ಬಕ್‌ರೀದ್ ಹಬ್ಬ :

ದೇಶ ವಿದೇಶಗಳಲ್ಲಿ ಸಂತೋಷ ಸಂಭ್ರಮದಿಂದ ಮುಸ್ಲೀಮರು ಆಚರಿಸುವ ಹಬ್ಬಗಳಲ್ಲಿ ‘ಬಕ್‌ರೀದ್’ ಹಬ್ಬವೂ ಒಂದು ತ್ಯಾಗ ಬಲಿದಾನ ಮತ್ತು ಅಲ್ಲಾಹನಲ್ಲಿ ಸಂಪೂರ್ಣ ಶರಣಾಗತಿಯ ಸಂದೇಶವನ್ನು ಸಾರುವ ಈ ಹಬ್ಬ ಭಾರತದಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ.

ಬಕ್‌ರೀದ್ ಎಂದರೆ :

ಅರೆಬ್ಬಿ ಭಾಷೆಯಲ್ಲಿ ಬಕರ್ ಎಂದರೆ ಹಸು ಅಥವಾ ಎತ್ತು ಎಂದರ್ಥ ಈದ್ ಎಂದರೆ (ಸಂತೋಷ, ಆನಂದ, ಹಂತಿರುಗು) ಹಬ್ಬ ಎಂದು ಅರ್ಥೈಸಬಹುದು. ಒಟ್ಟಾರೆ ಅಲ್ಲಾಹನ ಹೆಸರಿನಲ್ಲಿ ಹಸು ಅಥವಾ ಎತ್ತನ್ನು ಬಲಿ ಕೊಡುವ ದಿವಸದ ಆಚರಣೆಯೇ ಬಕರೀದ್. ರಮ್‌ಜಾನ್ ಹಬ್ಬಕ್ಕಿಂತಲೂ ದೊಡ್ಡದೆಂದು ಭಾವಿಸಲಾಗುವ ಈ ಹಬ್ಬಕ್ಕೆ ‘ಈದೇ ಕಬೀರ್’ಎಂದು ಕರೆಯುತ್ತಾರೆ. ಇದಲ್ಲದೆ ಈ ದುಜ್ಜುಹಾ (ಬಲಿದಾನದ ಹಬ್ಬ), ಈದೇ ಕುರ್ಬಾನ್(ಬಲಿ ನೀಡುವ ಹಬ್ಬ)ಯೌಮುನ್ನಹರ (ಒಂಟೆಯ ಬಲಿದಾನದ ಹಬ್ಬ) ಈದೇ ಬೈರುಮ್ (ಆನಂದೋತ್ಸವ)ಎಂಬ ಹೆಸರುಗಳಿಂದ ದೇಶ ವಿದೇಶಗಳಲ್ಲಿ ಆಚರಣೆಯಲ್ಲಿದೆ.

[1]

ಬಕರೀದ್ ಹಬ್ಬವನ್ನು ಜಿಲ್ ಹಜ್ಜ ತಿಂಗಳ ಹತ್ತನೆಯದಿನದಂದು ಆಚರಿಸಲಾಗುತ್ತದೆ. ಈ ಹಬ್ಬಕ್ಕೂ ಹಜ್ಜಯಾತ್ರೆಗೂ ಅವಿನಾಭಾವ ಸಂಬಂಧವಿದ್ದು ಪ್ರತಿವರ್ಷ ಲಕ್ಷೋಪಲಕ್ಷ ಜನ ಮುಸ್ಲೀಮರು ಮಕ್ಕೆಯಲ್ಲಿರುವ ಪವಿತ್ರ ‘ಕಾಬಾ’ ವನ್ನು ಜಿಲ್‌ಹಜ್ಜ ತಿಂಗಳಿನಲ್ಲಿ ಸಂದರ್ಶಿಸುತ್ತಾರೆ. ಮತ್ತು ‘ಮಿನಾ’ ಎಂಬ ಸ್ಥಳದಲ್ಲಿ ಕುರ್ಬಾನಿ (ಬಲಿದಾನ) ನೀಡುತ್ತಾರೆ.

ಹಿನ್ನೆಲೆ :

ಬಕರೀದ ಆಚರಣೆಯು ಹ| ಇಬ್ರಾಹಿಮ್ ಖಲೀಲುಲ್ಲಾರವರ ಕಾಲದಿಂದ ಆರಂಭವಾಗಿದ್ದು ಇಂದಿಗೂ ಆಚರಣೆಯಲ್ಲಿದೆ. ಕುರಾನ್ ಮತ್ತು ಹದೀಸುಗಳಲ್ಲಿ ಇದರ ಉಲ್ಲೇಖ ಬರುತ್ತದೆ. ಹಬ್ಬಕ್ಕೆ ಹಿನ್ನೆಲೆಯಾಗಿ ಒಂದು ಕತೆ ಹೀಗಿದೆ :

ಸುಮಾರು ನಾಲ್ಕುಸಾವಿರ ವರ್ಷಗಳ ಹಿಂದೆ ಇಬ್ರಾಹಿಮ್ ಖಲೀಲುಲ್ಲಾ ಎಂಬ ಪ್ರವಾದಿ ಭೂಲೋಕದಲ್ಲಿ ಜನ್ಮತಾಳಿದರು. ಅವರ ಧರ್ಮಪತ್ನಿ ಬೀಬಿ ಹಾಜರಾ. ಆ ಸಾತ್ವಿಕ ದಂಪತಿಗಳಿಗೆ ಇಸ್ಮಾಯಿಲ್ ಎಂಬ ಪುತ್ರ ಜನಿಸಿದ. ಅಲ್ಲಾಹನ ಆಜ್ಞೆಯಂತೆ ಪ್ರವಾದಿ ಇಬ್ರಾಹಿಮ್ ಅವರು ಇಸ್ಲಾಂ ಧರ್ಮ ಪ್ರಸಾರ ಮಾಡುತ್ತ ಮಕ್ಕಾ ಪಟ್ಟಣಕ್ಕೆ ಬಂದರು. ದೇವರ ಬಗೆಗಿದ್ದ ಅವರ ದೃಢ ನಿಷ್ಠೆಯನ್ನು ಲೋಕದ ಜನರಿಗೆ ತೋರಿಸಿಕೊಡಲು ಅಲ್ಲಾಹನು ಇಬ್ರಾಹಿಮ ಅವರಿಗೆ ಕೊನೆಯ ಪರೀಕ್ಷೆಯನ್ನೊಡ್ಡಿದನು.

