ಸೂಚನೆ || ಭರತೇಶನ ಬೞಿಗೆಯ್ದಿ ಮಗುೞ್ವವ |
ಸರದೊಳ್ ಗಂಗೆಯೊಳಾದುಬ್ಬೆಗಮಂ |
ಪರಹರಿಸಿದಳಾಗಂಗಾದೇವತೆ ಜಯನೃಪಚಂದ್ರಮಗೆ ||

ಬಱಿಕ ಸುಲೋಚನೆಯಿಂ ನೇರ್ಗಿಱಿಯಳ್ | ನಳಿನವಿಲೋಚನೆ ಲಕ್ಷ್ಮೀಮತಿಯಂ |
ವಿಳಸದ್ವೈಭವದಿಂ ರವಿಕೀರ್ತಿಗೆ ಕೈಧಾರೆಯನೆಱೆದು ||
ಇಳೆಗಧಿನಾಥನಕಂಪನರೇಂದ್ರಂ | ಲಳಿತಾಂಬರಗಜಭೂಷಣತುರಗಾ |
ವಳಿಯಿಂದೊಸಗೆಗೆ ಬಂದ ನರಾಧೀಶರನುಪಚರಿಸಿದನು    || ೧ ||

ಇಂತುಪಚಾರಂ ಮಾಡುತ್ತವರಂ | ಸಂತಸದಿಂ ಬೀೞ್ಕೊಟ್ಟು ಬೞಿಕ ಭೂ |
ಕಾಂತನಕಂಪಂ ಸುಗುಣೆ ಸುಲೋಚನೆಗಂ ಲಕ್ಮೀಮತಿಗಂ ||
ಚಿಂತಾರತ್ನಂ ಚೈತನ್ಯಂಬಡೆ | ದಂತಡುವಲಿಯಂ ದಣಿವಂತಿತ್ತಾ |
ಕಂತುಸದೃಶಜಯನೃಪನಂ ರವಿಕೀರ್ತಿಯುಮಂ ಬೀೞ್ಕೊಟ್ಟಂ     || ೨ ||

ಪೀಯೂಷಾಂಬುಧಿಯಿಂ ಭಾರ್ಗವಿವೆರ | ಸಾಯಿಂದ್ರಾವರಜಂ ಪೊಱಮಡುವಂ |
ತಾಯತನೇತ್ರೆ ಸುಲೋಚನೆಗೂಡಿಯಕಂಪನನಗರಿಯನು ||
ಆಯತಿಯಿಂದವೆ ಪೊಱಮಟ್ಟಂ ಜಯ | ಜಾಯಾಪತಿ ಜಯಭೂವರನಭಿನವ |
ಕಾಯಭವಂ ಖರಕಿರಣಪ್ರಭವಂ ಕುಲಿಶಾಯುಧವಿಭವಂ   || ೩ ||

ಎಡಬಲದೊಳಗೆಣ್ಬರ್ ಕೋಮಲೆಯರ್ | ಪಿಡಿಯನಡರಿ ಚಾಮರಮಂ ಬೀಸಲ್ |
ಪೊಡವಿಯೆಱೆಯರೆಣ್ಫಾಸಿರಮಕುಟಧರರ್ ಬಿಡದೋಲೈಸಿ ||
ನಡೆತರೆ ನವಪಟ್ಟದ ಪೇರಾನೆಯ | ನಡರಿ ಕರಂ ಪೊಗೞ್ವಕ್ಕರಿಗರ ಪೊಸ |
ನುಡಿಯಂ ಲಾಲಿಸುತಾಪುರಮಂ ಪೊಱಮಟ್ಟನವನಿಪಾಲಂ           || ೪ ||

ಪೊಡವಿ ನೆಱೆಯದಾಪಡೆಗೆ ಫಣೀಶನ | ಪೆಡೆ ಸತುಗುಂದಿತದಱ ಬಿಣ್ಪಿಗೆ ಬಾನ್ |
ಗಡಿಗೆಟ್ಪಿತು ತತ್ಪದದಿಂದೊಗೆದು ನೆಗೆವ ಧೂಳೀತತಿಗೆ ||
ಪೊಡೆವ ಪಲವು ವಾದ್ಯಧ್ವನಿಗೆಣ್ದೆಸೆ | ಗಡೆಯುಂ ಸಾಲದು ನಿಮಿರ್ವ ಪತಾಕೆಯೊ |
ಳಡಿಗೆಟ್ಟಿತು ಪವಮಾನಂ ಮತ್ತದನೇನಂ ಬಣ್ಣಿಪೆನು      || ೫ ||

ವಾರಾಣಸಿಯನೊಲವಿನಿಂ ಪೊಱಮ | ಟ್ಟಾರಾಜೇಂದ್ರಶಿಖಾಮಣಿ ತನ್ನಯ |
ಭೂರಿಬಳಂಬೆರಸಳಕಾನಗರಿಗೆ ದಂಡು ನಡೆವ ತೆಱದಿ ||
ಧಾರಿಣಿ ಡಿಳ್ಳಯಿಸುವವೊಲ್ ಬಡಗಣ | ದಾರಿವಿಡಿದು ನಡೆತಂದಾಜಂಗಮ |
ವಾರಿಧಿಯಂತೆ ವಿರಾಜಿಪ ಗಂಗಾನದಿಯ ತಡಿಗೆ ಬಂದು    || ೬ ||

