ಸೂಚನೆ || ವರಸೋಮಪ್ರಭರಾಜೇಂದ್ರಂಗಂ |
ತರುಣಿಗೆ ಸೌಂದರಿಗಂ ಜನಿಯಿಸಿ ಜಯ |
ಧರಣೀಪತಿ ಸಕಲಕಲಾಕೋವಿದನಾಗಿ ಹರೆಯವಡೆದಂ ||

ತತ್ಪೃಥಿವೀಪಾಲನ ಸಕಲಕಲಾ | ವ್ಯುತ್ಪನನ್ನನ ಕಾರುಣ್ಯರಸದೆ ವಿಲ |
ಸತ್ಪತ್ನೀನಿವಹಂ ಪಿರಿದನುರಾಗವನೀಯುತ್ತಿಹುದು ||
ಸತ್ಪತಿಮುಖದರ್ಶನದಿಂದೆಸೆವಸಿ | ತೋತ್ಪಲವನವರ್ಕೋದಯದಿಂದ ಮ |
ಹೋತ್ಪಲಕಾನನಮನುದಿನಮತಿವಿಭ್ರಾಜಿಸುವಂದದೊಳು || ೧ ||

ಮಿಂಚಂ ಮಿನುಗುವ ಸಂಚಲತೆಯೊಳೆ ಪ | ಳಂಚಿ ಗೆಲುವ ಚಟುಲಾಕ್ಷಿಗಳೆಸೆವ ವಿ |
ಪಂಚಿಯ ಪಂಚಮದಿಂಚರಮಂ ಪಿರಿದವಗಡಿಸುವ ಮಾತು ||
ಅಂಚೆಯ ನಡೆಯನಿದಂ ತನತೆನುತುಂ | ಮಂಚಲ್ಪಿಡಿವೊಳ್ನಡೆ ರತಿರೂಪಂ |
ಲಂಚಂಗೊಂಡ ವಿಲಾಸದಿನೆಸೆದತ್ತಾ ರಾಣೀವಾಸಾ || ೨ ||

ಬೆಳಗಾಯ್ಮೊಲೆಯ ಬೆಳಂತಿಗೆಗಣ್ಗಳ | ಸುೞಿನಾಭಿಯ ಸುಲಲಿತಲಲಿತಾಂಗದ |
ತಳಿರ್ಗಾಲ್ಗಳ ತಾರಾಪಥಮಧ್ಯದ ಹಸುಳೆವೆಱೆಯ ಹಣೆಯಾ ||
ಅಲಘುಕಬರಿಯ ಕಮಲನಿಭವದನದ | ಕಳಕಂಠಾಳಾಪದ ಹೊಸಹರೆಯದ |
ಲಲನೆಯರ ವಿಲಾಸಂ ನೃಪನಱಿತಮನೆೞಕುಳಿಗೊಳಿಸಿದುದು || ೩ ||

ಆ ರಾಜೇಂದ್ರನ ರಾಣೀವಾಸದೊ | ಳೋರೊರ್ವರ ಮುಖಕೋರೊರ್ವರ ಮುಖ |
ಮೋರೊರ್ವರ ಕುಡುವುರ್ವಿಂಗೋರೊರ್ವರ ಕೊಂಕಿದ ಪುರ್ಬು ||
ಓರೊರ್ವರ ಮುಡಿಗೋರೊರ್ವರ ಮುಡಿ | ಯೋರೊರ್ವರ ತೊಡೆಗೋರೊರ್ವರ ತೊಡೆ |
ವೈರವಡೆದ ವಸ್ತುವಿನಿರವಂ ನೆಱೆ ಪೋಲ್ತು ಸೊಗಯಿಸಿದುವು || ೪ ||

ಆ ರಾಣಿವಾಸದ ಮಧ್ಯದೊಳೆ ಮ | ಹಾರಾಜನ ಕಯವಿಡಿದಗ್ರಸ್ತ್ರೀ |
ಯೀರೆಣ್ಫಾಸಿರದಱಿಕೆಯ ಗೋಪಾಂಗನೆಯರ ಮಧ್ಯದೊಳು ||
ವಾರಿಜನಾಭನ ತೊಡೆಯಡರ್ದಿಂದಿರೆ | ತಾರಾಂಗನೆಯರ ನಡುವಣ ರೋಹಿಣಿ |
ಕೈರವಮಿತ್ರನ ಪೊರೆಯೊಳಗೆಸೆವಂದದಿ ಕಣ್ಗೊಪ್ಪಿದಳು || ೫ ||

ಲಲಿತಾಶೋಕತರುಣಪಲ್ಲವಪದ | ತಳದಂತಃಪುರದಬಲಾತತಿ ಕ |
ಣ್ಗೊಳಿಸುವ ಜಂಗಮವಲ್ಲರಿಯಂತೆ ವಿರಾಜಿಸುತಿರಲಲ್ಲಿ ||
ಇಳೆಯಾಣ್ಮಂ ನವಚೈತ್ರನವೊಲು ಪ | ಜ್ಜಳಿಸುತ್ತಿರೆ ಸೌಂದರಿವೆಸರಂ ನೆಱೆ |
ತಳೆದ ಮಹಾಸತಿಯೆಸೆದಳು ನವನಂದನಲಕ್ಷ್ಮಿಯ ತೆಱದಿ || ೬ ||

ಚಾರುಚಕೋರಂಬೊಲು ಚಂದ್ರಂಬೊಲು | ಕೀರಂಬೊಲು ವಟಪಕ್ವಫಲಂಬೊಲು |
ಕೋರಕಿತಾಬ್ಜಂಬೊಲು ಸಿಂಗಂಬೊಲು ಪುಳಿನಂಬೊಲು ಮಿಸುಪ ||
ವಾರಣಹಸ್ತಂಬೊಲು ಕೂರ್ಮಂಬೊಲು | ನಾರಿಯ ಕಣ್ಮೊಗ ನುಡಿ ತುಟಿ ಮೊಲೆ ನಡು |
ತೋರಿದುವಾದ ನಿತಂಬಂ ತೊಡೆಯಡಿಗಳು ಕಡುಸೊಗಸಿದುವು || ೭ ||

ಬೆದರ್ವುಲ್ಲೆಯನೇಳಿಪ ಬೆಳತಿಗೆಗ | ಣ್ಬಿದಿಗೆವೆಱೆಯ ಬಿಂಕಂಗೆಡಿಪಧರಂ |
ಮದನಮತಂಗವಜವಂ ಮೆಯ್ಸಿರಿಗುಂದಿಪ ಮೃದುತರಗಮನಂ ||
ವಿದಳಿತವಿಮಲಾಂಬುಜಮಂ ಸೋಲಿಪ | ವದನಂ ಪುರುಳಿಯ ಪುರುಳುಗೆಡಿಪ ನುಡಿ |
ಕದಳೀಸ್ತಂಭಮನೇಳಿಸುವೂರುಗಳೊಪ್ಪಿದುವಾಸತಿಗೆ || ೮ ||

ಬೇರೊಂದಱಿನೆರಡಾದ ಲತಿಕೆಯೋ | ಮಾರಾನಲನ ಜವಳಿದಲೆಯೋ ಮದ |
ನೋರಗಮುಖದ ಕವಲ್ನಾಲಗೆಯೋ ಎಂಬಂತಣುಗಿನೊಳು ||
ಆ ರಾಜಪ್ರಭನೃಪನುಂ ಚಾರುಚ | ಕೋರವಿಲೋಚನೆ ಸೌಂದರಿಯುಂ ಪಿರಿ |
ದಾರಯಲೊಂದಸುವಿಂಗಿರ್ಮೆಯ್ವಡೆದಂದದಿನೊಪ್ಪಿದರು || ೯ ||

