ಸೂಚನೆ || ನೆರೆದ ನರೇಂದ್ರತನುಜರಿರ್ದಂದದಿ |
ವರರೂಪಿನೊಳೆ ಜಯನ್ತಂ ಜಯಭೂ |
ವರನಬಲಾಮಣಿಯಂ ವರಿಯಿಸಿದಂ ಧರೆಯಱಿವಂದದೊಳು ||

ನರಪಾಲಕನಂದನವಿತತಿ ಸಯಂ | ಬರಸಾಲೆಯೊಳಿರಲತ್ತಲಕಂಪನ |
ವರಸತಿಯಮಿತಪ್ರಭೆಯ ಬೆಸದಿನವಳಾಳಿಯರೆಯ್ತಂದು ||
ಗರುವೆ ಸುಲೋಚನೆಯಂ ಹೊಸಹಳೆಯೊಳ | ಗಿರಿಸಿ ಬೞಿಕ ಹರಿಸಂ ಮಿಗೆ ಸಕಲಾ |
ಭರಣಕೆ ಮೊಲೆನಿಸುವ ಮಜ್ಜನಮಂ ಮಾಡಿಸಲೆಳಸಿದರು || ೧ ||

ತರುಣಭ್ರಮರಸಮಿತಿಗಸಿತೋತ್ಪಲ | ದರಲ ರಸಮನೆಱೆವಂತೆ ತಮಾಲೋ |
ತ್ಕರಲತಿಕೆಗೆ ಕರ್ಪೂರವಿಮಿಶ್ರಿತವಾರಿಯನೆಱೆವಂತೆ ||
ತರುಣಿಯ ತಲೆಗೆಣ್ಣೆಯನೆಱೆದುಗುರಿಪ | ವರಸತಿಯುಗುರೆಸೆದುದು ಕಾರ್ಗಾಲದ |
ಕರಿಯಮುಗಿಲ ಹೊಱೆಯೊಳು ಹರಿದಾಡುವ ಕಿಱುಮಿಂಚಿನ ತೆಱದಿ || ೨ ||

ಒಲವಿಂದುಗುರಿಪ ವನಿತೆಯ ಕಂಕಣ | ದುಲಿಪೆಂಬೆಳಮೊೞಗಂ ಕೇಳುತ ಮಿಗೆ |
ನಲಿವ ನವಿಲ ಗಱಿಯಂದದಿನಾಕೂರುಗುರ್ಗಳ ಹೊಳಹೆಂಬ ||
ವಿಲಸಚ್ಚಂದ್ರಿಕೆ ತನ್ನೊಳವರಿಯಲ್ | ನೆಲಸಿದ ಭೀತಿಯಿನುಱೆ ನಡುಗುವ ಕ |
ೞ್ತಲೆಯಂದದಿನಲುಗಿದುವಳಕಾಳಿಗಳಾರಾಜಾತ್ಮೆಜೆಯಾ || ೩ ||

ಅಲರ ಸರಕೆ ಬಾಸಣಮಿಕ್ಕುವವೊಲು | ಲಲಿತಾಂಗಕೆ ನವಚಂದನಪಂಕವ |
ನೊಲವಿಂ ತಿಮಿರಿ ಬೞಿಕ ಹೂವಿನ ಹೊಂಗಾಲ್ವಣೆಯೊಳಗಿರಿಸಿ ||
ಲಲನೆಗೆ ನೀರೆಱೆದರ್ ಮದವತಿಯರ್ | ಕಳಸಮನೆತ್ತಿ ಕರಿಣಿಯುಗಳಂ ಮಂ |
ಗಳದೇವಿಗೆ ಮಧುರಾಮೃತಮಂ ಮಜ್ಜನಕೆಱೆವಂದದೊಳು || ೪ ||

ಶರಧಿಯೊಳೊಗೆದೇೞುವ ಶಶಿಲೇಖೆಯ | ದೊರೆಯೆನಲಂಬುಕಣಂಗಳ್ ತೀವಿದ |
ಹರಿಣಾಕ್ಷಿಯ ತನುವಂ ದುಗುಲದಿ ತೊಡೆದಾಳೀಜನವುಡಿಸೆ ||
ಕರಮೆಸೆದುದು ನಿಱಿಯಂಗಜಶಬರಂ | ಸರಸವಿಟರ ನಿಡುಗಣ್ಮೀಂಗಳನುರು |
ಭರದಿಂ ಬೀಸಿ ತೆಗೆದ ಬಲೆ ನಿಱಿಗೊಂಡಂದಮನನುಕರಿಸಿ || ೫ ||

ತೊಂಡಲ್ವೂವಿನ ಗಾಲಿ ನನೆಯ ನಿಡು | ದಂಡೆ ಮನೋಹರಮಾದಚ್ಚು ತರಂ |
ಗೊಂಡಿಕ್ಕಿದ ಹೊಸಹೊಂಗೇದಗೆಯೆಸೞ್ಗಳ್ ನವಶಸ್ತ್ರಸತಿ ||
ದುಂಡಮುಡಿಯೆ ಪೀಲಿಯ ಪೞಯಿಗೆಯೆನೆ | ತೊಂಡೆದುಟಿಯ ತರುಣೀರತ್ನದ ನು |
ಣ್ಮಂಡೆ ಮನೋಭವನೇಱುವ ಪೂದೇರಂದದಿನೊಪ್ಪಿದುದು || ೬ ||

ಸಿರಿನೊಸಲೆಂಬ ರುಚಿರಶಶಿಲೇಖೆಯ | ನುರುಕಬರೀಮದನಾಸಿತಸರ್ಪಂ |
ಭರದಿಂ ಪಿಡಿವುದೆನುತ ರತಿಯದಕಿಕ್ಕಿದ ರಕ್ಷಾಮಣಿಯ ||
ದೊರೆಯೆನಲಾಶಶಿಲೇಖೆ ಸರಾಗದಿ | ಪಿರಿಯಣುಗಂ ಸೌಮ್ಯನನೆತ್ತಿದಳೆನೆ |
ಗರುಡೋದ್ಗಾರದ ಪಚ್ಚೆಯ ತಿಲಕಂ ತೊಳಗಿದುದಾಸತಿಗೆ || ೭ ||

ಇನ್ನೀಹವಣಿಂದವೆ ಬಳೆದೊಡೆ ನಿಮ | ಗೆನ್ನಾಣೆಯೆನುತ್ತವೆ ನೇರಾಣಿಯ |
ಕನ್ನಡಿಮೊಗಮಂ ತುಂಬಿ ಬಳೆವುದಂ ಕಂಡು ಬಿದಿಯ ವನಿತೆ ||
ತಾನ್ನಿಱಿಸಿದ ಸೀಮಾರೇಖೆಗಳೆನೆ | ಕನ್ನೆಯ ದೀರ್ಘವಿಲೋಚನಕೊರ್ವಳ್ |
ಚೆನ್ನೆ ಸರಾಗದೊಳಿಕ್ಕಿದ ಕಲುಕದ ರೇಖೆ ವಿರಾಜಿಸಿತು || ೮ ||

