ಇನ್ನಿತರ ಗಮನಾರ್ಹ ರಚನೆಗಳು

ಮೂಡುಬಿದಿರೆಯ ಪ್ರಖ್ಯಾತವಾದ ಹದಿನೆಂಟು ಬಸದಿಗಳು ಮತ್ತು ನಿಸಿಧಿಗಳನ್ನು ಹೊರತು ಪಡಿಸಿದರೆ ಚೌಟರ ಅರಮನೆ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ತ್ವವಾದದ್ದು…. ಪುತ್ತಿಗೆಯನ್ನು ತಮ್ಮ ಕಾರ‍್ಯಕ್ಷೇತ್ರ ಅನಿಸಿಕೊಂಡಿದ್ದ ಚೌಟರು ಮೂಡುಬದಿದಿರೆಗೆ ಸ್ಥಳಾಂತರಗೊಳ್ಳುವಾಗ ಈಗಿರುವ ಚೌಟರ ಅರಮನೆ ನಿರ‍್ಮಾಣವಾಯ್ತು, ಪ್ರಾಯಶಃ ೧೬೪೩ರ ಸುಮಾರಿನಲ್ಲಿ ನಿರ‍್ಮಿತವಾಗಿರುವ ಈ ಭವ್ಯ ಅರಮನೆ ತನ್ನ ಕಾಷ್ಠ ಶಿಲ್ಪಕ್ಕೆ ಹೆಸರಾಗಿದೆ…. ‘ಪಂಚನಾರಿ ತುರಗ’ ಮತ್ತು ‘ನವನಾರಿ ಕುಂಜರದ’ ರಚನಾ ಚಾತುರ್ಯ ನೋಡುಗರನ್ನು ಮಂತ್ರಮುಗ್ಧ ಗೊಳಿಸುತ್ತದೆ. (ಇವೇ ಕೆತ್ತನೆಯನ್ನು ಹೊಸ ಬಸದಿಯೆ ಭವ್ಯವಾದ ಪ್ರವೇಶ ದ್ವಾರದ ಎಡ ಮತ್ತು ಬಲ ಬಾಗಿಲುಗಳ ಮೇಲೆಯೂ ಗಮನಿಸಬಹುದು.) ಹುಲಿ ಮುಖದ ಚಾವಡಿ, ಹೊರಗಿನ ಚಾವಡಿ, ಪಟ್ಟದ ಚಾವಡಿ, ಒಡ್ಡೋಲಗ, ಅಂತಃಪುರ, ಸ್ನಾನದ ಕೊಳ ಮುಂತಾದ ವಿಭಾಗಗಳನ್ನು ಹೊಂದಿದ್ದ ಚೌಟರ ಅರಮನೆ ಮೂಡುಬಿದಿರೆಯ ಇತಿಹಾಸದ ಪ್ರತ್ಯಕ್ಷ ಸಾಕ್ಷಿಯೂ ಹೌದು. ಇಂದಿಗೂ ಕೋಟೆ ಬಾಗಿಲು ಎಂದು ಕರೆಸಿಕೊಳ್ಳುತ್ತಿರುವ ಪ್ರದೇಶದಲ್ಲಿರುವ ಸಂಪೂರ್ಣ ಅವನತಿಯ ಹಾದಿಯಲ್ಲಿರುವ ಕೋಟೆಯು ನಿರ‍್ಮಾಣ ಆದದ್ದು ಕೆಳದಿ ಅರಸರ ಕಾಲದಲ್ಲಿ…. ‘ಕೆಳದಿ ನೃಪ ವಿಜಯ’ದಲ್ಲಿಯೂ ಮೂಡುಬಿದಿರೆ ಕೋಟೆಯ ಪ್ರಸ್ತಾಪ ಬರುತ್ತದೆ ಎಂಬುದು ಗಮನಾರ್ಹ….

ಶಾಸನಗಳು

ಮೂಡುಬಿದಿರೆಯ ಇತಿಹಾಸ ಪುನಾರಚನೆಯ ಸಂದರ್ಭದಲ್ಲಿ ಇಲ್ಲಿಯ ಶಾಸನಗಳು ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸಿವೆ. ಇಲ್ಲಿ ಈತನಕ ಸುಮಾರು ೮೦ ರಷ್ಟು ಶಾಸನಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಸುಮಾರು ೩೨ ಶಿಲಾಶಾಸನಗಳು ಹಾಗೂ ೧೫ ತಾಮ್ರಶಾಸನಗಳನ್ನು ಭಾರತ ಸರ್ಕಾರದ ಶಾಸನಶಾಸ್ತ್ರ ಇಲಾಖೆಯವರು ಪ್ರಕಟಿಸಿದ್ದಾರೆ. ಈ ಶಾಸನಗಳನ್ನು ಅಧ್ಯಯನ ನಡೆಸಿದಾಗ ಮೂಡುಬಿದಿರೆಯ ವರ್ಣರಂಜಿತವಾದ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಸಂಬಂಧಿ ವಲಯಗಳ ಪುನಾರಚನೆಯ ಸಂದರ್ಭದಲ್ಲಿ ಅತ್ಯಂತ ಮಹತ್ವಪೂರ್ಣವಾದ ದಾಖಲೆಗಳಾಗಿವೆ….. ಅಳುಪದೊರೆ ಪೃಥ್ವೀ ಸಾಗರನ (ಕಾಲ ಕ್ರಿ.ಶ. ೮೧೦-೮೪೦). ಕಾಲಕ್ಕೆ ಸೇರಿದ ಕಡಂದಲೆ ಶಾಸನ ಮೂಡುಬಿದಿರೆ ಸೀಮೆಯಲ್ಲಿ ದೊರೆಯುವ ಅತ್ಯಂತ ಪ್ರಾಚೀನ ಶಾಸನ. ಈ ಶಾಸನದಲ್ಲಿ ಹಿರಿಯ ಅಧಿಕಾರಿ ಸಿರಿ ಎರೆ ಬೊಯ್ಗವರ್ಮರಸನು ಕುಂದಪ್ಪಳ ಭಟಾರ (ಕಡಂದಲೆ ಸುಬ್ರಮಣ್ಯ) ದೇವರಿಗೆ ಪಾರಿವಾಳಿ ಎಂಬ ಕ್ಷೇತ್ರವನ್ನು ದಾನ ಮಾಡಿದ ವಿಚಾರ ತಿಳಿಸುತ್ತದೆ. ನಂತರ ಸುಮಾರು ೪೦೦ ವರ್ಷಗಳ ನಂತರ ದೊರೆತಿರುವ ಶಾಸನವೆ ಮೂಡುಬಿದಿರೆ ನೆಲದಲ್ಲಿನ ಅತ್ಯಂತ ಪ್ರಾಚೀನ ಶಾಸನ ಕ್ರಿ.ಶ. ಸುಮ. ೧೧೬೦-೧೨೨೦ರ ಅವಧಿಯ ಒಂದನೆಯ ಕುಲಶೇಖರನ ಮೂರು ಶಾಸನಗಳು ಕ್ರಿ.ಶ. ೧೨೦೫ರ ಸುಮಾರಿಗೆ ಮೂಡುಬಿದಿರೆಯ ಅತ್ಯಂತ ಪ್ರಾಚೀನ ಶಕ್ತಿಕೇಂದ್ರವಾಗಿದ್ದ ಗೌರಿ ದೇವಾಲಯದಲ್ಲಿ ಕಂಡುಬರುತ್ತದೆ. ಇದೇ ಅರಸನ ಕ್ರಿ.ಶ. ೧೨೧೫ರ ಸುಮಾರಿನ ಸೆಟ್ಟರ ಬಸದಿಯಲ್ಲಿ ದೊರೆಕಿರುವ ಶಿಲಾ ಶಾಸನವು ಮೂಡುಬಿದಿರೆಯಲ್ಲಿ ಜೈನಧರ್ಮದ ಅಸ್ತಿತ್ವವನ್ನು ತಿಳಿಸುವ ಅತ್ಯಂತ ಪ್ರಾಚೀನ ಶಾಸನ. ಕ್ರಿ.ಶ. ೧೨೮೫ರ ಶಾಸನವು ಬಮ್ಮದೇವಾಳ್ವೇಂದ್ರ ದೇವನ ಆಳ್ವಿಕೆಯ ವಿಚಾರವನ್ನು ತಿಳಿಸುತ್ತದೆ. ಸುಮಾರು ೧೩೮೫ರ ಶಾಸನ ಒಂದರಲ್ಲಿ ಮುಮ್ಮಡಿ ಕುಲಶೇಖರನ ವಿವರಗಳು ತಿಳಿಯುತ್ತದೆ. “ಸಮಸ್ತ ಭುವನ ವಿಖ್ಯಾತ ಪಾಂಡ್ಯ ಮಹಾರಾಜಾಧಿರಾಜ ಪರಮೇಶ್ವರ ಮತ್ತು ಪರಮಭಟ್ಟಾರಕ ಎಂಬ ಸಾರ್ವಭೌಮ ಸೂಚಕ ಬಿರುದುಗಳನ್ನು ಮುಮ್ಮಡಿ ಕುಲಶೇಖರನಿಗೆ ನೀಡಲಾಗಿದೆ. ಕ್ರಿ.ಶ. ೧೩೯೭ರ ಸುಮಾರಿಗೆ ದೊರೆತಿರುವ ಶಾಸನ ಅಳುಪರ ಕೊನೆಯ ರಾಜ ಇಮ್ಮಡಿ ವೀರಪಾಂಡ್ಯರಿಗೆ ಸೇರಿದ್ದು. ಗುರು ಬಸದಿಯ ಪ್ರಾಚೀನತೆಗೆ ಸಂಬಂಧಿಸಿದಂತೆ ಕ್ರಿ.ಶ. ೧೩೪೨ರಲ್ಲಿ ದೊರೆತಿರುವ ಶಾಸನವೇ ಅತ್ಯಂತ ಪ್ರಾಚೀನವಾದದ್ದು. ಕ್ರಿ.ಶ. ೧೪೦೭ರ ಶಾಸನವು ವಿಜಯನಗರದರಸ ಬುಕ್ಕರಾಯನ ಆಳ್ವಿಕೆಯಲ್ಲಿ ಗುರುಗಳ ಬಸದಿಯ ಚಂಡೋಗ್ರ ಪಾರ್ಶ್ವನಾಥರ ಶ್ರೀ ಕಾರ್ಯಕ್ಕೆ ದಾನ ಮಾಡಿದ ಭೂಮಿಗಳ ವಿವರವನ್ನು ನೀಡುತ್ತದೆ. ಗುರುಬಸದಿ ಒಂದರಲ್ಲಿಯೇ ೫ ಶಾಸನಗಳು ಕಂಡುಬಂದರೆ, ಮೂಡುಬಿದರೆಯ ಮುಕುಟಪ್ರಾಯವಾಗಿರುವ ತ್ರಿಭುವನ ತಿಲಕ ಚೂಡಾಮಣಿ ಬಸದಿಯಲ್ಲಿ ಸುಮಾರು ೧೩ ಶಾಸನಗಳು ಕಂಡುಬರುತ್ತದೆ. ಇಲ್ಲಿ ಮಂದಿರದ ವಿವಿಧ ಹಂತಗಳ ನಿರ‍್ಮಾಣದ ಬಗ್ಗೆ ಅತ್ಯಪೂರ್ವ ಸಾಕ್ಷಿಗಳಾಗಿವೆ. ಮೂಡುಬಿದಿರೆಯ ಜೈನ ಪೇಟೆಯ ಚಿಟಕೇರಿ ರಸ್ತೆಯ ಕೊನೆಯಲ್ಲಿರುವ ಕ್ರಿ.ಶ. ೧೫೭೮ರ ಎರಡು ಶಿಲಾ ಶಾಸನಗಳು ಆ ಕಾಲದ ಮೂಡುಬಿದಿರೆ ನಗರದ ಗಡಿಗಳನ್ನು ಗುರ್ತಿಸಲು ಸಹಕಾರಿ ಆಗಿದೆ. ಮೂಡುಬಿದಿರೆಯಲ್ಲಿ ಕಂಡುಬರುವ ಬಹುತೇಕ ಶಾಸನಗಳು ಜೈನ ಶಾಸನಗಳು. ಇವು ಮೂಡುಬಿದಿರೆಯಲ್ಲಿ ಜೈನಧರ್ಮದ ಉನ್ನತಿ ಹಾಗೂ ಜೈನ ಸಂಸ್ಕೃತಿಯ ಕುರುಹನ್ನು ಕುರಿತಂತೆ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ.

