ಸೂಚನೆ || ಖಗಯುಗಮೞಿದು ಖಚರನೃಪನುದರದೊ |
ಳೊಗೆದು ಗಮನಯುದ್ಧದೆ ಮಂಗಲಮಂ |
ಮಿಗೆ ಹಡೆದವನಿಯನಾಳ್ವ ಕಥನಮಂ ಸತಿಯೊರೆದಳ್ ವಿಭುಗೆ ||

ಚಿತ್ತೈಸೆಲೆ ಚಿತ್ರೇಶಾ ಸಂತಸ | ವೆತ್ತಾಪಾರಾವತದಂಪತಿಯಿರ |
ಲತ್ತ ಸುಕಾಂತನುಮಂ ರತಿವೇಗಯುವಂ ತದ್ವನದೊಳಗೆ ||
ಮತ್ತ ಹೃದಯಭವಸೇನಂ ಕೊಲಲಾ | ಪತ್ತನದರಸಾವಾರತೆಗೇಳ್ದು ಕ |
ಱುತ್ತವನಂ ಸಮವರ್ತಿಯ ಮುಖಮಂ ಹೊಗಿಸಿದನಾಕ್ಷಣದಿಂ        || ೧ ||

ಈ ತೆಱದಿಂದರಸಂ ತಲೆವೊಯಿಸಲ್ | ಪಾತಕಿ ಭವಸೇನಂ ಪಿರಿದುಂ ಕೋ |
ಪಾತುರನಾಗಿಯೞಿದು ಬೞಿಕಾಪ್ರಿಯದತ್ತೆಯ ಸದನದೊಳು ||
ಮಾತೇಂ ಮನೆವೆಕ್ಕಾಗಿ ಜನಿಯಿಸಿ ಕ | ಪೋತಮಿಥುಮಂ ಮುನ್ನಿನ ವೈರಮ |
ನೇ ತವೆ ನೆನೆದು ಮುನಿದು ಕೊಂದಂ ಮನೆಯೆಲ್ಲ ಮಱುಗುವಂತೆ   || ೨ ||

ಈ ತೆಱದಿಂ ರತಿವರವೆಸರ್ವಡೆದ ಕ | ಪೋತನೞಿದು ವಿಜಯಾರ್ಧಾದ್ರಿಯ ವಿ |
ಖ್ಯಾತೋತ್ತರವಿಲಸಚ್ಛ್ರೇಣಿಯ ಗಾಂಧಾರವಿಷಯದಲ್ಲಿ ||
ರೀತಿಯನಾಂತ ಸುಸೀಮಾನಗರಕೆ | ನೀತಿವಿದಂ ರವಿಗತಿಖಚರೇಂದ್ರಂ |
ಭೂತಳಮಂ ಪಾಲಿಸುತಿರ್ಪಂ ಪುರುಷೋತ್ತಮನಂದದೊಳು || ೩ ||

ಆ ವಿದ್ಯಾಧರರಾಜಂಗಂ ರಾ | ಜೀವೋಪಮಲೋಚನೆ ಶಶಿಕಾಂತಾ |
ದೇವಿಗಮೊಗೆದು ಕನಕವರ್ಮಕುಮಾರನಾಮಮನಾಂತು ||
ಭಾವಭವಂ ಬಂದಾಯಿಂದಿರೆಗಿಂ | ದ್ರಾವರಜಂಗುದ್ಭವಿಸಿ ಸಮಸ್ತೋ |
ರ್ವೀವಳಯಮೆನೆಲ್ಲಂ ರೂಪಿಂ ನೆಱೆಮೋಹಿಸಿಯೊಪ್ಪಿದನು || ೪ ||

ನರ್ಮಸತೀನವಸುಮನೋಧರ್ಮಂ | ನಿರ್ಮಲತರಚರಿತಮನೋಧರ್ಮಂ |
ದುರ್ಮುಖರಿಪುಧರಣೀಪಾಲಕಸಂತತಿಗಭಿನವಧರ್ಮಂ ||
ಕರ್ಮಕಲಂಕರಹಿತಸದ್ಧರ್ಮಂ | ನಿರ್ಮಾಯಂ ನಿರುಪಮಗುಣವರ್ಮಂ |
ಪೆರ್ಮೆವಡೆದನವನೀಮಂಡಲದೊಳಗಾಕಾಂಚನವರ್ಮಂ   || ೫ ||

ರತಿರಮಣನ ರಾರಾಜಿಪ ರೂಪಂ | ಶತದಳಸಂಭವನಿನಿಸಿಲ್ಲದೆ ತೆಗೆ |
ದತಿಚತುರಿಂ ನಿರ್ಮಿಸದಿರ್ದೊಡೆ ಮತ್ತಾಖಚರೇಶ್ವರನಾ ||
ಸುತಗಬಲಾಜನಮಂ ನೆಱೆಮೋಹಿಪ | ನುತಸೌಂದರ್ಯಂ ತಾನೆಲ್ಲಿಯದಾ |
ಅತನುತ್ವಂ ಮತ್ತಾಅಲರ್ವಿಲ್ಲಗೆ ಭಾವಿಸಲೆಲ್ಲಿಯದು   || ೬ ||

ಸ್ಮರಗಜಕುತ್ತಮಮದವೇಱುವವೊಲ್ | ಸುರಭಿಶರಕೆ ಬಾಸಟಮೇಱುವವೊಲು |
ಹರಿಣಧರಗೆ ಹದಿನಾಱುಕಲೆಗಳೇಱುವವೊಲ್ ನಂದನಕೆ ||
ವರಮಧುಋತುವೇಱುವವೊಲ್ ವಿದ್ಯಾ | ಧರರಾಯನ ಮಿಸುಕುವ ರೂಪಿಗೆ ಹೊಸ |
ಹರೆಯಂ ಬಂದುದು ಬಾಂಬಟ್ಟೆಗವೆಣ್ಗಳನತಿಮೋಹಿಸುತ            || ೭ ||

ಮತ್ತಾವಿಜಯಾಚಲದಾಶ್ರೇಣಿಯೊ | ಳುತ್ತಮಗಂಧವಿಷಯಮತಿರುಚಿರಂ |
ಬೆತ್ತಿರಲದಱೊಳ್ ಭೋಗಪುರಂ ರಂಜಿಸುತಿರಲದನಾಳ್ವ ||
ಚಿತ್ತಜಸನ್ನಿಭವಾಯುರಥಂಗಂ | ವೃತ್ತಸ್ತನೆ ರುಕ್ಮಿಣಿಗಂ ರತಿವರ |
ನೊತ್ತಿನೊಳಗೆ ಸತ್ತಾಪಾರಿವವೆಣ್ಬಕ್ಕಿ ಜನಿಸಿತಂದು         || ೮ ||

ಇಂತವರುದರದೊಳುದಯಿಸಿ ಬೞಿಕಾ | ಕಾಂತಾವತಿಯೆಂದೆಂಬೊಳ್ವೆಸರಂ |
ತಾಂ ತಳೆದೆಳಲತೆ ಬೆಳೆದಲರ್ವಡೆದಂದದಿ ಜವ್ವನವಾಂತು ||
ಕಂತುಕಣೆಗೆ ಬಿಜ್ಜೋದರರಾಯರ | ತಿಂತಿಣಿಯಂ ಗುಱಿಮಾಡಿ ಕೆಡಪಿ ಕಡು |
ಸಂತಸದಿಂದಿರ್ಪಳ್ ಸಂಪೂರ್ಣಶಶಾಂಕಲಲಿತವದನೆ         || ೯ ||

