ಸೂಚನೆ || ಪಿರಿದುಂ ರಂಜಿಪ ಚಂದ್ರೋದಯದೊಳ |
ಗುರುಮುದದಿಂ ನಿಜನಗರಿಯ ವೇಶ್ಯಾ |
ವರವೀಧಿಯೊಳೆ ವಿಹಾರಿಸಿದಂ ವಿಕ್ರಮಕೌರವರಾಜಂ ||

ಮುನ್ನಂ ಹಗೆ ನಿಮಗಾದ ತುಹಿನಕರ | ನೆನ್ನ ಹೆಱಗಣಿಂ ಮೂಡಲ್ ಬರುತಿದೆ |
ಯಿನ್ನಿನಿತಱ ಮೇಲಿರದಿರಿಯೆನುತಾಜಾರಾಸಂತತಿಗೆ ||
ಸನ್ನೆಯನುಱೆ ತೋಱುವ ಮೂಡಣ ದೆಸೆ | ಗನ್ನೆಯ ಕೈಯ ಮಿಸುಪ ಕೆಂಪೋ ಎನೆ |
ಕೆನ್ನಂ ಸೊಗಯಿಸಿದುದು ರಾಗಂ ರಾಜೋದಯಸಮಯದೊಳು     || ೧ ||

ಈ ಹದನಂ ನಮಗೆಸಗಿದ ಶಶಿಯಂ | ರಾಹು ನೊಣೆದು ಮಗುೞ್ದುಗುೞದೆ ಹೋಗಲಿ |
ರೋಹಿಣಿಯೋಲೆಗಳೆಯಲಿಯೆನುತ ಬಿಸುಸುಯ್ಯಿಂ ಸುಯ್ದಾಗ ||
ನೇಹದ ನಲ್ಲರ ತೋಳೊಳ್ ತೊಡಚಿದ | ಬಾಹುಲತಿಕೆದೆಗೆದೊಯ್ಯನೆ ಕುಲಟಾ |
ವ್ಯೂಹಂ ನಡೆತಂದುದು ನಗರೀರಕ್ಷಕನಱಿಯದ ತೆಱದಿಂ   || ೨ ||

ಸ್ಮರಸುಭಟನ ಮಾಣಿಕ್ಯದ ಸೀಸಕ | ದಿರವಂ ನವಮೋಹನಸಿದ್ಧಂ ಕಡು |
ಹರಿಸದಿನಾಡುವ ಪೊಸಪವಳದ ಠೌಳಿಯ ಬಟ್ಟಲ ತೆಱನಂ ||
ಸುರುಚಿರಮಪ್ಪನುರಾಗರಸಾಬ್ಧಿಯೊ | ಳಿರದುದಯಿಪ ಬುದ್ಬುದದ ಪರಿಯುಮಂ |
ಪಿರಿದುಂ ಗೆಲೆವಂದುದು ಸುರದಿಶೆಯೊಳಗರ್ಧೋದಯಚಂದ್ರಂ      || ೩ ||

ಸ್ಮರಮೋಹನಶಸ್ತ್ರಂ ಮಾಡಲ್ ಸುರ | ವರನೆಂಬೊವಜನುದಯರಾಗದ ಕೇ |
ಸುರಿಯಿಂ ಕಾಸಿ ಬೞಿಕ ಸಂಧ್ಯಾಸಂದಂಶದೆ ಪಿಡಿದೆತ್ತಿ ||
ಭರದಿನುದಯಗಿರಿಯೆಂಬಡೆಗಲ್ಲೊಳ | ಗಿರಿಸಿ ಪೊಳೆವ ಪೊಸಲೋಹದುರುಳಿಯಂ |
ಪಿರಿದುಂ ಪೋಲ್ತುದು ಮುಂದೆಸೆಯೊಳ್ ಮೂಡುವ ಹಿಮಕರಬಿಂಬಂ          || ೪ ||

ಸುರಪದಿಶಾಪತಿ ಬಿನದದಿ ಪೊಡೆವವ | ಸರದೊಳಗಾಕೈಯ್ಯೋರೆವರಿಯೆ ನೆಗೆ |
ವರುಣಮಣಿಯ ಕಂತುಕಮೆನೆಯಮರಮಹಿಗೆ ದಾೞಿಯನಿಡುವ ||
ಸ್ಮರಚಕ್ರೇಶ್ವರನಾದಲೆಗೆತ್ತಿದ | ವರವಿದ್ರುಮವಿಲಸಚ್ಛತ್ರಮದೆನೆ |
ಕರಮೆಸೆದುದು ಮುಂ ಮೂಡಿ ನೆಗೆವ ನೂತನಮೃಗಧರಬಿಂಬಂ      || ೫ ||

ದೇವಾಧೀಶದಿಶಾಂಗನೆ ನೋಂಪಿಯ | ನೋವದೆಸಗಿ ನುಣ್ಗೊರಲೊಳ್ ಕಟ್ಟಿದ |
ಭಾವಜನೆಂಬ ಕರಿಯ ನಾಗರ ಹೊಂದಾಲಿಯ ಮಾೞ್ಕಿಯೊಳು ||
ಆ ವಿರಹಿವ್ರಜಮಂ ಕೊಲಲೆನುತಂ | ಕಾವಂ ಪೊಸಗರಳದ ಗೋಳಕಮಂ |
ತೀವಿ ಪಿಡಿದ ಪಿಂಜರರತ್ನದ ಪಾತ್ರೆವೊಲೆಸೆದುದು ಚಂದ್ರಂ           || ೬ ||

ಕರಮೆಸೆದತ್ತು ಕಲಾಭೃದ್ಬಿಂಬಂ | ಬಿರಿಮುಗುಳ್ಗಣೆಯನ ಬಿಂಗದ ಬಿಜ್ಜಣ |
ದರಲಂಬನ ಮೂಲದ ತಟ್ಟಿಯ ಕಾವನ ಕೈಗನ್ನಡಿಯ    ||
ಸ್ಮರನ ಕರದ ನವಕರ್ಪೂರದ ಬೆ | ಳ್ಪರಲ ಕರಂಡಕದಂಗಜನಾಡಿಸು |
ವುರಗನ ಹೊಸಹಳಿಕಿನ ಹೇೞಿಗರಯ ವಿಲಾಸಮನನುಕರಿಸಿ           || ೭ ||

ಮದನಂ ಪಿಡಿದು ನಿರೀಕ್ಷಿಪರದನೀ | ರದನರಚಿತಘಟಿಕಾಚಕ್ರಮೊ ಸಂ |
ಮದದಿಂದಾಮದನಂ ಮೋಹನಧರ್ಮಮನುಱೆ ನಡೆಯಿಸುವ ||
ಸದಮಲಧರ್ಮಸುಚಕ್ರಮೊ ಮತ್ತಾ | ಮದನಂ ರತಿಶಾಸ್ತ್ರವಿಪಂಚಿಕೆಯಂ |
ಚದುರಿಂ ಬರೆದೋಲೆಯ ಚಂಡಳಿಕೆಯೊ ಎನೆ ಸಸಿ ಸೊಗಯಿಸಿತು || ೮ ||

ಹರಿ ದಿಗ್ವಧುವಿನೊಡನೆ ಮಾತಾಡಲ್ | ತಿರಿಗಿದ ಗೀರ್ವಾಣಾಶಾಸುದತಿಯ |
ವರವಜ್ರದ ತಾಟಂಕಂ ಗಗನಶ್ರೀಯನುರಾಗದೊಳು ||
ಪಿರಿದುಂ ಕ್ರೀಡಿಸಲನುಗೊಳಿಸಿದ ಬಂ | ಧುರಜಂಗಮಕಾಸಾರಂ ಸೊಗಯಿಸು |
ವಿರವಂ ಪೋಲ್ತು ವಿರಾಜಿಸಿದುದು ಬಿಂಬಂ ರಾಕೇಂದುವಿನ            || ೯ ||

ಅಮರದಿಶಾಂಗನೆಯಂಬರಲಕ್ಷ್ಮಿಗೆ | ಮಮತೆಯಿನೀವೆನೆನುತ ಪಿಡಿದೆತ್ತಿದ |
ವಿಮಲೋಜ್ಜ್ವಲವೌಕ್ತಿಕದೊಳ್ಬಾಯನಮಿಕ್ಕಿದ ಪರಿಯಣಕೆ ||
ಕಮಲೋದರಸುತನೆಂಬ ಭಟಂ ಸಂ | ಭ್ರಮದಿಂ ಹೊಯಿಸುವಱೆಯ ಜಯಘಂಟೆಗೆ |
ಸಮನಾದುದು ಹಿಮದಾಮಂ ಸಂಹೃತಸರಸಿರುಹಸ್ತೋಮಂ         || ೧೦ ||

ಸುರಪನಿಡುವ ಚಿಗಿಹಲ್ಲೆಯ ಮೋಹನ | ಶರಮಂ ಬೆಳಗುವ ಸಿಕಿನಿವಳೆಯ ರತಿ |
ವರನಾಮೋಹನವಂಚಕವಿತತಿಯನಱಸಿ ಹಿಡಿದು ತರಲು ||
ಭರದಿಂ ನಡೆಯಿಪ ಬೆಳ್ಳಿಯ ಬಟ್ಟಲ | ಪಿರಿದುಂ ಮೋಹನಮಲ್ಲಂ ದಕ್ಷಿಣ |
ಕರದಿಂದೆತ್ತಿದ ಸಂಗ್ರಾಣಿಗೆ ಸಮನೆನೆ ಸಸಿ ಸೊಗಯಿಸಿತು    || ೧೧ ||

ಇಳೆಯ ವಿಯೋಗಿಗಳಸುವೆಂಬರ್ಥಂ | ಗಳವುದ್ಯೋಗಮದೃಶ್ಯಾಕರಣಂ |
ದಳೆದಲ್ಲದೆ ಸಮನಿಪುದಿಲ್ಲೆನುತುಂ ಮತ್ತಾರಾತ್ರೆಯೊಳು ||
ಅಳವಟ್ಟತಿಸಾಹಸದಿಂದವೆ ಪಿಡಿ | ದೆಳೆಯಾಲಂ ತಪ್ಪದೆನುತ್ತವೆ ಬಗೆ |
ಗೊಳಿಸಿ ವಿರಾಜಿಸಿದುದು ಚತುರರರ್ಗಾಚಿಹ್ನಂ ಚಂದ್ರಮನ           || ೧೨ ||

ಮಲ್ಲಿಗೆಯಲರ ತೊಡಂಬೆಯ ಮಧ್ಯದೊ | ಳುಲ್ಲಸದಿಂದೆ ಕುಳಿತ ಮಧುಕರನಂ |
ಫುಲ್ಲಾಸ್ತ್ರನ ಕುಲಿಶದ ಖೇಟಕದ ನಡುವೆ ಕಟ್ಟಿದ ಕರಿಯಾ ||
ಜಲ್ಲಿಯನಗಜಾಧೀಶನ ನುಣ್ಗೊರ | ಲಲ್ಲಿ ಕರಂ ಕಣ್ಗೊಳಿಸುವ ಕಱೆಯಂ |
ಗೆಲ್ಲಂಗೊಂಡೆಸೆದುದು ಚಿಹ್ನಂ ಸಂಪೂರ್ಣಸುಧಾಕರನ    || ೧೩ ||

ಅಮರರ್ಗಾರೋಗಣೆಗೆಯ್ಸುವೆನೆನು | ತಮೃತರುಚಿಯನೋವದೆ ಪೂರ್ವದಿಶಾ |
ರಮಣಿಯುದಯಗಿರಿಯೊಲೆಯೊಳ್ ಬಟ್ಟವೆಱೆಯನಣ್ಗಳಮಿಟ್ಟು ||
ಸಮೆದು ಮೊದಲ್ತೋಱಿದ ಪಡಿಸಣಮಂ | ಮಮತೆಯೊಳೀಂಟುವ ಭಂಗಿಯವೊಲ್ ಸಂ |
ಭ್ರಮದಿಂ ಸವಿದುವು ಚಾರುಚಕೋರಂ ಚಂದ್ರಕರಂಗಳನು  || ೧೪ ||

ಅಡಸಲ್ಕೇಡು ಮೊದಲ ನೃಪತಿಗೆ ಮ | ತ್ತೊಡೆಯನದಾರಾರಾಜ್ಯಕ್ಕವನಂ |
ಪಿಡಿವುದು ಸಿರಿಯೆಂಬುಕ್ತಿಯನೆಲ್ಲರ್ಗಱಿಪುವವೊಲ್ ದಿನಪಂ ||
ಪಡುಗಡಲಂ ಪುಗೆ ಸಸಿಯಂ ಸಾರ್ದುದು | ಸಡಗರದಿಂ ಪಗಲೆಂಬಂತೊಪ್ಪಂ |
ಬಡೆದಿಳೆಯಂ ತೀವಿತು ತಿಳಿಜೊನ್ನಂ ಜೀವಂಜೀವಾನ್ನಂ   || ೧೫ ||

ಪಿರಿದುಂ ಪ್ರಿಯದೊಳಿರುಳ್ವೆಣ್ಣಂ ಶಶಿ | ಪರಿರಂಭಿಸುವ ಸಮಯದೊಳ್ ಸೂಸಿದ |
ಸಿರಿಗಂಪಿನ ರಜಮೋ ಕುಮುದಿನಿಯ ಮುಖದ ಹಾಸದ ರುಚಿಯೋ ||
ಸ್ಮರನ ಜಸದ ಹರವರಿಯೋ ಎನೆ ಬಂ | ಧುರತೆವಡೆದು ಬೆಳುದಿಂಗಳೊಳಾಭೂ |
ವರಚಂದ್ರಂ ಪೊೞಲೊಳ್ ವಿಹರಿಸಲೆನುತುಜ್ಜುಗಿಸಿದನಾಗ           || ೧೬ ||

ಕತ್ತುರಿಬೊಟ್ಟು ಕೊರಲ ಹೊಸಮುತ್ತಿನ | ಹತ್ತಸರಂ ಮುಡಿಗಿಟ್ಟ ಮುಗುಳ್ ಮೆ |
ಯ್ಗೊತ್ತಿದ ಕಾಶ್ಮೀರಂ ಪೊದೆದೆಳಮಾಂದಳಿರ್ವಣ್ಣದ ವಸನಂ ||
ಮೆತ್ತನೆಸೆವ ಪಾದುಕಮಾಭೂಪಾ | ಲೋತ್ತಂಸಂಗಳವಡೆ ಕಣ್ಗೆಸೆದಂ |
ಚಿತ್ತಭವಂ ವಿಟವೇಷಮನಂಗೀಕರಿಸಿ ಸೊಗಯಿಪಂತೆ        || ೧೭ ||

ಕಾಳೋಚಿಮನಱಿದು ಪಸದನಮಂ | ತಾಳಿ ಬೞಿಕ ತೆಂಕಣದೆಸೆವನೆಯಿಂ |
ಬಾಳಸಮೀರಂ ಪೊಱಮಡುವಂತರಮನೆಯಂ ಪೊಱಮಟ್ಟು ||
ಮೇಳದ ಕೆಳೆಯರ್ ತನ್ನೊಡನೆಯ್ತರೆ | ಲೀಳೆ ಮಿಗಲ್ ನಡೆದಂ ಮೆಲ್ಲನೆ ಭೂ |
ಪಾಳಶಿಖಾಮಣಿ ತತ್ಪುರದತಿಶೋಭೆಯನೀಕ್ಷಿಸುತಾಗ     || ೧೮ ||

ಬಾವನ್ನದತಿಗುರಂ ಮೆಯ್ಯೊಳಗಿ | ಟ್ಟೋವಿ ಮುಱಿದು ಸಿರಬಂದಮನೊಪ್ಪುವ |
ಹೂವಿನ ಹೊಸಬಣ್ಣದ ಹಚ್ಚಡಮಂ ಹೊದೆದು ಸಪುರನಾದ ||
ಕೋವಣಮಂ ಮಡಿದುಟ್ಟಿಳಿಯಂ ಬಿ | ಟ್ಟಾವಸುಧಾವರನೆಡಬಲವಿಡಿದ ಕ |
ಲಾವಿದರೆನಿಪ ಸುಹೃದಜ್ಜನವಿತತಿ ನಡೆದುದತಿಮುದದಿಂದ          || ೧೯ ||

ಅಡಸಿದ ನವನಕ್ಷತ್ರನಿಕಾಯದ | ನಡುವೆ ನಡೆದ ಸಂಪೂರ್ಣೇಂದುವಿನಂ |
ತಿಡಿಕಿಱಿದತ್ಯುಜ್ಜಲಿಸುವ ಪಲವುಂ ದೀವಿಗೆಗಳ್ ತೀವಿ ||
ಕಡುತೊಳಗುವ ಹರಿನೀಲದ ಹರಲಂ | ಗಡಿವೀಧಿಯೊಳೊಸೆದೆಯ್ತಂದಂ ತ |
ನ್ನೊಡನೆಯ್ತರೆ ಪರಿಮಿತಮಿತ್ರಾಳಿ ಬಲ್ಲರ ಬಲ್ಲಹನು   || ೨೦ ||

ಅಂಗಡಿಯಂಗಡಿಯೊಳಗೋರಣದೆ ಬೆ | ಡಂಗಿಂ ಬಿರಿಮುಗುಳ್ವಾಸಿಗಮಂ ಮಾ |
ಱುಂಗುಡುವೆಳವೆಣ್ಗಳ ಮೂವಣ್ಣದ ಕಣ್ಗಳ ಕಾಂತಿಯೊಳು ||
ಮಂಗಲಕೀರ್ತಿಯುತಂ ನಡೆದಂ ಸುರ | ಗಂಗಾಕಾಳಿಂದೀನದಿಯರುಣಾ |
ಸಂಗಮದೊಳ್ ಸಂಭ್ರಮದಿಂದೆಯ್ದುವ ಕಳಹಂಸನ ತೆಱದಿ           || ೨೧ ||

ಚೆಂಗಣಿಗಿಲೆಯೆಳೆಯಲರ್ವಾಸಿಗಕೆ ಮ | ನಂಗೊಳಿಸುವ ಮೃಗಮದದಣ್ಪಂ ಲಲಿ |
ತಾಂಗಿಯದೊರ್ವಳ್ ತೊಡೆದು ರಸಿಕನೊರ್ವಂಗೆ ಬೆಲೆಗೆ ಕುಡುವ ||
ಭಂಗಿ ಕರಂ ಬಲ್ಲರ ಬಗೆಗೊಳಿಸಿದು | ದಂಗೋದ್ಭವನೆಂಬ ಮಹಾಸಾಹಸಿ |
ಗಂಗೆಯೊಲಿದು ರತಿ ಬಾಸಟಮಿಟ್ಟಲರ್ಗಯ್ದಂ ಕುಡುವಂತೆ          || ೨೨ ||

ಅನಿಮಿಷಲೋಚನೆಯೊರ್ವಳ್ ಮಾಱುವೆ | ನೆನುತವೆ ನವಮೃಗಮದಪಂಕಿಲಮಂ |
ಮಿನುಗುವ ವಿದ್ರುಮದಿಂ ಕಂಡರಿಸಿದ ಪೊಸಬಟ್ಟಲೊಳಿಟ್ಟು ||
ಘನಕುಚವೊಂದಱ ಮೇಲೆ ಹಿಡಿದು ನಿಂ | ದೆನಸುಂ ಕಣ್ಗೊಳಿಸಿದಳುದಯಾದ್ರಿಯ |
ಕೊನೆಯ ಶಶಾಂಕಸಹಿತ ಸುರಪದಿಶಾಸತಿ ಸೊಗಯಿಸುವಂತೆ          || ೨೩ ||