ಸಾಹಿತ್ಯದ ಕನ್ನಡಿಯಲ್ಲಿ

ಮೂಡುಬಿದಿರೆಯ ಸಾಹಿತ್ಯದ ಚರಿತ್ರೆ ಕನ್ನಡ ಸಾಹಿತ್ಯ ಹಾಗೂ ದಾಖಲೆಗಳ ಸಂದರ್ಭದಲ್ಲಿ ಅತ್ಯಂತ ಮಹತ್ವವಾದ ಸ್ಥಾನವನ್ನು ಪಡೆದುಕೊಂಡಿವೆ. ಸಾಹಿತ್ಯದ ‘ಓಂ’ ಕಾರವು ಇಲ್ಲಿ ಶಾಸನಗಳ ರೂಪದಲ್ಲಿ ಕಾಣಿಸಿಕೊಂಡರೂ ಮೂಡುಬಿದಿರೆಯ ಸಾಹಿತ್ಯ ವಲಯದ ಸಾಧನೆ ಬೆರಗು ಹುಟ್ಟಿಸುವಂತಹುದು. ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ ಎಂದರೆ ಒಂದರ್ಥದಲ್ಲಿ ಜೈನ ಸಾಹಿತ್ಯ ಅಧ್ಯಯನವೆ. ಜೈನಧರ್ಮ ಮತ್ತು ಸಂಸ್ಕೃತಿಯು ಕನ್ನಡ ಸಾಹಿತ್ಯ ವಾಹಿನಿಯ ಮೇಲೆ ಬೀರಿರುವ ಪ್ರಭಾವ ಬಹು ಎತ್ತರದ ಮಟ್ಟದ್ದು. ಈ ಮಾತು ಮೂಡುಬಿದಿರೆ ಮಟ್ಟಿಗಂತೂ ಸಂಪೂರ್ಣ ಅನ್ವಯಿಸುತ್ತದೆ. ಅತ್ಯಂತ ಪ್ರಾಚೀನ ಕವಿಯಾದ ಸೋಮನಾಥನನ್ನು ಹೊರತುಪಡಿಸಿ ಮೂಡುಬಿದಿರೆಯ ಎಲ್ಲ ಪ್ರಾಚೀನ ಕವಿಗಳು ಜೈನರೆ ಆಗಿದ್ದವರು. ಅಲ್ಲದೆ ಮತ್ತೊಂದು ವಿಶೇಷವೇನೆಂದರೆ ಇಲ್ಲಿನ ಬಹುತೇಕ ಕವಿಗಳು ಸಾಂಗತ್ಯವನ್ನೇ ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾರೆ. ಶಾಸನದ ಕವಿಗಳು ಗದ್ಯವನ್ನು ಕಂದ ಹಾಗೂ ವೃತ್ತಗಳ ಮಿಶ್ರಣದಲ್ಲಿ ಬಳಸಿದ್ದಾರೆ. ಸೋಮನಾಥನು ಛಂದಸ್ಸಿನಲ್ಲಿ ವೈವಿಧ್ಯತೆ ಮೆರೆದವನು. ಆದರೆ ರತ್ನಾಕರನ ಭರತೇಶ ವೈಭವದ ಜನಪ್ರಿಯತೆಯೊಂದಿಗೆ ಸಾಂಗತ್ಯದ ಪ್ರಭಾವ ದಟ್ಟವಾಯಿತು. ನಂತರದ ಬಹುತೇಕ ಕವಿಗಳು ಸಾಂಗತ್ಯವನ್ನು ಆಶ್ರಯಿಸಲು ಇದೆ ಕಾರಣವಾಯಿತು. ಮಧ್ಯಯುಗದ ಸಾಹಿತ್ಯವು ಸಹಜವಾಗಿಯೆ ಜೈನ ಧರ್ಮದ ತೀರ್ಥಂಕರರ, ಕೇವಲಿಗಳ, ಯಕ್ಷ-ಯಕ್ಷಿಯರು, ಪುರಾಣಗಳು ಹೀಗೆ ಕಥಾ ಹಂದರವನ್ನು ಒಳಗೊಂಡಿದ್ದವು.

ಸೋಮನಾಥ

ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪ್ರಾಚೀನ ಕಾವ್ಯ ‘ಉದ್ಬಟ್ಟ’ ರಚಿತವಾದದ್ದು ಮೂಡುಬಿದಿರೆಯಲ್ಲಿಯೇ. ಇದನ್ನು ರಚಿಸಿದಾತ ಚೌಟ ಅರಸುಮನೆತನಕ್ಕೆ ಸೇರಿದವನಾದ ಸೋಮರಾಜ-ಕೃತಿ ರಚಿತವಾದದ್ದು ೧೨೨೨ರಲ್ಲಿ. ಸೋಮ ರಾಜನು ಶೈವ ಧರ್ಮಾಚರಣೆಯವನು. ತನ್ನ ಗುರು ಶೈವ ಸಂಪ್ರದಾಯದ ಬಹು ಪ್ರಖ್ಯಾತನಾದ ಅಲ್ಲಮಪ್ರಭು ಎಂದು ಹೇಳಿಕೊಂಡಿದ್ದಾನೆ. ಈತನಿಗೆ ಪರಮಜ್ಞಾನಿ, ವರವಾಣಿ ಎಂಬ ಎರಡು ಬಿರುದುಗಳು ಇದ್ದಂತೆ ತಿಳಿದುಬರುತ್ತದೆ. ಈ ಕೃತಿ ಚಂಪೂ ಶೈಲಿಯಲ್ಲಿದ್ದರೂ ಗದ್ಯ ಬಹಳ ವಿರಳವಾಗಿದೆ. ತನ್ನ ಕಾವ್ಯವನ್ನು ‘ಶೃಂಗಾರ ಸಾರಂ’ ಎಂದು ಸೋಮನಾಥ ಹೇಳಿಕೊಂಡಿದ್ದಾನೆ. ಪ್ರಖ್ಯಾತನಾದ ಹರಿಹರನೆ ಮೊದಲಾದ ಪ್ರಾಚೀನ ಕವಿಗಳ ಕಥಾಬಿತ್ತಿ ಸೋಮರಾಜನಿಗೆ ಮಾದರಿಯಾಗಿದ್ದರು. ಕಥಾ ವಸ್ತುವಿನಲ್ಲಿ ಸಾಕಷ್ಟು ಸ್ವಾತಂತ್ರ‍್ಯ ವಹಿಸಿದ್ದಾನೆ. ಹೊಸ ಹೊಸ ಕಲ್ಪನೆಗಳನ್ನು ಹೆಣೆದಿದ್ದಾನೆ. ಹಲವಾರು ಕತೆಗಳು ವಿಚಾರ ಪ್ರಚೋದಕ ಉಪಕತೆಗಳೂ ಅಡಕವಾಗಿ ಮೇಲ್ನೋಟಕ್ಕೆ ಶಿವಭಕ್ತರ ಭಕ್ತಿ ಕಥಾ ಸಂಕಲನದಂತೆ ಈ ಕಾವ್ಯ ತೋರುತ್ತದೆ. ಆದರೆ ಕಥಾ ಓಟದ ರಭಸವು ಬೆರಗು ಹುಟ್ಟಿಸುವ ರೀತಿಯಲ್ಲಿದೆ.