ಸಣ್ಣ ಸಸಿಗೆ ಸರಿವಂದ ನೊಸಲ್ ಪೊಂ | ಬಣ್ಣದ ಪೊಗರಂ ಗೆಲ್ವಂಗಚ್ಛವಿ |
ಬಿಣ್ಣದುವಾದ ಕುಚಂ ಬಿಸಲತಿಕೆಯನೇಳಿಪ ನಳಿತೋಳು ||
ನುಣ್ಣನೆಸೆವೆ ಗಿಳಿನುಡಿ ತೊಂಡೆಯ ತನಿ | ವಣ್ಣಂ ಗೆಲ್ವಿಂದುಟಿ ಮಱಿವುಲ್ಲೆಯ |
ಕಣ್ಣಂ ಗೆಲ್ವಲರ್ಗಣ್ಣೊಪ್ಪಿದುವಾಖಚರತನೂಭವಗೆ     || ೧೦ ||

ಎಳಮುತ್ತೆಸೆವ ರದಂ ಮಾಣಿಕಮಣಿ | ಲಲಿತಾಧರವುಗುರ್ಗಳ್ ವೈಡೂರ್ಯಂ |
ಕುಳಿಶಮಲರ್ಗಣ್ಗಡೆ ಪೊಸಪವಳಂ ಕೋಮಲತರಪಾದಂ ||
ಹಳದಿವರಲ್ ಮೆಯ್ ಹರಿನೀಳಾಳಕ | ಮಳವಡೆ ಕಣ್ಗೊಪ್ಪಿದಳರಮಗಳು |
ಜ್ಜ್ವಳಿಸುವ ರತ್ನವಿರಾಜಿತಪಾಂಚಾಳಿಕೆಯೆಂಬಂದದೊಳು            || ೧೧ ||

ಪದೆದೀಕ್ಷಿಪ ಪಲ್ಲವಕಪ್ರತತಿಯ | ಹೃದಯಕತಿಭ್ರಮಣೆಯನೊದವಿಪ ಗುಣ |
ದೊದವೆಮಗಲ್ಲದೆ ತಿಳಿದು ವಿಚಾರಿಸೆ ತಮಗಿನಿಸಿಲ್ಲೆನುತ ||
ಮದನನ ಕೈಯೊಳಗಾಡುವ ಪೊಸಚಿ | ನ್ನದ ಬೊಗರಿಯನಿನಿವಿರಿದುಂ ನಗುವಂ |
ದದೆ ಹೊಗರೆಸೆವ ಮುಗುಳ್ಮೊಲೆಯೊಪ್ಪಿದುವಾನೃಪನಂದನೆಗೆ     || ೧೨ ||

ಕೆಲ್ಲಯಿಸುತ ನೋಡುವ ಕೇಕರದಿಂ | ಜಲ್ಲಿಱಿವೊಳ್ವೆಳಗುವ ಶೀಕರಣಂ |
ಮೆಲ್ಲನೆ ಮಾತಾಡುವ ಪೊಸಜಾಣ್ಣುಡಿ ಸಮ್ಮೋಹನಮಂತ್ರ ||
ಸಲ್ಲಲಿತಾಂಗದರುಚಿಯಾಕರ್ಷಣ | ವುಲ್ಲಸಿತಾಸ್ಯದ ನಗೆ ಠಕ್ಕಿನ ರಜ |
ಮಲ್ಲದೊಡಾಬಿಜ್ಜೋದರಿ ಬಲ್ಲವರಂ ಬಗೆಗೊಳಸುವಳೇ         || ೧೩ ||

ಅವಳೆಡಗಡೆಗೆಯವಳ ಬಲಗಡೆ ಪಡಿ | ಯವಳುಜ್ಜ್ವಲಿಪಾನನಕವಳೀಕ್ಷಿಪ |
ನವಮುಕುರದ ಪ್ರತಿಫಲಮೇ ಪಾಸಟಿಯಂತದಱಿಂದವಳ್ಗೆ ||
ಅವನಿತಳದೊಳಗನಂಗನೆನಿಸಿದನ | ಯುವತಿಯೆನಿಪ ರತಿಗಿತಿ ಬಿಡುವೆಣ್ಗಳ |
ದಿವಿಜಗಿವಿಜಸತಿಯರು ಪಾಸಟಿಯೇ ಭಾವಿಸುವರ ಬಗೆಗೆ  || ೧೪ ||

ಈಯಂದದಿನೊಪ್ಪುವ ಬಾಂಬಟ್ಟೆಗ | ರಾಯನಣುಗಿ ರಾಜೀವದಳಾಂಬಕಿ |
ಕಾಯಜಮೋಹನದಾಯಕಿ ತನ್ನಂ ಗತಿಯುದ್ಧದೊಳಾವಂ ||
ಅಯತಿಯಿಂ ಸಲೆ ಗೆಲ್ಲಂಗೊಂಡವ | ನೀಯಸುಗೀಶ್ವರನೆಂದೆನಿಸುವಭಿ |
ಪ್ರಾಯಮನಂಬರಚರಜನಪದದೊಳ್ ಡಂಗುರವೊಯಿಸಿದಳು       || ೧೫ ||

ಗೆಲ್ಲವಡೆದು ಮದನನ ಗೇಣ್ಗಣ್ಗಳ | ಸಲ್ಲಲಿತಾಂಗಿಯನೊಲಿಸುವೆವೆಂಬೀ |
ಬಲ್ಲಿದ ಬಾಂಬಟ್ಟೆಗರೀಬೆಳ್ಳಿಯ ಬೆಟ್ಟದ ಶಿಖರದೊಳು ||
ಉಲ್ಲಸಿತಂಬಡೆದಭವನ ಭವನ | ಕ್ಕೆಲ್ಲಂ ಬನ್ನಿಮೆನುತ ಡಂಗುರಮಂ |
ಸಲ್ಲೀಲೆಯೊಳಂ ಹೊಯಿಸಿದನಾಖೇಚರಚಕ್ರೇಶ್ವರನು    || ೧೬ ||

ಆ ಡಂಗುರದ ದನಿಗೆ ಬಜ್ಜೋದರ | ನಾಡ ಕುವರರೆಲ್ಲರ್ ಗತಿಯುದ್ಧಂ |
ಮಾಡುವೆವೆನುತ ರಜತಗಿರಿಗೆಯ್ದಲು ಕೇಳ್ದು ಕನಕವರ್ಮಂ ||
ನೋಡುವೆನಾನಿದನೆನುತತಿತವಕಂ | ಮಾಡಿ ಬೞಿಕ ತಾನಲ್ಲಿಗೆ ನಡೆದಂ |
ವೇಡೈಸಿದ ತನ್ನೋರಗೆಯಂಬರಚರಭೂಪರ ನಡುವೆ     || ೧೭ ||

ಇತ್ತ ಪವನಗತಿಖಚರನರೇಂದ್ರಂ | ತತ್ತನುಜಾತೆ ತರಳಲೋಚನೆ ಸ |
ದ್ವೃತ್ತಸ್ತನೆ ಕಾಂತಾವತಿಯಂ ಸರ್ವಾಭರಣಂದೊಡಿಸಿ ||
ಮತ್ತಗಜೋಪಮಗಮನದ ಸತಿಯರ | ಮೊತ್ತವೆರಸಿ ತದ್ವಿಜಯಾರ್ಧಾದ್ರಿಯ |
ತುತ್ತತುದಿಯ ಸಿದ್ಧಾಲಯಕೆನಸುಂ ವಿಭವದೊಳೆಯ್ದಿದನು          || ೧೮ ||

