ವೈಶಿಷ್ಟ್ಯಪೂರ್ಣ ಹೈದರಾಬಾದ್ ಮೊಹರಂ:

ಆಂಧ್ರಪ್ರದೇಶದ ರಾಜಧಾನಿಯಾದ ಹೈದರಾಬಾದ ಮಹತ್ವಪೂರ್ಣ ಐತಿಹಾಸಿಕ ಘಟನೆಗಳ ನಗರ. ಮಥರಾದ ವರ್ಣವೈವಿಧ್ಯ ಹೋಳಿ, ಕಲಕತ್ತೆಯ ದುರ್ಗಾಪೂಜೆ, ಮುಂಬಯಿಯ ಗಣೇಶೋತ್ಸವ ಮೈಸೂರಿನ ದಸರಾ ಹೆಸರಾಗಿರುವಂತೆ ಹೈದರಾಬಾದ ನಗರದ ಶೋಕಪೂರ್ಣ ಮೊಹರಂ ಆಚರಣೆ ಪ್ರಸಿದ್ಧವಾಗಿದೆ.

ಹೈದರಾಬಾದದಲ್ಲಿ ಹಿಂದು ಮುಸ್ಲಿಮರು ಸಮಪ್ರಮಾಣದಲ್ಲಿದ್ದು ಎರಡು ಧರ್ಮಗಳ ಹಬ್ಬಗಳನ್ನು ಸಾಮೂಹಿಕವಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಗೋಲ್ಕೊಂಡ ಆಳಿದ ಕುತುಬ್ ಷಾಹಿ ದೊರೆಗಳು (ಕ್ರಿ.ಶ. ೧೫೫೦ ರಿಂದ ೧೬೭೨) ಹೈದರಾಬಾದ ನಗರದಲ್ಲಿ ಅಲಂ ಇಡುವ ಪದ್ಧತಿ ಆರಂಭಿಸಿ ಮುಂದುವರಿಸಿಕೊಂಡು ಬಂದರು. ಅಲಮ್‌ಗಳ ಮುಂದೆ ಮಜಲೀಸ್ ಏರ್ಪಡಿಸಿ, ತಮ್ಮ ಬೊಕ್ಕಸದಿಂದ ಧನ ಸಹಾಯ ಮಾಡುತ್ತಿದ್ದರು. ಅಲ್ಲದೆ ಅಲಂ ಇಡುವುದಕ್ಕಾಗಿಯೇ ಕುತುಬ್‌ಷಾಹಿಗಳು ಕಟ್ಟಿಸಿದ ಆಶೂರಖಾನೆಗಳು ಇಂದಿಗೂ ಸುಸ್ಥಿತಿಯಲ್ಲಿದ್ದು ಹೈದರಾಬಾದ ನಗರದ ಸಾಂಸ್ಕೃತಿಕ ಮಹತ್ವವನ್ನು ಸಾರಿ ಹೇಳುತ್ತವೆ. ಈಗಲೂ ಮೊಹರಂ ಆಚರಣೆ ಸಮಯದಲ್ಲಿ ಹಿಂದುಮುಸ್ಲಿಮರು ಭಾವಾವೇಶದಿಂದ ಮಂಜಲೀಸ ಓದಿ ‘ಮಾತಂ’ ಮಾಡುವ ಕೇಂದ್ರಸ್ಥಳಗಳಾಗಿವೆ.

ನಗರದಲ್ಲಿ ಬಾದಷಾಹಿ ಆಶೂರಖಾನೆ, ಬೀಬಿ ಫಾತಿಮಾ ಕಾ ಅಲಾವಾ, ಬಡೇ ನಾಲಸಾಬ ಅಶೂರಖಾನೆ, ದಿವಾನದೌಡಿ ಆಶೂರಖಾನೆ, ಮಾತಂ ಕದಾ ಹುಸೇನಿ ಆಶೂರಖಾನೆ, ಹುಸೇನಿ ಅಲಾವಾ, ಸರತಾಜ ಮುಬಾರಕ ಅಲಾವಾ, ಬಾರ್ಗಾ ಆಶೂರಖಾನೆ, ಛತ್ತಾ ಬಜಾರ ಅಲಾಯಿ ಬಾರಾ ಇಮಾಮ, ನಾಲೇ ಮುಬಾರಕ ಆಶೂರಖಾನೆ, ಹುಸೇನ ಕೋಟಿ ರಂಗೇಲಿ ಕಿಡಕಿ, ಅಬ್ಬಾಸ ಅಲಿ ಆಶೂರಖಾನೆ ಮುಂತಾದವು ಪ್ರಮುಖವಾಗಿವೆ.

ಮೊಹರಂ ಆಚರಣೆ :

ಬಕ್ರೀದ ತಿಂಗಳ ಕೊನೆಯ ದಿನದ ಹೊತ್ತಿಗೆ ಹೈದರಾಬಾದ ನಗರದ ಆಶೂರಖಾನೆಗಳನ್ನು ಸುಣ್ಣ ಬಣ್ಣ ಬಳೆದು ಸ್ವಚ್ಛಗೊಳಿಸಿ ಗೋಡೆಗಳ ಮೇಲೆ ಕುರಾನ್‌ನ ಆಯತಗಳಿರುವ, ಕರ್ಬಲಾ ಕಾಳಗ ನೆನಪಿಸುವ ಫೋಟೋಗಳನ್ನು ತೂಗುಹಾಕುತ್ತಾರೆ. ಮೊಹರಂ ತಿಂಗಳ ಮೊದಲನೆಯ ದಿನ ಕಪ್ಪು ಬಟ್ಟೆ ಇಲ್ಲವೆ ಬಣ್ಣದ ಬಟ್ಟೆ ಉಡಿಸಿ ಅಲಮ್‌ಗಳನ್ನು ನಿಲ್ಲಿಸುವರು. ಇವು ಪಂಚಲೋಹದಿಂದ (ಹುಸೇನ ಅಲಂ, ಬಾರಾಇಮಾಮ ಅಲಂ) ಗಂಧದ ಕಟ್ಟಿಗೆಯಿಂದ (ಅಬ್ಬಾಸ ಅಲಿ ಅಲಂ, ಮಾತಂ ಕದಾಹುಸೇನಿ ಅಲಂ) ಬಂಗಾರದಿಂದ (ಬೀಕಾ ಅಲಂ) ಉಕ್ಕಿನಿಂದ (ತಲವಾಲ ಅಲಂ-ಡಬೀರಪುರ) ಸಿದ್ಧಪಡಿಸಿದವುಗಳಾಗಿದ್ದು ಮರ್ತುಳಾಕಾರ (ನಾಲೇ ಮುಬಾರಕ) ಹಸ್ತದ ಆಕಾರ (ಛತ್ತಾ ಬಜಾರದ ಬಾರಾ ಇಮಾಮ) ರುಂಡದ ಆಕಾರ (ಅಬ್ಬಾಸ ಅಲಿ ಅಲಂ) ಸಿಂಹದ ಮುಖದ ಆಕಾರ (ಮಾಹಿಮರಾತಿಬ್ ಬೀಕಾ ಅಲಾವಾ ಮತ್ತು ಬಾದಷಾಹಿ ಐಶೂರಖಾನೆ) ದಲ್ಲಿರುತ್ತವೆ. ಈ ಅಲಂ ಇಡುವ ಪದ್ಧತಿಯನ್ನು ಕುತುಬ್‌ಷಾಹಿ ದೊರೆಗಳು ಪ್ರಾರಂಭಿಸಿದರೆಂದು ಬೀಕಾ ಅಲಾವಾದ ಖಿದ್‌ಮತ್‌ಗಾರ ಜನಾಬ ಆಲಿವುದ್ದೀನ್ ಆರೀಫ್ ಅವರ ಅಭಿಪ್ರಾಯ.

ನಗರದಲ್ಲಿ ಅಲಮ್‌ಗಳನ್ನು ಕೂಡಿಸಿದ ಅನಂತರ ಷಿಯಾಮುಸ್ಲಿಮರು ಕಪ್ಪು ಸಮವಸ್ತ್ರ ತೊಟ್ಟು ಬೆಡಗಿನ ಕುಣಿತ, ಸಂಗೀತ, ಶೃಂಗಾರ ವಸ್ತುಗಳನ್ನು ತೊರೆದು ಗಂಭೀರರಾಗುತ್ತಾರೆ. ರುಚಿಕರ ಮತ್ತು ರಸಪೂರ್ಣ ಆಹಾರ ತ್ಯಜಿಸಿ, ಹೊಸಬಟ್ಟೆ ಖರೀದಿಸುವುದನ್ನು, ಪಾದರಕ್ಷೆ ಮೆಟ್ಟುವುದನ್ನು ನಿಷೇದಿಸುತ್ತಾರೆ. ಇತರ ಮುಸ್ಲೀಮರು ತಮ್ಮ ಮನೆತನದ ವೆಚ್ಚ ಕಡಿಮೆ ಮಾಡುವರು ಹಿಂದು-ಮುಸ್ಲೀಮರು ಅಲಮ್‌ಗಳ ದರ್ಶನಭಾಗ್ಯ ಪಡೆದು ‘ಜಿಯಾರತ್’ ಕೈಗೊಂಡು ಫಕೀರರಾಗುವರು, ಗುಲಾಬಿ ಹೂ ಪಕಳೆ, ಬೆಳ್ಳಿಯ ಛತ್ರಿಕೆ, ಕುದುರೆ, ತೊಟ್ಟಿಲು, ನವಿಲುಗರಿ, ಹಣ, ಉತ್ತತ್ತಿ ಲಿಂಬೆಹಣ್ಣು, ಖೊಬ್ರಿ ಉಡಿಗಳನ್ನು ಅಲ್ಮೆಮುಬಾರಕಕ್ಕೆ ಅರ್ಪಿಸಿ ಪುನೀತರಾಗುತ್ತಾರೆ. ಆಸಕ್ತರು ಹರಕೆ ಕೈಗೊಳ್ಳುತ್ತಾರೆ. ಊರ ಮಧ್ಯವರ್ತಿ ಸ್ಥಳದಲ್ಲಿ, ಜೋಪಡಿ, ಶಾಮಿಯಾನ ಹಾಕಿದ ತಾಣಗಳಲ್ಲಿ ಷಿಯಾ ಮುಸ್ಲಿಮರು ಮಜಲೀಸ ಮಾಡಿ, ನೋಹಾ ಓದಿ. ‘ಮಾತಂ’ ಧ್ವನಿ ಸುರುಳಿ ಕೇಳಿಸಿ ತಮ್ಮ ಶೋಕವ್ಯಕ್ತಪಡಿಸುತ್ತಾರೆ. ಬಿಸಿಲಿನಲ್ಲಿ ಬಳಲಿ ಬಂದವರಿಗೆ, ದಾಹದಿಂದ ದಣಿದವರಿಗೆ ನೀರು, ಶರಬತ್ ಹಂಚಿ ತೃಪ್ತಿ ಪಡೆಯುತ್ತಾರೆ.