ಮೃಡನಂ ಮೊರಡಿಯಣುಗಿ ನಾಲ್ಮೊಗನಂ | ನುಡಿವೆಣ್ಣಂಬುರುಹೋದರನಂ ಸವಿ |
ಗಡಲ ಕುವರಿಯಂಗಜನಂ ರತಿ ಮೆಯ್ಗಣ್ಣನನಿಂದ್ರಾಣಿ ||
ಉಡುಪತಿಯಂ ರಾಗದಿ ರೋಹಿಣಿ ಕ | ಯ್ವಿಡಿದಂದದಿ ನೃಪತಿಯ ತೋಳ್ಬಾಳಂ |
ಪಿಡಿದಾಪಿಡಿನಡುವಿನ ಸೌಂದರಿ ಸುಖಮಿರೆ ದಿನವೊಂದಱೊಳು || ೧೦ ||

ನೊಸಲ ನಯನದಂತೊಪ್ಪುವ ಕುಂಕುಮ | ರಸದ ಲಲಾಮದಿ ನಿಡುಮುಡಿಯೊಳು ರಂ |
ಜಿಸುವ ಹಸುಳೆವೆಱೆಯಂತೆ ವಿರಾಜಿಪ ಬೆಳರ್ಗೇದಗೆಯೆಸಱಿಂ ||
ಒಸೆದೇಱಿದ ನವಕೇಸರಿಯಂದದಿ | ಮಿಸುಗುವ ಮುತ್ತಿನ ಸಿಂಹಾಸನಂದಿ |
ವಸುಧಾಧಿಪಸತಿಯಂದಿನ ದುರ್ಗಂಬಿಕೆಯಂತೊಪ್ಪಿದಳು || ೧೧ ||

ಶೃಂಗಾರರಸಾಂಭೋದಿಯ ತರಳತ | ರಂಗದ್ವಿತಯದ ನಡುವೆ ವಿರಾಜಿಪ |
ತಿಂಗಳ ತಿಳಿಗೊಳದೆಮಳಂಚೆಯ ಮಧ್ಯದೊಳೆಸೆವಂಬುಜದ ||
ಭಂಗಿಯನನುಕರಿಸುತೆ ಹರಿಸದೊಳು | ತ್ತುಂಗಕಳಶಕುಚೆಯರು ಬೀಸುವ ಚಮ |
ರಂಗಳ ನಡುವೆಸೆದುದು ವದನಂ ವಸುಧಾವರವಲ್ಲಭೆಯಾ || ೧೨ ||

ಸಮುಚಿತದಿಂ ನಿಂದಾಪ್ರತಿಹಾರ | ಪ್ರಮದೆಯದೊರ್ವಳ ಚುಬುಕಾಗ್ರದೊಳು |
ತ್ತಮಮರಕತಮಣಿಮಯದಂಡಮನತ್ಯಾನಂದಂಬೆತ್ತು ||
ಅಮರಿ ಪಿಡಿಯಲೆನಸುಂ ರಾಜಿಸಿದುದು | ವಿಮಲಶ್ರೀಮುಖವಿಕಸತ್ಕಾಂಚನ |
ಕಮನೀಯಾಂಭೋಜಾತದ ನವನಾಳವಿದೆಂಬಂದದೊಳು || ೧೩ ||

ಅಂಗಜಪಂಚಫಣೋರಗಪುರುಷಂ | ಹೊಂಗೇದಗೆಯೆಸೞಂ ವಾಸಿಸಿ ಚಿ |
ತ್ತಂಗೊಳಿಸುವ ತನ್ನಯ ಕಾಂತೆಗೆ ನೀಂ ವಾಸಿಸಲೆನುತೀವ ||
ಪಾಂಗಿಂ ತಂಬುಲದೆಲೆಯಂ ತೆಗೆದಡ | ದಂಗೈಯೊಳಗಿರಿಸುವ ವೀಳೆಯದ ಲ |
ತಾಂಗಿಯ ದಕ್ಷಿಣಹಸ್ತಂ ಧರಿಸಿತು ಪಿರಿದುಂ ಚೆಲ್ವಿಕೆಯಾ || ೧೪ ||

ಮರಕತಮಣಿಮೇಖಲೆಯ ಮರೀಚಿಯೆ | ಪಿರಿದೊಪ್ಪುವ ಪಲ್ಲವವೆಂಬಂತಿರೆ |
ನೆರೆದ ಲತಾಂಗಿಯರೊಳಗೊರ್ವಳು ನಿಂದೊಳ್ದೊಡೆಯಗ್ರದೊಳು ||
ಇರಿಸಿದ ಮಿಸುನಿಯ ನಿಡುಗಿಂಡಿ ಕರಂ | ಪರಿರಂಜನೆಯಂ ಪಡೆದತ್ತತಿಬಂ |
ಧುರಕಾಂಚನಕದಳೀಕುಸುಂ ವಿಭ್ರಾಜಿಸುವಂದದೊಳು || ೧೫ ||

ಈವರ್ಣದಿನೀಚೆಲ್ವಿಂದೀಕಂ | ಪಾವರಿಸದೆನುತ್ತೆಣಿಸಲ್ವೇಡೀ |
ದೇವಿಯ ಬಾಯ ಮಿಸುಪ ತಾಂಬೂಲದ ಕಂಪಂ ಕೊಡಿಸುವೆನು ||
ಓವದೆ ನಿನಗೆನುತುಂ ಕೊಸಗಿನ ಬಿರಿ | ವೂವಂ ಕೈವಿಡಿದಂದದಿನೊರ್ವಕ |
ಲಾವಿದೆ ಪಿಡಿದು ವಿರಾಜಿಸಿದಳು ಚಿನ್ನದ ಕಾಳಾಂಜಿಯನು || ೧೬ ||

ಪೊಸಜವ್ವನೆ ನಿನ್ನೀದೀಘಾಂಬಕ | ದೆಸಕದ ಸಂಪತ್ತಿಗೆ ಮಿಗೆ ಸೋಲ್ತೀ |
ಯಸಿತೋತ್ಪಲದರದಳಿತಂ ತನ್ನ ಪರಾಗದ ಕಪ್ಪವನು ||
ಒಸೆದೀಯಲ್ಬಂದಿದೆ ನೋಡೆನುತಂ | ಪೊಸಕಲುಕಮನಿಕ್ಕಿದ ನೀಲದ ಹರ |
ಲೆಸೆಯೆ ಕರಂಡಕಮಂ ಪಿಡಿದೊರ್ವಳಬಲೆ ಕಣ್ಗೊಪ್ಪಿದಳು || ೧೭ ||

ನಡೆಯ ಬೆಡಂಗಂ ನೆಲೆಮೊಲೆಯಿರವಂ | ನುಡಿಯಿನದಂ ನೋಟದ ಚಟುಲತೆಯಂ |
ಮುಡಿಯೊಳ್ಪಂ ಕಡನಂ ಬೇಡುವ ತೆಱದಿಂ ತಾಂ ರಕ್ಷಿಸುವ ||
ನಡೆವಕ್ಕಯ ನಲ್ಮೆಯ ಪೊಣರ್ವಕ್ಕಿಯ | ನುಡಿವಕ್ಕಿಯ ಬೆಳುಂದಿಂಗಳ ಹಕ್ಕಿಯ |
ನಿಡುಗಣ್ಗಱಿವಕ್ಕಿಯ ಬಳಗಂ ಬಳಸಿದುದಾನೃಪಸತಿಯಾ || ೧೮ ||

