಚರಿಸುವುದು ಅಡಕ ಇನ್ನೊಂದು ಮುಖ.

ದೇಶವಿದೇಶಗಳಲ್ಲಿ ಮುಸ್ಲಿಂ ಬಾಂಧವರು ಆಚರಿಸುವ ಹಬ್ಬಗಳಲ್ಲಿ ಮುಖ್ಯವಾದವುಗಳೆಂದರೆ, ರಮ್‌ಜಾನ್, ಬಕರೀದ್ ಮತ್ತು ಮೊಹರಂ.

ರಮ್‌ಜಾನ್ ಹಬ್ಬ:

ಹಿಂದುಗಳ ದೀಪಾವಳಿ ಹಬ್ಬದಂತೆ ಮುಸ್ಲೀಮರಿಗೆ ರಮ್‌ಜಾನ್ ಸಂತೋಷದ ದೊಡ್ಡ ಹಬ್ಬ. ಮುಸ್ಲೀಮರ ಇತರ ಹಬ್ಬಗಳ ವಿಚಾರದಲ್ಲಿ ಶಿಯಾ, ಸುನ್ನಿ, ವಹಾಬಿ, ಖಾಜೀ, ಯಹೂದಿ ಇತ್ಯಾದಿ ಪಂಗಡಗಳಿಗೆ ಸೇರಿದವರಲ್ಲಿ ಮತ ಬೇಧಗಳಿವೆ. ಆದರೆ ರಮ್‌ಜಾನ್ ಮತ್ತು ಬಕರೀದ್ ಹಬ್ಬಗಳ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಾವುದೇ ಪಂಗಡಕ್ಕೆ ಸೇರಿಸಿದವರಾಗಿರಲಿ, ಎಲ್ಲರೂ ಸೇರಿ ಇವುಗಳನ್ನು ಆಚರಿಸುತ್ತಾರೆ.

ರಮ್‌ಜಾನದ ಅರ್ಥ:

ಹಿಜರಿ ಶಕೆಯ ಒಂಬತ್ತನೆಯ ತಿಂಗಳು ರಮ್‌ಜಾನ್ ಆಗಿದೆ. ರಮಜ್ ಎಂದರೆ ಅರೆಬ್ಬಿ ಭಾಷೆಯಲ್ಲಿ ಸುಡುವುದು. ಬೇಗುದಿಯಿಂದ ಕಾಲು ಸುಡುವುದು ಎಂದರ್ಥ. ಅರಬ್ಬೀ ವರ್ಷದ ಒಂಬತ್ತನೆಯ ತಿಂಗಳು ತುರ್ಕಿಗಳ ಗಣನೆಯ ಪ್ರಕಾರ ಬೇಸಿಗೆಯಲ್ಲಿ ಬರುತ್ತದೆ. ಆದುದರಿಂದ ಇದಕ್ಕೆ ಈ ಹೆಸರು ಬಂದಿದೆ. ಅಲ್ಲದೆ ಈ ತಿಂಗಳಿನಲ್ಲಿ ‘ರೋಜಾ’ (ಉಪವಾಸ ವೃತ) ಆಚರಿಸುವುದರಿಂದ ಪಾಪಗಳು ಸುಟ್ಟು ಬೂದಿಯಾಗುತ್ತವೆಂಬ ಭಾವನೆಯಿಂದಲೂ ಈ ಹೆಸರು ಬಂದಿರಬೇಕು. ರಮ್‌ಜಾನ್ ತಿಂಗಳ ಉಪವಾಸ ಮುಗಿದ ಅನಂತರ ಷವ್ವಾಲ್ ತಿಂಗಳಿನ ಮೊದಲನೆಯ ದಿನಾಂಕದಂದು ಈ ಹಬ್ಬ ಬರುವುದರಿಂದ ಇದಕ್ಕೆ ‘ರಮ್‌ಜಾನ್’ ಎಂದೂ ಕರೆಯುತ್ತಾರೆ ‘ಈದ್’ ಎಂದರೆ ಹಬ್ಬ ಉಲ್‌ಫಿತರೆ ಎಂದರೆ ಉಪವಾಸ ಮುಗಿಸುವದು. ಅಥವಾ ಉಪವಾಸ ಮುಗಿಸುವವನು ಎಂದರ್ಥ. ಈ ಕಾರಣದಿಂದ ರಮಾಜಾನ್ ಹಬ್ಬವನ್ನು ‘ಈದುಲ್ ಫಿತರ್’ ಎಂದೂ ಕರೆಯುವುದುಂಟು. ಇದಲ್ಲದೆ ‘ಈ ದೇ ಸಗೀರ್(ಸಣ್ಣ ಹಬ್ಬ), ಈ ದುಸ್ಸದಕಾ’ (ತಲೆಗಂದಾಯ ಎಂಬ ದಾನದ ಹಬ್ಬ) ಎಂಬ ಹೆಸರುಗಳು ಈ ಹಬ್ಬಕ್ಕಿವೆ.

[1] ಕುರಾನೇ ಷರೀಫ (ಸೂರೇ ಅಲ್ ಬಕರ್: ೧೮೩ ಮತ್ತು ಹದೀಸುಗಳಲ್ಲಿ ಈ ಹಬ್ಬದ ಬಗೆಗೆ ವಿವರಣೆಯಿದೆ.

