ಸೂಚನೆ || ಬನದೊಳ್ವಿದ್ಯಾಮುದ್ರಿಕೆಯಂ ಕಂ |
ಡನಿಲಪಥಂಬಿಡದೆಯ್ದಿಯದೃಶ್ಯದಿ |
ನನಿಮಿಷನೇತ್ರೆಯನೀಕ್ಷಿಸಿದಂ ಸ್ಮರರೂಪಂ ಜಯಭೂಪಂ ||

ಬರುತಾಕಾಶೀವಿಷಯದೊಳತಿಬಂ | ಧುರಬಹುಕುಸುಮಲತಾಸ್ಪದವಿಲಸ |
ತ್ತರಣಾಶೋಕವನಂಗಂಡಾಯೆಡೆಯೊಳ್ ಬೀಡಂ ಬಿಡಿಸಿ ||
ಹರಿಸದಿ ತನ್ನ ಸಖಂ ಶ್ರೀಮತಿಯಿಂ | ಬೆರಸಾವನದ ವಿಲಾಸಮನೀಕ್ಷಿಸು |
ತರಸುಮಗಂ ನಡೆದಂ ಮದನಂ ಮಧುಗೂಡಿ ನಡೆವ ತೆಱದಿ || ೧ ||

ಪನಿನೀರ್ವರಿವೊನಲೆರಡುಂ ಕಡೆಯೊಳ | ಗೆನಸುಂ ಬೀಗಿ ಬೆಳೆದ ನವಘುಸೃಣದ |
ಘನಸಾರದ ಪೊಸಕಾಡೊಳಗಾಡುವ ಕತ್ತುರಿವುಲ್ಲೆಗಳ ||
ಬಿನದಿಪ ಹಸುಳೆಜವಾದಿಯ ಮಿಗಗಳ | ನನುರಾಗದಿ ನೋಡುತ ಬಿಜಯಂಗೈ |
ವನಿತಱೊಳೊಂದು ನವೀನಕುಸುಮಮಂಡಪಮಿರಲೀಕ್ಷಿಸಿದಂ || ೨ ||

ಇದು ರತಿರಾಜಸಭಾಸದನಂ ಮ | ತ್ತಿದು ಮನಸಿಜಮೋಹನಮಂತ್ರಾಲಯ |
ಮಿದು ಗಾಳಿಯ ಗುಣದಾಗರಮಿದು ತುಂಬಿಯ ಜೇವಣಸಾಲೆ ||
ಇದು ರತಿ ನರ್ತಿಪ ನಾಟಕಗೃಹಮಿಂ | ತಿದು ರಸಿಕರ ಕಾರಾಗಾರಂ ತ |
ಪ್ಪದೆನಲ್ಚದುರರ ಚಿತ್ತಂಗೊಳಿಸಿದುದಾಲತಿಕಾಸದನಂ || ೩ ||

ಅದಱೊಳ್ವಿದ್ಯಾಧರಮಿಥುನಂ ಕೂ | ಡಿದುದನರಸನೊಳ್ಪಿಸುಣಾಡುವವೋ |
ಲೈದರ್ದ ಕಬರಿಯ ಮುಗುಳ ಸೂಸಿದ ಪೊಸಗಪ್ಪುರದಂಬುಲದ ||
ಉದಿರ್ದಂಗದ ಬಾವನ್ನವುಡಿಯ ಸೊಗ | ಸೊದವೆ ರಮಿಸಿದಾನವಸೌಗಂಧಕೆ |
ಪದೆದೆಱಗುವ ಪೊಸಪಱಮೆಗಳ ಪಸುಳೆಯಿಂಚರಮೊಪ್ಪಿದುವು || ೪ ||

ಮತ್ತದಱೊಳ್ಮಣಿಮುದ್ರಿಕೆಯೊಂದೆಸೆ | ಯುತ್ತಿರೆ ಕಂಡದನಾಜಯಭೂವರ |
ನೆತ್ತಿ ಕರಾಂಗುಲಿಯೊಳಗಿಟ್ಟಲ್ಲಿಂ ಮುಂದಕೆ ನಡೆಯುತಿರೆ ||
ಚಿತ್ತಜನಿಭಖೇಚರನೊರ್ವಂ ನಭ | ದತ್ತಣಿನಿೞಿದಾ ಬೞಿಯೊಳಗದನಱ |
ಸುತ್ತಿರೆ ಕಂಡಾತನದೆಂದಾಮಣಿಮುದ್ರಿಕೆಯಂ ಕೊಟ್ಟಂ || ೫ ||

ಅದನೀಯಲ್ಮೆಚ್ಚುತ್ತಾಕಚರಂ | ಮದನನಿಭಂಗಿಂತೆಂದನೆಲೇ ವಿಭು |
ವಿದು ನೆನೆದಾಕಾರಂಮಾಡುವ ಘನಪಥದೊಳ್ಗಮಿಯಿಸುವ ||
ವಿದಿತಲಸದ್ವಿದ್ಯಾಮಣಿಮುದ್ರಿಕೆ | ಯಿದನವಧಾರಿಸು ನೀನೆನುತವೆ ಸಂ |
ಮದದಿಂ ಕೊಟ್ಟು ಬೞಿಕ ಖೇಚರನಾಗಸಕೆ ನೆಗೆದನಿತ್ತ || ೬ ||

