ಸೂಚನೆ || ಭರದಿಂ ಖಚರಿಯೆಸಗಿದುಪಸರ್ಗಕೆ |
ಯಿರದಂಜದೆ ತನುಜಗೆ ರಾಜ್ಯವನಿ |
ತ್ತುರುದೀಕ್ಷೆಯನಾಂತಮೃತಪದಂಬಡೆದಂ ಜಯಭೂವರನು ||

ಮುದದಿಂ ಮುದ್ದಮೊಗದ ಮುಗ್ದಾಕ್ಷಿಯ | ಮೃದುತನುವೆಂಬೊಳ್ವಾಸಿನೊಳೊಯ್ಯನೆ |
ಪುದಿದ ಮಲಯರುಹಚರ್ಚೆಯ ಮಿಸುಗುವ ಪಚ್ಚಡಿಕೆಯ ಮೇಲೆ ||
ಪೊದೆದಾಕೆಯ ನಳಿತೋಳ್ವಚ್ಚಡಮಂ | ಚದುರಿಂ ಪೊದೆದನುಗೆಯ್ದು ಸುಸಿಲ ಸೌ |
ಖ್ಯದ ತಿಳಿನಿದ್ದೆಯೊಳಿರ್ದಂ ವಿಕ್ರಮಕೌರವಭೂವರನು     || ೧ ||

ಆ ನಡುವೊೞ್ತಿನ ಬಿಸಿಲಿೞಿವನ್ನಂ | ಮಾನವಪತಿ ಮೆಯ್ಮಱೆದಿರ್ದಾನಿಜ |
ಮಾನಿನಿಯೆೞ್ಚಱದಂತೆಱ್ದಾಲತೆವನೆಯಂ ಪೊಱಮಟ್ಟು ||
ಸಾನಂದದಿ ಸುರತರುಗಳನಡರ್ದ ನ | ವೀನಾಮರಲತಿಕಾಸಂದೋಹದ |
ನೂನಕುಸುಮಮಂಜರಿಯಂ ತಿಱಿತಿಱಿದಾಡುವ ಸಮಯದೊಳು   || ೨ ||

ನಂದನವನಿತೆ ನರೇಂದ್ರಲಲಾಮನ | ದೊಂದು ಮನೋಹರಮುಮನೀಕ್ಷಿಸಿ ಸೋ |
ಲಂದಳೆದೆಯ್ದಿದಳೋ ಎನಲೊರ್ವಳ್ ಚಂಪಕನಾಸಿಕದ ||
ಕುಂದಣವಾೞೆದೊಡೆಯ ಕುಮುದಾಕ್ಷಿಯ | ಕೆಂದಳಿರ್ವಜ್ಜೆಯ ಲಲಿತಲತಾಂಗದ |
ಕುಂದರದರ ಬೆಳುಗಾಯ್ಮೊಲೆಯಬಲೆ ವಿಲಾಸದಿನೆಯ್ದಿದಳು         || ೩ ||

ತಳಿರಡಿಗಳ ತಾರಾಳಿನಖಂಗಳ | ಪೊಳೆವೆಳವಾೞೆದೊಡೆಯ ಮೞಲೊಟ್ಟಿಲ |
ನಿೞಿಕೆಯ್ವ ನಿತಂಬದ ಸಂಶಯಮಧ್ಯದ ಕಲಶಸ್ತನದ ||
ತೊಳಪ ಶಶಾಂಕಮುಖದ ಸರಸೀರುಹ | ದಳನೇತ್ರದ ಕಿಱುದುಂಬಿಗುರುಳ ಹೊಂ |
ಜೆಳೆಮೆಯ್ಯುಪ್ಪಳಗಂಪಿನ ಗರುವೆ ವಿಲಾಸದಿನೆಯ್ದಿದಳು || ೪ ||

ಬಂದಾಬಡವಿಡಿನಡುವಿನ ಭಾಮಿನಿ | ನಿಂದು ಬೆಡಂಗಿನೊಳಿರೆ ಕಂಡಭಿನವ |
ಕಂದರ್ಪಂ ಜಯಭೂಪತಿ ತಾನಿಂತೆಂದು ನಿರೂಪಿಸಿದಂ ||
ಇಂದುವದನೆ ನೀನಾಠಾವರಸಿನ | ನಂದನೆಯೀಕಡೆಗೇಕಾರಣಮೆ |
ಯ್ತಂದೆಯೆನಲ್ ಬಂದುಗೆವಾಯಂ ತೆಱೆದಿಂತೆಂದಾಡಿದಳು           || ೫ ||