ಎನ್ನಂ ಧರಿಯಿಪ ಭುಜದೊಳ್ ಜಯಸತಿ | ಯನ್ನಲ್ಮೆಯಿನಿರಿಸುವುದೌಚಿತ್ಯಮೆ |
ಇನ್ನವಳಂ ಪಿಡಿದಸಿಧಾರೆಗೆ ಪೊಱಮಡಿಸುವದನ್ನೆವರ ||
ನಿನ್ನಂ ನೋಡೆನೆನುತ್ತಾ ನೃಪನೊಳ್ | ತನ್ನ ಮೊಗಂದಿರುಗಿದ ಭೂಭಾಮೆಯ |
ಬೆನ್ನೊಳೆಸೆವ ಮುತ್ತಿನ ವೇಣಿಯಪೋಲ್ ಸೊಗಯಿಸಿತಾಸಿಂಧು     || ೭ ||

ಗರಗರನೆಯ್ದುವ ಗಂಗಾದೇವಿಗೆ | ಧರಣೀದಯಿತೆ ಧವಲಚಾಮರಮಂ |
ಹರಿಸಮೊದವೆ ಹಲವಂ ಡಾಳಿಸುವಂದದೆ ಪಲಪಸುರ್ಗೊಡೆಯಂ ||
ಪಿರಿದುಂ ಪಿಡಿದೊಲ್ದೆತ್ತುವ ತೆಱದಿಂ | ಕರಮೊಪ್ಪುವ ಕಾಶಪ್ರಸವಂ ಸುರು |
ಚಿರತರುನಿಕುರುಂಬಂ ಬೆಳೆದೊಪ್ಪಿದುವಾವಿಕ್ಕರೆಗಳೊಳು || ೮ ||

ಪಲವಣ್ಣದ ಪಾವಸೆಗಳ್ ಪತ್ತಿದ | ಸೆಲೆಯಾಸಿಂಧುಸುದತಿ ಕೈಗೈಯಲ್ |
ಜ್ವಲಿಸುವ ಪಂಚಮಣಿಯ ಪಚ್ಚಂಬೊಲ್ ಕಣ್ಗೆ ವಿರಾಜಿಸಿತು ||
ಕಲಕುಸುಮದ ಜಂಗುಳಿಯಿರ್ತಡಿಯೊಳ | ಗಿಳೆಯ ಭಕುತತಿಂತಿಣಿಯಾತೀರ್ಥಮ |
ನೊಲವಿಂದರ್ಚನೆಗೆಯ್ವಂದದಿನತಿರಮ್ಯಂದಾಳ್ದಿದುದು   || ೯ ||

ಹರನಗಲಲ್ಕುದ್ಭವಿಸಿದ ವಿರಹದ ಪಿರಿದುಂ | ಕಲ್ನೆಲದೊಳ್ ಪಲವಗಲುಂ |
ಪರಿಯಲ್ ಪುಟ್ಟಿದ ಘನಪಾಂಥಶ್ರಮದಳುರ್ವ ನಿದಾಘದೊಳು ||
ಉರಿವ ಬಿಸಿಲ ಬಲ್ವೆಂಕೆಯೊಳಂಗದೊ | ಳಿರದುದಯಿಸಿದಾಸ್ಫೋಟಕಮೆನೆ ಬಂ |
ಧುರಮಾದುವು ಭಾಗೀರಥಿಯೊಳಗುಣ್ಮುವ ಬೊಬ್ಬುಳಿಕೆಗಳು      || ೧೦ ||

ಕರಮೆ ಕಮಾರ್ಗಂಬಿಡದೆ ಚರಿಸುತನ | ವರತಂ ಬಿಡದೆ ಕುಜಾತಿಸಮಿತಿಯಂ |
ಪಿರಿದು ತಟಸ್ಥಂಮಾಡಿದ ದಾರುಣಮಪ್ಪಾದೋಷವನು ||
ಪರಹರಿಸುವೆನೀತೆಱದಿನೆನುತ ಕ | ಮ್ಮರಿವಿೞ್ದಂತುತ್ತುಂಗಶಿಲೆಗಳಿಂ |
ಭರದಿಂ ಬಿೞ್ದು ಪರಿವ ಬಲ್ದೊಱೆಯತಿಬಂಧುರವಡೆಯಿತ್ತು        || ೧೧ ||

