ಸೂಚನೆ || ಓಲಗದೊಳಗಿರುತಂ ನವಚಿತ್ರದ |
ಬಾಲೆಯನೀಕ್ಷಿಸಿ ಜಯಭೂಪಾಲಂ |
ಲೀಲೆಯನೆಯ್ತಂದಂ ವಾರಾಣಸಿವೆಸರ ನಗರಿಗಂದು ||

ಅಂದಂಬಡೆದೀತೆಱದಿಂದೊಂದಾ | ನೊಂದುದಿನಂ ಬಿಸುರುಹಲೋಚನೆಯರ |
ವಿಂದದ ಬಿಂಕಂಬೆತ್ತರಮಕ್ಕಳ ತಂಡದ ಮಂತ್ರಿಗಳ ||
ಗೊಂದಣದತಿಚತುರಕವೀಂದ್ರರ ಬಲು | ಸಂದಣಿಯೊಳು ಸಿಂಹಾಸನವೇಱಿ ಮ |
ನಂದಣಿವುತ್ಸವದಿಂದೋಲಗಮಿರ್ದಂ ಜಯಭೂವರನು || ೧ ||

ತನ್ನಧಟಿಂದಗಿದಾಶಾಧಿಪರುೞಿ | ದುನ್ನತಿಕೆಯೊಳಿತ್ತಾಕಪ್ಪದ ದೆಸೆ |
ಗನ್ನೆಯರೆನಲೆಣ್ಬರ್ ಸತಿಯರ್ ಸಿತಚಾಮರಮಂ ಬೀಸೆ ||
ಸನ್ನುತರೆಣ್ಫಾಸಿರ ಮಕುಟಧರರ್ | ಮನ್ನೆಯರಧಿರಾಜರ್ ಸಾಮಂತರ್ |
ಕೆನ್ನಂ ಶೋಭೆಯನೀಯೆ ಮಹಾಮಂಡಳಿಕನೆಸೆಯುತಿರ್ದಂ || ೨ ||

ನೆಲೆಮೊಲೆಯಮಳ್ವಕ್ಕಿಯ ಕಣ್ಮೀಂಗಳ | ಲಲಿತನನಪದ್ಮದ ಪದಕೂರ್ಮದ |
ವಿಲಸದ್ಭುಜವೀಚಿಯ ಕೋಮಲತನುರುಚಿ ನಿರ್ಮಲಜಲದ ||
ಅಳಕಭ್ರಮರದ ಕಂಬುಗ್ರೀವದ | ಲಲನಾಜನಕಾಸಾರದೊಳಾನೃಪ |
ತಿಲಕಂ ರಾಜಮರಾಳನ ತೆಱದಿಂ ಕಣ್ಗೆ ವಿರಾಜಿಸಿದಂ || ೩ ||

ಇಂತು ವಿರಾಜಿಪ ರಾಜಾಸ್ಥಾನಕೆ | ಸಂತಸದಿಂ ಪಡಿಯಱನಱಿಪದಿನ |
ತ್ಯಂತಚತುರಚಿತ್ರಕನೊರ್ವಂ ಬಿಂಕಂಬಡೆದೈತಂದು ||
ಕಂತುನಿಭಂಗಭಿವಂದಿಸಿ ತನ್ನಯ | ಪಿಂತಣ ಬಾಲನ ಕರದೊಳಗಣ ಪಟ |
ಸಂತತಿಯೊಳಗೊಂದೊಂದಂ ಪಿರಿದನುರಾಗದಿ ತೋಱಿದನು || ೪ ||

ಅಂದಂಬಡೆದ ಮೊದಲ ಮೂವಣ್ಣನು | ದೊಂದೊಂದಱೊಳೊಂದಿದ ಬಗೆ ನೀಲಕ |
ಬಿಂದುಕ ಪತ್ರಕ ದೂಮ್ನ ಸುವರ್ತನಮೆಂಬ ಪೆಸರಿನೆಸೆಪ ||
ಸಂದನೀಸಿದ ನವಚಿತ್ರಸುವರ್ತಕ | ವೆಂದೆಂಬಱುತೆಱದಣ್ಕೆ ಕರಂ ಮನ |
ಸಂದುದು ನೇತ್ರಕ್ಕಂ ಸೂತ್ರಕ್ಕಂ ಸಕ್ಕಸವನೆಯಾಗಿ || ೫ ||

ಮಿಸುಗುವ ಚಿತ್ರದ ಚಿತ್ರಾರ್ಧದ ರಂ | ಜಿಸವಾಚಿತ್ರಾಭಾಸದ ಮೂವಿಧ |
ರಸಚಿತ್ರದ ದೂಳೀಚಿತ್ರದ ಕಡುಬಿನ್ನಣದೆರಡು ತೆಱಂ ||
ಮಿಸುಪತಿವಿದ್ಧದ ನಿಜವಿದ್ಧಂ ಮೋ | ಹಿಸುವಾಪರವಿದ್ಧದ ಬಗೆ ಲಕ್ಷಾ |
ರಸಲೇಖಾಪದ್ಧತಿ ಭೂಪನ ಕಣ್ಗಿನಿದಂ ಪುಟ್ಟಿಸಿತು || ೬ ||

ತೊಳಗುವ ಬಹುಚಿತ್ರದ ಪಟಮಂ ಕ | ಣ್ಗೊಳಿಪಂದದಿ ವಿವರಿಸಿ ತೋಱುತ್ತುಂ |
ಬೞಿಕೊಂದುತ್ತಮಪಟದ ಸುರುಳ್ದೆಗೆಯುತ ಮುಖವಸ್ತ್ರವನು ||
ಕಳೆಯಲ್ ಕುವರನ ಚೆಲ್ವಂ ಚಿತ್ರದ | ನಳಿನವಿಲೋಚನೆ ನೋಡುವೆನೆನುತಂ |
ಗಳಿಲನೆ ಮುಸುಕಂ ತೆಗೆದಂದದಿನತಿರಮ್ಯಂಬಡೆಯಿತ್ತು || ೭ ||

ಕೆಂಬಟ್ಟೆಯ ಮೃದುತಲ್ಪದೊಳೊಱಗಿ ತೆ | ಱಂಬೊಳೆದೊಪ್ಪುವ ರತಿಯೆನೆ ನವರ |
ಕ್ತಾಂಬುಜದೊಳ್ಪವಡಿಸಿದಿಂದಿರೆಯೆನೆ ಸಂಧ್ಯಾರಾಗದೊಳು ||
ಇಂಬುವಡೆದ ಶಶಿಲೇಖೆಯೆನಲ್ ಕೆಂ | ಕಂಬಡೆದೆಸೆವಪರಸ್ಥಲದೊಳು ಚೆ |
ಲ್ವಂಬೊತ್ತಾಚಿತ್ರದ ಪೆಣ್ಬರಿಜಂ ನೋಡಿದನಾಕುವರಂ || ೮ ||

ಸುತ್ರಾಮಪ್ರಮದೆಯ ಕಮಲಜನ ಕ | ಳತ್ರದ ಶಂಕರಸುದತಿಯ ಶಂಬರ |
ಶತ್ರುಸತಿಯ ದಾಮೋದರದಯಿತೆಯ ಪೋಲ್ವೆಯೊ ಎನುತೊಸೆದು ||
ಕ್ಷತ್ರಿಯಕುಲದೀಪಂ ನೇತ್ರಕ್ಕಂ | ಸೂತ್ರಕ್ಕಳವಟ್ಟಾಚಿತ್ರಮನತಿ |
ಚಿತ್ರಂಬೆತ್ತಿನಿಸುಂ ಕಣ್ಣೆವೆಯಲುಗದೆ ನಡೆನೋಡಿದನು || ೯ ||

ಪವಳದುಟಿಯ ಪೊಸಪಱಮೆಗುರುಳ್ಗಳ | ಕುವಲಯನೇತ್ರದ ಕುಲಿಶರದಂಗಳ |
ಜವಳಿಗಳಸಮೊಲೆಗಳ ಜಯವಾತ್‌ಋಕಮಂಡಲನಿಜಮುಖದ ||
ನವಲತಿಕಾದೇಹದ ನಳಿನಾಂಘ್ರಿಯ | ಸವಿಗೋಲ್ವಿಲ್ಲ ಸಮದ ಕುಡುವುರ್ವಿನ |
ಯುವತೀರೂಪದ ಚಿತ್ರಮನಾಸುಕುಮಾರಂ ನೋಡಿದನು || ೧೦ ||