ಮೊಹರಂ ತಿಂಗಳ ಏಳನೆಯ ದಿನ ಹ| ಕಾಸೀಮ ಧೂಲಾರ ಹೆಸರಿನಲ್ಲಿ ‘ಮಾತಂ’ (ಶೋಕ ವ್ಯಕ್ತಪಡಿಸುವುದು) ಆಚರಿಸುತ್ತಾರೆ ಮತ್ತು ‘ಮೆಹಂದಿ’ ಉತ್ಸವ ನಡೆಸುತ್ತಾರೆ. ಈ ಸಂದರ್ಭದಲ್ಲಿ ಹ|ಇ| ಹುಸೇನರು ಕರ್ಬಲಾದಲ್ಲಿ ಅನ್ನ ನೀರಿಲ್ಲದೆ ಬಳಲಿದ ನೆನಪಿಗಾಗಿ ‘ರೋಟ’ ಎಂಬ ವಿಶಿಷ್ಟ ಪ್ರಕಾರದ ರೋಟ್ಟಿಯನ್ನು ಹಂಚುತ್ತಾರೆ.

ಎಂಟನೆಯ ದಿನ ಹುಸೇನ ಕೋಟಿಯ ಅಬ್ಬಾಸ ಅಲಿ ಅಲಂ ಮೆರವಣಿಗೆಯನ್ನು ಹೊರಡಿಸುವರು. ಮೆರವಣಿಗೆಯಲ್ಲಿ ಷಿಯಾ ಮುಸ್ಲಿಮರು ಮಾತಂ ಮಾಡುತ್ತಾರೆ. ಮಾತಂ ಮಾಡುವವರ ಹಿಂದೆ ಸಾವಕಾಶವಾಗಿ ಕುದುರೆಯ ಮೇಲೆ ಜರಿ, ಹೂಹಾರಗಳಿಂದ ಅಲಂಕೃತಗೊಂಡ ಅಬ್ಬಾಸ ಅಲಿ ಅಲಂ ಬರುತ್ತದೆ. ಇದರ ಜೊತೆಗೆ ದಿವಾನ ದೌಡಿಯ ಅಬ್ಬಾಸ ಅಲಿ ಅಲಂ ಸಹಿತ ಕೂಡಿಕೊಳ್ಳುವುದು ಮೆರವಣಿಗೆಯಲ್ಲಿ ಷಿಯಾ ಮುಸ್ಲಿಮರು ಎದೆ ಎದೆ ಬಡಿದುಕೊಂಡು ಮೈಯಲ್ಲಿ ರಕ್ತ ಸೋರುವಂತೆ ಹರಿತವಾದ ಚಾಕು ಚೂರಿ ಬರ್ಚಿ ಬಾಕುಗಳಿಂದ ಹೊಡೆದುಕೊಳ್ಳತ್ತ ಅಳುತ್ತ ಚೀರುತ್ತ ತಮ್ಮ ಶೋಕ ಪ್ರದರ್ಶಿಸುತ್ತಾರೆ.

ಒಂಬತ್ತನೆಯ ದಿನ ಸಹಿತ ಅಲಮ್‌ಗಳ ಮುಂದೆ ಮಜಲೀಸ ಮಾಡುತ್ತ ಎಡೆ-ಉಡಿ ಅಲಮ್‌ಗಳಿಗೆ ಅರ್ಪಿಸುತ್ತಾರೆ. ಹಿಂದೂಗಳು ಸಹ ತಮ್ಮ ಭಕ್ತಿ ಸೇವೆಯನ್ನು ಮಾಡಿ ಕೃತಾರ್ಥರಾಗುತ್ತಾರೆ. ಮುಂಜಾನೆ ಮತ್ತು ಸಂಜೆಯ ಹೊತ್ತಿನಲ್ಲಿ ಪುರುಷರು ಮಾತಂ ಮಾಡುತ್ತಿದ್ದರೆ ಸ್ತ್ರೀಯರು ರಾತ್ರಿಯಿಡೀ ತಮ್ಮ ತಮ್ಮ ಮನೆಗಳಲ್ಲಿ ಮಜಲೀಸ ಓದಿ ಮಾತಂ ಮಾಡುವುದು ಕೇಳಿಬರುತ್ತದೆ.

ಹತ್ತನೆಯ ದಿನ ಮೊಹರಂ ಆಚರಣೆಯ ಕೊನೆಯ ದಿನ, ಅಂದು ಮುಂಜಾನೆ ದಿವಾನ ದೌಡಿಯ ಅಬ್ಬಾಸ ಅಲಿ ಅಲಂ ಮೆರವಣಿಗೆ ಪ್ರಾರಂಭವಾಗುತ್ತದೆ. ಅನಂತರ ಮಧ್ಯಾಹ್ನ ಮೂರುಗಂಟೆಯ ಹೊತ್ತಿಗೆ ಬೀಕಾ ಅಲಂ ಮೆರವಣಿಗೆ ಆನೆಗಳ ಮೇಲೆ ಹೊರಡುತ್ತದೆ ಮೊದಲು ಆನೆಯ ಮೇಲೆ ‘ಮಾಹಿ ಮರಾತಿಬ್’ ಎಂಬ ಅಲಂ ಬರುತ್ತದೆ. ಅದರ ಹಿಂದೆ ಹೈದರಾಬಾದ, ಸಿಕಂದ್ರಾಬಾದ, ಕೋಲ್ಕೊಂಡಾ ಷಿಯಾ ಮುಸ್ಲೀಮರ ಅಸಂಖ್ಯಾತ ಮಾತಂ ಮೇಳಗಳು ಇರುತ್ತವೆ. ಆ ಮೇಳಗಳ ಹಿಂದೆ ಮತ್ತೊಂದು ಪಟ್ಟದಾನೆಯ ಮೇಲೆ ಸಿಂಗರಿಸಿದ ಅಂಬಾರಿಯಲ್ಲಿ ‘ಬೀಕಾ ಅಲಂ’ ಮೆರವಣಿಗೆ ಪೋಲೀಸ ರಕ್ಷಣೆಯಲ್ಲಿ ಬರುತ್ತದೆ. ಅಲಮ್‌ಗಳ ಹಿಂದೆ ಮಾತಂ ಮಾಡುವವರು-ಅತೀರಕ್ತ ಸೋರುವಿಕೆಯಿಂದ ಪ್ರಜ್ಞೆ ತಪ್ಪಿದರೆ, ಸಾವಿನ ಬಾಗಿಲನ್ನು ತಟ್ಟುತ್ತಿದ್ದರೆ ಅಂಥವರನ್ನು ಚಿಕಿತ್ಸೆಮಾಡಲು ಉಸ್ಮಾನಿಯಾ ಆಸ್ಪತ್ರೆಯ ಅಂಬುಲೆನ್ಸ ವ್ಯಾನು ಇರುತ್ತದೆ. ಈ ಮೆರವಣಿಗೆ ಹೈದರಾಬಾದ ನಗರದ ಮುಖ್ಯ ಆಕರ್ಷಣೆ ಆಗಿದೆ.

