ಸೂಚನೆ || ಸತಿಯಂ ಬೇಡಿ ಸಮರಧರೆಗೆಯ್ದಿದ |
ಸಿತಗನ ರವಿಕೀರ್ತಿಯ ಬಲಮುಂ ಸ |
ನ್ನುತಸಾಹಸಿ ವಿಕ್ರಮಕೌರವ ಬಲಮುಂ ನೆಱೆ ಕಾದಿದುದು ||

ಸುಗುಣೆ ಸುಲೋಚನೆ ಸುದತೀರತ್ನಂ | ಬಗೆಯದೆ ತನ್ನಂ ಜಯಭೂಪಾಲಗೆ |
ಮಿಗೆ ಮೋಹಿಸಿ ಮಾಲೆಯನಿಕ್ಕಿದುದರ್ಕುೞಿದವನಿಪರ ಮುಖಂ ||
ಪೊಗೆಸುತ್ತಿದ ಪೊಂಗನ್ನಡಿಯಂದದಿ | ಪೊಗರೞಿದುವು ಪೊಗಸಿನ ಚಂದ್ರಂಬೊಲ್ |
ನಗೆಗೆಟ್ಟುವು ತುಹಿನಂ ತುಱುಗಿದ ತಾವರೆಯೆನೆ ಕೊರಗಿದುವು || ೧ ||

ಆ ನೃಪಸಮುದಯದೊಳ್ ಭರತೇಶ್ವರ | ಸೂನು ಪರಾಕ್ರಮಶಾಲಿ ಮದೋದ್ಧತ |
ಮಾನಸನತಿನಿಷ್ಠುರಿ ಸಿತಗಂ ರವಿಕೀರ್ತಿವೆಸರ ನೃಪತಿ ||
ಮಾನಿನಿ ತನ್ನಂ ನೋಡದೆ ಜಯಭೂ | ಮೀನಾಥಗೆ ಮಾಲೆಯನಿಡೆ ಕಂಡಭಿ |
ಮಾನಂಗೆಟ್ಟು ಮನದ ಖತಿಯಿಂ ತಾನಿಂತೆಂದೊದಱಿದನು || ೨ ||

ಛಪ್ಪನ್ನ ಮಹಾರಾಷ್ಟ್ರಂ ಮೊದಲಾ | ಗೊಪ್ಪುವ ಪೃಥಿವಿಪರೆಲ್ಲರ್ ತಮ್ಮಯ |
ದರ್ಪಮನುೞಿದೊಂದಿನಿಸುಂ ತಡವಂ ಮಾಡದೆ ತಮಗುಳ್ಳ ||
ನಿಪ್ಪೊಸತಪ್ಪ ಸುವಸ್ತುವನೆಮ್ಮಯ | ಬೊಪ್ಪಂಗೆಲ್ಲಾ ಲೋಕವಱಿವವೋಲ್ |
ಕಪ್ಪಂದೆತ್ತವರಲ್ಲದೆ ನಿರ್ನೆರಮಾಗಿರ್ದವರಿಲ್ಲ || ೩ ||

ಇಂದಾಸ್ತ್ರೀರತ್ನಂಬೆರಸುತ ತಾಂ | ಬಂದವನತನಾಗದೊಡೆಯಕಂಪನ |
ಕೊಂದು ಕುಲಮನೆಲ್ಲಮನಂತಕನೂರೌತಣಮಂ ಮಾೞ್ಪೆಂ ||
ಎಂದು ಗಜಱಿ ಘರ್ಜಿಸಿ ತೊಡೆಯಂ ಪೊ | ಯ್ದೊಂದಿನಿಸೞೊಳೊರ್ವಂ ಸಚಿವಂ ಭಯ |
ದಿಂದೆೞ್ದಾರವಿಕೀರ್ತಿಗೆ ಕರಯುಗಮಂ ಮುಗಿದಿಂತೆಂದಂ || ೪ ||

ಎಲೆ ಮಹಿಪಾ ಮನುವಂಶಲಲಾಮಾ | ಚಲಮಂ ಬಿಡು ನೀನವನೊಳಗೆಲ್ಲಾ |
ನೆಲನಂ ನಿಮ್ಮಯ್ಯಗೆ ತೋಳ್ವಲದಿಂ ಸಲೆ ಸಾಧ್ಯಂಮಾಡಿ ||
ಪಲರಾಯರ ಸಬ್ಬಸಮಂ ಕವರ್ದು | ಜ್ಜ್ವಲಿಸುವವರ ತಲೆವಣಿಯಂ ಮಣಿಯಿಸಿ |
ದಲಘುಭುಜಂವಿಕ್ರಮಕೌರವಜಯರಾಜಶಶಾಂಕನೊಳು || ೫ ||

ಈ ತೆಱದಿಂ ಸಚಿವೋತ್ತಮನಾಡಿದ | ಮಾತ ಮನದೆಗೊಳ್ಳದೆ ಕಿನಿಸುತ್ತವಿ |
ನೀತಂ ಖರಕರಕೀರ್ತಿಕುಮಾರಂ ದೂತರನಟ್ಟಿದನು ||
ಆತನ್ವಂಗಿಸುಲೋಚನೆಯಂ ಸ | ತ್ಪ್ರೀತಿಯಿನಿತ್ತು ಬರ್ದುಂಕುವುದೆನುತ |
ತ್ಯಾತುರದಿಂ ವಾರಾಣಸಿಯಧಿಪನಕಂಪಮಹಿಪನೆಡೆಗೆ || ೬ ||