ಧರಣಿಪ ಚಿತ್ತೈಸಾನೀ ಬಿಜ್ಜೋ | ದರನಾಡಿನ ಮಧ್ಯದೊಳೆಸೆವ ಮನೋ |
ಹರವಿಷಯದ ಶಶಿಪುರದಧಿರಾಜಂ ಪಿಂಗಳಗಾಂಧಾರಂ ||
ನರನಾಯಕನೆಸೆವಾತನ ನಿಜಸತಿ | ತರಳವಿಲೋಚನೆಯೆಂಬೆಂ ನಾಂ ನಿ |
ನ್ನುರುತರಸೌಂದರ್ಯಕೆ ಸೋಲ್ತೀಯೆಡೆಗೊಲವಿಂದೆಯ್ದಿದೆನು      || ೬ ||

ನಿನ್ನ ವಿಲಾಸಮುಮಂ ನೋಡದೆ ನಾಂ | ಚೆನ್ನಿಗ ತಡವೊಂದಿನಿಸಂ ಮಾಡದೆ |
ಮನ್ನಿಸಿ ಕೂಡಿ ಹರಣಮಂ ಕಾವುದು ಲೇಸಂತಲ್ಲದೊಡೆ ||
ಎನ್ನನೆಸಳಗಣೆಯಗ್ಗಿಯಳಱಿಪುದು | ಕೆನ್ನಮೆನುತ ನುಡಿದಾಕುಲಟೆಗೆಯ |
ತ್ಯುನ್ನತಗುಣಿ ವಿಕ್ರಕೌರವನೀತೆಱದಿಂದಾಡಿದನು            || ೭ ||

ನುಡಿಯದಿರೆಲೆ ಬಂಧಕಿ ನೀನೊರ್ವಂ | ಮುಡಿದ ಮುಡಿಯ ಬಾಸಿಗಮಾಮೆಯ್ಯೊಳ್ |
ತೊಡೆದನುಲೇಪನವುಟ್ಟು ಕಳೆದ ದುಪ್ಪಟಯೊಱಗಿದ ಹಕ್ಕೆ ||
ಮಡಗೂೞಂತದಱಿಂ ನಿನ್ನೊಳಗಾ | ನೊಡವೆರೆವುದು ಮತವೇ ಎಂದವನೊಳ್ |
ಪಡಿಮಾತಂ ನುಡಿದಳ್ ಕೆಂಬಾಯಂ ತೆಱೆದವಳಿಂತೆಂದು   || ೮ ||

ಪರರೆನುಸುಂ ಭೋಗಿಸಿದುವಭೋಗ್ಯಂ | ಕರಮೆ ಕನಿಷ್ಟಮೆನುತ್ತಾಡಿದೆಯೆಲೆ |
ಯರಸಾ ಪರಭೂಪರ್ ಭೋಗಿಸಿದುತ್ತಮಮಣಿಭೂಷಣಮುಂ ||
ವರವಾಹನತತಿಯುಂ ನೆಲವೆಣ್ಣುಂ | ಸಿರಿಯುಂ ಭೋಗ್ಯಗಡಾಸ್ತ್ರೀರತ್ನಂ |
ಪಿರಿದುಂ ಕಷ್ಟಮೆ ಎನುತೆ ನುಡಿದಳೊಳಗವನಿಂತೆಂದುಸಿರ್ದಂ          || ೯ ||

ಪರಸುದತಿಯರೆನ್ನೊಡವುಟ್ಟಿದರೊಳ್ | ಸರಿ ಮುಂ ಪೆತ್ತೋವಿದ ನಿಜಜನನಿಗೆ |
ಸರಿ ಮೊದಲುಪದೇಶಂಮಾಡಿದ ಗರುವಿನ ನಿಜವಲ್ಲಭೆಗೆ ||
ಸರಿ ತಾಂ ಪೆತ್ತಣುಗಿನ ಪೆಣ್ಗೂಸಿಗೆ | ಸರಿಯಂತದಱಿಂದೀಕೃತ್ಯಮನಾ |
ಚರಿಸುವುದನುಚಿತವೆಂದವಗಾಬಂಧಕಿಯಿಂತಾಡಿದಳು      || ೧೦ ||