ಆ ಸಂಜೆಯೊಳೊಡಗಲಿಸಿದ ಹೂವಿನ | ಬಾಸಿಗಗಳ ಕಂಪಿನ ಸತಿಯರ ನಿ |
ಶ್ವಾಸಾಮೋದದ ತನುಸೌರಭ್ಯದ ಕಪ್ಪುರದಂಬುಲದ ||
ವಾಸನೆಗಳ ಭೇದಮನೊರೆಯುತವೆ ವಿ | ಲಾಸದಿನೊಡನೆಯ್ದಿದರೊಳ್ ವೇಶ್ಯಾ |
ವಾಸದ ವೀಧಿವಿಡಿದು ನಡೆದಂ ಚಾತುರ್ಯಚತುರ್ವದನಂ || ೨೪ ||

ಚಿನ್ನದ ಬೊಂಬೆಗಳೆನೆ ನೇರಾಣಿಯ | ಕನ್ನೆಯರನೆ ಕುಂದಣದ ಕರುಗಳೆನೆ |
ಸೊನ್ನೆಯ ಪರಿಜುಗಳೆನೆ ಪೊಸಮಿಸುನಿಯ ಮುಗುದೆಯರನೆ ಮಿಸುಪ ||
ಹೊನ್ನ ಕುಮಾರಿಯರೆನೆಯಪರಂಜಿಯ | ಚಿನ್ನೆಯರೆನೆ ಮಿಸುನಿಯ ನೀಱೆಯೆರೆನೆ |
ಸನ್ನುತಸೌಭಾಗ್ಯಂಬಡೆದಬಲೆಯರೊಪ್ಪುವಡೆದರಾಗ     || ೨೫ ||

ಪೊಂಗರಡೆಗೆಗಳ ಪೊಸಮೀಂಟೆಗಳ ಕೊ | ಡಂಗಳ ಕೊಸಗಿನ ಮುಗುಳ್ಗಳ ನವಕೋ |
ಕಂಗಳಿರುಳ ತಾಮರೆಗಳ ಮೋಹನಸಿದ್ಧನ ಠವುಳಿಗಳ ||
ಅಂಗಜನಮಳ್ಗುಡಿಗಳ ದೆಳಗಾಯ್ಗಳ | ತೇಂಗಾಯ್ಗಳ ತೆಗಬೊಗರಿಗಳವರಂ |
ಪಿಂಗದೆ ಗೆಲ್ವ ಕುಚದ ಕೋಮಲೆಯರ್ ತೊಳಗಿದರಂತಲ್ಲಿ           || ೨೬ ||

ಬಾಳೆವಸುಳೆದಿಟ್ಟಿಯ ಬಡನಡುವಿನ | ಬಾಱೆದೊಡೆಯ ಬಂಡುಣಿವಱಿಗುರುಳ್ಗಳ |
ಬಾಳಮೃಣಾಳೋಪಮಬಾಹುವಿನ ಮನೋಜಾತಂ ಪಿಡಿದ ||
ಬಾಳ ಹೊಗರ ತನುವಿನ ರತಿದೇವಿಯ | ಬಾಳಂ ಕಿಡಿಸುವ ನವಲಾವಣ್ಯದ |
ಬಾಳೆಯರಂ ನೋಡುತ ನಡೆದಂ ನವಮಾರಂ ಸುಕುಮಾರಂ           || ೨೭ ||

ಬಂಡುಣಿವಱಿಗುರುಳ್ಗಳ ಬಡನಡುವಿನ | ತೊಂಡೆದುಟಿಯ ತೊಳಪಂಗಲತೆಯ ಶಶಿ |
ಮಂಡಲಮುಖದ ಮದನಮಾತಂಗಗತಿಯ ಮದಿರಾಂಬಕದ ||
ಗಂಡುಪುರುಳಿವಾತಿನ ಮನಸಿಜಕೋ | ದಂಡಲಸದ್ಭ್ರೂವಲ್ಲರಿಯೊಳ್ಳೆಳ |
ವೆಂಡಿರ ತಂಡಮನೀಕ್ಷಿಸುತೆಯ್ದಿದನಾನೃಪಕುಲತಿಲಕಂ     || ೨೮ ||

ತೋರದುಱುಂಬಿನ ಮಲ್ಲಿಗೆಯಿಂ ಘನ | ಸಾರದ ಮೂಗುತಿಯಿಂ ಹೊಸಮುತ್ತಿನ |
ಹಾರದಿನುಟ್ಟ ದುಗುಲದಿಂ ಚಂದನದಣ್ಪಿಂ ಸುಲಿಪಲ್ಲಿಂ ||
ವಾರಣರದರಂಜಿತಪಾದುಕದಿಂ | ಚಾರುಕಟಾಕ್ಷಪ್ರಭೆಯಿಂದೆಸೆವಭಿ |
ಸಾರಿಕೆ ನಡೆತಂದಳ್ ಮನಸಿಜನ ಯಶೋವನಿತೆಯ ತೆಱದಿ || ೨೯ ||

ಮುಡಿಗಲರಂ ಮೂಗಿಗೆ ಮೂಗುತಿಯಂ | ನೀಡುಗಣ್ಗಂಜನಮಂ ಕುಚಮಧ್ಯಕೆ |
ಬಿಡುಮುತ್ತಿನ ಮಣಿಸರಮಂ ಕೈಗೆ ಕನಕಮಣಿಕಂಕಣಮಂ ||
ಉಡೆನಿಱಿಗುತ್ತಮಮೇಖಲೆಯಂ ಕೇ | ಸಡಿದಳಕೊಪ್ಪುವಲಕ್ತಕರಸಮಂ |
ಸಡಗರದಿಂ ಸಿಂಗರಿಸುವ ಸುದತೀಜನಮೊಪ್ಪಿದುದಲ್ಲಿ    || ೩೦ ||

ರೂಢಿಸಿದೆನ್ನೀರೂಪಕ್ಕೆಲೆ ರತಿ | ನೀಡುಂ ನಿನ್ನಯ ಚೆಲ್ವಿಕೆ ಸರಿಯೆನು |
ತಾಡಿದೆ ಗಡಮದು ಹುಸಿಯೆಂದೆನುತಾಂ ಹಾಕುವೆ ನೀ ತಡವಂ ||
ಮಾಡದೆಯೆತ್ತೆನುತಿಕ್ಕುವ ಮುಡಿಯೆನೆ | ಬಾಡಿದ ಬಲ್ಮುಡಿಯಲರಂ ತೆಗದೀ |
ಡಾಡಿದಳೊರ್ವಳಬಲೆ ವಿಟರಕ್ಷಿಯ ಮೀನಂ ಪಿಡಿವ ಬಲೆ   || ೩೧ ||

ಭಾವಕಜನಚಿಂತಾಮಣಿ ನಿನ್ನೀ | ಲಾವಣ್ಯಾಂಗಮನೀಕ್ಷಿಸುವೀನವ |
ಭಾವಕೆಯಲರ್ಗಣ್ವೆಳಗಂ ಸೂಸುತ್ತಿದೆ ಬಹ್ವಾಶೆಯೊಳು ||
ಸೇವಿಸಿ ಚಾರುಚಕೋರಂ ಜೊನ್ನಮ | ನೋವದೆ ಕಾಱುವ ತೆಱದಿನೆನುತ್ತುಂ |
ಕೋವಿದನೊರ್ವನುಸಿರೆ ಕೇಳುತೆ ಮುಂಗಡೆಗೆ ನಡೆದನರಸಂ            || ೩೨ ||

ಒಗುಮಿಗೆಯೊಲವಿಂದುಯ್ಯಲನೇಱಿದ | ಮುಗುದೆಯಲಘುಕುಚಮಧ್ಯದ ಹೊಮ್ಮಿಣಿ |
ಸೊಗಯಿಸಿದುದು ಮತ್ತಾಕೆಗೆಸೆವ ಹೊಕ್ಕುೞ ಹೊಕ್ಕರಣೆಯೊಳು ||
ಮಿಗೆ ತೀವಿದ ಲಾವಣ್ಯಾಮೃತಮಂ | ತೆಗೆಯಲ್ ಗಗನಶ್ರೀಯಮಳ್ಗೊಡಗಳ |
ಮೊಗದೊಳ್ ಕಟ್ಟಿ ಪಿಡಿಯೆ ರಾರಾಜಿಪ ರಜ್ಜುವಿನಂದದೊಳು      || ೩೩ ||

ಮಂದೇತರಹರ್ಷದೊಳುಯ್ಯಲನೊಲೆ | ವಿಂದೀವರವದನದ ಕುಮುದಾಕ್ಷಿಯ |
ಕುಂದರದದ ಗಱಿವೂವುಗುರ್ಗಳ ಬಂದುಗೆಯಲರ್ವಾಯ್ದೆಱೆಯ ||
ಸುಂದರಿಯಮಲಾಂಗದ ಕಂಪಂ ಕೊಳ | ಲೆಂದಮರಾಧೀಶನ ನಂದನವನ |
ದಿಂದಿೞಿವಳಿಮಾಲೆಯವೊಲ್ ನೀಲದ ರಜ್ಜು ವಿರಾಜಿಸಿತು           || ೩೪ ||

ಉಡುಗಳೊಳುಗುರ್ವೆಳಗಂ ಹಿವಗದಿರೊಳ್ | ಕಡೆಗಣ್ಗಳ ಕಾಂತಿಯನಾನದೊಳ್ |
ಬಡನಡುವಂ ದೇವಾಪಗೆಯೊಳ್ ತೊಳಗುವ ಲಾವಣ್ಯವನು ||
ಕರುರಂಜಿಪ ಮೊಗದೊಳ್ ಚಂದ್ರಮನಂ | ಪಡಿಯಂ ನೋಡುವ ಪರಿಯವೊಲೊದೆದಳ್ |
ಕಡುಪಿಂದುಯ್ಯಲನೊರ್ವಳ್ ವನಿತೆ ಕಲಾವಿದಜನವಿನುತೆ              || ೩೫ ||