ಶ್ರೀಮತಿಸಚಿವನೊರೆದನಿಂತೆನುತಾ | ಭೂಮೀಶಂಗೆಲೆ ನೃಪಕುಲತಿಲಕ |
ಶ್ಯಾಮೆ ಸುಲೋಚನೆಯಂ ನಿನ್ನೀಚೆಲ್ವಿಂ ವಶಮಾಡುವೊಡೆ ||
ಈಮಣಿಮುದ್ರಿಕೆ ನಿನಗಾಯ್ತೇೞೆನ | ಲಾಮಾತಂ ಕೇಳ್ದವನೊಡಗೂಡಿ ನ |
ಭೋಮಾರ್ಗಕೆ ನೆಗೆದಾವಾರಣಸಿಗೊಲವಿಂದೆಯ್ದಿದನು || ೭ ||

ಜಲರುಹನಯನೆ ಸುಲೋಚನೆಯಲ್ಲದೆ | ಯುೞಿದವರಾರುಂ ಕಾಣದ ರೂಪಂ |
ತಳೆದಾಸಖನಂ ಕುವರಿಯ ಮಣಿಮಯಹರ್ಮ್ಯದ ಮೇಲಿರಿಸಿ ||
ಬೞಿಕತ್ಯಾತುರದಿಂದೊಳಪೊಕ್ಕಂ | ಲಲಿತಾಂಗಂ ನಿಜಸತಿರತಿಯಲ್ಲದೆ |
ಯಿಳೆಯ ಜನದ ಕಣ್ಗೆಯದೃಶ್ಯಂದಳೆದಲರ್ವಿಲ್ಲನ ತೆಱದಿಂ || ೮ ||

ಈತೆಱದಿಂ ಬಂದೊಳಪುಗುತವೆ ನಿಂ | ದಾತೋಯಜಗಂಧಿಯನಭಿನವಕಲ |
ಧೌತಕನತ್ಕಮಲಾನನೆಯಂ ಕೋಕನದಲಸತ್ಪದೆಯಂ ||
ಶ್ವೇತಸರೋಜವಿಲೋಚನೆಯಂ ವನ | ಜಾತಲಲಿತಕುಟ್ಮಲಕುಚೆಯಂ ವಿ |
ಖ್ಯಾತವಿರೋಚನನಿಭತೇಜಂ ಮನಮೊಸೆದು ನಿರೀಕ್ಷಿಸಿದಂ || ೯ ||

ನಿಟ್ಟೆಸೞ್ಗಣ್ಗಳ ನಿಱಿಗುರುಳಬಲೆಯ | ಬಟ್ಟನೆಸೆವ ಬಲ್ಮೊಲೆಯೆಂಬೆರಡುಂ |
ಬೆಟ್ಟದ ತಪ್ಪಲ ನಡುವಣಿಱುಂಬಿನೊಳಡಗಿ ಸುರಭಿಶಸ್ತ್ರಂ ||
ಕಟ್ಟೊಲ್ಮೆಯೊಳೆವೆಯಲುಗದೆ ನೀಡುಂ | ನಿಟ್ಟಿಪ ನೀಱನ ಬಗೆ ಬಾಸೆಯ ಪು |
ಲ್ವಟ್ಟೆವಿಡಿದು ನಡೆಯುತ್ತಿರೆ ಕಾಣಲೊಡನೆ ಕೞ್ಗೊಲೆವೊಯ್ದಂ || ೧೦ ||

ಮತ್ತಾಮದಿರವಿಲೋಚನೆ ತುಱುಗೆವೆ | ಯೆತ್ತಿ ನಿರೀಕ್ಷಿಸಲಾಮೂವಣ್ಣಂ |
ಮುತ್ತಿ ಮನೋಹರಮಾದುದು ಮಾನವಮದನನೆನಿಪ ನೃಪನ ||
ವೃತ್ತವದನವಿಧುಮಂಡಲದೊಡಲಂ | ಪತ್ತಿದ ಕಱೆಯುಂ ಸುಧೆಯುಂ ಪಕ್ವಂ |
ಬೆತ್ತಾಲದ ತನಿವಣ್ಣುಂ ಮಿಗೆ ವಿಭ್ರಾಜಿಸುವಂದದೊಳು || ೧೧ ||

ಅರಮಗನಂ ಕೆಲ್ಲಯಿಸುತ ನೋಡುವ | ತರುಣಿಯ ಕೇಕರರುಚಿ ಕಣಾಂತಂ |
ಪರಿದು ಕರಂ ವಿಭ್ರಾಜಿಸಿದುದು ಸಚರಾಚರಭೂಮಿಯೊಳು ||
ಪಿರಿದುಂ ಚೆಲ್ವಿಕೆಯೊಳು ಚತುರತೆಯೊಳು | ಗುರುವಿಕೆಯೊಳಗೀಯಭಿನವಮದನಗೆ |
ಸರಿಯಪ್ಪವರಂ ಕಾಣೆನೆನುತ ಕಿವಿಯೊಳು ಕಣ್ಣುಸಿರ್ವಂತೆ || ೧೨ ||

ಸಿರಿಮೊಗಮಂ ನಸುಬಾಗಿ ಕರಂ ಭೂ | ವರನಂ ಪುಬೇಱಿಸಿ ನಡೆ ನೋಡುವ |
ತರುಣಿಯ ನಡುಗಣ್ವೆಳಗಾಯೆವೆಯಾಪುರ್ಬನಡರಿ ಪರಿಯೆ ||
ಕರಮೆಸೆದುದು ಕಾಮಂ ಕಿಱುದುಂಬಿಯ | ತಿರುವಂ ಕರ್ವಿಲ್ಗೇಱಿಸುತಿಂದೀ |
ವರನವಕುಸುಮಶಿಳೀಮುಖದಿಂದಿಸುವಂದಮನನುಕರಿಸಿ || ೧೩ ||