ದೇವರಸೆ

ಇತಿಹಾಸ ಪ್ರಸಿದ್ಧ ತ್ರಿಭುವನ ತಿಲಕ ಚೂಡಾಮಣಿ ಬಸದಿಯ ಚಂದ್ರನಾಥ ಸ್ವಾಮಿಯ ಹೊಸ ಬಸ್ತಿಯ ಗದ್ಧಿಗೆ ಮಂಟಪದ ಉತ್ತರ ಭಾಗದ ಗೋಡೆಯಲ್ಲಿರುವ ಶಾಸನವನ್ನು ಬರೆದ ಕವಿ ಈತ. ದೇವರಸನು ರಚಿಸಿದ ಸ್ವತಂತ್ರವಾದ ಕೃತಿಗಳು ಯಾವುವೂ ದೊರೆಕಿಲ್ಲ. ಆದರೆ ಈ ಶಾಸನದ ಕಾವ್ಯಾತ್ಮಕ ಶೈಲಿಯನ್ನು ಗಮನಿಸಿದರೆ ದೇವರಸನ ಕಾವ್ಯಸಾಮರ್ಥ್ಯಕ್ಕೆ ಪುರಾವೆ ದೊರೆಯುತ್ತದೆ.

ವಿದ್ಯಾನಂದ

ಈತನಿಂದ ರಚಿತವಾದ ‘ಕಾವ್ಯಸಾರ’ ಒಂದು ಅಪೂರ್ವವಾದ ಕೃತಿ-ಕಾವ್ಯಸಾರ ಹೆಸರೆ ಸೂಚಿಸುವಂತೆ ‘ಕಾವ್ಯದ ಆತ್ಮದ’ ವಿವರಣೆ ನೀಡುವ ಕೃತಿ. ಕಾವ್ಯರಚನೆಯಲ್ಲಿ ಅನುಸರಿಸಬೇಕಾದ ನಿಯಮ ಶ್ರೇಷ್ಠ ಕಾವ್ಯದ ಲಕ್ಷಣ-ಇವುಗಳ ವಿವರಣೆ ಈ ಕೃತಿಯಲ್ಲಿ ಕಂಡುಬರುತ್ತದೆ. ಪ್ರತಿಯೊಂದು ಲಕ್ಷಣ, ನಿಯಮಗಳ ವಿವರಣೆಗಾಗಿ ವಿದ್ಯಾನಂದನು ಪ್ರಾಚೀನ ಕಾವ್ಯಗಳ ಉದಾಹರಣೆಯನ್ನು ಕೊಡುತ್ತಾನೆ. ಹಾಗಾಗಿ ಇದು ಇನ್ನೊಂದು ರೀತಿಯಲ್ಲಿ ಪ್ರಾಚೀನ ಕೃತಿಗಳ ಮಹತ್ವದ ವಿವರಗಳ ಒಂದು ಸಂಕಲನದಂತೆಯೂ ಭಾಸವಾಗುತ್ತದೆ. ಪ್ರಾಚೀನ ಕವಿಗಳಾದ ಕಮಲಭವ, ಗುಣವರ್ಮ, ಮಧುರ, ಚಂದ್ರಶೇಖರ,- ಇವರುಗಳ ಪ್ರಸ್ತಾಪ ಬರುತ್ತದೆ. ಕಾವ್ಯಸಾರದಲ್ಲಿ ಒಟ್ಟು ೪೫ ಅಧ್ಯಾಯಗಳು, ೧೧೪೩ ಪದ್ಯಗಳಿದ್ದು, ಕನ್ನಡ ಸಾಹಿತ್ಯ ಚರಿತ್ರೆಯ ಪುನಾರಚನೆಯ ಸಂದರ್ಭದಲ್ಲಿ ಗಮನಿಸಲೇಬೇಕಾದ ಒಂದು ಕೃತಿಯಾಗಿದೆ.

ರತ್ನಾಕರ

ರತ್ನಾಕರನ ಹೆಸರನ್ನು ಕೇಳ್ದರಿಯದ ಕನ್ನಡ ಸಾಹಿತ್ಯಾಸ್ತಕರು ಇರಲು ಬಹುಷಃ ಅಸಾಧ್ಯ. ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ಮೂಡುಬಿದಿರೆ ಹೆಸರನ್ನು ಚಿರಸ್ಥಾಯಿಗೊಳಿಸಿ, ಅದಕ್ಕೊಂದು ವಿಶಿಷ್ಟ ಸ್ಥಾನವನ್ನು ಒದಗಿಸಿಕೊಡುವಲ್ಲಿ ರತ್ನಾಕರನ ಸಾಧನೆ ಅತ್ಯಂತ ಅಪೂರ್ವವಾದದ್ದು. ಕನ್ನಡ ಸಾಹಿತ್ಯದ ಮೇರುಕೃತಿಗಳಲ್ಲಿ ಒಂದೆಂದು ಮಾನ್ಯವಾದ ಭರತೇಶ ವೈಭವ ರಚಿತವಾದದ್ದು. ತನ್ಮೂಲಕ ಸಾಹಿತ್ಯ ಚರಿತ್ರೆಯಲ್ಲಿ ರತ್ನಾಕರನ ಹೆಸರು ಚಿರಸ್ಥಾಯಿಯಾದದ್ದು ಕನ್ನಡಿಗರ ಪುಣ್ಯವೆಂದೆನ್ನಬಹುದು. ರತ್ನಾಕರವರ್ಣಿಗೆ ರತ್ನಾಕರ ಸಿದ್ಧ, ರತ್ನಾಕರ ಅಣ್ಣ ಎಂಬ ಪರ್ಯಾಯ ಹೆಸರುಗಳೂ ಇದ್ದವು. ಶೃಂಗಾರ ಕವಿ ಹಂಸರಾಜ, ನಿರಂಜನ ಸಿದ್ಧ ಎಂಬ ಬಿರುದುಗಳೂ ಇದ್ದವು. ತಾನು ಕ್ಷತ್ರಿಯ ವಂಶದವನೆಂದೂ, ಶ್ರೀಮಂದರ ಸ್ವಾಮಿ ‘ನನ್ನ ಅಯ್ಯ’ ಎಂದೂ ಹೇಳಿಕೊಂಡಿದ್ದಾನೆ. ದೀಕ್ಷಾಗುರು ಚಾರುಕೀರ್ತಿಗಳೆಂದರೆ, ಮೋಕ್ಷಗುರು ಹಂಸನಾಥ ಎಂದೂ, ಹಂಸನಾಥನ ಆಜ್ಞಾನುಸಾರ ಭರತೇಶ ವೈಭವವನ್ನು ರಚಿಸಿದನೆಂದೂ ಕವಿಯ ಹೇಳಿಕೆ. ಒಂದರ್ಥದಲ್ಲಿ ಜೈನ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಜನಪ್ರಿಯವಾದರೂ, ಅಷ್ಟೇ ವಿವಾದಾಸ್ಪದ ಕೃತಿಯಾದ ಭರತೇಶ ವೈಭವದ ಕರ್ತೃ ರತ್ನಾಕರನ ಬದುಕೂ ದಂತಕತೆಗಳಿಗೆ ಆಹಾರವಾಗಿದೆ. ಇದಕ್ಕೆ ಬಹುಷಃ ಬದುಕನ್ನು ಅತ್ಯಂತ ಗಾಢವಾಗಿ ಪ್ರೀತಿಸುತ್ತಿದ್ದ ರತ್ನಾಕರನ ಖಾಸಗಿ ಬದುಕು ಕಾರಣ ಎಂದೆನ್ನಬಹುದೇನೋ. ಒಂದು ರೀತಿಯ ಅಸಂಪ್ರದಾಯಕವಾದ ಆಲೋಚನಾ ಕ್ರಮ ಆತನ ಮನಸ್ಸಿನ ಮೇಲೆ ಕ್ಲೇಶದಾಯಕ ಪರಿಣಾಮವನ್ನು ಬೀರಿರುವ ಸಾಧ್ಯತೆ ಇದೆ. ಹಾಗಾಗಿಯೆ ತನ್ನ ಬದುಕಿನ ಅತ್ಯಂತ ಮಹತ್ವದ ಸಂದರ್ಭವೊಂದರಲ್ಲಿ ಮತಾಂತರಗೊಂಡು ವೀರಶೈವ ಧರ್ಮ ಸ್ವೀಕರಿಸಿದ ಹಾಗೆ ತೋರುತ್ತದೆ. ಆವೇಶದ ಭಾವ ಸಡಿಲವಾಗುತ್ತ, ಮನಸ್ಸಿನಲ್ಲಿ ಸಮಾಧಾನ ಭಾವ ಜಾಗೃತಗೊಂಡಾಗ, ತನ್ನ ಕ್ರಿಯೆಯ ಬಗ್ಗೆ ಪಶ್ಚಾತ್ತಾಪ ಪಟ್ಟು ಪುನಃ ತನ್ನ ಮೂಲ ನೆಲೆಗೆ ಹಿಂತಿರುಗಿದನೆಂಬ ವಿಚಾರವು ರತ್ನಾಕರನ ನಿರಂತರ ಅನ್ವೇಷಣಾ ಬುದ್ಧಿಗೂ ಸೂಚಕವಾಗಿದೆ. ಅತ್ಯಂತ ಸಂವೇದನಾ ಶೀಲನಾದ ರತ್ನಾಕರನ ಭಾವತೀವ್ರತೆಯ ಪ್ರವೃತ್ತಿಯನ್ನು ಆತನ ಭರತೇಶ ವೈಭವದಂತೆಯೆ ಉಳಿದ ಕೃತಿಗಳಲ್ಲಿಯೂ ಕಾಣಬಹುದು. ರತ್ನಾಕರ ರಚಿಸಿದ ಕೃತಿಗಳು :

೧.         ಭರತೇಶ ವೈಭವ → ೮೦ ಸಂಧಿಗಳು → ೯೯೬೯ ಸಾಗಂತ್ಯ ಪದ್ಯಗಳು.