ಬಂದಾದೂತನಕಂಪನೃಪತಿಗಿಂ | ತೆಂದನೆಲೇ ಮನ್ನೆಯ ನಿನ್ನಣುಗಿನ |
ನಂದನೆಯಂ ನೇಹದಿನೆಮ್ಮೊಡೆಯಗೆ ರವಿಕೀರ್ತಿಗೆ ಭರದಿ ||
ತಂದಿತ್ತು ತುೞಿಲ್ಗೆಯ್ದತಿಭರದಿಂ | ಮಂದೇತರಭಾಗ್ಯಂದಳೆವುದು ಲೇ |
ಸೆಂದತಿನಿಷ್ಠುರವಚನಮನಾಡಲ್ ಕೇಳ್ದವನಿಂತೆಂದಂ || ೭ ||

ಪೞಿಗಂಜದೆ ಪಾೞಿಯನುಲ್ಲಂಘಿಪು | ದಿಳೆಯೆನ್ನದ ಪಾತಕಮಂ ಬಗೆಯೊಳ್ |
ತಳೆವುದರಸುಮಕ್ಕಳ ಮತವೇ ಎಂದಾವಾರಾಣಸಿಯ ||
ಪೊೞಲರಸಂ ರವಿಕೀರ್ತಿಕುಮಾರನ | ಬೞಿಯಿಂ ಬಂದ ಭಟನೊಳಾಡುವ ನುಡಿ |
ಗಳುಮಂ ಕೇಳಿ ಕೆಳರಿ ಜಯಭೂವರನಿಂತೆಂದೊದಱಿದನು || ೮ ||

ಪೆಣ್ಣಂ ಬಱಿದ ಬಯಸಿ ಮೊಗಮಂ ಬಾ | ತಣ್ಣಗೆ ರಣಮಂಡಪದೊಳು ರಕುತದ |
ಬಣ್ಣದ ಬಾಸಿಗಗಟ್ಟಿಸಿ ಮತ್ಕೋಪಾನಲಸಾಕ್ಷಿಯೊಳು ||
ಉಣ್ಣದರೂರೊಳಗಣ ದೇವಿಯರಂ | ನುಣ್ಣಿಸಿದಸಿಧಾರಾಪೂರ್ವಕದಿಂ |
ತಿಣ್ಣನೆ ಕೈಗೂಡಿಸಿ ಭೂತಮುಮಂ ಬಿರ್ದುವೊಲೆಯ್ದಿಸುವೆಂ || ೯ ||

ಎಂದು ವಿಭಾಡಿಸಿ ತಗುಳಲ್ ದೂತಂ | ಬಂದಾಕ್ಷಣದೊಳ್ ವಿಕ್ರಮಕೌರವ |
ನೆಂದಂದಮನೊರೆಯಲ್ ಕೇಳ್ದಾರವಿಕೀರ್ತಿಮಹೀಪಾಲಂ ||
ಮುಂದಪ್ಪಪಕೀರ್ತಿಯನಿನಿಸೆಣಿಸಿದೆ | ಮಂದೇತರಕೋಪದಿ ಘರ್ಜಿಸುತ |
ರ್ಪಂದಂ ಪೋಲ್ತುದು ಕೇಸರಿ ಮೊೞಗಂ ಕೇಳ್ದು ಕನಲ್ವಂತೆ || ೧೦ ||

ಉಕ್ಕುವ ಘೃತಕುದಕಂಬೊಯ್ದೊಡೆ ಮೇ | ಲಕ್ಕುರಿಯೇೞ್ವಂದದಿ ತನಗೆನಸುಂ |
ತಕ್ಕರೊರೆದ ಚೊಕ್ಕಳಿಕೆಯ ನುಡಿ ಕಿವಿಯಂ ಮಿಗೆ ಪುಗೆ ಮನದ |
ಮೊಕ್ಕಳಮಾದ ಮುನಿಸು ನಸು ತಗ್ಗದೆ | ಯುಕ್ಕೆವಗೆಯ್ತದ ರವಿಕೀರ್ತಿನೃಪಂ |
ಕಕ್ಕಸಕೀಪ್ಸಿತನಾಗಿ ರಣಕ್ಕುಜ್ಜುಗವನೆ ಮಾಡಿಸಿದಂ || ೧೧ ||

ಬಲಯುತಜಯರವಿಕೀರ್ತಿನೃಪರ ಕೊಳು | ಗುಳಮಂ ನೋಡುವೊಡೆಳವೆಯೊಳಲ್ಲದೆ |
ಕಳಿದ ವಯಸ್ಸಿನ ಕಣ್ಗತಿಮಾಂದ್ಯಮೆನುತ್ತಮೃತಾಬ್ಧಿಯೊಳು ||
ಮುೞುಗಿ ಕೆಲಂಬೊೞ್ತಿರ್ದಾ ಸೂದೆ ಮೆ |
ಯ್ಯೊಳೆಯಜರತ್ವಂದಳೆದೆೞ್ದಂದದಿ | ಜಲರುಹಸಖನಸ್ತಂಗತನಾಗಿ ಬೞಿಕಮುದಯಂಗೆಯ್ದಂ || ೧೨ ||

ಆ ರವಿಯುದಯದೊಳತ್ತಲ್ ಜಯಧರ | ಣೀರಮಣೀಪತಿಯುಪ್ಪವಡಿಸಿ ನವ |
ನೀರರುಹೋಪಮವದನಂದೊಳೆದಭಿವಂದಿಸಿಯಭವನನು ||
ಭೀರುತೆಯಿಂದೆ ನಮೋಸ್ತುಗಳಿಗೆ ಮನ | ವಾಱೆಮಣಿದು ಮಾಣಿಕದೊಡವಿಂ ಶೃಂ ||
ಗಾರಂಗೆಯ್ದಿರಲಿತ್ತಿನಕೀರ್ತಿಮಹೀಶನ ಸೇನೆಯೊಳು || ೧೩ ||

