ಹಿನ್ನೆಲೆ

ಇಂದು ಮೂಡುಬಿದಿರೆ ಎಂದು ಕರೆಸಿಕೊಳ್ಳುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಮಹತ್ವದ, ಅಂತೆಯೇ ಕನ್ನಡ ಸಾಹಿತ್ಯಕ್ಕೆ, ರತ್ನಾಕರನಂತಹಾ ಕವಿಯನ್ನು ಕೊಡುಗೆಯಾಗಿ ಕೊಟ್ಟಿರುವ ಈ ಪುಟ್ಟ ಊರು ಇತಿಹಾಸ ಕಾಲದಲ್ಲಿ ‘ಬಿದಿರೆ’ ಎಂಬುದಾಗಿ ಗುರುತಿಸಲ್ಪಡುತ್ತಿತ್ತು. ‘ತುಳು ದೇಶಕ್ಕೆ ವಿಶಿಷ್ಟಮಪ್ಪ ನಗರ’, ‘ಜಿನಧರ್ಮದಾಗರ’, ‘ಧರೆಯೊಳಗಂ ಪ್ರಸಿದ್ಧಿ ಪಡೆದೊಪ್ಪುವ’ ನಗರ ಎಂದೆಲ್ಲ ಹೊಗಳಿಸಿಕೊಂಡಿರುವ ‘ಬಿದಿರೆ’ ವೇಂಕಟಪುರ, ಮೂಡುಬಿದಿರೆ, ವಂಶಪುರ ಎಂಬ ಹೆಸರುಗಳಿಂದಲೂ ಗುರುತಿಸಲ್ಪಡುತ್ತಿತ್ತು. ಬಿದಿರು ಹೆಚ್ಚಾಗಿ ಬೆಳೆಯುವ ಪ್ರದೇಶ ಎಂಬ ಅರ್ಥವನ್ನು ಸೂಚಿಸುವ ಈ ಎಲ್ಲ ಹೆಸರುಗಳೂ ಸಸ್ಯ ಸೂಚಿಗಳೇ ಆಗಿವೆ. ತುಳಿವಿನಲ್ಲಿ ‘ಬೆದ್‌ದ್ರ’ ‘ಬೆದ್ರ’ ಎಂದೂ ಗುರುತಿಸಲ್ಪಡುವ ಪದವೂ ಈ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಬೆಳೆಯಲ್ಪಡುತ್ತಿದ್ದ ಬಿದಿರಿನ ಸಂಕೇತವೇ ಆಗಿದೆ. ‘ಮೂಡು’ ದಿಕ್ಸೂಚಿ ಆದರೆ, ‘ಬಿದಿರೆ’ ಸಸ್ಯಸೂಚಿ ಆಗಿದೆ. ಇದಕ್ಕೆ ಸಂವಾದಿಯಾಗಿ ‘ಪಡುಬಿದ್ರಿ’ ಎಂಬ ಹೆಸರೂ ಪರಿಶೀಲಿಸಬಹುದು.

ಇತಿಹಾಸ ಪೂರ್ವ ಮೂಡುಬಿದಿರೆ

ಮಾನವನ ಮೊದಲ ಹೆಜ್ಜೆಗಳು ಮೂಡಿಬಿದಿರೆಯ ಪ್ರದೇಶಗಳಲ್ಲಿ ಮೊದಲು ಎಂದು ಇಡಲ್ಪಟ್ಟಿತ್ತು ಎಂಬುದನ್ನು ದೊರಕಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ದೊರಕುವ ಉತ್ತರ ಕುತೂಹಲಕಾರಿ. ಪ್ರಾಚೀನ ಶಿಲಾಯುಗದ ಮತ್ತು ಲೋಹಯುಗದ ಅವಶೇಷಗಳನ್ನು ಮೂಡುಬಿದಿರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರ್ತಿಸುವ ಸಾಧ್ಯತೆಗಳಿವೆ. ಮೂಡುಬಿದಿರೆ ಸಮೀಪದ ಕೋಡಂಗಲ್ಲು ಪ್ರಾಚೀನ ಮಾನವನ ಆವಾಸ ಸ್ಥಾನಗಳಲ್ಲಿ ಒಂದಾಗಿತ್ತು. ಇಲ್ಲಿಯ ಹೆಬ್ಬಂಡೆಗಳ ನಡುವೆ ಇರುವ ವಿಶಾಲವಾದ ಗುಹೆಗಳಲ್ಲಿ ಪ್ರಾಚೀನ ಮಾನವರು ಬದುಕಿದ್ದರೆಂದು ಹೇಳಬಹುದು. ಕೋಡಂಗಲ್ಲಿನ ಸುತ್ತಮುತ್ತ ನನ್ನ ಮಿತ್ರರಾದ ಡಾ|| ಪುಂಡಿಕ್ಯಾ ಗಣಪಯ್ಯ ಭಟ್ ಅವರೊಂದಿಗೆ ಸುತ್ತಾಡುತ್ತಿದ್ದಾಗ ಪ್ರಾಚೀನ ಮಾನವನ ಬಳಕೆಯ ಕೆಲವು ಶಿಲಾ ಆಯುಧಗಳನ್ನು ಗುರ್ತಿಸಿದ್ದೆವು. ಈ ಗುಹೆಗಳ ಸಮೀಪ ಇಂದಿಗೂ ಕಾಣಸಿಗುವ ಕೆಲವು ಶಿಲಾಸಮಾಧಿಗಳು ಬೃಹತ್ ಶಿಲಾಯುಗಕ್ಕೆ ಸೇರಿದವು. ಅಚ್ಚುಕಟ್ಟಾದ ಹೊಂಡಗಳನ್ನು ತೋಡಿ ಶವಗಳನ್ನು ಸಂಸ್ಕಾರ ಮಾಡಿ ಅವುಗಳ ಮೇಲೆ ಬೃಹತ್ ಶಿಲಾಫಲಕಗಳನ್ನು ಭೂಮಿಯ ಮೇಲ್ಮೈಗೆ ಸಮಾನಾಂತರವಾಗಿ ಹೊದಿಸಿ ಅಥವಾ ನೆಟ್ಟಗೆ ನಿಲ್ಲಿಸಿ ರಚಿಸಿರುವ ಶಿಲಾಸಮಾಧಿಗಳನ್ನು ಇಲ್ಲಿ ಕಾಣಬಹುದಾಗಿದೆ. ಇದರಂತೆ ಮೂಡುಬಿದಿರೆಯ ಮತ್ತೊಂದು ದಿಕ್ಕಿನಲ್ಲಿರುವ ಕಾಂತಾವರದ ಬೆಟ್ಟದ ಸಾಲುಗಳ ಮಧ್ಯದಲ್ಲಿಯೂ, ಬೋರ್‌ಕಟ್ಟಿ ಹಾಗೂ ಸುತ್ತಲಿನ ಪರಿಸರದಲ್ಲಿ ಶಿಲಾಯುಗದ ಜನರ ವಾಸ್ತವ್ಯಗಳಿದ್ದವೆಂದು ಹೇಳಬಹುದು. ಈ ಎಲ್ಲ ಆಧಾರಗಳ ಮೇಲೆ ಈ ಪ್ರದೇಶದಲ್ಲಿ ಕ್ರಿ.ಪೂ. ಸುಮಾರು ೮೦೦ರ ಹೊತ್ತಿಗೆ ಅಂದರೆ ಸು. ೨೭೫೦ ವರ್ಷಗಳಷ್ಟು ಪೂರ್ವದಲ್ಲಿಯೇ ಜನವಸತಿ ಇತ್ತು ಎಂಬ ಅಂಶವನ್ನು ಸ್ಪಷ್ಟ ಪಡಿಸುತ್ತದೆ.

ಇತಿಹಾಸದ ಮೊದಲ ಹೆಜ್ಜೆಗಳು

ಇತಿಹಾಸದ ಪ್ರಾರಂಭಿಕ ಕಾಲದಲ್ಲಿ ಕರ್ನಾಟಕದ ಬಹುಭಾಗ ಮೌರ್ಯರು ಹಾಗೂ ಶಾತವಾಹನರ ಆಳ್ವಿಕೆಗೆ ಒಳಗಾಗಿತ್ತು. ಬಹುಷಃ ಮೂಡುಬಿದಿರೆಯ ಇತಿಹಾಸದ ಮೊದಲ ಹೆಜ್ಜೆಗಳೂ ಈ ರೀತಿಯ ಪ್ರಾರಂಭ ಆಗಿರಬಹುದೆಂದು ಊಹಿಸಲು ಅವಕಾಶ ಇದೆ. ಕದಂಬ ಸಾಮ್ರಾಜ್ಯ ಸ್ಥಾಪನೆ ಆದ ನಂತರ ಕರಾವಳಿ ಕರ್ನಾಟಕದ ಮೇಲೆ ಮಯೂರ ಶರ್ಮನ ಪ್ರಭಾವ ದಟ್ಟವಾಗಿತ್ತು. ಕದಂಬ ಸಾಮ್ರಾಜ್ಯ ಪತನ ಹೊಂದಿದ ತರುವಾಯ ಚಾಲುಕ್ಯರ ಆಡಳಿತಕ್ಕೆ, ಮೂಡುಬಿದಿರೆ ಸೇರಿ ಹೋಯಿತು. ಕರಾವಳಿ ಪ್ರದೇಶವನ್ನು ಇಮ್ಮಡಿ ಪುಲಿಕೇಶಿ ತನ್ನ ಪರಾಕ್ರಮದ ಮೂಲಕ ಗೆದ್ದುಕೊಂಡ ವಿವರವನ್ನು ರವಿಕೀರ್ತಿಯ ಐಹೊಳೆ ಪ್ರಶಸ್ತಿ ತಿಳಿಸುತ್ತದೆ. ಕ್ರಿ.ಶ. ೩ನೇ ಶತಮಾನದಿಂದ, (ಅತ್ಯಂತ ಖಚಿತವಾಗಿ ಕ್ರಿ. ಶ. ೭ನೇ ಶತಮಾನದಿಂದ) ೧೪ನೇ ಶತಮಾನದವರೆಗೂ ತುಳುನಾಡನ್ನು ಆಳಿದ ಅಳುಪ ವಂಶದ ಅರಸರ ಆಳ್ವಿಕೆಗೆ ಮೂಡುಬಿದಿರೆಯೂ ಒಳಪಟ್ಟಿತ್ತು. ಈ ವಿಚಾರವು ಅಳಪರಸರಿಗೆ ಸಂಬಂಧಿಸಿದ ಆರು ಶಾಸನಗಳಿಂದ ತಿಳಿದುಬರುತ್ತದೆ. ಕ್ರಿ.ಶ. ೧೨೦೪-೧೩೯೬ರ ಅವಧಿಯವರೆಗಿನ ಈ ಆರೂ ಅಳುಪರ ಶಾಸನಗಳು ಅನುಕ್ರಮವಾಗಿ ಅಳುಪದೊರೆಗಳಾದ ಒಂದನೆಯ ಕುಲಶೇಖರ, ಬಮ್ಮದೇವಾಳ್ವೇಂದ್ರ, ಮೂರನೆಯ ಕುಲಶೇಖರ ಮತ್ತು ಎರಡನೆ ವೀರಪಾಂಡ್ಯನ ಆಳ್ವಿಕೆಗೆ ಸಂಬಂಧಿಸಿದವು. ಉದ್ಯಾವರ, ಮಂಗಳೂರು ಹಾಗೂ ಬಾರಕೂರುಗಳನ್ನು ಅನುಕ್ರಮವಾಗಿ ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಂಡು ತುಳುನಾಡನ್ನು ಆಳುತ್ತಿದ್ದ ಅಳುಪರು ತಮ್ಮ ಆಳ್ವಿಕೆಯ ಕೊನೆಯ ಕಾಲದಲ್ಲಿ ಮೂಡುಬಿದಿರೆಯನ್ನು ರಾಜಧಾನಿಯನ್ನಾಗಿಸಿಕೊಂಡು ಆಳ್ವಿಕೆ ನಡೆಸಿದ್ದರು ಎಂಬ ಕುತೂಹಲಕರ ಮಾಹಿತಿ ಶಾಸನಗಳಿಂದ ಲಭ್ಯವಾಗುತ್ತದೆ. ಅಳುಪ ವಂಶದ ಕೊನೆಯ ಅರಸರಾದ ಮೂರನೆಯ ಕುಲಶೇಖರ ಮತ್ತು ಎರಡನೆಯ ವೀರಪಾಂಡ್ಯರ ಕಾಲದಲ್ಲಿ ಮೂಡುಬಿದಿರೆಯು ಅಳುಪರ ರಾಜಧಾನಿ ಆಗಿತ್ತು. ಮೂಡುಬಿದಿರೆಯ ಅಮ್ಮನವರ ಬಸದಿಯ ಕ್ರಿ.ಶ. ೧೩೮೪ರ ಶಾಸನ ಒಂದರಲ್ಲಿ ಮೂರನೆಯ ಕುಲಶೇಖರನು “ಬಿದಿರೆಯ ಬಸದಿಯೊಳು ರತ್ನಸಿಂಹಾಸನಾ ರೂಢನಾಗಿ” ರಾಜ್ಯಭಾರ ಮಾಡುತ್ತಿದ್ದ ಎಂದು ಉಲ್ಲೇಖಿಸಲಾಗಿದೆ. ವ್ಯವಸ್ಥಿತ ಆಡಳಿತಕ್ಕೆ ಹೆಸರಾಗಿದ್ದ ಅಳುಪರು ಮೂಡುಬಿದಿರೆಯ ಗೌರಿ ದೇವಾಲಯಕ್ಕೂ, ಪರಿಸರದ ಕೆಲವು ದೇವಾಲಯಗಳಿಗೂ ದಾನದತ್ತಿಗಳನ್ನು ಕೊಟ್ಟಿದ್ದರು. ಅವರ ತಾಮ್ರ ಹಾಗೂ ಶಿಲಾ ಶಾಸನಗಳು ಮೂಡುಬಿದಿರೆಯ ನೆರೆ-ಹೊರೆಯ ಬೆಳ್ಮಣ್, ಶಿವಳ್ಳಿ, ಕಾಂತಾವರ, ಬೋಳ, ಕಡಂದರೆ ಮುಂತಾದ ಊರುಗಳ ಹೆಸರುಗಳನ್ನು ಪ್ರಸ್ತಾಪಿಸುತ್ತದೆ.