೨.         ತ್ರಿಲೋಕ ಶತಕ → ೧೨೭ ಕಂದ ಪದ್ಯಗಳು + ೧ ವೃತ್ತ.

೩.         ಅಪರಾಜಿತೇಶ್ವರ → ಶತಕ ೧೨೮ ವೃತ್ತಗಳು.

೪.         ರತ್ನಾಕರ ಶತಕ → ೧೨೭ ವೃತ್ತ + ೧ ಕಂದ.

೫.         ಸೋಮೇಶ್ವರ ಶತಕ. (?)

೬.         ಅಣ್ಣನ ಪದಗಳು – ಸುಮಾರು ೨೦೦೦ ಗೀತೆಗಳು.

-ಸೋಮೇಶ್ವರ ಶತಕದ ಕರ್ತೃತ್ವ ಕುರಿತಂತೆ ಸಾಕಷ್ಟು ವಿವಾದಗಳಿವೆ. ರತ್ನಾಕರನು ತನ್ನ ಬದುಕಿನ ಕಠಿಣ ಕಾಲದಲ್ಲಿ ಜೈನ ಸಮಾಜ ಹಾಗೂ ಧರ್ಮದ ಬಗ್ಗೆ ಜಿಗುಪ್ಸಿತನಾಗಿ ವೀರಶೈವ ಧರ್ಮ ಸ್ವೀಕರಿಸಿದ ಸಂದರ್ಭದಲ್ಲಿ ‘ಸೋಮೇಶ್ವರ ಶತಕ’ ರಚಿಸಿದ್ದಾನೆ ಎಂಬ ವಾದವು ಇದೆ. ಕಾಲಾನುಕ್ರಮದಲ್ಲಿ ಮನಸ್ಸು ತಿಳಿಯಾದ ನಂತರ ಸ್ವ-ಧರ್ಮಕ್ಕೆ ಹಿಂತಿರುಗಿದ ರತ್ನಾಕರ, ಈ ಹಿಂದೆ ತಾನು ವೀರಶೈವ ಧರ್ಮ ಸ್ವೀಕರಿಸಿದ ಬಗ್ಗೆ ಪಶ್ಚಾತ್ತಾಪವನ್ನು ತನ್ನ ಹಾಡುಗಳಲ್ಲಿ ವ್ಯಕ್ತ ಪಡಿಸುತ್ತಾನೆ.

ಕರ್ಮವೇ ಬಲ್ಲಿತಲ್ಲ ಜಿನ
ಧರ್ಮವನುಳಿದೆನ್ನನೀಪರಿ ಹುಚ್ಚು ಮಾಡಿತಲ್ಲ ||
ಕರ್ಮವಶದಿ ಕಾರ್ಗತ್ತಲೆ ಕವಿದೆನ್ನ |
ಚರ್ಮಕ್ಕೆ ಅಂಗವು ಬಿತ್ತಲ್ಲ ನಿರ್ಮಲ ಶ್ರೀ ಜಿನಧರ್ಮದೊಳಿದ್ದೆನ್ನ
ಈ ಮೈ ಹುಚ್ಚು ಮಾಡಿತಲ್ಲ ||

-ಅತ್ಯಂತ ಸಂವೇದನಾಶೀಲನಾದ ರತ್ನಾಕರ ಕವಿ ಸ್ವಾತಂತ್ರ‍್ಯವನ್ನು ಬಳಸಿಕೊಂಡು ಭರತೇಶ ವೈಭವ ರಚಸಿದ ಸಂದರ್ಭದಲ್ಲಿ ಗುರುಪೀಠ ಹಾಗೂ ಶ್ರಾವಕವರ್ಗದ ಕೋಪಕ್ಕೆ ಗುರಿಯಾಗಿ ಯಾತನೆ ಅನುಭವಿಸಿದ. ಕ್ಷಣಕಾಲದ ಆವೇಶ ಮತಾಂತರಕ್ಕೆ, ಕಾರಣವಾಗಿದ್ದಿರಬಹುದಾದರೂ, ಆತನ ಚಿಂತನೆಗೆಳೆಲ್ಲವೂ ಗಾಢವಾದ ಜಿನಧರ್ಮ ಶ್ರದ್ಧೆಯಿಂದ ರೂಪಿತವಾದುದಾಗಿತ್ತು. ಆದುದರಿಂದಲೆ ತನ್ನ ಶತಕಗಳಲ್ಲಿ ಭವ ಬದುಕಿನ ನಿಸ್ಸಾರತೆಯನ್ನು, ಆತ್ಮಜ್ಞಾನದ ಬಯಕೆಯನ್ನು ತೋರ್ಪಡಿಸುತ್ತಾನೆ. ಆತನ ಶತಕಗಳು ಜೈನ ಸಿದ್ಧಾಂತದ ಸಾರವನ್ನು ಒಳಗೊಂಡಿದೆ ಎಂದೆನ್ನಲು ಅಡ್ಡಿಯಿಲ್ಲ. ಭರತೇಶ ವೈಭವ ಬಹು ಚರ್ಚಿತವಾಗಿರುವ ಕೃತಿ ಆಗಿರುವುದರಿಂದಲೂ, ಈ ಬರಹದ ಮಿತಿಯ ಒಳಗೆ ಅದರ ಬಗ್ಗೆ ಚರ್ಚಿಸಲು ಹೋಗಿಲ್ಲ. ಆದರೆ, ಸಾಂಗತ್ಯ ಸ್ವರೂಪದ ಗೌರೀಶಂಕರ ಆಗಿರುವ ಭರತೇಶ ವೈಭವ ಕನ್ನಡ ಸಾಹಿತ್ಯದ ಅಪೂರ್ವ ಕೃತಿಗಳಲ್ಲಿ ಒಂದು, ಎಂಬುದರ ಬಗ್ಗೆ ಬಹುಷಃ ಭಿನ್ನಾಭಿಪ್ರಾಯ ಇರಲಾರದೆಂದು ಭಾವಿಸುತ್ತೇನೆ.

ನೇಮಿವ್ರತಿ : (ಕ್ರಿ.ಶ. ೧೫೬೦)

ಮೂಡುಬಿದಿರೆಯಲ್ಲಿಯೆ ಹುಟ್ಟಿ ಬೆಳೆದ ಈ ಕವಿಯ ಹೆಸರೇ ಸೂಚಿಸುವಂತೆ ಜಿನ ಮುನಿಯಾಗಿದ್ದವನು. ಈತ ರಚಿಸಿರುವ ‘ಜ್ಞಾನ ಭಾಸ್ಕರ ಚರಿತ್ರೆ’ ಮಹತ್ವದ ಕೃತಿಗಳಲ್ಲಿ ಒಂದು. ೧೩೩ ಸಾಂಗತ್ಯ ಪದ್ಯಗಳಲ್ಲಿ ರಚಿತವಾಗಿರುವ ಈ ಕೃತಿಯು ಜೀವನ್ಮುಕ್ತಿಗೆ ಅವಶ್ಯಕವಾದ, ಆಧ್ಯಾತ್ಮಿಕ ಸಾಧನೆ, ಸ್ವಾಧ್ಯಾಯ, ಧ್ಯಾನ, ಮುಂತಾದ ವಿಚಾರಗಳನ್ನು ತಿಳಿಸುತ್ತದೆ. “ತನುವೆಂಬ ಕೆಸರೊಳು ಲೋಕವ ಬೆಳಗುವ/ಚಿನ್ಮಯ ರತ್ನವುಂಟದನು ತನುವ ಬತ್ತಿಸಿಯೂ ರತ್ನವ” ಮೇಲಕೆತ್ತಿ ಬೇಕೆನ್ನುತ್ತಾನೆ. ಆತ್ಮನಲ್ಲಿ ಅಪಾರವಾದ ಶಕ್ತಿ ಅಡಗಿದೆ. ಅದನ್ನು ಬೆಳಗಿಸಬೇಕು. ಇಲ್ಲದಿದ್ದರೆ ಅದು ನಿರುಪಯುಕ್ತ ಆಗುತ್ತದೆ ಎಂದೆನ್ನುತ್ತಾನೆ. ಎಲ್ಲ ಜ್ಞಾನಕ್ಕಿಂತ ಆತ್ಮ ಜ್ಞಾನವೆ ಶ್ರೇಷ್ಠ, ಅದನ್ನು ಮೀರಿದ್ದು ಮತ್ತೊಂದಿಲ್ಲ.

“ವ್ರತಗುಣಶೀಲ ತಪಸು ಶಾಸ್ತ್ರಗಳೆಲ್ಲ
ಕ್ಷಿತಿಯೊಳು ಸೊನ್ನೆಗಳಂತೆ
ಅತಿಶಯದಾತ್ಮ ಭಾವನೆ ಲೆಕ್ಕದಂತೆಯೆಂ
ದತಿ ಸುಜ್ಞಾನಿಗಳು ಪೇಳುವರು”

-‘ಸು-ವಿಚಾರ ಚರಿತ್ರೆ’ ನೇಮಿವ್ರತಿಯ ಮತ್ತೊಂದು ಮಹತ್ವದ ಕೃತಿ. ಗುಣ-ಗಾತ್ರ ಎರಡರಲ್ಲೂ ಇದು ಹಿರಿದಾದುದು. ಒಟ್ಟು ೧೦ ಸಂಧಿಗಳಿಂದಲೂ ೧೧೨೯ ಸಾಂಗತ್ಯ ಪದ್ಯಗಳಿಂದಲೂ ರಚಿತವಾಗಿರುವ ಈ ಕೃತಿಯ ವಸ್ತು ಜೈನ ಸಿದ್ಧಾಂತವೆ ಆಗಿದೆ. ಸಂಸಾರ ಸಮುದ್ರದಲ್ಲಿ ಸಿಲುಕಿರುವ ಆತ್ಮನು ಅನುಭವಿಸುವ ಘೋರವಾದ ನೋವು, ಇದರಿಂದ ಬಿಡುಗಡೆ ಪಡೆದು ಮುಕ್ತಿಯ ಶಾಶ್ವತ ಸುಖವನ್ನು ಹೊಂದಬೇಕೆನ್ನುವ ಆಶಯವನ್ನು ಈ ಕೃತಿ ವ್ಯಕ್ತಪಡಿಸುತ್ತದೆ.