ಸೂೞಯಿಸಲ್ ನಿಸ್ಸಾಳಮನದಱೌ | ಭೀಳಧ್ವನಿ ಸರ್ವೋರ್ವೀತಳಮಂ |
ತಾಳಿದನಾನರನಾರಾಯಣನೊಱಗಿದ ಹಕ್ಕೆಯ ಹಾವಾ ||
ಶೂಲಿಯ ಕಿವಿಯೊಳ್ ಪಾಡುವ ಫಣಿಗಳ | ಕೇಳುವ ಕಿವಿ ಕೆತ್ತುವ ಕಾರಣದಿಂ |
ವ್ಯಾಲೀಕುಲಕೆನಿಜಶ್ರುತಿಶೂನ್ಯಂ ತಾನಂದಿಂತಾಯ್ತು || ೧೪ ||

ಕೂರಸಿಯಂ ಮಸೆಯಿಪ ಗುೞಮಂ ಮದ | ವಾರಣತತಿಗಿಕ್ಕುವ ತೇಜಿಗಳಂ |
ತೇರ ನೊಗಕೆ ಹೂಡುವ ಕುದುರೆಗೆ ಕುಱುಹಿನ ಸಂಜೋಗಗಳಂ ||
ಸೇರಿಸುತುಂ ನೂತನಸಂಗ್ರಾಮ | ಪ್ರಾರಂಭದೊಳೆನಿತುಂ ಸಂಭ್ರಮದೊಳ್ |
ಬೀಱುತೆ ಮರುಳ್ಗೊಂಡಂದದಿನಾಲ್ದೆಱದತಿಬಲರೆಸಗಿದರು || ೧೫ ||

ಪಾಯವದಾರು ಪೃಥಿವಿಪಾಲಕ ಪರ | ರಾಯಭಯಂಕರ ವಿದಿತಪರಾಕ್ರಮಿ |
ಜೀಯ ಜಯಾಂಗನೆಗಧಿಪತಿಯಾಹವದಕ್ಷಿಣದಿಗಧೀಶಾ ||
ಆಯತವೆಂದೆನುತುಂ ಪ್ರತಿಹಾರನಿ | ಕಾಯಂ ಚೆಚ್ಚರದಿಂ ಘೂರ್ಣಿಸಿದ |
ತ್ತಾಯಿನಕೀರ್ತಿಮಹೀಶಂ ಧುರಧರೆಗೆಯ್ದುವ ಸಮಯದೊಳು || ೧೬ ||

ಉರುಕಾಶ್ಮೀರ ಮಗಧ ಮಾಳವ ಗೂ | ರ್ಜರ ಗೌಡಮುರಸ್ಥಲಕೌಶಲ ಬ |
ರ್ಬರ ಭೋಟ ಮಹಾಭೋಟ ಕಳಿಂಗ ಸುರಮ್ಯ ಮಹಾರಾಷ್ಟ್ರ ||
ಮರಹತ ಪಾಂಚಾಳಾಂಧ್ರ ದ್ರಾವಿಡ | ವರಕೇರಳ ಕರ್ಣಾಟ ಜನಾಂತದ |
ಧರಣೀಶ್ವರರಾಖರಕರಕೀರ್ತಿಮಹಿಪನೊಡನೆಯ್ದಿದರು || ೧೭ ||

ದಿಕ್ಕರಿನಿಕುರುಂಬಮನುರುಮುದದಿಂ | ಧಿಕ್ಕರಿಸುವ ಗಜಘಟೆ ಘನದೊಳ್ ಖುರ |
ಮಿಕ್ಕುವ ಮಿಕ್ಕ ಮನದ ತುರಗಂ ರವಿರಥಮಂ ಪರಿತದೊಳು ||
ಲೆಕ್ಕಂಗೊಳ್ಳದ ತೇರಂತಕನೊಳ | ಗೆಕ್ಕೆಯೊಳಂ ಹೊಕ್ಕುಳಿಗೊಳ್ವೆನೆನಿ |
ಪ್ಪೆಕ್ಕತುಳದ ಭಟನಿವಹಂ ನಡೆದುದಿಳಾಧಿಪನಂ ಬಳಸಿ || ೧೮ ||

ಜವನಂ ಜಕ್ಕುಲಿಸುವ ಹೆಮ್ಮಾರಿಯ | ಹವಣಂ ನೋಡದೆ ಕೆಣಕುವ ಮಿೞ್ತುವ |
ನವಗಡಿಸುವ ಭೈರವನಂ ಬಲ್ಬೀರತೆಯಿಂ ಬೆದಱಿಸುವ ||
ಬವರಕೆ ಬರಲೆನುತುಂ ಕಡೆಗಾಲದ | ಭವನಲ್ಲಿಗೆ ಭಟ್ಟರನಟ್ಟುವ ಭಟ |
ನಿವಹಂ ನಡೆತಂದುದು ಬಲ್ಲಾಳಿನಕೀರ್ತಿಮಹಿಪನೊಡನೆ || ೧೯ ||

ಕದನೋದ್ಧತರೆನಿಸುವ ಕಾಲಾಳ್ಗಳ | ಕುದುರೆಯ ಕೂರಾನೆಯ ಭಟನಿವಹದ |
ಪದಹತಿಯಿಂ ಧರಿಸಿ ರಜೋಪಮರೂಪದಿನಂಬರತಳಮಂ ||
ಪುದಿದಾಪೃಥಿವೀತಳಮತಿಲಘುವಡೆ | ಯದೊಡಾಪೆರ್ಬಲಭಾರಕೆ ತಲೆಮುಱಿ |
ಯದೆ ಸುಮ್ಮನೆ ಮಾಣ್ದಪುದೇ ಭೂತಳಮಂ ಪೊತ್ತಹಿಪತಿಯ || ೨೦ ||

ಈ ತೆಱದಿಂದೆಯ್ತಂದಾಹವಧರ | ಣೀತಳದೊಳ್ ಮದಹಸ್ತಿರಥಾಶ್ವಪ |
ದಾತಿಯ ಪೌಜುಗಳಂ ನೆಲೆಗೊಳಿಸಿ ಭರತಸುತನಿರಲತ್ತ ||
ಆ ತೆಂಕಣದಿಗಧೀಶ್ವರನೆನೆ ವಿ | ಖ್ಯಾತಪರಾಕ್ರಮಶಾಲಿ ಜಯಸ್ತ್ರೀ |
ಪ್ರೀತಿಪದಂ ಜಯಭೂಪತಿ ರಣರಸಿಕಂ ಕದನಕೆ ನಡೆದಂ || ೨೧ ||