ಅರಲುಣಿಯೀಹೂವಿನ ಬಂಡುಣ್ಡೊಡೆ | ಮರಣಮವಕೆ ನಿಶ್ಚಯಮದಱಿಂದಾ |
ಗರಳಮನಿದಱಿಂ ಕಿಡಿಪೆನೆನುತ ಬನಸಿರಿಯಾಚಂಪಕದ ||
ಬಿರಿಮೊಗ್ಗೆಯ ತುದಿಗಮೃತದ ಘುಟಿಕೆಯ | ನಿರಿಸಿದವೊಲು ಮುತ್ತಿನ ಮೂಗುತಿಯಂ |
ವಿರಚನೆಗೆಯ್ದಳದೊರ್ವಳ್ ತರುಣಿಯ ನಾಸಾಮುಕುಳದೊಳು || ೯ ||

ಪರಿರಂಜಿಸುವ ಪಯೋಜಾತದ ಪೊಳೆ | ವೆರಡುಂ ಪಕ್ಕದೊಳಗೆ ಪತ್ತಿದ ಬಂ |
ಧುರಶೈವಾಲಲತೆಯವೊಲು ಶಶಿಬಿಂಬಂ ತನ್ಯ ಕಱೆಯಂ ||
ಉರದಿಂ ಕಿೞ್ಬರಿಗೊತ್ತರಿಸಲ್ಕದು | ಕರಮೊಪ್ಪುವವೊಲ್ ನವಮೃಗಮದದಿಂ |
ಬರೆದ ಮಕರಿಕಾಪತ್ರಮವಳ ನುಣ್ಗದಪಿನೊಳೊಪ್ಪಿದುದು || ೧೦ ||

ಅತನುತ್ವಂ ತನಗಹುದನಱಿದು ಹರಿ | ಸುತನೋವದೆ ರತಿವೇದಾಕ್ಷರಗಳ |
ನತಿ ಮುದದಿಂ ಬರೆದೋಲೆಯನುಚ್ಚಸ್ಥಲಮಿದು ತಾನೆಂದು ||
ಚತುರತೆಯಿಂ ನಱಿಸಿದ ನೆಲೆಯನದಂ | ಶ್ರುತಿಯೆಂದೆಂಬುದುವುಪಚಾರದಿನಾ |
ಕ್ಷಿತಿಯಲ್ಲದೊಡೆಲ್ಲಿಯದೀಕೆಯ ಕಿವಿಗೀನವಮೋಹನವು || ೧೧ ||

ಸಿರಿದುಱುಬಿನ ಸೂಸಕಕಿಕ್ಕಿದ ಪಲ | ಪರಲರಸುಮೆ ಕರ್ಣಾಭರಣಂಗಳ |
ಬೆರಕೆವಣಿಯ ಡಾಳಂ ನುಣ್ಗೊರಲೊಳ್ ಕಟ್ಟಿದ ಮಾಣಿಕದ ||
ಸರದ ಸುರಂಗುಗಳೆಲ್ಲಂ ಬಳಸಲ್ | ತರುಣಿಯ ಮೊಗಮೊಪ್ಪಿತು ಪಲವಣ್ಣದ |
ಪರಿವೇಷದ ಮಧ್ಯದೊಳೊಪ್ಪುವ ಸಂಪೂರ್ಣಶಶಿಯ ತೆಱದಿ || ೧೨ ||

ಮೊತ್ತಮೊದಲ್ತಾನೊಲವಿಂ ಪಡೆದೆಳ | ಮುತ್ತುಗಳಂ ಪ್ರಿಯತರದಿಂ ದುರದೊಳ್ |
ತೆತ್ತಿದ ಶಂಖದ ತೆಱನಂ ಬಲ್ಲರ ಬಗೆಯೊಳ್ ನೆನೆಯಿಸುತ ||
ಹತ್ತಸರದ ಬೆಳ್ಮಣಿಯನಭಿನ್ನತೆ | ವೆತ್ತು ಸರಾಗದಿ ಕಟ್ಟಿದ ವಿಲಸ |
ದ್ವೃತ್ತಪಯೋಧರಯುಗಳೆಯ ನುಣ್ಗೊರಲತಿವಿಭ್ರಾಜಿಸಿತು || ೧೩ ||

ಮದನನ ರತಿಯ ಮದುವೆಯೊಳ್ ಸಿರಿ ಸಂ | ಮದದಿಂ ಪೊನ್ನೈರಣೆಯ ಜವಳಿಗಳ |
ಸದ ಮೇಲೊಲಿದಿಕ್ಕಿದ ಮಂದಾರದ ಮಾಲೆಯ ಮಾೞ್ಕೆಯೊಳು ||
ಮದಯೌವನೆಯುನ್ನತಕುಚತಟದೊಳ್ | ಚದುರೆಯದೊರ್ವಳ್ ನವನವರತ್ನದ |
ಪದಕಂಗಟ್ಟಿದಳಾಶೃಂಗಾರಮನೇನಂ ಬಣ್ಣಿಪೆನು   || ೧೪ ||

ಶ್ರೋಣೀಶೈಲಮನೇಱಿ ನವೋದ್ಗಮ | ಬಾಣಂ ಬಡವಡೆದೊಪ್ಪುವ ಬಾಸೆಯ |
ನೇಣೊಳ್ ಕಟ್ಟಿ ಲಲಿತಮಧ್ಯಮದೆಂಬಾಕಾಶದ ಮೇಲೆ ||
ಹೂಣಿ ಹಿಡಿದು ಹಾಱಿಸಿದ ಪಟಂಬೊಲ್ | ವೀಣಾವಾಣಿಯ ವಿಧುನಿಭವದನೆಯ |
ಶೋಣಾಧರೆಯ ಮೊಲೆಯ ಮೇಲುದಱಸೆಱಂಗು ವಿರಾಜಿಸಿತು || ೧೫ ||

ರಂಗುಮಿಗುವ ನವರತ್ನವಿರಾಜಿತ | ದುಂಗುರ ಕಡಗಲುಳಿಯಸರಚಳಕಿಗೆ |
ಮುಂಗೈವಳೆ ಕಂಕಣ ಸೂಡಗ ತೋಳ್ವಳೆ ಭುಜಕೀರ್ತಿಗಳು ||
ಸಿಂಗರಮಾದುವವಳ ನಿಡುದೋಳೊಳ | ಗಂಗಜವೀರನ ಲೌಡಿಗೆ ಬಹುಕುಸು |
ಮಂಗಳ ನವಕಂಕಣತತಿ ಸೇರಿ ಮನೋಹರಮಪ್ಪಂತೆ || ೧೬ ||

