ಸೂಚನೆ || ಶ್ರೀಗೆಣೆಯೆನಿಪ ಸುಲೋಚನೆಯೊಳಗನು |
ರಾಗದಿ ನಿಂದು ಮದುವೆಯಂ ನವಸಂ |
ಭೋಗದಿನೊಪ್ಪಿದನಾನರನಾರಾಯಣಜಯಭೂವರನು ||

ಇಂತು ಪೊೞಲನೆಯ್ದಿದ ನರನಾಯಕ | ಸಂತಾನಮನೊಗುಮಿಗೆಯುಪಚರದಿಂ |
ಸಂತೋಷಂಬಡಿಸುತ ಮಱುವಗಲೊಳು ತನುಜೆಸುಲೋಚನೆಯಾ ||
ಕಾಂತಕಮಲವದನೆಯ ಮದುವೆಯನ | ತ್ಯಂತವಿಭವದಿಂ ಕಾಶ್ಮೀರಮಹೀ |
ಕಾಂತಂ ಮಾಡಿದನೀತೆಱದಿಂದವನಿತಳಂ ಪೊಗೞ್ವಂತೆ       || ೧ ||

ಪಸುಳೆದಳಿರೆ ತೋರಣಮಂ ಕಟ್ಟುವ | ಪೊಸಪಂದಲನಿಕ್ಕುವ ಪಱಿಗುಡಿಗಳ |
ನೊಸೆದೆತ್ತುವ ಚಳೆಯಂಗೊಟ್ಟಂಗಣದೊಳ್ ಕಡೆಯಂಗುಡುವಾ ||
ಎಸಳ್ವಲಿಗೆದರ್ವ ಲಸದ್ಬಿತ್ತಿಗಳೊಳು | ರಸಚಿತ್ರಾವಳಿಯಂ ಚಿತ್ರಿಪ ಸಂ |
ತಸದ ಜನದ ಸಂದಣಿ ಮನೆಮನೆದಪ್ಪದೆ ಸಲೆ ಸೊಗಸಿದುದು         || ೨ ||

ಹರಿನೀಲದ ಪಳುಕಿನ ನೆಲನಿಂಗದಿ | ರ್ವರಲ ಮಿಸುಪ ವೇದಿಕೆ ಪವಳದ ನಿಲ |
ವರುಣಮಣಿಯ ಕೆಲಸದ ಬೋದಿಗೆ ಹೊಸಹಳದಿಯ ಮಾಣಿಕದ ||
ಸರಮುಜ್ಜ್ವಲವಜ್ರದ ಪಡಿವಟ್ಟಿಗೆ ಮರಕತರತ್ನದ ಕೇರ್ ವೈಡೂರ್ಯದ |
ವರಫಲಕಂ ರಚಿಯಿಸಲೊಪ್ಪಿದುದಲ್ಲಿಯ ಮಂಗಲಸದನಂ          || ೩ ||

ಹಳಚನೆಸೆವ ಹಂಸಾವಳಿಯಿಂ ಪ | ಜ್ಜಳಿಸುವ ಪೊಸವಳುಕಿನ ಪಂಚಾಂಗದೊ |
ಳಳವಡಿಸಿದ ಮರಕತಮಣಿಗಂಭದ ಮೇಗಣ ಮಾಣಿಕದ ||
ತಳತಳಿಸುವ ಹೂವಿನ ಬೋದಿಗೆಯಂ | ಬಳಸಿದ ಹರಿನೀಲದ ಲಂಬಣಗಳ್ |
ತಿಳಿಗೊಳದುರಣಾಬ್ಜಮನೋಲಯಿಪಳಿಮಾಲೆವೊಲೊಪ್ಪಿದುವು   || ೪ ||

ಮುತ್ತಿನ ಮಣಿಗಂಭದ ಮದನಿಕೆಯೊಳ್ | ಕೆತ್ತಿದ ಕುಲಿಶದ ಕೇಸರಿಗಳ ಚೆ |
ನ್ಬಿತ್ತರಮಂ ಪಡೆದುವು ಮೂಲೋಕಮನೆಲ್ಲಮನದಟಲೆವ ||
ಮತ್ತಹಿರಣ್ಯಕಶಿಪುವಂ ಕೊಲ್ವೆನೆ | ನುತ್ತಾಸ್ತಂಭೋಧರದೊಳ್ ಜನಿಸಿ ಕ |
ಱುತ್ತುಪ್ಪರಿಪಂದಿನ ನರಸಿಂಹನ ಭಂಗಿಯನನುಕರಿಸಿ       || ೫ ||

ಜಳಜಾತದ ಜಂಗುಳಿ ಜಲವಿಹಗಾ | ವಳಿ ಜಲಚರಜಾಲಂ ನೆಱೆ ಚಿತ್ರಿಸೆ |
ಜಳಕನೆಸೆವ ತೆಳುವಳುಕಿನ ಬಿಂಗದ ಮೇಲ್ಗಟ್ಟೊಪ್ಪಿದುದು ||
ಎಳೆಗತ್ಯಾಶ್ಚರ್ಯವೆನಿಪ್ಪಾಮಂ | ಗಳನಿಧಿಯಂ ನೋಡುವೆನೆನುತಂಬರ |
ತಳದಿಂದಿೞಿವಮರಾಪಗೆಯಿರವಂ ಪಿರಿದುಂ ನೆನೆಯಿಸುತ || ೬ ||

ತೋರಮುಡಿಯ ತೊಳಗುವ ಬಲ್ಮೊಲೆಗಳ | ಭಾರಂಬೊತ್ತ ಕಟಿಯ ಕಾಂತೆಯರಾ |
ಕಾರದ ಪುತ್ರಿಕೆ ತೀವಿರಲಾಬಿಣ್ಪಿಗೆ ಭೂಸತಿಯೊಡಲಂ ||
ಪೂರಿಸಿದನುರಾಗರಸಂ ಚಿತ್ರದ | ಕೇರ ಮೊದಲ ಸಂದಿಯೊಳುಣ್ಮಿದವೊಲ್ |
ಕಾರಣೆಗಿಕ್ಕಿದ ಘುಸೃಣರಸಂ ಕಣ್ಗೊಪ್ಪಿದುವಂತಲ್ಲಿ     || ೭ ||

ಪಿಂತೆ ಪಿನಾಕಿ ಪಯೋಜೋದರ ವಿಧಿ | ಮುಂತಾದವರೆಲ್ಲವರಂ ತಱಗೆಲೆ |
ಯಂತತಿಲಘುಮಾಡಿದ ದರ್ಪಕನೇಂ ಬಡವನೆ ಅದನಱೆದು ||
ಸಂತಮನೊಲ್ದವನೊಳ್ ಬಿಡಬೇಡೆನು | ತುಂ ತವೆ ಸಾಱುವವೊಲ್ ಕರದೊಳ್ ತೃಣ |
ಮಂ ತಾಳ್ದಿದ ಹರಿನೀಲಮಣಿಯಪುತ್ರಿಕೆಯೊಪ್ಪಿದುವಲ್ಲಿ            || ೮ ||