ಭುವನಕಾಶ್ಚರ್ಯಮೆನಿಪ್ಪೆಮ್ಮಾ | ಹವಮಂ ನೋಡಲ್ ಬನ್ನಿಮೆನುತ್ತುಂ |
ದಿವಿಜೇಂದ್ರನುಮಂ ದಿಗಧೀಶರುಮಂ ದರ್ವೀಕರಪತಿಯಂ ||
ತವಕಂ ಮಿಗೆ ಕರೆಯಲ್ಪೊಪಂದದಿ | ನವಿರಳಮಾದ ಸಮರಸನ್ನಾಹದ |
ವಿವಿಧಮಹಾಭೇರಿಯ ಬಲ್ದನಿ ಬಳಸಿತು ಮುಪ್ಪೊಡವಿಯನು || ೨೨ ||

ತಿಹುರಮನುರಿಪಲ್ ತ್ರಿವಿಲೋಚನನಾ | ದ್ರುಹಿಣಚತುರ್ಭುಜರಾದಿಯ ಸುರಬಲ |
ಸಹಿತಂ ದಿವ್ಯವರೂಥಮನಡರ್ದೆಯ್ದುವ ತೆಱದಿಂ ತನಗೆ ||
ವಿಹಿತರ್ ವಿಜಯಜಯಂತಾನುಜರುಂ | ಬಹುಭೂಮೀಭುಜರುಂ ತನ್ನೊಡವರೆ |
ಮಹಿಮಂ ಮಣಿದೇರೇಱಿ ರಣಕ್ರೀಡೆಗೆ ಕಡುಪಿಂ ಬಂದು || ೨೩ ||

ಸೆರಗಂ ಪಾರದ ಸೇನೆಗಳೆರಡಱ | ಸರಿಮಿಗಿಲಂ ನೋಡದ ತತ್ಕಾರ್ಯಂ |
ಬೆರಗಹುದಲ್ಲೆನ್ನದ ಸಮರದ ಸಮಕಟ್ಟಂ ಸಮನಿಸದ ||
ಹರಣದ ಬಿಯಕೊಂದಿನಿಸುಮನೆಣಿಸದ | ದೊರೆಗಲಿಗಳ್ ಬಿನದಕೆ ನಡೆವಂದದಿ |
ಹರಿಸಂ ಮಿಗೆ ನಡೆತಂದರಿಳಾಧೀಶ್ವರನಂ ಮೂವಳಸಿ || ೨೪ ||

ಈ ವಿಧದಿಂದಾವಿಕ್ರಮಕೌರವ | ದೇವಂ ಮುನ್ನೊಡ್ಡಿದ ರವಿಕೀರ್ತಿಮ |
ಹೀವರನುದ್ಧತಚಕ್ರವ್ಯೂಹಮನಿದಿರೊಳ್ ಕಾಣುತವೆ ||
ತೀವಿದ ಮುನಿಸಿಂದವೆ ಬೆಸಸಲ್ ಸೇ | ನಾವರರಿಕ್ಕಿದ ಪದ್ಮವ್ಯೂಹಂ |
ಭೂವಲಯಕ್ಕದುಬುತಮಪ್ಪಂತೆಯಗುರ್ವಂ ತಾಳಿದುದು || ೨೫ ||

ತಳಿತಳಿಸುವ ತರವಾರಿಯ ಪೊಳಪುಗ | ಳೆಳಮಿಂಚವನಿಪರಿಕ್ಕಿದ ನುಣ್ದೊಡ |
ವೆಳಗಿಂದಿರವಿಲ್ ಭಟನಿಕುರುಂಬದ ಬೊಬ್ಬೆಯ ಕಲಕಲಮೇ ||
ಮೊೞಗು ಬಿಡುವ ಬಿಱುಸರಲೆಱಗುವ ಸಿಡಿ | ಲೆಳೆಹೊಱದಾನೆಕುದುರೆಬಲುದೇರಾ |
ಳ್ವಲವೊಡ್ಡಣಮೊಪ್ಪಿತು ಕಡೆಗಾಲದ ಮುಗಿಲೊಡ್ಡಣದಂತೆ || ೨೬ ||

ಹೊಳಕೆಗೆ ಹೊಸವೀಳೆಯವೀಯೆಂಬ | ಗ್ಗಳಿಕೆಯ ಪಂತದ ಪಲವಾತುಗಳಂ |
ಗಳಪುವ ಕುಱುಹಿನ ಸಂಜೋಗಗಳಂ ಕುಡವೇೞ್ವುಡೆನೂಲಂ ||
ಘಳಿಲನೆ ಪಱಿವ ಸೆಲಂಬೇಡುವ ಭುಜ | ಬಲಶಾಲಿಗಳುಗ್ರತೆಯಿನುಲಿವ ಕಲ |
ಕಲಮುಭಯವ್ಯೂಹದ ದೊರೆದೊರೆಗಳ ಬಳಸಿನೊಳುಣ್ಮಿದುದು || ೨೭ ||

ಪಡೆವಳರಾಕ್ಷಣದೊಳ್ ಕೈವೀಸಲ್ | ಕಡೆಗಾಲದ ಪೂರ್ವಾಪರದಿಕ್ಕಿನ |
ಕಡಲೆರಡುಂ ಮೇರೆಯನುಲ್ಲಂಘಿಸಿ ಪಿರಿದುಂ ಘೂರ್ಣಿಸುತ ||
ನಡೆದು ಮಹೀತಳಮಧ್ಯದೊಳದಿರದೆ | ಕಡುಪಿಂ ತಾಂಗುವ ತೆಱದಿಂದಾಬ |
ಲ್ವಡೆಯೆರಡುಂ ತಾಂಗಿದುವಾರುಬಟೆಯಿನದುಬುತಮಪ್ಪಂತೆ || ೨೮ ||