ಬೆರಲುದ್ದದ ದಂಟುಡಿದ ಕನಕಸರ | ಸಿರಹಲಸತ್ಕೋರಕಮೊಂದು ತೆಱಂ |
ದಿರಿದು ವಿರಾಜಿಸಿದತ್ತಾವರ್ತದ ನಟ್ಟನಡುವೆ ನಿಂದು ||
ಪರಿರಂಜಿಸುತಿರ್ಪಾಜಲದೇವತೆ | ಯರ ಪಜ್ಜಳಿಸುವ ಪಾಣಿತಳದೊಳತಿ |
ಭರದಿಂ ತಿರುಗುವ ಪೊಸಪೊಂಬೊಗರಿಯ ಪರಿಯಂ ಪೊಸಯಿಸುತ || ೧೨ ||

ನೀರಂ ತರಲೆನುತವೆ ಬಂದಾಕಾ | ಲೂರೂರ ಕುಟುಂಬನಿತಂಬಿನಿಯರ್ |
ತೀರಂಬೊಕ್ಕು ಮೊಗೆಯೆ ಬಾಗಲ್ಕಾಕೆಗಳ ಕರದ ಕೊಡನುಂ ||
ತೋರಮೊಲೆಯ ಸಾಲುಂ ಸೊಗಯಿಸಿದುವು | ವಾರಿನಿಧಿಯಜಲಮಂ ತರಲೆನುತವೆ |
ಭೋರೆನೆ ಬಂದು ಮುಸುಂಕಿದ ವೃತ್ತಪಯೋಧರಮೆಂಬಂತೆ          || ೧೩ ||

ಮತ್ತೆ ಮರಾಳಗಮನೆಯರ್ ಮೊಗೆಯಲೆ | ನುತ್ತೆ ಕೊಡನನುದಕದೊಳಗುೞಿಸೆ ಚೆ |
ಲ್ವಿತ್ತರಮಾದುದು ನಮ್ಮೀಮೋಹಕರಂಡಕದಂತೆಸೆವ ||
ವೃತ್ತಕುಚಕ್ಕೆಣೆಯೆನುತತಿಗರ್ವಂ | ಬೆತ್ತುವು ತಾವಿವೆನುತ ಕಡುಮುಳಿಸಿಂ |
ದೊತ್ತಿ ಹುಡುಕುನೀರದ್ದುವ ತೆಱನಂ ತೋಱುವ ಪಾಂಗಿನೊಳು                 || ೧೪ ||

ಮೊಗೆದುದಕವನೊಯ್ಯನೆ ನುಣ್ಗೊಡನಂ | ಮುಗುದೆಯರೆರಡುಂ ಚೆಂದಳದಿಂದವೆ |
ನೆಗಪಿ ಮನೋರಾಗದಿ ರಂಜಿಪ ಸಿರಿದಲೆಯೊಳಗೇಱಿಸಲು ||
ಬಗೆಗೊಳಿಸಿತು ಬಲ್ಲವರಂ ತಮ್ಮಯ | ಮೊಗಮೆಂಬಪರಂಜಿಯ ಕನ್ನಡಿಯೊಳ್ |
ಸೊಗಯಿಪ ತಳಿರನಿರಿಸಿ ಪೊಸಕಳಸಮನೇಱಿಸುವಂದದೊಳು         || ೧೫ ||

ಉರಿವ ಬಿಸಿಲ ಹೊತ್ತಿನೊಳೆಯ್ತರುತತಿ | ಭರದಿಂ ಜಳಕಂ ಪೊಕ್ಕುಂ ಮುೞುಂಗುವ |
ಸುರಭಿಲತಾಕೋಮಲೆಯರ ಮೇಲುದುಮಾನಿಡುದಲೆನವಿರುಂ ||
ಪರಕಲಿಸುವ ತೇಲಿ ಕರಂ ಸೊಗಯಿಸಿ | ತುರುಮುದದಿಂ ತೊಱೆವೆಣ್ಮಿಸುಗುವ ಕ |
ತ್ತುರಿಯಂ ಚಂದನಮಂ ಕಣ್ಗೊಳಿಪಂದದಿ ಲೇಪಿಸಿದಂತೆ   || ೧೬ ||

ಈ ತೆಱದಿಂ ಶೋಭಾಕರವಡೆದಾ | ಸ್ರೋತಸ್ವಿನಿಯ ಬಲದ ತಡಿವೞಿಯೊಳ್ |
ಭೂತರುಣೀಪ್ರಾಣೇಶಂ ತನ್ನ ಚತುರ್ಬಲಮಂ ಬಿಡಿಸಿ ||
ಆ ತರಳಾಕ್ಷಿ ಸುಲೋಚನೆಯಂ ವಿ | ಖ್ಯಾತರ್ ವಿಜಯಜಯಂತಾನುಜರಂ |
ಪ್ರೀತಿಯಿನಿರವೇೞ್ದವರೊಳ್ ತಾನಿಂತೆಂದು ನಿರೂಪಿಸಿದಂ || ೧೭ ||