ಮೞಲ ಜವಳಿಗುಪ್ಪೆಯನಪರಂಜಿಯ | ತೊಳಪ ಲತಿಕೆ ಪಲವಣ್ಣದ ಪೂರ್ವ |
ತಳೆದೊಪ್ಪದೆ ಮೂವಳಸಂ ಮುತ್ತಿದುದೋ ಅಂಗಜನೃಪನ ||
ವಿಲಸಜ್ಜಂಗಮದುರ್ಗದ ಪೊಱಗು | ಜ್ಜ್ವಲಿಸುವ ರನ್ನದ ಕೋಂಟೆಯಿದೋ ಎನೆ |
ತೊಳಗುವ ನವಮಣಿಮೇಖಲೆಯೊಪ್ಪಿದುದವಳ ನಿತಂಬದೊಳು || ೧೭ ||

ಅಲಘುನಿತಂಬಸ್ತನಪರ್ವತದಿಂ | ವಿಲಸಲ್ಲಾವಣ್ಯಮಹಾನದಿಯಿಂ |
ಲಲಿತಾಭರಣಸುವರ್ಣಮಣಿಗಳಿಂದೆಸೆವಾಸತಿಯೆಂಬ ||
ನೆಲವೆಣ್ಣಂ ಹೊಱಲೆನುತಂಗಜವಿಧಿ | ಯೊಲವಿಂ ಮೃದುಪದಕೂರ್ಮನ ಬೆನ್ನೊಳ್ |
ನೆಲೆಗೊಳಿಸಿದ ಶೇಷನವೊಲ್ ಕುಲಿಶದ ನೂಪುರಮೊಪ್ಪಿದುದು || ೧೮ ||

ಕೆಂದಾವರೆಯಸಿಯೆಸೞ ಕೊನೆಗಳೊಳ್ | ನಿಂದಳಿಶಿಶು ಜಲಕಣ ಶೈವಾಲದ |
ಬಿಂದು ಲಸನ್ಮಕರಂದ ತರುಣರವಿಕಿರಣಂಗಳ್ ಪತ್ತಿ ||
ಅಂದವಡೆದ ತೆಱದಿಂದುಳ್ಳಲರ್ದ ನ | ವೆಂದೀವರನೇತ್ರೆಯ ಕಾಳ್ವೆರಲೊಳ |
ಗೊಂದಿಸಿದಂಗುಲ್ಯಾಭರಣಂಗಳ್ ತೊಳತೊಳತೊಳಗಿದುವು || ೧೯ ||

ಘನಕಲಶಸ್ತನಯುಗದೊತ್ತಂಬದಿ | ಮನದನುರಾಗರಸಂ ತಾನಡಿಗಿೞಿ |
ದೆನಸುಂ ಕಾಂತಿವಡೆದು ಪೊಱಪೊಣ್ಮಿ ವಿರಾಜಿಸುವಂದದೊಳು ||
ಕನಕಲತಾಂಗಿಯ ಮೃದುಪದತಳದೊಳು | ವನರುಹಪತ್ರಾಂಬಕಿಯರು ತೊಡೆಯಲು |
ಮಿನುಗುವಲಕ್ತಕರಸವತಿಚತುರರ ಚಿತ್ತಂಗೊಳಿಸಿದುದು || ೨೦ ||

ಮಜ್ಜನವನುಲೇಪನವುಡೆ ನಿಱಿ ಪೊಸ | ಸಜ್ಜುಕ ತಲೆವೀದಿಯಮಣಿ ತಿಲಕಂ |
ಕಜ್ಜಳ ನಾಸಾಮಣಿ ಕುಂಡಲ ಕಂಕಣ ನೂಪುರ ಕಟಕಂ ||
ಪಜ್ಜಳಿಸುವ ಮೇಖಲೆಯಂದುಗೆ ಕಿಱು | ಗೆಜ್ಜೆಯಲಕ್ತಕದಿಂ ಮುಡಿಯಿಂ ಕೆಂ |
ಬಜ್ಜೆವರಂ ರಚಿಸಿದ ಸಿಂಗರಮೊಪ್ಪಿದುವಾಬಾಲಿಕೆಗೆ || ೨೧ ||

ತರುಣಿಯ ತನುಲತೆವಿಡಿದಾಭರಣದ | ಕುರುವಿಂದಮಶೋಕೆಯ ವೈಡೂರ್ಯಂ |
ಸರಸಿರುಹದ ಕುಲಿಶಂ ಚೂತದ ಮೌಕ್ತಿಕಮಣಿ ಮಾಲತಿಯ ||
ಹರಿನೀಲಂ ನೆಯ್ದಿಲ ಬಿರಿಮೊಗ್ಗೆಯ | ವರವರ್ಣಮನಂಗೀಕರಿಸಲ್ಕಾ |
ಸ್ಮರಕೋದಂಡಮನೇಱಿದ ಪಂಚಕರದವೋಲ್ ತೊಳಗಿದುವು || ೨೨ ||

ರಸುಮಿಪ ರವೆಯದ ಕಂಕಣವಂಗಜ | ವೆಸರಂ ಕಣ್ಠಿಕೆ ರತಿವೆಸರಂ ನು |
ಣ್ಣೊಸಲತಿಲಕವಿಂಗೋಲ್ವಿಲ್ವೆಸರಂ ಮುಡಿ ಮುಗುಳ್ಗಳೆವೆಸರಂ ||
ಮಿಸುಗುವ ಮೇಖಲೆಯುಲಿ ಪಿಕದಿಂಚರ | ವೆಸರಂ ನೂಪುರರುತಿಯೆಳೆಯಳಿರವ |
ವೆಸರಂ ತಳೆದು ವಿರಾಜಿಸಿದುವು ಸುಕುಮಾರಿಸುಲೋಚನೆಗೆ  || ೨೩ ||

ಭಾಸಿಪ ಬಹುರತ್ನವಿಭೂಷಣದಿಂ | ದೇಸೆಯಱಿದು ಸಿಂಗರಿಸಿದ ಬೞಿಕ ವಿ |
ಲಾಸಿನಿಯೊರ್ವಳ್ ತಳತಳಿಸುವ ಮುಕುರಂದೋಱಲ್ಕಲ್ಲಿ ||
ಪೂಸರಲನ ಪುಣ್ಯದ ಪುಂಜವೆನಿ | ಪ್ಪಾಸುದತಿಯ ಪಡಿನೆೞಲೊಪ್ಪಿದುದು ಸು |
ಧಾಸೂತಿಯ ತೊಡೆಯೇಱಿ ವಿರಾಜಿಪ ರೋಹಿಣಿಯೆಂಬಂತೆ || ೨೪ ||