ರೋಜಾ(ಉಪವಾಸ ವೃತ)

ರೋಜಾ ಎಂದರೆ ಉಪವಾಸ ವೃತ. ಇಸ್ಲಾಂ ಧರ್ಮದ ಪಂಚ ಮೂಲಭೂತ ಕರ್ತವ್ಯಗಳಲ್ಲಿ ಇದೂ ಒಂದು. ಉಪವಾಸ ವೃತವು ಇಸ್ಲಾಮೇತರ ಧರ್ಮಗಳಲ್ಲಿಯೂ ರೂಢಿಯಲ್ಲಿದೆ. ಆದರೆ ಇಡೀ ತಿಂಗಳು ರೋಜಾ ಇರುವುದು ಇಸ್ಲಾಂ ಧರ್ಮದ ವೈಶಿಷ್ಟ್ಯ. ದುಃಖದಿಂದ ಪಾರಾಗಲು ಅಲ್ಲಾಹನ ಪ್ರೇಮ ಸಂಪಾದಿಸಲು ರೋಜಾ ಪವಿತ್ರಮಾರ್ಗವೆಂದು ಮುಸ್ಲಿಂ ಬಾಂಧವರು ನಂಬುತ್ತಾರೆ.

ಮೂಸಾ ಪೈಗಂಬರರ ಮೇಲೆ ತೌರೇತ್, ದಾವೂದ್ ಪೈಗಂಬರರ ಮೇಲೆ ಜಬೂರ್, ಇಸಾ ಪೈಗಂಬರರ ಮೇಲೆ ಇಂಜೀಲ್ ಎಂಬ ದೈವೀಗ್ರಂಥಗಳು ಅವತೀರ್ಣವಾದಂತೆ ಮಹ್ಮದ ಪೈಗಂಬರ (ಸೊ.ಅ.)ರ ಮೇಲೆ ಸತತ ನಾಲ್ವತ್ತು ವರ್ಷ ಪವಿತ್ರ ಕುರಾನ್‌ದ ಭಾಗಗಳು ಅವತೀರ್ಣವಾದವು ಆದರೆ ಅವು ಆರಂಭವಾದುದು ಮತ್ತು ಮುಕ್ತಾಯವಾದುದು ರಮ್‌ಜಾನ್ ತಿಂಗಳಿನಲ್ಲಿ. ಆದುದರಿಂದ ಮುಸ್ಲೀಮರಿಗೆ ಇದು ಪವಿತ್ರ ಮತ್ತು ಮಹತ್ವದ ತಿಂಗಳು ಆಗಿದೆ. ಈ ತಿಂಗಳಲ್ಲಿ ಪ್ರತಿಯೊಬ್ಬ ರೋಜಾ ಉಪವಾಸ ವೃತ ಇದ್ದು ಜಕಾತ್ ಆಸ್ತಿಕರ ನೀಡಬೇಕೆಂದು ಇಸ್ಲಾಂ ಧರ್ಮದಲ್ಲಿ ಹೇಳನಾಗಿದೆ. ಏಕೆಂದರೆ ಪೂರ್ವದ ಪೈಗಂಬರರು ತಮ್ಮ ಜನಾಂಗದವರಿಗೆ ಪ್ರತಿವರ್ಷ ರಮ್‌ಜಾನ್ ತಿಂಗಳಲ್ಲಿ ಕಡ್ಡಾಯವಾಗಿ ಉಪವಾಸ ವೃತ ಕೈಗೊಳ್ಳಲು ಬೋಧಿಸಿದ್ದರು.

ಪ್ರತಿದಿನ ಬೆಳಿಗ್ಗೆ ‘ಫಜ್ರ’ ನಮಾಜಿನ ವೇಳೆಗಿಂತ ಮೊದಲು ಹಿತ-ಮಿತ ಆಹಾರ ಸೇವಿಸಿ ‘ಸಹರಿ’ (ರೋಜಾ ಆರಂಭಿಸುವುದು) ಮಾಡುತ್ತಾರೆ. ಇದಕ್ಕೆ ಅನೇಕ ನಿಯತ್ (ವಿಧಿ, ನಿಯಮ) ಇದ್ದು ಅದರಲ್ಲಿ ಒಂದು ಹೀಗಿದೆ “ನವಾಯಿತನ್ ಆರ್ ಮೊಗದಮ್ ಸೌಮ ರಮಧಾನ್ ಮನ ಫರ್ದುಲ್ಲಾ ಹಿತಾಲಾ” ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು. ಅಂದರೆ ರೋಜಾ ಸ್ವೀಕೃತಿಯಾಗುತ್ತದೆ.[2] ಅನಂತರ ಇಡೀರ್ದಿ ಆಹಾರ ನೀರು ಸ್ವೀಕರಿಸದೆ, ಸೂರ್ಯಾಸ್ತವಾದ ನಂತರ ಮಗರಿಬ್ ನಮಾಜಿನ ವೇಳೆಗೆ ಹಲ್ಲುಜ್ಜಿ ಬಾಯಿ ತೊಳೆದುಕೊಂಡು ಮನೆಯಲ್ಲಿ ಅಥವಾ ಮಸೀದೆಯಲ್ಲಿ ಕುಳಿತು ‘ರೋಜಾ’ ಬಿಡಬೇಕು. ಅದು ಹೀಗೆ:

“ಅಲ್ಲಾಹೂಮಾ ಲಕಾಸಂತೋ ವ ಬಿಕಾಮಂತೊ ವ ಅಲಾಯಿಕಾ ತವಕ್ಕಿಲ್ ತೋ ವ ಅಲಾರಿಸ್‌ತಿಕಾ ಆಪ್ತರತೋ ವತ್ ಖಬ್ಬಲ್ ಮಿನ್ನಿ” (ಅಲ್ಲಾಹ, ನಾನು ನಿನ್ನ ಸಲುವಾಗಿ ಉಪವಾಸ ವೃತ ಕೈಗೊಂಡಿದ್ದೆನು ಮತ್ತು ನಿನ್ನ ಆಜ್ಞೆಯ ಮೇರೆಗೆ ನಾನು ಉಪವಾಸ ವೃತ ಬಿಡುತ್ತೇನೆ) ಎಂದು ಹೇಳಿ ಖರ್ಜೂರ ಅಥವಾ ಬಾಳೆಯ ಹಣ್ಣು (ಅಥವಾ ಸ್ವಲ್ಪ ಆಹಾರ) ಸೇವಿಸಿ ರೋಜಾ ಬಿಡುತ್ತಾರೆ. ‘ಆಜಾನ್’ (ಪ್ರಾರ್ಥನೆಯ ಕರೆ) ಆದೊಡನೆ ಮಸೀದೆಯಲ್ಲಿ ಜಮಾ ಅತ್‌ನೊಂದಿಗೆ ‘ಮಗರಿಬ್’ ನಮಾಜು ಮಾಡಿ ಮನೆಗೆ ಮರಳುತ್ತಾರೆ. ಆಮೇಲೆ ಊಟ ಮಾಡುತ್ತಾರೆ.

ರಾತ್ರಿ ಒಂಬತ್ತು ಗಂಟೆಯ ಹೊತ್ತಿಗೆ ‘ತರಾವಿ’ ಎಂಬ ವಿಶಿಷ್ಟ ನಮಾಜು ಸಲ್ಲಿಸುತ್ತಾರೆ. ಈ ನಮಾಜನ್ನು ‘ರಮ್‌ಜಾನ್’ ತಿಂಗಳಿನಲ್ಲಿ ಮಾತ್ರ ಮಾಡಲಾಗುತ್ತದೆ. ‘ಇಪಾಕಿ’ ನಮಾಜಿನ ಮೊದಲು ೪ ರಕಾತ್ ಸುನ್ನತ್ ಗೈರಮೊವಕ್ಕಿದಾ ಓದಿ, ಜಮಾಅತ್‌ನೊಂದಿಗೆ ೪ ರಕಾತ್ ಫರ್ಜ ಓದುತ್ತಾರೆ. ಅನಂತರ ವ್ಯಕ್ತಿಗತವಾಗಿ ೨ ರಕಾತ್ ಸುನ್ನತ್ ೨ ರಕಾತ್ ನಫೀಲ್ ಹೇಳುತ್ತಾರೆ. ಆಮೇಲೆ ಮತ್ತು ಜಮಾಅತ್ ನೊಂದಿಗೆ ೨೦ ರಕಾತ್ ಸುನ್ನತ್ ೩ ರಕಾತ್ ವಾಜಿವಿಲ್ ವಿತರ ಮಾಡುತ್ತಾರೆ. ಇಷ್ಟಾದ ಮೇಲೆ ಮತ್ತೆ ವ್ಯಕ್ತಿಗತವಾಗಿ ೨ ರಕಾತ್ ನಫೀಲ್ ನಮಾಜ ಮಾಡಿ ಮುಗಿಸುತ್ತಾರೆ. ಆದರೆ ನಮಾಜಿನಲ್ಲಿ ಹೆಚ್ಚು ಆಸಕ್ತಿಯುಳ್ಳವರು ಬೆಳಗಿನ ಐದು ಗಂಟೆಯವರೆಗೂ ನಫೀಲ್ ನಮಾಜ ಓದುತ್ತಾರೆ.

ಹನ್ನೆರಡು ವರ್ಷ ಮೇಲ್ಪಟ್ಟ ಎಲ್ಲ ಸ್ತ್ರೀ ಪುರುಷರಿಗೆ ರೋಜಾ ಕಡ್ಡಾಯವಾಗಿದೆ. ಆದರೆ ಏಳುವರ್ಷದ ಕೆಳಗಿನ ಚಿಕ್ಕಮಕ್ಕಳು, ರೋಗಿಗಳು, ಅಂಗವಿಕಲರು, ಗರ್ಭಿಣಿ ಸ್ತ್ರೀಯರು ಬಾಣಂತಿಯರು, ಯಾತ್ರಿಕರು, ರೋಜಾ ಇರಲೇಬೇಕೆಂಬ ನಿಯಮವಿಲ್ಲ. ವಿಶೇಷವೆಂದರೆ ರೋಗಿಗಳು ರೋಗವಾಸಿಯಾದ ಮೇಲೆ ಯಾತ್ರಿಕರು ಯಾತ್ರೆ ಮುಗಿದ ಮೇಲೆ ಒಂದು ತಿಂಗಳು ರೋಜಾ ಇರಬಹುದಾಗಿದೆ.

ರೋಜಾ ಇರುವವರು ಸುಳ್ಳು ಹೇಳಿದರೆ, ಕಳ್ಳತನ ಮಾಡಿದರೆ, ಕೋಪಗೊಂಡರೆ, ಮೋಸಮಾಡಿದರೆ ಅವರ ಉಪವಾಸವೃತ ಭಂಗವಾದಂತೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲ ರಮ್‌ಜಾನ್ ತಿಂಗಳಿನಲ್ಲಿ ಮಾದಕ ವಸ್ತುಗಳಾದ ಸೆರೆ, ಸಿಂಧಿ, ಗಾಂಜಾ, ಅಫೀಮು, ಬ್ರಾಂದಿ, ವ್ಹಿಸ್ಕಿ, ರಮ್ಮು ಮೊದಲಾದವುಗಳನ್ನು ಸೇವನೆಮಾಡುವುದು, ಸ್ತ್ರೀ ಸುಖ ಹೊಂದುವುದು ಮಹಾದೋಷವೆಂಬ ಭಾವನೆಯಿದೆ.[3] ಆದುದರಿಂದ ರೋಜಾ ಇರುವವರು ಈ ಎಲ್ಲ ವ್ಯಕ್ತಿಗತ ದೋಷಗಳಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಚಾರಿತ್ರಿಕ ಶುದ್ಧಿಗೆ ಮಹತ್ವಕೊಡಬೇಕೆಂದು ತಿಳಿಸಲಾಗಿದೆ.

