ಸೂಚನೆ || ಪಾರಿವದಿಂ ಜಾತಿಸ್ಮರಣಂ ತನ |
ಗಾರಯಿದುದಯಿಸಿ ಮುನ್ನಿನ ಜನ್ಮಮ |
ನಾರಾಜೀವವದನೆಯೊರೆದಳ್ ನಿಜಪತಿಜಯನೃಪನೊಡನೆ ||

ಕೆದರ್ವ ತಮಂ ಕೆಟ್ಟೋಡುವ ಕುಲಟೆಯ | ರೊದರ್ವ ಪಲವು ದೇಗುಲವಱೆ ಸಂತಸ |
ಮೊದವುವ ಚಕ್ರಮುಡುಗುವುತ್ಪಳವಲರೇಱುವ ಶತಪತ್ರಂ ||
ಮುದವೆತ್ತುಲಿವ ಖಗಂ ತಣ್ಣನೆ ಸುೞಿ | ವುದಯಪವನನುಡುಗುವ ತಾರಾತತಿ |
ಸದಮಲವಡೆದಾಶಾಮುಖಮೊಪ್ಪಿದುದಾಪನಿಪೊೞ್ತಿನೊಳು        || ೧ ||

ಭೂವಲಯದೊಳಿನಿಸೆಡೆದೆಱಪಿಲ್ಲದೆ | ತೀವಿದ ಕೞ್ತಲೆಯೆಂಬ ತಮಾಲಲ |
ತಾವಿಪಿನಮನುಱೆದಹಿಸಿ ಕಿಡಿಸಬೇಕೆನುತ ಬಡಬವಹ್ನಿ ||
ದೇವದಿಶಾಭಾಗದ ಮುನ್ನೀರಿಂ | ದೋವದೆ ಪೊಱಮಡುವಂದಮನೀಕ್ಷಿಪ |
ಭಾವಜ್ಞರ ಬಗೆಗುದಯಿಸಿ ಬಿಸುಗದಿರಂ ಮುಂ ಮೂಡಿದನು           || ೨ ||

ಆವುದಯದೊಳಭಿನವರತಿ ಪಟ್ಟದ | ದೇವಿಯ ತೋಳ್ವಾಸಿಂದುಪ್ಪವಡಿಸಿ |
ತಾವರೆಮೊಗದೊಳೆದರ್ಹಾಲಯಮಂ ಮೂರ್ಮೆ ತಿರಿದು ಬಂದು ||
ದೇವರ ದೇವನನರ್ಚಿಸಿ ಬೞಿಯೊಳ್ | ತೀವಿದ ಮಣಿದೊಡವಿಂ ಕೈಗೈದು ಮ |
ಹೀವರನುಪ್ಪರಿಗೆಯನಡರ್ದೋಲಗದೊಳಗತಿರಂಜಿಸಿದಂ || ೩ ||

ಉದಯೋರ್ವೀಧರದುಪರಿಮದೊಳಗತಿ | ಮುದದಿಂ ಸಾಸಿರಗದಿರನೆಸೆವವೋಲ್ |
ಸದಮಲತೇಜೋಯುತನವನನೀಶ್ವರನುಪ್ಪರಿಗೆಯ ಮೇಲೆ ||
ಪದಪಿಂದೋಲಗಮಿರಲಂತಲ್ಲಿಗೆ | ಚದುರೆ ಸುಲೋಚನೆಯೊಳ್ವಸದನಮಿ |
ಟ್ಟೊದವಿದ ಸಖಿಯರೊಡನೆ ತಾನಾಯೆಡೆಗೊಲವಿಂದೆಯ್ದಿದಳು   || ೪ ||

ಸುರಲೋಕಕೆ ದಾೞಿಡುವಂಗಜನೃಪ | ವರನ ಚತುರ್ಬಲದಂತೆ ವಿರಾಜಿಪ |
ಗುರುಕಟಿತಟದ ರಥಾಂಗದ ಪೆಣ್ಬುತ್ತೞಿಗಳ ಕಾಲಾಳ ||
ಪರಿವ ಮನದ ಕುದುರೆಯ ನಡೆಯಾನೆಯ | ತರುಣಿಯರಾಮಣಿಹರ್ಮ್ಯಮನಡರ್ದರ್ |
ತರಳವಿಲೋಚನೆ ಶುಕಶಿಶುವಚನೆ ಸುಲೋಚನೆಯಂ ಬಳಸಿ           || ೫ ||

ಕಂದರ್ಪನ ದೀವದ ಕಳಹಂಸೆಯ | ಸಂದಣಿ ಸಗ್ಗವೊೞೆಯೊಳಾಡಲ್ ಬೇ |
ಕೆಂದು ನಭೋಮಾರ್ಗಕೆ ಭೂತಳದಿಂ ಮೆಲ್ಲನಡರುವಂತೆ ||
ಮಂದಗತಿಯ ಮಾನಿನಿಯರ್ ಸಂತಸ | ದಿಂದುಪ್ಪರಿಗೆಯ ಮೇಗಡೆಗಡರಿದ |
ರಿಂದೀವರಲೋಚನೆ ಶಶಿವದನೆ ಸುಲೋಚನೆಯಂ ಬಳಸಿ  || ೬ ||

ನೀರನಿಧಿಯ ನಿಜನಂದನನಲ್ಲಿಗೆ | ತಾರಾಂಗನೆಯರೊಡನೆ ಬರೆ ಮನಮೊಸೆ |
ದಾರೋಹಿಣಿ ಬರ್ಪಂದದಿ ನೆರೆದಾಳಿಯರೊಡನಾಸುದತಿ ||
ನೇರಾಣಿಯ ಮಾಡದ ಮೇಲೆಸೆವ ಮ | ನೋರಮಣನ ಬೞಿಗೆಯ್ದಿಯೆಡದ ಕಡೆ |
ರಾರಾಜಿಪ ರನ್ನದ ಗದ್ದುಗೆಯನಡರಿ ಕಣ್ಗೊಪ್ಪಿದಳು    || ೭ ||

ಕೆಂಬಜ್ಜೆಯ ಕೇದಗೆಯೆಸಳುಗುರ್ಗಳ | ಕಂಬುಲಲಿತಕಂಧರದ ಕನತ್ಕಾ |
ದಂಬಗತಿಯ ಕಾಂಚನಲತಿಕಾಂಗದ ಕಳಕಂಠಸ್ವನದ ||
ಅಂಬುಜದಳಲೋಚನದಭಿನವರೋ | ಲಂಬಾಲಕದ ನಿಬಿಡಕುಚಯುಗದ ನಿ |
ತಂಬಿನಿಯರ ತಂಡಂ ನಿಂದುದ ನೀಲಾಂಬಕಿಯಂ ಬಳಸಿ     || ೮ ||

ಮುತ್ತಿದ ಮುಂಬಿಸಿಲೊಳಗವನೀಪತಿ | ಯೊತ್ತಿನ ಪೆಣ್ಮಣಿಗಳು ಪೊಸಪವಳದ |
ಪುತ್ತೞಿಯೆನಲವರಿಕ್ಕಿದ ಸಿರಿಗಂಪುತ್ತಮಘುಸೃಣಮೆನೆ ||
ಹತ್ತಸರದ ಮುತ್ತರುಣಮಣಿಗಳೆನೆ | ವೃತ್ತಕಬರಿಯಲರಸುಗೆಯ ಪೂವೆನೆ |
ಸುತ್ತಿದ ದುಗುಲಂ ಚಂದಿರಗಾವಿಯ ನಿಱಿಯೆನಲೊಪ್ಪಿದುವು       || ೯ ||