ಧೂಪದ ಧೂಮಶಲಾಕೆ ತಮಾಲಂ | ದೀಪಾವಳಿ ತುಱುಗಿದ ಪಸರ್ಗಂಭಮ |
ದೇ ಪೂ ತೀವಿದ ಸಂಪಗೆ ಮುತ್ತಿನ ಲಂಬಣವಲರ್ಜೊಂಪಂ ||
ರೂಪವತಿಯರುಲುಹೇ ಕಳಕಂಠಾ | ಳಾಪಂ ಪಂದಲ್ ಪಲ್ಲವತತಿಯೆನ |
ಲಾಪುಷ್ಪಾಸ್ತ್ರಪ್ರಮದವನಂಬೊಲ್ ಸೊಗಯಿಸಿತಾಸದನಂ           || ೯ ||

ಎಳವರಯದ ನೀಱೆ ಯರೊಲವಿಂ ಕ | ಣ್ಗೊಳಿಪಂದದಿ ಕಟ್ಟುವ ಲಂಬಣಗಳ |
ಹಳಹಳಹಳಚನೆಸೆವ ಹಳದಿಯ ಹರಲೊಳ್ ಮತ್ತಾಕೆಗಳ ||
ಬೆಳತಿಗೆಗಣ್ಗಳ ಕಟೆಯಿಂದುಣ್ಮುವ | ಬೆಳಗು ಪರಿದು ಪೊಳೆಯುತ್ತಿರಲೆಸೆದುದು |
ವಿಳಸದ್ವೈಡೂರ್ಯದ ಮೇಗಣ ಸೂತ್ರಮವೆಂಬಂದದೊಳು          || ೧೦ ||

ಮಂಗಳಸತಿ ಮರಕತಮಣಿದೊಡವಿಂ | ಸಿಂಗರಿಸಿದವೊಲೆಸೆವ ಪೊಸಜಾಗದ |
ಜಂಗುಳಿಯಿಂ ರತಿಯಭಿಷೇಕದ ಕೊಡನೆನಲೆಸೆವೈರಣೆಯಿಂ ||
ಅಂಗಭವಾಧ್ವರಿಯಾಕರ್ಷಣಮುಖ | ಮಂ ಗೆಲೆವಂದು ಮಿಸುಪ ನವಹೋಮದ |
ಸಂಗಡದಿಂ ಸಲೆ ಸೊಗಯಿಸಿದತ್ತಾಮದುವೆಯ ಮಣಿಸದನಂ         || ೧೧ ||

ಬೆರಲುಂಗುರದ ಬೆರಕೆವಣಿಗಳ ರುಚಿ | ಸುರಧನುವೆನೆ ಪೊಳೆಯಲ್ ಕಂಕಣರುತಿ |
ಮೊರೆಯಲ್ ಕಿಱುಮೊೞಗೆನೆ ಘನಕುಚೆಯರೊಸೆದು ಚಳೆಯಂಗುಡವ ||
ಪರಿಮಳಜಲದ ಪಲವು ಪನಿಯೆಡೆಯೊಳ್ || ಕರಶಾಖಾನಖದುಜ್ಜ್ವಲರುಚಿ ಬಂ |
ಧುರಮಾದುದು ತಳಿವೞೆಯೊಳ್ ಮಿನಗುವ ಮಿಂಚಿನ ತೆಱನಾಗಿ    || ೧೨ ||

ಕತ್ತುರಿಯಿಂದನುಮಾಡಿದ ನೆಲದೊಳ್ | ವೃತ್ತಪಯೋಧರೆಯೊರ್ವಳ್ ಸಂತಸ |
ವೆತ್ತು ಮಸೆದ ಕೂರುಗರಿಂ ರೇಖಿಸಿ ಬಿನ್ನಣದಿಂದಲ್ಲಿ ||
ಮುತ್ತಿನ ರಂಗವಲಿಯನನುಗೆಯ್ಯಲ್ | ಚಿತ್ತಭವನ ಸತ್ಕೀರ್ತಿಲತೆಯ ಪೊಸ |
ಬಿತ್ತಂ ಹಂತಿವಿಡಿದು ಬಿತ್ತುವ ಭಂಗಿಯನುಕರಿಸಿದುದು     || ೧೩ ||

ಮೃಗಧರಕಾಂತದ ಪಡಲಿಗೆಯೊಳ್ ನವ | ಮೃಗಮದಕರ್ದಮಮಂ ತೆಗೆದೀಕ್ಷಿಪ |
ನಗೆಗಣ್ಗಳ ಚಂದ್ರಿಕೆಯಿಂದೊಸರಿ ಜಲಂ ತೀವಲ್ಕಲ್ಲಿ ||
ಸೊಗಯಿಪ ಮುದ್ದುಮೊಗಂ ಪ್ರತಿಬಿಂಬಿಸೆ | ಮುಗುದೆಯರದನಂಭೋರುಹಮೆನುತುಂ |
ಬಗೆದು ತೆಗೆಯಲುದ್ಯೋಗಿಸಿ ಬೞಿಯೊಳ್ ಲಜ್ಜೆವಡೆದರಾಗ        || ೨೪ ||

ಜ್ವಳಿಸುವರುಣಮಣಿದೀಪಶಿಖಿಗೆ ಕ | ಜ್ಜಳಮಂ ಭಿತ್ತಿಯ ಚಿತ್ರದ ಲತೆಯಲ |
ರ್ಗಳಿಯಂ ಮಿಸುಪಯ್ರಣೆಯ ಕಳಶದುದಕಕೆ ನೀಲೋತ್ಪಲಮಂ ||
ಪಳಿಕಿನ ಫಲಕಕ್ಕಂಗಜವೀರನ | ವಿಳಸಜ್ಜಯವೃತ್ತದ ಲಿಪಿಯಂ ಕ |
ಣ್ಗೊಳಿಪಂದದಿ ತೋಱುವುದಲ್ಲಿಯ ಸತಿಯರ ನಡುಗಣ್ಬೆಳಗು    || ೧೫ ||

ಕಳಶದ ಕೊನೆಯೇಱಿದ ಕಾಂಚನದೊ | ಳ್ವೆಳಗಿನ ಮುಕುರದ ಮುಂಗಡೆಯಿರಿಸಿದ |
ಪಳಿಕಿನೆಸಳ ಪೂವಟ್ಟಲೊಳರಿಸಿನದಕ್ಷತೆಗಳನಿಡಲು ||
ಜ್ವಳಿಸುವುದಯಭೂಧರದುಪರಿಮದೊಳ್ | ತಳತಳಿಸುವ ತರುಣಾರ್ಕನಿದಿರ ಸಿತ |
ಜಳರುಹದಳಮಧ್ಯದ ಕೇಸರಮೆಂಬಂದದೊಳೊಪ್ಪಿದುದು           || ೨೬ ||

ಎಸಳ ಕಱುಂಕೆಯೆಳೆಯನಿಡುಗೊನರಿ | ಟ್ಟಸಿತೋತ್ಪಲಲೋಚನೆಯರ್ ಮಿಗೆ ಸಂ |
ತಸದಿಂ ತುಱುಗೆವೆಯೆತ್ತಿ ನಿರೀಕ್ಷಿಸಲಾಕಣ್ಗಳ ನಡುವೆ ||
ಮಿಸುಗುವ ತಾರಾರುಚಿ ಪರಕಲಿಸಿದೊ | ಡೆಸಕಂಬಡೆದತ್ತಾಕಿಱುವಟ್ಟಲ |
ಪೊಸನುಣ್ಬಳಿಕು ತೃಣಂಬಿಡಿದೊಪ್ಪುವ ಹರಿನೀಲದ ತೆಱದಿ          || ೧೭ ||