ಮೆರವಣಿಗೆ ಕಮಾನ ಶೇಖಪೈಸ, ಆಎತೆಬಾರ ಚೌಕ, ರಂಗೇಲಿ ಕಿಡಕಿ ಮುಖಾಂತರ ಚಾರಮಿನಾರ ತಲುಪುತ್ತದೆ. ಅಲ್ಲಿ ದಿವಾನ್ ದೌಡಿಯ ಅಬ್ಬಾಸ ಅಲಿ ಅಲಂ ಬಾದಷಾಹಿ ಆಶೂರಖಾನೆಯ ಬಾರಾ ಇಮಾಮ ಅಲಂ, ಬಡೇ ನಾಲಸಾಬ ಆಶೂರಖಾನೆಯ ನಾಲಸಾಬ (ಪಂಜೇಷಾ ಎಂದೂ ಸಹ ಕರೆಯುತ್ತಾರೆ) ಅಲಂ ಮಾತಂ ಕದಾ ಹುಸೇನಿಯ ನಾಲೇ ಮುಬಾರಕ್ ಅಲಂ ಛತ್ತಾವರಿ ಬಜಾರದ ಬಾರಾ ಇಮಾಮ್ ಅಲಂ, ಜೈನುಲ್ಲಾ ಬೇದನ್ ಅಲಂ-ಇವೆಲ್ಲ ಬಂದು ಸೇರಿಕೊಳ್ಳುತ್ತವೆ. ಆಯಾ ಓಣಿಯ ಅಲಮ್‌ಗಳ ಮುಂದೆ ಆಯಾ ಓಣಿಯ ಮಾತಂ ಮೇಳಗಳು ಮಾತಂ ಮಾಡುತ್ತಿರುತ್ತವೆ. ದೊಡ್ಡ ಪ್ರಮಾಣದ ಈ ಮೆರವಣಿಗೆ ಚಾರಮಿನಾರದಿಂದ ಗುಲ್ಜಾರಹೌಸ, ಪಂಜೇಷಾ ಮೊಹಲ್ಲಾ, ಜಾಮ್ ಪಾಕ್ ಮುಖಾಂತರ ಮುಂದುವರೆದು ಸಂಜೆ ಏಳುಗಂಟೆಯ ಹೊತ್ತಿಗೆ ಚಾದರಘಾಟ್ (ಮಾಸಾನದಿಯ ದಂಡೆ) ತಲುಪುತ್ತದೆ. ಅಲ್ಲಿ ಅಲಮ್‌ಗಳನ್ನು ಬಿಚ್ಚಿ ಫಾತಿಹಾ ಮಾಡಿ ತಾವು ತಂದ ಮಡಿ ನೀರಿನಿಂದ ಮುಖ ತೊಳೆಯುತ್ತಾರೆ. ಅನಂತರ ಬಿಚ್ಚಿದ ಅಲಮ್‌ಗಳನ್ನು ಹೆಗಲಮೇಲೆ ಹೊತ್ತು ‘ಅಲ್ವಿದಾಯ’ ಹಾಡುತ್ತ ಮರುಳುತ್ತಾರೆ.

ಯರಗುಪ್ಪಿಯ ಮೊಹರಂ ಹಬ್ಬ :

ಮೊಹರಂ ತಿಂಗಳ ಹತ್ತನೆಯ ದಿನ ಖತಲ್ ರಾತ್ರಿ (ಉಳಿದೆಡೆ ೯ ನೆಯ ದಿನ) ಅಂದು ಯರಗುಪ್ಪಿಯಲ್ಲಿ ಸಂಭ್ರಮವೋ ಸಂಭ್ರಮ. ಮಸೀದೆಗಳಲ್ಲಿ ಡೋಲಿಗಳನ್ನು ವಿದ್ಯುದೀಪಗಳಿಂದ ಅಲಂಕರಿಸುತ್ತಾರೆ. ಹೊಸ ಉಡುಗೊರೆಗಳನ್ನು ದೇವರಿಗೆ (ಪಂಜಾ) ಉಡಿಸಿ ನಿಲ್ಲಿಸುತ್ತಾರೆ. ಅಳ್ಳಳ್ಳಿ ಬವ್ವಾ ಮತ್ತು ಹುಲಿ ವೇಷದಾರಿಗಳು ದೇವರಿಗೆ ತಮ್ಮ ಹರಕೆ ಸೇವೆ ಸಲ್ಲಿಸಿ ಊರಿನಲ್ಲೆಲ್ಲ ಸುತ್ತಾಡಿ ತಮ್ಮ ಕಸರತ್ತು ತೋರಿಸುತ್ತಾರೆ. ೫ ಗಂಟೆಯ ಸಂಜೆಯ ಹೊತ್ತಿಗೆ ಸ್ನಾನಮಾಡಿ ಹೊಸಬಟ್ಟೆ ಇಲ್ಲವೆ ಮಡಿಬಟ್ಟೆ ತೊಟ್ಟ ಮುಸ್ಲೀಮರು-ಕೊಬ್ರಿ ಉತ್ತತ್ತಿ, ಲಿಂಬೆ, ತೆಂಗಿನಕಾಯಿ, ಬೆಳ್ಳಿಯ ಕುದುರೆ, ಹಸ್ತ, ತೊಟ್ಟಿಲು, ಗಲ್ಲೀಪ, ಉಡುಗೊರೆ, ನವಿಲುಗರಿ- ಮೊದಲಾದ ಉಡಿಗಳನ್ನು, ಕಂದೂರಿ, ಕಿಚಡಿ, ಮಾದ್ಲಿ, ಕುದುರಿ (ಒಂದು ತರದ ಸಿಹಿ ಅಡಿಗೆ) ಶರಬತ್ತಮುಂತಾದ ಎಡೆಗಳನ್ನು ಕೈಯಲ್ಲಿ ಹಿಡಿದು ಬಾಜಾ ಬಜಂತ್ರಿಯೊಂದಿಗೆ ಮಸೀದೆಗಳಿಗೆ ಆಗಮಿಸಿ ಅಲ್ಲಿಯ ಅಲಾವಿ ಕುಣಿಗೆ ಐದು ಸಾರೆ ಸುತ್ತು ಹಾಕಿ ಡೋಲಿ ಇರುವ ಸ್ಥಳಗಳಿಗೆ ಬಂದು ಡೋಲಿ, ಕೈದೇವರು ಎದುರು ಎಡೆ ಉಡಿ ಇಟ್ಟು ಫಾತಿಹಾ ಮಾಡಿಸಿ ದೀನ್ ಜಗಾಯಿಸುತ್ತ ಮನೆಗೆ ಬರುತ್ತಾರೆ. ಹಿಂದೂಗಳು ಈ ತರಹದ ಅಡಿಗೆ ಮಾಡಿ ಸೇವೆ ಸಲ್ಲಿಸದಿದ್ದರೂ ತಮ್ಮ ತಮ್ಮ ಭಕ್ತಿ ಶಕ್ತಿಗನುಸಾರ ಕಾಣಿಕೆ ನೀಡಲು ಮರೆಯುವದಿಲ್ಲ.

ಮೊಹರಂ ತಿಂಗಳ ಹನ್ನೊಂದನೆಯದಿನ (ಉಳಿದೆಡೆ ಹತ್ತನೆಯ ದಿನ) ಯರಗುಪ್ಪಿಯಲ್ಲಿ ಮೊಹರಂ ಹಬ್ಬದ ಕೊನೆಯ ದಿನವಾಗಿದೆ. ಅಂದು ಬೆಳಗಿನ ನಾಲ್ಕುಐದು ಗಂಟೆಯ ಹೊತ್ತಿಗೆ ಯರಗುಪ್ಪಿಯ ಮೂರು ಡೋಲಿಗಳು ಹಾಗು ಕೈದೇವರು ಮೆರವಣಿಗೆಗೆ ಹೊರಟು ಊರಿನಲ್ಲಿ ಸುತ್ತಾಡಿ ಬೆಳಗಿನ ಎಂಟು ಗಂಟೆಯ ಹೊತ್ತಿಗೆ ವಿರಮಿಸುತ್ತವೆ. ಅನಂತರ ಮತ್ತೆ ಮುಂಜಾನೆ ಹತ್ತು ಗಂಟೆಯ ಸುಮಾರು ದೀನ್ ಜಗಾಯಿಸಿ ಅಲಾವಿ ಕುಣಿ ಮುಚ್ಚಿ ಬಾರಿ ಕಂಟೆ ಚುಚ್ಚಿ ನೀರು ಚಿಮುಕಿಸಿ ಫಾತಿಹಾ ಮಾಡಿದ ಮೇಲೆ ಡೋಲಿ ಹಾಗು ಕೈದೇವರು ಚಕ್ಕನರ್ತಿ ದಾರಿಯ ವಿಶಾಲ ಬಯಲಲ್ಲಿ ಒಂದು ನಿಲ್ಲುತ್ತವೆ. ಚಿಕ್ಕನರ್ತಿ ಊರಿನ ಡೋಲಿಗಳೆರಡು ಬರುವವರೆಗೆ ಮೈದಾನದಲ್ಲಿ ಹೆಜ್ಜೆ ಮೇಳ ಕೋಲುಮೇಳ, ಲೇಜಿಮ್ ಮೇಳಗಳ ಕುಣಿತ; ಮುಳ್ಳು ಹೆಜ್ಜೆ ಕುಣಿತ, ಸ್ವೇಟರ ಕುಣಿತ, ಕಡುಗೋಲು ಕುಣಿತ, ಜತ್ತಿಗೆ ಕುಣಿತಮುಂತಾದ ಕುಣಿತ ಮಣಿತ ಕವಾಯಿತು ಕಸರತ್ತು ನಡೆದಿರುತ್ತವೆ. ಮಧ್ಯಾಹ್ನ ಮೂರುಗಂಟೆಯ ಹೊತ್ತಿಗೆ ಚಿಕ್ಕನರ್ತಿಯ ಡೋಲಿಗಳೆರಡು ಯರಗುಪ್ಪಿಗೆ ಬಂದಾಗ ಎರಡು ಊರಿನ ಡೋಲಿಗಳನ್ನು ಕೈದೇವರನ್ನು ಮುಖಾಮುಖಿಯಾಗಿ ನಿಲ್ಲಿಸಿ ಫಾತಿಹಾ ಮಾಡಿ ಆಮಂತ್ರಣ ಒಪ್ಪಿಗೆ ವಿಧಿ ನೆರವೇರಿಸಿ ಎರಡು ಊರಿನ ಡೋಲಿಗಳನ್ನು ಕೂಡಿಸುತ್ತಾರೆ. ಆಗ ಚಿಕ್ಕನರ್ತಿಯ ಡೋಲಿಗಳ ಯರಗುಪ್ಪಿಯ ಡೋಲಿಗಳನ್ನು ಅಪ್ಪುವವು. ಈ ಅಪೂರ್ವ ಪ್ರಸಂಗದಲ್ಲಿ ಕಿಕ್ಕಿರಿದು ನೆರೆದ ಅಸಂಖ್ಯಾತ ಹಿಂದೂ ಮುಸ್ಲೀಮರು ತೇರಿನ ಮೇಲೆ ಹಣ್ಣು ಕಾಯಿ ಸೂರೆಮಾಡುವಂತೆ ಡೋಲಿಗಳ ಮೇಲೆ ಉತ್ತತ್ತಿ, ಬಾಳಿಹಣ್ಣು, ಲಿಂಬಿಹಣ್ಣು, ಬೆಂಡು ಬೆತ್ತಾಸ, ಕಲ್ಲುಸಕ್ಕರೆ ತುಂಡುಗಳನ್ನು ಸೂರೆ ಮಾಡಿ ಕೈಮುಗಿದು ತಮ್ಮ ಭಕ್ತಿ ವ್ಯಕ್ತಪಡಿಸುತ್ತಾರೆ.