ಅಡಸಿದ ಕತ್ತಲೆಯಿಂ ಸಂಕೋಚಂ | ಬಡೆದಿರಿ ತಾಮರೆಗಳಿರಾ ವಿರಹಂ |
ಬಡೆದಿರಿ ಕೋಕಂಗಳಿರಾ ಎನುತಾಮಿತ್ರನವಱ ಮೆಯ್ಯಂ ||
ತಡವಿದನೆಂದೆನೆ ಕರದಿಂ ತನ್ನೃಪ | ನೊಡನುಪ್ಪರಿಗೆಯನೇಱಿದ ಸತಿಯರ |
ಕಡುರಂಜಿಪ ಮೊಗಮೊಲೆಗಳ ಮೇಗುಜ್ಜ್ವಲಿಸಿದುದೆಳವಿಸಲು       || ೧೦ ||

ಭಾಳದೊಳಿಕ್ಕಿದ ಬಡವೆಱೆವೊಟ್ಟಿಂ | ಸ್ಥೂಲಪಯೋಧರಕಿಕ್ಕಿದ ತಾರಾ |
ಮಾಲೆಗಳಿಂ ಮೀಂಬುೞುಗಳನೇಳಿಪ ಮಾಣಿಕಮಣಿದೊಡವಿಂ ||
ನೀಲಶ್ಯಾಮಲಕೋಮಲಗಾತ್ರದ | ಬಾಲೆಯರರೆಬರೆಸೆದರಿನಕಿರಣದ |
ದಾೞಿಗೆ ಸುಗಿದರಸನ ಮಱೆವೊಕ್ಕ ನಿಶಾನಾರಿಯರಂತೆ    || ೧೧ ||

ಎಡಬಲದೊಳಗೆಡಗಲಿಸಿದಬಲೆಯರ | ನಡುವೆ ನರೇಂದ್ರಲಲಾಮಂ ಪಟ್ಟದ |
ಮಡದಿವೆರಸಿಯಳಕಾನಗರಿಗೆ ಪಾಸಟಿಯಮರಾವತಿಗೆ ||
ಪಡಿ ಫಣಿಪತಿಪತ್ತನಕೆಣೆಯೆನಿಸುವ | ಕಡುಸಿರಯಂ ತಾಳಿದ ಪೊೞಲಂ ಪಗ |
ಲೊಡೆಯನುದಯಕಾಲದೊಳನುರಾಗಮೊದವೆ ನಡೆನೋಡಿದನು    || ೧೨ ||

ಪಡೆವಳ್ಳರ ಪರದೇಶಾಧೀಶರ | ನಡೆವಳಿಗರ ನಲ್ಮೆಯ ಸಚಿವರ ಭಟ |
ರಡಪವಳರ ಬೆಜ್ಜರ ವಾಗ್ವರರ ಕುಮಾರರ ಬಿರ್ದಿನರ ||
ಕಡುಸೊಗಯಿಪ ಮಣಿಮನೆಯಂಗಣಮಂ | ತೊಡೆವ ಚಳೆಯಮಿಕ್ಕುವ ಪೊಸಪೂವಲಿ |
ಗುಡುವ ಮಡದಿಯರ ಮೊತ್ತಂ ಕಣ್ಗೊಪ್ಪಿದುದಾವುದಯದೊಳು || ೧೩ ||

ಗೞಪುವ ಕೈವಾರಿಗಳ ರವಂಗೇ | ಳ್ದೞಿಮನಮಂ ಮಾಡದೆ ಕುಱಿತಂಕದ |
ಕಳಕೆ ನಡೆವ ಮಾಸಾಳ್ಗಳ ಕಂಬಿಯವರ ಕರೆಪಕ್ಕೆೞ್ದು ||
ತಳುಮಾಡದೆ ಪೊಱಮಡುವೆಕ್ಕಟಿಗರ | ತುೞಿಲಾಳ್ಗಳ ತಂತಮ್ಮುದ್ಯೋಗಕೆ |
ಹೊೞಲಂ ಹೊಱಡುವ ಪೌರಜನದ ಸಂದಣಿಯೊಪ್ಪಿದುದಾಗ       || ೧೪ ||

ಸಿಂಗರಿಸುವ ಬೆಲೆವೆಣ್ಗಳ್ ಬಿನದ | ಕ್ಕಂಗಣಮಂ ಸಾರುವ ಬಿಡುವೆಣ್ಗಳ್ |
ಪಿಂಗದೆ ಹಣಗಿ ನಡೆವ ಬೆಸವೆಣ್ಗಳ್ ಬೇಱೂರ್ಗೆಯ್ದಲ್ಕೆ ||
ಅಂಗವಿಸುವ ನೇಹದಿ ಬಲ್ಲಹನ ಮ | ನಂಗರಗುವವೊಲ್ ದೈನ್ಯವೆರೆದ ವಚ |
ನಂಗಳನುಸಿರುವ ಮನೆವೆಣ್ಗಳ್ ಸೊಗಸಿದುದಾವುದಯದೊಳು      || ೧೫ ||

ಅರೆ ಎಡೆ ಪಲವಸಿವಿಡಿವಭ್ಯಾಸಕೆ | ಗರುಡಿವುಗುವ ವಾಹಳಿಮಾಡುವೆನೆನು |
ತರೆ ಎಡೆಯೆಳಗನ ಹಲ್ಲಣಿಪರೆ ಎಡೆಯೋದುಗಲಿಯೆ ನಡೆವ ||
ಅರೆ ಎಡೆ ಕೋೞಿತಗರುಲಾವುಗೆಗಳ | ಧುರಕೋವದೆ ಮೇಳೆಯಮಂ ವಿರಚಿಸು |
ವರಮಕ್ಕಳ ಮೊತ್ತಂ ಪುರದೊಳಗೆಸೆಯಿತ್ತಾವುದಯದೊಳು          || ೧೬ ||

ಕೆಲವಡೆ ಕಡುಹರಿಸದಿ ಸಿಂಗರಿಸುವ | ಕೆಲವೆಡೆ ಕರುಮಾಡದ ಕುರುಜೇಱುವ |
ಕೆಲವೆಡೆ ಕೆಳದಿಯರೊಡವರೆ ವಿದ್ಯಾಮಂಟಪಕೆಯ್ತರ್ಪ ||
ಕೆಲವೆಡೆ ಕೇರಿಗಳೊಳಗೆಡಯಾಡುವ | ಸಲೆ ಸೊಬಗರನೀಕ್ಷಿಸೆಯಾತುರದಿಂ |
ತಲೆವಾಗಿಲನೆಯ್ದುವ ನೃಪಸುತೆಯರೆಸೆದರಾವುದಯದೊಳು        || ೧೭ ||

ಒಂದೊರೆಯುಚ್ಚೈಶ್ಯ್ರವಕೆಂಬಂದದಿ | ನಂದವಡೆದ ಜಾತ್ಯಶ್ವಸಮಿತಿಯಂ |
ಮಂದುರದಿಂದ ತೆಗೆವ ಮೆಯ್ದಡವುವ ಜೋಡಿಪ ನೇಣಿಂದ ||
ಕಂದಮನೊಯ್ಯನೆ ಮಣಿಯಿಪ ಲೋಹಮ | ನೊಂದಿಪ ಹಿಡಿತವಿಡಿವ ನಸು ಬೆಮರಿಪ |
ಮಂದೇತರವಾಹಳಿಮಾಡುವ ಕಜ್ಜಂ ಕಣ್ಗೊಪ್ಪಿದುದು  || ೧೮ ||

