ಮೂರನೆಯ ಕೃಷ್ಣ —ರಾಷ್ಟ್ರಕೂಟ ಮನೆತನದ ರಾಜ, ಕರ್ನಾಟಕ ವನ್ನಾಳಿದರು, ಭಾರತದ ಚರಿತ್ರೆಯಲ್ಲಿ ಶ್ರೇಷ್ಠ ರಾಜರ ಪಂಕ್ತಿಗೆ ಸೇರಿದವನು. ರಣಧೀರ, ಪ್ರಜೆಗಳ ಹಿತವನ್ನೇ ಮುಖ್ಯವಾಗಿ ಭಾವಿಸಿದ ಪ್ರಭು, ಎಲ್ಲ ಧರ್ಮಗಳಿಗೆ ಗೌರವ, ತೋರಿದವನು, ವಿದ್ಯಾಭ್ಯಾಸ, ಕಲೆಗಳು ಇವುಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ.

ಮೂರನೆಯ ಕೃಷ್ಣ

ರಾಷ್ಟ್ರಕೂಟರೆಂದರೆ ಕೂಡಲೇ ನಮ್ಮ ನೆನಪಿಗೆ ಬರುವುದೆಂದರೆ ಇಂದಿಗೂ ಭಾರತದಲ್ಲಿ ಅಚ್ಚಳಿಯದೆ ಇರುವ ಅವರ ಶಿಲ್ಪಕಲೆ ಮತ್ತು ಕನ್ನಡ ಸಾಹಿತ್ಯ ಬೆಳವಣಿಗೆಗೆ ಅವರು ಸಲ್ಲಿಸಿರುವ ಸೇವೆ.

ರಾಷ್ಟ್ರಕೂಟರ ಕಾಲ ಶಿಲ್ಪಕಲೆಗೆ ಪ್ರಸಿದ್ಧಿಯಾಗಿತ್ತು. ಅಜಂತ, ಎಲ್ಲೋರ, ಎಲಿಫೆಂಟಾ ದೇವಾಲಯಗಳು ಭಾರತದ ವಿಖ್ಯಾತ ದೇವಾಲಯಗಳು. ಇವುಗಳನ್ನು ಗುಹಾಂತರ ದೇವಾಲಯಗಳೆಂದು ಕರೆಯುವರು. ಪಶ್ಷಿಮ ಘಟ್ಟಗಳ ಪ್ರಕೃತಿ ಸೌಂದರ‍್ಯದ ಮಧ್ಯೆ ಬಂಡೆಯಲ್ಲಿ ಕೊರೆದಿರುವ ದೇವಾಲಯಗಳು ಇವು. ಆದ್ದರಿಂದ ಇವುಗಳಿಗೆ ಗುಹಾಲಯಗಳೆಂದು ಹೆಸರು.

ಈ ದೇವಾಲಯಗಳ ವಿಶೇಷತೆ ಏನೆಂದರೆ ಒಂದೇ ಬಂಡೆಯನ್ನು ಕೊರೆದು ಕಂಬಗಳನ್ನೂ ಸಭಾಂಗಣವನ್ನೂ ದೇವರ ಮೂರ್ತಿಗಳನ್ನು ಕೆತ್ತಿದ್ದಾರೆ. ಬೇರೆ ಬೇರೆಯಾಗಿ ಕಲ್ಲುಗಳನ್ನು ತಂದು ಜೋಡಿಸಿ ಕಟ್ಟಿದ ಕಟ್ಟಡಗಳಲ್ಲ ಇವು. ಮಾನವನ ಕಲಾಕೃತಿ ಎಷ್ಟು ಅದ್ಭುತವಾದುದು ಎಂಬುದಕ್ಕೆ ಈ ಗುಹಾಲಯಗಳು ಸಾಕ್ಷಿಯಾಗಿವೆ.

ಎಲ್ಲೋರದ ದಶಾವತಾರ ಗುಹೆಯು ಆಶ್ಚರ‍್ಯಕರ ವಾಗಿ ಕೊರೆಯಲ್ಪಟ್ಟಿದೆ. ಒಂದೇ ಬಂಡೆಯಿಂದ ಕೊರೆದ ಎರಡು ಅಂತಸ್ತಿನ ದೇವಾಲಯಗಳಿವೆ. ಕೆಳ ಅಂತಸ್ತಿನಲ್ಲಿ ಕಂಬಗಳಿಂದ ಕೂಡಿದ ವಿಶಾಲವಾದ ಸಭಾಂಗಣವಿದೆ. ಮಹಡಿಯಲ್ಲಿ ಸುಮಾರು ೫೪ ಕಂಬಗಳಿಂದ ಕೂಡಿದ ಇನ್ನೂ ವಿಶಾಲವಾದ ಮಂದಿರವಿದೆ. ಈ ಗುಹಾಲಯದಲ್ಲಿ ಶೈವ ಮತ್ತು ವೈಷ್ಣವ ದೇವರುಗಳನ್ನು ಕೆತ್ತಲಾಗಿದೆ. ತಾಂಡವ ನೃತ್ಯದ ಶಿವನಮೂರ್ತಿ ಮತ್ತು ಹಿರಣ್ಯಕಶಿಪುವಿನ ಸಂಹಾರ ಬಹಳ ಮನೋಹರವಾಗಿ ರೂಪಿಸಲಾಗಿದೆ.

ಎಲ್ಲೋರದ ಮತ್ತೊಂದು ದೇವಾಲಯ ‘ಕೈಲಾಸ’ ಎಂಬುದು. ಕೈಲಾಸ ದೇವಾಲಯವು ಅತ್ಯಂತ ಉತ್ತಮ ಮಟ್ಟದ ಕಲೆ ಎಂದು ಹೆಸರುವಾಸಿಯಾಗಿದೆ. ಈ ಗುಹಾಲಯದಲ್ಲಿ ಗರ್ಭಗುಡಿ, ಮಹಾದ್ವಾರ, ನಂದಿ ಮಂದಿರ ಮತ್ತು ಅಂಗಳದ ಸುತ್ತಲೂ ಇರುವ ಪ್ರಾಕಾರ ಇವೆಲ್ಲವನ್ನು ಒಂದೇ ಬಂಡೆಯಿಂದ ಬಿಡಿಸಿ ಕೊರೆದಿದ್ದಾರೆ. ದೇವಾಲಯದ ಮೇಲ್ಛಾವಣಿಯಲ್ಲಿ ಅನೇಕ ವರ್ಣರಂಜಿತ ಚಿತ್ರಗಳಿವೆ. ಗೋಡೆಗಳ ಮೇಲೆ ಅಸಂಖ್ಯಾತ ದೇವತಾ ವಿಗ್ರಹಗಳಿವೆ. ಕೈಲಾಸ ಪರ್ವತವನ್ನು ಅಲ್ಲಾಡಿಸುತ್ತಿರುವ ರಾವಣನ ವಿಗ್ರಹವನ್ನು ಬಹಳ ಭವ್ಯವಾಗಿ ಕೆತ್ತಿದ್ದಾರೆ.

ದೇಶವಿದೇಶಗಳ ಪ್ರವಾಸಿಗರು ಈ ಗುಹಾಲಯ ಗಳನ್ನು ನೋಡಿ ಬೆರಗಾಗಿದ್ದಾರೆ. ಇಂತಹ ಅದ್ಭುತ ಕಲಾಕೃತಿಯನ್ನು ನಿರ್ಮಿಸಿದವರು ರಾಷ್ಟ್ರಕೂಟರು. ಇವರ ಕಾಲದ ಶಿಲ್ಪಕಲೆಯು ಎಲಿಫೆಂಟಾದಲ್ಲಿ ತನ್ನ ಶಿಖರವನ್ನು ಮುಟ್ಟಿತು. ಎಲಿಫೆಂಟಾ ಗುಹೆಗಳ ಅರ್ಧನಾರೀಶ್ವರ ಮತ್ತು ತ್ರಿಮೂರ್ತಿಯ ವಿಗ್ರಹಗಳು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿವೆ. ತ್ರಿಮೂರ್ತಿಯೆಂದು ಪ್ರಸಿದ್ಧವಾಗಿರುವ ಮಹೇಶ ಮೂರ್ತಿಯ ಆಕೃತಿಯು ಅತ್ಯಂತ ದೊಡ್ಡದಾದ ಭವ್ಯವಾದ ವಿಗ್ರಹ.

ದೊಡ್ಡ ಸಾಮ್ರಾಜ್ಯವನ್ನು ಕಟ್ಟಿ ದಕ್ಷ ಆಡಳಿತ ನಡೆಸುವುದು ರಾಷ್ಟಕೂಟರ ಧ್ಯೇಯವಾಗಿತ್ತು. ನಾಡಿನ ಅಭಿವೃದ್ಧಿಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಆಳಿದ ಅರಸರು ಅವರು.

ಕರ್ನಾಟಕದ ಇತಿಹಾಸದಲ್ಲಿ ರಾಷ್ಟ್ರಕೂಟರ ಆಳ್ವಿಕೆಯ ಕಾಲ ಉಜ್ವಲಯುಗ. ರಾಷ್ಟ್ರಕೂಟರಾಜರು ಕನ್ನಡಿಗರ ಕೀರ್ತಿಯನ್ನು ಭಾರತದಲ್ಲೆಲ್ಲ ಹರಡಿ, ಕನ್ನಡ ಧ್ವಜವನ್ನು ಮುಗಿಲಿಗೇರಿಸಿದರು. ಅಖಿಲ ಭಾರತದ ಚರಿತ್ರೆಯಲ್ಲೇ  ಅವರ ಕಾಲವನ್ನು ರಾಷ್ಟ್ರಕೂಟರ ಯುಗ ವೆಂದು ಕರೆದಿದ್ದಾರೆ. ರಾಷ್ಟ್ರಕೂಟರಾಜರಲ್ಲಿ ಬಹು ಮಂದಿ ಕರ್ನಾಟಕ ರಾಜ್ಯವನ್ನು ವಿಶಾಲವಾದ ಸಾಮ್ರಾಜ್ಯವನ್ನಾಗಿ ಮಾಡಿದರು. ಉತ್ತಮವಾದ ಆಡಳಿತವನ್ನು ರೂಪಿಸಿದರು. ಪ್ರಜೆಗಳ ರಕ್ಷಣೆಯನ್ನು ವಹಿಸಿಕೊಂಡು ಒಳ್ಳೆಯ ರಾಜರೆನಿಸಿಕೊಂಡರು.

ಈ ರಾಷ್ಟ್ರಕೂಟ ವಶಕ್ಕೆ ಸೇರಿದ ಪ್ರಸಿದ್ಧ ದೊರೆಯೇ ಮೂರನೆಯ ಕೃಷ್ಣ ಅಥವಾ ಮುಮ್ಮಡಿ ಕೃಷ್ಣ. ಅವನು ಪ್ರಜೆಗಳನ್ನು ಮಕ್ಕಳಂತೆ ಪಾಲಿಸಿದನು.

ಪ್ರಜೆಗಳಿಗೆ ಸುಖ ಹೇಗೆ ತಂದೇನು?

ಚಿಕ್ಕ ವಯಸ್ಸಿನಿಂದಲೇ ಮುಮ್ಮಡಿ ಕೃಷ್ಣನಿಗೆ ರಾಜ್ಯದ ಚಿಂತೆ. ತನ್ನ ತಾತ, ಮುತ್ತಾತಂದಿರ ಶೌರ್ಯ ಸಾಹಸ ಗುಣಗಳನ್ನು ಕೇಳಿ ಆನಂದಿಸುತ್ತಿದ್ದ. ಅವರು ಕಟ್ಟಿದ ಕನ್ನಡ ನಾಡನ್ನು ಅತ್ಯಂತ ವಿಸ್ತಾರ ಮಾಡಿ ಅಖಂಡ ಭಾರತ ದಲ್ಲೇ ಹೆಚ್ಚು ಕೀರ್ತಿ ಗಳಿಸಬೇಕೆಂಬ ಹೆಬ್ಬಯಕೆ ಕೃಷ್ಣನಿಗೆ.

ಕೃಷ್ಣನ ತಂದೆ ಮುಮ್ಮಡಿ ಅಮೋಘವರ್ಷನಿಗೆ ಸಿಂಹಾಸನಕ್ಕೆ ಬಂದಾಗ ಐವತ್ತು ವರ್ಷ ವಯಸ್ಸಾಗಿತ್ತು. ಅಮೋಘವರ್ಷನಿಗೆ ದೇವರಲ್ಲಿ ಬಹಳ ಭಕ್ತಿ, ಧಾರ್ಮಿಕ ಜೀವನವನ್ನು ನಡೆಸುವುದರಲ್ಲಿ ಅವನಿಗೆ ಆಸೆ. ರಾಜ್ಯ ವಿಸ್ತಾರ ಮಾಡುವುದರಲ್ಲಾಗಲೀ, ರಾಜ್ಯದ ಆಡಳಿತದ ಲ್ಲಾಗಲೀ, ಅವನಿಗೆ ಹೆಚ್ಚು ಗಮನವಿರಲಿಲ್ಲ. ಅವನನ್ನು ‘ಶಿವಭಕ್ತ’ ನೆಂದೇ ಎಲ್ಲರೂ ಕರೆಯುತ್ತಿದ್ದರು. ಶಿವನಿಗಾಗಿ ಅನೇಕ ದೇವಾಲಯಗಳನ್ನು ಕಟ್ಟಿಸಿ ಪ್ರತಿನಿತ್ಯವೂ ದೇವಾಲಯಕ್ಕೆ ಹೋಗಿ ಶಿವನನ್ನು ಧ್ಯಾನಿಸಿ, ಶಿವನ ಆರಾಧನೆಯನ್ನು ನೋಡಿ ತೃಪ್ತಿಪಡುವುದು ಅವನ ದಿನಚರಿಯಾಗಿತ್ತು.

