ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸರಕಾರದ ಆರ್ಥಿಕ ನೆರವಿನಿಂದ ರೂಪಿಸಿ, ಪ್ರಕಟಿಸುತ್ತಿರುವ ಸಮಗ್ರ ಕನ್ನಡ ಜೈನಸಾಹಿತ್ಯ ಸಂಪುಟಗಳ ಯೋಜನೆಯು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ವಪೂರ್ಣವಾದದ್ದು. ೨೦೦೬ರ ಶ್ರವಣಬೆಳಗೊಳದ ಐತಿಹಾಸಿಕ ಗೊಮ್ಮಟ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯು ಈ ಸಮಗ್ರ ಕನ್ನಡ ಜೈನಸಾಹಿತ್ಯ ಸಂಪುಟಗಳ ಯೋಜನೆಯನ್ನು ರೂಪಿಸಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ಸರ್ಕಾರವು ಈಗಾಗಲೇ ಸಮಗ್ರ ವಚನಸಾಹಿತ್ಯ ಮತ್ತು ದಾಸಸಾಹಿತ್ಯ ಸಂಪುಟಗಳನ್ನು ಹೊರತಂದಿದ್ದು, ಈಗ ಸಮಗ್ರ ಜೈನಸಾಹಿತ್ಯ ಸಂಪುಟಗಳ ಪ್ರಕಟಣೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಬಹಳ ಮಹತ್ವದ ಶರೀರವೊಂದನ್ನು ಪೂರ್ಣಗೊಳಿಸುತ್ತಿದೆ. ಈ ಸಮಗ್ರ ಜೈನಸಾಹಿತ್ಯ ಸಂಪುಟದ ಯೋಜನೆಯನ್ನು ೨೦೦೬ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಭಾಗವಾಗಿ ಕರ್ನಾಟಕ ಸರ್ಕಾರ ಅಂಗೀಕರಿಸಿ ಸಾರಸ್ವತ ಮಹಾಮಸ್ತಕಾಭಿಷೇಕ ಮಾಡಿದ ಪುಣ್ಯಕ್ಕೆ ಪಾತ್ರವಾಗಿದೆ. ಈ ಯೋಜನೆಯ ಮಹತ್ವವನ್ನು ಮನಗಂಡು ಉದಾರವಾದ ಆರ್ಥಿಕ ನೆರವು ನೀಡಿದ ಆಗಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರ್ಮಸಿಂಗ್ ಅವರಿಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಂ.ಪಿ. ಪ್ರಕಾಶ ಅವರಿಗೂ ಸನ್ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಎಚ್‌.ಡಿ. ರೇವಣ್ಣ ಅವರಿಗೂ ವಿಶೇಷ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಂದು ಚಾಲನೆಗೊಂಡ ಯೋಜನೆಗೆ ಮತ್ತೆ ಜೀವ ತುಂಬಿದ ಈಗಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್‌.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಪ್ರಸ್ತಾವವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಪರಿಷತ್ತಿನ ಸದಸ್ಯರಾದ ಡಾ. ಎಂ.ಆರ್. ತಂಗಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಲ್. ಹನುಮಂತಯ್ಯ, ಶ್ರೀ ಹಸನಬ್ಬ ಅವರ ನೆರವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಕನ್ನಡದ ಹಿರಿಯ ಸಾಹಿತಿಗಳಾದ ಮತ್ತು ಜೈನಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವುಳ್ಳ ಡಾ.ಹಂಪ. ನಾಗರಾಜಯ್ಯ ಮತ್ತು ಡಾ. ಕಮಲಾ ಹಂಪನಾ ಅವರು ಈ ಸಂಪುಟಗಳ ರೂಪರೇಷೆಯಿಂದ ತೊಡಗಿ ಕರ್ನಾಟಕ ಸರ್ಕಾರಕ್ಕೆ ಇದರ ಮಹತ್ವವನ್ನುಮನವರಿಕೆ ಮಾಡಿಕೊಡುವವರೆಗೆ ವಿಶೇಷವಾದ ಕಾಳಜಿ ವಹಿಸಿ ಸಹಕರಿಸಿದ್ದಾರೆ.