ಎಡೆವಿಡದಿಳೆಯಧಿಪನ ಗೃಹಕೆಯ್ತ | ರ್ಪಡಪವಳರ ಬೆಜ್ಜರ ಬೆಸವಕ್ಕಳ |
ಪಲಡಿಯಱರೆಕ್ಕಟಿಗರ ಲೆಕ್ಕಿಗರೆಸೆವ ಝಳಂಬಾಯತರ ||
ನಡೆವಳಿಗರ ನಚ್ಚಣಿಗರ ಪೊಸಪೂ | ವಡಿಗರ ಗರವಟಿಗರ ಕೊಲ್ಲಾಯ್ತರ |
ನುಡಿಗಾಱರ ಮಾಸ್ವಾರರ ಸಂದಣಿ ಸಲೆ ಸೊಗಯಿಸಿತಾಗ || ೧೯ ||

ಪರಭೂಪರ್ ತಮ್ಮಯ ದರ್ಪಮನುೞಿ | ದುರುಭೀತಿಯಿನುಳ್ಳೊಡವೆಗಳಂ ಕರಿ |
ತುರಗರಥಾವಳಿಯಂ ತರುಣೀರತ್ನಮನಾನೃಪವರಗೆ ||
ತ್ವರಿತದಿ ಕಾಣಿಕೆಗುಡಲೆನುತಾಪುರ | ವರದ ಪೊಱಗೆ ಬಿಟ್ಟಿರ್ದುದಯದೊಳೆ |
ಯ್ತರಲಾಸಂದಣಿ ಪೆರ್ಬಾಗಿಲೊಳಿರದೊಪ್ಪವಡೆದುದಾಗ || ೨೦ ||

ಇಂತೆಳನೇಸಱುದಯಕಾಲದೊಳ | ತ್ಯಂತವಿಲಾಸಂಬಡೆದಾಪುರಮಂ |
ಕಂತುಸದೃಶಜಯಭೂವರನುಂ ನಿಜಕಾಂತೆ ಸುಲೋಚನೆಯುಂ ||
ಸಂತಸದಿಂ ನೋಡುತಮಿರಲೊಂದೆಡೆ | ತಿಂತಿಣಿಗೊಡರಮಕ್ಕಳೊಲವಿನಿಂ |
ಪಂತಿವಿಡಿದು ಪಾರಾವತಮಂ ಪಾಱಿಸಲೆನುತೊಪ್ಪಿದರು || ೨೧ ||

ನಸುಮಿಡುಕುತ ಮೆಲ್ಲನೆ ಮುಂದಕೆ ನಡೆ | ವೆಸಕದ ಪೆಣ್ಣಂ ಪಿಡಿದು ಭರದಿ ಸವಿ |
ಮುಸುಕೆ ನಿಶಿತಚಂಚುವನದಱೊಳ್ವಾಯ್ದೆಱೆಯೊಳಗಿಂಬಿಟ್ಟು ||
ಪೊಸವೇಟದ ಬೀಜಮನಿಡುವಂದದಿ | ನೊಸೆದು ಕುಡುಕನಿತ್ತೊಲವಿಂ ತಡೆಯದೆ |
ಸುಸಿಲಂಗೆಯ್ವ ಕಪೋತಮನಾನೃಪಮಿಥುನಂ ನೋಡಿದುದು        || ೨೨ ||

ಬಿಟ್ಟ ಹವಣನಿನಿಸುಂ ಮೀಱದೆ ನೆಲ | ಮುಟ್ಟಿ ಪರಿವ ಪವಮಾನಪಥಮನುಱೆ |
ಮುಟ್ಟಿ ಮುೞುಂಗುವ ಪೆಣ್ಣಂ ಪಿಡಿದು ಕರೆವ ಕರೆಪಂಗೇಳ್ದು ||
ಬಿಟ್ಟ ಸುಠಿಯೊ ಬಿಡದಾಗಸದಿಂದಂ | ನೆಟ್ಟನಿಳೆಗೆ ಬೀೞುವ ಪಾರಾವತ |
ದೊಟ್ಟಜೆಯಾನೃಪಮಿಥುನಮನುಱೆ ಮೆಚ್ಚಿಸಿ ಕಣ್ಗೊಪ್ಪಿದುದು || ೨೩ ||

ಅಂಗಜಕೀರ್ತಿಲತಿಕೆಯಾಗಸದೊಳ್ | ತೊಂಗಲ್ವೂವಾದಂದಡಿನುಡುನಿಕ |
ರಂಗಳ್ ಪಗಲುದಯಿಸಿ ಪರಿದಾಡುವವೊಲ್ ನೃಪನಂದನರು ||
ಪಿಂಗದೆ ಪಾಱಿಪ ಪಾರಾವತವಿಹ | ಗಂಗಳನಾನೃಪವರನುಂ ಕನಕಲ |
ತಾಂಗಿ ಸುಲೋಚನೆಯುಂ ಕಣ್ಮನವಿಡಿವಂದದಿ ನೋಡಿದರು         || ೨೪ ||

ಪರಿಮಱಿಯಾಡುವ ಪಾರಿವವಕ್ಕಿಯ | ನರವಿಂದವಿಲೋಚನೆ ಕರಮೀಕ್ಷಿಸಿ |
ತೊರೆದ ಮಱವೆಯಿಂದವೆ ಮಣಿಗದ್ದುಗೆಯೊಳ್ ಮೆಯ್ಯಿಕ್ಕಿದಳು ||
ಸುರಭಿಶರಂ ತನ್ನಯ ಸತಿಗಾಕೆಯ | ವರರೂಪಂ ಕಳಲೆನುತಮದೃಶ್ಯಾ |
ಕರಣದಿನೆಯ್ದಿ ತಳಿದ ಠಕ್ಕಿನ ಸೊಕ್ಕೋ ಎಂಬಂದದೊಳು || ೨೫ ||

ಅಲುಗದ ಮೆಯ್ಯಾಡದ ಸುಯ್ಯುರದೊಳ್ | ನೆಲೆಗೊಳ್ಳದ ಮೇಲುದು ಬಳುಕುವ ಕೊರ |
ಲುಲುಹಿಲ್ಲದ ಕರಣಂ ಕೇಳದ ಕಿವಿ ಪಿರಿದುಂ ಭಾರೈಪ ||
ಅಲರ್ಗಣ್ಣೆವೆ ಸಲೆ ಸೊಗಯಿಸಲಾಸ | ಲ್ಲಲಿತಲತಾಂಗಿಯ ಮೂರ್ಛೆಯ ಚೆಲ್ವಿಕೆ |
ಗೆಲೆವಂದುದು ರತಿಯರ್ಚಿಪ ರನ್ನದ ಪುತ್ತೞಿಯಂದವನು            || ೨೬ ||

ತರುಣಿ ಸುಲೋಚನೆಗಾದ ಮಱವೆಯಂ | ಭರದಿಂ ಕಂಡಸುಗೀಶಂ ಜಯಭೂ |
ವರಚಿಂತಾಮಣಿ ತಾನಾಮೂರ್ಛೆಯನತಿವೇಗದೊಳೆಯ್ದೆ ||
ಪಿರಿದೆಸೆದಂ ತಮ್ಮಿರ್ವರ್ಗೊಂದೇ | ಹರಣಂ ನಿಶ್ಚಯವೆಂಬುದನಾಯೆಡೆ |
ನೆರೆದ ಸಖೀಸಖಸಮುದಾಯಕ್ಕಱಿಕೆಯ ಮಾೞ್ಪಂದದೊಳು        || ೨೭ ||