ಮಿಸುಪ ಹಸುಳೆ ಗಾಳಿಯ ತಾಟನದಿಂ | ನಸು ಹಾಱುವ ಮೇಲುದಱ ಸೆಱಗು ರಂ |
ಜಿಸುವ ಗೆಱಿಗಳೆಂದೆನೆ ಸಂತೋಷಂದಳೆದುಯ್ಯಲನೊದೆವಾ ||
ಅಸಿಯಳಲಘುಕುಚಯುಗಲಂ ಮಿಗೆ ರಂ | ಜಿಸಿದುವಶನಿಪಾತಂಬಡೆಯದ ಪೊಸ |
ಮಿಸುನಿಯ ಪೊನ್ನಜವಳಿವೆಟ್ಟನಿಲಪಥಕೆ ಪಾಱುವ ತೆಱದಿ           || ೩೬ ||

ನೋಡೀಕೆಯನೆನುತವಳ ಕಡೆಗೆ ಕೈ | ನೀಡಿ ಕೆಲದ ಕೆಳೆಯನೊಳುಸಿರ್ವರಸನ |
ಗಾಡಿಯನೀಕ್ಷಿಸುತಾತನ ಕಡೆಗೆ ಮೊಗಮನಿಟ್ಟುಯ್ಯಲೆಯ ||
ಆಡುವಬಲೆಯೊರ್ವಳ ಕೇಕರರುಚಿ | ನೀಡುಂ ಪರಿದುದು ರತಿಯನನಂಗಂ |
ಪಾಡಱಿದಾಡಿಸಲೆಂದು ಪಿಡಿದ ಮುತ್ತಿನ ಹಗ್ಗದ ತೆಱದಿ  || ೩೭ ||

ಸರಸಿರುಹೋಪಮಕರದಿಂದಾಡುವ | ಸುರುಚಿರಶುಕ್ತಿಭವದ ತಿಱಿಕಲ್ಲಾ |
ತರುಣಿಯ ತರಳಕಟಾಕ್ಷಪ್ರಭೆಗಳ್ ಮಂದೈಸಲ್ಕಲ್ಲಿ ||
ಅರವಿಂದಾಕರದೊಳ್ ಸಂಭ್ರಮದಿಂ | ಪಿರಿದುಂ ಮೂಡಿ ಮುಱುಂಗಿ ನಿನೋದಿಪ |
ತರುಣಮರಾಳಸಮಿತಿಯೆಂಬಂದಮನೊದವಿಸುತೊಪ್ಪಿದುದು      || ೩೮ ||

ಅಂಗೈಗಳ ಲಕ್ಷಣದ ಸುರೇಖೆಯ | ಮೀಂಗಿರದೆಱಗುತೆಱಗುತೇೞುವ ಪೊಸ |
ಮೀಂಗುಲಿವಕ್ಕಿಗಳೋ ತತ್ಕರನಖಕಾಂತಿಯ ಚಂದ್ರಿಕೆಗೆ ||
ಹಿಂಗದೆಱಗುತೇೞುವ ಚಾರುಚಕೋ | ರಂಗಳ ಜಂಗುಳಿಯೋಎಂಬಂದದಿ |
ಅಂಗನೆಯೊರ್ವಳ್ ಕೈವಿಡಿದಾಡುವ ತಿಱಿಕಲ್ಲೊಪ್ಪಿದುದು          || ೩೯ ||

ವಿಮಲಸ್ಫಟಿಕಮಣಿಯ ಕುಟ್ಟಿಮದೊಳ್ | ರಮಣೀಮಣಿ ಪೊಡೆದಾಡುವ ನಮನೋ |
ನ್ನಮನವ್ಯಾಪಾರದ ನವನೀಲಮಣಿಯ ಕಂತುಕಮಾಗ ||
ಕಮನೀಯತೆಯಂ ಪಡೆದುದು ತತ್ಕರ | ಕಮಲಕ್ಕಂ ಪಜ್ಜಳಿಸುವ ಪ್ರತಿಫಲ |
ಕಮಲಕ್ಕಂ ಬಿಡದೆಡೆಯಾಡುವ ಮದಮಧುಕರಮೆಂಬಂತೆ || ೪೦ ||

ಕೇದಗೆಯೆಸಳ್ಗವಳಿಗೆಯೆಡಗೈಯೊಳ್ | ಸಾದರದಿಂ ತಾನೋವುವ ದೀವದ |
ಕಾದಂಬಂ ಕಾಲೆಡೆಯೊಳ್ ಜಾಣ್ಮಿಗೆಯಂಗಭವಾಗಮಮಂ ||
ಓದುವರಸುಗಿಳಿವೆಱಿ ಬಲಗೈಯೊಳ | ಗಾದಂ ಕಣ್ಗೆಸೆಯಲ್ ನಾಲ್ಮೊಗದನ |
ಕಾದಲೆಯಂದದಿನೊರ್ವಳಬಲೆ ಸೌಂದರ್ಯಂದಾಳಿದಳು   || ೪೧ ||

ಪರಭೃತಲಲಿತಾಲಾಪೆಯದೊರ್ವಳ್ | ಹಿರಿದುಂ ಹರಿಸಮೊದವೆ ಸಲ್ಲಲಿತ |
ಸ್ವರದಿಂ ಬಾಜಿಪ ವೀಣೆಯ ಹರಿನೀಲದ ನಡೆಯೊಳಗಿಟ್ಟಾ ||
ಬೆರಲ ಕೊನೆಯ ಮಿನುಗುವ ಕೂರುಗುರ್ಗಳ್ | ಕರಮೆಸೆದುವು ಬೆಳರ್ಗೇದಗೆಯೆಸಳ್ಗಳ |
ನರಲುಣಿಗಳ ಪಂತಿಗೆ ಪರಿವಿಡಿಯಿಂದುಣಲಿಕ್ಕುವ ತೆಱದಿ  || ೪೨ ||

ಸ್ಥಾಯಿಯನಾರೋಹಿಯನವರೋಹಿಯ | ನೋಯರಮಂ ಸಂಚಾರಿ ಬಜಾವಣೆ |
ಠಾಯೆ ಲವಣಿ ವಹಳಿಕೆ ಡಾಳಂಗಳಕಾರಪರಂಪರೆಯ ||
ಆ ಯತಿಯಿಂ ರಂಜಿಪ ತ್ರಿಸ್ಥಾನೋ | ಪಾಯಸ್ವರದ ಚತುರ್ವಿಧದಂಡಿಯ |
ಗಾಯಕಿ ರಸಿಕಮನೋದಾಯಕಿ ಪಾಡಿದಳತಿಚದುರಿಂದ    || ೪೩ ||

ಕುಡುವ ಹವಣನಱಿಯದೆ ಮಿಗಿಲೀವನ | ಕುಡಲಱಿಯದ ಕೃಪಣನ ಮೋಹಂ ನಗೆ |
ಗೆಡೆಯಪ್ಪುದು ಬೆಳವಿಗೆಯ ಬೆಳಸಿನ ಹವಣನಱಿಯದೆ ನೀರಂ ||
ಬಿಡುವ ಕುಡಿಯನಂದದೊಳನುತಂ ನೆರ | ಗಡೆಯೊರ್ವಳ್ ರಚ್ಚೆಗೆ ಬಂದರ ಕಂ |
ಡುಡುಪಾನನೆಯೊರ್ವಳ್ ತನ್ನೋರಗೆಯಬಲೆಯೊಳುಸಿರಿದಳು      || ೪೪ ||

ತಾನೊಲಿದಿದಿರನೊಲಿಸಬಲ್ಲಳೆಯನು | ಮಾನಿಸೆ ಮನದೊಳಗೊಂದೆಳ್ಳೆನಿತುಂ |
ಮಾನಿಸಿಕೆಯುಮುಂಟೇ ಕಾಲೋಚಿತಮಂ ತಾ ಬಲ್ಲವಳೆ ||
ಹೀನರೊಡನೆ ಮೇಳಂ ತನಗಲ್ಲದೆ | ಯಾನಂದಿಪರೊಡನಾಡಲ್ ಬಲ್ಲಳೆ |
ಕೀನಾಸಿಗೆ ತನಗೇಕೆನ್ನೋರಗೆಯೆಂಬ ಬಲುಮೆವಾತು || ೪೫ ||

ಇಲ್ಲದ ನೆವವಿಟ್ಟಗಲಿ ಬೊಜಂಗನ | ಕಲ್ಲೆರ್ದೆಮೆಲ್ಲೆರ್ದೆಯಂಬೊಳಗಂ ತಿಳಿ |
ಕಲ್ಲೆರ್ದೆಯಾದೊಡೆ ಬಿಡು ಮೆಲ್ಲೆರ್ದೆಯಾದೊಡೆ ಕೈವಿಡಿಯಿರದೆ ||
ಸಲ್ಲೀಲೆಯೊಳವನೇನಂ ಕೊಟ್ಟುದ | ನಲ್ಲದು ಸಲ್ಲದೆನಲು ಬೇಡೆನುತಂ |
ಪುಲ್ಲಾಕ್ಷಿಗೆ ನುಡಿದಳು ಜೀವನಸಖಿಯತಿಹಿತವಚನವನು  || ೪೬ ||

ಮನದೊಳ್ ಮೆಚ್ಚುವದಿಲ್ಲದೊಡಂತದ | ನಿನಿಸುಂ ಹೊಱಹೊಮ್ಮಿಸದೊಲಿದಂದದಿ |
ನನಿಮಿಷಲೋಚನೆಯರ್ ಕಾದಲರಂ ತಮ್ಮ ವಶಂಮಾಡಿ ||
ಧನಮಂ ತೆಗೆವುದು ಮತವೆನುತೊರ್ವಳಿ | ಕನಕಕಮಲಕುಟ್ಮಲಕುಚದಿಳೆಲೆಗೆ |
ಮನಸಿಜಮಂತ್ರಮನೋದಿಸುವಂತುಸಿರಿದಳತಿಚದುರಿಂದ || ೪೭ ||