ಮಾಸದವೊಲ್ಸಿತಕೃಷ್ಣ ವಿಪಕ್ಷವಿ | ಭಾಸಿ ವಿಬುಧಕುಜದವೊಲಮಲಚ್ಛಾ |
ಯಾಸಂಗತಮಂಬುದದವೊಲೆಸೆವ ಚಪಲತಾಸಮುಪೇತಂ ||
ವಾಸರಭರ್ತಾರನವೊಲರುಣಯುತ | ಮಾಶಾಮುಖದವೊಲಂಜನರಂಜಿತ |
ಮಾಸುಕುಮಾರನನೀಕ್ಷಿಪ ನೀಱೆಯ ನಿಡಿಯಲರ್ಗಣ್ಬೊಣರು || ೧೪ ||

ಅಂಗೋದ್ಭವನತಿಕೋಪದಿನಿಸೆ ಲಲಿ | ತಾಂಗಮನೋವದೆ ತಾಗಿದ ನನೆಯ ಶ |
ರಂಗಳ ಗಱಿಗಳಿವೋ ಎಂಬೊಂದಾಕಾರಮನನುಕರಿಸಿ ||
ಪಿಂಗದೆ ರಾಜವಸಂತನ ನಿಜವದ | ನಂಗಾಣುತ ಕನಕಲತಾಂಗಿಗೆ ಪುಳ |
ಕಂಗಳು ಜುಮ್ಮೆನುತೆೞ್ದು ಕರಂ ಪಡೆದುವು ಪರಿರಂಜನೆಯಂ || ೧೫ ||

ಮುಸುಕಿದ ಬೇಟದ ಬೀಜದಗೆಯ ಬೇ | ರ್ಗಸಮಾಯುಧನೂಡಿದ ನವಮೋಹನ |
ರಸವಾರಿಯ ಕಣಮೋ ಕಾಮಂ ಕಿಱುಸೂಜಿಗೆ ಸೇರಿಸಿದ ||
ಪೊಸಮುತ್ತುಗಳೋ ಎಂಬಂದದೊಳಾ | ಅಸಿಯಳ ಮೆಯ್ಗೂದಲ ಮೊದಲೊಳ್ಮೋ |
ಹಿಸಿದುವು ಸಣ್ಣ ಬೆಮರ ಬಿಂದುಗಳರಮಗನಂ ಕಾಣುತವೆ || ೧೬ ||

ಎಂದುಂ ಬಾರದಿಳಾಧಿಪನಭಿನವ | ಕಂದರ್ಪಂ ಕಾರುಣ್ಯದಿನೀಗಳ್ |
ಬಂದಪನಾವಿರ್ಪ ಗೃಹಕ್ಕೆನುತುಂ ಕಾಣತ್ತಿದಿರೆೞ್ದು ||
ಇಂದೀವರಲೋಚನಪುತ್ರಿಕೆಗಳ್ | ಮಂದೇತರಮುದದಿಂದರ್ಘ್ಯವನೀ |
ವಂದದೊಳಾನಂದಾಶ್ರು ಕರಂ ಕಣ್ಗೊಪ್ಪಿದುವಾಸತಿಗೆ  || ೧೭ ||

ಬಸಿಱಿಂ ಬಲಿದುಕ್ಕುವ ಮೋಹಾಮೃತ | ರಸದ ಬೆಳಂತಿಗೆ ಪರಕಲಿಸಿದುದೋ |
ಕುಸುಮಶರನ ಪೊಸಜಸದ ಬೆಳರ್ಪು ಮುಸುಂಕಿದುದೋ ಎನಲು ||
ಅಸಿತೋತ್ಪಲಲೋಚನೆಯಾನನದೊಳ್ | ಪಸರಂಗೊಂಡು ವಿವರ್ಣಂ ಮಿಗೆ ರಂ |
ಜಿಸಿದುದು ರಾಜಶಶಾಂಕನ ನಗೆಮೊಗಮಂ ನಿಟ್ಟಿಸಲೊಡನೆ || ೧೮ ||

ಇದು ಮೋಹನದೇವತೆಯಾವೇಶದೊ | ಳೊದವಿದ ತೂಳಮೊ ಇದು ಕಾಮಜ್ವರ |
ದುದಯಕೆ ಮುನ್ನನುಕರಿಸಿದ ಶೀತದಿ ಪುಟ್ಟಿದ ಕಂಪನವೋ ||
ಇದು ಗಿಳಿದೇರನ ದಾೞಿಯ ಭೀತಿಗೆ | ಪುದುಗಿದ ನಡುಕಮೊಯೆನಲೊಪ್ಪಿದುದಾ |
ಸುದತಿಗೆ ಸುಕುಮಾರಾಂಗನ ಕುವರನ ಮೊಗಮಂ ಕಾಣುತವೆ || ೧೯ ||

ತರುಣೀಚಕಿತವಿಲೋಚನವಿಲಸ | ತ್ಸರಸಚಕೋರೀಪೂರ್ಣಶಶಾಂಕನ |
ಪರಿರಂಜಿಪ ಲಾವಣ್ಯಜಲಂ ಪರಿಯಲ್ಕವನಂ ನೊೞ್ಪ ||
ಸುರುಚಿರಪಲ್ಲವಪಾಣಿಯ ತನುತನು | ಪಿರಿದುಂ ನಡುಗಿ ಮನೋಹರಮಾದುದು |
ಪರಿವೊನಲೊಳ್ಸಿಲ್ಕಿದ ನವಮೋಹನಲತೆ ಕಂಪಿಸುವಂತೆ || ೨೦ ||

