ಸೂಚನೆ || ಸುಖದಿಂ ರಾಜ್ಯವನಾಳುತ ಶತಶತ |
ಮಖನತಜಿನನಂ ನೋಡಲ್ ಬೆಳ್ಳಿಯ |
ಶಿಖರಿಗೆ ಸುದತಿವೆರಸು ನಡೆದಂ ಜನತಿ ಜಯರಾಜೇಂದ್ರಂ ||

ಸಾಸಿರಗಣ್ಣಗೆ ಸೊಬಗಿನೊಳಿಮ್ಮಡಿ | ಸಾಸಿರಗದಿರಗೆ ತೇಜದೊಳಯ್ಮಡಿ |
ಸಾಸಿರೆಸಳನಾಭಂಗೆ ವಿಚಾರಿಸೆ ಸಿರಿಯೊಳ್ ಪತ್ತುಮಡಿ ||
ಸಾಸಿರಜಿಹ್ವೆಯವಗೆ ಜಾಣ್ತನದೊಳು | ಸಾಸಿರಮಡಿಯೆಂದೆನುತಿಳೆಯೆಲ್ಲಂ |
ಸಾಸಿರಬೆಯಿಂದವೆ ಕೊಂಡಾಡುವುದಾಜಯಭೂವರನ     || ೧ ||

ಪತ್ತುಂ ದೆಸೆಯೊಳು ತನ್ನ ಜಸಮನುಱೆ | ಪತ್ತಿಸಿ ನಡುನಾಡರಸರುಮಂ ಮಲೆ |
ಪೊತ್ತಿನ ದುಷ್ಟನೃಪರುಮಂ ಬಲುಸಾಸಿಗತನದಿಂ ತನ್ನಾ ||
ಪತ್ತನದೊಳ್ ಮನೆಗಟ್ಟಿಸಿ ಬೞಿಕಾ | ಪತ್ತಂ ರಿಪುತತಿಗಾಗಿಸಿ ಘನಸಂ |
ಪತ್ತಿಯಿನಾಪ್ರಭುಕುಲಮಣಿದೀಪನರಸುಗೆಯ್ಯುತ್ತಿರ್ದಂ  || ೨ ||

ಶೌರ್ಯದೊಳಾಸೂರ್ಯನನುನ್ನತಿಕೆಯ | ಧೈರ್ಯದೊಳಾಮಾಮೇರುವನುದ್ಧತ |
ವೀರ್ಯದೊಳಾಯೆಲರುಣಿಯೆಱೆಯನನಱಿಕೆಯೊಳಾಅಬ್ಜಜನಂ ||
ಕಾರ್ಯದೊಳಾಮನುಗಳನೊಪ್ಪುವ ಗಾಂ | ಭೀರ್ಯ್‌ದೊಳಾಮುನ್ನೀರಂ ಮಿಸುಪೌ |
ದಾರ್ಯದೊಳಾಸುರತರುವಂ ಗೆಲ್ದನಿಳಾಧಿಪಜಯರಾಯಂ          || ೩ ||

ಮಾನಿತನವಮಣಿಮಯಮಕುಟಧರರ್ | ಭೂನುತರತಿವಿಕ್ರಮಶಾಲಿಗಳುಮ |
ನೂನೈಶ್ವರ್ಯಯುತರ್ ಸದ್ವಂಶಜರೆಣ್ಫಾಸಿರಮಾದ ||
ಭೂನಾಥರ್ ತಮ್ಮ ತನೂಜೆಯರಂ | ಸಾನಂದದಿ ಕಲ್ಯಾಣವಿಧಿಯೊಳಿ |
ತ್ತಾನರನಾಯಕಜಯಭೂವರನಂ ಬಿಡದೋಲೈಸುವರು  || ೪ ||

ನೀರನಿಧಿಯ ಸುತೆ ನವನೀಲಾಂಗ | ಪೇರುರಮಂ ಪೆಱೆದಲೆಯನ ಮೆಯ್ಯಂ |
ಗೌರಿ ತೊಳಪ ತಾವರೆಯ ತನುಜನಾನನಮಂ ನುಡಿವೆಣ್ಣು ||
ಆರೈಯದೆಯೆಡೆವಿಡದೊಲಿದಂದದಿ | ನಾರಾಜಾನ್ವಯತಿಲಕಂ ವಿಕ್ರಮ |
ಕೌರವನಂ ಬಿಡುವಿಲ್ಲದೆ ಸುಭಗೆ ಸುಲೋಚನೆಯೊಲಿದಿಹಳು         || ೫ ||

ಲಕ್ಷ್ಮಿ ಹರಿಯ ವಕ್ಷಮನೆಳವೆಯ ಮೃಗ | ಲಕ್ಷ್ಮಂಮೃಡಮಣಿಮಕುಟೋದಯಮಂ |
ಲಕ್ಷ್ಮಿಣಿ ಲಲಿತಸರೋಜಾಕರಮಂ ಬಿಡದೆ ಸೊಗಯಿಪಂತೆ ||
ಸೂಕ್ಷ್ಮಸುಭಗತರಮಧ್ಯೆಸುಲೋಚನೆ | ಪಕ್ಷ್ಮಂಬೊಯ್ಯದೆ ಸಮಯಮಗಲದೆ ಜ |
ಯಕ್ಷ್ಮಾವನಿಪಾಲನ ಪೇರುರಮಂ ಪಿಡಿದು ಸುಖಿಸುತಿಹಳು           || ೬ ||