ಸಾಮಂ ಮಾಡದಯೋಧ್ಯಾಪುರವರ | ಕೀಮೆಯ್ಯೊಳೆ ನಡೆದಾಚಕ್ರಿಗೆ ಸು |
ಪ್ರೇಮದೊಳಭಿವಂದಿಸಿ ಮಗುೞ್ವನ್ನಬರಿಲ್ಲಿರಿ ನೀಮೆನುತ ||
ಭೂಮೀಶ್ವರರರೆಬರ್ ತನ್ನೊಡವರೆ | ಸೋಮಾನ್ವಯತಿಲಕಂ ನವಪಟ್ಟದ |
ಸಾಮಜಮಸ್ತಕವಡರ್ದಾನದಿಯಂ ದಾಂಟಿ ನಡೆದು ಬಂದು           || ೧೮ ||

ಪುರಮಂ ಪೊಕ್ಕು ಪುರಂಧ್ರಿನಿಕಾಯದ | ತರಳಕಟಾಕ್ಷರುಚಿಯ ಬಲ್ವೊನಲೊಳ |
ಗುರುಮುದದಿಂ ತೇಂಕಾಡಿ ನಡೆದು ರಾಜಾಗಾರಮನೆಯ್ದಿ ||
ಭರತೇಶಂಗಭಿವಂದಿಸಿ ಬೞಿಕಿನಿ | ವಿರಿದುಂ ಸಂತೋಷದಿ ಬೀಱ್ಕೊಂಡಾ |
ಕರುರಾಜಂ ಮಗುೞ್ದಂ ಮುಂ ಪಾಯ್ದಾಗಂಗೆಯೆಡದ ತಡಿಗೆ        || ೧೯ ||

ವಿದಿತೋದಧಿಯುಪಕಂಠದೊಳುಜ್ಜ್ವಲಿ | ಪುದಯಶಿಖರಿಯುಪರಿಮದುಡುಪತಿಯೆನೆ |
ಕದಿರಂ ಕೆದರ್ವ ಪಲವು ಕೆಂಬರಲ ವಿಭೂಷಣಮಂ ತೊಟ್ಟು ||
ಪದಪಿಂ ಪರಿವ ನದಿಯ ತೀರದೊಳು | ನ್ಮದಕರಿಯುರುಮಸ್ತಕವನಡರಿ ಸಂ |
ಮದದಿಂ ವಿಶ್ರುತವೈಭವವಿಬುಧಾಧೀಶ್ವರನೆಸದಿರ್ದಂ     || ೨೦ ||

ಮತ್ತಾಮಹಿಪಾಲನ ಬೆಂನೞಿಯಂ | ಪತ್ತಿ ನಡೆವ ನೃಪಸಂತತಿಯೇಱೆದ |
ಮತ್ತಗಜದ ಹಂತಿ ಕರಂ ಕಣ್ಬಗೆಗತಿರಂಜಿಸಿದತ್ತು ||
ಬಿತ್ತರದಿಂದೆಸೆವುಪ್ಪುಗಡಲನಿರ | ದೊತ್ತಿ ಕರಂ ಕಪಿಕಟಕಂ ಬಲ್ಪಂ |
ಬೆತ್ತೋವದೆ ಕಟ್ಟದ ಸೇತುವಿನಂದಮನಂಗೀಕರಿಸಿ          || ೨೧ ||

ಇಂತತಿಶೋಭೆವಡೆದ ವೈಭವದಿಂ | ಕಂತುನಿಭಂ ತೊಱೆಯಂ ಪಾಯ್ವಲ್ಲಿ ಕೃ |
ತಾಂತಲುಲಾಯಂಬೊಲ್ ದಾರುಣತರಮಪ್ಪಾಕಾರವನು ||
ತಾಂ ತಳೆದೊಂದು ಮಹಾನಕ್ರಂ ತ | ದ್ದಂತಿಯ ಪೀನನಿತಂಬಂಬಿಡಿದಿನಿ |
ಸುಂ ತಡೆಯದೆ ಮತ್ತೊಂದು ಮಹಾಗಾಧದ ಕಡೆಗೆೞೆಯಿತ್ತು        || ೨೨ ||

ಕರಗುವ ಕರಿಯ ಮುಗಿಲ ಕೊನೆಯೇೞಿದ | ತರಣಿ ಸಮುದ್ರದೊಳಗುಱ್ವಂದದಿ ಮದ |
ಕರಿಯುಂ ಮಸ್ತಕವೇಱಿದ ಮನುಜೇಶ್ವರನುಂ ಮಡುವಿನೊಳು ||
ಭರದಿಂ ಮುಱುಗುತ್ತಿರಲಿರ್ತಡಿಯೊಳ್ | ನೆರೆದ ಜನದ ಕಲಕಲಮಾಸಂಜೆಯೊ |
ಳಿರದೆ ಪಲುಂಬುವ ಪಲವುಂ ಪಕ್ಕಿಯ ಪರಿಯೆನಲೊಪ್ಪಿದುದು      || ೨೩ ||

