ಶ್ರೀಮತಿ ಜೇಜಮ್ಮನವರ ಜೀವನ ಚರಿತ್ರೆಯನ್ನು ಬರೆಯುವಾಗ ಅವರ ಹೆಸರಿನೊಂದಿಗೆ ಸೇರಿಕೊಂಡಿರುವುದು ಮೂಗೂರು. ಮೈಸೂರು ಶೈಲಿ ನೃತ್ಯ ಸಂಪ್ರದಾಯದಲ್ಲಿ ಮೂಗೂರು ಪರಂಪರೆ ಎಂಬುದಾಗಿ ಹೇಳಿಸಿಕೊಳ್ಳುವ ಆ ಮೂಗೂರಿನ ಬಗ್ಗೆ ಎರಡು ಮಾತು. ಮೈಸೂರಿನಿಂದ ಕೊಳ್ಳೆಗಾಲಕ್ಕೆ ಹೋಗುವ (೧ಇ. ನರಸಿಪುರ ಮಾರ್ಗ) ದಾರಿ ೮-೯ಕಿಲೋಮೀಟರ್ ದೂರದಲ್ಲಿದೆ ಪುಟ್ಟಹಳ್ಳಿ ಮೂಗೂರು. ಅಲ್ಲಿಯ ಅಧಿದೇವತೆ ತ್ರಿಪುರಸುಂದರಿ. (ತಿಬ್ಬಾದೇವಿ). “ದೇಶೇಶ್ವರ” ಎಂಬ ಪುರಾತನ ಶಿವಾಲಯವೂ ಅಲ್ಲಿದೆ. ಶ್ರೀಮತಿ ಜೇಜಮ್ಮನವರು ಅವರ ಪೂರ್ವಿಕರು ಎಲ್ಲಾ ತ್ರಿಪುರ ಸುಂದರಿ (ತಿಬ್ಬಾದೇವಿ) ದೇವಸ್ಥಾನದ ದೇವದಾಸಿಯರು ಅಂದರೆ ವಕ್ಕಲು ಮಕ್ಕಳು.

ದೇವದಾಸಿಯರು ಎಂದ ಮಾತ್ರಕ್ಕೆ ಕೂಡಲೇ ನಮಗೆ ಜ್ಞಾಪಕಕ್ಕೆ ಬರುವುದು ಸವದತ್ತಿ, ಚಂದ್ರಗುತ್ತಿ ಮೊದಲಾದ ಎಡೆಗಳಲ್ಲಿ ನಾನಾಕಾರಣಗಳಿಂದಾಗಿ ನಾನಾ ಕಾರಣಗಳಿಗಾಗಿ ಕೆಲ ವರ್ಗದ ಸ್ತ್ರೀಯರನ್ನು ಹರಕೆಯ ಮೂಲಕ ದೇವರಿಗೆ ಒಪ್ಪಿಸಿ ದೇವದಾಸಿ ಎಂಬ ಲೇಬಲ್‌ ಅಂಟಿಸಿ ಆ ಕುಲಕ್ಕೇ ಕಳಂಕವನ್ನು ತಂದಿಟ್ಟಿದ್ದಾರೆ. ದೇವದಾಸಿಯರಲ್ಲಿ ಏಳು ವಿಧಗಳು. ಇದನ್ನು ಇಲ್ಲಿ ಉದ್ದ ಬೆಳೆಸುವುದಿಲ್ಲ. ಮೈಸೂರು, ನಂಜನಗೂಡು, ಟಿ. ನರಸೀಪುರ, ಹೊಳೆನರಸೀಪುರ, ಮೂಗೂರು ಕೋಲಾರ ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ, ಬಸರೂರು, ಬಾರಕೂರು, ಹಿರಯಡಕ, ಪೆಡ್ಯೂರು ಮೊದಲಾದ ಕಡೆಗಳಲ್ಲಿ ದೇವಾಲಯದ ಉತ್ಸವ, ಪೂಜಾ ಸಮಯಗಳಲ್ಲಿ ಸಂಗೀತ, ನೃತ್ಯ ಸೇವೆ ಮಾಡುತ್ತಿದ್ದ ದೇವದಾಸಿಯರು ಇದ್ದರು. ಈಗಲೂ ಕೆಲ ದೇವಾಲಯಗಳಲ್ಲಿ ಕುಂಭಾರತಿ(ಗುಂಭಾರತಿ) ದೇವದಾಸಿ ವಂಶಸ್ಥರೇ ಹೊತ್ತಿಸಿಕೊಡುವ ರೂಢಿ ಇದೆ. ಬಸರೂರಿನಲ್ಲಿದ್ದ ಹಿರಿಯ ಚೇತನ ಶ್ರೀಮತಿ ಚಂದ್ರಾವತಿ ಅಮ್ಮನವರೊಡನೆ ನಡೆಸಿದ ವಿಚಾರ ವಿನಿಮಯ ಮತ್ತು ನನ್ನ ಗುರುಗಳ ನಿಧನಾ ನಂತರ ಮೂಗೂರಿಗೆ ತೆರಳಿ ಅಲ್ಲಿ ಸುಬ್ಬಪ್ಪ ಎಂಬುವರೊಡನೆ ಸಂಗ್ರಹಿಸಿದ ವಿಚಾರಗಳ ಧ್ವನಿ ಮುದ್ರಣವು (Tape) ಇದಕ್ಕೆ ಆಧಾರವಾಗಿ ಇದೆ. ಈಗ ಅವರಿಬ್ಬರೂ ಇಲ್ಲ. ಈಗ ದೇವಾಲಯಗಳಲ್ಲಿ ಸಂಗೀತ ನೃತ್ಯ ಸೇವೆಗಳೂ ಇಲ್ಲ ಆ ಸೇವೆ ಮಾಡುತ್ತಿದ್ದ ಸಂಪ್ರದಾಯವಂತ ದೇವದಾಸಿ ಪಂಥದವರೂ ಇಲ್ಲ. ದೇವದಾಸಿಯರಲಿ ಏಳು ವಿಧಗಳು ಎಂದು ಮೇಲೆ ತಿಳಿಸಿದ್ದೇನೆ. ಅವರಲ್ಲಿ ಎಲ್ಲರೂ ನೃತ್ಯ ಮಾಡುತ್ತಿರಲಿಲ್ಲ. ಇವರಲ್ಲಿ ರುದ್ರಗಣಿಕೆಯರು ಮಾತ್ರ ನೃತ್ಯ ಮಾಡುತ್ತಿದ್ದುದು. ಮೂಗೂರು ಮತ್ತು ದೇವದಾಸಿ ಎಂಬ ವಿಷಯ ಇಲ್ಲಿಗೆ ಇಷ್ಟೇ ಸಾಕು. ಇನ್ನು ನನ್ನ ಗುರುಗಳಾದ ಶ್ರೀಮತಿ ಮೂಗೂರು ಜೇಜಮ್ಮನವರ ಬಗೆಗೆ ತಿಳಿಯೋಣ.