ಈಯಂದದೊಳಗಿಳಾತಳಮೆಲ್ಲಂ | ಬಾಯೆತ್ತಿ ಕರಂ ಕೊಂಡಾಡುವವೋಲ್ |
ಶ್ರೀಯುರದೊಳ್ ನಟಿಸುವವೊಲು ಮನ್ನೆಯರೆಲ್ಲಂ ಮಣಿವವೊಲು ||
ಆಯತನೇತ್ರೆಯರಿಚ್ಚೈಸುವವೊಲು | ರಾಯಂ ಮಧ್ಯಮಭೂತಳಮಂ ಕ |
ಟ್ಟಾಯತಿಯಿಂದಾಳ್ದಂ ಪಲಗಣ್ಣಂ ಸಗ್ಗಮನಾಳ್ವಂತೆ   || ೭ ||

ಮತ್ತೆ ಕೆಲವು ಕಾಲಂ ರಾಜ್ಯಂಗೆ | ಯ್ಯುತ್ತಿರ್ದಾನೊಂದು ದಿನಂ ಭೂಪಾ |
ಲೋತ್ತಂಸಂ ಪುರುಜಿನನಂ ನೋಡುವೆನೆಂಬೊಂದಭಿಲಾಷೆ ||
ಚಿತ್ತಕ್ಕೊದವೆ ಸುಲೋಚನೆಗೂಡಿ ವಿ | ಯತ್ತಲಮಾರ್ಗದಿನೆಯ್ದುವೆನೆನುತುಂ |
ಮೊತ್ತಮೊದಲ್ಬೆಸನಂಬೇಡಿದ ದೆವತೆಗಳನೆಯ್ದಿಸಿದಂ      || ೮ ||

ಬರಿಸಿ ಬೞಿಕ ಬಾಂಬೊೞೆಯೊಳಗೆಯ್ದುವ | ವರವಿದ್ಯಾದೇವತೆಯಂ ಪಿರಿದಾ |
ದರಮನದಱೊಳೆ ನುಡಿದು ಮತ್ತದಱಿಂ ಮಣಿಪುಷ್ಪಕಮೊಂದಂ ||
ವಿರಚಿಸಿ ಸತಿಪತಿಗಳು ತಾಮಿರ್ವರ್ | ಹರಿಸದಿನೇಱಿ ವಿಯತ್ತಲಪಥದೊಳ್ |
ವರಕೈಲಾಸಮಹಾಭೂಮೀಧರಕೊಲವಿಂದೆಯ್ದಿದರು     || ೯ ||

ಹಿಂಗದೆ ಹಿಂದೆ ಹಲವು ಕಾಲಂ ತ | ನ್ನಂಗದ ಮೇಲೆ ಧರಿಸಿಕೊಂಡಿರ್ದಾ |
ಹಂಗಂ ಮಗುಚುವೆನೆನುತುಱೆ ಭಾವಿಸಿ ಬೞಿಕಾನೆಲನೆಂಬ ||
ಅಂಗನೆ ಹೊಱೆಭಾಸುರತರಮಾದ ಭು | ಜಂಗಾಧೀಶ್ವರನೋ ಎನೆ ಕಡುಚಿ |
ಲ್ವಿಂಗೆಡೆಯಾದತ್ತಾಕೈಲಾಸಂ ಸರ‌್ವೇಶನಿವಾಸಂ           || ೧೦ ||

ವಸುಧಾವಿಷ್ಟರದುಪರಿಮದೊಳ್ ರಂ | ಜಿಸುವೆಳವಳಿಕಿನ ಲಿಂಗಂಬೊಲು ಮೇ |
ಣಸಮಾಯುಧನಂ ಗೆಲ್ದಭವಂ ನಿಱಿಸಿದ ಕುಲಿಶದ ಹರಲ ||
ಮಿಸುಪ ಜಯಸ್ತಂಭಂಬೊಲು ಮೇಣಾ | ಗಸಮೆಂಬಾಗೂಡಾರಕೆ ನಿಱಿಸಿದ |
ಪೊಸಬೆಳ್ಳಿಯ ಕುಂಭಂಬೊಲು ತೊಳಗಿದುದಾಕೈಲಾಸಾದ್ರಿ           || ೧೧ ||

ಅಲ್ಲಲ್ಲಿಗೆ ಮಿನುಗುವ ಮಾಣಿಕ್ಯದ | ಕಲ್ಲದರಿಗಳೆಸೆದುವು ಗೋತ್ರದ್ವಿಷ |
ಪೊಲ್ಲಮುನಿಸಿನಿಂದಿಟ್ಟ ಕುಲಿಶದೇಱೋ ಎಂಬಂದದೊಳು ||
ಅಲ್ಲಲ್ಲಿಗೆ ನುಣ್ಬಳಿಕಿನಱೆಗಳೊಳು | ಜಲ್ಲಿಪ ನಿರ್ಜರಜಲಮಾವೇದನೆ |
ಯಲ್ಲಿ ಸುರಿವ ಕಣ್ಣೀರೋ ಎನಲೊಪ್ಪಿದುದಾಶೈಲದೊಳು        || ೧೨ ||