ಕನ್ನಡಿಮೊಗದ ಕಮಲದಳನೇತ್ರದ | ಭಿನ್ನಕುಚದ ಬಿಸಿನೀನಿಭಹಸ್ತದ |
ಹೊನ್ನಹೊಗರನೇಳಿಪ ಮೆಯ್ವೆಳಗಿನ ಪೊಂಗುವ ಜವ್ವನದ ||
ಉನ್ನತಕುಚದುಂಗುರವಿಡಿನಡುವಿನ | ಚಿನ್ನೆಯರೊಂದೊಗ್ಗಿನೊಳಾಹೆಣ್ಗಳ |
ರನ್ನೆ ಖಚರಚಕ್ರೇಶನ ನಂದನೆಯೊಡನೊಲ್ದೆಯ್ದಿದರು    || ೧೯ ||

ಬಂದಾಗಿರಿಯ ಬಸದಿಯಂ ಹೊಕ್ಕಭಿ | ವಂದಿಸಿಯರ್ಹತ್ಪದಯುಗಮಂ ಮನ |
ಸಂದು ಮರಾಳಮದಾಲಸಯಾನೆ ಮಿಸುಪ ಮಂಡಪಕೆಯ್ದಿ ||
ನಿಂದಿರವಲಳಭಿಜಾತೆಯದೊರ್ವಳ್ | ಸಂದಣಿಸಿದ ಬಾಂಬಟ್ಟೆಗರಾಯರ |
ನಂದನರ್ಗಿಂತೆಂದಳ್ ಗತಿಯುದ್ಧಂಮಾಡುವ ಬಿನ್ನಣವ   || ೨೦ ||

ಈ ವಿಜಯಾದ್ರಿಯ ಬಸದಿಯ ಶಿಖರದ | ಲೋವೆಗಡರಿ ಬೞಿಕಿಳೆಯಂ ಬಿಟ್ಟಾ |
ಪೂವಿನ ಮಾಲೆ ನೆಲಕೆ ಬೀೞದ ಮುನ್ನವೆಯವಳೊಡವರಿದು ||
ಆವಾಸವಗಿರಿಗೆಯ್ದಿಯಕೃತ್ರಿಮ | ದೇವಾಲಯದಭವನನರ್ಚಿಸಿ ಬಂ |
ದೋವದದಂ ಪಿಡಿದವನೇ ಪತಿ ಸತಿಗೆಂದಳವಳ ಕೆಳದಿ      || ೨೧ ||

ಆ ನುಡಿಗೇಳ್ದೊತ್ತರವೊತ್ತಿದವೊಲು | ಮಾನವಡಗಿ ಬಿಜ್ಜೋದರರೆಲ್ಲ ನಿ |
ದಾನಿಸುತಿರಲದನಱಿದಿನವೇಗಖಗೇಶನ ನಿಜಸೂನು ||
ಮಾನವಮದನಕನಕವರ್ಮನೃಪಂ | ತಾನಾಗತಿಯುದ್ಧಂಮಾಡುವೆನೆನು |
ತಾನಂದದಿ ನಡೆತಂದಂ ಮತ್ತಾದೇಗುಲದುಪರಿಮಕೆ        || ೨೨ ||

ಆ ಗೆತಿಯುದ್ಧವ ಮಾಡುವವೆನೆನುತಾ | ದೇಗುಲದಮಲಮಣಿಯಶಿಖರಮನನು |
ರಾಗದಿನಡರ್ದೊಪ್ಪುವ ಮಾಣಿಕ್ಯದ ಪಟ್ಟಿಗೆಯೊಳ್ ನಿಂದಾ ||
ಆಗಸವಟ್ಟೆಗರಾಯನಣುಗನುಂ | ಸೋಗೆಮುಡಿಯ ಕಾಂತಾವತಿಯುಂ ಸಮ |
ವಾಗಿಯುದಯಗಿರಿಯೇಱಿದ ಶಶಿ ರೋಹಿಣಿಯಂತೊಪ್ಪಿದರು     || ೨೩ ||

ಆ ಮಣಿಮಯಶಿಖರಮನಡರ್ದೊರ್ವಳ್ | ಭಾಮಿನಿಯವಧಾನಮೆನುತ್ತುದ್ಗಮ |
ದಾಮಮನಿೞಿಯಬಿಡಲ್ಕದು ಬೀೞದ ಮುನ್ನ ಜವಳಿಗಾಲಿಂ ||
ಕೋಮಲೆ ಕಾಂತಾವತಿಯುಂ ನೂತನ | ಕಾಮ ಕನಕವರ್ಮನುಮೊಡವರಿದರು |
ಹೇಮಾಚಲದ ಕಡೆಗೆ ಗಾಳಿಗೆ ಗಱಿಮೂಡಿದ ಮಾೞ್ಕೆಯೊಳು        || ೨೪ ||

ಬಾಂಬೊೞೆಯೊಳ್ ಸುರಗಿರಿಗೆ ಪರಿದು ಜಿನ | ಬಿಂಬಕ್ಕೆಱಗಿ ತಿರಿಗಿದ ಖಗೇಂದ್ರನ |
ಬೆಂಬೞಿಯೊಳಗೆಯ್ದುವ ತಾರಾನಖದುಚ್ಚಪಯೋಧರದ ||
ತೆಂಬೆಲರಂದದುಸಿರ ತಳತಳಿಸುವ | ತುಂಬುವೆಱೆಯನೇಳಿಪ ನಗೆಮೊಗದ ನಿ |
ತಂಬಿನಿಯಂಬರಲಕ್ಷ್ಮಿಯ ತೆಱದಿ ಮನೋಹರಮೆಯ್ದಿಳು || ೨೫ ||

ಅರುಣಾಧರೆಯಭಿನವಚಂದ್ರಾನನೆ | ವರಮಂಗಲಗುಣಯುತೆ ಸೌಮ್ಯಕಲೇ |
ವರೆ ಗುರುನಿಬಿಡಪಯೋಧರೆ ವಿಭ್ರಾಜಿತಕಾವ್ಯಾಲಾಪೆ ||
ಸುರುಚಿರಮಂದಪ್ರಚುರೆ ತಮಃಕಚೆ | ಹರಿನಂದನನವಕೇತುಸಮಾಂಬಕಿ |
ತರುಣಿ ನವಗ್ರಹದಂತೆ ನಭೋಮಾರ್ಗದೊಳಿರದೆಯ್ದಿದಳು           || ೨೬ ||

ಎಳೆಯಂಚೆಯನೇಳಿಸುವ ನಡೆಯ ಮಱಿ | ಗಿಳಿಯಂ ಮಱಸುವ ನುಣ್ಮಾತಿನ ಮಿಸು |
ಪಳಿಗಳ ಸಾಲಂ ಗೆಲ್ವ ಕುರುಳ ಪೊಣರ್ವಕ್ಕಿಯನದಟಲೆವ ||
ಅಳಘಸ್ತನದ ಚಕೋರಂಗಳ ಸಂ | ಚಳಮಂ ಮಿಗುವಕ್ಷಿಯ ಸೋಗೆಯ ಬ |
ಲ್ವಳಮಂ ಗೆಲ್ವ ಮುಡಿಯ ಖಗಸುತೆ ಖಗದಂದದೊಳೆಯ್ದಿದಳು   || ೨೭ ||

ತಳುವದೆ ಬಂದಾಪೊಸಪೂವಿನ ಸರ | ವಿಳೆಗಿೞಿಯದ ಮುನ್ನಮೆ ಪಿಡಿದಾನೃಪ |
ತಿಳಕನೊಡನೆ ಬರಲಾಱದೆ ಚರಮಾಂಗಂ ಬಿಡದುಱೆ ಸೋಲ್ತು ||
ಅಳಘುಸ್ತನಯುಗಳದ ಘನಕಬರಿಯ | ವಿಳಸತ್ಪೃಥುಕಟಿತಟದಂಬರಚರ |
ಲಳನೆ ಲಲಿತಮದವತ್ಪ್ರಾಯಿತೆಯನುರಾಗದೊಳೆಯ್ದಿದಳು          || ೨೮ ||