ನನ್ನ ಗುರುಗಳಾದ ಶ್ರೀಮತಿ ಮೂಗೂರು ಜೇಜಮ್ಮನವರು ಇಂದಿಗೆ ಸುಮರು ೧೦೩ ವರ್ಷಗಳ ಹಿಂದೆ ೧೨.೫.೧೮೯೯ನೇ ಸೋಮವಾರದಂದು ಜನಿಸಿದರು. ಇವರ ತಾಯಿ ಗೌರಮ್ಮನವರು, ಜೇಜಮ್ಮನವರ ಮಗಳು ಶ್ರೀಮತಿ ಸುಂದರಮ್ಮ. ಇವರು ಕೆಲವುಕಾಲ ಪ್ರಖ್ಯತ ಗುಬ್ಬಿ ವೀರಣ್ಣನವರ ಚನ್ನಬಸವೇಶ್ವರ ನಾಟಕ ಕಂಪನಿಯಲ್ಲಿ ಭರತನಾಟ್ಯ ಕಲಾವಿದರಾಗಿ ಸೇವೆಸಲ್ಲಿಸಿದ್ದರು. ಇವರು ಜೇಜಮ್ಮನವರಿಗಿಂತ ಮೊದಲೇ ಶಿವಾಧೀನವಾಗಿದ್ದರು. ಇವರ ವಂಶಸ್ಥರೆಲ್ಲಾ ಸಂಗೀತ, ನೃತ್ಯ ಕ್ಷೇತ್ರದಲ್ಲಿ ಪಾರಂಗತರಾಗಿದ್ದರು. ಇವರ ತಂಗಿ ಗುರುಮಲ್ಲವ್ವನೆಂದು ಒಬ್ಬರಿದ್ದರು. ಈಗ ನಿಧನರಾಗಿರಬಹುದು.