ಕುರುವಿಂದದ ಕಮ್ಮರಿ ಕುಲಿಶದ ಕಣಿ | ಹರಿನೀಲದ ಹಾಸಱೆ ಹಳದಿಯ ಬ |
ಲ್ವರಲೊಡ್ಡುಂಗಲ್ವೈಡೂರ್ಯದ ಹಬ್ಬುಗೆ ಗೋಮೇಧಿಕದ ||
ದರಿ ಪಳಿಕಿನ ಚೂಳಿಕೆ ಪಚ್ಚೆಯ ಗವಿ | ವರವಿಶಶಿಕಾನ್ತೋಪಲಮೇಖಲೆ |
ಯಿರವಿಂದೆಸೆಯಿತ್ತಾ ಕೈಲಾಸಂ ಕಣ್ಬಗೆಗೆ ವಿಲಾಸಂ         || ೧೩ ||

ವರಶೋಭೆಯನೆಯ್ದಿದ ವೈಡೂರ್ಯದ | ಹರಲ ಬಿಲಂಗಳ ಮೇಲೆ ವಿರಾಜಿಸಿ |
ಪೊರೞ್ದು ಪೊಳೆವ ನವಸೂತ್ರಂಗಳ ಹೊಳಹುಗಳಂ ಕಾಣುತವೆ ||
ತರುಣೋರಿಗಿಗಳಿವೆನುತಾಯೆಡೆಯೊಳ್ | ಪರಿದು ಪುಗುವ ಮಱಿವಾವುಗಳತಿಕಾ |
ತರದಿಂದಾನಂದಿಸಲುಜ್ಜುಗಿಸುವುವಾಬಲ್ವೆಟ್ಟದೊಳು    || ೧೪ ||

ಸುರಸೀಮನ್ತಿನಿಯರ್ ವಿದ್ಯಾಧರ | ವರವನಿತೆಯರಾಶಾಂಗನೆಯರ್ ಕಿಂ |
ಪುರುಷಪುರಂಧ್ರಿಯರುರಗಲಲನೆಯರ್ ತಾರಾತರುಣಿಯರು ||
ಗರುಡಗಣಿಕಯರ್ ಗಾಂಧರ್ವತನೂ | ದರಿಯರ್ ಯಕ್ಷನಿತಂಬಿನಿಯರ್ ಕಿ |
ನ್ನರಕಾಂತೆಯರಿರಲೆಸೆದುದು ತತ್ಕೈಲಾಸಮಹಾಶಿಖರಿ    || ೧೫ ||

ತಾರಾಕುಸುಮಕುಜಾತದ ತೆಱದಿಂ | ರಾರಾಜಿಸುವಾಕೈಲಾಸಾದ್ರಿಯ |
ನಾರಾಜೇಂದ್ರಶಿಖಾಮಣಿಯುಂ ನಿಜಸುದತಿಸುಲೋಚನೆಯುಂ ||
ಮಾರುತಮಾರ್ಗದೊಳೆಯ್ದಿ ಪುದಿದ ನಾ | ನಾರತ್ನ ವಿರಾಜಿತಪುಷ್ಪಕದಿಂ |
ದಾರೈದಿೞಿವ ಸಮಯದೊಳು ನಡುಬಾನೇಱಿದ ದಿತಿಸುತನು       || ೧೬ ||

ಗಿರಿವರವೆಂಬ ರಜತಯಷ್ಟಿಯ ಮೇ | ಗಿರಿಸಿ ಧಗದ್ಧಗಿಸುವ ಸೊಡರೆನಲಂ |
ಬರಸತಿ ತದ್ಗಿರಿರಾಜಂಗೆತ್ತಿದ ಕನಕಚ್ಛತ್ರಮೆನೆ ||
ಸುರಭುವನೋಲ್ಲಸಿತ ಮಹೀತಳದಿಂ | ಧರಿಸಿದ ಗಿರಿಯೆಂಬಾಶೇಷನ ತಲೆ |
ವರಲೆನೆಲೆಸೆದುದು ನಡುವಗಲಿನ ಬಿಂಬಂ ತಿಗ್ಮಾಂಶುವಿನ             || ೨೭ ||

ಪರಿರಂಜಿತಮಾದುದು ಪಗಲೊಡೆಯನ | ವರಮಂಡಲಮಾಗಿರಿಯೆಂಬ ಮಹಾ |
ಪುರುಷನ ಮಾಣಿಕ್ಯದ ಮಕುಟಂಬೊಲು ತದ್ಗಿರಿಪತಿಯೆಂಬ ||
ಸುರುಚಿರಪುಷ್ಪರಜೋಹರ್ಮ್ಯದ ಮೇ | ಗಿರಿಸೆ ತಳತ್ತಳಿಸುವ ನವಚಾಮೀ |
ಕರರಂಜಿತಕಲಶಂಬೊಲು ನಡೆನೋಡುವ ರಸಿಕರ ಬಗೆಗೆ                || ೧೮ ||