ಉಗ್ರಮುಖದ ನಕ್ರಂ ಪಿಡಿದೆೞೆದು ದು | ರಾಗ್ರಹದಿಂ ತನ್ನಂ ತದ್ದಂತಿಯ |
ನುಗ್ರಾಗಾಧದ ಮೊತ್ತಮೊದಲ್ಗತಿಭರದಿಂದೆೞಿ ತಪ್ಪಾ ||
ನಿಗ್ರಹಕೊಂದಿನಿಸಗಿಯದೆ ಬೞಿಕೇ || ಕಾಗ್ರಹೃದಯನಿಜತತ್ತ್ವಂ ನರನಾ |
ಥಾಗ್ರಣಿ ಜಲಕೇಳೀಲೀಲೆಯೊಳೊಸೆದಿರ್ಪಂದದಿನಿರ್ದಂ     || ೨೪ ||

ಅದೆ ಮುಱುಗಿದನದೆ ಮುಱುಗಿದನರಸಂ | ನದಿಯ ಮಹಾಗಾಧದದೊಳೆನುತಂ ಕಡು |
ಬೆದರ್ದರ್ ಕೆಲರೆರ್ದೆಗೆಟ್ಟರ್ ಕೆಲರಱೆತಂಗೆಟ್ಟರ್ ಕೆಲರು ||
ಅದಿರ್ದರ್ ಕೆಲರೞ್ತರ್ ಕೆಲರೋವದೆ | ಗದಗದಪಂ ಕೊಂಡರ್ ಕೆಲರಱಗುಲಿ |
ಬಿದಿಯಂ ಬೈಯುತುಮಿರ್ದರ್ ಕೆಲರೊಡಲಂ ಪೊಸೆದರ್ ಕೆಲರು    || ೨೫ ||

ಮಡುವಂ ಪುಗಲೆಳಸುವ ಮಾನಿನಿಯರ್ | ಸಿಡಿದಲೆ ಶಿಖಿಮುಖಮೊದಲಾದವಱೊಳ |
ಗೊಡಲಂ ಬಿಡಲುಜ್ಜುಗಿಸುವ ಲೆಂಕರ್ ನೋಡಲೊಡನೆ ಮೂರ್ಛೆ ||
ವಡುವ ಸಹೋದರರುಹತ್ತಪಮಂ | ಪಡಲೆಳಸುವ ಮಾನ್ಯರ್ ಮಹಿಪಾಲಂ |
ನಡುನೀರಂ ಪುಗುವಾಗಳ್ ಸಂದಣಿಸಿದರಾಕಟಕದೊಳು    || ೨೬ ||

ನಸುಗೆಂಪೇಱಿದ ನಾಸಾಮುಕುಳದ | ಬಿಸುಸುಯ್ಯಲ ಬಿಟ್ಟುರುಳ್ದ ಮುಡಿಯ ಬಿಡ |
ದೊಸರ್ವಶ್ರುಕಣಂ ತೀವಿದ ತುಱುಗೆವೆಗಣ್ಣ ಬೆರಲ ಪಜ್ಜೆ ||
ಪಸರಂಗೊಂಡ ಪಯೋಧರದಱಿವಂ | ಬಿಸುಟ ಮನದ ಮೇಲುದಱ ಸೆಱಂಗಂ |
ಮುಸುಕದ ಮೆಯ್ಯಂತವುರಂ ಪಿರಿದುಂ ಶೋಕವಡೆದುದಾಗ          || ೨೭ ||

ಮೋಹರಿಸಿದ ಮಮತೆಯೊಳೆಯ್ತರುತತಿ | ಹಾಹಾಕ್ರಂದನಮಂ ಮಿಗೆ ಮಾಡು |
ತ್ತಾಹೆಣ್ಮಣಿ ಹಿರಿಯರಸಿ ಸುಲೋಚನೆ ನಿಶ್ಚಲಮತಿಯಾಗಿ ||
ಮೋಹನಮೇ ಅಸುವಾದುದರಿಂದ ಮ | ನೋಹರರೂಪನ ಮೊಗಗಾಣ್ಣನ್ನೆಬ |
ರಾಹಾರಶರೀರನಿವೃತ್ತಿಯೆನುತ್ತಿನಿವಿರಿದಾಡಿದಳು           || ೨೮ ||

ಏಮಾತೋ ಮತ್ಪ್ರಾಣಾಧೀಶಂ | ತಾಮ್ಮೊದಲುಜ್ಜುಗಿಸಿದ ಬಲ್ಗಜ್ಜಮೆ |
ನೇಮವೆ ತನಗೆನುತವೆ ತನುವಿನದೊಂದಾಸೆಗೆ ಬಗೆಗುಡದೆ ||
ಸಾಮಜಗಮನೆ ಸುಲೋಚನೆಯಾವು | ದ್ದಾಮನದಿಯ ಹೆಮ್ಮಡುವಂ ಹೊಕ್ಕಳ್ |
ತಾಮರಸನಿವಾಸಿನಿ ತವರೂರಂ ತವಕದಿ ಹುಗುವಂತೆ       || ೨೯ ||