ಅಲ್ಲಾಹನು ತಮ್ಮ ಕನಸಿನಲ್ಲಿ ಬಂದು ನೀಡಿದ ಆಜ್ಞೆಯಂತೆ ಇಬ್ರಾಹಿಮ್‌ರು ಮಕ್ಕಾ ಸಮೀಪದ ‘ಮಿನಾ’ ಎಂಬ ಸ್ಥಳಕ್ಕೆ ತಮ್ಮ ಪ್ರೀತಿಯ ಪುತ್ರ ಹನ್ನೆರಡು ವರ್ಷದ ಇಸ್ಮಾಯಿಲ್‌ರನ್ನು ಬಲಿಕೊಡಲು ಸಿದ್ಧರಾಗಿ ಖಡ್ಗವನ್ನು ಎತ್ತಿದರು. ಆಗ ಅಲ್ಲಾಹನ ವಾಣಿಯಂತೆ ದೇವದೂತ ಜಿಬ್ರಾಯಿಲ್ ಅವರು ಭೂಲೋಕಕ್ಕೆ ಇಳಿದು ಬಂದು ಇಸ್ಮಾಯಿಲ್ ಅವರ ಸ್ಥಾನದಲ್ಲಿ ದುಂಬಾ ಬಕರಾ (ಟಗರು) ಸೃಷ್ಟಿಸಿದರು. ಖಡ್ಗದ ಹೊಡೆತಕ್ಕೆ ದುಂಬಾ ಬಕರಾ ಬಲಿಯಾಯಿತು. ಅಂದಿನಿಂದ ಜಿಲ್‌ಹಜ್ ತಿಂಗಳಿನಲ್ಲಿ ಟಗರನ್ನು ಬಲಿ ಕೊಡುವ ಪರಂಪರೆ ಆರಂಭವಾಯಿತು. ಮತ್ತು ಹ| ಇಬ್ರಾಹಿಮ್ ಅವರಿಗೆ ಖಲೀಲುಲ್ಲಾ ಎಂಬ ಬಿರುದು. ಇಸ್ಮಾಯಿಲ್ ಅವರಿಗೆ ಜಬೀಉಲ್ಲಾ ಎಂಬ ಹೆಸರು ರೂಢಿಯಲ್ಲಿ ಬಂದವು. ಇಂದಿಗೂ ಹಜ್ ಯಾತ್ರಿಕರು ಅರಬಸ್ತಾನದ ಮಕ್ಕಾಕ್ಷೇತ್ರದಲ್ಲಿರುವ ‘ಮಿನಾ’ ಎಂಬ ಸ್ಥಳದಲ್ಲಿ ಟಗರುಗಳನ್ನು ಬಲಿ ಕೊಡುತ್ತಾರೆ. ‘ಮಿನಾ’ದಲ್ಲಿ ಒಂದು ಗುಮ್ಮಟ ವಿದ್ದು ಅದನ್ನು ಎಲ್ಲ ರಾಷ್ಟ್ರದ ಮುಸ್ಲಿಮರು ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ಹಾಗೂ ಜಿಲ್‌ಹಜ್ ತಿಂಗಳಿನಲ್ಲಿ ಹಜ್ ಯಾತ್ರಿಕರು ಅಲ್ಲಿಗೆ ಕಡ್ಡಾಯವಾಗಿ ದರ್ಶನವೀಯುತ್ತಾರೆ.

ಬಲಿದಾನದ ಮಹಿಮೆ:

ಕುರಾನೇ ಷರೀಫ್ ಮತ್ತು ಹದೀಸುಗಳಲ್ಲಿ ಬಲಿದಾನದ ಮಹಿಮೆ ಕುರಿತು ಹೇಳಲಾಗಿದೆ. ಬಲಿಕೊಡಲಾಗುವ ಒಂಟೆಯ ವಯಸ್ಸು ಐದು ವರ್ಷ ಎತ್ತಿನ ವಯಸ್ಸು ಎರಡು ವರ್ಷ ಮತ್ತು ಆಡಿನ ವಯಸ್ಸು ಒಂದು ವರ್ಷ ದಾಟಿರಬೇಕೆಂದು ಹೇಳಲಾಗುತ್ತದೆ. ಇವು ಆರೋಗ್ಯವಾಗಿದ್ದು ಹೃಷ್ಟ ಪುಷ್ಟವಾಗಿರಬೇಕು. ಕಿವುಡು, ಕುರುಡು, ಕುಂಟು, ಮತ್ತು ರೋಗ ಪೀಡಿತವಾಗಿರಬಾರದೆಂದು ನಿಯಮವಿದೆ.

ಮುಸ್ಲೀಮರು ತಮ್ಮ ತಮ್ಮ ಯೋಗ್ಯತಾನುಸಾರ ಮನೆಯಲ್ಲಿ ಕುರಿ, ಮೇಕೆ, ಎತ್ತು, ಒಂಟೆಯನ್ನು ಅಲ್ಲಾಹನ ಹೆಸರಿನಲ್ಲಿ ‘ಜಬಾ’ಮಾಡಿ ಶುದ್ಧ ಮಾಂಸವನ್ನು ಸರಿಯಾಗಿ ಮೂರು ಭಾಗ ಮಾಡಿ ಒಂದು ಭಾಗವನ್ನು ಬಡವರಿಗೆ ಒಂದುಭಾಗವನ್ನು ಬಂಧುಮಿತ್ರರಿಗೆ ಹಂಚುತ್ತಾರೆ. ಉಳಿದೊಂದು ಭಾಗವನ್ನು ತಾವು ಉಪಯೋಗಿಸಿಕೊಳ್ಳುತ್ತಾರೆ. ಹಜ್ ಯಾತ್ರಿಕರು ‘ಮಿನಾ’ ಎಂಬ ಸ್ಥಳದಲ್ಲಿ ಬಲಿದಾನ ಮಾಡುತ್ತಾರೆ. ಹಜ್ ಸಮಯದಲ್ಲಿ ಬಲಿದಾನ ಮಾಡಲು ‘ಟಗರು’ ದೊರೆಯದಿದ್ದಲ್ಲಿ ಅಲ್ಲಿ ಮೂರುದಿನ ‘ರೋಜಾ’ ಆಚರಿಸಿ ಸ್ವದೇಶಕ್ಕೆ ಮರುಳಿದ ಮೇಲೆ ಏಳುದಿನ ಉಪವಾಸ ವೃತ ಕೈಗೊಳ್ಳಬಹುದೆಂದು ಕುರಾನೇ ಷರೀಫನಲ್ಲಿ ಹೇಳಲಾಗಿದೆ.[2]