ಪರಿತದೊಳಂ ಸೋಲಿಸಿ ತನ್ನಯ ಸೌಂ | ದರತೆಯೊಳಂ ಸೋಲಿಸಿ ಪೊಸಪೂವಿನ |
ಸರವಿಳೆಗಿೞಿಯದ ಮುನ್ನಮೆ ಪಿಡಿದಂಬರಚರಭೂವರನ ||
ಕೊರಲೊಳ್ ನವಮಂದಾರದ ಮಾಲೆಯ | ನರುಣಾಂಬುರುಹೋಪಮಕರಯುಗಲದ |
ತರುಣೀಮಣಿ ಕಾಂತಾವತಿ ಸೂಡಿದಳತಿಕಾತರದಿಂದ        || ೨೯ ||

ಮಗಳಭಿನವಕಂತುಗೆ ಮಾಲೆಯನಿಡ | ಲಗಣಿತಹರ್ಷನನಿಲಗತಿಖಚರಂ |
ಸೊಗಯಿಪ ವೈಭವದಿಂದ ನೆರೆದ ನಭಶ್ಚರರೊಡಗೂಡಿ ||
ನಗರಿಗೆ ನಡೆದು ಬೞಿಕ ಸುಮುಹೂರ್ತದೊ | ಳೊಗುಮಿಗೆಯೊಲವಿಂದಾಯಿಳೆಯೆಲ್ಲಂ |
ಪೊಗೞ್ವಂದದಿ ಸದ್ವಿಧಿಯಿಂ ಕಲ್ಯಾಣಂಮಾಡಿದನವರ್ಗೆ  || ೩೦ ||

ಗಿರಿರಾಜಂ ಗೀರ್ವಾಣಾನೀಕದ | ಪೊರೆಯೊಳ್ ಪೊಣ್ಮುವ ವೈಭವದಿಂದಾ |
ತರುಣಶಶಾಂಕಧರಂಗೆ ಭವಾನಿಯನೊಲಿದೀವಂದದೊಳು ||
ಹರಿಸದಿನಾಬಿಜ್ಜೋಧರರಾಯಂ | ನೆರೆದ ನರೇಂದ್ರರ ನಡುವೆ ಸುಕರ್ಮದಿ |
ಸರಭಿಶರೋಪಮರೂಪಗೆ ನಿಜಸುತೆಯಂ ಧಾರೆಯನೆಱೆದಂ          || ೩೧ ||

ಇಂತು ಮದುವೆಯಂ ಮಾಡಿ ಪವನಗತಿ | ತಿಂತಿಣಿಗೊಂಡಂಬರಚರಧರಣೀ |
ಕಾಂತರುಮಂ ಪ್ರಿಯದಿಂದ ಕಳಿಪಿಯಳಿಯನುಮಂ ನಿಜಕಾಂತೆ ||
ಕಾಂತಾವತಿಯಂ ಬೞಿವೞಿಸಹಿತ | ತ್ಯಂತಹರುಷಹೃದಯಂ ಕಳುಹಲು ಸುರ |
ಕಾಂತಸದೃಶವೈಭದಿಂ ನಿಜಪುರವರಕೆಯ್ದಿದರವರು        || ೩೨ ||

ಪುರಮಂ ಪೊಕ್ಕು ಪುರಂಧ್ರೀಸಹಮಾ | ದರದಿಂ ಜನಕಜನನಿಗಭಿವಂದಿಸಿ |
ಹರಕೆಯನಾಂತು ಕನಕವರ್ಮನೃಪಂ ಪಲಪಗಲವನಿಯನು ||
ಸಿರಿವೆರಸಬ್ಜೋದರನಾಳ್ವಂದದಿ | ತರುಣೀಮಣಿ ಕಾಂತಾವತಿಸಹಿತಂ |
ಪಿರಿದುಂ ಕೀರ್ತಿವಡೆದು ಪರಿಪಾಲಿಸಿದಂ ಮನದೆಱಕದೊಳು           || ೩೩ ||

ಆ ವಿಜಯಾದ್ರಿಯುಭಯಸಾನುವಿನೊಳ್ | ತೀವರ್ದ ದಶೋತ್ತರಶತಸಂಖ್ಯೆಯ |
ಭೂವರರೆಲ್ಲವರಂ ತಲೆವಾಗಿಸಿ ಮತ್ತರೊಳಗುಳ್ಳ ||
ಆ ವಾರಣಹಯತರುಣೀರತ್ನಮ | ನೋವದೆ ಕಪ್ಪಂಗೊಂಡವನಿಯೊಳೆ ಯ |
ಶೋವಲ್ಲಿಯನಡರಿಸಿದಂ ತತ್ಖೇಚರಚಕ್ರೇಶ್ವರನು        || ೩೪ ||

ಹರನೆನೆ ಸಕಲಕಲಾಭೃತ್ಪೂಜ್ಯಂ | ಹರಿಯೆನೆ ಸಲ್ಲಲಿತವಿಚಾರಂ ಸರ |
ಸಿರುಹಾಸನನೆನೆ ಚತುರಾಸ್ಯಂ ಭಾಸ್ಕರನೆನೆ ಸದ್ವತ್ತಂ ||
ವರಮೃಗಪತಿಯೆನೆ ಮಾತಂಗೋನ್ಮದ | ಹರಣಂ ಶಶಿಯೆನೆ ಕುವಲಯರಾಜಂ |
ಧರೆಯೊಳಗತಿವಿಭ್ರಾಜಿಸಿದಂ ಕಾಂಚನವರ್ಮನರೇಂದ್ರಂ    || ೩೫ ||

ಪ್ರಾಯವಿೞಿವ ಪರ‌್ಯಂತಂ ರಾಜ್ಯ | ಶ್ರೀಯಂ ನೃಪನೀತಿಯನುಲ್ಲಂಘಿಸ |
ದಾಯತಿಯಿಂ ತಾನಾಳಿ ಬೞಿಕ ಕೆನ್ನೆಯ ನರೆಯಂ ಕಂಡು ||
ಆಯಿಳೆಯಾಣ್ಮಂ ಸಂಸಾರಂ ನೆಱೆ | ಹೇಯಮಿದೆಂದುತ್ತಮದೀಕ್ಷೆಯನಾ |
ಪ್ರೇಯಸಿಸಹಿತ ತಳೆದನವನೀತಳಮೆಲ್ಲಮಱಿವ ತೆಱದಿ   || ೩೬ ||

ಸಂಜೆಯ ಕೆಂಪು ಸೊಬಗುವೊಣವುಲ್ಲ ಧ | ನಂಜಯನೇೞ್ಗೆ ಸಕಲಬಂಧುಜನಂ |
ಮಂಜಿನ ಮೞೆಯಮಹಿಮೆ ಮಹದೈಶ್ವರ‌್ಯಂ ಸುರಧನು ಸುತರು ||
ಬಾಂಜೊಡರಿದಿರರಿಸಿನ ಹರೆಯಂ ಘನ | ರಂಜನೆ ರಾಜ್ಯದೊದವು ಮತ್ತದಕಿನಿ |
ಸಂಜದೆ ಮುಗ್ಗುವನೆಗ್ಗನೆನುತ ಕೊಂಡಂ ಜಿನದೀಕ್ಷೆಯನು || ೩೭ ||

ಯತಿರೂಪಂಬಡೆದು ತಪಂಮಾೞ್ಪಾ | ವ್ರತಿ ಕಾಂಚನವರ್ಮನುಮಾಕಾಂತಾ |
ವತಿಯುಂ ಪಿಂತಣ ಭವದೊಳ್ ಪಾರಿವಮಾಗಿರಲಂತದನು ||
ಹತಿಸಿದ ಮಾರ್ಜಾಲಂ ಕೆಲದಿನದೊಳ್‌ | ಗತಜೀವಂಬಡೆದಾನಾಡೊಳ್ ದು |
ರ್ಮತಿ ವಿದ್ಯುಚ್ಚರವೆಸರೊಳ್ ಜನಿಯಿಸಿ ಕನ್ನಕಳಂಗಲ್ತಂ || ೩೮ ||