ಹಸಿದ ಹಿರಯಹುಲಿ ಹಸುವಿಂಡಂ ಕಡು | ಮಸಕದಿ ಹುಗುವಂದದಿ ಪಂಚಾಸ್ಯಂ |
ಪಸುಳೆವಿಡಿಯ ಪಿಂಡಂ ಕೆಕ್ಕಳಗೆಳರ್ದದಿರದೆ ಹುಗುವಂತೆ ||
ಅಸಹಾಯಪರಾಕ್ರಮದಾಹವರಾ | ಕ್ಷಸರನಿಪಗ್ಗದ ಭಟಸಂತತಿಯಿದಿ |
ರಸುಹೃದ್ಬಲಮಂ ಲೆಕ್ಕಂಗೊಳ್ಳದೆ ಹೊಕ್ಕಿಱಿದುದು ಭರದಿಂ || ೨೯ ||

ಮಾಸತಿ ಮಾರುತಸಖಮುಖಕುಂಡಮ | ನೋಸರಿಸದೆ ಪುಗುವಂತೆ ಪತಂಗಂ |
ಕೇಸುರಿಯೊಳ್ ಬೀೞ್ವಂತಸುವಿನದೊಂದಾಸೆಗ ಬಗೆಗೊಡದೆ ||
ಮಾಸದದಟಿನಿಂತತಿಭರದಿಂದ ಮ | ಹಾಸೇನೆಯಗುರ್ವಂ ಕಾಣುತವೆಯು |
ದಾಸೀನದೆ ಹೊಕ್ಕೞಿದುದು ಭಟರೆವೆಹಳಚುವ ಸಮಯದೊಳು || ೩೦ ||

ಎಕ್ಕೆಯೊಳೊಕ್ಕು ಪಳಂಚುವ ಪಾಂಗಿಂ | ತಕ್ಕು ಮಿಗಲ್ಕೆಕ್ಕತುಳಂ ಪೊರ್ಕುೞಿ |
ವೊಕ್ಕು ಕರಂ ಖಾಸಾಖಾಡಿಯೊಳುಱದಿಱಿದರ್ ತಮ್ಮೊಳಗೆ ||
ಲೆಕ್ಕಿಸದಸುವೞಿದಪುದೆನುತುಂ ದಶ | ಲಕ್ಕಪಯಿಂಛಾಸಿರಶತಕೋಟಿಬ |
ಲಕ್ಕೋರೊರ್ವರೆನಿಸುವಱಿಕೆಯ ಸಾಸಿಗರಾಸಮಯದೊಳು || ೩೧ ||

ಕರುಳುಗಳೊಳನೂಂಕುತ್ತುಂ ಮೊಗದೊಳ್ | ಸುರಿತಹ ಬಿಸುನೆತ್ತರನೊರಸುತ್ತುಂ |
ಕರವಾಳಿಂ ಮಿಗೆ ಪೊಯ್ಯಲ್ ಜೋಲ್ವ ತೊವಲನುತ್ತರಿಸುತ್ತುಂ ||
ಸರಲುಗಿಯಲು ಸರಿಗಣೆಯಂ ಮುಱಿಯುತ | ಮರಳಿಮರಳಿಯಾಳಾಳೊಳೊಡರ್ಚು |
ತ್ತುರವಣೆಯಿಂ ಪಡಲಿಟ್ಟಂದದಿನುರುಳ್ದುದು ಭಟತತಿ ಭರದಿಂ || ೩೨ ||

ಕಡಿಯಲ್ ಪಾಱುತ ಕೆಡೆವನ್ನೆಬರಂ | ಬಿಡದಾರುವ ಬೀರರ ತಲೆಯಸಿಯಂ |
ಜಡಿಯುತ್ತುಂ ಕಿತ್ತಡಿಯಂ ನಡೆಯುತ್ತುರುಳ್ವಟ್ಟೆಯ ತಂಡಂ ||
ಮಡಿದುಂ ಮುಂ ಪೆಣರ್ದರ ಮುಂದಲೆಯಂ | ಪಿಡಿದು ಬಿಡದ ಸಸಿಗವೆಣದಿಂತಿಣಿ |
ಯೆಡೆವಿಡಿದತ್ತಲರ್ವೞೆಯೊಳ್ ನೋಡುವ ಸುರತತಿ ಪೊಗೞ್ವಿಂತೆ || ೩೩ ||

ಪಡಲಿಟ್ಟಂದದಿ ಪಟುಭಟನಿವಹಂ | ಕಡಿಕಂಡಮುಮಾಗುತ ಮುಂಗುಡಿಯೊಳ್ |
ಕೆಡೆಯುತ್ತಿರೆ ಕಾಣುತೆ ಕೆಕ್ಕಳಗೆಳರ್ದಶ್ವಾರೋಹಕರು ||
ಕಡೆಯವತಾರದ ಹರಿ ಬಹುರೂಪಂ | ಪಡೆದು ಕರಂ ಕೆಂಗಣ್ಮಸಗುತ್ತುಂ |
ಕಡುಪಿಂದೇಱುವ ತೆಱದಿಂ ರಾವುತರೇಱಿಯಿದಿರ್ಚಿದರು || ೩೪ ||

ಈ ನೆಲನತಿಕರ್ಕಶತರಮೆನುತನು | ಮಾನಿಸದೇಱಿದಕಾಯಿತ್ತೆನುತ ನಿ |
ದಾನಿಸದಾಮೋಹರಮಂ ಹೊಕ್ಕು ಹೊಱಡಲಳವಲ್ಲೆನುತ ||
ಆನದೆಯೀಯಸುವೞಿದಪುನೆನುತುಂ | ಜಾನಿಸದತಿಸಂಭ್ರಮದಿಂ ವಾಹಳಿ |
ಗಾನಂದದಿನೇಱುವವೊಲು ರಾಹುತರೇಱಿದರತಿಭರದಿಂ || ೩೫ ||