ಚಂದ್ರಮ : (ಸು.ಕ್ರಿ.ಶ. ೧೬೫೦)

ಲೋಕಸ್ವರೂಪ, ಗಣಿತ ವಿಲಾಸ ಎಂಬ ಕೃತಿಗಳನ್ನು ರಚಿಸಿರುವ ಚಂದ್ರಮ ಮೂಡುಬಿದಿರೆಯ ಸಮೀಪದ ಅಳಿಯೂರಿನವನು. ಜೈನ ಸಿದ್ಧಾಂತದ ಹಿನ್ನೆಲೆಯಲ್ಲಿ ಲೋಕಾಕಾರದ ವರ್ಣನೆ, ಆದಿ-ಮಧ್ಯಮ-ಊರ್ಧ್ವ ಲೋಕಗಳ ವರ್ಣನೆ ‘ಲೋಕ ಸ್ವರೂಪ’ ‘ಕೃತಿಯ ವಸ್ತು. ೧೪೦ ಕಂದ ಪದ್ಯಗಳಿಂದ ರಚಿತವಾಗಿರುವ ‘ಲೋಕ ಸ್ವರೂಪ’ ಅಪ್ರಕಟಿತ ಕೃತಿ. ಚಂದ್ರಮನ ಮತ್ತೊಂದು ಕೃತಿಯಾದ ‘ಗಣಿತ ವಿಲಾಸ’ವೂ ಬಹಳಷ್ಟು ಜೀರ್ಣಗೊಂಡಿರುವ ತಾಡಪತ್ರಗಳಲ್ಲಿ ದೊರೆಯುತ್ತದೆ. ಬಹಳ ಜೀರ್ಣವಾಗಿರುವುದರಿಂದ ಇಲ್ಲಿರುವ ಪದ್ಯದ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಕಷ್ಟ. ನಾಲ್ಕು ಅಧ್ಯಾಯಗಳಿಂದ ಸುಮಾರು ೬೨೦ ಕಂದಗಳನ್ನು ಗುರ್ತಿಸಬಹುದು. ತನ್ನೆರಡೂ ಕೃತಿಗಳನ್ನು ಚಂದ್ರಮನು ಕಂದದಲ್ಲಿಯೆ ಬರೆದಿರುವುದು ಗಮನಾರ್ಹ.

ಶಾಂತಕೀರ್ತಿ : (ಸು. ಕ್ರಿ.ಶ. ೧೭೨೫)

-ಮೂಡುಬಿದಿರೆಯ ಸಾಹಿತ್ಯ ಇತಿಹಾಸದಲ್ಲಿ ರತ್ನಾಕರನನ್ನು ಬಿಟ್ಟರೆ, ಅತ್ಯಂತ ಮಹತ್ವದ ಕವಿ ಈತ. ಶಾಂತಕೀರ್ತಿ ರಚಿಸಿದ ಕೃತಿಗಳು.

೧. ಚತುರ್ವಿಂಶತಿ ತೀರ್ಥಂಕರ ಪುರಾಣ : ಕ್ರಿ.ಶ. ೧೭೨೫.

೨. ಶಾಂತೀಶ್ವರ ಚರಿತೆ : ಕ್ರಿ.ಶ. ೧೭೩೨.

೩. ಪಾರ್ಶ್ವನಾಥ ಚರಿತೆ : ಕ್ರಿ.ಶ. ೧೭೩೩.

೪. ಪುರುದೇವ ಚರಿತೆ : ಕ್ರಿ.ಶ. ೧೭೩೫.

೫. ಷೋಡಶ ಭಾವನಾ ಚರಿತೆ : ಕ್ರಿ.ಶ. ೧೭೪೭.

೬. ಪಟ್ಟ್ರಾಭೃತ ವ್ಯಾಖ್ಯಾನ -(ಶ್ರೀ ಕುಂದಕುಂದಾಚಾರ್ಯರ ಪ್ರಕೃತ ಮೂಲ ಕೃತಿ ‘ಪಟ್ಟ್ರಾಭೃತ’ ಇದರ ಕನ್ನಡ ವ್ಯಾಖ್ಯಾನ) -ಕ್ರಿ.ಶ. ೧೭೪೬.

೭. ಆರಾಧನಾ ಸಾರ : ದೇವಸೇನನ ಸಂಸ್ಕೃತ ‘ಆರಾಧನಾ ಸಾರ’ ಇದರ ಕನ್ನಡ ವ್ಯಾಖ್ಯಾನ-ಕ್ರಿ.ಶ. ೧೭೫೫.

೮. ದ್ವಾದಶಾನುಪ್ರೇಕ್ಷೆ. (ಹಸ್ತಪ್ರತಿ ದೊರಕಿಲ್ಲ.)

೯.         ಭುಜಬಲಿ ಚರಿತೆ (ವಿವರ ದೊರಕಿಲ್ಲ.)

– ಶಾಂತಕೀರ್ತಿಯ ಎಲ್ಲ ಕಾವ್ಯಗಳು ಸಾಮಾನ್ಯ ಗುಣಸಂಗ್ರಹಶೀಲತೆ. ಎಲ್ಲಿಯೂ ಅನಗತ್ಯ ವರ್ಣನೆಗಳಿಲ್ಲ. ಓದುಗನ ದೃಷ್ಟಿಯಿಂದಲೆ ಯೋಚಿಸುವ ಕವಿ ತನ್ನ ಕೃತಿಗಳಲ್ಲಿ ಓದಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾನೆ. ಯಾವ ಕೃತಿರಚನೆ ಬಗ್ಗೆಯಾಗಲಿ, ಕಾಲದ ಬಗ್ಗೆಯಾಗಲಿ ಗೊಂದಲಗಳಿಲ್ಲ. ಪಂಪ, ಪೊನ್ನರ ದಟ್ಟವಾದ ಪ್ರಭಾವದ ನಡುವೆಯೂ ಓದುಗರಿಗೆ ಸಮೀಪವಾದ ಭಾಷೆಯನ್ನೆ ಬಳಸಿರುವುದು ಈತನ ವೈಶಿಷ್ಟ್ಯ.

ತ್ರಿಭುವನ ತಿಲಕ ಚೂಡಾಮಣಿ ಬಸದಿ ಜೀರ್ಣೋದ್ಧಾರ ಚರಿತೆ : ಕ್ರಿ.ಶ. ೧೭೪೬

-ಅಜ್ಞಾತ ಕವಿಯೊಬ್ಬನಿಂದ ರಚಿತವಾದ ಈ ಕೃತಿ ತನ್ನ ವಸ್ತುವಿನ ಅನನ್ಯತೆಯಿಂದ ಥಟ್ಟನೆ ಗಮನ ಸೆಳೆಯುತ್ತದೆ. ತನ್ನ ಅಪೂರ್ವವಾದ ರಚನಾ ಚಾತುರ್ಯದಿಂದ ಮೂಡುಬಿದಿರೆಯ ಹೆಸರನ್ನು ಐತಿಹಾಸಿಕವಾಗಿ ಕೀರ್ತಿವಂತವಾಗಿ ಮಾಡಿದ ತ್ರಿಭುವನ ತಿಲಕ ಚೂಡಾಮಣಿ ಬಸದಿ ನಿರ‍್ಮಾಣದ ಪ್ರಾರಂಭದ ಹಂತ ಕ್ರಿ.ಶ. ೧೪೩೦. ಮೂರನೆ ಹಾಗೂ ಅಂತಿಮ ಹಂತವು ಕ್ರಿ.ಶ. ೧೪೭೬ರಲ್ಲಿ. ಪ್ರಾರಂಭದಲ್ಲಿ ಮುಳ್ಳಿನ ಹುಲ್ಲಿನ ಮಾಡನ್ನು ಹೊಂದಿದ್ದ ಈ ಬಸದಿಯು ಕಾಲನ ಹೊಡೆತಕ್ಕೆ ಸಿಕ್ಕು ಮುನ್ನೂರು ವರ್ಷಗಳು ಉಳಿದಿದ್ದೆ ಹೆಚ್ಚು. ಕ್ರಿ.ಶ. ೧೭೪೬ರಲ್ಲಿ ಸಂಪೂರ್ಣ ಶಿಥಿಲವಾಗಿದ್ದ ಈ ಬಸದಿಯನ್ನು ಹಾಸನದಿಂದ ಬಂದಿದ್ದ ಶ್ರೀಮಂತ ವರ್ತಕನಾಗಿದ್ದ ಪುಟ್ಟಯ್ಯ ಎಂಬುವವನಿಂದ ಪುನರ್‌ನಿರ‍್ಮಾಣಗೊಂಡು ಇಂದಿನ ಸ್ಥಿತಿಯಲ್ಲಿ ನಮಗೆ ದೊರಕಿದೆ. ಕಾವ್ಯನಾಯಕನಾದ ಪುಟ್ಟಯ್ಯ ಕಾರಣಾರ್ಥವಾಗಿ ಮೂಡುಬಿದಿರೆಗೆ ಬಂದದನ್ನೂ, ಜೀರ್ಣಗೊಂಡ ಸ್ಥಿತಿಯಲ್ಲಿದ್ದ ಹೊಸಬಸದಿಯನ್ನು, ಪುನರ್-ನಿರ‍್ಮಿಸಿಕೊಡಬೇಕೆಂದು ಊರ ಶ್ರಾವಕರು ಕೋರಿದಂತೆ, ವಚನ ಬದ್ಧನಾದ ಪುಟ್ಟಯ್ಯ ಸಮ್ಮೇದಗಿರಿಯ ಯಾತ್ರೆಯನ್ನು ಮುಗಿಸಿಕೊಂಡು ಹಿಂತಿರುಗಿ ಮೂಡುಬಿದಿರೆಗೆ ಬಂದು, ತನ್ನ ಸಂಪತ್ತನ್ನು ವಿನಿಯೋಗಿಸಿ, ಈ ಬಸದಿಗೆ ಕಾಯಕಲ್ಪ ನೀಡಿದ. ಬಸದಿಯ ಪುನರ್‌ಪ್ರತಿಷ್ಠಾಪನೆಯ ಸಂದರ್ಭದಲ್ಲಿಯೆ ವಿಧಿವಶನಾಗಿ ಹೋದ – ಈ ಎಲ್ಲ ವಿವರಗಳೂ ಈ ಪುಟ್ಟ ಕೃತಿಯಲ್ಲಿದೆ. ೧೩೮ ಸಾಂಗತ್ಯದಿಂದಲೂ, ಒಂದು ವಾರ್ಧಕ ಷಟ್ಪದಿಯಿಂದಲೂ ರಚಿತವಾದ ಈ ಕೃತಿ ತನ್ನ ವಸ್ತುವಿನ ಅನನ್ಯತೆಯಿಂದ ಗಮನಸೆಳೆಯುತ್ತದೆ.