ಕಳಿಯದ ಕಾಲದ್ವೀಪಾಂತರದೊಳ್ | ತೊಳಪ ಸುಲಗ್ನಮಹಾರತ್ನಮನಾಂ |
ಗಳಿಸುವೆನೆನುತಾಲಗ್ಗಿಗನೆಂಬ ವಣಿಗ್ವರನೆಯ್ತಂದು ||
ಜಳಪಾತ್ರಾಂಭೋನಿಧಿಯೊಳ್ ನಡೆಯಿಪ | ವಿಳಸದ್ಬೈತ್ರದ ಭಂಗಿಯಪೋಲ್ ಪ |
ಜ್ಜಳಿಸುವ ಗೞಿಗೆಯ ಪೊಸಪೊಂಬಟ್ಟಲ್ ಕರಮೆ ವಿರಾಜಿಸಿತು     || ೧೮ ||

ಬೞಿಕೊಳ್ಬಂದುಗೆವಾಯ್ದೆಱೆಯಾಳಿಯ | ರಲಘುಪ್ರಿಯದಿಂದವೆ ವಿರಚಿಸೆ ಕ |
ಣ್ಗೊಳಿಸುವ ಷೋಡಶವಿಧದ ವಿಭೂಷಣವಾನೃಪನಂದನೆಗೆ ||
ಲಲಿತಂಬಡೆದುದು ಕಱೆಯಿಲ್ಲದೆ ತಳ | ತಳಿಸುವ ಶಶಿಬಿಂಬಕೆ ಪದಿನಾಱುಂ |
ಕಲೆ ಮೆಯ್ವಿಡಿಯಲ್ ಕಡುವಿರಿದುಂ ವಿಭ್ರಾಜಿಸುವಂದದೊಳು       || ೧೯ ||

ಆ ಪೆಣ್ಣಂ ಸಿವಿಗೆಯನೇಱಿಸಿ ನವ | ರೂಪವತಿಯರುನ್ಮದಕಳಕಂಠಾ |
ಳಾಪದ ರತಿಯ ವಿಪಂಚೀಸ್ವರದ ಮನೋಜಾತಂ ಪಿಡಿದ ||
ಚಾಪಜ್ಯಾಟಂಕೃತಿಯ ಸೊಗಸನಪ | ಲಾಪಿಸುವೊಳ್ವಾತಿನ ಕಂಚುಕಿಯರ್ |
ಚಾಪಲಲೋಚನೆಯರ್ ಕೊಂಡಾಡುತ್ತೆಯ್ದಿದರೊಗ್ಗಿನೊಳು        || ೨೦ ||

ಅಳಿಕುಂತಳದಬ್ಜೋಪಮಲೋಚನ | ದೆಳದಳಿರ್ದುಟಿಯ ಶಶಾಂಕಮುಖದ ನವ |
ಕಲಶಕುಚದ ಸುರಲತಿಕಾಹಸ್ತದ ಹರಿಮಧ್ಯದ ಮಿಸುಪ ||
ಪುಳಿನತಳಮನೇಳಿಸುವ ನಿತಂಬದ | ವಿಳಸತ್ಕದಳೀಸದೃಶಾಂಕದ ಪ |
ಜ್ಜಳಿಪಲತೆಗೆವಜ್ಜೆಯ ಸಖಿಯರ್ ಬರೆ ಬಂದಳ್ ಶಶಿವದನೆ          || ೨೧ ||

ಸುರಭಿರನ ಸುಲಲಿತಕೀರ್ತಿಶ್ರೀ | ಧರೆಯಿಂ ದಿಗ್ವಲಯಕೆ ಪಾಱುವೆನೆನು |
ತುರುಮುದದಿಂದೆಯ್ತಂದಾಪಾಱುಂಗುಪ್ಪೆಗಡರಿದಂತೆ ||
ವರಮಣಿಯಮಂಡಪಸೋಪಾನಮ | ನಿರದೆಯ್ದುತ ಪಿರಿದುಂ ವೈಭವದೊಳ್ |
ತರಳನಯನೆ ಮುತ್ತಿನ ಮೆಟ್ಟಕ್ಕಿವೆಡಗೆಯೇಱಿದಳತ್ತ     || ೨೨ ||

ಮಂಗಲಮಯಲಗ್ನದೊಳೊಲವಿಂ ಲಲಿ | ತಾಂಗಿಯರಾಬ್ದಿಕಮಂ ನಿರ್ವರ್ತಿಸಿ |
ರಂಗುವಡೆದ ನವರತ್ನಮಕುಟಕುಂಡಲಕಂಠಿಕೆಕಡಗಂ ||
ಉಂಗುರಲುಳಿ ನಿಡುದೋಳ ತೊಡವು ಪೊ | ಮ್ಮೇಂಗಾಲ್ವಸದನದಿಂ ಕೈಗೈಯಲ್ |
ಜಂಗಮಕಲ್ಪಕುಜಂ ಪೂವಾಂತವೊಲರಮಗನೊಪ್ಪಿದನು || ೨೩ ||

ಸಮ್ಮೋಹನರಾಜ್ಯಾಧಿಪತಿತ್ವದ | ಕಮ್ಮಸರನ ಯುವರಾಜ್ಯಶ್ರೀಯಂ |
ನೀಮ್ಮುದದಿಂ ಧರಿಯಿಸುವುದೆನುತ ಕಡುವಿರಿದುಂ ಹರಿಸದೊಳು ||
ಸಮ್ಮತದಿಂ ರತಿಕಟ್ಟುವ ತೆಱದಿಂ | ದಮ್ಮೌಕ್ತಿಕಮಣಿಮಯಕಂಠಿಕೆಯಂ |
ಸುಮ್ಮಾನದಿನೊರ್ವಳ್ ಸುಕುಮಾರನ ಕೊರಲೊಳ್ ಕಟ್ಟಿದಳು      || ೨೪ ||

ಕೆಂಬಟ್ಟೆಯ ಮೃದುತಲ್ಪದೊಳೆಸೆದವ | ಲಂಬಿಪ ಪೊನ್ನಪಡವಿಯರುಣಾಭ್ರಂ |
ಕೊಂಬಿನೊಳಿಟ್ಟ ಕದಂಬಮಣಿಯರುಚಿಯಾರಚನೆಯನಾಂತು ||
ಇಂಬುವಡೆದ ಸುರಧನು ಮತ್ತಲ್ಲಿ ತೆ | ಱಂದೊಳೆದೊಪ್ಪುವ ಪೊಸಕುಡುಮಿಂಚುಮ |
ಡೆಂಬಂದದಿನದನೇಱಿ ಕುಮಾರಂ ಕಣ್ಗೆ ವಿರಾಜಿಸಿದಂ      || ೨೫ ||

ಕಾಳೋದಧಿಯೊಳಗಡೆ ಕಡಲುರಿ ಕಾ | ರ್ಗಾಲದ ಕಾರ್ಮುಗಿಲೊಳ್ ಮುಗಿಲಗ್ನಿ ತ |
ಮಾಲವನಾಂತರದೊಳ್ ಪಂಚಮಹಾಶರನುದ್ಧತತೇಜಂ ||
ಡಾಳಿಸಿ ಪಲವುಂ ಪರಿಜಾದಂದದಿ | ಕಾಳದೊಳುಜ್ಜ್ವಲಿಸುವ ಕರದೀಪ |
ಜ್ವಾಲೆ ಕರಂ ಕಣ್ಗೆಸೆದುದು ತತ್ಸುಕುಮಾರೋದ್ವಾಹದೊಳು       || ೨೬ ||