ಜೋಡನೊಡೆದು ತಡೆಯದೆ ಬೆಂಗಡೆಯೊಳ್ | ಮೂಡಿದ ಬಲ್ಲೆಯದಿಂ ಬಲುಚಿಪ್ಪಂ |
ಜೋಡಿಸಿದಾಸೀಸಕಮಂ ಹಱಿದಾಶಿರಮನೆರೞ್ಕಂಡಂ ||
ಮಾಡುವ ಕೂರ್ವಾಳಿಂ ಮೆಯ್ಯೆಲುವಂ | ಕೂಡೆ ಕೆದಱಿಸುವ ಲೌಡಿಗಳಿಂದಂ |
ರೂಡಿಸಿದಶ್ವಾರೋಹಕಸಂತತಿಯುರುಳ್ದುದವನಿತಳಕೆ || ೩೬ ||

ಅದಱಿಂ ಪೆಡಪೌಜಿನೊಳೊಟ್ಟೈಸಿದ | ಮದಮಾತಂಗದ ಬಲ್ವಿಣಿಲೇಱಿದ |
ಕದನೋದ್ಧತಮಾನುಷರೆನಿಪ್ಪಗ್ಗದ ಮಾವತಿಗರ್ಭರದಿಂ ||
ಕುದುರೆಗಳಾಮೋಹರದೊಳಗುಱೆಯುರು | ಳ್ದುದನೀಕ್ಷಿಸುತಿನಿವಿರಿದುಂ ಕೋಪದಿ |
ನದಟು ಮಿಗಲ್ಕೇಱುವ ಹಾಣಾಹಣಿಯಿಂದ ನಿರ್ಮಿಚಿದರು || ೩೭ ||

ಇರುಳೊಡ್ಡಿರುಳೊಡ್ಡಿನೊಳಸಿತೋದಧಿ | ಯುರುವೀಚಿಗಳಾವುರುವೀಚಿಗಳೊಳು |
ಮೊರಡಿಗಳಾಬಲ್ಮೊರಡ್ಡಿಗಳೊಳ್ ಕಡೆಗಾಲದ ಮುಗಿಲೊಡ್ಡು ||
ಭರದಿಂದಾಕಾಲದ ಕಾರ್ಮುಗಿಲೊಳ್ | ಪಿರಿದುಂ ಮುಳಿದು ಪಳಂಚುವ ಪಾಂಗಿಂ |
ದೆರಡುಂ ಪವುಜಿನ ಪೇರಾನೆಯ ತಟ್ಟೇಱೆಯಿದಿರ್ಚಿದರು || ೩೮ ||

ಪಿರಿದುಂ ಕೋಪಾಟೋಪದಿ ಸಗ್ಗದ | ಪರಿವೃಢನಿಡೆ ಪವಿದಂಡದ ಹತಿಯಿಂ |
ದೆರಡುಮೆಱಂಕೆ ಹಱಿದು ವಸುಧಾತಳದೊಳಗುರುಳುತ್ತಿರ್ಪ ||
ಧರಣೀಧರತತಿಯೆಂಬಂದದಿ ಪ | ಕ್ಕರಿಕೆ ಹಱಿದು ರಣಗಹ್ವರಿಯೊಳಗಿರ |
ದುರುಳೆ ಕೆಡೆದ ಬಹುಮದಮಾತಂಗದ ಪೌಜು ವಿರಾಜಿಸಿತು || ೩೯ ||

ಕೞಿಲೆವಿದಿರ ಕಾಡಂ ಕರ್ವಾೞೆಯ | ಹೞುವಂ ಮೊಗವಾಳೆಯ ಬಲ್ಗಾಡಂ |
ಬೆಳೆಗಸಕಿಲ ಬನವಂ ಜವನೋವದೆ ಕುಮ್ಮರಿಗಡಿವಂತೆ ||
ಕಳೆದ ರದಂ ಕಡಿದಿಕ್ಕಿದ ಸೊಂಡಿಲು | ಪೊಳಚಿದ ಕಿವಿ ಕತ್ತರಿಸಿದ ಬಾಲಂ |
ಗಳಿನಾಬಲ್ಲಾನೆಯ ಬವರದ ನೆಲನತಿವಿಭ್ರಾಜಿಸಿತು || ೪೦ ||

ಹತಮಾದಾಯಿಭದೊಡ್ಡಣಮಂ ಕಾ | ಣುತ ಕಡುವಿರಿದುರುವಣೆಯಿಂದತಿರಥ |
ರತಿರಥರೊಳ್ ಸಾಹಸಯುತಸಮರಥರೊಡನಾಸಮರಥರು ||
ವಿತತಮಹಾರಥರೊಡನೆ ಮಹಾರಥ | ರತುಳಪರಾಕ್ರಮದರ್ಧರಥರೊಳು |
ದ್ಧತಭುಜಬಲದರ್ಧರಥರ್ ಕೂಡಿ ಮುಸುಕಿ ಪಳಂಚಿದರು || ೪೧ ||

ಸಾರಥಿಗಳ ಬೊಬ್ಬೆಯ ಚಕ್ರದ ಚೀ | ತ್ಕಾರದ ನೊಗಕಿಕ್ಕಿದ ತೇಜಿಯ ಹೂಂ |
ಕಾರದ ದಿವ್ಯಶಿಳೀಮುಖಮಂ ಬಿಡುವೆಡೆಯೊಳು ಶೋಭಿಸುವ ||
ನಾರಿಯ ಟಂಕಾರದ ರಥಿಕರ್ ಬಿಡ | ದಾರುಬಟೆಯಿನೊದಱುವ ಮೂದಲೆಗಳ |
ಭೂರಿರವಂ ಧುರಧರಣೀಸತಿ ಜವನಂ ಪೊಗೞ್ವಂತಾಯ್ತು || ೪೨ ||