ಪ್ರಾಚೀನ ಕನ್ನಡ ಸಾಹಿತ್ಯ ಆರಂಭವಾಗುವುದೇ ಜೈನ ಸಾಹಿತ್ಯ ಕೃತಿಗಳ ಮೂಲಕ. ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣಗಳು ಕನ್ನಡ ಸಾಹಿತ್ಯದ ಮೊತ್ತಮೊದಲ ಮಹಾಕಾವ್ಯಗಳು. ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಕನ್ನಡದ ಮೊತ್ತಮೊದಲ ಉಪಲಬ್ಧ ಗದ್ಯ ಗ್ರಂಥ. ಸಂಕ್ಕೃತವೇ ಸಾಹಿತ್ಯನಿರ್ಮಾಣದ ಪ್ರಧಾನ ಭಾಷೆಯಾಗಿದ್ದ ಭಾರತ ದೇಶದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಕಾವ್ಯರಚನೆ ಮಾಡುವ ಮೂಲಕ ಜೈನಕವಿಗಳು, ಪ್ರಾದೇಶಿಕ ಸಾಹಿತ್ಯ ನಿರ್ಮಾಣಕ್ಕೆ ನಾಂದಿ ಹಾಡಿದರು. ಆದಿಕವಿ ಪಂಪ ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿ ಗಂಭೀರಂ ಕವಿತ್ವಂ ಎಂದು ಹೇಳಿದ್ದಾನೆ. ಪಂಪಕವಿಯು ಆದಿಪುರಾಣದಲ್ಲಿ ಆದಿನಾಥನ ಭವಾವಳಿಗಳನ್ನು ಮತ್ತು ಆತನ ಮಕ್ಕಳಾದ ಭರತ ಬಾಹುಬಲಿಯರು ರಾಜ್ಯದ ಒಡೆತನಕ್ಕಾಗಿ ಪರಸ್ಪರ ಎದುರಾಳಿಗಳಾಗುವ ಸನ್ನಿವೇಶವನ್ನು ಚಿತ್ರಿಸಿದ್ದಾನೆ. ಅಣ್ಣ ತಮ್ಮಂದಿರ ನಡುವೆ ಮುಖಾಮುಖಿ ಯುದ್ಧದಲ್ಲಿ ಅಣ್ಣ ಭರತ ಸೋಲುತ್ತಾನೆ, ತಮ್ಮ ಬಾಹುಬಲಿ ಗೆಲ್ಲುತ್ತಾನೆ. ಆದರೆ ಈ ರೀತಿ ಗೆದ್ದ ಬಾಹುಬಲಿಯು ರಾಜ್ಯದ ಒಡೆತನವನ್ನು ನಿರಾಕರಿಸಿ ವೈರಾಗ್ಯಪರನಾಗಿ ಪ್ರತಿಮಾ ಯೋಗದಲ್ಲಿ ನಿಂತು ಗೊಮ್ಮಟನಾಗುತ್ತಾನೆ. ಅಂತಹ ವೈರಾಗ್ಯದ ಪ್ರತಿಮೆಯಾದ ಗೊಮ್ಮಟನ ಮಹಾಮಸ್ತಕಾಭಿಷೇಕದ ನೆನಪಿಗಾಗಿ ಕನ್ನಡ ಸಾಹಿತ್ಯದ ಗೊಮ್ಮಟ ಸದೃಶ ಜೈನಕೃತಿಗಳನ್ನು ಮತ್ತೆ ಹೊಸದಾಗಿ ಶುಭ್ರಗೊಳಿಸಿ ಸಾಹಿತ್ಯ ಮತ್ತು ಶಾಸ್ತ್ರದ ವಿಭಿನ್ನ ಅರ್ಚನೆಗಳ ಮೂಲಕ ಅವುಗಳಿಗೆ ಪ್ರಕಟಣೆಯ ಅಭಿಷೇಕವನ್ನು ಮಾಡಲಾಗಿದೆ.

ಆದಿಕವಿ ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಪ್ರಾಚೀನ ಕಾವ್ಯಗಳಲ್ಲಿ ಲೌಕಿಕ ಮತ್ತು ಆಗಮಿಕ ಎನ್ನುವ ಕಾವ್ಯ ಮತ್ತು ಪುರಾಣಗಳ ನಿಮಾಣದ ಒಂದು ಪರಂಪರೆ ಕಾಣಿಸಿಕೊಳ್ಳುತ್ತದೆ. ಪಂಪನಿಂದ ತೊಡಗಿ ಪೊನ್ನ ರನ್ನರಿಂದ ಮುಂದುವರಿದು ಮುಂದಿನ ಕವಿಗಳಲ್ಲಿ ಆಗಮಿಕ ಕಾವ್ಯಗಳಾದ ತೀರ್ಥಂಕರರ ಪುರಾಣ ಕೃತಿಗಳ ನಿರ್ಮಾಣ ಒಂದು ನೋಂಪಿಯಂತೆ ಕಾಣಸಿಗುತ್ತದೆ. ಇನ್ನೊಂದು ಕಡೆ ನಯಸೇನ, ಜನ್ನ, ಬ್ರಹ್ಮಶಿವ, ವೃತ್ತವಿಲಾಸರಂತಹ ಕವಿಗಳು ಲೌಕಿಕ ಕಥೆಗಳಿಗೆ ಜೈನ ಆವರಣವನ್ನು ನಿರ್ಮಾಣ ಮಾಡಿ ಲೌಕಿಕ – ಧಾರ್ಮಿಕಗಳನ್ನು ಒಂದುಗೂಡಿಸುವ ವಿಶಿಷ್ಟ ಕಲೆಗಾರಿಕೆಯನ್ನು ಮೆರೆಯುತ್ತಾರೆ. ಹೀಗೆ ೨೪ ತೀರ್ಥಂಕರರ ಪುರಾಣಕಾವ್ಯ ಒಂದು ಧಾರೆಯಾದರೆ ಚರಿತ್ರೆ ಲೌಕಿಕಕಥೆ ನೀತಿಕಥೆಗಳ ಮೂಲಕ ಸಮಕಾಲೀನ ಬದುಕಿಗೆ ಸ್ಪಂದಿಸಿದ ವೈವಿಧ್ಯಮಯ ಕಾವ್ಯಪರಂಪರೆ ಪ್ರಾಚೀನ ಜೈನಸಾಹಿತ್ಯದ ಇನ್ನೊಂದು ಮುಖ್ಯಧಾರೆಯಾಗಿದೆ. ಇದರೊಂದಿಗೆ ಗದ್ಯ ಸಾಹಿತ್ಯದ ದೃಷ್ಟಿಯಿಂದ ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಮತ್ತು ಚಾವುಂಡರಾನ ಚಾವುಂಡರಾಯ ಪುರಾಣ ಇನ್ನೊಂದು ಪರಂಪರೆಯನ್ನು ಕಟ್ಟಿಕೊಡುತ್ತದೆ. ಒಂದು ಕಡೆ ಜೈನಧರ್ಮದ ಚೌಕಟ್ಟಿನ ಒಳಗಡೆ ಕತೆಗಳು ಮಾಧ್ಯಮವಾಗಿ ಬಳಕೆಯಾದರೆ, ಇನ್ನೊಂದೆಡೆ ಜೈನ ಧರ್ಮದ ಮೇಲ್ಮೈಗಾಗಿ ಸಾಧನೆ ಮಾಡಿದ ಸಾಂಸ್ಕೃತಿಕ ವ್ಯಕ್ತಿಯ ಸುತ್ತ ಕಥನವೊಂದು ನಿರ್ಮಾಣವಾಗುತ್ತದೆ. ಇವುಗಳ ನಡುವೆ ಇಮ್ಮಡಿ ನಾಗವರ್ಮನಂತಹ ಶಾಸ್ತ್ರಕಾರನು ಭಾಷೆ ಮತ್ತು ಕಾವ್ಯಲಕ್ಷಣಕ್ಕೆ ಸಂಬಂಧಿಸದಿ ಶಾಸ್ತ್ರಗ್ರಂಥಗಳನ್ನು ರಚಿಸಿದ್ದಾರೆ. ಮಧ್ಯಯುಗೀನ ಕಾಲದಲ್ಲಿ ರತ್ನಾಕರವರ್ಣಿಯಂತಹ ಕವಿಯು ಸಾಂಗತ್ಯದಲ್ಲಿ ಭರತೇಶ ವೈಭವ ಕಾವ್ಯರಚಿಸಿ ಜೈನ ಕಾವ್ಯಗಳ ಆಶಯದ ಸಾಂಸ್ಕೃತಿಕ ಪಲ್ಲಟವನ್ನು ದಾಖಲಿಸುತ್ತಾನೆ. ೧೮೦೦ರ ಕಾಲಕ್ಕೆ ಬರುವ ದೇವಚಂದ್ರನ ರಾಜಾವಳಿ ಕಥೆಯು ಆಧುನಿಕ ಕನ್ನಡದ ಪೂರ್ವದ ಕಥಾರಚನೆಯ ಅರುಣೋದಯದ ಹೆಜ್ಜೆಯಾಗಿ ಮುಖ್ಯವಾದ ಕೃತಿಯಾಗಿದೆ.

ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನಕವಿಗಳು ೫೨೦ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ಕೃತಿಗಳು ಲಭ್ಯವೆಂದು ನಾವು ಭಾವಿಸಿದರೂ ಇವುಗಳ ಪ್ರಮಾಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಗಣನೀಯ ಎನ್ನಿಸುತ್ತದೆ. ಮಹಾಕಾವ್ಯದಿಂದ ತೊಡಗಿ ಮುಕ್ತಕದ ವರೆಗೆ, ಗಣಿತಶಾಸ್ತ್ರದಿಂದ ಹಿಡಿದು ಸೂಪಶಾಸ್ತ್ರದ ವರೆಗೆ, ಜನಪದ ಕಥೆಯಿಂದ ಆರಂಭಿಸಿ ವಿಡಂಬನ ಸಾಹಿತ್ಯದ ವರೆಗೆ ಕನ್ನಡ ಜೈನಸಾಹಿತ್ಯದ ಹರಹು ವ್ಯಾಪಿಸಿಕೊಂಡಿದೆ.