ಉಡುಪಾನನೆಯರುಲಿವ ಧವಲಧ್ವನಿ | ಯಡಸಿದ ಕಹಳೆಯೆನಲ್ ಪೊನ್ನಂದಳ |
ವಡರಿದ ಮದವಣಿಗನ ಮುಂದೆಯ್ದುವ ನೃಪತಿಲಕರ ಪಲವು ||
ಕೊಡೆಯಾಗಸಮಂ ಪಂದಲಿಸುತ್ತಂ | ನಡೆತರೆ ನನೆವಿಲ್ಲಂ ರಿಪುದುರ್ಗಕೆ |
ನಡೆಯಿಪ ಗಡಣದ ನಡೆಚಪ್ಪರಮೆನಲೆಸಕವಡೆದುದಾಗ   || ೨೭ ||

ತಂಬಿವಸುಳೆ ಝೆಂಕರಿಸುವ ತಪನೀ | ಯಾಂಬುಜಮೋ ಚಿತ್ತದ ರತಿಯೂದುವ |
ಕಂಬುಗಳೋ ಎಂಬಂದದಿ ಕೇಳ್ವರ ಕಿವಿಗಮರ್ದುಣಿಸಾಗಿ ||
ಇಂಬುವಡೆದ ಶೋಭನಮಂ ಪಾಡುವ | ಬಿಂಬಾಧರೆಯರ ನಿಜಮಾನಿತಮುಖ |
ಬಿಂಬಮುಮಾನುಣ್ಗೊರಲುಂ ಕಣ್ಗೆ ಮನೋಹರಮೆಯ್ದಿದುದು   || ೨೮ ||

ಕಡುಸೊಗಯಿಸುವುಗುರ್ವೆಳಗುಮನಲರ್ಗ | ಣ್ಗೆಡೆವೆಳಗುಮನೊಡಗಲಸುತ್ತಕ್ಷತೆ |
ಯಿಡುವ ನಿಬಿಡಕುಚೆಯರ ಮಧ್ಯದೊಳೆಯ್ತಂದಂದಳವಿೞಿದು ||
ಸಡಗರದಿಂ ಮಧುಪರ್ಕವಿಧಿಯನಾಂ | ತುಡುಪಮುಖಿಯ ಮುಂದಣ ತೆಱೆಯೊತ್ತಿನ |
ಬಿಡುಮುತ್ತಿನ ಮೆಟ್ಟಕ್ಕಿವೆಡಗೆಯೇಱಿದನರಮಗನಾಗ    || ೨೯ ||

ಅನ್ನೆಗಮುತ್ತಮಲಗ್ನದ ಬರವಿನ | ಸನ್ನೆವಱೆಯಿನೋಸರಿಸುವ ಜವನಿಕೆ |
ಯನ್ನೋಡುವ ಜನಜಾಲದಿನಂಗಜನೃಪವರನನುಮತದಿ ||
ರನ್ನದ ಮಂಡಪವೆಂಬಂಕದ ಕಳ | ದಿನ್ನಗೆಗಣ್ಣ ಕಡೆಯ ಕೂರಸಿಯಿಂ |
ಚೆನ್ನಿನೆಸೆವ ಮದವಕ್ಕಳ್ಮಾಸಾಳಂದದಿನೊಪ್ಪಿದರು         || ೩೦ ||

ಏೞ್ವ ಪುಳಕವೆಸಕದ ಮೋಹನದೊಳ | ಗಾೞ್ವ ಮನಂ ಮೆಯ್ನವಿರಮೊದಲ್ಗಳು |
ಗುೞ್ವ ಬೆಮರ್ ಬೆರ್ಚುವ ಧೀರತ್ವಂ ವೈವರ್ಣತ್ವವನು ||
ತಾಳ್ವ ಮೊಗಂ ತವಕಿಪ ತನು ತೂಳಂ | ಗೊಳ್ವಂಗಂ ಹರ್ಷಜಲಂ ತೀವಿದ |
ಬಳ್ವಳಿಕೆಯ ನೋಟಂ ಕಣ್ಗೊಪ್ಪಿದುವಾನೃಪಮಿಥುನದೊಳು       || ೩೧ ||

ಮದವನ್ಮದನಮತಂಗಜಮಿಥುನಂ | ಸದಮಲತರನವಶೀಕರಮಂ ಸ |
ಮ್ಮದದಿಂ ಭಾಸಿಪ ಭರಿಕೈಯೆತ್ತುತ್ತೊಂದೊಂದಱ ಮೇಲೆ ||
ಉದುರಿಸುವಂತುನ್ಮತ್ತಪ್ರಾಯದ | ಮದವಕ್ಕಳ್ ಮೌಕ್ತಿಕದಕ್ಷತೆಯಂ |
ಪದಪಿಂದೋರೊರ್ವರ ಮಣಿಮಯಮಸ್ತಕದೊಳ್ ಚೆಲ್ಲಿದರು      || ೩೨ ||

ಜಾಮಾತೃವ ಕರದೊಳ್ ತನುಜಾತೆಯ | ತಾಮರೆಗೈಯನಕಂಪಮಹೀಶಂ |
ಪ್ರೇಮದೊಳೆತ್ತಿಯೆಱೆವ ಮೃಗನಾಭಿವಿಮಿಶ್ರಿತಜಲಧಾರೆ ||
ಹೇಮಕಲಶಕುಕ್ಷಿಯಿನಿೞಿತಂದಭಿ | ರಾಮತೆಯಂ ಪಡೆದುದು ಚೆನ್ನೇಸಱ |
ಕೋಮಲಗರ್ಭದೊಳುದಯಿಸಿಯಿೞಿವೆಳಜಗುನೆಯಿದೆಂಬಂತೆ        || ೩೩ ||

ಪಿಡಿವಿಡಿವಿಡಿಯದೊಡಂಗಭವಂ ತಾಂ | ಪಿಡಿಯಿಪನೀಗೞಿಗೆಯೊಳೆನುತುಂ ಕೈ |
ಪಿಡಿಪಡಿಮೊಗದ ಸರಸಗಾರ್ತಿಯರ ಸುರತರತಿಬಿಡದಡರ್ವ ||
ಪಿಡಿಯ ನಡೆಯ ಪೀವರಕುಚಯುಗಳದ | ಪಿಡಿನಡುವಿನ ಪೆಣ್ಮಣಿಯುಂಗುಟಮಂ |
ಪಿಡಿಸಿದರಾಚಾತುರ್ಯಚತುರ್ವದನನ ಕರತಳದಿಂದ        || ೩೪ ||

ಹೋಮದ ಹೊಸದಳ್ಳುರಿ ಹಗರುಣ್ಮವ | ಹೇಮನಗಂ ತದ್ವಲಯದೊಳೆಸೆವ |
ಶ್ರೀಮದ್ಗಂಡಶಿಖರಿಯೆನಲೊಪ್ಪುವ ಸಪ್ತಪದಿಯ ಮೇಲೆ ||
ಆ ಮಾನವಚಂದ್ರಂ ತತ್ಕರದಿಂ | ಪ್ರೆಮದಿನಭಿನವರೋಹಿಣಿಯೆನಿಪಾ |
ಭಾಮೆಯ ಮೃದುಪಾದಂಬಿಡದತಿಮುದದಿಂ ಮೂವಳಸಿದಿನು       || ೩೫ ||