ಶಬ್ಬೇಕದ್ರ :

ರಮ್‌ಜಾನ್ ತಿಂಗಳಿನ ೨೧, ೨೩, ೨೫, ೨೭, ೨೯ ನೆಯ ದಿನಗಳನ್ನು ಪವಿತ್ತವೆಂದು ಭಾವಿಸಿ ಮುಸ್ಲೀಮರು ಆ ರಾತ್ರಿಗಳನ್ನು ಅಲ್ಲಾಹನ ಚಿಂತನೆ ಮತ್ತು ಧ್ಯಾನಗಳಲ್ಲಿ ಕಳೆಯುತ್ತಾರೆ. ಆದರೆ ೨೬ನೇ ರಾತ್ರಿಗೆ ವಿಶೇಷ ಮಹತ್ವ ನೀಡಲಾಗಿದೆ. ಇದಕ್ಕೆ ‘ಶಬ್ಬೇ ಕದ್ರ’ ಅಥವಾ ‘ಲೈಲತುಲ್ ಕದ್ರ’ ಎಂದು ಕರೆಯುತ್ತಾರೆ. ಶಬ್ ಎಂದರೆ ಪಾರ್ಶಿಯಲ್ಲಿ ರಾತ್ರಿ ಎಂದು ಕದ್ರ ಎಂದರೆ ಭಾಗ್ಯನಿರ್ಣಯವೆಂದು ಅರ್ಥ. ಆದರೆ ಭಾರತದಲ್ಲಿ ‘ಶಬ್ಬೆ ಕದ್ರ’ ಎಂಬ ಪದವು ಹೆಚ್ಚು ರೂಢಿಯಲ್ಲಿದೆ.[4] ಮೂಲತಃ ಅರಬರಿಗೆ ಸಂಬಂಧ ಪಟ್ಟ ಈ ಉತ್ಸವ ಕುರಾನೇ ಕರೀಮ್ ಮತ್ತು ಹದೀಸುಗಳಲ್ಲಿ ಉಲ್ಲೇಖಗೊಂಡಿದೆ. ‘ಶಬ್ಬೇ ಕದ್ರ’ ಅನ್ನು ರಮ್‌ಜಾನ್ ತಿಂಗಳ ಕೊನೆಯ ಹತ್ತು ದಿನಗಳಂದು ವಿಶ್ವದ ಎಲ್ಲ ಮುಸ್ಲೀಮರು ಆಚರಿಸುತ್ತಾರೆ. ಆದರೆ ಭಾರತದಲ್ಲಿ ೨೬ನೆಯ ರಾತ್ರಿಗೆ ಹೆಚ್ಚು ಮಹತ್ವನೀಡಿದ್ದಾರೆ. ಏಕೆಂದರೆ ಆ ರಾತ್ರಿ ಹ| ಮಹ್ಮದ ಪೈಗಂಬರರಿಗೆ ‘ಕುರಾನೇ ಷರೀಫ್’ ಅವತೀರ್ಣಿಸಲು ಆರಂಭವಾಗಿತ್ತೆಂದು ನಂಬಿಕೆ. ಆದುದರಿಂದ ಎಲ್ಲ ರಾತ್ರಿಗಳಿಗಿಂತ ಶ್ರೇಷ್ಠವಾದ ರಾತ್ರಿ ಇದೆಂದು ಮುಸ್ಲೀಮ ಬಾಂಧವರು ನಂಬುತ್ತಾರೆ. ಶಾಂತಿ ಮತ್ತು ಕ್ಷೇಮ ತರುವ ಪವಿತ್ರ ರಾತ್ರಿಯಾದ ಅಂದು ಅಲ್ಲಾಹನು ಮುಂದಿನ ವರ್ಷದ ಅಂದಾಜು ಪಟ್ಟಿಯನ್ನು ತಯಾರಿಸಿ ಜನರ ಭಾಗ್ಯ ನಿರ್ಣಯ ಮಾಡುತ್ತಾನೆಂದು ದೇವದೂತ ಜಿಬ್ರಾಯಿಲ್‌ರು ಭೂಲೋಕಕ್ಕೆ ಇಳಿಯುವರೆಂದು ನಂಬುತ್ತಾರೆ.[5] ಅಂತೆಯೇ ಹಲ್ಲಾಹನ ಧ್ಯಾನದಲ್ಲಿ ಆ ರಾತ್ರಿಯನ್ನು ಕಳೆಯುವ ಪದ್ಧತಿ ಇಂದಿಗೂ ಮುಸ್ಲೀಮರಲ್ಲಿ ಪ್ರಚಲಿತವಿದೆ.