ಕೆಲಬರ್ ಬಿನ್ನಣಿವಿಲ್ಲವರೆಚ್ಚಾ | ಜಲಬಾಣಂ ನಳನಳಿಸುತ್ತಂಬರ |
ತಳದೊಳ್ ಪರಿಯುತ್ತಿರಲಾಯೆಡೆಯೊಳ್ ಕೆಲರುರವಣೆಯಿಂದ ||
ಬಲಿದೆಚ್ಚಾಕವಲಂಬರೆಬರ ಪಂ | ದಲೆಗೊಂಡದಱೊಳಗುಚ್ಚಳಿಸುತ್ತಿರೆ |
ವಿಲಸದ್ಗಗನನದಿಯ ತಡಿಯರುಣಾಂಬುಜವನದಂತಾಯ್ತು || ೪೩ ||

ಗಾಳಿವಱೆಯೊಳೆಲ್ಲಂ ತೀವಿತು ಶರ | ಜಾಳಮಱಿದ ಸಾಸಿಗರಸು ಸಗ್ಗಕೆ |
ದಾೞಿಡುವುದಱಿಂ ಸರಸೀರುಹಬಾಂಧವಮಂಡಲದೊಡಲು ||
ಜಾಳಾಂದರವೋದುದು ಸುರಲೋಕದ | ಪಾೞೆಲ್ಲಂ ಮನೆಗಟ್ಟಿದುದಲ್ಲಿಯ |
ಲೋಲಾಕ್ಷಿಯರೆಲ್ಲಂ ಸಿಂಗರಿಸಿದರಾಬಲ್ಬವರದೊಳು || ೪೪ ||

ಉಡಿದುಂ ನೊಗನನು ಬದ್ದಾಶ್ವಂಗಳ್ | ಮಡಿದುಂ ಮುಂದೇಱಿದ ಸಾರಥಿ ಹೊಡೆ |
ಗೆಡೆದುಂ ಗಾಲಿಗಳಿರ್ಪ್ಪೋಳೊಡೆದುಂ ಕವಚಂಗಳ್ ಪಱಿದುಂ ||
ಎಡಬಲದವರೞಿದುಂ ಬಲುಗಾಯಂ | ಬಡೆದುಂ ಬಿಡದೆ ಚಲಮನಾರಥಿಕರ್ |
ಕಡುಗಲಿತನಮಂ ಮೆಱೆದೆಚ್ಚಾಡಿದರಸು ಕಳಿವನ್ನೆವರಂ || ೪೫ ||

ಈಯಂದದಿ ನಾಲ್ದೆಱದ ವರೂಥಿನಿ | ಕಾಯದ ಹಾಹೆ ನೊಗಂ ಮಡವಿ ಚ |
ಚ್ಛಾಯಮನೋವದೆ ಕುಮ್ಮರಿಗಡಿದಂದದಿ ಬಿೞೆ ಕಾಣುತವೆ ||
ಆಯತಿಯಿಂದರನೆಲೆಯೊಳ್ ನೆಲಸಿದ | ಜೇಯೆರೆನಿಪ ಜನತಾಧಿಪವಿತತಿ ನಿ |
ರಾಯಸದಿಂ ತಮ್ಮಯ ಚತುರಂಗಬಲಂಬೆರಸೇಱಿದರು || ೪೬ ||

ಅಂತಕಚಕ್ರೇಶ್ವರನಂತಃಪುರ | ಕಾಂತಾಜನದಡಿಯೂಡಲೆನುತ ಕಡು |
ಸಂತಸದಿಂ ಧುರಧರಣೀಸತಿ ಪಲವಲತಗೆವಡಲವನು ||
ತಾಂ ತಾಳಿದಳೆನಲಚ್ಚು ಮುಱಿದು ರಕು | ತಂ ತವೆ ಪೊರೆದು ಮಹಾರಥಚಕ್ರದ |
ತಿಂತಿಣಿ ಬಿೞ್ದು ಕರಂ ಕಣ್ಗೊಪ್ಪಂಬಡೆದುದು ಪರಕಲಿಸಿ || ೪೭ ||

ಸುರಸಮಿತಿಯುಮಸುರವ್ರಜಮುಂ ಪಿರಿ | ದುರವಣೆಯಿಂ ಕಲಹಂಗೈವಂದದಿ |
ನೆರಡುಂ ವಾಹಿನಿಯೊಳ್ ತಂತಮ್ಮಯ ಮೆಯ್ಗಾಪಿನೊಳಿರ್ಪ ||
ಉರುತರಭುಜಬಲಶಾಲಿಗಳೆನಿಪನು | ಚರವೇತಂಡ ತುರಗರಥಬಲಮಂ |
ಭರದಿಂದೊಡವೆರಸಿ ಕರಂ ಕೋಪದಿನೇಱಿದರದಟಿಂದ || ೪೮ ||

ಒಂದು ಬಲಮನೊಂದು ಬಲಂ ನೂಂಕದೆ | ನಿಂದುಱದಿಱಿಯುತ್ತಿರೆ ಕಾಣುತುಮರ |
ವಿಂದಸುಹೃತ್ಕೀರ್ತಿಯ ಪಕ್ಕದ ನಾನಾದೇಶಾಧಿಪರ ||
ಗೊಂದಣಮತಿವೇಗದಿ ತಮ್ಮೆರೆವೆಸ | ದಿಂದ ಕಱುತ್ತಾಜಯನೃಪಬಲಮಂ |
ಸಂದಣಿಸಿದ ಬಲವೆರಸಿ ಕರಂ ಮೂವಳಸಂ ಮುತ್ತಿದುದು || ೪೯ ||