೧೭೯೯ ರಲ್ಲಿ ಶ್ರೀರಂಗಪಟ್ಟಣದ ಪತನದ ನಂತರ, ಮೈಸೂರು ರಾಜಧಾನಿಯಾಗಿ, ಅರಸೊತ್ತಿಗೆ ಆಡಳಿತ ಸೂತ್ರವೆಲ್ಲಾ ಯದುವಂಶದ ಅರಸರದಾಯಿತು. ಆ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಚದುರಿ ಹೋಗಿ ಮೂಗೂರಿನಲ್ಲಿ ನೆಲೆಸಿದ್ದ ಜೇಜಮ್ಮನವರ ಹಿರಿಯರು ಮೈಸೂರಿನ ಕಾಳಮ್ಮನ ಗುಡಿ ಬೀದಿಯಲ್ಲಿ ಬಂದು ವಾಸಿಸತೊಡಗಿ ಕಲಾ ಸೇವೆ ಮಾಡತೊಡಗಿದ್ದರು. ನಂತರ ಜೇಜಮ್ಮನವರು ಕೆಂಪನಂಜಂಬ ಅಗ್ರಹಾರದಲ್ಲಿನ ರಾಮಾನುಜ ರಸ್ತೆಯಲ್ಲಿ ತಾವೇ ಖರೀದಿಸಿದ ಸ್ವಂತ ಮನೆಯಲ್ಲಿ ವಾಸಿಸತೊಡಗಿದರು. ಸಂಗೀತ ವಿದ್ವಾನ್‌ ಮೂಗೂರು ಸುಬ್ಬಣ್ಣ ಮತ್ತು ಅವರ ಭಾವನಂಟ, ನಟ್ಟುವಾಂಗದ ಅಮೃತಪ್ಪ ಇಬ್ಬರೂ ಸಂಗೀತ. ನೃತ್ಯದಲ್ಲಿ ಮಹಾ ವಿದ್ವಾಂಸರಾಗಿದ್ದರು ಇವರಿಬ್ಬರೂ ಜೇಜಮ್ಮನವರ ತಾತಂದಿರು.

ಉಲಿಯುವ ಗಾಳಿ, ಉರುಳುವ ಝರಿ, ಹರಿಯುವ ನದಿ, ಇವುಗಳನ್ನೇ ಆಧಾರ ಶೃತಿಯನ್ನಾಗಿಸಿ ಕೊಂಡು ಹಠಸಾಧನೆಯಿಂದ ಸಂಗೀತ ಅಭ್ಯಾಸ ಮಾಡಿ ಸಿದ್ಧಿಯನ್ನು ಪಡೆದವರೂ, ಮಹಾ ದೈವಭಕ್ತರೂ ಲಿಂಗಧಾರಣೆ ಮಾಡಿ ಶಿವದೀಕ್ಷೆಯನ್ನು ಪಡೆದವರೂ ಆಗಿದ್ದರು. ಶ್ರೀಯುತ ವಿದ್ವಾನ್‌ ಮುಗೂರು ಸುಬ್ಬಣ್ಣನವರು. ಇವರ ಸಂಗೀತ ಪ್ರೌಢಿಮೆಯನ್ನು ಕೇಳಿ ತಿಳಿದ ಮಹಾರಾಜರು ಅರಮನೆಯಲ್ಲಿ ಸಂಗೀತ ಕಾರ್ಯಕ್ರಮಕ್ಕಾಗಿ ಆಹ್ವಾನಿಸಿದಾಗ, ತನ್ನ ಮನೋಧರ್ಮಕ್ಕೆ ಅರಮನೆಯ ಸಹವಾಸ ಸರಿಬಾರದೆಂದು ತಿಳಿದು, ತಾನು ಶಿವ ಸಾನಿಧ್ಯದಲ್ಲಿ ಪೂಜಾ ಸಮಯದಲ್ಲಿ ಮನೆಯಲ್ಲಿ ಮಾತ್ರ ಸಂಗೀತ ಸೇವೆ ಮಾಡುವುದೆಂದು ಮಹಾರಾಜರ ಕರೆಯನ್ನು ವಿನಯದಿಂದ ನಿರಾಕರಿಸಿದಾಗ ಮಹಾರಾಜರು ಮಾರು ವೇಷದಿಂದ ಬಂದು, ಇವರ ಸಂಗೀತ ಕೇಳಿ ಸಂತೋಷ ಪಟ್ಟರಂತೆ! ಮೂಗೂರು ಸುಬ್ಬಣ್ಣನವರ ವಿಷಯವಾಗಿ ಮಹಾ ವಾಗ್ಗೇಯಕಾರರಾದ “ಪದ್ಮ ಭೂಷಣ” ದಿ. ವಾಸುದೇವಾಚಾಯ್ರು “ನಾಕಂಡ ಕಲಾವಿದರು” ಎಂಬ ಪುಸ್ತಕದಲ್ಲಿ ವಿವರವಾಗಿ ಬರೆದಿರುತ್ತಾರೆ.