ಆ ರಸಭರಿತವಿಚಿತ್ರದ ಚಿತ್ರದ | ನಾರಿಯ ಬಣ್ಣದುಟಿಯ ಬಂದುಗೆಯೊಳು |
ತೋರಮೊಲೆಗಳೆಂಬಂಬುಜದೊಳು ನಾಸಾತಿಲಕುಸುಮದೊಳು ||
ರಾರಾಜಿಪ ಲೋಚನಕೈರವದೊಳು | ಕೂರುಗುರ್ಗೇದಗೆಯೆಸೞೊಳು ನೃಪತಿಯ |
ಚಾರುನಯನಮತಿಲಗ್ನಂಬಡೆದುವು ಬಂಡುಣಿವಱಿಯಂತೆ || ೧೧ ||

ಒದವಿದಲಂಪಿನ ಪೊಂಪುಳಿಯಿಂದೆವೆ | ಗದಮುಚ್ಚದೆ ನಡೆನೋಡುವ ಮಾನವ |
ಮದನನ ನಿಡಿಯಲರ್ಗಣ್ಬಾಗಿಲ್ವೊಕ್ಕಂಗಭವನಕೆಯ್ದಿ ||
ಹೃದಯಕಮಲವಿಷ್ಪರದುಪರಿಮದೊಳ್ | ಸದಮಲಕಲಧೌತಚ್ಛಾಯಾಂಗದ |
ಸುದತೀಮಣಿಯಭಿನವಕಮಲಾಲಯೆಯಂದದಿನೊಪ್ಪಿದಳು || ೧೨ ||

ತದ್ಭೂಮೀಶ್ವರಚೂಡಾರತ್ನದ | ಹೃದ್ಭವನದ ನಿರ್ಮಲತರಮಪ್ಪ ಲ |
ಸದ್ಭಿತ್ತಿಯೊಳಾಚಿತ್ರಪಟದೊಳೊಪ್ಪುವ ನವಬಾಲಿಕೆಯ ||
ಅದ್ಭುತಮಪ್ಪ ವಿಲಾಸಶ್ರೀಯಂ | ಸದ್ಭಾವನೆಯಿಂ ಭಾವಿಸಿ ಬೞಿಕಂ |
ಗೋದ್ಭವನಾತಿಟ್ಟಮನತಿಚತುರಂ ಬಿನ್ನಣಿಸುತ ಬರೆದಂ || ೧೩ ||

ನಿಡುಸುಯ್ನೀರೋಡುವ ವದನಂ ನಸು | ನಡುಗುವ ಮೆಯ್ನಟ್ಟಾಲಿಯ ಕಣ್ಮಲ |
ರುಡುಗಿದಱಿವುವುಣ್ಮುವ | ಬೆಮರ್ವನಿಯೋಸರಿಸುವೊಡಲ ಬಲ್ಪು ||
ತಡಬಡಿಸುವ ನುಡಿ ತಲೆಯೆತ್ತುವ ನವಿ | ರಡಸಿದ ಬೆಱಗೆಸೆಯಲು ನವಚಿತ್ರದ |
ಮಡದಿಯ ಕಡುಚೆಲ್ವಿಕೆಯಂ ರಾಜಕುಮಾರಂ ನೋಡಿದನು || ೧೪ ||

ಆ ಮದನವಿಕಾರಂ ಮೆಯ್ದೀವಿದ | ಭೂಮೀಶ್ವರವರಸಖನತಿಚತುರಂ |
ಶ್ರೀಮತಿಯೆಂಬಂ ತಚ್ಚಿತ್ರಕನೊಳಗಿಂತೆಂದುಸಿರಿದನು ||
ಈ ಮಾನಿತಚಿತ್ರಕೆ ಪಾಸಟಿಹಯ | ಭಾಮೆಯರುಂಟಾದೊಡೆ ಪೇೞೆಂದೆನ |
ಲಾಮಾತಂ ಕೈಕೊಂಡಾತಗೆ ನುಡಿದಂ ತಾನಿಂತೆಂದು || ೧೫ ||

ಧರಣೀದಯಿತೆಯ ದರಹಸಿತಾಸ್ಯದ | ದೊರೆಯೆನೆ ಮಿಸುಗುವ ಕಾಶೀವಿಷಯದ |
ಸುರುಚಿರಸೌಭಾಗ್ಯಂಬಡೆದೊಪ್ಪುವ ವಾರಾಣಸಿಯೆಂಬ ||
ಪುರದೊಳ್ನಾಥಕುಲಾಂಬರಚಂದ್ರಂ | ಸಿರಿಗಂಧಂಗೆಣೆಯೆನಿಪನಕಂಪಂ |
ಸುರಪರಿವೃಢನಮರಾವತಿಯೊಳು ಸುಖಮಿರ್ಪಂದದಿನಿರ್ಪಂ || ೧೬ ||

ಜಿತಶಾತ್ರವಗೆ ಸಕಲಗುಣನಿಲಯಗೆ | ನುತದಿವಿಜಾವನಿಜೋಪಮದಾನಿಗೆ |
ಯತನುನಿಭಂಗೆ ಯಶೋವಿಸರಂಗೆಯಕಂಪಮಹೀಶಂಗೆ ||
ಶತದಳನಯನದ ಶಶಿನಿಭವದನದ | ರತಿರೂಪದ ರಾಜಮರಾಳೋಪಮ |
ಗತಿಯ ಗರುವೆಯಮಿತಪ್ರಭೆಯೆಂಬಳು ನಿಜಸತಿಯಾಗಿಹುಳು || ೧೭ ||

ಅಲತೆಗೆಗಾಲಭಿನವತಾರಾನಖ | ವಲಸಗಮನವಂಬುಜಕುಟ್ಮಲಕುಚ |
ವಲರ್ಗಣ್ಬೊಣರಮೃತಾಧರವಸಿತಲತೋಪಮರೋಮಾಳಿ ||
ಅಲಘುನಿತಂಬಮನನ್ಯಜಫಣಿನಿಭ | ಲಲಿತಕಬರಿ ಕಳಕಂ ಸದೃಶರವ |
ವಳಿಕುಂತಳಮೊಪ್ಪಿದುವಾಜನತಾಧೀಶನ ವಲ್ಲಭೆಗೆ || ೧೮ ||

ಆ ಮಾನಿನಿಯ ವಿಮಲಗರ್ಭದೊಳು | ದ್ದಾಮಯಶರ್ಶ್ರೀಮದ್ಗುಣನಿಲಯರು |
ಹೇಮಾಂಗದ ರತ್ನಾಂಗದ ಚಾರುಸುಕೇತುಗಳೆಂಬವರು ||
ಪ್ರೇಮದೊಳುದಯಿಸಿ ಬಳೆಯಲ್ಬೞಿಕೊ | ಳ್ದಾಮರೆಗಣ್ಣ ಸುಲೋಚನೆಯುಂ ಲ |
ಕ್ಷ್ಮೀಮತಿಯುಂ ಸಂಜನಿಯಿಸಿ ಪಿರಿದುಂ ಚೆಲ್ವಿಕೆದಾಳಿದರು || ೧೯ ||

ಆ ಮಕ್ಕಳೊಳೊಪ್ಪಿದಳು ಸುಲೋಚನೆ | ಕೋಮಲಕಮಳದಳಾಯತಲೋಚನೆ |
ಸೋಮವದನೆ ಚದುರಿಂ ಚತುರಾಸ್ಯಮನಃಪ್ರಿಯವರವಚನೆ ||
ಆ ಮಹಿಮವಿರಕ್ತಜನಾಲೋಚನೆ | ಕಾಮಿನಿಕರನಿಜಧೈರ್ಯವಿಮೋಚನೆ |
ಸಾಮಜಗಮನೆ ಮದನಮಹಿಷೀಲೀಲಾಶುಕನಿಭವಚನೆ || ೨೦ ||