ಅನಿತಱೊಳಲ್ಲಿಗಕಂಪನ ಮಂತ್ರಿಗೆ | ಳನುರಾಗದೊಳಾಯೆಡೆಗೈಯ್ತಂದತಿ |
ವಿನಯದೊಳಾಜೈವಾತೃಕಮಂಡಲಸಲ್ಲಲಿತಾನನೆಯ ||
ಘನಕುಚಿಯಂ ನಿನ್ನಿಚ್ಚೆಯ ವರನಂ | ಮನವಾಱೆಕರಂ ವರಿಯಿಸಲೇೞೆಂ |
ದೆನುತತಿಸಂಭ್ರಮದಿಂದೇೞಿಸಿದರ್ ಮಂಗಲರವಮುಣ್ಮೆ || ೨೫ ||

ಸಂದಣಿಸಿದ ಸಖಿಯರ ಮಧ್ಯದೊಳಾ | ನಂದದಿ ಪೊನ್ನಂದಳಮನಡರಿಯರ |
ವಿಂದಾನನೆಯೆಸೆದಳ್ ಸುರಲೋಕಮನಿಸುವೆನೆನುತ ಮನಮಂ ||
ತಂದಾದೆಸೆಗೆ ತೆಗೆಯತ ಬಾಗಿದ ಸಿರಿ | ಗಂಧನ ಕಾರ್ಮುಕದಾಱಡಿವೆದೆಯೊಳು |
ಸಂದಿಸಿ ಸಂಮೋಹನಮಂ ಬೀಱುವ ಬಿರಿಮುಗುಳ್ಗಣೆಯಂತೆ || ೨೬ ||

ಆ ಸುಕುಮಾರಿಸುಲೋಚನೆಯೇಱಿದ | ಭಾಸಿಪ ಪೊನ್ನಂದಣಮನೆ ಬಳಸಿದ |
ಕೇಸಡಿದಳಿರೊಳ್ವಾೞೆದೊಡೆಯ ರಾಗಾಧರವಟಫಲದ ||
ನಾಸಾಚಂಪಕದಳಕಾಳಿಯ ದರ | ಹಾಸನಯನಕುಸುಮದ ತನುಲತೆಯ ವಿ |
ಲಾಸಿನಿಯರ ತಂಡಂ ನಡೆತಂದುದು ಜಂಗಮವನದಂತೆ || ೨೭ ||

ದೊರೆತನನದೊಳಗೊಂದೊರೆ ಸಿಂಗದೊಳ್ | ಸರಿ ಸಕಲಕಲಾಪ್ರೌಡತೆಯೊಳ್ ಪಡಿ |
ಹರೆಯದೊಳೋರಗೆ ಸೌಂದರ್ಯದೊಳೆಣೆ ಯೌವನದೊಳು ಪಾಟಿ ||
ಸಿರಿಯೊಳ್ ಸಕ್ಕಸವಂ ತಾಮೆನೆ ಬಂ | ಧುರತೆವಡೆದ ರಾಜಾತ್ಮಜೆಯರು ಕಡು |
ಹರಿಸದೊಳಾಸುಕುಮಾರಿಸುಲೋಚನೆಯೊಡನೊಲ್ದೆಯ್ದಿದರು || ೨೮ ||

ಮುತ್ತಿನ ನವಮಣಿಸರದೊಡವಿನ ಬಿ | ಣ್ಣಿತ್ತಱಬಟ್ಟದುಱುಂಬಿನ ಕಡುಬ |
ಲ್ಲಿತ್ತಱ ಗುರುಕಟತಟಯುಗ್ಮದ ತೋರಿತ್ತಱ ಬಿಡದಡರ್ವ ||
ವೃತ್ತಕುಚದ ದೊಡ್ಡಿತ್ತಱ ಭಾರಂ | ಬೊತ್ತಡಿಯಿಡಲಾಱದ ಜವ್ವನದು |
ನ್ಮತ್ತಹೃದಯದೆಳವೆಣ್ಗಳ ತಂಡಂ ನಡೆದುದಬಲೆಯೊಡನೆ || ೨೯ ||

ಎಳಮೀಂಬೊಣರ್ಗಣ್ಮಲರ್ಗಳ ಪವಳದ | ಪೊಳಪುದುಟಿಯ ಬಿಡುಮುತ್ತಿನ ಡಾಳಮ |
ನಿೞಿಕೆಯ್ವ ರದಂಗಳ ತೆರೆಗೈಯ್ಗಳ ಕೂರ್ಮನಿಭಾಂಘ್ರಿಗಳ ||
ತೊಳಗುವ ಲಾವಣ್ಯಜಲಂದುಳುಕುವ | ಲಲನಾಜನಮೆಯ್ದಿತು ಸಂಮೋಹನ |
ಜಲನಿಧಿ ಮೇರೆಯನುಲ್ಲಂಘಿಸಿ ಬರ್ಪಂದಮನನುಕರಿಸಿ || ೩೦ ||

ಸಾರಂಗಕ್ಷಿಯ ಸಾಮಜನವಮದ | ಸೌರಭ್ಯದ ಸಲ್ಲಲಿತಾಸಿತಚಮ |
ರೂರಣಹುತಧಮ್ಮಿಲ್ಲದ ಹುಲ್ಲೆಯ ಕೋೞ್ಗೆಣೆವುರ್ವುಗಳ ||
ನಾರೀಜನಮೆಯ್ದಿತು ಮನಸಿಜಮಧು | ಮಾರುತರಾಡುವ ಸೋಹಿನ ಬೇಂಟೆಗೆ |
ಭೀರುತೆಯಿಂದೊಳಗಾಗಿ ನಡೆವ ಮೃಗಗಣವೆಂಬಂದದೊಳು || ೩೧ ||

ಅಸುಗೆಯಸಿಯತಳಿರ್ಗಾಲ್ಗಳ ಪವಳದ | ಪೊಸವಾವುಗೆಗಾಲ್ಗಳ ಕೆಂದಾವರೆ |
ಯೆಸೞ್ಗಾಲ್ಗಳ ಮಿನುಗುವ ಮಾಣಿಕಮಣಿಗಾಲ್ಗಳ ರಂಜಿಸುವ ||
ರಸಮೊಸರ್ವಲತೆಗೆಗಾಲ್ಗಳ ಸಂಜೆಯ | ಮಿಸುಪ ಬೆಳಗುಗಾಲ್ಗಳ ಕೋಮಲೆಯರು |
ಕುಸುಮಶರನ ತೇಜಮನೆ ಹಸರಮಿಡುವಂದದಿನೆಯ್ದಿದರು || ೩೨ ||