ರಮ್‌ಜಾನ್ ತಿಂಗಳ ೨೬ನೆಯ ರಾತ್ರಿ ಸುಮಾರು ಒಂಬತ್ತುವರೆ ಗಂಟೆಗೆ ‘ಆಜಾನ್’ ನೀಡಲಾಗುತ್ತದೆ. ಹತ್ತು ಗಂಟೆಯ ಹೊತ್ತಿಗೆ ಮಸೀದೆಯಲ್ಲಿ ಜಮಾ ಅತ್ ಕೂಡುತ್ತದೆ. ಜಮಾ ಅತ್ ಸೇರುವುದಕ್ಕೆ ಮೊದಲು ೪ ರಕಾತ್ ಸುನ್ನತ್ ಗೈರ ಮೊವಕ್ಕಿದಾ ಓದುತ್ತಾರೆ. ಅನಂತರ ಜಮಾ ಅತ್ ನೊಂದಿಗೆ ೪ ರಕಾತ್ ಫರ್ಜ ನಮಾಜ ಮಾಡುತ್ತಾರೆ. ಆಮೇಲೆ ವ್ಯಕ್ತಿಗತವಾಗಿ ೨ ರಕಾತ್ ಸುನ್ನತ್ ೨ ರಕಾತ್ ನಫೀಲ್ ನಮಾಜನ್ನು ಮಾಡುತ್ತಾರೆ. ಅನಂತರ ಮತ್ತೆ ಜಮಾಅತ್ ನೊಂದಿಗೆ ೨೦ ರಕಾತ್ ಸುನ್ನತ್ ೩ ರಕಾತ್‌ವಾಜಿವಿಲ್ ವಿತರ ನಮಾಜು ಸಲ್ಲಿಸುತ್ತಾರೆ. ವ್ಯಕ್ತಿಗತವಾಗಿ ೩ ರಕಾತ್ ನಫೀತ್ ನಮಾಜು ಮಾಡಿ ಮುಗಿಸುತ್ತಾರೆ. ಪೇಶ ಇಮಾಮರು ಮತ್ತು ಮುಸ್ಲಿಂ ಮುಖಂಡರು ಶಬ್ಬೇ ಕದ್ರ ಕುರಿತು ರಮ್‌ಜಾನ್ ತಿಂಗಳ ಮಹತ್ವ ಕುರಿತು, ರೋಜಾದ ಮಹಿಮೆ ಕುರಿತು ಸವಿವರವಾಗಿ ವಿವರಿಸುತ್ತಾರೆ. ಅನಂತರ ಮಿಠಾಯಿ ಮತ್ತು ಅಜಿವಾನ್ ವಿತರಿಸುತ್ತಾರೆ. ಆಮೇಲೆ ಕೆಲವರು ಮತ್ತೆ ಮಸೀದೆಯಲ್ಲಿ ತಹಜುದ್ ನಮಾಜು ಹಾಗು ನಫೀಲ ನಮಾಜು ಮಾಡುವುದುಂಟು. ಹೀಗೆ ಇಡೀ ರಾತ್ರಿ ನಮಾಜು ಮಾಡುವುದರಲ್ಲಿ ಕಳೆದು ಬೆಳಗಿನ ಐದು ಗಂಟೆಯ ಹೊತ್ತಿಗೆ ‘ಸಹರಿ’ ಮಾಡಿ ಪುನಃ ಫಜ್ರ ನಮಾಜು ಮಾಡುತ್ತಾರೆ.

ಜಕಾತ್ ಫಿತರಾಸದಖಾ:

ಪ್ರತಿವರ್ಷ ರಮ್‌ಜಾನ್ ತಿಂಗಳಿನಲ್ಲಿ ಮುಸ್ಲಿಮರ ಜಕಾತ್ (ಆಸ್ತಿ ಆದಾಯಕರ) ಕೊಡಬೇಕೆಂಬ ನಿಯಮವಿದೆ. ಇದರ ಉದ್ದೇಶ ಸಾಮಾಜಿಕ ಸೇವೆ ಮತ್ತು ದೀನ ದರಿದ್ರರಿಗೆ ಆಹಾರವನ್ನಿತ್ತು ಉಪಕರಿಸುವುದೇ ಆಗಿದೆ. ವಾರ್ಷಿಕ ಉಳಿತಾಯದ 2½% ಅಷ್ಟನ್ನು ಬಡವರ ಹಿತಕ್ಕಾಗಿ ಪ್ರತಿಯೊಬ್ಬ ಮುಸ್ಲೀಮನು ಕೊಡಬೇಕು. ಇದರ ಹೊರತಾಗಿ ‘ಸದಖಾ’ (ತಲೆಗಂದಾಯ ಎಂಬದಾನ) ಮತ್ತು ‘ಫಿತಾರಾ’ (ಜೀವದ ತೆರಿಗೆ) ಎಂಬ ದಾನವನ್ನು ರಮ್‌ಜಾನ್ ತಿಂಗಳ ೨೭ನೆಯ ದಿನದಿಂದ ಷವ್ವಾಲ್ ತಿಂಗಳಿನ ಆರಂಭದ ದಿನದವರೆಗೆ ಅವಿರತವಾಗಿ ನೀಡುತ್ತಾರೆ. ಇವುಗಳಿಂದ ಸಮಾಜದಲ್ಲಿಯ ಆರ್ಥಿಕ ವಿಷಮತೆ ಪರಿಹಾರವಾಗುವುದಲ್ಲದೆ ಮಾನವೀಯ ಪ್ರೀತ್ಯಾದರಗಳು ಉದಿಸುತ್ತವೆ.[6] ಹೀಗೆ ತಿಂಗಳು ಪೂರ್ತಿ ಉಪವಾಸ ವೃತ ಕೈಕೊಳ್ಳುವುದರಿಂದ, ನಮಾಜು ಸಲ್ಲಿಸುವುದರಿಂದ, ಜಕಾತ್ ನೀಡುವುದರಿಂದ ಮನಶ್ಶುದ್ಧಿ, ಆತ್ಮಶುದ್ಧಿಯಾಗಿ ಅಲ್ಲಾಹನ ಕೃಪಾಕಟಾಕ್ಷ ತಮಗೆ ದೊರೆಯಬಹುದೆಂಬ ಬಲವಾದ ನಂಬುಗೆ ಮುಸ್ಲೀಮರಲ್ಲಿದೆ. ಅಂತೆಯೇ ಇಸ್ಲಾಂಧರ್ಮದ ಪಂಚಸೂತ್ರಗಳಲ್ಲಿ ‘ನಮಾಜ, ರೋಜಾ, ಜಕಾತ್’ ಕಡ್ಡಾಯವಾಗಿವೆ.