ಅಳುಪರ ಆಳ್ವಿಕೆಯ ನಂತರ ಕೆಲವು ಕಾಲ ಮೂಡುಬಿದಿರೆಯು ಹೊಯ್ಸಳರ ಆಡಳಿತಕ್ಕೆ ಒಳಪಟ್ಟಿತ್ತು. ಕ್ರಿ.ಶ. ೧೩೪೨ಕ್ಕೆ ಸೇರುವ ಮೂಡುಬಿದಿರೆ ಶಾಸನವೊಂದು ಹೊಯ್ಸಳ ೨ನೇ ಬಲ್ಲಾಳನು ಕಾನೂನು ಮತ್ತು ಶಿಸ್ತನ್ನು ಸ್ಥಾಪಿಸಿ ಪಾಲಿಸುವಲ್ಲಿ ವಹಿಸಿದ ಕಾಳಜಿಯನ್ನು ತಿಳಿಸುತ್ತದೆ. ಹೊಯ್ಸಳರ ನಂತರ ವಿಜಯ ನಗರದ ಉತ್ಕರ್ಷ ಕಾಲದಲ್ಲಿ, ಆ ಸಾಮ್ರಾಜ್ಯದ ಭಾಗವಾಗಿ ಮೂಡುಬಿದಿರೆ ಮುಂದುವರೆಯಿತು. ಆಡಳಿತಾತ್ಮಕ ದೃಷ್ಟಿಯಿಂದ ವಿಜಯನಗರ ಅರಸರು ತುಳುನಾಡನ್ನು ಮಂಗಳೂರು ಮತ್ತು ಬಾರಕೂರು ಎಂಬುದಾಗಿ ವಿಂಗಡಿಸಿದ್ದರು. ಮೂಡುಬಿದಿರೆಯು ಈ ಆಡಳಿತಾತ್ಮಕ ವಿಭಾಗದ ಸಿಹಿಫಲವನ್ನು ಅನುಭವಿಸಿತು. ಮಂಗಳೂರು ಪ್ರಾಂತ್ಯದ ಅತ್ಯಂತ ಪ್ರಭಾವಯುತವಾದ ಹಾಗೂ ವಿಶಿಷ್ಟವಾದ ನಗರವಾಗಿ ಮೂಡುಬಿದಿರೆ ಈ ಅವಧಿಯಲ್ಲಿ ಬೆಳವಣಿಗೆ ಹೊಂದಿತು. ಮಂಗಳೂರನ್ನು ಆಳುತ್ತಿದ್ದ ವಿಜಯನಗರದ ರಾಜಪ್ರತಿನಿಧಿಗಳು ಮೂಡುಬಿದಿರೆಯ ಪ್ರಗತಿಗೆ ಸಾಕಷ್ಟು ಉತ್ತೇಜನವನ್ನು ನೀಡಿದರು. ಈ ಸಮಯದಲ್ಲಿಯೇ ತುಳುನಾಡಿನಲ್ಲಿ ಹಲವಾರು ಸ್ಥಳೀಯ ರಾಜರು/ಅಧಿಕಾರಿಗಳು ಪ್ರವರ್ಧಮಾನಕ್ಕೆ ಬಂದರು. ಆ ರೀತಿ ಪ್ರವರ್ಧಮಾನಕ್ಕೆ ಬಂದ ಪ್ರಮುಖ ರಾಜಮನೆತನಗಳಲ್ಲಿ ಮೂಡುಬಿದಿರೆ ಸಮೀಪದಲ್ಲಿರುವ ಪುತ್ತಿಗೆಯನ್ನು ಕೇಂದ್ರವಾಗಿರಿಸಿಕೊಂಡು ಆಡಳಿತ ನಡೆಸುತ್ತಿದ್ದ ಚೌಟರ ಅರಸರು ಮನೆತನ ಮುಖ್ಯ ಆದದ್ದು.

ಚೌಟರು ಪುತ್ತಿಗೆಯಲ್ಲಿ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಮೂಡುಬಿದಿರೆ ವಿಜಯ ನಗರ ಸಾಮ್ರಾಜ್ಯದ ಒಂದು ಭಾಗವಾಗಿ ಅದಾಗಲೆ ಪ್ರಸಿದ್ಧಿಪಡೆದಿತ್ತು. ಈ ಚೌಟ ಅರಸರು ನೆರೆ-ತೆರೆಯ ಅರಸು ಮನೆತನಗಳಾದ ಕಾರ್ಕಳದ ಭೈರರು, ಮುಲ್ಕಿಯ ಸಾಮಂತರು, ಬಂಗಾಡಿಯ ಬಂಗರು, ಪಣಂಬೂರಿನ ಹೆಗ್ಗಡೆಗಳು ಮುಂತಾದವರೊಡನೆ ನಿರಂತರ ಯುದ್ಧಗಳನ್ನು ನಡೆಸಿದವರು. ಶಾಂತಿ, ಒಪ್ಪಂದವನ್ನು ಮಾಡಿಕೊಂಡರು. ಪುನಃ ಪುನಃ ಯುದ್ಧಗಳನ್ನು ನಡೆಸಿದರು. ಚೌಟರಸರ ಇತಿಹಾಸ ಗಮನಿಸಿದಾಗ, ಅವರ ಬಹುಪಾಲು ಆದಾಯ, ಸಮಯ, ಎಲ್ಲವೂ ನಿರಂತರ ಯುದ್ಧಗಳಿಂದಾಗಿ ಜರ್ಜರಿತಗೊಂಡುದು ಸ್ಪಷ್ಟವಾಗುತ್ತದೆ. ಇವೆಲ್ಲದರ ನಡುವೆಯೂ ಚೌಟ ಅರಸರಿಗೆ ಮೂಡುಬಿದಿರೆ ಒಂದು ಆಕರ್ಷಣೆಯ ಕೇಂದ್ರ ಆಗಿತ್ತು. ಚೌಟರಿಗೆ ಇಷ್ಟಾದರೂ ಮೂಡುಬಿದಿರೆ ಮೇಲೆ ನೇರವಾದ ಅಧಿಕಾರ ಇರಲಿಲ್ಲ. ಇವೆಲ್ಲದರ ಜೈನಧರ್ಮೀಯರಾಗಿದ್ದ ಚೌಟರು ಮೂಡುಬಿದಿರೆಯ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಬದುಕಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದವರಾಗಿದ್ದರು. ಮೂಡುಬಿದಿರೆಯ ಹಲವಾರು ಬಸದಿಗಳಿಗೆ, ಅಲ್ಲಿ ನಡೆಯುವ ಎಲ್ಲ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿದ್ದರು. ಇತಿಹಾಸ ಪ್ರಸಿದ್ಧ ತ್ರಿಭುವನ ತಿಲಕ ಚೂಡಾಮಣಿ ಬಸದಿಯ ನಿರ್ಮಾಣ ಕಾಲದಲ್ಲಿ ಚೌಟರ ಕೊಡುಗೆ ಅನನ್ಯವಾದದ್ದು. ಈ ಚೌಟರು ೧೪ನೇ ಶತಮಾನದಿಂದ ೧೭ನೇ ಶತಮಾನದವರೆಗೆ ಸುಮಾರು ೩೦೦ ವರ್ಷ ಆಳ್ವಿಕೆ ನಡೆಸಿದರು. ಕ್ರಿ.ಶ. ೧೬ನೇ ಶತಮಾನದ ವೇಳೆಗೆ ಈ ರಾಜವಂಶದ ಒಂದು ಟಿಸಿಲು ಮಂಗಳೂರಿನ ಬಳಿಯ ಉಳ್ಳಾಲದಿಂದಲೂ ರಾಜ್ಯಭಾರ ಮಾಡುತ್ತಿದ್ದಂತೆ ತಿಳಿದುಬರುತ್ತದೆ. ಕಾಲಾಂತರದಲ್ಲಿ ಚೌಟ ಅರಸರು ತಮ್ಮ ನೆಲೆಯನ್ನು ಪುತ್ತಿಗೆಯಿಂದ ಮೂಡುಬಿದಿರೆಗೆ ಸ್ಥಳಾಂತರಿಸಿದರು.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೂಡುಬಿದಿರೆಯಲ್ಲಿ ರಾಜಕೀಯ ಸ್ಥಿತ್ಯಂತರಗಳು ಬಹಳ ವೇಗವಾಗಿ ನಡೆದವು. ಸ್ಥಾನೀಯ ರಾಜರುಗಳು ಪ್ರಾಬಲ್ಯವನ್ನು ಹೊಂದಿದ್ದರು. ಇದರ ಲಾಭವನ್ನು ಪೋರ್ಚಗೀಸರು ಪಡೆದರು. ಇದೇ ಸಮಯದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕೆಳದಿ ಅರಸರ ಪ್ರಭಾವ ಮತ್ತು ಅಧಿಕಾರ ಕಾಣಿಸಿಕೊಂಡಿತು. ಕೆಳದಿ ಅರಸರು ವೀರಶೈವ ಮತಾವಲಂಬಿಗಳಾದ ಕಾರಣ ಜೈನಧರ್ಮ ರಾಜಕೀಯವಾಗಿ ಅನಾದರಣೆಗೆ ಒಳಗಾಯಿತು. ಇದು ಮೂಡುಬಿದಿರೆಯ ಬದುಕಿನ ಮೇಲೆಯೂ ತನ್ನ ಪ್ರಭಾವವನ್ನು ತೋರಿಸಿತು. ಜೈನ ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆ ಕುಂಠಿತವಾಯ್ತು. ಸು. ೧೭೬೩ರ ಹೊತ್ತಿಗೆ ಕೆಳದಿ ಅರಸು ಮನೆತನದ ಮೇಲೆ ಮೈಸೂರಿನ ಹೈದರ್‌ಆಲಿ ವಿಜ ಸಾಧಿಸಿದ. ಕೆಳದಿ ಸಾಮ್ರಾಜ್ಯದ ಪತನವಾಯ್ತು. ಇದರ ಪರಿಣಾಮವಾಗಿ ಮೂಡುಬಿದಿರೆ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ ಇದು ಬಹಳ ಕಾಲ ಮುಂದುವರೆಯಲಿಲ್ಲ. ಟಿಪ್ಪೂ ಸುಲ್ತಾನನ ಪತನದೊಂದಿಗೆ ಮೂಡುಬಿದಿರೆ ನೇರವಾಗಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.