ಹಜ್ ಯಾತ್ರೆ :

ಇಸ್ಲಾಂ ಧರ್ಮದ ಐದು ಮುಖ್ಯ ತತ್ವಗಳಲ್ಲಿ ‘ಹಜ್’ ಯಾತ್ರೆಯೂ ಒಂದು, ಮುಸ್ಲಿಮರು ಹಜ್‌ಯಾತ್ರೆ ಕೈಗೊಳ್ಳುವುದು ಪವಿತ್ರಕಾರ್ಯವೆಂದು ನಂಬುವರು. ಅರೇಬಿಯಾದ ಮಕ್ಕಾ ಮತ್ತು ಮದೀನಾ ಪಟ್ಟಣಗಳಿಗೆ ಯಾತ್ರೆಮಾಡಿ ಅಲ್ಲಿರುವ ಕಾಬಾವನ್ನು ಸಂದರ್ಶಿಸಿ, ಮದೀನಾ ಮುನವ್ವರ್ಗೆ ಭೆಟ್ಟಿಯಿತ್ತು ನಮಾಜು ಸಲ್ಲಿಸಿ ‘ಮಿನಾ’ ಸ್ಥಳದಲ್ಲಿ ಬಲಿದಾನ ಮಾಡಿ ಬರುವುದಕ್ಕೆ ಹಜ್‌ಯಾತ್ರೆ ಎಂದು ಕರೆಯುತ್ತಾರೆ.

ಹಜ್ ಯಾತ್ರೆಮಾಡಲು ಮುಸ್ಲೀಮರು ‘ಏಹ್ರಾಮ್’ ಎಂಬ ವಿಶೇಷ ಉಡುಗೆ ತೊಡುವರು. ಒಂದು ಬಿಳಿಯ ವಸ್ತ್ರವನ್ನು ಲುಂಗಿಯಂತೆ ಸುತ್ತಿಕೊಂಡರೆ ಇನ್ನೊಂದು ವಸ್ತ್ರವನ್ನು ಬಲಭುಜ ತೋಳು ಪೂರ್ತಿ ತೋರುವಂತೆ ಹೊದ್ದುಕೊಳ್ಳುವರು ತಲೆ ಖಾಲಿ ಇರುವುದು. ಏಹ್ರಾಮ್ ಉಡುಪನ್ನು ಹಜ್ ಯಾತ್ರಿಗಳು ತಮ್ಮ ಜೊತೆಗೆ ಹಿಂದಿರುಗಿ ತರುತ್ತಾರೆ. ಒಂದು ವೇಳೆ ಅಲ್ಲೆ ಕೊನೆಯುಸಿರೆಳೆದರೆ ಅದೇ ಉಡುಪಿನೊಂದಿಗೆ ಸಮಾಧಿ ಮಾಡಲಾಗುತ್ತದೆ. ಮುಸ್ಲಿಂ ಜನಾಂಗದಲ್ಲಿ ಈ ಉಡುಗೆಗೆ ಬಹಳ ಗೌರವವಿದೆ. ಹಜ್ ಯಾತ್ರೆ ಮಾಡಿ ಬಂದವರಿಗೆ ‘ಹಾಜಿ’ಗಳೆಂದು ಹೆಸರು. ಈಗಲೂ ಪ್ರತಿವರ್ಷ ನಾನಾ ರಾಷ್ಟ್ರಗಳಿಂದ ಮುಸ್ಲಿಮರು ಹಜ್‌ಯಾತ್ರೆಮಾಡುವುದುಂಟು.

ಭಾರತದಲ್ಲಿ ಬಕರೀದ್ ಆಚರಣೆ:

ಜಿಲ್‌ಹಜ್ ತಿಂಗಳು ಹತ್ತನೆಯ ದಿನ ಮುಸ್ಲೀಮರು ಸ್ನಾನಾದಿಮುಗಿಸಿ ಶುಭ್ರ ಬಟ್ಟೆಧರಿಸಿ ‘ವಜೂ’ ಮಾಡಿಕೊಂಡು ಹತ್ತುಗಂಟೆಯ ಹೊತ್ತಿಗೆ ಜಮಾ ಅತ್‌ನೊಂದಿಗೆ ‘ತಕ್ಬೀರ್’ ಹೇಳುತ್ತಾ ನಡೆದು ಈದಗಾ ಮೈದಾನದಲ್ಲಿ ನೆರೆಯುತ್ತಾರೆ. ಈದಗಾದಲ್ಲಿ ಬಕ್‌ರೀದ್ ಹಬ್ಬ ಕುರಿತು, ಕರ್ಬಾನಿ ವಿಷಯಕ್ಕೆ ಸಂಬಂಧಿಸಿ ಬಯಾನ್ ನಡೆಯುತ್ತದೆ. ಅನಂತರ ಮುಸ್ಲಿಂ ಬಾಂಧವರು ಭುಜಕ್ಕೆ ಭುಜ ಹಚ್ಚಿ ಸಾಲಾಗಿ ನಿಂತು ನಮಾಜು ಮಾಡುತ್ತಾರೆ. ನಮಾಜು ಮುಕ್ತಾಯವಾದ ಮೇಲೆ ಒಬ್ಬರಿಗೊಬ್ಬರು ಭ್ರಾತೃವಾತ್ಸಲ್ಯದಿಂದ ಅಪ್ಪಿಕೊಂಡು ‘ಈದ್ ಮುಬಾರಕ್’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಬಡವಬಲ್ಲಿದ ಎಂಬ ತರತಮ್ಯ ಭಾವ ಕಲ್ಪಿಸದೆ ನಾವೆಲ್ಲರೂ ಸಹೋದರರು. ಮಾನವ ಕುಲ ಒಂದೇ ಎಂಬ ಭಾವನೆಯು ಮನಸ್ಸಿನಲ್ಲಿ ಉಂಟಾಗದಿರದು.