ಬಡನಡುವಿನ ಬಳುಕುವ ನಡುವಿನ ಸೆಳೆ | ನಡುವಿನ ಸಿಂಗವಸುಳೆನಡುವಿನ ಪುಸಿ |
ನಡುವಿನ ಸಂದೆಗನಡುವಿನ ಪಿಡಿನಡುವಿನ ಪೊಸಪೊಂಬಳ್ಳಿ ||
ನಡುವಿನ ಸಣ್ಣನಡುವಿನ ಕಡಂದುಱು | ನಡುವಿನಸಿಯನಡುವಿನ ನವಡಮರುಗ |
ನಡುವಿನ ಮದಯೌವನೆಯರು ನಡೆದರವಳನಿರದೋಲೈಸಿ || ೩೩ ||

ಮದನಮತಂಗಮನೇಳಿಪ ಗಮನದ | ಮದನವಿರಂಚಿಯಡರುವರಸಂಚೆಯ |
ಮದಮಂ ಗೆಲ್ವ ಗತಿಯ ಮದನಗೆ ತಾನೇ ಅತಿಬಲವಾದ ||
ಸದಮಲಶಶಿಯಂ ಸೋಲಿಪ ಯಾನದ | ಮದನಾಗ್ನಿಯನೇಳಿಪ ತೆಂಗಾಳಿಯ |
ಮೃದುವಂ ತೆಗೞ್ವ ನಡೆಯ ನಾರೀಜನಮೆಯ್ದಿದುದವಳೊಡನೆ || ೩೪ ||

ಪೊಗರುಣ್ಮುವ ಪೊಸಮಿಸುನಿಯ ಕನ್ನಡಿ | ಮೊಗದ ತಳತ್ತಳಿಸುವ ಪುಣ್ಣಮೆವೆಱೆ |
ಮೊಗದ ಮಿಸುಪ ಚೆನ್ನೆಸಱಿದಿರ ಕುಂದಣದಾಮರೆಮೊಗದ ||
ಸೊಗಯಿಪ ಮುದ್ದುಮೊಗದ ಸಿರಿಮೊಗದೆಳ | ನಗೆಮೊಗದೊಪ್ಪುವ ಬಟ್ಟಮೊಗದ ಕಡು |
ಮುಗುದೆಯರಾಶುಕವಚನೆ ಸುಲೋಚನೆಯೊಡನೊಲ್ದೆಯ್ದಿದರು || ೩೫ ||

ಅಡರ್ದ ಕುಚದ್ವಯಕಳಶದ ಮೊಗಗ | ನ್ನಡಿಯಂಗೈದಳಿರಂಗನೆಯರ್ ಮೆ |
ಲ್ಲಡಿಯಂ ಮೆತ್ತನಿಡುತ ಮುಂದಣ ನೆಲನಂ ಬಲಿದೀಕ್ಷಿಸುತ ||
ನಡೆಯ ಬೆಡಂಗಿನೊಳಾನಗೆಗಣ್ಗಳ | ಕಡೆಯ ಬೆಳಂತಿಗೆವೆಳಗು ಹರಿದು ಮುಂ |
ಗುಡಿಯೊಳ್ ಪಸರಿಸಲೆಸೆದುದು ನಡೆಮಡಿಯಂ ಪಾಸಿದ ತೆಱದಿ || ೩೬ ||

ಸೆಕ್ಕುಂದುಱುಬಿನ ಸೆರೆಗೈಗಣ್ಗಳ | ಕಕ್ಕಸಮೊಲೆಯ ಕಲಾಭೃದ್ವದನದ
ಚಿಕ್ಕಹರೆಯದೆಳದುಂಬಿಗುರುಳ ಸೊರ್ಕಾನೆನಡೆಯ ರತಿಯ ||
ಕಕ್ಕಸವದ ರೂಪಿನ ಗಿಳಿನುಡಿಗಳ | ಚೊಕ್ಕಳಿಕೆಯ ಸೊಬಗಂ ತಾಳಿದ ಪೆ |
ಣ್ಮಕ್ಕಳ ತಂಡಂ ನಡೆತಂದುದು ನಳಿನಾಕ್ಷಿಯ ಬಳಸಿನೊಳು || ೩೭ ||

ಚಂದನಲತಿಕೆ ತಮಾಲಲಿತಿಕೆಯೆರ | ಡೊಂದಿದ ತೆಱದಿಂದಸಿತಾಸಿತವ |
ರ್ಣಂದಾಳಿದ ರತಿಮದನೋರಗಯುಗಲಂ ಕೂಡುವ ತೆಱದಿಂ ||
ಮಂದಗಮನೆಯೊರ್ವಳ್ ನಡೆವಡೆಯೊಳ್ | ಪಿಂದಲೆಯಿಂ ಮುಡಿ ಜಗುೞ್ದಿೞಿಯಲ್ ಕೈ |
ಯಿಂದೆತ್ತುವ ಭಂಗಿ ಕರಂ ಕಣ್ಗೆ ಮನೋಹರವೆಯ್ದಿದುದು || ೩೮ ||

ಸಲ್ಲಲಿತವಿಲೋಚನೆಯರ್ ನೂತನ | ಪಲ್ಲವಪದವನಿಡುತ್ತ ಬೆಡಂಗಿರಿ |
ಕೆಲ್ಲಯಿಸುತ ಕೆಲಬಲನಂ ಬೆಳ್ಳಿಯ | ಬಲ್ಲೆಯದಿಂದಂಗೋದ್ಭವವೀರಂ |
ಪೊಲ್ಲಮುನಿಸಿನಂದಿಡುವಂದದಿನತಿರಮ್ಯಂದಾಳಿದುದು || ೩೯ ||

ಅಳಿಕದೊಳಲೆಯದಳಕನಿಕುರುಂಬವ | ನಲೆದತ್ತೆನುತುಂ ತಿರ್ದುವ ತೆಱದಿಂ |
ನಳನಳಿಸುವ ನಳಿತೋಳ ಮೊದಲ ನುಣ್ಬೊಗರಂ ಕಾಣಿಸುತ ||
ಇೞಿಯದ ಪೊಸಮೇಲುದಱ ಸೆಱಂಗುಮ | ನಿೞಿದತ್ತೆನುತೆತ್ತುವ ನೆವದಿಂ ವರ |
ಕಲಶಸ್ತನತಟಮಂ ನಸುದೋಱುತ್ತೆಯ್ದಿದರಾಳಿಯರು || ೪೦ ||