ಹರಿಯ ಹಲವು ಗೋಪನಿತಂಬಿನಿಯರ್ | ಪರವನಿತೆಯರಲ್ಲವೆ ನಾಲ್ಮೊಗದನ |
ಗರಿಣಿಯವಗೆ ಮಗಳಲ್ಲವೆ ಸಗ್ಗದ ಭಾಮಿನಿಯರ್ ತಮ್ಮಾ ||
ಪುರುಷರೞಿದ ಬೞಿಕನ್ಯರ್ಗೊಲಿಯರೆ | ಕುರುಭೂಮಿಯ ಮಿಥುನಂ ತಾಮೇಕೋ |
ದರರಲ್ಲವೆಯೆಂದಾಡಿದ ಕುಲಟೆಗೆ ಕುರುಪತಿಯಿಂತೆಂದೆಂ || ೧೧ ||

ಪರಸತಿಯರ ಕೂಟಂ ನರಕಾವನಿ | ಗಿರದೆಯ್ದಿಪುದದಱಿಂ ನಿನ್ನೊಳಗೊಡ |
ವೆರವುದು ಮತವಲ್ಲೆನುತತಿನಿಷ್ಠುರವಚನಮುಮಂ ನುಡಿದಾ ||
ಅರಸಂಗಿಂತೆಂದಳ್ ಜೀವದಯಾ | ಪರಧರ್ಮಂ ನಿನ್ನದು ನೀನೆನ್ನಂ |
ಪರಿಹರಿಸಲ್ಕಾನೞಿದಾಪಾಪಂ ನಿನ್ನನೆ ತಟ್ಟುವುದು       || ೧೨ ||

ಎಂದು ನುಡಿದ ನಳಿನವಿಲೋಚನೆಗಾ | ಯಿಂದಕುಲದ ರಾಯಂ ಜಯಭೂವರ |
ನೆಂದನೆಲೇ ಪಾತಕಿ ನಿನ್ನೊಳು ಮಱುಮಾತಂ ನಾನಾಡೆ ||
ಮುಂದಣ ಗತಿ ಕಿಡುವುದು ನೀಂ ಪೋಗೆನೆ | ಮಂದೇತರಕೋಪದಿನುಪಸರ್ಗಮ |
ನೊಂದಿನಿಸುಂ ತಡಮಾಡದೆ ಮಿೞ್ತುವಿನಂದದಿ ಮಾಡಿದಳು           || ೧೩ ||

ಬೆಸಲಾದಾವುಗಳಿಂ ಪೆರ್ಬುಲಿಯಿಂ | ಮುಸುಕುವ ಬಲ್ಸಿಡಿಲಿಂ ಸಱಿವಱೆಯಿಂ |
ಬಿಸದುರಿಯಂ ಬಿಡುದುಗುೞ್ವುರಗಗಳಿಂ ಸೂಸುವ ಪುರಿವೞಲಿಂ ||
ಮಸೆದಸಿಯಿಂ ಸಿಂಗದ ಜಂಗುಳಿಯಿಂ | ಪೊಸತಱಿಗಂಡದಿನಾಬಿಜ್ಜೋದರಿ |
ಮಸಗಿ ಕರಂ ದಾರುಣತರಮಪ್ಪುಪಸರ್ಗಂಮಾಡಿದಳು     || ೧೪ ||

ಎಕ್ಕಲನಿಂದೆತ್ತಿಪ ಪಿರಿದುಂ ಕಾ | ದುಕ್ಕುವ ಲೋಹರಸದಿನುೞೆ ಮಿಸಿಸುವ |
ಸೊಕ್ಕಾನೆಯ ಭರಿಕೈಯಿಂ ಬಲ್ಪಿಂ ಬಡಿಯಿಪ ಪಾತಕಿಯ ||
ಉಕ್ಕೆವಗೆಯ್ತಕ್ಕಗಿಯದೆಯಿನಿಸುಂ | ಚೊಕ್ಕಳಿಕೆಯ ದೀವಸಮೋಸರಿಸದೆ |
ತಕ್ಕೞಿಯದೆ ತದ್ದೀರೋದಾತ್ತಂ ಮೇರುವಿನಂತಿರ್ದಂ    || ೧೫ ||