ಅನಿಮಿಷನಿಭಲೋಚನೆಯಬ್ಜಾನನೆ | ವಿನುತಲಸದ್ವಿದ್ರುಮಲಲಿತಾಧರೆ |
ಘನಗುಣನಿಧಿಯಮಿತಪ್ರಭೆ ತನ್ನ ತನೂಜೆ ಸುಲೋಚನೆಯಾ ||
ಅನುರಾಗದಿನಮಳ್ದೋಳಿಂದೆತ್ತಲು | ಮಿನುಗುವ ಪಾಲ್ಗಡಲಮಳ್ದೆರೆಯಡೆಯೊಳು |
ಜನಿಸಿ ಜಲಕ್ಕನೆ ರಾಜಿಪ ಸಿರಿಯಂದದಿ ಕಣ್ಗೊಪ್ಪಿದಳು  || ೨೧ ||

ಎಳೆಯಂಚೆಯನೇಳಿಪ ಗಮನದ ಮಱಿ | ಗಿಳಿಯಂ ಮಱಸುವ ನುಣ್ಮಾತಿನ ಕಿಱು |
ದಳಿರಂ ಗೆಲ್ವಧರದ ಚಿಕ್ಕೆರಲೆಯ ಸೋಲಿಪ ನಗೆಗಣ್ಣ |
ತೊಳಪ ಹಸುಳೆಲತೆಯಂ ಸಲೆ ತೆಗೞಿಪ | ನಳಿತೋಳ್ಗಳ ಸಿಂಗದ ಶಿಶುವಂ ತಾ |
ನಿೞಿಕೆಯ್ವೊಳ್ನಡುವಿನ ನೃಪತನುಜೆಯ ತರುಣಿಮಮೊಪ್ಪಿದುದು  || ೨೨ ||

ತರುಣೀಮಣಿ ತನ್ನಯ ಶೈಶವದೊಳ | ಗುರುಮುದದಿಂ ತಜ್ಜನಕನಕಂಪನ |
ಸುರುಚಿರಚರಿತನಿಧಾನನ ನುಣ್ದೊಡೆಯೇಱಿ ಬಳೆಯುತಿರಲು ||
ಕರಮೆ ವಿರಾಜಿಸಿದಳು ತಾನಂದಿನ | ನರಸಖನೆಂಬಾರುಷಿಯೂರುವಿನಿಂ |
ದಿರದುದಯಸಿ ವಿಭ್ರಾಜಿಸುವಾವೂರ್ವಸಿಯೆಂಬಂದದೊಳು  || ೨೩ ||

ಮೊಳೆತುವು ಮೊಲೆ ತರುಣಿಮದಿಂ ಚೌವನ | ದೞೆವನ್ನಂ ಬದರಿಯ ಬಡಗರ್ದುಗಿನ |
ಪೊಳೆವಡಕೆಯ ಪೊಸನೆಲ್ಲಿಯ ಮಿಸುನಿಯ ಮಿಂಟೆಯ ತಾಮರೆಯ ||
ಎಳೆಯ ಮುಗುಳ ನಿಂಬೆಯ ಪೊಂಬಗರಿಯ | ಬೆಳಗಾಯ ಕರಂಡಕದೆಣೆವಕ್ಕಿಯ |
ಕಳಸದ ದೊರೆಯೆನ ಪರಿವಿಡಿಯಿಂ ಸುಕುಮಾರಿ ಸುಲೋಚನೆಗೆ  || ೨೪ ||

ಕಣ್ಮಲರ್ಗಳ್‌ ಕಡುನಿಡಿದಾದುವು ಪೊಱ | ಪೊಣ್ಮಿತು ಪೊಂಗನ್ನಡಿ ಮೊಗದೊಳ್‌ಪೊಗ |
ರುಣ್ಮಿದುದಂಗಲತಿಕೆಯೊಳು ಕಂಪು ಕುನುಂಗಿತು ಕುರುಳೋಳಿ ||
ನುಣ್ಮುಡಿ ಬಿಣ್ಪಾದುದು ಮೆಲ್ಲೆರ್ದೆಯೊಳ್‌ | ನಾಣ್ಮೊಳೆತುದು ಮೂಡಿದುವುರದೊಳ್‌ಮೊಲೆ |
ಪೆಣ್ಮಾಣಿಕಕೆ ಮನೋಹರವಡೆದೇಱುಂಜವ್ವನದೊಳಗೆ  || ೨೫ ||

ಅರುಣಾಂಭೋರುಹದಲರ್ಗಲತೆಗೆಯಂ | ಪೊರೆಯಿಟ್ಟು ಜಪಾಪ್ರಸವದ ಕೆಂಪಂ |
ಬರಸಿ ಕುಸುಂಬೆಯನೂಡಿ ಲಸದ್ವಿದ್ರುಮದ ರುಚಿಯನೊತ್ತಿ ||
ಕುರುವಿಂದದ ರಂಗಂ ಭಾವನೆಗೆ | ಯ್ದರಲಂಬನ ತೇಜದೊಳೞ್ದಿಕರಂ |
ಹರಿಸದಿ ಬಿದಿ ನಿರ್ಮಿಸಿದಂದದಿನೊಪ್ಪಿದುವವಳಂಘ್ರಿಗಳು  || ೨೬ ||

ಸಾಲದು ಸಾಲದೆಮಗೆ ಸುರುಚಿರರುಚಿ | ಬಾಲಿಕೆ ಬಂಡುಣಿಯೋರಗೆಗುರುಳಳೆ |
ಪಾಲಿಸು ಕಾರುಣ್ಯದಿ ನಿನ್ನಯ ನಗೆಮೊಗದೊಳ್‌ಶೋಭಿಸುವ ||
ಲೋಲಕಟಾಕ್ಷಮರೀಚಿಯನೆನುತುಂ | ಕಾಲಂ ಪಿಡಿದೆಳಮಿಂಚುಗಳೆಂದೆನ |
ಲಾಲಲಿತಾಂಗಿಯ ಪದನಖಕಿರಣಂಗಳ್ತಳತಳಿಸಿದುವು  || ೨೭ ||

ಜನನುತಮಪ್ಪುತ್ತಮಗತಿಯಂ ಪಡೆ | ದನಿಶಂ ತನಗೆ ವಿರಕ್ತರನೆಱಗಿಪ |
ವನಿತೆಯ ಮೇಗಾಲ್ಗಳ ಪಾಸಟಿಯಂ ನಾಮೆಯ್ದುವೆವೆಂದು ||
ಮನದೊಳ್‌ಭಾವಿಸಿ ನೀರ್ನೆಲೆಯೊಳಗಾ | ದಿನದಿ ತಪಂಗೆಯ್ದುವು ಕೂರ್ಮಂ ಮೇ |
ದಿನಿಯೊಳದಱಿನುತ್ತಮರ ಪದಂಬಯಸದ ಜೀವಿಗಳುಂಟೆ  || ೨೮ ||

ಸ್ಮರಮಲ್ಲನ ಸಂಮೋಹನಗದೆಯೋ | ಸ್ಮರನದಟಂಬಿಡದೊದರ್ವ ಕಹಳೆಯೋ |
ಸ್ಮರಶರದ ಕಲಾಪಗಳೋ ಸ್ಮರನಂ ನೋಡದ ಮುನಿಜನದಾ ||
ಉರುಧೈರ್ಯವನರೆಯಲ್ಕೆನುತುಂ ರತಿ | ಕರದೊಳು ಧರಿಸಿದಸಿಯಗುಂಡೋ ಎನೆ |
ತರುಣೀರತ್ನದ ಕಿಱುದೊಡೆ ಕಣ್ಗೆ ಕರಂ ಚೆಲ್ವೆನಿಸಿದುದು  || ೨೯ ||

ಅಂಗಭವಾಧ್ವರಿಯತಿವಿಧಿಯಿಂದ ಭು | ಜಂಗರ ಧೈರ್ಯಪಶುಗಳಂ ಹತಿಸಿ ಮ |
ನಂಗೊಳಿಸುವ ನವನಾಭೀಕುಂಡದೊಳೋವದೆ ಹೋಮವನು ||
ಪಿಂಗದೆ ಮಾಡಿ ಬೞಿಕ ನಿಱಿಸಿದ ಪೊಸ | ಪೊಂಗೆಲಸದ ಯೂಪಸ್ತಂಭಂಗಳ |
ಭಂಗಿಯನನುಕರಿಸಿದುವುಳ್ದೊಡೆಯಾಕಮಲದಳಾಂಬಕಿಗೆ  || ೩೦ ||