ಅಮೋಘವರ್ಷನಿಗೆ ಕರ್ನಾಟಕ ರಾಜ್ಯ ಲಭಿಸಿ ಮೂರನೆಯ ಕೃಷ್ಣನು ಹೇಗೆ ರಾಜನಾದನು ಎಂಬುದು ಸ್ವಾರಸ್ಯವಾದ ವಿಷಯ.

ರಾಷ್ಟ್ರಕೂಟರ ನಾಲ್ಕನೆಯ ಗೋವಿಂದನೆಂಬವನು ರಾಜನಾಗಿದ್ದಾಗ ಪ್ರಜೆಗಳ ರಕ್ಷಣೆಯನ್ನೂ ಧರ್ಮ ನೀತಿಯನ್ನೂ ಅನುಸರಿಸಿ ರಾಜ್ಯವಾಳುತ್ತಿರಲಿಲ್ಲ. ಎಲ್ಲೆಲ್ಲೂ ಅರಾಜಕತೆಯುಂಟಾಯಿತು. ಈ ಗೋವಿಂದನು ಅಮೋಘ ವರ್ಷನ ಅಣ್ಣನ ಮಗನೇ.

ಮೂರನೆಯ ಕೃಷ ಚಿಕ್ಕ ವಯಸ್ಸಿನಿಂದ ರಾಜ್ಯದಲ್ಲೂ, ಆಡಳಿತದಲ್ಲೂ ಮಹತ್ವಾಕಾಂಕೆ ಉಳ್ಳವ. ತನ್ನ ದೊಡ್ಡಪ್ಪನ ಮಗ ಗೋವಿಂದನು ರಾಜಪದವಿಗೆ ಅನರ್ಹನು, ಅಯೋಗ್ಯನು, ಅಸಮರ್ಥನು ಎಂದು ತಿಳಿದಿದ್ದ  ಕೃಷ್ಣ  ತನಗಾದರೂ ರಾಜ್ಯಭಾರ ವಹಿಸಬಾರದೇ ಎಂದು ಕನಸು ಕಾಣುತ್ತಿದ್ದ. ದೊಡ್ಡ ಸಾಮ್ರಾಜ್ಯವನ್ನು ಕಟ್ಟಿ ಎಲ್ಲರನ್ನೂ ನೆಮ್ಮದಿಯಿಂದ ಇಟ್ಟು ಸುಖ ಶಾಂತಿ ತಂದೇನು ಎಂದು ಆಸೆಯ ಗೋಪುರವನ್ನು ಕಟ್ಟಿದ.

ಆದರೆ ಇದು ಹೇಗೆ ಸಾಧ್ಯ? ಕೃಷ್ಣನ ಆಸೆ ಹಿರಿದಾಗಿತ್ತು. ಶ್ರೇಷ್ಠವಾಗಿಯೂ ಇತ್ತು. ಆದರೆ ದೊಡ್ಡ ಸೈನ್ಯವನ್ನು ಕಟ್ಟಿ ಕ್ರೂರಿಯಾಗಿದ್ದ ಗೋವಿಂದನನ್ನು ಸೋಲಿಸಿ ರಾಜ್ಯವನ್ನು ಗಳಿಸುವ ಸೈನ್ಯಬಲ ಅವನಲ್ಲಿರಲಿಲ್ಲ.

ಜನರ ರಕ್ಷಣೆ ಕರ್ತವ್ಯವಲ್ಲವೇ?

ಒಂದು ದಿನ ತನ್ನ ತಂದೆಯನ್ನು ಸಮೀಪಿಸಿ, ‘ದುಷ್ಟನಾದ ಗೋವಿಂದನ ದರ್ಪ, ಅಹಂಕಾರ, ಸ್ವಾರ್ಥವನ್ನು ಮುರಿಯಲು ಮಾರ್ಗವೇನು, ಅಪ್ಪಾಜಿ? ಜನರೆಲ್ಲಾ ತಮ್ಮ ರಾಜನ ದುಷ್ಟ ಆಳ್ವಿಕೆಯಿಂದ ನೊಂದಿದ್ದಾರೆ. ನೀವು ಅನುಮತಿ ಕೊಟ್ಟರೆ ಅವನನ್ನು ಸೋಲಿಸುವ ಪ್ರಯತ್ನವನ್ನಂತೂ ಮಾಡುತ್ತೇನೆ. ಜನರ ರಕ್ಷಣೆ ನಮ್ಮ ಕರ್ತವ್ಯವಲ್ಲವೇ ಅಪ್ಪಾಜಿ?’ಎಂದು ಕೇಳಿದ.

‘ಹಾಗೆಲ್ಲಾ ದುಡುಕಬಾರದು ಕುಮಾರ. ಅನೇಕ  ಸಾಮಂತರು, ಸಚಿವರು, ಎಲ್ಲರಿಗೂ ಅವನ ವಿಷಯ ಗೊತ್ತಿದೆ. ಅವರೆಲ್ಲರೂ ಸೇರಿ ಅವನನ್ನು ತೆಗೆದು ಹಾಕ ಬೇಕೆಂದೇ ಇದ್ದಾರೆ. ದೈವೇಚ್ಛೆ ಇದ್ದರೆ ನೀನೇ ರಾಜನಾಗಬಹುದು. ಆದರೆ ಅವನೊಡನೆ ವಿನಾ ಕಾರಣದಿಂದ  ನೀನು ಜಗಳವಾಡಿ ಸೋಲಿಸಿ ಸಿಂಹಾಸನ ಗಳಿಸುವುದು ಧರ್ಮವಲ್ಲ ಮಗು’ ಅಮೋಘವರ್ಷ ಮಗನಿಗೆ ಬೋಧಿಸಿದ.

ಕೃಷನಿಗೆ ರಾಜ್ಯ ಕಟ್ಟುವ ಆಸೆ. ಒಳ್ಳೆಯ ಆಡಳಿತ ನಡೆಸುವ ಆಕಾಂಕ್ಷೆ. ರಾಜ್ಯವನ್ನು ಗಳಿಸಲು ಈಗ ಸುಸಮಯ ಒದಗಿತ್ತು. ಗೋವಿಂದನಿಗೆ ಬೆಂಬಲ ಕೊಡುವವರು ಯಾರೂ ಇರಲಿಲ್ಲ. ಇಂತಹ ಸಂದರ್ಭ ದಲ್ಲೂ ಮಹತ್ವಾಕಾಂಕ್ಷೆ ಸಾಮರ್ಥ್ಯಗಳಿದ್ದರೂ ಮುಮ್ಮಡಿ ಕೃಷ್ಣನು ತನ್ನ ತಂದೆಯ ಮಾತನ್ನು ಮೀರಿ ಹೋಗಲಿಲ್ಲ.

ಅಮೋಘವರ್ಷ ರಾಜನಾದ

ನಮ್ಮ ದೇಶದಲ್ಲಿ ಹಿಂದೆ ರಾಜಪ್ರಭುತ್ವವಿತ್ತು ಎಂದು ಹೇಳುತ್ತೇವೆ. ಒಟ್ಟಿನಲ್ಲಿ ಇದು ಸರಿ. ಆದರೆ ಈ ವಿಷಯವನ್ನು ಕುರಿತು ಹೇಳುವಾಗ ಒಂದು ಅಂಶವನ್ನು ನೆನಪಿಡಬೇಕು. ರಾಷ್ಟ್ರಕೂಟರ  ಕಾಲದಲ್ಲಿ ಸಾಮಾನ್ಯವಾಗಿ ಸಿಂಹಾಸನವು ವಂಶಪಾರಂಪರ್ಯವಾಗಿ ತಂದೆಯಿಂದ ಹಿರಿಯ ಮಗನಿಗೆ ಲಭ್ಯವಾಗುತ್ತಿತ್ತು. ಆದರೂ ಯಾರೆ  ಆದರೂ ರಾಜನಾಗುವುದಕ್ಕೆ  ಪ್ರಜೆಗಳ ಒಪ್ಪಿಗೆ ಬೇಕಾಗುತ್ತಿತ್ತು. ಹಿರಿಯ ಮಗನು ಅವಿವೇಕ ಅಥವಾ ದುಂದುಗಾರ ಅಥವಾ ಅಸಮರ್ಥ ಎಂದು ಜನರಿಗೆನ್ನಿಸಿದರೆ ಅವನ ತಮ್ಮಂದಿರಲ್ಲಿ ದಕ್ಷನಾದವನು ರಾಜನಾಗುತ್ತಿದ್ದ. ರಾಜನಾದವನು ರಾಜ್ಯವನ್ನು ಸರಿಯಾಗಿ ಆಳದಿದ್ದರೆ ಅವನನ್ನು ಸಿಂಹಾಸನದಿಂದ ಇಳಿಸಿ ಬೇರೆಯವರನ್ನು ಸಿಂಹಾಸನದಲ್ಲಿ ಕೂಡಿಸಬಹುದಾಗಿತ್ತು.

ಗೋವಿಂದನು ತನ್ನ ಸುಖವನ್ನೇ ನೋಡಿ ಕೊಳ್ಳುತ್ತಿದ್ದ. ಹೊಣೆಗಾರಿಕೆ ಇಲ್ಲದ ರಾಜನಾಗಿದ್ದುದರಿಂದ ಆಸ್ಥಾನದ ಹಿರಿಯರಿಗೂ, ಅಧಿಕಾರಿಗಳಿಗೂ, ಪ್ರಜೆಗಳಿಗೂ  ಅವನ ವಿಷಯದಲ್ಲಿ ಬೇಸರ ಬಂದಿತ್ತು. ಅವರೆಲ್ಲ ಸೇರಿ ಸಮಾಲೋಚಿಸಿ, ಗೋವಿಂದನನ್ನು ಸಿಂಹಾಸನದಿಂದ ಇಳಿಸಿ ಅಮೋಘವರ್ಷನಿಗೆ ಪಟ್ಟಾಭಿಷೇಕ ಮಾಡಲು ನಿಶ್ಚಯಿಸಿ ದರು. ಅರಿಕೇಸರಿ ಎಂಬ ಸಾಮಂತರಾಜನ ನೆರವಿನಿಂದ ಗೋವಿಂದನನ್ನು ಸಿಂಹಾಸನದಿಂದ ಕೆಳಗಿಳಿಸಿದರು. ಅಮೋಘವರ್ಷನನ್ನು ತಮ್ಮ ಅರಸ ನಾಗಲು ಆಹ್ವಾನಿಸಿದರು.

ಅಮೋಘವರ್ಷನು ತನ್ನ ಶೀಲ, ನಿಸ್ಪೃಹತೆ, ಧರ್ಮನೀತಿಗಳಿಗೆ ಖ್ಯಾತಿ ಪಡೆದಿದ್ದನು. ಆಗ ಅವನಿಗೆ ಐವತ್ತು ವರ್ಷ.

‘ಶಿವನ ಪ್ರೇರಣೆಯಿಂದ ರಾಜ್ಯ ಸ್ವೀಕಾರ ಮಾಡುತ್ತಿದ್ದೇನೆ’ ಎಂದು ಹೇಳಿ ಅಮೋಘವರ್ಷ ರಾಜ ಪದವಿಗೆ ಬಂದನು.

ಹೀಗೆ ಮೂರನೆಯ ಕೃಷ್ಣನ ತಂದೆಗೆ ಕರ್ನಾಟಕದ ಸಿಂಹಾಸನ ಸಿಕ್ಕಿದುದು ಅನಿರೀಕ್ಷಿತವಾಗಿ, ಹಿರಿಯರ ಪ್ರಾರ್ಥನೆಯಿಂದಲೂ, ದೈವೇಚ್ಛೆಯಿಂದಲೂ ಅಮೋಘ ವರ್ಷ ಕರ್ನಾಟಕ ಸಾಮ್ರಾಜ್ಯದ  ಸಾಮ್ರಾಟನಾದ.

ಕೃಷ್ಣನ ಆಸೆ ನೆರವೇರಿತು. ಅವನ ಕನಸು ನನಸಾಯಿತು. ಸ್ವಭಾವತಃ ಅಮೋಘವರ್ಷನಿಗೆ ಧರ್ಮ ದಲ್ಲಿ ಶ್ರದ್ಧೆ, ರಾಜ್ಯಾಡಳಿತದಲ್ಲಿ ಅಷ್ಟೇನು ಆಸಕ್ತಿ ಇರಲಿಲ್ಲ.  ರಾಜ್ಯದ ಎಲ್ಲ ಜವಾಬ್ದಾರಿಯನ್ನೂ ವಹಿಸಿಕೊಳ್ಳಲು ಕೃಷ್ಣ  ಸಿದ್ಧನಾಗಿದ್ದ.

ತನ್ನ ಬುದ್ಧಿಶಕ್ತಿ, ಶೌರ‍್ಯ, ಸಾಮರ್ಥ್ಯಗಳಿಂದ ಕೃಷ್ಣ  ಬಹಳ ಬೇಗ ಜನಾನುರಾಗಿಯಾದನು.

ಆಶೀರ್ವದಿಸಿ ಅಪ್ಪಾಜಿ

ಒಂದು ದಿನ ಅಮೋಘವರ್ಷನು ಶಿವ ದೇವಾಲಯದಲ್ಲಿ ತನ್ನನ್ನೇ ಮರೆತು ಧ್ಯಾನಿಸುತ್ತಾ ಕುಳಿತಿದ್ದಾಗ ‘ರಾಜ್ಯಕ್ಕೆ ಶತ್ರುಗಳು ಮುತ್ತಿಗೆ ಹಾಕಲು ಬರುತ್ತಿರುವರು’ ಎಂಬ ಸುದ್ದಿ ಬಂತು.