ಅರಸನುಮರಸಿಯುಮಿರ್ವರೊಡನೆ ನಸು | ತೊರೆದ ಮಱವೆಯಿಂದವೆ ಮೆಯ್ಯಿಕ್ಕಲು |
ನೆರೆದಂತಃಪುರದ ನಿತಂಬಿನಿಯರ್ ಬೆದರ್ದುಪಚಾರವನು ||
ಸುರಭಿಕುಸುಮಸಾರಂ ಹಿಮಜಲಮಲ | ಯರುಹದ ವೀಜನಮೆಂಬಿವಱಿಂದಿನಿ |
ವಿರಿದು ಮಾಡಿ ಬೞಿಕ ಮಮತೆಯೊಳಲರ್ಗಣ್ಣಂ ತೆಱಸಿದರು        || ೨೮ ||

ನನೆಯ ಸರಲನರ್ಚಿಪ ದೇವತೆಯಂ | ವನಜಭವಂ ಚಿತ್ರಿಸಿ ನಯನೋನ್ಮೀ |
ಲನಮಂ ಮಾಡಿ ವಿರಾಜಿಪ ತೆಱೆದಿಂದಲರ್ಗಣ್ಣಂ ತೆಱೆದಾ ||
ಅನಿತಱೊಡನೆ ಜಾತಿಸ್ಮರಣಂ ಸಂ | ಜನಿಯಿಸೆ ಹಾ! ರತಿವರ ಹಾ! ರತಿವರ |
ಎನುತ ಹಿರಿದು ಹಳವಳಿಸಿದಳಾಪರಭೃತಲಲಿತಾಲಾಪೆ     || ೨೯ ||

ಜನತಾಧಿಪಜಯಜಯಜಾಯಾಪತಿ | ಗನಿತಱೊಳೊಡನೆಯೆ ಜಾತಿಸ್ಮರಣಂ |
ತನಗುಮಿರದೆ ಜನಿಯಿಸೆ ರತಿವರ ರತಿವರ ನೀನಿಲ್ಲಿದೆಯೋ ||
ಎನುತ ಸುದತಿ ಕಳವಳಿಸಿದ ಕಥನಮ | ನೆನಸುಂ ತಾನಱಿದಿರ್ದುಂ ಜನರಂ |
ಜನೆಯಂ ಮಾಡುವೆನೆನುತ ಮನೋರಾಗದಿ ಕೇಳಿದನಿಂತು || ೩೦ ||

ಎಲೆಯೇಣಾಂಕವದನೆ ನಿನ್ನೆರ್ದೆಯೊಳ್ | ನೆಲಸಿತು ಮಱವೆಯದೇಕಾರಣದಿಂ |
ದೆಲೆ ರತಿವರಯೆಲೆ ರತಿವರಯೆನುತುಂ ಮಱುಕದಿ ನೆನೆನೆನೆದು ||
ಸಲೆ ಪಲುಬುವುದೇ ನೀನಿದನೆನ್ನೊಳ ಗಲಸದೆ ತಿಳಿವಂದದೆ ಪೇಱೆನುತಾ |
ಯಿಳೆಯಧಿಪತಿ ನೃಪರಾಜಶಶಾಂಕಂ ಹರಿಸದಿ ಕೇಳಿದನು   || ೩೧ ||

ಈತೆಱದಿಂ ಬೆಸಗೊಂಡಸುಗೀಶಂ | ಗಾತನ್ವಂಗಿ ಸುಲೋಚನೆಯೆನಸುಂ |
ಪ್ರೀತಿಯಿನರುಣಾಂಬುರುಹೋಪಮಹಸ್ತದ್ವಯಮಂ ಮುಗಿದು ||
ಮಾತಂ ಮನಸುವಿಡಿದು ಲಾಲಿಸು ವಿ | ಖ್ಯಾತಯೆನುತ ಬಿನ್ನವಿಸಿದಳಾಕಲ |
ಧೌತಕಮಲನಿಜಮುಖಿ ಕಪ್ಪುರದಂಬುಲವಾಯಂ ತೆಱೆದು           || ೩೨ ||

ಹೃದಯದೊಳನವರತಂ ಮನೆಗಟ್ಟಿದ | ಮದನನ ಮಾನಿತಮಪ್ಪಾಜಸಮಂ |
ವಿದಿತೋಜ್ಜ್ವಲತೇಜಮುಮಾಬಾಯ್ದೆಱೆಯಿಂ ಪೊಱಮಡುವಂತೆ ||
ಮುದದಿಂ ಸುಲಿಪಲ್ತೊಂಡೆದುಟಿಯ ಪೊಸ | ಕದಿರುಣ್ಮುತ್ತಿರೆ ತತ್ಪ್ರಿಯತಮನೊಳ್ |
ಮದಕೋಕಿಲನಿಭಲಲಿತಾಲಾಪೆ ನುಡಿದಳೀತೆಱದಿಂದ       || ೩೩ ||

ಹರಣದೆಱೆಯ ಚಿತ್ತೈಸೀಧರಣಿಗೆ | ಕುರುಕಂಭಂ ತಾನೆನೆ ಸೊಗಯಿಪ ಸುರ |
ಗಿರಿಯ ಸುರಪದೆಸೆಯೊಳ್ ಭೂಭಾಮೆಯ ಬ್ಯೆತಲೆಯೆಂಬಂತೆ ||
ಪಿರಿದುಮೆಸೆವ ಸೀತಾಸ್ರೋತಸ್ವಿನಿ | ಯೆರಡುಂ ಕಱೆಯೊಳ್ ಪದಿನಾಱುಂ ನಾ |
ಡಿರುತಿರ್ಪುವು ಮತ್ತದಱ ಮರುತ್ಸಖದಿಕ್ಕಿನದೇಶದೊಳು || ೩೪ ||

ಇಳೆಯೆಂಬಿಳೆಲೆಯ ಪೀನಸ್ತನದೊಳ್ | ತೊಳಗುವ ಪೊಸಮಿಸುನಿಯ ಪದಕಮದೆನೆ |
ನಳಿನಾವತಿಯೆಂಬ ಜನಾಂತಂ ಸಲೆ ಸೊಗಯಿಸಲಂತದಱ ||
ವಳಯದ ರನ್ನಗಳೆನೆ ಗ್ರಾಮಂಗಳ್ | ಪೊಳೆಯಲದಱ ನಾಯಕಮಣಿಯಂದದಿ |
ಲಳಿತೋತ್ಕರಮಾದುದು ಪದ್ಮಿನಿವೆಸರ್ವಡೆದ ಮಹಾನಗರಿ          || ೩೫ ||

ಆ ಪಟ್ಟಣಕೆ ಜಗತ್ಪಾಲಂ ಧರ | ಣೀಪತಿಗಳ ಕುಲತಿಲಕಂ ಪಟ್ಟದ |
ಚಾಪಳಲೋಚನೆ ಸುಭಗೆ ಕುಬೇರಶ್ರೀಯೆಂಬಳ ಕೂಡಿ ||
ಶ್ರೀಪುರುಷೋತ್ತಮರಂತಿರೆಯವರೊಳು | ರೂಪಗುಣಾನ್ವಿತವೈಶ್ಯಾನ್ವಯಮಣಿ |
ದೀಪಂ ಧನಪತಿಕಾನ್ತಾಖ್ಯಂ ಸುಖದಿಂ ಬಾೞುತ್ತಿಹನು      || ೩೬ ||