ಮನಸಿಜರಾಜನ ಕೃತಕಾಚಲಮೆನೆ | ನನೆಗಣೆಯಂ ಕ್ರೀಡಿಪ ನವಸಂಮೋ |
ಹನಸರಸಿಯ ತೀರದೊಳೆ ವಿರಾಜಿಪ ಪುಳಿನತಳಂಗಳೆನೆ |
ವನಜೋದರನಣುಗನ ಮಂದಿರದೊ | ಳ್ಮಿನುಗುವ ನವಕನಕಸ್ತಂಭದ ಮೇ |
ಗನುಮಾಡಿದ ಗಡಗೆಗಳೆನೆ ಸತಿಯ ನಿತಂಬಂ ಸೊಗಯಿಸಿತು  || ೩೧ ||

ತನುವಾಗಿಯುಮಸಹಾಯದೆ ಲೋಕಮ | ನಿನಿಸುೞಿಯದೆ ಮೋಹಿಸಿ ವಶಮಾಡುವ |
ವಿನುತಗುಣಂ ನನಗುಂಟೆಂದಂಬುಜದಳನೇತ್ರೆಯ ಮಧ್ಯಂ ||
ಇನಿವಿರಿದುಂ ತಾಂ ಪೞಿಯುತ್ತಿರ್ಪುದೆ | ತನುವಾಗಿಯೆ ಜನಮಂ ಸಂಮೋಹಿಪ |
ಮನಸಿಜನಂ ಮಧುವಿಧುಮಂದಾನಿಲಸಾಧನಸಂಯುತನಂ  || ೩೨ ||

ಎಡವಱಿಯದೆ ವಾಚ್ಯಮನಾವಾಚಕ | ಮೊಡವೆರೆದಲ್ಲದೆ ಬೇರ್ಪಡಿಸಿರದೆಂ |
ದಡಿಗಡಿಗುಸಿರ್ವ ಬುಧರ ಬಲ್ಲವಿಕೆಯ ನುಡಿಯಂ ಹುಸಿಮಾಡಿ ||
ಮಡದಿಯ ಬಡನಡುವೆಂಬಭಿಧಾನಂ | ಬಿಡದಿರ್ದದಱಭಿಧೇಯಂ ತಾನಾ |
ವೆಡೆಯೊಳಡಂಗಿರ್ದಪುದೋ ಅದನಾನಱಿಕೆವಡೆದುದಿಲ್ಲ  || ೩೩ ||

ಪಿರಿದುಂ ಪ್ರಿಯದಿಂದವೆ ಮುಂಪೆತ್ತವ | ರಿರವಂ ಪೋಲ್ವುದು ಪುಟ್ಟಿದ ಶಿಶುವೆಂ |
ಬರ ಮಾತಂ ಸ್ಥಿರಕರಿಸುವ ತೆಱದಿಂ ತದ್ರಾಜಾತ್ಮಜೆಯ |
ಸುರುಚಿರಶೂನ್ಯಾಕಾರಮನಂಗೀ | ಕರಿಸಿದ ಮಧ್ಯದೊಳೊದವಿದ ಸೊನ್ನೆಯ |
ದೊರೆಯಾದುದು ನಾಭೀವಲಯಂ ಮನ್ಮಥಕೇಳೀನಿಲಯಂ  || ೩೪ ||

ಮೋಹಾಗಮಸಿದ್ಧಾಂತದ ಗಣಿತಮ | ನೂಹಿಸಿ ಗುಣಿಯಿಸಬೇಕೆಂದೆನುತ |
ಶ್ರೀಹರಿಹಣುಗಿನಣುಗನತಿಮುದದಿಂ ತನ್ನೆಳವರೆಯದೊಳು ||
ಮೋಹರಿಸಿದ ಮೂರೇಖೆಯ ತೆಱನೆನ | ಲಾಹೆಣ್ಗಳ ರನ್ನೆಗೆ ಪಲ್ಲವಕ |
ವ್ಯೂಹದೆರ್ದೆಯನಿೞ್ಕುಳಿಗೊಂಡತಿರಾಜಿಸಿದುವು ತಿವಳಿಗಳು  || ೩೫ ||

ಶೃಂಗಾರಾಮೃತರಸಪೂರಿತದಿ ಮ | ನಂಗೊಳಿಸುವ ನಾಭೀಕಾಸಾರದೊ |
ಳಂಗಜಗಜಮವಗಾಹಂಗೆಯ್ಯಲದಱ ಕಟದೊಳಗೊಗೆದು ||
ಹಿಂಗದ ಮದಕೆ ಮೊದಲ್ಮುಸುಕಿದ ಬಹು | ಭೃಂಗಂ ಹಂತಿವಿಡಿದು ನಡುವೆಂಬ ನ |
ಭೋಂಗಣಕೇೞ್ವದದಿ ಭಾಸಿಸಿದುದು ಬಾಲೆಯ ಬಡಬಾಸೆ  || ೩೬ ||

ಉರದೊಳ್ನೆಲಸಿದ ಯೌವನಲಕ್ಷ್ಮಿಯ | ಕರಯುಗಗತಕೋರಕಿತಕನಕಸರ |
ಸಿರುಹದ್ವಯಮೋ ಮತ್ತಾಲಕ್ಷ್ಮಿಗೆ ಲಾವಣ್ಯಾಮೃತಮಂ ||
ಹರಿಸಮೊದವೆಯಭಿಷೇಕಂಗೆಯ್ಯಲ್‌ | ಸ್ಮರಗಜಮುಂ ಸಮ್ಮೋಹನಗಜಮುಂ |
ಕರದಿಂದೆತ್ತಿದ ಕಳಸಮಿವೋ ಎನೆ ಮೊಲೆಗಳೆಸೆದುವವಳ  || ೩೭ ||

ಸಿರಿಮುಡಿಸೋಗೆಮೊಗಂಗಾಣುತ್ತಾ | ಸ್ಮರಪಂಚಫಣೋರಗಯುಗಳಂ ಸುರು |
ಚಿರಸುತನುಶ್ರೀಖಂಡಲತಿಕೆಯಿಂದಿೞಿದೋಡುವ ತೆಱದಿ |
ಸ್ಮರನಿಧಿಯೆಡೆಗೆಯ್ದುವ ನವಮೋಹನ | ತರುವಿನಸಿಯಬೀೞಿಲ ತೆಱದಿಂ ಬಂ |
ಧುರಮಾದುವು ಕರಯುಗಮಾಕಮಲದಳಾಯತಲೋಚನೆಗೆ  || ೩೮ ||

ಸಿರಿಯಣುಗಂ ಸಮ್ಮೋಹನಶರದಿಂ | ವಿರಹಿವಿತಾನಮನೆಚ್ಚು ಕೆಡಹಿ ಕಡು |
ಭರದಿಂ ಬಾಜಿಪ ಶಂಖಮೆನಲ್ನುಣ್ಗೊರಲತಿರಂಜಿಸಿತು ||
ತರುಣಕುರಂಗಾಕ್ಷಿಯ ತಳಕುಕ್ಷಿಯ | ವರಕೇಕೀಕಬರಿಯ ಕಳಶಸ್ತನ |
ಭರೆಯ ಸರೋರುಹಪದೆಯ ಶಚೀಸನ್ನಿಭನಿಜಸಂಪದೆಯಾ  || ೩೯ ||

ಮನಸಿಜನೆಂಬಂಕದ ಬಿಲ್ಗಾಱಂ | ಮನಮೊಸೆದರ್ಚನೆಗೆಯ್ವೆನೆನುತ ತ |
ನ್ನಿನಿವಿಲ್ಲಂ ಕಿಱುದುಂಬಿಯ ತಿರುವಂ ಚೆಂದಳಿರ್ಗೈಪೊಡೆಯಂ ||
ನನೆಯ ಶರಂಗಳನಿರಿಸಿದ ಕಾಂಚನ | ವನರುಹವಿಷ್ಟರಮೆನೆ ಕುಡುವುರ್ವಿನ |
ವಿನುತಾಳಕದರುಣಾಧರದಲರ್ಗಣ್ಗಳ ಮೊಗಮೊಪ್ಪಿದುದು  || ೪೦ ||