ತಳಿರ್ದಿಂತಿಣಿ ತಣ್ಬುಳಿನ ತಳಂಗಳ | ಬಳಗಂ ಪೊಸಬಳ್ಳಿಯ ಜಂಗುೞಿ ಪೊಂ |
ಗಳಸದ ಸಂದಣಿಯಲರ್ದಂಬುಜದ ಕದಂಬಮೆ ನಡೆವಂತೆ ||
ವಿಲಸ್ಮೃದುಪಾದದ ಘನಜಘನದ | ಲಲಿತಾಂಗದ ಗುರುಕುಚದಮಲಾನನ |
ದೆಳವೆಣ್ಗಳ ತಂಡಂ ನಡೆತಂದುದಕಂಪಜೆಯಂ ಬಳಸಿ || ೪೧ ||

ಗೊಂದಳಗೊಂಡೀತೆಱದಿಂದೆಯ್ದುವ | ಕೆಂದಳಿರ್ಗಾಲ ಕೆಳದಿಯರ ನಡುವೆ ಮ |
ನಂದಣಿವುಚ್ಚಹದಿಂದೆಯ್ತಂದಾಮಣಿಮಯಮಂಡಪಕೆ ||
ಇಂದೀವರಲೋಚನೆಯೊರ್ವಳ್ ಕುರು | ವಿಂದಮಣಿಯ ಹಾವುಗೆಯಿಕ್ಕಲ್ ಪೊ |
ನ್ನಂದಳದಿಂದಿೞಿದಳ್ ಮತ್ತೊರ್ವಳ ಕಯವಿಡಿದಾಕುವರಿ || ೪೨ ||

ಬರುತಿದೆ ಭಾಳಾಂಬಕನದಟಂ ಮುಱಿ | ದರಲಸರನ ಪಟ್ಟದ ನವಮದಕರಿ |
ಬರುತಿದೆ ಬಹುಲೋಕವಶೀಕರಣದ ಮೂರ್ತಿ ಮನದೆಗೊಂಡು ||
ಬರುತಿದೆ ನವಮೋಹನದಧಿದೇವತೆ | ತುರಿಪದಿ ತೊಲಗಿ ತೊಲಗಿಮೆನುತುಂ ಕಡು |
ಭರದಿಂದುಘ್ಘಡಿಸುವ ಕಂಚುಕಿಯರೆಸೆದರಬಲೆಯ ಮುಂದೆ  || ೪೩ ||

ಬಳಸಿದ ಬಹುಮುಕುರದ ಮಧ್ಯದ ಪು | ತ್ತಳಿಯ ನೆೞಲ್ ಮಿಗೆ ಸೊಗಯಿಪವೊಲ್‌ಮನ |
ವೆಳಸಿ ಕರಂ ನಡೆನೋಡುತ ಕಾತರದಿಂ ಪರಿವೇಷ್ಟಿಸಿದ |
ಇಳೆಯಾಣ್ಮರ ಚೀತೋಗೃಹದೊಳ್‌ಮಾ | ರ್ಪೊಳೆದುದು ತನ್ಮಧ್ಯದೊಳೊಪ್ಪುವ ನವ |
ನಳಿನವಿಲೋಚನೆ ಸುಭಗೆ ಸುಲೋಚನೆಯೊರ್ವಳ ಕಡುಚೆಲ್ವು  || ೪೪ ||

ಬೞಿಕ ಬಳಸಿ ನೆಱೆನಿಟ್ಟಿಸುವರ ಬಾ | ಕುಳಿಗಣ್ಣುಂ ಮನಮುಂ ನವಮೋಹನ |
ಜಲನಿಧಿಯತೋರಣದಿಂ ನಿಂದೆಳಮೀನ್ಗಣ್ಣಾಳಿಯರ ||
ಅಲಘುಕುಚಾದ್ರಿಯ ಸೇತುವನಡರ್ದಾ | ಕುಲಿಶರದದ ಕುರುವಿಂದೋಷ್ಠದ ನವ |
ಲಲನಾರತ್ನಮೆನಿಪ ರತ್ನದ್ವೀಪಕ್ಕಿರದೆಯ್ದಿದುವು                                              || ೪೫ ||

ನಲಿದುವು ನವಿಲಗಱಿಯ ಕಣ್ಣಂದದಿ | ಬಲಿದೀಕ್ಷಿಪ ಭೂವರರಕ್ಷಿಗಳಾ |
ಅಲಘುಪಯೋಧರೆಯಮಲಾಪಾಂಗರುಚಿಯ ವಿದ್ಯುಲ್ಲತೆಯಂ ||
ವಿಲಸನ್ಮಣಿವಿರಚಿತ ಕಂಕಣದೆಳೆ | ಯುಲುಹಿನ ಕಿಱುಮೊೞಗಂ ನವರತ್ನೋ |
ಜ್ಜ್ವಲಭೂಷಣಕಾಂತಿಯ ಗೀರ್ವಾಣಶರಾಸನಮಂ ಕಂಡು  || ೪೬ ||

ತದನಂತರದೊಳ್‌ ತನ್ವಂಗಿಯನುರು | ಮುದದಿಂ ಕಂಚುಕಿಯೊರ್ವಳ್‌ತನ್ನೃಪ |
ರದಟಿನ ಪೆಂಪಂ ಸಿರಿಯಗ್ಗಳಮಂ ಸೊಬಗಿನ ಮೊಕ್ಕಳಮಂ |
ವಿದಾತಾನ್ವಯಶುದ್ಧದ ಹೆಚ್ಚುಗೆಯಂ | ಮದಯೌವನದುರ್ಕಂ ಸತ್ಪ್ರೌಢತೆ |
ಯೊದವಂ ತೋಱುತ್ತಂ ಪೇೞುತ್ತಂ ಮೆಲ್ಲನೆ ನಡೆಸಿದಳು  || ೪೭ ||

ಮುಂದೊರ್ವಳ್‌ ಪೊಗೞುತ್ತುಂ ಪೋಗಲ್‌ | ಕೆಂದಳಮಂ ಕೆಳದಿಯ ಕೈಗಿಟ್ಟರ |
ವಿಂದಾನನೆ ನವಮಾಣಿಕ್ಯದ ಮಣಿವಾವುಗೆಯಂ ಮೆಟ್ಟಿ ||
ಮಂದಸ್ಮಿತಮಧುರವಿಲೋಚನದಿಂ | ಮಂದೈಸಿದ ನೃಪಸುತರಂ ನೋಡುತ |
ಕಂದರ್ಪನ ಪಟ್ಟದ ಕರಿ ಮೆಲ್ಲನೆ ನಡೆವಂತೆಯ್ದಿದಳು  || ೪೮ ||

ದರಹಸಿತಜ್ಯೋತ್ಸ್ನೆಯಿನೀಕ್ಷಿಪ ನೃಪ | ವರರೆರ್ದೆಯೆಂಬಿಂಗದಿರ್ಗಲ್ವಳಿಕಂ |
ಕರಗಿಸಿ ಹೃದಯೇಂದೀವರಮಂ ಸಂತೋಷಿಸಿ ಕಣ್ಣೆಂಬ |
ತರಳಚಕೋರಿಗಳಂ ನಲವಡೆಯಿಸಿ | ಹರಿಣವಿಲೋಚನೆ ವಟಪಕ್ವಫಲಾ |
ಧರೆ ಸರಸಾಮೃತವಾಣಿ ನಡೆದಳಾಶಶಿಲೇಖೆಯ ತೆಱದಿ  || ೪೯ ||