ಆವುಪಸರ್ಗಮನಾಹೂವಿನ ಮನೆ | ಯೋವರಿಯೊಳ್ ಮಱೆದೊಱಗಿದ ಹೊಸಹೊಂ |
ದಾವರೆಮೊಗದ ಸುಲೋಚನೆ ಕೇಳ್ದಲರ್ಗಣ್ಣಂ ತೆಱೆದೆಱ್ದು
ತೀವಿದ ಭೀರುತೆಯಿಂ ಬರೆ ಕಾಣು | ತ್ತಾವಿದ್ಯಾಧರಿಯಾಕೆಯ ರೂಪಂ |
ಭಾವಿಸುತಾವುಪಸರ್ಗಮನಡಗಿಸಿ ಮೆಯ್ಗರೆವನಿತಱೊಳು            || ೧೬ ||

ಕಪ್ಪುರದೆಳವಳಿಕಿಂ ಕಂಡರಿಸಿ ತೊ | ಳಪ್ಪನೆಸೆವ ಪಾಂಚಾಳಿಕೆಯಂದದೆ |
ನಿಪ್ಪೊಸತಪ್ಪಾಕಾರದ ಸಗ್ಗಿಗನೊರ್ವಂ ತನ್ನ ಸತಿ ||
ಉಪ್ಪಳಗಣ್ಣ ನಿಳಿಂಪಾಂಗನೆವೆರ | ಸೊಪ್ಪಮನನುಕರಿಸುತ ಗುಣನಿಳೆಯರೆ |
ನಿಪ್ಪಾರಾಜಮಿಥುನಮಿರ್ದೆಡೆಗನುನಯದಿಂದೆಯ್ದಿದನು  || ೧೭ ||

ಬರುತಾದೇವಂ ಪಿರಿದನುರಾಗದಿ | ವರಶುಚಿವಿಕ್ರಮಕೌರವನಂ ಬಂ |
ಧುರಗುಣಭೂಷಿತೆ ಸುಭಗೆ ಸುಲೋಚನೆಯಂ ಕಾರುಣ್ಯದೊಳು ||
ತುರಿಯದಿ ಪೂಜಿಸಿ ತುತಿಯಿಸಿ ಬೞಿಕಾ | ದರದಿಂದೆಲೆ ನೃಪತೀ ನಾವೀಯೆಡೆ |
ಗಿರದೆಯ್ದಿದ ಕಥನಮನೊರೆವೆಂ ಕೇಳೆಂದು ನಿರೂಪಿಸಿದಂ  || ೧೮ ||

ದೇವೇಂದ್ರಂ ಶಚಿಸಹಿತವೆ ತನ್ನಮ | ರಾವತಿಯೊಳು ಮಿಸುಪೋಲಗಮಿರ್ದಾ |
ದೇವಸಭೆಯೊಳಿಂತೆಂದಂ ಮತ್ತಾಭರತಮಹೀತಳದ ||
ಭೂವರರೊಳ್ ಜಯನೃಪನುಂ ಸತಿಯರೊ | ಳಾವಿಧುವದನೆ ಸುಲೋಚನೆಯುಂ ನೆಱೆ |
ಭಾವಿಸಲವರಲ್ಲದೆ ಸುವ್ರತದೊಳಮಾರಿಲ್ಲೆನುತುಸಿರ್ದಂ            || ೧೯ ||

ಆ ನುಡಿಗೆಲೆ ಜಯನೃಪ ನಿನ್ನಯಲಸ | ಮಾನವ್ರತಮಂ ನೋಡುವೆನೆನುತೆ |
ನ್ನೀನಲ್ಲಳು ಸಹಿತಾಸಗ್ಗದಿನಾಂ ನಿಮ್ಮೆಡೆಗೆಯ್ದಿದೆನು ||
ಕಾನನಮಿದಱೊಳಗಡೆಯಂಬರಚರ | ಮಾನಿನಿ ಮಾಡಿದ ಕೃತ್ಯಕ್ಕಗಿಯದೆ |
ನೀನಿರ್ದುದನೀಕ್ಷಿಸಿ ಮನದೊಳಗನುರಾಗಂದಾಳಿದೆನು       || ೨೦ ||

ಸುರರಾಜಂ ಸಗ್ಗಿಗರೋಲಗದೊಳ | ಗುರುಮುದದಿಂ ಕೊಂಡಾಡಿದ ಮಾತಿಗೆ |
ಪಿರಿದುಂ ನಿಮ್ಮೀರ್ವರ ಗುಣವೂಣೆಯಮಂ ಮಾಡಿದುದಿಲ್ಲ ||
ಅರಸಾಯೆನುತ ಸರಾಗದಿ ತುತಿಯಿಸಿ | ವರರತ್ನಾಭರಣಂಗಳನಿತ್ತಾ |
ದರದಿ ತಮುತ್ತಿರ್ವರ್ ನಿರ್ಜರಲೋಕಕ್ಕೆಯ್ದಿದರಿತ್ತ        || ೨೧ ||