ಈದುಲ್ ಫಿತರ್ (ಈದ್) ಆಚರಣೆ:

ರಮ್‌ಜಾನ್ ತಿಂಗಳ ಮೂವತ್ತು ದಿವಸ (ಒಮ್ಮೊಮ್ಮೆ ೨೯ ದಿವಸ)ಗಳು ಮುಕ್ತಾಯವಾದ ಅನಂತರ ಷವ್ವಾಲ್ ತಿಂಗಳಿನ ಚಂದ್ರದರ್ಶನವಾದ ಮರುದಿನ ‘ಈದುಲ್ ಫಿತರ್’), ಹಬ್ಬ ಆಚರಿಸಲಾಗುತ್ತದೆ. ಮನೆಯಲ್ಲಿ ಕ್ಷೀರ‍್ಕುರುಮಾ (ಸಿಹಿ ಸೇವಗೆ ಅಡಿಗೆ) ಅನ್ನ ಬಿರಿಯಾನಿ ಅಡಿಗೆ ತಯಾರಿಸುತ್ತಾರೆ. ಮತ್ತು ಬಂಧುಮಿತ್ರರಿಗೆ ಆಮಂತ್ರಣ ನೀಡುತ್ತಾರೆ. ಹಬ್ಬದ ದಿನ ಮುಂಜಾನೆ ಮುಸ್ಲೀಮರು (ಸ್ತ್ರೀ ಪುರುಷರು ಮಕ್ಕಳು) ಸ್ನಾನಮಾಡಿ ಹೊಸ ಬಟ್ಟೆ ಇಲ್ಲವೆ ಶುಭ್ರಬಟ್ಟೆ ಧರಿಸಿ ಕಣ್ಣಿಗೆ ಸುರಮಾ ಲೇಪಿಸಿಕೊಂಡು ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಸಡಗರಸಂಭ್ರಮ ಸಂತೋಷದಿಂದ ಜಮಾಅತ್‌ನೊಂದಿಗೆ ಕೂಡಿಕೊಂಡು ತಕಬೀರ ಹೇಳುತ್ತಾ ‘ಈದಗಾ’ ಮೈದಾನದಲ್ಲಿ ನೆರೆಯುತ್ತಾರೆ. ಅಲ್ಲಿ ಸುಮಾರು ಹತ್ತು ಗಂಟೆಯ ಹೊತ್ತಿಗೆ ಮುಸ್ಲಿಂ ಮುಖಂಡರು, ಧಾರ್ಮಿಕ ಶ್ರದ್ಧೆಯುಳ್ಳವರು ರಮ್‌ಜಾನ್ ತಿಂಗಳ ಮಹತ್ವ ಹಾಗೂ ನಮಾಜು ರೋಜಾಗಳ ಆವಶ್ಯಕತೆ; ಫಿತರಾ-ಸದಖಾ-ಜಕಾತ್‌ಗಳ ವೈಶಿಷ್ಟ್ಯ ಕುರಿತು ಬಯಾನ್ ಮಾಡುತ್ತಾರೆ. ‘ಈದುಲ್ ಫಿತರ್’ ನಮಾಜು ಸಲ್ಲಿಸುವ ರೀತಿ ಕ್ರಮದ ಬಗೆಗೆ ವಿವರಣೆ ನೀಡಲಾಗುತ್ತದೆ. ಅನಂತರ ಮುಸ್ಲಿಂ ಸಹೋದರರು ಭುಜಕ್ಕೆ ಭುಜ ಹಚ್ಚಿ ಭಕ್ತಿಗೌರವದಿಂದ ಸಾಲಾಗಿ ನಿಂತು ನಮಾಜ (ಪ್ರಾರ್ಥನೆ) ಸಲ್ಲಿಸಲು ಸಿದ್ಧರಾಗುತ್ತಾರೆ.