ಒಂದಾನೊಂದು ದಿನಂ ವಿದ್ಯುಚ್ಚರ | ನೆಂದೆಂಬಾಚೋರಂ ಕಗ್ಗೊಲೆಯಿಂ |
ತಂದಪೆನರ್ಥಮನೆನುತ ಬರುತಮಿದಿರೊಳ್ ಮಾಮರದಡಿಯೊಳ್ ||
ನಿಂದ ಕನಕವರ್ಮಮುನೀಶ್ವರನಂ | ಸಂದಿಸಿ ಮುಂದಕೆ ನಡೆಯಲ್ಕಾಕಳ |
ವೊಂದಿನಿಸುಂ ದೊರಕದಿರಲ್ ನೊಂದತಿಕೋಪದಿ ತಿರಗಿದನು         || ೩೯ ||

ಈ ಸವಣನ ನಾಂ ಕಟ್ಟಿದಿರೊಳ್ ಕಂ | ಡಾಸಕುನದ ಫಲದಿಂದಂ ಕಳವೆನ |
ಗೋಸರಿಸಿತ್ತೆನುತಿನಿವಿರಿದುಂ ಮುಳಿದಾವಿದ್ಯುಚ್ಚರನು ||
ಕೇಸರಿಯಂತೆ ಕರಂ ಕೆಕ್ಕಳಗೆಳ | ರ್ದಾಸುರಕರ್ಮದಿ ಕೊಲ್ವೆನಿವನನೆನು |
ತಾಸಂಯಮಿಯಿರ್ದಾಮಾಮರದ ನೆೞಲ್ಗಿರದೆಯ್ದಿದನು  || ೪೦ ||

ಕಲ್ಲಿಂದಿಟ್ಟು ಕರಂ ಬಡಿಯಿಂದವೆ | ನಿಲ್ಲದೆ ಬಡಿದು ಬೞಲ ಬಲ್ವೊಯ್ಲಿಂ |
ದೆಲ್ಲೆಡೆ ಬಾಸುಳನೇಳಿಸಿ ಕೈಕಾಲೋವದೆ ಹಗಱಿಟ್ಟು ||
ಚೆಲ್ಲೆಯದಿಂ ಕದುಕೇಱನಿಱಿದು ಕ | ಣ್ಣಲ್ಲಿ ಮಣಲ್ಸುಣ್ಣಮನೆ ಗಿಡಿದು ತಾಂ |
ಪೊಲ್ಲ ಮುನಿಸಿನಿಂ ಬಾಧಿಸಿದ ಜತಿರಾಯನನಾಖಳನು    || ೪೧ ||

ಇಂತತಿಕೋಪಾತುರಖಳನಾಮುನಿ | ಕಾಂತಶಿಖಾಮಣಿಯುಪಸರ್ಗಮನಿನಿ |
ಸುಂ ತಳುವದೆ ಮಾಡುತ್ತಿರಲಾಜತಿರಾಯಗೆಱಗೆಲೆಂದು ||
ಕಾಂತಾವತಿಕಂತಿಕೆಯತಿಭಕ್ತಿ | ಸ್ವಾಂತಾಕ್ರಾಂತೆ ದಯಾಪರಗುಣಯುತೆ |
ಸಂತಸದಿಂದ ಬರುತ ನೋಡಿದಳವನೆಸಗುವಕೃತ್ಯವನು    || ೪೨ ||

ಎಲೆ ಪಾತಕಿ ಕೇಳ್ದೆಣ್ದೆಸಿಯಾಗಸ | ನೆಲಹೊಱದಂತಪ್ಪೀಕೊಲೆಯಂ ನೀ |
ನಲಸದೆ ಜತಿರಾಯಗೆ ಮಾಡುವುದುಚಿತವೆ ಬಿಡು ಬೇಡೆಂದು ||
ಪಲಸೂೞ್‌ಕಾಂತಾವತಿಕಂತಿಯರುಱೆ | ಪಲುಬುತ್ತಿರೆ ತತ್ಕ್ರೋಧೋದ್ರೇಕಂ |
ನೆಲೆಗೊಳೆ ತತ್ಖಳನಾಕೆಯುಮಂ ಕೊಲಲೆನುತ ಬಗೆದನಾಗ || ೪೩ ||

ಇವನೊಡನಿವಳಂ ಕೊಲ್ಲದೆ ನಾನಿರ | ಲಿವಳೀನೆಲನೆಲ್ಲಕೆಯೀತೆಱನಂ |
ತವಕದಿನುಸಿರದೆ ಸುಮ್ಮನಿರಳೆನುತ್ತವೆ ಮತ್ತಾಕೆಯನು ||
ಜವದಿಂ ಕೊಲ್ವೆನೆನುತ ಕಡುಮುಳಿಸಿಂ | ಜವನಂದದಿನುಪಸರ್ಗಂಮಾಡಿದ |
ನವನಿಪಚೂಡಾಮಣಿ ಚಿತ್ತಿಯಿಸಾ ವಿದ್ಯುಚ್ಛರಚೋರಂ  || ೪೪ ||

ಮುಳಿಸಂ ಮನದೊಳ್ ಬಲಿದು ಬಱಿಕ್ಕಾ | ಗಳಿನೊಳವರನೊಂದೇ ರಜ್ಜುವಿನಿಂ |
ತಳುವದೆ ಬಿಗಿದು ಬೞಿಕ ಹುಳ್ಳಿಯ ಹೊಱೆಯಂ ಹಲವಂ ತಂದು ||
ಬಳಸಿನೊಳೆಡದೆಱಪಿಲ್ಲದಿರಿಸಿ ಮ | ಣ್ಮುೞಿಯಂ ಬೇಗದಿ ಮಾೞ್ಪೆನೆನುತ್ತಾ |
ಖಳನೋವದೆ ಬಲ್ಗಿಚ್ಚಂ ನಾಲ್ದೆಸೆಯೊಳಗಿಟ್ಟುರುಪಿದನು           || ೪೫ ||

ಹೇಯಂ ತಪ್ಪದು ತನು ಜೀವನುಪಾ | ದೇಯಂ ತಪ್ಪದು ತಾನೆನಿಸುವಭಿ |
ಪ್ರಾಯಮನಾಪ್ತನಿನಱಿದಾ ಆತ್ಮನನಾನಿಜತತ್ತ್ವದೊಳು ||
ಆ ಯತಿಯಿಂದ ನಿಱಿಸಿ ತನುವಂ ಮ | ತ್ತಾಯತಿ ಬೇರ್ಕೆಯ್ಯಲ್ಕಾತನುವಂ |
ನೋಯಿಸಲಾನೋವಂ ಪರಮಾತ್ಮನೆಂತುಟು ತಟ್ಟುವುದು          || ೪೬ ||

ಆವುರಿವುರಿಯಿಂದವೆ ಕೋಮಲತನು | ಬೇವ ಸಮಯದೊಳ್ ಬಗ್ಗದೆ ನಿಜಮಂ |
ಭಾವಿಸಿ ಕಾಂಚನವರ್ಮವ್ರತಿ ಕಾಂತಾವತಿಕಂತಿಯರುಂ ||
ಸಾವಂ ಪಡೆದು ಬೞಿಕ ಕನಕಪ್ರಭ | ದೇವಂ ಕನಕಪ್ರಭೆಯೆಂಬ ಮಹಾ |
ದೇವಿವೆಸರನಾಂತೊಸೆದು ಮೊದಲ ಸಗ್ಗದೊಳುದ್ಭವಿಸಿದರು        || ೪೭ ||

ಪುಟ್ಟಲೊಡನೆ ಪಸುಗೂಸುತನಂ ಪಱಿ | ಪಟ್ಟುದು ಬೞಿಕಿೞಿಯದ ಜವ್ವನಮಳ |
ವಟ್ಟುದು ಬಯಸಿದ ಬಗೆಯಿನೆಸೆವ ಮಾಣಿಕದೊಡವಂ ಮುಡಿಗೆ ||
ಇಟ್ಟೊಡೆ ಕೊರಗದ ಪೊಸಪೂಮಾಲೆಯ | ನುಟ್ಟೊಡೆ ಮಾಸದ ಚಿತ್ರಾಂಬರಮಂ |
ಕೊಟ್ಟುವು ಕಲ್ಪಮಹೀಜಾತಂ ಮತ್ತಾಸುರದಂಪತಿಗೆ      || ೪೮ ||

ಕಪ್ಪುರದಂಬುಲಗೊಳ್ಳದೆ ಕಮ್ಮಿದ | ನಪ್ಪ ಹವಳವಾಯ್ದೆಱಿ ಮಿಸಿಸದೆಯೆ ತೊ |
ಳಪ್ಪನೆಸೆವ ತನುಲತೆ ತಿರ್ದದೆ ಕೊಂಕಿದ ಪುರ್ಬಲತೆಗೆಯಿಂ ||
ಒಪ್ಪವಿಡದೆ ಕೆಂಪೆಸೆವಡಿದಳಿರ್ಗಳ್ | ನಿಪ್ಪೊಸತಪ್ಪ ವಿಲಾಸಂ ಸುರಸತಿ |
ಗೊಪ್ಪಂಬಡೆದಮರನ ಮನಮಂ ಹಱಿಸೂಱೆವಿಡಿದುದಾಗ         || ೪೯ ||

ಓದದೆ ಸಕಲಾಗಮಶಾಸ್ತ್ರಂಗಳ | ನಾದಂ ತಿಳಿವ ಲಲಿತಚಿತ್ರಂ ಮೊದ |
ಲಾದುವನೆಲ್ಲಂ ಬರೆದು ಕಲಿಯದೆ ಬರೆವ ತೂರ್ಯತ್ರಯಮಂ ||
ಸಾಧಿಸದತಿನಿಪುಣತೆಯಿಂದಱಿವ ಗು | ಣೋದಯಮಾನಿರ್ಜರಮಿಥುನಕ್ಕಿರ |
ದಾದುದು ಪೂರ್ವಭವದೊಳವರೆಸಗಿದ ಪುಣ್ಯದ ಫಲದಿಂದ          || ೫೦ ||

ಪಳಿಕಿಂ ಪೊಸಯಿಸಿದಾಪರಿಜೋ ಮಿಸು | ಪೆಳಮುತ್ತಿಂ ಮಾಡಿದ ಮೂರುತಿಯೋ |
ಮಳಯಜದಿಂ ಕಂಡರಿಸಿದ ಕರುವೋ ತೊಳಗುವ ಕಪ್ಪುರದ ||
ಹಳುಕಿಂ ಹಸೆಗೆಯ್ದಿಕ್ಕಿದ ಹಾಹೆಯೊ | ತೊಳಗುವ ಕುಡುಮಿಂಚಿಂ ತಿರ್ದಿದ ಪು |
ತ್ತೞಿಯೋ ಎನಲೊಪ್ಪಿದುದಾದೇವಮಿಥುನಮಾಸಗ್ಗದೊಳು      || ೫೧ ||

ಆ ನಿರ್ಜರಮಿಥುನಮದೋರೂರ್ವರ | ನೂನವಿಲಾಸಮನೊಲಿದೀಕ್ಷಿಸುತ |
ತ್ಯಾನಂದದಿನೆವೆಯಿಡದುದಱಿಂದೋರೊರ್ವ ಸವಿದುಟಿಯಂ ||
ಪೀನಂ ಸೇವಿಸಿ ದಣಿದುದಱಿಂ ಮ | ತ್ತಾನಾಕೀನಿಕರಕ್ಕಂದಿಂದಂ |
ತಾನಾದಮೆ ಕಣ್ಮುಚ್ಚದರುಣ್ಣದರೆಂಬಱಿಕೆಯ ಹೆಸರು  || ೫೨ ||

ಸುರಲೋಕದ ಸೌಖ್ಯಮನೀತೆಱದಿಂ | ಹರಿಸದಿನುಂಡು ಬೞಿಕ ಕನಕಪ್ರಭ |
ಸುರನೞಿದಲ್ಲಿಂ ಬಂದು ಜಯಾವನಿಪಾಲಕ ನೀನಾದೈ ||
ಸುರಸುಂದರಿ ಕನಕಪ್ರಭೆಯೞಿದೆಲೆ | ಹರಣದೆಱೆಯ ನಾನಾದೆನೆನುತ್ತಾ |
ದರದಿಂ ಸುಮತಿ ಸಲೋಚನೆ ವಿಜ್ಞಾಪನಮಂ ಮಾಡಿದಳು             || ೫೩ ||

ಅನಿತಱೊಡನೆ ಪಿಂತಣ ಭವದೊಳ್ ಕಾಂ | ಚನವರ್ಮಾಂಬರಚರನಾದಂದಿನ |
ದಿನದೊಳ್ ಬೆಸಕೆಯ್ದವಲೋಕಿನಿಯುಂ ಚಿಂತಾರೂಪಿಣಿಯುಂ ||
ಮಿತಪ್ರಜ್ಞಪ್ತಿಯುಮಂಬರಗಾ | ಮಿನಿಯುಂ ಮೊದಲಾದಾದೇವತೆಗಳ್ |
ಜನನಾಥಾ ಬೆಸನಂ ಕುಡು ಬೇಗದೊಳೆನುತಿರದೆಯ್ದಿದುವು                        || ೫೪ ||

ದೇವತೆಗಳ್ ಬೆಸನಂ ಬೇಡಲ್ ಕಂ | ಡಾವರಿಸಿದ ಸಂತಸದಿಂದಾವಸು |
ಧಾವರನಿಂತೆಂದಂ ವಿದ್ಯಾದೇವತಗಳಿರಾ ನೀವು ||
ಈವೇಳೆಗೆ ಬಂದುದು ಲೇಸಾಯ್ತಾ | ನಾವಾಸಮಯದೆ ಕರೆದೊಡೊದಗಿಮೆನು |
ತೋವದೆ ವಿನಯವಚನಮಂ ನುಡಿದು ಕಳಿಪಿದಂ ತಾನವನು          || ೫೫ ||

ಇಂತು ನೆರೆದ ಸಭೆಯಲ್ಲಕ್ಕಜವಡು | ವಂತೆ ಸುಲೋಚನೆ ತಮ್ಮಿರ್ವರ ಜ |
ನ್ಮಾಂತರಮಂ ಬಿನ್ನವಿಸಲ್ ಪಿರಿದುಂ ಪ್ರಿಯದಿಂ ಕೇಳುತವೆ ||
ಸಂತಸದಿಂ ವಿಕ್ರಮಕೌರವಭೂ | ಕಾಂತಂ ತಳದಿರೆ ಖರಕರನನಪರದಿ |
ಗಂತಮನೆಯ್ದಿ ವರುಣಮಣಿಮಕುಟದಮಾೞ್ಕೆಯಿನೆಸೆದಿರ್ದಂ      || ೫೬ ||