ಧವಲಾ-ಜಯ ಧವಲಾ : ಮಹಾ ಧವಲಾ

ಮೂಡುಬಿದಿರೆ ಇಂದು ಜೈನಕಾಶಿ ಎಂದೆನ್ನಿಸಿಕೊಳ್ಳಲು, ಉತ್ತರ ಭಾರತೀಯ ಶ್ರದ್ಧಾವಂತ ಜೈನ ಧರ್ಮೀಯರಿಗೆ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾಗಲು ಮೂಡುಬಿದಿರೆಯಲ್ಲಿ ಸಂರಕ್ಷಿಸಲ್ಪಟ್ಟಿರುವ ಧವಲಾ- ಜಯ ಧವಲಾ- ಮಹಾ ಧವಲಾ ಎಂಬ ಅಪೂರ್ವ ಶಾಸ್ತ್ರಗ್ರಂಥಗಳೇ ಮುಖ್ಯ ಕಾರಣ. ಭಗವಾನ್ ಮಹಾವೀರರ ಬೋಧನೆಗಳು ಹಂತಹಂತವಾಗಿ ಕಿವಿಯಿಂದ ಕಿವಿಗೆ ಹರಡಿ, ಕಡೆಗೊಮ್ಮೆ ಕಾಲಗತಿಯಲ್ಲಿ ಗ್ರಂಥಸ್ಥವಾಗುವ ಅನಿವಾರ್ಯತೆ ಮೂಡಿ ಬಂದಿತು. ಕಾಲಕ್ರಮದಲ್ಲಿ ಈ ಗ್ರಂಥಸ್ಥ ತತ್ವಗಳೂ ಸಾಮಾನ್ಯರ ತೆಕ್ಕೆಗೊಗ್ಗದೆ ಹೋದಾಗ, ಇವುಗಳಿಗೆ ಟೀಕೆಗಳು ಅನಿವಾರ್ಯವಾದವು. ಈ ಅನಿವಾರ್ಯತೆಯು ಮೂರು ಹಂತಗಳಲ್ಲಿ ಧವಲಾ-ಜಯ ಧವಲಾ- ಮತ್ತು ಮಹಾ ಧವಲಾ ದ ಮೂಲಗಳಾದವು. ಇಂದು ಈ ಮೂರು ಕೃತಿಗಳು ಕೇವಲ ಒಂದೊಂದೆ ಪ್ರತಿ ಉಳಿದುಕೊಂಡಿದ್ದು ಅವು ಮೂಡುಬಿದಿರೆಯಲ್ಲಿ ಸುರಕ್ಷಿತವಾಗಿದೆ. ಅಲ್ಲದೆ ಈ ಹಸ್ತಪ್ರತಿಗಳ ವಿಶೇಷ ಎಂದರೆ, ಇವುಗಳು ಇರುವುದು ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ. ಆದರೆ, ಲಿಪಿ ಪ್ರಾಚೀನ ಹಳೆಗನ್ನಡ, ಆದುದರಿಂದ ಮೂಡುಬಿದಿರೆಯಂತಹಾ ಒಂದು ಪುಟ್ಟ ಊರು, ಹಾಗೂ ಕನ್ನಡವು ಅಖಂಡ ಭಾರತೀಯ ತತ್ವಶಾಸ್ತ್ರಜ್ಞರಿಗೂ, ಜೈನ ಸಿದ್ಧಾಂತಿಗಳಿಗೂ ಪ್ರಾತಃಸ್ಮರಣೀಯ ಹೆಸರಾಯ್ತು. ಬಹುಷಃ ಈ ಸಿದ್ಧಾಂತ ಗ್ರಂಥಗಳು ಮೂಡುಬಿದಿರೆಯಲ್ಲಿ ರಕ್ಷಿತವಾಗಿರದಿದ್ದರೆ, ಅಮೂಲ್ಯವಾದ ಭಾರತೀಯ ಸೈದ್ಧಾಂತಿಕ ಜ್ಞಾನದ ಒಂದು ಪ್ರಮುಖ ಕೊಂಡಿಯೆ ಕಳಚಿಹೋಗಿರುತ್ತಿತ್ತು. ಅದನ್ನು ಉಳಿಸಿದ, ಇಂದಿನ ಪೀಳಿಗೆಗೆ ಅದನ್ನು ತಲುಪಿಸಿದ ಸಾರ್ಥಕ ಭಾವವನ್ನು ಇಂದು ಮೂಡುಬಿದಿರೆ ಪಡೆಯಿತು.

ಪದ್ಮನಾಭ ಮತ್ತು ಚಂದ್ರಶೇಖರ : ಕಾಲ : ಸು : ೧೭೫೧

ರತ್ನಾಕರನ ಭರತೇಶ ವೈಭವವನ್ನು ಬಿಟ್ಟರೆ ಸಾಂಗತ್ಯದಲ್ಲಿ ಅತ್ಯಂತ ದೀರ್ಘವಾದದ್ದೂ, ಮಹತ್ವದ್ದೂ ಆದ ಕೃತಿ ‘ರಾಮಚಂದ್ರ ಚರಿತ್ರೆ’. ೩೭ ಸಂಧಿಗಳು, ೫೨೬೯ ಸಾಂಗತ್ಯ ಪದ್ಯಗಳನ್ನು ಒಳಗೊಂಡ ಈ ಕೃತಿಯನ್ನು ಪ್ರಾರಂಭಿಸಿದವ ಚಂದ್ರಶೇಖರ. ಈತ ಬಂಗವಾಡಿಯ ಲಕ್ಷ್ಮಣ ಬಂಗರಸನ ಆಸ್ಥಾನ ಕವಿ. ಕಾರಣಾಂತರವಾಗಿ ಅಪೂರ್ಣವಾಗಿದ್ದ ಕೃತಿಯನ್ನು ಮುಲ್ಕಿಯ ಸಾಮಂತ ಅರಸ ಶ್ರೀ ಚೆನ್ನರಾಜೇಂದ್ರನ ಆಸ್ಥಾನ ಪಂಡಿತ ಪದ್ಮನಾಭ ಪೂರ್ಣಗೊಳಿಸಿದನು. ಈ ಪದ್ಮನಾಭ ಮೂಡುಬಿದಿರೆಯವನು. ಜೈನ ಸಂಪ್ರದಾಯನುಸಾರವಾದ ರಾಮನ ಕಥೆಯೆ ಈ ಕೃತಿಯ ವಸ್ತು. ಇಬ್ಬರೂ ಕವಿಗಳ ಭಾಷಾಶೈಲಿಯು ಭಿನ್ನವಾದದ್ದು. ಚಂದ್ರಶೇಖರನು ಸರಳವಾದ ಕನ್ನಡದಲ್ಲಿ ಪದಲಾಲಿತ್ಯದಿಂದ ಮನೋಹರವಾದ ರೀತಿಯ ಭಾಷಾ ಶೈಲಿಯವನು. ಸಾಂಗತ್ಯವೆ ಆದರೂ ಸಂಸ್ಕೃತ ಸಂಮೃದ್ಧತೆಯ ಆಡಂಬರ ಪೂರ್ಣವಾದ ಪ್ರೌಢಶೈಲಿ ಪದ್ಮನಾಭನದು. ಕಾವ್ಯವನ್ನು ಓದುವಾಗಲೆ ಈ ವಿಭಿನ್ನ ಭಾಷಾ ಶೈಲಿ ನಮಗೆ ವೇಧ್ಯವಾಗುತ್ತದೆ. ಮುಲ್ಕಿ, ಬಂಗವಾಡಿ, ಅರಸು ಮನೆತನಗಳ ಹಲವು ಐತಿಹಾಸಿಕ ವಿವರಗಳಿಂದಲೂ ಸಮೃದ್ಧವಾದ ಈ ಕೃತಿ ಸಾಂಗತ್ಯದ ಮಹತ್ವದ ಕೃತಿಗಳಲ್ಲಿ ಒಂದಾಗಿ ಅಭ್ಯಾಸ ಯೋಗ್ಯ ಕೃತಿ ಆಗಿದೆ.