ಈ ಪ್ರಸಂಗ ಮುಗಿಯುವುದೇ ತಡ ಮೈತುಂಬಿದ ಡೋಲಿಗಳು ಯರಗುಪ್ಪಿ ಪ್ರವೇಶಿಸಿ ಹರಕೆದಾರರ ಮನೆಗಳಿಗೆ ಭೆಟ್ಟಿ ನೀಡುತ್ತವೆ. ಹರಕೆದಾರರು ಡೋಲಿ ಹೊತ್ತವರ ಕಾಲುಗಳಿಗೆ ನೀರು ಸುರುವಿ ನಮಸ್ಕರಿಸಿ ಹರಕೆ ತೀರಿಸುವ ವಾದ್ಧಾನ ಮಾಡಿದ ಮೇಲೆ ತೆರಳುತ್ತವೆ. ಕೆಲವೊಮ್ಮೆ ಮೈತುಂಬಿದವರ ಮತ್ತು ಹರಕೆದಾರರ ನಡುವೆ ಮಾತಿನ ಚಕಮಕಿ ನಡೆಯುವುದುಂಟು. ಫಾತಿಹಾ ಮಾಡಿದ ಮೇಲೆ ಊರ ಕೆರೆಯ ಕೆಳಗಿನ ವಿಶಾಲ ಮೈದಾನದಲ್ಲಿ ಐದು ಡೋಲಿಗಳನ್ನು ಮಂಚಹಾಕಿ ಕೂಡಿಸುತ್ತಾರೆ. ಯರಗುಪ್ಪಿಯ ಸುತ್ತ ಹತ್ತು ಹಳ್ಳಿಗಳ ಜನರು ಭಕ್ತಿಯಿಂದ ಡೋಲಿಗಳಿಗೆ ಕೈದೇವರಿಗೆ ಕಾಣಿಕೆ ನೀಡಿ ಹರಕೆ ಹೊರುತ್ತಾರೆ.

ಸಂಜೆ ಏಳು ಗಂಟೆಯ ಹೊತ್ತಿಗೆ ಪಕ್ಕದ ಹಳ್ಳಿಯಾದ ನಾಣಾಪುರದ ಕಳಸದ ಡೋಲಿಯು ಯರಗುಪ್ಪಿಗೆ ಆಗಮಿಸುತ್ತದೆ. ಆಗ ಕೆರೆಯ ಬಯಲಿನಲ್ಲಿ ಕೂಡಿಸಿದ ಐದು ಡೋಲಿಗಳನ್ನು ಎಬ್ಬಿಸಿ ಅದಕ್ಕೆ ಎದುರಾಗಿ ನಿಲ್ಲಿಸುತ್ತಾರೆ. ಆಮೇಲೆ ವಿಧಿ ನಿಯಮಗಳು ಮುಗಿದ ಅನಂತರ ನಾಣಾಪುರದ ಡೋಲಿಯು ಯರಗುಪ್ಪಿ ಮತ್ತು ಚಿಕ್ಕನರ್ತಿಯ ಡೋಲಿಗಳಿಗೆ ಭೆಟ್ಟಿಯಾಗುತ್ತದೆ. ಮೂರು ಊರಿನ ಆರು ಡೋಲಿಗಳು ಒಂದೆಡೆ ಕೂಡುವುದು ಕರ್ನಾಟಕದಲ್ಲಿ ಹೊಸದು. ಕೊನೆಯ ಈ ಪ್ರಸಂಗದ ಅನಂತರ ಡೋಲಿಗಳನ್ನು ಹೊತ್ತವರಿಗೆ ಮೈತುಂಬಿದಂತಾಗಿ ಅವರು ಯರಗುಪ್ಪಿಯ ಹರಕೆದಾರರ ಮನೆಗಳಿಗೆ ಭೆಟ್ಟಿ ನೀಡುತ್ತಾರೆ.

ಸಂಜೆ ಎಂಟುಗಂಟೆಯ ಹೊತ್ತಿಗೆ ಕೈದೇವರು ಡೋಲಿಗಳು ಊರ ಪಶ್ಚಿಮ ದಿಕ್ಕಿಗೆ ಹರಿಯುವ ಬೆಣ್ಣಿಹಳ್ಳಕ್ಕೆ ತೆರಳುತ್ತವೆ. ಅಲ್ಲಿ ಆಗಲೇ ಬಂದು ನಿಂತ ಮುಳ್ಳೊಳ್ಳಿ ಡೋಲಿಯೊಂದಿಗೆ ಭಟ್ಟಿಯಾಗುತ್ತದೆ. ನಾಲ್ಕು ಊರಿನ ಏಳು ಡೋಲಿಗಳು ಮಿಲನವಾದ ಅನಂತರ ಫಾತಿಹಾ ಮಾಡಿ ದೇವರ ಮುಖ ತೊಳೆಸಿ ಬಿಚ್ಚಿಡುತ್ತಾರೆ. ಡೋಲಿಗಳ ಮುಖಕ್ಕೆ ಬಿಳಿ ಬಟ್ಟೆ ಕಟ್ಟಿ ಹಿಂದುಮುಸ್ಲೀಮರಿಗೆ ತಬರುಕ್ ವಿತರಿಸುತ್ತಾರೆ. ಈ ಸಾಂಪ್ರಾದಾಯಿಕ ಪದ್ಧತಿ ಮುಗಿದ ಅನಂತರ ಡೋಲಿಗಳನ್ನು ಹೊತ್ತು ಅಲ್ವಿದಾ ಹಾಡುತ್ತ ತಮ್ಮ ತಮ್ಮ ಊರಿಗೆ ಮರಳುತ್ತಾರೆ.

ಈದೇ ಮೀಲಾದ್:

ಹ| ಮುಹ್ಮದ ಪೈಗಂಬರ(ಸೊ.ಅ.)ರು ಜನಿಸಿದುದು ರಬೀಉಲ್ ಅವ್ವಲ್ ಮಾಸದ ಹನ್ನೆರಡನೆಯ ದಿನ ಸೋಮವಾರ. ಆದುದರಿಂದ ಸಹಜವಾಗಿಯೇ ಆ ದಿವಸ ಹಾಗೂ ಆ ತಿಂಗಳು ಮುಸ್ಲೀಮ ಬಾಂಧವರಿಗೆ ಪವಿತ್ರ ಪೈಗಂಬರರ ಜನ್ಮದಿನವನ್ನು ಭಾರತದಲ್ಲಿ ಹೆಚ್ಚಿನ ಶ್ರದ್ಧೆ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಈ ಆಚರಣೆಗೆ ಮೌಲೂದ ಷರೀಫ್, ಮೌಲೂದ, ಈದೇ ಮೀಲಾದ್, – ಈದೇ ಮೀಲಾದುನ್ನಬಿ ಎಂದಾಗಿ ಕರೆಯುತ್ತಾರೆ.

ಅರೆಬ್ಬಿ ಭಾಷೆಯಲ್ಲಿ ಮೀಲಾದ್ ಎಂದರೆ ಹುಟ್ಟುವ ಸಮಯ. ನಬಿ ಎಂದರೆ ಪೈಗಂಬರ ಅಥವಾ ದೇವಧೂತ. ಮಿಲಾದುನ್ನಬಿ ಎಂದರೆ ಪೈಗಂಬರರು ಹುಟ್ಟಿದ ದಿನವೆಂದರ್ಥ. ಮೌಲೂದ್ ಇದರರ್ಥ ನವಜಾತ ಶಿಶು ಅಥವಾ ಜನನ ಕಾಲ ಎಂದು ಷರೀಫ್ ಎಂದರೆ ಶುಭ, ಪವಿತ್ರ, ಸಜ್ಜನ ಎಂದು ಒಟ್ಟಾರೆ ಮೌಲೂದ್ ಷರೀಫ ಎಂದರೆ ಶುಭ, ಪವಿತ್ರ, ಸಜ್ಜನ ಎಂದು ಒಟ್ಟಾರೆ ಮೌಲೂದ್ ಷರೀಫ್ ಎಂದರೆ ಶುಭ ಜನ್ಮದಿನ ಎಂದಾಗಿ ಅರ್ಥೈಸಬಹುದು

[1] ಇವಲ್ಲದೆ ಈದೇ ಮೀಲಾದ್ ಎಂದರೆ ಜನ್ಮದಿನೋತ್ಸವ ಎಂಬ ಅರ್ಥದಲ್ಲಿ ಹ| ಮುಹ್ಮದ ಪೈಗಂಬರರ ಜನ್ಮದಿನೋತ್ಸವ ಹಬ್ಬವನ್ನು ಆಚರಿಸುತ್ತಾರೆ.