ಏನಂ ಬಣ್ಣಿಸುವೆಂ ಮತ್ತಾತನ | ನೂನಸುಕೃತದೊದವಂ ಮನೆಯೊಳ್ ಸುರ |
ಧೇನು ಕಱೆಯುತಿರ್ಪುದು ತನ್ನಯ ಕೈಯೊಳು ಚಿಂತಾರತ್ನಂ ||
ತಾನುಱೆನೆಲಸಿರ್ಪುದು ಗೆಯ್ಯದ ಶಾ | ಳೀನಂದನವೊಲವಿಂದೀವುದು ದಿವಿ |
ಜಾನೋಕಹಮೋವದೆ ಕುಡುವುದು ಬೇಡಿದುದಂ ಹಿತ್ತಿಲೊಳು       || ೩೭ ||

ಆ ವೈಶ್ಯಪ್ರಭುವಿನ ನಿಜಸತಿ ಹೊಂ | ದಾವರೆಮೊಗ್ಗೆಮೊಲೆಯ ಪೊಸಬಂದುಗೆ |
ವೂವಾಯ್ದೆಱೆಯ ಬಗಸೆಗಣ್ಗಳ ರಾಯಂಚೆವಸುಳೆನಡೆಯಾ ||
ದಾವಣಿದುಂಬಿಗುರುಳ ಗಿಳಿನುಡಿಗಳ | ಭಾವಕಿಯುತ್ತಮನಾಯಕಿ ಸಕಲಕ |
ಲಾವಿದೆಯಾಪ್ರಿಯದತ್ತೆವೆಸರನಾಂತೊಳ್ಪಮನೆಯ್ದಿದಳು            || ೩೮ ||

ಅವರೆಸೆದಾಡುವಮಲಮಣಿಹರ್ಮ್ಯದ | ನವವಿಧಮಾಣಿಕ್ಯದ ಲೋವೆಗಳೊಳು |
ಭುವನಂಗಟ್ಟಿ ಮುದದಿ ರತಿವರರತಿಸೇನೆವೆಸರನಾಂತು ||
ಧವಳರುಚಿಯನಂಗೀಕರಿಸಿದ ಪಾ | ರಿವದಮಳ್ವಕ್ಕಿಗಳಾಮನೆಯೆಲ್ಲಕೆ |
ಸವಿನಯಮಂ ಪುಟ್ಟಿಸಿಯನವರತಂ ಸೌಖ್ಯಂಬಡೆದಿಹುವು            || ೩೯ ||

ಕರುಣಂ ಮಿಗೆಯೊಳ್ಗುಡುಕುಗಳಂ ಮುಂ | ಬರಹಿ ವಿನೋದದಿ ಮೇಯಿಸಿ ಬೞಿಕುಱೆ |
ಹರಿಸದಿನಾಹೆಣ್ಬಕ್ಕಿಯನುಡೆನಿಱಿಯೊಳಡಂಗಿಸುತ |
ವಿರಹಮನಾಗಿಸಿ ಗಂಡಿಗೆ ಬೞಿಕಾ | ಯೆರಡಱ ಮೊಗಗಾಣಿಸಿ ಕೆಲಯಿಸಿ ನವ |
ಸುರತಂಗೆಯಿಸುವಳಂಗನೆಯಾಪಾರಿವದಮಳ್ವಕ್ಕಿಯನು  || ೪೦ ||

ಧರೆಯೊಳ್ ದುಷ್ಕರ್ಮದೊಳಾಚರಿಸದ | ನರರೇಗತಿಗೆ ನಡವರೆನೆ ಕೇಳ್ದಾ |
ನರಕಕ್ಕೀಯಂದದಿನಿೞಿವರೆನುತ್ತಿೞಿವುವು ಭೂತಳಕೆ ||
ಪಿರಿದುಂ ಸತ್ಕಾರದೊಳೊಲವಿಂದಾ | ಚರಿಸಿದರೇಗತಿಗೆಯ್ದುವರೆನಲಾ |
ಸುರಲೋಕದ ದೆಸೆಗೋವದೆ ಪಾಱುವುವಾಪಾರಿವವಕ್ಕಿ    || ೪೧ ||

ಮಂದೇತರಮುದದಿಂದೆ ವಣಿಗ್ವರ | ಸುಂದರಿಯಾಪಾರಾವತವಂ ಬಗೆ |
ವಂದು ಸಲಹಿ ಹಿರಿದೞ್ತಿಯೊಳಂ ಪಲಪಗಲಂ ಕಳೆಯುತಿರೆ ||
ಒಂದಾನೊಂದು ದಿನದ ನಡುವಗಲೊಳು | ಕರಿದರ್ಪವಿದಾರಣನೆನಿಸಿದ ಮುನಿ |
ವೃಂದಾರಕನೊರ್ವಂ ಚರಿಗೆಗೊಳಲ್ ಪುರವರಕೆಯ್ದಿದನು || ೪೨ ||

ಸುದತೀಜನಮಂ ಮುನ್ನವೆ ತೊಱೆದಾ | ಸುದತೀಶೋಣಿತಮಾಂಸಮನೆನ್ನೊಳ್ |
ಪುದುಗಿಸಿ ಕೊಂಡಿರ್ಪುದು ಮತವಲ್ಲೆನುತಾಯತಿಕುಲತಿಲಕಂ ||
ಬೆದಱಿ ರುಧಿರರಸಮಾಂಸಮನಲ್ಲಿಂ | ಪದಪಿಂ ಪೊಱಮಡಿಸಿದನೋ ಎನಲೊ |
ಪ್ಪಿದುದಂಗಂ ಬಱಿಯೆಲು ನರದಿಂದರ್ದಿದ ಜಂತ್ರದ ತೆಱದಿ          || ೪೩ ||

ತವದಭಿವೃದ್ಧಿಗೆ ತನುವಿರಬೇಕೆನು | ತಪಗತದೋಷಾಲಂಕೃತನಾಪದ |
ದುಪಹತಿ ತಪ್ಪದು ಸೂಕ್ಷ್ಮಪ್ರಾಣಿಗೆನುತ್ತೊಂಮಾಱುವರಂ ||
ಚಪಲತೆಯಿಲ್ಲದೆ ನೆಲನಂ ನೋಡು | ತ್ತುಪವಾಸಾಂತರದೊಳ್ ಬಡಬಡನಾ |
ಕ್ಷಪಣಂ ಚರಿಗೆಗೊಳಲ್ ನಗರೀವೀಧಿಯೊಳಿರದೆಯ್ದಿದನು || ೪೪ ||

ವರಮುನಿ ಭಾವರಿಗೊಡುವುದನಱಿದಾ | ದರದಿಂ ವೈಶ್ಯವನಿತೆ ತಲೆವೀದಿಗೆ |
ಭರದಿಂ ಬಂದು ಪಲವು ತೆಱದರ್ಚನೆಯಂ ಚಿಬ್ಬಿಲೊಳಿಟ್ಟು ||
ಸ್ಮರಮಾತಂಗಸದೃಶಮೃದುಗಮನದ | ತರುಣೀಜನವೆಡಬಲದೊಳ್ ಮುದದಿಂ |
ಬರೆ ಬಂದಳ್ ತಾನವರಂ ನಿಲಿಸುವೆನೆಂಬಭಿಲಾಷೆಯೊಳು   || ೪೫ ||

ಭಕತಿ ಬಗೆಯನುಱೆ ಸೆಱೆವಿಡಿದಿರೆಯು | ತ್ಸುಕದುತ್ಸಾಹಂ ಪೊಱಪೊಣ್ಮುತ್ತಿರೆ |
ಚಕಿತಕುರಂಗವಿಶಾಲವಿಲೋಚನೆಯಂಗಣದಿಂದೆಯ್ದಿ ||
ಅಕಳಂಕವ್ರತಿವತಿಯರುಣಾಂಬುಜ | ವಿಕಸತ್ಪದಪಂಕೇಜಕೆ ಕುಟಿಲಾ |
ಳಕಷಡಯನಸಮಿತಿಯನೆಱಗಿಸಿದಳ್ ವಿಧಿಪೂರ್ವಕದಿಂದ  || ೪೬ ||