ಪಟ್ಟಾಭಿರಾಮ : ಕಾಲ : ೧೭೫೦

ಹುಟ್ಟಿನಿಂದ ಹಾಗೂ ಶ್ರದ್ಧೆಯಿಂದ ಬ್ರಾಹ್ಮಣನಾದರೂ ತನ್ನ ಆತ್ಮೀಯ ವಲಯದ ಜೈನ ಶ್ರಾವಕರ ಕೋರಿಕೆಯಂತೆ ಜೈನಕೃತಿ ರಚಿಸಿದ ಪಟ್ಟಾಭಿರಾಮ ರಚಿಸಿರುವ ಕೃತಿ ‘ರತ್ನಶೇಖರ ಚರಿತ್ರೆ’. ಬೆಟಕೇರಿ ಬಸದಿಯಲ್ಲಿ ವಾಸ್ತವ್ಯ. ಹೂಡಿದ್ದ ಪ್ರಭಾಚಂದ್ರ ಮುನಿವರ್ಯರು ಶ್ರಾವಕರ ಸ್ವಾಧ್ಯಾಯಕ್ಕಾಗಿ ಪುಷ್ಪಾಂಜಲಿ ನೋಂಪಿಯ ಕತೆಯನ್ನು ಹೇಳುತ್ತಿರುವಾಗ ಈ ಕಥೆ ಕೃತಿರೂಪದಲ್ಲಿ ಬಂದರೆ ಚೆಂದ ಎಂಬ ಅಭಿಪ್ರಾಯ ಮೂಡಿಬಂತು. ಆಗ ಮುಮ್ಮಡಿ ಅಬ್ಬಕ್ಕದೇವಿಯ ಮಂತ್ರಿಯಾಗಿದ್ದ ಕೋದಂಡರಾಮನ ಪುತ್ರ ಪಟ್ಟಾಭಿರಾಮನು ಜೈನ ಶ್ರಾವಕರ ಕೋರಿಕೆಯಂತೆ ಈ ಕೃತಿ ರಚಿಸಿದನು. ಸ್ವತಃ ಬ್ರಾಹ್ಮಣನಾದರೂ ಎಲ್ಲಿಯೂ ಜೈನ ಪರಂಪರೆಗೆ ಚ್ಯುತಿ ಬರದಂತೆ ಕಾವ್ಯ ರಚಿಸಿರುವುದು ಪಟ್ಟಾಭಿರಾಮನ ವೈಶಿಷ್ಟ್ಯ.

ಚಂದಯ್ಯ : ಕ್ರಿ.ಶ. ೧೮೨೮

ಐತಿಹಾಸಿಕವಾಗಿ ಪ್ರಾಚೀನ ಪರಂಪರೆಯ ಕೊನೆಯಕೊಂಡಿ ಚಂದಯ್ಯ. ಈತನ ಕೃತಿ ‘ಜೈನಾಚಾರ’. ಜೈನರ ಆಚಾರಗಳಾದ ಅಹಿಂಸೆ, ಸತ್ಯ, ಅಚಾರ್ಯ, ಬ್ರಹ್ಮಚರ್ಯ, ತ್ಯಾಗ ಹಾಗೂ ಸಮ್ಯಕ್ತ್ವದ ಎಂಟು ಅಂಗಗಳ ಪಾಲನೆಯನ್ನು ಶಾಸ್ತ್ರೋಕ್ತ ರೀತಿಯಲ್ಲಿ ತನ್ನ ಕೃತಿಯಲ್ಲಿ ಕವಿ ಹೇಳಿದ್ದಾನೆ. ೩೨ ಸಂಧಿಗಳ ೩೭೯೯ ಸಾಂಗತ್ಯ ಪದ್ಯಗಳನ್ನು ಒಳಗೊಂಡ ಈ ಕೃತಿಯು ಹಲವಾರು ಐತಿಹಾಸಿಕ ದಾಖಲೆಯನ್ನು ಒಳಗೊಂಡಿದೆ.

ಆಧುನಿಕ ಕವಿಗಳು

ಮೂಡುಬಿದಿರೆಯ ಆಧುನಿಕ ಸಾಹಿತ್ಯದ ಬಗ್ಗೆ ಬರೆಯುವಾಗ ನೆನಪಿಸಿಕೊಳ್ಳಬೇಕಾದ ಮೊದಲ ಹೆಸರು ದಿ|| ಲೋಕನಾಥ ಶಾಸ್ತ್ರಿಗಳವರದ್ದು. ಪ್ರಾಚೀನ ಸಾಹಿತ್ಯವನ್ನು ಸಂರಕ್ಷಿಸುವ, ತಾಡಪತ್ರ ಗ್ರಂಥಗಳನ್ನು ಸಂಗ್ರಹಿಸುವಲ್ಲಿ ಇವರ ಸೇವೆ ಅನುಪಮವಾದದ್ದು. ಇವರ ಶ್ರಮದಿಂದಾಗಿಯೇ ನಾಮವಶೇಷ ಆಗಬಹುದಾಗಿದ್ದ ಹಲವಾರು ಕವಿಗಳ ಕೃತಿಗಳು ಉಳಿದುಕೊಂಡಿವೆ. ‘ಬಾಲಬೋಧೆ, ಜೈನಧರ್ಮ’, ವೇಕಟೂರಿನ ಗತವೈಭವ’ ಸೃಷ್ಠಿವಾದ ವಿಚಾರ, ಸೂತಕ ಗೋತ್ರ ವಿಚಾರ, ಷೋಡಶ ಕ್ರಿಯಾ ಮಂಜರಿ, ವೈರಾಗ್ಯಮಾಲಾ, ಅಷ್ಟಾವಧಾನಾದಿ ಪದ ಸಂಗ್ರಹ, ತುಳುನಾಡಿನ ಬಸದಿಗಳು, ಮೂಡುಬಿದಿರೆ ಚರಿತೆ, ಅನೇಕಾಂತ ದರ್ಶನ, ಶಾಂತಿನಾಥ ಚರಿತ್ರೆ ಮುಂತಾದ ಹಲವಾರು ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿರುವ ಲೋಕನಾಥ ಶಾಸ್ತ್ರಿಗಳು ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಹೀಗೆ ಕವಿಯಾಗಿ, ಸಂಶೋಧಕರಾಗಿ, ಪತ್ರಿಕಾ ಸಂಪಾದಕರಾಗಿ, ಮೂಡುಬಿದಿರೆಯ ಸಾಹಿತ್ಯ ಲೋಕಕ್ಕೆ, ಇವರು ಮಾಡಿರುವ ಸೇವೆ ಉನ್ನತ ಮಟ್ಟದ್ದು. ಇವರ ಸಮಕಾಲೀನವರಾಗಿದ್ದ ದಿ|| ಭುಜಬಲಿ ಶಾಸ್ತ್ರಿಗಳು ಮತ್ತೊಬ್ಬ ಮಹತ್ವದ ಸಾಧಕರು. ಸಂಸ್ಕೃತ ಭಾಷಾ ವಿದ್ವಾಂಸರಾಗಿ ಆತ್ಮ ನಿವೇದನಂ, ಶಾಂತಶೃಂಗಾರ ದೀಪ, ಮಹಾವೀರ ಬಾಹುಬಲಿ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ವಿವಿಧ ಪತ್ರಿಕೆಗಳಿಗೆ ನೂರಾರು ಸಂಶೋಧನಾ ಬಿಡಿ ಲೇಖನಗಳನ್ನು ಬರೆದಿರುವ ಶಾಸ್ತ್ರಿಗಳು’ ಆದರ್ಶ ಸಾಹಿತಿಗಳು, ಮೂರ್ತಿ ಪೂಜೆಯ ಅವಶ್ಯಕತೆ, ಬಾಹುಬಲಿ ಚರಿತೆ, ಸಮವಸರತಾ, ಜೈನಷಟ್ಕರ್ಮ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. “ಸಂಸ್ಕೃತ ವಾಙ್ಮಯಕ್ಕೆ, ಜೈನ ಕವಿಗಳ ಕಾಣಿಕೆ” ಎಂಬುದು ಇವರ ಮಹತ್ವದ ಸಂಶೋಧನಾ ಗ್ರಂಥ. ‘ಜೈನ ಮಹಿಳೆ’ ಎಂಬ ಹೆಸರಿನಿಂದ ಕೃತಿ ರಚಿಸುತ್ತಿದ್ದ ೨೦ ಶತಮಾನದ ಹಿರಿಯ ಮಹಿಳಾ ಲೇಖಕಿ ರಾಧಮ್ಮ. ಅಸಂಖ್ಯಾತ ಭಕ್ತಿಗೀತೆಗಳನ್ನು ರಚಿಸಿದ ಇವರು ಸಂಸ್ಕೃತ ಭಾಷೆಯಲ್ಲಿಯೂ ಪ್ರಭುತ್ವ ಹೊಂದಿದ್ದರು. ಅಷ್ಟನಾರ್ಚಕ, ಅನಂತಮಣಿ ಚರಿತೆ, ಲಕ್ಷ್ಮೀಬಾಯಿ ಚರಿತೆ, ನನ್ನ ಭಾವನೆ ಮುಂತಾದ ಕೃತಿಗಳು ಪ್ರಕಟಗೊಂಡಿವೆ. ಶಿಶುಪಾಲ ಪಾರ್ಶ್ವನಾಥ ಶಾಸ್ತ್ರಿಗಳು ಮೈಸೂರಿನ ಅರಸರಿಂದ ‘ಆಸ್ಥಾನ ವಿದ್ವಾನ್’ ಎಂದು ಗೌರವಿಸಲ್ಪಟ್ಟವರು. ವಿವಿಧ ಪತ್ರಿಕೆಗಳಿಗೆ ಅಸಂಖ್ಯ ಲೇಖನವನ್ನು ಬರೆದಿರುವ ರಚಿಸಿದ ‘ಪ್ರಾಣಿಬಲಿ ನಿಷೇಧ’ ಎಂಬ ಕೃತಿ ಮಹತ್ವವಾದದ್ದು. ತೀರ್ಥೇಶ ವೈಭವಂ, ಕಲ್ಯಾಣ ಗೀತಾವಳಿ, ಬಲಾದರ್ಶ, ಲಘು ಜ್ಞಾನಾಮೃತಸಾರ, ಮುಂತಾದ ಕೃತಿ ರಚಿಸಿದ್ದಾರೆ. ಪಂ|| ಕೆ. ಜಿನರಾಜ ಶಾಸ್ತ್ರಿಗಳು ಮೈಸೂರು ಅರಸರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಸಂಸ್ಕೃತ, ಪ್ರಾಕೃತ, ಹಿಂದಿ, ಕನ್ನಡ ಭಾಷೆಗಳಲ್ಲಿ ಪ್ರಕಟಿತ ಪಾಂಡಿತ್ಯ ಹೊಂದಿದವರು. ಇಷ್ಟೋಪದೇಶ, ಆತ್ಮಸಿದ್ಧಿ, ಲಘುಪಾಠ ಸಂಗ್ರಹ, ಎಂಬುದು ಇವರ ಕೃತಿಗಳು.