ಪಲಗಣ್ಣನ ಪಟ್ಟದ ಸತಿ ಸಗ್ಗದ | ಲಲನೆಯರೊಳಗೋಲಗಮಿರ್ಪಂತಾ |
ಲಲಿತಶಶಾಂಕವದನೆ ಸಖಿಯರ ಮಧ್ಯದೊಳಿರಲಾಯೆಡೆಗೆ ||
ಅಲಘುಕುಚದ ಭಾರದೆ ಮೆಲ್ಲನೆ ಬಂದ | ಲತಿಗೆಗಾಲ್ಗಳ ಕಂಚುಕಿಯೊರ್ವ |
ಳ್ಜಲಜೋಪಮಕರಯುಗಮಂ ಮುಗಿಯುತೆ ಬಿನ್ನವಿಸಿದಳಿಂತು || ೧೯ ||

ಸಂದಣಿಸಿದ ಮಣಿವಾಗಿಲೊಳೊರ್ವ ಪು | ಳಿಂದನಿತಂಬಿನಿ ಕಾರಕಱಿಯಮುಗಿ |
ಲಿಂದ ಸಮೆದ ಪುತ್ತಳಿ ಸುರಧನುವಿನ ಮುಱಿಯಂ ಕೈವಿಡಿದು ||
ಬಂದಂದದೊಳೊಂದರಗಿಳಿಸಹಿತಂ ನಿಂದಿರ್ದಪಳೆಂದೆಂಬುದುಮತಿಮುದ |
ದಿಂದೊಳವುಗಿಸೆನೆ ಹುಗಿಸಿದಳಾಸ್ತ್ರೀಸಭೆಯಂ ಭರದಿಂದ || ೨೦ ||

ಸ್ಮರಕಾಳೋರಗಹಸ್ತದ ನೀಲದ | ಕರಡಗೆಯಂದದ ಮೊಲೆಯ ನವಾಂಜನ |
ಗಿರಿಯಂ ಗೆಲ್ವ ಕಟಿಯ ಕರ್ವಾೞೆಯನೇಳಿಪನುಣ್ದೊಡೆಯ ||
ಇರುಳ ತಿರುಳ ಬಣ್ಣದ ತನುವಿನ ಕ | ತ್ತುರಿಗಂಪಿನ ಕಾೞ್ಬೇಡಿತಿ ನಡೆತಂ |
ದರಸಿಯ ಸಭೆಯಂ ಹೊಕ್ಕಳು ಸಮ್ಮೋಹನಸಾಮಜದಂತೆ || ೨೧ ||

ಬಂದು ವನೇರಿ ಸಲೆ ಸಾಧ್ವಸದಿಂ | ನಿಂದೆಲರಿಂದ ತಮಾಲಲತಿಕೆ ಮಣಿ |
ವಂದದಿ ಮಣಿದು ಬೞಿಕ ತಂದರಗಿಳಿಯಂ ಕಾಣ್ಕೆಯನೀಯೆ ||
ಮಂದೇತರಸಮ್ಮದದಿಂ ಮನದಣಿ | ವಂದದಿ ಪೊಂದೊಡವಂ ಮೆಚ್ಚಿತ್ತಾ |
ಸೌಂದರಿಯತಿವಿನಯೋಕ್ತಿಯೊಳವಳಂ ಬೀೞ್ಕೊಡುತುಂ ಬೞಿಕೆ || ೨೨ ||

ಎಸೆವೊಳ್ದಳಿರ್ಗೈಯೊಳಗಿಡುತಂ ನವ | ರಸದಾಳಿಂಬದ ಬಿತ್ತಂ ನೇಱಿಲ |
ಪೊಸದೋರೆಯನಿಮ್ಮಾವಿನ ಪಣ್ಣಂ ತರಿಸಿ ಕುಡುಕುಗೊಡಲು ||
ಹಸಿದಿರ್ದುಂ ತಿನಲೊಲ್ಲದೆ ಕಣ್ಬಿನಿ | ಯೊಸರುತ್ತೆಲೆ ನಲ್ಲಳೆ ಹಾಯೆನುತುಂ |
ಬಿಸುಸುಯ್ಯುತೆ ಹಳವಳಿಪರಗಿಳಿಯಂ ಕಂಡಳ್ ಕಮಲಾಕ್ಷಿ || ೨೩ ||

ಅಡವಿಯೊಳೊಗೆದು ಬಳೆದ ಹುಲುಗಿಳಿಯಾ | ಮಡದಿಯ ಮೇಗಣವಸ್ತೆಯ ಕಳವಳ |
ದೊಡವೆರಸದಿದ ಮಾತಂ ನುಡಿಯುತೆ ಬಿಸುಸುಯ್ಲಿಂ ನಾಮಿತ್ತ ||
ಕುಡುಕಂ ತೊಱೆದಿಹುದಚ್ಚರಿಯೆಂದೆನು | ತುಡುಪಾನನೆ ನಿರವಿಸಲೆಂದುದು ನಾ |
ನಡವಿಯ ಹುಲುಗಿಳಿಯಹುದೆನ್ನಯ ವಾರ್ತೆಯನುಸಿರುವೆ ಕೇಳು || ೨೪ ||

ಎನುತಿಂತುಸಿರಿದುದೆಲೆ ಕೋಮಲೆಯೀ | ಜನಪದಕತಿದೂರದೊಳೊಂದು ಮಹಾ |
ವನಮುಂಟದಱ ನಡುವೆ ಋಷ್ಯಾಶ್ರಮವೊಂದುಂಟದಱಲ್ಲಿ ||
ವನಿತೆ ಸರಸ್ವತಿಯೆಂಎಂಬಳ್ವೆರ | ಸನುರಾಗದಿ ತನ್ನಂ ಬಳಸಿದ ವಟು |
ಜನದ ನಡುವೆ ಶೋಭಿಸಿದಂ ವಿಮಲಜ್ಞಾನಿವೆಸರ ತವಸಿ || ೨೫ ||

ಅದಿತ್ಯಂಗರ್ಘ್ಯಂಗುಡಲೆನುತುಂ | ಮೇದಿನಿಗಿೞಿದೆಯ್ದಿದ ಸುರಪತಿ ಮೊದ |
ಲಾದರನೆಲ್ಲರನಾಹ್ವಾನಿಸುತಾದರಿಸಿ ವಿಸರ್ಜಿಸುವ ||
ವೇದದ ಸಂಶಯಮಂ ವೇಧಂಗತಿ | ಭೇದಿಸುವಂದದೊಳಂ ನಿರವಿಸಿ ವಾ |
ಣೀದೇವಿಗೆಯೋದಂ ಕಲಿಸುವ ಜತಿರಾಯನೆಸೆದನಲ್ಲಿ || ೨೬ ||

ತತ್ತಾಪಸಪರಿವೃಢನಾಶ್ರಮದೊಳ | ಗುತ್ತಮಪುಪ್ಪಿಮ್ಮಾವಿನೊಳೆನ್ನಯ |
ಚಿತ್ತಪ್ರಿಯೆಯುಂ ನಾನುಂ ಕಿಱುಗೂಸಿಂದವೆ ನೆಱೆ ಬಳೆದು ||
ಮತ್ತವರೋದುವ ಶಾಸ್ತ್ರಂಗಳನಾ | ವೊತ್ತಿನೊಳಿರ್ದೆಲ್ಲವನೋವದೆ ಕಲಿ |
ಯುತ್ತಂಗೋದ್ಭವಸುಖಸಾಮ್ರಾಜ್ಯಮನನುಭವಿಸುತ್ತಿರ್ದು || ೨೭ ||