ಗಂಗೇವಾಡಿಯ ರಾಚಮಲ್ಲ ಎಂಬುವನು  ರಾಷ್ಟ್ರಕೂಟರಿಗೆ ಮತ್ತೆ ಮತ್ತೆ ತೊಂದರೆ ಕೊಡುತ್ತಿದ್ದ. ಈ ಶತ್ರುವನ್ನು ಹೊಡೆದೋಡಿಸದಿದ್ದರೆ ರಾಜ್ಯವು ಅವನ ಪಾಲಾಗುತ್ತದೆ ಎಂಬುದು ಖಂಡಿತ.

ಶತ್ರುಗಳು ಬರುವ ಸುದ್ದಿಯಿಂದ ಅಮೋಘ ವರ್ಷನು ಗಾಬರಿಯಾಗಲಿಲ್ಲ. ಕೂಡಲೇ ಕತ್ತಿ ಹಿಡಿದು ಶತ್ರುಗಳನ್ನು ಕೊಲ್ಲಲು ಹೊರಡಲಿಲ್ಲ. ಶಿವನ ಧ್ಯಾನದಲ್ಲಿ ತಲ್ಲೀನನಾಗಿದ್ದ ಅವನ ಮನಸ್ಸು ಕದಲಲಿಲ್ಲ. ಏಕೆಂದರೆ ತನ್ನ ಮಗ ಕೃಷ್ಣ ರಾಜ್ಯವನ್ನು ಶತ್ರುಗಳ ಕೈ ಸೇರಲು ಬಿಡುವುದಿಲ್ಲವೆಂದು ಅವನಿಗೆ ಗೊತ್ತಿತ್ತು.

ತಂದೆಯ ಆಶೀರ್ವಾದವನ್ನು ಪಡೆಯದೆ ಕೃಷ್ಣ ಯಾವ ಕೆಲಸದಲ್ಲೂ ಮುಂದುವರಿಯುತ್ತಿರಲಿಲ್ಲ. ಸೈನ್ಯ ತಮ್ಮ ರಾಜ್ಯವನ್ನು ಸಮೀಪಿಸುತ್ತಿದೆ ಎಂಬ ಸಮಾಚಾರವನ್ನು ತಿಳಿದ ಕೃಷ್ಣ ಕೂಡಲೇ ಕತ್ತಿಯನ್ನು ಝಳಪಿಸುತ್ತಾ ತಂದೆ ಇದ್ದ ದೇವಾಲಯಕ್ಕೆ ಬಂದನು. ತಂದೆಗೆ ನಮಸ್ಕರಿಸಿದನು.

‘ಅಪ್ಪಣೆ ಕೊಡಿ ಅಪ್ಪಾಜಿ. ಶತ್ರುಗಳ ಕೈಯಿಂದ ರಾಜ್ಯವನ್ನು ರಕ್ಷಿಸಲು ಹೊರಡುತ್ತಿರುವೆನು. ಈಗಲೇ ಯುದ್ಧರಂಗಕ್ಕೆ ತೆರಳುತ್ತಿರುವೆನು. ಆಶೀರ್ವದಿಸಿ’ ಎಂದು ಮಂಡಿಯೂರಿ ತಂದೆಯ ಮುಂದೆ ತಲೆಬಾಗಿ ಕುಳಿತನು.

‘ನಿನಗೆ ಜಯವಾಗಲಿ ಕುಮಾರ, ರಾಜ್ಯಲಕ್ಷ್ಮಿ ನಿನಗೆ ಒಳಿದಿರುವಳು’ ಎಂದು ಹರಸಿ ಕಳುಹಿಸಿದ ತಂದೆಯ ಮಾತು ನಿಜವಾಯಿತು. ಕೃಷ್ಣನಿಗೆ ಯುದ್ಧದಲ್ಲಿ ಜಯವಾಯಿತು.

ರಣಧೀರ

ಕೃಷ್ಣ  ಚಿಕ್ಕಂದಿನಿಂದಲೂ ಬಹಳ ಬುದ್ಧಿವಂತ, ಸಾಹಸಿ, ಅತ್ಯಂತ ಚತುರತೆಯಿಂದ ಎಲ್ಲವನ್ನೂ ನಿರ್ವಹಿಸುವ ಸಾಮರ್ಥ್ಯ ಅವನಿಗಿತ್ತು.

ಯುದ್ಧದಲ್ಲಿ ಹೆದರಿ ಹಿಮ್ಮೆಟ್ಟುವುದೆಂದರೆ ಅವನಿಗೆ ಬಹಳ ಅವಮಾನದ ಸಂಗತಿ. ‘ಜಯಿಸಬೇಕು, ಇಲ್ಲವೇ ಮಡಿಯಬೇಕು’ ಎಂಬುದೇ ಅವನ ತತ್ವ.

ಒಂದು ಸಲ ರಣರಂಗದಲ್ಲಿ ಕರ್ನಾಟಕ ಸೈನ್ಯಕ್ಕೆ ಸೋಲಾಗುವ ಪ್ರಸಂಗ ಬಂತು. ಆಗಿನ ಕಾಲದ ಯುದ್ಧದಲ್ಲಿ ಭುಜ ಬಲ ಪರಾಕ್ರಮ ಬೇಕಾಗಿತ್ತು.

ಒಂದು ಸಲ  ವೆಂಗಿಯ ಚಾಳುಕ್ಯರೊಡನೆ ಯುದ್ಧವಾಯಿತು. ಕರ್ನಾಟಕ ಸೈನ್ಯದ ಸೈನಿಕರು ಯುದ್ಧವನ್ನು ಬಿಟ್ಟು ಪಲಾಯನ ಮಾಡಲು ಪ್ರಾರಂಭಿಸಿದ್ದರು. ಇದನ್ನು ನೋಡಿ ಕೃಷ್ಣನಿಗೆ ಸಹಿಸ ಲಾಗಲಿಲ್ಲ. ಯುದ್ಧದ ಮುಖಂಡತ್ವವನ್ನು ವಹಿಸಿ ಸೈನಿಕರಿಗೆ ಕರೆ ಕೊಟ್ಟು ಕೂಗಿದ, ‘ಕನ್ನಡನಾಡಿನ ಸೈನಿಕರೇ! ಸೋಲನ್ನೇ ಕಾಣದ ‘ಕರ್ನಾಟಕ ಬಲ’ವೆಂದು ನಮ್ಮ ಸೈನ್ಯದ ಹೆಸರು ಎಲ್ಲೆಲ್ಲೂ ಪ್ರಖ್ಯಾತವಾಗಿದೆ, ಯುದ್ಧರಂಗದಿಂದ ನಮ್ಮ ಸೈನ್ಯ ಓಡುವು ದೆಂದರೇನು? ಕೆಚ್ಚೆದೆಯ ಕನ್ನಡನಾಡಿನ ವೀರರು ಎಂದೂ ಹೀಗಿರಲಾರರು. ಬನ್ನಿ, ತಾಯಿನಾಡಿನ ಸೇವೆ ಮಾಡಿ ಬನ್ನಿ. ನಾಡಿಗಾಗಿ ನಿಮ್ಮ ಕರ್ತವ್ಯವನ್ನು ಸಲ್ಲಿಸಿ’ ಎಂದು ಕೂಗಿ ಯುದ್ಧ ಮಧ್ಯದಲ್ಲೇ ಸೈನಿಕರನ್ನು ಹುರಿದುಂಬಿಸಿದ. ಯುದ್ಧದಲ್ಲಿ ಗೆಲುವನ್ನು ಸಾಧಿಸಿದ.

ಸಾಮಾನ್ಯವಾಗಿ ಅರಸನು ಜೀವಿಸಿದ್ದಾಗಲೇ ಅವನ ಉತ್ತರಾಧಿಕಾರಿ ಯಾರು ಎಂಬುದನ್ನು ನಿರ್ಧರಿಸುತ್ತಿದ್ದರು. ಆದರೆ ಪಟ್ಟಾಭಿಷೇಕವಾಗದ ಹೊರತು ಉತ್ತರಾಧಿಕಾರಿಯನ್ನು ಅಂದರೆ ರಾಜಕುಮಾರನನ್ನು ಯುವರಾಜನೆಂದು ಕರೆಯುತ್ತಿರಲಿಲ್ಲ.

ಮೂರನೆಯ ಕೃಷ್ಣನ ರಾಜ ತೇಜಸ್ಸಿನ ಬಲದ ಅದೃಷ್ಟ ಕಥೆಯೇ ಬೇರೆ.

ರಾಜ್ಯಾಡಳಿತ ಸುಸೂತ್ರವಾಗಿ ನಡೆಯಬೇಕಾದರೆ ತನಗಿಂತಲೂ ತನ್ನ ಮಗ ಕೃಷ್ಣನೇ ಸರಿಯಾದವನು ಎಂದು ಅಮೋಘವರ್ಷ ತನ್ನ ಜೀವಿತ ಕಾಲದಲಲ್ಲಿಯೇ ಹಿರಿಯ ಮಗನಾದ ಕೃಷ್ಣನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ. ಅಷ್ಟೇ ಅಲ್ಲದೆ ಪಟ್ಟಾಭಿಷೇಕವನ್ನು ಏರ್ಪಡಿಸಿ ಯುವರಾಜ ಪಟ್ಟವನ್ನೂ ಕಟ್ಟಿದನು. ಯುವರಾಜ ಪದವಿಯ ಚಿಹ್ನೆಯಾಗಿ ಕೃಷ್ಣನು ಕಂಠೀಹಾರವನ್ನು ಧರಿಸಿದನು.

ಯುವಕನಾಗಿದ್ದ ಯುವರಾಜ ಮುಮ್ಮಡಿ ಕೃಷ್ಣನೇ ರಾಜ್ಯದ ಸರ್ವಾಧಿಕಾರಿಯಾದ. ಕರ್ನಾಟಕವು ಇಂತಹ ರಾಜನನ್ನೇ ಅಪೇಕ್ಷಿಸಿತ್ತು. ಅದಕ್ಕೆ ಸರಿಯಾಗಿ ಕೃಷ್ಣನ ಭವಿಷ್ಯ ತೇಜೋಬಲವೂ ಕೂಡಿತ್ತು.

ವಯಸ್ಸಾದ  ಕಾಲದಲ್ಲಿ ತಂದೆಗೆ ರಾಜ್ಯದ ಚಿಂತೆ ಕೊಡದೆ, ತಂದೆಯು  ನೆಮ್ಮದಿಯಿಂದ ತನ್ನ ಇಷ್ಟದಂತೆ ಧಾರ್ಮಿಕ ಜೀವನ ನಡೆಸಲು ತೊಂದರೆ ಇಲ್ಲದಂತೆ ಕೃಷ್ಣ ನೋಡಿಕೊಳ್ಳುತ್ತಿದ್ದನು.

ಮಹಾರಾಜ ಕೃಷ್ಣ

ತಂದೆಗೆ ವಿಧೇಯನಾದ ಮಗನಾಗಿದ್ದಂತೆಯೇ  ಮುಮ್ಮಡಿ ಕೃಷ್ಣನು ರಾಜ್ಯಕ್ಕೆ ತಕ್ಕ ದೊರೆಯೂ ಆಗಿದ್ದನು. ಕ್ರಿಸ್ತಶಕ ೯೩೬ ರಲ್ಲಿ ಅಮೋಘವರ್ಷ ಕಾಲವಾದನು. ತನ್ನ ಬಳಿಕ ರಾಜ ಪದವಿಯನ್ನು ಸ್ವೀಕರಿಸುವ ಗುರುತಾಗಿ ಕೃಷ್ಣನಿಗೆ ಬಹಳ ವಿಜೃಂಭಣೆಯಿಂದ ಕೀರೀಟಧಾರಣೋತ್ಸ ವನ್ನು ನೆರವೇರಿಸಬೇಕೆಂದು ಅಮೋಘವರ್ಷ ಇಷ್ಟ ಪಟ್ಟಿದ್ದನು. ತಂದೆಯ ಇಷ್ಟದ ಪ್ರಕಾರವಾಗಿಯೂ ಮುಮ್ಮಡಿ ಕೃಷ್ಣನ  ಕಿರೀಟಧಾರಣೆಯು ಸಂಭ್ರಮದಿಂದ ನಡೆಯಿತು. ಕೃಷ್ಣನ ಅಪೇಕ್ಷೆಯಂತೆ ಅಂದು ಅನೇಕ ದೇವಾಲಯಗಳಲ್ಲಿ ವಿಶೇಷ ಉತ್ಸವಗಳು ನಡೆದುವು. ಕಿರೀಟಧಾರಣೆಯ ಗುರುತಾಗಿ ‘ಪೃಥ್ವಿ ವಲ್ಲಭ’ ಎಂಬ ಬಿರುದನ್ನು ಧರಿಸಿದನು.

ಮುಮ್ಮಡಿ ಕೃಷ್ಣನಿಗೆ ಆಗಿನ ರಾಜ್ಯಗಳ ಸ್ಥಿತಿ ಚೆನ್ನಾಗಿ ಗೊತ್ತಿತ್ತು. ತನ್ನ ರಾಜ್ಯ ಸುಭದ್ರವಾಗಿರಬೇಕಾದರೆ ತನ್ನ ನೆರೆಹೊರೆಯ ರಾಜ್ಯಗಳ ಸ್ನೇಹ ಸಂಬಂಧ ಬಹಳ ಮುಖ್ಯ. ಬುದ್ಧಿವಂತಿಕೆಯ ರಾಜನೀತಿಯಿಂದ ಇತರ ರಾಜ್ಯಗಳೊಡನೆ ಸಂಪರ್ಕವಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ತನ್ನ ರಾಜ್ಯದ ರಕ್ಷಣೆಗೆ ಅವರಿಂದ ಧಕ್ಕೆ ಯುಂಟಾಗ ಬಹುದು ಎಂದು ಅರ್ಥಮಾಡಿಕೊಂಡಿದ್ದ, ರಾಜ್ಯದ ರಕ್ಷಣೆ ಕೃಷ್ಣನ ಮೊದಲನೆಯ ಗಮನವಾಗಿತ್ತು.