ಸುರುಚಿರಸುರಭಿಲತಾಂಗಿಯ ವಿಲಸ | ತ್ಕರಪಲ್ಲವ ಪದಪಲ್ಲವ ರಂಗಾ |
ಧರಪಲ್ಲವಮೆಂಬುಳಿದಱೆಯೊಳ್‌ ಮೆಯ್ಗರೆದು ಮನೋಜಾತಂ ||
ಸರಸೇಕ್ಷುಶರಾಸನದೆಳದುಂಬಿಯ | ತಿರುವಂ ಕರ್ವಿಲ್ಗೇಱಿಸುತಿಂದೀ |
ವರನವಕುಸುಮಶಿಲೀಮುಖದಿಂದಿಸುವಂದಮನನುಕರಿಸಿ  || ೫೦ ||

ನೆರೆದ ಮಹಾನರನಾಯಕಸಭೆಯೊಳ | ಗರೆಬರ ಬುದ್ಧಿಯನೆಳಕುಳಿಯಾಡು |
ತ್ತರೆಬರಹಂಕಾರಮನೋವದೆ ಬಲ್ಸೂಱೆಗೊಳುತ ಬೞಿಕ ||
ಅರೆಬರ ಧೃತಿಯಂ ನೆಱೆಕವರುತ ಮ | ತ್ತರೆಬರೆಪೆಂತಂ ದಳವುಳಿಗೊಳುತಂ |
ಸ್ಮರಚಕ್ರೇಶನ ಸಲ್ಗೆಯ ಮದವತ್ಪ್ರಾಯಿತೆಯೆಯ್ದಿದಳು  || ೫೧ ||

ಬೆದರ್ದುದು ಬಗೆ ಬೆರ್ಚಿದುದೇೞ್ಚಱುನಾಣ್ | ಕೆಡರ್ದುದು ಗೆಲವೞಿದುದು ಜಾಣ್‌ ಜರಿದುದು |
ಬಿದಿರ್ದುದು ಬಿಂಕಂ ಬೀತುದು ಪರಿ ಪೈಸರವೋದುದು ಪೆಂಪು ||
ಉದಿರ್ದುದೊಡಲ ಬಲ್ಪೋಡಿತು ಗರುವಿಕೆ | ಮದವನ್ಮದನಮತಂಗಗಮನೆಯಂ |
ಮುದದಿಂ ನಡೆನೋಡುವ ನರಪಾಲಕನಂದನಸಂತತಿಗೆ  || ೫೨ ||

ಹಿಂದಣವರ್‌ಚಿಃ ಸಂಸಾರವಿದೇ | ಕೆಂದು ವಿರಕ್ತಹೃದಯರಾದರ್‌ಮೊಗ |
ಸಂದಿಸಿದವರಂಗಭವಗ್ರಹವಡರ್ದಂದದಿ ನೋಡಿದರು ||
ಮುಂದಣವರ್‌ ತಾವಂದೆಸಗಿದ ಸೈ | ಪಿಂದಱಿಯಲ್ಬಹುದೆನುತಿರ್ದರು ಪೂ |
ರ್ಣೇಂದುವದನೆ ನಡೆತರ್ಪಾಗಳ್‌ ನೋಡುವ ನೃಪಸಮಿತಿಯೊಳು  || ೫೩ ||

ಆ ಪೃಥಿವಿಪರೊಳ್‌ ತನ್ನಂ ಸೋಲಿಪ | ರೂಪಲಲಿತಯೌವನಸೌಭಾಗ್ಯಕ |
ಲಾಪರಿಣತನಪ್ಪೊರ್ವ ನರೇಶ್ವರನಂದನನಿರ್ದೆಡೆಗೆ ||
ಚಾಪಳನೇತ್ರೆ ನಡೆದಳಂಗಜನಿ | ಕ್ಷೇಪಂ ನೆಲಸಿದೆಡೆಗೆ ನವಮೋಹನ |
ದೀಪಕಳಿಕೆ ನಡೆವಂದದಿ ತಳತಳಿಸಲ್‌ಕೈದೊಡವೆಗಳು  || ೫೪ ||

ಬರುತ ಬರುತ ಕಟ್ಟಿದಿರೊಳಗೀಕ್ಷಿಸಿ | ತರುಣತರಣಿನಿಭತೇಜನನಭಿನವ |
ಸುರಭಿಶಿಳೀಮುಖನಂ ವಿಲಸಚ್ಛಶಿಕುಲಮಣಿದೀಪಕನಂ ||
ಪುರುಷೋತ್ತಮನಂ ಜಯನೃಪನಂ ಸರ | ಸಿರುಹವದನೆ ನೂತನರತಿಯತಿಬಂ |
ಧುರಕುವಲಯಲೋಚನೆ ನೂತನಭಾರ್ಗವಿ ನಡೆನೋಡಿದಳು  || ೫೫ ||

ಈ ವಿಧದಿಂ ನಡೆನೋೞ್ಪಭಿನವರತಿ | ದೇವಿಯ ನಯನಯುಗತ್ರಯಭಾಗದ |
ಧಾವಳ್ಯಂ ನಲವೇಱಿವಿರಾಜಿಸಿ ಪರಿದಡರುತ್ತಿರಲು ||
ಭೂವರಕುಲಚಂದ್ರನ ಕುರುರಾಜನ | ಲಾವಣ್ಯಲಸತ್ತನುವಲ್ಲರಿಯೊಳ್ |
ತೀವಿತು ಪುಳಕಂ ತಿಲಕಮಹೀಜದೊಳಲರೇಱುವ ತೆಱದಿ  || ೫೬ ||

ಬೞಿಕಾತನ ಲೋಚನಪುತ್ರಿಕೆಗಳ್ | ಲಲನೆಯ ತಲೆನವಿರೆಂಬ ತಮಾಲದ |
ತೋಳಪಾರವೆಯೊಳ್ತೊಳಲಿ ಪಯೋಧರಪರ್ವತಮಂ ಪತ್ತಿ ||
ಬಳಲಿ ಕರಂ ಬಾಸೆಯ ಬಡಬಟ್ಟೆಯೊ | ಳಿೞಿದು ಹೊಳೆವ ಹೊರ್ಕುೞ ತಿಳಿಗೊಳದೊಳ |
ಗೆಳಸಿ ಮುೞುಂಗಿ ವಿನೋದದಿ ಜಲನಾಡಿದುವು ಕೆಲಂಬೊೞ್ತು || ೫೭ ||