ಒಂದಾನೊಂದು ದಿನದೊಳಾಮುನಿಕುಲ | ವೃಂದಾರಕನೋವದೆ ಶಿಷ್ಯರ್ಗೊಲ |
ವಿಂದಮಪುತ್ರಸ್ಯಗತಿರ್ನಾಸ್ತಿಯೆನಿಪುದೊಂದಾಗಮಮಂ ||
ಮಂದೇತರಮುದದಿಂದೊರೆಯುತ್ತಿರ | ಲಂದಾಸೂತ್ತಾರ್ಥಮನಾಲಿಸುತುಂ |
ಸೌಂದರಿ ಕೇಳ್ನಂದನದೋಹಳಮುದಯಿಸಿತೆನ್ನಯ ಸತಿಗೆ || ೨೮ ||

ಮಿಸುಗುವ ದಾಳಿಂಬದ ಬಿತ್ತಿನ ನವ | ರಸಮಂ ಪೊಳೆವ ಪವಳವಾಯ್ದೆಱೆಗೆಱೆ |
ದಸುಗೆಯ ತಳಿರೊಳ್ಮಲಗಿಸಿ ಪಕ್ಷದ ಪದಱೊಳಗಳವಡಿಸಿ ||
ಅಸುಗೀಶನನೊಳ್ಗುಡುಕಂ ತರಲೆನು | ತೊಸೆದು ಕಳುಪಿ ಶಿಶುವಿನ ಕಾಪಿನೊಳಿ |
ರ್ಪೆಸಕಮದೆಂದಿಂಗಪ್ಪುದೆನುತ ಮಚ್ಚಾರಿಕೆ ಮಱುಗಿದುದು || ೨೯ ||

ಕಡುಗುರುಡಂ ಕಣ್ಣಂ ಕಡವರಮಂ | ಬಡವಂ ಬಯಸುವ ಪರಿಯಿಂದೆನ್ನಯ |
ಮಡದಿ ತನೂಭವದೋಹಳದೊಳಗಿರಲಾಕಿಱುದಿವಸದೊಳು ||
ಒಡಲೊಳ್ ಶಿಶುವುದಯಿಸಿ ಬಳೆಯುತ್ತಿರ | ಲೊಡನಾಮ್ರದಪಣ್ಣುಣ್ಬ ಬವಸೆ ತನ |
ಗಡಿಸಿತು ಋತುವಲ್ಲದ ಋತುವಿನೊಳಂಬುರುಹಸದೃಶಮುಖಿಗೆ  || ೩೦ ||

ಅಲ್ಲದ ಋತುವಿನೊಳಿಲ್ಲದ ಪಣ್ಣಂ | ನಲ್ಲಳ್ ಬಯಸಲ್ತರಲಱಿಯದೆ ನಾ |
ನಲ್ಲಿಯ ಮುನಿವೃಂದಾರಕವಿಮಲಜ್ಞಾನಿಯ ಬಱಿಗೆಯ್ದಿ ||
ಮೆಲ್ಲಡಿದಾವರೆಗೆಱಗುತ್ತುಂ ಮಾ | ವೆಲ್ಲಿ ಫಲಂದೋಱುವುದೀಕಾಲದೊ |
ಳುಲ್ಲಸದಿಂದ ನಿರೂಪಿಸೆನಲ್ನಗುತುಸಿರಿದನಿಂತೆಂದು || ೩೧ ||

ಕುರುಜಾಂಗಣವಿಷಯದ ರಂಜಿಪ ಗಜ | ಪುರದ ಬಹಿರ್ನಂದನದೊಳಗಾಪೊೞ |
ಲರಸಿನ ಸತಿ ಸೌಂದರಿ ಮಾತಾಡುವ ವಕ್ರತೆಯಂ ಕೇಳ್ದು ||
ಭರದಿಂದಲರೇಱಿದ ಮಾಕಂದಂ | ಸರಸಫಲಂದೋಱಿರ್ಪುದದೆನಲಾ |
ವರಮುನಿಯಂ ಬೀೞ್ಕೊಂಡೀಯೆಡೆಗನುರಾಗದಿನೆಯ್ದಿದೆನು || ೩೨ ||

ಬಂದು ಬಹಿರ್ನಂದನದೊಳಗಣ ಮಾ | ಕಂದಮಹೀಜದ ಮಧುರಫಲವನಾ |
ನಂದದಿ ಕಂಡಾಯೆಡೆಗೆಯ್ದುತ್ತಲ್ಲಿಯ ಬಲೆಯೊಳೆ ಸಿಲ್ಕಿ ||
ನಿಂದಾನಿರಲತಿಭರದಿಂ ಬಂದು ಪು | ಳಿಂದಂ ಪಿಡಿಯುತೆ ತನ್ನ ಸತಿಯ ಕೈ |
ಯಿಂದಬಲಾಮಣಿ ನಿನಗೆನ್ನಂ ಕಡುಹರಿಸದೊಳಟ್ಟಿದನು || ೩೩ ||

ಬಾಯ ಸವಿಗೆ ನಾನೀಬೞಿಯೊಳು ನಿಲ | ಲಾಯೆಳವಸಿಱಂ ತಾಳಿದ ಪೆಣ್ಗಿಳಿ |
ಕಾಯಜನುಪಹತಿಯಿಂದಸುವಂ ನೀಗುವುದದಱಿಂ ನಾನು ||
ಸಾಯದೆ ಸುಮ್ಮನಿರೆನು ಕೊಲಬೇಡ ವೃ | ಧಾಯಕೈನುತಾಗಿಳಿ ಮೂರ್ಛೆಗೆ ಸಲ |
ಲಾಯೀಂದೀವರಲೋಚನೆ ಸತ್ಕ್ರಿಯೆಯಿಂದೆೞ್ಚಱಿಸಿದಳು || ೩೪ ||

ಬೞಿಕಿಮ್ಮಾವಿನ ಪಣ್ಣಿತ್ತಾ ಅರ | ಗಿಳಿಯಂ ದಿನಚರಿ ಬರವೇೞುತ್ತಂ |
ಕಳುಹಿ ಕಮಲಲೋಚನೆ ತನ್ನಯ ಮನದೊಳಗಿಂತೆಣಿಸಿದಳು ||
ಹಳುವಿನ ಹಕ್ಕಿಗಳಿಗೆ ಮೊದಲಾಗಿಯೆ | ಯೆಳಗೂಸಂ ಪೆಱಲೆಂಬ ಬಯಕೆಯಾ |
ಯ್ತಿಳೆಯೊಳ್ ನಂದನರಂ ಪಡೆಯದ ಪೆಣ್ಗಳ ಜನ್ಮಮದೇಕೆ || ೩೫ ||

ತರುಣಾಶೋಕದ ಪಸುರೆಲೆಯೆಡೆಯೊಳ್ | ಪರಿರಂಜಿಪ ಪಲ್ಲವವಾಡುವವೊಲ್ |
ಮರಕತಮಣಿದೊಟ್ಟಿಲೊಳಿರ್ದುಂ ಕೈಕಾಲ್ಗಳನಾಡಿಸುವ ||
ಸುರುಚಿರವಿಮಲವಿಡೂರಜಸೂತ್ರಂ | ಪೊರಳ್ವಂದದಿ ಪೀತಾಂಬರತಲ್ಪದೊ |
ಳುರುಳ್ವೆಳೆಯನನೆತ್ತುವ ಭಾಗ್ಯಂ ಮುನ್ನಂ ನೋನದರ್ಗುಂಟೇ || ೩೬ ||