ಮೂಡುಬಿದಿರೆ ನಗರಾಡಳಿತ

ರಾಜಕೀಯವಾಗಿ ಹಲವಾರು ಏರಿಳಿತಗಳನ್ನು ಕಂಡ ನಡುವೆಯೂ ಮೂಡುಬಿದಿರೆಯ ಸಾಮಾಜಿಕ, ಸಾಂಸ್ಕೃತಿಕ ಬದುಕಿನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ವಿಶೇಷ ಏರುಪೇರು ಕಾಣಿಸಿಕೊಳ್ಳಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಅಳುಪರ ಆಳ್ವಿಕೆಯ ಹೊತ್ತಿಗಾಗಲೆ ತುಳುನಾಡಿನ ಅತ್ಯಂತ ವಿಶಿಷ್ಟ ನಗರ ಎಂಬ ಕೀರ್ತಿಯನ್ನು ತನ್ನದಾಗಿಸಿಕೊಂಡಿದ್ದ ಮೂಡುಬಿದಿರೆ ತನ್ನ ಬದುಕಿನ ಸುವರ್ಣ ದಿನಗಳನ್ನು ಕಂಡದ್ದು ವಿಜಯನಗರ ಸಾಮ್ರಾಜ್ಯದ ದಿನಗಳಲ್ಲಿ. ಕ್ರಿ.ಶ. ೧೩೪೫ರಲ್ಲಿ ತುಳುನಾಡು ವಿಜಯನಗರ ಸಾಮ್ರಾಜ್ಯದ ಭಾಗವಾಗಿ ಮಾರ್ಪಟ್ಟಿತ್ತು. ಮೂಡುಬಿದಿರೆಯೂ ಇದಕ್ಕೆ ಹೊರತಾಗಿರಲಿಲ್ಲ. ಚೌಟ ಅರಸರ ರಾಜಧಾನಿ ಪುತ್ತಿಗೆಗೆ ಅತ್ಯಂತ ಸಮೀಪದಲ್ಲಿದ್ದರೂ ಆಡಳಿತ ದೃಷ್ಟಿಯಿಂದ ಮೂಡುಬಿದಿರೆ ಒಂದು ಸ್ವತಂತ್ರವಾದ ಸ್ವಯಮಾಡಳಿತ ವ್ಯವಸ್ಥೆಯನ್ನು ಪಡೆದುಕೊಂಡಿತ್ತು. ಚೌಟ ಅರಸರಿಗೆ ಆಡಳಿತಾತ್ಮಕವಾಗಿ ಮೂಡುಬಿದಿರೆಯ ಮೇಲೆ ಯಾವುದೇ ಅಧಿಕಾರ ಇರಲಿಲ್ಲ. ಇಲ್ಲಿರುವ ಹಲವು ಶಾಸನಗಳು ಹಾಗೂ ದಾಖಲೆ ಪತ್ರಗಳು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. ಆ ಹಂತದಲ್ಲಿ ಈ ನಗರವು “ವೇಣುಪುರದ ಎಂಟು ಪ್ರಜೆ ಸೆಟ್ಟಿಗಾರರು ನಾಲ್ವರು ಎಳಮೆಗೊಳಗಾದ ಸಮಸ್ತ ಹಲರು” ಎಂಬ ಸಮಿತಿಯಿಂದ ಆಳಲ್ಪಡುತ್ತಿತ್ತು. ಈ ಹೇಳಿಕೆಯನ್ನು ಗಮನಿಸಿದಾಗ ಮೂಡುಬಿದಿರೆಯ ನಗರಾಡಳಿತದಲ್ಲಿ ವ್ಯಾಪಾರಸ್ಥರೂ, ವ್ಯವಸಾಯಗಾರರೂ ಅಧಿಕಾರ ಹೊಂದಿದ್ದರೆಂಬುದು ಖಚಿತವಾಗುತ್ತದೆ. ಈ ಸೆಟ್ಟಿಗಾರರು ಹಾಗೂ ಎಳಮೆಯವರು ಧಾರ್ಮಿಕವಾಗಿಯೂ ಬಹಳ ಪ್ರಭಾವಶಾಲಿಗಳಾಗಿದ್ದರು. ಗುರು ಬಸದಿಯ ಒಂದು ಶಾಸನದಲ್ಲಿ “ಗುರುಗಳ ಬಸ್ತಿಯ ಪಾರಿಶ್ವನಾಥನ ಸನ್ನಿಧಿಯಲ್ಲಿ ಸಂಘ ಸಮುದಾಯವ ಮುಂದಿಟ್ಟು ಎಂಟು ಮಂದಿ ಸೆಟ್ಟಿಕಾರರು, ನಾಲ್ವರು ಎಳಮೆಗೊಳಗಾದ ಸಮಸ್ತ ಹಲರ ವಸ ಮಾಡಿದಂತೆ” ಆ ದಾನವನ್ನು ಮಾಡಲಾಗಿತ್ತು. ತ್ರಿಭುವನ ತಿಲಕ ಚೂಡಾಮಣಿ ಬಸದಿಯ ನಿರ್ಮಾಣ ದಾಖಲೆಯ ಶಾಸನವು “ಶ್ರೀ ಮದ್ವೇಕಟಪುರದ ಎಂಟು ಪ್ರಜೆ ಸೆಟ್ಟಿಕಾರರು, ನಾಲ್ವರು ಎಳಮೆಗೊಳಗಾದ ಸಮಸ್ತ ಹಲರು ನಿರೂಪಿಸಿದ ತ್ರಿಭುವನ ಚೂಡಾಮಣಿ ಎಂಬ ಮಹಾ ಚೈತ್ಯಾಲಯ” ಎಂಬ ಮಾತೂ ಸೆಟ್ಟಿಕಾರರು ಹಾಗೂ ಎಳಮೆಯವರ ಆಡಳಿತಾತ್ಮಕ ಪ್ರಭಾವವನ್ನು ಸ್ಪಷ್ಟಗೊಳಿಸುತ್ತದೆ. ಇದರ ಜೊತೆಗೆ ವಿಜಯನಗರದರಸರ ಪ್ರತಿನಿಧಿಯೊಬ್ಬರು ಮೂಡುಬಿದಿರೆ ನಗರದ ಆಂತರಿಕ ಆಡಳಿತದ ನಿರ್ವಹಣೆಗಾಗಿ ನಿಯುಕ್ತರಾಗಿದ್ದರು. ಹಲವಾರು ಶಾಸನಗಳಲ್ಲಿ “ಬಿದಿರೆಯ ಸ್ಥಳದ ಅಧಿಕಾರಿ” ಎಂಬ ಉಲ್ಲೇಖಗಳಲ್ಲಿ ಕಂಡು ಬರುತ್ತದೆ. ಮೂಡುಬಿದಿರೆಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ ಗಣಪಂತಾ, ಮಂಜಂಕಾ, ವಿಟ್ಳರಸ, ತಿಂಮಂಣ ಮುಂತಾದ ಹೆಸರುಗಳೂ ಶಾಸನಗಳಲ್ಲಿ, ದಾಖಲೆಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಈ ಸ್ಥಾನಿಕ ಅಧಿಕಾರಿಗಳು, ಸೆಟ್ಟಿಗಾರರು ಹಾಗೂ ಎಳಮೆಯವರೊಡಗೂಡಿ ಮೂಡುಬಿದಿರೆಯ ಆಡಳಿತವನ್ನು ನೋಡಿಕೊಳ್ಳತ್ತಿದ್ದರು. ಇಷ್ಟಾದರೂ ಆರ್ಥಿಕ ಮತ್ತು ಧಾರ್ಮಿಕ ದೃಷ್ಟಿಯಿಂದ ಮೂಡುಬಿದಿರೆ ಒಂದು ಮುಕ್ತ ನಗರವಾಗಿತ್ತೆಂದು ಶಾಸನಗಳು ಸೂಚಿಸುತ್ತದೆ. ಕರ್ನಾಟಕದ ವಿವಿಧ ಪ್ರದೇಶಗಳ ಅರಸುಗಳು, ಶ್ರೀಮಂತರು ಇಲ್ಲಿಯ ಜಿನ ಮಂದಿರಗಳಿಗೆ ಕೊಡುಗೆಗಳನ್ನು ಇತ್ತಿದ್ದರೆಂಬುದು ಕುತೂಹಲಕಾರಿ ಆಗಿದೆ. ಆಡಳಿತದ ಅನುಕೂಲತೆಯ ದೃಷ್ಟಿಯಿಂದ ಮೂಡುಬಿದಿರೆಯನ್ನು ಹಲವು ಕೇರಿಗಳಾಗಿ ವಿಭಜಿಸಿದ್ದರು. ಬೆಟ್ಟಕೇರಿ ಮತ್ತು ಮಡಲಂಗಡಿ ಕೇರಿ ಎಂಬ ಎರಡು ಕೇರಿಗಳ ಪ್ರಸ್ತಾಪ ಶಾಸನಗಳಲ್ಲಿ ಕಂಡುಬರುತ್ತದೆ. ಆದರೂ ಇಂತಹ ಹಲವು ಕೇರಿಗಳು ಮೂಡುಬಿದಿರೆಯಲ್ಲಿ ಇತ್ತೆಂಬುದು ಸ್ಪಷ್ಟ.