ಎಲೆ ಜಯಧರಣೀಪಾಲಕ ನಿನ್ನು | ಜ್ವಲಿಸಿ ವಿರಾಜಿಪ ವಿಕ್ರಮರಸಮಂ |
ವಿಲಸತ್ಪಿಂಜರರತ್ನಕಲಶದೊಳ್ ತೀವಿ ಗಗನಲಕ್ಷ್ಮಿ ||
ತಲೆವೊಱೆಯಂ ಪೊತ್ತಿದೆ ನೋಡೆನುತಂ | ಸಲೆ ಕೊಂಡಾಡಿದರಾಕೈಲಾಸಾ |
ಚಲದೊಳಗಾಡುವ ಕಿನ್ನರರಾನಡುವಗಲಿನ ಖರಕರನ      || ೧೯ ||

ಕರಮೆ ಸುಡುವ ಖರಕಿರಣಜ್ವಾಲೆಗೆ | ಯುರಿವುರಿಗದಿರ್ಗಲ್ಲಂ ಗುಂಡಕ್ರಿಯ |
ನಿರದಾಳಾಪಿಸಿ ಕರಗಿಸುತಂ ಶಶಿಕಾಂತೋಪಲಗಳನು ||
ತರಳಾಪಾಂಗದ ಚಂದ್ರಿಕೆಯಿಂದೊ | ಜ್ಜರಿಸುವ ಮೆಯ್ವಿಡಿದುಬ್ಬೆಗಮಂ ಪರಿ |
ಹರಿಸಿಕೊಳುತಮಿರ್ಪರ್ ಗಂಧರ್ವಸತಿಯರಾಶೈಲದೊಳು             || ೨೦ ||

ತಳಿರ್ದೊಂಗಲೊಳಗವಿದು ಬಾಯಂ ಬಿಡು | ವೆಳವಱಿಯಂ ಱೆಟ್ಟೆಗಳಿಂ ಬೀಸುವ |
ಗಿಳಿಗಳ್ ಸುಂಡಿಲ ಸಿಕೆಯಿಂ ಸೀಕರಮಂ ಮಿಗೆ ಮಱುಕದೊಳು ||
ಕಳಭದ ಮೇಲೆ ಕಱೆವ ಪಿಡಿಗಳ್ ಬ | ಳ್ವಳಬಾಡುವ ಕಱುವಂ ತಮ್ಮಯ ಮೈ |
ನೆೞಲೊಳಡಂಗಿಪ ಹರಿಣಿಗಳೊಪ್ಪಿದು ವಾಮಧ್ಯಾಹ್ನದೊಳು       || ೨೧ ||

ಆ ಮಧ್ಯಾಹ್ನದೊಳುರಿವುರಿಬಿಸಿಲಿಂ | ಭೂಮೀಶಂ ಬಾಡಿದ ತಳಿರಂದದಿ |
ಕೋಮಲತನು ಬಂಬಲು ಬಾಡುವ ಸುಕುಮಾರಿ ಸುಲೋಚನೆಯ ||
ತಾಮರಸೋಪಮವದನಂಗಾಣುತ | ಸಾಮಂಮಾಡದೆ ತದ್ಗಿರಿತಟದೊಳ್ |
ಭೀಮಾರಣ್ಯಮದೊಂದಿರೆ ಕಂಡದಱೊಳಗಡೆಗೆಯ್ದಿದನು                        || ೨೨ ||

ಎರಲೆಯ ಬೀಡೆಕ್ಕಲನ ಕೊಟಾರಂ | ಕರಡಿಯ ಹಟ್ಟಿ ಕಡವೆಯೂರ್ ಚಮರಿಯ |
ಹುರಮೆಂಟಡಿಯ ಹೊೞಲ್ ಕಾಟಿಯ ಕೊಟ್ಟಂ ಖೞ್ಗಿಯ ಪಳ್ಳಿ ||
ಅರಸುಮಿಗದ ಪಟ್ಟಮಾನೆಯ ಮಟ | ಮೆರಲುಣಿಗಳ ನೆಲೆವನೆಯೆನಲತಿಬಂ |
ಧುರಮಾದುದು ಭೀಮಾರಣ್ಯಮಗಣ್ಯಮೃಗಾಳಿಶರಣ್ಯಂ                        || ೨೩ ||

ಸುಜ್ಜಿಲರಳಿಸಾಗಡೆಯುದಿಸಂಪಗೆ | ಬೆಜ್ಜಲು ಬೆಳೆವ ಬಿದಿರ್ದೇವರಿಟಣ |
ಸಜ್ಜರನಕರಂಜಿಗೆಯನೇಱಿ ಲಳಲೆಮುೞ್ತುತಮೞ್ತಿ ||
ಕಜ್ಜರಕಕ್ಕೆಕಡವಮೊಳಗುನವಿ | ಲ್ವಜ್ಜೆಗರಿಕೆಸಸಿನೇಸಱವೆಳಗಿಗೆ |
ವೆಜ್ಜಗೊಡದೆ ಬೆಳದಿರಲಾಬಿಂಜಂ ಭೀಕರತರಮಾಯ್ತು   || ೨೪ ||