ಜೇಜಮ್ಮನವರ ಇನ್ನೊಬ್ಬ ತಾತ ಮೂಗೂರು ನಟ್ಟುವಾಂಗದ ಅಮೃತಪ್ಪನವರೆಂದೇ ಪ್ರಖ್ಯಾತರಾದವರು. ಇವರು ಗುಂಡಪ್ಪನೆಂಬವರಿಂದ ನೃತ್ಯ ಅಭ್ಯಾಸ ಮಾಡಿದವರು. ಮೂಗೂರು ಸುಬ್ಬಣ್ಣನವರ ನೆರಳಿನಲ್ಲಿ ಗುಂಡಪ್ಪನವರ ನೇತೃತ್ವದಲ್ಲಿ ಆಚಾಯ್ ಅಮೃತಪ್ಪನವರು ಕಟ್ಟುನಿಟ್ಟಾಗಿ ವ್ಯವಸ್ಥೆಗೊಳಿಸಿದ್ದ ನೃತ್ಯ ಪದ್ಧತಿಯೇ ಮುಂದೆ ಮೂಗೂರು ಶೈಲಿಯ ಪರಂಪರೆಯೆಂದು ಪ್ರಸಿದ್ಧಿ ಪಡೆಯಿತು.

ಮೂಗೂರು ಸುಬ್ಬಣ್ಣನವರ ತಾಯಿ ಪುಟ್ಟಮ್ಮ ಇವರ ತಂಗಿ ಅಮೃತಮ್ಮ. ಅಮೃತಮ್ಮನವರ ಹೆಸರಲ್ಲಿ ಮೂಗೂರು ತಿಬ್ಬಾದೇವಿ ದೇವಸ್ಥಾನದಲ್ಲಿ ಒಂದು ಕಂಚಿನ ಫಲಕ ಇದೆ. ಇವರ ನಂತರದ ಇವರ ವಂಶದವರೆಂದರೆ ಕೆಂಪದೇವಮ್ಮ, ಚಿಕ್ಕದೇವಮ್ಮ, ಪುಟ್ಟದೇವಮ್ಮ, ಪುಟ್ಟಕ್ಕಯ್ಯ, ಸುಂದರಮ್ಮ ಕೊನೆಗೆ ೧೯೮೩ರವರೆಗೂ ಬದುಕಿದ್ದ ಶ್ರೀಮತಿ ಜೇಜಮ್ಮನವರು. ಇಲ್ಲಿಗೆ ಈ ದೇವದಾಸಿ ಮನೆತನ ಕೊನೆಗೊಂಡಿತು.

ನನ್ನ ಗುರುಗಳಾದ ಜೇಜಮ್ಮನವರ ನೆನಪಿನಂಗಳವನ್ನು ಕೆದಕಿ ಕೆದಕಿ ಹಲವು ವಿಷಯಗಳನ್ನು ಸಂಗ್ರಹಿಸಿ ಅದರಲ್ಲಿ ಕೆಲವನ್ನು ಇಲ್ಲಿ ನಿರೂಪಿಸಿದ್ದೇನೆ. ಅಂದಿನಕಾಲದ ಹೆಚ್ಚಿನ ನರ್ತಕಿಯರು ಮೂಗೂರು ಅಮೃತಪ್ಪನವರ ಶಿಷ್ಯರು ಹಾಗೂ ಬಂಧುಗಳಾಗಿದ್ದರು, ನೃತ್ಯಕ್ಕೆ ಸಂಬಂಧಪಟ್ಟಂತೆ ಅಂದು ಕೂಡಾ ಸಭೆ, ಸಮ್ಮೇಳನ, ಸೋದಾಹರಣ ಉಪನ್ಯಾಸಗಳು ಅಮೃತಪ್ಪನವರ ನೇತೃತ್ವದಲ್ಲಿ ನಡೆಯುತ್ತಿದ್ದುವೆಂದು ನನ್ನ ಗುರುಗಳು ಹೇಳುತ್ತಿದ್ದರು. ಅದು ಕೂಡಾ ನಿಗದಿತ ದೇವಾಲಯಗಳಲ್ಲಿ ಅಮೃತಪ್ಪನವರ ವಿದ್ವತ್ತಿನ ಬಗ್ಗೆ ಅರಮನೆ ಕಾರ್ಯಕಲಾಪಗಳ ಬಗ್ಗೆ ಗುರುಗಳು ಹೇಳುತ್ತಿದ್ದ ವಿಷಯಗಳು ಬೇಕಾದಷ್ಟಿದೆ. ಇಲ್ಲಿಗೆ ಸಾಕು.