ಬೆಳಿತಿಗೆಗಣ್ಣ ಕಡೆಯ ಬೆಳ್ದಿಂಗಳೊ | ಳೆಳನಗೆ ಮಿನುಗುವ ಮೊಗದಾವರೆಯೊಳ್ |
ತೊಳಗುವ ಮೆಯ್ವೆಳಗಿನ ನೀರೊಳ್ ಸುಲಿಪಲ್ಲ ಕ್ಷತೆಗಳೊಳು ||
ಕುಳಿರ್ಗದಿರ್ವಕ್ಕಿಯ ಕುಸುಮಾಹಾರಿಯ | ಪೊಳೆವೆಳಮೀನ ಕರಿಯಹಕ್ಕಿಯವೊಲ್ |
ಲಲಿತಾಂಗಿಯ ಕಣ್ಗಳ್ ನಲಿದುವು ಭೂವರಕುಲಚಂದ್ರಮನ || ೫೮ ||

ಎಸೞಂಬುಗಳ ಹಿಳಿಕುಹಿಡಿದಾಗಳ್ | ರಸದಾಳಿಯ ಬಿಲ್ ಬಾಗುವೋಲ್ ನವ |
ರಸಿಕನ ರೂಪು ಕರಂ ಬಗೆದಾಳ್ ಪುಟ್ಟಿದ ಲಜ್ಜೆಯೊಳು ||
ಪೊಸಜವ್ವನೆ ಸಿರಿಮೊಗ ಬಾಗಲು ನಿಂ | ದೆಸಕಂಗಂಡು ಕೆಲದ ಕಂಚುಕಿ ರಂ |
ಜಿಸುವ ನವೀನಕುಸುಮಮಾಲೆಯನಿತ್ತುಸಿರಿದಳಿಂತೆಂದು || ೫೯ ||

ಕುರುಜಾಂಗಣಜನಪದದ ಮತಂಗಜ | ಪುರದಧಿನಾಥಂ ಶಶಿಕುಲದೀಪಂ |
ಸ್ಮರರೂಪಂ ಸೋಮಪ್ರಭತನುಜಂ ಸಕಲಕಲಾಪರಿಪೂರ್ಣಂ ||
ಪುರುಷನಿದಾನಂ ಪುರುಚರಿತಂ ಸುರ | ಪರಿವೃಢವಿಭವಂ ವಿನಯನಿದಾನಂ |
ಚರಮಾಂಗಂ ಜಯಜಾಯಾಪತಿ ಜಯನಿವಗಿಡು ಮಾಲೆಯನು || ೬೦ ||

ಎನುತೊರೆದಭಿಜಾತೆಯ ರಂಜಿಪ ನುಡಿ | ಯಿನಿದು ಮನಂಬುಗಲತ್ಯಾತುರದಿಂ |
ವನರುಹದಳಸಲ್ಲಲಿತವಿಲೋಚನೆ ಪೂಮಾಲೆಯನಾಂತು ||
ಅನುರಾಗದಿ ಗುಣರತ್ನಗಭೀರನ | ಮನಸಿಜನಿಭನೆಡೆಗೈತಂದಳು ಮೋ |
ಹನನಿಧಿ ಮೆಲ್ಲನೆ ನವಶೃಂಗಾರಶರಧಿಗೆಯ್ತರ್ಪಂತೆ || ೬೧ ||

ಸುರುಚಿರಸುಭಿಲತಾಂಗಿ ನಡೆದು ಬಂ | ದಿರದಾಸತ್ಪ್ರಭುವಂಶನಮೇರುಗೆ |
ಭರದಿಂ ಸೂಡುವ ಪದದೊಳಗಾನವಮಂದಾರದ ಮಾಲೆ ||
ಕರಮೆಸೆದುದು ಕುಸುಮಾಯುಧನಾಕೆಯ | ಕರಯುಗಕಂ ಮತ್ತವನ ಕೊರಲ್ಗಂ |
ಪಿರಿದುಂ ಬಿಡಬೇಡೆನುತಿಕ್ಕಿದ ಮೋಹನಶೃಂಗಲೆಯಂತೆ || ೬೨ ||

ಪೊಸಪೂಮಾಲೆಯನಿಕ್ಕಿದ ಬೞಿಕಾ | ರಸಿಕನ ಹೊರೆಯೊಳಬಲೆ ನಿಂದಿರಲಾ |
ಯೆಸಕಂಗಂಡು ಬಳಸಿ ನಡೆನೋಡುವ ಸಖಿಯರ ಕಣ್ವೆಗಳು ||
ಮುಸುಕಲ್ಮತ್ತವರಗಲದ ತೆಱದಿಂ | ದಸಮಾಯುಧನೃಪನೋವದೆ ಪಿಡಿದೆಸೆ |
ವಸಿಪಂಜರದೊಳ್ ಸೆಱೆಯಿಟ್ಟಂದಮನಂಗೀಕರಿಸಿದುದು || ೬೩ ||

ಅನಿತಱೊಳತ್ಯುತ್ತಮಮಣಿಗಣದಿಂ | ಮಿನುಗುವ ಪೊಸಮಿಸುನಿಯ ಪೊಂದೇರೊಳ್ |
ಮನಸಿಜನಿಭಜಯಭೂವರನಂ ಸುಕುಮಾರಿ ಸುಲೋಚನೆಯಂ ||
ಅನುರಾಗದಿ ಕುಳ್ಳಿರಿಸಿ ಬೞಿಕಮಾ | ಜನತಾಧೀಶನಕಂಪಂ ತತ್ಪುತ |
ಕಿನಿವಿರಿದುಂ ಸಂತೋಷದಿ ಬಹುಬಲಸಹಿತವೆ ಕಳುಹಿದನು || ೬೪ ||

ವಿತತವಿಬುಧಗಣಪೋಷಣಗುಣಸಂ | ಯುತನುಜ್ಜ್ವ ಲಸಕಲಕಲಾನಿಧಿಯವಿ |
ತರಕುವಲಯಮಹಿತಾನಂದಕರಂ ಸತ್ಪಥಗಿನಿರತಂ ||
ಹತವೈರಿತಮೋನಿಕುರುಂಬಂ ಸುವಿ | ದಿತತೇಜಃಪೂರಾವೃತಲೋಕಂ |
ಸತತಂ ಶೋಭಿಸಿದಂ ಶಶನಿಯಂತಾಪ್ರಭುಕುಲಮಣಿದೀಪಂ || ೬೫ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣ ||
ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಂ ಪಡೆದತ್ತೈದನೆಯ ಮಿಸುಪ ಸಂಧಿ || ೬೬ ||

ಐದನೆಯಸಂಧಿ ಸಂಪೂರ್ಣಂ