ದಾರುಣತರಮಪ್ಪೀಯುವಸರ್ಗಂ | ದೂರೀಕೃತಮಾದೊಡಮೆನಗೀಸಂ |
ಸಾರದ ಸೌಖ್ಯಮೆನಗೆ ಬೇಡನುತಿನಿವಿರಿದುಂ ಭಾವಿಸುತ ||
ವೈರಾಗ್ಯಂ ಬಗೆಯೊಳಗಚ್ಚೊತ್ತಲು | ಭೂರಮಣೀಪತಿ ಮುಕ್ತಿಸ್ತ್ರೀಯೋಳು |
ಸಾರಸುಖಮನನವರತಂ ಬಿಡದನುಭವಿಸುವೆನೆನುತಿರ್ದಂ  || ೨೨ ||

ಆ ಸಮಯದೊಳಂಬುಜದಳಲೋಚನೆ | ಭಾಸುರಮೂರ್ತಿ ಸಲೋಚನೆ ಸಹಿತಂ |
ಭೂಸುದತೀಪತಿ ನಾನಾಚಿತ್ರವೆಸದ ಬಿಮನವನೇಱಿ ||
ಆ ಸತ್ಪಥದೊಳು ರೋಹಿಣಿವೆರಸು ಸು | ಧಾಸೂತಿ ಕರಂ ವಿಭವಂಬೆತ್ತ ವಿ |
ಲಾಸದಿ ಮುನ್ನೀರ್ಗೆಯ್ದುವ ತೆಱದಿಂ ನಿಜಪುರಕೆಯ್ದಿದನು           || ೨೩ ||

ಹೊೞಲಂ ಹೊಕ್ಕು ಬೞಿಕ ತನ್ನೊರ್ವಳು | ಲಳನೆ ಶಿವಂಕರದೇವಿವೆಸರನಾಂ |
ತಳಘುಪಯೋಧರೆಯಣುಗನನಂತಬಲಂಗೆ ಸುಲಗ್ನದೊಳು ||
ತುೞಿಲಾಳ್ ವಿಕ್ರಮಕೌರವನವನೀ | ತಳಭಾರಮನಿತ್ತೆನಸುಂ ವಿಭವದಿ |
ಘೞಿಲನೆ ಪಟ್ಟಂಗಟ್ಟದನತ್ಯುನ್ನತಿಕೆಯ ಮುದದಿಂದ   || ೨೪ ||

ಪಟ್ಟಂಗಟ್ಟಿ ತನೂಜಗೆ ತನ್ನೊಡ | ವುಟ್ಟಿದ ವಿಜಯಜಯಂತರಯೋಧ್ಯೆಯ |
ಪಟ್ಟಣದರಸು ಭರತನೃಪತಿಯ ತನುಜರ್…. ತನ್ನಾ ||
ಹೆಟ್ಟುಗೆಯರ್ ತಾಮೆಣ್ಫಾಸಿರಮುಂ | ಕಟ್ಟರಸುಗಳಯ್ಸಾಸಿರವೆರಸಾ |
ದಿಟ್ಟಂ ದೀಕ್ಷೆಗೆನುತ ನಡೆದಂ ವೃಷಭೇಶನ ಸನ್ನಿಧಿಗೆ        || ೨೫ ||

ದಿವಿಜವಿಟೀವಿಟವಿಲಸತ್ಕ್ರೀಡಾ | ನವನಿರ್ಜರಲತಿಕಾಗೃಹಮಿರ್ಪಾ |
ರವೆಗಳನಾಂತ ಜವಳಿದಪ್ಪಲಿನೆಸೆವಾಕೈಲಾಸಾದ್ರಿ ||
ಪ್ರವಿದಿತಮಾಗಿ ವಿರಾಜಿಪ ಸುಮನೋ | ಭುವನಮದಾಗಲ್ಕದಱಗ್ರದೊಳೊ |
ಪ್ಪುವನನುಕರಿಸಿದ ಸಮವಸರಣಮಾಮುಕ್ತಿ ಯ ತೆಱನಾಯ್ತು       || ೨೬ ||