ಮದನಸಮಾನಮನೋಹರರೂಪನ | ಸದಮಲಯುತ ಸಂಪೂರ್ಣಕಲಾಭೃ |
ದ್ವದನಮನತ್ಯಾತುರದಿಂದೆವೆವೊಯ್ಯದೆ ನೀಡುಂ ನೋೞ್ಪ ||
ಮದವತ್ಪಿಕವಾಣಿಯ ಮಧುರಸ್ವರ | ಕೊದವಿತು ಪಲ್ಲಟವಿೞಿದ ವಿಪಂಚಿಯ |
ವಿದಿತಸ್ವರವೊಡೆದಾವಾಸದ ದನಿಗಳ್ ಪಲ್ಲಟಿಪಂತೆ || ೨೧ ||

ಎಸೞ್ಗಣ್ಣಾಡಿದೊಡೆವೆಯಿನಿಸಲುಗಿದೊ | ಡುಸಿರ್ವೊಯ್ದೊಡೆಯುಲುಕಿದೊಡಧರಂ ಮೆ |
ಯ್ನಸು ಮಿಡುಕಿದೊಡೆ ದಿಟದ ಮಾನಿಸೆಯೆಂದೇ ಬಗೆದಂಗಭವಂ ||
ಇಸದೆನ್ನಂ ಬಿಡನೆನುತವೆ ಮರವಾ | ನಿಸೆಯಂದಮನನುಕರಿಸಿದಳೋ ಎನ |
ಲಸಿಯಳ್ ಮೆಯ್ಮಱೆದುಱೆ ಬೆಱಗಾದಳ್ ನೃಪಸುತನಂ ನೋಡಿ || ೨೨ ||

ತಾವರೆಗಣ್ಣಿಂ ತವಕದಿನೀಕ್ಷಿಸಿ | ಭಾವೋದ್ಭವರೂಪನ ಕಡುಚೆಲ್ವಂ |
ಭಾವಕಿ ಪಿರಿದುಂ ಭಾವಿಸಿ ಬೞಿಕಂ ತನ್ನೆರ್ದೆಯೊಳಗಿಟ್ಟು ||
ಭಾವಸುರತಮಂ ಮಾಡಿದ ಸವಿ ಮೆ | ಯ್ದೀವಲ್ಪುಟ್ಟಿದ ಪರವಶವೋ ಎನೆ |
ತೀವಿದುದಾಪ್ರಳಯಂ ಪ್ರಣಯಿನಿಗೆ ಲತಾಂಗಿಸುಲೋಚನೆಗೆ || ೨೩ ||

ಇದು ಚಿತ್ರಂ ನಿರ್ನೆರಮೀಸಾತ್ವಿಕ | ದುದಯಂತಂಗಿಯದೇಕಾಯ್ತೆನುತವೆ |
ಮದನಾವಳಿಯೆಂಬಾಳಿಯಿದೊರ್ವಳ್ ಬೆಸಗೊಳ್ವನಿತಱೊಳು ||
ಸುದತೀಮಣಿಯನಗಲಿಯೆಲರ್ವಟ್ಟೆಗೆ | ವಿದಿತಯಶಸ್ಕಾಂತಂ ತವಕದಿ ಪಾ |
ಱಿದನೆಳಮೊೞಗಂ ಕೇಳ್ದು ಸುಗಿದು ಹಾಱುವ ಹಂಸನ ತೆಱದಿ || ೨೪ ||

ಅನಿತಱೊಳಗೆ ತನ್ನಂ ಕೇಳ್ದಾಳಿಗೆ | ವನಜವದನೆಯಿಂತೆಂದಳ್ ಚಿತ್ರಿಕ |
ವನಿತೆ ಮೊದಲ್ತೋಱಿದ ಚಿತ್ರವೆ ಚೈತನ್ಯಂಬಡೆದಂತೆ ||
ಮನುಜೇಶ್ವರನೊರ್ವಂ ಮನೆಯಂ ಪೊ | ಕ್ಕನುರಾಗದಿ ನಡೆ ನೋಡುತ್ತೆನ್ನಯ |
ಮನಮಂ ತನ್ನ ವಿಲಾಸದ ಬೆಲೆಗುಡುತವೆ ಮಾಱುಂಗೊಂಡಂ || ೨೫ ||

ಎಂಬವಸರದೊಳಗಾಂ ಜನಿಸಿದ ಮನ | ಮೆಂಬ ಮನೆಯನಾತಂ ಮನುಜೇಶ್ವರ |
ನೆಂಬಾದಾಕ್ಷಿಣ್ಯಕೆ ಕೊಟ್ಟುದುಮಲ್ಲದೆ ತನ್ನೋಪವಳ ||
ಇಂಬುವಡೆದ ಚೆಲ್ವಂ ನೆಱೆಕಳ್ದನಿ | ತಂಬಿನಿ ನೀನಲ್ಲಾಯೆಂದೆನುತುಂ |
ಶಂಬರರಿಪು ಕಡುಮುಳಿಸಿಂದೆಚ್ಚನಮಲಶಶಿವದನೆಯನು || ೨೬ ||