ಪಂಪಕವಿಯು ತನ್ನ ಕಾವ್ಯದಲ್ಲಿ ಮಾರ್ಗ ಮತ್ತು ದೇಸಿಗಳ ಕುರಿತು ಮಾತನಾಡುತ್ತಾನೆ. ಕನ್ನಡ ಜೈನಸಾಹಿತ್ಯದ ಬಗ್ಗೆ ಹೇಳುವಾಗ ಜೈನ ಪುರಾಣಗಳ ಪರಿಭಾಷೆ ಮತ್ತು ಪರಿಮಾಣಗಳು ಮಾರ್ಗವಾದರೆ, ಇತಿಹಾಸ, ಸಮಾಜ, ಲೌಕಿಕ ಪ್ರಪಂಚ ದೇಸಿಯಾಗುತ್ತದೆ. ಪಂಪನ ಕಾವ್ಯಗಳ ನಾಣ್ನುಡಿಯಿಂದ ತೊಡಗಿ, ವಡ್ಡಾರಾಧನೆ ಕತೆಗಳ ಗ್ರಾಮೀಣ ಬದುಕಿನಿಂದ ಮುಂದುವರಿದು, ನಯಸೇನನ ಧರ್ಮಾಮೃತದ ಕಥೆಗಳ ಮಾಲೋಪನೆಗಳಿಂದ ಹಾದು ಬಂದು, ರತ್ನಾಕರನ ಭರತೇಶ ವೈಭವದ ನುಡಿಗಟ್ಟುಗಳ ವರೆಗೆ ಕನ್ನಡದ ನಿಜವಾದ ದೇಸಿಯನ್ನು ಜೈನ ಸಾಹಿತ್ಯ ನಿರ್ಮಿಸಿಕೊಂಡಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಂಪೂಕಾವ್ಯ ಪ್ರಕಾರ ಜೈನರಿಮದ ಆರಂಭವಾಯಿತು. ಸಾಂಗತ್ಯಕಾವ್ಯ ಪ್ರಕಾರಕ್ಕೆ ನಾಂದಿ ಹಾಡಿದವರು ಜೈನಕವಿಗಳು. ಗದ್ಯವನ್ನು ಮೊದಲು ಮಾಡಿದವರು ಜೈನ ಕಥೆಗಾರರು. ಕಾವ್ಯಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರದಂತಹ ಶಾಸ್ತ್ರ ಪಾಂಡಿತ್ಯವನ್ನು ಕನ್ನಡದಲ್ಲಿ ಕಟ್ಟಿಕೊಟ್ಟವರು ಜೈನರು. ಹೀಗೆ ಕನ್ನಡದ ವಿದ್ವತ್ತು, ವಿವೇಕ ಮತ್ತು ವಿಸ್ಮಯ ಕನ್ನಡ ಸಾಹಿತ್ಯದಲ್ಲಿ ಜೈನ ಕವಿಗಳಿಂದ ಅಪೂರ್ವವಾಗಿ ನಿರ್ಮಾಣವಾಗಿದೆ. ಮತ್ತು ಪ್ರಸಾರವಾಗಿದೆ.

ಈ ಹಿನ್ನೆಲೆಯಲ್ಲಿ ಸಮಗ್ರ ಕನ್ನಡ ಜೈನ ಸಾಹಿತ್ಯ ಯೋಜನೆಯನ್ನು ನಿಗದಿತ ಕಾರ್ಯವಿಧಾನದ ಮೂಲಕ ರೂಪಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ತೀರ್ಮಾನಿಸಿಕೊಂಡೆವು. ಇದಕ್ಕಾಗಿ ಈ ಕ್ಷೇತ್ರದಲ್ಲಿ ನುರಿತ ನಾಡಿನ ಹಿರಿಯರನ್ನೊಳಗೊಂಡ ಉನ್ನತ ಸಲಹಾ ಸಮಿತಿ ಹಾಗೂ ಸಂಪನ್ಮೂಲ ವಿದ್ವಾಂಸರನ್ನು ಈ ಯೋಜನೆಯ ವ್ಯಾಪ್ತಿಗೆ ಒಳಗೊಳ್ಳಲು ಬಯಸಲಾಯಿತು. ಅದರಂತೆ ನಾಡಿನ ಗಣ್ಯ ವಿದ್ವಾಂಸರು ಈ ಬೃಹತ್ ಯೋಜನೆಯಲ್ಲಿ ಪಾಲ್ಗೊಂಡರೆಂಬುದು ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ.

ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟದ ಯೋಜನೆಯ ಉನ್ನತ ಸಲಹಾ ಸಮಿತಿಯ ಸದಸ್ಯರಾದ ಡಾ. ದೇ. ಜವರೇಗೌಡ್ರ, ಡಾ. ಜಿ.ಎಸ್‌.ಶಿವರುದ್ರಪ್ಪ, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಾ. ಹಂಪ, ನಾಗರಾಜಯ್ಯ, ಡಾ. ಕಮಲಾ ಹಂಪನಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಡಾ. ಎಚ್‌.ಜೆ. ಲಕ್ಕಪ್ಪಗೌಡ, ಡಾ. ಎಂ.ಜಿ. ಬಿರಾದಾರ ಮತ್ತು ಮುಜರಾಯಿ ಇಲಾಖೆಯ ಕಾರ್ಯದರ್ಶಿಗಳು ತಮ್ಮ ಸೂಚನೆ ಸಲಹೆಗಳಿಂದ ಈ ಸಂಪುಟಗಳ ಸ್ವರೂಪ ಮತ್ತು ಅನುಷ್ಠಾನಗಳ ಎಲ್ಲಾ ಹಂತಗಳಲ್ಲಿಯೂ ಮಾರ್ಗದರ್ಶನ ಕೊಟ್ಟಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮಿತಿಯ ಸಂಚಾಲಕರಾಗಿ ಇಡೀ ಯೋಜನೆಯ ಅನುಷ್ಠಾನದ ಕೆಲಸವನ್ನು ಹೆಜ್ಜೆ ಹೆಜ್ಜೆಗೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಿಂದಿನ ಕುಲಸಚಿವರಾದ ಪ್ರೊ. ಕರೀಗೌಡ ಬೀಚನಹಳ್ಳಿ ಅವರು ಯೋಜನೆಯ ಆಡಳಿತಾತ್ಮಕ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ಈಗಿನ ಕುಲಸಚಿವರಾದ ಶ್ರೀ ವಿ. ಶಂಕರ್ ಎಲ್ಲ ಬಗೆಯ ಆಡಳಿತಾತ್ಮಕ ನೆರವನ್ನು ನೀಡುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಜೈನ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಂ. ಉಷಾ ಅವರು ಈ ಯೋಜನೆಯನ್ನು ರೂಪಿಸುವಲ್ಲಿ ವಿಶೇಷವಾಗಿ ಸಹಕರಿಸಿದ್ದಾರೆ.