ಭಾರತ, ಪಾಕಿಸ್ತಾನ ಬರ್ಮಾ ದೇಶಗಳಲ್ಲಿ ಈ ಹಬ್ಬದಂದು ‘ಕ್ಷೀರ್ ಕುರುಮಾ’ ಎಂಬ ಸೇವಗೆಯ ಸಿಹಿ ಅಡಿಗೆಯನ್ನು ತಯಾರಿಸಿ ಮತಭೇದವಿಲ್ಲದೆ ಬಂಧು ಮಿತ್ರರಿಗೆ ಆಮಂತ್ರಿಸಿ ಊಟ ಮಾಡಿಸುತ್ತಾರೆ. ಮತ್ತು ಅದೇ ದಿನ ತಮ್ಮ ಯೋಗ್ಯತಾನುಸಾರ ‘ಕುರ್ಬಾನಿ’ ನೀಡುತ್ತಾರೆ.

ರಮ್‌ಜಾನ್ ಹಬ್ಬಕ್ಕಿಂತಲೂ ದೊಡ್ಡ ಹಬ್ಬವೆಂದು ಪರಿಗಣಿತವಾದ ಬಕ್ರೀದ್ ಹಬ್ಬದಂದು ಮೆಸೋಪೊಟೇಮಿಯಾ, ಮಧ್ಯ ಏಸಿಯಾ ಮೊದಲಾದ ದೇಶಗಳಲ್ಲಿ ಸಂಗೀತ ನೃತ್ಯ ಏರ್ಪಡಿಸುತ್ತಾರೆ. ಇರಾಣ್ ಮಧ್ಯ ಏಸಿಯಾ ರಾಷ್ಟ್ರಗಳಲ್ಲಿ ನೆಂಟರಿಷ್ಟರ ಸಾಧುಸಜ್ಜನರ ಗೋರಿಗಳಿಗೆ ಹೋಗಿ ಬರುತ್ತಾರೆಂದು ಕೆಲ ಪಂಡಿತರ ಅಭಿಪ್ರಾಯ.

ಬಕ್ರೀದ್ ಹಬ್ಬವು ಅಲ್ಲಾಹನಿಗಾಗಿ ವ್ಯಕ್ತಿ ತನ್ನ ತನು-ಮನ-ಧನ ತ್ಯಾಗಮಾಡಲು ಸಿದ್ಧನಿರಬೇಕೆಂದು ಮಾನವ ಲೋಕಕ್ಕೆ ಸಾರುತ್ತದೆ.

ಮೊಹರಂ ಹಬ್ಬ :

ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರಚಲಿತವಾಗಿರುವ ಹಿಜರಿ ಸಂವತ್ಸರದ ಮೊದಲನೆಯ ತಿಂಗಳು ಮೊಹರಂ. ಮುಹರ್ರ‍ಂ ಅರಬ್ಬಿ ಭಾಷೆಯ ಶಬ್ದ ಇದರರ್ಥ ನಿಷಿದ್ಧವಾದದ್ದು ಅಥವಾ ವರ್ಜಿತವಾದದ್ದು. ಇಸ್ಲಾಂ ಧರ್ಮ ಸ್ಥಾಪನೆಯ ಮೊದಲು ಅರಬಸ್ಥಾನದಲ್ಲಿ ಈ ತಿಂಗಳಲ್ಲಿ ಯುದ್ಧ ಅಥವಾ ರಕ್ತಪಾತ ಧಾರ್ಮಿಕ ದೃಷ್ಟಿಯಿಂದ ನಿಷಿದ್ಧವಾಗಿತ್ತು. ಆದುದರಿಂದ ಈ ತಿಂಗಳಿಗೆ ಈ ಹೆಸರು ಬಂದಿತು. ಅನಂತರ ಮುಸ್ಲಿಮರು ಇದೇ ಹೆಸರನ್ನು ಬಳಕೆಯಲ್ಲಿ ತಂದರು. ಮೊಹರಮ್‌ದ ಇನ್ನೊಂದು ಹೆಸರು ‘ಸೈಯದುಲ್ ಅಶಹರ್’ ಅಂದರೆ ಎಲ್ಲ ತಿಂಗಳುಗಳ ದೊರೆ ಆದರೆ ಇದೇ ತಿಂಗಳಲ್ಲಿ ಹ|ಇ| ಹುಸೇನರು ಹುತಾತ್ಮರಾದರು ಆದುದರಿಂದ ಈ ತಿಂಗಳು ದುಃಖದಾಯಕ ಪವಿತ್ರವೆಂದು ಪರಿಗಣಿಸಲಾಗಿದೆ.

ಮೊಹರಂ ಆಚರಣೆ ಮೂಲತಃ ಶೋಕಸ್ಥಾಯಿಯಾಗಿದ್ದರೂ ಕಾಲಚಕ್ರದಲ್ಲಿ ತನ್ನ ಮೂಲಭಾವ ಕಳೆದುಕೊಂಡು ಉತ್ಸವದ ರಂಗು ಪಡೆದು ರಂಜಿಸುತ್ತದೆ. ಭಾರತದ ಆಂಧ್ರ ಪ್ರದೇಶದ ಹೈದ್ರಾಬಾದ ನಗರದಲ್ಲಿ ಶೋಕಮೂಲ ಆಚರಣೆ ಬಳಕೆಯಲ್ಲಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಅಥವಾ ಜಾತ್ರೆಯನ್ನುವಂತೆ ನಡೆದುಕೊಂಡು ಬರುತ್ತಿದೆ. ಮೊಹರಂ ಹಬ್ಬವಾಗಿ ಪರಿವರ್ತನೆಯಾಗಲು ಐತಿಹಾಸಿಕ ಹಿನ್ನೆಲೆಗಳು ಕಾರಣಗಳಾದಂತೆ ಹಿಂದುಗಳೊಂದಿಗೆ ಮುಸ್ಲಿಮರ ಮಧುರ ಮೈತ್ರಿಯೂ ಕಾರಣ.