ಈ ವಟಪಕ್ವಫಲಮೆ ಮೆಯ್ಯಂ ಪಿಡಿ | ದೀವಿಧುಮಂಡಲಮೇನುಜ್ಜ್ವಲಿಪೀ |
ಶ್ರೀವದನಕ್ಕೆಣೆ ಗಡ ಕಡುಚೋದಿಗಮಂ ಸಲೆ ಚೆನ್ನಾಗಿ ||
ಭಾವಿಸಿ ನೋಡಿಯೆನುತ ತೋಱುವಪೊಲ್ | ಭಾವಕಿಯರ್ ಮಾಣಿಕಮಣಿದೀಪಂ |
ತೀವಿದ ಮೌಕ್ತಿಕದಾರತಿಯಂ ಪಿಡಿದೆತ್ತಿದರಾಪ್ರಿಯರ್ಗೆ     || ೩೬ ||

ಅಂಗಜಪಂಚಫಣೋರಗನಾದಿ | ವ್ಯಾಂಗದೊಳುದ್ಭವಿಸಿದ ಕಿಱುಮುತ್ತಿನ |
ಜಂಗುಳಿಯಂ ತದ್ವದನಂಗಳಿನೋವದೆ ಹೆಱುವಂದದೊಳು ||
ಮಂಗಳಮಯಮೂರ್ತಿಗಳೆನಿಪಾಮಿಥು | ನಂಗಳ ಮಣಿಮಸ್ತಕದೊಳ್ ನವಶತ |
ಕಂಗಳನಿಕ್ಕುವನೀಲಾಂಬಕಿಯರ ನಿಡುಗೈಯೊಪ್ಪಿದುವು || ೩೭ ||

ಮುಕುರಮುಖದ ಮುಗುಳ್ದಬ್ಜಕುಚಂಗಳ | ಸಕಲಶಶಾಂಕಲಲಿತನಿಟಿಲದ ನವ |
ಪಿಕವಚನದ ಪೊಸಪೀಲಿದುಱುಂಬಿನ ಪಿಂಡುಪಱಮೆಗುರುಳ ||
ವಿಕಸಿತವಿಚಕಿಲಸೌಗಂಧದ ಚಂ | ಪಕನಾಸಿಕದ ನವೀನಪ್ರಮದಾ |
ಪ್ರಕರಂ ತತ್ಪ್ರಭುವಂಶಮೇರುವನೊಲವಿಂ ಹರಸಿದರು     || ೩೮ ||

ಹರವರಿಯಾಗಿ ಹಲವು ದಿಙ್ಮುಖದೊಳ್ | ಪರಕಲಿಸಲಿ ನಿನ್ನ ಯಶೋವಲ್ಲರಿ |
ಹರವಸದಿಂ ನಿನಗಿದಿರಾದಗಿಯರೆನಿಪ್ಪಾರಾತಿಗಳ ||
ಹರಣಂ ಹೌವನೆ ಹಾರಲಿಯೆನುತುಱೆ | ಹರಸಿ ತಳಿದರೆಳೆಮುತ್ತಿನ ಸೇಸೆಯ |
ಹರಲಂ ಹೊಸಹರೆಯದ ಮುತೈದೆಯರರಸನ ಸಿರಿದಲೆಗೆ || ೩೯ ||

ತದನಂತರದೊಳುೞಿದ ವಿಧಿಗಳನುರು | ಮುದದಿಂ ತೀರಿಸಿ ಸೌಂದರತೆಯ ಸಂ |
ಪದದೊಳ್ ಸಜ್ಜುಕಸರನಂ ರತಿಯಂ ಗೆಲ್ದು ಬಿರುದನಾಂತು ||
ಮದುವೆತ್ತಾಮದವಕ್ಕಳನುತ್ಸವ | ಮೊದವೆಯೊಸಗೆವಾಡಂ ಪಾಡುತ ಕಡು |
ಚದುರೆಯರಾಳಿಯರೊಲವಿಂ ಮನೆದುಂಬಿಸಿದರ್ ವಿಭವದೊಳು    || ೪೦ ||

ಮನೆದುಂಬಿಸಿ ಮತ್ತಾನೃಪಮಿಥುನವ | ನನುರಾಗದಿ ಪಲಪರಲ ಪಸೆಗಳೊಳ |
ಗಿನಿಸುಗೞಿಗೆ ಕುಳ್ಳಿರಿಸಿ ಹರಿಸಿಯೇೞಿಸಿಯಾಯೆಡೆಯಿಂದ ||
ಮಿನುಗುವ ಮಂಚವನೇಱಿಸಿ ಪೊಸವೂ | ಪನಿನೀರ್ಗಪ್ಪುರವೀಳೆಯ ಸಿರಿಗಂ |
ಪಿನ ಪುಟಿಕೆಗಳನಿರಿಸಿದರ್ ಸಂಭ್ರಮದಿಂದವಳಾಳಿಯರು    || ೪೧ ||

ನೀನೆಳಗಿಳಿಗರನೇಱಿಲ ಪಣ್ಗುಡು | ನೀನಂಚಗೆ ಪಾಲೆಱೆ ನೀನಳಿಗೆ ನ |
ವೀನಕುಸುಮರಸವಿಡು ನೀನಾಬಾಳಾಂಕಿಗೆ ಕೂೞಿಕ್ಕು ||
ನೀನನ್ಯಭೃತಕ್ಕಾಮ್ರದ ಕೊನರ್ಗುಡು | ಸಾನಂದದಿನೆನುತಿಳಿಲೆಯ ಬಳಸಿನ |
ಮಾನಿನಿಯರ್ ಜಾಣ್ಣುಡಿದೊಯ್ಯನೆ ಮನೆಯಿಂ ಜಾಱಿದರತ್ತ      || ೪೨ ||

ಮೊಲೆಗಳ ಮೇಲೆ ದುಕೂಲದ ಸೆಱಗಂ | ಬಲಗೈಯೊಳ್ ಪಿಡಿದೊಯ್ಯನೆಡದ ಕರ |
ತಳದ ಬೆರಲನಲರ್ಗಣ್ಗೆ ಮಱೆಯುಮಂ ಮಾಡಿ ಮೊಗಂಬಾಗಿ ||
ಕೆಲದಿನಿಯನನೋವದೆ ಕಿಕ್ಕಿಣ್ಣಿಂ | ದೊಲವಿನೊಡನೆ ಬೆರದಾನಸುನಾಣಿಂ |
ಲಲಿತಲತಾಂಗಿ ನಿರೀಕ್ಷಿಪ ಬೆಡಗನದೇನಂ ಬಣ್ಣಿಪೆನು       || ೪೩ ||

ಪೊಂಜೆಳೆಮಂಚದ ಮೇಲೆ ಪೊರೆಯೊಳೇ | ಱುಂಜವ್ವನೆ ಲಜ್ಜಾತುರೆ ಕಾಂಚನ |
ಕಂಜವದನೆ ತಲೆವಾಗಿರೆ ಕಾಣುತ ಮನದೊಳಲಂಪು ಕರಂ ||
ಸಂಜನಿಯಿಸೆ ತಿರ್ದುತ ಕುಟಿಲಾಳಕ | ಮಂಜರಿಯಂ ಮೆಲ್ಲನೆ ಮೆಯ್ಮುಸುಕಿದ |
ಮುಂಜೆಱಗಂ ಜಾಱಿಸಿ ಜಾಣಿಂದಿನಿಯಂ ಮಯ್ಸೋಂಕಿದನು          || ೪೪ ||