ವಿಶ್ವವಿದ್ಯಾಲಯವು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪ್ರಕಟಣ ಸ್ವರೂಪವನ್ನು ಸ್ಥೂಲವಾಗಿ ಹೀಗೆ ಗುರುತಿಸಿಕೊಳ್ಳಲಾಯಿತು. ಇದು ಡೆಮ್ಮಿ ೧/೮ ಆಕಾರದ ಸುಮಾರು ಇಪ್ಪತ್ತು ಸಂಪುಟಗಳಿಂದ ಕೂಡಿರಬೇಕು. ಪ್ರತಿ ಸಂಪುಟವೂ ಅಂದಾಜು ೬೦೦ ಪುಟಗಳಾಗಿರಬೇಕು. ಸಂಪುಟದ ಸಂಪಾದಕರು ಆಯಾ ಸಂಪುಟಕ್ಕೆ ಸೂಕ್ತವಾದ ಕವಿ ಕಾವ್ಯ ಪರಿಚಯ, ಚಾರಿತ್ರಿಕ ಹಾಗೂ ಸಾಹಿತ್ಯಿಕ ಮಹತ್ವ ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರಸ್ತಾವನೆ ಬರೆಯಬೇಕೆಂದು ನಿರ್ಣಯಿಸಲಾಯಿತು. ಸಂಪುಟಗಳು ಜನಪ್ರಿಯ ಆವೃತ್ತಿ ಆಗಿರುವುದರಿಂದ ಪಠ್ಯಗಳಲ್ಲಿ ಪಾಠಾಂತರಗಳನ್ನು ನೀಡಬೇಕಾಗಿಲ್ಲ. ಪ್ರತಿಯೊಬ್ಬ ಕವಿಯ ಸಮಗ್ರ ಕಾವ್ಯವನ್ನು ಒಂದು ಸಂಪುಟದಲ್ಲಿ ತರುವುದೆಂದು ಸಮಿತಿ ತೀರ್ಮಾನಿಸಿತು. ವಸ್ತು ವಿಷಯಕ್ಕೆ ಅನುಗುಣವಾಗಿ ಬೇರೆ ಬೇರೆ ಎರಡೆರಡು ಕಾವ್ಯಗಳನ್ನು ಒಂದೇ ಸಂಪುಟದಲ್ಲಿ ಅಳವಡಿಸುವುದು ಸೂಕ್ತವೆಂದು ತೀರ್ಮಾನ ತೆಗೆದುಕೊಳ್ಳಲಾಯಿತು. ಈಗಾಗಲೇ ಸಂಪಾದನೆಗೊಂಡು, ಪ್ರಕಟವಾಗಿರುವ ಕಾವ್ಯಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳುವುದೆಂದೂ ಅಪೂರ್ವ ಕೃತಿಗಳನ್ನೂ ಈ ಮಾಲೆಯಲ್ಲಿ ಸೇರಿಸಿಕೊಳ್ಳುವುದೆಂದೂ ನಿಶ್ಚಯಿಸಲಾಯಿತು. ಪಂಪ, ಪೊನ್ನ, ರನ್ನ, ಜನ್ನ, ನಾಗವರ್ಮ, ನಯಸೇನ, ಸಾಳ್ವ ಮುಂತಾದವರ ಕಾವ್ಯಗಳು ಈಗಾಗಲೇ ಮುದ್ರಣಗೊಂಡಿವೆ. ಆದರೂ ಪಾಠಕ್ಲೇಶ ಅರ್ಥಕ್ಲೇಶಗಳು ಹೇಗೋ ಉಳಿದುಬಿಟ್ಟಿವೆ. ಆದುದರಿಂದ ಎಲ್ಲ ಮುದ್ರಿತ ಪಾಠಗಳನ್ನು ಗಮನಿಸಿ ಈ ಎಲ್ಲ ಕ್ಲೇಶಗಳನ್ನು ನಿವಾರಿಸಿ ಸರ್ವ ಪ್ರತಿಪಾಠಗಳನ್ನು ಇಟ್ಟುಕೊಳ್ಳುವುದು ಅಗತ್ಯವೆಂದು ಸಮಿತಿ ಭಾವಿಸಿತು. ಗ್ರಂಥದ ಕೊನೆಗೆ ಶಬ್ದಾರ್ಥಕೋಶ, ಪಾರಿಭಾಷಿಕಕೋಶ, ಸಹಾಯಕ ಸಾಹಿತ್ಯ ನೀಡುವುದು ಅಗತ್ಯವೆಂದು ಸಂಪಾದಕರಿಗೆ ಬಿನ್ನವಿಸಿಕೊಳ್ಳಲಾಯಿತು. ಈ ಹಿನ್ನಲೆಯಲ್ಲಿ ಪ್ರಸ್ತುತ ಇಪ್ಪತ್ತು ಸಂಪುಟಗಳು ನಿಮ್ಮ ಎದುರಿಗಿವೆ. ಶ್ರಮಸಾಧ್ಯವಾದ ಇಂಥ ಕಾವ್ಯಗಳನ್ನು ಸಂಪಾದಿಸಿಕೊಟ್ಟ ಕನ್ನಡದ ಹಿರಿಯ ವಿದ್ವಾಂಸರಾದ ಎಲ್ಲ ಸಂಪಾದಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಈಗ ನಮಗೆ ಸಾಧ್ಯವಾಗಿದೆ.