ಸ್ಮರನೆಚ್ಚಸುಗೆಯಬುಜದಾಮ್ರದ ಸುರು | ಚಿರ ವಿಚಿಕಿಲದುತ್ಪಲದಲರ್ಗಣೆ ಕ |
ಣ್ಸಿರಿಮೊಗಪೊರ್ಕುೞ್ತೊಡೆಯೆರ್ದೆಯಂ ನಡೆ ನೋಟವೆಣಿಕೆ ಸುಯ್ಲು ||
ಜ್ವರ ಕೃಶವನಶನ ವಿಕಲಂ ಮೌನಂ | ದೊರೆದ ಮಱವೆ ಮರಣೋದ್ಯೋಗಮುಮೆಂ |
ಬೆರಡೈದಱವಸ್ಥೆಗಳೆಯ್ದಿದುವಿನಿಯಂ ತೊಲಗಲ್ಕವಳ || ೨೭ ||

ಅನಿತಱೊಳಲ್ಲಿಂದೆೞ್ದು ಸುಲೋಚನೆ | ಮನಮೊಸೆದೀಕ್ಷಿಪ ಕಡೆಗಣ್ಗಳ ರುಚಿ |
ಯನಿಲಪಥಂಬಿಡಿದೆಯ್ದುವ ಕುವರನ ಬೆನ್ನನಮರಿ ಹರಿಯೆ ||
ಎನಸುಂ ಸೊಗಯಿಸಿದುದು ನರರೂಪದ | ಮಿನುಗವ ಗಾಳಿಪಟಂಬಿಟ್ಟಂಗಜ |
ನನುರಾಗದಿ ಪಿಡಿಯಲ್ಪರಿದೊಪ್ಪುವ ರಜ್ಜುವಿದೆಂಬಂತೆ  || ೨೮ ||

ಬೞಿಕ ಬಲಿದ ಬಹುಚಿಂತೆಯೊಳಾಸ | ದ್ವಿಳಸನ್ಮಧುರಾಧರೆಯಂಗುಷ್ಠವ |
ನಿಳೆಯೊಳ್ ಬಲಿದಭಿನವಹೇಮಾಂಭೋರುಹಮುಖಮಂ ಬಾಗಿ ||
ಬೆಳತಿಗೆಗಣ್ಣೆರಡಱ ಸೋಗೆಗಳಿಂ | ದಿೞಿತಹ ನವಜಲಧಾರಾದ್ವಿತಯಂ |
ತೊಳಗಿದುವಲರ್ಗಣೆಯನ ಮಿಡಿವಿಲ್ಲಮಳ್ವೆದೆಯೆಂಬಂದದೊಳು || ೨೯ ||

ಹಿಂದಣ ಹಿತತನದಿಂದೀವಿರಹದೊ | ಳೊಂದದಿ ಬಲ್ಗಿರ್ಚಿಗೆ ವೇದನೆಯಂ |
ತಂದೆನ್ನಂ ಭಸ್ಮೀಕರಿಸದೆ ತಾಂ ನಿರ್ನೆರಮಿಹುದಲ್ಲ ||
ಎಂದಾವೊಡಲೊಳಗಣ ವಾಯುವನ | ಲ್ಲಿಂದವೆ ಪೊಱಮಡಿಸಿದ ಮಾೞ್ಕೆಯೊಳರ |
ವಿಂದವಿಶಾಲವಿಲೋಚನೆಯಾನಿಡುಸುಯ್ಕರಮೊಪ್ಪಿದುದು || ೩೦ ||

ತಡವಂ ಮಾಡದೆ ತಂದೊಪ್ಪಿಸಿ ಕುಡು | ಕುಡು ನಿನ್ನಯ ಮಱೆವೊಕ್ಕ ಮನೋಜನ |
ನಡಸಿ ಕುಡಲ್ಬೇಕೆನುತವೆ ಪಿರಿದಪ್ಪಾಗ್ರಹದಿಂ ಬಂದು ||
ಕಡುಪಿಂದವೆ ಮೂವಳಸಂ ಮುತ್ತಿದ | ಕುಡುವೆಱೆದಲೆಯನ ಭಾಳಾಂಬಕದುರಿ |
ಸುಡುವಂದದಿನಳುರ್ದುದು ವಿರಹಜ್ವರಮಾಲಲಿತಾಂಗಿಯನು || ೩೧ ||

ಆ ರಾಜಶಿಖಾಮಣಿಯಗಲಲ್ ನವ | ನೀರಜದಳಲೋಚನೆಯಭಿನವಭಾ |
ಗೀರಥಿಯೆನೆ ಸೊಗಯಿಪ ಸತಿಯತಿಕಾರ್ಶ್ಯಂದಳೆದೊಪ್ಪಿದಳು ||
ದಾರುಣವಡೆದ ನಿದಾಘಸಮಯಕಾ | ಸಾರದ ಭಂಗಿಯುಮಂ ಸಿತಪಕ್ಷಂ |
ತೀರಿದ ನಿರ್ಮಲಶಶಿಬಿಂಬದ ಭಂಗಿಯುಮಂ ನೆನೆಯಿಸುತೆ || ೩೨ ||

ಚಾರುಕುಮುದನವಪರಿಮಳಗಂಧಿ ಚ | ಕೋರವಿಲೋಲವಿಶಾಲವಿಲೋಚನೆ |
ಯಾರಾಜಶಿಖಾಮಣಿನೃಪಚಂದ್ರಂ ತೊಲಗಿದ ಸಮಯದೊಳು ||
ಕಾರ ದಿನಂ ಕೈಮೀಱಿದ ಬೞಿಕವೆ | ನೀರನುಣದ ಚಾದಗೆವಱಿಯಂತಾ |
ಹಾರಂಗೊಳ್ವುದನುೞಿದಳ್ ಮಸಗಿದ ವಿರಹಾವಸ್ಥೆಯೊಳು || ೩೩ ||