ಕಳಿಯದ ಬಿಂಬಫಲಂ ಕಠಿನತೆಯಂ | ಕಳೆದು ಮಿಸುಪ ಮಾಣಿಕ್ಯಂ ಕೆಂಪಂ |
ತಳೆದಮೃತಂ ಸವಿಯೇಱಿದ ಹೊಸಹವಳಂ ಗೊಂದಣದುಂಬಿ |
ತುೞಿಯದ ಬಂಧೂಕಂ ಹೆಚ್ಚದ ಹೆಱೆ | ಗಿಳಿ ತುಂಡಿಸದಾಲದ ಪಣ್ಣೆಳವೆಯ |
ನುೞಿಯದ ಚೆಂದಳಿರೆನೆಯಿನಿದುಟಿ ಸೊಗಯಿಸಿತಾನೃಪಸುತೆಗೆ  || ೪೧ ||

ಕಂದದ ಕುಂದದ ಕಡಲೊಳ್ ಬೀೞದ | ಚಂದಿರನಗಲ್ದುರದೊಳಗಿನಿತುಂ ಮಿಂ |
ಚೊಂದಿದ ಮುತ್ತಿನ ಕಂಠಿಕೆಯೊ ಸ್ಮರಕೀರ್ತಿಲತೆಯ ಬಿತ್ತೋ ||
ಕಂದರ್ಪಂ ವಿರಹಿಗಳಂ ಕೊಱೆಯ | ಲ್ಕೆಂದು ಪಿಡಿದ ಕುಲಿಶದ ಕರಗಸೋ |
ಕುಂದಲಲಿತಕುಟ್ಮಲಮೋ ಎನೆ ರದಮೊಪ್ಪಿದುವಾಸತಿಗೆ || ೪೨ ||

ಸರಸಾನೆನಶಶಿಮಂಡಲಮಂ ಘನ | ತರಕಬರೀರಾಹುಗ್ರಹಮಳುರ್ವುದು |
ಪಿರಿದುಂ ನಿಶ್ಚಯಮೆಂದದನದು ಬಂದಡರದ ಮಾೞ್ಕೆಯೊಳು ||
ಸ್ಮರವಿಧಿಮೋಹನಮಂತ್ರಾಕ್ಷರಮಂ | ಬರೆಯಲ್ಬೈ ತಪರಂಜಿದಗಡುಗಳ |
ದೊರೆಯಾದುವು ನುಣ್ಗದುಪುಗಳಾಶ್ಯಾಮೆಗೆಯಭಿನವರಮೆಗೆ || ೪೩ ||

ಸಿರಿ ತನ್ನಯ ನಲ್ಮೆಯ ಶಯ್ಯಾಮಂ | ದಿರದೊಳಗದಿರದೆ ಚಂಡಾಳೀಕುಲ |
ಮುರವಣೆಯಿಂ ಪುಗೆ ದೋಷಂ ಪೊರ್ದುಗುಮೆನುತದು ಪುಗದಂತೆ ||
ಭರದಿಂ ಕಾಪಿಕ್ಕಿದ ನವಚಂಪಕ | ದರೆಮುಗುಳಿದು ತಾನೆಂಬಂದದಿ ಬಂ |
ಧುರಮಾದುದು ನಾಸಿಕಮಾಸರಸಿಜಸಲ್ಲಲಿತಾನನೆಗೆ || ೪೪ ||

ಶ್ರುತಿಗಳನುಲ್ಲಂಘಿಸಿ ಗಮಿಸುವದನು | ಚಿತಮಾಕುಟಿಲಾಳಕಸಮುದಯಸಂ
ಗತಮಂ ಮಾೞ್ಪುದು ಪೊಲ್ಲಮಧೋಗತಿಗಿೞಿವುದು ಕಷ್ಟತರಂ ||
ಕ್ಷಿತಿಯೊಳಗೊಡವುಟ್ಟಿದರೊಳ್ ನೆರೆವುದು | ಮತವಲ್ಲೆನುತೆತ್ತಂ ಪರಿಯದೆ ತ |
ತ್ಸತಿಯ ಕುಡಿತೆಗಣ್ಗಳ್ನಿಲ್ಲದೊಡಾಮೊಗಕೆಲ್ಲಿಯ ತೆಱಪು || ೪೫ ||

ತಾನೇ ತನ್ನತುಳಾಕಾರಕ್ಕೆ ಸ | ಮಾನಮೆನಿಪನನ್ವಯಮಲ್ಲದೆ ಬಂ |
ದಾನಲಱಿಯದಿದಕಿದು ಸರಿಯೆನಿಸಿದೊಡುಪಮಾಲಂಕಾರ ||
ಈ ನಾರೀಮಣಿಯುಪಮಾತೀತನ | ವೀನಲಸತ್ಕರ್ಣಕ್ಕೆನಲದಕಿ |
ನ್ನೇನಂ ಸರಿಯೆಂದುಸಿರುವೆನಾನುೞಿದವಯವಗಳ ತೆಱದಿ || ೪೬ ||

ಉದಧಿಯಣುಗಿಯುಗ್ರನ ಸತಿ ಶಾರದೆ | ಮದನಮಹಿಷಿ ಮೆಯ್ಗಣ್ಣನ ಪಟ್ಟದ |
ಸುದತಿಯರ್ಗಿಮ್ಮಡಿಯಾದೈಸಿರ ಪೊಸಗಾಡಿ ಚದುರು ಚೆಲ್ವು ||
ವಿದಿತವಿಭವಮುಂಟೀಕೆಗೆನುತ ಮುಂ | ಬಿದಿ ಬರೆದಳಕಾಕ್ಷಙ್ತಿ ತುದಿ |
ಮೊದಲೊಳಗೆಸೆವಾಶ್ರೀಕಾರಂಬೊಲು | ಶ್ರುತಿಯೊಪ್ಪಿದುವವಳ || ೪೭ ||

ಮಿಸುಗುವ ನಗೆಗಣ್ಣೆಂಬಂಬುಜಮಂ | ನೊಸಲೆಂಬೆಳೆವೆಱೆ ಬಾಧಿಸಲೆನುತಂ |
ಮಸಕದಿ ಬಂದು ಪಿಡಿವ ಸಮಯಕೆ ಬಿಡು ಬಾಧಿಸಬೇಡೆನುತ ||
ಕುಸುಮಶರಂ ತನ್ನೆಡಗೈಯೆರಲೆಯ | ಪೊಸಕೋಡನದರ್ಕಡ್ಡಂ ಪಿಡಿದವೊ |
ಲಸಿಯಳ ಲಲಿತಭ್ರೂಲೇಖೆ ಕರಂ ಕಣ್ಗೆ ವಿರಾಜಿಸಿತು || ೪೮ ||

ಅನುದಿನದಿಂ ದೂರದ ನೇಹಂ ನಮ | ಗೆನುತ ಮರುತಮಾರ್ಗದಿನೊಸದಿೞಿತಂ |
ದನುರಾಗದಿ ನಗೆಗಣ್ಣೆಯ್ದಿಲನಮರ್ದಪ್ಪಿದ ಕಿಱುವೆಱೆಯೋ ||
ಎನೆ ಕುರುಳ್ಗಳ ಕುಣಿತಕ್ಕಂಗೋದ್ಭವ | ನನುಮಾಡಿದ ನವರಂಗಸ್ಥಲವೋ |
ಎನೆ ಕಣ್ಬಗೆಗೊಪ್ಪಂಬಡೆದುದು ನೊಸಲಾರಮಣೀಮಣಿಗೆ || ೪೯ ||

ಸ್ಮರಯಂತ್ರದ ಬೀಜಾಕ್ಷರವಿತತಿಯ | ಕುಱುಪುಗಳಂ ಮುಡಿಯೆಂಬ ತಮಾಲೋ |
ತ್ಕರಲತಿಕೆಯ ಬೀೞಿಲ ತಿಂತಿಣಿಯಂ ಸಿರಿಮೊಗದಾವರೆಯ ||
ಪರಿಮಳಮಂ ಕೊಳಲೆಂದು ಮುಸುಂಕಿದ | ತರುಣಭ್ರಮರಸಮಿತಿಯ ಬೆಡಂಗಂ |
ಪಿರಿದುಂ ಗೆಲೆವಂದುದು ಪಿಡಿನಡುವಿನ ಕುವರಿಯ ಕುರುಳೋಳಿ || ೫೦ ||