ಯತಿಪತಿಯೆನ್ನ ಮನೆಗೆ ಬಿಜಯಂಗೆ | ಯ್ದತಿಪುಣ್ಯಮನಾಗಿಸಿ ಕುಡಿಮೆನುತಾ |
ಶತದಳಸಲ್ಲಲಿತವಿಲೋಚನೆ ತಾಂ ನಿಱಿಸುವ ಸಮಯದೊಳು ||
ರತಿವರನುಂ ರತಿಸೇನೆಯುಮೆಂಬು | ನ್ನತಿಕೆಯ ವೆಸರ ಕಪೋತಮಿಥುನಮಾ |
ಯತಿಯರುಣಾಂಘ್ರಿಯುಗದ ಮುಂಗಡೆಯೊಳಗದಿರದೆ ಪೊರಱಿದುವು         || ೪೭ ||

ಪಾರಿವವಕ್ಕಿ ಪದದ್ವಯದಿದಿರೊಳ್ | ಭೋರೆನೆ ಬಿೞ್ದು ಪೊರೞಲಾಮುನಿವೃಂ |
ದಾರಕನಾಭಾವರಿ ಮುಱಿದಾಪುರವರದ ಬಹಿರ್ವನದ ||
ಮಾರಾರಿಯ ಮಂದಿರಕೆ ನಡೆಯಲಾ | ವಾರಿಜಮುಖಿ ಕೈ ಸೇರಿದ ನವಚಿಂ |
ತಾರತ್ನಂ ಕೆಟ್ಟಂದದಿ ಪಿರಿದುಂ ಮಲುಮಲ ಮಱುಗಿದಳು           || ೪೮ ||

ಕಡುಬಡವಂ ಕೈಸೇರಿದ ಕಸವರ | ಮೊಡನೆ ಬಯಲ್ಪಡೆಯಲು ಮಱುಗುವವೊಲ್ |
ಸಡಗರವಡಗಿ ವನಜಮುಖಿಯಾಪಾರಿವವಾಮುನಿಪತಿಯಾ ||
ಅಡಿಯೊಳ್ ಪೊರೞ್ದ ನಿಮಿತ್ತಮನಿನಿಸುಂ | ತಡೆಯದೆ ಕೇಳ್ವೆನೆನುತ ನಗರಿಯ ಪೂಱ |
ಗಡೆಯ ಬನದ ಬಸದಿಗೆ ಜತಿರಾಯನ ಬೞಿವಿಡಿದೆಯ್ದಿಳು            || ೪೯ ||

ಬನಮಂ ಪೊಕ್ಕು ಬಸದಿಯಂ ಬಲವಂ | ದನುರಾಗದಿನರುಹನನಭಿವಂದಿಸಿ |
ಮುನಿನಾಥನ ಮೆಲ್ಲಡಿದಾವರೆಗೆ ನಮಸ್ಕಾರಂ ಮಾಡಿ ||
ವನಜೋಪಮಕರಯುಗಮಂ ಮುಗಿದೆಲೆ | ಮುನಿಪಾ ಖಗಮಿಥುನಂ ಪೊರೞ್ದಿರವಂ |
ವಿನಯದಿ ನಿರವಿಸಬೇಕೆನುತವೆ ಬೆಸಗೊಂಡಳು ವೈಶ್ಯಸತಿ  || ೫೦ ||

ಈ ಪರಿ ವಿಜ್ಞಾಪನಮಂ ಮಾಡಿದ | ಚಾಪಳನೇತ್ರೆಯ ವದನಮನೀಕ್ಷಿಸಿ |
ತಾಪಸನಿರದಿಂತೆಂದಂ ಮಗಳೇ ನೀಂ ಬೆಸಗೊಂಡುದನು ||
ಆ ಪಾರಿವವಕ್ಕಿಗಳೆ ಬರೆದು ತಾ | ವೇ ಪೇೞ್ವುವು ಪೋಗೆನುತವೆ ಬೀೞ್ಕೊಡ |
ಲಾಪೊಂಬಸದಿಯನಾಗಳೆ ಪೊಱಮಟ್ಟೆಯ್ದಿದಳಾಲಯಕೆ || ೫೧ ||

ಬರುತಾಬಲ್ವೆೞೆಮೊಗದ ತನೂದರಿ | ತರಿಸಿ ತೊಳಪ ಬೆಳ್ಳಿಯ ಪಲಗೆಗೆ ಕ |
ತ್ತುರಿಯ ಮಿಸುಪ ರಜಮಂ ಪರಕಲಿಸುತ್ತಾಪಾರಿವಗಳನು ||
ಬರಿಸಿಯೆಲೇ ಪಾರಿವವೇ ಮುನಿವರ | ಚರಣದ ಮುಂಗಡೆಯೊಳ್ ನೀವದಿರದೆ |
ಪೊರೞ್ದಿರವಂ ನೀಮೊರೆಯಿಮೆನುತ ಕಡುನೇಹದೆ ಕೇಳಿದಳು || ೫೩ ||

ಪ್ರಿಯದತ್ತೆಯ ಮಾತಂ ಲಾಲಿಸುತನು | ನಯದಿಂ ರತಿವರನೆಂಬ ಕಪೋತಂ |
ಪ್ರಿಯಮಂ ನೋೞ್ಪವರ್ಗುದಯಿಸಿ ಮಾಣಿಕ್ಯದ ಪೊಸಪಲಗೆಯನು ||
ನಯದಿಂ ಸೋಲಿಪ ಚಂಚುವಿನಿಂ ನಿ | ಶ್ಚಯದಿಂ ಬರೆದುದು ನೂತನಕಸ್ತೂ |
ರಿಯ ರಜಮಂ ಪರಕಲಿಸಿದ ಫಲಕದ ಮೇಗೀತೆಱದಿಂದ     || ೫೪ ||

ವಿತತಮೃಣಾಲವತೀಪುರವರದಧಿ | ಪತಿಯಪ್ರತಿಮಸುಕೇತುನೃಪಂ ಗುಣ |
ವತಿಯೆಂಬಂಗನೆಗೂಡಿಯರಸುಗೆಯ್ಯುತ್ತಿರಲಂತಲ್ಲಿ ||
ರತಿವರ್ಮಂ ತಾನೆಂಬೊಬ್ಬ ವಣಿ | ಕ್ಪತಿಗಮವನ ಸತಿ ವಿಮಲಶ್ರೀಗಂ |
ಗತಸೌಂದರ್ಯಂ ಭವಸೇನಾಖ್ಯತನುಜನುದ್ಭವಿಸಿದನು    || ೫೫ ||

ಆ ನಗರಿಯೊಳಿರ್ಪಂ ತತ್ಖಳ ಭವ | ಸೇನನ ಮಾವಂ ಶ್ರೀದತ್ತಾಖ್ಯಂ |
ಮಾನಿಯವಗಮಾತನ ಸತಿ ಗಂಧಶ್ರೀಗಂ ಜನಿಯಿಸಿದ ||
ಪೀನಸ್ತನೆ ರತಿವೇಗೆಯನೆನ್ನೆಯ | ಸೂನುಗೆ ಕುಡು ನೀನೆನುತುಂ ತದ್ಭವ |
ಸೇನನ ಜನಕಂ ಬೇಡಿದೊಡಾಕೆಯ ತಂದೆ ನುಡಿದನಿಂತು    || ೫೬ ||