ಇನ್ನೀ ಶೀಲವತಿಯ ಸದ್ಗುಣದ | ತ್ಯುನ್ನತಿಕೆಯದುಂಟಾದೊಡಮೀನೀರ್ |
ತನ್ನಿಂ ತಾನೇ ಬತ್ತಲಿಯೆನುತಲರ್ವಟ್ಟೆವಿಡಿದು ನೋೞ್ಪಾ ||
ಪನ್ನಗಪವನಪಥಿಕರೆಂಟುಂ ದೆಸೆ | ಗನ್ನೆಯರನಿಮಿಷತತಿ ಜೋಯಿಸರುಂ |
ಕೆನ್ನಂ ಚಿಂತಿಸಿ ತಮ್ಮೊಳ್ ಗುಜುಗುಜುಗುಟ್ಟುವ ಸಮಯದೊಳು  || ೩೦ ||

ಎಳಮೀಂಗಣ್ಣ ಸುಲೋಚನೆ ಪುಗುವೆಡೆ | ಯೊಳಗಾಬಱತ ನದಿಯೊಳವನೀಶ್ವರ |
ಕುಲಚೂಡಾಮಣಿ ಬೇರಾನೆಯ ಪೆಗಲೇಱಿ ವಿರಾಜಿಸಿದಂ ||
ತಳುವದಗಸ್ತ್ಯಂ ಪಾನಂಮಾಡಿದ | ಜಳಭಾಂಡಾಗಾರದ ನಡುವೆ ಕರಂ |
ತೊಳಗುವ ಮೈನಾಕಮಹೀಧ್ರದ ಮಣಿಶಿಖರದ ಮಾೞ್ಕೆಯೊಳು    || ೩೧ ||

ಬತ್ತಿದ ಬಲ್ವೊೞೆಯೊಳಗಡೆ ನಡೆದು ನೃ | ಪೋತ್ತಂಸಂ ಮಣಿಮಸ್ತಕವೇಱಿದ |
ಮತ್ತಗಜಮನುರುಮುದದಿಂದಾಪೊಸಬಣ್ಣಿಗೆದಳಿರ್ಗಾಲ ||
ವೃತ್ತಸ್ತನದುನ್ನತಗುಣಭೂಷಣೆ | ಪತ್ತಿಯವನ ಪರ್ಯಂಕಮನಡರ್ದೊಲ |
ವೆತ್ತು ನಿರೀಕ್ಷಿಸಲಾಮಡುವಿನ ಸೆಳೆನೀರೀತೆಱನಾಯ್ತು      || ೩೨ ||

ತೊಳಗುವ ಶುಕ್ತಿಯೊಳಗೆ ಮುನ್ನಿನ ರೂ | ಪೞಿದು ಬೞಿಕ ಬಲ್ಮಣಿಯಪ್ಪಂದದೆ |
ಸೆಳೆನೀರಾಮಡುವಿನೊಳವರಿರರ್ವರ್ ನೋಡುವ ಸಮಯದೊಳು ||
ತಲತಳಿಸುವ ತನುರುಚಿಯಿಂ ನೆಱೆಕ | ಣ್ಗೊಳಿಸುವ ಸೌಂದರ್ಯಮನನುಕರಿಸುವ |
ಲಳನಾರೂಪಮದಾಯಿತ್ತಾಬಿಸವಂದಮನೇವೊಗೞ್ವೆಂ   || ೩೩ ||

ಎಳಮೀಂಬೊಣರ್ ಕಣ್‌ಬಿಸವಲ್ಲರಿ ತೋಳ್ | ನಳಿನಂ ಮುಖಮಮಳ್ವಕ್ಕಿ ಕುಚಂ ತೆರೆ |
ವಳಿ ಮಳಲೊಟ್ಟಿಲ್ ಕಟಿ ಕೂರ್ಮಂ ಪದಮಾಪಾವಸೆ ಬಾಸೆ ||
ಸುೞಿ ಸುಲಲಿತನಾಭೀವಲಯಂ ಬೊ | ಬ್ಬುಳಿಕೆ ನೀರ್ ಮೆಯ್ಯಾಗಲ್ವಾ |
ಲಳಿತತರಂಗಿಣಿ ಕಡುಚೆಲ್ವಿಕೆಯಂ ತಳೆದ ತರುಣಿಯಾಯ್ತು           || ೩೪ ||

ಚಂದ್ರಮುಖಂ ಚಟುಲಚಕೋರಾಕ್ಷಿ ಮೃ | ಗೇಂದ್ರಲಸನ್ಮಧ್ಯಂ ಮೃದುಪಲ್ಲವ |
ರುಂದ್ರತಳಂ ರುಚಿರಾಧರವಂಗೋದ್ಭವಕರಲ್ಲಕಿಯ ||
ಮಂದ್ರಸ್ವರಮತಿರಂಜಿಪ ಕಾಯಂ | ಸಾಂದ್ರವಿಲಾಸಂ ಕಣ್ಗೆಸೆಯಲ್ ಮನು |
ಜೇಂದ್ರನ ಮನಕಚ್ಚರಿ ಪೆರ್ಚಿರೆ ಜಲಜಾಯೆ ಸೊಗಯಿಸಿದಳು         || ೩೫ ||