ಕುರುಳಂ ತಿರ್ದಿ ಕುಡುಕಿ ಸವಿದುಟಿಯಂ | ವರಕಲಶಸ್ತನತಟದೊಳ್ ಪಲ್ಲವ |
ಕರಮಿಟ್ಟೊಯ್ಯನೆ ಸೋಂಕಿ ಕದಪನಲುಗಿಸಿ ಪುಳಕಂಗಳನು ||
ಮುರಿದೇೞಿಸಿ ಕಾತರಮಂ ಕೊನರಿಸಿ | ಮರಳಿ ಮರಳಿಯಮರ್ದಪ್ಪಿಯರಸನೆಳ |
ವರೆಯದ ವನಿತೆಯ ನಾಣಂ ಪಿಂಗಿಸಿ ನೆರೆದಂ ನಲ್ಮೆಯೊಳು            || ೪೫ ||

ಚುಬುಕಾಗ್ರಮನೊಯ್ಯನೆ ಪಿಡಿದಲುಗಿಸಿ | ಕಬಳಂಗೊಂಡು ಸೊಗಸುದಂಬುಲಮಂ |
ನಿಬಿಡಕುಚಕೆ ಪೇರುರಮಂ ಸಂಧಿಸಿ ಬೆಂಗಡೆ ಭಾರೈಪಾ ||
ಕಬರಿಯನೞಿದು ನಖಕ್ಷತಕುಸುಮ | ಸ್ತಬಕಮನಂಗಲತಿಕೆಗಾಗಿಸಿ ತ |
ನ್ನಬಲೆಯ ಬಗೆಯಂ ಬಂದಿವಿಡಿದು ಕೂಡಿದನಾಕಾದಲನು            || ೪೬ ||

ಅರಲ ಸರಲ ಸೊನ್ನಾರಂ ಪಲಪೂ | ಪರಕಲಿಸಿದ ಪಾಸೆಂಬಗ್ಗಿಟದೊಳ |
ಗಿರಿಸಿ ಮಿಸುನಿಗರುಗಳನುಗುರಿೞಿತದ ಮಾಣಿಕವತ್ತಿಗೆಯ ||
ಬೆರಸಿಯಲಂಪಿನ ಬೆಳುಗಾರಮನಿ | ಟ್ಟುರುಪಿ ರತೋದ್ದೀಪನದುರಿಯಿಂ ಕಡು |
ವಿರಿದುಂ ಬೆಚ್ಚಂದದಿನಮರ್ದಪ್ಪಿದರೊಲ್ಮೆಯೊಳಾಪ್ರಿಯರು        || ೪೭ ||

ಅವಳ ಮುಖಾಬ್ಜಕೆ ತನ್ನ ಮುಖೇಂದುಗೆ | ಯವಳ ಕುಚಾದ್ರಿಗೆ ತನ್ನುಗುರ್ವಜ್ಜರ |
ಕವಳ ನಯನಭೃಂಗಕೆ ತನ್ನಯ ಮೆಯ್ಗಾಗಿನ ಸಂಪಗೆಗೆ ||
ಅವಳೂರುಮನೋಭವಗಜಹಸ್ತಕೆ | ತವಕದಿ ತನ್ನಯ ಕೇಸರಿಮಧ್ಯಕೆ |
ಯವನಿಪನರಸುತನದಿ ಕೆಳೆತನಮಂ ಮಾಡಿ ನೆರೆದನಾಗ     || ೪೮ ||

ವರಮೋಹಮನೋಧರ್ಮಮೆ ಧರ್ಮಂ | ಸುರತಸಮಯಮೆ ಸಮಯಮಂಗಜನೇ |
ಪರದೈವಂ ಪ್ರಿಯದರ್ಶನಮೆ ಲಸದ್ದರ್ಶನಮೆಂದೆಂಬಾ ||
ಕೊರಲ ಸರದ ಗುರುಮಮಂತ್ರಮನಿರದು | ಚ್ಚರಿಸಿ ಬೞಿಕ ಮುದ್ರೆಯನಿಡುವಂದದಿ |
ಹರಿಸದಿನುಗುರ್ಗಲೆಯಿಟ್ಟನರಸನಂಗನೆಗಾಸುರತದೊಳು  || ೪೯ ||

ಪೊಸಮಂಚದ ಮೇಗಣ ಕೆಂಬಟ್ಟೆಯ | ಮಿಸುಗುವ ಪಾಸೆಂಬಕ್ಖಡದೊಳು ನವ |
ಘುಸೃಣವಿಮಿಶ್ರಿತಗಂಧರಜಮನಂಗದೊಳಿಟ್ಟಾತುರದಿ ||
ನಸುಸಡಿಲಿದ ತಕ್ಕೆಯ ವಿನ್ನಾಣದಿ | ನಸಮಾಯುಧನೃಪನೀಕ್ಷಿಸುತಿರೆ ಭರ |
ವಸದಿಂ ಮೋಹನಮಲ್ಲಗಲಹಮಂ ಮಾಡಿದರಾಪ್ರಿಯರು           || ೫೦ ||

ಕಿಱುಮುತ್ತಿನ ಮಣಿಯೆಂಬ ಶಿಶುಗಳಂ | ಹೆಱುವ ಸಮಯದೊಳಗಾವೇದನೆಯಿಂ |
ದುಱದೆ ನರಲ್ಲ ಸುಕರಶಂಖಧ ಮಾೞ್ಕೆಯೊಳಾಸುಸಿಲಿಂದ ||
ಕಿಱುಬೆಮರ್ವನಿಯೊಗೆವವಸರದೊಳ್ ಬಾ | ಯ್ದೆಱೆಯದೆ ಬಣ್ಣಸರಮನುಚ್ಚರಿಸುವ |
ನೆಱೆವೆಱೆಮೊಗದಬಳೆಯ ನುಣ್ಗೊರಲತಿರಂಜನೆವಡೆಯಿತ್ತು        || ೫೧ ||

ಸುದತಿಯ ಸುಕುಮಾರಾಂಗಲತಿಕೆಯೆನೆ | ಮೃದುಕರತಲಪದತಲ ಪಲ್ಲವಮೆನೆ |
ಪುದಿದಲಘಸ್ತನ ಕೃತಕಾಚಲಮೆನೆ ಪೊರ್ಕುೞ್ ಸರಸಿಯೆನೆ ||
ಸದಮಲತರಲಾವಣ್ಯಂ ಕೃತ್ರಿಮ | ನದಿಯೆನೆ ನಿಡುಸುಯ್‌ಮೆಲ್ಲೆಲರೆನೆ ಸ |
ಮ್ಮದದಿಂ ಸುರತವನಕ್ರೀಡೆಯೊಳೆಸದಂ ಭೂಮೀಶ್ವರನು || ೫೨ ||