ಸೋದರದಳಿಯಂಗಣುಗಿಯನೀವುದು | ಮೇದಿನಿಯೊಳಗುಳ್ಳುದು ಭಾವಾ ಕೇ |
ಳಾದೊಡೆ ನಿನ್ನ ಮಗಂ ದುಷ್ಟಂ ಬಾಯೊಳಗೊಂದಕ್ಕರಮಂ ||
ಓದಿದುದಿಲ್ಲದಱಿಂದಾನಾತಂ | ಗೀದರಹಸಿತಾನನೆಯಂ ಕುಡುವುದು |
ಸಾದರಮಲ್ಲೆನುತಾಶ್ರೀದತ್ತಂ ಬಿಱುನುಡಿಯಾಡಿದನು    || ೫೭ ||

ಆ ನುಡಿಯಂ ತಾನುಂ ಕೇಳ್ದಾಭವ | ಸೇನಂ ಸೋದರಮಾವನೊಳೆಂದಂ |
ನಾನೀರಾಱುಬರಿಸ ಪರಿಯಂತಂ ಪರದೇಶಕ್ಕೆಯ್ದಿ ||
ಸಾನಂದದಿ ವಿದ್ಯಾಭ್ಯಾಸಂಗೆ | ಯ್ದೀನಗರಿಗೆ ಮಗುೞ್ವನ್ನಬರಂ ಮ |
ತ್ತೀನಾರಿಯನಾರ್ಗಂ ಕುಡಬೇಡೆನುತವೆ ಮಾತಾಡಿದನು    || ೫೭ ||

ಈ ನುಡಿಯಂ ಮಾವನೊಳೆ ನುಡಿದು ಮ | ತ್ತಾ ನಗರಿಯನಸವಸದಿಂ ಪೊಱಮ |
ಟ್ಟಾನಂದದಿ ಬಹುಜನಪದಮಂ ಹೊಕ್ಕೆಲ್ಲಾವೋದುಗಳಂ ||
ತಾನೋದಿ ಮಗುೞ್ವನ್ನಂ ತದ್ಭವ | ಸೇನನ ದುಷ್ಕರ್ಮದ ಫಲದಿಂ ಮುಂ |
ತಾನುನ್ನಯಿಸಿದ ವರುಷದ ಮೇಲೆಣ್ಣಗಲೆಯ್ತರಲಿತ್ತ     || ೫೮ ||

ಭವಸೇನಂ ಕುಱಿತ ದಿನಂ ಕಳಿದುದದು | ನವಯೌವನಮಿಂದಾಯ್ತೆನ್ನ ತನೂ |
ಭವೆ ರತಿವೇಗೆಗೆನುತ್ತಾಶ್ರೀದತ್ತಂ ತತ್ಪುರವರದ ||
ರವಿದತ್ತಂಗಂ ಜಯದತ್ತೆಗಮು | ದ್ಭವಿಸಿದ ರಸಿಕಸುಕಾನ್ತಂಗವಳಂ |
ಸವಿನಯದಿಂದುದ್ವಹನಂಮಾಡಿದನಾಪೊೞಲಱಿಕೆಯೊಳು           || ೫೯ ||

ಆ ಮಱುವಗಲೊಳ್ ದೇಶಾಂತರದಿಂ | ತಾಮಸವಂ ಮಾಡದೆ ಹೊೞಲಂ ಹೊ |
ಕ್ಯಾಮಾವಂ ನಿಜಸುತೆ ರತಿವೇಗಯನೊಸೆದು ಸುಕಾನ್ತಂಗೆ ||
ಪ್ರೇಮದಿ ಧಾರೆಯೆಱೆದ ವಾರತೆಯಂ | ಕಾಮುಕಭವಸೇನಖಳಂ ಕೇಳ್ದು |
ದ್ದಾಮಕುಪಿತಮಾನಸನಾದಂ ಜವದಿಂ ಜವನಂದದೊಳು || ೬೦ ||

ಎನಗೆಂದಿರ್ದೇಣಾಂಕವದನೆಯಂ | ದಿನವೆಂಟಱ ಹೆಚ್ಚಂ ಬಗೆಯೊಳ್ ಬಗೆ |
ದನುಜೆಯ ಮಗನಿವನೆಂದು ಮಱುಕಗೊಳ್ಳದೆ ಸೋದರಮಾವಂ ||
ವಿನಯಮನೊಕ್ಕು ವಿಚಾರಿಸದನ್ನಿಗ | ಗನುನಯದಿಂ ಕೊಟ್ಟನಲಾಯೆನುತುಂ |
ಮುನಿಸಂ ದುರ್ಜನಭವಸೇನಂ ಬಗೆಯೊಗೋವದೆ ಬಲಿದಂ            || ೬೧ ||

ಎನ್ನತ್ತೆಯ ನಿಜನಂದನನಿರ್ದಂ | ತನ್ನಿಗನ್ನಂ ಬೇಡೆನ್ನದವಗೆ ತಾ |
ನುನ್ನತಿಕೆಯಿನೊಲಿದಾರತಿವೇಗೆಯುಮಂ ಪ್ರಿಯತರದಿಂದ ||
ತನ್ನ ವರಿಯಿಸಿದ ಸುಕಾಂತನುಮಂ | ಕೆನ್ನಂ ಸಾಧಿಸಿಮುಣ್ಮುೞಿಗೊಳಿಸದೊ |
ಡೆನ್ನೀಜನ್ಮಮಿದೇಕೆನುತಂ ಭವಸೇನನೆಣಿಸುತಿರಲು         || ೬೨ ||

ಇತ್ತ ಸುಕಾಂತನುಮಾರತಿವೇಗೆಯು | ಮುತ್ತಮರೂಪಯುತರ್ ಸಿರಿಯುಂ ಪುರು |
ಷೋತ್ತಮನುಂ ಕೂಡಿದ ತೆಱದಿಂದಮೊಱಲ್ದತಿಮುದದಿಂದ ||
ಮತ್ತೆ ಪಲವುಪಗಲಂ ಸುಖದಿಂ ಕಳಿ | ಯುತ್ತಿರೆ ಬಂದ ಬಸಂತದೊಳಾಪುರ |
ದೊತ್ತಿನ ವನಕೆ ವನಕ್ರೀಡಾಕಾರಣದಿಂದೆಯ್ದಿದರು          || ೬೩ ||

ತಳುವದೆ ತನು ತನ್ನಯ ಬೆಂಬೞಿಯೊಳ್ | ನೆೞಲಂಬಿಡದೆಯ್ದಿಪ ತಱದಿಂದಾ |
ಲಳನಾಮಣಿರತಿವೇಗಯನೊಲವಿಂದಾವೈಶ್ಯಕುಮಾರಂ ||
ಕಳಿಯದಲಂಪಿಂ ಕೂಡಿ ನಡೆದು ಬನ | ದೊಳವೊಕ್ಕಂಗಜನುಂ ರತಿಯುಂ ಮನ |
ವೆಳಸಿ ಕರಂ ಕ್ರೀಡಿಸುವಂದದಿ ವನಕೇಳಿಯೊಳೊಪ್ಪಿದರು   || ೬೪ ||