ಹಿಂದು ಮುಸ್ಲಿಂ ಮೈತ್ರಿಗೆ ಕಾರಣವಾದ ಮೊಹರಂ ಹಬ್ಬಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು ಈ ಸಂದರ್ಭದಲ್ಲಿ ಸಮಗ್ರವಾಗಿ ಅಲ್ಲದಿದ್ದರೂ ಸಂಕ್ಷಿಪ್ತವಾಗಿ ಅದನ್ನು ಅವಲೋಕಿಸುವುದು ಅಗತ್ಯ.

ಹಿನ್ನೆಲೆ :

ಹಜರತ್ ಮಹ್ಮದ್ ಪೈಗಂಬರ (ಸೊಅ)ರು ಮಾನವ ಕಲ್ಯಾಣಕ್ಕಾಗಿ ಬಹು ಕಷ್ಟನಷ್ಟ ಅನುಭವಿಸಿ ಇಸ್ಲಾಂ ಪ್ರಜಾಪ್ರಭುತ್ವದ ಸ್ಥಾಪನೆ ಮಾಡಿದರು. ಅವರ ಮರಣದ ನಂತರ ಹ| ಖಲೀಫರಾಗಿ ಅಬೂಬಕರ್ ಸಿದ್ದೀಕ್ (ಕ್ರಿ.ಶ. ೬೩೨-೬೩೪) ಹ| ಉಮರ ಫಾರೋಖ್ (ಕ್ರಿ.ಶ. ೬೩೪-೬೪೪) ಹ| ಉಸ್ಮಾನ ಗನಿ (ಕ್ರಿ.ಶ. ೬೪೪-೬೫೬) ಪ್ರಜಾಪ್ರಭುತ್ವ ನಡೆಸಿದರು. ನಾಲ್ಕನೆಯ ಖಲೀಫರಾಗಿ ಬನೀಹಾಷೀಮ್ ಪಂಗಡದವರು ಹ| ಅಲಿ ಅವರನ್ನು ಚುನಾಯಿಸಲು ಸಿರಿಯಾದ ಪ್ರಾಂತಾಧಿಕಾರಿಯಾದ ಹ| ಮುಆವಿಯಾ ವಿರೋಧಿಸಿದನು. ಎರಡು ಪಂಗಡಗಳ ನಡುವೆ ಘರ್ಷಣೆ ನಡೆದು ಒಪ್ಪಂದವಾಯಿತು. ಆದರೆ ಕ್ರಿ.ಶ. ೬೬೧ ರಲ್ಲಿ ಹ| ಮುಆವಿಯಾನ ಕುತಂತ್ರಕ್ಕೆ ಹ| ಅಲಿ ಅವರು ಬಲಿಯಾಗಲು ಅವರ ಜೇಷ್ಠ ಪುತ್ರ ಹ| ಇಮಾಮ ಹಸಲು ಪ್ರಜಾಭಿಪ್ರಾಯ ಮುನ್ನಿಸಿ ಖಲೀಫರಾದರು.

ಮುಆವಿಯಾ ಸಾಯುವ ಮುನ್ನ ತನ್ನ ಮಗನಾದ ಯಜೀದನನ್ನು ಖಲೀಫನೆಂದು ಘೋಷಿಸಿ ಕೊನೆಯುಸಿರೆಳೆದನು. ತಂದೆಯ ಮರಣಾಂತರ ಯಜೀವ ಇಮಾಮ ಹಸನರನ್ನು ಮೋಸದಿಂದ ವಿಷಪ್ರಾಶನ ಮಾಡಿಸಿ ಕೊಲ್ಲಿಸಿದನು. ಮತ್ತು. ನಿಜವಾದ ಖಲೀಫನಾದ ತನಗೆ ಮುಸ್ಲಿಂ ಮುಖಂಡರು ‘ಬಯ್ಯತ್’ ಕೈಗೊಳ್ಳಬೇಕೆಂದು ಆಜ್ಞೆ ಹೊರಡಿಸಿದನು. ಖಲೀಫನಾಗಲು ಅನರ್ಹನಾದ ಯಜೀದನನ್ನು ದಿಕ್ಕರಿಸಿ ಅರೇಬಿಯಾ ಇರಾಣ, ಇರಾಕ್, ಕೂಫಾ ಜನರು ಹ| ಇಮಾಮ ಹುಸೇನರಿಗೆ ಬೆಂಬಲ ನೀಡಿದರು. ಕೂಫೆದ ಜನ ಯಜೀದನ ದೌರ್ಜನ್ಯದಿಂದ ತಮ್ಮನ್ನು ಕಾಪಾಡಬೇಕೆಂದು ವಿನಂತಿಸಿ ಪತ್ರ ಬರೆದರು. ಧರ್ಮ ರಕ್ಷಣೆಗಾಗಿ, ಮಾನವ ಕಲ್ಯಾಣಕ್ಕಾಗಿ ಹ| ಇಮಾಮ ಹುಸೇನರು ಯಜೀದನ ಕ್ರೌರ್ಯವನ್ನು ದುರಾಡಳಿತವನ್ನು ಪ್ರತಿಭಟಿಸಿದರು. ಹೆಂಡತಿ ಮಕ್ಕಳು ಹತ್ತಿರದ ಬಂಧುಬಳಗ ಮೊದಲಾಗಿ ೭೨ ಜನರೊಂದಿಗೆ ಕೂಫೇಗೆ ಪ್ರಯಾಣ ಬೆಳೆಸಿದರು.