ಪೈಗಂಬರರ ಜನ್ಮ ದಿನೋತ್ಸವ ಆಚರಿಸುವ ಪದ್ಧತಿ ಅವರ ಮರಣದ ಐದು ನೂರು ವರ್ಷಗಳ ಅನಂತರ ಅಂದರೆ ಹನ್ನೆರಡನೆಯ ಶತಮಾನದ ಕೊನೆಯ ಭಾಗದಲ್ಲಿ ಇರಾಕ್ ದೇಶದ ಮುಸಲ್ ನಗರವಾಸಿಯೊಬ್ಬನಿಂದಾರಂಭ ಗೊಂಡಿತೆಂದು ಹೇಳಲಾಗುತ್ತದೆ. ಆದರಿಂದ ಪ್ರೇರಣೆಗೊಂಡ ಅರಬಲ್ ನಗರದ ಬಾದಷಹಾ ಅಬೂ ಸಯ್ಯದ ಮುಜಪ್ಪರ್ ಎಂಬವನು ಕ್ರಿ. ಶ. ೧೨೦೭ ರಲ್ಲಿ ಇದನ್ನು ಬಹು ವಿಜ್ರಂಭಣೆಯಿಂದ ಆಚರಿಸಿ ರೂಢಿಗೆ ತಂದನು. ಆಮೇಲೆ ಪ್ರತಿವರ್ಷ ಜನ್ಮೋತ್ಸವ ಆಚರಿಸುವ ಪದ್ಧತಿ ಮುಂದುವರಿದುಕೊಂಡು ಬಂದಿತು. ಉತ್ಸವದ ಅಂಗವಾಗಿ ದಾನ ಧರ್ಮಾದಿ ಪುಣ್ಯಕಾರ್ಯ ಮಾಡುವ, ಧರ್ಮಭೋದೆ ನಡೆಸುವ ಕಾರ್ಯ ಕ್ರಮಗಳು ಸೇರಿಕೊಂಡುವು.[2] ತುರ್ಕಿ, ಇಜಿಪ್ತ, ಇರಾಕ್, ಇರಾನ್ಇತ್ಯಾದಿ ದೇಶಗಳಲ್ಲಿ ‘ಈದೇ ಮೀಲಾದ’ ಹಬ್ಬಬನ್ನು ಆಚರಿಸಲಾಗುತ್ತದೆ.

ಕರ್ನಾಟಕದಲ್ಲಿ ಈದೇ ಮೀಲಾದ ದಿನದಂದು ಮುಸ್ಲಿಮ ಬಂಧುಗಳು ಸ್ವಚ್ಛ ಶುದ್ಧ ಸ್ಥಳದಲ್ಲಿ ಕೂಡುತ್ತಾರೆ. ಹ| ಮಹ್ಮದ ಪೈಗಂಬರರ ಜೀವನ ದರ್ಶನ ಕುರಿತು ‘ಬಯಾನ’ ಮಾಡುತ್ತಾರೆ. ಪದ್ಯ ಬರೆದು ಹಾಡಿ, ಮಿಠಾಯಿ ಹಂಚಿ ಸಭೆ ಮುಗಿಸುತ್ತಾರೆ. ಮನೆಯಲ್ಲಿ ಸಿಹಿ ತಿಂಡಿ ಮಾಡಿ ಫಾತಿಹಾ ಮಾಡಿಸುವುದು ಬಂಧು ಮಿತ್ರರಿಗೆ ಆಮಂತ್ರಿಸಿ ಊಟ ಮಾಡಿಸುವುದು ರೂಢಿ. ನಗರದ ಶಾಲೆಗಳಲ್ಲಿ ಪೈಗಂಬರ ಜಯಂತಿಯನ್ನು ಆಚರಿಸುವುದು ಕಂಡುಬರುತ್ತದೆ.

ಮೌಲೂದ್ ಪರೀಫದಲ್ಲಿ ವ್ಯಕ್ತಿ ಪೂಜೆಯಿದ್ದು ಅದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದೆಂದು ಕೆಲವರು ಆಕ್ಷೇಪಿಸಿದರೆ, ಪ್ರವಾದಿಗಳ ಮೇಲೆ ಹೆಚ್ಚು ಶ್ರದ್ಧೆ ವಿಶ್ವಾಸ ಆತ್ಮೀಯತೆಯನ್ನು ಮುಸ್ಲಿಂ ಜನಾಂಗ ಇಟ್ಟು ಕೊಂಡಿರುವುದರಿಂದ ಅವರ ಗುಣಗಾನ ಮಾಡುವುದಕ್ಕೆ ಇದು ಒಳ್ಳೆಯ ಅವಕಾಶವೆಂದು ಮತ್ತೆ ಕೆಲವು ಮುಸ್ಲಿಂ ಪಂಡಿತರು ಸಮರ್ಥಿಸುತ್ತಾರೆ. ಇತ್ತೀಚೆಗೆ ‘ಈದೇ ಮೀಲಾದ’ ಹಬ್ಬವನ್ನು ಮುಸ್ಲಿಮೇತರರು ಪೈಗಂಬರ ಜಯಂತಿಯೆಂದು ಕರೆಯುವುದು ಕಂಡುಬರುತ್ತದೆ.

ಬಾರಾ ವಫತ್:

ಅರೆಬ್ಬಿ ಭಾಷೆಯಲ್ಲಿ ‘ವಫಾತ್’ ಮೃತ್ಯು ಬಾರಹ ಎಂದರೆ ಹನ್ನೆರಡು ಆದುದರಿಂದ ಬಾರವಫಾತ್ ಎಂದರೆ ಹನ್ನೆರಡನೆಯ ದಿನದಂದು ಘಟಿಸಿದ ಮೃತ್ಯುವೆಂದರ್ಥ. ಬೇರೆ ಬೇರೆ ದೇಶಗಳಲ್ಲಿ ಪ್ರವಾದಿಗಳ ಜನ್ಮದಿನ ಮತ್ತು ಪುಣ್ಯದಿನಗಳನ್ನು ಬೇರೆ ಬೇರೆ ದಿನಗಳಂದು ಆಚರಿಸುತ್ತಾರೆ. ಆದರೆ ಭಾರತದಲ್ಲಿ ಎರಡು ಘಟನೆಗಳು ಒಂದೇ ದಿನದಂದು ನಡೆದವೆಂದು ಭಾವಿಸಿ ಮುಂಜಾನೆ ಜನ್ಮೋತ್ಸವವನ್ನು ಸಂಜೆಗೆ ಪುಣ್ಯದಿನ (ಬಾರಾವಫಾತ್)ವನ್ನು ಆಚರಿಸುತ್ತಾರೆ.[3]

ಅಂದು ಮನೆಮಸೀದೆಗಳಲ್ಲಿ ಅಸರ್ ಮತ್ತು ಇಷಾಕಿ ನಮಾಜಿನ ಅನಂತರ ಹ| ಮುಹ್ಮದ ಪೈಗಂಬರರ ಆತ್ಮಕ್ಕೆ ಶಾಂತಿ ದೊರೆಯಲೆಂದು ‘ಅಲ್ ಫಾತಿಹಾ'(ಪವಿತ್ರ ಕುರಾನಿನ ಮೊದಲನೆ ಪ್ರಕರಣ) ಪಠಿಸಿ ‘ದುಆ’ ಬೇಡಿಕೊಳ್ಳುತ್ತಾರೆ. ಹ| ಮುಹ್ಮದ ಪೈಗಂಬರರ ‘ದರಗಾ ಷರೀಫ’ ಇದ್ದ ಊರುಗಳಲ್ಲಿ ಉರಸು ನಡೆಸುತ್ತಾರೆ.

ಮುಸ್ಲೀಮರ ಮೂರು ಪವಿತ್ರ ರಾತ್ರಿಗಳು

ಎಲ್ಲ ಧರ್ಮದವರು ಪ್ರತಿವರ್ಷ ಕೆಲವು ರಾತ್ರಿಗಳನ್ನು ವಿಶೇಷ ಆರಾಧನೆಯ ರಾತ್ರಿಗಳೆಂದು ಆಚರಿಸುತ್ತಾರೆ. ಸಂಪ್ರದಾಯ ಬದ್ಧವಾದ ಈ ಧಾರ್ಮಿಕ ರಾತ್ರಿಗಳು ಮಾನವರಿಗೆ ವಿಶೇಷ ಸಂದೇಶಗಳನ್ನು ನೀಡುತ್ತವೆ. ನವಚೈತನ್ಯ ಸ್ಪುರಿಸುವಲ್ಲಿ ಸಹಾಯಕವಾಗುತ್ತದೆ.