ನಗರಾಧೀಶ್ವರರು

ಮೂಡುಬಿದಿರೆಯ ನಗರಾಡಳಿತ ವಿಚಾರವನ್ನು ವಿವರಿಸುವಾಗ ನಗರಾಧೀಶ್ವರರ ಪ್ರಸ್ತಾಪವನ್ನು ಮುಖ್ಯವಾಗಿ ಹೇಳಬೇಕಾಗುತ್ತದೆ. ದಿ. ಎಂ. ಗಣಪತಿರಾವ್ ಅವರು ಬರೆದಿರುವ “ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ” ಮತ್ತು ದಿ|| ಲೋಕನಾಥಶಾಸ್ತ್ರಿ ಅವರ “ಮೂಡುಬಿದಿರೆ ಚರಿತೆ” ಎಂಬ ಎರಡು ಕೃತಿಗಳಲ್ಲಿ ಈ ವಿವರ ವಿಶೇಷವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಕ್ರಿ.ಶ. ೧ನೇ ಶತಮಾನದಲ್ಲಿ ಮೊಗಣೆನಾಡು ಸೀಮೆಗಳನ್ನು ಆಳಲಿಕ್ಕೆ ಬಲ್ಲಾಳರನ್ನು, ಹೆಗ್ಡೆಯವರನ್ನು ನಿಯಮಿಸಿದ ಮೇಲೆ ಈಗಿನ ಮುನಸಿಪಾಲಿಟಿ ಯೂನಿಯನ್ ಕ್ರಮದಂತೆ ನಗರ ಸಂಸ್ಥೆಗಳನ್ನು ಏರ್ಪಡಿಸಿದರು ಎಂದು ದಿ|| ಲೋಕನಾಥಶಾಸ್ತ್ರಿಗಳು ಅಭಿಪ್ರಾಯಪಡುತ್ತಾರೆ. “ಮೇಲಿನ ಸಂಸ್ಥೆಗೆ ಕೇರಿಗಳಿಲ್ಲದ ಬರಿ ಪೇಟೆಯಾದರೆ, ಅದಕ್ಕೆ ಪೇಟೆ ಎಂದೂ, ಕೇರಿಗಳಿದ್ದರೆ ಪಟ್ಣವೆಂದೂ, ಪಟ್ಣದಲ್ಲಿ ಸುತ್ತಲೂ ಗಂಡಿ ಮಧ್ಯೆ ಕೋಟಿ, ಗಡಿಗಡಿಗಳಲ್ಲಿ ‘ಗಂಡಿ’ ಇದ್ದರೆ ‘ಪುರ’ ಎಂದೂ, ಲಕ್ಷ ಗುಡಿಗಟ್ಟು ಇದ್ದರೆ ನಗರವೆಂದೂ, ನಾಲ್ಕು ಲಕ್ಷ ಗುಡಿಗಳಿಗಿಂತ ಮೇಲಿರುವ ನಗರಕ್ಕೆ ‘ಜಯಂತಿ’ ಎಂದೂ ಪಟ್ಣಗಳನ್ನು ವಿಂಗಡಿಸಿದರು. (ಈ ಮೇಲಿನ ವಿವರಗಳನ್ನು ನೀಡುವಾಗ ದಿ|| ಶಾಸ್ತ್ರಿಗಳು ಇದಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ದಾಖಲೆಗಳೂ ಒದಗಿಸಿಲ್ಲ.) ಇವುಗಳ ಆಡಳಿತ ಕಾರ‍್ಯವನ್ನು ನಿರ್ವಹಿಸುವುದಕ್ಕಾಗಿ ಪೇಟೆಯಲ್ಲಿ ೪ ಮಂದಿಯನ್ನು ಪಟ್ಣದಲ್ಲಿ ೮ ಮಂದಿಯನ್ನು ಪುರದಲ್ಲಿ ೧೨ ಮಂದಿಯನ್ನು, ನಗರದಲ್ಲಿ ೧೬ ಮಂದಿಯನ್ನು, ಜಯಂತಿಯಲ್ಲಿ ೨೦ ಮಂದಿಯನ್ನು ನೇಮಿಸಿದರು. ಈ ನಗರಾಧಿಕಾರಿಗಳಿಗೆ ‘ಹಲ್ಲರು’ ಎಂದು ಕರೆಯುತ್ತಿದ್ದರು. ಈ ಹಲ್ಲರಲ್ಲಿ ಬ್ರಾಹ್ಮಣ ಮೊದಲಾದ ನಾಲ್ಕೂ ವರ್ಣದವರಿದ್ದುದರಿಂದ ಇವರಿಗೆ ಚತುಸ್ಥಾನದವರೆಂದೂ ಕರೆಯುತ್ತಿದ್ದರು. ಈ ಹಲ್ಲರ ಮೇಲಿನ ಅಧಿಕಾರಿಯೆ ಪಟ್ಣಶೆಟ್ಟಿ. ಈ ಎಲ್ಲ ಅಧಿಕಾರಗಳೂ ವಂಶಪಾರಂಪರ‍್ಯವಾಗಿ ಬರುವಂತಹವಾಗಿದ್ದವು. ಪಟ್ಣಶೆಟ್ಟಿ ಮನೆತನ ಈಗಲೂ ಮೂಡುಬಿದಿರೆಯಲ್ಲಿ ಅಸ್ತಿತ್ವದಲ್ಲಿದೆ. ಜೈನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಂದಿಗೂ ಪ್ರಭಾವಯುತ ಸ್ಥಾನ-ಮಾನವನ್ನೂ ಪಡೆದುಕೊಂಡಿದೆ.

ಆರ್ಥಿಕ ಸ್ಥಿತಿಗತಿ

ಪ್ರಾಚೀನ ಕಾಲದಿಂದಲೂ ಮೂಡುಬಿದಿರೆ ತುಳುನಾಡಿನ ಸಂಪದ್ಭರಿತ ನಗರಗಳಲ್ಲಿ ಒಂದಾಗಿತ್ತು. ವ್ಯಾಪಾರ ಮತ್ತು ಕೃಷಿ ಇವರ ಆದಾಯದ ಮೂಲವಾಗಿತ್ತು. ಮೂಡುಬಿದಿರೆಯ ಸೆಟ್ಟಿಗಾರರು ಸಾಹಸಿಗಳು. ಇವರ ವಹಿವಾಟು ದೇಶ-ವಿದೇಶಗಳಲ್ಲಿ ಹರಡಿದ್ದಿತು. ಕ್ರಿ.ಶ. ೧೪ನೇ ಶತಮಾನದಿಂದ ೧೬ನೇ ಶತಮಾನದವರೆವಿಗೂ ಮೂಡುಬಿದಿರೆ ಒಂದು ಪ್ರಮುಖ ವಾಣಿಜ್ಯೋದ್ಯಮ ಕೇಂದ್ರವಾಗಿತ್ತು. ದೇಶ-ವಿದೇಶದ ಸರಕುಗಳಿಗೆ ಒಂದು ಮುಕ್ತ ಮಾರುಕಟ್ಟೆಯೂ ಆಗಿತ್ತು. ನವರತ್ನಗಳ ವ್ಯಾಪಾರಗಳಿಂದ ಇಲ್ಲಿಯ ವಣಿಕರು ಅಪಾರವಾದ ಸಂಪತ್ತು ಗಳಿಸಿದ್ದರು. ಚೀಣಾ ದೇಶದೊಂದಿಗೆ ಸಹಾ ವ್ಯಾಪಾರ ಸಂಪರ್ಕ ಹೊಂದಿದವರಾಗಿದ್ದರು. ಆ ದೇಶದ ರೇಷ್ಮೆ ಮುಂತಾದ ವಸ್ತ್ರಗಳಿಗೆ ಇಲ್ಲಿ ಭಾರೀ ಬೇಡಿಕೆ ಇತ್ತು, ಎಂಬ ಅಂಶವನ್ನು ಇಲ್ಲಿಯ ಕ್ರಿ.ಶ. ೧೪೩೦ರ ಶಾಸನವೊಂದು ಚಿತ್ರಿಸುತ್ತದೆ. ತ್ರಿಭುವನತಿಲಕ ಚೂಡಾಮಣಿ ಬಸದಿಯ ಹೊರವಲಯದಲ್ಲಿ ಶಿಲೆಯಲ್ಲಿ ಕೆತ್ತಲಾಗಿರುವ ಡ್ರ‍್ಯಾಗನ್ ಚಿತ್ರವು ಆ ಕಾಲದಲ್ಲಿ ಮೂಡುಬಿದಿರೆಯು ಚೀಣಾ ದೇಶದೊಂದಿಗೆ ಹೊಂದಿದ್ದ ಸಂಬಂಧಕ್ಕೆ ಸಾಕ್ಷಿಯಾಗಿದೆ. ವ್ಯಾಪಾರದಂತೆ ಕೃಷಿಯೂ ಮೂಡುಬಿದಿರೆಯ ಆರ್ಥಿಕತೆಯ ಅಡಿಪಾಯ ಆಗಿದ್ದಿತು. ಭತ್ತ, ಕಬ್ಬು ಮುಂತಾದ ಬೆಳೆಗಳ ಹೊಲಗಳಿಂದ, ಹೂ-ತೋಟಗಳಿಂದ, ಸುವ್ಯವಸ್ಥಿತವಾದ ರಸ್ತೆಗಳಿಂದ, ಹಲವಾರು ಕೆರೆಗಳಿಂದ ಮೂಡುಬಿದಿರೆ ರಮ್ಯವಾದ ಪಟ್ಟಣವಾಗಿತ್ತೆಂದು ಮೇಲಿನ ಶಾಸನದಿಂದ ತಿಳಿದು ಬರುತ್ತದೆ. ಇವೆಲ್ಲದರ ಜೊತೆಯಲ್ಲಿ ಮೂಡುಬಿದಿರೆ ಪ್ರಾಚೀನ ಕಾಲದಲ್ಲಿ ಪ್ರಮುಖ ವಿನಿಮಯ ಕೇಂದ್ರವೂ ಆಗಿತ್ತು. ಬಾರಕೂರು, ಮಂಗಳೂರುಗಳಲ್ಲಿ ಮುದ್ರಿಸಿದ ನಾಣ್ಯಗಳು ಇಲ್ಲಿ ವಿನಿಮಯ ಆಗುತ್ತಿದ್ದವು. ‘ಬಾರಕೂರ ಗದ್ಯಾನ’ ‘ಮಂಗಲೂರು ಗದ್ಯಾನ’ ಎಂಬ ಪ್ರಯೋಗಗಳು ಶಾಸನದಲ್ಲಿ ಇದೆ.