ಹಿಜರಿ ಸನ್ ೬೧ ರ ಮೊಹರಂ ತಿಂಗಳು (ಕ್ರಿ.ಶ. ೬೮೦) ಒಂದನೆಯ ದಿನಾಂಕದಂದು ಇರಾಕ್ ಪ್ರಾಂತ ಪ್ರವೇಶಿಸಿದರು. ಐದನೆಯ ದಿನ ‘ಕರ್ಬಲಾ’ ಭೂಮಿಗೆ ಬಂದಿಳಿದರು. ವೈರಿ ಸೈನಿಕರು ಜಲಾಶಯಗಳಿಗೆ ವಿಷಬೆರಸಿ ಅನ್ನನೀರಿಗೆ ತೊಂದರೆಯಾಗುವಂತೆ ವ್ಯವಸ್ಥೆ ಮಾಡಿದರು. ಹತ್ತು ದಿನಗಳವರೆಗೆ ಅನ್ನ ನೀರಿಲ್ಲದ ಹುಸೇನರ ಪರಿವಾರ ತತ್ತರಿಸಿತು. ಮೊಹರಂ ತಿಂಗಳ ಒಂದನೆಯ ದಿನ ಯಜೀದನ ಅಸಂಖ್ಯಾತ ಸೈನಿಕರಿಗೂ ಹುಸೇನರ ಅನುಯಾಯಿಗಳಿಗೂ ಘನಘೋರ ಯುದ್ಧ ನಡೆಯಿತು. ಕಾಸೀಮ ಧೂಲಾ, ಅಬ್ದುಲ್ಲಾ, ಅಬ್ಬಾಸ ಅಲಿ, ಹುಸೇನ ಅವರ ವೀರಾವೇಶದ ಹೋರಾಟಕ್ಕೆ ವೈರಿ ಸೈನಿಕರು ತತ್ತರಿಸಿದರು. ಯುದ್ಧನೀತಿ ಗಾಳಿಗೆ ತೂರಿದರು. ಮೋಸದಿಂದ ಹುಸೇನರ ಪರಿವಾರದ ಶೂರರನ್ನು ರುಂಡ ಚಂಡಾಡುತ್ತ ಮುನ್ನಡೆದರು. ಕೊನೆಗುಳಿದ ಹ| ಇಮಾಮ ಹುಸೇನರನ್ನು ಎದುರಿಸಿ ಯುದ್ಧಮಾಡಲು ಯಾರೊಬ್ಬರಿಗೂ ಧೈರ್ಯವಾಗಲಿಲ್ಲ. ಆಗ ವೈರಿ ಪಡೆಯ ನಾಯಕರಾದ ‘ಶುಮರ’ ಘಾತುಕ ರೀತಿಯಲ್ಲಿ ಆಕ್ರಮಣ ಮಾಡಲು ಆಜ್ಞೆಮಾಡಿದನು ‘ಜರವಿನ್ ಶರೀಕ್’ ಎಂಬ ಕ್ರೂರಿಯೊಬ್ಬ ಹುಸೇನರ ಎಡಗೈಯನ್ನು ಖಡ್ಗದಿಂದ ಕತ್ತರಿಸಿದನು ‘ಸಿನಾನ್ ಬಿನ್ ಅನಾಸ್ ಬಿನ್ ಅಮ್ರ ಅಲ್ ನಾಖಿಯಾ’ ಎಂಬವನು ಹುಸೇನರನ್ನು ನೆಲಕ್ಕೆ ಕೆಡಹಿದನು. ಆಗ ‘ಖವಾಲಿ ಬಿನ ಯಜೀದ್ ಅಲ್ ಅಸ್ಬಾಹಿ’ ಅವರ ತಲೆಯನ್ನು ಕತ್ತರಿಸಿ ಹಾಕಿದನು.[3]

ಮೋಸಕ್ಕೆ ಜಯವಾಯಿತು. ಧರ್ಮಕ್ಕೆ ಸೋಲಾಯಿತು ಹ| ಇಮಾಮ ಹುಸೇನರು ವೀರಮರಣ ಹೊಂದಿದರು.

ಈ ಘೋರ ದುರಂತ ಕೇಳಿದ ಮಕ್ಕಾಮದೀನಾ ಜನ, ಯಜೀದನ ಗುಂಪಿನ ಮೇಲೆ ದಂಗೆಯದ್ದು ಸೇಡು ತೀರಿಸಿಕೊಂಡರು. ಯಜೀದನ ಮರಣದ ಅನಂತರ ಬನೀ ಉಮೈಯರು, ಬನೀ ಹಾಷೀಮರು ಖಲೀಫರಾಗಿ ಆಳಿದರು. ಇದು ಕರ್ಬಲಾ ದುರಂತದರ ಭೀಕರ ಕಥೆ.[4]

ಹ| ಅಲಿ ಅವರ ಅನುಯಾಯಿಗಳಾದ ಷಿಯಾ ಮುಸ್ಲಿಮರು, ಹ| ಇಮಾಮ ಹುಸೇನರ ವೀರ ಮರಣದ ಕೆಲವರ್ಷಗಳ ಅನಂತರ ಅವರ ಗೌರವಾರ್ಥ ಸಭೆ ಸೇರಿ ಶೋಕ ವ್ಯಕ್ತಪಡಿಸಿದರು. ಕ್ರಿ.ಶ. ೯೬೨ರಲ್ಲಿ ‘ಬುವಯಹಿ’ ಸಂತತಿಯ ‘ಷಿಯಾ’ ಮುಸ್ಲಿಮರು ಹ| ಅಲಿ ಅವರ ಸಂತತಿಗೆ ಭಕ್ತಿಗೌರವ ಆದರಗಳಿಂದ ನಡೆದುಕೊಂಡು ಕರ್ಬಲಾಕಾಳಗದ ನೆನಪಿಗಾಗಿ ಕೂಟ ಕೂಡುವುದಕ್ಕೆ ಪ್ರೋತ್ಸಾಹಕೊಟ್ಟರು.[5]