ವಿಮಲಕದಂಬಮಣಿಗಳಿಂ ಸೊಗಯಿಪ | ಸಮವಸರಣಮಂಡಪಮಂ ಹೊಕ್ಕಾ |
ರಮಣಿಸುಲೋಚನೆಸಹಿತ ಜಿನಪನಂ ಮೂಮೆ ತಿರಿದು ಬಂದು ||
ಸಮುಚಿತದೊಳ್ ನಿಂದಭಿವಂದಿಸಿ ಕರ | ಕಮಲಂಗಳನಾದರದಿಂ ಮುಗಿದಾ |
ಸಮಯಕೆ ಸಂಜನಿಯಿಸಿತವಧಿಜ್ಞಾನಂ ಸದ್ಗುಣನಿಧಿಗೆ       || ೨೭ ||

ತದನಂತರದೊಳ್ ಗಣಧರರಂ ಸ | ಮ್ಮದದಿಂದಭಿವಂದಿಸಿ ದೀಕ್ಷೆಯನಾ |
ಚದುರೆ ಸುಲೋಚನೆ ಮೊದಲಾದರಸಿಯರುಂ ತನ್ನೊಡವಂದ ||
ವಿದಿತಾವನಿಪಾಲಕನಿಕುರುಂಬಮು | ಮದಟರ್ ವಿಜಯಜಯಂತಾನುಜರುಂ |
ಸದಮಲಗುಣಿ ತಾನುಂ ಧರಿಸಿದರಮರಜನಂ ಪೊಗೞ್ವಂತೆ            || ೨೮ ||

ಅವನಿಗನರ್ಘ್ಯಮೆನಿಪ ಮುನಿರೂಪಂ | ಸವಿನಯದಿಂದಾಯೆಡೆಯ ತಪಸ್ವೀ |
ನಿವಹಂ ಕೊಂಡಾಡುವಿನಂ ತಾನವಿರಳಹೃದಯನುಮಾಗಿ ||
ಅವಧರಿಸೆ ಮನಃಪರ್ಯಯಜ್ಞಾನಂ | ಸವನಿಸೆ ಬೞಿಕುಪಗಣಧರಪದಮದು |
ತವಕದಿನೆಯ್ದಿತ್ತಾ ಮುನಿಯಱನನದೇನಂ ಬಣ್ಣಿಪೆನು      || ೨೯ ||

ಇಂತಾಧೀಶಂ ಮುಕ್ತಿಶ್ರೀಯೊಳ | ನಂತಸುಖಾತ್ಮಕನಾಗಿ ನೆರೆವ ಪ |
ರ್ಯಂತಂ ಮತ್ತಾತನ ಘನಭಾಷೆಯೊಳಿನಿಸಿನಿಸಂ ತೆಗೆದು ||
ಸಂತತಮಾಭವ್ಯಾವಳಿಗೊರೆದಂ | ತಿಂತಿಣಿಗೊಂಡ ವನಕೆ ವನಧಿಯ ನೀ |
ರಂ ತೆಗೆದಿನಿಸಿನಿಸಂ ಕಱೆವಂಬುದದಂದಮನನುಕರಿಸಿ       || ೩೦ ||

ತನ್ನೊಡನಿರ್ಛಾಸಿರ ಜತಿರಾಯರ್ | ಸನ್ನುತರಮಲಗುಣಾಲಂಕೃತರ |
ತ್ಯುನ್ನತಸುವ್ರತಪರಿಪಾಲಕರುಂ ತದ್ರಜತಾಚಲದ ||
ರನ್ನದ ಕೋಡುಂಗಲ್ಲುಪರಿಮದೊಳು | ಸನ್ನಿದಮಾಗಿ ನಿಲಲ್ ತಾಂ ನಿಂದಂ |
ತನ್ನಂ ತನುವಿಂದಂ ಬೇರ್ಕೆಯ್ದಾದಿತ್ಯಪ್ರತಿಮೆಯೊಳು     || ೩೧ ||

ತನುವಿದು ತನತಲ್ಲೆಂದು ವಿಚಾರಿಸಿ | ತನುವಿಂಗಪ್ಪ ಪರೀಷಹಮಂ ತಾ |
ನಿನಿಸುಂ ಭಾವಿಸದಾನಿಜತತ್ವದೊಳೋವದೆ ಚಿತ್ತವನು ||
ಎನಸುಂ ನಿಱಿಸಿ ಬೞಿಕ ಕಣ್ಣಾಲಿಯ | ನಿನಬಿಂಬದೊಳಿಟ್ಟಾಜತಿರಾಯಗೆ |
ಜನಿಸಿತು ಕೇವಲಬೋಧಂ ಪೊೞ್ತು ಕಡಲೊಳಗುೞಿದ ಮುನ್ನ       || ೩೨ ||