ಧಾರ್ಮಿಕ ಸ್ಥಿತಿಗತಿ

ಮೂಡುಬಿದಿರೆ ಒಂದು ಆದರ್ಶನಗರ. ಇಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ-ಜೈನ ಧರ್ಮೀಯರು ಅತ್ಯಂತ ಸೌಹಾರ್ದತೆಯಿಂದ ಬಾಳುತ್ತಿರುವ ಒಂದು ಪುಟ್ಟ ಊರು. ಅಳುಪರು ಇಲ್ಲಿ ತಮ್ಮ ಆಳ್ವಿಕೆಯನ್ನು ನಡೆಸುತ್ತಿದ್ದ ಕಾಲದಲ್ಲಿ ಮೂಡುಬಿದಿರೆ ಅತ್ಯಂತ ಪ್ರಸಿದ್ಧವಾದ ಶಕ್ತ್ಯಾರಾಧನೆಯ ಕ್ಷೇತ್ರವಾಗಿ ಹೆಸರು ಪಡೆದಿತ್ತು. ಇಂದಿಗೂ ಜನಾಕರ್ಷಣೆಯ ಕೇಂದ್ರವಾಗಿರುವ ಗೌರಿ ದೇವಾಲಯ (ದುರ್ಗಾ ದೇವಾಲಯ) ಮೂಡುಬಿದಿರೆಯ ಅತ್ಯಂತ ಪ್ರಾಚೀನ ಶ್ರದ್ಧಾಕೇಂದ್ರವಾಗಿದ್ದು, ಅಳುಪ ದೊರೆಗಳ ಆಶ್ರಯದಲ್ಲಿ ತನ್ನ ಪ್ರಸಿದ್ಧಿಯ ತುದಿಯನ್ನು ತಲುಪಿತ್ತು. ಜೈನಧರ್ಮ ಮೂಡುಬಿದಿರೆಯಲ್ಲಿ ತನ್ನ ಬೇರುಗಳನ್ನು ಕಂಡುಕೊಂಡಿತು ಎಂಬ ವಿಚಾರದಲ್ಲಿ ಅಭಿಪ್ರಾಯ ಭೇದವಿದೆ. ಇತಿಹಾಸತಜ್ಞ ಡಾ|| ಪಿ.ಎಮ್. ನರಸಿಂಹಮೂರ್ತಿ ಅವರು “ಅಮ್ಮನವರ ಮತ್ತು ಲೆಪ್ಪದ ಬಸದಿಗಳಲ್ಲಿನ ಕುರುಹುಗಳನ್ನು ಸರಿಯಾಗಿ ಅವಲೋಕಿಸಿದರೆ ಕ್ರಿ.ಶ. ೮-೯ ನೇ ಶತಮಾನದ ವೇಳೆಗೆ ಜಿನಧರ್ಮ ಇಲ್ಲಿದ್ದುದು ಕಂಡುಬರುತ್ತದೆ. ಪ್ರಾಯಶಃ ಇಲ್ಲಿನ ಮಠ ಹಾಗೂ ಗುರು ಪರಂಪರೆ ಬೆಳವಣಿಗೆ ಹೊಯ್ಸಳರ ಕಾಲಕ್ಕೆ, ಸೇರಿರಬೇಕು” ಎಂದು ಅಭಿಪ್ರಾಯ ಪಡುತ್ತಾರೆ. ಬಹುಜನ ಇತಿಹಾಸ ತಜ್ಞರ ಅಭಿಮತದಂತೆ ಸುಮಾರು ಕ್ರಿ.ಶ. ೧೨ನೇ ಶತಮಾನದ ಹೊತ್ತಿಗೆ ಜೈನಧರ್ಮ ಮೂಡುಬಿದಿರೆಯಲ್ಲಿ ತನ್ನ ಗಟ್ಟಿಯಾದ ನೆಲೆಗಳನ್ನು ಕಂಡುಕೊಂಡಿತ್ತು. ಇಂದು ಮೂಡುಬಿದಿರೆಯನ್ನು ‘ದಕ್ಷಿಣ ಜೈನ ಕಾಶಿ’ ಎಂದು ಗುರುತಿಸುವಷ್ಟರ ಮಟ್ಟಿಗೆ ಜೈನಧರ್ಮ ಇಲ್ಲಿ ಜನಪ್ರಿಯತೆಯನ್ನು ಹೊಂದಿತು. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಲ್ಲಿ ಒಂದನ್ನೊಂದು ಮೀರಿಸಬಲ್ಲ ಅಪೂರ್ವವಾದ ೧೮ ಬಸದಿಗಳಿಂದಲೂ, ಇಲ್ಲಿಯ ಜೈನ ಗುರುಪೀಠದಿಂದಲೂ ಶ್ರೀಮಂತ ವಣಿಕ ವರ್ಗದಿಂದಲೂ, ರತ್ನಾಕರನಂತಹ ಅದ್ವೀತಿಯ ಕವಿಯಿಂದಲೂ ಮೂಡುಬಿದಿರೆಯ ಜೈನ ಇತಿಹಾಸ ವರ್ಣರಂಜಿತವಾಗಿದೆ.

ಜೈನ ಗುರು ಪೀಠ

ಸ್ವರ್ಗೀಯ ಪಂ|| ಲೋಕನಾಥ ಶಾಸ್ತ್ರಿಗಳು ಮೂಡುಬಿದಿರೆ ಜೈನ ಮಠವು ಸು. ಕ್ರಿ.ಶ. ೧೧೨೦ರಲ್ಲಿ ಅಸ್ತಿತ್ವಕ್ಕೆ ಬಂದಿದೆ ಎಂದು ಅಭಿಪ್ರಾಯ ಪಡುವರು. ಲಭ್ಯ ಐತಿಹಾಸಿಕ ಆಧಾರಗಳ ಮೂಲಕ ಹೇಳುವುದಾದರೆ ಮೂಡುಬಿದಿರೆ ಜೈನಮಠಕ್ಕೆ ಸುಮಾರು ೬೦೦ ವರ್ಷಗಳ ಇತಿಹಾಸ ಇದೆ. ಕ್ರಿ. ಶ. ೧೩೮೪ರ ಮೂಡುಬಿದಿರೆ ಶಾಸನವೊಂದರಲ್ಲಿ ಅಳುಪದೊರೆ ಮೂರನೆ ಕುಲಶೇಖರನನ್ನು “ಶ್ರೀಮಚ್ಚಾರು ಕೀರ್ತಿ ದಿವ್ಯಶ್ರೀ ಪಾದಪದ್ಮಾರಾಧಕರ್” ಎಂದು ಸಂಭೋದಿಸುತ್ತದೆ. ಈ ಶಾಸನದ ಹಿನ್ನೆಲೆಯಲ್ಲಿ ಜೈನಮಠದ ಪ್ರಾಚೀನತೆಯನ್ನು ಕ್ರಿ.ಶ. ೧೩೮೪ರ ಕಾಲದಿಂದ ಕನಿಷ್ಠ ಒಂದು ಶತಮಾನದಷ್ಟು ಹಿಂದಕ್ಕೆ ಗುರುತಿಸಬಹುದೆಂದು ಕಾಣುತ್ತದೆ.

ಮೂಡುಬಿದಿರೆ ಜೈನಮಠ ಮತ್ತು ಶ್ರವಣಬೆಳಗೊಳ ಜೈನಮಠ

ಬಹಳ ಜನಪ್ರಿಯವಾದ ಅರ್ಥದಲ್ಲಿ ಮೂಡುಬಿದಿರೆ ಮಠವನ್ನು ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳದ ಜೈನಮಠದ ಶಾಖಾಮಠ ಎಂಬ ಅರ್ಥದಲ್ಲಿ ಗುರ್ತಿಸುವ ಒಂದು ಪರಂಪರೆ ಇದೆ. ಬಹುಶಃ ಈ ಎರಡೂ ಗುರುಪೀಠಗಳಿಗೆ ಇರುವ ಸಮಾನ ಹೆಸರುಗಳಿಂದಲೂ, ಕೆಲವೊಮ್ಮೆ ಬಳಸಲ್ಪಡುವ ಸಮಾನವಾದ ಬಿರುದುಗಳಿಂದಲೂ ಇಂತಹಾ ಅಭಿಪ್ರಾಯ ಮೂಡಿರುವ ಸಂದರ್ಭವೂ ಇದೆ. ಅಲ್ಲದೆ ಮೂಡಿಬಿದಿರೆ ಸಮೀಪದ ‘ನಲ್ಲೂರು’ ಎಂಬಲ್ಲಿನ ಇಂದು ಅಸ್ತಿತ್ವದಲ್ಲಿ ಇರದ, ಆದರೂ ಹಿಂದಿನ ಎಲ್ಲಾ ಐತಿಹಾಸಿಕ ಕುರುಹುಗಳನ್ನು ದಟ್ಟವಾಗಿ ಉಳಿಸಿಕೊಂಡಿರುವ ಜೈನಮಠ ಮತ್ತು ಅದರ ಇತಿಹಾಸವನ್ನು ಅವಲೋಕಿಸಿದಾಗ, ಶ್ರವಣಬೆಳಗೊಳದ ಐತಿಹಾಸಿಕವಾಗಿಯೂ ಬಲಿಷ್ಟವಾದ ಜೈನ ಪರಂಪರೆಯನ್ನು ಅವಲೋಕಿಸಿದಾಗ ಒಂದು ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ. ಮೂಡುಬಿದಿರೆ ಮತ್ತು ಅದರ ಮೂಲದ ನಲ್ಲೂರಿನ ಜೈನ ಮಠಗಳು ಶ್ರವಣಬೆಳಗೊಳದ ಶಾಖಾಮಠವಾಗಿಯೇ ಸ್ಥಾಪನೆ ಆಯ್ತು. ಈ ಎರಡೂ ಮಠಗಳಿಗೂ ಪ್ರಾರಂಭದಲ್ಲಿ ಶ್ರವಣಬೆಳಗೊಳದ ಶ್ರೀ ಮಠದ ದಟ್ಟವಾದ ನೆರಳಿನಲ್ಲಿಯೇ ತಮ್ಮ ಅಸ್ತಿತ್ವವನ್ನು ಗುರ್ತಿಸಿಕೊಂಡಿವೆ. ಈ ಐತಿಹಾಸಿಕ ಸತ್ಯವನ್ನು ಒಪ್ಪಿಕೊಂಡಾಗ ಮೂಡುಬಿದಿರೆ ಜೈನ ಮಠದ ಮಹತ್ತ್ವ ಏನೂ ಕಡಿಮೆ ಆಗುವುದಿಲ್ಲ. ಕ್ರಮೇಣ ರಾಜಕೀಯವಾಗಿಯೂ ಬಲಿಷ್ಟವಾದ ಮೂಡುಬಿದಿರೆ, ತನ್ಮೂಲಕವಾಗಿ ಇಲ್ಲಿನ ಜೈನಮಠಕ್ಕೂ ಸ್ವತಂತ್ರ ಅಸ್ತಿತ್ವವನ್ನು ದೊರಕಿಸಿ ಕೊಟ್ಟಿದೆ. ಮೂಲ ಯಾವುದೇ ಇದ್ದರೂ, ಮೂಡುಬಿದಿರೆಯ ಜೈನಮಠ ಹಂತ ಹಂತವಾಗಿ ಬೆಳೆಯುತ್ತ, ಜೈನಧರ್ಮದ ಏರುತ್ತಿದ್ದ ಜನಪ್ರಿಯತೆಯ ಜೊತೆಯಲ್ಲಿಯೆ, ತಾನೂ ಪ್ರಭಾವಶಾಲಿಯಾಗಿ ರೂಪುಗೊಂಡು, ಇಂದು ಈ ಊರಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಬದುಕಿನ ಒಂದು ಪ್ರಮುಖ ಅಂಗವಾಗಿ ಮಾರ್ಪಟ್ಟಿದೆ. ಮೂಡುಬಿದಿರೆಯ ಬಸದಿಗಳಲ್ಲಿರುವ ಆಂತರಿಕ ಹಾಗೂ ಬಾಹ್ಯ ಐತಿಹಾಸಿಕ ಸಂಗತಿಗಳನ್ನು ಗಮನಿಸಿದಾಗ, ಇಲ್ಲಿನ ಬಹುತೇಕ ಬಸದಿಗಳು ನಿರ‍್ಮಾಣ ಆದದ್ದು, ಇಲ್ಲಿನ ಗುರುಪೀಠದ ಪ್ರೇರೇಪಣೆಯಿಂದಲೆ ಎನ್ನಬಹುದು. ಬಹುತೇಕ ಶಾಸನಗಳಲ್ಲಿ “ಶ್ರೀ ಚಾರುಕೀರ್ತಿ ದೇವರ ನಿರೂಪದಿಂ ನಿರೂಪಿಸಿದರ್” ಎಂಬ ಹೇಳಿಕೆಗಳನ್ನು ಗಮನಿಸಿದಾಗ, ಈ ಮೇಲಿನ ಮಾತಿಗೆ ಆಧಾರ ದೊರಕುತ್ತದೆ. ಇದು ಮೂಡುಬಿದಿರೆಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಬದುಕಿನ ಮೇಲೆ ಗುರುಪೀಠಕ್ಕಿದ್ದ ಪ್ರಭಾವವನ್ನು ತೋರಿಸುತ್ತದೆ. ಇದರ ಜೊತೆಗೆ ಮೂಡುಬಿದಿರೆಯಲ್ಲಿ ಕಂಡುಬರುವ ಹಲವಾರು ಬಸದಿಗಳು, ಶಿಲಾಶಾಸನಗಳು, ತಾಮ್ರ ಶಾಸನಗಳು ಇಲ್ಲಿನ ನಿಶಿಧಿಗಳು ಮುಂತಾದವು ಕ್ರಿ.ಶ. ೧೪ನೇ ಶತಮಾನದಿಂದ ಕ್ರಿ.ಶ. ೧೬ನೇ ಶತಮಾನದವರೆಗಿನ ಜೈನ ಧರ್ಮದ ಉಚ್ಛ್ರಾಯ ಸ್ಥಿತಿಗೆ ಸಾಕ್ಷಿಯಾಗಿ ನಿಂತಿವೆ.