ಶತ್ರುಗಳನ್ನು ಪಕ್ಕದಲ್ಲಿಯೇ ಇಟ್ಟುಕೊಳ್ಳುವುದು ಕ್ಷೇಮವಲ್ಲವೆಂದು ತಿಳಿದಿದ್ದ ಕೃಷ್ಣರಾಜನು ತನ್ನ ಚುರುಕು ಬುದ್ಧಿಯಿಂದ ರಾಜ್ಯಕ್ಕೆ ಹಿತವಾದ ರಾಜನೀತಿಯನ್ನು ಅನುಸರಿಸಿದನು. ಕರ್ನಾಟಕ ರಾಜ್ಯದ ಸುತ್ತಲೂ ಇದ್ದ ರಾಜರು ಇವನನ್ನು ಕಂಡರೆ ಭಯ, ಭಕ್ತಿಯನ್ನಿಟ್ಟಿರುವಂತೆ ಮಾಡಿದ್ದನು. ತನ್ನ ರಾಜ್ಯಕ್ಕೆ ಆಗಾಗ ತೊಂದರೆ ಕೊಡುತ್ತಿದ್ದ ರಾಜರಿಗೆ ತನ್ನಪರಾಕ್ರಮವನ್ನು ತೋರಿಸಿ ಬುದ್ಧಿಕಲಿಸಿದ್ದನು.

ವಿಜಯ ಮಾಲೆ

ಆಗ ದಕ್ಷಿಣ ದೇಶದಲ್ಲಿದ್ದ ಬಲಿಷ್ಠ ದೊರೆಗಳೆಂದರೆ ಚೋಳರು ಮತ್ತು ಪಲ್ಲವರು. ತಂಜಾವೂರಿನಲ್ಲಿ ಚೋಳರು ಪ್ರಬಲರಾಗಿದ್ದರು. ಕಂಚಿಯಲ್ಲಿ ಪಲ್ಲವರು ರಾಜ್ಯ ವಿಸ್ತರಿಸಲು ಹವಣಿಸುತ್ತಿದ್ದರು.

ಸಾಮಥ್ಯದಲ್ಲೂ, ಆಡಳಿತದಲ್ಲೂ, ಕಲಾ ನಿಪುಣತೆಯಲ್ಲೂ ಕರ್ನಾಟಕ ರಾಜ್ಯಕ್ಕೂ ಚೋಳ, ಪಲ್ಲವರ ರಾಜ್ಯಗಳಿಗೂ ಸ್ಪರ್ಧೆ ನಡೆಯುತ್ತಲೇ ಇತ್ತು. ಕೆಲವು ವೇಳೆ ಒಬ್ಬರನ್ನೊಬ್ಬರು ಮೆಚ್ಚಿ ಸ್ನೇಹಭಾವದಿಂದ ಇದ್ದುದೂ ಉಂಟು.

ಮುಮ್ಮಡಿ ಕೃಷ್ಣನು ಕನ್ನಡ ನಾಡಿನ ಹಿರಿಮೆಯನ್ನು ಉಳಿಸಲು ಅತ್ಯಂತ ಸಾಹಸದಿಂದ ಚೋಳ, ಪಲ್ಲವರೊಡನೆ ಹೋರಾಡಿ ವಿಜಯಿಯಾದನು.

ಕರ್ನಾಟಕ ಇತಿಹಾಸದಲ್ಲೇ ಇದೊಂದು ಅಪೂರ್ವವಿಜಯ. ಕೃಷ ರಾಜನನ್ನು ಅವನ ದಿಗ್ವಿಜಯಕ್ಕಾಗಿ ಹೊಗಳಿ ಕನ್ನಡಿಗರು ಅವನಿಗೆ ‘ಕಂಚಿಯಂ ತಂಜೆಯಂ ಕೊಂಡ’ ಎಂಬ ಬಿರುದನ್ನು ಕೊಟ್ಟರು.

ಮುಮ್ಮಡಿ ಕೃಷ್ಣನಿಗೆ ವಿಶಾಲವಾದ ಕರ್ನಾಟಕ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ಆಕಾಂಕ್ಷೆ.  ಸುತ್ತಲೂ ಇದ್ದ ರಾಜರುಗಳೆಲ್ಲಾ ತನಗೆ ಮಣಿಯುವಂತೆ ಮಾಡಲು ಹಠತೊಟ್ಟನು. ಇದೇ ಕಾರಣಕ್ಕಾಗಿಯೇ ಚೋಳ ದೇಶದವರೊಡನೆ ಪ್ರಸಿದ್ಧ ‘ತಕ್ಕೋಲಂ’ ಎಂಬ ಕದನದಲ್ಲಿ  ಭಾಗವಹಿಸಿದರು. ಈ ಯುದ್ಧದಲ್ಲಿ ಗಳಿಸಿದ ಜಯ ಕರ್ನಾಟಕಕ್ಕೆ ಕೀರ್ತಿ ತರುವಂತಹುದು.

ಸಿಂಹಳದವರೆಗೆ

ಇದರಿಂದ ಮುಮ್ಮಡಿ ಕೃಷ್ಣನ ಸಾಹಸ ಎಲ್ಲಾ ಕಡೆಯೂ ಹರಡಿ ಅನೇಕ ರಾಜರು ಇವನೊಡನೆ ಸ್ನೇಹ ಬೆಳೆಸಲು ಬಯಸಿದರು.

ಹೋದ ಕಡೆಯಲ್ಲೆಲ್ಲಾ ವಿಜೇತನಾಗುತ್ತಾ ಕೃಷ್ಣನು ರಾಮೇಶ್ವರದರೆಗೂ ದಿಗ್ವಿಜಯ ಯಾತ್ರೆ ಮಾಡಿದನು. ತನ್ನ ಈ ವಿಜಯದ ಗುರುತಿಗಾಗಿ ರಾಮೇಶ್ವರದಲ್ಲಿ ಕೃಷ್ಣೇಶ್ವರ ದೇವಾಲಯವನ್ನು ಕಟ್ಟಿಸಿದನು.

ಮುಮ್ಮಡಿ ಕೃಷ್ಣನ ಪರಾಕ್ರಮದ ಸುದ್ದಿ ಸಿಂಹಳ (ಈಗಿನ ಶ್ರೀಲಂಕಾ)ದವರೆಗೂ ಹರಡಿತು. ಸಿಂಹಳದ ರಾಜ ಭಯಗೊಂಡು ಕರ್ನಾಟಕ ಬಲದೊಂದಿಗೆ ಯುದ್ಧಮಾಡಿ ಸೋಲುವ ಬದಲು ಕೃಷ್ಣರಾಜನಿಗೆ ಶರಣಾಗುವುದೇ ಮೇಲು ಎಂದು ನಿಶ್ಚಯಿಸಿದನು. ಮುಮ್ಮಡಿ ಕೃಷ್ಣನಿಗೆ ಒಂದು ಪತ್ರವನ್ನು ಬರೆದು ಅವನ ಆಸ್ಥಾನಕ್ಕೆ ತನ್ನ ಪ್ರಧಾನಮಂತ್ರಿಯನ್ನೇ ಕಳುಹಿಸಿದನು. ಅವನೊಂದಿಗೆ ರತ್ನದ ಹಾರ, ವಜ್ರ ವೈಡೂರ‍್ಯಗಳನ್ನು, ಕಪ್ಪಕಾಣಿಕೆಗಳನ್ನು ಕಳುಹಿಸಿದನು.

ಈ ವೇಳೆಗೆ ದಕ್ಷಿಣ ಪರ‍್ಯಾಯ ದ್ವೀಪ ಪೂರಾ ಮುಮ್ಮಡಿ ಕೃಷ್ಣನ ವಶವಾಗಿತ್ತು. ಉತ್ತರದಲ್ಲಿ ನರ್ಮದಾ ನದಿಯನ್ನು ದಾಟಿ ಮಾಳವ ರಾಜ್ಯಕ್ಕೆ ದಿಗ್ವಿಜಯಕ್ಕಾಗಿ ಹೊರಟನು. ಅಲ್ಲಿ ಶೌರ‍್ಯ, ಸಾಹಸಕ್ಕೆ ಪ್ರಸಿದ್ಧರಾದ ರಜಪೂತ ರಾಜರಿದ್ದರು. ಇವರು ಸಾಹಸಪ್ರಿಯರು, ಸ್ವತಂತ್ರ್ಯ ಪ್ರಿಯರು, ಇಂತಹ ಸಾಹಸಿಗಳನ್ನೂ ಗೆದ್ದು ತನಗೆ ತಲೆಬಾಗುವಂತೆ ಮಾಡಿದನು ಮುಮ್ಮಡಿ ಕೃಷ್ಣ.

ಹೀಗೆ ಕೃಷ್ಣನು ತಾನು ಕನಸು ಕಾಣುತ್ತಿದ್ದ ವಿಶಾಲಕರ್ನಾಟಕ ಸಾಮ್ರಾಜ್ಯವನ್ನು ಕಟ್ಟಿದ. ದಕ್ಷಿಣದಲ್ಲಿ ರಾಮೇಶ್ವರದಿಂದ ಹಿಡಿದು ಉತ್ತರದ ಮಾಳದವರೆಗೂ ಕನ್ನಡ ನಾಡು ಆವರಿಸಿತ್ತು. ಮುಮ್ಮಡಿ ಕೃಷ್ಣನ ಕಾಲದಲ್ಲಿ ಕರ್ನಾಟಕದ ಸರಿಸಮಾನವಾಗಿ ಭಾರತದಲ್ಲಿ ಬೇರೆ ರಾಜ್ಯವೂ ಇರಲಿಲ್ಲ. ಅತಿ ವಿಸ್ತಾರವಾದ ಸಾಮ್ರಾಜ್ಯವೆಂದರೆ  ಮುಮ್ಮಡಿ ಕೃಷ್ಣನ ಕನ್ನಡನಾಡು.

ತನ್ನ ಆಪ್ತಬಂಧುಗಳನ್ನು ನೆರೆಯ ಸಿಂಹಾಸನಕ್ಕೆ ತರಲು ಕೃಷ್ಣನು ಸಹಾಯಕನಾದನು. ಹಾಗೆ ಮುಮ್ಮಡಿ ಕೃಷ್ಣನ ಸಹಾಯದಿಂದ ಸಿಂಹಾಸನ ಪಡೆದವರಲ್ಲಿ ಬೂತುಗ ಎಂಬುವವನು ಒಬ್ಬ. ಬೂತುಗನು  ಕೃಷ್ಣನ ಭಾವ, ತನ್ನ ಸೋದರಿಯನ್ನು ಮದುವೆಯಾಗಿದ್ದ ಬೂತುಗನನ್ನು ಕೃಷ್ಣನು ಗಂಗ ರಾಜ್ಯದ ರಾಜನನ್ನಾಗಿ ಮಾಡಿದನು. ಇದರಿಂದ ತನಗೆ ಬೇಕಾದ ಆಪ್ತನೂ, ಬಂಧುವೂ ನೆರೆಯ ರಾಜ್ಯದಲ್ಲಿದ್ದು ಕನ್ನಡನಾಡಿನ ರಕ್ಷಣೆ ಸುಗಮವಾಯಿತು. ಬೂತುಗನು ಕೃಷ್ಣನಿಗೆ ಸಹಾಯಕನಾಗಿ ನಿಂತು ಅನೇಕ ದಿಗ್ವಿಜಯಗಳಿಗೆ ನೆರವಾದನು.

ವಿಶಾಲವಾದ ರಾಜ್ಯ ಕಟ್ಟುವುದು ಹೆಮ್ಮೆಯ ವಿಷಯವಲ್ಲ. ಅಷ್ಟು ದೊಡ್ಡ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವುದು ಮುಖ್ಯ. ಪ್ರಜೆಗಳು ಸುಖದಿಂದ ನೆಮ್ಮದಿ ಯಿಂದ ಇರುವುದೇ ಶ್ರೇಷ್ಠ ಆಡಳಿತಗಾರನ ಲಕ್ಷಣ. ಮುಮ್ಮಡಿ ಕೃಷ್ಣನಿಗೆ ರಾಜ್ಯ ವಿಸ್ತೀರ್ಣದಲ್ಲಿ  ಎಷ್ಟು ಆಸಕ್ತಿ ಇತ್ತೋ ಅದಕ್ಕಿಂತಲೂ ಹೆಚ್ಚಾಗಿ ತನ್ನ ಪ್ರಜೆಗಳ ಯೋಗಕ್ಷೇಮದಲ್ಲಿ ಗಮನವಿತ್ತು. ಯಾವ ಕಾರಣ ದಿಂದಲೂ ಜನರು ಕಷ್ಟದಲ್ಲಿದ್ದಾರೆ ಎಂಬ ಸುದ್ದಿಯ ಸುಳಿವೇ ಇಲ್ಲದಂತೆ ತನ್ನ ರಾಜ್ಯವನ್ನು ನೋಡಿಕೊಳ್ಳಲು ಬಯಸಿದ್ದ ಮುಮ್ಮಡಿ ಕೃಷ್ಣ.