ಪಾವಸೆಯಂ ಪೆಱನೂಂಕುವ ಪೊಸಕೆಂ | ದಾವರೆಯೆನೆ ಕಿಱುಗೈಯಿಂ ಮೇಲುದ |
ನೋವದೆ ನೂಂಕಿ ಕೊರಲ ಕಂಠಿಕೆಯಂ ಪಱಿದೊಳ್ದೊಡೆಯೇಱಿ ||
ತೀವಿದ ಪಾಲ್ಮೊಲೆಯಂ ತಳಿರ್ವಾಯಿಂ | ದಾವರಿಸುತ ಕರ್ಚುವ ಕಂದನ ಸ |
ದ್ಭಾವಮನೀಕ್ಷಿಸದಾಕೆಯ ಕಣ್ಗಳ್ ಪೀಲಿಯಕಣ್ಣೈಸೆ || ೩೭ ||

ಅನುದಿನಮೆಮ್ಮಯ ಮಿತ್ರೋದಯಮಂ | ನೆನೆವ ವನಜಮೆಯ್ದಿದುವೆನುತವೆಯತಿ |
ವಿನಯದೊಳೆಣೆವಕ್ಕಿಗಳವಕಮೃತವನೊಲಿದೀವಂತೆನ್ನ ||
ತನಯನ ಮೊಗದಾವರೆಯುಳ್ಳರಲೊ | ಳ್ತನಿವಾಲಂ ಕಱೆವೆನ್ನೀನೆಲೆಮೊಲೆ |
ಗನುರಾಗದಿ ಕಂಚುಕಮಂ ಕಟ್ಟುವ ಸೈಪೆನಗೆಮದಹುದೊ || ೩೮ ||

ಎನುತಾಸೌಂದರಿ ಚಿಂತಿಸುತೆಳಲತೆ | ಯನಿಲನ ಸೋಂಕಿಂದಲರ ತೊಡಂಬೆಯ |
ನಿನಿಸುೞಿಯದೆ ಬಿದಿರ್ವಂದದಿ ಮಣಿದೊಡವೆಲ್ಲವನೀಡಾಡಿ ||
ಮನಸಿಜಮಂತ್ರಾಕ್ಷರಮಂ ಬಳಪದಿ | ನನುರಾಗದಿ ಬರೆಯಲ್ಪೊಂಬಲಗೆಗೆ |
ಮಿನುಗುವ ಮಸಿಯಿಡುವಂದದೆ ನೊಸಲೊಳ್ ಮೃಗಮದಮಿಕ್ಕಿದಳು || ೩೯ ||

ಇಂಗೋಲ್ವಿಲ್ಗಿಕ್ಕಿದ ಗವಸಣಿಗೆಯ | ಭಂಗಿಯವೊಲ್ ಬಿಳಿದಂ ಪೊದೆಯುತ ಬೆ |
ಳ್ದಿಂಗಳ ಹಕ್ಕಿಯ ಮಱಿ ಚಟುಲತೆಯುೞಿದಂದದಿ ಕಣ್ಮುಚ್ಚಿ ||
ಅಂಗನೆ ಮಿಸುಪಂಭೋರುಹದೆಲೆಯೊಳು | ಪಿಂಗದೆ ಮೆಯ್ಯಿಕ್ಕಿದ ಪೆಣ್ಣಂಚೆಯ |
ಪಾಂಗಿಂ ಪೊಸಪಸುರ್ವಟ್ಟೆಯ ಮೆಲ್ವಾಸಿನ ಮೇಲೊಱಗಿದಳು || ೪೦ ||

ಉಡುಪಾನನೆಗಿಂತೆಯ್ದಿದ ನೋವವ | ಳಡಪ ಡವಕೆ ಕೈಪಿಡಿ ಕೌಳುಡೆ ತೊಡ |
ವುಡಿಗೆ ಚಮರ ಸೀಗುರಿ ಬಿಜ್ಜಣ ಮುಡಿವೂ ಕರಗಂಬೊತ್ತ ||
ಮಡದಿಯರ್ಗಂ ದೀವದ ಖಗಮೃಗಕಂ | ಬಿಡದಡಸಿತು ತರುಮೂಲಮನೊಂದಿದ |
ಕಡುನೋವಾಶಾಖಾಸಂತತಿಗಿರದೆಯ್ದುವ ಮಾೞ್ಕೆಯೊಳು || ೪೧ ||

ಆವೇಳೆಯೊಳಾಕೆಯ ನಿಜಸಖಿ ಪ | ದ್ಮಾವತಿಯೆಂಬವಳರಸನೆಡೆಗೆ ಬಂ |
ದಾವಾರ್ತೆಯ ಪೇೞಲ್ ಮೊೞಗಂ ಕೇಳ್ದರಸಂಚೆಯ ತೆಱದಿ ||
ಆವರಿಸಿದವಸ್ಥೆಯೊಳಿರದೆಯ್ತಂ | ದಾವಧುವಿನ ಗೃಹಕೆಯ್ದಿ ಮುಸುಂಕಿದ |
ಧಾವಳ್ಯಾಂಬರಮಂ ತೆಗೆದೆಂ ಸ್ಮರನಸಿಯೊಱೆದೆಗೆದಂತೆ || ೪೨ ||

ಅಂಗಜಫಣಿ ಹೆರೆಯಂ ಬಿಸುಟಂದದಿ | ಪಿಂಗಿಸಿ ಮೆಯ್ಯ ಮುಸುಕನಾಕನಕಲ |
ತಾಂತಿ ಪತಿಯ ನಿಜವದನಮನೀಕ್ಷಿಸೆ ತುಱುಗೆವೆಗಣ್ಬೊಣರು ||
ಭೃಂಗಮಿಥುನಮಂಭೋರುಹದೊಳಗೆ ಮ | ಲಂಗಿ ಬೞಿಕ್ಕಾನಿದ್ರೆ ತಿಳಿಯೆ ಪ |
ಕ್ಷಂಗೆದಱುವ ಭಂಗಿಯ ಕಡುಚೆಲ್ವಂ ನೆನೆಯಿಸುತೊಪ್ಪಿದುವು || ೪೩ ||

ಇನಿಯನ ಮೊಗಮಂ ಕಾಣುತ ಮುತ್ತುಗ | ಳನಿಮಿಷದೊಳ್ ಸಂಜನಿಸುವುದಂ ಜನ |
ಜನಿತಂ ಮಾಡುವ ತೆಱದಿಂ ಕಣ್ಗಳೊಳಶ್ರು ಜನಿಸಲಾಗ ||
ಮನದೞ್ಕಱಿನುಗುರ್ಗೊನೆಯಿಂ ಮಿಡಿಯುತ | ತನಯಂ ಹುಟ್ಟುವ ಹರೆಯಂ ಬಾಲಿಕೆ |
ನಿನಗಿನ್ನುಂ ಸಾಲದು ಬಱುಬೇವಸವೇಕೆಂದುಸಿರುತಿರೆ || ೪೪ ||

ಅನಿತಱೊಳಿಂತೆಂದೊಂದಶರೀರ | ಧ್ವನಿ ಕೇಳಲ್ ಬಂದತ್ತೆಲೆ ವನಜಾ |
ನನೆ ನೀನಾಲಿಸುವುದು ಪದ್ಮಾವತಿ ಗಿಳಿಯಂದಂಬಡೆದು ||
ನಿನಗೆ ತನೂಭವದೋಹಳಮಂ ತಾ | ನನುಗೊಳಿಸಿದುದಿದು ನಿಕ್ಕುವಮೊರ್ವಂ |
ಜನನುತನುದಯಿಪನೆನಲಾಸತಿ ಸುಖಮಿರೆ ದಿನವೊಂದಱೊಳು || ೪೫ ||