ನಾಗಾರಾಧನೆ

ಬಹುಮುಖಿ ಸಂಸ್ಕೃತಿಗೆ ತನ್ನನ್ನು ತಾನು ತೆರೆದುಕೊಂಡಿರುವ ಮೂಡುಬಿದಿರೆ ಒಂದು ಪ್ರಖ್ಯಾತ ನಾಗಾರಾಧನೆಯ ಸ್ಥಳವೂ ಹೌದು. ಕ್ರಿ.ಶ. ೧೪೦೭ರ ಗುರುಬಸದಿಯ ಶಾಸನದಲ್ಲಿ ಕಂಡುಬರುವ ‘ಅಂಕುಶವಾಳದ ನಾಗರಬನ’ ಎಂಬ ಉಲ್ಲೇಖ ಈ ಪ್ರದೇಶದ ನಾಗಾರಾಧನೆಯ ಪ್ರಾಚೀನತೆಯನ್ನು ಅರಿಯುವಲ್ಲಿ ಸಹಕಾರಿ ಆಗಿದೆ. ಅಲ್ಲದೆ ಇಲ್ಲಿರುವ ಗೋಪಾಲಕೃಷ್ಣ, ಮಹಲಿಂಗೇಶ್ವರ ಮುಂತಾದ ದೇವಾಲಯಗಳು ಈ ಪ್ರದೇಶದಲ್ಲಿ ಹಿಂದೂ ಧರ್ಮದ ಜನಪ್ರೀಯತೆಯನ್ನು ಎತ್ತಿ ತೋರಿಸುತ್ತದೆ.

ಮೂಡುಬಿದಿರೆಯ ದೇವಾಲಯಗಳು ಮತ್ತು ಜೈನ ಬಸದಿಗಳು

೧. ಗೌರೀ ದೇವಾಲಯ

ಲಭ್ಯ ದಾಖಲೆಗಳ ಪ್ರಕಾರ ಮೂಡುಬಿದಿರೆಯ ಅತಿಪ್ರಾಚೀನ ದೇವಾಲಯ. ಈ ದೇವಾಲಯಕ್ಕೆ ಸಂಬಂಧಿಸಿದ ಅತಿ ಪ್ರಾಚೀನ ಶಾಸನ ಕ್ರಿ.ಶ. ೧೨೦೫ರಲ್ಲಿ ದೊರಕಿದ್ದರೂ ಗಜಪೃಷ್ಟಾಕಾರದ ಈ ದೇವಾಲಯದ ಗರ್ಭಗೃಹದ ಅವಶೇಷವನ್ನು ಪರಿಶೀಲಿಸಿ, ಈ ದೇವಾಲಯವು ಕ್ರಿ.ಶ. ೧೦ನೇ ಶತಮಾನಕ್ಕೆ ಅನ್ವಯಿಸಬಹುದಾದದ್ದೆಂದು ದಿ|| ಡಾ|| ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ. ನಾಲ್ಕು ಅಡಿ ಎತ್ತರದ ಕಗ್ಗಲ್ಲಿನಿಂದ ಕೊರೆಯಲ್ಪಟ್ಟಿರುವ ಮಹಿಷಮರ್ಧಿನಿ ವಿಗ್ರಹವು ಅವಿಭಜಿತ ದ.ಕ. ಜಿಲ್ಲೆಯ ಶ್ರೇಷ್ಠ ಶಿಲ್ಪಗಳಲ್ಲಿ ಒಂದಾಗಿದೆ. ಬಾದಾಮಿ ಚಾಲುಕ್ಯರ ಶಿಲ್ಪಶೈಲಿಯನ್ನು ಹೋಲುತ್ತದೆ. “ವೃತ್ತಾಕಾರದ ವಿನ್ಯಾಸದ ಕೆಲವು ದೇವಾಲಯಗಳಿದ್ದರೂ ಬೌದ್ಧ ವಾಸ್ತುವನ್ನನುಕರಿಸುವ ಚೈತ್ಯಾಕಾರದ ದೇವಾಲಯಕ್ಕೆ ಇದೊಂದು ದೃಷ್ಟಾಂತ” ಎಂದು ಕೆಲವರ ಅಭಿಪ್ರಾಯ ಆಗಿದೆ. ಪಾಂಡ್ಯ ಚಕ್ರವರ್ತಿ ಒಂದನೆಯ ಕುಲಶೇಖರನ ಆಳ್ವಿಕೆಯ ಮತ್ತು ಎರಡನೆ ವೀರಪಾಂಡ್ಯದೇವನ ಆಳ್ವಿಕೆಗೆ ಸೇರಿದ ಶಾಸನಗಳು ಗೌರೀ ದೇವಾಲಯಕ್ಕೆ, ನೀಡಿದ ದಾನಗಳ ವಿಷಯದ ಕುರಿತಾಗಿ ಹೇಳುತ್ತದೆ.