“ಈದುಲ್ ಫೀತರ್ ಕಿ ದೋ ರಕಾತ್ ವಾಡೀಬ್ ನಮಾಜ ಛೇ ಜಾಯದ್ ತಕಬೀರ ಕೆ ಸಾಥ ಪಡತಾ ಹೂಂ ಮೈ ವಾಸ್ತೆ ಅಲ್ಲಾಹಕೆ ಮೂಹ ತರಫ್ ಕಾಬೇ ಷರೀಫ್‌ಕೆ ಅಲ್ಲಾಹೂ ಅಕಬರ್” ಎಂದು ಹೇಳಿ ಪೇಶ ಇಮಾಮರ ಜೊತೆ ನಮಾಜು ಮಾಡುತ್ತಾರೆ. ಭಕ್ತಿ ಭಾವದಿಂದ ದೀನರಾಗಿ ವ್ಯಕ್ತಿಗತವಾಗಿ ‘ದುಆ’ (ಪ್ರಾರ್ಥನೆಯ ಬೇಡಿಕೆ) ಬೇಡಿಕೊಳ್ಳುತ್ತಾರೆ. ದುಆದಲ್ಲಿ ವಿಶೇಷವಾಗಿ ರೋಗ ರುಜಿನಗಳು ತಮಗೆ ಬಾರದಿರಲೆಂದು, ಸಮಕ್ಕೆ ಸರಿಯಾಗಿ ಮಳೆಯಾಗಿ ಬೆಳೆ ಹುಲುಸಾಗಿ ಬರಲೆಂದು, ಸಾಲದ ಹೊರೆ ತಪ್ಪಲೆಂದು, ಬಂಧು ಬಾಂಧವರು ಸುಖವಾಗಿರಲೆಂದು ಹಾರೈಸಿಕೊಳ್ಳುವುದುಂಟು. ಕೊನೆಗೆ ಪೇಶ ಇಮಾಮರು (ಅಥವಾ ಹಾಫೀಜ ಸಾಹೇಬರು) ಸಾರ್ವಜನಿಕ ಸಮಸ್ಯ ನಿವಾರಣೆಯಾಗಲೆಂದು ಅಲ್ಲಾಹನಲ್ಲಿ ‘ದುಆ’ ಬೇಡಲು ನೆರೆದ ಜನ ಸಮೂಹ ‘ಆಮೀನ್’ ಎಂದು ಹೇಳುತ್ತಾರೆ. ಹೀಗೆ ಈ ಎಲ್ಲ ವಿಧಿ ಕ್ರಿಯೆಗಳು ಮುಗಿದ ಮೇಲೆ ಹರ್ಷೋದ್ಗಾರದಿಂದ ಒಬ್ಬರಿಗೊಬ್ಬರು ಕೈಕೂಡಿಸಿ ಭಾತೃ ವಾತ್ಸಲ್ಯದಿಂದ ಅಪ್ಪಿ ಆಲಂಗಿಸುವರು ‘ಈದ್ ಮುಬಾರಕ್’ ಎನ್ನುತ್ತ ಶುಭ ಕೋರುವರು.

ಈ ಸಂದರ್ಭದಲ್ಲಿ ಬಡವ-ಸಿರಿವಂತ, ಶತ್ರು-ಮಿತ್ರ ಪರಿಚಿತ-ಅಪರಿಚಿತ ಎಂಬ ಕ್ಷುಲ್ಲಕ ಭಾವಗಳು ಮೂಡದೇ ನಾವೆಲ್ಲರೂ ಸಹೋದರರು ಮಾನವ ಕುಲ ಒಂದೇ ಎಂಬ ಭಾವನೆ ಉಂಟಾಗದಿರದು.

ಭಾರತ, ಪಾಕಿಸ್ತಾನ, ಬರ್ಮಾ ದೇಶಗಳಲ್ಲಿ ಈ ಹಬ್ಬದಂದು ಮನೆಯಲ್ಲಿ ಕ್ಷೀರ್ ಕುರುಮಾ ಎಂಬ ಸಿಹಿ ಸೇವಗೆಯ ಪಾಯಸ ಮಾಡಿ ಮತ ಬೇಧವಿಲ್ಲದೆ ಬಂಧುಮಿತ್ರರಿಗೆ ಔತಣ ನೀಡಿ ಆಮಂತ್ರಿಸಿ ಊಟ ಮಾಡಿಸಿ ತೃಪ್ತಿಪಡಿಸುತ್ತಾರೆ. ಅಪ್ಪಿ ಆಲಂಗಿಸಿ ಶುಭಕೋರುತ್ತಾರೆ.

ರೋಜಾದ ಮಹತ್ವ:

ರೋಜಾ ಎಂಬುದು ಆಧ್ಯಾತ್ಮಿಕ ಉನ್ನತಿಗೆ ಚಾರಿತ್ರಿಕ ಪ್ರಗತಿಗೆ, ಆರೋಗ್ಯ ವರ್ಧನೆಗೆ ಮಹತ್ವದ ಸಾಧನವೆಂದು ನಂಬಲಾಗಿದೆ ತಿಂಗಳು ಪೂರ್ತಿ ಯಾರು ಉಪವಾಸ ಕೈಗೊಳ್ಳುವರೋ ಅಂಥವರ ಸಕಲ ಪಾಪಗಳು ಕ್ಷಮೆಯಾಗುತ್ತವೆಂದು ಹ| ಮಹ್ಮದ ಪೈಗಂಬರ (ಸೂ.ಅ.)ರ ಅಭಿಪ್ರಾಯವಾಗಿತ್ತು. ರೋಜಾವೃತವು ಪಾಪ ದುಕ್ಷ್ಕೃತ್ಯಗಳನ್ನು ತಡೆಯುವದಲ್ಲದೆ ಉದ್ವೇಗಾದಿ ಭಾವಗಳನ್ನು ಕೆರಳಿಸುವುದಿಲ್ಲವೆಂದು ಆಂಗ್ಲ ಪಂಡಿತರೊಬ್ಬರ ಅನಿಸಿಕೆ. ಶ್ರದ್ಧೆ ಭಕ್ತಿಯಿಂದ ಕೈಗೊಳ್ಳುವ ಉಪವಾಸದಿಂದ ಮನುಷ್ಯನಲ್ಲಿ ಮಾನವಿಯತೆ ಜಾಗ್ರತವಾಗುತ್ತದೆ. ಹಾಗೂ ರೋಜಾ ಆಚರಣೆಯಿಂದ ಸಿಹಿ ಮೂತ್ತ, ಕೊಬ್ಬು, ಕಫೆ, ಕರುಳಿನ ರೋಗಗಳು ನಿವಾರಣೆಯಾಗುತ್ತವೆಂದು ಜನಪದ ವೈದ್ಯರ ಮನವರಿಕೆಯಾಗಿದೆ.[7]