ಕಡುಸೊಗಯಿಸುವೀಕುಸುಮದಫಲಮೇ | ಪೊಡವಿಯನೆಲ್ಲಮನೊಂದೇ ತೋಳೊಳ್ |
ಗಡಣದಿ ಧರಿಯಿಪುದಪ್ಪುದು ನಿಶ್ಚಯಮದಱಿಂದೀಧರೆಯಾ ||
ಬಡವರೊಳಗೆ ಬಡವಂ ನಾನದನೇಂ | ತಡೆಯಲ್ಕೆ ಸಮರ್ಥನೆಯೆನುತಂ ನಡ |
ನಡುಗುವವೊಳ್ ನಡುಕೊಡೆದುದು ಋತುಸಮಯದೊಳಾನೃಪಸತಿಗೆ || ೪೬ ||

ಮೊಡವಿ ಜನಿಸಿದುವು ಮೊಗಮೆಂಬಿದುವಿ | ನೊಡಲಾಲದ ಪಣ್ಮಿನುಗುವವೊಲ್ ಮೆ |
ಯ್ವಿಡಿದನುರಾಗರಸವೆ ಪೊಱಪೊಣ್ಮಿದುದೆನೆ ಮಾಣಿಕಗಂಡ ||
ಬಡನಡುವಿನ ಭಾಮಿನಿ ತಳಿರ್ಗೈಯೊಳ್ | ಪಿಡಿದಪರಂಜಿಯ ಸೆಳೆಯಲರ್ವಿಲ್ಲನ |
ಪಡಿಯಱತಿಯ ಕೈಯೊಳಗೊಪ್ಪುವ ಸೆಳೆಯಂತೆ ವಿರಾಜಿಸಿತು || ೪೭ ||

ಮಿಱುಗುವ ಮಾಣಿಕದೊಡವಿಂ ಮುಡಿಯೊಳ್ | ತುಱುಬಿದ ಚೆಂಗಣಿಗಿಲೆಯೊಳ್ಳರಲಿಂ |
ನಿಱಿವಿಡಿದುಟ್ಟರುಣಾಂಬರದಿಂ ಪೂಸಿದ ಕುಂಕುಮದಣ್ಪಿಂ ||
ಮೆೞೆದಳ್ಕೆಂಕಕಂಬಡೆದೊಸೆದಾರತಿ | ಯೆಱೆಯಂ ಪೂಜಿಪಂ ಕೆಂಗಲ್ಗರುವಿನ |
ತೆಱನೆನೆ ಯುವತಿ ಕಲಾವತಿ ಸಿರಿಯಿಂದಾಲಕ್ಷ್ಮಿಗೆ ಸವತಿ || ೪೮ ||

ಬೞಿಕಾನನಚಂದ್ರಮನ ಕಳಂಕಂ | ಕಳೆವಂದದಿ ಪಲ್ಲಂ ಸುಲಿದೆಳಲತೆ |
ಯೆಳಸಿ ಮೞೆಗೆ ಮೆಯ್ಯೊಡ್ಡುವವೋಲ್ನಾಲ್ಪಗಲಿನ ನೀರ್ಮಿಂದು ||
ಮಲಯಜಮಿಕ್ಕಿ ಮುಡಿದು ಮಲ್ಲಿಗೆಯಂ | ಬಿಳಿದುಟ್ಟೋರಾಣಿಯ ಮುತ್ತಂ ತೊ |
ಟ್ಟೆಳಮಿಂಚಿಂ ಕಂಡರಿಸಿದ ಕಾಂತೆಯೆನಲ್ಕಡುಸೊಗಸಿದಳು || ೪೯ ||

ಈ ವಿಧದಿಂ ಕೈಗೆಯ್ಥಾಸತಿಯಿರೆ | ಹೂವಿನ ಹೊತ್ತೊಳಗಾದಪರದಿಶಾ |
ದೇವಿಯನೋವದೆ ಸೋಂಕಿ ದಿನಂ ತನ್ನ ಶುಚಿತ್ವಮನಿರದೆ ||
ಆ ವನಧಿಯೊಳಲೆವಂದದಿನಗುೞಲ್ | ತೀವಿದ ರಾತ್ರಿಯೊಳವನೀನಾಥಂ |
ಜಾವಗಳಿಯಲೋಲಗಮಿರ್ದೆಯ್ದಿದನಾಶಯ್ಯಾಗೃಹಕೆ || ೫೦ ||

ಇದು ಕಲ್ಲೆನುತುವೆ ಭೇದಿಸಬಾರದ | ಸದಮಲಮಪ್ಪ ನವಾಕಾಶಸ್ಫಟಿ |
ಕದ ಪಾವುಗೆಯಂ ಮೆಟ್ಟುತ್ತೆಱೆಯನ ಸೆಜ್ಜೆವನೆಗೆ ಬರ್ಪ ||
ಸುದತೀಮಣಿ ರಂಜಿಸಿದಳ್ ನೆಲದೊಳ್ | ಮೃದುಪಾದವನಿಡೆ ನೋವುದೆನುತ ಕಡು |
ಚದುರಿಂದಂಬರಚರವಿದ್ಯಂಬಡದೆಯ್ದುವ ತೆಱನಾಗಿ || ೫೧ ||

ಬರುತಾಬಲ್ಲಹನೇಱಿದ ಗಾಲಿಯ | ಸರದ ಶಕುನಿಮಂಚದ ಮೇಲತಿಬಂ |
ಧುರಬಹುಕುಸುಮದೆಸೞ ಪಚ್ಚಡಿಕೆಯಿನೊಪ್ಪಂಬಡೆದಿರ್ಪ ||
ಅರಸಂಚೆಯ ಕಿಱುದುಪ್ಪುೞುವಾಸಂ | ಹರಿಸದಿನೇಱಿದಳಂಗೋದ್ಭವನಡ |
ರ್ದರಗಿಳಿ ಹೂಡಿದ ಹೂದೇರೇಱುವ ರತಿಯೆಂಬಂದದೊಳು || ೫೨ ||

ನಿಟ್ಟಿಪ ಬಾಕುಳಗಣ್ಗಳ ರುಚಿಯೊಡ | ವುಟ್ಟದ ಕಾತರದಿಂ ಮಿಸುನಿಯ ಕರು |
ತೊಟ್ಟನೆ ಹೊನ್ನಾಳದ ಕೈದಂ ಪಿಡಿವಂದದಿನಮರ್ದಪ್ಪಿ ||
ಕೊಟ್ಟು ಕುಡುಕುದಂಬುಲಮಂ ಸವಿಯಂ | ತಟ್ಟುವ ತನಿಗಲೆಯುಪಚರದಿಂ ಮನ |
ಮುಟ್ಟಿ ಕರಂ ಕೂಡಿದರಂಗಭವಂ ಮಿಗೆ ಮೆಚ್ಚುವ ತೆಱದಿ || ೫೩ ||

ಸುರತಸುಖದ ಸೊಕ್ಕೇ ಬಲಿದಂದದೊ | ಳಿರುತುಂ ನಿದ್ರೆಯೊಳಾಸತಿ ಹರಿಸುರ |
ಕರಿಶಶಿಶರನಿಧಿಯಂ ತಾಂ ಕನಸಿನೊಳಗೆ ಕಾಣ್ಬನಿತಱೊಳು ||
ಕರಮೆಸೆವಾದಿವವೆಂಬ ಮಹೇಶ್ವರ | ನಿರುಳೆಂಬಂಗಜನಂ ಮರ್ದಿಪನೆನು |
ತುರವಣೆಯಿಂದೆ ತೆಱೆದ ಕಣ್ಣೆನೆಯುಷ್ಣಾಂಶುವುದಯಿಸಿದುದು || ೫೪ ||