ಮಱೆವೊಕ್ಕ ಮಹಾತಮಮಂ ಕೊಟ್ಟೊಡೆ | ಕೊಱತೆಯೆನುತಮದನಲೆಯಟ್ಟುವ ಪಗ |
ಲೆಱೆಯನ ಪಲಗದಿರ್ಗಳ ಕೊರಲಂ ಪಿಡಿದೋವದೆ ತಾಂ ತಗುಳ್ವ ||
ತೆಱನೆನೆ ತಾರಾಪಥಮಂಡಲಮಂ | ನೆಱೆ ಪಂದರಿಸಿ ಬೆಳೆದ ನವತರುಗಳ |
ತುಱುಗಿದ ತೂಱಲ್ಗೊಂಬಿನ ಕೆಲವು ಕವಲ್ಗೊಂಬೊಪ್ಪಿದುವು                   || ೨೫ ||

ಬೇರಿಂ ಮುನ್ನವೆ ಪಾನಂಮಾಡಿದ | ನೀರಂ ತಮ್ಮೊಡಲೊಳ್ ತೀವಿದ ಹಸಿ |
ತೀರದೆ ಬಾಕುಳಿತನದಿಂ ಬಾನ ಪೊೞೆಯ ಬಂಧುರಮಪ್ಪ ||
ವಾರಿಯನೋವದೆ ತಮ್ಮಯ ಕೊನೆಯಿಂ | ಪೂರಿಸಿಯುಣಬೇಕನುತ ಪರಿವವೊಲ್ |
ತಾರಾಪಥಮಂ ತವೆ ಚುಂಬಿಸಿದುವು ತದ್ವನತರುವಿತತಿ    || ೨೬ ||

ಎನ್ನಂ ದಹಿಸಿ ದಳಿಸುವ ದವಾಗ್ನಿಗೆ | ಯುನ್ನತಿಕೆಯ ಸತ್ತ್ವಮನಿರದೊದವಿಪ |
ಭಿನ್ನತೆಯಿಲ್ಲದೆ ನಂಟತನಮನದಱೊಳ್ ಮಾಡುವ ಗಾಳಿ ||
ಎನ್ನೊಳೆ ಪುಗೆ ಕೇಡನಗಿರದಪ್ಪುದು | ನನ್ನಿಯೆನುತ ಬಗೆದಂತದನಿನಿಸುಂ |
ತನ್ನೊಳು ಪುಗಲೀಯದೆ ತದ್ವಿಪಿನಂ ಕಿಕ್ಕಿಱಿಗೊಂಡಿಹುದು                      || ೨೭ ||

ವನದೋಷಧಿಗೊಡೆಯಂ ಕುಮುದೇಶಂ | ವನನಿಧಿಯೊಳಗಸ್ತಮಿಸುತ ತನ್ನಯ |
ತನುವಿಡಿದಂಕದ ವಸ್ತುವನಾತರುತತಿಯೊಳು ಕೈಯೆಡೆಯಂ ||
ಮನದಕ್ಕಱು ಮಿಗೆ ಕೊಟ್ಟಂ ತಾನೆಂ | ದೆನೆವಲ್ಮೀಕಲಸನ್ಮೃದುವಟಶಶ |
ವಿನುತಾಮೃತಫಲರುಚಿರಚ್ಛಾಯಾಶೈತ್ಯಮೆಸೆದುವಲ್ಲಿ || ೨೮ ||

ಕರಡಿ ಕಡವೆ ಕಾಡೆಮ್ಮೆ ಸೊಣಗ ಮೊಲ | ಮರೆ ಮೂಗುರಿ ಕೂರಂಗಿಯಳಿಲು ಬೆ |
ಕ್ಕೆರಲೆ ಕೊಱವ ಮುಸು ಸಾರಗ ಸೀರುಡುವೆಕ್ಕಲ ಕಪಿ ಪಂದಿ ||
ನರಿ ಹುಲಿಯುಡು ತರುವಂಗಿ ಚಮರಿ ಮಿಗ | ವೆರಲುಣಿಯಾನೆಯರಸುಮಿಗವೆಂಟಡಿ |
ಯೆರಡುತಲೆಪಕ್ಕಿಯಿನೊಪ್ಪಿದುದಾದಾರುಣಮಪ್ಪಡವಿ  || ೨೯ ||

ನವಶಾಖೆಯ ಕವಲೆಸೆವ ಠವಣೆಕೋಲ್ | ತವೆ ಸೊಗಯಿಪ ಪಲ್ಲವನಿಕುರುಂಬಂ |
ಕವಳಿಗೆಗೆದರ್ದಲಸತ್ಪುಸ್ತಕಮೋದುವ ಮಱಿಗಿಳಿಯಳಿಯ ||
ನಿವಹಂ ವಟುಸಂತತಿಯಾದಲ್ಕೊಂ | ದವನಿಜದುಪರಿಮದೊಳಗೆ ಕುಳಿತ ಮುಸು |
ವಿವಿಧನಿಗಮವೋದಿಪ ಗಡ್ಡದ ದೀಕ್ಷಿತನೆಂಬಂತಾಯ್ತು    || ೩೦ ||

ಧರಣಿತಳಮನೊಂದೆಕ್ಕಲನುೞ್ವವ | ಸರದೊಳಿದಿರ ಕಲ್ಲಂ ತಾಗಲ್ಕಾ |
ಭರಕೆ ಮುಱಿದ ದಾಡೆಯಿನರುಣಾಂಬು ಪೊರೆದು ಬೀೞ್ವೆಳಮುತ್ತು ||
ಪಿರಿದುಂ ರಂಜಿಸಿದುವು ಕಾಡೊಡೆಯನ | ವರವಿಕ್ರಮದ ಬೆಳಸನುದ್ಯೋಗದೊ |
ಳಿರದೆ ಬೆಳೆವೆನೆನುತಂ ತಾಂ ಬಿತ್ತುವ ಬೀಜದ ಭಂಗಿಯೆನೆ               || ೩೧ ||