ಆರಿಂಗರಿದಿನ ಮುಕ್ತಿಮಹಿಯನಾ | ನಾರಯದುೞಿ ಸಾಧಿಸುವೆನೆನುತ ಮ |
ತ್ತಾರುಷಿಪತಿಯಾದೆಸೆಗೆ ಪರಸ್ಥಾನಂಮಾಡಿದ ತೆಱದಿ ||
ಧಾರಿಣಿಯಿಂದೈಸಾಸಿರ ಧನುವಿನ | ದೂರಮೊಗೆದು ನಿಂದಿರಲಾಕ್ಷಣದೊಳು |
ಭೋರೆನೆ ನಾಲ್ದೆಱದಮರನಿಕಾಯಂ ನೆರೆದತ್ತಾಯೆಡೆಗೆ    || ೩೩ ||

ಬಾನೇ ಬಾಯ್ದೆಱೆಯೆತ್ತಿ ಪೊಗೞ್ವಂ | ತನಾಕೀನಿಕರಂ ಸೂಳೈಸುವ |
ನಾನಾವಾದ್ಯರವಂ ಪೊಣ್ಮಿತು ಮೇಗಡೆ ಬಹುರೂಪಾಂತು ||
ಮಾನಿತಮಯನವವಿಧವಿದಿತಗ್ರಹ | ಮೀನೆಲಕಿೞಿವಂದದಿ ಪಲವಣ್ಣದ |
ನೂನಮಣಿಯ ಮೞೆಕಱೆದುದು ಬೋಧಮರುಹಗುದಯಿಸಲೊಡನೆ         || ೩೪ ||

ಸುರಿದುದಲರ ಸೂೞ್ವೞೆ ಬಿಡದೆಱಗಿತು | ಬಿರಿಮೊಗ್ಗೆಯ ತಂದಲು ನನೆಗಳ ಬೆ |
ಳ್ಸರಿ ಬಿೞ್ದುದು ಹೂವಿನ ಹನಿ ಹನಿತುದು ಹುಯ್ದುದು ಸಜ್ಜುಕದ ||
ಸರಿ ಪೊಸಮುಗುಳ್ಗಳ ಸೊನೆ ಕಱೆದುದಾ | ವುರವಣೆಯಿಂ ನವಶುಕ್ಲಧ್ಯಾನಂ |
ಬರೆ ಜಯಮುನಿನಾಥಗೆ ಭವ್ಯಜನಾನೀಕಮನೋರಥಗೆ    || ೩೫ ||

ಬೞಿಕಮರಾವನಿಯಿಂ ಬಳರಿಪು ಬೆಂ | ಬೞಿಯೊಳಗಿರದೆ ನಿಳಿಂಪವಿತತಿಯ |
ವ್ವಳಿಸಿ ಬರಲ್ಕಾಯೆಡೆಗೆ ಬರುತ ಪೂಜಿಸಿ ತತ್ಕೇವಲಿಗೆ ||
ವಿಳಸದ್ರತ್ನಕದಂಬಕದಿಂ ಪ | ಜ್ಜಳಿಸುವ ಗಂಧಕುಟಿಯನೊಸೆದಾಕ್ಷಣ |
ದೊಳಗತಿಚಿತ್ರವೆಸದಿ ನಿರ್ಮಿಸಿದಂ ವಿತ್ತೇಶ್ವರನಿಂದ         || ೩೬ ||

ಪವನಪಥಂ ಪಲವಣ್ಣದ ಪೂನಿನ | ನವಮಂಜರಿಗಳನೇಂ ಪಡೆದತ್ತೊ |
ದಿವಜೇಂದ್ರಂ ಮುನಿಸಿಂದಿಡೆ ಮುಂ ಕತ್ತಱಿಸಿದಱೆಟ್ಟೆಗಳೇ ||
ತವೆ ಚಿಗುರಲ್ಕಾರೋಹಣಶೈಲಂ | ತವಕದಿ ಪಾಱಿದುದೋ ಎನೆ ಮಿನುಗುವ |
ನವಮಣಿಸಂತತಿಯಿಂ ಕಂಡರಿಸಲ್ ತೊಳಗಿತು ಗಂಧಕುಟಿ  || ೩೭ ||