ಹುಸೇನರ ಆತ್ಮಕ್ಕೆ ಶಾಂತಿ ಸಿಗಲೆಂದು ಮೊಹರಂ ತಿಂಗಳಿನಲ್ಲಿ ಮುಸ್ಲಿಮರು ಉಪವಾಸ ವೃತ, ಕುರಾನ್ ಪಠಣ, ದಾನ ಧರ್ಮ ಇತ್ಯಾದಿಗಳನ್ನು ಮಾಡುತ್ತಿದ್ದರು. ದುಃಖ ಮೂಲವಾದ ಇಂತಹ ಮೊಹರಂ ಆಚರಣೆ ಸುಪ್ರಸಿದ್ಧ ಬಾದಶಹಾ ಅಮೀರ ತೈಮೂರಲಂಗ (ಕ್ರಿ.ಶ. ೧೩೩೬-೧೪೦೫)ನ ಕಾಲದಲ್ಲಿ ಭಾರತವನ್ನು ಪ್ರವೇಶಿಸಿತು ‘ತಾಜಿಯಾ’ ತಯಾರಿಸುವ ಪದ್ಧತಿಯನ್ನು ಭಾರತದಲ್ಲಿ ಆರಂಭಿಸಿದವನು ಇವನೇ.[6] ಮೊಗಲರ ಆಳ್ವಿಕೆಯಲ್ಲಿ ಇದೇ ಪದ್ಧತಿ ಮುಂದುವರೆದು ಕಾಲಕಳೆದಂತೆ ಮೊಹರಂ ಆಚರಣೆಯಲ್ಲಿ ಭಾಗವಹಿಸುವ ಹಿಂದುಗಳೂ ಕೂಡ ತಾಜಿಯಾ ತಯಾರಿಸಿ ಮೆರವಣಿಗೆ ಮಾಡಲಾರಂಭಿಸಿದರು. ಶೇರಖಿ ರಾಜ ಸಂತತಿಯ ಸುಲ್ತಾನರು (ಕ್ರಿ.ಶ. ೧೩೯೮-೧೪೮೬) ಮೊಹರಂ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಮತ್ತು ಸಕಲ ಮತ ಪಂಥಗಳಿಗೆ ಮೊಹರಂ ಆಚರಣೆಗೆ ಹಣ ನೀಡುತ್ತಿದ್ದರು.

ಮೊಹರಂ ಆಚರಣೆಗೆ ಪ್ರೋತ್ಸಾಹ:

ಔಧ ಪ್ರಾಂತವನ್ನಾಳಿದ ಮೊಗಲ್ ಸಾಮ್ರಾಜ್ಯದ ನವಾಬ್ ಶುಜಾಉದ್ದೌಲನ ಹೆಂಡತಿ ಮೊಹರಂ ಆಚರಣೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಳು. ಮತ್ತು ಸ್ವತಃ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಳು. ಕ್ರಿಶ ೧೮೧೪ ರಲ್ಲಿ ಔಧ ಸಿಂಹಾಸನವೇರಿದ ಗಾಜಿ ಉದ್ದೀನ್ ಹೈದರ ಲಖನೌದಲ್ಲಿ ‘ಶಹಾನಜಫ್’ ಎಂಬ ಇಮಾಮಬಾಡಾ ಕಟ್ಟಿಸಿದ್ದನು. ಮತ್ತು ಹಿಂದೂಮುಸ್ಲಿಮರಿಗೆ ಹಣ ನೀಡಿ ಮೊಹರಂ ಆಚರಿಸಲು ಪ್ರೋತ್ಸಾಹಿಸುತ್ತಿದ್ದನು.

ದಕ್ಷಿಣ ಭಾರತದಲ್ಲಿ ಕಲ್ಬುರ್ಗಿ ಮತ್ತು ಬೀದರಿನಿಂದ ಆಳಿದ ಬಹಮನಿ ಸುಲ್ತಾನರು (ಕ್ರಿ.ಶ. ೧೩೪೭-೧೫೩೮) ಬಿಜಾಪುರದ ಆದಿಲ್‌ಷಾಹಿಗಳು (ಕ್ರಿ.ಶ. ೧೪೮೯-೧೬೮೬) ಕಟ್ಟುನಿಟ್ಟಾಗಿ ಮೊಹರಂ ಆಚರಿಸುತ್ತಿದ್ದರು. ಗೋಲ್ಕೊಂಡದ ಕುತುಬ್ ಷಾಹಿಗಳು (ಕ್ರಿ.ಶ. ೧೫೫೦-೧೬೭೨) ಹೈದರಾಬಾದ ನಗರದಲ್ಲಿ ಅಲಂ ಇಡುವ ಪದ್ಧತಿ ಆರಂಭಿಸಿ ಮುಂದುವರೆಸಿಕೊಂಡು ಬಂದರು. ಅಲಂಗಳ ಮುಂದೆ ಮಜಲೀಸ್ ಏರ್ಪಡಿಸಿ ಉದಾರ ಮನಸ್ಸಿನಿಂದ ತಮ್ಮ ಬೊಕ್ಕಸದಿಂದ ಧನ ಸಹಾಯ ಮಾಡುತ್ತಿದ್ದರು. ‘ಅಬ್ದುಲ್ ಕುತುಬ್ ಷಾ’ ಮೊಹರಂ ತಿಂಗಳ ಮೊದಲನೆಯ ದಿನದಿಂದ ಸಫರ ತಿಂಗಳ ೨೦ನೆಯ ದಿನಗಳ ಅವಧಿಯಲ್ಲಿ ಮಧ್ಯಸೇವನೆ ಕ್ಷೌರ ಮಾಡಿಸಿಕೊಳ್ಳುವುದು, ತಾಂಬೂಲು ಸೇವಿಸುವುದು ಅಪರಾಧವೆಂದು ಸಾರಿದ್ದನು. ಅಲಂ ಇಡುವುದಕ್ಕಾಗಿ ಕಟ್ಟಿಸಿದ ಆಶೂರಖಾನೆಗಳು ಇಂದಿಗೂ ಸುಸ್ಥಿತಿಯಲ್ಲಿದ್ದು ಹೈದರಾಬಾದ ನಗರದ ಸಾಂಸ್ಕೃತಿಕ ಮಹತ್ವವನ್ನು ಸಾರಿ ಹೇಳುತ್ತವೆ.