ಈ ವಿಧದಿಂ ಕಣ್ಗೊಪ್ಪವಡೆದಳಂ | ದೇವಸ್ತ್ರೀಯೆಂಬುದನೆ ತಿಳಿದು ತ |
ದ್ಭೂವರನುಂ ಭುವನಸ್ತುತೆ ಸುರುಚಿರಗಾತ್ರೆ ಸುಲೋಚನೆಯುಂ ||
ಆವಾರಣವಿಲಸನ್ಮಸ್ತಕದಿಂ | ದೋವದಿೞಿದು ಹರಿಸದಿನಾಕೆಯ ಕೆಂ |
ದಾವರೆಯೆಸಳ್ವಜ್ಜೆಗೆ ಮುೞ್ಗಿದರಮಳ್ವಕ್ಕಿಯ ಮಾಱ್ಕೆಯೊಳು   || ೩೬ ||

ವಿನಮಿತರಾದ ವಿಮಲಗುಣನಿಳಯರ | ನನುನಯದಿಂ ಪಲವುಂ ಸೂೞು್‌ಪರಸು |
ತ್ತನಿಮಿಷಸತಿ ನವವಿಧಮಣಿಮಯಮಂಡಪಮೊಂದಂ ರಚಿಸಿ ||
ವಿನಯದಿನದಱೊಳಗಿರಿಸಿ ಬೞಿಕೃತಿ | ವಿನುತಚತುರ್ದಶನದಿಯಂಬುಗಳಂ |
ಕನಕಕಲಶದೊಳ್ತೀವಿ ದಣಿವವೋಲ್ ಮಿಸಿಸಿದಳೊಲವಿಂದ            || ೩೭ ||

ಬೞಿಕ ಲಲಿತಬಹುಚಿತ್ರಾಂಬರದಿಂ | ಜ್ವಲಿಸುವ ಪಲವು ಪರಲ ತೊಡವಿಂ ಕ |
ಣ್ಗೊಳಿಸುವವೋಲ್ ಕೈಗೈಸಿ ಬೆಳರ್ವ ಮುತ್ತಿನ ಮಣಿಯಕ್ಷತೆಯಂ ||
ತಳಿದು ಸರಾಗದಿನಾದಲೆಯೊಳ್ಮನ | ವೆಳಸಿ ಪರಸಿ ಸುಲುಮಾರಾಂಗಮನೆಳ |
ದಳಿರ್ಗೈಯಿಂದೆ ತಡವಿ ಕೊಂಡಾಡಿದಳಾದಂಪತಿಗಳನು     || ೩೮ ||

ಇಂತತ್ಯುಪಚರಮಂ ಮಾಡಿದ ನವ | ಕಾಂತಕಲಾಭೃದ್ಬಿಂಬಮುಖದ ಸುರ |
ಕಾಂತೆಗೆ ಸುಗುಣೆ ಸುಲೋಚನೆ ಕಮಲಸದೃಶಕರಮಂ ಮುಗಿದು ||
ಸಂತಸದಿಂ ಬಿನ್ನವಿಸಿದಳೀತೆಱ | ದಿಂ ತುೞಿಲಾಳ್ ವಿಕ್ರಮಕೌರವಭೂ |
ಕಾಂತಂಗೀಯುಪಸರ್ಗಮದೇಕಾರಣದಿಂದೊದವಿದುದು   || ೩೯ ||

ಎಂದು ಸರಾಗದಿ ವಿಜ್ಞಾಪನಮಂ | ಮಂದಸ್ಮಿತಮುಖಿ ಮಾಡಲ್ಕೇಳ್ದಾ |
ಬಂದುಗೆವಾಯ ಭಗೀರಥನಂದನೆಯಿಂತು ನಿರವಿಸಿದಳು ||
ಇಂದೀವರಲೋಚನೆ ಮಿಗೆ ಲಾಲಿಸು | ಹಿಂದಣವತ್ಸರದೊಳ್ ಜಯಭೂಪಂ |
ಬಂದ ಬಸಂತಸಮಯದೊಳ್ ಬನಮಂ ನೋಡಲ್ ನಡೆತಂದು       || ೪೦ ||

ಬನಕೆ ನಡೆದು ಬಕುಳದ ಬಾವನ್ನದ | ಘನಸಾರದ ತರುಮೊದಲಾದವಱೊಳ್ |
ಬಿನದಿಸುತವೆ ಬಳಸಿದ ಬಹುಬಂಧುಜನಂಬೆರಸುತ ಬಂದು ||
ನನೆಕೊನೆವೋದ ನವಾಮ್ರದ ನೆೞಲೊಳ್ | ಮನಮಂ ತನುಮಂ ಬೇರ್ಕೆಯ್ದೊರ್ವಂ |
ಮುನಿಕುಲತಿಲಕಂ ಯೋಗದೊಳಿರೆ ಕಂಡಂ ಜಯಭೂವರನು          || ೪೧ ||