ಬರುತಿದೆ ಬಲ್ವೆಱೆ ಬಂಡುಣಿವಸುಳೆಯ | ತಿರುವಿಲ್ಗಾಱನ ಪೞವಿಗೆಯೆಳಮೀ |
ನೆರಡಂ ಕೊಂಡೆಲೆ ಸಖಿಯೆನಗುಳ್ಳವಳಾದೊಡೆ ನೂಂಕೆನುತ ||
ತರುಣಿ ವಿಕಲವಚನಮನಾಡಿದಳಾ | ವಿರಹದ ವೇದನೆಯೊಳ್ ತನ್ನಂ ಸ |
ತ್ಕರಿಸಿಲ್ಬರ್ಪ ವಿಲೋಲಾಕ್ಷಿಯ ನಗೆಮೊಗಮಂ ಕಾಣುತವೆ || ೩೪ ||

ಜನನುತಮಪ್ಪ ವಸಂತನ ಬರವಂ | ನೆನೆದು ನೆನೆದು ಪರಭೃತಶಿಶುವಂದಿನ |
ದಿನದೊಳು ಮಧುರಾಳಾಪಮನುೞಿದಂದನೊಳಾಯೆರಡನೆಯ ||
ನನತೆಯ ಸರಲ ನೀಱಂ ಬರ್ಪುದನೇ | ಮನದೊಳಗೋವದೆ ಬಯಸಿ ಬೞುಕ ನೂ |
ತನರತಿ ಮಿಗೆ ಸೊಗಯಿಸಿದಳ್ ಮುಸುಕಿದ ಮೂಕೀಭಾವದೊಳು || ೩೫ ||

ಕಾಯಜನೆಸುಗೆಯ ಕಮ್ಮಸರಂಗಳ | ಗಾಯದ ತನಿಸೊರ್ಕಿಂ ತಾಮರಸದ |
ಳಾಯುತಲೋಚನಮಂ ಮುಚ್ಚಿ ನೆಲಕ್ಕೊಱಗಿದ ಮಾೞ್ಕೆಯೊಳು ||
ಆಯತಿಗೆಟ್ಟಳ್ಳೆರ್ದೆವಡೆದಱಿವಿನ | ಬೀಯದೆ ಮಱೆದೊಱಗಿದಳಲರ್ವಾಸಿನೊ |
ಳಾಯೆಣೆವಕ್ಕಿಮೊಲೆಯ ಲಲಿತಾಂಗಿಯಗಲ್ದಿನಿಯನ ಬಯಸಿ || ೩೬ ||

ಈ ದಾರುಣವಿರಹದ ವೇದನೆಯಿಂ | ದೀದೇಹಮನುೞಿವುದು ಸುಖಮದು ಸುಖ |
ಮಾದೊಡೆಮೇನಾಂ ಪೋಗಿ ಜನಿಸುವೊಡಮೀಚೆಲ್ವಿಕೆಯ ತನು ||
ಆ ದೇವೋರಗಭಾಮಿನಿಯರ್ಮೊದ | ಲಾದವರೊಳಗಿಲ್ಲದಱಿಂದಿಲ್ಲಿಂ |
ಪೋದಪೆನೆಂಬುದುಚಿತಮಲ್ಲೆಂದುೞಿದುದು ಜೀವನಮವಳ || ೩೭ ||

ಈಯಂದದ ವಿರಹದ ವೇದನೆಯಿಂ | ದಾಯಾಸಂಗೊಂಡಲರ್ವಾಸಿನ ಮೇ |
ಲಾಯತನೇತ್ರೆ ಸುಲೋಚನೆ ಮಱೆದು ಕರಂ ಮೆಯ್ಯಿಕ್ಕಿದಳು ||
ಆಯಿರವಂ ಕಾಣುತುಮವಳಾಳಿಯ | ರಾಯತಿಗೆಟ್ಟು ನೆರೆದು ನೆಱೆಮಱುಕದೊ ||
ಳೋಯರದಿಂ ಸತ್ಕ್ರಿಯೆಯಿಂದುಪಚರಿಸಿದರೀತೆಱದಿಂದ || ೩೮ ||

ಪಸುಳೆದಳಿರ ಪಾಪಿನ ಮೇಲೊಱಗಿಸಿ | ಪೊಸಗಪ್ಪುರವಳಿಕಂ ಪೊಸೆದುದಿರಿಸಿ |
ಸಸಿಯಿಂದೊಸರ್ವಿಂದೂಪಲಜಲಮಂ ತನುಲತೆಯೊಳ್ತಳಿದು ||
ಕುಸುಮಶರಗ್ರಹವಡರದ ತೆಱದಿಂ | ದಸಮಾಂಬಕಯಂತ್ರಮನುಱೆಬರೆದಾ |
ಅಸಿಯಳ ತೋಳೊಳ್ ಕಟ್ಟಿ ಸಖೀಜನಮುಪಚರಿಸಿದುದಾಗ || ೩೯ ||

ಪಳಿಗಪ್ಪುರವನಿನೀರ್ ಪೊಸವಾೞೆಯ | ಸುೞಿ ಕಮ್ಮಿದುವಾದೆಲರಳೆಯಸುಗೆಯ |
ತಳಿರೆಲೆಬಿಜ್ಜಳ ತಣ್ಗದಿರ್ಗಲ್ ಕನ್ನೆಯ್ದಿಲ ನವನಾಳಂ ||
ಕುಳಿರ್ವಣ್ಪಿನ ಬಾವನ್ನದಿನಾಳಿಯ | ರೆಳಸಿ ಕರಂ ಸತ್ಕರಿಸಲು ತತ್ಕೋ |
ಮಲೆಯ ವಿರಹವೇದನೆಯಾಜ್ಯಂಬೊಯ್ದಗ್ಗಿಯ ತೆಱನಾಯ್ತು || ೪೦ ||