ಮನದ ಗೆಲವು ಮೆಯ್ಯೊಳು ಹೊಱಹೊಮ್ಮದೆ | ತನಿಸೋಲವೆ ತನುವಂ ಪಿಡಿದಂತೆವೊ |
ಲಿನಿಸೊಳಗಂ ಕಾಣಿಸಿಕೊಳ್ಳದೆಯೊಲವೇ ಒಡಲಾದಂತೆ ||
ಧನಸಂಪನ್ನಿಕೆಯುಳ್ಳಬೊಜಂಗರ | ಮನಮಂ ಬಂದಿವಿಡಿದು ಸಲೆಯಾಳುವ |
ವನಜಮುಖಿಗೆ ಹಿತ್ತಿಲದಲ್ಲವೆ ಸುರತರು ಸರಸಿಜನೇತ್ರೇ || ೪೮ ||

ಒಲಿಯದವನನತಿಚದುರಿಂದೊಲಿಯಿಸು | ವೊಲಿದ ಬೞಿಕ್ಕವನುಳ್ಳೊಡವೆಗಳಂ |
ಸುಲಿಯಿಸಿಕೊಡತಿದಾರಿದ್ರನುಮಾದವನಂ ನೀಂ ತಗುಳು ||
ನೆಲಸದೆಯೀನುಡಿ ನಿನ್ನಯ ನೊಸಲೊಳು | ಕಲಸಿದ ಬಿದಿಯ ಬರಪಮೆಂದೇ ಬಗೆ |
ಯೆಲೆ ಬಾಲಕಿಯೆನುತೊರ್ವಳ್ ತನುಜೆಗೆಯೋದಂ ಕಲಿಸಿದಳು        || ೪೯ ||

ಬಚ್ಚರಬಯಲ ನುಡಿಗೆ ಬಗೆಯಿತ್ತೊಡೆ | ಮೆಚ್ಚಿ ಮಿಗಿಲನೀಯದನೇಳಿಸಿದೊಡೆ |
ಬಚ್ಚಣೆವಾತಿನ ಬದಗರ್ಗೊಲಿದೊಡೆ ಕಾತರಿಸುವ ಕಣ್ಣ ||
ಇಚ್ಚೆಯ ರೂಪುಳ್ಳವಗೆ ಸಿಲುಕಿದೊಡೆ | ನಚ್ಚಣಿಗರ ನಟನೆಗೆ ಮೋಹಿಸಿದೊಡೆ |
ಪುಚ್ಚಣಿಯಹುದೆನುತೊರ್ವಳ್ ಮುಗ್ದೆಗೆಯುಸಿರಿದಳು ವಿದಗ್ದೆ    || ೫೦ ||

ಮುಟ್ಟಿದ ಮೋಹದ ಕಾದಲನೇ ಕೈ | ಮುಟ್ಟಿ ಕರಂ ಕಾಲೋಚಿತದಱಿತದಿ |
ಕೊಟ್ಟುದೆ ಕೋಟಿಯೊಡವೆಯೆನಗೆನುತವೆಯತಿಸಂತೋಷವನು ||
ನೆಟ್ಟನೆಯೊಡಲೊಳಗಿಂಬಿಟ್ಟಬಲೆಯ | ಹಟ್ಟಿಯ ಗೊತ್ತಿನೊಳಗೆಯನವರತಂ |
ಕಟ್ಟಿ ಕಱೆವ ಸಗ್ಗದ ಹಸುವಲ್ಲವೆ ಬಳಿಕೆ ನಳಿನನೇತ್ರೆ      || ೫೧ ||

ಹರಿಸದಿನಿತ್ತ ಹಗಲ ಚಿಕ್ಕೊತ್ತೆಯ | ನಿರುಳೊತ್ತೆಯ ಹಣಮೆನುತವೆ ಬಗೆದಾ |
ಯಿರುಳೊತ್ತೆಯ ವಿತ್ತಮನೋಹಿಯೆನುತ್ತಾವೋಹಿಯ ಹೊನ್ನಂ ||
ವರಸಜ್ಜನವೆನುತವೆ ಬಗೆದಾಕೆಗೆ | ಯರಿದೇ ಗಂಡರೊಲುಮೆಯರಿದೇಸಿರಿ |
ಯರಿದೇ ಭೋಗವರಿದೆ ನವಮೋಹಾನಂದಮಮೃತವಾಣಿ            || ೫೨ ||

ಸೋಲಮೆ ಮೆಯ್ವತ್ತಿದೆ ಸಲೆ ಮೋಹದ | ಲೋಲಾಕ್ಷಿಗೆ ನೆವ ಗಡ ಮುನಿವುದು ಗಡ |
ಕಾಲೋಚಿತ ಗಡ ಕಲಹಂ ಗಡ ಕೈತವ ಗಡ ಗೆಲವು ಗಡ ||
ಅಲಸ್ಯಂ ಗಡ ಹುಸಿ ಗಡ ಹಡಹಿನ | ಮೇಲಣ ಚಿತ್ತಂ ಗಡಯೆನುತೊರ್ವಳಿ |
ಬಾಲಹರಿಣಲೋಚನೆ ನುಡಿದಳ್ ತನ್ನಯ ನಿಜಸಖಿಯೊಡನೆ         || ೫೩ ||

ಸಮಯೌವನ ಸಮರೂಪು ಸಮಶ್ರೀ | ಸಮರಸಿಕತೆ ಸಮಕಾಮೋದ್ದೀಪನ |
ಸಮರಾಗಂ ಸಮಭೋಗಬಲಂ ಸಮವೆನಿಸುವ ಮೋಹಮಿವು ||
ರಮಣೀಯಮನಾದಂ ಪಡೆದಾಪ್ರಿಯ | ತಮರನರಲಬಾಣಂ ನಡಬಲ್ಲವೆ |
ರಮಣಿಯೆನುತ ನುಡಿದಳದೊರ್ವಳ್ ನೇಹದ ಕೆಳದಿಯ ಕೂಡೆ       || ೫೪ ||

ನಲ್ಲಂ ನಲ್ಲನೆ ಕಡುನಲ್ಲಂ ಕುಡ | ಬಲ್ಲನೆ ಸುರಭಿಸರೂಪನೆ ಮನಸಿಜ |
ನೆಲ್ಲ ಕಲೆಯನಱಿವನೆ ಬಿದಿಯುತ್ತಮನಾಯಕನೇ ವಿಷ್ಣು ||
ಹೊಲ್ಲದಬಲೆಗೊಲಿವನೆ ಚಿಃ ಪುಸಿವನೆ | ಯಿಲ್ಲವೆನುತ ಕೋಮಲೆ ತನ್ನಯ ನಿಜ |
ನವಲ್ಲಭನಿರವನೊರೆದಳಿರ್ದಂದದಿ ಕೇಳ್ದ ಕೆಳದಿಯೊಡನೆ || ೬೫ ||

ಮನೆಯಂ ಮಱೆದು ಮದುವೆಯಾದಾಕೆಯ | ನೆನಗಾಗಿ ಬಿಸುಟ್ಟುಳ್ಳೊಡಮೆಯನೊಂ |
ದಿನಿಸುೞಿಯದೆ ಮುಂ ತೆತ್ತು ಭವಿಷ್ಯದ್ವ್ಯವಹಾರಮನುೞಿದು ||
ತನು ಬೇಱಸುವೊಂದೆಂಬಂತೆನ್ನೊಳ | ಗಿನಿದಂ ಕೆಡಲೀಯದೆ ನಡಪಿದನಂ |
ವನಿತೆಯದೆಂತು ಬಿಡುವೆನೆನುತುಂ ನಿಡುಸುಯ್ದಳ್ ನೀಲಾಕ್ಷಿ         || ೫೬ ||

ಗಳಿಸಿದೊಡಮೆಯೇಸೇಸುದಿನಂಬರ | ಮೊಳವೆಮಗಂತದಱಿಂದೆಲ್ಲರೊಳ |
ಗ್ಗಳಿಕೆಯ ಚೆಲ್ವಿಕೆಯಂ ರಸಿಕತೆಯಂ ವಿತರಣಮಂ ತಳೆದ ||
ತುೞಿಲಾಳಂ ಬಿಡುಬೇಡೆನುತೆನ್ನುಮ | ನೞಲಿಸುವೀಮುದಿಪಾಱಿಯನೀಕ್ಷಿಸು |
ಲಳನೆಯೆನುತ ನಿಡುಸುಯ್ದಳದೊರ್ವಳ್ ನವಕೋಕಿಲವಾಣೀ       || ೫೭ ||

ಬರವಿನಿಯನೊಳಿಲ್ಲೆಂದು ನುಡಿದ ಸಹ | ಚರಿಯೊರ್ವಳ ನುಡಿಯಂ ಲಾಲಿಸುತಾ |
ವರಿಸಿದ ಚಿಂತೆಯೊಳಗೆ ನುಣ್ಗದಪಿನೊಳಿಟ್ಟೆಳದಳಿರ್ಗೈಯ ||
ಅರುಣಪ್ರಭೆ ಪರಕಲಿಸಿದ ಮುಖಮಂ | ಹರಿಣನಯನೆ ಬಾಗಲ್ಕಾಭಾಗದ |
ಗುರುಕುಚಮೆಸೆದುದು ಶಶಿಯಂ ತಾಳಿದುದಯಗಿರಿಯೆಂಬಂತೆ        || ೫೮ ||