ಎಲ್ಲ ಧರ್ಮಗಳಿಗೆ ಗೌರವ

ಮೂರನೆಯ ಕೃಷ್ಣನು ತನ್ನ ದಿಗ್ವಿಜಯದ ಜ್ಞಾಪಕಾರ್ಥವಾಗಿ ರಾಮೇಶ್ವರದಲ್ಲಿ ಕೃಷ್ಣೇಶ್ವರ ಮತ್ತು ರಾಜ ಮಾರ್ತಾಂಡ ದೇವಾಲಯಗಳನ್ನು ಕಟ್ಟಿಸಿದನು.

ಕಂಚಿಯಲ್ಲಿ ಕಾಲಪ್ರಿಯ ಎಂಬ ಹೆಸರಿನಲ್ಲಿ ಒಂದು ಶಿವದೇವಸ್ಥಾನವನ್ನು ನಿರ್ಮಿಸಿದನು. ರಾಮೇಶ್ವರದ ಗುಹಾಲಯದ ಬಾಗಿಲಲ್ಲಿ ಆಮೆಯ ಮೇಲೆ ನಿಂತಿರುವ ಗಂಗೆಯ ದೊಡ್ಡ ವಿಗ್ರಹವಿದೆ. ಇದು ಅತ್ಯಂತ ಸುಂದರವಾದ ಘನತೆಯಿಂದ ಕೂಡಿದ ಕಲಾಕೃತಿ. ಇವೆಲ್ಲವೂ ಈಗಲೂ ರಾಷ್ಟ್ರಕೂಟರ ಕಲೆಯ ವೈಭವದ ನೆನಪನ್ನು ಹಸಿರಾಗಿಸಿವೆ.

ಈ ದೇವಾಲಯಗಳಿಂದ ನಮಗೆ ತಿಳಿದು ಬರುವ ಇನ್ನೊಂದು ಮುಖ್ಯ ವಿಷಯವೇನೆಂದರೆ ಶೈವರಿಗೂ, ವೈಷ್ಣವರಿಗೂ ಎಷ್ಟು ಹೊಂದಾಣಿಕೆ ಇತ್ತು ಎಂಬುದು. ಒಂದು ಮತದವರು ಮತ್ತೊಂದು ಮತವನ್ನು ದ್ವೇಷಿಸುತ್ತಿರಲಿಲ್ಲ. ಶಿವನ ಉಪಾಸಕನಾಗಿದ್ದ ರಾಜನು ವಿಷ್ಣುವನ್ನೂ ಆರಾಧಿಸುತ್ತಿದ್ದನು. ಶಿವನ ದೇವಾಲಯವನ್ನು ಕಟ್ಟಿಸಿದಂತೆಯೇ ರಾಜರು ವಿಷ್ಣು ದೇವಾಲಯಗಳನ್ನೂ ಕಟ್ಟಿಸಿದ್ದರು. ರಾಷ್ಟ್ರಕೂಟರ ಕೆಲವು ಮುದ್ರೆಗಳಲ್ಲಿ ವಿಷ್ಣುವಿನ ವಾಹನವಾದ ಗರುಡನ ಚಿತ್ರವಿದೆ.

ಆಗಿನ ಕಾಲದ ರಾಜರು ತಾವು ಸಾಧಿಸಿದ ಕೆಲಸಗಳನ್ನು ತಾಮ್ರಪಟದ ಮೇಲೆ ಬರೆಯಿಸುತ್ತಿದ್ದರು. ಇದರಿಂದ ಅಕ್ಷರಗಳು ಅಳಿಸಿಹೋಗದೆ ಇಂದಿಗೂ ಶಾಶ್ವತವಾಗಿ ಉಳಿದಿವೆ. ಈ ತಾಮ್ರಪಟಗಳು ಅಂದಿನ ಸ್ಥಿತಿಯನ್ನು ನಾವು ತಿಳಿದುಕೊಳ್ಳಲು ಸಹಾಯ ಮಾಡಿವೆ. ಮೂರನೆಯ ಕೃಷ್ಣನ ಕಾಲದ ಒಂದು ತಾಮ್ರಪಟದಲ್ಲಿ ಬರೆದಿರುವ ಶ್ಲೋಕ ಪದ್ಯದಲ್ಲಿ ಶಿವ ಮತ್ತು ವಿಷ್ಣು ಈ ದೇವರುಗಳನ್ನು ಸ್ತೋತ್ರಮಾಡಿ ಬರೆದಿದೆ.

ಶೈವ ಮತ್ತು ವೈಷ್ಣವ ಧರ್ಮಗಳು ಮಾತ್ರವಲ್ಲ, ಜೈನ ಮತ್ತು ಬೌದ್ಧಧರ್ಮಗಳೂ ರಾಷ್ಟ್ರಕೂಟರ ಕಾಲದಲ್ಲಿ ಪ್ರಚಾರದಲ್ಲಿದ್ದವು.

ಅರಸರು ಶಿವಭಕ್ತರಾಗಿದ್ದರೂ ಅವರಲ್ಲಿ ಅನೇಕರು ಜೈನಮತವನ್ನೇ ಅವಲಂಬಿಸಿದ್ದರು. ರಾಷ್ಟ್ರಕೂಟರ ಇಂದ್ರನೆಂಬ ರಾಜನು ನಿಷ್ಠಾವಂತ ಜೈನನಾಗಿದ್ದನು. ತಾನು ಕಳೆದುಕೊಂಡ ರಾಜ್ಯವನ್ನು ಪುನಃ ಪಡೆಯಲು ವಿಫಲನಾದಾಗ ತನ್ನ ಕಡೆಯ ದಿನಗಳನ್ನು ಜೈನರ ಯಾತ್ರಾಸ್ಥಳವಾದ ಶ್ರವಣಬೆಳಗೊಳದಲ್ಲಿ ಕಳೆದು, ಸಲ್ಲೇಖನ ವ್ರತವನ್ನು ಅನುಸರಿಸಿ ಉಪವಾಸಮಾಡಿ ಪ್ರಾಣನೀಗಿದನಂತೆ.

ಜೈನ ಮತಕ್ಕೆ ಅತ್ಯಂತ ಪ್ರೋತ್ಸಾಹ  ಸಿಕ್ಕಿದ್ದು ರಾಷ್ಟ್ರಕೂಟರ ಕಾಲದಲ್ಲೇ. ಆದ್ದರಿಂದ ಜೈನರ ಇತಿಹಾಸದಲ್ಲಿ  ರಾಷ್ಟ್ರಕೂಟರ ಕಾಲವನ್ನು ‘ಜೈನಧರ್ಮದ ಸುವರ್ಣಯುಗ’ ಎಂದು ಕರೆದಿದ್ದಾರೆ. ಇವರ ಕಾಲದಲ್ಲಿ ಶ್ರವಣಬೆಳಗೊಳ ಪುಣ್ಯಕ್ಷೇತ್ರ ಎಂದು ಪ್ರಸಿದ್ದಿ ಪಡೆಯಿತು. ಪ್ರಪಂಚದಲ್ಲೇ ಅದ್ಭುತ ಕಲೆಯೆನಿಸಿಕೊಂಡಿರುವ ಗೊಮ್ಮಟೇಶ್ವರನ ವಿಗ್ರಹವು ಶ್ರವಣಬೆಳಗೊಳದಲ್ಲಿ ಸ್ಥಾಪಿಸ  ಲ್ಪಟ್ಟಿದ್ದು ರಾಷ್ಟ್ರಕೂಟ ಅರಸರ ಪ್ರೋತ್ಸಾಹದಿಂದಲೇ.

ಒಂದು ಸಲ ಮುಮ್ಮಡಿ ಕೃಷ್ಣನ ಕಾಲದಲ್ಲಿ ಮಹಾವೀರಜಯಂತಿ ಅತಿ ಅದ್ದೂರಿಯಿಂದ ನಡೆಯಿತು. ಹೆಚ್ಚುಪಾಲು ದಾನ ಧರ್ಮ ಮಾಡುವುದರ ಮೂಲಕ ಜನರು ಸಂಭ್ರಮವನ್ನು ತೋರಿಸಿಕೊಂಡರು. ಈ ಸಂದರ್ಭದಲ್ಲಿ ಮುಮ್ಮಡಿ ಕೃಷ್ಣನು ಜೈನಮತೀಯರ ಸಂಪ್ರದಾಯಂತೆ ಶ್ವೇತ ವಸ್ತ್ರವನ್ನು ಧರಿಸಿ ಮಹಾವೀರನ ಉತ್ಸವದಲ್ಲಿ ಭಾಗವಹಿಸಿದ್ದನು. ಶಿವದೇವಾಲಯದಲ್ಲಿ ಅಭಿಷೇಕ ನಡೆಯುತ್ತಿದ್ದಾಗ ವಿಭೂತಿ, ರುದ್ರಾಕ್ಷಿಮಾಲೆ ಧರಿಸಿ ಭಾಗವಹಿಸುತ್ತಿದ್ದ. ಹಾಗೆಯೇ ಮಸೀದಿಗಳಲ್ಲಿ ನಡೆಯುತ್ತಿದ್ದ ನಮಾಜುಗಳನ್ನು ಗೌರವದಿಂದ ಕಾಣುತ್ತಿದ್ದ.

ಮುಸ್ಲಿಮರಿಗೆ ಧಾರ್ಮಿಕ ಸ್ವಾತಂತ್ರ್ಯ

ದೇವಾಲಯಗಳಲ್ಲಿ ಪೂಜಾದಿಕ್ರಮಗಳು ಸರಿ ಯಾಗಿ ನಡೆಯುವಂತೆ ರಾಜರೇ ಆಸಕ್ತಿ ವಹಿಸಿ ವಿಚಾರಿಸುತ್ತಿದ್ದರು.ದೇವಾಲಯಗಳು ಐಶ್ವರ್ಯದಿಂದ ತುಂಬಿದ್ದವು. ಎಲ್ಲೋರದ ಕೈಲಾಸ ದೇವಾಲಯಕ್ಕೆ ರತ್ನ ಖಚಿತವಾದ ಸುವರ್ಣಾಭರಣಗಳನ್ನು ಕೃಷ್ಣನು ಅರ್ಪಿಸಿ ದ್ದನು. ಹಿಂದೂ ದೇವಾಲಯಗಳಂತೆಯೇ ಜೈನ ಮಂದಿರ ಗಳಲ್ಲಿಯೂ ವೈಭವದಿಂದ ಪೂಜೆ, ಉತ್ಸವಾದಿಗಳು ನಡೆಯುತ್ತಿದ್ದವು. ಜೈನ ಮಠಗಳಲ್ಲಿ ಬಡವರಿಗೆ ಆಹಾರ ಔಷಧಿಗಳನ್ನು ಹಂಚುತ್ತಿದ್ದರು.

ಮುಮ್ಮಡಿ ಕೃಷ್ಣರಾಜನೂ, ಇತರ ರಾಷ್ಟ್ರಕೂಟ ದೊರೆಗಳೂ ಭಾರತ ದೇಶದ ಮತಗಳೇ ಅಲ್ಲದೆ ಬೇರೆ ದೇಶದಿಂದ ಬಂದ ಮತಗಳ ವಿಷಯದಲ್ಲೂ ಸಹಿಷ್ಣುತೆಯ ಮನೋಭಾವವನ್ನು ತೋರಿಸುತ್ತಿದ್ದರು.

ನಮ್ಮ ಪಶ್ಚಿಮದ ರೇವು ಪಟ್ಟಣಗಳಲ್ಲಿ ವ್ಯಾಪಾರಕ್ಕಾಗಿ ಅನೇಕ ಮುಸ್ಲಿಮರು ಬಂದು ನೆಲೆಸಿದ್ದರು. ರಾಷ್ಟ್ರಕೂಟರ ರಾಜ್ಯದಲ್ಲಿ ಹಿಂದೂ ಮುಸ್ಲಿಮರಿಗೆ ಮತಕ್ಕಾಗಿ ಹೊಡೆದಾಟವಿರಲಿಲ್ಲ. ಅದಕ್ಕೆ ಬದಲಾಗಿ ಇಬ್ಬರ ನಡುವೆ ಸ್ನೇಹ ಸಂಪರ್ಕವಿತ್ತು. ಮುಸ್ಲಿಮರು ತಮ್ಮ ಮತದ ಪದ್ಧತಿ ಗಳನ್ನು ಅನುಸರಿಸಲು ಯಾವ ಅಡ್ಡಿತಡೆಗಳು ಇರಲಿಲ್ಲ. ಅವರು ಮಸೀದಿಗಳನ್ನು ಕಟ್ಟಿಕೊಳ್ಳಲು ರಾಷ್ಟ್ರಕೂಟ ಅರಸರು ಅನುಮತಿ ಕೊಟ್ಟಿದ್ದರು. ದಕ್ಷಿಣದ ಮುಸಲ್ಮಾನರು ಭಾರತೀಯರೊಡನೆ ಕಲೆತು ಇಲ್ಲಿಯ ಭಾಷೆ ಗಳನ್ನು ಕಲಿತು ಕೊಂಡರು. ಭಾರತೀಯರಂತೆಯೇ ವೇಷಭೂಷಣಗಳನ್ನು ಹಾಕಿಕೊಳ್ಳುತ್ತಿದ್ದರು. ಭೇದ ಭಾವವಿಲ್ಲದೆ ಹಿಂದೂ ಮುಸಲ್ಮಾನರು ಒಗ್ಗಟ್ಟಾಗಿದ್ದರು.