ಸೆಳೆಮಂಚದ ಕಾಲೆಂಬ ಠವಣೆಕೋ | ಲೊಳಗೊಪ್ಪುವ ಪಾಸೆಂಬ ಕವಳಿಗೆಯೊ |
ಳೆಳಜವ್ವನೆಯವಯವಮೆಂದೆಂಬ ಲಸತ್ಪುಸ್ತಕದೊಳಗೆ ||
ತೊಳಗುವ ಮದನಾಗಮಪಂಚಿಕೆಯಂ | ತಳುವದೆ ಬರೆವಂದದಿನುಗುರ್ಗೊನೆಯಿಂ |
ಕಲೆಗಳ ನಿರದಿಟ್ಟಂ ಪ್ರಿಯನೆಂಬ ಸುಮೋಹನಪಂಡಿತನು   || ೫೩ ||

ಮುಗುದೆಯ ನೆಲೆಮೊಲೆಯೆಂಬ ಮಿಸುನಿಗುಂ | ಡಿಗೆಗಳನುರದೊಳಗಿಟ್ಟುಜ್ಜ್ವಲಿಸುವ |
ಮೊಗದಿಂ ಮೊಗಕೆ ಮಿಸುಪ ತಾಂಬೂಲದ ರಸಮಂ ಮುಕ್ಕಳಿಸಿ ||
ಉಗುಳುತ ನಳಿಗುರುಳೆಂಬ ತೆರೆಗಳಂ | ಮಿಗೆ ಕಲಕುತ ಸುರತಾಂಬೋನಿಧಿಯೊಳ |
ಗೊಗುಮಿಗೆ ತೇಂಕಾಡಿದನರಸಂ ಮದನಾಗ್ನಿ ತವಿಪ ತೆರದಿ            || ೫೪ ||

ಉರುಹರ್ಷಾಶ್ರುಜಲದ ತನುಗಂಧದ | ಸಿರಿಗಂಪಿನ ಸುಲಿಪಲ್ಲಕ್ಷತೆಗಳ |
ತರಳವಿಲೋಚನಕುಮುದದ ಸವಿದುಟಿಯಮೃತದುಗುರ ಸೊಡರ ||
ಸುರಭಿಶ್ವಾಸಲಸದ್ಧೂಪದ ಬಂ | ಧುರಕುಚಫಲದರ್ಚನೆಯಿಂ ಪ್ರಾಣೇ |
ಶ್ವರನಂ ಪೂಜಿಸಿ ಪಡೆದಳ್ ಸತಿ ಸಂಮೋಹನಮುಕ್ತಿಯನು           || ೫೫ ||

ಮೊಱೆಯನುೞಿದ ಮೆಲ್ನುಡಿ ಮೊನೆಮಸೆವ | ಕ್ಕಱು ಬಾಯ್ದೆಱೆಗೆಡೆವಿಡದೆಡೆಯಾಡುವ |
ನಱುದಂಬಲವೆಡವಱಿಯದ ಕೊರಲುಲಿಯೆವೆಯಲುಗದ ನೋಟ ||
ಸಱಿ ಬಿಡದಪ್ಪು ರಸವನೊಸರ್ವಿಂದುಟಿ | ಕುಱುಪನಿಡುವ ಕೂರುಗುರೞಿದಲಸಿಕೆ |
ನೆಱೆಸೊಗಯಿಸಿದುವು ನವಸುರತಕ್ರೀಡೆಯೊಳಾದಂಪತಿಗೆ  || ೫೬ ||

ಕೊರೆಲೊಳೆಸೆವ ಕೂಜಿತದ ಸುಮಂತ್ರದಿ | ಬೆರಲ ಕೊನೆಯ ಬರೆಪದ ಬಾಸುೞ ಬಂ |
ಧುರಯಂತ್ರದಿ ಷೋಡಶಕಲೆಗಳ ಕಾಲಮನಱಿದುಪಚರಿಪಾ ||
ವರತಂತ್ರದಿನಿನಿದುಟಿಯೌಷಧದಿಂ | ತರುಣಿಯ ಮೆಯ್ಯಾಲಸ್ಯದ ರುಜೆಯಂ |
ಪಿರಿದುಂ ಪಿಂಗಿಸಿದಂ ಪ್ರಿಯದಿಂ ಪ್ರಿಯನೆಂಬಱಿಕೆಯ ವೈದ್ಯಂ        || ೫೭ ||

ತೋರಮೊಲೆಯ ಬಲ್ಗೊಡದ ಬೆಮರ ಬೇ | ನ್ನೀರಂ ಮೀಯಲೆಱೆದು ಬಾಯ್ಗೂಟಮ |
ನಾರೋಗಣೆಯಿತ್ತಲರ್ಗಣ್ಗಳ ಬೊಂಬೆಯ ಪಡಿನೆೞಲೆಂಬಾ ||
ಚಾರುವಿಚಿತ್ರಾಂಬರಮಂ ವೊದೆಯಿಸಿ | ಕೂರುಗುರ್ಗಲೆಯಾಭರಣಮನಿಟ್ಟು ಮ |
ನೋರಮಣನನುಪಚರಿಸಿದಳಂಗನೆಯಾನವಸುರತದೊಳು            || ೫೮ ||

ಬೆನ್ನನಲೆವ ಕಲಿಗಂಟು ಕದಕ್ಕದಿ | ಪುನ್ನತಕುಚತಟದೊಳ್ ನರ್ತಿಪ ಪೊಸ |
ರನ್ನದ ಪಂಚಸರಂ ಕದಪಂ ಚುಂಬಿಪ ಕಿವಿಯೋಲೆಗಳ ||
ಚೆನ್ನಿಯ್ದಿಲ್ ನೊಸಲೊಳ್ ಕುಣಿವಳಕಂ | ಪೊನ್ನಂದುಗೆಯ ಝಣತ್ಕೃತಿಗಳ ರವ |
ದಿನ್ನೆಱೆಸೊಗಯಿಸಿದಳ್ ಸುದತೀಮಣಿಯಾಪುಂಭಾವದೊಳು       || ೫೯ ||

ಅಳಕಾನೀಕವಳಿಗಳಂ ತಾಡಲ್ | ಬೆಳತಿಗೆಗಣ್ ಬೆಳ್ಳರಲಂ ತಾಡಲ್ |
ನಳಿತೋಳ್ ಕೊಂಬುಗಳಂ ತಾಡಲ್ ಚೆಂದುಟಿ ಕೈಪಜ್ಜೆಗಳು ||
ಎಳದಳಿರಂ ತಾಡಲ್ ತೆಂಗಡೆಯಿಂ | ಸುೞಿವ ಸುರಭಿವಾಯುವ ತಾಟನದಿಂ |
ತಳುವದೊಲೆವ ಲತೆಯಂತೆಯುಪರಿರತದಂಗನೆಯೊಪ್ಪಿದಳು        || ೬೦ ||

ಸಿರಿಮೊಗಮೆಂಬ ಶಶಾಂಕನ ನೆಮ್ಮಿದ | ಕರುಳೆಂಬೆಳಗೞ್ತಲೆ ಮುತ್ತಿದುದೆನು |
ತುರುಮುದದಿಂ ಪೆಱಗಡೆ ನಲಿದಾಡುವ ತಮದೊಡ್ಡಣದಂತೆ ||
ಕೊರಲ ಸರದ ಕಿಱುಮೊೞಗಂ ಲಾಲಿಸಿ | ಹರಿಸಂ ಮಿಗೆ ನರ್ತಿಪ ನವಿಲಂತಿರ |
ದುರಳ್ವ ಕಬರಿ ಕುಣಿದುದು ಬೆಂಗಡೆ ಪುರಷಾಯಿತದಂಗನೆಗೆ          || ೬೧ ||