ಜೈನ ಬಸದಿಗಳು

ಮೂಡುಬಿದಿರೆಯನ್ನು ಇಂದು “ದಕ್ಷಿಣ ಜೈನಕಾಶಿ” ಎಂದೇ ಗುರ್ತಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಇಲ್ಲಿರುವ ಅತ್ಯಂತ ವೈಶಿಷ್ಟ್ಯಪೂರ್ಣವೂ, ವೈವಿಧ್ಯಮಯವೂ ಆಗಿರುವ ೧೮ ಜೈನ ಬಸದಿಗಳು. ಈ ಎಲ್ಲ ಬಸದಿಗಳು ವಾಸ್ತುಶಿಲ್ಪದ ದೃಷ್ಟಿಯಿಂದ ೧೫-೧೬ನೇ ಶತಮಾನದಲ್ಲಿ ರಚಿತವಾದವು. ಆದರೆ ಐತಿಹಾಸಿಕ ದಾಖಲೆಗಳ ಕೊರತೆಯಿಂದಾಗಿ ಇವುಗಳನ್ನು ಅವುಗಳ ರಚನೆಯ ಕಾಲಕ್ರಮದಂತೆ ಖಚಿತವಾಗಿ ಗುರ್ತಿಸುವುದಕ್ಕೆ ತೊಡಕುಗಳಿವೆ. ಕೆಲವು ಬಸದಿಗಳ ಬಗ್ಗೆ ಮಾತ್ರ ಅಗತ್ಯ ವಿವರಗಳು ದೊರೆಯುತ್ತದೆ. ಇವುಗಳಲ್ಲಿ ಹಿರೇ ಬಸದಿ ಅತ್ಯಂತ ಪ್ರಾಚೀನವಾದದ್ದು. ಆದರೆ ಇಲ್ಲಿರುವ ಶಾಸನದ ಅಕ್ಷರಗಳು ಅಳಿಸಿ ಹೊಗಿರುವುದರಿಂದ ನಿರ್ಮಾಣ ಕಾಲವನ್ನು ನಿಖರವಾಗಿ ಹೇಳುವುದು ಕಷ್ಟ. ಆದರೆ, ೧೫೩೬ರಲ್ಲಿ ಈ ಬಸದಿಯ ನಮಸ್ಕಾರ ಮಂಟಪದ ಜೀರ್ಣೋದ್ಧಾರ ನಡೆಯಿತೆಂದು ಒಂದು ಕಂಬದಲ್ಲಿ ಕೆತ್ತಿದ ಶಾಸನದಿಂದ ತಿಳಿಯಲ್ಪಡುತ್ತದೆ. ಮೂಡುಬಿದಿರೆಯ ಬಸದಿಗಳಲ್ಲಿ ಗುರುಗಳ ಬಸದಿ ಅತ್ಯಂತ ಮಹತ್ತ್ವವಾದದ್ದು. ಬಸದಿಯ ಮೂಲ ನಾಯಕ ಭಗವಾನ್ ಪಾರ್ಶ್ವನಾಥ ಸ್ವಾಮಿ. ಇದು ೯ ಅಡಿ ಎತ್ತರದ ಕಾರ್ಯೋತ್ಸರ್ಗದ ಕರಿಶಿಲೆಯ ಮನೋಜ್ಞವಾದ ಬಿಂಬ. ಈ ವಿಗ್ರಹವನ್ನು ಶಾಲಿವಾಹನ ಶಕ ೬೩೬ರಲ್ಲಿ (ಕ್ರಿ.ಶ. ೭೧೪) ಇಲ್ಲಿಯ ಶ್ರಾವಕರು ಪ್ರತಿಷ್ಠಿಸಿದರು ಎಂದು ಮೂಲ ವಿಗ್ರಹದ ಸಿಂಹಪೀಠದಿಂದ ತಿಳಿದುಬರುತ್ತದೆ. ಹೊರಗಿನ ಗದ್ದಿಗೆ ಮಂಟಪವನ್ನು ಕ್ರಿ.ಶ. ೧೧೩೮ರಲ್ಲಿ ಕಟ್ಟಿಸಿದರೆಂದು ಮಂಟಪದ ಶಾಸನದಲ್ಲಿ ಹೇಳಲಾಗಿದೆ. ಮೂಡುಬಿದಿರೆ ಮಠಾಧೀಶರ ಪಟ್ಟಾಭಿಷೇಕ ಕಾರ್ಯಕ್ರಮಗಳೂ ಈ ಬಸದಿಯ ‘ಚಂದನದ ಪೀಠದಲ್ಲಿ’ ನಡೆಯುತ್ತದೆ ಎಂಬುದು ಗಮನಾರ್ಹ ಸಂಗತಿ. ಈ ಬಸದಿಗೆ ‘ಸಿದ್ಧಾಂತ ಬಸದಿ’ ಎಂಬ ಪರ್ಯಾಯ ಹೆಸರೂ ಇದೆ. ಜೈನಧರ್ಮದ ಸೈದ್ಧಾಂತಿಕ ಅಡಿಗಲ್ಲೆಂದು ಪ್ರಾಜ್ಞರು ಗುರ್ತಿಸಿರುವ ‘ಧವಲಾ’ ‘ಜಯ ಧವಲಾ’ ‘ಮಹಾ ಧವಲಾ’ ಎಂಬ ಅಪೂರ್ವ ಕೃತಿಗಳು ಈ ಬಸದಿಯಲ್ಲಿಯೆ ಸಂರಕ್ಷಿಸಲ್ಪಟ್ಟಿತ್ತು. ಜೊತೆಗೆ ಅತ್ಯಪೂರ್ವವೂ, ಅನ್ಯತ್ರ ದುರ್ಲಭವೂ ಆದ ನವರತ್ನಗಳಿಂದ ನಿರ್ಮಿತವಾದ ಜಿನ ಬಿಂಬಗಳಿಂದಲೂ ಗುರುಬಸದಿ ಅತ್ಯಂತ ಮಹತ್ವದ್ದಾಗಿದ್ದು ಈ ಬಿಂಬಗಳ ದರ್ಶನಕ್ಕಾಗಿಯೆ ದೇಶ-ವಿದೇಶಗಳಿಂದ ಶ್ರದ್ಧಾವಂತರು ಪ್ರತಿನಿತ್ಯ ಮೂಡುಬಿದಿರೆಗೆ ಆಗಮಿಸುತ್ತಾರೆ. ‘ಲೆಪ್ಪದ ಬಸದಿ’ ಮೂಡುಬಿದಿರೆ ಬಸದಿ ಸಮೂಹಗಳಲ್ಲಿ ಅತ್ಯಂತ ಭಿನ್ನವಾದದ್ದು. ವಿಶಿಷ್ಟವಾದ ಮಣ್ಣಿನ ಲೆಪ್ಪದಿಂದ ಮಾಡಿದ ೪ ಅಡಿ ಉನ್ನತವಾದ ಶ್ವೇತ ವರ್ಣದ ಪಲ್ಯಂಕಾಸನದಲ್ಲಿ ಮಂಡಿತರಾದ ಭಗವಾನ್ ಚಂದ್ರನಾಥ ಸ್ವಾಮಿಯ ವಿಗ್ರಹವು ಗರ್ಭಗುಡಿಯಲ್ಲಿದೆ. ಹೊರಗಿನ ಯಕ್ಷಮಂಟಪದಲ್ಲಿ ಬಲಬದಿಯಲ್ಲಿ ಶ್ಯಾಮಯಕ್ಷ ಮತ್ತು ಎಡಬದಿಯಲ್ಲಿ ಅಷ್ಟಭುಜಗಳಿಂದ ಶಸ್ತ್ರಾಲಂಕೃತೆಯಾದ ಜ್ವಾಲಾಮಾಲಿನಿ ದೇವಿಯ ಸುಂದರವಾದ ಮಣ್ಣಿನ ವಿಗ್ರಹಗಳಿವೆ. ಮಣ್ಣಿನ ಮೂರ್ತಿಗಳಿಂದಾಗಿ ಈ ಬಸದಿ ‘ಲೆಪ್ಪದ ಬಸದಿ’ ಎಂದು ಕರೆಸಿಕೊಂಡಿದೆ. ಜನರ ನಾಲಿಗೆಯ ಮೇಲೆ ‘ಹೊಸ ಬಸದಿ’ ಎಂದು ಕರೆಯಲ್ಪಡುವ “ತ್ರಿಭುವನ ತಿಲಕ ಚೂಡಾಮಣಿ ಬಸದಿ” ಇಲ್ಲಿನ ಇತರ ಎಲ್ಲ ಬಸದಿಗಳಿಗಿಂತಲೂ ದಿವ್ಯವೂ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಿಂದ ಭವ್ಯವೂ ಆಗಿದೆ. ಮೂಡುಬಿದಿರೆ ‘ಜೈನಕಾಶಿ’ ಆಗುವುದರಲ್ಲಿ ಈ ಬಸದಿಯ ಕೊಡುಗೆ ಅಪೂರ್ವವಾದದ್ದು. ಅಧಿಕ ಸಂಖ್ಯೆಯಲ್ಲಿ ಶಿಲಾ ಕಂಭಗಳು ಇರುವುದರಿಂದಾಗಿ ಇದನ್ನು ‘ಸಾವಿರ ಕಂಬದ ಬಸದಿ’ ಎಂದೂ ಕರೆಯುತ್ತಾರೆ. ಬಸದಿಯು ವಿಶಾಲವಾಗಿದ್ದು ಮೂರು ಅಂತಸ್ತಿನಿಂದ ಕೂಡಿದೆ. ಹೊರಗಿನಿಂದ ಪ್ರವೇಶಿಸುವಾಗ ಗೋಪುರ ದ್ವಾರ ಮಂಟಪ, ಭೈರಾದೇವಿ ಮಂಟಪ ಚಿತ್ರಾದೇವಿ ಮಂಟಪ, ನಮಸ್ಕಾರ ಮಂಟಪ, ತೀರ್ಥಂಕರ ಮಂಟಪ, ಲಕ್ಷ್ಮೀ ಮಂಪಟ, ಮತ್ತು ಗರ್ಭಗೃಹ ಮಂಟಪಗಳೆಂಬ ಏಳು ಮಂಟಪಗಳು ಪರಸ್ಪರ ಬೆಸೆದುಕೊಂಡು ಉದ್ದಕ್ಕೆ, ಚಾಚಿಕೊಂಡಿದೆ. ಗರ್ಭಗೃಹದಲ್ಲಿ ಪಂಚಲೋಹ ನಿರ್ಮಿತವಾದ ೯ ಅಡಿ ಎತ್ತರದ ಶ್ರೀ ಚಂದ್ರನಾಥ ಸ್ವಾಮಿಯ ವಿಗ್ರಹವು ವಿರಾಜಿಸುತ್ತದೆ. ಈ ಬಸದಿಯು ಮೂರು ಹಂತಗಳಲ್ಲಿ ನಿರ‍್ಮಾಣ ಆಗಿದೆ. ಮೊದಲ ಹಂತದ ನಿರ‍್ಮಾಣವು ಕ್ರಿ.ಶ. ೧೪೩೦ರಲ್ಲಿ. ಈ ಬಸದಿಯ ಒಳಗೋಡೆಯಲ್ಲಿರುವ ೨೯.೧.೧೯೪೦ರ ಶಾಸನವು ಈ ಜಿನಮಂದಿರವನ್ನು ವಿಜಯನಗರದ ಅರಸ ಎರಡನೆ ದೇವತಾಯನ ಆಳ್ವಿಕೆಯಲ್ಲಿ, ಆತನ ನಿರೂಪದಿಂದ ಮಂಗಳೂರು ರಾಜ್ಯದ ರಾಜ್ಯಪಾಲ ದೇವರಾಜ ಒಡೆಯನು ಅಭಿನವ ಚಾರುಕೀರ್ತಿ ಪಂಡಿತ ದೇವರಿಗೆ ಜಿನಾಲಯ ನಿರ್ಮಾಣಾರ್ಥವಾಗಿ ಕೊಟ್ಟ ಕ್ಷೇತ್ರದಲ್ಲಿ ಶಾರಿಕೆನಾಡು ಚೌಟರು ಹಾಗೂ ೬ ಮಂದಿ ಬಲ್ಯಾಳದ ಸಹಾಯದಿಂದ ಮೂಡುಬಿದಿರೆಯ ಎಂಟು ಪ್ರಜೆ ಸೆಟ್ಟಿಕಾರರು, ನಾಲ್ವರು ಎಳಮೆಯವರು, ಸಮಸ್ತ ಹಲರು ಜಗತ್ತಿಗೆ ಆಶ್ಚರ್ಯ ಉಂಟುಮಾಡುವ ರೀತಿಯಲ್ಲಿ ನಿರ್ಮಿಸಿದರೆಂದು ತಿಳಿಯುತ್ತದೆ. ೨೭.೩.೧೪೩೦ ನೆಯ ಚೈತ್ರ ಶುದ್ಧ ಪಂಚಮಿಯ ರವಿವಾರದಂದು ಬಸದಿಯ ಮೊದಲ ಹಂತದ ನಿರ‍್ಮಾಣ ಕಾರ್ಯವು ಮುಗಿಯಿತು. ತರುವಾಯ ಮೂಡುಬಿದಿರೆಯ ೬೦ ಮಂದಿ ಸೆಟ್ಟಿಗಳು ೭-೪-೧೯೫೧ರಂದು ಎರಡನೆ ಹಂತದ ನಿರ್ಮಾಣಕಾರ್ಯ ನಡೆಯಿತು. ಈ ಬಸದಿಯು ತನ್ನ ಮೂರನೆ ಹಂತದ ವಿಸ್ತರಣೆಯನ್ನು ೧೪೬೨ ರಲ್ಲಿ ನೆರವೇರಿಸಲಾಯ್ತು. ವಿಜಯ ನಗರದ ಭೈರವರಾಯನು ಬಸದಿಯ ಮೂರನೆಯ ನೆಲೆಗೆ ತಾಮ್ರದ ಹೊದಿಕೆ, ಧ್ವಜ ಸ್ಥಂಭಕ್ಕೆ, ತಾಮ್ರದ ತಗಡನ್ನು ಹೊದಿಸಿ, ಅನೇಕ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ನೀಡಿದನು. ಆತನ ಪಟ್ಟದ ರಾಣಿ ನಾಗಲಾದೇವಿಯು ಬಸದಿಯ ಮುಂಭಾಗದಲ್ಲಿ ೫೦ ಅಡಿ ಎತ್ತರದ ಮಾನಸ್ತಂಭವನ್ನು ಮಾಡಿಸಿದಳೆಂದು ಇಲ್ಲಿಯ ಅನೇಕ ಶಾಸನಗಳು ನಿರೂಪಿಸುತ್ತವೆ ಎಂಬುದಾಗಿ ಪಂ|| ದೇವಕುಮಾರ ಶಾಸ್ತ್ರಿಗಳು ಅಭಿಪ್ರಾಯ ಪಡುತ್ತಾರೆ. ಆದರೆ ಈ ಬಸದಿಯ ರಚನಾ ಸ್ವರೂಪದ ಹಿನ್ನೆಲೆಯಲ್ಲಿ ಗುರ್ತಿಸಿದಾಗ ಬಸದಿಯ ನಿರ‍್ಮಾಣದ ಮೊದಲ ಹಂತ ಗರ್ಭಗುಡಿಯಿಂದ ಚಿತ್ರಾದೇವಿ ಮಂಟಪದವರೆವಿಗೂ, ಎರಡನೆ ಹಂತ ಭೈರಾದೇವಿ ಮಂಟಪವೆಂದೂ, ಮೂರನೆಯಹಂತ ನಾಗಲಾದೇವಿಯಿಂದ ನಿರ‍್ಮಾಣವಾದ ಮಾನಸ್ತಂಭ ಮತ್ತು ಆನಂತರದ ರಚನೆ ಎನ್ನಬಹುದು. ಗರ್ಭಗೃಹದಿಂದ ಚಿತ್ರಾದೇವಿ ಮಂಟಪ, ರತ್ನಾಕರ ಪೀಠದವರೆಗಿನ ವಾಸ್ತುವಿನಲ್ಲಿ ಏಕರೂಪತೆ ಇದೆ. ಚಿತ್ರಾದೇವಿ ಮಂಟಪಕ್ಕೆ ಮುಂದುವರೆದ ಸ್ವರೂಪದಲ್ಲಿದ್ದರೂ ಸ್ವತಂತ್ರತೆಯನ್ನು ಭೈರಾದೇವಿ ಮಂಟಪ ಕಾಯ್ದುಕೊಂಡಿದೆ. ಆದುದರಿಂದ ಮೊದಲ ರಚನೆಯು ಚಿತ್ರಾದೇವಿ ಮಂಟಪದವರೆಗೆ ರಚಿತವಾಗಿತ್ತು ಎಂದು ಊಹಿಸುವುದು ಹೆಚ್ಚು ಸಮಂಜಸವೆಂದು ನನ್ನ ಭಾವನೆ. ಒಟ್ಟಿನಲ್ಲಿ ಈ ಬಸದಿಯು ಒಗ್ಗಟ್ಟಿನ ಪ್ರತೀಕದಂತಿದ್ದು ಇದರಲ್ಲಿ ಮೂಡುಬಿದಿರೆಯ ಸಮಸ್ತ ಶ್ರಾವಕರು, ಸೆಟ್ಟಿಗಾರರು, ಎಳವೆಯವರು, ಆಳರಸರು- ಹೀಗೆ ಎಲ್ಲ ವರ್ಗದ ಕೊಡುಗೆಗಳ ಮೂಲಕ ೧೪೩೦ರಲ್ಲಿ ನಿರ‍್ಮಾಣಕಾರ‍್ಯ ಪ್ರಾರಂಭಗೊಂಡು ೧೪೭೬ರಲ್ಲಿ ಇಂದಿನ ಸ್ವರೂಪವನ್ನು ಪಡೆಯಿತು. ಹೊಸ ಬಸದಿಯ ಪ್ರಮುಖ ಆಕರ್ಷಣೆ ಎಂದರೆ ಭೈರಾದೇವಿ ಮಂಟಪದಲ್ಲಿರುವ ಅತ್ಯಪೂರ್ವವಾದ ಶಿಲಾಸ್ತಂಭಗಳು. ಇಲ್ಲಿಯ ಒಂದೊಂದು ಕಂಬಗಳೂ ವೈವಿಧ್ಯಮಯವೂ, ಭವ್ಯವೂ ಆಗಿದ್ದು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತವೆ. ಮಂಟಪದ ಹೊರವಲಯದಲ್ಲಿ ವಿವಿಧ ಪ್ರಾಣಿಗಳ, ಕುದುರೆ ಸವಾರರ, ಯುದ್ಧ ಸನ್ನದ್ಧ ಸೈನಿಕರ, ಉಬ್ಬುಶಿಲ್ಪಗಳಿವೆ. ಜಿಂಫೆಗೆ ನೊಗ ಹೂಡಿರುವ ಮತ್ತು ಡ್ರ‍್ಯಾಗನ್‌ನ ಉಬ್ಬು ಚಿತ್ರಗಳು ನೋಡುಗರನ್ನು ಚಕಿತಗೊಳಿಸುತ್ತದೆ. ಈ ಬಸದಿಯ ಅತ್ಯಪೂರ್ವ ಶಿಲ್ಪಕಲಾ ಸೌಂದರ್ಯವನ್ನು, ಇಲ್ಲಿಯ ವಾಸ್ತು ವೈಭವವನ್ನು ಪರಿಭಾವಿಸಿಯೆ ಇಲ್ಲಿಯ ಶಾಸನವೊಂದರಲ್ಲಿ ಉಕ್ತವಾಗಿರುವ “ಮಹಾ ಚೈತ್ಯಾಲಯಾ ಜಗದಾಶ್ಚರ್ಯಮಪ್ಪಂತು ನಿರ್ಮಿಸಿದರು” “ಶಿಲ್ಪಕೌಶಲಮಂ ಭಾವಿಸಿ ವಿಶ್ವಕರ್ಮ ನಡುಗಿಂದಂ ಶೀರ್ಷಮಂ ತೂಗುವಂ” ಎಂಬ ಹೇಳಿಕೆಗಳು ಅರ್ಥಪೂರ್ಣ ಎನ್ನಿಸುತ್ತದೆ. ಹಿರೇ ಬಸದಿಯಿಂದ ತೊಡಗಿ ಹೊಸ ಬಸದಿವರೆಗಿನ ೧೮ ಬಸದಿಗಳೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಅವುಗಳ ಸ್ಥೂಲ ವಿವರಗಳು ಈ ಕೆಳಗಿನಂತೆ ಇದೆ.