ಕಾಲಂ ಮೊದಲಾಗಿಯುಮಿಂದುವರಂ | ಪಾಲೊಳ್ ನೀರೆರವಿಲ್ಲದೆ ಕೂಡಿದ |
ವೋಲೊಡವೆರದುಂ ನಚ್ಚಿರಲೆನ್ನಂ ತಾನೆ ಬಹಿಷ್ಕರಿಸಿ ||
ಮೇಲಣ ಮುಕ್ತಿಗೆ ಪೋಗಲೆಳಸಿ ತಾ | ನಾಳೋಚಿಸಿತೀಯಾತ್ಮನೆನುತ್ತಾ |
ಸ್ಥೂಳವ್ಯಥೆಯಿಂ ಬಡವಾದಂತಾಮುನಿತನು ಕೃಶವಾಯ್ತು          || ೪೨ ||

ಮತ್ತಾಮುನಿನಾಥನ ತನು ತನುವಂ | ಪತ್ತಿದ ನವವಲ್ಲಿಯ ಕಿಸಲಯಮುಂ |
ಸುತ್ತಿದ ಸರ್ಪಸಮಿತಿಯ ಫಣಾಮಣಿಗಣಮುಂ ಕಡುಗರ್ಪಂ ||
ಬೆತ್ತಮಲಿನತೆಯುಮತಿರಂಜಿಸಿದುವು | ಚಿತ್ತಜನಂ ಸುಡಲೆಂದು ತಪೋಗ್ನಿಯ |
ಹೊತ್ತಿಸುವುರಿಯುಂ ಕೆಂಡಮುಮಾಧೂಮಮುಮೊಪ್ಪುವ ತೆಱದಿ   || ೪೩ ||

ತೊಳಗುವ ನಿಜತತ್ತ್ವಮನೀಕ್ಷಿಪ ಮುನಿ | ಕುಳತಿಲಕನ ಮಿಸುಗುವ ಮುಂಗೈಯೊಳ್ |
ಬಳಸಿದ ಬಳಲತೆಯೆಳಗುಡಿಯೊಪ್ಪಿದುವಾವುದ್ಗಮಶರನ ||
ಬಳಕೆಲ್ಲಂ ಕಟ್ಟಿದ ಬಲ್ಬಿರುದಿನ | ವಿಳಸತ್ಕಂಕಣದಂದದಿನುಪಶಮ |
ಲಳನೆಯ ಮಂಗಲದೊಳ್ ಕಟ್ಟಿದ ಮಂಗಲಸೂತ್ರದ ತೆಱದಿ          || ೪೪ ||

ಮೆಯ್ದಿನಲುಗುರನಿಡದ ಬಹುವಿಧರುಜೆ | ಯೆಯ್ದಲ್ ಮರ್ದುಣ್ಣದ ಮಚ್ಚರದಿಂ |
ಬಯ್ದೊಡೆ ಬಗೆದಾರದ ಬಹಿರಂಗದ ಮಾತಿಗೆ ಕಿವಿಗುಡದ ||
ಪೊಯ್ದೊಡೆ ಮೆಯ್ದೆಗೆಯದ ಪುಸಿವಾತಿಗೆ | ಬಾಯ್ದೆಗೆಯದ ವೈರಿಗಳಿಱಿತದ ಬ |
ಲ್ಗೆಯ್ದಿಗೆ ಸುಗಿಯದ ಯತಿಕುಲತಿಲಕನನವನೀಪತಿ ಕಂಡಂ           || ೪೫ ||

ತಾವರೆಯರಲಂ ತರುಣಾಶೋಕದ | ಪೂವಂ ಕನ್ನೆಯ್ದಿಲ ಬಿರಿಮುಗುಳಂ |
ಮಾವಿನ ನನೆಯಂ ಮಲ್ಲಿಗೆಯರಲಂ ಪದಕಿಟ್ಟೆಱಗಿದನು ||
ಆವರ್ಣಿಗೆಯಾಹವದೊಳಗಣ್ಮದೆ | ಭಾವೋದ್ಭವನೈಗಣೆಗಳನೊಪ್ಪಿಸಿ |
ಯಾವರಿಸಿದ ಭೀರುತೆಯಿಂ ಬಂದು ಪದಕ್ಕೆಱಗುವ ತೆಱದಿ || ೪೬ ||

ವಿಸಲದ್ವಜ್ರಾವರ್ತಾಂಕಿತಕರ | ತಲನವನೀಸುರಲೋಕಸ್ತುತನಿನ |
ಕುಲತಿಲಕಂ ಲಕ್ಷ್ಮೀಧರಶೋಭಿತನುರಧಿರೋದಾತ್ತಂ ||
ಬಲವಂತಂ ಜಡಧಿವಿದಾರಣನು | ಜ್ಜ್ವಲತೇಜಂ ರಘುವೀರನ ತೆಱದಿಂ |
ದಿಳೆಯೊಳಗತಿವಿಭ್ರಾಜಿಸಿದಂ ಸತ್ಪ್ರಭುಕುಲಮಣಿದೀಪಂ   || ೪೭ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರವಡೆದತ್ತೊಂಬತ್ತನೆಯ ಮಿಸುಪ ಸಂಧಿ         || ೪೮ ||

ಒಂಬತ್ತನೆಯ ಸಂಧಿ ಸಂಪೂರ್ಣಂ