ಸಿಂಗಂ ಪೆಱುತಿರಲಾಶಿಶುವಂ ತಾ | ಯಂಗದಿ ತಲೆ ಹೊಱಟುದಯಿಪ ಸಮಯಕೆ |
ಮುಂಗಡೆಯೊಂದು ಮತಂಗದ ಮಱಿಯಿರೆ ಕಾಣುತ ಕಡುಮುಳಿದು ||
ಜಂಗಿಸಿಯಾವೊಡಲಿಂದದನವಱಿತು | ತುಂಗಪರಾಕ್ರಮಿಗಳ್ ಕಿಱಿದಾದೊಡೆ |
ಪಿಂಗುವರೇ ತಮ್ಮಯ ಕೃತ್ಯವನವನೀಮಂಡಲದೊಳಗೆ   || ೩೨ ||

ಎರೆಯಂ ನುಂಗುವ ಫಣಿಯಾಫಣಿಯಂ | ಭರಿಕೈಯಿಂದೆ ಪಿಡಿವ ಮದಕರಿಯಾ |
ಕರಿಯಂ ಕೊಲ್ವ ಮೃಗೇಂದ್ರಂ ಮತ್ತಾ ಮೃಗಪತಿಯಂ ಸೀೞ್ವ ||
ಶರಭಂ ಶರಭನನೆತ್ತುವ ಭೀಕರ | ವರಭೇರುಂಡಖಗಂ ತದ್ವಿಪಿನದೊ |
ಳಿರೆ ಕಂಡಚ್ಚರಿವಟ್ಟಂ ವಿಕ್ರಮಕೌರವಭೂಪಾಲಂ           || ೩೩ ||

ಭರದಿಂ ಬಿಸುನೆತ್ತರು ಸುರಿವಾನನ | ವುರಿಯನುಗುೞ್ವೊಲೆ ಮೂಗೆನಲಳ್ಳೆಯ |
ನಿರದೆ ಕರಂ ಹುಯ್ಯುತ ಕುಕ್ಕುಱಿಸಿದ ಸಲಗಂ ತಿದಿಯೆನಲು ||
ಉರವಣೆಯಿಂ ಮೊದಲೆಚ್ಚು ಕೆಡಪಿಯೊಡ | ವಱಿದಾ ಬಾಲವಿಡಿದು ಬಾಗಿದ ವನ |
ಚರನೊಪ್ಪಿದನದನೊರ್ಕೈಯಿಂದೊತ್ತುವ ಕಮ್ಮಱನಂತೆ  || ೩೪ ||

ಮುಂದೊಂದೆಡೆಯೊಳ್ ಮಂದೈಸಿ ಕರಂ | ನಿಂದು ತಮುತ್ತಿರ್ವರುಮಂ ನೋೞ್ಪ ಪು |
ಳಿಂದಿಯರಂ ನೋಡುತ ನೃಪನಿರುಳ್ವೆಣ್ಗಳೊ ಪೊಸಕತ್ತುರಿಯಾ ||
ಸುಂದರಿಯರೊ ನೀಲದ ನೀಱೆಯರೋ | ಇಂದೀವರಕುಸುಮದ ಕೋಮಲೆಯರೊ |
ಚಂದದ ಹರಿಚಂದನದಬಲೆಯರೊ ಎನುತ ಕೊಂಡಾಡಿದನು          || ೩೫ ||

ತಳರಡಿಗಳ ತಳತಳಿಪಲರ್ಗಣ್ಗಳ | ಪೊಳೆವೆಳದುಂಬಿಗುರುಳ್ಗಳ ಸೊಗಯಿಪ |
ಸೆಳೆನಡುವಿನ ಸುರಭಿಶ್ವಾಸದ ಸುರುಚಿರಶಾಖೋಪಮದ ||
ನಳಿತೋಳ್ಗಳ ನವಕಜ್ಜಲವರ್ಣದ | ಲಳಿತಾಂಗದ ಕಾಱ್ಬೇಡಿತಿಯರು ಕ |
ಣ್ಗೊಳಿಸಿದರಾಸಲ್ಲಲಿತ ತಮಾಲವನದ ಲಕ್ಷ್ಮಿಯ ತೆಱದಿ            || ೩೬ ||

ಕಾರಿರುಳ್ವಣ್ಣದ ಮೆಯ್‌ಕಾಳಿಂದಿಯ | ನೀರಂ ತೆಗಳ್ವ ತನುಚ್ಛವಿ ನವಕ |
ಸ್ತೂರಿಯ ಪರಿಮಳಮಂ ಪೊಱಮಡಿಸುವ ತನುತನುಸೌರಭ್ಯಂ ||
ಮಾರಮದೇಭಮನೇಳಿಪ ಸುಗತಿ ಮ | ಯೂರಲಸತ್ಪಿಂಛದ ಸುಭಗತೆಯಂ |
ದೂರೀಕರಿಪ ಕಬರಿ ಕಣ್ಗೊಪ್ಪಿದುವಾಬೇಡಿತಿಯರಿಗೆ      || ೩೭ ||