ಮಾನನಿದಾನೆಯ ಮಂದಶ್ವಾಸಮ | ನೇ ನವಸುರಭಿಸಮೀರಂಗೆತ್ತು ನಿ |
ದಾನಿಸಿಯಂಗಜನೆಂಬ ಮಹಾಕಾಳೋರಗನೆಯ್ತರುತ ||
ಆ ನಯನದ ಕಡುಚೆಲ್ವಂ ನಿಟ್ಟಿಸಿ | ತಾನದು ಸಾರಂಗಾಕ್ಷಿಗಳೆಂದನು |
ಮಾನಿಸಿ ಸುಗಿದು ಪೆಱಗೆ ನಿಂದಂದದಿ ಕಬರಿ ವಿರಾಜಿಸಿತು  || ೫೧ ||

ನವಮಣಿಭೂಷಣಮಂ ತಾಮೆಲ್ಲಂ | ತವೆ ತೊಟ್ಟಲ್ಲದೆ ಕಡುಚೆಲ್ವಿಕೆ ತಮ |
ಗವತರಿಸದು ನಾನೊಂದೆಳ್ಳೆನಿತುಂ ಪೊಂದೊಡವಂ ತೊಡದೆ ||
ನವವಿಟರಂ ಸೋಲಿಪ ಸೌಂದರ್ಯಂ | ಸವನಿಸಿದತ್ತೆನಗಿರದೆಯೆನುತುಮುೞಿ |
ದವಯವಮಂ ನಗುವಂದದಿ ಬೆನ್ನ ಬೆಳಗು ಸೊಗಯಿಸಿತವಳ  || ೫೨ ||

ಕರಚರಣಾಧರದಂತವಿತತಿಯೆಂ | ಬರುಣಮಣಿಯನುಗುರೆಂಬ ಕುಲಿಶಮಂ |
ಕುರುಳಲರ್ಗಣ್ಕುಡುವುರ್ವೊಳ್ವಾಸೆಗಳೆಂಬ ಕಱಿಯ ಪರಲಂ ||
ಸ್ಮರನೆಂಬಾಸೊನ್ನಾರಂ ಕೀಲಿಸ | ಲಿರದೊಪ್ಪುವ ಪೊಸಚಿನ್ನದ ತಗಡೆನೆ |
ಕರಮೆಸೆದುದು ಮೆಯ್ವೆಳಗು ಮಹೀಪತಿಯಣುಗಿನ ನಂದನೆಗೆ  || ೫೩ ||

ಅರಮಗಳಾಲಾಪಕೆ ತಮ್ಮಯ ದನಿ | ಸರಿಯೆಂದಾಡಿದ ಪಾಪದ ಫಲದಿಂ |
ಹರಿಸದಿ ಮುಂ ಪೆತ್ತವರನಗಲಿ ಕಾಕಾಲಯದೊಳಗೊಡಲಂ |
ಪೊರೆದುಂ ಮೆಯ್ಮಸಿವಣ್ಣಮನಾಂತನ | ವರತಂ ನುಡಿವಡೆಯದೆ ಪಿಕಮಿರ್ದುವು |
ಧರೆಯೊಳದಱಿನೊಳ್ಳಿದರ್ಗೆಣೆ ತಾಮೆಂಬರನಘಮೞಲಿಸದೆ  || ೫೪ ||

ತರುಣಾಶೋಕಲಸತ್ಪಲ್ಲವಪದ | ದರುಸುಮಗಳ ರಾರಾಜಿಪ ನವಮೃದು |
ತರಗಮನದ ಗಾಡಿಯ ಗರುವಿಕೆಯಂ ನೀನೊಲವಿಂದೆನಗೆ ||
ವರಮಂ ಕುಡುಕುಡು ಕಾರುಣ್ಯದೊಳೆನು | ತರವಿಂದೋದ್ಭವನಂ ಮಿಗೆ ತುತಿಯಿಸಿ |
ಯುರವಣೆಯಿಂ ಪೊತ್ತಪುದಿನ್ನುಂ ನಾಡಱಿಕೆಯೊಳರಸಂಚೆ  || ೫೫ ||

ಸುವಚನದೊಳಗೆ ಸರಸ್ವತಿ ವಿಲಸ | ಚ್ಛ್ರವಣದೊಳಗೆ ಮಣಿಕರ್ಣಿಕೆ ಕರದೊಳ್‌ |
ನವಪುಷ್ಕರೆ ಸುರುಚಿರಲೋಚನಯುಗದೊಳಗಧಿಕವಿಶಾಲೆ ||
ಸವಿದುಟಿಯೊಳ್‌ಸಲೆ ಶೋಣೆ ಹೃದಯದೊಳ | ಗವಿರತನರ್ಮದೆ ನೆಲಸಿರ್ಪುದಱಿಂ
ಯುವತಿ ನಿರೀಕ್ಷಿಸುವರ ಕಣ್ಗಿರದೆ ಕೃತಾರ್ಥತೆಮಾಡುವಳು  || ೫೬ ||

ಕಲ್ಪಲತಾಲಲಿತಾಂಗಂ ವಿಲಸ | ತ್ಸ್ವಲ್ಪೇತರಕುಚಯುಗಳಂ ವೀಣಾ |
ಜಲ್ಪಂ ಚೈವಾತೃಕೆಮುಖಮಭಿನವಕುವಲಯದಳನೇತ್ರಂ ||
ಅಲ್ಪಲಲಿತಮಧ್ಯಂ ನವಕದಳೀ | ಕಲ್ಪೋರು ಜಗದ್ವಶ್ಯಮನೋಭವ |
ಶಿಲ್ಪಾಕಾರಂ ಕಣ್ಗೆ ವಿರಾಜಿಸಿತಾರಾಜಾತ್ಮಜೆಯ     || ೫೭ ||

ಅರ್ಣೋಜಸುದಳನೇತ್ರೆಯಮಲತರ | ಪೂರ್ಣಕಲಾಭೃದ್ವಕ್ತ್ರೆ ವಿವಿಧವರ |
ವರ್ಣಿಜನದ ಸುಜ್ಞಾನಚರಿತ್ರಲತಾಮೂಲಲವಿತ್ರೆ ||
ಕರ್ಣಾಟಶ್ರೀಕಾರಶ್ರೋತ್ರೆ ಸು | ವರ್ಣಶಲಾಕಾಸನ್ನಿಭಗಾತ್ರೆ ಗು |
ಣಾರ್ಣವಬೈತ್ರೆ ಸುಲೋಚನೆಯೊಪ್ಪಿದಳಾಲೋಕಪವಿತ್ರೆ  || ೫೮ ||

ನುತಹಸ್ತವಿರಾಜಿತೆ ಸುಶ್ರವಣಾ | ನ್ವಿತೆ ಸುಖರಸಚಿತ್ತಾರ್ದ್ರೆ ಸುಮೋಹನ |
ತತಮೂಲಗುಣೋತ್ತರೆ ಚಿತ್ರಾಂಬರೆ ಸಕಲಕಲಾಶ್ಲೇಷೆ ||
ವಿತತಚರಿತ್ರಸದನುರಾಧೆ ವಿರಾ | ಜಿತರೋಹಿಣ್ಯಾಧರೆ ಚೆಲ್ವಿಂ ಸ್ಮರ |
ಸತಿಗತಿಜ್ಯೇಷ್ಠೆ ತರುಣಿ ತಾರಾಮಯಮೆನೆ ಕಣ್ಗೊಪ್ಪಿದಳು  || ೫೯ ||

ನನೆಗಣೆಯೆನೆ ನಗೆಗಣ್‌ರಸದಾಳಿಯ | ಧನುವೆನೆ ಕುಡುವುರ್ವಾಱಡಿವಱಿವೆದೆ |
ಯೆನೆ ಕುರುಳ್ಗಳ್‌ಪೊಸಪವಳದ ಗುಂಬದಡಿಯ ಚೆಲ್ವೆನೆಯಧರಂ ||
ಮಿನುಗುವ ಪೞಯಿಗೆಯೆನೆ ಮುಡಿಯೆಸೆಯಲ್‌ | ವನರುಹದಳಲೋಚನೆ ಸೊಗಯಿಸಿದಳ್‌ |
ಮನಸಿಜರಾಜನ ರಾಜಿಪ ಶಸ್ತ್ರಾಲಯಮೆಂಬಂದದೊಳ್‌ || ೬೦ ||