ಅಳಿಕದೊಳಿೞಿವಳಕಗಳೆಂಬೆಳಗ | ೞ್ತಲೆಯಂ ನುಣ್ಗೊರಲೊಳು ರಂಜಿಸುವುಗು |
ರ್ಗಲೆಯೆಂಬರೆವೆಱೆಯಂ ಕಾಣುತ ನಡನಡುಗುವ ಕೋಕಮೆನೆ ||
ನೆಲೆವೆರ್ಚಿದ ನಿಡುಸುಯ್ಯೆರಲುಪದಿ | ನಲುಗುವ ಪೊಂದಾವರೆಗಳ ಮುಗುಳೆನೆ |
ಲಲನಾಮಣಿಗೆ ಕದಕ್ಕದಿಸುದುವು ಕುಚಂ ಪುಂಭಾವದೊಳು           || ೬೨ ||

ಪಸುಳೆವರೆಯದಂದಿಂದವೆ ತನ್ನೊಡ | ನೊಸೆದೆರವಿಲ್ಲದೆ ಕೂಡಿ ಕೆಲಂಬಾ |
ೞ್ದೆಸಕವಡೆದ ನಿದ್ರಾತರುಣಿಯನಾಧರಣೀಪಾಲಕನು ||
ಅಸಿಯಳದೊರ್ವಳ್ ದೊರಕಲ್ಕಾಣು | ತ್ತಸವಸದಿಂ ಪೊಱಮಡಿಸಿದನೆಂತೆನೆ |
ಪೊಸತಂ ಕಂಡು ಪೞದನಿೞಿಕೆಯ್ಯದೆ ನಿರ್ನೆರಮಿಹದುಂಟೇ            || ೬೪ ||

ಬೆಳತಿಗೆಗಣ್ಣ ಬಿೞಲ್ಬೇಟದ ಬೆಳೆ | ಬಲುಹುಡುಗಲ್ ಬೀಯಲ್ ನುಣ್ಗೊರಲುಲಿ |
ಬೞಲಲ್ ಸುಯ್ ತಡಬಡಿಸಲ್ ಬಾಯ್ಗೂಟಂ ದಣಿಯುತ್ತಿರಲು ||
ನಳಿತೋಳಮರ್ದಪ್ಪುಗೆ ನಸು ಜರಿಯಲ್ | ಕಲೆಗಾಡುವ ಕಯ್ಯಲಸಲ್ ಬಗೆ ನೆಱೆ |
ಮುೞುಗಲಿನಿದಿನೊಳ್ ಸುಸಿಲ ಕಡೆಯ ಮೂರ್ಛೆಯನೈದಿದರವರು || ೬೫ ||

ಕೆಂಜೆರೆಗಣ್ ಕೆದರ್ದೊಪ್ಪುವ ಕಂಠಿಕೆ | ಕಂಜಕುಸುಮಪರಿಮಳಮುಣ್ಮುವ ಪೊಸ |
ಪೊಂಜೆಳೆಮೆಯ್ ಪೊಗರೇೞುವ ಮೊಗವುಚ್ಚಳಿಸುವ ನಿಡುಸುಯ್ಲು ||
ಗಂಜಿದಳಕತತಿ ಗುಜ್ಜುವಡೆದ ಮೊಲೆ | ರಂಜಿಸೆ ರತ್ಯಂತಶ್ರಮಜಲಮಂ |
ಮುಂಜೆಱಗಿನ ಮೆಲ್ಲೆಲರಿಂದಾಱಿಸುತೊಪ್ಪಿದಳಾತರುಣಿ            || ೬೬ ||

ಉಗುರಿಱಿತದೊಳುಣ್ಮುವ ಕಲೆಯಸುಕೆಯ | ಮುಗುಳಿನಿಸುದುರಿದ ಮಲಯರುಹಮೆ ಮಗ |
ಮಗಿಸುವ ಮಲ್ಲಿಗೆ ಮೊಳೆವೆಳಬೆಮರ್ವನಿ ಪೊಸಮಾವಿನ ಮೊಗ್ಗೆ ||
ಪೊಗರೇಱುವ ಮೊಗಮಂಬುರುಹುಂ ಬೆಂ | ಡೊಗೆವಲರ್ಗಣ್ ಕುವಲಯಮಾಗಲ್ಕಾ |
ಮುಗುದೆಯು ಸುಸಿಲ ಕಡೆಯೊಳೈಸರಲ ಕರುವಿನಂತೊಪ್ಪಿದಳು    || ೬೭ ||

ಬೞಲದೆ ಬಹುರತಿಬಂಧಕ್ರೀಡೆಗೆ | ಕಳಿಯದಲಂಪಂ ಬಗೆಯೊಳ್ ಪೊಂಪುಳಿ |
ಗೊಳಿಸುವ ಬಲ್ಲಹನುಜ್ಜ್ವಲಿಪಾನನಮಂ ತುಱುಗೆವೆಗಳನು ||
ಹಳಚದೆ ನೀಡುಂ ನಿಟ್ಟಿಪ ನೀಱೆಯ | ತಳತಳಿಸುವ ಬೆಳತಿಗೆಗಣ್ಗಳ ತನಿ |
ವೆಳಗೆ ಬಲಿದು ಬೆಳಗಾದಂದದಿ ಹಳಹಳಚನೆ ಬೆಳಗಾಯ್ತು || ೬೭ ||

ಆ ಚೆನ್ನೇಸಱುದಯದೊಳ್ಕೆಲದ ಸು | ಲೋಚನೆಸಹಿತುಪ್ಪವಡಿಸಿ ನವಹಿಮ |
ರೋಚಿರ್ಮಂಡಲಮುಖಮಂ ತೊಳದರ್ಚಿಸಿಯರ್ಹತ್ವತಿಯಂ ||
ಆಚಾರ್ಯರ ಪದಯುಗದೊಳ್ ನೊಸಲಂ | ಚಾಚಿ ವಿಭೂಷಣಮಿಟ್ಟು ಸುರಭಿನಾ |
ರಾಚಂ ನವತನುವಿಡಿದಂದದಿ ಕುವರಂ ಕಣ್ಗೊಪ್ಪಿದನು    || ೬೮ ||

ಅರಿಯಜಯನವನೀಚಕ್ರಾಧೀಶ್ವರ | ನುರುವಿಭವಂ ಶ್ರೀಮುಖನತಿಸೌಮ್ಯಂ |
ತರುಣೀಜನಮನ್ಮಥನಾಹವರಾಕ್ಷಸನಧಿಕಪ್ರಭವಂ ||
ವರವಿಕ್ರಮನುನ್ನತಶುಭಭಾವಂ | ಸರಸಜನಾನಂದಕರಂ ವಿಭುವ |
ತ್ಸರವೆಂಬಂದದಿನತಿಶೋಭಿಸಿದಂ ಪ್ರಭುಕುಲಮಣಿದೀಪಂ            || ೬೯ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಂ ಪಡೆದತ್ತೆಂಟನೆಯ ಮಿಸುಪ ಸಂಧಿ        || ೭೦ ||

ಎಂಟನೆಯ ಸಂಧಿ ಸಂಪೂರ್ಣಂ