ಬಲೆಯೊಳ್ ಸಿಲ್ಕಿದ ಬಾಳೆಗಳೆನೆ ಕುರು | ಬಲವೆಲ್ಲಂ ಬಾೞ್ವೆಡೆಗಾಣದೆ ಪಂ |
ಬಲಿಸುತ್ತಿರೆ ಜಯನನುಜರ್ ವಿಜಯಜಯಂತಕುಮಾರಕರು ||
ಕಲಿಗಳಕಂಪಸುತರ್ ಹೇಮಾಂಗದ | ನಲಘಪರಾಕ್ರಮಿ ರತ್ನಾಂಗದನು |
ಜ್ಜ್ವಲಸಾಹಸಿಗ ಸುಕೇತುವೆಸರ ಭೂಮೀಭುಜರೇಱಿದರು || ೫೦ ||

ಅಂತೈವರು ವಿಕ್ರಮಶಾಲಿಗಳ | ತ್ಯಂತಕುಪಿತಹುತವಹಮಾನಸರಿನಿ |
ಸಂತರಮಂ ಮಾಡದೆ ಕೆಂಗಣ್ಮಸಗುತ ನಗನಂದನೆಯ ||
ಕಾಂತನ ಪಂಚಮುಖದ ಮೇಂಗಣ್ಣುರಿ | ಯಿಂತೀಯಂದಮನನುಕರಿಸಿದುವೆಂ |
ಬಂತಿರೆಯುಗ್ರತೆಯಿಂ ಸಂಹರಿಸಿದರಸುಹೃದ್ವಾಹಿನಿಯ || ೫೧ ||

ಬಡಿಯಿಂ ಬಹ್ವಾಮಲಕದ ಘಳಮಂ | ಬಡಿಗೊಳಲುದಿರ್ವಂದದಿ ಬೀೞ್ತಹ ಬ |
ಲ್ವಡೆಯಂ ಕಾಣುತ್ತುಂ ತತ್ಕರಖರಕೀರ್ತಿ ಕುಮಾರಕನ ||
ಒಡನುಂಡೊಡನುಟ್ಟೊಡವೆರೆದಾಡು | ತ್ತೊಡವೆಳೆದೆಣ್ಬರ್ ಚಂದ್ರವೆಸರನುಱೆ |
ಪಡೆದುದ್ಧತವಿಕ್ರಮಿಗಳ್ ತಮ್ಮ ಬಲಂಬೆರಸೇಱಿದರು || ೫೨ ||

ದಂಡಧರನ ಮದವೆಂಟೀರೂಪಂ | ಕೊಂಡು ಕಡಂಗಿದುವೋ ಕಡೆಗಾಲದ |
ಖಂಡಪರಶುದೇವನ ಮಿಸುಪೆಂಟುಂ ಮೂರ್ತಿಗಳಿಂತಪ್ಪ ||
ಗಂಡಂದಂಬಡೆದೆಯ್ದಿದುವೋ ಎನೆ | ಚಂಡಪರಾಕ್ರಮದಷ್ಟಶಶಾಂಕರ್ |
ಭಂಡಣಮಂ ಪೊಕ್ಕಾನೃಪಪಂಚಕದೊಳಗೆ ಪಳಂಚಿದರು || ೫೩ ||

ಅವರೈವರ್ ವಿಕ್ರಮಶಾಲಿಗಳೊಳ | ಗವಿರಳಮಾದಱಿಕೆಯ ಸಾಹಸಿಗರ್ |
ಬವರಂಬೊಕ್ಕುಬ್ಬೆಗಮಂ ಮಾಡುತ್ತಿರೆ ಕೆಕ್ಕಳಗೆಳರ್ದು ||
ಜವದಿಂ ಬಂದಾಜಯಭೂನಾಥಂ ಜವನಂದದಿ ಬಂದತ್ಯುಗ್ರತೆಯಿಂ |
ಕವಲಂಬೊಂದೊಂದಱಿನಾಯೆಣ್ಬರ ತಲೆಯಂ ಪಱಿಯೆಚ್ಚಂ || ೫೪ ||

ನೆಲದೊಳ್ ನೆರಪಿಯವರನಾಯೆಡೆಯೊಳ್ | ನಿಲಲೊಲ್ಲದೆ ರಿಪುಭೂವರನಿರ್ದರ |
ನೆಲೆಗೆ ರಥಮನದಿರದೆ ಮೊಗಮಾಡಿದ ವಿಕ್ರಮಕೌರವನ ||
ಅಲಘುಪರಾಕ್ರಮಕಾಮಱುವಕ್ಕದ | ಬಲ್ಲಮೆಲ್ಲಂ ಬೆನ್ನೀರ್ವೊನಲೆಯ್ದಿದ |
ಬಿಲದೊಳಗಣಬೆಳ್ಳಿಲಿವಿಂಡಿನವೊಲ್ ತಳಮಳಗೊಂಡತ್ತು || ೫೫ ||

ಪರಪುರಮಥನಂ ವಿಬುಧೋತ್ಕರಶಂ | ಕರನಾಹವಸಮಯೋಗ್ರಂ ನುತಬಂ |
ಧುರರಾಜಶಿಖಾಮಣಿ ಭುವನೇಶ್ವರನನ್ಯಸ್ತ್ರೀಸ್ಥಾಣು ||
ಅರಿಕಾಮಧ್ವಂಸಂ ವೃಷಚಿಹ್ನಂ | ನಿರುತಂ ಭೂತಾದಾರಂ ತಾನೆನೆ |
ಕರಮೆಸೆದಂ ರುದ್ರನ ತೆಱದಿಂದಾಪ್ರಭುಕುಲಮಣಿದೀಪಂ || ೫೬ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಂ ಪಡೆದತ್ತಾಱನೆಯ ಮಿಸುಪ ಸಂಧಿ || ೫೭ ||

ಆಱನೆಯ ಸಂಧಿ ಸಂಪೂರ್ಣಂ