ಸುಸ್ವಪ್ನಂಗಾಣುತ ಮಂಗಲಗೀ | ತಸ್ವನಮಂ ಕೇಳ್ದಾಭೂವರನ ಮ |
ನಸ್ವಿನಿ ತತ್ಪತಿಯೊಡನೆೞ್ದು ಮೊಗಂದೊಳೆದತಿಹರ್ಷದೊಳು ||
ಅಸ್ವಪ್ನೇಶಾರ್ಚಿತಗೆ ಮಣಿದು ಕಾ | ರ್ತಸ್ವರಲಲಿತಾಭರಣವನಿಟ್ಟು ಪಿ |
ಕಸ್ವರದಿಂದಾತನೊಳಾಕನಸಿನ ತೆಱನಂ ಪೇೞಿದಳು || ೫೫ ||

ಕೇಳಿ ಮಹೀಪಾಲಕನಿಂತೆಂದಂ | ಬಾಲಿಕೆ ತತ್ಸ್ವಪ್ನದ ಫಲದಿಂ ಭೂ |
ಪಾಲಶಿಖಾಮಣಿಯಪ್ಪ ಸುತಂ ಜನಿಯಿಸುವಂ ನಿನಗೆಂದು ||
ಲೀಲೆಯೊಳುಸಿರಲು ಕೇಳ್ದತಿಹರ್ಷಂ | ದಾಳಿ ಸುಖದೊಳಿರುತಿರಲಾವಾರ್ತೆಯಿ |
ನಾಲಲಿತಾಂಗಿಯ ನಡುವಿನ ಕಡುದಾರಿದ್ರ್ಯಂ ಪಿಂಗಿದುದು || ೫೬ ||

ಬಸಿಱೊಳಗಣ ಬಾಲನ ಕೀರ್ತಿ ಕರಂ | ಮುಸುಕಿದುದೆನೆ ಬೆಳ್ಪಾಯಿತು ವದನಂ |
ಹಸುಳೆಯುಣಲ್ಬೇಕೆನುತರವಿಂದಭವಂ ಪೊಂಗಳಸದೊಳು ||
ಲಸಿತಾಮೃತಮಂ ತೀವಿ ಬೞಿಕ ರಂ | ಜಿಸುವರಗಿನ ಮುದ್ರೆಯನಿಟ್ಟಂದದಿ |
ನಸಿತರುಚಿಯನಾಂತುದು ಕುಚಚೂಚುಕಮಾನವಗರ್ಭಿಣಿಗೆ || ೫೭ ||

ಅಂಗನೆಯಂಗದ ಕಾಮಂ ಮುನ್ನಿನ | ನಂಗತೆಯಂ ಪರಿಹರಿಸಿ ಬೞಿಕ ದಿ |
ವ್ಯಾಂಗಂದಳೆದೊಪ್ಪಂಬಡೆದಂದದಿನಾನೃಪವರಸೂನು ||
ಹಿಂಗದೆ ಲಾವಣ್ಯಂದಳೆದೆಸೆದು | ತ್ತುಂಗಪಯೋಧರಯುಗಳೆಯ ಬಸಿಱೊಳು |
ತಿಂಗಳದೊಂಬತ್ತಪ್ಪನ್ನೆವರಂ ಬಳೆದು ಬಲಿದನಂದು || ೫೮ ||

ಅಸಮಾಸ್ತ್ರನನಾಶುಭದಿನದೊಳಗಾ | ಬಸದಿಯಣುಗಿಯೊಲವಿಂ ಪಡೆವಂದದಿ |
ಶಿಶುವಂ ಶಶಿಮಂಡಲಲಲಿತಾನನೆಯುರುಮುದದಿಂ ಪೆತ್ತ ||
ಒಸಗೆಗಳಾಪುರದೊಳಗೆೞ್ದುವು ಪಲ | ಪಸುರ್ದೋರಣ ಪೞಿಗುಡಿ ಸಂತಸವಱೆ |
ಪೊಸಮುತ್ತಿನ ಬಣ್ಣವುರಂ ಮನೆಮನೆದಪ್ಪದೆ ಶೋಭಿಸಿತು || ೫೯ ||

ಬಸದಿಯನೆಯ್ದಿ ಬಹುಳವೈಭದಿಂ | ದಸಮಾಸ್ತ್ರಾರಿಯ ಪೂಜೆಯ ನೆಱೆ ಸಂ |
ತಸದಿಂ ಮಾಡಿಸಿ ಪಾೞೆನಿಸಿ ಕರಂ ಕಾರಾಗಾರವನು ||
ವಸಥಕ್ಕೆಯ್ದಿ ಮಗನ ವದನಮನೀ | ಕ್ಷಿಸಿಯೆರೆವರ್ಗಮರಮಹೀರುಹದಂ |
ತೊಸೆದಿತ್ತಂ ರಾಜಪ್ರಭರಾಜಂ ರವಿಸನ್ನಿಭತೇಜಂ || ೬೦ ||

ಆ ರಾಜಪ್ರಭದೇವಂ ತನ್ನ ಕು | ಮಾರಂ ದ್ವಿಟ್ಕುಲಮಂ ಜಯಿಸುವನೆಂ |
ದಾರಯ್ಯುತ ಲಗ್ಗಿಗರುಸಿರಲು ಕೇಳುತ್ತೈವಗಲಾಗೆ ||
ರಾರಾಜಿಪ ಜಯವೆಸರಂ ವಿಕ್ರಮ | ಕೌರವಸೆರಂ ಮನಮೊಸೆದಿತ್ತಾ |
ಧಾರಿಣಿ ಪೊಗೞ್ವಂತೆವೊಲುತ್ಸಾಹದಿ ತೊಟ್ಟಿಲ್ದುಂಬಿಸಿದಂ || ೬೧ ||

ಅರೆವಿರಿದರವಿಂದೋದರದೊಳಗೆಳೆ | ಯರಲುಣಿಯಲರ್ಗೊಳದಮಳ್ದೆರೆಯೆಡೆಯೊಳ |
ಗರಸಂಚೆಯ ಮಱಿ ಮಣಿಪಂಜರದೊಳು ರಾಯಗಿಳಿಯ ಹಸುಳೆ ||
ಪಿರಿದುಂ ರಾಜಿಸುವಂದದಿನೊಪ್ಪುವ | ಬೆರಕೆವರಲೊಳನುಗೊಳಿಸಿದ ತೊಟ್ಟಿಲೊ |
ಳರಸುಮಗಂ ಬಳೆದಂ ಮಿಗೆ ಸೊಗಯಿಸುತುಂ ತನ್ನೆಳವೆಯೊಳು || ೬೨ ||

ಕಾಮಂ ಕಱೆಗೊರಲನಿನೞಿದಂ ಮ | ತ್ತೀಮೊಃನರಾಜ್ಯಕ್ಕಾರಿಲ್ಲೆಂ |
ದಾಮಧುವಿಧುಮಾರುತರರ್ಚಿಸಿ ಬಿಟ್ಟಾಪಟ್ಟದ ಹಸ್ತಿ ||
ಈ ಮಹಿಗರ್ಹನಿವಂ ತಾನೆನುತಂ | ಪ್ರೇಮದಿನೆತ್ತಿ ತಲೆಯನೇಱಿಸಿದಂ |
ತಾಮಗುವಂ ಮದವತಿಯರು ಕುಚಕುಂಭಕ್ಕೊಲಿದೆತ್ತುವರು || ೬೩ ||

ಹೊಸಹೊಂಬಣ್ಣದ ಹೊಗರಂ ಸೋಲಿಸಿ | ಮಿಸುಪಂಗೋಪಾಂಗದೊಳಿಕ್ಕಿದ ಪಲ |
ಪಸದನದರುಣರುಚಿಯ ಮಣಿದೀಧಿತಿ ಜಲಜಲಿಸುತ್ತಿರಲು ||
ವಸುಧಾಧೀಶನ ಸುಕುಮಾರಂ ಮನ | ಮೊಸದೆೞಗನ ಬೆನ್ನೇಱಿ ಕರಂ ರಂ |
ಜಿಸಿದಂ ಬಾಲಸಮೀರಸಖನ ಭಂಗಿಯನಂಗೀಕರಿಸಿ || ೬೪ ||