ಇಸ್ಲಾಂ ಧರ್ಮದಲ್ಲಿ ವರ್ಷಾಂತ್ಯದವರೆಗೆ ಮೂರು ಪವಿತ್ರ ರಾತ್ರಿಗಳನ್ನು ಬಹುಶ್ರದ್ಧೆಯಿಂದ, ಉತ್ಸಾಹದಿಂದ ಆಚರಿಸಲಾಗುತ್ತದೆ. ಅಲ್ಲಾಹನು ತನ್ನ ನಿಸ್ಸೀಮ ಕರುಣೆ ಹಾಗು ಕೃಪೆಯಿಂದ ಹಿಜರಿ ಶಕೆಯ ವರುಷದಲ್ಲಿ ಮೂರು ರಾತ್ರಿಗಳನ್ನು ನಿಶಾರಾಧನೆಗಾಗಿ ಗೊತ್ತುಪಡಿಸಿದ್ದಾನೆ. ರಜ್ಜಬ್ ಮಾಸದ ೨೬ನೆಯ ರಾತ್ರಿ (ಶಬ್ಬೇಮೇ ಅರಾಜ) ಶಾಬಾನ್ ಮಾಸದ ೧೫ನೆಯ ರಾತ್ರಿ (ಶಬ್ಬೇ ಬರಾತ್) ಹಾಗೂ ರಮ್‌ಜಾನ್ ತಿಂಗಳಿನ ೨೬ ನೆಯ ರಾತ್ರಿ (ಶಬ್ಬೇ ಕದ್ರ) ಶ್ರೇಷ್ಟವೆಂದು ಹ| ಮುಹ್ಮದ ಪೈಗಂಬರ (ಸೊ.ಅ) ರು ತಿಳಿಸಿದ್ದಾರೆ. ಈ ರಾತ್ರಿಗಳನ್ನು ಆಚರಿಸುವ ವಿಧಿ ವಿಧಾನವನ್ನು ತಮ್ಮ ಆಚರಣೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ಶಬ್ಬೇ ಮೇ ಅರಾಜ :

ರಜ್ಜಬ್ ಮಾಸದ ೨೬ನೆಯ ರಾತ್ರಿಗೆ ‘ಶಬ್ಬೇ ಮೇ ಅರಾಜ’ ಎನ್ನುತ್ತಾರೆ. ಮೇ ಅರಾಜಿನ ವರ್ಣನೆಯು ಕುರಾನೇ ಷರೀಫದಲ್ಲಿ ಬನೀ ಇಸ್ರೇಲ್ ಎಂಬ ಹದಿನೇಳನೆಯ ಅಧ್ಯಾಯದ ಪ್ರಾರಂಭದಲ್ಲಿ ಮತ್ತು ‘ಮಸಾಬೀಹ್’ ಎಂಬ ಗ್ರಂಥದಲ್ಲಿ ಹಾಗೂ ಹದೀಸದಲ್ಲಿ ಬಂದಿದೆ. ಉರೂಜದಿಂದ ಮೇ ಅರಾಜ ಶಬ್ಬ ಹುಟ್ಟಿದೆ. ಅರೆಬ್ಬಿ ಭಾಷೆಯಲ್ಲಿ ಉರೂಜ ಎಂದರೆ ಮೇಲೇಳುವುದು, ಉನ್ನತಿ, ಉತ್ಥಾನ ಎಂಬರ್ಥಗಳಿವೆ. ಮೇ ಅರಾಜ ಎಂದರೆ ಉನ್ನತವಾದ ಸ್ಥಾನ ಎಂಬರ್ಥ. ಪರ್ಶಿಯನ್ ಭಾಷೆಯಲ್ಲಿ ‘ಶಬ್’ ಎಂದರೆ ರಾತ್ರಿ. ಒಟ್ಟಾರೆ ಶಬ್ಬೇ ಮೇ ಅರಾಜ ಎಂದರೆ ರಾತ್ರಿಯಲ್ಲಿ ಯಾತ್ರೆಮಾಡುವುದು[4] ಆ ದಿನ ರಾತ್ರಿ ಹ| ಮುಹ್ಮದ ಪೈಗಂಬರರು ಸ್ವರ್ಗಕ್ಕೆ ಹೋಗಿ ಅಲ್ಲಾಹನಿಂದ ಮುಸ್ಲಿಮರಿಗಾಗಿ ಐದು ವೇಳೆ ನಮಾಜು ಮಾಡುವ ವಿಧಿಯನ್ನು ತಂದರೆಂದು ನಂಬಿಕೆ. ಕಾರಣ ಮುಸ್ಲೀಮರ ದೃಷ್ಟಿಯಲ್ಲಿ ಈ ರಾತ್ರಿ ಮಹತ್ವಪೂರ್ಣವಾದುದು.

ಜೆರುಸಲೇಮಿನ ಕಲ್ಲಿನ ಗುಮ್ಮಟವಿರುವ ಸ್ಥಳವನ್ನು (Dome of Rock) ಪೈಗಂಬರರು ಸ್ವರ್ಗಯಾತ್ರೆ ಮಾಡಿ ಬಂದ ಸ್ಥಳವೆಂದು ಗುರ್ತಿಸುತ್ತಾರೆ. ಹ| ಮುಹ್ಮದರು ‘ಬುರಾಕ್’ (ವಿಶಿಷ್ಟವಾದ ನಾಲ್ಕು ಕಾಲಿನ ಚುರುಕಾದ ಒಂದು ಪ್ರಾಣಿ ಇದಕ್ಕೆ ಸ್ತ್ರೀಮುಖ ಮತ್ತು ಹಕ್ಕಿಯ ರೆಕ್ಕೆಗಳು ಇರುತ್ತವೆ) ಮೇಲೆ ಕುಳಿತು ಜಿಬ್ರಾಯಿಲ್‌ರೊಂದಿಗೆ ಸಪ್ತ ಆಕಾಶಗಳನ್ನೇರಿ ಸ್ವರ್ಗದಲ್ಲಿ ಅಲ್ಲಾಹನೊಂದಿಗೆ ಸಂಭಾಷಿಸಿ ಬಂದರೆಂದು ಶೃದ್ಧಾವಂತ ಮುಸ್ಲೀಮರು ನಂಬುತ್ತಾರೆ. ಆದರೆ ಪ್ರವಾದಿಗಳ ಜೀವಾತ್ಮ ಮಾತ್ರ ಸ್ವರ್ಗಕ್ಕೆ ಹೋಗಿ ಬಂದಿತ್ತೆಂದು ಮೇ ಅರಾಜಿನ ವಿಷಯಗಳನ್ನು ಸ್ವಪ್ನದಲ್ಲಿ ಕಂಡಿದ್ದರೆಂದು ಕೆಲವರು ಅಭಿಪ್ರಾಯಪಡುತ್ತಾರೆ.[5]

ಶಬ್ಬೇ ಮೇ ಅರಾಜಿನ ರಾತ್ರಿ ‘ಇಷಾ ನಮಾಜ’ ಮಾಡಿದ ಮೇಲೆ ಸುಮಾರು ಹತ್ತು ಗಂಟೆಯ ಹೊತ್ತಿಗೆ ಮೇ ಅರಾಜದ ಬಗೆಗೆ ವ್ಯಾಖ್ಯಾನ ನೀಡಲಾಗುತ್ತದೆ. ಅನಂತರ ಮಧ್ಯರಾತ್ರಿಯವರೆಗೂ ನಫೀಲ ನಮಾಜು ಮಾಡುತ್ತಾರೆ. ಮರುದಿನ ‘ರೋಜಾ’ ಇರುತ್ತಾರೆ.

ಶಬ್ಬೇಬರತ್ :

ಶಾಬಾನ್ ತಿಂಗಳ ೧೫ನೆಯ ರಾತ್ರಿಗೆ ಶಬ್ಬೇ ಬರಾತ್(ಶಬ್ಬೇರಾತ್) ಅಥವಾ ಲೈಲತ್ ಉನ್ನೀಸ್ ಮಿನ್ ಶಾಬಾನ್ (ಶಾಬಾನಿನ ಮಧ್ಯರಾತ್ರಿ) ಎನ್ನುತ್ತಾರೆ. ಶಬ್ ಎಂದರೆ ರಾತ್ರಿ ಬರಾತ್ ಎಂದರೆ ಅರೆಬ್ಬಿ ಭಾಷೆಯಲ್ಲಿ ಉನ್ನತಿ, ಕೃಪೆ ಎಂದು ಅರ್ಥ ಇದರ ಉಲ್ಲೇಖ ಹದೀಸ್‌ದಲ್ಲಿ ಬಂದಿದೆ.

ಶಬ್ಬೇ ಬರಾತ್‌ದಂದು ನರಕದಿಂದ ಮುಕ್ತಿ ಸಿಗುವುದೆಂಬ ನಂಬಿಕೆ ಒಂದು ಕಡೆಗಿದ್ದರೆ, ಪಾಪ-ಪುಣ್ಯಗಳ ಪ್ರಕಾರ ಸುಖ-ದುಃಖ ಹಂಚಲಾಗುವುದೆಂಬ ನಂಬಿಕೆ ಮತ್ತೊಂದು ಕಡೆಗಿದೆ. ಇದು ಕ್ಷಮಾದಾನದ ರಾತ್ರಿಯೆಂಬ ನಂಬಿಗೆಯೂ ಇದೆ. ಆ ರಾತ್ರಿ ಅಲ್ಲಾಹನು ಭೂಲೋಕದ ಕಡೆಗೆ ವಿಶೇಷ ಲಕ್ಷ್ಯವಹಿಸಿ ತನ್ನ ಉಪಾಸಕರ ಬೇಕುಬೇಡಗಳನ್ನು ಶಾಂತ ಚಿತ್ತದಿಂದ ಆಲಿಸುತ್ತಾನಂತೆ. ನಾಸ್ತಿಕರು, ಪಾಪಿಗಳು, ದಯಾಮಯನಾದ ಸೃಷ್ಟಿಕರ್ತನ ಮುಂದೆ ತಮ್ಮ ಅಪರಾಧಗಳನ್ನು ಒಪ್ಪಿಕೊಂಡು, ಪಶ್ಚಾತ್ತಾಪ ಪಟ್ಟು ಶುದ್ಧ ಮನಸ್ಕರಾಗಿ ಅವನ ಮೊರೆ ಹೊಕ್ಕರೆ ಅಲ್ಲಾಹನು ಅವರನ್ನು ಕ್ಷಮಿಸುವನೆಂಬ ವಿಶ್ವಾಸ ಇಸ್ಲಾಂ ಧರ್ಮದಲ್ಲಿ ಇದೆ ಆದುದರಿಂದ ಆ ರಾತ್ರಿ ಸುಮಾರು ಹತ್ತುಗಂಟೆಯ ಹೊತ್ತಿಗೆ ನಫೀಲ್ ಮತ್ತು ಉಮ್ರಕಜಾ ಎಂಬ ನಮಾಜು ಮಾಡುತ್ತಾರೆ. ಇವನ್ನು ಪ್ರಾತಃಕ್ಕಾಲದವರೆಗೂ ಮಾಡುವುದುಂಟು. ಮರುದಿನ ರೋಜಾ ಇರುತ್ತಾರೆ.