ಜಯ ಖಂಡಿತ

ಮೂರನೆಯ ಕೃಷ್ಣರಾಜ ಕಾಲದಲ್ಲಿ ರಾಷ್ಟ್ರಕೂಟರ ರಾಜ್ಯ ಅತ್ಯಂತ ಉನ್ನತ ಸ್ಥಿತಿಯಲ್ಲಿತ್ತು. ಇಂತಹ ಸಾಮ್ರಾಜ್ಯವನ್ನು ನೋಡಲು ಅನೇಕ ಪ್ರವಾಸಿಗರು ಬರುತ್ತಿದ್ದರು. ಈ ಪ್ರವಾಸಿಗರನ್ನು ಬರಮಾಡಿಕೊಂಡು ಅವರಿಗೆ ಎಲ್ಲ ಸೌಲಭ್ಯಗಳನ್ನು ನೀಡಲು ಮುಮ್ಮಡಿ ಕೃಷ್ಣನು ಏರ್ಪಾಡು ಮಾಡಿಸಿದ್ದನು.

ಇಂತಹ ವಿದೇಶಿ ಪ್ರವಾಸಿಗರಲ್ಲಿ ಅರಬ್ಬೀ ದೇಶದಿಂದ ಬಂದಿದ್ದ ಮುಸಲ್ಮಾನರೂ ಇದ್ದರು. ಕೃಷ್ಣರಾಜನ ಔದಾರ‍್ಯವನ್ನೂ, ವಿಶಾಲ ಮನೋಭಾವನೆ ಯನ್ನೂ, ಉತ್ತಮ ಆಡಳಿತವನ್ನೂ ನೋಡಿ ಇವರೆಲ್ಲ ಮೆಚ್ಚಿಕೊಳ್ಳುತ್ತಿದ್ದರು.

ಆಗ ಬೇರೆ ದೇಶಗಳಲ್ಲೆಲ್ಲ ರಾಜರು ನಿರಂಕುಶ ರಾಗಿ ಆಳುತ್ತಿದ್ದರು. ನಮ್ಮದು  ದೈವದತ್ತ ಅಧಿಕಾರ, ನಮ್ಮ ಅಧಿಕಾರವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ದರ್ಪವನ್ನು ತೋರಿಸುತ್ತಿದ್ದರು. ಇಂತಹ   ರಾಜರು ಪ್ರಜೆಗಳ ಸುಖಕ್ಕೆ ಸ್ವಲ್ಪವೂ ಗಮನ ಕೊಡುತ್ತಿರಲಿಲ್ಲ; ಸ್ವಾರ್ಥಿಗಳಾಗಿದ್ದರು.

ಈ ಸ್ಥಿತಿಯಲ್ಲಿದ್ದ ಬೇರೆ ದೇಶಗಳನ್ನು ಸಂದರ್ಶಿಸಿ ಬಂದಿದ್ದ ಪ್ರವಾಸಿಗರು ರಾಷ್ಟ್ರಕೂಟ ಮೂರನೆಯ ಕೃಷ್ಣನ ಆಡಳಿತವನ್ನು ನೋಡಿ ಮುಕ್ತಕಂಠದಿಂದ ಹೊಗಳಿದರು. ಅಷ್ಟಕ್ಕೆ ತೃಪ್ತರಾಗದೆ ತಮ್ಮ ಅಭಿಪ್ರಾಯವನ್ನು ಬರೆದಿಟ್ಟು ಹೋದರು.

ಇವರಲ್ಲಿ ಒಬ್ಬ ಅರಬ್ಬೀ ಪ್ರವಾಸಿಗನು ಇಂಡಿಯದ ಅರಸರಲ್ಲೆಲ್ಲಾ ಮುಮ್ಮಡಿ ಕೃಷ್ಣನು ಬಲಾಢ್ಯ ದೊರೆ ಎಂದು ಹೊಗಳಿದನು.

‘ಈ ದೊರೆಯು ಮುಸ್ಲಿಮರಿಗೂ ಧಾರಾಳವಾಗಿ ಪಾರಿತೋಷಕಗಳನ್ನು ಕೊಟ್ಟಿದ್ದಾನೆ. ಮುಸಲ್ಮಾನರ ಬಗ್ಗೆ ಕರ್ನಾಟಕ ಸಾಮ್ರಾಜ್ಯದಲ್ಲಿ ಗೌರವವಿದೆ. ಮುಸ್ಲಿಮರು ನಿಶ್ಚಿಂತೆಯಿಂದ ಬಾಳುತ್ತಿದ್ದಾರೆ. ಯಾವ ಮತಾಚರಣೆಗೂ ಈ ವಿಶಾಲ ಸಾಮ್ರಾಜ್ಯದಲ್ಲಿ ಅಡ್ಡಿ ಇಲ್ಲ ಎಂದು ಕೃಷ್ಣರಾಜನನ್ನು ಪ್ರಶಂಸೆ ಮಾಡಿ ಬರೆದಿಟ್ಟನು.’

ಕೈ ಬೆರಳಿನ ಉಂಗುರಕ್ಕೆ ಮಹಾರಾಜರುಗಳು ವಜ್ರ, ಪಚ್ಚೆ, ರತ್ನ, ಕೆಂಪು ಮತ್ತು ಮುಂತಾದುವುಗಳನ್ನು ಉಪಯೋಗಿಸುವುದು ಸಾಮಾನ್ಯ ವಿಷಯ. ಆದರೆ ಮುಮ್ಮಡಿ ಕೃಷ್ಣನ ಕೈಬೆರಳಿನ ಉಂಗುರದಲ್ಲಿ ಅಮೂಲ್ಯ ರತ್ನಗಳಿಗೆ ಬದಲು ಅಕ್ಷರಗಳು ಕೊರೆಯಲ್ಪಟ್ಟಿದ್ದವು. ಅದೇನೆಂದು ಒಬ್ಬ  ಪ್ರವಾಸಿ ವಿಚಾರಿಸಿದನು.

‘ಒಮ್ಮನಿಸ್ಸಿನಿಂದ ಆರಂಭ ಮಾಡಿದ ಕೆಲಸಕ್ಕೆ ಜಯ ಖಂಡಿತ’ ಎಂದು ಉಂಗುರದಲ್ಲಿ ಕೆತ್ತಿದೆ ಎಂಬುದಾಗಿ ಕೃಷ್ಣ ತಿಳಿಸಿದನು.

ಒಬ್ಬ ಗಣ್ಯ ರಾಜನಿಗಿರಬೇಕಾದ ಗುಣ ಇದು. ಒಳ್ಳೆಯತನದೊಂದಿಗೆ ಒಮ್ಮನಸ್ಸೂ ಸೇರಿದರೆ ರಾಜ್ಯದ ಉನ್ನತಿಗಾಗಿ ಎಂತಹ ಕೆಲಸವನ್ನೂ ಸಾಧಿಸಬಹುದು. ಅದಕ್ಕಾಗಿಯೇ ಮುಮ್ಮಡಿ ಕೃಷ್ಣನ ಕಾಲದಲ್ಲಿ ಕರ್ನಾಟಕವು ದೇಶವಿದೇಶಿಯರು ಹೊಗಳುವಂತಹ ರಾಜ್ಯವಾಗಿತ್ತು.

ಇದಕ್ಕೆ ಸಾಕ್ಷಿ ಆಲ್ ಇಂದ್ರೀಸೀ ಎಂಬವನು ಬರೆದಿರುವ ‘ಪ್ರವಾಸ ಸಾಹಿತ್ಯ’ ಆಲ್ ಇಂದ್ರೀಸೀ ಮೊರಾಕ್ಕೋ ದೇಶದವನು. ಅವನು ಬುದ್ಧಿವಂತರನ್ನು ಪರದೇಶಗಳಿಗೆ ಕಳುಹಿಸಿ ಅವರ ವರದಿಗಳ ಆಧಾರದ ಮೇಲೆ ಪ್ರವಾಸ ಸಾಹಿತ್ಯ ಎಂಬ ಪುಸ್ತಕವನ್ನು ಬರೆದನು. ಅವನು ತನ್ನ ಕಾಲದ ರಾಜರನ್ನು ಸ್ಥಿತಿಗತಿಗಳನ್ನು ಕುರಿತು ಮಾತ್ರವೇ ಬರೆಯಲಿಲ್ಲ. ಹಿಂದಿನ ಕಾಲವನ್ನು ಕುರಿತು ವಿಷಯಗಳನ್ನು ಸಂಗ್ರಹಿಸಿದನು. ‘ರಾಷ್ಟ್ರಕೂಟ ದೊರೆ ರಾಜಾಧಿರಾಜ, ಪ್ರಪಂಚದ ಮಹಾರಾಜರುಗಳಲ್ಲಿ ಒಬ್ಬ’ ಎಂದು ಆಲ್ ಇಂದ್ರೀಸಿ ಮುಮ್ಮಡಿ ಕೃಷ್ಣನನ್ನು ವರ್ಣಿಸಿದ್ದಾನೆ.

‘ರಾಜ್ಯ ಬಹಳ ದೊಡ್ಡದು. ಜನಭರಿತವಾಗಿದೆ. ಐಶ್ವರ‍್ಯ ತುಂಬಿದೆ. ನೆಲ ಫಲವತ್ತಾಗಿದೆ. ವರ್ತಕರಿಗೆ ರಕ್ಷಣೆ ಇದೆ. ರಾಜಧಾನಿ ಬಹಳ ಸುಂದರ’ ಎಂದು ಬರೆದಿದ್ದಾನೆ.

ವಿದ್ಯಾಭ್ಯಾಸ

ಆ ಕಾಲದ ವಿದ್ಯಾಶಾಲೆಗಳು ಪ್ರಶಂಸಾರ್ಹ ವಾದವು. ಸರ್ಕಾರದ ಆರ್ಥಿಕ ನೆರವಿನಿಂದ ನಡೆಯುತ್ತಿದ್ದುದು ಕೆಲವು ಶಾಲೆಗಳು ಮಾತ್ರ. ಸಾರ್ವಜನಿಕರು ಅಪಾರ ಆಸಕ್ತಿ ವಹಿಸಿ ಉನ್ನತ ವಿದ್ಯಾ ಕೇಂದ್ರಗಳಿಗೆ ಹಣ ಕೊಟ್ಟು ಸಹಾಯ ಮಾಡುತ್ತಿದ್ದರು. ಇಂತಹ ಅನೇಕ ಶಾಲೆಗಳು ಉಚಿತ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದವು.

ಮುಮ್ಮಡಿ ಕೃಷ್ಣನ ಕಾಲದಲ್ಲಿದ್ದ ‘ಸಾಲೊಟಗಿ’ ವಿದ್ಯಾಶಾಲೆ ಬಹಳ ಪ್ರಸಿದ್ಧವಾದುದು. ಇದು ಅತ್ಯಂತ ದೊಡ್ಡ ವಿದ್ಯಾಶಾಲೆಯಾಗಿತ್ತು. ಕೃಷ್ಣನ ಪ್ರಧಾನಿಯೊಬ್ಬನು ಈ ವಿದ್ಯಾಮಂದಿರವನ್ನು ಕಟ್ಟಿಸಿದ. ಅನೇಕ ಮಹಾಜನರು ಸೇರಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸುಮಾರು ೨೫೦೦ ಎಕರೆ ಭೂಮಿಯನ್ನು ದಾನವಾಗಿ ಕೊಟ್ಟರಂತೆ.

ಈ ವಿದ್ಯಾಶಾಲೆ ದೂರದೇಶಗಳಿಂದಲೂ ಅನೇಕ ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ವಿದ್ಯಾರ್ಥಿಗಳಿಗೆ ವಸತಿ ಗೃಹಗಳಿದ್ದವು. ಉಚಿತ ಊಟದ ವ್ಯವಸ್ಥೆ ಇತ್ತು. ಇಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಅನೇಕ ವಿಷಯ ಗಳನ್ನು ಬೋಧಿಸುತ್ತಿದ್ದರು. ವಿದ್ಯಾರ್ಥಿಗಳು ದೈವಭಕ್ತರಾಗಿಯೂ ಗುರುಹಿರಿಯರಲ್ಲಿ ಗೌರವವುಳ್ಳವರಾಗಿಯೂ ಇದ್ದರು. ಶಿಸ್ತು, ವಿನಯ ಅವರ ಪ್ರತಿಯೊಂದು ಕೆಲಸ ದಲ್ಲೂ ಎದ್ದು ಕಾಣುತ್ತಿತ್ತು. ಇಂತಹ ವಿಖ್ಯಾತ ವಿದ್ಯಾಕೇಂದ್ರಗಳಲ್ಲಿ ತರಬೇತು ಪಡೆದಿದ್ದ ಪಂಡಿತರಿಗೆ ರಾಜ ಸನ್ಮಾನ ದೊರೆಯುತ್ತಿತ್ತು.

ಗುರುಕುಲ ಪದ್ಧತಿ ವಿದ್ಯಾಭ್ಯಾಸದ ಕ್ರಮವಾಗಿತ್ತು. ಗುರುಗಳ ಬಳಿಯೇ ಇದ್ದು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ತಮ್ಮ ಜೀವನಕ್ಕೆ ಸಂಬಂಧಪಟ್ಟ ಅನೇಕ ವಿಷಯವನ್ನು ಚರ್ಚಿಸಿ ತಿಳಿದುಕೊಳ್ಳುತ್ತಿದ್ದರು. ಅವರಿಗಾಗಿಯೇ ಇದ್ದ ದೊಡ್ಡ ಪುಸ್ತಕ ಭಂಡಾರವನ್ನು ಉಪ ಯೋಗಿಸಿಕೊಂಡು ಓದಿ ಜ್ಞಾನ ಸಂಪಾದಿಸಿ ಕೊಳ್ಳುತ್ತಿದ್ದರು.