ಮತ್ತಾಗಂಧಕುಟಿಯ ಮಧ್ಯದೊಳೆಳ | ಮುತ್ತಿನ ಸಿಂಹಾಸನದುಪರಿಮದೊಳು |
ತೆತ್ತಿಸಿದಮಲಕನಕಕಂಜಾತದ ನಡುವಣ ಕರ್ಣಿಕೆಯ ||
ತುತ್ತತುದಿಯೊಳಾನಾಲ್ವೆರಲನಿತಂ | ಚಿತ್ತಜರಿಪು ಮುಟ್ಟದೆ ಸೌಭಾಗ್ಯಂ |
ಬೆತ್ತಂಘ್ರಿದ್ವಯಮಿಟ್ಟತಿಮಹಿಮಾಲಂಕೃತನಾಗಿರ್ದಂ     || ೩೮ ||

ಪಲಗಣ್ಣಂ ಪಾಱುಂಬಳೆಗೈಯಂ | ನೆಲವೊಱಿಗಂ ಬೆಂತರಬಲ್ಲಹನು |
ಜ್ಜಲಿಸುವ ಜೋಯಿಸರಾಣ್ಮಂ ಮಿಗದರಸಂ ಮೊದಲಾಗಿ ||
ಸಲೆ ಸೊಗಯಿಸುವ ಶತೇಂದ್ರರ್ಬಹುವಿಧ | ಬಲಮೆಲ್ಲಂದಿನ ಬಂಜೆವಡೆಯದ |
ಕಲಿ ನವಜಯಜಯಜಿನಪನ ಗಂಧಕುಟಿಯೊಳೆಡಗಿೞಿದಿಹುದು       || ೩೯ ||

ಪೆಡದಲೆಯನ ಪೆಂಡತಿ ಮೈಗಣ್ಣನ | ಮಡದಿ ಹೆಱೆಯ ನೇಹದ ಹೆಟ್ಟುಗೆ ನೆಲ |
ದೊಡೆಯನ ನಲ್ಲಳು ದೆಸೆಯಾಣ್ಮರ ಗರಿಣಿಯರುಂ ಮೊದಲಾದ ||
ಕಡುಚೆಲ್ವಿಕೆಯಂ ತಳೆದು ಮಿಸುಪ ಮು | ಪ್ಪೊಡವಿಯ ಪೆಣ್ಮಕ್ಕಳ ನಿಕುರುಂಬಂ |
ಸಡಗರದಿಂದಾಜಯಜಿನನಂಘ್ರಿಯುಗಮನರ್ಚಿಸುತಿಹುದು            || ೪೦ ||

ಭವವಾರಾಶಿಯೊಳಾೞಿಯಿರದೆ ಮುೞು | ಗುವ ದೇಹಿಗಳಂ ತನ್ನ ಕರುಣದಿಂ |
ತವೆಯೆತ್ತುತೆ ಸಂತತಮಾರ್ಯಖಂಡದ ದೇಶಂಗಳೊಳು ||
ರವಿಶಶಿಕೋಟಿದ್ಯುತಿಕಾಶಂ ತ | ದ್ದಿವಿಜಾವಳಿ ತನ್ನಡಿಗನವರತಂ |
ಸವಿನಯದಿಂ ಮುಗ್ಗುತ್ತಿರೆ ವೈಭವದೊಳ್ ವಿಹರಿಸುತಿರ್ದಂ         || ೪೧ ||

ಈಯಂದದೆ ಕೆಲ ಕಾಲಂ ವಿಹರಿಸಿ | ಮಾಯಂ ಮೊದಲಾದ ಕಷಾಯಂಗಳ |
ದಾಯಂಗಿಡಿಸಿ ಬೞಿಕಮಾಗಂಧಕುಟಿಯುಮಂ ಬಿಸುಟಿೞಿದು ||
ಕಾಯಜರಿಪು ಕೈಲಾಸಶಿಖರದೊಳ್ | ಕಾಯೋತ್ಸರ್ಗದೆ ನಿಂದಮೃತಶ್ರೀ |
ಜಾಯೆಯೊಳೊಡಗೂಡಿದನೆಲ್ಲಾಭುವನಂ ಪೊಗೞ್ವಂದದೊಳು     || ೪೨ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಾದುದು ಪದಿನಾಱರನೆಯ ಮಿಸುಪ ಸಂಧಿ || ೪೩ ||

ಹದಿನಾರನೆಯ ಸಂಧಿ ಸಂಪೂರ್ಣಂ
ಜಯನೃಪಕಾವ್ಯಂ ಸಮಾಪ್ತಂ