ಬಡೌಂಕಿ ಈದ್ :

ಶಬ್ಬೇ ಬರಾತ್‌ದ ಮುನ್ನಾದಿನ ‘ಬಡೌಂಕಿ ಈದ್’ ಆಚರಿಸುವದು ಸಂಪ್ರದಾಯ. ಅಂದು ರಾತ್ರಿ ಹಲ್ವಾ (ಸಿಹಿ ಅಡಿಗೆ) ಚಪಾತಿ ಮಾಡಿ ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಫಾತಿಹಾ ಮಾಡಿಸುತ್ತಾರೆ. ಫಾತಿಹಾ ಮಾಡುವಾಗ ಎಡೆಯ ಜೊತೆ ಸ್ವರ್ಗವಾಸಿಯಾದ ಹಿರಿಯರಿಗೆಂದು ಹೊಸಬಟ್ಟೆ ಇಡುವುದು ರೂಢಿ. ಹದೀಸ್‌ದಲ್ಲಿ ಬಡೌಂಕಿ ಈದ್‌ದ ಬಗೆಗೆ ವಿವರಣೆ ದೊರೆಯುವುದಿಲ್ಲ. ಆದರೂ ಗ್ರಾಮ ನಗರಗಳಲ್ಲಿ ಈ ಹಬ್ಬ ಪ್ರಚಲಿತವಿದೆ. ಹಿಂದುಗಳ ದೀಪಾವಳಿ ಹಬ್ಬದ ಆಚರಣೆಯ ಪ್ರಭಾವದಿಂದ ಬಡೌಂಕಿ ಈದ್ (ಹಿರಿಯರ ಹಬ್ಬ) ಮುಸ್ಲಿಮರಲ್ಲಿ ರೂಢಿಗೊಂಡಿರಬೇಕು.

ರಮ್‌ಜಾನ್ ತಿಂಗಳ ೨೬ನೆಯ ರಾತ್ರಿ ‘ಶಬ್ಬೇ ಕದ್ರ’ (ಭ್ಯಾಗ್ಯ ನಿರ್ಣಯ ರಾತ್ರಿ) ಆಚರಿಸುತ್ತಾರೆ. ಇದರ ಬಗೆಗಿನ ವಿವರಣೆಯನ್ನು ರಮಜಾನ್ ಹಬ್ಬದಲ್ಲಿ ಈ ಮೊದಲೇ ವಿವರಿಸಲಾಗಿದೆ.

ಆಖರಿ ಚಾರಷುಂಬಾ (ಕೊನೆಯ ಬುಧವಾರ) :

ಹಿಜರಿ ಶಕೆಯ ಎರಡನೆಯ ತಿಂಗಳು ‘ಸಫರ್’ ಆಗಿರುತ್ತದೆ. ಅರಬರಲ್ಲಿ ಈ ತಿಂಗಳ ಬಗ್ಗೆ ಎರಡು ಅಭಿಪ್ರಾಯಗಳಿದ್ದವು ಸಜ್ಜನರು, ಕೆಟ್ಟ ತಿಂಗಳೆಂದು, ದುರ್ಜನರು ಒಳ್ಳೆಯ ತಿಂಗಳೆಂದು ಪರಿಗಣಿಸುತ್ತಿದ್ದರು. ಸಫರ ತಿಂಗಳ ಚಂದ್ರ ದರ್ಶನವಾಗುತ್ತಲೆ ಅಕ್ರಮಿಗಳು ತಮ್ಮ ದುಷ್ಕೃತ್ಯಗಳಿಗೆ ಸೂಕ್ತ ಸಂದರ್ಭ ಒದಗಿತೆಂದು ಭಾವಿಸಿ ಸಂಪತ್ತು ದೋಚುವ, ಲೂಟಿಮಾಡುವ ಕೃತ್ಯ ಕೈಕೊಳ್ಳುತ್ತಿದ್ದರು ಇದರಿಂದ ಶಾಂತಿ ಮಾಯವಾಗಿ ಅನ್ಯಾಯ ಅತ್ಯಾಚಾರ ಅಕ್ರಮಗಳು ಸರ್ವವ್ಯಾಪಕವಾಗಿ ಮಾನವರು ದಾನವರಾದರು. ಈ ಕಾರಣದಿಂದಲೇ ಸಫರ್ ತಿಂಗಳು ಕೆಟ್ಟತಿಂಗಳೆಂದು ಅರಬರು ಭಾವಿಸತೊಡಿಗಿದರು. ಹ| ಮುಹ್ಮದ ಪೈಗಂಬರರು ಈ ಕಲ್ಪನೆ ತಪ್ಪು ಮತ್ತು ನಿರಾಧಾರವೆಂದು ಸಾರಿದರೂ ಸಹ ನಂತರದ ತಲೆಮಾರುಗಳಲ್ಲಿ ಅದೇ ಭಾವನೆ ಮುಂದುವರೆಯಿತು.

ಇದೇ ತಿಂಗಳಿನಲ್ಲಿ ಹ| ಮುಹ್ಮದ ಪೈಗಂಬರರು ರೋಗಪೀಡಿತರಾಗಿದ್ದರಿಂದ ಸಫರು ತಿಂಗಳು ಅಮಂಗಲಕರವೆಂಬ ಭಾವನೆ ಬಲವಾಯಿತು. ಮದುವೆ ಮುಂಜಿವೆ, ಗೃಹ ಪ್ರವೇಶ ಮುಂತಾದ ಶುಭ ಸಮಾರಂಭಗಳನ್ನು ನಡೆಸುವುದು ಸೂಕ್ತವಲ್ಲವೆಂಬ ತಿಳುವಳಿಕೆ ಮುಂದುವರಿಯಿತು. ಆದರೆ ಸಫರ ತಿಂಗಳು ಕೊನೆಯ ಬುಧವಾರ (ಅಖರ್ ಚಾರ ಪುಂಬಾ) ಸಂತೋಷದ ದಿನವೆಂದು ಭಾರತೀಯ ಮುಸ್ಲಿಮರು ನಂಬುತ್ತಾರೆ ಮತ್ತು ಹಬ್ಬದಂತೆ ಆಚರಿಸುತ್ತಾರೆ.[6]

ಹ| ಮುಹ್ಮದ ಪೈಗಂಬರರು ಬಹುವಾಗಿ ಬಳಲುತ್ತಿದ್ದ ವ್ಯಾದಿಯೊಂದರಿಂದ ಬಿಡುಗಡೆ ಪಡೆದರೆಂದು ತಿಳಿದು ಸಫರ ತಿಂಗಳಿನ ಕೊನೆಯ ಬುಧವಾರವನ್ನು ಹಬ್ಬದಂತೆ ಆಚರಿಸುತ್ತಾರೆ. ಅಂದು ತರತರದ ಸಿಹಿ ಅಡಿಗೆ ಮಾಡಿಕೊಂಡು ತೋಟದಲ್ಲಿಯಾಗಲಿ, ದರಗಾದ ಆವರಣದಲ್ಲಿಯಾಗಲಿ ಬಂಧು ಮಿತ್ರರೊಡಗೂಡಿ ಊಟಮಡಿ ಖುಷಿಯಾಗಿ ಕಾಲಕಳೆಯುತ್ತಾರೆ. ಕೆಲವರು ಅಂದು ಸ್ನಾನಾದಿಗಳನ್ನು ಮಾಡಿ ತಾಯಿತದಲ್ಲಿ ಕುರಾನ್‌ದ ವಾಕ್ಯಗಳನ್ನು, ಪೈಗಂಬರರ ಹೆಸರನ್ನು ಬರೆಯಿಸಿ ಕಟ್ಟಿಕೊಳ್ಳುತ್ತಾರೆ. ಕೆಲವರು ಮಾವಿನ ಎಲೆಯ ಮೇಲೆ ಹ| ಮುಹ್ಮದ ಪೈಗಂಬರರ ಹೆಸರು ಬರೆಯಿಸಿ ತೊಳೆದು ಆ ನೀರನ್ನು ಕುಡಿಯುತ್ತಾರೆ.[7]

ಕುರಾನ್ ಮತ್ತು ಹದೀಸುಗಳಲ್ಲಿ ಉಲ್ಲೇಖವಾಗದ ಈ ಹಬ್ಬ ಹ| ಮುಹ್ಮದ ಪೈಗಂಬರರ ಮರಣಾನಂತರ ರೂಢಿಯಲ್ಲಿ ಬಂದಿರಬೇಕು. ಇದು ಹೆಚ್ಚಾಗಿ ನಗರ ಪ್ರದೇಶದ ಮುಸ್ಲೀಮ ಬಾಂಧವರಲ್ಲಿ ಪ್ರಚಲಿತವಿದೆ.