ಮೊತ್ತಮೊದಲ್ ಕೆಳೆತನವನೆ ಮೆಱೆ ದುದು | ವೃತ್ತೋರೋಜೆಯರೊಲವಿಂ ಬೀಸುವ |
ಮೊತ್ತದಲರ ಬೀಸಣಿಗೆಯೊಳುಣ್ಮುವ ತನಿಗಂಪಿನ ಗಾಳಿ ||
ಮತ್ತೆ ತಳಿವ ಪೊಸಗಪ್ಪುರದೊಳ್ಪುಡಿ | ಪೊತ್ತಿದುದಾವಿರಹಾನಲನೊಳಗದ |
ಱುತ್ತಿರಮಂ ತದ್ವನಿತೆಯವಸ್ಥೆಯನೇನಂ ಬಣ್ಣಿಪೆನು || ೪೧ ||

ಪೀನಪಯೋಧರಮಂ ಪಿಡಿದಂಬುರು | ಹಾನನದೊಳ್ಮೊಗವಿಟ್ಟತಿಭರದಿ ನ |
ವೀನಲತಾಂಗಮನಮರ್ದಪ್ಪಿ ಕರಂ ಕೂಡಿಯಳುರುತಿರ್ಪ ||
ಆನನೆಗಣೆಗೊನೆಯಿಂದುದಯಿಸಿದು | ಗ್ರಾನಲನೊಳ್ಳುರಿಯೊಳು ತದ್ವಿರಹದ |
ಮಾನಿನಿ ಕಣ್ಗೆ ವಿರಾಜಿಸಿದಳ್ ಸ್ವಾಹಾವಧುದೆಂಬಂತೆ || ೪೨ ||

ಅನಿತಱೊಳಾಚಿತ್ರಾಂಗದದೇವನ | ವನಿತೆ ಕನಕಲತೆಯೆಂಬವಳಮರಾ |
ವನಿಯಿಂದಿೞಿದು ರುಚಿರಶಶಿಲೇಖೆಯ ತೆಱದಿಂದೆಯ್ತಂದು ||
ಮಿನುಗುವ ಹರ್ಮ್ಯದೊಳೊಱಗಿ ವಿರಹದಿಂ | ದೆನಸುಂ ಬನ್ನವಡುವ ಭೂಮೀಶ್ವರ |
ತನುಜೆಯ ನೋವಂ ಪಿಂಗಿಸಿ ಬೞಿಕಿಂತೆಂದು ನುಡಿದಳಾಗ  || ೪೩ ||

ಇನ್ನೇತರ್ಕಸಿತೋತ್ಪಲಲೋಚನೆ | ನಿನ್ನನೊಲಿಸಿದಱಿಕೆಯ ಜಯಭೂಪಂ |
ಮನ್ನೆಯರೊಳ್ನಿನ್ನಿಚ್ಚೆಯ ವರನಂ ವರಿಯಿಪ ಮಂಡಪಕೆ ||
ಮುನ್ನೇಸಱ ಹೊತ್ತಿಂಗೆಯ್ತರ್ಪಂ | ತನ್ನ ಕೊರಲ್ಗಿಡು ಮಾಲೆಯನೊಸೆದೆನು |
ತುನ್ನುಡಿದಾದೇವಾಂಗನೆ ಸುರಲೋಕಕ್ಕೆಯ್ದಿದಳಿತ್ತ || ೪೪ ||

ತರುಣಿಯ ಬೞಿಯಿಂ ಬಂದು ವಿರಹದಿಂ | ದುರಿಗದಿರಿಂದ ಕಿಮುೞ್ಚಿದ ತಳಿರೆನೆ |
ಕೊರಗಿ ಕರಂ ಹೂವಿನ ಹೊತ್ತಪ್ಪನ್ನೆವರಂ ಬೀಡಿನೊಳು ||
ಹರಣಂ ಬಡದಿರ್ದಲ್ಲಿಂ ತಳರ್ದಂ | ತುರಿಪದಿ ವಾರಾಣಸಿಗಾನಂದದಿ |
ಧರಣೀಪತಿ ಜಯಭೂಪಂ ಸುದತೀಜನಸುಮನಶ್ಚಾಪಂ || ೪೫ ||

ಬೞಿಕ ಭರತಭೂವಲ್ಲಭನಣುಗಂ | ತುೞಿಲಾಳಿನಕೀರ್ತ್ಯಾದಿಯ ಧರಣೀ |
ಲಲನೇಶ್ವರಸುತರೆಯ್ತರೆ ಕೇಳ್ದತಿಮುದಿನಕಂಪನೃಪಂ ||
ಅಲಘುಪ್ರಿಯದಿಂದಿದಿರ್ವಂದು ನಲಂ | ದಳೆದು ಪೊೞಲನೆಯ್ದಿಸಿ ಬೀಡಾರಂ |
ಗಳನನುನಯದಿಂ ಕೊಡಿಸಿ ಸಕಲಸನ್ಮಾನಂಮಾಡಿದನು || ೪೬ ||