ಮಾಣಿಕದುಟಿಯ ಮಧುರಕೋಕಿಲನಿಭ | ವಾಣಿಯ ವನರುಹವದನದ ನಸುಬೆದ |
ರ್ದೇಣನಯನದೆಳದಿಂಗಳ ನೊಸಲ ನವೀನಕುಸುಮಶರದ ||
ತೂಣೀರೋಪಮಜಂಘೆಯ ಮಧುಪ | ಶ್ರೇಣಿಯ ಕುಂತಳದಂಗಭವೋರಗ |
ವೇಣಿಯ ವನಿತಾರತ್ನದ ರೂಪನದೇನಂ ಬಣ್ಣಪೆನು || ೬೧ ||

ಚಂದಿರಮೊಗದ ಚಟುಲಮೃಗನೇತ್ರದ | ಬಂದುಗೆದುಟಿಯ ಮಿಸುಪ ಬಡನಡುವಿನ |
ಮಂದಶ್ವಾಸದ ಮಧುರಾಳಾಪದ ಮನಸಿಜಗಜಗತಿಯ ||
ಕುಂದಲಲಿತಕುಟ್ಮಲರದನದ ಕುರು | ವಿಂದಪದದ ಕುಮುದಲಸದ್ಗಂಧದ |
ಚಂದಳಿರ್ಗೈಯ ಕುಮಾರಿಯ ರೂಪನದೇನಂ ಬಣ್ಣಿಪೆನು || ೬೨ ||

ಏಱುಂಜವ್ವನದೆಳವೆಱಿನೊಸಲರ | ನೇಱಿಲ ದೋರೆದುಟಿಯ ಪೊಣ್ಮುವ ಪೊಱ |
ವಾಱ ಪಸುಳೆಗಿಳಿವಾತಿನ ಬಾೞೆದೊಡೆಯ ಬಣ್ಣಿಗೆಗಾಲಾ ||
ಆಱಡಿಗುರುಳಲರ್ವಿಲ್ಲನ ಮಡದಿಯ | ಮಾಱುಂಗೊಂಡ ಮನೋಹರರೂಪದ |
ನೀಱೆಯ ನವಲಾವಣ್ಯದ ಸಿರಿಯನದೇನಂ ಬಣ್ಣಿಪೆನು || ೬೩ ||

ನನೆವಿಲ್ಗಾಱಡಿವೆದೆಯೇಱುವವೋ | ಲ್ವನಿತಾಮಣಿಯಿಂತೊಪ್ಪುವ ರೂಪಿಗೆ |
ಮಿನುಗುವ (ಏ)ಱುಂ ಜವ್ವನವೇಱಿ ವಿರಾಜಿಸುತಿರೆ ಕಂಡು ||
ಜನಕನಕಂಪಮಹೀನಾಥಂ ಮನ | ಕನುರಾಗಂದಳೆದಾಕೆಗೆ ತಕ್ಕೊರ್ವಿನಿ |
ಯನದಾವೆಡೆಯಿರ್ದಪನೆನುತವೆ ಬಗೆಯೊಳ್ಭಾವಿಸಿದಂ || ೬೪ ||

ಇಂತೆಣಿಸುತೆ ಕರೆಯಿಸಿ ಮಂತ್ರಿಗಳಂ | ಮಂತಣಮಿರ್ದು ಮನೋರಾಗದಿ ತಾ |
ನಿಂತು ನಿರೂಪಿಸಿದಂ ಮತ್ಸುತೆಗೇಱುಂಜವ್ವನವಾಯ್ತು ||
ಅಂತದಱಿಂದಾಕೆಗೆ ಸರ್ವೋರ್ವೀ | ಕಾಂತರೊಳೊರ್ವಕಲಾವಿದನಂ ಗುಣ |
ವಂತನನುದ್ವಹನಕ್ಕೆ ವಿಚಾರಿಸಿ ಬೇಗದಿ ನೀಮೆನಲು || ೬೫ ||

ನರನಾಥಂ ನಿರವಿಸೆ ಕೇಳ್ದತ್ಯಾ | ದರದಿಂ ನರ್ಮಸಚಿವರಿಂತೆಂದರ್ |
ತರುಣಿಗೆ ತಕ್ಕವರೀಭೂತದೊಳಗಣ ನೃಪನಿಕರದೊಳು ||
ಗರುವಿಕೆಯುಳ್ಳವರಿಲ್ಲದಱೆಂ ಧರೆ | ಯರಸುಗಳೆಲ್ಲರನಿಲ್ಲಿಗೆ ಕರೆಯಿಸೆ |
ಯರಮಗಳಾರಂ ವರಿಯಿಪಳವನೇ ವರನೆಂದುಸಿರಿದರು || ೬೬ ||

ಎಂಬವಸರದೊಳಗಾಚೆನ್ನೇಸಱ | ಬಿಂಬಂ ಬಿಸುಪನುೞಿದು ಭೂಮೀತಳ |
ಕಂಬರದಿಂದಿೞಿತರ್ಪಂದದಿನಾಜನತಾಧಿಪಸಭೆಗೆ ||
ತುಂಬಿದ ಪೊಸಮಾಣಿಕಮಣಿದೊಡವಿದ | ಕೆಂಬೆಳಗಂ ಸೂಸುತ ಚಿತ್ರಾಂಗದ |
ನೆಂಬ ದಿವಿಜನೊರ್ವಂ ತಳತಳಿಸುತ್ತೊಸೆದಿರದೆಯ್ದಿದನು || ೬೭ ||

ಬರುತಾದೇವಂ ತನ್ನಂ ನಿಟ್ಟಿಸಿ | ಯುರುಮುದದಿಂದಾಸನದಿಂದೆೞ್ದೌ |
ದರಮಂ ಮಾಡಿದ ಮನುಜೇಶ್ವರನೊಳಗಿಂತೆಂದುಸಿರಿದನು ||
ಧರಣೀಶಾ ಕೇಳ್ಮನ್ನಿನ ಭವದೊಳ್ | ಪಿರಿಯಣ್ಣಂ ನಾಂ ನಿನಗಂಗೋದ್ಭವ |
ಹರಪದಪೂಜೆಯ ಫಲದಿಂದಾಸಗ್ಗದೊಳುದ್ಭವಿಸಿದೆನು || ೬೮ ||

ದಿವದೊಳ್ದಿವ್ಯಸುಖವನುಣುತಿಂದಿನ | ದಿವದೊಳ್ನಿನ್ನನೆ ನೋಡುವೆನೆನುತತಿ |
ತವಕದಿನೆಯ್ದಿದೆನೆನೆ ಕೇಳ್ದಾದರದಿಂದಂತಃಪುರದ ||
ಯುವತೀಜನನಿಜಪುತ್ರಸುಹೃಜ್ಜನ | ನಿವಹಮದೆಲ್ಲಮನಲ್ಲಿಗೆ ಕರೆಯಿಸಿ |
ದಿವಿಜನ ಕೋಕನದಾಂಘ್ರಿಯುಗಕ್ಕವನತರಂಮಾಡಿಸಿದಂ || ೬೯ ||

ಮತ್ತಾಮನುಜಾಧೀಶ್ವರನತಿಮುದ | ವೆತ್ತಿಂತುಸಿರ್ದಂ ಜವ್ವನಮಾದುದು |
ಮತ್ತನುಜೆಗೆಯವಳೇ ತನ್ನಿಚ್ಚೆಯ ವರನಂ ವರಿಯಿಸುವ ||
ಯುವತೀಜನನಿಜಪುತ್ರಸುಹೃಜ್ಜನ | ನಿವಹಮದೆಲ್ಲಮನಲ್ಲಿಗೆ ಕರೆಯಿಸಿ |
ದಿವಿಜನ ಕೋಕನದಾಂಘ್ರಿಯುಗಕ್ಕವನತರಂಮಾಡಿಸಿದಂ || ೬೯ ||

ಮತ್ತಾಮನುಜಾಧೀಶ್ವರನತಿಮುದ | ವೆತ್ತಿಂತುಸಿರ್ದಂ ಜವ್ವನಮಾದುದು |
ಮತ್ತನುಜೆಗೆಯವಳೇ ತನ್ನಿಚ್ಚೆಯ ವರನಂ ವರಿಯಿಸುವ ||
ಉತ್ತಮಮಂಡಪವಂ ವಿರಚಿಸಿಮೆನೆ | ಬಿತ್ತರದಿಂ ಗೆಯ್ದಂ ನವರತ್ನದ |
ಮೊತ್ತದಿ ಕಣ್ಗೆ ವಿರಾಜಿಸುವಂದದೊಳಾಚಿತ್ರಾಂಗದನು || ೭೦ ||