ಕನ್ನಡ ಜೈನಕಾವ್ಯ ಪರಂಪರೆಯಲ್ಲಿ ಪುರಾಣಗಳು, ವಿಜಯಕಾವ್ಯಗಳು ಇರುವಂತೆ ಚರಿತೆಕಾವ್ಯಗಳ ಒಂದು ಮುಖ್ಯ ಪರಂಪರೆ ದೊರಕುತ್ತದೆ. ಜನ್ನನ ಯಶೋಧರ ಚರಿತೆ ಅಂಥ ಒಂದು ಮುಖ್ಯಕೃತಿ. ಹದಿನೈದು – ಹದಿನಾರನೆಯ ಶತಮಾನದಲ್ಲಿದ್ದ ಮೂರನೆಯ ಮಂಗರಸನ ಶ್ರೀಪಾಲಚರಿತೆ ಪ್ರಭಂಜನ ಚರಿತೆ, ಜಯನೃಪಕಾವ್ಯ ಇವು ಚರಿತೆ ಕಾವ್ಯಗಳ ಪರಂಪರೆಗೆ ಸೇರುತ್ತವೆ. ಕಥೆಗಳ ಮೂಲಕ ಜನಸಾಮಾನ್ಯರಿಗೂ ಮನವರಿಕೆ ಆಗುವಂತೆ ಜೈನಧರ್ಮದ ತತ್ತ್ವಗಳನ್ನು ಸರಳವಾಗಿ ಲಲಿತವಾಗಿ ಹೇಳುವ ತಾತ್ತ್ವಿಕ ಮಾದರಿಯೊಂದು ಇಂತಹ ಚರಿತೆ ಕಾವ್ಯಗಳಲ್ಲಿ ದೊರಕುತ್ತದೆ. ಮಧ್ಯಯುಗೀನ ಕರ್ನಾಟಕದಲ್ಲಿ ಭಿನ್ನಭಿನ್ನ ಧರ್ಮಗಳ ನಡುವಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೈನಧರ್ಮವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜೈನಕತೆಗಳ ಸರಮಾಲೆಯ ಕಾವ್ಯಗಳ ನಿರ್ಮಾಣಕ್ಕೆ ವಿಶೇಷ ಮಹತ್ವವನ್ನು ಕೊಟ್ಟಿತು. ಅಂತಹ ಕಾಲಘಟ್ಟದಲ್ಲಿ ಕಾಣಿಸಿಕೊಂಡ ಕವಿ ಮೂರನೆಯ ಮಂಗರಸನು ತನ್ನ ಕೃತಿವೈವಿಧ್ಯ ಮತ್ತು ಅವುಗಳಲ್ಲಿನ ವಸ್ತು, ಛಂದಸ್ಸು ಹಾಗೂ ಪ್ರಯೋಗಗಳ ವೈವಿಧ್ಯದಿಂದ ಗಮನ ಸೆಳೆಯುತ್ತಾನೆ. ಪ್ರಭಂಜನ ಚರಿತೆಯು ಯಶೋಧರ ಚರಿತೆಯ ಮಾದರಿಯಲ್ಲಿದ್ದು ವಿವಾಹದ ಚೌಕಟ್ಟಿನೊಳಗಿನ ವಿವಾಹೇತರ ಸಂಬಂಧಗಳ ವಿನ್ಯಾಸವುಳ್ಳ ಕಾವ್ಯ, ಕಾಮ ಮತ್ತು ವೈರಾಗ್ಯಗಳ ಸಂಕೀರ್ಣ ಸಂಬಂಧಗಳನ್ನು ಚರ್ಚಿಸುವ ಕೃತಿ. ಇದು ಸಾಂಗತ್ಯ ಮಟ್ಟಿನಲ್ಲಿದ್ದು ಒಂದರ್ಥದಲ್ಲಿ ೧೫ನೆಯ ಶತಮಾನದ ಜನಮುಖೀ ಧೋರಣೆಗೆ ಅನುಗುಣವಾಗಿದೆ. ಮಂಗರಸನ ಶ್ರೀಪಾಲ ಚರಿತೆ ಸಾಂಗತ್ಯ ಛಂದಸ್ಸಿನಲ್ಲಿದ್ದು ಮೂಲ ಸಂಸ್ಕೃತ ಕಾವ್ಯಗಳಿಗೆ ಋಣಿಯಾಗಿದೆ. ಯಶೋಧರ ಚರಿತೆ, ಜೀವಂಧರ ಚರಿತೆ ಮತ್ತು ಜಿನದತ್ತರಾಯ ಚರಿತೆಗಳ ಮಾದರಿಯಲ್ಲಿರುವ ಶ್ರೀಪಾಲ ಚರಿತೆಯು ಜೈನಕಥಾ ಹಂದರದ ಒಳಗೆ ಆ ತತ್ತ್ವಕ್ಕೆ ವಿಧೇಯವಾಗಿ ನಿರ್ಮಾಣವಾಗಿದೆ. ಕವಿಯ ವಿಶಿಷ್ಟ ಪ್ರತಿಭೆಗಳಿಗೆ ಅವಕಾಶ ದೊರೆತಿಲ್ಲ. ಮಂಗರಸನ ಇನ್ನೊಂದು ಕೃತಿ ಜಯನೃಪಕಾವ್ಯವು ಪರಿವರ್ಧಿನಿ ಷಟ್ಟದಿಯಲ್ಲಿ ರಚನೆಗೊಂಡಿರುವ ಸುದೀರ್ಘ ಕಥನಕಾವ್ಯ. ಸಂಸ್ಕೃತದಲ್ಲಿ ಜಿನಸೇನಾಚಾರ್ಯರು ರಚಿಸಿದ ಈ ಕೃತಿಯನ್ನು ಬಹುಮಟ್ಟಿಗೆ ಯಥಾವತ್ತಾಗಿ ಮಂಗರಸನು ಕನ್ನಡಕ್ಕೆ ರೂಪಾಂತರಿಸಿದ್ದಾನೆ. ಪಂಪನ ‘ಆದಿಪುರಾಣ’ದಲ್ಲಿ ಅವಕಾಶ ಪಡೆಯದ, ರತ್ನಾಕರವರ್ಣಿಯಲ್ಲಿ ಕೇವಲ ಪ್ರಸ್ತಾವನೆಗೊಂದ ಈ ಕಥಾನಕವು ಬಹು ದೀರ್ಘವಾಗಿ ಕನ್ನಡದಲ್ಲಿ ಅವತರಣಗೊಂಡಿದೆಯೆಂಬುದು ಜನನೃಪಕಾವ್ಯದ ಹೆಚ್ಚುಗಾರಿಕೆ. ಮಂಗರಸನ ಸೌಮ್ಯುಕ್ತ್ವ ಕೌಮುದಿ – ಸಮ್ಯಕ್ ದರ್ಶನವನ್ನು ಹದಿನೆಂಟು ಕಥೆಗಳ ರೂಪದಲ್ಲಿ ವಿವರಿಸಿರುವ ಕಥಾ ಸಮುಚ್ಚಯ. ಜಿನ ಕಥಾಕೋಶದ ಉತ್ತಮ ಮಾದರಿಯೊಂದನ್ನು ಇಲ್ಲಿ ಕಾಣಬಹುದು. ಇಂಥ ಕಥೆಗಳಲ್ಲಿ ಅರಸು, ಮಂತ್ರಿಗಳು, ತಳರಾರು, ಕಳ್ಳರು, ವ್ಯಾಪಾರಿಗಳು, ವೇಶ್ಯೆಯರು, ಬೇರೆ ಬೇರೆ ಕಸುಬುದಾರರು ಕಾಣಿಸಿಕೊಂಡಿದ್ದಾರೆ. ಒಂದು ಸಮಾಜದ ಛಿದ್ರತೆಗೆ ಮತ್ತು ವಿಘಟನೆಗೆ ಯಾವೆಲ್ಲ ಶಕ್ತಿಗಳು ಕೆಲಸ ಮಾಡುತ್ತವೆ ಎನ್ನುವ ಚಿಂತನೆಯೂ ರೂಪಕತೆಯ ಮದರಿಯು ಇಂತಹ ಜಿನಕಥೆಗಳಲ್ಲಿ ರೂಪು ತಾಳಿದೆ.