ಕಾಡ ಕುಸುಮಮಂಜರಿಯಂ ಕಚದೊಳ್ | ಸೂಡಿ ಮಿಗದ ಗೋರೋಚನದಣ್ಪಂ |
ತೀಡಿ ತನುವಿನೊಳು ಬಿದಿರ ಬಸಿರ ಗಜಕುಂಭದ ಸೂಕರನ ||
ದಾಡೆಯ ಮಣಿಹಾರಮನುರುಕುಚದೊಳ್ | ಜೋಡಿಸಿಯಸುಗಳೆದಳಿರ ದುಪ್ಪಟಿಯಂ |
ಪಾಡಱಿದುಟ್ಟು ಪುಳಿಂದಪುರಂಧ್ರಿಯರೊಪ್ಪವಡೆದರಲ್ಲಿ           || ೩೮ ||

ನಿಟ್ಟೆಸಳ್ಗಣ್ಣ ನಿಶಾಟನಿತಂಬಿನಿ | ಯಿಟ್ಟಣಿಸಿದ ನೆಲೆಮೊಲೆಗಳ ಮಧ್ಯದೊ |
ಳಿಟ್ಟುರಗನ ಕೊಟ್ಟಿನ ಮಣಿಹಾರಂ ಕಣ್ಗೆ ವಿಶಂಕೆಯನು ||
ಪುಟ್ಟಸಿದುದು ಮನಸಿಜಮಾತಂಗದ | ಬಟ್ಟ ಜವಳಿದಲೆಯೊಳಗಲರುಣಿಯಳ |
ವಟ್ಟ ನಮೇರುಕುಸುಮಮಾಲೆಯನೊಸೆದಿಕ್ಕಿದ ಮಾಱ್ಕೆಯೊಳು   || ೩೯ ||

ಮತ್ತೊರ್ವಳ್ ಮಿಗಗಣ್ಗಳ ಬೇಡಿತಿ | ಸುತ್ತಿದುಡೆಯ ಪೊಸಪೀಲಿಯ ಕಣ್ಗಳ |
ಮೊತ್ತಂ ಕಣ್ಗೆ ವಿರಾಜಿಸಿದುದು ತಜ್ಜನತಾನಾಯಕನ ||
ಚಿತ್ತೋದ್ಭವಗೆಣೆಯೆನಿಸುವ ಚೆಲ್ವಿಕೆ | ಯುತ್ತಮಮಂ ವನಸತಿ ನಡೆ ನೋಡಲೆ |
ನುತ್ತ ಪಲವು ಕಣ್ಣಂ ತಾನಂಗೀಕರಿಸಿದ ಮಾೞ್ಕೊಯೊಳು                        || ೪೦ ||

ಇಂತೊಪ್ಪುವ ಹಳುವಂ ನಡೆನೋಡುವ | ಕಂತುನಿಭಂ ತನ್ನೊಡನೆಯ್ದುವ ನಿಜ |
ಕಾಂತೆ ಸುಲೋಚನೆ ಸಹಿತಂ ಪಿರಿದನುರಾಗದಿನೆಯ್ತರತ ||
ಮುಂತೊಂದೆಡೆಯೊಳ್ ಮುಗುಳ್ವಿಲ್ಲಂ ಕಡು | ಸಂತಸದಿಂ ಕ್ರೀಡಿಪ ನೆಲೆಯೆನಿಸಿ ಕ |
ರಂ ತೊಳಗುವ ಸೌಮನಸೌಖ್ಯದ ನಂದನಮೊಂದಿರೆ ಕಂಡಂ                        || ೪೧ ||

ಅರಗಿಳಿ ಬಾಳಾಂಕಿಗಳೋದುವ ಮಠ | ವರಲಂಬುಗಳಂ ಮಾಡುವ ಕಮ್ಮಟ |
ಮರವಿಂದಾಸ್ತ್ರದ ಮೊನೆಗಿಕ್ಕುವ ಬಾಸಟದ ಬೆಳೆಯಕೂಟ ||
ವಿಠಹಿವಿತಾನದ ಚಿತ್ತಕೆ ಸಂಕಟ | ಮುರುಯೋಗಿಗಳ ವಿರಕ್ತಿಗೆ ಪಲ್ಲಟ |
ದಿರವು ಸುರಭಿವಾಯು ಕಾಲಾಟವುಮೆನಿಸಿದುದಾತೋಟ              || ೪೨ ||

ಬಾೞೆ ಬಕುಳ ಬಾವನ್ನ ಬೆಳೆವ ಸಿರಿ | ದಾಳಿ ಪಲಸು ಪಡ್ಡಳಿಯರನೇಱಿಲ್ |
ನೇಳಲ್ ನೆಲ್ಲಿಯಸುಗೆಯೆಳನೀರಿಂ ಮಾವಿಂದಿರಹೊನ್ನೆ ||
ಈಳೆಯಡಕೆ ಕಜ್ಜುರ ಮಾದಲ ಕಿ | ತ್ತೀಳೆಯಗಿಲ್ ನಾರಗ ಸಂಪಗೆ ರಸ |
ದಾಳಿ ಸಿರಿಸ ದಾಳಿಂಬದ ಸಾಲ್ಗಲ್ ಸಲೆ ಸೊಗಸಿದುವಲ್ಲಿ || ೪೩ ||