ಕ್ಷಣದೊಳು ನಿರ್ಮಿಸಿ ಮಂಡಪಮಂ ಬಂ | ಡುಣಿಯೆಣೆಗುರುಳ ಸುಲೋಚನೆಯೇನೇ |
ನುಣಿಸನುಣಲ್ನೀಹಾರಂ ಜನಿಯಿಸುವಮೃತಾನ್ನವನೀವ ||
ಮಣಿಪಾತ್ರೆಯುಮಂ ನೆನೆದಂತಹ ಭೂ | ಷಣಮಂ ಮಾಸದುದುಪಟ್ಟಿಯಂ ತಾ |
ನಣಿಯರಮೊಲ್ದಿತ್ತಾದೇವಂ ತದ್ಭೂಪತಿಗಿಂತೆಂದು || ೭೧ ||

ಮುನ್ನಂ ಮಾಡಿದ ಪುಣ್ಯದ ಫಲದಿಂ | ದುನ್ನತಿಕೆಯ ಸೌಭಾಗ್ಯಂದಳೆದೈ |
ಸನ್ನುತ ಸರ್ವೋರ್ವೀಪತಿಯೆನುತತಿಮುದದಿಂ ಮಾತಾಡಿ ||
ತನ್ನೊಲವಿಂ ತತ್ಪುತ್ರಕಳತ್ರಕೆ | ರನ್ನವೆಸದ ಬಹುವಿಧಭೂಷಣಮಂ |
ಮನ್ನಿಸಿ ಕೊಟ್ಟಾದೇವನಮರಲೋಕಕ್ಕೆಯ್ದಿದನಿತ್ತ                                            || ೭೨ ||

ತರುಣಿ ಸುಲೋಚನೆಯಂ ಬಸಮಾಡಲ್ | ಗರಗರನಾದ ವಿಲಾಸಂದಾಳ್ದಿದ |
ಗರಿಮರ್ಬನ್ನಿಮೆನುತ್ತೈವತ್ತಾಱಱಿಕೆಯ ಜನಪದದ |
ಅರಮಕ್ಕಳ ಬೞಿಗೆಮ್ಮರಸಂ ದೂ | ತರನಟ್ಟಿದನಾಕಜ್ಜದ ತೆಱನದು |
ಧರಣಿಪಚೂಡಾಮಣಿ ನಾನೆಯ್ದಿದ ತೆಱನಂ ಚಿತ್ತೈಸು || ೭೩ ||

ನಾನಾಪೊೞಲೊಳ್ಚಿತ್ರಿಕನೊರ್ವಂ | ಭೂನುತೆ ಸುಭಗೆ ಸುಲೋಚನೆಗರಸಾ |
ನೀನಲ್ಲದೆ ಮುತ್ತಿನ ಮನುಜೇಶರ್ ತಕ್ಕವರಲ್ಲೆಂದು ||
ಸಾನಂದದಿ ನಿನ್ನಯ ವರರೂಪದ | ನೂನಲಸಚ್ಚಿತ್ರಂಬರೆದೆನ್ನಯ |
ಮಾನಿನಿಯಿಂದಾಕೆಯ ಬೞಿಗಟ್ಟಿದೆನತಿಸಂತೋಷದೊಳು || ೭೪ ||

ಆ ಚಿತ್ರಮನೆಱಕದೋಳಿಕ್ಷಿಸುತ ಸು | ಲೋಚನೆಯಂಗೋದ್ಭವನ ಕುಸುಮನಾ |
ರಾಚಕೆ ತನುವಂ ತೆತ್ತು ಬೞಿಕ ಪೂಣ್ದಿಂತೆಂದುಸಿರಿದಳು ||
ಭೂಚಕ್ರಾಧೀಶ್ವರನಂದನರೊಳ | ಗೀಚಿತ್ರದ ಪಡಿರೂಪಂ ಧರಿಯಿಸಿ |
ದಾಚೆನ್ನಿಗನಲ್ಲದೆಯುೞಿದವರೆನ್ನಯ ಸೋದರರೆಂದು || ೭೫ ||

ಎನುತ ನುಡಿದು ಸಂತಸದಿಂ ಮತ್ಸತಿ | ಗನುನಯದಿಂ ನವಚಿತ್ರಾಂಬರವಂ |
ಮಿನುಗುವ ಮಣಿದೊಡವಂ ಮೆಚ್ಚೀಯುತ ಬಱೆಕೇಕಾಂತದೊಳು ||
ವನಿತೆ ನುಡಿದಳೆಲೆ ಚಿತ್ರಿಕಸತಿ ನಿ | ನ್ನಿನಿಯನ ದೆಸೆಯಿಂದೀಯೆಡೆಗಾನವ |
ಮನಸಿಜನಂ ತರ್ಪುದ್ಯೋಗಮನೆಸಗೆನುತವೆ ತವಕದೊಳು || ೭೬ ||

ಆ ನುಡಿಯಂ ಕೇಳ್ದೆನ್ನ ಮನಸ್ವಿನಿ | ತೆನೆನಗೊರೆಯಲ್ಮುದದಿಂ ಕೇಳುತ |
ನಾನಾಕುವರಿಯ ರೂಪಂ ಮುನ್ನವೆ ನೆಱಿ ಬಲ್ಲುದಱಿಂದ ||
ಈ ನವಚಿತ್ರಂಬರೆದೆಯ್ದಿದೆನೆನೆ | ಭೂನಾಥಂ ಕೇಳ್ಧಾಚಿತ್ರಿಕೆಗೆಯ |
ನೂನಸಕಲಮಣಿಖಚಿತವಿಭೂಷಣಮಂ ಮನಮೊಸೆದಿತ್ತಂ || ೭೭ ||

ಅನಿತಱೊಳಾವಾರಾಣಸಿಯಧಿಪತಿ | ಯನುಚರನೊರ್ವಂ ಬಂದಿಂತೆಂದಂ |
ಜನಪತಿ ಕೇಳ್ನಮ್ಮರಸಂ ತನ್ನ ಕುಮಾರಿಯನೊಲಿಸುವೊಡೆ ||
ಅನುನಯದಿಂದವೆ ಬರವೇೞ್ದೆನ್ನಂ | ವಿನಯದಿ ನಿನ್ನಂ ಕರೆಯಲ್ಕಟ್ಟದ |
ನೆನೆ ಕೇಳ್ದತ್ಯಾತುರದಿಂ ನಿಜಪುರವರವಂ ಪೊಱಮಟ್ಟಂ || ೭೮ ||

ಸುರಪರಿವೃಢವೈಭವದಿಂದುರುಮದ | ಕರಿಯಲಸನ್ಮಸ್ತಕಮನಡರಿ ಸೋ |
ದರರವಿಜಯಜಯಂತರ್ತನ್ನಿರ್ವಕ್ಕದೊಳೆಯ್ತರಲು ||
ಪರಿವೇಷ್ಟಿತಪಾಠಕಜನಪರಿಜನ | ತರುಣೀಜನಸಖಿಜನವೆಯ್ದುತ್ತಿರೆ |
ಹರುಷದಿ ನಡೆದಂ ವಿಕ್ರಮಕೌರವನುರುಗಂಭೀರರವಂ || ೭೯ ||

ವಿಮಲಕುಲಿಶವಿಭ್ರಾಜಿತಹಸ್ತಂ | ಸುಮನೋಕೋಕಾನನ್ದಕರಂ ನೆಗ |
ೞ್ದಮಿತಾರಾತಿಮಹೀಭೃದ್ಭಲಮರ್ದನನನಿಮಿಷನೇತ್ರಂ ||
ರಮಣೀಯಸುಧರ್ಮಾವಾಸಂ ಮಿಸು | ಪಮರಾಧೀಶ್ವರನೆಂಬುದದಿ ನವ |
ಸಮದೇಭಾರೂಢಂ ಶೋಭಿಸಿದಂ ಪ್ರಭುಕುಲವ ದೀಪಂ || ೮೦ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತ ಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಳಚರಿತಂ ಪ್ರಭುರಾಜಂ ಸಂ | ಮದದಿಂ ವಿರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಂ ಪಡೆದುದು ಮೂಱನೆಯ ಮಿಸುಪ ಸಂಧಿ || ೮೧ ||

ಮೂಱನೆಯಸಂಧಿ ಸಂಪೂರ್ಣಂ