ವಿನಯಂವೆತ್ತುಪಚಾರಮನಂದಿನ | ದಿನಗಳಿದಿನನುದಯವರಂ ಮಾಡುತ |
ಮನುನಿಭಚರಿತನಕಂಪಂ ತತ್ಪರಿವೃಢನಿಕುರುಂಬವನು ||
ಜನತಾಧಿಪಜಯರಾಜನುಮಂ ತ | ತ್ತನುಜಾತೆ ಸುಲೋಚನೆ ತನ್ನಯ ಕ |
ಣ್ಮನವಾಂತವರಂ ವರಿಯಿಪ ಮಂಡಪಕೊಲವಿಂದೆಯ್ದಿಸಿದಂ || ೪೭ ||

ವರನಂ ತನ್ನಿಚ್ಚೆಯೊಳಂ ವರಿಯಿಪ | ವರವನಿತಾಮಣಿಯಂ ನೋಡುವೆನೆನು |
ತುರಗಾಧೀಶವಿಮಾನಂ ನೆಲನೊಡೆದು ಮೂಡಿದ ತೆಱದಿಂ ||
ಸುರರಾಜನ ಸುರುಚಿರಗೃಹಮಲ್ಲಿಂ | ಧರಣೀತಳಕಿೞಿತಂದ ತೆಱದಿ ಬಂ |
ಧುರಮಾದುದು ಬಹುರತ್ನವಿರಾಜಿತಮಂಡಪಮಂತಲ್ಲಿ || ೪೮ ||

ಪಲವು ಪರಲ ಕೀಲಣೆಯಿಂದೊಪ್ಪುವ | ನೆಲನೆಲ್ಲಂ ರಾಮಶರಕ್ಕುಡುಗಿದ |
ಜಲಭಾಂಡಾಗಾರದ ತೆಱದಿಂ ಬಂಧುರಮಂ ಪಡೆದತ್ತು ||
ಜಲಜಲಜಲಿಸುವ ನವಮಾಣಿಕ್ಯದ | ಸುಲಲಿತವಹ ಕುರುಚೆಲ್ಲಂ ಮಯಣದ |
ಕೆಲಸಂಮಾಡಿದ ರೋಹಣಗಿರಿಯೆಂಬಂದದಿನೊಪ್ಪಿದುದು || ೪೯ ||

ಮಿನುಗುವ ಪೊಸಮಣಿಗಂಬಮೆ ಮರಮೊದ | ಲೆನೆ ಬಲ್ದೊಲೆಯೆಲ್ಲಂ ಬಹುಶಾಖೆಗ |
ಳೆನೆ ನವರಂಗಂ ಕವಲೆನೆ ಚಿತ್ರದ ಪತ್ರಮೆ ಪತ್ರತತಿ ||
ಯೆನೆ ಕೃತ್ರಿಮವಿಹಗಾವಳಿ ಶುಕಪಿಕ | ಮೆನಲಾಮಂಡಪಮತಿಶೋಭಿಸಿದುದು |
ನನೆಯಸರಲನೀಱನಕೇಳೀವನದಂದಮನನುಕರಿಸಿ || | ೫೦ ||

ಸ್ಮರನಿಭಜಯನೃಪನಲ್ಲದೆ ಮತ್ತಿನ | ವರರಂ ಲೆಕ್ಕಿಸದವಳಂ ಬಱಿದೇ |
ವರಿಸುವೆವೆನುತುಂ ಬಂದು ಬೞಲ್ದಿರಿಯೆನುತಾಮಂಡಪಕೆ ||
ಭರದಿಂ ಬರ್ಪವನೀಶ್ವರಸುತರಂ | ಪಿರಿದುಂ ನಗುತೇಡಿಸುವಂದದಿ ಬಂ |
ಧುರಮಾದುದು ಬಹುಮಣಿಭಂಗಿಯ ಪಾಂಚಾಲಿಕೆಯಂತಲ್ಲಿ || ೫೧ ||

ಇಂತೊಪ್ಪುವ ಮಂಡಪದೊಳೆಗೆಸೆವ ಭ | ವಂತಿಯ ನುಣ್ಪಳುಕಿನ ವೇದಿಕೆಯೊಳು |
ಕಾಂತಕನಕಸಿಂಹಾಸನದುಪರಿಮದೊಳಗತಿಮುದದಿಂದ ||
ಕಂತುಸದೃಶವಿಕ್ರಮಕೌರವಭೂ | ಕಾಂತಂ ಮೊದಲಾದವನೀಶ್ವರಸುತ |
ಸಂತತಿಯಂ ಕುಳ್ಳಿರಿಸಿದನಾವಾರಾಣಸಿಯಧಿರಾಜಂ || ೫೨ ||

ವಿಲಸದ್ಭೂಭೃದ್ಗಣಯುತನತಿಮಂ | ಗಲತರವಿಬುಧಾನೀಕಾಶ್ರಯನು |
ಜ್ಜ್ವಲಿತಮಹಾಲಂಕಾರಂ ಸಲ್ಲಲಿತಸುವರ್ಣಾಧಾರಂ ||
ವಿಲಸಿತಲೋಕಪ್ರಸರಸುಪೂಜಿತ | ನಲಘುತರಾಕಾರಂ ಕಣ್ಗೊಪ್ಪಂ |
ದಳೆದನಮರಭೂಧರವೆಂಬಂತಾಪ್ರಭುಕುಲಮಣಿದೀಪಂ || ೫೩ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವೈದೊ |
ಳೊದವಿ ಮನೋಹರಮಂ ಪಡೆದುದು ನಾಲ್ಕನೆಯ ಮಿಸುಪ ಸಂಧಿ || ೫೪ ||

ನಾಲ್ಕನೆಯಸಂಧಿ ಸಂಪೂರ್ಣಂ