ಕ್ರ.ಸಂ. ಬಸದಿ ವಿವರ ಮೂಲ ಸ್ವಾಮಿ
೧. ಹಿರೇ ಬಸದಿ (ಅಮ್ಮನವರ ಬಸದಿ) ಶಾಂತಿನಾಥ ಸ್ವಾಮಿ.
೨. ಬಡಗ ಬಸದಿ ಚಂದ್ರನಾಥ ಸ್ವಾಮಿ.
೩. ಪಡು ಬಸದಿ ಅನಂತನಾಥ ಸ್ವಾಮಿ.
೪. ಶೆಟ್ರ ಬಸದಿ ಮಹಾವೀರ ಸ್ವಾಮಿ.
೫. ಬೆಟ್ಕೀರಿ ಬಸದಿ ಮಹಾವೀರ ಸ್ವಾಮಿ.
೬. ಕೋಟಿ ಶೆಟ್ಟರ ಬಸದಿ ನೇಮಿನಾಥ ಸ್ವಾಮಿ.
೭. ವಿಕ್ರಮ ಶೆಟ್ಟಿ ಬಸದಿ ಆದಿನಾಥ ಸ್ವಾಮಿ.
೮. ಕಲ್ಲು ಬಸದಿ ಶೀತಲನಾಥ (ಮೂಲಃ ಚಂದ್ರನಾಥಸ್ವಾಮಿ).
೯. ದೇರಮ್ಮ ಶೆಟ್ಟಿ ಬಸದಿ ಆದಿನಾಥ ಸ್ವಾಮಿ.
೧೦. ಲೆಪ್ಪದ ಬಸದಿ ಚಂದ್ರನಾಥ ಸ್ವಾಮಿ.
೧೧. ಚೋಳ ಶೆಟ್ಟಿ ಬಸದಿ ಪದ್ಮಪ್ರಭ ಸ್ವಾಮಿ.
೧೨. ಮಹದೇವ ಶೆಟ್ಟಿ ಬಸದಿ ಆದಿನಾಥ ಸ್ವಾಮಿ.
೧೩. ಬೈಕಣಸಿ ಕಾರಿ ಬಸದಿ ಅನಂತನಾಥ ಸ್ವಾಮಿ.
೧೪. ಕೆರೆ ಬಸದಿ ಮಲ್ಲಿನಾಥ ಸ್ವಾಮಿ.
೧೫. ಪಾಠಶಾಲೆ ಬಸದಿ ಮುನಿಸುವ್ರತ ಸ್ವಾಮಿ.
೧೬. ಮಠದ ಬಸದಿ ಪಾರ್ಶ್ವನಾಥ ಸ್ವಾಮಿ.
೧೭. ಗುರು ಬಸದಿ ಪಾರ್ಶ್ವನಾಥ ಸ್ವಾಮಿ.
೧೮. ತ್ರಿಭುವನ ತಿಲಕ ಚೂಡಾಮಣಿ ಬಸದಿ. (ಹೊಸ ಬಸದಿ) ಚಂದ್ರನಾಥ ಸ್ವಾಮಿ.

ಈ ೧೮ ಜೈನ ಬಸದಿಗಳಲ್ಲದೆ ಪ್ರಾಚೀನಜೈನ ಸಮಾಧಿಗಳೂ ವಾಸ್ತುವಿನ ದೃಷ್ಟಿಯಿಂದಲೂ ಅತ್ಯಂತ ವಿಶಿಷ್ಟ ರಚನೆಗಳು. ಮೂರು, ಐದು, ಹಾಗೂ ಏಳು ಹಂತಗಳಲ್ಲಿ ಪಿರಮಿಡ್ ಆಕಾರವನ್ನು ಹೋಲುವಂತೆ ಇವುಗಳನ್ನು ಮುರಕಲ್ಲಿನಲ್ಲಿ ರಚಿಸಲಾಗಿದೆ. ಇಂತಹಾ ರಚನೆಗಳನ್ನು ಶಾಸನಗಳಲ್ಲಿ ‘ಮುಡಿಜ’ ಎಂದು ಹೆಸರಿಸಿದ್ದಾರೆ. ಬ್ರಂಮ್ಮಚಾರಿ ಮಡೆದೇವರು ಸೆಟ್ಟಿಯವರಿಗೆ ಕಟ್ಟಾದ ಮುಂಡಿಂಜ, ಚಾರುಕೀರ್ತಿ ಪಂಡಿತ್ತಯ್ಯಗಳ ಶಿಷ್ಯ ವರ್ಧಮಾನ ಅಂಶಗಳ ಗುಡ್ಡ ಬಾಗಿಸೆಟ್ಟಿ ಬಳಿಯ ಯೆಳವೆಯ ಸೆಟ್ಟಿ ಕಾಂತಣ್ಣಸೆಟ್ಟಿ ಕಟ್ಟಿದ ಮುಂಡಿಜ ಎಂಬಂತಹ ಹೇಳಿಕೆಗಳನ್ನು ಇಲ್ಲಿ ಗಮನಿಸಬಹುದು. ಇಂತಹುದೆ ರಚನೆಗಳನ್ನು ಹಳೆಯಂಗದೆ, ಸವಣೂರು, ಹೊಸಂಗಡಿ ಹಾಗೂ ಅಳದಂಗಡಿಗಳಲ್ಲಿಯೂ, ಕಂಡುಬಂದಿವೆ. ಸಮೀಪದ ಕೋಡಂಗಲ್ಲಿನಲ್ಲಿರುವ ನ್ಯಾಯ ಬಸದಿ ಎಂದು ಪ್ರಸಿದ್ಧವಾದ ಚಂದ್ರಕೀರ್ತಿ ಮುನಿಗಳ ನಿಷಧಿ ಮಂಟಪವೂ ಗಮನಾರ್ಹವಾದದ್ದು.