ಮುನಿಸಂ ಬಿಡು ಮುಕುರೋಪಮಮುಖಿಯೆನು | ತೆನಸುಂ ದೈನ್ಯದೊಳಡಿಗೆಱಗಲ್ಕಾ |
ಮುನಿಸನೆ ಬಲಿದಾಂ ತಿಳಿಯದಿರಲ್ಕಾಯಿನಿಯಂ ಕಡುನೊಂದು ||
ಮುನಿದು ತೊಲಗಲಲ್ಲಿಗೆ ನಾಂ ಮುನ್ನಿನ | ಮುನಿಸಂ ಬಿಡುವೆನೆನುತ ಕೆಳದಿಯರಂ |
ವನರುಹಮುಖಿ ಕೇಳ್ ಕಳುಪಲವಂ ತಾಂ ತಳುವದೆ ಬಂದಪನೇ      || ೫೯ ||

ಅವನ ಚೆಲುವೆ ದಿಟ್ಟಿಗೆ ತೆರೆಯಾಗಿದೆ | ಯವನ ನುಡಿಯೆ ಕಿವಿವಟ್ಟೆಯ ಕೆತ್ತಿದೆ |
ಯವನಂಗಾಮೋದವೆಯುಸಿರಂ ತಗದಿದೆಯವನೊಳ್ದುಟಿಯೆ ||
ಸವಿನಾಲಗೆಯಂ ತಗದಿದೆ ಮೆಯ್ ಮ | ತ್ತವನಪ್ಪುಗೆ ಯಿಂಪಂ ಪೊದೆದಿದೆ ಬಱಿ |
ಕವನೊಲವೇಯಸುವಾಗಿದೆಯನ್ಯಮನಾನೆಂತುಸಿರುವೆನು || ೬೦ ||

ಅಕ್ಕನ ಮುಡಿಗರಲಂ ತರಲೆನುತಾಂ | ಚೆಕ್ಕನೆ ಹಿತ್ತಿಲ ಹೂವಿನ ಬನಮಂ |
ಪೊಕ್ಕುದನಱಿದಾಭಾವಂ ಬಂದು ನೆರೆದು ಸೊಗಯಿಸಿ ಸೊಕ್ಕಂ ||
ಇಕ್ಕಿದನೆನುತೊರ್ವಳೊಳುಸಿರುವ ಸಮ | ಯಕ್ಕಾನಾಯಕಿಯಿದಿರ್ವರೆ ಕಾಣುತ |
ದಿಕ್ಕನೆ ದಿಟ್ಟಿದೆಱೆದೆನೆನುತಂ ಹುಸಿದಳದೊರ್ವಳ್ ಚದುರೆ           || ೬೧ ||

ಪಿಂಗಿದ ಪ್ರಿಯತಮನಂ ತರಲೆಯ್ದಿದ | ತಂಗಿಯಿದೇಕೆ ನೊಸಲ ಕುಂಕುಮಮೀ |
ರಂಗುದುಟಿಗೆ ಬಂದುದು ಪೇಱೆನಲೆಂದಳು ಭಾವಂಗೆಱಗಿ |
ಉಂಗುಟಮಂ ಕಚ್ಚುವ ವೇಳೆಯೊಳಾ | ಸಿಂಗರಿಸಿದ ಕುಂಕುಮಮುದಿರ್ದಧರಕೆ |
ಸಂಗೊಳಿಸಿದುದಿದು ಪುಸಿಯಲ್ಲಾ ತಾಂ ಬಂದಪನದೆ ನೋಡು       || ೬೨ ||

ಕಂಕಣಮಿವೆ ಕೋಮಲೆ ಕರದೊಳಗೆಯ | ಲಂಕರಿಸೆಂಬನನೀಕ್ಷಿಸಿ ನಿನಗಾ |
ಪಂಕಜಮುಖಿ ಹರಿಸದೊಳಿಕ್ಕಿದ ದೃಕ್ಕಂಕಣಮಂ ಮಱಸಿ ||
ಕಂಕಣಮುಮನೆನ್ನೀಕಣ್ಗೊಂಬೆಗ | ಲಂಕರಿಸಿದ ಬೞಿಕೀಕೈಯಾನದ |
ಕಂಕಣಮೇಕೆನುತಂ ಖಂಡಿತಭರ್ತಾರಿಕೆಯುಸಿರಿದಳು         || ೬೩ ||

ನಿಡುಗಣ್ಣೆವೆವೊಯ್ಯದೆ ನೋಡುವ ಬಾ | ಯ್ಮಿಡುಕುವ ಕುಡುವುರ್ವುಗಳಿಂ ಜರ್ಬು |
ತ್ತೊಡನೆ ಮೊಗಂದಿರುಪುವ ಮೇಲುದನೋಸರಿಸುವ ವೌನವನು ||
ಹಿಡಿವಶ್ರುವನುಗುೞಿಪ ನಿಟ್ಟುಸಿರಂ | ಬಿಡುವ ಮಡದಿಯೊಪ್ಪಿದಳಪರಾಧಮ |
ನೊಡರಿಸಿ ಬಂದ ಬೊಜಂಗನ ಮೊಗದಿರವಂ ನಸುನೋಡುತವೆ       || ೬೪ ||

ಇನಿಯನ ಮೊಗದ ಮುನಿಸು ತಿರ್ದುವುದೋ | ಘನವಹುದೋ ಎನುತವೆ ಬಾಳಾಂಕಿಯ |
ಮನೆಯರಂಗಂ ಮೆಯ್ಗಾಣಿಸಿಕೊಳ್ಳದೆ ನಿಂದೋಸರುಗೇಳ್ವಾ ||
ವನಿತೆಯಿರವನೀಕ್ಷಿಸಿ ಕಡುಮಱುಕುದ | ಮನದಿಂ ಪ್ರಿಯಸಖಿ ತನ್ನಿಚ್ಚೆಯೊಳಾ |
ಮನಸಿಜರೂಪನ ಬೞಿಗತ್ಯಾತುರದಿಂದೆ ನಡೆದಳಾಗ       || ೬೫ ||

ಪೀನಕುಚಂ ಪರಲೊತ್ತುವ ದಿನದಿಂ | ನೀನಲ್ಲದೆಯನ್ಯರನೇನಱಿದಳೆ |
ದೀನತನದಿ ಹಣದೆಗೆಯಲ್ ಬಲ್ಲಳೆ ಸೋಲವೆ ಮೈವಿಡಿದ ||
ಆನಂದಕೆ ಹೊಱಗಾಗಿರ್ದಳೆಯದ | ನೇನುಮನಱಿಯದೆ ನೆನಮಂ ಕಾಣದೆ |
ನೀನಗಲುವದುಚಿತವೆಯೆನುತಂ ಸಖಿ ತಿಳಿಪಿದಳಾವಿಟನ    || ೬೬ ||

ಕೆಳದಿಯೊಸಗೆವಾತಂ ಕೇಳುತ ಕೋ | ಮಳೆಗತ್ಯಾನಂದಾಶ್ರುಕಣಂ ಕ |
ಣ್ಗೊಳಿಸಿತು ಕಾದಲನಂ ನೋಡುವೆನೆನುತವೆ ಮೊದಲೇ ಮನಕೆ ||
ಎಳಸದ ವಸ್ತುನಿಕರಮಂ ನೋಡುವ | ಬೞಿಯೊಳ್ ಪತ್ತಿದ ಕಲ್ಮಷಮಂ ತಾಂ |
ತೊಳವೆನೆನುತ ತುಱುಗೆವೆಗಣ್ಗಮಲಾಂಬುಗಳಂ ತಂದಂತೆ            || ೬೭ ||

ಇನಿಯಂ ಬಂದಪನೆಂಬುದನಱಿದಾ | ವನರುಹಪತ್ರವಿಶಾಲವಿಲೋಚನೆ |
ಕನಕಕಲಶಕುಚಮಧ್ಯದೊಳೊಪ್ಪುವ ನವಮಣಿಕಂಠಿಕೆಯಂ ||
ಘನಜಘನದ ಮೇಖಲೆಯಂ ಕರದೊಳ್ | ಮಿನುಗುವ ಕಂಕಣಮಂ ತೋಳ್ವಳೆಯಂ |
ಮನದನುರಾಗದಿ ಪಿಂಗಿಸಿ ಸಿಂಗರಿವಿಟ್ಟೊಪ್ಪಿದಳಾಗ       || ೬೮ ||

ಸೆಜ್ಜೆವನೆಯನೆಯ್ದುತ ಪೊಸಜಾದಿಯ | ಸಜ್ಜುಕಮಂ ಪಾಸಿಗೆ ಪರಕಲಿಸುತ |
ಪಜ್ಜಳಿಸುತ ಮಣಿದೀಪವನಂಗಣದತ್ತೆಯ್ದುವ ಪತಿಯ ||
ಪಜ್ಜೆಯ ಸೊಪ್ಪನಿರದೆ ಲಾಲಿಸುತಂ | ಲಜ್ಜೆದೊಱೆದು ನಡೆಪಾಡುವ ವಾಸವ |
ಸಜ್ಜಿಕೆಯುಜ್ಜುಗವರಸನ ಕಣ್ಗೆ ಮನೋಹರಮೆಯ್ದಿಸಿತು           || ೬೯ ||

ಕನ್ನಡಿಯಂ ನೋಡುವ ಸಮಯದೊಳಾ | ಬೆನ್ನ ಮಱೆಯೊಳಿನಿಯಂ ಮಿಡುಕದೆ ನಿಲೆ |
ತನ್ನ ನೆೞಲ್ವಿಡಿದಾತನನೆೞಲಿರೆ ಕಾಣುತೆ ಮತ್ತೊರ್ವ ||
ಕನ್ನೆಯೊಡನೆಯೀತಂ ನಿಂದಪನೆನು | ತುನ್ನತಿಕೆಯ ಮುನಿಸಂ ಬಗೆಗಿತ್ತಾ |
ಕನ್ನೆ ಪಿಡಿದ ಕನ್ನಡಿಯಂ ನೆರ್ಗೊತ್ತಿದಳದನೇನೆಂಬೆಂ        || ೭೦ ||