ಮಾವಿನ ತಣ್ಣೆೞಲೊಳ್ ವಾಸಂತಿಯ | ಕಾವಣದೊಳ್ ನವಲತಿಕಾಮಂಟಪ |
ದೋವರಿಯಳ್ ಪನಿನೀರ್ಗಳ ಕಾಲೊಳ್ ಕೃತ್ರಿಮಶೈಲದೊಳು ||
ತಾವರೆಯಲರ್ಗೊಳದೊಳು ಪುಳಿಲೊಟ್ಟಲೊ | ಳಾವರವಧುಗಳ್ ಚೈತ್ರನುಮಾವನ |
ದೇವತೆಯುಂ ಕ್ರೀಡಿಸುವಂದದಿ ವಹರಿಸಿ ಕಣ್ಗೊಪ್ಪಿದರು || ೬೫ ||

ಲತೆಗೆಸೆವಾಲಿಂಗನದಿಂ ಪಾರಾ | ವತಕೆ ಮಿಸುವ ಚುಂಬನದಿಂ ಲಾವುಕ |
ತತಿಗೆ ಕೊರಲ ಕೂಜಿತದಿಂ ಬಾಳಾಂಕಿಗೆ ಸವಿಮಾತುಗಳಿಂ ||
ಅತಿರಂಜಿಸುವಮಳ್ಗುಬ್ಬಿಗೆ ತವೆಯದ | ರತಿಯ ಪರಿಣತೆಯಿನಾಮೋಹಿಪ ದಂ |
ಪತಿಗಳ್ ಮುಂ ಗುರುವಾಗಿ ಕರಂ ಕ್ರೀಡಿಸಿದರ್ ವನದೊಳಗೆ           || ೫೬ ||

ಈ ವಿಧದಿಂ ವನಜಲಕೇಳಿಯನೊಸೆ | ದಾವೈಶ್ಯೋತ್ತಮನುಂ ರತಿವೇಗೆಯು |
ಮೋವದೆಯೊಂದು ಲತಾಗೃಹದೋವರಿಯೊಳ್ ಸುಸಿಲಂಗೆಯ್ದು ||
ತೀವಿದ ಪರವಶದಿಂ ಮೆಯ್ಯಿಕ್ಕಿರ | ಲಾವೇಳೆಯನುಱೆ ಸಾಧಿಸಿಯಾದು |
ರ್ಭಾವಿ ಖಳಂ ಭವಸೇನನಿಱಿದು ಕೊಂದಂ ಕಡುಮುನಿಸಿಂದ           || ೬೭ ||

ಅತಿಪಾತಕಿ ಭವಸೇನನ ಕೈಯಿಂ | ಗತಜೀವಂಬಡೆದ ಸುಕಾಂತನುಮಾ |
ರತಿವೇಗಯುಮೀಹರ್ಮ್ಯದ ಲೋವೆಯ ಹೊರೆಯೊಳ್ ಮನೆಗಟ್ಟಿ ||
ಸತತಂ ಸುಖಿಯಿಪ ಪಾರಿವವಕ್ಕಿಗೆ | ರತಿವರನುಂ ರತಿಸೇನೆಯುಮೆಂಬು |
ನ್ನತಿಕೆಯ ಹೆಸರಂ ಹಡೆದು ಜನಿಸಿ ಬೆಳೆದುವು ನಿಮ್ಮೊತ್ತಿನೊಳು      || ೬೮ ||

ಮನೆಯೆಲ್ಲಕೆ ಮುದ್ದಾಗಿ ಬೆಳೆದು ನಾ | ವನುದಿನದಿಂದಿರುತಿಂದಿನ ದಿನದೊಳ್ |
ಮುನಿದಾಥನ ಮೆಲ್ಲಡಿಯಂ ಕಾಣಲೊಡನೆ ಜಾತಿಸ್ಮರಣಂ ||
ಜನಿಸಿದ ಕಾರಣದಿಂದೀಜನ್ಮದ | ಘನದುಃಖದ ನಿರ್ಜರೆಗೆ ನಿಮಿತ್ತಂ |
ವನಿತಾಮಣಿ ಪೊರೞ್ದೆವು ನಾಮೆಂದು ಬರೆದು ತೋಱಿತು ಪಕ್ಕಿ    || ೬೯ ||

ಇಂತು ಸವಿಸ್ತರದಿಂ ತಮ್ಮಯ ಜ | ನ್ಮಾಂತರಮಂ ಬರೆದಱಿಪಿದ ಪಕ್ಕಿಗೆ |
ಕಾಂತಕಲಾಭೃದ್ಭಿಂಬವದನೆಯತ್ಯಾಶ್ಚರ್ಯಂಬಟ್ಟು ||
ಸಂತಸದಿಂ ಮೆಯ್ದಡವಿ ಸುಹೃಜ್ಜನ | ಸಂತತಿಯಂ ಕರೆಯಿಸಿ ಬೞಿಕಾವೃ |
ತ್ತಾಂತಮನವರೊಳೊರೆದು ಸವಿಗುಡುಕಂ ಕೊಟ್ಟೋವಿದಳಾಗ      || ೭೦ ||

ಆ ಪಾರಿವದಮಳ್ಗಳ್ ಮುನಿನಾಥನ | ರೂಪಂ ಕಂಡಡಿಯಲ್ಲಿ ಪೊರೞ್ದುದ |
ನಾಪಳಕದೊಳೆ ಬರೆದ ತಮ್ಮಯ ಮುನ್ನಿನ ಜನ್ಮದ ತೆಱನಂ ||
ಭೂಪಾಲಜಗತ್ಪಾಲಂ ಕೇಳ್ದವ | ನಾಪೊಗಸಿನೊಳೆ ಕರಸಿ ಮುನ್ನವೆಬರೆ |
ದಾಪರಿಯಂ ತಾನಾಗಳೆ ಬರೆಯಿಸಿಯಕ್ಕಜಮೆಯ್ದಿದನು   || ೭೧ ||

ಇಂತಾಪಾರಿವವಾಪುರವರದೊಳ್ | ಸಂತಸಮಂ ಸರ್ವರ್ಗಾಗಿಸಿ ನಿ |
ಶ್ಚಿಂತಂ ಪ್ರಿಯದತ್ತಾ ವೈಶ್ಯಸ್ತ್ರೀಯಾಲಯದೊಳಗಾಡಿ ||
ಸಂತಸಮಿರ್ದವು ಮತ್ಪ್ರಾಣೇಶಾ | ಕಂತುಸದೃಶರೂಪಾ ಜಯಧರಣೀ |
ಕಾಂತಾ ಎನುತ ನುಡಿದ ನಲ್ಲಳ ನುಡಿಗೇಳಿಸನಾನೃಪತಿ    || ೭೨ ||

ಪರಿರಂಜಿತಪುಷ್ಕರಯುತಹಸ್ತಂ | ನಿರುತಂ ನವದಾನೋಪೇತಂ ಬಂ |
ಧುರಮಣಿಮಸ್ತಕನುರುಬಲಯುತನವನೀಭೃದ್ಗುಣಕಾಂತಂ ||
ಸುರುಚಿರಮೃದುತರಮಾರ್ಗಸಮೇತಂ | ಹರಿದಿಗ್ಮಾತಂಗದ ಪಾಂಗಿಂದಾ |
ಧರೆಯೊಳಗತಿವಿಭ್ರಾಜಿಸಿದಂ ಸತ್ಪ್ರಭುಕುಲಮಣಿದೀಪಂ   || ೭೩ ||

ಇದು ಸರುನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಳಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಾದುದು ಪನ್ನೆರಡನೆಯ ಮಿಸುಪ ಸಂಧಿ    || ೭೪ ||

ಹನ್ನೆರಡನೆಯ ಸಂಧಿ ಸಂಪೂರ್ಣಂ