ಪೂರ್ಕೆ ಫಾತಿಹಾ (ಕುಂಡಾ ಭರ್ನಾ) ಈದ್ :

ಕೆಲವು ಮುಸ್ಲೀಮರು ಮನಸ್ಸಿನಲ್ಲಿ ಬಯಸಿದ ಆಸೆ ಕೈಗೂಡಿದರೆ ಇಲ್ಲವೆ ತಮ್ಮ ಕಷ್ಟಗಳು ದೂರವಾದರೆ ‘ಪೂರ್ಕೆ ಫಾತಿಹಾ’ (ಪೂರ್ಯಾ ಎಂದರೆ ಕರ್ಚಿಕಾಯಿ) ಜಾಫರ್ ಅಲ್ ಸಾದಿಖ್ ಅವರ ಹೆಸರಿನಲ್ಲಿ ಓದಿಸುವರು. ಈ ಆಚರಣೆಗೆ ಪೂರ್ಕೆಫಾತಿಹಾ ಅಥವಾ ಕುಂಡಾ ಭರ್ನಾ (ಕುಂಡಾ ತುಂಬುವದು) ಈದ್ ಎಂದು ಕರೆಯುತ್ತಾರೆ. ಎಲ್ಲ ಮುಸ್ಲೀಮರ ಮನೆಯಲ್ಲಿ ಕಂಡು ಬರದ ಈ ಹಬ್ಬ ಹಿಂದಿನಿಂದ ನಂಬಿ ಆಚರಣೆಯ ಮಾಡಿ ಕೊಂಡು ಬಂದಿರುವವರಲ್ಲಿ ಮತ್ತು ಹೊಸದಾಗಿ ಹರಕೆ ಹೊತ್ತವರಲ್ಲಿ ಮಾತ್ರ ಪ್ರಚಲಿತವಿರುವದು.

ಈ ಆಚರಣೆ ಬಹಳ ಸ್ವಚ್ಛತೆಯಿಂದ, ನಿಷ್ಠತೆಯಿಂದ ಕೂಡಿರುತ್ತದೆ. ಆ ದಿನ ಯಾವುದೇ ಮಾಂಸ ಮೀನಿನ ಅಡಿಗೆ ಮಾಡಕೂಡದೆಂದು ಎಲ್ಲಾ ಅಡಿಗೆಗಳು ಸಿಹಿ ಹಾಗೂ ಸಸ್ಯಾಹಾರವಾಗಿರಬೇಕೆಂದು ನಿಯಮವಿದೆ. ಪೂರ್ಕೆ ಫಾತಿಹಾದ ವಿಶೇಷತೆಯೆಂದರೆ ಮನೆ ಮಾರು ಸ್ವಚ್ಛಗೊಳಿಸಿ ಸಾರಿಸಿ ಸ್ನಾನಮಾಡಿ ಮಡಿ ಹುಡಿಯಿಂದ ಕರ್ಚಿಕಾಯಿ, ಪಾಯಸ ಚಟ್ನಿ ಅನ್ನ ಸಾರು ತಯಾರಿಸಿ ಪವಿತ್ರವಾದ ಸ್ಥಳದಲ್ಲಿ ಇಟ್ಟು ಅನಂತರ ಅಗಲ ಬಾಯಿಯುಳ್ಳ ಮಡಿಕೆಯೊಂದರಲ್ಲಿ ಕರ್ಚಿಕಾಯಿಗಳನ್ನು ತುಂಬಿಟ್ಟು ಜಾಫರ್ ಅಲ್ ಸಾದಿಬ್ ಅವರ ಹೆಸರಿನಲ್ಲಿ ಫಾತಿಹಾ ಓದಿಸುವುದಾಗಿದೆ. ಇದೇ ಸಂದರ್ಭದಲ್ಲಿ ಆವ್ಹಾನಿತರಿಗೆಲ್ಲ ಕೈತೊಳಿಸಿ ಊಟಮಾಡಿಸುತ್ತಾರೆ. ನೆರೆ ಹೊರೆಯವರನ್ನೂ ಆಮಂತ್ರಿಸಿ ತಿನ್ನಲು ಕೊಡುತ್ತಾರೆ. ಒಂದು ವೇಳೆ ಆಮಂತ್ರಿತರು ಪೂರ್ಕೆ ಫಾತಿಹಾ ಆಚರಿಸಬೇಕೆಂದು ಹರಕೆ ಹೊರಬೇಕಾದರೆ ಕರ್ಚಿಕಾಯಿ ಇಟ್ಟಿರುವ ಪಾತ್ರೆಯಲ್ಲಿ “ತನ್ನ ಮನಸ್ಸಿನಲ್ಲಿರುವ ಕಾರ್ಯ ಕೈಗೂಡಿದರೆ ಮುಂದಿನ ವರ್ಷದಿಂದ ನಾನು ಪೂರ್ಕೆ ಫಾತಿಹಾ ಆಚರಿಸುತ್ತೇನೆಂದು ಹೇಳಿಕೊಂಡು ಒಂದೆರಡು ರೂಪಾಯಿ ಹಾಕಬೇಕು. ಆ ಹಣವನ್ನು ಒಂದು ಬಟ್ಟೆಯಲ್ಲಿ ಮನೆಯವರು ಕಟ್ಟಿಟ್ಟು ಮುಂದಿನ ವರ್ಷದ ಆಚರಣೆಗೆ ಉಪಯೋಗಿಸುತ್ತಾರೆ.”[8] ಇದು ಉತ್ತರ ಕನ್ನಡದ ಮುಸ್ಲಿಮರಲ್ಲಿ ಹೆಚ್ಚು ಬಳಕೆಯಲ್ಲಿದೆ.

ಇದೇ ರೀತಿ ಯಾವುದಾದರೂ ಕಾರ್ಯ ಕೈಗೂಡುವುದರ ಬಗ್ಗೆ ಅಥವಾ ಕಷ್ಟ ಪರಿಹಾರದ ಬಗ್ಗೆಯಾಗಲಿ ‘ಸಗಟ ಬೀಬಿ’ ಎಂಬ ಸತ್ಯವಂತೆಯ ಕಥೆಯನ್ನು ಓದಿಸಿ ಎಳ್ಳು ಬೆಲ್ಲ, ಹುರಿದ ಕಡಲೆ ಮಕ್ಕಳಿಗೆಲ್ಲಾ ಹಂಚಿ ಹರಕೆ ಪೂರೈಸುವುದುಂಟು[9]

ಹೀಗೆಯೆ ಗೌಸೆ ಆಜಮ್ ದಸ್ತಗೀರ, ದಾದಾಹಯಾತ್ ಖಲಂದರ ಅವರ ಹೆಸರಿನಲ್ಲಿ ಮೇಕೆಯನ್ನೋ ಕುರಿಯನ್ನೋ ಬಿಟ್ಟು ವರ್ಷದಲ್ಲಿನ ಅವರ ಹೆಸರಿನ ಮಾಹೆಯಲ್ಲಿಯ (ರಬೀಉಲ್ ಆಖರ ತಿಂಗಳ ಗ್ಯಾರವಿ ಹಬ್ಬ) ಬಲಿಕೊಟ್ಟು ತುಪ್ಪದ ದೀವಿಗೆಗಳನ್ನು ಹಚ್ಚಿ ಬಂಧುಬಾಂಧವರಿಗೆ ಊಟಕ್ಕೆ ಆವ್ಹಾನಿಸಿ ರಾತ್ರಿಯಿಡೀ ಆ ಮಹಾಪುರುಷರ ಕಥೆಗಳನ್ನು ಓದಿಸಿ ಫಾತಿಹಾ ಮಾಡಿಸಿ ಹರಕೆ ಮುಗಿಸುವದು ಕಂಡು ಬರುತ್ತದೆ.

ಆದರೆ ಇಂದಿನ ಅರೆಬ್ಬಿ ಭಾಷಾ ಪಂಡಿತರು ಈ ಆಚರಣೆಗಳೆಲ್ಲಾ ಮೌಲ್ಯರಹಿತವಾದವುಗಳೆಂದು ಕುರಾನ್ ಮತ್ತು ಹದೀಸುಗಳಲ್ಲಿ ಹೇಳದೇ ಇರುವಂತವುಗಳೆಂದು ಬೋಧಿಸುತ್ತಿದ್ದರೂ ‘ಬಡೌಂಕಿ ಈದ್, ಆಖರ ಚಹಾರಷುಂಬಾ ಮತ್ತು ಪೂರ್ಕೆ ಫಾತಿಹಾ, ಸಗಟಬೀಬೀ, ಗ್ಯಾರವಿ ಮುಂತಾದ ಸಾಂಪ್ರದಾಯಿಕ ಹಬ್ಬಗಳು ರೂಢಿಯಲ್ಲಿರುವುದು ಕಂಡು ಬರುತ್ತದೆ.[1] ಡಾ. ಹೀರಣ್ಮಯ(ಅನು) ಮುಸ್ಲಿಂ ಉತ್ಸವ ಮತ್ಕು ಸಂಸ್ಕಾರಗಳು (ಮೈ ವಿ ವಿ ಮೈ ೧೯೭೧) ಪುಟ ೧೧.

[2] ಅದೇ ಪುಟ ೧೨.

[3] ಡಾ ಹೀರಣ್ಮಯ (ಅನು) ಮುಸ್ಲಿಂ ಉತ್ಸವ ಮತ್ತು ಸಂಸ್ಕಾರಗಳು (ಮೈ.ವಿ.ವಿ.ಮೈ ೧೯೭೧) ಪು ೧೩

[4] ಅದೇ ಪುಟ ೧೫.

[5] ಕೆ. ಅಬ್ದುಲ್ ಅಜೀಜಶಬ್ಬೇಬರಾತ್ (ಜನಪ್ರಕಾಶ ದಿನಪತ್ರಿಕೆ ಗದಗ ೧೭.೮.೮೦) ಪು ೩

[6] ಸನ್ಮಾರ್ಗ ವಾರತ್ರಿಕೆ ೧೫.೧೦.೧೯೯೧ ಪುಟ ೨೫.

[7] ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಕೆಲವು ಮುಸ್ಲೀಮರು ಹೀಗೆ ಮಾಡುತ್ತಾರೆ.

[8] ಸೈ.ಜ. ಷರೀಫಮುಸ್ಲಿಂ ಜಾನಪದ (ವಿಶಿಷ್ಟ ಜಾನಪದ ಮೈ.ವಿ.ಮ ೧೯೮೪) ಪುಟ ೫೧

[9] ಅದೇ ಪುಟ ೫೨