ಪಾಡಿವದೆಳವೆಱಿ ಪುಣ್ಣಮಿವರೆಗಂ | ರೂಡಿಸಿ ದಿನದಿನದಪ್ಪದೆ ಕಲೆಯೊಳ್ |
ಕೂಡಿ ಬಳೆದು ಕುವಲಯಕತ್ಯಾನಂದಮನೀವಂದದೊಳು ||
ನಾಡೆಱೆಯನ ಸುಕುಮಾರನೆಳವೆಯಿಂ | ಷೋಡಶವರ್ಷಂಬರಮತಿಹರ್ಷದಿ |
ಗಾಡಿಯಿನೆಲ್ಲಾವಿದ್ಯದ ಕಲೆಯೊಡವೆರೆದು ವಿರಾಜಿಸಿದಂ || ೬೫ ||

ಒಡನುಣ್ಣೊಡನುಟ್ಟೊಡನೆ ತೊಡಂದೊ | ಟ್ಟೊಡನಿರದಾಡಿಯೊಡನೆ ಹೊಸಹರೆಯಂ |
ಬಡೆದ ಕೆಳೆಯರಿಂ ಕುಕ್ಕುಟಮಲ್ಲಮಹಿಷಮೇಷಂಗಳನು ||
ಗಡಣದಿ ಕಾದಿಪ ಬಿನದದಿನೋವದೆ | ಪೊಡವಿಱೆಯನಣುಗಿನ ಸುಕುಮಾರಂ |
ಸಡಗರದಿಂ ಸಲೆ ಸಂಪದದೊಳ್ ದಿನಂ ನೂಂಕುತ್ತಿಹನು || ೬೬ ||

ಕದಿರೇಱಿದ ಕಂಜಾತಪ್ರಿಯನಂ | ಪದೆದೀಕ್ಷಿಸುವಿನಕಾಂತದ ಕಲ್ಲೊಳ |
ಗುದಯಿಪ ಹಗ್ಗಿಯವೊಲ್ ಶಿಶುತನವುೞಿದೇಱುಂಜವ್ವನವ ||
ವಿದಿತಮೆನಲ್ಪಡೆದರಸುಮಗನ ನಿಜ | ವದನಂಗಾಣುತ ವನಿತಾನೀಕದ |
ಹೃದಯದೊಳಂಗೋದ್ಭವಪಾವಕನತಿಭರದಿಂ ಜನಿಯಿಪುದು || ೬೭ ||

ಚರಮಶರೀರಂ ಚತುರಕಲಾಬಂ | ಧುರನುನ್ನತನಪಗತನೀಹಾರಂ |
ಸುರುಚಿರವಜ್ರವೃಷಭನಾರಾಚೋಪಮವರಶಕ್ತಿಯುತಂ ||
ತರುಣೀಜನನವಮದನಂ ಕಾರಣ | ಪುರುಷಂ ಕಣ್ಗೆಡ್ಡಂಬಡೆದಂ ಭೂ |
ವರಕುಲಚೂಡಾಮಣಿ ಜಯನೃಪನಾಧೇಯನಮಲಮೂರ್ತಿ || ೬೮ ||

ಗೊಂದೆಗಳಂ ಕಾಯದ ಗೋವಿಂದಂ | ಕಂದುಗೊರಲನಲ್ಲದ ಮಾದೇವಂ |
ಚೆಂದಂಗೆಡದೈಗಣೆಯಂ ನಾಲ್ದಲೆಯಾನದ ವಾಣೀಶಂ ||
ಕುಂದದ ಕುಳಿರ್ಗದಿರಂ ಪಲಗಣ್ಮೆ | ಯ್ಗೊಂದದ ಪೂರ್ವದಿಶಾಧೀಶ್ವರನೆಂ |
ಬಂದದಿನತಿವಿಭ್ರಾಜಿಸಿದಂ ರಾಜಪ್ರಭರಾಜಸುತಂ || ೬೯ ||

ಸತಿಯರೊಳಾಹವದೊಳು ಪರಿಜನಸಂ | ತತಿಯೊಳು ಚರಿತದೊಳೆಸೆವ ಬಿನದದೊಳು |
ಸತತಂ ಗುರುವಿನೊಳನ್ಯವಧುಗಳೊಳು ದುಷ್ಟಪ್ರಕರಣದೊಳು ||
ನತಜನಪಾಲಕನಿಕುರುಂಬದೊಳು | ನ್ನತಿಕೆವಡೆದ ನವನವರಸರುಚಿರ |
ಪ್ರತಿಮೆಯ ತೆಱದಿ ವಿರಾಜಿಸಿದಂ ವಿಕ್ರಮಕೌರವರಾಜಂ || ೭೦ ||

ಶ್ರೀಮದ್ಗುಣನಿಲಯನೆನಿಪ್ಪಾಜಯ | ಭೂಮೀಶ್ವರನಂತದೊಳು ಮತ್ತಾ |
ಸೋಮಪ್ರಭರಾಜಂಗಂ ಕೈರವಲೋಚನೆ ಸೌಂದರಿಗಂ ||
ಪ್ರೇಮದಿ ವಿಜಯಜಯಂತರೆನಿಪ ಗುಣ | ನಾಮದ ಸುಕುಮಾರರ್ಜನಿಯಿಸಿಯು |
ದ್ದಾಮತೆವೆತ್ತು ಬಳೆದು ಬೞಿಕೇಱುಂಜವ್ವನಮೆಯ್ದಿದರು || ೭೧ ||

ಅಲರ್ವೊಡೆಯನೊಳಂಬುಜಪುತ್ರನೊಳೈ | ದಲೆಯಂ ಪಿರಿದನುರಾಗಂಮಾೞ್ಪಂ |
ತಲಘುಭುಜಂ ವಿಜಯಜಯಂತಾವರಜರೊಳಿನಿಸುಂ ಬಿಡದೆ ||
ಸಲೆ ನೇಹಂಬಡೆದೆಸಕಂಬಡೆದಂ | ಲಲನಾಜನಸುಮನಶ್ಚಾಪಂ ಶಶಿ |
ಕುಲದೀಪಂ ಸರಸಕಲಾಪಂ ಸತ್ಕುಲಮಣಿಜಯಭೂಪಂ || ೭೨ ||

ಇನಿಸುಂ ಸ್ನೇಹಾಶಾವಶನಾಗದೆ | ಘನಪಾತ್ರಾಪೇಕ್ಷೆಯನೇ ಮಾಡದೆ |
ವಿನುತದಶೆಯೊಳೊಂದದೆ ತಾನನುಚಿತರುಪಹತಿಯಿಂ ಕಿಡದೆ ||
ಅನುಪಮತೇಜಃಪ್ರಸರಂಗುಂದದೆ | ಜನಸಂಸ್ತುತಸಜ್ಜಾತಿಯುತಂ ಸಂ |
ಮನದಿ ಸದಾಲೋಕಹಿತಂಗೆಯ್ದಂ ಪ್ರಭುಕುಮಣಿದೀಪಂ || ೭೩ ||

ಇದು ಸುರನರಫಣಿಪರಿವೃಢನಿಯಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸಂ | ಮುದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಂ ಪಡೆದತ್ತೆರಡನೆಯ ಮಿಸುಪ ಸಂಧಿ || ೭೪ ||

ಎರಡನೆಯಸಂಧಿ ಸಂಪೂರ್ಣಂ