ಕೆಂಪದೇವಮ್ಮನವರು ಜೇಜಮ್ಮನಾದುದು: ತಾಯಿ ಗೌರಮ್ಮನವರು ಮತ್ತು ತಾತ ನಟ್ಟುವಾಂಗದ ಅಮೃತಪ್ಪನವರು ಇತರ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿದ್ದಾಗ ಪುಟ್ಟಮಗುವಾಗಿದ್ದ ಜೇಜಮ್ಮನವರು ಕೈಯಲ್ಲಿ ಗೆಜ್ಜೆ ಹಿಡಿದುಕೊಂಡು ಜೇಜೇ. ಜೇಜೇ ಎಂದು ಪಲುಕುತ್ತಾ ತಪ್ಪು ತಪ್ಪು ಹೆಜ್ಜೆಗಳನ್ನಿಡುತ್ತಾ ಮನೆ ತುಂಬಾ ಓಡಾಡಿಕೊಂಡಿರುವಾಗ ಮನೆಯವರೂ ಶಿಕ್ಷಣಾರ್ಥಿಗಳೂ ನೆರೆಕರೆಯವರೂ ಜೇಜೆ, ಜೇಜೆ, ಎಂದು ಕರೆಯುತ್ತಿದ್ದರು. ಮುದೆ ಅದು ಜೇಜೆ ಜೇಜೆಯಾಗಿ ನಂತರ ಜೇಜಿ, ಜೇಜಮ್ಮನಾಗಿ ರೂಢಿಯಲ್ಲಿ ನಿಂತಿತು. ಹೀಗಾಗಿ ಮೂಗೂರು ಕೆಂಪದೇವಮ್ಮ ಮೂಗೂರು ಜೇಜಮ್ಮನವರಾದರು.

ನೃತ್ಯದಲ್ಲಿ ಇವರಿಗೆ ತಾತ ಅಮೃತಪ್ಪನವರಿಂದ ಪಾಠ ಪ್ರಾರಂಭವಾಗಿ ಅವರ ನಿಧಾನನಂತರ ತಾಯಿ ಗೌರಮ್ಮನವರಿಂದ ಗೆಜ್ಜೆಪೂಜೆವರೆಗಿನ ಸಂಪ್ರದಾಯ ಬದ್ಧ ಶಿಕ್ಷಣ ಪಡೆದು ಪ್ರಖ್ಯಾತರಾದರು.

ಸಂಗೀತ ವಿದ್ವಾನ್‌ ದಿ. ಮಳವಳ್ಳಿ ಸುಬ್ಬಣ್ಣ ಮತ್ತು ವಿದ್ವಾನ್‌ ದಿ.ತಮ್ಮಯ್ಯನವರಲ್ಲೂ ಸಂಗೀತ ಅಭ್ಯಾಸ ಮಾಡಿರುತ್ತಾರೆ ಹಾಗೂ ಮರಿಯಾಲ ಮಠದಮಹಾಂತ ಸ್ವಾಮಿಗಳಲ್ಲಿ ಸಂಸ್ಕೃತ ಅಭ್ಯಾಸ ಮಾಡಿರುತ್ತಾರೆ. ೧೯೩೦-೩೫ರಲ್ಲಿ ಸ್ತ್ರೀಯರ ನಾಟಕ ಮಂಡಲಿಯನ್ನು ಸ್ಥಾಪಿಸಿ, ಅದರ ಆಡಳಿತದಾರರಾಗಿಯೂ, ಪಾತ್ರಧಾರಿಯಾಗಿಯೂ ದಕ್ಷತೆಯಿಂದ ಮೆರೆದವರು, ಮಂಡಲಿ ಅಭಿನಯಿಸುತ್ತಿದ್ದ ಪ್ರಹ್ಲಾದ ಚರಿತ್ರೆಯಲ್ಲಿ ಹಿರಣ್ಯಕಶಿಪುವಾಗಿ, ಗುಲೇಬಾಕಾವಲಿಯಲ್ಲಿ ಮಂದಾರವಲ್ಲಿಯಾಗಿಯೂ ಜನಾನುರಾಗಿಯಾಗಿದ್ದರು. ಬಹುಶಃ ಇದು ದಕ್ಷಿಣ ಭಾರತದಲ್ಲಿನ ಮೊಟ್ಟಮೊದಲ ನಾಟಕ ಕಂಪನಿ. ಶ್ರೀಮತಿ ಜೇಜಮ್ಮನವರಿಗೆ ತನ್ನ ಜಾತಿ ಪಂಥದ ಬಗ್ಗೆಯಾಗಲೀ ವೃತ್ತಿ ಬಗ್ಗೆಯಾಗಲೀ ಯಾವುದೇ ರೀತಿ ಕೀಳರಿಮೆಯಾಗಲೀ ಅಳುಕಾಗಲೀ, ಅಂಜಿಕೆಯಾಗಲೀ ಇಲ್ಲ, ಹೆಮ್ಮೆ ಇತ್ತು.