ಪೂಗಮನೇಱಿದ ನಾಗಲತಿಕೆ ಪು | ನ್ನಾಗಮನಡರಿದ ಮಾಲತಿ ಮಾವಂ |
ರಾಗದಿನೇಱಿದ ಮಲ್ಲಿಗೆಯಸುಗೆಯನಮರಿದ ವಾಸಂತಿ ||
ಬಾಗೆಯನ್ನೊತ್ತಿ ಹಿಡಿದ ಕುಂದಂ ಕೃ | ಷ್ಣಾಗರುವಿಡಿದುಡುವಳ್ಳಿಗಳಿಂದಾ |
ಪೂಗಣೆಯನ ಜಯನಾಲಯಮೆನೆ ವನವತಿಪಾವನಮಾಯ್ತು        || ೪೪ ||

ಪೂ ತುಱುಗಿದ ಪುನ್ನಾಗಂ ತಳಿರಿಂ | ಜೋತೊಱಗಿದ ತರುಣಾಶೋಕಂ ಲತೆ |
ಯೋತೊಡರಿಂದ ಮಂದಾರಂ ಪಾವು ಪರಾಗಮನಿಠದುಣ್ಬ ||
ಕೇತಕಮಮೃತಫಲಂ ತೀವಿದ ನವ | ಚೂತಂ ಮಗಮಗಿಸುವ ಚಂದನಭೂ |
ಜಾತಮಿರಲ್ಕೊಪ್ಪಿತು ವನವಂಗಭವನ ನಲ್ಮೆಯ ಭವನಂ            || ೪೫ ||

ಎಳದಳಿರ್ದೊಂಗಲುಳಿಯ ಮಱೆಯೊಳ್ ನಿಂ | ದಳಿತತಿಯೆಂಬ ಬಿಯದರಲ್ಲಿಗೆ ಕ |
ಣ್ಗೊಳಿಪಾನೆಗಳ ಮಿಸುವ ಮಿಗಗಳ ರಂಜಿಸುವೊಳ್ವೆಕ್ಕುಗಳ ||
ವಿಳಸನ್ಮದದೊಳೊಗೆದ ನೂತನಪರಿ | ಮಳಜಾತಿಯನಾಸುಗ್ಗಿಯನಂದನ |
ದೊಳಗೊಯ್ಯನೆ ಸೋವಿದನೆಲರೆಂಬ ವನೇಚರನತಿಮುದದಿ          || ೪೬ ||

ಈವನದಿಮ್ಮಾವಿನ ತಣ್ಣೆೞಲೆಂ | ಬಾವೋಲಗಶಾಲೆಯೊಳರಲಂಬಂ |
ಮೂವಳಿಸಿದ ಗಿಳಿಯಳಿ ಬಾಳಾಂಕಿಯ ಮಂತಣದೊಳಗಹನೆ ||
ಈವೇಳೆಗೆಯವಸರಮಿಲ್ಲಾತಗೆ | ನೀವಿದಱಿಂದೆ ಪುಗಲ್‌ಪುಗಲೆಂದಿರ |
ದೋವದುಲಿವ ಪಡಿಯಱವಕ್ಕಿಯ ನುಡಿಗೇಳೆ ನಡೆದನರಸಂ          || ೪೭ ||

ಆ ಸುಮನಸವೆಂಬ ಮಹಾವನದ ವಿ | ಲಾಸಮನೀಕ್ಷಿಸುತಂ ತಾಮಿರ್ವರ್ |
ಪೂಸರಲನ ಪುಗುವನೆಯಂತೆ ಲತಾಲಯಮೊಂದಿರೆ ಕಂಡು ||
ಭಾಸಿಪ ಬಹುಕುಸುಮದಿನೊಪ್ಪುವ ತಳಿ | ರ್ವಾಸಿನ ಮೇಲಾನಡುವೊೞ್ತಿನ ಬಿಸಿ |
ಲೋಸರಿಸುವ ಪರಿಯಂತಂ ಪ್ರಿಯತರದಿಂ ಮೆಯ್ಯಿಕ್ಕಿದರು           || ೪೮ ||

ಪರಿರಂಜಿತಪದ್ಮಾಧೀಶಂ ದು | ರ್ಧರತರಧರಣೀಮಂಡಲಧಾರಣ |
ನುರುತರಬಲಯುತನತಿವಿಭ್ರಾಜಿತಭೋಗೈಕಾಧಾರಂ ||
ಪಿರಿದುಂ ಪವನಾಚಾರಂ ಘನಬಂ | ಧುರಮಣಿಮಸ್ತಕನುರಗೇಂದ್ರನವೊಲ್ |
ಧರೆಯೊಳಗತಿವಿಭ್ರಾಜಿಸಿದಂ ಸತ್ಪ್ರಭುಕುಲಮಣಿದೀಪಂ   || ೪೯ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತ ಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸ | ಮ್ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಾದುದು ಪದಿನೈದನೆಯ ಮಿಸುವ ಸಂಧಿ   || ೫೦ ||

ಹದಿನೈದನೆಯ ಸಂಧಿ ಸಂಪೂರ್ಣಂ