ಇತರೆ ಆಧುನಿಕ ಕವಿಗಳು

ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪಳಕಳ ಸೀತಾರಾಮಭಟ್ಟ, ತಮ್ಮ ವಿಶಿಷ್ಟ ಬರವಣಿಗೆಯಿಂದ ಓದುಗರ ಗಮನ ಸೆಳೆದಿರುವ ರಸಿಕ ಪುತ್ತಿಗೆ, ತಮ್ಮ ಘನ ಪಾಂಡಿತ್ಯದ ಮೂಲಕ ಸಂಶೋಧನಾ ವಲಯದಲ್ಲಿ ಹೆಸರು ಮಾಡಿರುವ ವಿದ್ವಾನ್ ಟಿ. ರಘುಚಂದ್ರ ಶೆಟ್ಟಿ, ಕಾಂತರೈ, ಆಶಾಕವಿಯಾಗಿ ಹೆಸರಾಗಿದ್ದ ಆಶಾಕವಿ ದಿ || ಜ್ಯೋತಿಷಿ ಜಗತ್ತಾಲಯ್ಯ, ಇಂದಿಗೂ ದಣಿವರಿಯದ ಉತ್ಸಾಹದಿಂದ ಕನ್ನಡ, ಹಿಂದಿ, ಭಾಷೆಯಲ್ಲಿ ಕೃತಿಗಳನ್ನು ರಚಿಸಿ, ಅನೇಕ ಅಪೂರ್ವ ಪ್ರಾಚೀನ ಕೃತಿಗಳನ್ನು ಸಂಗ್ರಹಿಸಿ, ಸಂಶೋಧಿಸಿರುವ ಪಂ || ದೇವಕುಮಾರ ಶಾಸ್ತ್ರಿ ಮುಂತಾದವರು ಮೂಡುಬಿದಿರೆಯ ಹಿರಿಯ ವಿದ್ವತ್ ಪರಂಪರೆಗೆ ಸೇರಿದವರು. ಡಾ || ಪುಂಡಿಕ್ಯಾ ಗಣಪಯ್ಯ ಭಟ್ಟ, ಡಾ || ರಮೇಶ್ಚಂದ್ರರಾವ್, ಪ್ರೊ || ಬಿ.ಎಂ. ಇಚ್ಲಂಗೋಡು, ಡಾ || ಜಯಪ್ರಕಾಶ ಮಾವಿನ ಕುಳಿ, ಪ್ರೊ || ಎಸ್.ಪಿ. ಅಜಿತ ಪ್ರಸಾದ್, ಆರ್. ರಾಮಚಂದ್ರ ಪೈ, ಮುಂತಾದವರು ಯುವ ಲೇಖಕರಾಗಿ ಹಲವು ಉತ್ತಮ ಕೃತಿಗಳನ್ನು ಪ್ರಕಟಿಸಿ, ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದ್ದಾರೆ.

ಉಪಸಂಹಾರ

ಇತಿಹಾಸ ಪೂರ್ವ ಕಾಲದಿಂದಲೂ ಮೂಡುಬಿದಿರೆ ತನ್ನದೆ ಆದ ವೈಶಿಷ್ಟ್ಯಗಳನ್ನು ಮೆರೆದ ಊರು. ಇಂದಿನ ಆಧುನಿಕ ಮೂಡುಬಿದಿರೆಯ ಒಟ್ಟು ವಿಸ್ತೀರ್ಣ ೩೯.೬೨ ಚದರ ಕಿಲೋಮೀಟರ. ಈ ಊರಿನ ಪುರಸಭೆಯ ವ್ಯಾಪ್ತಿಗೆ ಪ್ರಾಂತ್ಯ, ಮಾರ್ಪಾಡಿ, ಕರಂಜೆ, ಕಲ್ಲಬೆಟ್ಟು, ಮಾರೂರೂ ಎಂಬ ಗ್ರಾಮಗಳು ಸೇರಿವೆ. ಹೊಸಬೆಟ್ಟ, ಪಡುಮಾರ್ನಾಡು, ಪುತ್ತಿಗೆ, ಮತ್ತು ಹೊಸಂಗಡಿ ಗ್ರಾಮಗಳು ಗಡಿಯಾಗಿ ಹೊಂದಿರುವ ಮೂಡುಬಿದಿರೆಯಲ್ಲಿ ಹಿಂದೂ, ಜೈನ, ಮುಸ್ಲಿಂ, ಮತ್ತು ಕ್ರಿಶ್ಚಿಯನ್ ಸಮುದಾಯದವರು ಪರಸ್ಪರ ಸೌಹಾರ್ಧತೆಯಿಂದ ಬಾಳುತ್ತಿದ್ದಾರೆ. ಒಟ್ಟು ಜನಸಂಖ್ಯೆ ೨೫೭೧೦. ಆದರೆ ಇಂದು ಮೂಡುಬಿದಿರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯದಲ್ಲಿಯೆ ಅತ್ಯಂತ ವೇಗವಾಗಿ ಬಹುಮುಖಿ ಬೆಳವಣಿಗೆಗೆ ತನ್ನನ್ನು ತಾನು ಅತ್ಯಂತ ತೀವ್ರವಾಗಿ ತೊಡಗಿಸಿಕೊಂಡಿರುವ ಊರಾಗಿದೆ. ಸರಕಾರಿ ಹಾಗೂ ಖಾಸಗಿ ಮಟ್ಟದಲ್ಲಿ ಅತ್ಯಾಧುನಿಕ ವೈದ್ಯಕೀಯ, ಪಾಲಿಟಿಕ್ನಿಕ್, ಸಾಂಪ್ರದಾಯಿಕ ಕಲಾ, ವಿಜ್ಞಾನ ವಾಣಿಜ್ಯ ಕಾಲೇಜುಗಳು, ಸಂಗೀತ, ನೃತ್ಯ, ವ್ಯಾಯಾಮ, ಕಂಪ್ಯೂಟರ್, ಟೈಪರೈಟಿಂಗ್, ಪದವಿಪೂರ್ವ, ಪ್ರೌಢ, ಹಿರಿಯ ಪ್ರಾಥಮಿಕ ಮುಂತಾದ ಶಿಕ್ಷಣ ಸಂಸ್ಥೆಗಳು ಒಟ್ಟು ೭೯ ಇವೆ ಎಂದರೆ ಅಚ್ಚರಿ ಹುಟ್ಟಿಸುವಂತಹುದು. ಈ ಅಂಕಿ ಸಂಖ್ಯೆಗಳು ಈ ಪುಟ್ಟ ಊರು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಬೆಂಬಲದ ಸ್ವರೂಪವನ್ನು ಮನವರಿಕೆ ಮಾಡಿಕೊಡುತ್ತದೆ. ಅತ್ಯಾಧುನಿಕ ಸೈಬರ್ ಕೆಥೆಗಳು ತಲೆ ಎತ್ತಿವೆ. ಈ ಊರಿನ ವ್ಯಾಪಾರ ವಾಣಿಜ್ಯ ವಿಷಯಗಳು “ಹಲೊ ಮೂಡುಬಿದಿರೆ”ಯಲ್ಲಿ ದೊರೆತರೆ, ಮೂಡುಬಿದಿರೆಯ ಇಂದಿನ ಸಮಗ್ರ ಮಾಹಿತಿಯನ್ನು ಒಳಗೊಂಡ ಕಿರುಹೊತ್ತಗೆಗಳೂ ಲಭ್ಯವಿವೆ. ಇಷ್ಟಾದರೂ ಕರ್ನಾಟಕ ರಾಜ್ಯದ ಪ್ರವಾಸೋದ್ದಿಮೆ ಇಲಾಖೆ ಇನ್ನೂ ಎಚ್ಚೆತ್ತುಕೊಳ್ಳಬೇಕಿದೆ. ಮೂಡುಬಿದಿರೆ ಹಾಗೂ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪ್ರವಾಸಿಗರಿಗೆ ಸುಲಭವಾಗಿ ದೊರೆಯುವ ವ್ಯವಸ್ಥೆ ಮಾಡಬೇಕಾಗಿದೆ. ಯೋಜನಾ ಬದ್ಧ ರೀತಿಯಲ್ಲಿ ನಗರ ಬೆಳೆಯಬೇಕಿದೆ. ರಸ್ತೆಗಳು ಅಗಲಗೊಂಡು ಒಳಚರಂಡಿ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಪ್ರಾಚೀನತೆಯನ್ನು ಉಳಿಸಿಕೊಂಡೆ ಆಧುನಿಕ ವೇಷ ತೊಟ್ಟಿರುವ ಮೂಡುಬಿದಿರೆ ಬದುಕಿನಲ್ಲಿ ಒಮ್ಮೆಯಾದರೂ ಮರೆಯದೆ ಸಂದರ್ಶಿಸಬೇಕಾದ ಪ್ರೇಕ್ಷಣೀಯ ಸ್ಥಳ ಎಂಬುದರ ಬಗ್ಗೆ ಮಾತ್ರ ಎರಡು ಮಾತಿಲ್ಲ.