ಪತ್ತುಂದೆಸೆಯ ಪದಾರ್ಥದ ಮಱೆಯೊಳ್ | ಪತ್ತಿದ ತಮವೆಲ್ಲಮನುರುವಣೆಯಿಂ |
ಪೊತ್ತಿ ದಹಿಸಿ ಬೞಿಕಾಹುತಿವಡೆಯದ ಹೊಸತಱಿಗೆಂಡಮಿದೋ ||
ಮೊತ್ತದ ಪಾಂಸುಳೆಯರ ರತಿರಾಗದ | ಬಿತ್ತಿನ ಪುಂಜಮಿದೋ ಎನೆ ಚೆಲ್ವಂ |
ಪೆತ್ತುದಪರದಿಶೆಯೊಳಗಿನಬಿಂಬಂ ಹೃತಕುಮುದಕದಂಬಂ            || ೫೭ ||

ಕೇಡನಿವಂಗಾನೊದವಿಸದಿರ್ದೊಡೆ | ಕೂಡದು ಸುರತಸುಖಂ ನಮಗೆನುತಂ |
ಜೋಡೆಯರುಜ್ಜುಗಿಸಿದ ಬಲ್ಚೇಟಿಯಿನಾಪಲವುಂ ಪಾದಂ ||
ನೀಡುಂ ಬತ್ತಿ ನಲಲ್ಬಗೆಗಾಣದೆ | ಪಾಡೞಿದುರುಳ್ವಂದದಿನಸ್ತಾದ್ರಿಯ |
ಕೋಡುಂಗಲ್ಲುಪರಿಮದಿಂ ಬೞ್ದನದಿತಿಸುತನಬುಧಿಯೊಳು         || ೫೮ ||

ಕಡಲುರಿ ತನ್ನಯ ಮಱೆವೊಕ್ಕಾಪಗ | ಲೊಡೆಯನನಿಱಿಸಿ ಪೆಱಗೆ ಮೊದಲೇ ಬೆಂ |
ಬಿಡದೆ ಕಱುತ್ತಿದಿರೇೞ್ವಿರುಳೊಡ್ಡಣಮಂ ಕಂಡಿದಿರೊಳಗೆ ||
ಬಿಡದೊಡ್ಡಿದ ಮೋಹರಮೆನೆ ಮಾಣಿಕ | ವಡೆದ ವರುಣದಿಗ್ವಧು ಸಿಂಗರಿಸಿದ |
ಕಡುಗೆಂಪಿನ ಪಸದನಮೆನೆ ಸಂಧ್ಯಾರುಚಿ ಸಲೆ ಸೊಗಯಿಸಿತು          || ೫೯ ||

ಪ್ರಿಯಮಿತ್ರಂ ಪಿಂಗಡಲ ಮಡುವಿನೊಳ್ | ಲಯಮಾದದನಱಿದುಂ ಸುಖಿಸುವುದಿದು |
ನಯಮೇ ನಮಗಿನ್ನಾತನ ಮೊಗಮಂ ನಿಟ್ಟಸುವನ್ನೆಬರ ||
ನಿಯಮಂ ನಿಶ್ಚಯದಿಂದೆಸಗುವವರ | ಶಯನಬ್ರಹ್ಮಚರಿತ್ವಮೆನುತ್ತಾ |
ಗಯಸಂಬಟ್ಟೆಣೆವಕ್ಕಿಯಗಲ್ದುವು ಸಂಧ್ಯಾಸಮಯದೊಳು          || ೬೦ ||

ಪಾಱಿದುವೊಸೆದು ಪಱಮೆಯ ಪಸಳೆಗಳ್ | ನೂಱೆಸಳ್ಪೂವಿಂದುಪ್ಪಳದಿಂತಿಣಿ |
ಗಾಱಿದುದುರಿ ನೇಸಱುಗದಿರ್ಗಲ್ಲೊಳ್ ಜಾರಾಸಂತತಿಗೆ ||
ಏಱಿದುದತ್ಯುತ್ಸಹವೆಣ್ದೆಸೆಯೊಳ್ | ತೋಱಿತು ನಸುಗತ್ತಲೆ ದೇಗುಲದೊಳ್ |
ಸಾಱಿತು ಶಂಖಂ ಸರಸಿಜಮಿತ್ರನಪರಶರನಿಧಿಗೆಯ್ದೆ        || ೬೧ ||

ಬಾಂಜೊಡರುರಿದ ಕೆಡಲ್ಕಾಕುಡಿಯಿಂ | ಕಂಜಭವಾಂಡಕಟಾಹಮನಡರ್ದ ನ |
ವಾಂಜನಮೋ ಜಂಬೂದ್ವೀಪದ ಮೇರುವಿನ ಸಮಕ್ಷದೊಳು ||
ಸಂಜನಿಯಿಸಿದಾಜಂಬೂಫಲರುಚಿ | ಪಿಂಜರಿಸಿದುದೋ ಭುವನತಳಮನೆನೆ |
ರಂಜಿಸಿದುದು ಕೞ್ತಲೆ ಕಣ್ಣಾಲಿಯ ವಿಷಯಂ ಕೆಡುವಂತೆ  || ೬೨ ||

ಮುಗಿಯೆ ಪಗಲ್ ಮುಸುಕಲ್ ಮುಂಗೞ್ತಲೆ | ಮುಗಿಲ ಪಥಂ ಮೊದಲಾದ ದಿಶೆಗಳೊಳ |
ಮುಗುೞೆ ಜವಳಿವಕ್ಕಿಗಳಕ್ಷಿಗಳೊಳಗುಬ್ಬೆಗದಶ್ರುಕಣಂ ||
ಮುಗುಳ್ವಿಲ್ಲಂ ಮಗುೞ್ದೆಚ್ಚ ಶಿಳೀಮುಖ | ಮುಗುೞೆ ಕುಲಟೆಯರ ಮೆಲ್ಲೆರ್ದೆಯಿಂ ನೆಱೆ |
ಮುಗಿದುವು ಮುನ್ನೀರಣುಗಿಯ ಸೆಜ್ಜೆವನೆಗಳಾರಾತ್ರಿಯೊಳು        || ೬೩ ||

ವಿಲಸದ್ವಿಷ್ಣುಪದಕೆ ಸುರರರ್ಚಿಸಿ | ದಲರೋ ಮಲಯಜಕರ್ದಮಕಣಮೋ |
ಜಲಬಿಂದುವೊ ಮೌಕ್ತಿಕದಕ್ಷತೆಯೋ ನವಕಲಮೋದನಮೋ ||
ತೊಳಗುವ ದೀಪಾಳಿಯೊ ಸುಧೆಯುಣ್ಮುವ | ಫಲತತಿಯೋ ಎನಲೆಸೆದುದು ತಾರಾ |
ವಳಿ ತದ್ದೂಪದ ಹೊಗೆಯೆನೆ ಕೞ್ತಲೆ ಕಣ್ಗೆ ವಿರಾಜಿಸಿತು  || ೬೪ ||

ಇಂತವನಿಯನಾವರಿಸಿದ ದೆಸೆಯೊಳ್ | ಮುಂತಣ ಕೈಗೆಲಸಮನಸವಸದಿಂ |
ದಂ ತೀರಿಪ ಮನೆಯವರಂ ವಂಚಿಪ ಮೂಕದೊಡಂದೊಡುವ ||
ಮಂತಣವಂ ದೂದವಿಯೊಳ್ ಮಾಡುವ | ಸಂತಸದಿಂ ಸಂಕೇತಕೆ ನಡೆದುಪ |
ಕಾಂತರನೊಡಬಡಿಸುವ ಜಾರಾತತಿಯೊಪ್ಪವಡೆದುದಾಗ  || ೬೫ ||