ವಿದ್ಯಾರ್ಥಿಗಳಿಗೆ ಶಿಕ್ಷಣನೀವನ್ನಿಯುತ್ತಲೂ, ಅರಮನೆ ಕಾರ್ಯಕ್ರಮಗಳಲ್ಲೂ ನಾಡಿನ ಮೇಲ್ವರ್ಗಗಳ ಗಣ್ಯವ್ಯಕ್ತಿಗಳ ಮನೆಗಳಲ್ಲಿ ಶುಭ ಸಮಾರಂಭಗಳಲ್ಲಿ ವಿಶೇಷ ಆಹ್ವಾನದ ಮೇಲೆ ಭಾಗವಹಿಸುತ್ತಿದ್ದರು. ೧೯೫೬ರಿಂದ ಕೊಡಗು ಸಂಗೀತ ನಾಟಕ ಅಕಾಡೆಮಿಯಲ್ಲಿ ಸುಮರು ಹತ್ತು ವರ್ಷಗಳ ಕಾಲ ಜೇಜಮ್ಮನವರು ಭರತನಾಟ್ಯ ಶಿಕ್ಷಕಿಯಾಗಿ ಅಲ್ಲಿ ಅನೇಕ ಮಂದಿಶಿಷ್ಯರನ್ನು ತಯಾರು ಮಾಡಿರುತ್ತಾರೆ. ೧೯೬೩ರಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನಿತ್ತು ಹಿರಯಕಲಾವಿದೆಯನ್ನು ಗೌರವಿಸಿತು.

೧೯೭೦ರಲ್ಲಿ ನಾಡಿನ ಹಿರಿಯ ಸಂಗೀತ ಕಲಾವಿದರಾಗಿದ್ದ ದಿವಂಗತ ಆಸ್ಥಾನ ವಿದ್ವಾನ್‌ ಗಾನವಿಶಾರದ ಬಿ. ದೇವೇಂದ್ರಪ್ಪನವರು ತಮ್ಮ ಮಾರುತಿ ಮಂದಿರದಲ್ಲಿ ತುಂಬಿದ ವಿದ್ವತ್‌ ಸಭೆಯಲ್ಲಿ ಭರತನಾಟ್ಯಪ್ರವೀಣೆ ಎಂಬ ಬಿರುದನ್ನು ಸಕಲ ಖಿಲ್ಲತ್ತುಗಳೊಡನಿತ್ತು ಸತ್ಕರಿಸಿರುತ್ತಾರೆ.

ಜೇಜಮ್ಮನವರ ಶಿಕ್ಷಣ ಪದ್ಧತಿ: ಮೂಗೂರು ಪರಂಪರೆಯ ಆದ್ಯಪ್ರವರ್ತಕ ನಟ್ಟುವಾಂಗದ ಮೂಗೂರು ಅಮೃತ್ಪಪನವರು ರೂಪಿಸಿದಂಥೆ ಅಂಗಸಾಧಕ, ಅಡುವು, ಜತ್ತಿ ನಂತರ ಗೆಜ್ಜೆಪೂಜೆವರೆಗಿನ ಸಾಂಪ್ರದಾಯಿಕ ಪರಂಪರೆಯಂತೆ ನಡೆಸಿಕೊಂಡು ಬಂದವರು. ವಿದ್ಯಾರ್ಥಿಗಳು ಗಂಡಾಗಲೀ ಹೆಣ್ಣಾಗಲೀ, ಬಡವ, ಬಲ್ಲಿದನೆಂಬ ಭೇವೆಣಿಸದೆ ಕೆಲವು ಬಾರಿ ತಮ್ಮ ಮನೆಯಲ್ಲೇ ಆರ್ಥಿಕ ದೃಷ್ಟಿಯಿಂದ ಆಶಕ್ತರಾದವರಿಗೆ ಊಟ, ಉಪಹಾರಗಳನ್ನು ನೀಡುತ್ತಿದ್ದರು. ಆ ರೀತಿ ಪಡೆದವರಲ್ಲಿ ಕೆಲಕಾಲ ನಾನು ಒಬ್ಬನಾಗಿದ್ದೆ.

ಜೇಜಮ್ಮನವರ ಪ್ರದರ್ಶನ (ಮೂಗೂರು ಪರಂಪರೆಯಲ್ಲಿ) ಪ್ರಾರಂಭದಲ್ಲಿ ಆರಭಿಯಲ್ಲಿ ಚೂರ್ಣಿಕ, ಮೇಳ ಪ್ರಾಪ್ತಿ ಜತಿ, ನಂತರ ನಾಟರಾಗದಲ್ಲಿ ಮಂಗಳ, ಆಮೇಲೆ ಕಲಾವಿದೆಯ ಪ್ರವೇಶ, ಪುಷ್ಪಾಂಜಲಿ, ಗೀತೆ, ನಂತರ ಅಲರಿಪುಯಿಂದ ಹಿಡಿದು ತಿಲ್ಲಾನದವರೆಗಿನ ನೃತ್ಯಬಂಧಗಳು.