ನೇಮಿಜೀನೇಶ ಸಂಗತಿಯು ಇಪ್ಪತ್ತೆರಡನೆಯ ತೀರ್ಥಂಕರನಾದ ನೇಮಿನಾಥನ ಕಥೆಯನ್ನು ಸಾಂಗತ್ಯ ಛಂದಸ್ಸಿನಲ್ಲಿ ವಿಸ್ತರಿಸಿರುವ ಬೃಹತ್ ಕಾವ್ಯ, ಕನ್ನಡದಲ್ಲಿ ಮಂಗರಸನ ಪೂರ್ವದಲ್ಲಿ ೨ನೇ ಗುಣವರ್ಮ, ಚಾವುಂಡರಾಯ, ಕರ್ಣಪಾರ್ಯ, ನೇಮಿಚಂದ್ರ, ಬಂಧುವರ್ಮ, ಮಹಾಬಲ ಮುಂತಾದವರು ರಚಿಸಿರುವ ನೇಮಿನಾಥ ಪುರಾಣಗಳ ಸಾಲಿಗೆ ಸೇರುವ ಮಂಗರಸನ ಕಾವ್ಯವು ಹರಿವಂಶ – ಕುರುವಂಶ ವೃತ್ತಾಂತದಿಂದ ತೊಡಗಿ ನೇಮಿನಾಥನ ಕಥೆಯ ವರೆಗೆ ವಿಸ್ತಾರವಾಗಿ ಹರಡಿರುವ ಜೈನ ಮಹಾಭಾರತ. ಮಧ್ಯಯುಗೀನ ಜನಸಂವಹನದ ದೃಷ್ಟಿಯಿಂದ ಸಾಂಗತ್ಯ ಬಂಧದಲ್ಲಿ ರಚನೆಗೊಂಡ ಈ ಬೃಹತ್‌ಕಾವ್ಯವು ಕಥಾವಸ್ತುವಿನ ವಿಸ್ತಾರ ಮತ್ತು ವರ್ಣನೆಗಳ ಆಧಿಕ್ಯಗಳಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಹೊಂದಲು ಸಾಧ್ಯವಾಗಿಲ್ಲ. ಜೈನಕಥಾಕಾವ್ಯಗಳನ್ನು ಹೆಚ್ಚಾಗಿ ರಚಿಸಿರುವ ಮೂರನೆಯ ಮಂಗರಸನ ಸೂಪಶಾಸ್ತ್ರವು ಕನ್ನಡದಲ್ಲಿ ಪಾಕಶಾಸ್ರ್ರವನ್ನು ಕುರಿತ ಒಂದು ಅಪೂರ್ವ ಗ್ರಂಥ. ಆರು ಅಧ್ಯಾಯಗಳಲ್ಲಿ ವಾರ್ಧಕ ಷಟ್ಪದಿಯಲ್ಲಿ ರಚನೆಯಾಗಿರುವ ಸೂಪಶಾಸ್ತ್ರವು ಕರ್ನಾಟಕದ ಪ್ರಾದೇಶಿಕ ಅಡುಗೆಗಳನ್ನು ಪರಿಚಯಿಸಿರುವುದರ ಜತೆಗೆ ಅನೇಕ ರೂಢಿಚ್ಯುತ ಆಹಾರ – ಪಾನೀಯಗಳ ರುಚಿ ಪರಿಮಳಗಳನ್ನು ಅನಾವರಣ ಮಾಡಿದೆ. ದೇಸಿ ತಿಂಡಿಗಳ ವರ್ಣನೆ ಅಧಿಕವಾಗಿರುವುದು ಮಂಗರಸನ ಸಂಗ್ರಹಗುಣ ಮತ್ತು ಸೂಕ್ಷ್ಮ ಚಿತ್ರಣದ ಶಕ್ತಿಯನ್ನು ತಿಳಿಸುತ್ತದೆ. ಕನ್ನಡಿಗರ ಶಾಖಾಹಾರದ ವೈವಿಧ್ಯಗಳನ್ನು ತಿಳಿಸುವ ಈ ಕೃತಿ ಹೆಚ್ಚು ಪ್ರಸಾರಕ್ಕೆ ಬರುವ ಅಗತ್ಯವಿದೆ.

ಡಾ. ಬಿ.ವಿ. ಶಿರೂರ ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕನ್ನಡ ಅಧ್ಯಯನ ಪೀಠದಲ್ಲಿ ದೀರ್ಘಕಾಲ ಅಧ್ಯಯನ, ಅಧ್ಯಾಪನ ನಡೆಸಿದವರು. ಪ್ರಾಚೀನ ಕನ್ನಡ ಸಾಹಿತ್ಯದ ಸಂಶೋಧನೆಯಲ್ಲಿ ಬಹುಖ್ಯಾತಿ ಪಡೆದಿರುವ ಡಾ. ಬಿ.ವಿ. ಶಿರೂರ ಅವರು ಅಮೂಲ್ಯವಾದ ಸಂಶೋಧನ ಸ್ವರೂಪ, ವಚನ ಸಂಪಾದನೆ ರತ್ನಕರಂಡಕದ ಕಥೆಗಳು ಇನ್ನು ಮುಂತಾದ ಕೃತಿಗಳನ್ನು ರಚಿಸಿದ್ದಾರೆ ಮತ್ತು ಸಂಪಾದಿಸಿದ್ದಾರೆ. ಇವರು ೩ನೇ ಮಂಗರಸನ ಕಾವ್ಯಗಳನ್ನು ಬೇರೆಬೇರೆ ಸಂಪಾದಿತ ಕೃತಿಗಳ ಅವಲೋಕನ ಮತ್ತು ಹಸ್ತಪತ್ರತಿಗಳ ಪರಿಶೀಲನೆಯೊಂದಿಗೆ ವಿದ್ವತ್ ಪೂರ್ಣವಾಗಿ ಸಂಪಾದಿಸಿಕೊಟ್ಟಿದ್ದಾರೆ. ಕವಿಯನ್ನು ಕುರಿತು ಅಧ್ಯಯನಪೂರ್ಣ ಪ್ರಸ್ತಾವನೆ ಬರೆದಿದ್ದಾರೆ. ಹೆಚ್ಚು ಪರಿಚಿತವಲ್ಲದ ಜೈನಕಾವ್ಯವನ್ನು ಸಮರ್ಪಕವಾಗಿ ಸಂಪಾದಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಗೌರವಪೂರ್ವಕವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರಲು ಶ್ರಮಿಸಿದ ಪ್ರಸಾರಾಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ವಿಶೇಷವಾಗಿ ನೆನೆಯುತ್ತೇನೆ.

ಬಿ.ಎ. ವಿವೇಕರೈ
ಕುಲಪತಿ