ಅರಸರು ಕಟ್ಟಿಸಿದ ದೇವಸ್ಥಾನ ಹಾಗೂ ಮಠಗಳಿಗೆ ಸೇರಿದ ವಿಶಾಲ ಮಂದಿರಗಳಲ್ಲಿಯೂ ಪಾಠಗಳು ನಡೆಯುತ್ತಿದ್ದವು. ವಿದ್ಯಾ ಸಂಸ್ಥೆಗಳ ನಿರ್ವಹಣೆಗೆ ಮುಮ್ಮಡಿ ಕೃಷ್ಣ ಅನೇಕ ದಾನ ಧರ್ಮ ಮಾಡಿದ್ದನು.

ಪುಣ್ಯವನ್ನು ಪಡೆಯಲು ದಾನ ಮಾಡುವುದು ಅಂದಿನ ಕಾಲದಲ್ಲಿ ಸರ್ವಸಾಮಾನ್ಯವಾಗಿತ್ತು. ದೇವಾಲಯ ಗಳ ಮೂಲಕ ಎಲ್ಲ ಜಾತಿಗಳ ಬಡಬಗ್ಗರಿಗೂ ಅನ್ನದಾನ ನಡೆಯುತ್ತಿತ್ತು. ಮುಮ್ಮಡಿ ಕೃಷ್ಣನು ರಥಸಪ್ತಮಿ, ಅಮಾವಾಸ್ಯೆ ಮುಂತಾದ ಪುಣ್ಯದಿನಗಳಲ್ಲಿ ತಪ್ಪದೆ ದಾನ ಮಾಡುವುದನ್ನು ಕ್ರಮವಾಗಿಟ್ಟುಕೊಂಡಿದ್ದನು.

ಕರ್ನಾಟಕ ಇತಿಹಾಸದಲ್ಲಿ ಅರಸರು ಮಾಡುತ್ತಿದ್ದ ‘ತುಲಾಪುರುಷದಾನ’ವೆಂಬ ವಿಶೇಷ ದಾನ ಪ್ರಸಿದ್ಧಿ ಯಾದುದು. ರಾಜರು ತಮ್ಮ ತೂಕದಷ್ಟು ಚಿನ್ನವನ್ನು ಜನರಿಗೆ ದಾನ ಮಾಡುವುದೇ ತುಲಾ ಪುರುಷದಾನ ವೆಂಬುದು  ಮುಮ್ಮಡಿ ಕೃಷ್ಣನೂ ಇಂತಹ ದಾನ ಮಾಡಿ ಔದಾರ‍್ಯಕ್ಕೆ ಹೆಸರುವಾಸಿಯಾಗಿದ್ದನು. ರಾಜರು ಐಶ್ವರ‍್ಯವನ್ನು ತಾವೇ ಇಟ್ಟುಕೊಳ್ಳದೆ ಪ್ರಜೆಗಳಿಗೂ ಹಂಚುತ್ತಿದ್ದರು ಎಂಬುದಕ್ಕೆ ಇದೊಂದು ನಿದರ್ಶನ.

ಮೂರನೆಯ ಕೃಷ್ಣನಿಗೆ ಕನ್ನಡ ಭಾಷೆಯಲ್ಲಿ ಹೆಚ್ಚು ಅಭಿರುಚಿ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ಸಲ್ಲಿಸಿದವರೆಂದರೆ ರಾಷ್ಟ್ರಕೂಟ ಅರಸರು. ನಾವು ಈಗ ಕನ್ನಡದಲ್ಲಿ ಓದುವ ಅನೇಕ ಅಮೂಲ್ಯ ಗ್ರಂಥಗಳಿಗಾಗಿ ರಾಷ್ಟ್ರಕೂಟರಿಗೆ ಋಣಿಗಳಾಗಿರಬೇಕು. ಮುಮ್ಮಡಿ ಕೃಷ್ಣನ ಆಶ್ರಯ ಪಡೆದಿದ್ದವನು ಪೊನ್ನ ಕವಿ.

ಕ್ರೀಡಾಪಟು

ಮುಮ್ಮಡಿ ಕೃಷ್ಣನು ರಣರಂಗದಲ್ಲಿ ವೀರಯೋಧ ನಾಗಿದ್ದಂತೆಯೇ, ಕ್ರೀಡಾರಂಗದಲ್ಲಿ ಒಬ್ಬ ಚತುರ ಆಟಗಾರನೆನಿಸಿಕೊಂಡಿದ್ದ. ಅವನು ಆಟದಲ್ಲೂ ನಿಪುಣ ನಾಗಿದ್ದ. ಅವನ ನೆಚ್ಚಿನ ಕ್ರೀಡೆ ಎಂದರೆ ಕುದುರೆಯ ಮೇಲೆ ಕುಳಿತು ಆಡುವ ಚೆಂಡಾಟ. ಅಂದಿನ ಕಾಲದ ರಾಜರಲ್ಲಿ ಬಳಕೆಯಲ್ಲಿದ್ದ ಪ್ರಸಿದ್ಧ ಆಟ ಇದು. ಈ ಆಟದಲ್ಲಿ ಚತುರನಾದ ಮುಮ್ಮಡಿ ಕೃಷ್ಣನ ನೆರೆಹೊರೆಯ ಸ್ನೇಹಿತರಾದ ರಾಜರೊಂದಿಗೆ ಆಡಿ ಗೆದ್ದು ಭೇಷ್ ಎನ್ನಿಸಿಕೊಂಡಿದ್ದನಂತೆ.

ಅನೇಕ ಕ್ರೀಡಾ ವಿನೋದಗಳಲ್ಲಿ ಸಾರ್ವಜನಿಕ ರೊಡನೆ ತಾನೂ ಆನಂದದಲ್ಲಿ ಪಾಲುಗೊಳ್ಳುತ್ತಿದ್ದ.

ಹೀಗೆ ಕರ್ನಾಟಕದ ಜನರೆಲ್ಲಾ ಅಚ್ಚು ಮೆಚ್ಚಿನ ರಾಜನಾಗಿ ಕೃಷ್ಣನು ಇಪ್ಪತ್ತೆಂಟು ವರ್ಷಗಳ ಕಾಲ ರಾಜ್ಯಭಾರ ಮಾಡಿದ. ರಾಜ್ಯಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ. ಇವನ ಆಡಳಿತ ಇವನ ನಂತರ ಬಂದ ದೊರೆಗಳಿಗೆ ಇವನ ಆಡಳಿತ  ಮಾದರಿಯಾಗಿತ್ತು.

ಒಂದು ಭಾಗ್ಯವಿಲ್ಲ

ಆದರೆ ಒಂದು ವಿಷಯದಲ್ಲಿ ಮುಮ್ಮಡಿ ಕೃಷ್ಣ ಅದೃಷ್ಟಹೀನನಾಗಿದ್ದ. ತನ್ನಷ್ಟೇ ಪರಾಕ್ರಮದಿಂದ ರಾಜ್ಯಾಡಳಿತವನ್ನು ನಿರ್ವಹಿಸುವ ಮಕ್ಕಳನ್ನು ಅವನು ಪಡೆಯಲಿಲ್ಲ. ಕೃಷ್ಣನು ಜೀವಿಸಿದ್ದಾಗಲೇ ಅವನ ಪುತ್ರರು ಮೃತರಾದರು. ತನ್ನ ಕಡೆಯ ಕಾಲಕ್ಕೆ ಕೃಷ್ಣನು ಸಂತತಿ ಇಲ್ಲದವನಾದನು. ತನ್ನ ಕಾಲವಾದ ನಂತರವೂ ಕರ್ನಾಟಕ ಸಾಮ್ರಾಜ್ಯ ಹೀಗೆ ಇರಬೇಕೆಂದು ಮುಮ್ಮಡಿ ಕೃಷ್ಣ ಆಶಿಸಿದ್ದ. ಆದರೆ ಇವನಷ್ಟೇ ಉತ್ತಮ ದೊರೆ ರಾಷ್ಟ್ರಕೂಟರಲ್ಲಿ ಯಾರೂ ಇರಲಿಲ್ಲ. ಮುಮ್ಮಡಿ ಕೃಷ್ಣನು ೯೬೭ ರಲ್ಲಿ ತೀರಿಕೊಂಡ. ಅವನು ಕಣ್ಮರೆಯಾದ ನಂತರ ರಾಷ್ಟ್ರಕೂಟರ ಅವನತಿ ಪ್ರಾರಂಭವಾಯಿತು. ವಿಶಾಲ ಕರ್ನಾಟಕ ಸಾಮ್ರಾಜ್ಯ ತನ್ನ ಸುಭದ್ರತೆಯನ್ನು ಕಳೆದುಕೊಂಡಿತು.

ಆದರ್ಶ ರಾಜ

ರಾಷ್ಟ್ರಕೂಟ ಮೂರನೆಯ ಕೃಷ್ಣನು ನಮ್ಮ ಇತಿಹಾಸದಲ್ಲಿ ಪ್ರಸಿದ್ಧನಾಗಿರುವುದು ಒಬ್ಬ ಆದರ್ಶ ದೊರೆಯಾಗಿ, ಬೇರೆ ದೇಶಗಳೆಲ್ಲೆಲ್ಲ ನಿರಂಕುಶ ಪ್ರಭುತ್ವ ಇದ್ದಾಗ ಕರ್ನಾಟಕದಲ್ಲಿ ಕೃಷ್ಣನು ಪ್ರಜಾಹಿತ ರಕ್ಷಕನಾಗಿದ್ದ. ಪ್ರಜೆಗಳ ಸುಖವೇ ತನ್ನ ಸುಖವೆಂದು ತಿಳಿದಿದ್ದ ಶ್ರೇಷ್ಠ ದೊರೆ ಇವನು. ಇವನ ರಾಜ್ಯದಲ್ಲಿ ಶ್ರೀಮಂತರು, ಬಡವರು ಎಂಬ ಭೇದಭಾವವಿರಲಿಲ್ಲ. ಜನರಿಂದ ಹೆಚ್ಚು ತೆರಿಗೆ ಯನ್ನು ವಸೂಲು ಮಾಡಿ ಆ ಹಣವನ್ನು ತಮ್ಮ ಭೋಗ ವಿಲಾಸಗಳಿಗೆ ಉಪಯೋಗಿಸುತ್ತಿದ್ದ ರಾಜರ ವಿಷಯದಲ್ಲಿ ಅವನಿಗೆ ತುಚ್ಛವಾದ ಭಾವನೆ ಇತ್ತು. ಕೃಷ್ಣನ ಆಡಳಿತದಲ್ಲಿ ಲೋಕೋಪಯೋಗವಾದ ಕೆಲಸಗಳಿಗೆ ಹೆಚ್ಚು ಹಣ ಖರ್ಚಾಗುತ್ತಿತ್ತು. ರೈತರಿಗೆ ಅನೇಕ ಸೌಲಭ್ಯಗಳನ್ನು ಮಾಡಿ ಕೊಟ್ಟಿದ್ದ. ವರ್ತಕರ ಸಂಘಗಳು ಅಭಿವೃದ್ಧಿಗೆ ಬರಲು ಅವಕಾಶ ಮಾಡಿಕೊಟ್ಟಿದ್ದ. ಜನತೆಯ ಏಳಿಗೆಯೇ ಇವನ ಮುಖ್ಯ ಲಕ್ಷ್ಯವಾಗಿತ್ತು.

ಕರ್ನಾಟಕವನ್ನು ದಕ್ಷಿಣದಲ್ಲಿ ರಾಮೇಶ್ವರದಿಂದ ಉತ್ತರದಲ್ಲಿ ಮಾಳದವರೆಗೂ ವಿಸ್ತರಿಸಿದ ಮಹಾದಿಗ್ವಿಜಯಿ. ದಕ್ಷಿಣ ಭಾರತದ ಅರಸರಲ್ಲೆಲ್ಲ ಅತ್ಯಂತ ವಿಶಾಲವಾದ ಕನ್ನಡ ರಾಜ್ಯವನ್ನು ಕಟ್ಟಿದವನು ರಾಷ್ಟ್ರಕೂಟ ಮೂರನೆಯ ಕೃಷ್ಣನೇ. ಇವನ ಸಾಮ್ರಾಜ್ಯವು ದಕ್ಷಿಣ ಪರ‍್ಯಾಯ ದ್ವೀಪವನ್ನು ಪೂರ್ತಿಯಾಗಿ ಒಳಗೊಂಡಿತ್ತು. ಅಷ್ಟೇ ಅಲ್ಲ ಉತ್ತರದ ಶೌರ‍್ಯಶಾಲಿಗಳಾದ ಗೂರ್ಜರ ಪ್ರತಿಹಾರವನ್ನೂ, ಮಾಳವದ ಪರಮಾರರನ್ನೂ, ಬುಂದೇಲ್ ಖಂಡದ ಚಾಂದೇಲರನ್ನೂ ಸೋಲಿಸಿ ರಾಜಪುತ್ರ ಸ್ಥಾನದ ಬಲವಾದ ಕೋಟೆಗಳನ್ನೂ, ದುರ್ಗಗಳನ್ನೂ ಮುಮ್ಮಡಿಕೃಷ್ಣ ವಶಪಡಿಸಿಕೊಂಡಿದ್ದನು.

ಅದ್ವಿತೀಯ ಪರಾಕ್ರಮಿ ಎಂದು ಹೆಸರು ಗಳಿಸಿದ್ದ ಮುಮ್ಮಡಿ ಕೃಷ್ಣನೊಡನೆ ಸ್ನೇಹ ಬೆಳೆಸಲು ಭಾರತದ ಅನೇಕ ದೊರೆಗಳು ಮುಂದೆ ಬಂದರು. ಸಿಂಹಳ ದ್ವೀಪದ ರಾಜನೂ ಇವನನ್ನು ಕಂಡರೆ ಭಯಭಕ್ತಿಯಿಂದ ಶರಣಾದನು. ಇವನ ಅಸಾಧಾರಣ ಪರಾಕ್ರಮದಿಂದ ಬಲಿಷ್ಠ ದೊರೆಗಳಾದ ಚೋಳರೂ ಸ್ಥಬ್ಧರಾಗಿದ್ದರು. ಕರ್ನಾಟಕಕ್ಕೆ ಯಾವ ಕಡೆಯಿಂದಲೂ ಶತ್ರು ಭಯವಿಲ್ಲದಂತೆ ಮುಮ್ಮಡಿಕೃಷ್ಣ ರಕ್ಷಣೆ ಕೊಟ್ಟಿದ್ದನು.