ರಮ್‌ಜಾನ್ ತಿಂಗಳ ಮಹತ್ವ :

ರಮ್‌ಜಾನ್ ತಿಂಗಳ ಆರಂಭವಾದೊಡನೆ ನರಕದ ಬಾಗಿಲುಗಳನ್ನು ಮುಚ್ಚಿ ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ. ಸ್ವರ್ಗದ ಎಂಟು ಬಾಗಿಲುಗಳಲ್ಲಿ ‘ರಿಯಾನಾ’ ಎಂಬ ಬಾಗಿಲು ‘ರೋಜದಾರ’ರ ಸಲುವಾಗಿ ತೆಗೆದಿರುತ್ತದೆಯಂತೆ.

ರಮ್‌ಜಾನ್ ತಿಂಗಳಿನಲ್ಲಿ ನಮಾಜ, ರೋಜ, ಕುರಾನ್ ಪಠಣ, ದರೂದೆ ಷರೀಫ್ ಓದುವುದರಿಂದ ‘ಹೂರ್ ಪರಿ’ಎಂಬ ಸ್ವರ್ಗದ ಪಕ್ಷಿ ಅವರನ್ನು ಸ್ವರ್ಗಕ್ಕೆ ತಲುಪಿಸಲು ದಾರಿ ಕಾಯುತ್ತಿರುತ್ತದೆಯಂತೆ. ರಮ್‌ಜಾನ್ ತಿಂಗಳಿನಲ್ಲಿ ತನ್ನನ್ನು ಪ್ರಾರ್ಥಿಸುವವರಿಗೆ ಅಲ್ಲಾಹನು ಸುಪ್ರೀತಿಯಿಂದ ಸಾಕಷ್ಟು ಸುಖಶಾಂತಿ ಸಮೃದ್ಧಿ ನೀಡುತ್ತಾನೆಂದು ಮುಸ್ಲಿಂ ಬಾಂಧವರ ಅಭಿಪ್ರಾಯ. ಅಲ್ಲದೆ ಈ ತಿಂಗಳಲ್ಲಿ ಮಾಡಿದ ಒಂದು ಪುಣ್ಯದ ಕೆಲಸಕ್ಕೆ ಪ್ರತಿಯಾಗಿ ಎಪ್ಪತ್ತರಷ್ಟು ಪುಣ್ಯ ಸ್ವರ್ಗದಲ್ಲಿ ದೊರೆಯುತ್ತದೆಯೆಂಬ ನಂಬಿಗೆಯಿದೆ. ಹಾಗೂ ತಪ್ಪುಗಳಿಂದ ದೂರ ಇರುವ, ನರಕದ ದಳ್ಳುರಿಯಿಂದ ರಕ್ಷಿಸುವ, ಏಕೈಕ ಉಪಾಯ ರೋಜಾ ಆಗಿದೆಯೆಂದು ನಿಷ್ಠಾವಂತ ಮುಸ್ಲೀಮರ ತಿಳುವಳಿಕೆ.[8][1] ಡಾ. ಹಿರಣ್ಮಯ (ಅನು) ಮುಸ್ಲಿಂ ಉತ್ಸವ ಮತ್ತು ಸಂಸ್ಕಾರಗಳು (ಮೈ.ವಿ.ವಿ.ಮೈ ೧೯೭೭)

[2] ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ೨೮.೪.೧೯೯೧ ನಿಮ್ಮ ಪತ್ರ ಪುಟ.೭

[3] ಮಾದಕ ವಸ್ತು ಸೇವನೆ ರಮ್‌ಜಾನ್ ತಿಂಗಳಿನಲ್ಲಿ ಮಾತ್ರವಲ್ಲಾ ಇಸ್ಲಾಂ ಧರ್ಮದಲ್ಲಿ ಯಾವತ್ತೂ ನಿಸೆದ್ಧ

[4] ಡಾ. ಹೀರಣ್ಮಯ (ಅನು) ಮುಸ್ಲಿಂ ಉತ್ಸವ ಮತ್ತು ಸಂಸ್ಕಾರಗಳು (ಮೈ.ವಿ.ವಿ.ಮೈ ೧೯೭೧) ಪುಟ ೨೩

[5] ಅದೇ ಪುಟ ೧೦ ಇಪಾಕಿ ನಮಾಜ ಎನ್ನುತ್ತಾರೆ ತರಾವಿಹ ನಮಾಜೆಂದು ಗುರುತಿಸುತ್ತಾರೆ.

[6] ಪ್ರೊ: ಎ.ಎ.ಖತೀಬ್ ಇಸ್ಲಾಂಧರ್ಮ (ನೆಹರು ಕಾಲೇಜ ಮಿಸಲನಿ ೧೯೮೩೮೪ ಪುಟ : ೨೫.

[7] ಪ್ರೊ: ಎ.ಎಸ್. ತರೀನ್ ರೋಜಾ ಸಂಯುಕ್ತ ಕರ್ನಾಟಕ ದಿನಪತ್ರಿಕೆ ೧೪.೪.೧೯೯೧ ಪುಟ ೫.

[8] ಸುಬ್ಹಾನ್ ರಜಾಖಾನ್ (ಸಂ) ಅಲಹಜರತ್ (ಉರ್ದು ಮಾಸಿಕ ಬರೇಲಿ ಪರೀಫ್ ೧೯೮೮) ಪುಟ ೧೦,೩೫.