ವೃದ್ಧಾಪ್ಯದಲ್ಲಿ ಮಾನಸಿಕವಾಗಿಯೂ, ದೈಹಿಕವಾಗಿಯೂ ಬಹಳ ಬಳಲಿದವರಂತೆ ಕಾಣುತ್ತಿದ್ದರು. ಇದ್ದೊಬ್ಬಳು ಮಗಳು ಪಾರ್ಶ್ವವಾಯು ಪೀಡಿತಳಾಗಿ ತನ್ನ ಕಣ್ಣ ಮುಂದೆಯೇ ಶಿವಾಧೀನವಾದದ್ದು, ಒಡಹುಟ್ಟಿದ ತಂಗಿ ಮೂಗೂರಲ್ಲೆ ನೆಲಸಿದ್ದರು ಅವರಿಗೂ ವಯಸ್ಸಾಗಿತ್ತು. ಅನಾಥ ಹುಡುಗನ್ನೊಬ್ಬನನ್ನು ಸಾಕಿಕೊಂಡಿದ್ದರು. ಅವನೂ ಕೊನೆಗಳಿಗೆಯಲ್ಲಿ ಹೆಂಡತಿ ಮಕ್ಕಳನ್ನೂ ಜೇಜಮ್ಮನವರ ಮಡಿಲಿಗೆ ಹಾಕಿ ಮನೆ ತೊರೆದು ಹೋದ. ಇವರ ದೃಷ್ಟಿಯೂ ಮಂದವಾಯಿತು. ಎಲ್ಲವನ್ನೂ ಮನಸ್ಸಿಗೆ ಬಹಳ ಹಚ್ಚಿಕೊಂಡವರಂತೆ ತೋರುತ್ತಿದ್ದರು.

ನಾನು (ಕೊಡವೂರು ಭಾಗವತ ಮಾಧವರಾವ್‌) ಕೆ.ಬಿ. ಮಾಧವರಾವ್‌ ೧೯೮೩ರ ವರೆವಿಗೂ ಶಿಷ್ಯನಾಗಿ ೩೦ ರಿಂದ ೩೫ ವರ್ಷಗಳ ದೀರ್ಘಕಾಲ ಅವರ ನೆರಳಲ್ಲೇ ಇದ್ದವನು. ನಾನು ನೃತ್ಯ ಶಿಕ್ಷಣವನ್ನು ಕೊಡಲು ಶುರುಮಾಡಿದ ನಂತರವೂ ದಿನಕ್ಕೊಮ್ಮೆ ತಪ್ಪಿದಲ್ಲಿ ಎರಡು ದಿನಗಳಿಗೊಮ್ಮೆಯಾದರೂ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ನೃತ್ಯದ ಬಗ್ಗೆ ಹಿಂದಿನ ಕಲಾವಿದರ ಬಗ್ಗೆ, ದೇವದಾಸಿ ಪದ್ಧತಿ ಬಗ್ಗೆ ಕೆದಕಿ ಕೆದಕಿ ಅವರ ನೆನಪಿನಂಗಳದಿಂದ ಕಲೆ, ಕಲಾವಿದರ ಬಗ್ಗೆ ಕೆಲವು ಅಮೂಲ್ಯ ವಿಷಯಗಳನ್ನು ಸಂಗ್ರಹಿಸಿದೆ ಅದನ್ನೇ ಇಲ್ಲಿ ಕಾಣಿಸಿದ್ದೇನೆ.

ಶ್ರೀಮತಿ ಜೇಜಮ್ಮನವರು ಶಿವಾಧೀನರಾಗುವ ಬಹುಶಃ ೨೪ ತಿಂಗಳ ಮೊದಲಿರಬೇಕು. ಎಂದಿನಂತೆ ನಾನು ಅವರಲ್ಲಿಗೆ ಹೋದಾಗ ಮಾರನೆ ದಿನ ಬೆಳಿಗ್ಗೆ ಸ್ನಾನ ಮಾಡಿಕೊಂಡು ಬರಲು ಹೇಳಿದರು. ಅದರಂತೆ ನಾನು ಹೋದಾಗ ಮೂಗೂರು ಸುಬ್ಬಣ್ಣವರ ಭಾವಚಿತ್ರದ ಕೆಳಗೆ ಕುಳ್ಳಿರಿಸಿ ನಟುವಾಂಗದ ಮೂಗೂರು ಅಮೃತಪ್ಪನವರೂ, ಶ್ರೀಮತಿ ಜೇಜಮ್ಮನವರೂ ಹಿಂದೆ ಉಪಯೋಗಿಸುತ್ತಿದ್ದ ತಾಳ, ಗೆಜ್ಜೆ, ನೃತ್ಯಕ್ಕೆ ಸಂಬಂಧ ಪಟ್ಟಂತೆ ಹಲವು ಸೂಕ್ಷ್ಮ ವಿಚಾರಗಳನ್ನೊಳಗೊಂಡ ಕೆಲವು ಹಾಳೆಗಳನ್ನು ನನ್ನ ಕೈಯಲ್ಲಿಟ್ಟು ತಲೆಯ ಮೇಲೆ ತನ್ನ ಕೈಯಿಟ್ಟು ಅಪ್ಪಾ ನನಗೆ ಮಕ್ಕಳಿಲ್ಲ. ಮಗನೆಂದರೂ ನೀನೆ, ಶಿಷ್ಯನೆಂದರೂ ನೀನೆ, ತಾತ ಅಮೃತ್ಪಪನವರ ಆಶೀರ್ವಾದವೂ ಮೂಗೂರು ತ್ರಿಪುರ ಸುಂದರೀದೇವಿಯ ದಯೆಯೂ ಸದಾ ನಿನ್ನ ಮೇಲಿರಲಿ ಎಂದು ಹರಸಿ ಬೀಳ್ಕೊಟ್ಟರು. ಈ ಹಾರೈಕೆಯ ಹರಕೆಯೇ ನನ್ನ ಕಲಾ ಜೀವನದ ದಾರಿ ದೀಪ.