ವಿನಯ ನಿಧಿ

ಚಿಕ್ಕ ವಯಸ್ಸಿಗೆ ಮಹಾರಾಜಾಧಿರಾಜ, ಸಾರ್ವಭೌಮ, ಚಕ್ರವರ್ತಿ ಎಂಬ ಬಿರುದುಗಳನ್ನು ಪಡೆದಿದ್ದ.  ಆದರೂ ತನ್ನ ಅಧಿಕಾರದಿಂದ ತಂದೆಯನ್ನಾಗಲಿ ಸಹೋದg ರನ್ನಾಗಲೀ, ಅಲಕ್ಷಿಸಲಿಲ್ಲ. ತಂದೆಗೆ ವಿಧೇಯನಾದ ಮಗನಾಗಿದ್ದನು. ತಂದೆಗಿಂತ ಹೆಚ್ಚು ಬುದ್ಧಿ ಉಪಯೋಗಿಸಿ ಅನೇಕ ಸಲ ತಾನೇ ಸಲಹೆಗಳನ್ನು ಕೊಡುವಷ್ಟು ಜಾಣನಾಗಿದ್ದ. ಆದರೂ ಅಹಂಕಾರವಿರಲಿಲ್ಲ. ಸುಖಲೋಲುಪ್ತಿಯಲ್ಲಿ ಕಾಲ ಕಳೆಯುತ್ತಿದ್ದ ತನ್ನ ಅಣ್ಣ ಗೋವಿಂದನನ್ನು ಮೂಲೆಗೆ ತಳ್ಳಿ ರಾಜ್ಯವನ್ನು ಕಸಿದು ಕೊಳ್ಳುವುದು ಕೃಷ್ಣನಿಗೇನೂ ಅಸಾಧ್ಯವಾದ ಕೆಲಸ ವಾಗಿರಲಿಲ್ಲ. ಆದರೂ ಹಾಗೆ ಮಾಡುವುದು ನೀತಿ ಮಾರ್ಗವಲ್ಲವೆಂದು ಬೋಧಿಸಿದ ತಂದೆಗೆ ವಿಧೇಯನಾಗಿ ವರ್ತಿಸಿದ.

ಕೃಷ್ಣನಿಗೆ ಹಿರಿಯರನ್ನು ಕಂಡರೆ ಗೌರವ ಭಾವನೆ. ವಯಸ್ಸಿನಲ್ಲಿ ಹಿರಿಯರಾಗಿದ್ದ ತನ್ನ ಮಂತ್ರಿಗಳನ್ನು ಗೌರವಿಸುತ್ತಿದ್ದ. ರಾಜ್ಯದ ಏಳಿಗೆಗೆ ಯಾವುದು ಸೂಕ್ತವೆಂದು ತೋರುತ್ತದೆಯೋ ಆ ಸಲಹೆಯನ್ನು ಅನುಸರಿಸಲು ಹಿಂಜರಿಯುತ್ತಿರಲಿಲ್ಲ. ಆದ್ದರಿಂದಲೇ ಮುಮ್ಮಡಿಕೃಷ್ಣ ಪ್ರಜಾನುರಾಗಿಯಾಗಿದ್ದ ರಾಜನೆನಿಸಿಕೊಂಡಿದ್ದ. ಮಂತ್ರಿ ಗಳೂ, ಸಾಮಂತ ರಾಜರೂ ಕೃಷ್ಣನನ್ನೂ ಕಂಡರೆ ಗೌರವ ಪ್ರೀತಿ, ವಿಶ್ವಾಸದಿಂದ ಇದ್ದರು.

ಯುದ್ಧಭೂಮಿಯಲ್ಲಿ ಕಾಲಭೈರವನಂತೆ ರಣವೀರ ನಾಗಿದ್ದನು. ಹಾಗೆಯೇ ಸಿಂಹಾಸನದಲ್ಲಿ ಕುಳಿತು ರಾಜ್ಯಭಾರವನ್ನು ನಡೆಸುವಾಗ ಚಾಣಾಕ್ಷನಾಗಿದ್ದನು. ವಿಶಾಲ ಸಾಮ್ರಾಜ್ಯದ ಸಾಮ್ರಾಟನಾಗಿ ಮುಮ್ಮಡಿಕೃಷ್ಣನು ವೈಭವದಿಂದ ರಾಜ್ಯವಾಳಿದ. ಹಾಗಿದ್ದರೂ ಅವನಿಗೆ ದೇವರಲ್ಲಿ ಭಕ್ತಿಯಿತ್ತು.

ದೇವಾಲಯಗಳಿಗೆ ದಾನ ಮಾಡುತ್ತಿದ್ದಂತೆಯೇ ಅನೇಕ ಮಠ ಹಾಗೂ ವಿದ್ಯಾಶಾಲೆಗಳಿಗೂ ದಾನ ಧರ್ಮಮಾಡಿದ್ದ. ತನ್ನ ರಾಜ್ಯದ ಜನರು ಬಡವರಾಗಿರ ಕೂಡದೆಂದು ಶ್ರಮಿಸಿದ ಧರ್ಮಿಷ್ಠ. ಅಷ್ಟು ವಿಶಾಲವಾಗಿದ್ದ ಕರ್ನಾಟಕ ಸಾಮ್ರಾಜ್ಯವು ಮುಮ್ಮಡಿಕೃಷ್ಣನ ಕಾಲದಲ್ಲಿ ಸಂಪತ್ಸಮೃದ್ಧಿಯಿಂದ ತುಂಬಿತ್ತು.

ಕಲಾಭಿಮಾನಿ

ಇಷ್ಟೆಲ್ಲಾ ಬಿಡುವಿಲ್ಲದ ದಿಗ್ವಿಜಯ,  ಯುದ್ಧಗಳು, ಆಡಳಿತ ಮುಂತಾದ ಕಾರ‍್ಯಕಲಾಪಗಳ ಮಧ್ಯೆಯೂ ಮುಮ್ಮಡಿಕೃಷ್ಣ ಬಿಡುವು ಮಾಡಿಕೊಂಡು ಸಂಗೀತವನ್ನು ಕೇಳುತ್ತಿದ್ದ. ನಾಟ್ಯವನ್ನು ನೋಡುತ್ತಿದ್ದ. ಅವನೊಬ್ಬ ರಸಿಕ ರಾಜನಾಗಿದ್ದ. ಕಲೆಯಲ್ಲಿ ಪ್ರತಿಭೆ ಇದ್ದವರಿಗೆ ರಾಜನಿಂದ ಪುರಸ್ಕಾರ, ಪ್ರೋತ್ಸಾಹಗಳು ಸಿಗುತ್ತಿದ್ದುವು. ತನ್ನ ಕಲಾಪ್ರೇಮವನ್ನು ಸುಂದರವಾದ ದೇವಾಲಯಗಳನ್ನು ಕಟ್ಟಿಸುವುದರ ಮೂಲಕವೂ ತೋರಿಸಿದ್ದಾನೆ.

ಅಂತಹ ಸಾಮ್ರಾಜ್ಯ ಈಗ ನಮ್ಮ ಕಣ್ಮುಂದೆ ಇಲ್ಲ. ಆದರೂ ಎಲ್ಲೋರ, ಎಲಿಫೆಂಟಾ ದೇವಾಲಯಗಳೂ, ಪಂಪ, ಪೊನ್ನರ ಕಾವ್ಯಗಳೂ, ಪ್ರವಾಸಿಗಳ ವರದಿಗಳೂ ಕನ್ನಡಿಗರ ಗತವೈಭವದ ನೆನಪನ್ನು ಕೊಡುತ್ತವೆ.

ರಾಜ್ಯವನ್ನು ಆಳಲು ನಿಜವಾಗಿ ಯೋಗ್ಯನಾದ ವನಿಗೆ ಯುದ್ಧದ ಕಲೆಗಳು ಶಾಂತಿಕಾಲದ ಕಲೆಗಳು, ಎರಡೂ ತಿಳಿದಿರಬೇಕು ಎನ್ನುತ್ತಾರೆ. ಹಿಂದಿನ ಕಾಲ ದಲ್ಲಂತೂ ಅವನು ಎಷ್ಟೇ ಒಳ್ಳೆಯ, ಶಾಂತಿಪ್ರಿಯನಾದ ರಾಜನಾದರೂ ಪ್ರಬಲ ರಣವೀರನೂ ಯುದ್ಧ ನಡೆಸುವ ತಂತ್ರವನ್ನು ತಿಳಿದವನೂ ಆಗಿರಲೇ ಬೇಕಾಗಿತ್ತು. ಏಕೆಂದರೆ ಭಾರತದಲ್ಲಿ ಹಲವು ರಾಜ್ಯಗಳಿದ್ದವು. ಒಂದು ರಾಜ್ಯದ ಅರಸನು ಮತ್ತೊಂದು ರಾಜ್ಯವನ್ನು ನುಂಗಲು ಕಾದಿರುತ್ತಿದ್ದ. ಆದುದರಿಂದ ಸ್ವತಃ ಶಾಂತಿಯನ್ನು ಬಯಸುವ ರಾಜನೂ ತಾನು ಚೆನ್ನಾಗಿ ಯುದ್ಧಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಡ ಬೇಕಾಗಿತ್ತು. ಪ್ರಬಲವಾದ ಸೈನ್ಯವನ್ನು ಅಣಿಮಾಡಿಕೊಂಡಿರ ಬೇಕಾಗಿತ್ತು. ಇಲ್ಲವಾದರೆ ಸುತ್ತಮುತ್ತ ಲಿನವರಿಂದ ಮುತ್ತಿಗೆಗಳಾಗಿ ಜನರಿಗೆ ಸದಾ ತೊಂದರೆ ಯಾಗುತ್ತಿತ್ತು. ರಾಜ್ಯದೊಳಗೆ ಶ್ರೀಮಂತರನ್ನೂ ಅಧಿಕಾರಿ ಗಳನ್ನೂ ರಾಜನು ಎದುರು ಹಾಕಿಕೊಳ್ಳುವಂತಿರಲಿಲ್ಲ. ಅವನಿಗೂ ಅವರ ಬೆಂಬಲ ಬೇಕಾಗುತ್ತಿತ್ತು. ಆದರೆ ಅವರಿಗೆ ತೀರ ಪ್ರಾಬಲ್ಯ ದೊರೆತು ರಾಜ ದುರ್ಬಲ ಎಂಬ ಭಾವನೆ ಬಂದರೆ ಅವರೇ ಪ್ರಜೆಗಳಿಗೆ ಪೀಡೆ ಕೊಡುತ್ತಿದ್ದರು. ಆದುದರಿಂದ ಅವರನ್ನು ರಾಜನು ಹತೋಟಿಯಲ್ಲಿಟ್ಟು ಕೊಳ್ಳಬೇಕಾಗಿತ್ತು. ಪ್ರಜೆಗಳಲ್ಲಿ ಎಲ್ಲರಿಗೆ ಊಟ, ಇರಲು ಮನೆ, ಗೌರವದ ಜೀವನ ಲಭ್ಯವಾಗುವಂತೆ ನೋಡಿಕೊಳ್ಳ ಬೇಕಾಗಿತ್ತು. ರಾಜ್ಯದೊಳಗೆ ಗುಂಪು ಗುಂಪುಗಳಲ್ಲಿ, ಮತ-ಮತಗಳಲ್ಲಿ ಜಗಳವಾಗದಂತೆ ಆಳಬೇಕಾಗಿತ್ತು. ಜನರ ಮನರಂಜನೆಗೆ, ಅವರ ಕಲೆ-ಸಂಸ್ಕೃತಿಗಳ ಬೆಳವಣಿಗೆಗೆ ಅವಕಾಶ ನೀಡಿ, ಸಾಹಿತ್ಯ ಸಂಗೀತ ಚಿತ್ರಕಲೆ ಶಿಲ್ಪಕಲೆ ಮೊದಲಾದವು ಬೆಳೆಯಲು ಪ್ರೋತ್ಸಾಹ ಕೊಡಬೇಕಾಗಿತ್ತು. ದೈವಭಕ್ತಿಯು ರಾಜನಿಗೆ, ತಾನು ಪ್ರಜೆಗಳಿಗೂ ಉತ್ತರ ಹೇಳಬೇಕು, ಭಗವಂತನಿಗೂ ಹೇಳಬೇಕು ಎಂಬ ಭಾವನೆ ಯನ್ನು ರಕ್ತಗತಮಾಡಿ ಅವನಿಗೆ ಶಿಸ್ತನ್ನೂ ಸಂಯಮವನ್ನೂ ಕಲಿಸುತ್ತಿತ್ತು.

ವಿಶಾಲ ಸಾಮ್ರಾಜ್ಯವನ್ನು ನಿರ್ಮಿಸಿ ಕರ್ನಾಟಕದ ರಾಜಕೀಯ ಏಳಿಗೆಗೂ, ಸಂಸ್ಕೃತಿಯ ಬೆಳವಣಿಗೆಗೂ ಅಪಾರ ಸೇವೆಯನ್ನು ರಾಷ್ಟ್ರಕೂಟ ಮೂರನೆಯ ಕೃಷ್ಣ ಸಾರ್ವಭೌಮನು ಸಲ್ಲಿಸಿದನು.