ಮೂಡಿ ಬಾ, ಮೂಡಿ ಬಾ, ಮೂಡಿ ಬಾರಾ
ನವದಿವ್ಯ ದಿನಮಣಿಯೆ ಮೂಡಿ ಬಾರಾ-
ಜಗದ ಕಲ್ಯಾಣಕ್ರತುಕುಂಡದಲಿ
ನಡೆಯುತಿರೆ ಕಾರಿರುಳ ತಮದ ಬಲಿ,
ಹರಿವರುಣ ಮಂಗಳಸ್ರೋತದಲಿ ಮಿಂದೆದ್ದು
ಮೂಡಿಬಾರಾ,
ಹೋಮಧೂಮದ ತೆರದಿ ಕಾವಳಂ ಮುಸುಕಿರಲು
ಚೈತನ್ಯ ಚಿನ್ಮಯನೆ ಮೂಡಿಬಾರಾ.

ಯುಗ ಯುಗಾಂತರದೆದೆಯ ಚೆಲುವಿಕೆಯ ಚೇತನವೆ,
ಯುಗಯುಗದ ಜೀವನದ ನಿತ್ಯ ಸಂಜೀವಿನಿಯೆ,
ಬಹುಕರ್ಮಮಯ ಜಗದ ಚಿರಜೀವಲೋಚನವೆ,
ಮೂಡಿಬಾರಾ.
ನಿತ್ಯಯಜ್ಞದ ಫಲವೆ, ಆನಂದಹೃದಯವೇ
ಭುವನಭವ್ಯಾತ್ಮವೇ ಮೂಡಿಬಾರಾ.