ನಂತರ ಜಾಸ್ತಿ ದಿನ ಕಳೆದಿಲ್ಲ ಒಮ್ಮೆ ಹೋದಾಗ ಈ ದಿನ ಇಲ್ಲೆ ಊಟ ಮಾಡಿಕೊಂಡು ಹೋಗಬೇಕೆಂದು ಕೇಳಿ ಊಟ ಹಾಕಿಸಿ ನಾಳೆ ದಿನ ಬೆಳಿಗ್ಗೆ ತಪ್ಪದೇ ೧೦.೩೦ಕ್ಕೆ ಬರಬೇಕೆಂದು ಹೇಳಿಕಳುಹಿಸಿದರು. ನನ್ನ ಗುರುವನ್ನು ಜೀವಂತ ನೋಡಿದ್ದು, ಮಾತನಾಡಿದ್ದು ಈ ದಿನಕ್ಕೇ ಕೊನೆಯಾಯ್ತು. ೧೪.೮.೧೯೮೩ ಭಾನುವಾರ ಕೊನೆಯ ರಾತಿರ. ೧೪.೮.೧೯೮೩ ರ ರಾತ್ರಿ ಬಹಳ ಹೊತ್ತಿನ ತನಕ ತನ್ನಷ್ಕ್ಕೆ ಯಾವುದೊ ಜಾವಳಿ, ಪದಗಳನ್ನು ಹೇಳಿಕೊಳ್ಳುತ್ತಿದ್ದರಂತೆ, ನಂತರ ಸಾಕು ಮಗನ ಮಡದಿಯನ್ನು ಕರೆದು ಅವರು ಬಾರದಿದ್ದಲ್ಲಿ ಯಾರನ್ನಾದರೂ ಕಳಿಹಿಸಿ ಅವರನ್ನು ಅಗತ್ಯ ಕರೆಸಬೇಕು ಎಂದರಂತೆ ಹಾಗೂ ಸ್ವಲ್ಪ ಕೇಸರಿಭಾತ್‌, ಚಾ ಮಾಡುವಂತೆ ಹೇಳಿ ಶೌಚಾಲಯಕ್ಕೆ ಹೋಗಿ ಬಂದು ಕುಳಿತವರೇ ಶಿವನೇ ಮಾದೇವ ಎಂದೂ ಹೇಳಿದ್ದು ಕೇಳಿಸಿತಂತೆ. ಅಷ್ಟೇ ರಾತ್ರಿ ೩ ಘಂಟೆಯ ಸಮಯ.

ಸಾಕುಮಗನ ಹೆಂಡತಿ ಚಾ ಮತ್ತು ಕೇಸರಿಭಾತ್‌ ಮಾಡಿ ತಂದಾಗ ಜೇಜಮ್ಮನವರ ಶರೀರ ಹಾಸಿಗೆಯಲ್ಲಿ ಒರಗಿತ್ತಂತೆ. ಆಗಲೇ ಅವರ ಆತ್ಮವು ಅನಂತದಲ್ಲಿ ಲೀನವಾಗಿ ಹೋಗಿತ್ತು.

ಶ್ರೀಮತಿ ಜೇಜಮ್ಮನವರು ೧೨.೫.೧೮೯೯ನೇ ಸೋಮವಾರ ಜನಿಸಿದರು ೧೫.೮.೧೯೮೩ನೇ ಸೋಮವಾರ ಶಿವಾಧೀನರಾದದ್ದು ಸ್ವಾತಂತ್ರ ದಿನಾಚರಣೆಯಂದು. ಶ್ರೀಮತಿ ಜೇಜಮ್ಮನವರಿಗೆ ಎರಡಕ್ಷರದ ಅರ್ಥಕ್ಕೇ ಚ್ಯುತಿಬಾರದಂತೆ ಶಿಷ್ಯರೊಡನೆ ಬಾಂಧವ್ಯವಿರಿಸಿಕೊಂಡವರು.