ಉಟ್ಟು ಕರಿಯ ಕಾಗಿನ ಸೀರೆಯನ | ಣ್ಪಿಟ್ಟು ಲಸನ್ಮೃಗಮದಮಂ ಮುಡಿಯೊಳ |
ಗಿಟ್ಟಿಸಿತೋತ್ಪಲದೊಳ್ಳಲರಂ ಸಲ್ಲಲಿತತಾಂಗದೊಳು ||
ತೊಟ್ಟು ತೊಳಪ ಹರಿನೀಲದ ತೊಡವಂ | ಬಟ್ಟಮೊಲೆಯ ಬಂಧಕಿಯರ್ ಕಂಗಳ |
ವಟ್ಟು ನಡೆದುಬಂದರು ಕಾಡಿಗೆಯಂ ಕಡೆದ ಕರುವಿನಂತೆ  || ೬೬ ||

ಹಲ್ಲ ಕೊನೆಯ ಹಜ್ಜೆಯನರುಣಾಧರ | ದಲ್ಲಿ ಮಿನುಗಲೀಯದೆ ಬಾಯ್ಗೊಡು ಕುಱು |
ಹಿಲ್ಲದೆ ಕೂರುಗುರ್ಗಲೆಗೆ ಲತಾಂಗಂಗುಡು ಹಾರಂ ಹಱಿದು ||
ಚೆಲ್ಲದವೊಲ್ ಚದುರಿಂದಾಲಿಂಗಿಸು | ಮೆಲ್ಲನೆ ಮೊಱೆಯನುಱಿದ ನುಡಿಯಂ ನುಡಿ |
ನಲ್ಲನೊಳೆನುತೋದಿಸಿ ಕಳಿಪಿದಳೆಳೆಯಳನೊರ್ವಳ್ ಕೆಳದಿ                        || ೬೭ ||

ಬೆಳತಿಗೆಗಣ್ಣ ಕಡೆಯ ಬೆಳಗು ತಳ | ತ್ತಳಿಸುತ್ತಿರೆ ತಣ್ಗದಿರ್ದೊಂಗಲಿವೆನು |
ತೆಳಸಿ ಚಕೋರಿಶಿಶು ಮುಸುಕುತ್ತಿರೆ ಕಂಡು ಕರಂ ಸುಗಿದು ||
ತಳಿರ್ಗೈಯಂ ಪುರ್ಬಿನೊಳಿಟ್ಟೇಕಾ | ವಳಿಯೆಳಮುತ್ತಂ ಕಿೞ್ತೀಡಾಡು |
ತ್ತಳಘುನಿತಂಬೆ ನಡೆದಳತಿಚದುರಿಂದುಪಪತಯಿರ್ದೆಡೆಗೆ   || ೬೮ ||

ಕಾಳಿಂದಿಯ ಕರ್ಮಡುವಂ ಸೋಲಿಪ | ಕಾಳದೊಳಗೆ ಮಸುಗುವ ಪೊಣರ್ವಕ್ಕಿಯ |
ಮೇಳಮನೇಳಿಪ ನೆಲೆಮೊಲೆಗಳ ನವಕೂರ್ಮನಿಭಾಂಘ್ರಿಗಳ ||
ಬಾಳಮರಾಳೋಪಮಮೃದುಗಮನದ | ಬಾಳೆವಸುಳೆದಿಟ್ಟಿಯ ಬಂಧಕಿಯರ |
ಜಾಳಂ ನಡೆತಂದುದು ಸಂಕೇತಸ್ಥಾನದ ದೆಸೆಗಾಗಿ           || ೬೯ ||

ಒಡನೊಱಗಿದರುಸಿರಂ ಲಾಲಿಸುತಲೆ | ಮಿಡುಕದ ತೆಱದಿಂದೆೞ್ದು ಘಳಿಸಿದೆಲೆ |
ಯಡಕೆವಿಡಿದು ಮೆಲ್ಲನೆ ನಡೆವಡಿಗಳ ಸೊಪ್ಪುಣ್ಮದ ತೆಱದಿ ||
ಪಡಿಯಂ ದನಿಗೊಡದಂತೆ ತೆಱೆದು ಪೊಱ | ಮಡುತ ನಿಜಾಂಗಾಮೋದಕ್ಕೆಱಪಾ |
ಱಡಿಗೆ ಸುಗಿದು ಸಂಪಗೆಯಂ ಸೂಡಿ ನಡೆದಳೊರ್ವಳ್ ಚದುರೆ        || ೭೦ ||

ಒಂದೋರಗೆಯಂಗನೆಯರ್ ತವರೂ | ರ್ಗೆಂದೆಯ್ದಿದರಿಱವೆಸದಿಂದಾಣ್ಮಂ |
ಬಂದುದುಮಿಲ್ಲಿರುಳ್ಕಣ್ಣಿಲ್ಲತ್ತೆಗೆ ತೊೞ್ತು ಮನೆಗೆ ಹೊಲ್ಲ ||
ಎಂದುಂ ದೂಱಿನವಳ್ ನಾನಂತದ | ಱಿಂದಣ್ಮೆನು ತರಲೆನುತಂಗಣದೊಳ್ |
ನಿಂದು ಭವತಿಭಿಕ್ಷಾಯೆಂಬಂಗಾಡಿದಳೊರ್ವಳ್ ಕುಲಟೆ      || ೭೧ ||

ಹಿತ್ತಿಲಕೋಕೆಯ ನೆೞಲೊಳ್ ಮೊಗದೊಳೆ | ಯುತ್ತಿರೆ ಹಱಿದ ಕೊರಲ ಹಾರದ ಹೊಸ |
ಮುತ್ತಂ ನೋಡುವೆನೆನುತವೆ ಪೊಱಮಟ್ಟಿನಿಸು ತಡೆದು ಬಂದು ||
ವೃತ್ತಸ್ತನೆ ಪಂಜರದ ಗಿಳಿಗೆ ಕುಡು | ಕಿತ್ತೊಲವಿಂ ಚುಂಬಿಸಿ ಮತ್ತದು ಕಡಿ |
ದತ್ತಯ್ಯೋ ಎನುತಿನಿವಿರಿದುಂ ವಂಚಿಸಿದಳ್ ಮನೆಯವರಂ           || ೭೨ ||

ಇಂತೊಪ್ಪುವ ಕಾಳದೊಳಾಧರಣೀ | ಕಾಂತಂ ಸಾಯಂಕಾಲದ ವಿಧಿಯಂ |
ಸಂತೋಷಂ ಮಿಗೆ ಮಾಡಿ ಬೞಿಕ ತನ್ನ ನಿಜಾಂತಃಪುರದ ||
ಕಾಂತಾನಿಕುರುಂಬದ ಮಧ್ಯದೊಳ | ತ್ಯಂತವಿಲಾಸದೊಳೊಲಗದೊಳಗೆ ಜ |
ಯಂತಂ ಕೈಗೆಯ್ದು ಕರಂ ರಂಜಿಸುತಿರ್ಪಂದದಿನಿರ್ದಂ      || ೭೩ ||

ನಿರುತಂ ಶ್ರೀಯುತನುರುತರವಾಹಿನಿ | ಯರಸಂ ನುತಗಂಭೀರಾಕ್ರಾಂತಂ |
ಪಿರಿದುಂ ಕಬಳಿತಸರ್ವಾಸ್ತೋಮಂ ಭುವನಾಧಾರಂ ||
ಗುರುಚರಿತೋತ್ಕಲಿಕಾಸಂಪನ್ನಂ | ಪರಸೀಮಾಲಂಘನವಿರಹಿತನೆನೆ |
ಶರನಿಧಿಯಂತೆ ವಿರಾಜಿಸಿದಂ ಸತ್ಪ್ರಭುಕುಲಮಣಿದೀಪಂ   || ೭೪ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸ | ಮ್ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಾದುದು ಪದಿಮೂಱನೆಯ ಮಿಸುಪ ಸಂಧಿ || ೭೫ ||

ಹದಿಮೂಱನೆಯಸಂಧಿ ಸಂಪೂರ್ಣಂ