ಸಾಮ್ರಾಟ ಅಕ್ಬರ (ಕ್ರಿ.ಶ. ೧೫೪೨-೧೬೦೫) ದೀನ್-ಎ-ಇಲಾಹಿ ಸ್ಥಾಪಿಸಿದ ನಂತರ ಮೊಹರಂ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಮಾರ್ಪಾಡಾಯಿತು. ೧೮ ನೆಯ ಶತಮಾನದಲ್ಲಿ ಮೈಸೂರು ಸಂಸ್ಥಾನವನ್ನಾಳಿದ ಮೈಸೂರು ಹುಲಿ ಟಿಪ್ಪೂಸುಲ್ತಾನ ಮೊಹರಂ ಒಂದು ಹಬ್ಬವಲ್ಲ ಅದು ಹ| ಮುಹ್ಮದ ಪೈಗಂಬರರ ಮೊಮ್ಮಕ್ಕಳು ಹೋರಾಡಿ ಹುತಾತ್ಮರಾದ ಪುಣ್ಯದ ದಿನ ಅದನ್ನು ಸೂತಕದಂತೆ ಆಚರಿಸಬೇಕು ಎಂದು ಹೇಳುತ್ತಿದ್ದನು. ಆದರೆ ಕುತಂತ್ರಿ ಬ್ರಿಟಿಷರು ತಮಗೆ ಸಿಂಹಸ್ವಪ್ನವಾಗಿದ್ದ ಟಿಪ್ಪೂವನ್ನು ಮುಸ್ಲಿಮರಿಂದ ಬೇರ್ಪಡಿಸಲು ಮೊಹರಂ ಪ್ರಸಂಗವನ್ನು ಉಪಯೋಗಿಸಿಕೊಂಡರು. ಕಂಪನಿಯ ಅಧಿಕಾರಿಗಳಿಗೆ ಮುಸ್ಲಿಮರ ಗೆಳೆತನ ಮಾಡಿಸಿ ಮುಜಾವರರಿಗೆ ಸಾಕಷ್ಟು ಹಣ ನೀಡಿ ‘ಮೊಹರಂ’ ಅನ್ನು ಅದ್ದೂರಿಯಿಂದ ಆಚರಿಸಲು ವ್ಯವಸ್ಥೆ ಮಾಡಿದರು.[7] ಅಂದು ಬ್ರಿಟಿಷ ಅಧಿಕಾರಿಗಳು ಹಣದಾಸೆ ಅಧಿಕಾರದಾಸೆ ತೋರಿಸಿ ಪ್ರಾರಂಭಮಾಡಿದ ಮೊಹರಂ ವಿಕಾರ ರೂಪಹೊಂದಿ ಬಳಕೆಯಲ್ಲಿ ಬಂದಿತು. ಇಂದಿಗೂ ಕೆಲಹಳ್ಳಿಗಳಲ್ಲಿ ಸರಕಾರಿ ಕಾಮಣ್ಣನಿಡುವಂತೆ, ಸರಕಾರಿ ಡೋಲಿ ಸರಕಾರಿ ಅಲಂ ಇಡುವುದನ್ನು ನಾವು ಕಾಣುತ್ತೇವೆ. ಹೀಗೆ ಹಿಂದುಗಳ ಪ್ರಭಾವ ಮತ್ತು ಬ್ರಿಟಿಷರ ಕುತಂತ್ರದಿಂದಾಗಿ ಶೋಕ ಮೂಲ ಮೊಹರಂ ಆಚರಣೆ ಮರೆಯಾಗಿ ಸಂತೋಷ ಮತ್ತು ಸಂಭ್ರಮದ ಹಬ್ಬವಾಗಿ ವಿಶೇಷವಾಗಿ ಕರ್ನಾಟಕದಲ್ಲಿ ಮಾರ್ಪಾಟಾಯಿತು. ತತ್ಫಲವಾಗಿ ಹಿಂದೂಮುಸ್ಲಿಮರಲ್ಲಿ ಹೊಂದಾಣಿಕೆ ಗಟ್ಟಿಗೊಂಡು ಭಾವೈಕ್ಯ ಸಾಧನೆಗೆ ಹಾದಿಯಾಯಿತು.[1] ಡಾ. ಹಿರಣ್ಮಯ(ಅನು) ಮುಸ್ಲಿಂ ಉತ್ಸವ ಮತ್ತು ಸಂಸ್ಕಾರಗಳು, ಎಮೈ.ವಿ.ವಿ.ಮೈ ೧೯೭೧ ಪು ೩೧.

[2] ಕುರಾನೇ ಪರೀಫ ಸೂರತ ಬಕರ ರುಕೂ ೨೪ ಐಯತ ೨೮ ರಲ್ಲಿ ಉಲ್ಲೇಖ.

[3] B Lewisb others (Ed) – Encyclopedia of Islam vol-III (Netherland Pub – 1971) P : 611; Prof. Fasl Ahmad-Husain (Taj Comp Pub New Delhi – 1983) P : 137

[4] ಡಾ. ದಸ್ತಗೀರ ಅಲ್ಲೀಭಾಯಿ ಹೈದ್ರಾಬೈದ ಮೊಹರಂ (ಸಂಯುಕ್ತ ಕ. ೨೮.೭.೧೯೯೦)ಪು ೩

[5] G.E. Grunebaum – Mohmadan Festivals(H.S. Pub New Yark – 1951) P : 89

[6] Mrs Meer Hasanli – Observations of Musalman’s of India P.No. 18

[7] ಎಂ.ಜೀವನ ಟೀಪೂ ಎಕ್ಸಪ್ರೆಸ್ (ನವ ಸಮಾಜ ಪ್ರಕಾಶನ ಹುಬ್ಬಳ್ಳಿ ೧೯೮೨) ಪುಟ ೮೬