ಮುನಿದ ಬೞಿಕ್ಕಿನ್ನಿದಿರೊಳಗಿರ್ಪುದು | ನಿನಗಲ್ಲದೆ ಸಲ್ಲದೆನುತ್ತವೆ ತಗು |
ಳ್ದಿನಿಸೂಱೊಡನೆ ಬಂದಾಂ ಪೊಱಮಡಿಸಲ್ಲೋಪವನುಂ ನೀನೆ ||
ಎನುತ ಕನಲ್ದೋಪನ ಸೆಱಗಂ ಪಿಡಿ | ದನಿಮಿಷನೇತ್ರೆ ಸೊಗಸಿದಳು ರತಿ ತ |
ನ್ನಿನಿಯನ ಕಡುಚೆಲ್ವಂ ಕಳ್ದವನಂ ಕಂಡು ಪಿಡಿವ ತೆಱದಿಂ || ೭೧ ||

ಬೇಡ ಮುನಿಸು ಬಲ್ವೆಱೆಮೊಗದಳೆ ನಡೆ | ನೋಡು ನವಾಂಬುಜಪತ್ರನಯನೆ ಮಾ |
ತಾಡು ಮಧುರಪಿಕವಾಣಿ ಮನೋಹರಿ ಮೆಯ್ದೆಗೆದಮರ್ದಪ್ಪು ||
ನೀಡುಂ ಚುಂಬಿಸು ಬಿಂಬಫಲಾಧರೆ | ಕೂಡೊಲಿದಲಘುನಿತಂಬೆಯೆನುತ ಮಾ |
ತಾಡಿ ಮನಃಪ್ರಿಯೆಯಂ ತಿಳಿಪಿದನಿನಿಯಂ ಕಡುಜಾಣ್ಮೆಯೊಳು       || ೭೨ ||

ತೊಳಪ ತೊಡೆಯ ಗದ್ದುಗೆಯೊಳು ಕುಳ್ಳಿ | ರ್ದಳಘುಕುಚದ ಮಲಗಂ ನೆಮ್ಮಿದ ಕ |
ಣ್ಗೊಳಿಸುವ ಮುಡುಹಿನ ಮೂಡಾವಿಗೆ ಕೈಯಿಟ್ಟಸುಗೀಶ್ವರನ ||
ಲಳಿತಾಂಗದ ಮೇಲಾಸತಿಯಲರ್ಗ | ಣ್ವೆಳಗು ಪರಿದು ಮುಸುಕಲು ಮತ್ತಾ ಕ |
ಣ್ಗಳ ಪುತ್ರಿಕೆಗಳೊಸೆದು ಚಾಮರಮಂ ಡಾಳಿಸುವಂತಾಯ್ತು          || ೭೩ ||

ಬಟ್ಟಮೊಲೆಯ ಬಾಲೆಯ ನೊಸಲೊಳು ಬಗೆ | ಯಿಟ್ಟಾಬಲ್ಲಹನೊಲವಿಂ ಚವುಕದ |
ಬೊಟ್ಟಂ ಕುಂಕುಮದಿಂದಿಡೆಯಂಗಜಚಕ್ರೇಶಂ ತನ್ನ ||
ಹೆಟ್ಟುಗೆಯರೊಳುರುಮಹಿಷೀಪದಮಂ | ಕೊಟ್ಟು ಕರಂ ಹರಿಸದಿ ಪೊಸಮಿಸುನಿಯ |
ಪಟ್ಟಂಗಟ್ಟಿದ ತೆಱದಿಂ ಕಣ್ಗೆಯ್ದಿತು ಕಡುರಂಜನೆಯು   || ೭೪ ||

ತಡೆದಸುಗೀಶಂ ಶಯ್ಯಾಸದನದ | ಪಡಿದೆಗೆವನಿತಱೊಳಡಸಿದ ಮುನಿಸಿಂ |
ದುಡುಪಾನನೆ ಮಣಿಮಂಚದಿನೆೞ್ದು ಮುಡಿಯ ಬಾಸಿಗದೆಗೆದು ||
ಪೊಡದೆಡದಲತೆಗೆಗಾಲೊಳೊದೆದು ಕ | ಣ್ಗಡೆಯ ತೊಳಪ ಕದಿರಿಂದಮಿಱಿದುಮವ |
ನೊಡಲೊಳಲಂಪಂ ಪೆರ್ಚಿಸಿ ಕಾತರದಿಂ ಕೂಡಿದಳಾಗ      || ೭೫ ||

ಕನ್ನೆ ಸೊಗಸುದುಟಿಗುಡು ಪ್ರಿಯದಿಂ ಚೆಂ | ಬೊನ್ನ ಮುಕುರಮುಖಿ ಮುಂಡಾಡಯ್ |
ಚೆನ್ನಿಗ ಚೆಂದಳಿರ್ಗೈಯಳೆ ಪರಿರಂಭಂಗೆಯ್‌ಚದುರ ||
ಉನ್ನತಜಘನೆ ಸುಸಿಲ್ಗೇಱೇೞೈ | ಯೆನ್ನ ಕೊರಲ ದೇವರಹೊನ್ನೆಯೆನು |
ತ್ತುನ್ನಲ್ಮೆಯನಾಡುತರಮಿಯಿಸಿದರ್ಕಾದಲರೊಲವಿಂದ  || ೭೬ ||

ಗಲ್ಲವಿಡಿದು ಮುದ್ದಿಸಿ ಗರಗರಿಕೆಯ | ಲಲ್ಲೆನುಡಿಯ ನುಣ್ಪಂ ಕಿವಿಗಾಗಿಸಿ |
ಪಲ್ಲ ಕೊನೆಯ ಕುಱುಪಂ ಚೆಂದುಟಿಗೇಱಿಸಿ ಬಿಗಿಬಿಗಿಯಪ್ಪಿ ||
ಮೆಲ್ಲೆರ್ದೆಯೊಳು ಸವಿವೇಟಮನೊದವಿಸಿ | ಯುಲ್ಲಸದಿಂ ಕಾದಲನತಿಮೋಹದ |
ನಲ್ಲಳಮನದೊಳಗಱಿದು ಬೞಿಕ ಸಮಸುರತಮನಾಗಿಸಿದಂ        || ೭೭ ||

ನಡೆ ನೋಟದೊಳಂಕುರವೇಱಿಸಿ ನು | ಣ್ದುಟಿಯಂದೀರೆಲೆವಡೆಯಿಸಿ ಬಾಯ್ದೆಱೆ |
ಗಿಡುವಮೃತಾಧರದಿಂ ಕುಡಿಯೇೞಿಸಿ ಕಲೆಯಿಂ ಕುಸುಮವನು ||
ಅಡರಿಸಿಯಮರ್ದಪ್ಪುಗೆಯಿಂ ಫಲಮಂ | ಬಿಡದೊದಗಿಸಿ ನವಮೋಹನಲತೆಯಂ |
ಮಡದಿಮಣಿಯಮೆಯ್ಯೊಳು ಬೆಳೆಯಿಸಿದಂ ಸುರತದೊಳಾಯಿನಿಯಂ           || ೭೮ ||

ಚುಂಬಿಸಿ ಸವಿಯನಱಿದು ಪೊಸಕಪ್ಪುರ | ದಂಬುಲಮಂ ಬಾಯ್ದೆಱಿಗೆ ಕಡಂಗೊ |
ಟ್ಟಿಂಬುಗೊಳಿಪಕೂರುಗುರ್ಗಲೆಯಿಟ್ಟು ಮೊಱೆಯನುೞಿದೊಳ್ನುಡಿಯಂ ||
ತುಂಬಿ ಕಿವಿಗೆಯೆಡೆಬಿಡವಿಲ್ಲದೆಯೊ | ತ್ತಂಬದಿನಪ್ಪಿ ಕೊರಲ ಬಣ್ಣದ ಸರ |
ದಿಂ ಬಲ್ಲಹನ ಮನಸುಮೆಚ್ಚಲು ಕೂಡಿದಳೊಲವಿಂ ತರುಣಿ        || ೭೯ |

ಮುಡಿಯೊತ್ತೊಗುವ ಮುಡಿಯನಾನನಮಂ | ತುಡುಕುವ ತುಂಬಿಗುರುಳ್ಗಳನೋವುತ |
ನಿಡಿಯಲರ್ಗಣ್ಗೆ ಬಸಿವ ಬೆಮರಂ ಕೂರುಗರಿಂ ಮಿಡಿಯುತ್ತ ||
ಉಡಿನಿಱಿಯಂ ಪಿಡಿದೊಳ್ಗುಡಿಸುತ ನಾ | ಣ್ಬಿಡಿದ ತೊಡೆಗಳನಿಱುಂಕುತ ನಿಡುಸು |
ಯ್ವಿಡುತ ನಡೆದು ಬಂದಳು ರತ್ಯಂತದ ರಮಣಿ ನಿಜಾಂಗಣಕೆ        || ೮೦ ||

ಬಂದುಗೆಯಲರೊಳಗಣ ಮಧುವಂ ಕೊಳ | ಲೆಂದು ಮುಸುಕಿದ ತುಂಬಿವಸುಳೆ ಬಾ |
ಲೇಂದುಗೆ ಸೇರಿದ ಕಿಱುಗಱೆ ಮೋಹಾಮೃತರಸಮಂ ತುಂಬಿ ||
ಕಂದರ್ಪಂ ಕೆಮ್ಮಣಿಯ ಕರಂಡಕ | ಕೊಂದಿಸಿದರಗಿನ ಮುದ್ರೆಯಿಡುವೆಯೆಂ |
ಬಂದದೆ ಪಲ್ಲಕೊನೆಯ ಕುಱುಹಧರದೊಳೊಪ್ಪಿದುದಂಗನೆಗೆ       || ೮೧ ||

ಕಟ್ಟೊಲುಮೆಯೊಳಿನಿಯಂ ಕೂರುಗುರಿಂ | ದಿಟ್ಟ ಸೊಗಸುಗಲೆಯಿಂ ನೀಲಾಂಬಕಿ |
ಯಿಟ್ಟಣಿಸಿದ ನೆಲೆಮೊಲೆಯ ನಡುವೆ ಘನರತಿಯ ಬೞಲ್ಕೆಯೊಳು ||
ಪುಟ್ಟಿ ಬಸಿವ ಬಲ್ಬೆಮರ ಜಲಂ ಮಡು | ಗಟ್ಟಲದಱ ಮಧ್ಯದೊಳು ನೆಲಸಿಯಳ |
ವಟ್ಟುದು ಶರಧಿಯೊಳುದಯಿಸಿ ಮಿನುಗುವ ಶಶಿಲೇಖೆಯ ತೆಱದಿ  || ೮೨ ||

ಗುಜ್ಜುವಡೆದ ಗುರುಕುಚವುಗುರ್ವೊಯ್ಗಳ | ಹಜ್ಜೆ ಹೊಳೆವ ನಳಿತೋಳೞಿದಳಕಂ |
ಪಜ್ಜಳಿಸುವ ಸಿರಿಮೊಗಮೊಜ್ಜರಿಸುವ ಬೆಮರುಣ್ಮುವ ಸೇದೆ ||
ಸೆಜ್ಜೆಯನಾಶ್ರಯಿಸುವ ನವಿರುಣ್ಮುವ | ಲಜ್ಜೆ ಬೆಳರ್ಪೆಸೆವಧರಂ ಬೀಸುವ |
ಬಿಜ್ಜಳಕಿಚ್ಚೈಸುವ ಮೈಯೊಪ್ಪಿತು ರತ್ಯಂತದ ಸತಿಗೆ     || ೮೩ ||

ಅರುಣಮಣಿಯನೇೞಿಸುವುಗುರ್ಗೊನೆಯಿಂ | ಪಿರಿದುಂ ಗೆಯ್ದಾಲಿಂಗನದೊತ್ತಂ |
ಬರದಿಂ ಗುಜ್ಜುವಡೆದ ಚೆಲ್ವಿಂದಾವರಿಸಿದ ಕಿಱುಬೆಮರಿಂ ||
ತರುಣಿಯ ಗುರುಕುಚಯುಗಲಂ ರೋಹಣ | ಗಿರಿಯಂ ವಿಂಧ್ಯಾಚಲಮಂ ಹಿಮಭೂ |
ಧರಮಂ ನೆನೆಯಿಸಿದುದು ನಡೆ ನೋಡುವ ನವರಸಿಕರ ಬಗೆಗೆ         || ೮೪ ||

ಈಯಂದದಿನತಿಶೋಭೆವಡೆದ ವೇ | ಶ್ಯಾಯುವತಿಯರ ವಿಲಾಸದ ಸದಭಿ |
ಪ್ರಾಯಮನೀಕ್ಷಿಸುತಂ ತದ್ವಿಪಣಿಯನಿನಿವಿರಿದುಂ ಮುದದಿಂ ||
ಶ್ರೀಯುವತೀಪ್ರಾಣೇಶ್ವರನಭಿನವ | ಕಾಯಭವಂ ಸಕಲಕಲಾಪ್ರೌಢಂ |
ರಾಯನಿರದೆ ಪೊಱಮಟ್ಟೆಯ್ತಂದಂ ನೃಪವರಮಂದಿರಕೆ  || ೮೫ ||

ಒಡನೆಯ್ದಿದ ಸಹಚರರಂ ನವಮಣಿ | ದೊಡವುಡೆತಂಬುಲಮೊದಲಾದವಱಿಂ |
ಸಡಗರದಿಂ ಸತ್ಕರಿಸಿ ಬೞಿಕ ಹರಿಸದೊಳಂತಃಪುರಕೆ ||
ನಡೆದು ನರೇಂದ್ರಲಲಾಮಂ ಪಟ್ಟದ | ಮಡದಿ ಮಧುರಪಿಕವಾಣಿ ಸುಲೋಚನೆ |
ಯೊಡನೆ ಹಲವು ರತಿಬಂಧಕ್ರಿಯೆಯೊಳಗಿನಿಸು ತೊಲಗದಿರ್ದಂ       || ೮೬ ||

ಸುಸಿಲ ಕಡೆಯ ಸೌಖ್ಯದ ಬಲುಸೊರ್ಕೀ | ಯೆಸಕವಡೆದು ಬಲಿಯಿತ್ತೆಂಬಂದದಿ |
ನೊಸೆದಾಮಾನವಮನಸಿಜನಭಿನವರತಿಯೆನೆ ಸೊಗಯಿಸುವ ||
ಅಸಿಯಳ ತೋಳ್ವಾಸಿನ ಮೇಲೊಯ್ಯನೆ | ಮುಸುಕಿದ ನಿದ್ರೆಯೊಳಿರಲಾಸಮಯಕೆ |
ನಸುದೋಱಿತು ನಾಕಾಧಿಪದಿಕ್ಕಿನೊಳೆಳವಗಲಿನ ಚಿಹ್ನಂ  || ೮೭ ||

ಬಾಡುವ ತಾರಗೆಗಳು ಬಡಬಡಕನೆ | ತೀಡುವುದಯಪವನಂ ಮುದೆಸೆಯೊಳ್ |
ಕೂಡುವರುಣರುಚಿ ಮಾಸಿದ ಮುಕುರದವೊಲ್ ಕಂದಿದ ಚಂದ್ರಂ ||
ಪಾಡುಗೆಡೆವ ಕೞ್ತಲೆ ಪಲುಬುವ ಖಗ | ಮೋಡುವ ಜಾರಾತತಿಯಂಬುಜದೊಳು |
ಪಾಡುವ ಪಱಮೆವಱಿಗಳೆಸೆದುವು ಪನಿಪೊೞ್ತಿನ ಸಮಯದೊಳು   || ೮೮ ||

ಇರುಳೊಳು ರಾಕ್ಷಸರಂದದಿ ಬಿಡದಾ | ಚರಿಸಿದ ವಾರುಣಿಯಂ ಮೊಗಸೋಂಕಿದ |
ಪಿರಿದುಂ ದೋಷಾಕರನೆನಿಸಿದ ಕೋಕಂಗಳನಗಲಿಸಿದ ||
ದುರಿತಂ ತನಗೀತೆಱದಿಂದಲ್ಲದೆ | ಪರಿಹರಮಾಗದೆನುತ ನಿಶ್ಚಯದಿಂ |
ಶರಧಿಸ್ನಾನಂಗೆಯ್ವಂದದಿ ಶಶಿಯಸ್ತಂಗತನಾದಂ           || ೮೯ ||

ಗಂಡನೞಿಯಲೆಮ್ಮಂದದಿನೞಿವುದು | ಪೆಂಡಿರ್ಗನುಮತಮೆಂಬುದನವನೀ |
ಮಂಡಲದೊಳಗುಳ್ಳಬಲಾಜನಕೆಯಱಿಕೆಮಾೞ್ಪಂದದೊಳು ||
ದಿಂಡುಗೆಡೆದು ಪಶ್ಚಿಮವಾರಿಧಿಯೊಳಯ | ಖಂಡಶಶಾಂಕನೞಿಯೆ ತಾರಗೆಗಳ |
ಮಂಡಳಿಯುಂ ಮುಸುಕಿದ ರಾತ್ರೆಯುಮಿನಿಸುೞಿಯದೞಿದುವಾಗ || ೯೦ ||

ಇದು ಭೀಕರಮಪ್ಪಂಧೋರಾಕ್ಷಸ | ನದಟಂ ಮುಱಿದು ಮೆಱೆವ ಹಣೆಗಣ್ಣನೊ |
ಇದು ಕೞ್ತಲೆಯೆಂಬ ಕರೇಣುವನುಱದಿಕ್ಕಿದ ಕೇಸರಿಯೋ ||
ಇದು ತಮವೆಂಬಸಿತಾಂಭೋನಿಧಿಯಂ | ಪದಪಿಂ ಪಾನಂಮಾಡಿದಗಸ್ತ್ಯನೊ |
ಇದು ನಿಶೆಯೆಂಬ ವನಮನಳುರ್ವಗ್ನಿಯೊ ಎನೆ ರವಿ ಮೂಡಿದುದು  || ೯೧ ||

ಆಯಿನನುದಯದೊಳೆೞ್ದು ಸರಾಗದೊ | ಳಾಯತನೇತ್ರೆ ಸುಲೋಚನೆ ಸಹಿತಂ |
ತೋಯಜಸದ್ರೂಪಾನನಮಂ ತೊಳೆದು ಜಿನೇಶಂಗೆಱಗಿ ||
ಭೂಯುವತೀಪ್ರಾಣೇಶಂ ಸುಮನೋ | ಸಾಯಕಸನ್ನಿಭನಭಿನವಮನುಜಯ |
ಜಾಯಾಪತಿ ಜಯಭೂಪತಿ ಸುರಪತಿವೈಭವದೊಳಗಿರ್ದಂ           || ೯೨ ||

ಸಲೆಗುಣಯುತಧರ್ಮಧರಂ ಮುಖ್ಯಾ | ಮಲಸುಮನೋರಥನತನುವಿಲಾಸಂ |
ವಿಲಸದ್ರಾಜಬಲಾನ್ವಿತನುದ್ಯದ್ಭಾರತ್ಯನುಭಾವಂ ||
ಲಲಿತಕುವಲಯೋಪೇತಂ ವಿಗ್ರಹ | ದಲನಂ ಜನತಾಹೃದಯನಿವಾಸಂ |
ಲಲನಾಜನಕಂಗಜನಂತೆಸೆದಂ ಪ್ರಭುಕುಲಮಣಿದೀಪಂ      || ೯೩ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಾದುದು ಪದಿನಾಲ್ಕನೆಯ ಮಿಸುಪ ಸಂಧಿ  || ೯೪ ||

ಹದಿನಾಲ್ಕನೆಯ ಸಂಧಿ ಸಂಪೂರ್ಣಂ